ದಟ್ಟ ಕಾಡಿನ ಒಡಲಲ್ಲಿ, ಸಂಗೀತದ ಕಡಲು.
ದಟ್ಟ ಕಾಡಿನ
ಒಡಲಲ್ಲಿ,
ಸಂಗೀತದ ಕಡಲು.
ಸಂಗೀತ ಅದು ಮನುಷ್ಯನ
ಆತ್ಮದ ಮಾತು, ಎಂಬುದು
ಅದೆಷ್ಟು ಸತ್ಯ....!! ರಾಗವೊಂದು ಸುಲಲಿತವಾಗಿ
ಹರಿವ ನದಿಯಂತೆ. ಪುಟ್ಟ ತೊರೆಯಾಗಿ, ಮೈದುಂಬಿಕೊಳ್ಳುತ್ತಾ ತನ್ನ ದಂಡೆಯನ್ನು ತಾನೇ ಸೃಷ್ಟಿಸಿ
ಮುಡಿದುಕೊಳ್ಳುತ್ತಾ, ಕಲ್ಲುಬಂಡೆ ಏರುಇಳಿವುಗಳಲ್ಲಿ ಸಾಗುತ್ತ, ಅಗಾಧ ಜಲಪಾತ
ಸೃಷ್ಟಿಸಿಕೊಂಡು, ರುದ್ರ ರಮ್ಯವಾಗಿ ತೋರುತ್ತಾ, ಶಾಂತವಾಗಿ
ಸಾಗರದಲ್ಲಿ ಲೀನವಾಗುವ, ರಾಗಪ್ರವಾಹ,
ಕೇಳುಗರೆಲ್ಲರಲ್ಲೂ ಭಾವ ತುರೀಯತೆಯನ್ನು ಸೃಷ್ಟಿಸುವ, ಧ್ಯಾನಸ್ಥ
ಮನೋಸ್ಥಿತಿಗೆ ಕೊಂಡೊಯ್ಯುವ ಆ ನಾದ ಚಟುವಟಿಕೆ,
ಅದೊಂದು ಅನುಪಮ ಕ್ಷಣ. ಅದೊಂದು ವಿಸ್ಮಯ.
ಬೆರಗು.
ಮಾತೆಲ್ಲ ಸೋತಾಗ ಸಂಗೀತ ಮಾತನಾಡತೊಡಗುತ್ತದೆ. ಹೌದು. ಆಧುನಿಕ ಬದುಕಿನ
ಯಾಂತ್ರಿಕತೆ, ಪ್ರೀತಿಸುವ ಬದಲು ಪರಸ್ಪರ ಉಪಯೋಗಿಸಿಕೊಳ್ಳಲು ಹವಣಿಸುವ
ಮನೋಭಾವ, ಹಣ ಮತ್ತು ಅಧಿಕಾರಗಳೇ ಸಮಾಜದ ಉನ್ನತ ಮೌಲ್ಯವಾಗಿ,
ಎಲ್ಲೆಲ್ಲೂ ನಾಟಕೀಯ ವಾತಾವರಣವೇ ಆವರಿಸಿರುವ
ಈ ಕಟು ವರ್ತಮಾನದಲ್ಲಿ, ಸಂಗೀತದ
ಸಾನ್ನಿಧ್ಯ ಒಂದಿಷ್ಟು ತಂಪೆರೆಯುತ್ತದೆ. ಅಂತರಂಗವನ್ನು
ಆಕ್ರಮಿಸಿರುವ ಯಾಂತ್ರಿಕತೆ, ಭಾವ ಶುಷ್ಕತೆ,
ವಿಷಣ್ಣತೆ, ಮತ್ತು ಅಹಂಕಾರಗಳು, ತಾತ್ಕಾಲಿಕವಾಗಿಯಾದರೂ, ಸ್ಥಗಿತಗೊಂಡು,
ನಿಷ್ಕಲ್ಮಷವಾದ ಸರಳವಾದ ಮತ್ತು ಸಮೃದ್ಧಮನಸ್ಸನ್ನು ಕೆಲವು ವ್ಯಕ್ತಿಯಲ್ಲಾದರೂ ನಿರ್ಮಿಸಿಬಿಡುವ
ಸಂಗೀತದ ಆ ತಾಯ್ತನದ
ಸಾಂತ್ವನಕ್ಕೆ ಎಷ್ಟು ಶರಣೆಂದರೂ ಕಡಿಮೆಯೇ.
ಈ ಮಾತಿನ ಸಂದರ್ಭ ಅದೇಕೆ ಈಗ ಎದುರಾಯಿತೆಂದರೆ, ಉತ್ತರಕನ್ನಡ
ಜಿಲ್ಲೆಯ ಮಲೆನಾಡು ಮಡಿಲಿನ
ನಗರದಿಂದ ಬಹುದೂರವಿರುವ ಒಂದು ಪುಟ್ಟಗ್ರಾಮ, ಸಂಗೀತ ಪ್ರಸಾರದ
ಸಾಧನೆಯ ಶಿಖರವನ್ನೇರುತ್ತಿರುವ ಪರಿಯನ್ನು
ಕಂಡಾಗ, ಸಂಗೀತವೆಂಬ ಮಾಂತ್ರಿಕ
ಶಕ್ತಿ,ಯ ಅಗಾಧತೆಯ ಅನುಭವದಲ್ಲಿ ಲೀನವಾದಾಗ, ಎಂದೆನ್ನಬಹುದು.
ಗಿಳಿಗುಂಡಿ, ಎಂಬ ದುರ್ಗಮ ವಸತಿ ಪ್ರದೇಶ,
ದಟ್ಟಾರಣ್ಯದ ಹಚ್ಚ ಹಸಿರು ಸಿರಿಗಳ ನಡುವೆ,
ಕೇವಲ ಮೂರ್ನಾಲ್ಕು
ಮನೆತನಗಳಿರುವ ಪುಟ್ಟ ಗ್ರಾಮ.
ಅಡಿಕೆ ತೆಂಗು ಯಾಲಕ್ಕಿ
ಮೆಣಸುಗಳ ಚಿಕ್ಕ ಚಿಕ್ಚ ಕ್ಷೇತ್ರಗಳನ್ನೇ
ಜೀವನಾಧಾರವಾಗಿಸಿಕೊಂಡಿರುವ ಈ ಗ್ರಾಮ, ಶಾಸ್ತ್ರೀಯ ಸಂಗೀತ ಪ್ರೀತಿಯಲ್ಲಿ,
ಇಂದು ರಾಜ್ಯವನ್ನೂ ಮೀರಿ ದೇಶಮಟ್ಟದಲ್ಲಿ ತನ್ನ ಕೀರ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು, ನಿಜಕ್ಕೂ
ಅಚ್ಚರಿ ತರುವ ಘಟನೆ.
ಎತ್ತರದ ಸಹ್ಯಾದ್ರಿಯ ದುರ್ಗಮ
ರಸ್ತೆ, ಸುತ್ತಲೂ ಮುತ್ತಿರುವ
ದಟ್ಟಾರಣ್ಯ, ಆಳ ಪ್ರಪಾತಕ್ಕಿಳಿದಾಗ ಕಾಣುವ ಚಿಕ್ಕ
ಹೊಳೆ, ಅದೇ ಹೊಳೆಯ ದಂಡೆಯಮೇಲೆ ವಾಸವಾಗಿರುವ
ತೋಟಗಾರರು, ಮತ್ತು ಸಂಗೀತ ಕೃಷಿಕರಾಗಿರುವ ದಿನೇಶ ಹೆಗಡೆ
ಮತ್ತು ಅವರ ಮೂರ್ನಾಲ್ಕು
ಸಹೋದರರ ನಾದಪ್ರೀತಿ, ಅದೆಷ್ಟು
ಗಾಢವಾಗಿದೆಯೆಂದರೆ, ದೂರದ ಕಲ್ಕತ್ತಾ,
ಬೊಂಬಾಯಿ, ಪುಣೆ, ಬೆಂಗಳೂರು ಧಾರವಾಡ
ಮೈಸೂರುಗಳಿಂದೆಲ್ಲ, ನಾಮಾಂಕಿತ ಸಂಗೀತ ಕಲಾವಿದರು, ವರ್ಷಕ್ಕೊಂದೆರಡು ಬಾರಿ, ಈ ಗಿಳಿಗುಂಡಿ
ಎಂಬ ನಾದಗ್ರಾಮಕ್ಕೆ ಆಗಮಿಸಿ,
ಸಂಗೀತದ ರಸದೌತಣವನ್ನು ನೀಡಿ,
ಪ್ರಕೃತಿಯ ಒಡಲಲ್ಲಿ ಒಂದೆರಡುದಿನ
ನೆಲೆಸಿ ಮರಳುತ್ತಿರುವುದೇ ಸಾಕ್ಷಿ.
ಗಿಳಿಗುಂಡಿ ಎಂಬ ಹೆಸರು ಬಂದಿರುವುದೇ
ಅಲ್ಲಿ ಹರಿಯುತ್ತಿರುವ ಪುಟ್ಟ ಹೊಳೆಯಿಂದ. ಈ ಹೊಳೆಗೊಂದು ವಿಶೇಷವಿದೆ.
ಹೊಳೆಯೇ ನಿರ್ಮಿಸಿಕೊಂಡ ವಿಸ್ತಾರವಾದ ಕೆರೆಯಂತಿರುವ
ಸ್ಥಳಕ್ಕೆ ಗುಳ್ಳೇ ಗುಂಡಿ ಎಂಬ ಹೆಸರಿದೆ. ದಂಡೆಯಮೇಲೆ
ನಿಂತು ಒಂದು ಚಿಕ್ಕ ಕಲ್ಲು ಎಸೆದರೂ ಸಾಕು. ಚಪ್ಪಾಳೆ
ತಟ್ಟಿದರೂ ಸೈ, ತಳದಿಂದ ಗುಳು ಗುಳು
ಶಬ್ದಮಾಡುತ್ತ ಗುಳ್ಳೆಗಳ ಸರಣಿಯೇ
ಮೇಲೆ ಏಳತೊಡಗುತ್ತದೆ. ಅದೇ ಕಾರಣಕ್ಕೇ ಈ ಹೊಳೆಗೆ ( singing
River) ನಾದನದಿ ಎಂಬ ಅಭಿದಾನವೊದಗಿದೆ.
ಅದಕ್ಕೆ ಅನ್ವರ್ಥಕವಾಗಿ, ಗಿಳಿಗುಂಡಿ
ನಾದಗ್ರಾಮವಾಗಿ ರೂಪುಗೊಳ್ಳುತ್ತಿರುವುದು ಸಂತಸದ ಕ್ಷಣವಾಗಿದೆ.
ಸಹೋದರರಲ್ಲಿ ಪಂ. ಗುರುಪ್ರಸಾದ
ಹೆಗಡೆ, ಪಿಯಾನೋ ವಾದನದಲ್ಲಿ ಪರಿಣತರು. ಮುಂಬಯಿಯಲ್ಲಿ ತಮ್ಮ ಸಂಗೀತಸೇವೆಯನ್ನು ನೀಡುತ್ತಿದ್ದರೆ, ಧಾರವಾಡದಲ್ಲಿ ನೆಲೆಸಿರುವ, ಶ್ರೀ ಮಂಜುನಾಥ
ಹೆಗಡೆ, ದಂಪತಿಗಳು, ಕಲಾವಿದರಾಗಿ, ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ..
ಕಳೆದ ಹನ್ನೆರಡು
ವರ್ಷಗಳಿಂದ, ಎಡೆಬಿಡದೇ ಜರುಗುತ್ತಿರುವ
ನಾದಸಿರಿ ಸಂಗೀತೋತ್ಷವ ಇದೇ ಮೇ
ತಿಂಗಳ ಎರಡನೆಯವಾರ ಕಿಕ್ಕಿರಿದು
ಸೇರಿದ ನಾದಪ್ರಿಯರ ಸಮ್ಮುಖದಲ್ಲಿ
ಯಶಸ್ವೀಯಾಗಿ ಜರುಗಿತು. ಅದೊಂದು
ವಿವಾಹಮಹೋತ್ಷವದ ಸಿಂಗಾರವೋ ಎಂಬಂತೇ
ಸಜ್ಜುಗೊಂಡಿರುವ ಮನೆ ಮತ್ತು ಸುತ್ತಲಿನ ಅಂಗಳ,
ವಧುವಿನಂತೇ ಸಿಂಗಾರ ಗೊಂಡಿತ್ತು. ದೂರದಿಂದ
ಬಂದ ಸಂಗೀತಪ್ರಿಯರಿಗೆಲ್ಲ, ಎಡೆಬಿಡದೇ
ಆದರೋಪಚಾರ, ಮತ್ತು ಭೂರಿಭೋಜನದ
ಏರ್ಪಾಟಾಗಿತ್ತು. ಅಹೋರಾತ್ರಿ ವಿಜ್ರಂಭಿಸುವ
ವಾದನ ಗಾಯನಗಳು, ಶ್ರೋತೃಗಳನ್ನು,
ಹೊಚ್ಚಹೊಸದೊಂದು ಲೋಕಕ್ಕೆ ಸೆಳೆದೊಯ್ಯುತ್ತಿದೆ. ಕಳೆದೊಂದು
ದಶಕಗಳಿಂದ ನೀಡಿದ ಸಂಗೀತದ
ಸ್ಪರ್ಶದಿಂದ, ನಾದದ ರಸಗ್ರಹಣದಲ್ಲಿ
ಶ್ರೀ ಸಾಮಾನ್ಯನನ್ನೂ ರಾಗಸಾಕ್ಷರನನ್ನಾಗಿ ರೂಪಿಸುವಲ್ಲಿ,
ಯಶ ಪಡೆಯುತ್ತಿದೆ.
ಮುಂಬಯಿ ಬೆಂಗಳೂರಿನಂತಹ
ದೂರದ ಶಹರಿಗರನ್ನೂ ಆಕರ್ಷಿಸಿದ
ಈ ನಾದಗ್ರಾಮ, ಶಿವಮೊಗ್ಗಾ
ಸಾಗರ, ಚಿಕ್ಕಮಗಳೂರು, ಧಾರವಾಡ
ಹುಬ್ಬಳ್ಳಿ ನಗರಗಳ ಶಾಸ್ತ್ರೀಯ ಸಂಗೀತ ಪ್ರೇಮಿಗಳನ್ನೂ ಆಕರ್ಷಿಸಿದ
ನಾದಸಿರಿ ಸಂಗೀತೋತ್ಸವ ವರ್ಷದಿಂದ
ವರ್ಷಕ್ಕೆ ತನ್ನ ಸಂಗೀತ ಕುಟುಂಬವನ್ನು ವಿಸ್ತರಿಸಿಕೊಳ್ಳುತ್ತಿದೆ.
ಇಷ್ಟು ವರ್ಷಗಳಲ್ಲಿ, ಹಿರಿ ಕಿರಿಯ
ವಿವಿಧ ರಾಜ್ಯಗಳ ನಾಲ್ಕುನೂರಕ್ಕೂ ಮಿಕ್ಕ ಸುಪ್ರಸಿದ್ಧ ಸಂಗೀತ ಕಲಾವಿದರು, ಇಲ್ಲಿಗೆ
ಆಗಮಿಸಿ ತಮ್ಮ ಸಂಗೀತ ಸೇವೆಯನ್ನು ಸಲ್ಲಿಸಿದ್ದಾರೆ. ಪಂ. ಉದಯ ಬಾವುಲ್ಕರ್ ಪುಣೆ, ವಿದುಷಿ. ಶುಭಾ
ಮುದ್ಗಲ್, ದೆಹಲಿ, ಪಂಡಿತ್ ರಾಕೇಶ್ ಚೌರಾಸಿಯಾ ಮುಂಬೈ,
ಪಂ. ವೆಂಕಟೇಶ ಕುಮಾರ್ ಧಾರವಾಡ, ವಿದುಷಿ. ಅಶ್ವಿನ ಭಿಡೆ ದೇಶಪಾಂಡೆ, ಪಂ. ಯೋಗೇಶ್
ಸಂಶಿ ಮುಂಬೈ, ಪಂ. ಉಲ್ಲಾಸ್
ಕಾಶಲ್ಕರ್ ಮುಂಬೈ, ಮುಂತಾದವರನ್ನು
ಹೆಸರಿಸಬಹುದಾಗಿದೆ.
ಇದೇ ವರ್ಷ ನಡೆದ, ಉತ್ಸವದಲ್ಲಿ, ಹಲವು ರಾಷ್ಟ್ರೀಯ ಪ್ರಶಸ್ತಿಗೆ
ಭಾಜನರಾದ, ಹಿರಿಯ ಸಂಗೀತ ವಿದುಷಿ ʻʻ ಪಂಡಿತಾ ಶುಭದಾ ಪರಾಡ್ಕರ್ ಮುಂಬೈ, ಪಂ. ಜಯತೀರ್ಥ ಮೇವುಂಡಿ,
ಹುಬ್ಬಳ್ಳಿ, ಪ್ರಖ್ಯಾತ ಸರೋದ್
ವಾದನ ಪ್ರತಿಭೆ, ಪಂ. ದೇಬೋಜ್ಯೋತಿ ಬೋಸ್,
ಕೋಲ್ಕತ್ತಾ, ಮತ್ತು ಡಾ|| ಬಿಫುಲ್
ಕುಮಾರ್ ರಾಯ್ ದೆಹಲಿ, ಇವರು ಪ್ರಮುಖರು. ವೈವಿಧ್ಯಮಯ
ಘರಾನೆಗಳಿಂದ ಬಂದ ಇವರುಗಳ
ಸಂಗೀತ ಪ್ರಸ್ತುತಿ, ದೇಶದ ಹಿಂದೂಸ್ಥಾನಿ
ಸಂಗೀತ ದ ಶ್ರೀಮಂತ ಪರಂಪರೆಯ ಸೊಗಸನ್ನು ಉಣಬಡಿಸಿತು.
ಇಡೀ ದೇಶದ ನಾದ ಪರಂಪರೆಯೇ
ಇಲ್ಲಿ ಒಗ್ಗೂಡಿರುವಾಗ, ಸುತ್ತಲಿನ ಜಿಲ್ಲೆಗಳ, ಸಂಗೀತ ವಿದ್ಯಾರ್ಥಿಗಳು, ಸಂಗೀತ ಶಿಕ್ಷಕರು, ಹಿರಿಯ ಸಂಗೀತಗಾರರು, ನೂರಾರು
ಸಂಖ್ಯೆಯಲ್ಲಿ ಹಾಜರಿದ್ದು ನಾದ ವೈವಿಧ್ಯವನ್ನು
ಸವಿದಿದ್ದಾರೆ. ಈ ಊರು ಅನೌಪಚಾರಿಕ ಸಂಗೀತ ವಿಶ್ವವಿದ್ಯಾಲಯವೇ ಆಗಿ ಮಾರ್ಪಡುತ್ತಿದೆ.
ಸಾಮಾನ್ಯವಾಗಿ ನಗರಗಳು
ನಾಗರಿಕತೆಯ ಕೇಂದ್ರಗಳು
ಎಂದು ಭಾವಿಸಲಾಗುತ್ತದೆ.
ಅಲ್ಲಿ ಅವಕಾಶಗಳಿವೆ,
ವೇದಿಕೆಗಳಿವೆ, ಹಣವಿದೆ.
ಪ್ರಚಾರದ ಬೆಳಕುಗಳಿವೆ.
ಆದರೆ ಕಲೆ
ತನ್ನ ಮೂಲಸ್ವಭಾವದಲ್ಲಿ
ಎಂದಿಗೂ ಗದ್ದಲದ
ಆಧೀನದಲ್ಲಿರುವುದಿಲ್ಲ. ಅದು
ಮೌನವನ್ನು ಹುಡುಕುತ್ತದೆ;
ಪ್ರಕೃತಿಯ ಮಡಿಲಿನಲ್ಲಿ
ತನ್ನ ನಿಜವಾದ
ನಾದವನ್ನು ಕಂಡುಕೊಳ್ಳುತ್ತದೆ.
ಹಕ್ಕಿಗಳ ಕೂಗು,
ಮಳೆಯ ಲಯ,
ಗಾಳಿಯ ನಿನಾದ,
ಎಲೆಗಳ ಸದ್ದಿನಲ್ಲಿ
ಸಂಗೀತದ ಮೊದಲ
ಪಾಠಗಳು ಅಡಗಿವೆ.
ಆದ್ದರಿಂದಲೇ ಮಲೆನಾಡಿನ
ಈ ಮೌನಗ್ರಾಮದಲ್ಲಿ
ಹಿಂದೂಸ್ಥಾನೀ ಸಂಗೀತದ
ಒಂದು ಜೀವಂತ
ಕೇಂದ್ರ ಅರಳುತ್ತಿರುವುದು
ಯಾದೃಚ್ಛಿಕವಲ್ಲ; ಅದು
ಪ್ರಕೃತಿ ಮತ್ತು
ಮಾನವ ಸಂವೇದನೆಯ
ಸಹಜ ಸಂಗಮವಾಗಿದೆ.
ಮಲೆನಾಡಿನ ದಟ್ಟ ಕಾಡುಗಳ ನಡುವೆ, ಮಂಜಿನ ಮೌನವನ್ನು ಹೊತ್ತು ನಿಂತಿರುವ ಗಿಳಿಗುಂಡಿಯಂತಹ ಒಂದು ಸಣ್ಣ ಗ್ರಾಮ ಇಂದು ಸಂಗೀತದ ಮಹತ್ತರ ನಾದದಿಂದ ಸಹೃದಯರ
ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಇದು ಕೇವಲ ಒಂದು ಗ್ರಾಮ ಪ್ರಸಿದ್ಧಿಯಾಗುತ್ತಿರುವ ಕಥೆಯಲ್ಲ; ಇದು ಮನುಷ್ಯನ ಆತ್ಮಸಾಧನೆ, ಸಂಸ್ಕೃತಿಯ ಜೀವಂತಿಕೆ, ಮತ್ತು ಕಲೆಯ ಅಮರತ್ವಕ್ಕೆ
ಉದಾಹರಣೆಯಾಗಿದೆ.
ಗಿಳಿಗುಂಡಿಯ ಸಾಧನೆ
ನಮಗೆ ಮತ್ತೊಂದು
ಸತ್ಯವನ್ನೂ ನೆನಪಿಸುತ್ತದೆ.
ಸಂಸ್ಕೃತಿ ಎಂದರೆ
ಕೇವಲ ಪರಂಪರೆಯ
ಸಂರಕ್ಷಣೆಯೊಂದೇ ಅಲ್ಲ; ಅದು
ಪೀಳಿಗೆಯಿಂದ ಪೀಳಿಗೆಗೆ
ಸಾಗುವ ಆತ್ಮಸಂವಾದ.
ದೇಶದ ಸಂಗೀತ
ದಿಗ್ಗಜರು ಈ
ಗ್ರಾಮಕ್ಕೆ ಬಂದು
ಸಂಗೀತೋತ್ಸವದಲ್ಲಿ ಭಾಗವಹಿಸುವುದು
ಒಂದು ಕಾರ್ಯಕ್ರಮದ
ವೈಭವ ಮಾತ್ರವಲ್ಲ,
ಗ್ರಾಮೀಣ ಬದುಕಿನ
ಅಂತರಾಳದಲ್ಲಿರುವ ಕಲಾಸ್ಪಂದನಕ್ಕೆ
ಸಲ್ಲಿಸುವ ಗೌರವವೂ
ಹೌದು. ಇದರಿಂದ
“ಮಹತ್ವವು ಕೇವಲ
ಮಹಾನಗರಗಳ ಸ್ವತ್ತು
ಅಲ್ಲ” ಎಂಬ
ಸತ್ಯ ಮತ್ತೊಮ್ಮೆ
ಬೆಳಕಿಗೆ ಬರುತ್ತದೆ.
ಶಾಸ್ತ್ರೀಯ ಸಂಗೀತ
ಮನುಷ್ಯನ ಅಂತರಂಗದ ಜಗತ್ತನ್ನು ಬೆಳಗಿಸುವ ಶಕ್ತಿಯಾಗಿ
ಕಾಣಿಸುತ್ತದೆ. ಗಿಳಿಗುಂಡಿಯ
ಸಂಗೀತ ಚಳವಳಿಯೂ ಕೇವಲ ರಾಗಗಳ
ಪ್ರಸ್ತುತಿಯಲ್ಲ.
ಅದು ಮಾನವೀಯತೆ,
ಸಮುದಾಯಭಾವ, ಮತ್ತು
ಆತ್ಮಶುದ್ಧಿಯ ಒಂದು
ಸಾಂಸ್ಕೃತಿಕ ಯಜ್ಞವಾಗಿದೆ.
ಒಂದು ಸಣ್ಣ
ಗ್ರಾಮದ ಹೃದಯದಲ್ಲಿ
ಹುಟ್ಟಿದ ಈ
ನಾದ, ಇಂದು
ರಾಜ್ಯ ಪ್ರಾದೇಶಿಕ
ಗಡಿಗಳನ್ನು ದಾಟಿ ಪ್ರತಿಧ್ವನಿಸುತ್ತಿದೆ.
ಇದು ಕಲೆಗಿರುವ
ಅಪಾರ ಶಕ್ತಿಯ
ಸಂಕೇತ. ಕಾಡಿನ
ನಡುವೆ ಮೂಡುವ
ಒಂದು ರಾಗವೂ
ಜಗತ್ತಿನ ಹೃದಯವನ್ನು
ತಲುಪಬಲ್ಲದು ಎಂಬುದಕ್ಕೆ
ಗಿಳಿಗುಂಡಿ ಇಂದು
ಒಂದು ಜೀವಂತ
ಉದಾಹರಣೆಯಾಗಿದೆ
ಸುಮಸಂಪದ ಜೂನ್ ಅಂಕಣಕ್ಕೆ.
ಸುಬ್ರಾಯ ಮತ್ತೀಹಳ್ಳಿ.
ತಾ-
೨೦-೫-೨೦೨೬.
Comments
Post a Comment