ದೇವರು ಧರ್ಮ ಮಾನವೀಯತೆ ಇತ್ಯಾದಿ
ಪ್ರಕೃತಿ ಮನುಷ್ಯನನ್ನು ಸೃಷ್ಟಿಸಿತು. ಮನುಷ್ಯ ದೇವರನ್ನು ಸೃಷ್ಟಿಸಿದ. ಇದೊಂದು ಜನಪ್ರಿಯ ನುಡಿ. ಪ್ರಕೃತಿಯ ಅನಿರೀಕ್ಷಿತ ಆಟಾಟೋಪ ಬದುಕಿನ ಏರಿಳಿತ ಮತ್ತು ನಾಳಿನ ನಿಘೂಡತೆ ಇವುಗಳೇ ದೇವರ ಸೃಷ್ಟಿಯ ಮೂಲವೆನ್ನುತ್ತಾರೆ. ಮನುಷ್ಯ ಮೂಲಭೂತವಾಗಿ ದುರ್ಬಲ. ಆನೆಯ ಬಲ ಹುಲಿಯ ಶೌರ್ಯ ಚಿರತೆಯ ಓಟ ಹದ್ದಿನ ಕಣ್ಣು ಯಾವುದನ್ನೂ ಪಡೆಯದ ಮನುಷ್ಯ ವಿಶಿಷ್ಟ ಭಯದಲ್ಲಿ ನರಳುವುದು ಸ್ವಾಭಾವಿಕ. ಆದರೆ ಆತ ಉಳಿದೆಲ್ಲ ಪ್ರಾಣಿಗಳಿಗಿಂತ ಚುರುಕಾದ ಬುದ್ಧಿಶಕ್ತಿ ಪಡೆದಿದ್ದಾನೆ. ಪ್ರಜ್ಞಾವಂತಿಕೆ ಹೊಂದಿದ್ದಾನೆ. ಪ್ರಜ್ಞೆಯ ಜೊತೆಗೊಂದಿಷ್ಟು ಅವಜ್ಞೆಯನ್ನೂ ಹೊಂದಿದ್ದಾನೆ. ಬುದ್ದಿ ಮನುಷ್ಯನ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಮಾನವತೆ ದಾನವತೆ, ಶಿಶುತನ-ಹಸುತನ, ಪ್ರೀತಿ ಧ್ವೇಷ, ಗೆಳೆತನ-ಮೋಸ, ಸತ್ಯ ಅಸತ್ಯ, ಪ್ರಾಮಾಣಿಕತೆ ಕಾಪಟ್ಯ, ಗಳು ತುಂಬಿಕೊಂಡೇ ಇರುತ್ತವೆ. ಬದುಕಿನ ಕಟುವಾಸ್ತವದ ರಣಾಂಗಣದಲ್ಲಿ ಮನುಷ್ಯ ತನ್ನ ದೌರ್ಬಲ್ಯಗಳೊಂದಿಗೆ ಸೆಣಸಾಡುತ್ತಲೇ ಮಾನವ ಜಗತ್ತಿನ ದಾನವತನದ ವಿರುದ್ಧ ಹೋರಾಡುವ ಗುಣಗಳನ್ನು ಪಡೆಯಲು ಬುದ್ಧಿಯ ರಥಕ್ಕೆ ಪ್ರಜ್ಞಾವಂತಿಕೆಯ ಸಾರಥ್ಯವನ್ನ ಗಳಿಸಿಕೊಳ್ಳಬೇಕು. ಯುಗ ಯುಗಗಳಿಂದಲೂ ಮಾನವ ಜಗತ್ತಿನಲ್ಲಿ ಸಮಾನ...