ಜೀವಂತ ಜ್ಞಾನ ಕುಂಭ !! ಶಂ. ಬಾ.ʼʼ
ಪ್ರಾಥಮಿಕ ಶಾಲಾ ಉಪಾಧ್ಯಾಯನೊಬ್ಬ, ಸಾಂಸ್ಕೃತಿಕ ಚಿಂತನೆಯ ಮೇರು ವ್ಯಕ್ತಿಯಾಗಿ, ತನ್ನ ಭಾಷೆ ಮತ್ತು ಪರಂಪರೆಯ ಬಗೆಗೆ ಯಾರೂ ಪ್ರವೇಶಿಸದ ವಿಶಿಷ್ಟ ಮಾರ್ಗವೊಂದನ್ನು ಸೃಷ್ಟಿಸಿ, ಸಂಸ್ಕ್ರತಿ ಶೋಧನಾ ರಂಗದಲ್ಲಿ ದೇಶದಲ್ಲೇ ಮಹಾನ್ ಸಾಧಕನಾಗಿ ರೂಪುಗೊಂಡಿದ್ದು, ನಮ್ಮ ಕನ್ನಡಮಣ್ಣಿನ ಸೌಭಾಗ್ಯ. ಅವರೇ (ಶಂಕರ ಬಾಳಾ ಜೋಶಿ) ಡಾ|| ಶಂ.ಬಾ. ಜೋಶಿ. ( ೧೮೯೬ – ೧೯೯೧ ) ಕವಿರಾಜ ಮಾರ್ಗಕಾರ ಒಂಬತ್ತನೆಯ ಶತಮಾನದಲ್ಲೇ ಕಂನಾಡಿನ ಗಡಿ ಗೋದಾವರಿಯಿಂದ ಕಾವೇರಿಯ ವರೆಗೆ. ಎಂದು ಘೋಷಿಸಿದರೆ, ಶಂ.ಬಾ. ಅಲ್ಲಿಗೇ ಅಲ್ಲ, ಅದರಾಚೆ ನರ್ಮದೆಯಾಚೆಗೂ ಕನ್ನಡದ ಗಡಿಯಿದೆ. ಗುಜರಾತ ಬಂಗಾಲ, ಕಾಶ್ಮೀರ ಬಲೂಚಿಸ್ಥಾನಗಳಲ್ಲೂ ಕನ್ನಡದ ಕಂಪು ಪಸರಿಸಿತ್ತು, ಎಂದು ಸಾಕ್ಷಾಧಾರಗಳೊಂದಿಗೆ ಸಾಬೀತು ಪಡಿಸುತ್ತಾರೆ. ಇತಿಹಾಸ ಕೇವಲ ಶಾಸನಗಳಲ್ಲೊಂದೇ ಅಲ್ಲ. ಪುರಾಣ, ದಂತಕತೆ, ಧರ್ಮ, ಪೂಜಾವಿಧಾನ, ಅಂತ್ಯಕ್ರಿಯೆ, ಮತ್ತು ಊರು ಕೇರಿಯ ಹೆಸರುಗಳು, ಮತ್ತು ಆಡುನುಡಿಯ ಹರಿವಿನ ನಡುವಣ ಶಬ್ಧಗಳಲ್ಲಿ ಚರಿತ್ರೆ ಅಡಗಿರುತ್ತದೆ, ಎಂಬ ಆಶ್ಚರ್ಯಜನಕ ಸತ್ಯವನ್ನು ತಮ್ಮ ಪ್ರತಿಪಾದನೆಯಿಂದ ಅನಾವರಣ ಗೊಳಿಸಿದ್ದು, ಜಗತ್ತಿನ ಶ್ರೇಷ್ಠ ಇತಿಹಾಸ ಸಂಶೋಧಕರಲ್ಲೊಬ್ಬರಾಗಿ ಮಿಂಚಲು ಸಹಾಯವಾಯಿತೆನ್ನ...