ಭಾಷೆಯುಳಿಸಲು -
ಭಾಷೆ ಕೊಡುವಿರಾ.....?? ʼʼ
ಯುದ್ಧ ಯುದ್ದ ಸೋತವ ಸತ್ತ, ಗೆದ್ದವ ಬಿದ್ದ. ಕಳೆದ ನಾಲ್ಕಾರು
ವರ್ಷಗಳಿಂದ ಸಮೂಹ ಮಾಧ್ಯಮಗಳಲ್ಲಿ, ಯುದ್ಧ ಮತ್ತು
ಸಾವು ನೋವುಗಳದ್ದೇ ಸುದ್ದಿ.( ಇಸ್ರೇಲ್ ಪ್ಯಾಲಸ್ತೇನ
ಸಮರ, ರಷ್ಯಾ ಉಕ್ರೇನ್ ಯುದ್ದ ಭಾರತ
ಪಾಕಿಸ್ಥಾನ ಜಟಾಪಟಿ, ಪಾಕ್ ಅಪಘನ್
ಹೊಡೆದಾಟ) ಯುದ್ಧದ ಸುದ್ದಿ ಯಾವತ್ತೂ ರೋಚಕವೇ.
ಆದರೆ ಯುದ್ಧಪೀಡಿತ ಕ್ಷೇತ್ರದ
ಜನತೆಗೆ ಅದೊಂದು ನರಕ. ಸಾವಿನ ತೂಗುಕತ್ತಿ
ಸದಾ ಶಿರದಮೇಲೆ ತೂಗಾಡುತ್ತಲೇ ಇರುತ್ತದೆ.
ಜೀವ ಆಸ್ತಿಪಾಸ್ತಿ, ಸಮೃದ್ಧ ಸಂಸ್ಕೃತಿ, ಎಲ್ಲವೂ
ಸರ್ವನಾಶವಾಗುವ ದೃಶ್ಯವನ್ನು ಕಣ್ಣಾರೆ ಕಾಣುತ್ತ,
ಕೂತಿರುವುದೇ ಅಲ್ಲಿಯ ಸಾಮಾನ್ಯ ಜನತೆಯ
ಹಣೆಬರಹ.
ಇಸ್ರೇಲ್ ದೇಶ ಇಂತಹ ದೃಶ್ಯಗಳಿಗೊಂದು
ಜ್ವಲಂತ ಉದಾಹರಣೆ. ನಮ್ಮ ರಾಜ್ಯದ
ಬೆಳಗಾವಿ ಜಿಲ್ಲೆಗಿಂತ ಎರಡು ಪಟ್ಟು ವಿಸ್ತಾರವಿರುವ
ಇಸ್ರೇಲ್,( ೪೮೦ ಕಿ.ಮಿ. ಉದ್ದ, ೮೦ ಕಿ.ಮಿ. ಅಗಲ) ಸುತ್ತಲಿನ
ಹದಿಮೂರು ವೈರಿ ರಾಷ್ಟ್ರಗಳಿಂದ ಸುತ್ತುವರೆದ, ಒಂದು ಪುಟ್ಟ
ದೇಶ. ಬೆಂಗಳೂರಿನ ಅರ್ದದಷ್ಟು ಜನಸಂಖ್ಯೆ. ಒಂದೇ ದಿನದಲ್ಲಿ ಇಡೀ ದೇಶ ಸುತ್ತಬಹುದು. ಕಳೆದ ಒಂದೆರಡು
ವರ್ಷಗಳೀಚೆಯಿಂದ ಪ್ರತಿದಿನ ಸುದ್ದಿಯಲ್ಲಿರುವ ಈ ದೇಶ ಇಡೀ ಜಗತ್ತನ್ನು ಬೆರಗಾಗಿಸುವಂತಹ
ಸಾಧನೆಯಿಂದ ಸದಾ ಮಿಂಚುತ್ತಿದೆ.
ಅಲ್ಲಿಯ ಮರುಭೂಮಿಯಲ್ಲಿ ಗೂಢಚಾರಿಕೆಯಲ್ಲಿ, ಜಗತ್ಪ್ರಖ್ಯಾತವಾಗಿ, ಗೂಢಚಾರಿಕೆ
ತಂತ್ರಜ್ಞಾನವನ್ನು ಪ್ರಮುಖ ದೇಶಗಳಿಗೆ ಮಾರಾಟಮಾಡುವ
ಮೂಲಕವೇ ಕೋಟ್ಯಾಂತರ ಡಾಲರ್
ಗಳಿಸುತ್ತಿರುವ ಏಕೈಕ ರಾಷ್ಟ್ರವಿದು.
ಇಂದಿರಾ ಹತ್ಯೆಯ ನಂತರ ನಮ್ಮ
ಪ್ರಧಾನಿಯವರನ್ನು ಕಾಯುವ, ಮತ್ತು ಅಮೇರಿಕಾ ದೇಶದ
ಅಧ್ಯಕ್ಷರ ಸುರಕ್ಷತೆಯ ಜವಾಬ್ದಾರಿ
ಹೊತ್ತಿರುವ ಇಸ್ರೇಲ್ ದೇಶ ಇಂದಿಗೂ
ತಾನು ಸುಖಿಯಾಗಿ ಬಾಳುತ್ತಿಲ್ಲ.
ಎರಡು ಸಾವಿರ ವರ್ಷ ತನ್ನದೇ
ಒಂದು ಆಶ್ರಯ ದೇಶವಿಲ್ಲದೇ
ಜಗತ್ತಿನಾದ್ಯಂತ ಚದುರಿಹೋಗಿ, ಆವಾವ ದೇಶದ ಪ್ರಜೆಗಳೇ
ಆಗಿ ತಮ್ಮ ಮೂಲ ಮಾತೃಭಾಷೆಯನ್ನೂ
ಮರೆತು ಹತ್ತಾರು ತಲೆಮಾರುಗಳ
ಕಾಲ ಅತಂತ್ರವಾಗಿ ಬದುಕಿದರೂ ಇಸ್ರೇಲ್
ಎಂಬ ಮಾತೃಭೂಮಿಯನ್ನು ಎದೆಯೊಳಗಿಟ್ಟು ಕಾದುಕೊಂಡ ಅಪರೂಪದ
ರಾಷ್ಟ್ರವಿದು. ಸ್ವಾತಂತ್ರ್ಯಕ್ಕಾಗಿ ಸ್ವಂತ ನೆಲಕ್ಕಾಗಿ
ಎರಡುಸಾವಿರ ವರ್ಷ ಹಪಾಹಪಿಸಿದ ವಿಶ್ವದ ಏಕೈಕ
ರಾಷ್ಟ್ರ. ಸ್ವಯಂ ರಕ್ಷಣೆಗಾಗಿ
ಅಪರಿಮಿತ ಕ್ರೌರ್ಯ ಅವರಿಗೆ ಅನಿವಾರ್ಯ.
ಕೇವಲ ೯೦ ಲಕ್ಷ ಜನಸಂಖ್ಯೆ, ( ಅಂದರೆ ಬೆಂಗಳೂರಿನ
ಅರ್ಧದಷ್ಟು) ಪ್ರತೀ ಪ್ರೌಢ ಪ್ರಜೆಗೂ ದೇಶಕಾಯುವ
ಜವಾಬ್ದಾರಿ. ಹೆಣ್ಣಿರಲಿ ಗಂಡಿರಲಿ
ಮಿಲಿಟರಿ ತರಬೇತಿ ಖಡ್ಡಾಯ.
ಏಕೆಂದರೆ, ಸುತ್ತಲಿನ ದೇಶಗಳ ಸರಿಸುಮಾರು
ಮೂವತ್ತು ಕೋಟಿ ವೈರಿಗಳು.
ಕಳೆದೊಂದು ಶತಮಾನದಲ್ಲೇ ಹಿಟ್ಲರನೂ
ಸೇರಿ ವಿರೋಧಿಗಳ ಕ್ರೌರ್ಯಕ್ಕೆ ಜನಸಂಖ್ಯೆಯ ಎರಡುಪಟ್ಟು ಜನ ಬಲಿಯಾಗಿದ್ದಕ್ಕಿರಬಹುದು,
ಅಪ್ಪಟ ದೇಶಪ್ರೇಮಕ್ಕೆ ಅವರಿಗೆ ಅವರೇ ಸಾಟಿ. ಯುದ್ಧತಂತ್ರ
ಗೂಢಚಾರಿಕೆ ಯಲ್ಲಿ ಜಗತ್ತು ಬೆರಗಾಗುವಂತಹ ಸಾಧನೆ ಅವರದ್ದು. ಅಷ್ಟೇ
ಮಹತ್ವ ಅವರ ಯಹೂದಿ ಧಾರ್ಮಿಕತೆಯನ್ನು ಅನೂಚಾನ
ಪಾಲಿಸುವುದಲ್ಲದೇ, ತಮ್ಮ ಮಾತೃಭಾಷೆ, ಮೃತಭಾಷೆಯಾಗಿದ್ದನ್ನು, ಸ್ವಾತಂತ್ರ್ಯಾನಂತರ ಕೇವಲ ಇಪ್ಪತ್ತೈದು ವರ್ಷಗಳಲ್ಲಿ
ರಾಷ್ಟ್ರಭಾಷೆಯನ್ನಾಗಿಸಿದ್ದು ಜಾಗತಿಕ ದಾಖಲೆ.
ಇಂದು ಇಂಗ್ಲಿಶ್ ಭಾಷೆಯ ನಂತರ ಅತೀ ಹೆಚ್ಚು ಪುಸ್ತಕಗಳು ಪ್ರಕಟಗೊಳ್ಳುತ್ತಿರುವುದು ಹಿಬ್ರೂ
ಭಾಷೆಯಲ್ಲಿ ಅಂದರೆ ಅಚ್ಚರಿಯಾಗಬಹುದು. ೯೫ ಪ್ರತಿಶತ ಶಿಕ್ಷಣವಂತರಿರುವ ಇಸ್ರೇಲ್ ನಲ್ಲಿ
ಕಳೆದ ವರ್ಷ ಎರಡು ಲಕ್ಷ ಪುಸ್ತಕಗಳು ಪ್ರಕಟವಾಗಿದೆಯಂತೆ. ಕನ್ನಡ
ಭಾಷೆ ಮಾತನಾಡುವ ನಾವು ಆರುಕೋಟಿ
ಮೀರಿದರೂ ನಮ್ಮಲ್ಲಿ ಕಳೆದ ವರ್ಷ ಪ್ರಕಟವಾದ
ಪುಸ್ತಕಗಳು ಕೇವಲ ಎಂಟು ಸಾವಿರ ಮಾತ್ರ.
ಇಸ್ರೇಲ್ ದೇಶದ ಸಾಧನೆಗಳ ಬಗೆಗೆ ಪ್ರಕಟವಾಗುವ ಪುಸ್ತಕಗಳು,
ಅಮೇರಿಕಾ ದೇಶದ ಬಗೆಗಿನ ಕೃತಿಸಂಖ್ಯೆಯನ್ನೂ ಮೀರಿಸುತ್ತದೆ.
ಕನ್ನಡದಲ್ಲಿ ಈಗಾಗಲೇ ಹತ್ತಾರು
ಪುಸ್ತಕಗಳು ಕೃಷಿ, ಗೂಢಚಾರಿಕೆ, ಯುದ್ಧತಂತ್ರ, ತಂತ್ರಜ್ಞಾನ, ಮುಂತಾದ ಒಂದೊಂದು ವಿಷಯದ ಮೇಲೂ
ಪ್ರತ್ಯೇಕ ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ,
ಎರಡು ದಶಕಗಳ ಹಿಂದೆಯೇ ಪ್ರಕಟವಾಗಿ,
ಈವರೆಗೆ ಹತ್ತಾರು ಮುದ್ರಣಗಳನ್ನು ಕಂಡು ಜನಪ್ರಿಯತೆ ಗಳಿಸಿರುವ ಮತ್ತಿಹಳ್ಳಿ ನಾಗರಾಜ ರಾವ್, ರವರ ʻʻ
ಮರುಭೂಮಿ ಚಿಗುರಿತು,ʼʼ ಮತ್ತು
ಡಾ. ಎಚ್.ಆರ್. ವಿಶ್ವಾಸ್ ರವರ, ʻʻʻಮತ್ತೆ
ಹೊತ್ತಿತು ಹಿಬ್ರೂ ಹಣತೆʼʼ ಮನೆಮಾತಾದ
ಕೃತಿಗಳಾಗಿವೆ. ಸಾವಿರ ಸಾವಿರ ವರ್ಷದ ರಕ್ತರಂಜಿತ ಸ್ವಾತಂತ್ರ್ಯಹೋರಾಟದ ಮನಮುಟ್ಟುವ
ವಿವರಗಳಿರುವ ಮರುಭೂಮಿ ಚಿಗುರಿತು ಪುಸ್ತಕ ಮರುಭೂಮಿಯನ್ನು
ನಂದನವಾಗಿಸಿದ ಅಲ್ಲಿಯ ಜನತೆಯ ಕರ್ತೃತ್ವ ಶಕ್ತಿಯನ್ನು ತಿಳಿಸಿದರೆ,
ಸಹಸ್ರ ವರ್ಷಗಳಿಂದ ಮೃತಭಾಷೆಯಾಗಿ ಕತ್ತಲೆ ಸೇರಿದ್ದ ಹಿಬ್ರೂಭಾಷೆಯನ್ನು ಇಸ್ರೇಲಿಗರ
ಆಡುನುಡಿಯನ್ನಾಗಿಸಿ, ರಾಷ್ಟ್ರಭಾಷೆಯನ್ನಾಗಿಸಿದ ಅಸಾಮಾನ್ಯ ಸಾಹಸದ ಸುಂದರ ವರ್ಣನೆ ಯನ್ನು ಮರುಭೂಮಿ ಚಿಗುರಿತು ಪುಸ್ತಕ
ದರ್ಶಿಸುತ್ತದೆ. ಕನ್ನಡ ಭಾಷೆ ಸಾಯುತ್ತಿದೆ
ಎಂಬ ಬಾಯಿಮಾತಿನ ಬೊಬ್ಬೆಯಲ್ಲಿ,
ಕೃತಿಶೂನ್ಯತೆಯಲ್ಲಿ, ಈ ಹಿಬ್ರೂಭಾಷೆಗೆ
ಮರಳಿ ಜೀವನೀಡಿದ ಇಸ್ರೇಲಿಗರ ತಪಸ್ಸು ಬಹುದೊಡ್ಡ ಪಾಠವಾಗುತ್ತದೆ.
ಸಂಸ್ಕೃತವನ್ನು ಕೇವಲ ಪೂಜೆ ಆರಾಧನೆಗಳಿಗಾಗಿ
ಮೀಸಲಿಟ್ಟು, ಸಾಮಾನ್ಯರಿಂದ ದೂರವಾಗಿಸಿ ಮಡಿವಂತಿಕೆ ಮೆರೆದು,
ದೇವಭಾಷೆಯನ್ನಾಗಿಸಿ, ಭಾಷೆಗೆ ಅನ್ಯಾಯಗೈದ ಉದಾಹರಣೆ
ನಮ್ಮೆದುರಿಗಿದೆ. ಭಾರತೀಯ ಆಧ್ಯಾತ್ಮ, ತತ್ವಜ್ಞಾನ,
ವಿಜ್ಞಾನ ಆರೋಗ್ಯಜ್ಞಾನ ಗಳೆಲ್ಲ ತುಂಬಿಕೊಂಡಿರುವ ಜಗತ್ತಿನ ಕೆಲವೇ ಕೆಲವು ಭಾಷೆಗಳಲ್ಲೊಂದಾದ ಸಂಸ್ಕೃತವನ್ನು ಕೈಯ್ಯಾರೆ ನಾವೇ ಮೃತಭಾಷೆಯಾಗಿಸಿದ್ದೇವೆ. ಜಾತಿವಾದಕ್ಕೆ
ಜಾತಿರೋಗಕ್ಕೆ ಅಂಟಿಸಿ, ಬೃಹತ್ ಜ್ಞಾನದ ಗಣಿಯನ್ನು ಕತ್ತಲೆಗೆ ಒತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ, ಹಿಬ್ರೂ ಮಾದರಿಯಲ್ಲೇ ಸಂಸ್ಕೃತ ಸಂಭಾಷಣಾ ಶಿಬಿರದ ಮೂಲಕ ಸಂಸ್ಕೃತವನ್ನು ಆಡುಭಾಷೆಯಾಗಿಸುವ ಪ್ರಯತ್ನ ನಮ್ಮದೇಶದಲ್ಲೂ
ಪ್ರಾರಂಭಗೊಂಡಿರುವುದನ್ನು ಸ್ಮರಿಸಬಹುದಾಗಿದೆ. ʻʻ ಹೂಡದೇ ಭೂಮಿ ಬರಡು, ಆಡದೇ ಭಾಷೆ ಕೊರಡುʼʼ
ಗಾದೆಯೇ ಇದೆ.
ʻʻ
ಎಲಿಸರ್ ಬೆನ್ ಯಹೂದಾʼʼ( ೧೮೫೨ – ೧೯೨೨) ಈ ಹೆಸರು ಭಾರತೀಯರಿಗೆ ವಿಚಿತ್ರವಾಗಿ
ಕೇಳಿಸಬಹುದು. ಜಗತ್ತಿನ ಭಾಷಾಪ್ರೇಮಿಗಳೆಲ್ಲರೂ ಸದಾ ಸ್ಮರಿಸಬೇಕಾದ ಅನುಪಮ ಹೆಸರಿದು.
ಒಬ್ಬನೇ ಒಬ್ಬ ವ್ಯಕ್ತಿ ಮೂಲೆಗುಂಪಾದ ಒಂದು ಭಾಷೆಯನ್ನು, ದೇಶದ ಒಬ್ಬನೇ
ಒಬ್ಬನೂ ಮಾತಾಡದ ಭಾಷೆಯನ್ನು
ಆ ದೇಶದ ಪ್ರತಿಯೊಬ್ಬನ ಹೃದಯದಲ್ಲಿ ಬಿತ್ತಿ ಬೆಳೆದ ಏಕವ್ಯಕ್ತಿ ಸಾಹಸ ಗಾಥೆ ಮೈ ನವಿರೇಳಿಸುತ್ತದೆ. ಜೀವಿಸಿದ್ದ
ಎಪ್ಪತ್ತು ವರ್ಷಗಳ ಅವಧಿಯಲ್ಲಿ, ಅರ್ಧ ಶತಮಾನ ಕಾಲವನ್ನು
ಕೇವಲ ಹಿಬ್ರೂ ಭಾಷೆಯ ಪುನರುತ್ಥಾನಕ್ಕಾಗಿಯೇ ಮೀಸಲಿಟ್ಟ ಯಹೂದಿ ಎಲಿಸರ್,
ಮೊಟ್ಟ ಮೊದಲು ತಾನೇ ಕಲಿತ. ನಂತರ
ತನ್ನ ಮಕ್ಕಳು ಮತ್ತು ಹೆಂಡತಿಗೆ ಕಲಿಸಿದ. ಎಲೀಸರನ ಮಗ ಬೆನ್
ಝಿಯಾನ್ ಇಸ್ರೇಲ್ ದೇಶದ ಪ್ರಪ್ರಥಮ
ಹಿಬ್ರೂ ಮಾತೃಭಾಷೆಯ ಮಗುವಾಗುತ್ತಾನೆ. ನಂತರದಲ್ಲಿ ಹಿಬ್ರೂ ನುಡಿದೀಪ ಹಿಡಿದು ದೇಶದ ಇಂಚಿಂಚೂ
ನೆಲದಲ್ಲಿ ತಿರುಕನಂತೇ ಅಲೆದಾಡಿದ. ಟೀಕೆ ಅವಹೇಳನ ಅಲಕ್ಷ್ಯ, ಅಪಮಾನ, ವಿರೋಧ, ಗಳಂತಹ ಅಡೆತಡೆ
ದಾಟುತ್ತ, ಸಾಗಿದ ರೋಚಕ ಕಥೆ, ವಿಶ್ವಾಸ್
ರವರ ಕಾದಂಬರಿಯಲ್ಲಿ ಸವಿಸ್ತಾರವಾಗಿ
ಹರಿದಿದೆ.
ಯಾವುದೇ ಭಾಷೆಯಿರಲಿ
ಎಲ್ಲ ಜ್ಞಾನಶಿಸ್ತುಗಳಿಗೆ ಸ್ಪಂದಿಸಬೇಕೆಂದಾದರೆ ಶಬ್ದ ಸಂಪತ್ತಿರಬೇಕು. ಎಲಿಸರ್
ಯಹೂದಾ, ತನ್ನ ಭಾಷೆಯನ್ನು ಮೇಲೆತ್ತಲೆಂದು ಕ್ರಿಯೆಗಿಳಿದಾಗ, ಅವನಿಗೆ
ಕಾಡಿದ್ದೇ ಶಬ್ದ ಸಂಕಟ. ಆ ಬಗೆಗೆ ಆತ ದಶಕಗಳ ಕಾಲ ಶಬ್ದಗಳಿಗಾಗಿ ತಡಕಾಡಿದ.
ಪ್ರಾಚೀನ ಗ್ರಂಥಗಳನ್ನು ಅಮೂಲಾಗ್ರವಾಗಿ ಶೋಧಿಸಿದ.
ಹಿಬ್ರೂ ಭಾಷೆಗೆ ಮೊಟ್ಟಮೊದ
ಶಬ್ದಕೋಶವನ್ನು ರಚಿಸಿದ. ಆತನ ಶಬ್ದಶೋಧನೆಯ
ಹೋರಾಟವನ್ನು, ಎಚ್. ಆರ್. ವಿಶ್ವಾಸ್,
ತಮ್ಮ ಕೃತಿಯಲ್ಲಿ ಮನಮುಟ್ಟುವಂತೇ ವರ್ಣಿಸಿದ್ದಾರೆ.
ʻʻಹಿಬ್ರೂ ನಿಘಂಟು ರಚನೆಯ
ಕೆಲಸ ಬೆನ್ ಯಹೂದನ ಜೀವನದ ಅತ್ಯಂತ ಮಹತ್ವದ
ಕೆಲಸವಾಗಿತ್ತು. ಈಗಂತೂ ಅವನು ತನ್ನ ಸರ್ವಶಕ್ತಿಯನ್ನೂ ಅದೇ ಕೆಲಸಕ್ಕೆ ಮೀಸಲಾಗಿರಿಸಿದ. ಅವನಿಗೀಗ ಪ್ರತೀ ಕ್ಷಣವೂ ಶಬ್ದಗಳದ್ದೇ
ಜಪ. ಪ್ರಾಚೀನ ಗ್ರಂಥಗಳಲ್ಲಿಯ ಯಾವ ಪದಗಳನ್ನು
ಆಧುನಿಕ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಬೇಕು, ವರ್ತಮಾನಕ್ಕೆ
ಅವಶ್ಯವಿರುವ ಶಬ್ಚಗಳನ್ನು ಹೊಸದಾಗಿ
ಹೇಗೆ ಸೃಷ್ಟಿಸುವುದು, ಎಂಬುದಕ್ಕೆ
ಪರಿಹಾರ ಕಂಡುಕೊಂಡ. ಹೊಸ ಶಬ್ದಗಳನ್ನು
ಟಂಕಿಸಿದ. ಸಿಕ್ಕ ಕಾಗದದ ತುಂಡುಗಳ
ಮೇಲೆಲ್ಲ ಬರೆದಿರಿಸಿದ. ಕಾಗದದ ತುಂಡುಗಳಿಂದ ಅವನ ಕೋಣೆ ತುಂಬುವಂತಾಯಿತು. ಅಂತೂ ಹೊಚ್ಚ
ಹೊಸ ಅತ್ಯಾಧುನಿಕ ಬದುಕಿಗೆ
ಬೇಕಾಗುವಂತಹ ನಿಘಂಟನ್ನು ಪ್ರಕಟಿಸಿ,
ಹಿಬ್ರೂ ಸೃಷ್ಟಿಕರ್ತನಾದ. ʼʼ
ಹಿಬ್ರೂ ಮೂಲಭೂತವಾಗಿ
ಪ್ರಾಚೀನ ಯಹೂದಿಗಳ ಮಾತೃಭಾಷೆಯಾಗಿತ್ತು. ಸರಿಸುಮಾರು
೧೭೦೦ ವರ್ಷಗಳ ಕಾಲ ಇಸ್ರೇಲ್ ತನ್ನ ನೆಲದಿಂದ ವಂಚಿತಗೊಂಡು ವಿಶ್ವದ
ನಾನಾ ದೇಶಗಳಲ್ಲಿ ವಲಸೆ ನಾಗರಿಕರಾಗಿ ನೆಲೆಸಿದ್ದರು.
ಅಲ್ಲಲ್ಲಿಯ ಭಾಷೆಯನ್ನೇ ಅನಿವಾರ್ಯವಾಗಿ ಅಂಗೀಕರಿಸಿ, ತಮ್ಮ ಭಾಷೆಯನ್ನು ಮರೆತಿದ್ದರೂ, ತಮ್ಮ ಮೂಲ ನೆಲೆಯನ್ನು ಮರೆತಿರಲಿಲ್ಲ. ಅವರ ಧಾರ್ಮಿಕ,
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಪೂಜೆಗಾಗಿ, ಅಂತ್ಯಕ್ರಿಯೆ ಸಂದರ್ಭಗಳಲ್ಲಿ ಪವಿತ್ರಾಚರಣೆಗಾಗಿ ಹಿಬ್ರೂ
ಬಳಕೆಯಾಗುತ್ತಿತ್ತು. ಅದು ಕೇವಲ ದೇವಭಾಷೆ, ಪೂಜಾಭಾಷೆಯಾಗಿ
ಮಾರ್ಪಟ್ಟಿತ್ತು. ಸಾವಿರ ವರ್ಷಕಾಲವೂ
ನಿರಂತರ ತನ್ನ ನೆಲವನ್ನು ಪಡೆದುಕೊಳ್ಳುವ ಹೋರಾಟವನ್ನು
ಸಾಗಿಸುತ್ತಿದ್ದರೂ, ಹಿಬ್ರೂ
ಮಾತ್ರ ಮೃತಭಾಷೆಯಾಗಿತ್ತು. ಅದಕ್ಕೆ
ಜೀವಕೊಡಲು ಎಲಿಸರನೇ ಹುಟ್ಟಿ ಬರಬೇಕಾಯಿತು. ಏಸುಕ್ರಿಸ್ತನ
ಮಾತ್ರಭಾಷೆ ಹಿಬ್ರೂವೇ ಆಗಿತ್ತು.
ಮೊಟ್ಟಮೊದಲು ಇಸಾಯಿಗಳ ಧರ್ಮಗ್ರಂಥವಾದ
ಬೈಬಲ್, ಹಿಬ್ರೂ ಭಾಷೆಯಲ್ಲೇ ರಚನೆಯಾಗಿತ್ತು. ಏಸು ಶಿಲುಬೆಗೇರಿದ ಜರುಸಲೇಂ
ನಗರ, ಇಸ್ಲಾಮ್, ಕ್ರಿಶ್ಚಿಯನ್ ರಿಗೆ ಪವಿತ್ರ
ನಗರವಾದಂತೇ ಯಹೂದಿಗಳಿಗೂ ಸಹ ಅದೇ ಧಾರ್ಮಿಕ
ಕೇಂದ್ರ. ಸಾವಿರಾರು ವರ್ಷಗಳಿಂದ,
ಜರುಸಲೇಂ ನಗರದ ಪ್ರಭುತ್ವಕ್ಕಾಗಿ, ಮೂರು ಧರ್ಮಿಗಳೂ
ಇಂದಿಗೂ ಕಿತ್ತಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.
ಬೆನ್
ಯೆಹೂದಾ ಮತ್ತೊಂದು ಮಹತ್ತರ ಸಾಧನೆ ಮಾಡಿದರು:
ವೈಜ್ಞಾನಿಕ ಪದಗಳು, ರಾಜಕೀಯ ಶಬ್ದಗಳು, ತಾಂತ್ರಿಕ ಪರಿಕಲ್ಪನೆಗಳಿಗೆ
ಹಿಂದಿನ ಹೀಬ್ರೂದಲ್ಲಿ ಸಮಾನಾರ್ಥಕ ಪದಗಳಿರಲಿಲ್ಲ. ಅವರು ಸಾವಿರಾರು ಹೊಸ ಪದಗಳನ್ನು ರಚಿಸಿ, ಅವುಗಳನ್ನು ನಿಘಂಟಿನಲ್ಲಿ ಸಂಗ್ರಹಿಸಿದರು. ಅವರ ಹೀಬ್ರೂ ನಿಘಂಟು ಇಂದಿಗೂ ಭಾಷಾ ಶಾಸ್ತ್ರಜ್ಞರ ಮೆಚ್ಚುಗೆಯ ಕೃತಿಯಾಗಿದೆ.
ಹಿಬ್ರೂ ಜೀವ ಪಡೆಯಲು ಅತ್ಯಂತ ಮುಖ್ಯ ಪಾತ್ರ ವಹಿಸಿದದ್ದು ಶಿಕ್ಷಣ ಮತ್ತು ಪತ್ರಿಕೋದ್ಯಮ.
·
1880ರ ದಶಕದಿಂದ ಹೀಬ್ರೂ ಮಾಧ್ಯಮದ ಶಾಲೆಗಳು ಸ್ಥಾಪಿಸಲ್ಪಟ್ಟವು.
·
ಶಿಕ್ಷಕರು, ಸಮಾಜ ಸುಧಾರಕರು ಹೀಬ್ರೂವನ್ನು ಮಾತನಾಡುವ ಭಾಷೆಯಾಗಿ ಮಕ್ಕಳಿಗೆ ಕಲಿಸತೊಡಗಿದರು.
·
ಹೀಬ್ರೂ ಭಾಷೆಯ ಪತ್ರಿಕೆಗಳು, ಪುಸ್ತಕಗಳು, ಸಾಹಿತ್ಯಿಕ ಸಂಘಗಳು ಬೆಳೆಯತೊಡಗಿದವು.
ಮನುಷ್ಯರ ದಿನನಿತ್ಯದ ಬದುಕಿನಲ್ಲಿ ಭಾಷೆ ಪುನರುಜ್ಜೀವನವಾಗಲು ಶಾಲಾ ಶಿಕ್ಷಣವೇ ಅತ್ಯಂತ ಬಲವಾದ ಮಂತ್ರವಾಗಿದೆ. ಈ ಕಾರಣದಿಂದ ಹೀಬ್ರೂ ಬೇಗನೆ ಸಂವಹನ ಭೂಮಿಕೆಯನ್ನು ಗಿಟ್ಟಿಸಿಕೊಂಡಿತು.
1948ರಲ್ಲಿ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಿದ್ದಾಗ, ರಾಜ್ಯಕ್ಕೆ ಆಡಳಿತ ಭಾಷೆಯ ಅಗತ್ಯವಾಯಿತು. ಹಲವು ಚರ್ಚೆಗಳ ನಂತರ ಹೀಬ್ರೂ ಅನ್ನು ಆಧಿಕೃತ ಭಾಷೆ ಎಂದು ಘೋಷಿಸಲಾಯಿತು. ಸರ್ಕಾರದ ವಲಯಗಳು, ನ್ಯಾಯಪಾಲನಾ ಸಂಸ್ಥೆಗಳು, ಶಿಕ್ಷಣ, ವಿಜ್ಞಾನ, ಮಾಧ್ಯಮ—ಎಲ್ಲದರಲ್ಲಿಯೂ ಹೀಬ್ರೂ ಬಳಕೆ ಕ್ರಮೇಣ ಸಾಮಾನ್ಯವಾಯಿತು.
ಅತೀ ಚಿಕ್ಕ ಅವಧಿಯಲ್ಲಿ ಹೀಬ್ರೂ:
ಪಠ್ಯದ ಭಾಷೆ,
ಶಿಕ್ಷಣದ
ಭಾಷೆ, ರಾಜ್ಯದ ಭಾಷೆ,
ಸಾಹಿತ್ಯದ
ಭಾಷೆ, ವಿಜ್ಞಾನದ ಭಾಷೆ, ದೈನಂದಿನ ಸಂವಹನ
ಭಾಷೆಯನ್ನಾಗಿ ರೂಪಿಸಿದ
ಅವರ ಭಾಷಾಭಿಮಾನ ಅಪರೂಪವಾಗಿದೆ.
ಅನನ್ಯವಾಗಿದೆ.
ಇಷ್ಟೆಲ್ಲ
ಸಾಧನೆಗೆ ಅವರು ಬಳಸಿದ್ದು
ಕೇವಲ ಮೂವತ್ತು ವರ್ಷಗಳನ್ನು. ಮಕ್ಕಳ
ಬಾಲ್ಯವನ್ನೇ ಹಿಬ್ರೂದಲ್ಲಿ ಚಿಗುರಿಸಿದರು.
ಅದೇ ಮಹಾ ಮರವಾಗಿ ಬೆಳೆಯಿತು.
ಒಟ್ಟಿನಲ್ಲಿ
ಜಾಗತಿಕವಾಗಿ ಹಿಬ್ರೂ, ಎಲ್ಲಾ ಸ್ಥಾನಗಳನ್ನು ಸಂಪೂರ್ಣವಾಗಿ ಗಳಿಸಿತು.ಇಂದು ಸುಮಾರು 10
ಮಿಲಿಯನ್ ಜನರು ಹೀಬ್ರೂ ಮಾತನಾಡುತ್ತಿದ್ದಾರೆ. ಶತಮಾನಗಳ ಕಾಲ “ಸತ್ತ” ಎಂದು ಪರಿಗಣಿಸಲ್ಪಟ್ಟಿದ್ದ
ಭಾಷೆಯೊಂದು ಪುನಃ ಉಸಿರಾಡುತ್ತಿದೆ.. ಹೀಬ್ರೂ ಪುನರುಜ್ಜೀವನದ ಈ ವಿಸ್ಮಯಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ಹೀಗೆ
ಪಟ್ಟಿ ಮಾಡಬಹುದಾಗಿದೆ.
1.
ಧಾರ್ಮಿಕ ಮತ್ತು ಸಾಂಸ್ಕೃತಿಕ ಬಂಧ – ಸಮುದಾಯದ ಭಾವನಾತ್ಮಕ ನಂಟು.
2.
ಸಿಯೋನಿಸ್ಟ್ ಚಳುವಳಿ – ಭಾಷೆಯನ್ನು ರಾಷ್ಟ್ರೀಯ ಚಿಹ್ನೆಯಾಗಿ ಅಳವಡಿಸಿಕೊಂಡದ್ದು.
3.
ಎಲಿಯೆಝರ್ ಬೆನ್ ಯೆಹೂದಾ ಅವರ ತ್ಯಾಗ ಮತ್ತು ಸಂಕಲ್ಪ.
4.
ಶಾಲಾ ಶಿಕ್ಷಣ ಮತ್ತು ಸಂವಹನ ಕ್ಷೇತ್ರದ ಸಕ್ರಿಯ ಪಾಲ್ಗೊಳ್ಳುವಿಕೆ.
5.
ರಾಜಕೀಯ ಇಚ್ಛಾಶಕ್ತಿ – ರಾಷ್ಟ್ರದ ಅಧಿಕೃತ ಭಾಷೆ ಮಾಡುವ ನಿರ್ಧಾರ.
ಪ್ರಪಂಚದಲ್ಲಿ ಇನ್ನೂ ಅನೇಕ ಭಾಷೆಗಳು ನಾಶವಾಗುತ್ತಿರುವಾಗ, ಹೀಬ್ರೂ ಮರಳಿ ಬದುಕಿರುವುದು ಮಾನವ ಸಮಾಜಕ್ಕೆ ದೊಡ್ಡ ಪಾಠವನ್ನು ನೀಡುತ್ತದೆ—ಭಾಷೆ ಸತ್ತರೂ, ಆ ಸಂಸ್ಕೃತಿಯ ಜನರು ಬದುಕಿದ್ದರೆ, ಅವರಲ್ಲಿ ಛಲವಿದ್ದರೆ ಭಾಷೆಗೆ ಪುನರ್ಜನ್ಮ ನೀಡುವುದು ಸಾಧ್ಯ.ಎಂಬುದಕ್ಕೆ ಇಸ್ರೇಲ್
ಸಾಕ್ಷಿ.
ಭಾಷೆಯ ಪುನರುಜ್ಜೀವನವು ಕೇವಲ ಭಾಷಾ ಚಳುವಳಿಯಲ್ಲ; ಇದು ಒಂದು ಜನಾಂಗದ ಆತ್ಮಶೋಧನೆ, ಸಾಂಸ್ಕೃತಿಕ ಪುನರ್ನಿರ್ಮಾಣ ಮತ್ತು ರಾಷ್ಟ್ರೀಯ ಪುನರುತ್ಥಾನದ ಕಥೆಯಾಗಿದೆ. ಹೀಬ್ರೂ ಕೇವಲ ಪದಗಳ ಸಮೂಹವಲ್ಲ; ಅದು ಯೆಹೂದಿ ಸಮಾಜದ ಹೃದಯಧ್ವನಿ. ಒಂದು ಭಾಷೆ ಸಾವಿರ ವರ್ಷಗಳ ಕಾಲ ನಿಶ್ಚೇಷ್ಟಿತವಾಗಿದ್ದರೂ ಮತ್ತೆ ಜೀವ ಪಡೆಯಬಹುದು ಎಂಬ ವಿಶ್ವಾಸವನ್ನು ಇಸ್ರೇಲಿನ
ಈ ಕಥೆ ಕಟ್ಟಿಕೊಡುತ್ತದೆ.
ನಮ್ಮ ಕನ್ನಡ ಮತ್ತು ಕರ್ನಾಟಕ ಒಮ್ಮೆ
ಇಸ್ರೇಲಿನ ಈ ಮಹಾ ಸಾಧನೆಯನ್ನು ಗಮನಿಸಬೇಕು.
ಕನ್ನಡ ಅನ್ನದ ಭಾಷೆಯಲ್ಲ, ಉದ್ಯೋಗದ
ಭಾಷೆಯಲ್ಲ, ವಿಜ್ಞಾನ ತಂತ್ರಜ್ಞಾನ ಶಿಕ್ಷಣವನ್ನು ನೀಡಲು
ಅಸಮರ್ಥ, ಎಂಬೆಲ್ಲ ಆರೋಪಗಳನ್ನು ಸುರಿಯುವ
ಕನ್ನಡದ ಮನಸ್ಸುಗಳು, ಒಮ್ಮೆ
ಇಸ್ರೇಲ್ ಸಾಧನೆಯನ್ನು ಗಮನಿಸುವುದೊಳಿತು. ಮನಸ್ಸು ಮಾಡಿದರೆ
ಒಬ್ಬನೇ ಒಬ್ಬ ವ್ಯಕ್ತಿ ಇಡೀ
ರಾಷ್ಟ್ರದ ಆತ್ಮವನ್ನು ಜಾಗ್ರತಗೊಳಿಸಬಲ್ಲ
ಎಂಬುದಕ್ಕೆ ಎಲಿಸರ ಬೆನ್ ಯಹೂದಾ ಸಾಕ್ಷಿ.
ಸಂಪದ
ಸಾಲು ಪತ್ರಿಕೆಯ ಡಿಸೆಂಬರ್
ಸಂಚಿಕೆಗಾಗಿ. ತಾ- ೨೧-೧೧-೨೦೨೫.
ಸುಬ್ರಾಯ ಮತ್ತೀಹಳ್ಳಿ.
No comments:
Post a Comment