Vishwambhara ---3
ಕತೆ ಕತೆ.....
ಕಾರಣ. ( ಸುಮನಾಂಬರ- ೧೨)
ʻʻಕಥೆಗಳು ಸಾ....ರ್,
ಕಥೆಗಳು. ಎಲ್ಲೆಲ್ಲೂ ವ್ಯಥೆಗಳು
ಒಂದುಕಡೆ ಗತ್ತು,
ಮತ್ತೊಂದು ಕಡೆ ಮತ್ತು.
ನಡುವೆ ನನ್ನ
ಕತ್ತು.
ಅಳುವಿನ ಆಳುಗಳು
ನಾವು, ಕತೆಯಲ್ಲಿ ನಮ್ಮ ಅಳಲು
ನೋವು ತಲ್ಲಣದ ನಡುವೆ ಸಾಂತ್ವನವೊಂದೇ ನೆಳಲು.
ನಿಮ್ಮ ಕುದಿತಕೆ ನಾನು ಕನ್ನಡಿ, ನನ್ನ ಬದುಕಿಗೆ
ನೀವು ಮುನ್ನುಡಿ
ಹೇಳಿ ಕತೆಯ ಕೇಳುವೆನು ನಾನು. ನನ್ನ
ಕತೆಯ ಕೇಳಿದಂತೆ ನೀವು.
ಕತೆಯೆಂದರೆ ಕರುಣೆಯ
ಕಣಿ. ಕಣ್ಣೀರಿಗೆ ಮಣಿಯುವ
ಗಿಣಿ.
ಸಾವಿನೆದುರು ಸಂಜೀವಿನಿ. ʼʼ
ʻʻ ಅಜ್ಜಿ
ಕತೆ ಹೇಳು, ಅಜ್ಜಿ ಹಾಡ್ಹೇಳು, ಇಡೀ ದಿನ ಮಕ್ಕಳ ಕಲರವ, ದೊಡ್ಡವರ ಗದ್ದಲ. ಎಲ್ಲರಿಗೂ ಅಜ್ಜಿಯ
ರಸವತ್ತಾದ ಕತೆ ಕೇಳುವ ಉತ್ಸಾಹ. ಏಳು ಸಮುದ್ರದಾಚೆಯ ರಾಜಕುಮಾರಿ,
ರಾಕ್ಷಸ ರಾಜಕುಮಾರ, ಮಂಗ-ನರಿ, ಸಿಂಹ –ಇಲಿ, ಆನೆ ಇರುವೆ, ಮಂತ್ರವಾದಿ, ಬ್ರಹ್ಮರಾಕ್ಷಸ, ಹೀಗೆ ಒಂದಕ್ಕಿಂತ ಒಂದು ರೋಚಕ ಕತೆಹೇಳುವ
ಅಜ್ಜಿಯೆದುರು ಇಡೀ ಹಳ್ಳಿಯೇ ಆಕರ್ಷಿತಗೊಂಡಿದೆ. ಕತೆ ಹೇಳಲು ಅಜ್ಜಿಗೆ ಬೇಸರವಿಲ್ಲ, ಕೇಳುವವರಿಗೆ ಕೊರತೆಯಿಲ್ಲ.
ಮನೆಯ ಮುಂಭಾಗದಲ್ಲಿ ಸದಾ ಗದ್ದಲ. ಕತೆಯಜ್ಜಿ
ಸುತ್ತಲೆಲ್ಲ ಕತೆಯಿಂದಲೇ ಮನೆಮಾತಾದವಳು.
ಕಷ್ಟದಲ್ಲಿರುವವರು, ನೋವಿನಲ್ಲಿರುವವರು,
ಕುತೂಹಲಿಗಳು, ದೈನಂದಿನ ಸಂಕಟಗಳನ್ನು ಮರೆಯಲು, ರಂಜನೆ ಪಡೆಯಲು
ಅಜ್ಜಿಯನ್ನೇ ಅವಲಂಬಿಸಿದ್ದರು. ಅಜ್ಜಿಯ
ಜನಪ್ರಿಯತೆ ವಿಸ್ತಾರವಾದಂತೇ ಮನೆ ಕಥಾಪ್ರಿಯರಿಂದ ತುಂಬಿ ತುಳುಕಾಡಿತು. ಅಜ್ಜಿಯ
ಸೊಸೆಗೆ ಅವಳ ಪ್ರಸಿದ್ಧಿ, ಸೊಗಸಲಿಲ್ಲ. ಅವಳ ಕಾರಣದಿಂದಲೇ ಇಡೀದಿನ
ಗದ್ದಲ ಗೌಜು. ಸೊಸೆ ಒಂದುದಿನ
ಅಜ್ಜಿಯ ಬಾಯಿಗೆ ಕಡಿವಾಣ
ಹಾಕಿದಳು. ಯಾರಿಗೂ ಕತೆ ಹೇಳದಿರು.
ಹೇಳಿದರೆ ನಿನಗೆ ಉಪವಾಸವೇ ಗತಿ. ಎಂದು
ದಬಾಯಿಸ ತೊಡಗಿದಳು. ಅಜ್ಜಿ ಹೆದರಿ ಮಾತನಾಡುವುದನ್ನೇ ನಿಲ್ಲಿಸಿದಳು. ಅಜ್ಜಿಯ ಕತೆಗೆ
ಮಕ್ಕಳು ದುಂಬಾಲು ಬೀಳತೊಡಗಿದರು. ಸೊಸೆ ಮಕ್ಕಳನ್ನು ಗದರಿಸಿ ಓಡಿಸಿದಳು.
ಅಜ್ಜಿಯ ಆರೋಗ್ಯಕೆಡತೊಡಗಿತು. ನಿಶ್ಶಕ್ತಿಯಿಂದ ಹಾಸಿಗೆ ಹಿಡಿದಳು. ತನ್ನಂತಾನೆ
ಅಜ್ಜಿಯ ಹೊಟ್ಟೆ ಬ್ರಹದಾಕಾರವಾಗತೊಡಗಿತು. ಹಂಡೆಯ ಆಕಾರಪಡೆಯತೊಡಗಿತು. ದಿನದಿಂದ
ಬೆಳೆಯುತ್ತಿರುವ ಅಜ್ಜಿಯ ಹೊಟ್ಟೆಕಂಡ
ಸೊಸೆ, ರೇಜಿಗೆ ಪಡತೊಡಗಿದಳು. ಅಜ್ಜಿಯ ಕೊನೆಯ ಕಾಲ ಬಂತು. ಇರುವವರೆಗೆ ಬಿದ್ದಿರಲೆಂದು
ಊರಿನ ಹೊರಗಿರುವ ದೊಡ್ಡ ಗೋಡೆಯ
ಪಾಳುಮನೆ ಯೊಂದರಲ್ಲಿ ಮಲಗಿಸಿ ಬಂದಳು. ಅಲ್ಲಿ ಹೋದದ್ದೇ ತಡ, ಒಂದು ಗೋಡೆಯೆಡೆಗೆ ಮುಖ ಹಾಕಿ
ಅಜ್ಜಿ ಕತೆ ಹೇಳಲು ತೊಡಗುತ್ತಾಳೆ. ಗೋಡೆ
ಉರುಳಿ ಬೀಳುತ್ತದೆ. ಮತ್ತೊಂದು ಗೋಡೆಯೆಡೆಗೆ ಮುಖಮಾಡಿ
ಕತೆ ಹೇಳತೊಡಗುತ್ತಾಳೆ. ಅದೂ ಬೀಳುತ್ತದೆ. ಕತೆ ಆಲಿಸಿದ ನಾಲ್ಕೂ ದಿಕ್ಕಿನ ಗೋಡೆಗಳು ಉರುಳಿ ಬೀಳುತ್ತವೆ. ಅಜ್ಜಿ ಕತೆ ಹೇಳಿಯಾಳೆಂದು ಮಕ್ಕಳು ಪುರುಷರು ಮಹಿಳೆಯರು
ಮನೆ ಹೊರಗೆ ಕಾಯುತ್ತಲೇ ಇರುತ್ತಾರೆ.. ಕತೆ ಹೇಳಿದಂತೇ
ಅಜ್ಜಿಯ ಹೊಟ್ಟೆಯೂ ಇಳಿದು ಇಳಿದು ಸಮಸ್ಥಿತಿಗೆ ಬರುತ್ತದೆ.
ಅವಳ ಕತೆ ಪ್ರಾರಂಭವಾಗತೊಡಗಿದಂತೇ ಊರಿನ ಮಕ್ಕಳೆಲ್ಲ
ಗುಂಪುಗೂಡಿ ಕತೆ ಕೇಳಿ ಸಂತಸದಿಂದ
ಕುಣಿದಾಡುತ್ತಾರೆ. ʼʼ
ಇದೊಂದು ಕನ್ನಡದ
ಸುಪ್ರಸಿದ್ಧ ಜಾನಪದ ಕತೆ. ಕತೆಯ ಮಹತ್ವವನ್ನ ಸಾರುವ ಅರ್ಥಪೂರ್ಣ
ಕತೆ. ಈ ಕತೆ ವಿಶ್ವ
ಜಾನಪದ ಕಥಾಕೋಶಕ್ಕೆ ಸೇರಿದೆಯಂತೆ. ವಿದೇಶೀಯರನ್ನು
ತನ್ನ ಮಾನವೀಯ ಗುಣದಿಂದ ಆಕರ್ಷಿಸಿದ
ಈ ಕತೆಯ ಮೇಲೆ ಸಾಕಷ್ಟು
ವ್ಯಾಖ್ಯಾನಗಳೂ ಪ್ರಕಟಗೊಂಡಿವೆಯಂತೆ.
ʻʻ
ಕಥೆʼʼ ಅದೊಂದು ಮಾನವನ ಆಪ್ತ
ಶಬ್ಧ. ಮನುಷ್ಯನೊಂದಿಗೆ ಹುಟ್ಟಿ, ಅವನ
ಹುಟ್ಟಿಗೆ ಅರ್ಥವಂತಿಕೆ ತುಂಬುವ
ಅನುಪಮ ಚೈತನ್ಯ. ಬೆಂದ ಮನಸ್ಸೊಂದು, ಸುಡುವ ಅಂತಃಕರಣಕ್ಕೆ ತಂಪನ್ನೆರೆದು
ಕೊಳ್ಳುತ್ತಲೇ ಮತ್ತೊಂದು ಜೀವಕ್ಕೆ
ಸಾಂತ್ವನ ನೀಡುವ ಅದ್ಭುತವಾದ ಶಕ್ತಿ.
ಆದಿಮಾನವನಿಂದ ಆಧುನಿಕ ಮಾನವನ ವರೆಗೆ, ತುಂಡಾಗದ
ಎಳೆಯಾಗಿ, ಹೃದಯದಿಂದ ಹೃದಯಕ್ಕೆ
ಹರಿಯುತ್ತಿರುವ ಜೀವ ಪ್ರವಾಹ. ಮಾನವ ಜೀವಿತದಲ್ಲಿ ಮೊಟ್ಟಮೊದಲು
ಸೃಷ್ಟಿಯಾದುದೇ ಕಥೆ. ಕ್ಷಣದಿಂದ
ಕ್ಷಣಕ್ಕೆ, ದಿನದಿಂದ ದಿನಕ್ಕೆ
ಎದುರಾಗುವ ಪ್ರಕೃತಿಯ ವೈಚಿತ್ರ್ಯ,
ಹೆಜ್ಜೆ ಹೆಜ್ಜೆಗೆ ಎದುರಾಗುವ
ಅಸಂಖ್ಯಾತ ತಿರುವುಗಳು, ಮಾನವನ ಮನೋಜಗತ್ತಿನ ವಿಚಿತ್ರ
ನಡವಳಿಗಳು, ಪ್ರೀತಿ ಕಾಮ ಕಪಟ ಮೋಸ ತ್ಯಾಗ ಬಲಿದಾನ ಗಳಂತಹ ಅಯೋಮಯ
ಘಟನೆಗಳು, ಸೂಕ್ಷ್ಮ ಮನಸ್ಸನ್ನು ಗೊಂದಲದ
ಗೂಡಾಗಿಸಿರಬಹುದು. ಇಂತಹ ಅನಿವಾರ್ಯ
ಅನಿರೀಕ್ಷಿತ ಘಟನೆಗಳ ಕಥನಗಳೇ
ಕತೆಯಾಗಿ ಕವಿತೆಯಾಗಿ, ನಾಟ್ಯವಾಗಿ,
ಶಿಲ್ಪವಾಗಿ ಲಲಿತಕಲೆಗಳ ಸಮೃದ್ಧ
ಗುಚ್ಛಗಳು ಸೃಷ್ಟಿಯಾಗಿರಬಹುದಾಗಿದೆ. ಕಲೆಯ ರೂಪ
ಯಾವುದೇ ಇರಲಿ, ಅದರ ಒಡಲಲ್ಲಿ
ಕರುಣೆ ತಲ್ಲಣ ತಹ ತಹಗಳೇ ಕತೆಯಾಗಿ ಉಸಿರಾಡುತ್ತವೆ.
ನಮ್ಮ ಆದಿಕಾವ್ಯ
ರಾಮಾಯಣವೇ ಶೋಕದಿಂದ ಸ್ಫೂರ್ತಗೊಂಡು
ಶ್ಲೋಕವಾಗಿ ರೂಪ ಪಡೆದಿದೆ. ಮಹಾಭಾರತವಂತೂ
ಮನುಷ್ಯನ ಶಕ್ತಿ ದೌರ್ಬಲ್ಯ, ಪ್ರೀತಿ ಧ್ವೇಷಗಳ
ರೂಪಕ. ಅವೆರಡರ ಸೃಷ್ಟಿಯ
ಹಿನ್ನೆಲೆಯಲ್ಲಿ, ನಮ್ಮ ಜನಪದರ ಶತ ಶತಮಾನಗಳ
ಜೀವನಾನುಭವಗಳ ರಸಘಟ್ಟಿಯೇ ಇದೆ.
ಜಾನಪದ ರಾಮಾಯಣವೊಂದರಲ್ಲಿ ಒಂದು ಆಕರ್ಷಕ ಘಟನೆಯಿದೆ.
ʻʻ ರಾಮಲಕ್ಷ್ಮಣ ಸೀತೆಯರು
ವನವಾಸಕ್ಕಾಗಿ ಅಯ್ಯೋಧ್ಯೆಯಿಂದ ಹೊರಟು, ಗಂಗಾತೀರಕ್ಕೆ ಬರುತ್ತಾರೆ. ಗಂಗೆಯನ್ನು ದಾಟಲು ದೋಣಿ ಅನಿವಾರ್ಯ. ಅಂಬಿಗನನ್ನು ಹುಡುಕುತ್ತಾರೆ. ಅಂಬಿಗ ಗುಹ ಎಂಬಾತ.
ಶ್ರೀರಾಮನ ಪರಮ ಭಕ್ತ. ಅವನು ಅಲ್ಲೆಲ್ಲೂ ಕಾಣಲಿಲ್ಲ. ನದಿಯಂಚಿಗೆ ದೋಣಿ ನಿಂತಿದೆ. ಆತನಿಗಾಗಿ ರಾಮ ಲಕ್ಷ್ಮಣರು ಕೆಲವು ಹೊತ್ತು ಕಾಯುತ್ತಾರೆ. ಕರೆಯುತ್ತಾರೆ. ಹತ್ತಿರವಿರುವ
ಗುಹನ ಮನೆಯ ಸಮೀಪ ಹೋಗಿಯೂ ಹುಡುಕುತ್ತಾರೆ. ಆದರೆ ಅವನಿಲ್ಲ. ಲಕ್ಷ್ಮಣ ನದಿಯಂಚಿನ
ಮರಗಿಡಗಳ ನಡುವೆ ಹೋಗಿ ಕೂಗಿ ಕರೆಯುತ್ತಾನೆ. ಪ್ರತ್ಯುತ್ತರವಿಲ್ಲ. ಸೂಕ್ಷ್ಮವಾಗಿ
ನಿರೀಕ್ಷಿಸುತ್ತಾ ಅರಣ್ಯದಲ್ಲಿ ಹೆಜ್ಜೆಯಿಟ್ಟಾಗ ಮರವೊಂದರ
ಆಚೆ ಗುಹ ಸುಮ್ಮನೆ
ಕುಳಿತು ಆಕಾಶ ನೋಡುತ್ತಿದ್ದಾನೆ. ಲಕ್ಷ್ಮಣ ಗುರುತು ಹಿಡಿದು ಎಬ್ಬಿಸಿ ಆತನನ್ನು ರಾಮನ ಬಳಿ ಕರೆತರುತ್ತಾನೆ. ನದಿಯಾಚೆ
ತಮ್ಮನ್ನು ಕರೆದೊಯ್ಯಲು ವಿನಂತಿಸುತ್ತಾನೆ. ಗುಹ ರಾಮನಿಗೆ ನಮಸ್ಕರಿಸಿ ನಿಮ್ಮನ್ನು ನದಿ ದಾಟಿಸಲು ತನ್ನಿಂದ ಸಾಧ್ಯವಿಲ್ಲ. ಎಂದು ನಿರಾಕರಿಸುತ್ತಾನೆ. ಏಕೆಂದು
ಕೇಳಿದರೆ ʻʻ ನೀವೆಲ್ಲ
ದೇವತಾ ಪುರುಷರು. ಮಾಯಾಶಕ್ತಿಯಿದೆ. ನನ್ನಲ್ಲಿ
ಒಂದೇ ಒಂದು ದೋಣಿಯಿದೆ. ನೀವು ಅದನ್ನೂ ಮಾಯೆ ಮಾಡಿದರೆ, ನಾನು ನನ್ನ ಸಂಸಾರವನ್ನು ಹೇಗೆ ಸಾಗಿಸಲಿ,
ಅದಕ್ಕಾಗಿಯೇ ಅಡಗಿ ಕುಳಿತಿದ್ದೆ.ʼʼ ಎಂದು ಉತ್ತರಿಸಿದಾಗ, ಲಕ್ಷ್ಮಣ
ಸಿಟ್ಟಿಗೆದ್ದು ʻʻ ನಮ್ಮನ್ನು
ನದಿಯಾಚೆ ಕೊಂಡೊಯ್ಯದಿದ್ದರೆ ಇಲ್ಲಿಯೇ
ನಿನ್ನ ತಲೆಕಡಿಯುತ್ತೇನೆʼʼ ಎಂದು ಅಬ್ಬರಿಸಿದಾಗ ಗುಹ ಭಯದಿಂದ ದೋಣಿ ನಡೆಸಲು
ಸಿದ್ಧನಾಗುತ್ತಾನೆ.
ಅಂತೂ ಸುರಕ್ಷಿತವಾಗಿ
ಆಚೆ ದಂಡೆ ತಲುಪಿ, ರಾಮ ಲಕ್ಷ್ಮಣರು ಅಂಬಿಗನಿಗೆ
ಶುಲ್ಕನೀಡಿ, ಆಶೀರ್ವದಿಸಿ ನಗುತ್ತ
ತಮ್ಮ ದಾರಿ ಹಿಡಿಯುತ್ತಾರೆ. ಗುಹ ಅವರು ಕಾಣುವವರೆಗೂ ಕೈಮುಗಿದು ನಿಂತು, ತನ್ನ ದೋಣಿಯೆಡೆಗೆ ತಿರುಗಿ ನೋಡಿ
ಒಮ್ಮೆಲೇ ಅರಚಾಡುತ್ತಾನೆ. ಆತನ ದೋಣಿ ಕಾಣೆಯಾಗಿದೆ.
ಅಲ್ಲಿಯೇ ಕುಸಿದು ಕುಳಿತು ತಲೆಯಮೇಲೆ
ಕೈ ಹೊತ್ತು, ರೋದಿಸುತ್ತ, ಆಚೀಚೆ ದೃಷ್ಟಿ ಹರಿಸುತ್ತಾನೆ. ದೂರದಲ್ಲಿ
ಆತನ ದೋಣಿ ಹೊಳೆಯುತ್ತಿತ್ತು. ಇಡೀ ದೋಣಿ ಬಂಗಾರದ
ದೋಣಿಯಾಗಿತ್ತು.
ನಮ್ಮ ಮಹಾಕಾವ್ಯಗಳು ಶಿಷ್ಟ ಕಾವ್ಯಗಳೆಂದು ಕರೆಸಿಕೊಂಡರೂ, ಅದರ ಹಿನ್ನೆಲೆಯಲ್ಲಿ ಜನಪದರ ಕೊಡುಗೆಯಿದೆ. ಜಾನಪದ ಮೌಖಿಕ ಮಹಾಕಾವ್ಯಗಳಲ್ಲಿ ರಾಮಾಯಣ
ನೂರಾರಿವೆ. ಇಸ್ಲಾಮ್ ರಾಮಾಯಣ, ಜೈನ ಬೌದ್ಧರಾಮಾಯಣಗಳು, ಇನ್ನಷ್ಟು
ಆಸಕ್ತಿಪೂರ್ಣ ಆಯಾಮಗಳನ್ನು ಪಡೆದುಕೊಂಡು
ಮಿಂಚಿವೆ. ಪ್ರತೀ ಕಾಲದಲ್ಲೂ
ಗತದ ಸ್ಮರಣೆಯನ್ನು ಜೀವಂತವಾಗಿರಿಸಿಕೊಂಡು,
ವರ್ತಮಾನಕ್ಕೆ ಹೊಸಬೆಳಕ ನೀಡುವ ಭವಿಷ್ಯಕ್ಕೆ
ಕೈಗಂಬವಾಗುವ ಕಥನಸೃಷ್ಟಿಯಲ್ಲಿ, ಕೆಲವೇ ಸೃಷ್ಟಿಶೀಲ
ಮನಸ್ಸುಗಳಾದರೂ ತೊಡಗಿಕೊಳ್ಳುತ್ತವೆ. ಮಕರಂದಕ್ಕೆ ಆಕರ್ಷಿತಗೊಂಡ ದುಂಬಿಗಳಂತೇ
ಸಾಮಾನ್ಯಜನ ಅಂಥ ಕಥನಕಲೆಗೆ
ಒಲಿಯುತ್ತಾರೆ.
ಶಿಷ್ಟ ಸಾಹಿತ್ಯ
ಕಾವ್ಯಗಳು, ಪುರಾಣ ಕಥಾಪಾತ್ರಗಳು ಪವಾಡರೂಪ ಪಡೆದು, ದೈವ
ದೇವತೆಗಳಾಗಿ, ಮಾನವ ಜಗತ್ತಿನಿಂದ ದೂರಗೊಂಡು
ಆಕಾಶವಾಸಿಗಳಾಗಿ, ಸ್ವರ್ಗವಾಸಿಗಳಾದರೆ. ಜನಪದ ಕಥೆಗಳಲ್ಲಿ, ಕಾವ್ಯ ಗಳಲ್ಲಿ,
ಪಾತ್ರಗಳು ಭೂಮಿಗಿಳಿದು, ಸಾಮಾನ್ಯರ
ಒಡನಾಡಿಗಳಾಗಿ ಜೀವಿಸುತ್ತಾರೆ. ರಾಮಾಯಣ ಮಹಾಭಾರತ
ಪಾತ್ರಗಳೆಲ್ಲ ದೇಶದೆಲ್ಲೆಡೆ ತಮ್ಮ ಹೆಜ್ಜೆಗುರುತು ಮೂಡಿಸುತ್ತಾರೆ.
ರಾಮ ಸೀತೆ ವಾಸಿಸಿದ ಊರು, ಸ್ನಾನಗ್ರಹ,
ಪೂಜಿಸಿದ ಲಿಂಗ, ಹಲವಿದ್ದರೆ, ಭೀಮ ನಡೆದಾಡಿದ
ಸ್ಥಳ, ಪಾಂಡವರು ವಾಸಿಸಿದ
ಊರು, ಭೀಮನ ಅನ್ನದಲ್ಲಿ ಸಿಕ್ಕ ಕಲ್ಲುಬಂಡೆ, ಅವನೇ ನಿರ್ಮಿಸಿದ ಕೊಳ, ಇವೆಲ್ಲವೂ
ಜನಪದರ ಸೃಷ್ಟಿಯೇ ಆಗಿದೆ.
ದೈವಗಳೆಲ್ಲ ಮನುಷ್ಯನೊಳಗೆ ಹೊಕ್ಕು
ಭಕ್ತರ ಸಂಕಟಗಳನ್ನು ನಿವಾರಿಸುತ್ತವೆ.
ಕತೆ ಜೀವ ಪಡೆಯುವುದು
ಕೇವಲ ಇಬ್ಬರಿಂದ. ಕಥೆ ಹೇಳುವವ ಮತ್ತು ಕೇಳುವವ.
ಈ ಇಬ್ಬರೇ ಕತೆಯ ಮೂಲ
ಒರತೆ. ಕೇಳುಗನಿಲ್ಲದೇ ಕತೆ ಜೀವಪಡೆಯಲಾರದು. ಮೌಖಿಕವಾಗಿ ಜಿನುಗಿದ
ಕತೆ ಬಾಯಿಂದ ಬಾಯಿಗೆ,
ಸಮುದಾಯದಿಂದ ಸಮುದಾಯಕ್ಕೆ ಪ್ರದೇಶದಿಂದ
ಪ್ರದೇಶಕ್ಕೆ ಹರಿಯತೊಡಗುತ್ತದೆ. ದೇಶಾಂತರ
ಖಂಡಾಂತರ ಗೈಯ್ಯುತ್ತದೆ. ಸಾವಿರ ಸಾವಿರ ಮೈಲಿ ಅಂತರದಲ್ಲೂ
ಪರಸ್ಪರ ಸಾಮ್ಯವಿರುವ ಕತೆಗಳು, ಅಚ್ಚರಿ ಹುಟ್ಟಿಸುತ್ತವೆ. ಮನುಷ್ಯ ಭೂಮಿಯ ಯಾವುದೇ
ಕೋನದಲ್ಲಿರಲಿ, ಮಾನವಾನುಭವ ಒಂದೇ ಆದುದರಿಂದ,
ಅಂತಹ ಸಾಮ್ಯತೆ ಸಹಜ. ನಮಗೆ ಗಡಿಯಿದೆ, ವಿಭಿನ್ನ ಪ್ರವೃತ್ತಿಗಳಿವೆ. ಆದರೆ ಪ್ರಕೃತಿಯ
ಶಿಷುಗಳಾದ ನಮ್ಮ ಬೌದ್ಧಿಕ ಮಿತಿಯನ್ನೂ ಮೀರಿದ ಪ್ರಕೃತಿಗೆ ಅದ್ಯಾವ
ತಾರತಮ್ಯವಿಲ್ಲ. ನಮ್ಮ ಅಹಮಿಕೆ ಬೌದ್ಧಿಕ
ಕಪಟತನ, ಸ್ವಾರ್ಥಗಳನ್ನೆಲ್ಲ ಅಂಚಿಗೆ ತಳ್ಳುವ
ಪ್ರಕೃತಿ, ತನ್ನದೇ ಆದ ನ್ಯಾಯ ಸಂಹಿತೆಯನ್ನು
ಜಾರಿಗೊಳಿಸುತ್ತದೆ. ಭೂಖಂಡಗಳನ್ನೇ ಛಿದ್ರಗೊಳಿಸಿ
ಆಚೀಚೆ ನೂಕುತ್ತದೆ. ಕೆಂಡದ ಮಳೆ
ಸುರಿಸುತ್ತದೆ. ಮಹಾ ರೋಗಗಳನ್ನು ತೂರುತ್ತದೆ.
ಭೂಕಂಪ, ಜ್ವಾಲಾಮುಖಿ, ಮಹಾಪ್ರವಾಹಗಳನ್ನು ಸೃಷ್ಟಿಸಿ,
ಮನುಷ್ಯನ ಕಿರಿತನ ನಿಸ್ಸಹಾಯಕತನವನ್ನು ಎತ್ತಿ ತೋರಿಸುತ್ತದೆ. ಮಾನವ
ಇವೆಲ್ಲವನ್ನೂ ಸಾವಿರ ವರ್ಷಗಳಿಂದ ನೋಡುತ್ತ
ಅನುಭವಿಸುತ್ತ, ಬರುತ್ತಿದ್ದರೂ, ಮತ್ತೆ ಮತ್ತೆ ವಿಸ್ಮರಣೆಗೆ
ಬಲಿಯಾಗುತ್ತಾನೆ. ಅಲ್ಲಿಯೇ ಕತೆ, ಮಾತಾಗಿ ಹಾಡಾಗಿ,
ಅವನ ಪಾಡನ್ನು ದಾಖಲಿಸುತ್ತದೆ.
ಇಪ್ಪತ್ತನೆಯ ಶತಮಾನದ
ಮೂವತ್ತರ ದಶಕದಲ್ಲಿ, ವೇರಿಯರ್
ಎಲ್ವಿನ್ ಎಂಬ ಇಂಗ್ಲಿಶ್ ತರುಣ ಭಾರತವನ್ನು ಪ್ರವೇಶಿಸುತ್ತಾನೆ. ಇಂಗ್ಲೆಂಡಿನಲ್ಲಿ ಇತಿಹಾಸ ತಜ್ಞನಾಗಿದ್ದ ಎಲ್ವಿನ್
ಭಾರತವನ್ನು ಅದರಲ್ಲಿಯೂ ಗ್ರಾಮಾಂತರಗಳನ್ನು, ಅರಣ್ಯವಾಸಿ
ಆದಿವಾಸಿಗಳನ್ನು ಸಂದರ್ಶಿಸುತ್ತಾನೆ. ಮಧ್ಯಪ್ರದೇಶದ
ಆದಿವಾಸಿ ಗೊಂಡ ಜನಾಂಗದ ಜಾನಪದೀಯ
ಸಂಸ್ಕೃತಿ ಅವನನ್ನು ಆಕರ್ಷಿಸುತ್ತದೆ. ಆತ ಅವರ ತಾಂಡಾಗಳಲ್ಲೇ
ವಾಸಿಸಲು ತೊಡಗಿದಾಗ, ಗೊಂಡ ಜನಾಂಗ
ಆತನನ್ನು ಸಂಶಯ ದೃಷ್ಟಿಯಿಂದ ಕಂಡು, ಹಲ್ಲೆ ಮಾಡುತ್ತಾರೆ. ಅವರಿಂದಾದ
ಹಿಂಸೆಯನ್ನೂ ಸಹಿಸುತ್ತಲೇ ಅವರ ವಿಶ್ವಾಸ
ಗಳಿಸುತ್ತಾನೆ. ಅವರೊಂದಿಗೆ ಅಖಂಡ ಇಪ್ಪತ್ತು
ವರ್ಷ ವಾಸಿಸಿ, ಅವರ ಸಂಸ್ಕೃತಿಯನ್ನು
ಅಮೂಲಾಗ್ರ ಅಧ್ಯಯನಗೈಯ್ಯುತ್ತಾನೆ. ಆ ಜನಾಂಗದ
ಯುವತಿಯೊಬ್ಬಳನ್ನು ವರಿಸಿ, ಮದುವೆಯಾಗುತ್ತಾನೆ. ನಿರಕ್ಷರಿಯಾದ
ಅವಳನ್ನು ಸಾಕ್ಷರಿಯನ್ನಾಗಿಸಿ, ತನ್ನಂತೇ ಅವಳನ್ನೂ
ಸಂಶೋಧಕಿಯನ್ನಾಗಿಸುತ್ತಾನೆ. ಗೊಂಡ ಜನಾಂಗದ ಎರಡು ಸಾವಿರ
ಕತೆಗಳನ್ನು ಸಂಗ್ರಹಿಸಿ, ಇಂಗ್ಲಿಶ್ ಭಾಷೆಯಲ್ಲಿ
ಪ್ರಕಟಿಸುತ್ತಾನೆ. ಏಕಾ ಏಕಿ ಅವನು ಸಂಗ್ರಹಿಸಿದ ಕತೆಗಳು
ವಿಶ್ವದ ಗಮನ ಸೆಳೆಯುತ್ತದೆ. ಗೊಂಡ ಜನಾಂಗ ಆದಿವಾಸಿ
ಅನಕ್ಷರ ಜನಾಂಗವಾದರೂ, ಅವರ ಸಮುದಾಯ
ನೂರಾರು ವರ್ಷಗಳಿಂದ ಪ್ರಕೃತಿಯನ್ನು ಸೂಕ್ಷ್ಮವಾಗಿ
ಅವಲೋಕಿಸುತ್ತ, ಪ್ರಕೃತಿಯೊಂದಿಗೆ ಸೆಣಸಾಡುತ್ತ
ಸೃಷ್ಟಿಸಿದ ಕತೆ ಹಾಡು ನೃತ್ಯಗಳಲ್ಲಿ, ಸತ್ವಪೂರ್ಣ ಜೀವನಾನುಭವ ಎರಕ ಗೊಂಡಿತ್ತು. ಅವರ ಕಲ್ಪನೆಯಲ್ಲಿ, ಪ್ರೀತಿ,
ಪ್ರೇಮ, ಕಾಮ, ಹುಟ್ಟು
ಮರಣ ಯುದ್ಧ, ಬೇಟೆ, ಮುಂತಾದ ವಿಷಯ ವಸ್ತುಗಳು, ಆಕರ್ಷಕವಾಗಿ ಮೂಡಿಬಂದಿದ್ದರೆ, ಸೃಷ್ಟಿಯ ರಹಸ್ಯ, ಮಳೆ ಚಂಡಮಾರುತ, ಸಸ್ಯಗಳು, ಭೂತ
ಪ್ರೇತ ದೇವತೆಗಳು, ಅಚ್ಚರಿ ಮೂಡಿಸುತ್ತವೆ.
ಕಾಲ್ಪನಿಕ ಶಕ್ತಿಯಲ್ಲಿ ನಾಗರಿಕರನ್ನೇ
ನಾಚಿಸುವಂತಹ ಕಥನಗಳು, ಅವರ ಹಾಡು ಕತೆ ಕುಣಿತಗಳಲ್ಲಿ
ಅಭಿವ್ಯಕ್ತಗೊಂಡಿವೆ. ಎಂಬ ಸತ್ಯ ನಾಗರಿಕ
ಲೋಕಕ್ಕೆ ಬೆರಗು ಮೂಡಿಸಿತ್ತು.
ನಂತರದ ದಿನಗಳಲ್ಲಿ
ಅಂದರೆ ಸುಮಾರು ೧೯೪೦ ರ
ದಶಕದಲ್ಲಿ ವೇರಿಯರ್ ಎಲ್ವಿನ್
ಪೂರ್ವೋತ್ತರ ಭಾರತದಲ್ಲೂ ಆದಿವಾಸಿಗಳ ಸಾಂಸ್ಕೃತಿಕ
ಅಧ್ಯಯನ ಕೈಗೊಳ್ಳುತ್ತಾನೆ. ಭಾರತದ ಸ್ವಾತಂತ್ರ್ಯ
ಹೋರಾಟಕ್ಕೂ ಹೆಗಲು ನೀಡಿದ ಈ ಬ್ರಿಟಿಶ್ ಸಂಶೋಧಕ,
ಪ್ರಧಾನಿ ನೆಹರೂರವರ ಆಪ್ತರಾಗುತ್ತಾರೆ. ನೆಹರೂರವರು
ಭಾರತೀಯ ಆದಿವಾಸಿ ಜನಾಂಗಗಳ ಅಧ್ಯಯನಕ್ಕಾಗಿ, ಅವರನ್ನೇ ನೇಮಿಸುತ್ತಾರೆ. ಐವತ್ತರ
ದಶಕದಲ್ಲಿ ಕೇಂದ್ರಸರಕಾರ ಇವರನ್ನು
ಪದ್ಮಭೂಷಣ ನೀಡಿ ಗೌರಿವಿಸುತ್ತದೆ.
ಪ್ರಕೃತಿಯೊಂದಿಗೆ ಪ್ರಕೃತಿಯಾಗಿ
ಪ್ರಕೃತಿಯನ್ನು ಪೋಷಿಸುತ್ತ, ಆಧುನಿಕ ಮನುಷ್ಯನ ಸ್ವಾರ್ಥ, ಭೃಷ್ಠತೆ, ಐಷಾರಾಮೀತನ,
ನಿಸರ್ಗವಿರೋಧೀ ಪ್ರವೃತ್ತಿಯನ್ನು ತಮ್ಮ ಜೀವನ
ವಿಧಾನದಿಂದಲೇ ಖಂಡಿಸುವ ಆದಿವಾಸಿ
ಜನರ ಪ್ರಕೃತಿಪ್ರೀತಿಯನ್ನು ಜಗತ್ತಿಗೆ
ಪರಿಚಯಿಸಿದ ಎಲ್ವಿನ್ ರವರ ಸುದೀರ್ಘ
ಸಾಧನೆಯನ್ನು ಭಾರತ ಎಂದೂ ಮರೆಯಬಾರದು. ನಾಗರಿಕತೆಯ,
ಅತಿ ತಾಂತ್ರಿಕತೆಯ, ಶಿಕ್ಷಣ ಮತ್ತು ಹಣದ ಅಹಮಿಕೆಯಲ್ಲಿ, ಧರ್ಮಾಂಧತೆ, ಜಾತ್ಯಂಧತೆ,ಯಂತಹ ರೋಗಪೀಡಿತರಾಗಿ, ಆದಿವಾಸಿ,
ಪರಿಶಿಷ್ಟರೆಂದೆನ್ನಿಸಿಕೊಂಡ, ಬೃಹತ್ ಜನಾಂಗವನ್ನು
ಅಂಚಿಗೆ ತಳ್ಳಿದ ಆಧುನಿಕ ಮನುಷ್ಯನಿಗೆ, ಅಲ್ಲಿಯೇ
ಮಾನವ ಬದುಕಿಗೊಂದು ಪರ್ಯಾಯ ಮಾರ್ಗವಿದೆ.
ಎಂಬ ಸಂದೇಶ ಮೌನವಾಗಿ
ದೊರಕುತ್ತದೆ. ಆದರೆ ಎಲ್ವಿನ್ ರಂತೇ
ಮಾನವೀಯ ನೆಲೆಯಲ್ಲಿ,ಬದುಕನ್ನು ಸೂಕ್ಷ್ಮವಾಗಿ ಗ್ರಹಿಸಲು
ತಂತ್ರಜ್ಞಾನ, ಮತ್ತು ಕೃತಕ ಬದುಕೊಂದೇ ಮಾರ್ಗವಲ್ಲ, ಎಂಬ ತಿಳಿವಳಿಕೆಗೆ ಬಂದಾಗ ಮಾತ್ರ, ಸತ್ಯ ಗೋಚರಿಸೀತು.
============================================================================================================================
ಸುಮನಾಂಬರ ೧೩
ʻʻ ಪ್ರಾರ್ಥನೆʼʼ
ಪ್ರಾರ್ಥನೆ ಆಸ್ತಿಕ
ನಾಸ್ತಿಕರೆಲ್ಲರನ್ನೂ ಮುಗ್ಧಗೊಳಿಸುವ ಅನುಪಮ ಶಬ್ದ.
ಜಗತ್ತಿನೆಲ್ಲ ಧರ್ಮಗಳ ಆಧಾರ ಸೂತ್ರ.
ಪ್ರಾರ್ಥನೆ ಅಂದರೆ ಬಾಹ್ಯದಲ್ಲಿರುವ
ಅದ್ಯಾವುದೋ ನಿಗೂಢ ಶಕ್ತಿಯೆದುರಿನ
ಯಾಚನೆಯಲ್ಲ. ತನ್ನ ಅಂತರಂಗದಲ್ಲಿರುವ ಸುಪ್ತಪ್ರಜ್ಞೆಯನ್ನುದ್ದೇಶಿಸಿ, ಕೈಗೊಳ್ಳುವ
ಒಂದು ಧ್ಯಾನಸ್ಥ ಪ್ರಕ್ರಿಯೆ. ಮಾನವ ಸಂಸ್ಕೃತಿಯ ಅನಿವಾರ್ಯ
ಭಾಗ. ಪ್ರಾರ್ಥನೆಯ ಆಳದಲ್ಲಿ
ತುಡಿಯುವುದು ಮಾನವೀಯ ಮೌಲ್ಯವೇ
ಆಗಿದೆ. ಮಾನವ ಜನಾಂಗದ
ಪ್ರಾರಂಭದಲ್ಲಿ, ಪ್ರಕೃತಿಯ ನಿಗೂಢ ವಿಚಿತ್ರ
ಪ್ರಕ್ರಿಯೆಗೆ ಭಯಗೊಂಡ ಮನುಷ್ಯ, ಭಯಪೀಡಿತನಾಗಿ ಭಕ್ತಿಯಿಂದ
ತಾನೇ ಸೃಷ್ಟಿಸಿಕೊಂಡ ದೈವದೆದುರು
ತನ್ನ ಭಕ್ತಿಯನ್ನು ಅಭಿವ್ಯಕ್ತಿಸುವ ಚಟುವಟಿಕೆಯಾದರೆ, ಆಧುನಿಕ
ಸಂದರ್ಭದಲ್ಲಿ ಅದೊಂದು ಮನಃಶಾಂತಿಯ
ಸಶಕ್ತ ಮಾದ್ಯಮವಾಗಿದೆ. ಇದರ ಉದ್ದೇಶ ದೇವರನ್ನು ಬದಲಾಯಿಸುವ ಪ್ರಯತ್ನವಲ್ಲ.
ಬದಲಿಗೆ ಮನುಷ್ಯನೊಳಗಿನ ದೇವತ್ವವನ್ನು
ಜಾಗ್ರತಗೊಳಿಸುವುದು. ಪ್ರಾಚೀನದಲ್ಲೂ ಪ್ರಾರ್ಥನೆಯ
ಉದ್ದೇಶ ಕೇವಲ ಧಾರ್ಮಿಕ ವಿಧಿಗಳಾಗಿರಲಿಲ್ಲ. ಸಾಮಾಜಿಕ
ನೈತಿಕ ಮತ್ತು ಮಾನಸಿಕ ಆರೋಗ್ಯದ ಸಾಧನವಾಗಿತ್ತು.
ಗ್ರಾಮದ ಕ್ಷೇಮಕ್ಕಾಗಿ, ಪ್ರಕೃತಿಯ ರಕ್ಷಣೆಗಾಗಿ, ರಾಷ್ಟ್ರದ ಪ್ರಗತಿಗಾಗಿ, ಮತ್ತು ಸಾಮೂಹಿಕ
ಏಕತೆಗಾಗಿ ಜನರು ನಡೆಸುವ ಸಾಮೂಹಿಕ
ಚಟುವಟಿಕೆಯಾಗಿತ್ತು.
ಇತ್ತೀಚೆಗೆ
ಇಂಗ್ಲಿಶ್ ಗ್ರಂಥವೊಂದು ಕನ್ನಡದ
ಅನುವಾದ ರೂಪದಲ್ಲಿ ನನ್ನ ಗಮನ ಸೆಳೆಯಿತು. ಜಗತ್ತಿನಾದ್ಯಂತ
ಮನುಷ್ಯನ ಪ್ರಮುಖ ಚಟುವಟಿಕೆಯಾದ
ಪ್ರಾರ್ಥನೆ ಎಂಬ ವಸ್ತುವೇ
ಭಿನ್ನ ಸ್ವರೂಪದಲ್ಲಿ, ಸೂಕ್ಷ್ಮ ಅಧ್ಯಯನ ಗೈದು, ಕುತೂಹಲಕ್ಕೆಡೆಗೈದ ಯಶಸ್ವೀ ಕೃತಿಯಾಗಿದೆ ಎಂದೆನ್ನಿಸಿತು. ಡಾ| ಜೋಸೆಫ್
ಮರ್ಫಿ ಎಂಬ ಪ್ರಯೋಗ
ಶೀಲ ಮನೋ ವಿಜ್ಞಾನಿಯೊಬ್ಬರ power
of your subconscious
Miņd ಕೃತಿಯನ್ನು,ಕನ್ನಡದ ಪ್ರಸಿದ್ಧ ಲೇಖಕ ಡಾ| ಶಿವಾನಂದ
ಬೇಕಲ್ ʻʻನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿʼʼ ಎಂಬ
ಶಿರೋನಾಮೆಯಲ್ಲಿ ಯಶಸ್ವೀಯಾಗಿ ಕನ್ನಡಕ್ಕೆ ತಂದು ಗಮನ ಸೆಳೆದಿದ್ದಾರೆ.
ಡಾ|
ಮರ್ಫಿ ತಮ್ಮ ಕೃತಿಯ ಪ್ರಾರಂಭದಲ್ಲೇ
ಹೇಳುತ್ತಾರೆ. ʻʻ ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನಲ್ಲಿ ಹುದುಗಿರುವ ಶಕ್ತಿಯನ್ನೊಮ್ಮೆ ನೀವು ಸಂಪರ್ಕಿಸಿ ಹೊರಗೆಳೆಯಲು
ಶಕ್ತರಾದರೆ ನೀವು ನಿಮ್ಮ ಬದುಕಿನಲ್ಲಿ ಅಪಾರ ಬಲವನ್ನೂ
ಹೆಚ್ಚಿನ ಸಂಪತ್ತನ್ನೂ ಒಳ್ಳೆಯ
ಆರೋಗ್ಯವನ್ನೂ ಬಹಳಷ್ಟು ಸಂತೋಷ ಮತ್ತು ಹರ್ಷವನ್ನೂ ತಂದುಕೊಳ್ಳಲು
ಸಾಧ್ಯವಿದೆ. ʼʼ ಎಂದು ತಮ್ಮ ಬದುಕಿನಲ್ಲಿ ತಾವೇ ಕೈಗೊಂಡ ಪ್ರಾರ್ಥನಾ ಪ್ರಕ್ರಿಯೆಯ ಅಧ್ತಯನದ
ಅನುಭವದಿಂದ ನುಡಿಯುತ್ತಾರೆ.
ಮನುಷ್ಯನ
ಅಂತರಂಗದಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಆ ಶಕ್ತಿಯನ್ನು
ಗುರುತಿಸಿಕೊಂಡು ಜಾಗ್ರತಗೊಳಿಸಿಕೊಂಡಲ್ಲಿ ಮಾತ್ರ, ಆಶ್ಚರ್ಯಕಾರಕ
ಫಲಿತಾಂಶವನ್ನು ಪಡೆದುಕೊಳ್ಳಲು ಸಾಧ್ಯ, ಆದರೆ ನಾವು ನಮ್ಮ ಸುಪ್ತವನ್ನು ಅನ್ವೇಷಿಸುವುದು
ಹೇಗೆ, ಆಳವನ್ನು ತಲುಪುವುದು ಹೇಗೆ, ಅದರಿಂದ
ನಮ್ಮ ಎಲ್ಲ ಮೂಲಭೂತ ಮಾನಸಿಕ ದೈಹಿಕ ವ್ಯಾವಹಾರಿಕ ಸಮಸ್ಯೆಯನ್ನು
ನಿವಾರಿಸಿಕೊಳ್ಳುವುದೊಂದಲ್ಲದೇ, ಮತ್ತೊಬ್ಬರ ತಲ್ಲಣಗಳನ್ನೂ
ಪರಿಹರಿಸಬಲ್ಲ ಶಕ್ತಿಯನ್ನು ಪಡೆಯುವುದು ಹೇಗೆ ಎಂಬುದನ್ನು, ತನ್ನ ವೈವಿಧ್ಯಮಯ ಪ್ರಯೋಗಗಳ
ಮೂಲಕ ಡಾ| ಮರ್ಫಿ ಸಾಬೀತು
ಪಡಿಸುತ್ತಾರೆ. ಪ್ರಾರ್ಥನಾ ಚಿಕಿತ್ಸೆ ಎಂಬ ನವೀನವಾದ, ಆದರೆ ಪ್ರಾಚೀನ
ಕಾಲದಿಂದಲೂ ವಿವಿಧ ಹೆಸರುಗಳಿಂದ,
ವಿವಿಧ ಚಟುವಟಿಕೆಗಳಲ್ಲಿ ಪ್ರಯೋಗಗೊಳ್ಳುತ್ತಿರುವ ಪ್ರಾರ್ಥನಾ
ಚಿಕಿತ್ಸೆಗಳನ್ನು ಉದಹರಿಸುತ್ತ, ಅದೊಂದು
ಪವಾಡವಾಗಿ ಜನಜನಿತವಾದುದನ್ನು ಕಂಡುಕೊಂಡ
ಅವರು, ಅದಕ್ಕೊಂದು ವೈಜ್ಞಾನಿಕ
ನೆಲಗಟ್ಟು ನಿರ್ಮಿಸಲು ಪ್ರಯತ್ನಿಸುತ್ತಾರೆ.
ʻʻ ಪ್ರಾರ್ಥನಾ ಚಿಕಿತ್ಸೆ ಅಂದರೆ ಪ್ರಜ್ಞೆ ಮತ್ತು ಸುಪ್ತಪ್ರಜ್ಞಾ ಸ್ತರಗಳಲ್ಲಿನ ಮನಸ್ಸನ್ನು
ಕ್ರಮಬದ್ಧವಾಗಿ ಸಮಂಜಸವಾಗಿ, ಮತ್ತು ಬುದ್ಧಿಮತ್ತೆಯಿಂದ ಒಡಗೂಡಿ,
ನಿರ್ದಿಷ್ಠ ಗುರಿಯತ್ತ ನಿರ್ದೇಶಿತಗೊಳಿಸುವುದೇ ಆಗಿದೆ.
ವೈಜ್ಞಾನಿಕ ಪ್ರಾರ್ಥನಾ ಚಿಕಿತ್ಸೆಯಲ್ಲಿ ನೀವು ಏನನ್ನು ಮಾಡುತ್ತಿರುವಿರಿ ಮತ್ತು ಯಾತಕ್ಕಾಗಿ ಮಾಡುತ್ತಿರುವಿರಿ ಎಂಬುದರ
ತಿಳುವಳಿಕೆಯಿರಬೇಕಾಗುತ್ತದೆ. ನೀವು ವಾಸಿಯಾಗಬೇಕಾದ
ನಿಯಮವನ್ನು ಮನಃಪೂರ್ವಕವಾಗಿ ನಂಬಬೇಕಷ್ಟೆ.ʼʼ
ಎಂದೆನ್ನುತ್ತ, ಪ್ರಾರ್ಥನಾ ಚಿಕಿತ್ಸೆಯೆಂದರೆ ನಿರ್ದಿಷ್ಠ ಯೋಜನಾ ನಕ್ಷೆಯ
ಮೂಲಕ, ಕಲ್ಪನೆ ಅಥವಾ ಮಾನಸಿಕ
ಚಿತ್ರವನ್ನು ನಿಮ್ಮ ಸುಪ್ತಪ್ರಜ್ಞಾ ಪಾತಳಿಗೆ
ರವಾನಿಸುವುದರಲ್ಲಿ ನಿಮ್ಮ ಸಾಧನೆ ಮತ್ತು ತಾಕತ್ತು ಅಡಗಿದೆ, ಎಂದು ಸೂಚಿಸುತ್ತಾರೆ.
ಡಾ| ಮರ್ಫಿ
ಕೇವಲ ಪಾಶ್ಚಾತ್ಯ ತತ್ವವನ್ನೇ ಆಧರಿಸುವುದಿಲ್ಲ. ಜಗತ್ತಿನಾದ್ಯಂತ ಭಾರತವನ್ನೂ
ಸೇರಿ ಹಲವು ರಾಷ್ಟ್ರಗಳ,
ಹಲವು ಮತ ಧರ್ಮಗಳ,
ಆರಾಧನೆ ಪ್ರಾರ್ಥನಾ ವಿಧಾನಗಳನ್ನು ಅಧ್ಯಯನ
ಕೈಗೊಳ್ಳುತ್ತಾರೆ, ಅದರಲ್ಲಿರುವ ಚಿತ್ರ ವಿಚಿತ್ರ
ನಂಬಿಕೆಗಳು, ಪ್ರಾರ್ಥನಾ ವಿಧಿಗಳ
ವೈಜ್ಞಾನಿಕ ಮಹತ್ವವನ್ನರಿಯದ ಪಾದ್ರಿ
ಪುರೋಹಿತ ಮುಲ್ಲಾಗಳು ಮತ್ತು ಜ್ಯೋತಿಷಿಗಳು,
ಬಿತ್ತುವ
ಮೂಢನಂಬಿಕೆಗಳ ಹೇರಿಕೆಯನ್ನು ಅರ್ಥೈಸಿಕೊಳ್ಳುತ್ತಾರೆ. ಮಾನವನ
ಆರೋಗ್ಯಸಮಸ್ಯೆ, ವ್ಯಾವಹಾರಿಕ ಲಾಭ ನಷ್ಠ, ಮನುಷ್ಯ ಸಂಬಂಧ, ಸಾಮುದಾಯಿಕ ಗೊಂದಲಗಳಿಗೆಲ್ಲ, ಸುಪ್ತಪ್ರಜ್ಞೆಯ
ಜಾಗ್ರತಿಯಲ್ಲಿ ಸುಲಭ ಪರಿಹಾರವಿದೆ
ಎಂಬುದನ್ನು ಸರಳವಾದ ಜೊತೆಗೆ
ಪರಿಣಾಮಕಾರಿಯಾದ ವಿಧಾನಗಳ ನ್ನು ಪ್ರಸ್ಥುತ
ಪಡಿಸುತ್ತಾರೆ. ಅನಾವಶ್ಯಕ ಚಿಂತೆ ಧ್ವೇಷ ಮತ್ಸರ ಭಯ ಕೀಳರಿಮೆ
ಮುಂತಾದ ಮನೋದೋಷಗಳು, ಅರಿವಿಲ್ಲದೇ
ಮನಸ್ಸನ್ನು ಆಕ್ರಮಿಸಿ, ಸುಪ್ತಪ್ರಜ್ಞೆಯನ್ನು ತಲುಪಲು ತಡೆಗೋಡೆಯಾಗಿ ನಿಲ್ಲುತ್ತವೆ.
ಮೊದಲು ಇಂತಹ ಯಾವ ತಡೆಗಳು ಆಕ್ರಮಿಸಿವೆ,
ಎಂಬುದನ್ನು ಆತ್ಮವಿಮರ್ಶೆಯ ಮೂಲಕ ಕಂಡುಕೊಂಡು,
ಅವೆಲ್ಲವನ್ನೂ ಕಿತ್ತೊಗೆದು, ಬಾಹ್ಯಮನಸ್ಸನ್ನು ಶುದ್ಧಗೊಳಿಸಿ, ನಿರ್ಭಯದಿಂದ, ಸುಪ್ತಪ್ರಜ್ಞೆಯ ಜೊತೆಗೆ
ಒಡನಾಟವನ್ನು ಪ್ರಾರಂಭಿಸಿದ ಮರುಕ್ಷಣದಲ್ಲೇ ವ್ಯಕ್ತಿತ್ವಕ್ಕೊಂದು ಹೊಸ ಮಿಂಚು,
ಹೊಸ ತೇಜಸ್ಸು ಪ್ರಾಪ್ತವಾಗುತ್ತದೆ. ಸುಪ್ತಪ್ರಜ್ಞೆಯ
ಜಾಗ್ರತ ಸ್ಥಿತಿ, ನಿಮ್ಮನ್ನು ಪವಾಡ ಸದೃಷವಾಗಿ, ಒಂದೊಂದೇ
ಮೆಟ್ಟಿಲಾಗಿ ಮೇಲೇರಿಸುತ್ತದೆ. ಎಂದು ಆತ್ಮವಿಶ್ವಾಸದಿಂದ ಆಶ್ವಾಸನೆ
ನೀಡುತ್ತಾರೆ.
ಡಾ| ಮರ್ಫಿ ಯವರ ಪ್ರಯೋಗಗಳ
ವಿವರಗಳನ್ನೋದುವಾಗ, ಇಂಗ್ಲೆಡ್ ದೇಶದಲ್ಲೇ
ಕೆಲವು ವರ್ಷಗಳ ಹಿಂದೆ ಜರುಗಿದ
ಒಂದು ವಿಶಿಷ್ಠ ಪ್ರಯೋಗವೊಂದು ನೆನಪಿಗೆ ಬರುತ್ತದೆ.
ಸುಶಿಕ್ಷಿತ
ಪ್ರತಿಷ್ಠಿತ ವ್ಯಕ್ತಿಗಳಲ್ಲಿ ಮದ್ಯ ವ್ಯಸನ
ತೀವ್ರವಾಗಿ, ಜೀವವಿರೋಧಿಯಾಗಿ ಪರಿಣಮಿಸಿದಂತಹ, ಆಯ್ದ ವ್ಯಕ್ತಿಗಳನ್ನು ಪ್ರಯೋಗಕ್ಕಾಗಿ
ಮನೋಚಿಕಿತ್ಸಕರು ಆಯ್ಕೆಮಾಡಿಕೊಳ್ಳುತ್ತಾರೆ. ನ್ಯಾಯಾಧೀಶರು,
ನ್ಯಾಯವಾದಿಗಳು, ಪ್ರಾಧ್ಯಾಪಕರು, ಉದ್ಯಮಿಗಳು,
ಮತ್ತು ಕೆಲವು ಪಾದ್ರಿಗಳು, ಮುಂತಾದವರು ಈ ಗುಂಪಿನಲ್ಲಿದ್ದಾರೆ. ದೇಶಾದ್ಯಂತ
ವಿವಿಧೆಡೆಯಿಂದ ಚಿಕಿತ್ಸೆಗೆ ಅರ್ಹರಾದ
ಈ ಎಲ್ಲ ಪ್ರತಿಷ್ಠಿತರನ್ನು, ಒಂದೇ ಕಟ್ಟಡದಲ್ಲಿ, ಪ್ರತ್ಯೇಕ ಕೋಣೆಗಳಲ್ಲಿ
ಇರಿಸಲಾಗುತ್ತದೆ. ಅಲ್ಲಿ ಅವರು ಇಷ್ಟಪಡುವ ಉನ್ನತ ದರ್ಜೆಯ ಮದ್ಯಗಳನ್ನೇ
ಒದಗಿಸಲಾಗುತ್ತದೆ. ಆದರೆ ಕೇವಲ ೨೪ ಘಂಟೆಯ
ಈ ಪ್ರಯೋಗದಲ್ಲಿ,ನಿಯಮವೊಂದನ್ನು ಕಡ್ಢಾಯಗೊಳಿಸಲಾಯಿತು. ಪ್ರತಿಯೊಬ್ಬ
ಮದ್ಯವ್ಯಸನಿಯೂ ಮದ್ಯವ್ಯಸನದಿಂದಾಗುವ, ಮಾನಸಿಕ ಸಾಂಸಾರಿಕ, ಸಾಮಾಜಿಕ, ಮತ್ತು ನೈತಿಕ ಪರಿಣಾಮಗಳ
ಬಗೆಗೆ ಅರ್ಧಗಂಟೆ ವ್ಯವಸ್ಥಿತವಾಗಿ
ವಿವರಿಸಬೇಕು. ಅದನ್ನು ಧ್ವನಿಮುದ್ರಿಸಿ, ಅವರ ಮಾತನ್ನೇ ಆ ಒಂದು ದಿನವಿಡೀ ಎತ್ತರದ ಧ್ವನಿಯಲ್ಲಿ ಅವರಿಗೇ ಕೇಳಿಸಲಾಯಿತು.
ಅದರಿಂದ ಬಂದ ಆಶ್ಚರ್ಯಕರ ಫಲಿತಾಂಶವೆಂದರೆ, ಚಿಕಿತ್ಸೆಗೆ
ಆಯ್ಕೆಯಾದ 50 ಜನರಲ್ಲಿ, 33 ಜನರು ಮದ್ಯವನ್ನು
ಶಾಶ್ವತವಾಗಿ ತ್ಯಜಿಸಿದ್ದರು.
ವ್ಯಸನದ
ದುಷ್ಪರಿಣಾಮಗಳ ಸಂಪೂರ್ಣ ಅರಿವಿದ್ದೂ
ವ್ಯಸನದಿಂದ ದೂರವಾಗುವ ಚೈತನ್ಯಹೊಂದಿರದ , ಇವರ ಪ್ರಜ್ಞೆ
ಮತ್ತು ಸುಪ್ತಪ್ರಜ್ಞೆಗಳ ನಡುವೆ ಸೃಷ್ಟಿಯಾಗಿದ್ದ
ತಡೆಗೋಡೆಗಳು, ಅವರಲ್ಲಿರುವ ಅರಿವಿನ ಅನಾವರಣದಿಂದಲೇ
ನಿವಾರಣೆಗೊಂಡಿದ್ದು ನಿಜಕ್ಕೂ
ಸಂತಸ ತಂದ ಸಂಗತಿ.
ಸಮಸ್ಯೆಗಳ
ಪರಿಹಾರಗಳನ್ನು ಹುಡುಕಲು ಯಾವ ದೇವಾಲಯ, ಅದ್ಯಾವುದೇ ದೇವರು, ಯಾವುದೇ
ಪವಾಡಪುರಷ, ಜ್ಯೋತಿಷಿಗಳ ಬಳಿಗೆ ಎಡತಾಕಬೇಕಿಲ್ಲ. ದೇಹವೇ ದೇವಾಲಯವೆಂಬ ಅರಿವಿನೊಂದಿಗೆ, ತನ್ನದೇ ಸುಪ್ತಪ್ರಜ್ಞೆಯೊಂದಿಗೆ ಸಮನ್ವಯತೆ
ಸಾಧಿಸಿದಲ್ಲಿ ಸುಲಭವಾಗಿ ಬದುಕಿನ ಜಂಜಡಗಳಿಂದ ಪಾರಾಗಬಹುದೆಂಬ
ಸರಳ ಉಪಾಯ ಅವನಲ್ಲಿಯೇ
ಇದೆ.
,ಮತ್ತೆ
ಮರ್ಫಿ ಯವರು ನೀಡಿದ ಅದ್ವೈತ
ಸಲಹೆಗಳನ್ನು ಗಮನಿಸೋಣ.
೧) ಹಣ ಜೀವನದ ಏಕಮಾತ್ರ ಗುರಿಯಲ್ಲ. ಸಂಪತ್ತು ಖುಷಿ ಶಾಂತಿ ಅಭಿವ್ಯಕ್ತಿ ಮತ್ತು ಪ್ರೇಮವನ್ನು ಹಾರೈಸಿರಿ.
೨) ಸಮಸ್ಯೆಯೊಳಗೇ ಪರಿಹಾರ
ವಿರುತ್ತದೆ. ಪ್ರಶ್ನೆಯಲ್ಲೇ ಉತ್ತರವಿರುತ್ತದೆ. ನಂಬಿಕೆ
ಮತ್ತು ವಿಶ್ವಾಸದಿಂದ ಕೂಗಿ ಕರೆದರೆ ನಿಮ್ಮ ಜ್ಞಾನ ನಿಮ್ಮ ಕರೆಗೆ
ಓ ಗುಡುತ್ತದೆ.
೩) ಪ್ರಾರ್ಥನೆ ಅದೊಂದು
ಶ್ರೇಷ್ಠ ಹವ್ಯಾಸ. ಸುಪ್ತ ಪ್ರಜ್ಞೆ ಅಂದರೆ ಅದೊಂದು
ಕ್ಯಾಮರಾ. ಅದರಮೇಲೆ ನೀವು ಛಾಪಿಸಿದ ಚಿತ್ರ ಮೂಡುತ್ತದೆ.
೪) ಚಂಚಲತೆಯನ್ನು ಹಿಡಿತದಲ್ಲಿಡಿ. ಭಯವನ್ನು ದೂರವಿಡಿ. ಸಂತಸದಾಯಕ ಸ್ಥಿತಿಗೆ
ಬನ್ನಿ. ಒಳಮನಸ್ಸು ಅದನ್ನೇ ಸ್ಥಿರಗೊಳಿಸುತ್ತದೆ. ಕೆಟ್ಟದ್ದನ್ನು ಯೋಚಿಸಿದರೆ ಅದೇ ಅಲ್ಲಿ ಸ್ಥಿರವಾಗುತ್ತದೆ.
೫) ನಿಮ್ಮ ಸುಪ್ತ ಮನಸ್ಸು
ಎಂದೂ ನಿದ್ರಿಸುವುದಿಲ್ಲ. ಅದು ನಿಮ್ಮ ಸಮಸ್ತ ಕಾರ್ಯಪ್ರಣಾಲಿಯನ್ನು ನಿಯಂತ್ರಿಸುತ್ತದೆ.
೬) ನಿಮ್ಮ ಅಪೇಕ್ಷೆ ನಿರ್ಣಯಗಳು
ಸಕಾರಾತ್ಮಕವಾಗಿರಲಿ. ಆಗ ನಿದ್ದೆಯಮೂಲಕ ಆಧ್ಯಾತ್ಮಿಕ
ರೂಪದಲ್ಲಿ ಮರುಶಕ್ತಿಯನ್ನು ಪಡೆಯುತ್ತೀರಿ.
೭) ಸರಿಯಾದ ನಿದ್ದೆ ಸ್ಥಗಿತತೆಯಲ್ಲ.
ಅದು ನಿಮ್ಮ ಗೊಂದಲಗಳಿಗೆ ಪರಿಹಾರ ನೀಡುತ್ತದೆ. ಸುಪ್ತ ಪ್ರಜ್ಞೆ ತನ್ನ ಅಸೀಮಿತ ಬುದ್ಧಿಮತ್ತೆಯಿಂದ ನಿಮಗೆ ಮಾರ್ಗದರ್ಶನ ಮಾಡಲೆಂದು
ಪ್ರಾರ್ಥಿಸಿ. ಎಚ್ಚರವಾಗುವಾಗ ನಿಮಗೆ ಪರಿಹಾರ
ದೊರೆತಿರುತ್ತದೆ.
೮) ಸರ್ವಶ್ರೇಷ್ಠತೆಯ ನಿರೀಕ್ಷೆ ದೃಢವಾಗಿರಲಿ. ನಿಮ್ಮ ಬದುಕು ಸರ್ವಶ್ರೇಷ್ಠವೇ ಆಗುತ್ತದೆ.
ಸುಮನಾಂಬರ – ೧೪
ʻʻಅಸ್ಮಿತೆ - ಅಭಿಮಾನ,
ಮತ್ತು ವಾಸ್ತವʼʼ
ಮಾತು ಮನುಷ್ಯನ ಅಸ್ಮಿತೆ.
ಮಾತೇ ಮಾನವನ ಅಸ್ತಿತ್ವ.
ಮಾತು ಸಂಸ್ಕೃತಿಯ ರೂಪಕ. ಭಾಷೆಯೊಂದಿಲ್ಲದಿದ್ದರೆ ವಿದ್ಯೆ
ಜ್ಞಾನ ವಿಜ್ಞಾನ ಸಂಸ್ಕೃತಿ
ಕಲೆ ಮತ್ತು ಸಂವಹನ,
ಇದ್ಯಾವುದೂ ಇಲ್ಲದೇ ಬದುಕು ಶೂನ್ಯವಾಗುತ್ತಿತ್ತು. ʻʻ ಮಾತಿನಿಂ ನಗೆನುಡಿಯು
ಮಾತಿನಿಂ ಹಗೆ ಹೊಲೆಯು, ಮಾತಿನಿಂ ಸರ್ವ ಸಂಪದವು
ಲೋಕಕ್ಕೆ ಮಾತೇ ಮಾಣಿಕ್ಯ
ಸರ್ವಜ್ಞ. ʼʼ
ಹಿತ್ತಲ ಗಿಡ ಮದ್ದಲ್ಲ. ಮಾತೂ
ಸಹ ಹಾಗೆಯೇ. ಪುಕ್ಕಟೆಯಾಗಿ
ದೊರಕಿದ್ದು. ಹುಟ್ಟುತ್ತಲೇ ಸಮುದಾಯದ
ನಡುವೆ ಅದ್ಯಾವ ಪರಿಶ್ರಮವಿಲ್ಲದೇ ಮನುಷ್ಯ ಮಾತನಾಡಲು ಪ್ರಾರಂಭಿಸಿ ಬಿಡುತ್ತಾನೆ. ಪ್ರಕೃತಿ
ಅವನಿಗೆ ನೀಡಿದ ಅನುಪಮ ಶಕ್ತಿಯಾದ ಪ್ರಜ್ಞೆ ಎಂಬ
ಕೊಡುಗೆಯಿಂದ, ಮಾತಿನ ಮೂಲಕವೇ ಅನುಭವ ಹೀರುತ್ತ, ಸಮುದಾಯದೊಂದಿಗೆ
ಸಂವಹನ ಸಾಧಿಸುತ್ತ, ತನ್ನದೇ
ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬಿಡುತ್ತಾನೆ.
ಪ್ರತಿಯೊಂದು ವ್ಯಕ್ತಿತ್ವವೂ ವಿಶಿಷ್ಟ, ಅನನ್ಯ. ಅವನಾಡುವ
ಮಾತೂ ಸಹ ಹಾಗೆಯೇ.
ಅದರ ಲಯ ಏರಿಳಿತ ದನಿಯ ಇಂಪು,
ಅಭಿವ್ಯಕ್ತಿಸುವ ಚಲುವು, ಎಲ್ಲವೂ ವಿಶಿಷ್ಟವೇ.
ಮಾತೇ ವ್ಯಕ್ತಿತ್ವದ ಅಳತೆಗೋಲಾಗಿ, ಅವನ ಸೋಲು ಗೆಲುವಿನ ಸಾಕ್ಷಿಯಾಗಿ ಬದುಕನ್ನು ವಿಸ್ತರಿಸುತ್ತದೆ. ಅವನಿಗೆ
ತಿಳಿಯದೇ ತಲೆಮಾರಿಂದ ತಲೆಮಾರಿಗೆ
ಅನುಭವ ಪ್ರವಾಹವನ್ನು ಹರಿಸುತ್ತಾನೆ.
ಆದರೆ ಎಲ್ಲ ನುಡಿಗಳ
ಸ್ಥಿತಿಯೂ ಹೀಗೆಯೇ ಇದೆಯೇ.. ಎಂಬ
ಪ್ರಶ್ನೆ ಎದುರಾದರೆ ನಿರಾಶೆ ಕಟ್ಟಿಟ್ಟ ಬುತ್ತಿ. ನುಡಿಗೂ, ಪ್ರಭುತ್ವಕ್ಕೂ, ಭಾಷೆಗೂ ಬದಲಾಗುವ ಜೀವನ ವಿಧಾನ,
ಜೀವನ ದೃಷ್ಟಿ, ಅನಿವಾರ್ಯ ವಲಸೆಗೂ, ಸಂಘರ್ಷವೇರ್ಪಟ್ಟಲ್ಲಿ, ನುಡಿ ಸಂಕುಚಿತಗೊಳ್ಳಬಹುದು.
ಕಾಣೆಯಾಗಬಹುದು. ಕೀಳರಿಮೆ, ಅಲಕ್ಷ್ಯ, ಅಗೌರವಗಳಿಗೂ
ಕಾರಣವಾಗಿಬಿಡಬಹುದು.
ಇಂತಹ ಸಂದಿಗ್ಧ
ಸಂಕಟ, ನಮ್ಮ ಕನ್ನಡವೂ ಸೇರಿ ಭಾರತೀಯವಾದ ಎಲ್ಲ ಭಾಷೆಗಳಿಗೂ ಕಾಡುತ್ತಿದೆ.
ಕಳೆದೊಂದು ಶತಮಾನದ ಹಿಂದೆ ಪ್ರತಿಷ್ಠಿತ ಭಾಷೆಯಾಗಿ
ಸಂಸ್ಕೃತ ವಿಜ್ರಂಭಿಸುತ್ತಿದ್ದರೆ, ಇದೀಗ ಇಂಗ್ಲಿಶ್ ದೇಶವನ್ನು
ಆಕ್ರಮಿಸಿಕೊಂಡಿದೆ. ಯಾವುದೇ ಭಾಷೆಯ ಕೊಡು ಕೊಳ್ಳುವಿಕೆ, ಮತ್ತೊಂದು ಸಂಸ್ಕೃತಿಯ
ಅಧ್ಯಯನಕ್ಕೆ, ಸಂವಹನಕ್ಕೆ, ಜ್ಞಾನಕ್ಕೆ
ಅತ್ಯಂತ ಅವಶ್ಯ. ಆದರೆ ಅದೇ ಒಂದು ಭಾಷೆಯನ್ನು ಆಕ್ರಮಿಸಿ,
ಕುಲಗೆಡಿಸಿ, ತಾನೇ ಅತ್ಯಂತ
ಶ್ರೇಷ್ಠ ಎಂಬ ಭ್ರಮೆಯನ್ನು ಸೃಷ್ಟಿಸುತ್ತಿದ್ದರೆ ಅದು ಅಪರಾಧ. ದಕ್ಷಿಣ
ಭಾರತಕ್ಕೆ ರಾಷ್ಟ್ರಭಾಷೆಯೆಂಬ ಹುಸಿ ಪ್ರಚಾರದಲ್ಲಿ, ಹಿಂದಿಯ ಹೇರಿಕೆ,
ಜಾಗತಿಕ ಸಂವಹನ ಸೌಲಭ್ಯಕ್ಕಾಗಿ ಇಂಗ್ಲಿಶ್
ಹೇರಿಕೆಯಂತಹ ಚಟುವಟಿಕೆ ಆತ್ಮಹತ್ಯಾತ್ಮಕ ವಾಗಿದೆ. ಅವೆರಡು ಭಾಷೆಗಳಿಲ್ಲದಿದ್ದರೆ ಬದುಕೇ ವ್ಯರ್ಥ
ಎಂಬ ಭೃಮಾತ್ಮಕ ವಾತಾವರಣ
ನಿರ್ಮಾಣಕ್ಕೆ ಸಹಕಾರಿಯಾಗಿ ಸ್ಥಳೀಯ ಭಾಷೆಗಳು ಶಕ್ತಿಗುಂದುತ್ತವೆ.
ಕಳೆದ ಕೆಲವು ವರ್ಷಗಳ
ಹಿಂದೆ ಯುನೆಸ್ಕೋ ಜಗತ್ತಿನ ಭಾಷೆಗಳ ವೈಜ್ಞಾನಿಕ
ಅಧ್ಯಯನ ಗೈದು, ಯಾವ ಭಾಷೆ ಯಾವ
ಸ್ಥಿತಿಯಲ್ಲಿದೆ, ಎಂಬುದನ್ನು ಸಮೀಕ್ಷಿಸುತ್ತದೆ. ಸಾವಿರಾರು ಭಾಷೆಗಳಲ್ಲಿ, ಕೇವಲ ಮೂರೇ ಮೂರು ಭಾಷೆಗಳು ಮುಂಚೂಣಿಗೆ ಬರುತ್ತವೆ. ಸಂಸ್ಕೃತ, ಗ್ರೀಕ್, ಮತ್ತು ಕನ್ನಡ ಇವೇ
ಆ ಮೂರು
ಭಾಷೆಗಳು. ಧ್ವನ್ಯಾತ್ಮಕವಾದ ಈ ಭಾಷೆಗಳು ಹೇಗೆ ಮಾತನಾಡುತ್ತಾರೋ,
ಹಾಗೆಯೇ ಬರೆಯುತ್ತಾರೆ. ಹೇಗೆ ಬರೆಯುತ್ತಾರೋ ಹಾಗೆಯೇ
ಮಾತನಾಡುತ್ತಾರೆ. ಇನ್ನೊಂದು ವಿಶೇಷವೆಂದರೆ,
ಅದೇ ಸಂದರ್ಭದಲ್ಲಿ ಕನ್ನಡಾಕ್ಷರ ಮಾಲೆ, ಲಿಪಿ ಜಗತ್ತಿನಲ್ಲಿ ʻʻ ಲಿಪಿಗಳ ರಾಣಿ ʼʼ ಎಂದೆನ್ನಿಸಿಕೊಂಡಿದ್ದು ಕನ್ನಡ ನಾಡಿಗೆ ಸಂಭ್ರಮತರುವ
ಕ್ಷಣ.
ಪ್ರಾಕೃತಿಕವಾಗಿ ಗಮನಿಸಿದರೆ
ದಕ್ಷಿಣ ಏಶಿಯಾದಲ್ಲೇ ಅತ್ಯಂತ ಪ್ರಾಚೀನ
ಮಾನವ ವಾಸದ ಪಳೆಯುಳಿಕೆ ಉತ್ತರಕರ್ನಾಟಕದಲ್ಲಿ ದೊರಕಿದೆ. ಸರಿಸುಮಾರು ೪೦,೦೦೦ ವರ್ಷಗಳ
ಹಿಂದಿನ ಆದಿಮಾನವ ಸಂತತಿಯ
ಕುರುಹು ಕೊಪ್ಪಳದಲ್ಲಿ ದೊರಕಿದೆ.
ರಾಜ್ಯದ ಮೇಲುಕೋಟೆಯಲ್ಲಿ
ದೊರೆಯುತ್ತಿರುವ ಅತಿಶ್ರೇಷ್ಠ ನೀಲ ರತ್ನ ದೇಶದಲ್ಲಿ
ಮತ್ತೆಲ್ಲೂ ದೊರೆಯಲಾರದು.
ಬೆಂಗಳೂರಿನ ಲಾಲಭಾಗ್
ಪ್ರದೇಶದಲ್ಲಿ ವಿಸ್ತಾರವಾಗಿ ವ್ಯಾಪಿಸಿರುವ
ಕಲ್ಲುಬಂಡೆ ಪ್ರದೇಶ ಸರಿಸುಮಾರು
ಲಕ್ಷವರ್ಷ ಹಿಂದಿನದು. ದೇಶದಲ್ಲಿ ಇಂತಹ ಬಂಡೆ ಕೇವಲ ಎರಡೇ ಎರಡು ಪ್ರದೇಶದಲ್ಲಿದೆ.
ದೇಶದ ಏಕೈಕ ಬಂಗಾರದ ಗಣಿ ನಮ್ಮ
ಕರ್ನಾಟಕದಲ್ಲಿದೆ. ಆದರೆ ಪ್ರತಿಶತ
೮೫ ರಷ್ಟು ಬಂಗಾರ ಬ್ರಿಟೀಶರ ಪಾಲಾಗಿದೆ
ಎಂಬುದು ವಿಷಾದನೀಯ.
ಕರ್ನಾಟಕದ ಶ್ರೀಗಂಧ
ಮತ್ತು ಬೀಟೆ ಮರಗಳು ಜಾಗತಿಕ ಗುಣಮಟ್ಟ ಹೊಂದಿವೆ. ನಮ್ಮ ತೋಟಗಳಲ್ಲಿ ಬೆಳೆಯುವ ʻʻ
ವೆನಿಲ್ಲಾಬೀನ್ಸ ʼʼ ಗಾತ್ರ ಮತ್ತು ಪರಿಮಳಗಳನ್ನು ಜಗತ್ತಿನ
ಮತ್ಯಾವ ದೇಶವೂ ಸರಿಗಟ್ಟಿಲ್ಲ.
ಉತ್ತರಕನ್ನಡ ಜಿಲ್ಲೆಯಲ್ಲಿ
ಹರಿಯುತ್ತಿರುವ ʻʻ ಅಘನಾಶಿನಿ ನದಿʼʼ ದೇಶದ ಒಂದೆರಡು
ಅತೀಶುದ್ಧ ನದಿಗಳಲ್ಲಿ ಒಂದು. ನೇರವಾಗಿ
ನಿರ್ಭಯವಾಗಿ ಈ ನದಿಯ ನೀರನ್ನು ಕುಡಿಯಬಹುದಾಗಿದೆ.
ಜಗತ್ತಿನಲ್ಲಿ
ಎಲ್ಲೂ ಇಲ್ಲದ, ಅಪರೂಪದ ʻʻ
ಕತ್ತಲ ಕಾನೋಸಿಸ್ʼʼ ವೃಕ್ಷ, ಉತ್ತರಕನ್ನಡದ ಕತ್ತಲೆ ಕಾನಿನಲ್ಲಿ ಸುರಕ್ಷಿತವಾಗಿ
ನೆಲೆಸಿದೆ.
ಜೋಗ ಜಲಪಾತ ವಿಶ್ವದಲ್ಲೇ
ಎರಡನೆಯ ಅತಿಯೆತ್ತರದ ಜಲಪಾತ.
ಕನ್ನಡಾಭಿಮಾನದ ದೃಷ್ಟಿಯಲ್ಲಿ
ಪಾಟೀಲ ಪುಟ್ಟಪ್ಪ ನಿಸ್ಸಂಶಯವಾಗಿ
ಮೂಂಚೂಣಿಯಲ್ಲಿ ನಿಲ್ಲುತ್ತಾರೆ. ತಮ್ಮ ಬರೆಹದ
ಸುದೀರ್ಘ ಜೀವನದಲ್ಲಿ ಅತಿಹೆಚ್ಚು ಬರೆದಿರುವುದು ಕನ್ನಡ
ನೆಲ ನುಡಿಗಳ ಬಗೆಗೆ.
ಹೊರ ರಾಜ್ಯಗಳ ಪಾಲಾದ ಕನ್ನಡ ನೆಲದ
ದಾರುಣ ಸ್ಥಿತಿಯನ್ನು ಅವರಷ್ಟು ಪರಿಣಾಮಕಾರಿಯಾಗಿ ವಿವರಿಸಿದವರು
ಮತ್ತೊಬ್ಬರಿಲ್ಲ. ಮಹಾರಾಷ್ಟ್ರ, ತಮಿಳುನಾಡು,
ಕೇರಳ, ಮತ್ತು ಆಂಧ್ರ ರಾಜ್ಯಗಳಲ್ಲಿರುವ ಕನ್ನಡ ಪ್ರದೇಶಗಳ ದುಸ್ಥಿತಿಯನ್ನು ಇಂಚಿಂಚೂ
ವಿವರಗಳನ್ನು ಜನತೆಯ ಸರಕಾರದ ಮುಂದಿಟ್ಟ ಮಹನೀಯರು ಅವರು. ಆವಾವ ರಾಜ್ಯಗಳಲ್ಲಿದ್ದ ನೂರಾರು
ಕನ್ನಡ ಶಾಲೆಗಳು ತೊಂಭತ್ತರ ಕಾಲದಲ್ಲೇ
ಅವಸಾನದ ಸ್ಥಿತಿಗೆಇಳಿದ ಸಂಗತಿಯನ್ನು
ಸರಕಾರಕ್ಕೆ ಮನಮುಟ್ಟುವಂತೇ ತಲುಪಿಸಿದ್ದರು. ಇನ್ನು ಗಡಿನಾಡ
ಕನ್ನಡಿಗರ ಸ್ಥಿತಿಯನ್ನಂತೂ ಕೇಳುವುದೇ
ಬೇಡ.
ʻʻ ಹದಿನೇಳನೇ ಶತಮಾನದಲ್ಲಿ,
ಮುಂಬಯಿ ನಗರ ಪೋರ್ತುಗೀಜರ ವಸಾಹತಾಗಿತ್ತು.
ಆ ಕಾಲದಲ್ಲಿ ಪೋರ್ತುಗೀಜ ರಾಜಪುತ್ರಿಯನ್ನು ಬ್ರಿಟೀಶ್ ರಾಜಕುಮಾರನಿಗೆ ಮದುವೆ ಮಾಡಿ ಕೊಟ್ಟರು. ಆಗ ವರದಕ್ಷಿಣೆಯಾಗಿ ಮುಂಬಯಿ ನಗರವನ್ನು ವರದಕ್ಷಿಣೆಯಾಗಿ
ನೀಡಲಾಯಿತು. ಬ್ರಿಟಿಶ್ ಸರಕಾರ, ಉಸ್ತುವಾರಿಗೆಂದು ಈಸ್ಟ ಇಂಡಿಯಾ ಕಂಪನಿಗೆ ಮುಂಬಯಿಯನ್ನು ಹಸ್ತಾಂತರಿಸಿತು. ೧೬೭೬ ನೇ ಸಾಲಿನಲ್ಲಿ,
ತಮ್ಮೊಂದಿಗೆ ವ್ಯವಹರಿಸುವವರು ತಮ್ಮ ಮನವಿಯನ್ನು ಕನ್ನಡದಲ್ಲಿ
ಅಥವಾ ಪೋರ್ತುಗೀಜ ಭಾಷೆಯಲ್ಲಿ
ಮಾತ್ರ ಸಲ್ಲಿಸಬೇಕೆಂದು ಆದೇಶ ಹೊರಡಿಸಿದ್ದರು.
ಸರ್
ಎಲ್ಫಿನ್ ಸ್ಟನ್ ೧೮೧೮ ರಲ್ಲಿ ಮುಂಬಯಿರಾಜ್ಯದ
ಮೊದಲನೆಯ ಗವರ್ನರ್ ಆಗಿ ನೇಮಕ
ಗೊಂಡಾಗ ನಗರದಲ್ಲಿ ಆತನಿಗೆ
ಕೊಟ್ಟ ಮೊಟ್ಟಮೊದಲ ಮಾನಪತ್ರ
ಕನ್ನಡದಲ್ಲಿತ್ತುʼʼ.
ಎಂಬ ಅಪರೂಪದ
ಮಾಹಿತಿಯನ್ನು ಪಾ.ಪುಟ್ಟಪ್ಪ ತಮ್ಮ ಲೇಖನಗಳಲ್ಲಿ ಒದಗಿಸುತ್ತಾರೆ.
ಇನ್ನು ಹುಯಿಲ ಗೋಳ
ನಾರಾಯಣ ರಾಯರಿಂದ ಪ್ರಾರಂಭಿಸಿ, ಅ ನ ಕೃ,
ತ.ರಾ.ಸು ರವರ ವರೆಗೆ ಕರ್ನಾಟಕದ
ವೈಭವಪೂರ್ಣ, ರೋಚಕ ಇತಿಹಾಸವನ್ನು ವರ್ತಮಾನಕ್ಕೆ
ಯಶಸ್ವೀಯಾಗಿ ತಂದಿತ್ತಿದ್ದಾರೆ.
ಕ್ರಿಸ್ತೀಶಕ ಪೂರ್ವದಿಂದಲೂ
ಭಾರತದಾದ್ಯಂತ ವಲ್ಲದೇ ನೇಪಾಳ್
ಚೀನಾ ಗ್ರೀಸ್ ವರೆಗೆ ಕನ್ನಡದ
ಸಂಪರ್ಕವಿತ್ತು ಎಂಬುದು ನಿಜಕ್ಕೂ ಹೆಮ್ಮೆ ತರುವ ಸಂಗತಿ. ಎಂಟು ಒಂಭತ್ತನೆಯ ಶತಮಾನದಲ್ಲಿ
ಬಿಹಾರ ಪಶ್ಚಿಮ ಬಂಗಾಲ ರಾಜ್ಯಗಳಲ್ಲಿ ಕರ್ನಾಟಕ
ಸಂಗೀತವೇ ಅತ್ಯಂತ ಜನಪ್ರಿಯವಾಗಿತ್ತು. ಒಂದು ಸಾವಿರ ವರ್ಷಗಳಿಂದ
ನಮ್ಮ ಗೋಕರ್ಣದ ಪುರೋಹಿತರು, ನೇಪಾಳ್
ಪಶುಪತಿನಾಥ ಮಂದಿರದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೇಪಾಳದ
ಮಲ್ಲ ಎಂಬ ಜನಾಂಗ ಕರ್ನಾಟಕ
ಮೂಲದ್ದು. ಬಂಗಾಲದ ನೋಬೆಲ್
ಪ್ರಶಸ್ತಿವಿಜೇತ ಅಮರ್ತ್ಯ ಸೇನ್ ರವರ ಮೂಲ ಧಾರವಾಡಕ್ಕೆ ಬಂದು ತಲುಪುತ್ತದೆ.
ಕದಂಬರು, ಶಾತವಾಹನರು,
ಚಾಲುಕ್ಯರು ರಾಷ್ಟ್ರಕೂಟರು,ಗಳ ರಾಜ್ಯ ನರ್ಮದೆಯನ್ನೂ
ದಾಟಿತ್ತು. ಮರಾಠಿ ಕನ್ನಡ ವಿವಾದ,
ನಮ್ಮ ಮತ್ತು ಮಹಾರಾಷ್ಟ್ರರಾಜ್ಯಗಳನ್ನು ಪರಸ್ಪರ ವೈರಿಗಳಾಗಿ ಮಾರ್ಪಡಿಸಿದೆ.
ಆದರೆ ಬಾಲಗಂಗಾಧರ ತಿಲಕರು, ಕರ್ನಾಟಕದ ಬೆಳಗಾವಿಯಲ್ಲಿ
ಒಂದು ಸಭೆಯನ್ನುದ್ದೇಶಿಸಿ ಮಾತನಾಡುವಾಗ, (೧೯೧೪) ʻʻ ಒಂದುಕಾಲದಲ್ಲಿ ಕರ್ನಾಟಕ ಮಹಾರಾಷ್ಟ್ರದ
ಆಡುನುಡಿ ಒಂದೇ ಆಗಿತ್ತು, ಅದು
ಕನ್ನಡವಾಗಿತ್ತುʼʼ ಎಂದು ಆಡಿದ ಮಾತನ್ನು
ಎರಡೂ ರಾಜ್ಯಗಳು ಮತ್ತೊಮ್ಮೆ
ಗಮನಿಸಬೇಕು. ಈವರೆಗೆ ಮಹಾರಾಷ್ಟ್ರದಲ್ಲಿ ದೊರಕಿರುವ
ಶಿಲಾಶಾಸನಗಳಲ್ಲಿ, ಶೇ ೮೫ ರಷ್ಟು ಶಾಸನಗಳು
ಕನ್ನಡದ್ದೇ ಆಗಿವೆ. ಶೇ ೧೦ ಮರಾಠಿಯದ್ದಾದರೆ, ಉಳಿದವು ಬ್ರಾಹ್ಮೀ ಲಿಪಿಯಲ್ಲಿವೆ.
ಪಂಡರಪುರದ ವಿಟ್ಠಲ
ಇಂದೂ ಕಾನಡೀ ವಿಟ್ಠಲನೇ.
ಮಹಾರಾಷ್ಟ್ರದಲ್ಲಿರುವ ಎಲ್ಲ ಶಿಲ್ಪಕಲಾಕೃತಿಗಳು ಕರ್ನಾಟಕದ್ದೇ
ಆಗಿವೆ.
ಔರಂಗಾಬಾದಿನ ಏಕಶಿಲಾ
ಕೈಲಾಸ ದೇವಾಲಯ, ಜಗತ್ಪ್ರಸಿದ್ದ. ಅದರ ನಿರ್ಮಾಣ
ಮೇಲಿನಿಂದ ಪ್ರಾರಂಭವಾಗಿ ತಳ ತಲುಪಿದೆ. ಜಾಗತಿಕ
ಪ್ರಸಿದ್ಧಿಪಡೆದಿರುವ ಈ ದೇವಾಲಯದ
ನಿರ್ಮಾಣವನ್ನು ರಾಷ್ಟ್ರಕೂಟ ಅರಸ, ಒಂದನೆಯ
ಕೃಷ್ಣ ನಿರ್ಮಿಸಿದ್ದು ಎಂಬುದು ನಮ್ಮ ಹೆಗ್ಗಳಿಕೆ.
ಇಂದೂ ಸಹ ಮಹಾರಾಷ್ಟ್ರದಲ್ಲಿ ಕನ್ನಡ ಪ್ರದೇಶಗಳಿವೆ. ಕನ್ನಡ ಎಂಬ ಒಂದು ತಾಲೂಕೇ
ಇದೆ. ನೂರಾರು ಹಳ್ಳಿಗಳ
ಹೆಸರು ಇನ್ನೂ ಕನ್ನಡದಲ್ಲೇ
ಇವೆ. ಮರಾಠಿಯ ಪವಿತ್ರಗ್ರಂಥ
ಜ್ಞಾನೇಶ್ವರಿ ಯಲ್ಲಿ, ಶೇ- ೪೦ ರಷ್ಟು ಪದಗಳು
ಕನ್ನಡದಲ್ಲೇ ಇವೆ. ಅಂದರೆ
ಮಹಾರಾಷ್ಟ್ರ ಒಂದು ಕಾಲದಲ್ಲಿ ಸಂಪೂರ್ಣ ಕನ್ನಡ
ಮಯವಾಗಿತ್ತು. ಕನ್ನಡ ನಾಡೇ ಆಗಿತ್ತು,
ಎಂಬುದು, ಸಂಶೋಧಿತ ಹಲವು ದಾಖಲೆಗಳ ಮೂಲಕ ಮನದಟ್ಟಾಗುತ್ತದೆ.
ಇಂದಿಗೂ ಆಂಧ್ರ ತಮಿಳುನಾಡು ಕೇರಳ ಮತ್ತು
ಮಹಾರಾಷ್ಟ್ರ ರಾಜ್ಯಗಳ ಕನ್ನಡಪ್ರದೇಶ ಗಳ ಮೂಲನಿವಾಸಿಗಳು, ಕೋಟಿಸಂಖ್ಯೆಯನ್ನು ಮೀರುತ್ತಾರೆ.
ಆದರೆ ತಲೆಮಾರಿಂದ ತಲೆಮಾರಿಗೆ
ಕನ್ನಡ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಅವರಲ್ಲಿ
ಕನ್ನಡ ಪ್ರಜ್ಞೆ, ಕನ್ನಡ ಸಂಸ್ಕೃತಿ ಜಾಗ್ರತವಾಗುವಂತಾಗಲು, ಕನ್ನಡಪ್ರೇಮಿಗಳು, ಸರಕಾರಗಳು
ಪ್ರಯತ್ನಿಸಬೇಕು. ಪಣತೊಡಬೇಕು.
ʻʻ
ನಮಗೆ ನಾವು ಅರ್ಥವಾಗಲು,
ನಮ್ಮ ಮಣ್ಣಿನ ಸತ್ವ ಅರ್ಥವಾಗಲು
ಮುಖ್ಯವಾಗಿ ನಮ್ಮ ಚರಿತ್ರೆಯ ಅರಿವು ಅವಶ್ಯ. ಈ ನಾಡು ದೇಶಕ್ಕೆ ನೀಡಿದ
ಜ್ಞಾನ ವಿಜ್ಞಾನ ತತ್ವಜ್ಞಾನ
ಮತ್ತು ಸಂಸ್ಕೃತಿಯ ಮಹತ್ವವನ್ನು
ಅನುಸಂಧಾನ ಗೈಯ್ಯದಿದ್ದರೆ ಆತ ಕನ್ನಡಿಗನೇ ಅಲ್ಲ. ʼʼ ಎಂಬ ಬೇಂದ್ರೆಯವರ
ನುಡಿ ಮತ್ತೆ ಇಲ್ಲಿ ಮೊಳಗಬೇಕು.
ಸುಮನಾಂಬರ -
೧೫
ಸಪ್ತಸಾಗರದಾಚೆಯೆಲ್ಲೋ........
ತಂದೆ ತಾಯಿಯರು ನಮ್ಮ ಆಯ್ಕೆಯಲ್ಲ. ಜಾತಿ ಪ್ರದೇಶ
ಲಿಂಗ ನಮ್ಮ ಆಯ್ಕೆ ಅಲ್ಲವೇ ಅಲ್ಲ. ನಾವೆಷ್ಟು
ದಿನ ವರ್ಷ ಬದುಕುತ್ತೇವೆಂಬುದು ನಮಗರಿವಿಲ್ಲ.
ಪ್ರಾರಂಭ ಮತ್ತು ಅಂತ್ಯದ ಪುಟಗಳನ್ನು ಹರಿದಿಟ್ಟ
ಅಮೂಲ್ಯ ಗ್ರಂಥ ನಮ್ಮ ಜೀವನ. ಆದಿ ಅಂತ್ಯ
ಎರಡೂ ನಿಗೂಢ. ನಿರುತ್ತರ. ಹುಟ್ಟು ಸಾವುಗಳ
ನಡುವೆ ನಮಗೊಂದಿಷ್ಟು ಸ್ವಾತಂತ್ರ್ಯವಿದೆ. ಪರಂಪರೆಯಿಂದ
ಹರಿದು ಬಂದ ಆಡುನುಡಿ, ಸಂಪ್ರದಾಯ ಸಂಸ್ಕೃತಿಗಳು ನಮಗೊಂದು
ವ್ಯಕ್ತಿತ್ವ ನೀಡಿದೆ. ಸುಖ ದುಃಖ ನೋವು
ತಲ್ಲಣ, ಜಗಳ ಪ್ರೀತಿ, ಪ್ರೇಮ ಕಾಮಗಳಲ್ಲಿ ಲೀನವಾದ ನಮ್ಮ ಬದುಕು
ಸ್ವಯಂ ಚಾಲಿತವಾಗಿ ಸಾಗುತ್ತದೆ. ಈ ನಡುವೆ ಅಪರೂಪದಲ್ಲಿ
ಕೆಲವು ವಿಶಿಷ್ಟ ವ್ಯಕ್ತಿತ್ವಗಳು ತಮ್ಮ ಹೆಜ್ಜೆಗುರುತುಗಳನ್ನು ಸಮುದಾಯದ
ಮನೋಭಿತ್ತಿಯ ಮೇಲೆ ಮೂಡಿಸಿ
ಸಾಗುತ್ತವೆ. ಅಂತಹ ಬದುಕುಗಳೇ
ಮುಂದೆ ಒಂದು ಮೌಲ್ಯವಾಗಿ, ಪ್ರಗತಿಗೆ
ವಿಕಾಸಕ್ಕೆ ಏಣಿಗಳಾಗಿ ಮಾರ್ಪಡುತ್ತವೆ. ಪ್ರಜ್ಞೆ
ಎಂಬ ಅನುಪಮ ಶಕ್ತಿ ಪಡೆದ ಮನುಷ್ಯ ಒಂದಲ್ಲಾ ಒಂದು ದಿನ ನಾನೇಕೆ
ಜನ್ಮಿಸಿದೆ. ನನ್ನ ಬದುಕಿನ ಗುರಿಯೇನು.
ಈ ಜೀವನದಾಚೆ ಏನಿದೆ.
ಹಿಂದೆ ಹೇಗಿತ್ತು, ಎಂಬ ಚಿಂತನೆಗೆ
ಇಳಿದೇ ಇಳಿಯುತ್ತಾನೆ. ಅದರಲ್ಲಿ ಕೆಲವು ಮನಸ್ಸುಗಳು
ಮಾನವ ಜೀವನದ ಶಕ್ತಿ ದೌರ್ಬಲ್ಯ, ಅತಿ-ಮಿತಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತವೆ. ಇದೊಂದು
ಮುಗಿಯದ ಯುದ್ಧ. ಆದರೆ ಅಂತಹ ಪ್ರಯತ್ನ
ವಿಫಲವೇನೂ ಅಲ್ಲ. ಅಂಥಹ ಪ್ರಯತ್ನಗಳೇ ನಮ್ಮ ವಿಕಾಸದ ದಾರಿದೀಪಗಳಾಗಿ
ಪಾತ್ರವಹಿಸಿವೆ.
ಅಂತರಂಗ ಜಗತ್ತಿನಲ್ಲಿ ನಡೆಯುವ ಗೊಂದಲ ದ್ವಂದ್ವ ಹುಡುಕಾಟ, ತಡಕಾಟ, ತಾತ್ವಿಕತೆಯ ನೆಲೆಯಲ್ಲಿ ಸಾಗುತ್ತ,
ಅದೇ ತತ್ವಜ್ಞಾನವಾಗಿ, ಕಾವ್ಯವಾಗಿ, ವಿಜ್ಞಾನವಾಗಿ
ರೂಪುಗೊಳ್ಳುತ್ತ, ನಮ್ಮ ಶ್ರೀಸಾಮಾನ್ಯರ ಅತಂತ್ರತೆಗೊಂದು
ಊರುಗೋಲಾಗಿ, ತಲ್ಲಣಗಳಿಗೆ ಸಾಂತ್ವನವಾಗಿ, ಗೊಂದಲಗಳಿಗೆ ತಾತ್ಕಾಲಿಕ
ಶಮನವಾಗಿ, ಕಾಲಯಾನದಲ್ಲಿ ಕೊಂಡೊಯ್ಯುತ್ತಿದೆ.
ಅವರವರ ಮನೋಪ್ರವೃತ್ತಿ,
ಜ್ಞಾನ, ಜಿಜ್ಞಾಸಾ ಮನೋಭಾವಕ್ಕೆ ಅನುಗುಣವಾಗಿ,
ಅಸಂಖ್ಯಾತ ಆಯ್ಕೆ ಎದುರಿಗಿವೆ.
ಅದು ಗದ್ಯವಿರಲಿ, ಪದ್ಯವಿರಲಿ, ಲಲಿತ ಕಲೆಗಳಿರಲಿ, ತತ್ವಜ್ಞಾನ
ಮನೋವಿಜ್ಞಾನವಿರಲಿ, ಅಥವಾ ಆಧುನಿಕ
ವಿಜ್ಞಾನವೇ ಇರಲಿ, ಎಲ್ಲವೂ
ಮನುಷ್ಯಮುಖಿಯೇ. ಸಮಾಜ ಮುಖಿಯೇ. ಆಗಿದೆ. ಆದರೂ
ಮನುಷ್ಯ ಎಂಬ ಜೀವಪ್ರಭೇದ ಸದಾ ಆತಂಕ ಭಯ, ಶಂಖೆಗಳಲ್ಲಿ ತೊಳಲಾಡುತ್ತ
ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ವ್ಯಕ್ತಿ ವ್ಯಕ್ತಿಗಳಲ್ಲಿ
ವೈಮನಸ್ಸು, ಸಮುದಾಯ ಸಮುದಾಯಗಳಲ್ಲಿ ಭಿನ್ನತೆ, ದೇಶ ದೇಶಗಳ ನಡುವೆ ವೈಷಮ್ಯ, ಯುದ್ಧ,
ಹಿಂಸೆ, ಮಾರಣ ಕ್ರಿಯೆಗಳಲ್ಲಿ ತೊಡಗಿಕೊಂಡಿರುವುದನ್ನು
ಕಾಣುತ್ತೇವೆ. ಅಂತರಂಗದಲ್ಲಿ ಕಾಡುವ ಅತಂತ್ರತೆ, ಅಕಾರಣ
ಭಯ, ಅತೀವ ಸ್ವಾರ್ಥಕ್ಕೆ, ಧ್ವೇಷಕ್ಕೆ ಜಗಳಕ್ಕೆ
ಯುದ್ಧಕ್ಕೆ ತೊಡಗುವಂತೇ ಮಾಡಿಬಿಡುತ್ತದೆ. ಬದುಕು
ನಂದನವಾಗುವುದರ ಬದಲು ನರಕವಾಗಲು
ನಮ್ಮ ಅಪವರ್ತನೆಯೇ ಕಾರಣವಾಗಿಬಿಡುತ್ತದೆ. ಇಂತಹ ಅಯೋಮಯ ಸಂದರ್ಭದಲ್ಲೇ
ಒಂದು ಕವನ ಕಾಡತೊಡಗುತ್ತದೆ.
ಯಾವ ಮೋಹನ
ಮುರಲಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು
ಸೆಳೆಯಿತು ನಿನ್ನ ಮಣ್ಣಿನ ಕಣ್ಣನು.!
ಗೋಪಾಲ ಕೃಷ್ಣ ಅಡಿಗ, ಎಂಬ ಹೆಸರು ಕನ್ನಡಸಾಹಿತ್ಯದಲ್ಲಿ ಮನೆಮಾತು.
ಅವರದೊಂದು ಕವನ ಮೋಹನ ಮುರಲಿ,
ಕನ್ನಡ ನಾಡಿನಲ್ಲಿ ಮನೆಮಾತಾದ ಈ ಪದ್ಯ ಅದರ ಲಯ
ಛಂದಸ್ಸು, ತಾತ್ವಿಕತೆ ಚಿಂತನಶೀಲ ಗುಣಗಳೊಂದಲ್ಲದೇ ಸುಪ್ರಸಿದ್ಧ ಗಾಯಕ ಗಾಯಕಿಯರ ಸುಮಧುರ
ಹಾಡುಗಾರಿಕೆಯಿಂದ ಲಕ್ಷಾಂತರ ಮನಸ್ಸುಗಳಿಗೆ
ತಂಪೆರೆದಿದೆ. ʻʻ ಒಂದು
ಶ್ರೇಷ್ಠ ಕವನ ಅರ್ಥವಾಗದೆಯೂ ಸಂವಹನ ಗೈಯ್ಯುತ್ತದೆʼʼ ಎಂಬ ಮಾತು ಅಡಿಗರದ್ದೇ ಆಗಿದೆ. ನನ್ನ ಬಾಲ್ಯದಿಂದಲೂ ಸದಾ ನನ್ನ
ಒಡನಾಡಿಯಾಗಿ, ಅತ್ಯಂತ ಖುಷಿಯ ಕ್ಷಣದಲ್ಲಿ,
ಖಿನ್ನತೆಯ ಕತ್ತಲಲ್ಲಿ ಧುತ್ ಎಂದು ಮನಸ್ಸಿನಲ್ಲಿ ಪ್ರತ್ಯಕ್ಷವಾಗಿ, ಸಾಂಗತ್ಯನೀಡುತ್ತಿರುವ ಮೋಹನ ಮುರಲಿ, ಸರಳವಾಗಿದ್ದೂ ಅಸಾಧ್ಯ ಆಳವನ್ನು ಹುದುಗಿಸಿಕೊಂಡ, ಪದ್ಯವಾಗಿ
ನನ್ನನ್ನು ಕಾಪಾಡುತ್ತಿದೆ. ಕಾಡುತ್ತಿದೆ.
ಭಾರತೀಯ ಭಾಷೆಯಲ್ಲಿಯ
ಕೆಲವೇ ಕೆಲವು ಭಾವಗೀತೆಗಳಲ್ಲಿ
ಈ ಕವನವೂ ಮುಂಚೂಣಿಯಲ್ಲಿದೆ. ವಿಶ್ವ ಭಾವಗೀತೆಯ ಸಾಲಿಗೆ
ಸೇರುವ ತಾಕತ್ತು ಪಡೆದಿರುವ ಮೋಹನ ಮುರಲಿ
ಅದೆಷ್ಟು ಜನರ ಬದುಕಿನಲ್ಲಿ
ಪ್ರವೇಶಿಸಿ, ಸಾಂತ್ವನಗೈದು ಸಂತಸ ನೀಡಿದೆ
ಎಂಬುದನ್ನು ಲೆಕ್ಕವಿಟ್ಟವರಿಲ್ಲ.
ಜಿ.ಕೆ.ರವೀಂದ್ರಕುಮಾರ್, ಕನ್ನಡದ
ಮಹತ್ವದ ಪ್ರತಿಭಾಪೂರ್ಣ ಕವಿ. ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದ ಅವರ ಆಕರ್ಷಕ ಮಂದ್ರಸ್ವರದಿಂದ
ಕೇಳುಗರ ಅಚ್ಚುಮೆಚ್ಚಿನ ಉದ್ಘೋಷಕರಾಗಿದ್ದರು. ಒಂದೆರಡೇ
ಕವನ ಸಂಕಲನದಿಂದ ಕಾವ್ಯಪ್ರಿಯರ ಮೆಚ್ಚುಗೆ ಗಳಿಸಿದ್ದ ಅವರು ಕಿರಿಯ ವಯಸ್ಸಿನಲ್ಲೆ ದೂರವಾದರು.
ಒಂದು ಸಾಹಿತ್ಯವೇದಿಕೆಯಲ್ಲಿ ಅಡಿಗರ ʻʻ ಮೋಹನ
ಮುರಳಿʼʼ ಕವನವನ್ನು ಉದಹರಿಸುತ್ತ, ನನ್ನನ್ನು ಅದು
ಕಾಡಿದ ಪರಿಯನ್ನು ನಿವೇದಿಸುತ್ತಿದ್ದೆ. ಅದೇ ವೇದಿಕೆಯಲ್ಲಿ ಅವರಿದ್ದರು. ತಮ್ಮ ಮಾತಿನಲ್ಲಿ,ʻʻ
ಅದೇ ಕವನ
ನನ್ನ ಸಂಗಾತಿಯಾಗಿ ಸಾಕಷ್ಟು ವರ್ಷವಾಗಿದೆ. ಸದಾ ನನ್ನ
ಜೊತೆಯಲ್ಲಿದೆ, ʼʼ ಎಂದಿದ್ದರು. ಆ ಕಾವ್ಯಕಾರಣದಿಂದಲೇ ನಮ್ಮಿಬ್ಬರ
ಸ್ನೇಹ ಬಂಧ ಗಟ್ಟಿಯಾಯಿತು. ಇದೇ ಕವನ ತಮ್ಮನ್ನು
ಕಾಡಿದ ಬಗೆಯನ್ನು ಮುಂದೆ ತಮ್ಮ ಲೇಖನಗಳಲ್ಲಿ ಮಾರ್ಮಿಕವಾಗಿ ವಿವರಿಸಿದ್ದರು.
ಮೊದಲೆರಡು ಚರಣಗಳಲ್ಲಿ
ಮಾನವ ಜನ್ಮದ ಸೌಂದರ್ಯವನ್ನು
ಸಂಭ್ರಮಿಸುವ ಪದ್ಯ
ಹೂವು ಹಾಸಿಗೆ ಚಂದ್ರ ಚಂದನ ಬಾಹು
ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ
ರಿಂಗಣ !!
ಬಯಕೆ ಸಹಜ. ಆದರೆ
ಅದಕ್ಕೊಂದು ಮಿತಿಯಿರಬೇಕು. ಆಗ ಬದುಕೊಂದು ಅದ್ಭುತ
ಸ್ವರ್ಗ. ಆದರೆ ಮೌಲ್ಯವನ್ನು ಉಲ್ಲಂಘಿಸಿದಾಗ ಮಾತ್ರ,
ದುರಂತ ದ ಕಪಿಮುಷ್ಠಿಗೆ ಜೀವ ಸಿಲುಕುತ್ತದೆ
ಎಂಬ ಎಚ್ಚರವನ್ನ ಕೊಡತೊಡಗುತ್ತಾರೆ.
ನಂತರದಲ್ಲಿ ಚರಣದಿಂದ ಚರಣಕ್ಕೆ
ಸಾಲಿಂದ ಸಾಲಿಗೆ ಜೀವನದ ನಿಗೂಢ ತಿರುವುಗಳನ್ನು ಸ್ಪರ್ಶಿಸುತ್ತದೆ. ಕ್ಷಣಿಕ
ಬದುಕಿನ ಕುದಿತದ ನಡುವೆ, ಮುದಿತದ
ಅನ್ವೇಷಣೆಗೆ ಮನುಷ್ಯ ಇಳಿಯುವುದನ್ನು ವರ್ಣಿಸತೊಡಗುತ್ತಾರೆ.
ಮರದೊಳಡಗಿದ ಬೆಂಕಿಯಂತೇ ಎಲ್ಲೋ ಮಲಗಿದೆ ಬೇಸರ
ಏನೋ ತೀಡಲು ಏನೋ ತಾಗಲು ಹೊತ್ತಿ
ಉರಿವುದು ಕಾತರ !
ಅದೆಷ್ಟೇ ಸೌಖ್ಯ ಸಮೃದ್ಧಿಯಿರಲಿ, ಅಂತರಂಗದ ಆಳದಲ್ಲಿ
ನೋವು ಮಡಿಗಟ್ಟಿದೆ. ಅದೆಷ್ಟೇ ಮರತೇನೆಂದರೂ
ಕಿಡಿಯೆದ್ದು ದಹಿಸತೊಡಗುತ್ತದೆ. ʻʻ ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ
ಕಾದಿದೆ, ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೆ
ಹಾಯಿತೇ !! ʼʼ
ನಮ್ಮ ಆಸೆ ಕನಸುಗಳೋ
ಸಪ್ತಸಾಗರವನ್ನೂ ಮೀರಿಸಿದೆ. ಆದರೆ ಅಂತರಂಗದ
ಸಾಗರದಲ್ಲಿ ಚಲನೆಯೇ ಇಲ್ಲದ ಶುಷ್ಕ
ವಾತಾವರಣ ಹೆಪ್ಪುಗಟ್ಟಿದೆ. ಕನಸಿಗೂ
ವಾಸ್ತವಕ್ಕೂ ಹೇಗೆ ಸೇತುವೆ
ನಿರ್ಮಿಸೋಣ...?. ಇಷ್ಟು ಸಾಕೆಂದಿದ್ದೆಯಲ್ಲೋ ಇಂದು ಏನಿದು
ಬೇಸರ....? ಎಂದು ಕವಿ ಪ್ರಶ್ನಿಸುತ್ತಾರೆ.
ಕವಿ ರವೀಂದ್ರ ಕುಮಾರ್ ತಮ್ಮ ಸುಪ್ತಸ್ವರ
ಕೃತಿಯಲ್ಲಿ, ಪ್ರಸ್ತುತ ಕವನ
ಗಾಯಕರ ಮೂಲಕ
ಹೇಗೆ ಒಂದು
ಭಾವ ಪ್ರವಾಹವಾಗಿ
ಪ್ರವಹಿಸಿತು, ಎಂಬುದನ್ನು ಮೋಹಕವಾಗಿ
ವರ್ಣಿಸಿರುವುದನ್ನು ಗಮನಿಸಬಹುದಾಗಿದೆ.
ʻʻ ಸಹಜವಾಗಿ ಇದು ನಮ್ಮ ಸುಗಮ ಸಂಗೀತಗಾರರನ್ನು ಸೆಳೆಯಿತು. ಪ್ರಥಮವಾಗಿ ಎಚ್.ಕೆ.ನಾರಾಯಣರ ಧ್ವನಿಯಲ್ಲಿ ಮೃದುತ್ವವೇ ಮೈವೆತ್ತಿ ಬಂದಂತೆ ತಮ್ಮ ರಾಗ ಸಂಯೋಜನೆಯಲ್ಲಿ,( ಬೃಂದಾವನೀ ಸಾರಂಗ) ಇದನ್ನು ಘನವಾಗಿ ಮೂರ್ತೀಕರಿಸಿದರು. ಯಾವ ಮೋಹನ ದಿಂದ, ಮಣ್ಣಿನ ಕಣ್ಣಿನ ವರೆಗೆ ಸ್ವಲ್ಪ ಶಾಸ್ತ್ರೀಯವಾಗಿಯೇ ಸಾಗುವ ಧಾಟಿ ಎರಡು ನಿಲುಗಡೆಗಳಲ್ಲಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಮುರಲಿ ಎಂದು ಹೇಳುವಾಗ ಕೊಂಚ ವಿಳಂಬವಾಗುವ ಗಾಯಕ, ಮುರಲಿಯ ಕಥೆಗೆ ಕೇಂದ್ರ ಸಿದ್ಧಮಾಡಿಕೊಳ್ಳುತ್ತಾನೆ. ಯಾ....ವ, ದೂ.....ರ ಎಂದು ಹೇಳುತ್ತ ಅಂತರವನ್ನು ದಟ್ಟಗೊಳಿಸಿ ನಿನ್ನನ್ನು ಎಂಬುದನ್ನು ಪ್ರತ್ಯೇಕಿಸಿ ಸ್ಥಾಪಿಸುತ್ತಾರೆ. ಇದರ ವಿಶೇಷವೆಂದರೆ ಕಾದಿದೆ, ಹಾಯಿತೇ ಚೇತನ, ಜೀವನ, ಹೀಗೆ ಪ್ರತೀ ಸಾಲೂ ಮೇಲು ಸ್ಥರಕ್ಕೆ ಒಯ್ದು ಏಕೆ ಹೀಗೆ ? ಎಂದು ಕೇಳಿಕೊಳ್ಳಲು ನಮ್ಮನ್ನು ನಿಲ್ಲಿಸುತ್ತಲೇ ಮತ್ತೆ ಗಮಕದ ಪಲಕುಗಳ ಮೂಲಕ ಮೋಹನ ಮುರಲಿಗೆ ಭಾವ ಘಾಸಿಯಾಗದಂತೆ ಕರೆ ತರುತ್ತದೆ. ಹೀಗೆ ಕರೆತಂದು ಮತ್ತೆ ಪಲ್ಲವಿ ಶುರು ಮಾಡುವಾಗ ಹೌದೋ ಅಲ್ಲವೋ ಎಂಬ ಪುಟ್ಟ ಚಡಪಡಿಕೆ ಜಾಗಮಾಡಿಕೊಳ್ಳುತ್ತದೆ. ನಾರಾಯಣರ ಹೊರತಾಗಿ ಉಳಿದ ಗಾಯಕರು ಎತ್ತಿಕೊಳ್ಳುವಾಗ ಅದೊಂದು ಆವೇಶವಾಗಿ ಪರಿವರ್ತನೆ ಗೊಳ್ಳುವುದನ್ನು ನಾನು ಗಮನಿಸಿದ್ದೇನೆ.ʼʼ
ಕವಿತೆಯೊಂದು ಗಾಯಕರನ್ನು
ಸಹೃದಯರನ್ನ ಆವರಿಸುತ್ತ, ವಿವಿಧ ಆಯಾಮದಲ್ಲಿ
ಮುಂದುವರೆದ ರೀತಿಯನ್ನು ರತ್ನಮಾಲಾ
ಪ್ರಕಾಶ ರವರ ದೇಸ್ ರಾಗದ
ಹಿನ್ನೆಲೆಯಲ್ಲಿ ಅನಂತಸ್ವಾಮಿ ಯವರ ಸಂಯೋಜನೆಯಲ್ಲಿ
ರಚಿತವಾದಾಗ, ಹೊಸದೊಂದು ಆಯಾಮವೇ
ದಕ್ಕಿದ ರೀತಿಯನ್ನು ರವೀಂದ್ರ ಕುಮಾರ್ ವಿವರಿಸುತ್ತಾರೆ. ಅಲ್ಲಿ ದೂರ
ಸಂಕ್ಷೇಪವಾಯಿತು. ಕೊಳಲು ಸಂತೂರ್, ಸಿತಾರ್ ಗಳ ಪ್ರಭಾವಯುಕ್ತ
ಬಳಕೆ ವಿವಶ ಸ್ಥಿತಿಯನ್ನು ಜಲಪಾತವಾಗಿಸಿತು. ದಶಕಗಳ
ಕಾಲ ಈ ಹಾಡು ಆಳಿತು,
ಎಂದೆನ್ನುತ್ತ, ಮುಂದೆ ಮನೋಮೂರ್ತಿಯವರ
ಸಂಗೀತ ನಿರ್ದೇಶನದಲ್ಲಿ, ಅಮೇರಿಕಾ ಅಮೇರಿಕಾ
ಚಿತ್ರದಲ್ಲಿ, ಗಂಡು –ಹೆಣ್ಣು ದನಿಯಲ್ಲಿ,
ಯುಗಳವಾಗದೇ ಸಮಾನಾಂತರ ರೇಖೆಯಲ್ಲಿ, ( ಕೀರ್ವಾಣಿ
ರಾಗದಲ್ಲಿ) ವಿಷಾದ ಪೂರ್ಣತೆಯಲ್ಲಿ ಅಭಿವ್ಯಕ್ತವಾಯಿತು ಎಂದು ಅಭಿಪ್ರಾಯ
ಪಡುತ್ತಾರೆ. ಮುಂದೆ ಸಂಗೀತಾ
ಮತ್ತು ರಾಜೂ ಅನಂತಸ್ವಾಮಿ ಜೋಡಿ,, ಮತ್ತಷ್ಟು ಜೀವ ತುಂಬಿದ್ದಾರೆ. ಹೆಣ್ಣು ಧ್ವನಿ ದೃಢತೆಯನ್ನು ಸಾಧಿಸಿದರೆ,
ಗಂಡು ಧ್ವನಿ ಆಳದ ಬಾವಿಯಿಂದ ಎದ್ದು ಬಂದಂತೇ ಸೇರಿಕೊಳ್ಳುತ್ತದೆ.
ಕವಿತೆಯಲ್ಲಿ ನಾಯಕ ನಾಯಕಿಯರಿಲ್ಲ.
ಕೃಷ್ಣ ರಾಧೆಯರಿಲ್ಲ. ಕೃಷ್ಣನಿಂದ ದೂರವಾದ
ರಾಧೆಯ ಮೌನ ಆಕ್ರಂದನದಂತೇ
ಭಾಸವಾಗುವ ಕವಿತೆ, ಓದುಗನನ್ನೇ
ಒಳ ಸೆಳೆದು, ಆತ್ಮವಿಮರ್ಶೆಗೆ ತಳ್ಳಿಬಿಡುತ್ತದೆ. ಕೇವಲ ಹದಿನಾರು ಸಾಲಿನ ಈ ಕವಿತೆ ಬದುಕಿನ ಆಸೆ ಆಕಾಂಕ್ಷೆ, ಸೋಲು ಗೆಲುವುಗಳ
ನಡುವೆ, ತನ್ನಂತಾನೇ ಹರಿದು ಸಾಗುವ
ಜೀವನವನ್ನು ಆಧ್ಯಾತ್ಮಿಕ ಎತ್ತರಕ್ಕೆ
ಕೊಂಡೊಯ್ದು ಬಿಡುತ್ತದೆ. ಸಕ್ಕರೆ ಲೇಪಿತ
ಕಹಿಗುಳಿಗೆಯಂತೇ ಮನಮೋಹಕ ಶಬ್ದಜಾಲದಲ್ಲಿ
ಬದುಕಿನ ಕಠೋರತೆಯನ್ನು ದರ್ಶಿಸುತ್ತದೆ.
ವಿವಶವಾಯಿತು ಪ್ರಾಣ..ಹಾ....
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ !!
ಎಂದು ಮನುಷ್ಯನ ನಿಸ್ಸಹಾಯಕತೆಯನ್ನು, ಛಂದೋಬದ್ಧ, ಸರಳ, ಮತ್ತು ಸಮಗ್ರವಾಗಿ, ಮಾನವ ಬದುಕನ್ನು
ಚಿತ್ರಿಸಿರುವ ಕವಿ ನಂತರದಲ್ಲಿ
ಮುಕ್ತಛಂದಕ್ಕೆ ದಾಂಗುಡಿಯಿಟ್ಟು, ಕನ್ನಡ
ಕಾವ್ಯವನ್ನು ಗಾಯನದಿಂದ ಮುಕ್ತಗೊಳಿಸಿ,
ಚಿಂತನೆಯ ಆಯಾಮಕ್ಕೆ ತಂದ, ಕನ್ನಡ ಕಾವ್ಯಕ್ಕೆ
ನವ್ಯದ ಸ್ವರೂಪ ನೀಡಿದ ಅಡಿಗರು, ಕನ್ನಡ ಸಾಹಿತ್ಯದ ಅಪ್ರತಿಮ
ಸಾಧಕರು.
ಸು.ಮ. ತಾ ೨೧ -೧೧
-೨೦೨೫.
No comments:
Post a Comment