Vishwambhar-
colum 2
ಸುಮನಾಂಬರ - 7
ʻʻ ಕನ್ನಡದ ಆಂಜನೇಯ ಮತ್ತೆ ಅವತರಿಸಲಿʼʼ
ತಾಯ್ನುಡಿಯ ಏಣಿಯಲಿ ಏರು ಜಗದೆತ್ತರಕೆ
ಎಲ್ಲ ಎಲ್ಲೆಯೂ ಇನ್ನಿಲ್ಲವಾಗಲಿ
ಸಹೃದಯ ಸಡಗರದ ಸ್ನೇಹ ಜಲ ಚಿಮ್ಮಲಿ
ಸ್ವಾಭಿಮಾನದ ಜ್ಯೋತಿ
ಕಂಗೊಳಿಸಲಿ.
ಇಂಗ್ಲಿಶ್ ಕಂಡರೆ ಭಯ, ಸಂಸ್ಕೃತದ
ಬಗೆಗೆ ಭಾರೀ ಭಕ್ತಿ, ಕನ್ನಡವೆಂದರೆ ನಿರಾಸಕ್ತಿ. ಇದು ಕನ್ನಡಿಗರ
ಸಹಜ ಪ್ರವೃತ್ತಿ. ಹಾಗೆಂದು ಇಂಗ್ಲಿಶ್ ಮತ್ತು ಸಂಸ್ಕೃತಗಳ ಗಂಧ ಗಾಳಿಯೂ
ಇಲ್ಲದ ಸಾಮಾನ್ಯ ಜನಸಮೂಹ. ವಸಾಹತು ನೀಡಿದ
ಅಹಂಕಾರ , ಸನಾತನತೆ ದಯಪಾಲಿಸಿದ ದೈವಭಕ್ತಿ, ಕನ್ನಡಿಗನ ಮನಸ್ಸಲ್ಲಿ ವಿಚಿತ್ರ ಭ್ರಮೆಯಾಗಿ ಬೇರುಬಿಟ್ಟು
ಮಾತೃಮಣ್ಣಲ್ಲಿ ಬೇರು ಬಿಡಬೇಕಿದ್ದ ಮಾತೃಭಾಷಾಭಿಮಾನ ಶೂನ್ಯಕ್ಕಿಳಿದಿದೆ. ಕನ್ನಡ ಮಾಧ್ಯಮ, ಕನ್ನಡ ಸ್ನಾತಕ ಶಿಕ್ಷಣ, ಕಲಾಪದವಿ,
ಕನ್ನಡ ಸಾಹಿತ್ಯ, ಕಲಾಪದವಿ, ಮತ್ತು ಕನ್ನಡ
ಸಂಸ್ಕೃತಿ ಇವೆಲ್ಲವೂ ಈ ಆಧುನಿಕ
ಬದುಕಿನಲ್ಲಿ ಅಪ್ರಸ್ಥುತ ಎಂಬ ಖಚಿತ ತೀರ್ಮಾನಕ್ಕೆ
ಬಂದಿರುವ ಬಹುಪಾಲು ಜನರು, ಇಂಗ್ಲಿಶ್ ಮಾಧ್ಯಮದ ರೋಮಾಂಚನಕ್ಕೆ ಅಂಧವಾಗಿ
ತಮ್ಮನ್ನು ತೆತ್ತುಕೊಂಡಿದ್ದಾರೆ.
ಆಧುನಿಕ ಜಗತ್ತಿನಲ್ಲಿ
ಜನಮಾನಸದಲ್ಲಿ ಅತ್ಯಂತ ಭಯ ಭಕ್ತಿ
ಮತ್ತು ಆಸಕ್ತಿ ಇರುವ ಮೂರೇ ಮೂರು ವಸ್ತುವೆಂದರೆ,
ದೇವರು, ಪ್ರೇಮ, ಮತ್ತು ಇಂಗ್ಲಿಶ್ ಅಂತೆ.
ಏಕೆಂದರೆ ಆ ಮೂರೂ ವಿಷಯಗಳು ಇನ್ನೂ ಯಾರಿಗೂ
ಅರ್ಥವೇ ಆಗಿಲ್ಲವಂತೆ. ಇದೇ ಕಾರಣಕ್ಕೇ
ಈ ಮೂರೂ ನಮ್ಮ ನೆಲದಲ್ಲಿ
ಬೆರಗು, ವಿಸ್ಮಯ,ಮತ್ತು ಭಯಗಳ ಅಂಗಳಗಳಾಗಿವೆ.
ಕತ್ತೆಗೆ ಭಾರ ಹೊರುವುದೇ
ಕಾಯಕ. ತನ್ನ ಬೆನ್ನಮೇಲೆ ಕಲ್ಲಿದೆಯೋ, ಚಿನ್ನವಿದೆಯೋ ಅರಿವಿಲ್ಲ. ಕಲ್ಲಿನ ಕೀಳರಿಮೆಯಿಲ್ಲ. ಚಿನ್ನದ ಬಗೆಗಿನ ಮೇಲರಿಮೆಯೂ
ಇಲ್ಲ. ಕನ್ನಡ ಭಾಷಿಗರಲ್ಲಿ ಇದೇ ನಿರ್ಲಿಪ್ತತೆ. ಇತ್ತೀಚೆಗೆ
ಲೇಖಕ ರಾಜಗೋಪಾಲ, ಆಸಕ್ತಿಕರ ಸಂಗತಿಯೊಂದನ್ನು ತಮ್ಮ ಲೇಖನದಲ್ಲಿ ಪ್ರಸ್ಥಾಪಿಸುತ್ತಾರೆ.
ʻʻ ಜಗತ್ತಿನಲ್ಲಿಯ ಸಾವಿರಾರು ಭಾಷೆಗಳನ್ನು ಅಧ್ಯಯನ ಗೈಯ್ಯುವ ʻʻ ಎತ್ನೇಲೋಗ್
ʼʼ ಎಂಬ ಸಂಸ್ಥೆಯೊಂದು, ನಾಲ್ಕು ವರ್ಷಗಳ ಹಿಂದೆ ವಿಶ್ವವ್ಯಾಪೀ ಸಮೀಕ್ಷಾ ಅಧ್ಯಯನದ ವರದಿ ನೀಡಿತು.
ಜಗತ್ತಿನಲ್ಲಿರುವ ಭಾಷೆಗಳಲ್ಲಿ ಒಂದೇ ಒಂದು ನ್ಯೂನತೆಯಿಲ್ಲದೇ ಪರಿಪೂರ್ಣವಾಗಿರುವ ಭಾಷೆ ಯಾವುದು ಎಂಬುದು ಆ ಅಧ್ಯಯನದ ವಿಷಯ. ಅದಕ್ಕಾಗಿ ಮಾನದಂಡಗಳನ್ನು ಗೊತ್ತುಮಾಡಿತು. ಮಾತನಾಡುವ
ಎಲ್ಲಾ ಉಚ್ಛಾರಗಳಿಗೂ ಅಕ್ಷರ ಲಿಪಿಯಿರಬೇಕು.
ಓದುವಂತೆಯೇ ಶಬ್ದಗಳಲ್ಲಿ ಬರೆದಿಡಬೇಕು. ಬರೆದಂತೆಯೇ ಓದಲು ಬರಬೇಕು.
ಈ ಮೊದಲಾದ ಕೆಲವು ನಿಯಮಗಳನ್ನು ರೂಪಿಸಿತು. ಸತತ ಸಂಶೋಧನೆ, ಅನ್ವೇಷಣೆಗಳ
ಮೂಲಕ ಜಗತ್ತಿನ ಮೂರೇ ಮೂರು ಭಾಷೆಗಳನ್ನು ಪರಿಪೂರ್ಣ
ಎಂದು ಘೋಷಿಸಿತು. ಗ್ರೀಕ್, ಸಂಸ್ಕೃತ,
ಮತ್ತು ಕನ್ನಡ ಭಾಷೆಗಳು ಒಟ್ಟಾಗಿ
ಪ್ರಥಮ ಸ್ಥಾನವನ್ನು ಪಡೆದವು. ನಾವೆಲ್ಲ ಅತ್ಯಂತ ಹೆಮ್ಮೆ ಪಡಬೇಕಾದ ವಿದ್ಯಮಾನವಿದು. ನಮ್ಮ ಭಾಷೆ
ಇಷ್ಟೊಂದು ವೈಜ್ಞಾನಿಕ ಇಷ್ಟೊಂದು ಪರಿಪೂರ್ಣ ಎಂಬುದಕ್ಕಿಂತ
ಖುಷಿಯ ಸಂಗತಿ ಬೇರೇನಿದೆ
ಹೇಳಿ. ʼʼ
ಕಳೆದ ಮೂವತ್ತು ವರ್ಷಗಳ ಹಿಂದೆಯೇ
ವಿಶ್ವಭಾಷಾ ಲಿಪಿಗಳಲ್ಲಿ ಅತ್ಯಂತ ಸುಂದರ ಅಕ್ಷರಮಾಲೆ ಕನ್ನಡದ್ದು
ಎಂಬ ನಿರ್ಣಯ ಜಾಗತಿಕನೆಲೆಯಲ್ಲಿ ಗುರುತಿಸಲ್ಪಟ್ಟು ʻʻವಿಶ್ವ ಲಿಪಿಯ ರಾಣಿʼʼ
ಎಂಬ ಪಟ್ಟಕ್ಕೆ ಕನ್ನಡ ಲಿಪಿ ಆಯ್ಕೆಗೊಂಡು
ಕನ್ನಡಿಗರನ್ನು ರೋಮಾಂಚನ ಗೊಳಿಸಿತು. ಈ ವಿವರವನ್ನು ಖ್ಯಾತ ಲೇಖಕ ಪತ್ರಕರ್ತ
ದಿ. ಪಾಟೀಲ ಪುಟ್ಟಪ್ಪ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.
ಕನ್ನಡದ ಆದಿಕೃತಿ, ಒಂಬತ್ತನೆಯ ಶತಮಾನದ
ಕವಿರಾಜಮಾರ್ಗ ದಲ್ಲಿ, ಕನ್ನಡ ಭಾಷಿಕನ ಬಗೆಗೆ ಅದೆಷ್ಟು ಸುಂದರವಾದ ಉದ್ಘೋಷ
ಮೂಡಿದೆಯೆಂದರೆ, ಅಂಥ ಅದ್ಭುತ
ವ್ಯಕ್ತಿತ್ವದ ಕನ್ನಡಿಗರ ಸಂತತಿ ಈಗೆಲ್ಲಿ...?
ಎಂಬ ಪ್ರಶ್ನೆ ಮೂಡುತ್ತದೆ.
ʻʻ ಸುಭಟರ್ಕಳ್
ಕವಿಗಳ್ ಸು---|
ಪ್ರಭುಗಳ್ ಚೆಲ್ವರ್ಕಳ್, ಗುಣಿಗಳ್ |
ಅಭಿಮಾನಿಗಳ್ ಅತ್ಯುಗ್ರರ್ | ಗಭೀರ ಚಿತ್ತರ್
ವಿವೇಕಿಗಳ್ ನಾಡವರ್ಗಳ್||ʼʼ
ʻʻಕುರಿತೋದದೆಯುಂ ಕಾವ್ಯ ಪ್ರಯೋಗ
ಪರಿಣತ ಮತಿಗಳ್ʼʼ
ಹೀಗೆ ಕನ್ನಡ ಸಂಸ್ಕೃತಿಯ ಸದ್ಗುಣವನ್ನು
ಅಭಿಮಾನಪೂರ್ವಕವಾಗಿ ವರ್ಣಿಸುವುದರ ಜೊತೆಗೆ, ಕನ್ನಡಿಗನ ಪ್ರತಿಭಾಪೂರ್ಣ
ವೈಶಿಷ್ಟ್ಯವನ್ನು ಅಷ್ಟು ಮನೋಜ್ಞವಾಗಿ ದಾಖಲಿಸಿದ
ಇನ್ನೊಂದು ಕೃತಿ ಕನ್ನಡದಲ್ಲಿಲ್ಲ. ನಮ್ಮ ಕನ್ನಡ
ನಾಡು ಅದೆಷ್ಟು ವಿಸ್ತಾರ ಪಡೆದಿತ್ತು, ಎಂಬುದರ ಭೌಗೋಲಿಕ ವಿವರವನ್ನೂ ( ಕಾವೇರಿಯಿಂದಮಾ
ಗೋದಾವರಿವರೆಗಿರ್ದ ) ಅಧಿಕೃತವಾಗಿ ನೀಡಿದ ಮೊದಲ ಕೃತಿಯೂ
ಅದೇ ಆಗಿದೆ. ನಂತರದ ಸಾವಿರ ವರ್ಷಗಳ,
ರಾಜಕೀಯ ಸ್ಥಿತ್ಯಂತರ, ಪ್ರದೇಶಗಳೆಲ್ಲ ಛಿದ್ರವಾಗುವ ಪ್ರಕ್ರಿಯೆಯಲ್ಲಿ ಕನ್ನಡ ನಾಡು
ಎಂಬ ಭವ್ಯ ಪ್ರದೇಶ ಅಯೋಮಯ ಸ್ಥಿತಿಗೆ ಸಿಲುಕಿ ತನ್ನ ಅಸ್ಮಿತೆಯನ್ನೇ ಕಳೆದು ಕೊಂಡಿದ್ದು ರೋಚಕ ಇತಿಹಾಸ.
ಐವತ್ತರ ದಶಕದಲ್ಲಿ
ಕರ್ನಾಟಕ ರಾಜ್ಯ ಒಗ್ಗೂಡುವಾಗ, ಅದರ ಹಿನ್ನೆಲೆಯಲ್ಲಿ
ಶತಮಾನಗಳ ಬಹುದೊಡ್ಡ ಹೋರಾಟದ ಇತಿಹಾಸವಿದೆ.
ದಕ್ಷಿಣ ಭಾರತದಲ್ಲಿ ಇಪ್ಪತ್ತೊಂದು ಚೂರಾಗಿ ವಿವಿಧ ಆಢಳಿತದ
ಅಡಿಯಲ್ಲಿ ಹರಿದು ಹಂಚಿಹೋಗಿತ್ತು. ಕ್ರಿ.ಶ. ನಾಲ್ಕನೆಯ
ಶತಮಾನದಲ್ಲೇ ಕನ್ನಡದ ಮಹಾಸಾಮ್ರಾಜ್ಯ
ನಮ್ಮ ಕದಂಬರದ್ದಾಗಿತ್ತು. ಮಯೂರ ವರ್ಮನೇ
ಪರಭಾಷಾ ಪಲ್ಲವರ ನ್ನು ಹಣಿದು, ಕನ್ನಡದ ನೆಲವನ್ನು ಒಗ್ಗೂಡಿಸಿದ ಪ್ರಥಮ ದೊರೆ.
ನುಡಿಯ ಅಸ್ಮಿತೆಯನ್ನು ಜಾಗ್ರತ ಗೊಳಿಸಿದ ಮಹಾ ಚಕ್ರವರ್ತಿ.
ಕರ್ನಾಟಕದ ಏಕೀಕರಣದ ಸಾಧನೆಯ
ಕೀರ್ತಿ ನಿಜಕ್ಕೂ ಕದಂಬರಿಗೇ
ಸಲ್ಲಬೇಕು. ಆ ಕಾರಣಕ್ಕೂ
ನಮ್ಮ ಬನವಾಸಿ ನಮ್ಮ ಹೆಮ್ಮೆ. ಆ ಕಾಲದ ಆಡಳಿತ ಭಾಷೆ ಕನ್ನಡವೇ
ಆಗಿತ್ತು. ತ್ಯಾಗಕ್ಕೆ ಭೋಗಕ್ಕೆ
ಜ್ಞಾನಕ್ಕೆ ಆಗರವಾದ ಬನವಾಸಿ ನಾಡಲ್ಲಿ ವಾಸಿಸುವವನೇ ಅದೃಷ್ಟವಂತ, ಎಂದು ಉದ್ಗರಿಸಿದ ಮಹಾಕವಿ
ಪಂಪ ಕನ್ನಡಕ್ಕೆ ಶಾಶ್ವತ ಘನತೆಯನ್ನು ತಂದಿತ್ತ
ಅನುಪಮ ಪ್ರತಿಭೆ. ಕನ್ನಡದ ಪಂಪ ಭಾರತ, ವಿಕ್ರಮಾರ್ಜುನ ವಿಜಯ ಪ್ರಕಟಗೊಂಡು
ನಾಲ್ಕೈದು ಶತಮಾನಾನಂತರ ಇಂಗ್ಲಿಶ್ ನಲ್ಲಿ ಮಹಾಕಾವ್ಯ ಸೃಷ್ಟಿಗೊಂಡಿತು, ಎಂದರೆ ಕನ್ನಡದ
ಹಿರಿತನ ಅದೆಷ್ಟು ಮಹತ್ವದ್ದು
ಎಂಬುದು ಅರಿವಿಗೆ ನಿಲುಕುತ್ತದೆ.
ಕರ್ನಾಟಕಕ್ಕೆ ಜೈನರ ಪ್ರವೇಶವಾಗುವ
ವರೆಗೂ ಇಲ್ಲಿಯ ಕವಿಗಳು
ಶಾಸ್ತ್ರಕಾರರು ಕೃತಿ ರಚಿಸುತ್ತಿದ್ದದ್ದು ಸಂಸ್ಕೃತದಲ್ಲಿ.
ಶಾಸ್ತ್ರಸಾಹಿತ್ಯಕ್ಕಾಗಲೀ, ಕಾವ್ಯಕ್ಕಾಗಲಿ ಕನ್ನಡ ಅನರ್ಹ,
ಎಂಬ ಭಾವ
ಇಲ್ಲಿಯ ಕನ್ನಡಿಗ ಬುದ್ಧಿಜೀವಿಗಳಲ್ಲಿ ಗಾಢವಾಗಿ ನೆಲೆಸಿತ್ತು. ಜೈನರು ಸ್ಥಳೀಯ
ಆಡುಭಾಷೆಯನ್ನು ತಮ್ಮ ಧರ್ಮಪ್ರಸಾರಕ್ಕಾಗಿ ಆಯ್ದುಕೊಂಡರು.
ತಮ್ಮ ಕಾವ್ಯ ಶಾಸ್ತ್ರ ಪುರಾಣಗಳನ್ನು ಸಮೃದ್ಧವಾಗಿ
ಕನ್ನಡದಲ್ಲೇ ರಚಿಸಿದರು. ಜೈನ ಧರ್ಮ ಫಲವತ್ತಾದುದರ ಜೊತೆಗೆ
ಕನ್ನಡವೂ ಸಮೃದ್ಧಗೊಂಡಿತು.
ಕನ್ನಡಕ್ಕೆ ಇನ್ನಷ್ಟು ಘನತೆ ದೊರಕಲು ಪಂಪ ಕುಮಾರವ್ಯಾಸ, ರನ್ನ ಪೊನ್ನ ಅಂಡಯ್ಯ ರಂಥ ಮಹಾಕವಿಗಳೊಂದಿಗೆ, ವಚನಕಾರರ
ಸರಳ ಸುಂದರ ಆಪ್ತ ಆಡುಭಾಷೆ ವರದಾನವಾಗಿ
ಬಂದು ಕನ್ನಡ ಸರ್ವಶ್ರೇಷ್ಠಸ್ಥಾನಕ್ಕೆ ಏರಲು ಕಾರಣವಾಯಿತು.
ಕುಮಾರ ವ್ಯಾಸ ಭಾರತ ಕೆಲವೇ ವರ್ಷಗಳ ಹಿಂದೆಯಷ್ಟೇ
ಇಂಗ್ಲಿಷಿಗೆ ತರ್ಜುಮೆಯಾಯಿತು. ವಿದೇಶೀ
ವಿಶ್ವವಿದ್ಯಾಲಯಗಳಲ್ಲಿ ಅದೆಷ್ಟು ಕುತೂಹಲ
ಮೂಡಿಸಿದೆಯೆಂದರೆ, ಕುಮಾರವ್ಯಾಸನ ಬಗೆಗೆ ಅಧ್ಯಯನಗೈಯ್ಯಲು ವಿದೇಶೀ ವಿದ್ಯಾರ್ಥಿಗಳು ಕರ್ನಾಟಕಕ್ಕೆ
ಧಾವಿಸುತ್ತಿದ್ದಾರೆ.
ರಾಮಾಯಣದಲ್ಲಿ ಒಂದು ಘಟನೆ. ವಾನರರೆಲ್ಲ ಸರ್ವಾನುಮತದಿಂದ ಸಾಗರದಾಚೆಯಿರುವ ಸೀತಾ ಮಾತೆಯನ್ನು ಅನ್ವೇಷಿಸುವ ಸಾಹಸಿಯನ್ನಾಗಿ
ಆಂಜನೇಯನನ್ನು ಆಯ್ಕೆ ಮಾಡುತ್ತಾರೆ. ಹನುಮಂತನೋ ಇಂತಹ ಅಗಾಧ ಸಮುದ್ರವನ್ನು ದಾಟಿ ಅನ್ವೇಷಣೆಗೈಯ್ಯುವ ಅರ್ಹತೆ
ತನಗಿಲ್ಲ, ಅಂತಹ ಶಕ್ತಿಯೂ
ತನ್ನಲ್ಲಿಲ್ಲ ವೆಂದು ನಿರಾಕರಿಸುತ್ತಾನೆ. ಆಗ ಶ್ರೀರಾಮ ಪ್ರವೇಶಿಸಿ ನಿನ್ನೊಳಗೆ
ಅಗಾಧ ಶಕ್ತಿಯ ಜ್ವಾಲಾಮುಖಿಯೇ ಅಡಗಿದೆ.
ನಿನಗೇ ಅದರ ಅರಿವಿಲ್ಲ. ಮೊದಲು ನಿನ್ನೊಳಗಿನ ಮಹಾ ಚೈತನ್ಯದ ಚಿಲುಮೆಗೆ
ಚಾಲನೆ ನೀಡು. ಎಂದು ಹನುಮಂತನಲ್ಲಿ ಹುದುಗಿರುವ ಸಾಮರ್ಥ್ಯ
ಶಕ್ತಿ ಉತ್ಸಾಹ ಮತ್ತು ಬುದ್ಧಿವಂತಿಕೆಯ ಬಗೆಗೆ ಬೆಳಕು
ಚೆಲ್ಲಿ, ಹನುಮಂತನನ್ನು ಸಿದ್ಧಗೊಳಿಸುತ್ತಾನೆ. ಹನುಮಂತ ಮೂಲಭೂತವಾಗಿ ಕನ್ನಡಿಗನೇ.
ನಂತರದ ಆತನ ಸಾಧನೆ ಸರ್ವವಿದಿತ.
ಇದೀಗ ಕನ್ನಡನಾಡಿಗೆ, ಕನ್ನಡಿಗನಿಗೆ ಆಳದಲ್ಲಿರುವ
ಸಹಜವಾದ ಅಭಿಮಾನ ಮತ್ತು ಕ್ರಿಯಾಶೀಲತೆಯನ್ನು ಜಾಗ್ರತಗೊಳಿಸುವ ಇನ್ನೊಬ್ಬ ರಾಮ
ಅವತರಿಸ ಬೇಕಾಗಿದೆ.
ಸುಮನಾಂಬರ – 8
ಕನ್ನಡ ಕಾಲೂರಲು
ಕಾರಣಕರ್ತ, ವೆಂಕಟರಾಯ ಆಲೂರು
ಸಾವಿರದ ನುಡಿಯಲ್ಲಿ ಭಾವ ಬರ ಬರದಿರಲಿ
ನಾವಿರುವ ನೆಲದಲ್ಲಿ ಸತ್ವ ನೆಲೆಯೂರಲಿ.
ನೂರು ನುಡಿ ಗಡಣದಲಿ ಮಿಂಚಲಿ ಚೆನ್ನುಲಿ
ಮೇರು ಪರ್ವತವಾಗಿ ಮೆರೆದಾಡಲಿ.
ಸಾಮಾನ್ಯ ವ್ಯಕ್ತಿಯೊಬ್ಬ
ಅಸಾಮಾನ್ಯನಾಗಿ ಬಾನೆತ್ತರಕ್ಕೆ ಬೆಳೆದು ಸಮುದಾಯದ ನಡುವೆ ಮಿಂಚುವುದೇ ಅದೊಂದು ಬೆರಗು. ಅದೊಂದು ವಿಸ್ಮಯ. ಸಮುದಾಯದ ಅಪೇಕ್ಷೆ,
ವ್ಯಕ್ತಿಯ ಸಾಮರ್ಥ್ಯ, ಕಾಲದ ಅವಶ್ಯಕತೆ ಗಳು ಒಂದು ಸುವರ್ಣಬಿಂದುವಿನಲ್ಲಿ ಸಂಗಮಗೊಂಡು, ಸಮಾಜಕ್ಕೆ
ಮತ್ತು ಪ್ರಭುತ್ವಕ್ಕೆ ಹೊಸ ಹರಿವು ಹೊಸ ಬೆಳಕು ಮೂಡಿಸುವಂತಹ ಘಟನೆಗಳು ಚರಿತ್ರೆಯಲ್ಲಿ ಸಾಕಷ್ಟು ಘಟಿಸಿವೆ. ಅದೊಂದು ಸಾತ್ವಿಕ ಯುದ್ಧದಂತೆ. ಅಲ್ಲಿ ಸೋಲಿದೆ, ಗೆಲುವಿದೆ, ನೋವಿದೆ ತಲ್ಲಣವಿದೆ.
ತೊಡಗಿಕೊಂಡ ವ್ಯಕ್ತಿಗಳ ತ್ಯಾಗವೂ ಇದೆ.
ಸಾಮಾನ್ಯವಾಗಿ ಸಮುದಾಯ ಜಡಸ್ಥಿತಿಯಲ್ಲಿರುತ್ತದೆ. ಪ್ರಭುತ್ವ ನಿಂತನೀರಾಗಿರುತ್ತದೆ.
ಈ ನಡುವೆಯೇ ಬದಲಾವಣೆಗಾಗಿ, ಸಂಚಲನೆಗಾಗಿ
ಹೋರಾಟವನ್ನೇ ಕೈಗೊಳ್ಳಬೇಕಾಗುತ್ತದೆ. ಹೊಸತನವೆನ್ನುವುದು, ಕೆಲವುಕಾಲ ಹಳೆಯದರ ಪಕ್ಕದಲ್ಲೇ ಹರಿಯುತ್ತ, ನಿಧಾನವಾಗಿ ಒಗ್ಗೂಡುತ್ತದೆ.
ಜಡಗೊಂಡ ಮನಸ್ಸನ್ನು ಮೆಲ್ಲನೆ ಪರಿವರ್ತಿಸುತ್ತದೆ.
ಇದಕ್ಕೊಂದು ಸಮರ್ಥ ಉದಾಹರಣೆ, ಕನ್ನಡದ ಏಕೀಕರಣ ಚಳುವಳಿ. ಕರ್ನಾಟಕ ರಾಜ್ಯ ಮತ್ತು ಕನ್ನಡ ಭಾಷೆ ತನ್ನದೇ ಆದ ಒಂದು ವ್ಯವಸ್ಥಿತ
ನೆಲೆ ಕಂಡುಕೊಳ್ಳಲು ಶತಮಾನ ಕಾಲ ತಪಸ್ಸನ್ನೇ
ಕೈಗೊಳ್ಳಬೇಕಾಯಿತು. ಇಪ್ಪತ್ತೊಂದು ಚೂರಾಗಿ ಹರಿದು ಹಂಚಿಹೋದ ಕನ್ನಡ ಪ್ರದೇಶ,
ದಿಕ್ಕು ದೆಸೆಯಿಲ್ಲದ ಕನ್ನಡ ಭಾಷೆ ತನ್ನ
ಸತ್ವವನ್ನು ಬೆಳಗಿಸಲು, ಸ್ವತ್ವ ವನ್ನು ಕಂಡುಕೊಳ್ಳಲು, ತಹತಹಿಸಿದ
ಇತಿಹಾಸವನ್ನು ಗಮನಿಸಿದಾಗ, ಮೈ ನವಿರೇಳುತ್ತದೆ. ಕನ್ನಡ ಕುಲಪುರೋಹಿತ ಕರ್ನಾಟಕ ಏಕೀಕರಣ ಚಳುವಳಿಯ ಪಿತಾಮಹ,
ʻʻ ಆಲೂರು ವೆಂಕಟರಾಯರುʼʼ( ೧೮೮೦-೧೯೬೪)
ಮನಸ್ಸನ್ನು ಆಕ್ರಮಿಸುತ್ತಾರೆ.
ಕರ್ನಾಟಕ ರಾಜ್ಯದ
ಬಿಜಾಪುರ ಜಿಲ್ಲೆಯಲ್ಲಿ ಜನಿಸಿದ
ರಾಯರು, ಪುಣೆಯ ಪರ್ಗ್ಯುಸನ್
ಕಾಲೇಜಿನಲ್ಲಿ, ಪದವೀ ಧರರಾಗಿ, ಮುಂಬಯಿಯಲ್ಲಿ ಕಾನೂನು ಪದವಿಯನ್ನೂ ಪೂರೈಸಿದರು.
( ೧೯೦೫) ಅಲ್ಲಿದ್ದಾಗಲೇ ಬಾಲಗಂಗಾಧರ
ತಿಲಕ, ವೀರ ಸಾವರಕರ್, ಸೇನಾಪತಿ
ಬಾಪಟ್ ಮುಂತಾದವರ ಆತ್ಮೀಯ
ಸಂಪರ್ಕಕ್ಕೆ ಬಂದ ವೆಂಕಟ ರಾಯರು,
ಪುಣೆ ಮುಂಬಯಿಯ ಉನ್ನತ ಉದ್ಯೋಗಗಳ ಆಮಿಷವನ್ನೂ
ತೊರೆದು, ಸ್ವಾತಂತ್ರ್ಯ ಸೇನಾನಿಯಾಗಿ ರೂಪುಗೊಂಡರು.
ಭಾರತೀಯ ಭಾಷಾ ಪ್ರೇಮಿಯಾದ ತಿಲಕರ ಪ್ರಭಾವದಲ್ಲಿ,
ಅವರ ಪ್ರೇರಣೆಯಂತೇ ಕನ್ನಡ
ಮತ್ತು ಕರ್ನಾಟಕ ಸಾರೋದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು, ಕನ್ನಡದ
ಭಾಗ್ಯ.
ಸ್ವಥಹ ಚಿಂತನಶೀಲತೆ,
ಸಂಸ್ಕೃತಿಪ್ರೇಮ ಅಧ್ಯಯನ ಶೀಲ ಗುಣಗಳಿಂದ
ಸಮೃದ್ಧಗೊಂಡಿದ್ದ ಅವರ ವ್ಯಕ್ತಿತ್ವ,
ಎಂಭತ್ಮೂರು ವರ್ಷಪರ್ಯಂತ, ಕರ್ನಾಟಕ
ಏಕೀಕರಣಕ್ಕಾಗಿ, ಅಹರ್ನಿಶಿ ಹೋರಾಟ ಗೈದಿದ್ದಲ್ಲದೇ,
ಸಾವಿರಾರು ಹೋರಾಟಗಾರರನ್ನೂ ಸೃಷ್ಟಿಸಿದರು.
ಚೂರು ಚೂರಾಗಿದ್ದ ಕನ್ನಡ ನೆಲವನ್ನು
ಇಂಚಿಂಚೂ ಬಿಡದೇ ನಡೆದಾಡಿ,
ಕನ್ನಡದ ಗಡಿಗಳನ್ನು ಶೋಧಿಸಿದ
ಪ್ರಪ್ರಥಮ ಸಂಶೋಧಕರು ಅವರು. ಅವರೊಮ್ಮೆ
ಹಂಪಿಯನ್ನು ಸಂದರ್ಶಿಸುತ್ತಾರೆ. ಅದರ ಗತವೈಭವವನ್ನು
ಮೊದಲೇ ಅಧ್ಯಯನ ಗೈದಿದ್ದ ಅವರು ಹಾಳು
ಹಂಪಿಯನ್ನು ಕಂಡಾಗ, ಅಕ್ಷರ ಷಹ ಹೈರಾಣುಗೊಳ್ಳುತ್ತಾರೆ. ಜಗತ್ತಿನಲ್ಲೇ ಏಕೈಕ ಮಹಾ ಸಾಮ್ರಾಜ್ಯವೆಂದೆನ್ನಿಸಿಕೊಂಡಿದ್ದ ವಿಜಯನಗರ
ಪ್ರದೇಶದ ದಯನೀಯ ಸ್ಥಿತಿ ಕಂಡು ರೊಚ್ಚಿಗೇಳುತ್ತಾರೆ. ಮತ್ತೆ ಕರ್ನಾಟಕವನ್ನು
ಸಶಕ್ತವಾಗಿ ಕಟ್ಟುವ ಪಣತೊಡುತ್ತಾರೆ.
ತಮ್ಮ ಪದವಿ ಮುಗಿಸಿ ಧಾರವಾಡಕ್ಕೆ
ಆಗಮಿಸಿದ ತಕ್ಷಣ, (೧೯೦೬) ವಾಗ್ಭೂಷಣ ಎಂಬ ಪತ್ರಿಕೆ ಪ್ರಾರಂಭಿಸಿ
ಹದಿರಾರು ವರ್ಷ ಕಾಲ ಕನ್ನಡಾಭಿಮಾನವನ್ನು ಜಾಗ್ರತಗೊಳಿಸುತ್ತ, ಇಡೀ ವಿಶ್ವಾನುಭವಗಳನ್ನು ತಮ್ಮ ಲೇಖನಗಳಲ್ಲಿ ವಿಸ್ತರಿಸಿದರು.
ಕಾರಣಾಂತರದಿಂದ ಪತ್ರಿಕೆ ನಿಂತರೂ
ಎದೆಗುಂದದೇ ಜಯಕರ್ನಾಟಕ ಎಂಬ ಪತ್ರಿಕೆ
ಪ್ರಾರಂಭಿಸಿ, ( ೧೯೨೨) ಲೇಖನ ಪ್ರಕಟಿಸಿ,
ಬ್ರಿಟಿಶರ ಕೆಂಗಣ್ಣಿಗೂ ಗುರಿಯಾದರು.
ತಿಲಕರು ಅವರಿಗೆ ಮಾದರಿಯಾಗಿದ್ದರು. ತಮ್ಮ ಪತ್ರಿಕೆಯ
ಮೂಲಕ ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ ರಂತಹ ಹಲವು ಕವಿ ಲೇಖಕರನ್ನು
ಬೆಳಕಿಗೆ ತಂದರು. ಕನ್ನಡ ಕೃತಿಗಳು
ಹೆಚ್ಚೆಚ್ಚು ಪ್ರಕಟಗೊಳ್ಳಬೇಕು, ಅವು ಓದುಗರನ್ನು ತಲುಪಬೇಕೆಂದು,
ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಬಲಪಡಿಸುವ ಜೊತೆಗೆ,
ಕರ್ನಾಟಕ ಸಾಹಿತ್ಯಪರಿಷತ್ ಉದ್ಭವಿಸಲು
ಪ್ರಮುಖ ಕಾರಣಕರ್ತರಲ್ಲಿ ಮೊದಲಿಗರಾದರು.
ಕರ್ನಾಟಕ ಗತ ವೈಭವ ಕೃತಿ ಕನ್ನಡಿಗರನ್ನು
ಬಡಿದೆಬ್ಬಿಸಿತು. ತಿಲಕರ ಸುಪ್ರಸಿದ್ಛ
ಮರಾಠೀ ಕೃತಿ ಗೀತಾರಹಸ್ಯ ಎಂಬ ಬೃಹತ್ ಗ್ರಂಥವನ್ನು
ಅದೇ ಮೊದಲು ಕನ್ನಡಕ್ಕೆ ಅನುವಾದಿಸಿದರು. ಅದು ಕರ್ನಾಟಕದ ಮನೆ ಮನವನ್ನು ತಲುಪಿ ಸಂಚಲನ ಮೂಡಿಸಿತು. ವೆಂಕಟ ರಾಯರ ಭಾಷೆ ಇತಿಹಾಸ ಸಂಸ್ಕೃತಿ
ಸ್ವಾತಂತ್ರ ಪ್ರೇಮ ಗಳನ್ನು ಉದ್ದೀಪಿಸುವ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.
ಒಮ್ಮೆ ವೆಂಕಟರಾಯರು ಕನ್ನಡದ
ಕಥಾಭೀಷ್ಮ ಮಾಸ್ತಿ ವೆಂಕಟೇಶ ಅಯ್ಯಂಗಾರರಿಗೆ,
ಕರ್ನಾಟಕ ಏಕೀಕರಣ ಚಳುವಳಿಯ ಬಗೆಗೆ ಪತ್ರವೊಂದನ್ನು ಬರೆಯುತ್ತಾರೆ. ಅದಕ್ಕೆ ಮಾಸ್ತಿಯವರು ಇಂಗ್ಲಿಶ್ ನಲ್ಲಿ ಉತ್ತರಿಸುತ್ತಾರೆ. ರಾಯರು ಅಸಹನೆಗೊಂಡು ಮಾಸ್ತಿ ಬರೆದ ಪತ್ರಕ್ಕೆ ಕನ್ನಡದಲ್ಲಿ ʻʻ ಇಂಗ್ಲಿಶ್
ಪತ್ರ ಅಸ್ವೀಕಾರವಾಗಿದೆ. ಕನ್ನಡದಲ್ಲಿ ವ್ಯವಹರಿಸಿʼʼ ಎಂದು ಅಡಿಟಿಪ್ಪಣಿ
ಬರೆದು ಮರಳಿಸುತ್ತಾರೆ. ಮಾಸ್ತಿ ಕ್ಷಮೆಕೋರಿ ಕನ್ನಡದಲ್ಲೆ ಉತ್ತರಿಸುತ್ತಾರೆ. ಆಲೂರರ
ಭಾಷಾಭಿಮಾನ ಅಂಥಹದ್ದು.
ಚರಿತ್ರೆ
ಮತ್ತು ಪರಂಪರೆಯ ಪ್ರಜ್ಞೆಯಿಲ್ಲದ ವ್ಯಕ್ತಿತ್ವ, ಎಂದೂ ಭವಿಷ್ಯ
ಸೃಷ್ಟಿಸಲಾರದು. ಅದರ ಪಾಲಿಗೆ ವರ್ತಮಾನ ಶುಷ್ಕ ಬರಡು.
ನಮ್ಮ ಕರ್ನಾಟಕದ ಸಾವಿರಾರು ವರ್ಷಗಳ ಇತಿಹಾಸವನ್ನೇ
ಸೂಕ್ಷ್ಮವಾಗಿ ಅವಲೋಕಿಸುತ್ತಾ ಹೊರಟರೆ,( ಕರ್ನಾಟಕ ಗ.ವೈಭವ) ಅದೆಷ್ಟು ರೋಚಕ, ಅದೆಷ್ಟು
ಬೆರಗು. ಎಂಥ ಏರಿಳಿತ, ಒಂದೊಂದು ಶತಮಾನವೂ ರೋಮಾಂಚನಗೊಳಿಸುವ ಅಸಂಖ್ಯ ನೆನಪುಗಳನ್ನು ತನ್ನ ಒಡಲಲ್ಲಿ ಇನ್ನೂ ಜೀವಂತವಾಗಿ
ಇರಿಸಿಕೊಂಡಿದೆ. ಅಸಂಖ್ಯ ರಾಜ ಮಹಾರಾಜರುಗಳ ಯುದ್ಧ
ವೀರತ್ವ ಹೇಡಿತನ ಪ್ರೇಮ ವ್ಯಭಿಚಾರ ಗಳ ಕತೆಗಳನ್ನು
ವಾಚಿಸುತ್ತಾ ಹೋದಂತೇ ಮಾನವ ಜಗತ್ತಿನ ಶಕ್ತಿ ದೌರ್ಬಲ್ಯಗಳ ಒಂದೊಂದೇ
ಚಿತ್ರ ಅನಾವರಣಗೊಳ್ಳುತ್ತಾ ಸಾಗುತ್ತದೆ.
ಮನುಷ್ಯನಿಗೆ ಹೇಗೆ ಒಂದು ಮನಸ್ಸು ಎಂಬ ಚೈತನ್ಯವಿರುತ್ತದೆಯೋ ಅದರಂತೇ
ಒಂದು ಸಮುದಾಯ ಪ್ರದೇಶ ಗಳಿಗೂ ವಿಶಿಷ್ಟ ಮನಸ್ಸಿರುತ್ತದೆ. ತನ್ನ ತೀವ್ರ ಕ್ಷಣಗಳಲ್ಲಿ, ಜೇನು ತನ್ನ
ಪಡೆಯ ಸುಸ್ಥಿರತೆಗೆ ತಾನೇ ರಾಣಿ
ಹುಳುವನ್ನು ಸೃಷ್ಟಿಸಿಕೊಳ್ಳುವಂತೆ, ಮಾನವ ಸಮುದಾಯವೂ ತನ್ನ ಸುಸ್ಥಿರತೆಗೆ ವಿಶೇಷ ವ್ಯಕ್ತಿತ್ವವೊಂದನ್ನು
ಸೃಷ್ಟಿಸಿ ಕೊಳ್ಳುತ್ತದೆ. ಧರ್ಮ ಸಂಸ್ಥಾಪಕ, ರಾಷ್ಟ್ರನಾಯಕ,
ಸಮಾಜ ಸುಧಾರಕ ತತ್ವಪ್ರತಿಪಾದಕ, ಮುಂತಾದ
ಅನನ್ಯ ವ್ಯಕ್ತಿತ್ವಗಳೆಲ್ಲವೂ ಆವಾವ ಸಮುದಾಯವೇ
ತನಗಾಗಿ ಸೃಷ್ಟಿಸಿಕೊಂಡ ಸಂಪನ್ಮೂಲಗಳೇ
ಆಗಿವೆ. ಬುದ್ಧ ಮಹಾವೀರ
ಏಸು ಶಂಕರ ವಿವೇಕ ಪೈಗಂಬರ್ ಗಾಂಧಿ ತೆರೇಸಾ ಮುಂತಾದ
ವ್ಯಕ್ತಿತ್ವಗಳು ಇಡೀ ಮಾನವ ಸಮುದಾಯಕ್ಕೆ ಹೊಸ ದಾರಿತೋರಿದ ಹೊಸ ಬೆಳಕುಗಳೇ ಆಗಿವೆ.
ಸಾಮಾನ್ಯ ಮನುಷ್ಯನ ಪ್ರವೃತ್ತಿ ಭಿನ್ನ. ತನ್ನ ಕುಟುಂಬ, ತನ್ನ ಬ್ಯಾಂಕ್ ಬ್ಯಾಲೆನ್ಸ, ತನ್ನದೇ ಬದುಕು
ಎಂಬ ಚಿಪ್ಪಿನಲ್ಲಿ ಬಂಧಿಯಾಗಿ, ಸಾಮಾಜಿಕ ಪ್ರಜ್ಞಾಶೂನ್ಯತೆಯಲ್ಲಿ ಬಳಲುತ್ತಿರುವುದೇ ಹಣೆಬರಹವಾಗಿರುವಾಗ ಆಲೂರರಂತಹ
ವ್ಯಕ್ತಿತ್ವದ ಸಂಸ್ಮರಣೆ ಮಾತ್ರ ದಾರಿ
ತೋರೀತು. ಸಮುದಾಯಕ್ಕಾಗಿಯೇ ಮೀಸಲಿಟ್ಟ ಅಂಥ
ಸಾಧಕರು ನಮ್ಮ ಮಾದರಿಗಳಾಗಬೇಕು.
೧೯೫೬ ನವೆಂಬರ್
೧, ಈ ದಿನ ಕನ್ನಡಿಗರಿಗೆ
ಸರ್ವವಿದಿತ. ಆಲೂರರ ಜೀವನದ
ಮಹಾ ಕನಸು ನನಸಾದ ದಿನವದು.
ಅರ್ಧ ಶತಮಾನಕಾಲ ಬದುಕನ್ನೇ
ಕನ್ನಡ ನೆಲದ ಒಕ್ಕೂಟಕ್ಕಾಗಿ
ಮೀಸಲಿಟ್ಟ ಆಲೂರರು, ಕನ್ನಡ ರಾಜ್ಯೋತ್ಸವಾಚರಣೆಗೆ ಬೆಂಗಳೂರಿಗೆ
ಆಮಂತ್ರಿಸಿದರೂ ಹೋಗದೇ ನೇರವಾಗಿ
ಹಂಪಿಗೆ ಧಾವಿಸಿದರು. ಭುವನೇಶ್ವರಿಯನ್ನು ತಾವೇ ಸ್ವತಹ ಮಂತ್ರೋಕ್ತವಾಗಿ
ಪೂಜಿಸುತ್ತ, ʻʻ ದೇಶದಲ್ಲಲ್ಲ ಜಗತ್ತಿನಲ್ಲೇ ಮತ್ತೆ ಕರ್ನಾಟಕ ಪ್ರಜ್ವಲಿಸಬೇಕು, ವಿಜಯನಗರದ
ವೈಭವ ಮತ್ತೆ ಅವತರಿಸುವಂತೇ
ಕೃಪೆದೋರು ʼʼ ಎಂದು ಪ್ರಾರ್ಥಿಸಿದರು. ಆಗ ಸಾವಿರಾರು ಕನ್ನಡಿಗರು
ಸಾಕ್ಷಿಯಾದರು.
ಅವರ ಕನಸು ಇನ್ನೂ ನನಸಾಗಲಿಲ್ಲ.
ಕನ್ನಡದ ಸಮೃದ್ಧ ನೆಲಕ್ಕೆ, ಸತ್ವಯುತ ಸಂಸ್ಕೃತಿಯ
ಉಜ್ವಲನಕ್ಕೆ ಬೇಕಾದ ಉತ್ಕಟ ಇಚ್ಛಾಶಕ್ತಿ,
ಪ್ರಾಮಾಣಿಕ ಪ್ರಯತ್ನ, ಪರಂಪರೆಯ ಬಗೆಗಿನ ಅಭಿಮಾನ,
ಕ್ಷೀಣಿಸಿದೆ. ಆಳಿದ ಪ್ರಭುತ್ವವಾಗಲೀ, ಇರುವ ಸುಶಿಕ್ಷಿತರಾಗಲೀ, ಈ ಮಣ್ಣಿನ ಮಹತ್ವ,
ಶಕ್ತಿ, ಸಾಮರ್ಥ್ಯಗಳ ಬಗೆಗೆ ಗಾಢ ವಿಸ್ಮೃತಿಯಲ್ಲಿ
ಒರಗಿರುವ ಈ ಕಟು ವಾಸ್ತವದಲ್ಲಿ, ನಾವು ಮತ್ತೊಮ್ಮೆ ಕನ್ನಡದ
ಕಹಳೆಯೂದ ಬೇಕಾಗಿದೆ.
ಕನ್ನಡ ಸಂಸ್ಕೃತಿ ಭಾಷೆಗಳ
ಹಿನ್ನೆಲೆಯಲ್ಲಿ, ಶತಮಾನಗಳಿಂದ ಛಿದ್ರಗೊಂಡು
ಅತಂತ್ರ ಸ್ಥಿತಿಯಲ್ಲಿದ್ದ ಕನ್ನಡನಾಡು ,
ಒಂದು ಕಾಲು ಶತಮಾನದ ಹಿಂದೆ ಸೃಷ್ಟಿಸಿ ಕೊಂಡ
ಅಪೂರ್ವ ಸಂಪನ್ಮೂಲವೆಂದರೆ ಕನ್ನಡದ ಕುಲಪುರೋಹಿತ,
ಏಕೀಕರಣ ಪಿತಾಮಹ, ಆಲೂರು ವೆಂಕಟರಾಯರು. ಮತ್ತೊಮ್ಮೆ ಅವರನ್ನು
ನಮ್ಮೊಳಗೆ ಆವಾಹಿಸಿಕೊಳ್ಳಬೇಕಿದೆ.
===========================================================
ಸುಮನಾಂಬರ ೯.
ನುಡಿಗುಡಿಯ
ಶಿಖರ, ʻʻ
ರಾಜಕುಮಾರ.ʼʼ
ಭಾರತಾಂಬೆಯ
ಹಿರಿಕುವರಿ ಕನ್ನಡತಿ
ದೇಶ ಭಾಷೆಗೆ ಇವಳೆ ಒಡತಿ.
ಕನ್ನಡದ ಕಣ್ಣಿನಲಿ
ಭಾರತಿಯ ಪ್ರತಿಬಿಂಬ
ತಾಯ್ತನದ ಕರುಣೆಯಾ
ದಿವ್ಯಾಕೃತಿ.
ಇಪ್ಪತ್ತನೆಯ
ಶತಮಾನದಾದ್ಯಂತ ಕನ್ನಡಿಗರ ಹೃದಯಸಿಂಹಾಸನವನ್ನಾಳಿದ, ವರನಟ ರಾಜಕುಮಾರ್ ನಟನಾ ಶ್ರೀಮಂತರೊಂದೇ ಅಲ್ಲ. ಸ್ವಚ್ಛ,
ಅಸ್ಖಲಿತ, ಸ್ಪಷ್ಠ ಸರಳ ಸುಂದರ ಸೂಕ್ಷ್ಮ ಕನ್ನಡ ಭಾಷಾ ನಿರ್ವಹಣೆಯಲ್ಲಿ, ಮಹಾ ಸಾಧನೆಗೈದ,
ಎಲ್ಲರಲ್ಲಿ ಮಾತುಗಾರಿಕೆಯ ಬಗೆಗಿನ
ಎಚ್ಚರವನ್ನು ಮೂಡಿಸಿದ ಅಸಾಮಾನ್ಯ ಸಾಧಕ. ಭಾಷೆಗೆ ಅವರು ನೀಡಿದ
ಭಾವಶಕ್ತಿ, ಕನ್ನಡದ ಲಾಲಿತ್ಯ, ನಿಖರ ಉಚ್ಛಾರ, ಪ್ರತಿಯೊಂದು ಶಬ್ಧಕ್ಕೆ ನೀಡಿದ ಏರಿಳಿತ, ರಾಜಕುಮಾರರಿಗೆ
ರಾಜಕುಮಾರರೇ ಸಾಟಿ.
ಎಂತೆಂಥ ಸುಶೀಕ್ಷಿತರು,
ಭಾಷಾ ತಜ್ಞರು, ಉಪನ್ಯಾಸಕರು, ಪ್ರಾಂಶುಪಾಲರು ಎಂದೆನ್ನಿಸಿಕೊಂಡವರೂ, ಆಡುವ ಭಾಷೆಯನ್ನು ಅದೆಷ್ಟು
ಕಲುಷಿತಗೊಳಿಸಿ, ಭಾಷೆಗೇ ಅಪಚಾರಗೈಯ್ದ, ಅದೇ ಅಪಚಾರದಲ್ಲೇ ಮುಂದುವರೆಯುತ್ತಿರುವ ಸಂದರ್ಭದಲ್ಲಿ,
ನಮಗೆ ಮತ್ತೆ ಮತ್ತೆ ಸ್ಮರಣೆಗೆ
ಬರುವವರು ರಾಜಕುಮಾರರೇ. ಇವರ ಹಾಗೇ ರಾಜಕುಮಾರ್,
ವಿಶ್ವವಿದ್ಯಾವಂತರಲ್ಲ. ವಿಶ್ವವಿದ್ಯಾಲಯಕ್ಕೆ ಮಣ್ಣು ಹೊತ್ತವರಲ್ಲ. ಕೇವಲ ನಾಲ್ಕನೆ ತರಗತಿಗೆ
ತೃಪ್ತಿಪಡೆದ ಮನುಷ್ಯ. ವಿಶಾಲ ವಿಶ್ವವೇ
ಅವರ ಪಾಠಶಾಲೆ. ಚಿತ್ರರಂಗವೇ
ಅವರ ಗರಡಿಮನೆ. ಅದೆಷ್ಟೇ ಎತ್ತರಕ್ಕೇರಿದರೂ ನಾನಿನ್ನೂ
ಕಿರಿಯ ಎಂಬ ನಮ್ರತೆ.
ʻʻ ವೀರನಾರಾಯಣನೇ ಕವಿ, ನಾನು ಲಿಪಿಕಾರ ಮಾತ್ರʼʼ ಎಂದು ಉದ್ಘೋಷಿಸಿದ ಕುಮಾರವ್ಯಾಸ
ಮಹಾಕವಿಯ ವಿನಯ, ಇಲ್ಲಿ ನೆನಪಾಗುತ್ತದೆ. ಆದರೆ ಅವರಲ್ಲಿರುವ
ನುಡಿವಂತಿಕೆ, ನಡೆವಂತಿಕೆ, ಸೌಜನ್ಯ, ಸಚ್ಚಾರಿತ್ರ್ಯ, ಮತ್ತು ಬಂಧುತ್ವಗಳನ್ನು ಮತ್ತೆಲ್ಲಿ
ಕಾಣಲು ಸಾಧ್ಯ...? ಅಪ್ಪಟ ಕನ್ನಡವಂತಿಕೆಗೆ
ತಕ್ಕ ವ್ಯಕ್ತಿಯೊಬ್ಬರ ಉದಾಹರಣೆ ಬೇಕೆಂದರೆ
ರಾಜಕುಮಾರರನ್ನು ಬಿಟ್ಟು ಈ ಏಳು ಕೋಟಿ ಕನ್ನಡಿಗರಲ್ಲಿ ಮತ್ತೆ ಯಾರನ್ನು
ತೋರಿಸೋಣ....!!
ಒಮ್ಮೆ
ಕರ್ನಾಟಕ ಸರಕಾರ ಡಾ.ರಾಜಕುಮಾರರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿ, ಸ್ವೀಕರಿಸಲು ಆಮಂತ್ರಿಸುತ್ತಾರೆ. ರಾಜಕುಮಾರ್
ತಕ್ಷಣ ಪ್ರಶಸ್ತಿಯನ್ನು ನಿರಾಕರಿಸಿ, ಕನ್ನಡದ
ಮಹಾಕವಿ ಕುವೆಂಪುವಿಗೆ ನೀಡುವಂತೇ
ಕೇಳಿಕೊಳ್ಳುತ್ತಾರೆ. ಅವರನ್ನು ಬಿಟ್ಟು ತಾನು ಪ್ರಶಸ್ತಿ ಪಡೆಯುವುದು ಅಪರಾಧ.
ಎಂದೆನ್ನುತ್ತಾರೆ. ಅಂದಿನ ಪ್ರಶಸ್ತಿಯನ್ನು
ಕುವೆಂಪುವಿಗೆ ಮೊದಲು ನೀಡಿ, ನಂತರ
ರಾಜಕುಮಾರರಿಗೆ ಪ್ರದಾನ ಮಾಡಲಾಗುತ್ತದೆ.
ಕನ್ನಡಿಗರದ್ದಲ್ಲದ ಕನ್ನಡ ವಾಹಿನಿಗಳು, ಪತ್ರಿಕೆಗಳು
ರೂಢಿಸಿಕೊಂಡಿರುವ ಕಂಗ್ಲಿಶ್ ಹಿಂಗ್ಲಿಶ್
ಭಾಷೆಗಳ ಆಟಾಟೋಪ ಕಂಗೆಡಿಸುತ್ತಿವೆ. ಅಸಂಬದ್ಧ ಇಂಗ್ಲಿಶ್ ಅರಚಾಟವನ್ನು ತುರುಕಿ, ಪ್ರತಿಷ್ಠೆಮೆರೆಯುತ್ತಿರುವ ಇಂತಹ ಮಾಧ್ಯಮಗಳ ಬಗೆಗೆ ಏನನ್ನೋಣ...? ಮೆಟ್ರೋ
ಶಬ್ದವನ್ನು ರೂಢಿಗೆ ತಂದಿರುವ
ಸರಕಾರದ ನಡೆ, ರೇಜಿಗೆ ತರುತ್ತದೆ.
ಮೆಟ್ರೊ, ಮೆಟ್ಟು, ಎಂಬುದಕ್ಕೆ ಕನ್ನಡದಲ್ಲಿ, ತುಳಿ, ಪಾದರಕ್ಷೆ
ಎಂಬೆಲ್ಲ ಅರ್ಥಗಳಿವೆ. ನಮ್ಮಮೆಟ್ರೋ ಎಂಬ ಸುಪ್ರಸಿದ್ಧ
ನಾಮಧೇಯ, ʻʻ
ನಮ್ಮನ್ನು ತುಳಿಯಿರೋʼʼ ಎಂದು ಅರಚಿದಂತೇ
ಕೇಳುತ್ತದೆ. ಮೆಟ್ರೋ ಶಬ್ದ ಅಂತರರಾಷ್ಟ್ರೀಯವೇ ಆಗಿರಬಹುದು.
ಆದರೆ ಕನ್ನಡ ನೆಲದಲ್ಲಿ ಅದು ನೀಡುವ ಋಣಾತ್ಮಕ
ಅರ್ಥಮಾತ್ರ ಅಸಹನೆ ಮೂಡಿಸುತ್ತದೆ.
ಕೃತಜ್ಞತೆಗೆ ಬದಲಾಗಿ
ಕೃತಘ್ನತೆಯ ಅರ್ಪಣೆ, ಹಾಲನ್ನು
ಆಲನ್ನಾಗಿಸಿ, ಅಕ್ಕಿಯನ್ನು ಹಕ್ಕಿಯಾಗಿಸಿ,
ಶಬ್ದ ಅರ್ಥಗಳನ್ನೇ ಕುಲಗೆಡಿಸುವ
ಪ್ರಕ್ರಿಯೆ ಮುಂದುವರೆದಿರುವಾಗ, ಕನ್ನಡದ
ಬಗೆಗೆ ಕನಿಕರ ಮೂಡುತ್ತದೆ. ಕನ್ನಡದ ಮಹತ್ವದ
ಲೇಖಕ, ಬೋಳುವಾರು ಮಹಮ್ಮದ್
ಕುಂಞಿ, ಎಂಬ ಹೆಸರಲ್ಲಿಯ
ʻಞʼ ಅಕ್ಷರ ಉಚ್ಛರಿಸಲಾಗದೇ ಕುನ್ನಿ
ಎಂದು ಪ್ರಯೋಗಿಸುವ ಸುಶಿಕ್ಷಿತರ
ಮಾತು ಕೇಳಿದ ಅದೇ ಮಹನೀಯರು ವ್ಯಥೆಪಟ್ಟಿದ್ದಿದೆ.
ಡಾ.ರಾಜ್ ದೆಹಲಿಯಲ್ಲಿ
ಪ್ರತಿಷ್ಠಿತ ರಾಷ್ಟ್ರಮಟ್ಟದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಸ್ವೀಕರಿಸಿ, ಮುಂಬಯಿ ಕರ್ನಾಟಕ ಸಂಘದ
ಆಮಂತ್ರಣದ ಮೇರೆಗೆ ಮುಂಬಯಿಗೆ
ಆಗಮಿಸುತ್ತಾರೆ. ಅಂದು ಅವರು ರಂಗದ ಮೇಲೆ ʻʻ ಹುಟ್ಟಿದರೇ ಕನ್ನಡನಾಡಲ್ ಹುಟ್ಟಬೇಕು
ʼʼ ಹಾಡನ್ನು ತಮ್ಮ ಮಕ್ಕಳೊಂದಿಗೆ ನರ್ತಿಸಿ
ಕುಣಿದಾಡಿದ್ದನ್ನು ಇಂದಿಗೂ ಅಲ್ಲಿಯ
ಜನ ನೆನಪಿಸಿಕೊಳ್ಳುತ್ತಾರೆ. ನಂತರದ
ದಿನಗಳಲ್ಲಿ ನೂರಾರು ವೇದಿಕೆಗಳಲ್ಲಿ ಇದೇ ಹಾಡನ್ನು
ಅವರು ಹಾಡುತ್ತಾರೆ. ಕುವೆಂಪು ರವರ ʻʻ
ಕನ್ನಡವೇ ಸತ್ಯʼʼ ಪದ್ಯ ರಾಜ್ ರವರ ಮಧುರ ಕಂಠದಲ್ಲಿ ಕನ್ನಡಿಗರ
ಮನ ಮನೆ ತಲುಪಿತು.
ರಾಜ್ ರವರ ಅಪ್ರತಿಮ ನಟನೆಗೆ ಮಾರುಹೋದ ಹಿಂದಿ ನಟ ಅಮಿತಾಬ್ ಬಚ್ಚನ್ ಬಾಲಿವುಡ್
ಆಖಾಡಕ್ಕೆ ಆಹ್ವಾನಿಸುತ್ತಾರೆ. ಕನ್ನಡಪ್ರೇಮಿ
ರಾಜಕುಮಾರ್ ಈ ಆಹ್ವಾನವನ್ನು ನಯವಾಗಿ ತಿರಸ್ಕರಿಸುತ್ತಾರೆ. ಐವತ್ತರ
ದಶಕದಲ್ಲಿ ಬೇಡರ ಕಣ್ಣಪ್ಪ ಚಿತ್ರದ
ತೆಲಗು ಅವತರಣಿಕೆಯಲ್ಲಿ, ತೆಲಗು ರಂಗದ ಆತ್ಮೀಯ ಒತ್ತಾಸೆಗೆ ಮಣಿದು ಅಭಿನಯಿಸಿದ್ದನ್ನು
ಬಿಟ್ಟರೆ, ಅವರು ಜೀವನದಲ್ಲಿ ಎಂದೆಂದೂ ಪರಭಾಷೆಯ
ದಿಕ್ಕಿಗೆ ಮುಖ ಮಾಡಲಿಲ್ಲ.
೧೯೮೩ ಕರ್ನಾಟಕ ಐತಿಹಾಸಿಕ
ಚಳುವಳಿಯೊಂದನ್ನು ಕಂಡಿತು. ಅದು ಗೋಕಾಕ್
ಚಳುವಳಿ. ಕನ್ನಡದ ಮುಖ್ಯ ಸಾಹಿತಿಗಳೆಲ್ಲ ಒಗ್ಗೂಡಿ,
ಚಳುವಳಿಯನ್ನು ಹುಟ್ಟುಹಾಕಿದ್ದರೂ, ಜನಮಾನಸಕ್ಕೆ ತಲುಪಲಾಗದ ನಿಸ್ಸಹಾಯಕ
ಸ್ಥಿತಿಯಲ್ಲಿ, ರಾಜಕುಮಾರ್ ಪ್ರವೇಶಿಸಿದರು.
ನಾಡಿನ ಎಲ್ಲ ಪಟ್ಟಣ ನಗರಗಳಲ್ಲಿ ಅದೇ ಪ್ರಥಮ ಬಾರಿ
ರಾಜಕುಮಾರ್ ರವರ ಸುವರ್ಣ ನುಡಿ ಮೊಳಗಿತು. ಸಭೆಗಳು ಲಕ್ಷ ಲಕ್ಷ ಜನರಿಂದ ತುಂಬಿ ತುಳುಕಿತು. ರಾಜಕುಮಾರ್ ಸೃಷ್ಟಿಸಿದ ಬಿರುಗಾಳಿಯ
ಬಿಸಿ ಎಷ್ಟಿತ್ತೆಂದರೆ, ಸರಕಾರ ಚಳುವಳಿಯ
ಕೂಗಿಗೆ ಮಣಿದು, ಶಿಕ್ಷಣದ
ಪ್ರಮುಖ ಮಾಧ್ಯಮವಾಗಿ ಕನ್ನಡಭಾಷೆಯನ್ನು ಅಳವಡಿಸಿತು.
ಡಿ.ಗುರುಮೂರ್ತಿ ಹಾರೋಹಳ್ಳಿ ಎಂಬ ಲೇಖಕರೊಬ್ಬರು, ʻʻ ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಡಾ. ರಾಜಕುಮಾರ್ ಕೊಡುಗೆʼʼ
(೨೦೦೧) ಎಂಬ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ,
ಡಾಕ್ಟರೇಟ್ ಪಡೆಯುತ್ತಾರೆ. ಎ.ಎನ್ನ. ಪ್ರಹ್ಲಾದ್
ರಾವ್ ಎಂಬ ಲೇಖಕರೊಬ್ಬರು ʻʻ ಬಂಗಾರದ ಮನುಷ್ಯʼʼ ಎಂಬ
ರಾಜ್ ರವರ ಜೀವನ ವೃತ್ತಾಂತವೊಂದನ್ನು ಪ್ರಕಟಿಸುತ್ತಾರೆ.
(೨೦೦೬) ಅದೇ ಕೃತಿ, ʻʻಡಾ.
ರಾಜಕುಮಾರ್ ಇನ್ಮಿಟೇಬಲ್ ಆಕ್ಟರ್ ವಿಥ್
ಗೋಲ್ಡನ್ ವಾಯಿಸ್ ʼʼ ಎಂಬ ಹೆಸರಿನಲ್ಲಿ
ಇಂಗ್ಲಿಶಗೆ ಅನುವಾದಗೊಂಡು, ಅಮೇರಿಕಾದ ನ್ಯೂಜೆರ್ಸಿ ನಗರದಲ್ಲಿ ಅದ್ದೂರಿ ಬಿಡುಗಡೆಯಾಗುತ್ತದೆ. ಕನ್ನಡ ಚಿತ್ರ ನಟನ ಬಗೆಗೆ ಇಂಗ್ಲಿಶ್ ನಲ್ಲಿ ಪ್ರಕಟವಾದ ಪ್ರಥಮ ಕೃತಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.
ಸಹಸ್ರಮಾನದ ನಟರೆಂಬ
ಖ್ಯಾತಿ ಪಡೆದ ಅಮಿತಾಬ್ ರಂತೇ ರಾಜಕುಮಾರ್ ಕೂಡಾ ಅದಕ್ಕೆ ಪಾತ್ರರಾಗುವಂತಹ ಅನುಪಮ ಸಾಧನೆಗೈದರೂ ಅಂತರರಾಷ್ಟ್ರೀಯವಾಗಿ ಗುರುತಿಸದಂತಾಗಲು ಕನ್ನಡಿಗರ
ಪ್ರಯತ್ನದ ಸೋಲಿದೆ.
ರಾಜಧಾನಿಯ ಪ್ರಮುಖ ಬೀದಿಗೆ
ಅವರ ಹೆಸರಿಟ್ಟಿದ್ದೇವೆ. ರಾಜ್ಯದಾದ್ಯಂತ
ರಾಜ್ ಪುತ್ಧಳಿಯನ್ನು ಸ್ಥಾಪಿಸಿದ್ದೇವೆ.
ಆದರೆ ಅವರ ನ್ಯಾಯಯುತ
ಬದುಕನ್ನು ಮರೆತಿದ್ದೇವೆ.
ಆಧುನಿಕ ಬದುಕಿನ
ಶ್ರೀಸಾಮಾನ್ಯರ ಅತ್ಯಂತ ಪ್ರಮುಖ
ಮನರಂಜನಾ ಮಾಧ್ಯಮವಾದ ಸಿನಿಮಾ ರಂಗಕ್ಕೆ ಅದರದ್ದೇ ಆದ
ಜವಾಬ್ದಾರಿಯಿದೆ. ಅದು ಒಂದು ಉದ್ಯಮವೊಂದೇ
ಅಲ್ಲ. ಸಾರ್ವಜನಿಕ ಸಾಂಸ್ಕೃತಿಕ ಪಾಠಶಾಲೆಯೂ
ಹೌದು. ಸಿನಿಮಾ ನಾಯಕ ಪಾತ್ರಧಾರಿ, ಜನಸಾಮಾನ್ಯರ
ಮನಸ್ಸಿನಲ್ಲೂ ನಾಯಕನಾಗಿಯೇ ಪ್ರಭಾವ
ಬೀರುತ್ತಾನೆ. ನಾಯಕನ ಪಾತ್ರವೊಂದಲ್ಲದೇ ಆತನ ವೈಯಕ್ತಿಕ
ಜೀವನ ರೀತಿಯೂ ಸಹ, ಅಭಿಮಾನಿಗಳ
ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ
ಗಮನಿಸಿದರೆ, ರಾಜಕುಮಾರ್ ಇಡೀ ಲಲಿತಕಲಾ
ಜಗತ್ತಿನ ದೊರೆಯಾಗಿ ವಿಜ್ರಂಭಿಸುತ್ತಾರೆ. ವೈಯಕ್ತಿಕ
ಜೀವನದಲ್ಲೂ ನೈತಿಕತೆ ಪ್ರಾಮಾಣಿಕತೆ,
ಜೀವದಯೆ, ದಾನಪ್ರಜ್ಞೆ ಮತ್ತು ವಿನಯ
ಗುಣಗಳು ಸದಾ ಮಹಾ ಆದರ್ಶವಾಗಿ ನಮ್ಮೆದುರು
ನಿಂತಿವೆ.
ಫಾಲ್ಕೆ ಪ್ರಶಸ್ತಿಯಿಂದ ಬಂದ ಒಂದು
ಲಕ್ಷ ರೂಪಾಯಿಗಳನ್ನು ತಕ್ಷಣ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುತ್ತಾರೆ.
ಸುಪ್ರಸಿದ್ದ ಗಾಯಕರಾಗಿ ನೂರಾರು
ಹಾಡುಗಳನ್ನು ಹಾಡಿ ಮನತಣಿಸಿದ್ದೊಂದೇ ಅಲ್ಲದೇ
ಹಾಡಿನಿಂದ ಬಂದ ಹಣವನ್ನೆಲ್ಲ,
ಅಸಹಾಯಕ ಹೆಣ್ಣುಮಕ್ಕಳ ಕಲ್ಯಾಣ ನಿಧಿಗೆ ನೀಡಿ
ಹಾರೈಸುತ್ತಾರೆ.
ಚಲನ ಚಿತ್ರದಲ್ಲಿ
ಆದರ್ಶ ಪುರುಷರಾಗಿ ಮೆರೆಯುತ್ತಾ ನಿಜ ಜೀವನದಲ್ಲಿ ಅನೈತಿಕತೆಯ ಕೂಪಕ್ಕಿಳಿಯುತ್ತಿರುವ ವರ್ತಮಾನದ
ನಾಯಕನಟರುಗಳಿಗೆ ಡಾ.ರಾಜಕುಮಾರ್ ಬದುಕು ಮತ್ತು ಅವರ ಕಲಾಶೃದ್ಧೆ,
ಜನತೆಯನ್ನೇ ದೇವರೆಂದು ಗೌರವಿಸಿದ ಅವರ ಮಹಾನ್
ನೈತಿಕ ವರ್ತನೆ ಆದರ್ಶವಾಗಬೇಕಿತ್ತು.
ಇಡೀ ಚಿತ್ರರಂಗವೇ
ವ್ಯಾಪಾರೋದ್ಯಮವಾಗಿ, ಹಣ ಮತ್ತು ಪ್ರಚಾರಗಳಿಗೆ ಮಾರಿಹೋಗಿರುವ
ಕ್ರೂರ ವಾಸ್ತವದಲ್ಲಿ, ರಾಜಕುಮಾರ್ ಮತ್ತೊಮ್ಮೆ
ಅವತರಿಸ ಬಹುದಿತ್ತು. ಕಲಾರಂಗವನ್ನು ಮತ್ತೆ
ಶುಚಿಗೊಳಿಸಬಹುದಿತ್ತು, ಎಂದೆನ್ನಿಸಿದರೆ ಆಶ್ಚರ್ಯವೇನೂ ಇಲ್ಲ.
ಸುಮನಾಂಬರ
– ೧೦.
ಅಲ್ಲಿಯ ಬಲ್ಲಿದ ....... ಇಲ್ಲಿ ಸಲ್ಲಿದ,
ʻʻ ಸಾವಿರದ ನುಡಿಯಲ್ಲಿ
ಭಾವ ಬರ ಬರದಿರಲಿ
ನಾವಿರುವ ನೆಲದಲ್ಲಿ ಸತ್ವ ನೆಲೆಯೂರಲಿ.
ನೂರು ನುಡಿ ಗಡಣದಲಿ
ಮಿಂಚಲಿ ಚೆನ್ನುಲಿ
ಮೇರು ಪರ್ವತವಾಗಿ ಮೆರೆದಾಡಲಿ.ʼʼ
ಮನೆತನ ಮಹಾಸಾಮ್ರಾಜ್ಯ ಮಠ ಮಂದಿರಗಳಿಗೆ
ಏರು ಇಳಿವು, ಸೃಷ್ಟಿ ನಾಶ ವಿದ್ದಂತೇ ಭಾಷೆಗೂ ಸಹ ಸಾಕಷ್ಟು ಸೋಲು ಗೆಲುವುಗಳಿವೆ. ವೈಭವ ವಿನಾಶಗಳಿವೆ. ಕೇವಲ ನೂರೈವತ್ತು
ವರ್ಷಗಳ ಹಿನ್ನೋಟಗೈದರೆ ಸಾಕು, ಕನ್ನಡದಂಥಹ ಭಾರತೀಯ ಭಾಷೆಗಳು ಅದೆಷ್ಟು ದಯನೀಯ ಸ್ಥಿತಿಯಲ್ಲಿ ಇತ್ತೆಂದರೆ, ಅವೆಂದೂ
ಪ್ರಗತಿಯನ್ನು ಕಾಣದೇ ಕತ್ತಲೆಗೆ ಸೇರಬಹುದೆಂದು
ಅನ್ನಿಸುತ್ತಿತ್ತು.
ಘೋರ ಕತ್ತಲೆಯಲ್ಲಿ,
ಅರಣ್ಯದ ದಾರಿಯಲ್ಲಿ ದಿಕ್ಕು ತಪ್ಪಿ
ಹೈರಾಣಾಗಿ ಕುಳಿತ ದಾರಿಹೋಕನಿಗೆ
ಅದೆಲ್ಲಿಂದಲೋ ಹಿಲಾಲು ಹೊತ್ತ ವ್ಯಕ್ತಿಯೊಬ್ಬ
ಬಂದು, ದಿಕ್ಕು ತಪ್ಪಿದ ಮನುಷ್ಯನನ್ನು ಸುರಕ್ಷಿತವಾಗಿ
ಊರು ತಲುಪಿಸುವಂತೇ ೧೮೫೦ ರ ದಶಕದಲ್ಲಿ, ʻʻ ಲೂಯಿಸ್ ರೈಸ್ʻʻ ಎಂಬ ವಿಶ್ವಪ್ರಸಿದ್ಧ ಇತಿಹಾಸ ಸಂಶೋಧಕ, ಶಿಕ್ಷಣ ತಜ್ಞರ ಗಮನ ಕನ್ನಡ
ಭಾಷೆಯ ಆಳಕ್ಕೆ ಪ್ರವೇಶಿಸಿದ್ದು ಕನ್ನಡ ಭಾಷೆಯ ಸುಯೋಗ.
ಹಾಗೆಂದು ಭಾರತೀಯ
ಸಮಗ್ರ ಸಂಶೋಧನಾ ಕ್ಷೇತ್ರಕ್ಕೆ ಪಾಶ್ಚಿಮಾತ್ಯರ
ಕೊಡುಗೆ ಲೆಕ್ಕವಿಲ್ಲದಷ್ಟಿದೆ. ನೂರಾರು
ಸಂಶೋಧಕ ಪ್ರತಿಭೆಗಳು, ಸಾಹಿತ್ಯ ಸಂಸ್ಕೃತಿ ಪರಿಸರ ಮತ್ತು
ಜನಾಂಗೀಯ ಸಂಶೋಧನೆಗಳಲ್ಲಿ ತಮ್ಮ ಬದುಕನ್ನೇ
ಅರ್ಪಿಸಿದ್ದಾರೆ. ಬ್ರಿಟೀಶರು ನಮ್ಮನ್ನು ಆಕ್ರಮಿಸಿ, ದಾಸ್ಯಕ್ಕೊಳಪಡಿಸಿ, ಇಲ್ಲಿಯ
ಸಂಪತ್ತನ್ನು ಲೂಟಿಗೈದರು, ಕ್ರೂರವಾಗಿ ಶೋಷಿಸಿದರು, ಎಂಬುದು
ಸತ್ಯವಿದ್ದರೂ, ಅವರು ನೀಡಿದ ಅತ್ಯಾಧುನಿಕ
ಶಿಕ್ಷಣ ಪದ್ಧತಿ, ಸಂಶೋಧನಾ ದೃಷ್ಟಿ,
ಮತ್ತು ಚರಿತ್ರೆಯನ್ನು ಅರಿತುಕೊಳ್ಳುವ ಅದಮ್ಯ ಉತ್ಸಾಹ
ಅನುಕರಣೀಯವಾದದ್ದು.
ಸಾಂಸ್ಕೃತಿಕ ಭೌಗೋಲಿಕ
ವೈಜ್ಞಾನಿಕ ಸಂಶೋಧನೆಗಳಲ್ಲಿ ಅವರ ಅರ್ಪಣಾ
ಮನೋಭಾವ, ಕಾರ್ಯದಕ್ಷತೆ, ಪ್ರಾಮಾಣಿಕತೆ ಮತ್ತು ಕ್ರಿಯಾಶೀಲ ಗುಣಗಳು
ಇಂದಿಗೂ ನಮಗೆ ದಾರಿ ದೀಪಗಳೇ. ಅವರು ಸಾಧಿಸಿದ ಭಾರತದ ಸರ್ವೇ
ಅಭಿಯಾನ, ಪ್ರಾಚೀನ ಅರ್ವಾಚೀನ
ಭಾಷೆ ಸಂಸ್ಕೃತಿಗಳ ಆಳ ಅಧ್ಯಯನಕ್ಕೆ ಸಮನಾಗಿ
ನಂತರದ ದಿನಗಳಲ್ಲಿ ನಡೆಯದಿದ್ದುದು
ವಿಷಾದನೀಯ.
ಹತ್ತೊಂಬತ್ತನೆಯ ಶತಮಾನದ
ಪ್ರಾರಂಭದ ದಶಕದಲ್ಲೇ ಜಾನ್ ಫ್ಲೀಟ್ ಎಂಬ ಮಹನೀಯ ಕರ್ನಾಟಕದಲ್ಲಿ,
ಶಾಸನಗಳ ಅನ್ವೇಷಣೆ ಮತ್ತು ಅಧ್ಯಯನಕ್ಕೆ ನಾಂದಿಹಾಡಿದ್ದರು. ಅದು ಅರ್ಧಕ್ಕೇ ನಿಂತಿತ್ತು.
ಅದೇ ಕಾಲಕ್ಕೆ ಬಿ.ಎಲ್.ರೈಸ್
ಎಂಬ ಯುವ ಸಂಶೋಧಕನ
ಪ್ರವೇಶವಾಯಿತು. ಗತೇತಿಹಾಸದ ಕತ್ತಲೆಯಲ್ಲಿ
ಮುಳುಗಿಹೋಗಿದ್ದ ರೋಚಕ ಕರ್ನಾಟಕದ
ಚರಿತ್ರೆಗೆ ಶಾಪವಿಮೋಚನೆಯಾಯಿತು.
ಇಂಗ್ಲೆಂಡಿನಿಂದ ಧರ್ಮಪ್ರಚಾರಕ್ಕಾಗಿಯೇ ನೇಮಕಗೊಂಡಿದ್ದ ಬೆಂಜಮಿನ್ ಎಂಬ ಪಾ
ದ್ರಿ ಬೆಂಗಳೂರಿನ ಚರ್ಚ ಒಂದರಲ್ಲಿ ಸೇವೆ ಸಲ್ಲಿಸುತ್ತಿದ್ದ. ಆತನ ಮಗನೇ ಲೂಯಿಸ್ ರೈಸ್. ಲೂಯಿಸ್ ಹುಟ್ಟಿದ್ದು ಬೆಂಗಳೂರಿನಲ್ಲೇ.(೧೮೩೬) ಇಲ್ಲಿಯ
ಕನ್ನಡ ಭಾಷೆಯಲ್ಲೇ ಆತನ ಪ್ರಾಥಮಿಕ ಶಿಕ್ಷಣವಾಯಿತು.
ನಂತರದ ಶಿಕ್ಷಣಕ್ಕಾಗಿ ಆತನನ್ನು ಇಂಗ್ಲೆಂಡಿಗೆ ಕಳುಹಿಸಲಾಯಿತು.
ಅಲ್ಲಿ ಪದವಿಯವರೆಗಿನ ಶಿಕ್ಷಣವಾದರೂ ಲೂಯಿಸ್
ನ ಕನ್ನಡಪ್ರೇಮ, ಮತ್ತು ಕರ್ನಾಟಕದ ಸೆಳೆತ ಮತ್ತೆ
ಬೆಂಗಳೂರಿಗೇ ಸೆಳೆಯಿತು.
೧೮೬೦ ರಲ್ಲಿ ಬೆಂಗಳೂರಿಗೆ ಆಗಮಿಸಿದ
ಲೂಯಿಸ್ ರೈಸ್, ಶಾಲಾ ಇನ್ಸ್ಪೆಕ್ಟರ್
ಹುದ್ದೆಯನ್ನು ನಿರ್ವಹಿಸುತ್ತಲೇ ಕನ್ನಡ ಸಂಸ್ಕೃತಿ
ಮತ್ತು ಭಾಷೆಯ ಬಗೆಗಿನ ಸಂಶೋಧನೆಯನ್ನು ಕೈಗೊಳ್ಳತೊಡಗುತ್ತಾನೆ. ತನ್ನ ತೊಂಭತ್ತೊಂದು ವರ್ಷದ ಸುದೀರ್ಘ ಜೀವಿತಾವಧಿಯಲ್ಲಿ ಆತ ಸಂಗ್ರಹಿಸಿದ ಕರ್ನಾಟಕದ
ಐತಿಹಾಸಿಕ ವಿವರಗಳ ಯಾದಿಯನ್ನು ಗಮನಿಸಿದರೆ,
ಯಾವುದೇ ಒಂದು ವಿಶ್ವವಿದ್ಯಾಲಯ ಮಾಡಲಾಗದ
ಸಂಶೋಧನಾ ಚಟುವಟಿಕೆಯನ್ನು ಬಿ.ಎಲ್.ರೈಸ್ ಕೈಗೊಳ್ಳುತ್ತಾರೆ.
ಕರ್ನಾಟಕದ ಇಂಚಿಂಚು ನೆಲವನ್ನು ಸಂದರ್ಶಿಸಿ, ಗುಡ್ಡಗಾಡು, ಹಳ್ಳಿ ಪಟ್ಟಣಗಳನ್ನು ಸಂದರ್ಶಿಸಿ ಆತ್ಮೀಯವಾಗಿ ಸಾಮಾನ್ಯಜನರ ಸಂಪರ್ಕ ಗಳಿಸಿ,
ಸಾಂಸ್ಕೃತಿಕ ಚಾರಿತ್ರಿಕ ವಿವರಗಳನ್ನು ಸಂಗ್ರಹಿಸಿದ ಕೈಂಕರ್ಯ
ಅದೊಂದು ಮಹಾನ್
ದಾಖಲೆ. ಅವನ ನಂತರದಲ್ಲಿ ಒಬ್ಬ ಏಕೈಕ ವ್ಯಕ್ತಿ ಇಷ್ಟೊಂದು
ಅಗಾಧ ಸಂಶೋಧನೆಗೈದ ಉದಾಹರಣೆಯೇ
ಇಲ್ಲ.
ನೇಪಾಳವನ್ನು ಆಳಿದ ಗಂಗ ವಂಶದಬಗೆಗೆ, ಬಂಗಾಲದಲ್ಲಿ ರಾಜ್ಯಾಧಿಕಾರ ವಹಿಸಿದ ಕನ್ನಡಿಗ ಸೇನ್ ರಾಜಮನೆತನದ ರೋಚಕ ಸಂಗತಿಯನ್ನು
ಅದೇ ಮೊದಲಬಾರಿಗೆ ತಿಳಿಸಿದ ವ್ಯಕ್ತಿ ಅವರು. ಒಂದು ಕಾಲದಲ್ಲಿ ಕಾಶ್ಮೀರ
ಬಿಹಾರ ನೇಪಾಳ ಬಂಗಾಲ ಪ್ರದೇಶಗಳೊಂದಿಗಿನ ಕನ್ನಡದ
ಸಂಬಂಧ ಮತ್ತು ಗ್ರೀಸ್ ದೇಶದವರೆಗಿನ ವ್ಯಾಪಾರೀ
ಸಂಪರ್ಕ ಈ ಎಲ್ಲ ಸಂಗತಿಗಳು ಕನ್ನಡಿಗರನ್ನು ರೋಮಾಂಚನ ಗೊಳಿಸಿತು.
ಆ ಕಾಲದಲ್ಲಿ
ತಮಗೆ ಸಹಾಯಕರಾಗಿ ಕರ್ತವ್ಯನಿರ್ವಹಿಸಲು ಸ್ಥಳೀಯ
ಸಂಶೋಧಕರ ದೊಡ್ಡ ಪಡೆಯನ್ನೇ ಸೃಷ್ಟಿಸಿದರು.
ಅಯ್ಯಾ ಶಾಸ್ತ್ರಿ, ವೆಂಕಣ್ಣಾಚಾರ್ಯ, ಪರಮಶಿವ
ಅಯ್ಯರ್, ನಟೇಶ್ ಶಾಸ್ತ್ರಿ ಮುಂತಾದವರು ಲೂಯಿಸ್ ರೈಸ್ ರವರೊಂದಿಗೆ ಕೈಗೂಡಿಸಿದರು.
ರೈಸ್ ರವರ ಪಟ್ಟ ಶಿಷ್ಯ ಆರ್ ನರಸಿಂಹಾಚಾರ್ಯ
ರವರ ಸಂಶೋಧನಾ ಸಹಾಯವನ್ನು ಅವರು ಆತ್ಮೀಯವಾಗಿ ಸ್ಮರಿಸುತ್ತಾರೆ.
ಸಂಶೋಧಕ ರೈಸ್ ಒಮ್ಮೆ ಪ್ರಾಚೀನ ಸ್ಮಾರಕಗಳ ಬಗೆಗೆ ಒಂದು
ದೊಡ್ಡ ಅಭಿಯಾನವನ್ನೇ ಕೈಗೊಳ್ಳುತ್ತಾರೆ. ಅದು ಅವಿರತ ೨೪೫ ದಿನ ಹಗಲು ರಾತ್ರಿ
ನಡೆಯುತ್ತದೆ. ತಮ್ಮ ಕನ್ನಡಿಗ ಸಂಗಾತಿಗಳೊಂದಿಗೆ ಅವರು ನಿರ್ವಹಿಸಿದ ಈ ಅಭಿಯಾನ ವಿಶ್ವದಾಖಲೆಯಾಯಿತು. ಕರ್ನಾಟಕದ ದಕ್ಷಿಣ ಭಾಗದಲ್ಲೊಂದೇ
೬೪೫ ಶಾಸನಗಳು ದೊರಕಿದವು.
ತಾಮ್ರಪತ್ರಗಳು, ಕಡತಗಳು, ಪ್ರಾಚೀನ ನಾಣ್ಯಗಳು ಮತ್ತು ಇನ್ನಿತರ
ಐತಿಹಾಸಿಕ ದಾಖಲೆಗಳೂ ಈ ಅಭಿಯಾನದಲ್ಲಿ
ಸೇರಿದ್ದವು. ರೈಸ್ ರವರು ತಮ್ಮ ಜೀವಿತಾವಧಿಯಲ್ಲಿ ಸಂಗ್ರಹಿಸಿದ
ಶಾಸನಗಳ ಸಂಖ್ಯೆಯೇ ೯೦೦೦. ನಮ್ಮ ರಾಜ್ಯದ
ಇತಿಹಾಸದ ಪುಟದಲ್ಲಿ ʻʻ ಶಾಸನಗಳ ಪಿತಾಮಹ “
ಎಂಬ ಬಿರುದಿಗೆ ಪಾತ್ರರಾದ ಏಕೈಕ ಸಂಶೋಧಕರು
ಅವರು.
ಆ ಕಾಲದಲ್ಲಿ ಪ್ರಾಚೀನ ಪರಿಕರಗಳ
ಬಗೆಗೆ ಅದೆಷ್ಟು ಅಜ್ಞಾನ ಸಾಮಾನ್ಯರಲ್ಲಿ ಮನೆಮಾಡಿತ್ತು ಎಂಬುದನ್ನು ಅವರ ಬರಹಗಳು ತಿಳಿಸುತ್ತವೆ. ಪ್ರಮುಖ
ಶಾಸನ ಕಲ್ಲುಗಳು ಯಾರದೋ ಮನೆಯ ಬಚ್ಚಲು
ಕಲ್ಲುಗಳಾಗಿದ್ದವು. ಹಳ್ಳಕ್ಕೆ ಸಂಕಗಳಾಗಿದ್ದವು. ತಾಡವೋಲೆ ಗ್ರಂಥಗಳು ಪೂಜಾಪೆಟ್ಟಿಗೆಯಲ್ಲಿ ಗೆದ್ದಲುಗಳಿಗೆ
ಆಹಾರವಾಗುತ್ತಿದ್ದವು. ಅಂಥ ಸ್ಥಳದಿಂದಲೇ
ಆಶೋಕನ ಶಾಸನ, ಕದಂಬರ ದಾಖಲೆಗಳು, ಅಮೂಲ್ಯ ಪ್ರಾಚೀನ ನಾಣ್ಯಗಳು ದೊರಕಿದ್ದು.
ಅವುಗಳ ಸಚಿತ್ರ ವಿವರಗಳನ್ನು ಹೊಂದಿದ
ಹನ್ನೆರಡು ಸಂಪುಟಗಳನ್ನು ಇಂಗ್ಲಿಶ್ ಕನ್ನಡದ
ವಿವರಗಳೊಂದಿಗೆ ಪ್ರಕಟಿಸುತ್ತಾರೆ. ( ಎಫಿಗ್ರಾಫಿಯಾ
ಕರ್ನಾಟಿಕಾ). ತನ್ನ ಈ ಕೆಲಸ ಪ್ರಾರಂಭವಷ್ಟೇ. ಇನ್ನೂ ಸಾಕಷ್ಟು ಸಂಶೋಧನೆಗಳು ಉಳಿದಿವೆ.
ಮುಂದಿನ ತಲೆಮಾರು ಕೈಗೂಡಿಸಬೇಕು, ಎಂಬ ಅಪೇಕ್ಷೆಯನ್ನು
ತಮ್ಮ ಕೃತಿಗಳಲ್ಲಿ ವ್ಯಕ್ತಗೊಳಿಸಿದ್ದರು. ಆದರೆ ರೈಸ್ ನಂತರ
ಕರ್ನಾಟಕದ ನದಿಗಳಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ.
ಅವರೊಂದಿಗೇ ಅಷ್ಟು ಪ್ರಾಮಾಣಿಕ, ಅಸಕ್ತಿಪೂರ್ಣ ಅರ್ಪಣಾ ಮನೋಭಾವದ ಸಂಶೋಧಕರು
ಈ ಮಣ್ಣಿನಲ್ಲಿ ಹುಟ್ಟಿಬಂದಿಲ್ಲ.
ಅದೇ ಮೊದಲ ಬಾರಿಗೆ
ಮಹಾಕವಿ ಪಂಪ ಕನ್ನಡಿಗರಿಗೆ
ಪರಿಚಯಗೊಳ್ಳುತ್ತಾನೆ. ಕುಮಾರವ್ಯಾಸ ಕನ್ನಡಿಗರ
ಮನಸ್ಸಿನಲ್ಲಿ ನೆಲೆನಿಂತಿದ್ದ. ಆದರೆ ಪಂಪನ ವಿಕ್ರಮಾರ್ಜುನ ವಿಜಯ,(ಪಂಪ ಭಾರತ, ಪಂಪ ರಾಮಾಯಣ) ವನ್ನು ಜನ ಮರೆತಿದ್ದರು. ಪಂಪ ಜೈನ. ವೈದಿಕರು
ಆತನನ್ನು ದೂರೀಕರಿಸಿದರು. ಜೈನರು ವೈದಿಕ ಕಾವ್ಯವೆಂದು ಅಲಕ್ಷಿಸಿದರು. ಕೇವಲ ಧಾರ್ಮಿಕ ಕಾರಣದಿಂದ ಜನಮಾನಸದಿಂದ
ದೂರಗೊಂಡಿದ್ದ, ಅನುಪಮ ಕೃತಿಯೊಂದು
ಕತ್ತಲೆಯ ಗರ್ಭ ಸೇರಿತ್ತು. ಬಿ.ಎಲ್.ರೈಸ್ ಅದನ್ನು ಪರಿಷ್ಕರಿಸಿ ಪ್ರಕಟಿಸಿದ. ಪಂಪನನ್ನು ಕನ್ನಡದ ಆದಿಕವಿ ಪಟ್ಟಕ್ಕೇರಿಸಿದ ಕೀರ್ತಿ
ಅವರ ಪಾಲಿಗೆ ಒದಗಿ ಬಂದಿತು.
ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ
ತೆರಳಿದ್ದ ಯುವಕ ರೈಸ್, ೧೮೮೦ ರಲ್ಲಿ ಬೆಂಗಳೂರಿಗೆ ಮರಳಿದಾಗ
ಬ್ರಿಟಿಶ್ ಅಧಿಕಾರಿಯೊಬ್ಬರು ಕನ್ನಡ ಭಾಷೆಯ
ಬಗೆಗೆ ಕೀಳಾಗಿ ಮಾತನಾಡುತ್ತಾರೆ ಕನ್ನಡ
ತಮಿಳಿನ ಉಪಭಾಷೆ. ಅತೀ ಕನಿಷ್ಠ ಭಾಷೆ ಎಂಬ ಅಭಿಪ್ರಾಯ ಅವರಿಂದ ಬಂದಾಗ,
ರೈಸ್ ಖಿನ್ನರಾಗುತ್ತಾರೆ. ಭಾಷೆಯ ಬಗೆಗಿನ ಆಸಕ್ತಿ ತೀವ್ರ ಗೊಳ್ಳುತ್ತದೆ. ನಂತರದಲ್ಲಿ ಅವರು ತಿರುಗಿ
ನೋಡಲಿಲ್ಲ. ಮರೆಯಾಗಿ ಹೋಗಿದ್ದ ೩೦೦ ಕವಿಗಳನ್ನು ಪರಿಚಯಿಸುತ್ತಾರೆʻ
ಕರ್ನಾಟಕ ಕವಿಚರಿತೆʼ ಎಂಬ ಕೃತಿಯನ್ನು ಇಂಗ್ಲಿಶ್ ನಲ್ಲಿ ಪ್ರಕಟಿಸುತ್ತಾರೆ.
ರೈಸ್ ಭಾರತದಲ್ಲೇ
ಪ್ರಥಮವಾಗಿ, ಮೈಸೂರು ಗೆಜೆಟಿಯರ್ ಪ್ರಕಟಿಸುತ್ತಾರೆ. ಅದೆಷ್ಟು ವಿವರಪೂರ್ಣತೆ, ವೈಜ್ಞಾನಿಕತೆ, ಮತ್ತು ನಿಖರ ವಿಷಯಗಳನ್ನೊಳಗೊಂಡಿತ್ತೆಂದರೆ,
ದೇಶದ ಉಳಿದೆಲ್ಲ ರಾಜ್ಯಗಳಿಗೆ ಅದೇ ಮಾದರಿಯಾಯಿತು.
ಶಾಲಾಶಿಕ್ಷಣದಲ್ಲಿ ವ್ಯವಸ್ಥಿತ
ಕನ್ನಡ ಪಠ್ಯಪುಸ್ತಕಗಳ ಕೊರತೆಯನ್ನು ಗಮನಿಸಿದ
ರೈಸ್, ಭಾಷೆ, ವಿಜ್ಞಾನ ಕಲೆ ಮತ್ತು ಗಣಿತ ವಿಷಯಗಳ ಪಠ್ಯಗಳನ್ನು ರಚಿಸುತ್ತಾರೆ. ಶಬ್ದಾನುಶಾಸನ,
ಅಮರಕೋಶ, ಕವಿರಾಜಮಾರ್ಗ ದಂತಹ ಕನ್ನಡದ
ಅಮೂಲ್ಯ ಕೃತಿಗಳನ್ನು ಪ್ರಕಟಿಸುತ್ತಾರೆ.
ಅವರ ಸೂಚನೆಯ
ಮೇರೆಗೆ ದೇಶದಲ್ಲಿ ಅದೇ ಮೊದಲು ಪ್ರಾಚ್ಯಪುರಾತತ್ವ ಇಲಾಖೆಯನ್ನು ಮೈಸೂರು ರಾಜ್ಯ ಸರಕಾರ ರಚಿಸುತ್ತದೆ.
ಅದರ ಮುಖ್ಯಸ್ಥರಾಗಿ ರೈಸ್ ರವರೇ
ಕಾರ್ಯನಿರ್ವಹಿಸುತ್ತಾರೆ. ರೈಸ್ ರವರ ಸಂಶೋಧನಾಸಕ್ತಿ, ಆಳ ಅಧ್ಯಯನ
ಶೀಲತೆ, ಉತ್ಕಟ ಕನ್ನಡಾಭಿಮಾನ,
ಮತ್ತು ಅರ್ಪಣಾ ಮನೋಭಾವಗಳು , ಅದೊಂದು ಶ್ರೇಷ್ಠ
ಮಾದರಿ.
ಅವರ ಭಾಷೆ ಅಕಲ್ಮಷವಾಗಿತ್ತು. ಭಾಷಣ ಉದ್ಭೋದಕವಾಗಿತ್ತು. ಸಾಮಾನ್ಯಜನರೊಂದಿಗಿನ ಅವರ ಒಡನಾಟ ಸಾಮಾನ್ಯನಲ್ಲೂ
ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ಅಭಿಮಾನವನ್ನು ಉತ್ತೇಜಿಸುತ್ತಿತ್ತು. ರೈಸ್ ರವರ
ಮಡದಿಯೂ ಸಹ ಕನ್ನಡ ಕಲಿತು,
ಹೆಣ್ಣುಮಕ್ಕಳ ಶಿಕ್ಷಣಾಭಿಯಾನವನ್ನು ಪ್ರಾರಂಭಿಸುತ್ತಾರೆ. ಸ್ವಥಃ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ರೈಸ್ ರೊಂದಿಗೆ
ಕ್ಷೇತ್ರಾಧ್ಯಯನದಲ್ಲಿ ತಾವೂ ತೊಡಗಿಕೊಳ್ಳುತ್ತಾರೆ. ಅಂತಹ ಅನುರೂಪ
ದಾಂಪತ್ಯ ರೈಸ್ ರವರದ್ದು.
ಅಪ್ರತಿಮ ಸಾಧಕ ಬಿ.ಎಲ್.ರೈಸ್
ರ ಬಗೆಗೆ
ಕನ್ನಡದ ಸುಪ್ರಸಿದ್ಧ ಸಾಹಿತಿ ಶಿಕ್ಷಣ ತಜ್ಞ
ಎ.ಆರ್. ಕೃಷ್ಣಶಾಸ್ತ್ರಿ ಯವರು ಆಡಿದ ಮಾತು ಇಲ್ಲಿ ನೆನಪಾಗುತ್ತಿದೆ.
``ಕನ್ನಡದಲ್ಲೇ ಹುಟ್ಟಿ ಬೆಳೆದು ಮಣಗಟ್ಟಲೇ
ಉಪ್ಪುತಿಂದ ಯಾವುದೇ ಕನ್ನಡಿಗ
ಈವರೆಗೆ ದೇಶಕ್ಕೆ ಇಷ್ಟು ಉಪಕಾರ ಮಾಡಿದ ಒಂದೂ ಉದಾಹರಣೆಯಿಲ್ಲʼʼ
ಸು.ಮ. ತಾ- ೧೬-೧೦-೨೦೨೫.
ಸುಮನಾಂಬರ ೧೧
ʻʻಯೆಂಡ್ಗುಡ್ಕ- ರತ್ನ, ಕೇಳ್ಬುಡಿ
ಅವನ್ ಮಾತ್ನʼʼ
ನರಕಕ್ ಇಳ್ಸಿ ನಾಲ್ಗೆ
ಸೀಳ್ಸಿ / ಬಾಯ್ ಒಲಿಸಾಕಿದ್ರೂನೆ –
ಮೂಗ್ನಲ್ ಕನ್ನಡ್ ಪದವಾಡ್ತೀನಿ
! / ನನ್ ಮನಸನ್ ನೀ
ಕಾಣೆ ! /
ಯೆಂಡಾ ಓಗ್ಲಿ!
ಎಂಡ್ತಿ ಓಗ್ಲಿ / ಎಲ್ಲಾ ಕೊಚ್ಕೊಂಡ್ ಓಗ್ಲಿ /
ಪರಪಂಚ್ ಇರೋತನಕ ಮುಂದೆ /
ಕನ್ನಡ ಪದಗೋಳ್ ನುಗ್ಲಿ //
ಇಪ್ಪತ್ತನೇ
ಶತಮಾನದ ವಿದ್ಯಾರ್ಥಿಗಳೆಲ್ಲ ತಮ್ಮ ಪ್ರಾಥಮಿಕ ತರಗತಿಗಳಲ್ಲಿ, ಆಡಿದ ಹಾಡಿದ ನಲಿದಾಡಿದ
ಪದ್ಯಗಳಮೂಲಕ, ಬದುಕಿಡೀ ನೆನಪಿನಲ್ಲಿ
ಹಸಿರಾಗಿ ವಾಸಿಸಿರುವ ಜಿ.ಪಿ. ರಾಜರತ್ನಂ,( ೧೯೦೯- ೧೯೭೯) ಅರ್ಧ ಶತಮಾನಗಳ ಕಾಲ ಮಕ್ಕಳ
ಮನೋಜಗತ್ತನ್ನು ಆಳಿದವರು.
ʻʻ ನಾಯಿಮರಿ ನಾಯಿಮರಿ ತಿಂಡಿಬೇಕೇ,
ಒಂದು ಎರಡೂ ಬಾಳೆಯ ಹರಡು, ಹತ್ತು ಹತ್ತೂ
ಇಪ್ಪತ್ತು, ತೋಟಕೆ ಹೋದನು ಸಂಪತ್ತು, ಬಣ್ಣದ ತಗಡಿನ ತುತ್ತೂರಿ, ರೊಟ್ಟೀ
ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟೀ ತಟ್ಟಪ್ಪ, ʼʼ
ಛಂದೋಬದ್ಧ, ಲಯಪೂರ್ಣ ಸರಳ ಸುಂದರ,
ನವಿರುತನಗಳಿಂದ, ಒಂದು ಕಾಲದ ಮಕ್ಕಳನ್ನು
ಮಂತ್ರಮುಗ್ಧಗೊಳಿಸಿದ ಇಂತಹ ಸಾಕಷ್ಟು
ಪದ್ಯಗಳು, ತಲೆಮಾರು ತಲೆಮಾರನ್ನೇ
ದಾಟಿ ದಾಟಿ, ಕವಿತೆಯ
ಬಗೆಗಿನ ಅಭಿರುಚಿಯನ್ನು ಬೆಳೆಸಿ ಉಳಿಸಿದ
ಅನುಪಮ ಮಗುತನದ ಕವಿತೆಗಳು ಅವು.
ಆಧುನಿಕ
ಕನ್ನಡ ಸಾಹಿತ್ಯದ ಇತಿಹಾಸದಲ್ಲಿ
ರಾಜರತ್ನಂರವರ ಸೃಜನಶೀಲ ಸಾಧನೆ,
ಸದಾ ಜೀವಂತವಾಗಿ, ವಿದ್ಯುನ್ಮಾನ ಯುಗವಾದ
ಇಪ್ಪತ್ತೊಂದನೆಯ ಶತಮಾನದಲ್ಲೂ, ಭಾಷೆ ಮತ್ತು
ಸಂಸ್ಕೃತಿಯ ಬಗೆಗಿನ ಎಚ್ಚರವನ್ನ
ಜಾಗ್ರತ ಗೊಳಿಸುತ್ತಲೇ ಇದೆ.
ರಂಜನೆಯ ಜೊತೆಗೆ
ಚಿಂತನೆ, ಸರಳತೆಯ ಒಡಲಲ್ಲಿ
ಸೂಕ್ಷ್ಮತೆ, ಸಂಕ್ಷಿಪ್ತತೆಯಲ್ಲೂ ಸಮಗ್ರತೆಯನ್ನು
ಪಡೆದ ಅವರೆಲ್ಲ ಗದ್ಯ ಪದ್ಯಗಳು,
ಒಮ್ಮೆ ಸ್ಪರ್ಶಿಸಿದರೆ ಬದುಕಿಡೀ ಸಾಂಗತ್ಯ ನೀಡುವ ಶಕ್ತಿ ಪಡೆದಿವೆ. ಕೆ.ಎಸ್.ನರಸಿಂಹ ಸ್ವಾಮಿಯವರ ʻʻ ಮೈಸೂರು ಮಲ್ಲಿಗೆʼʼ
ಪದ್ಯಗಳಂತೇ ರಾಜರತ್ನಂ ರ ಎಂಡ್ಕುಡ್ಕ ರತ್ನನ ಪದಗಳು ಕನ್ನಡ ನಾಡಿನ
ಮನ ಮನೆಗಳಲ್ಲಿ ಮೊಳಗುತ್ತಲೇ
ಇವೆ. ೧೯೩೨ ರಲ್ಲಿ, ಆಡುಮಾತಿನ ಇಂತಹ ಕವನಗಳ
ರಚನೆ ರಾಜರತ್ನಂ ಮತ್ತು ಬೇಂದ್ರೆಯವ ರಿಂದಲೇ ಮೊದಲಾಯಿತೆನ್ನಬಹುದು.
ನಾಯ್ಗೆ ನಾಯೇ ತಿಂತೈತಂತೆ !/ ಮೀನ್ಗೆ ಮೀನೇ ತಿಂಡಿ /
ಮನ್ಸನ್ ಮನ್ಸ ತಿಂತಾನ್
ಈಗ / ಜೀವ
ಪೂರಾ ಇಂಡಿ //
ಎಂಡಾ ಕುಡಿಯೋರ್
ನಾವ್ ಇಂಗಿಲ್ಲ! ಬುಂಡೆ ಪೂರಾ
ತಂದಿ /
ಪಕ್ದೋನ್ ಕೈಲಿ ಕಾಸ್ ಇಲ್ದಿದ್ರೆ
/ ಔಂಗೂ
ಕೊಡ್ತೀವ್ ಸೇಂದಿ // ( ರತ್ನನ
ಪದಗಳು)
ʻʻ ಬಾಯಿಮಾತಿನ ಬಿಗಿಯನ್ನು
ಓಟವನ್ನು ಹರಿತವನ್ನು ಬರವಣಿಗೆಯಲ್ಲಿ ತರುವುದು
ಅಸಾಧ್ಯವಲ್ಲ.ಶ್ರಮಸಾಧ್ಯ. ಶ್ರಮಸಾಧ್ಯವಾದ್ದನ್ನು
ಓದಿ ತಿಳಿಯುವುದು ಅಸಾಧ್ಯವೇನಲ್ಲ, ಅದೂ ಕೂಡಾ ಶ್ರಮಸಾಧ್ಯವೇ. ಓದುವಾಗ ಈ
ಶ್ರಮವನ್ನು ಆದಮಟ್ಟಿಗೆ ಕಡಮೆ ಮಾಡಲು ಓಂದೆರಡು
ಸಾಧನಗಳನ್ನು ಇಲ್ಲಿ ಬಳಸಿದೆ. ಅವು ಯಾವವೆಂದರೆ, ಎಲ್ಲೆಲ್ಲಿ ಪದ
ಅರ್ಧಾಕ್ಷರವಾಗಿ ನಿಲ್ಲುತ್ತದೋ ಅದನ್ನು ಅಲ್ಲಿಗೆ ನಿಲ್ಲಿಸದೆ, ಮುಂದಿನ ಪದದ ಆದ್ಯಕ್ಷರದೊಂದಿಗೆ
ಓದಿಕೊಂಡು ಹೋಗಬೇಕು. ಹಾಗೆ ಓದಿದರೆ ಪದ್ಯ ಹರಿಯುತ್ತದೆ. ನೀರು ಹರಿದ
ಹಾಗೆ. ಇಲ್ಲದಿದ್ದರೂ ಹರಿಯುತ್ತದೆ
ಕಾಗದ ಬಟ್ಟೆ ಹರಿದ ಹಾಗೆʼʼ
ಎಂದು ರಾಜರತ್ನಂ
ತಮ್ಮ ಅದೇ ಪುಸ್ತಕದಲ್ಲಿ ಕಾವ್ಯಪ್ರಿಯರಿಗೆ ಕಿವಿಮಾತನ್ನು ಹೇಳುತ್ತಾರೆ.
ಚಾಮರಾಜ
ನಗರದ ಗುಂಡ್ಲುಪೇಟೆಯ ಬಡ ಶಾಲಾಮಾಸ್ತರರ ಮಗ ಅವರು.
ಮಾತೃಭಾಷೆ ತಮಿಳು. ಜೀವಮಾನದ ಸಾಧನೆ ಕನ್ನಡದಲ್ಲಿ. ಮೂವತ್ತರ
ದಶಕದಲ್ಲೇ ಎಂ.ಎ. ಪೂರೈಸಿದ ರಾಜರತ್ನಂ,
ಶಿಕ್ಷಕರಾಗಿ, ಸರಕಾರಿ ಗುಮಾಸ್ತರಾಗಿ ತಮ್ಮ
ವೃತ್ತಿ ಆರಂಭಿಸಿದರೂ, ಧೀಮಂತ ಸಾಹಿತಿ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ದೃಷ್ಟಿಗೆ
ನಿಲುಕಿದ ಯುವಕ ರಾಜರತ್ನಂ ರಿಗೆ. ಅವರ ಪ್ರತಿಭಾಪೂರ್ಣ ವ್ಯಕ್ತಿತ್ವ ಗಮನಿಸಿದ ಮಾಸ್ತಿ, ಸಾಹಿತ್ಯದ ದೀಕ್ಷೆ
ನೀಡುತ್ತಾರೆ. ಇರುವ ಉದ್ಯೋಗ
ತ್ಯಜಿಸಿ, ಪತ್ರಿಕೆ, ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ʻʻ ಯೆಂಡ್ಕುಡ್ಕ ರತ್ನ “ ಕೃತಿ ರಚಿಸುತ್ತಾರೆ( ಶಿವರಾಮ ಕಾರಂತ್ ಕೃತಿಗೆ
ಚಿತ್ರ ಬಿಡಿಸುತ್ತಾರೆ) ಆದರೆ ಯಾರೂ ಪ್ರಕಾಶ
೧೯೩೨ ರಲ್ಲೇ
ತಮ್ಮ ಚೊಚ್ಚಿಲು ಕೃತಿ ಕರೇ ಸಿಗಲಿಲ್ಲ. ಆಗ
ಪ್ರಕಟಣೆಗೆ ೫೦೦ ಪ್ರತಿ ಮುದ್ರಿಸಲು,
ಮೂವತ್ತೈದು ರೂಪಾಯಿಯ ಅವಶ್ಯಕತೆಯಿತ್ತು.
ರಾಜರತ್ನಂ ರಲ್ಲಿ ಒಂದು ಪೈಸೆಯೂ ಇಲ್ಲ. ಕಳೆದ
ವರ್ಷವಷ್ಟೇ ಅವರ ಕವನಕ್ಕೆ
ಬಿ.ಎಂ.ಶ್ರೀ ಯವರ ಚಿನ್ನದ ಪದಕ
ದೊರೆತಿತ್ತು. ಅದನ್ನು ತಮ್ಮ ಹೆಂಡತಿಗೆ ನೀಡಿದ್ದರು. ಅನಿವಾರ್ಯವಾಗಿ
ಹೆಂಡತಿಯೆದುರು ಪದಕ ತನಗೆ ಬೇಕಿತ್ತು, ಎಂದು ಗೋಗರೆದರು. ನನಗೆ ನೀವೇ ಪದಕ, ಈ
ಪದಕ ಕೊಡಲು ನನಗೇನು ಕಷ್ಟ..? ಎಂದು ಹೇಳುತ್ತಲೇ
ಪದಕವನ್ನು ಅವರ ಕೈಗಿತ್ತಳು. ಕವಿ, ತನ್ನ ಪದಕವನ್ನು ಚಿನ್ನದ ಶೆಟ್ಟರ ಬಳಿ ಇಟ್ಟು, ತನ್ನ
ಉದ್ದೇಶವನ್ನು ವಿವರಿಸಿ, ಮೂವತ್ತೈದು ರೂ ಗಳಿಗೆ ಬೇಡಿಕೆಯಿಡುತ್ತಾರೆ. ಶೆಟ್ಟರು ಪದಕವನ್ನು ಕೈಯಲ್ಲಿಟ್ಟು ಪರಿಶೀಲಿಸಿ, ಇದು ಅಮೂಲ್ಯ
ಮಾರಬೇಡಿ. ಪದಕ ನನ್ನಲ್ಲಿರಲಿ. ಹಣ ಕೊಂಡು ಹೋಗಿ. ಸಾಧ್ಯವಾದಾಗ
ಹಣ ಮರಳಿಸಿ ಪದಕ ಕೊಂಡೊಯ್ಯಿರಿ,
ಎಂದರಂತೆ.
ಕೃತಿ ಪ್ರಕಟವಾಯಿತು. ಮೈಸೂರಿನ ಪ್ರೊಗ್ರೆಸ್ ಬುಕ್ ಸ್ಟಾಲ್ ಪ್ರಕಟಿಸಿತು. ಕವಿಯ ದುರ್ದೈವ. ಪ್ರಕಟಿತ ಪುಸ್ತಕವನ್ನು ಕಣ್ಣಾರೆ ಕಾಣಲು ಕವಿಯ ಮಡದಿ ಅಕಸ್ಮಾತ್ತಾಗಿ
ಮರಣ ಹೊಂದಿದ್ದಳು. ಮುದ್ರಿಸಿದ ಸಾವಿರ ಪ್ರತಿ ಕೆಲವೇ ತಿಂಗಳಲ್ಲಿ
ಮಾರಾಟವಾಯಿತು. ಆಗ ಪುಸ್ತಕದ
ಬೆಲೆ ಒಂದಾಣೆ. ಪ್ರಕಾಶಕರು
ನೀಡಿದ ಗೌರವ ಧನದಲ್ಲಿ ಸಾಲ ತೀರಿ,
ವಿವೇಕಾನಂದರ ಕೃತಿಶ್ರೇಣಿಯ ಏಳು ಸಂಪುಟಗಳನ್ನು ಕೊಂಡು ಕೊಂಡರಂತೆ.
ಈವರೆಗೆ
ರತ್ನನ ಪದಗಳು ಕೃತಿ ಇಪ್ಪತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡು ದಾಖಲೆ ನಿರ್ಮಿಸಿದೆ. ಅದರ ಹಾಡುಗಳನ್ನು
ಹತ್ತಾರು ಗಾಯಕರು ಹಾಡಿದ್ದಾರೆ. ಧ್ವನಿ ಮುದ್ರಿಕೆಯಾಗಿ ಸಿನಿಮಾ ಗೀತೆಗಳಾಗಿ ಜನಮನ ತಲುಪಿವೆ.
ಕನ್ನಡ
ಸಾಹಿತ್ಯಪ್ರಪಂಚದ ಪ್ರಮುಖ ಕವಿ, ಕಥೆಗಾರ, ನಾಟಕಕಾರ, ಮತ್ತು ಪತ್ರಕರ್ತರಾಗಿದ್ದ ರಾಜರತ್ನಂ,
ಸರಳಾತಿ ಸರಳ ಭಾಷೆಯಲ್ಲಿ ಗಂಭೀರ ಭಾವವನ್ನು ಅಭಿವ್ಯಕ್ತಿಸಿದ ಅಪರೂಪದ
ಲೇಖಕರು. ಜಾನಪದೀಯತೆ, ಹಾಸ್ಯ ವ್ಯಂಗ್ಯ ಲೇವಡಿ
ಗಳ ಮೂಲಕ ಸಾಮಾನ್ಯರೊಂದಿಗೆ ಪಂಡಿತವರ್ಗವನ್ನೂ ಆಕರ್ಷಿಸಿದ
ರತ್ನನ ಪದಗಳು, ನಾಗನ ಪದಗಳು, ಹಳ್ಳಿಹಾದಿ, ಹಾಸ್ಯಚಕ್ರ
ಮುಂತಾದ ಕವನಸಂಕಲನಗಳಲ್ಲದೇ, ಸಮಾಜದಲ್ಲಿಯ
ಅನ್ಯಾಯ ಶೋಷಣೆ ಮತ್ತು ಕುತಂತ್ರಗಳ ವಿರುದ್ಧದ ಕಟು ವ್ಯಂಗ್ಯ
ಸಾರ್ವಕಾಲಿಕವಾಗಿ ಬೆಚ್ಚಿಸುತ್ತವೆ. ಎಚ್ಚರಿಸುತ್ತವೆ.
ಮಕ್ಕಳ
ಸಾಹಿತ್ಯದ ಪರಿಕಲ್ಪನೆಯೇ ಸಾರಸ್ವತ
ಲೋಕದಲ್ಲಿ ಶೂನ್ಯವಾಗಿದ್ದ ಕಾಲದಲ್ಲಿ, ʻʻಪಾಪು ಪುರಾಣʼʼ ಎಂಬ ಕೃತಿ ಇಂದೂ ಮಹತ್ವಪೂರ್ಣ ಕೃತಿಯಾಗಿ ವಿಜ್ರಂಭಿಸುತ್ತಿದೆ.
ತಮ್ಮನ್ನು ತಾವು ಸಾಹಿತ್ಯ ಪರಿಚಾರಕ ಎಂದು ಕರೆದುಕೊಳ್ಳುತ್ತಿದ್ದ
ಇವರು, ಪುಸ್ತಕಗಳನ್ನು ಹೆಗಲಮೇಲೆ ಹೊತ್ತು ಹಳ್ಳಿ ಪಟ್ಟಣಗಳಲ್ಲಿ ಪಾದಯಾತ್ರೆ ಗೈದಿದ್ದರು. ಅವರ ರತ್ನನ
ಪದಗಳು, ಕುಡುಕನೆಂಬ ಹೀಯಾಳಿಕೆಗೆ ಒಳಗಾದ ಬಡವನೊಬ್ಬನ
ಪಾತ್ರದಲ್ಲಿ ತಾವೇ ಪರಕಾಯ ಪ್ರವೇಶಗೈದು, ನಲಿವು ಒಲವು
ಪ್ರೀತಿ ಪ್ರೇಮ ನೋವು ತಲ್ಲಣಗಳನ್ನು, ಹಳ್ಳಿಯ ಆಡುಭಾಷೆಯಲ್ಲಿ ಅಭಿವ್ಯಕ್ತಿಸಿದ
ರೀತಿ ಮನಮೋಹಕವಾಗಿದೆ. ಉರ್ದೂ
ಗಜಲ್ ಗಳಲ್ಲಿ ವಿಜ್ರಂಭಿಸಿದ ಮಧುಶಾಲೆ, ಮಧುಪಾತ್ರೆಗಳಂತೇ, ಕನ್ನಡದಲ್ಲೂ
ಸುರೆಯ ಅಮಲಿನ ನಡುವೆ ಬದುಕಿನ
ಸತ್ಯವನ್ನು ಅನ್ವೇಷಿಸುವ ರಾಜರತ್ನಮ್ ರವರ ಪ್ರಯತ್ನ
ನಿಜಕ್ಕೂ ಅನನ್ಯ ಪ್ರಯೋಗ. ಇವರು ಸೃಷ್ಟಿಸಿದ ಯೆಂಡ್ಗುಡುಕ
ರತ್ನ ಪಾತ್ರದಂತೇ ಅವರ ಸಮಕಾಲೀನ ಸಾಹಿತಿಗಳಾದ
ಡಿ.ವಿ.ಗುಂಡಪ್ಪನವರು, ಮಂಕುತಿಮ್ಮ ಮತ್ತು ಮರುಳು ಮುನಿಯನ ಪಾತ್ರಗಳನ್ನು ಸೃಷ್ಟಿಸಿ ಪ್ರಸಿದ್ದರಾದರು.
ಸೃಜನಶೀಲ
ಲೇಖಕ ಕಲ್ಪನೆಯ ಕುದುರೆಯೇರಿ
ಹುಸಿ ಸೃಷ್ಟಿಗೈಯ್ಯುವವನಲ್ಲ. ರಾಜರತ್ನಂ ಸಹ
ತಮ್ಮ ಸುಪ್ರಸಿದ್ಧ ಯೆಂಡ್ಗುಡ್ಕನ ಪಾತ್ರ ಸೃಷ್ಟಿಸಿದ್ದೂ ಸಹ ವಾಸ್ತವದ ಭೂಮಿಕೆಯ
ಮೇಲೆಯೇ. ಒಂದುದಿನ ಮನೆಯಿಂದ
ಮಾರುಕಟ್ಟೆಗೆ ರಾತ್ರಿ ಸಮಯ ಸಾಗುತ್ತಿದ್ದಾಗ,
ದಾರಿಯಲ್ಲಿ ವಿದ್ಯುತ್ ದೀಪಸ್ಥಂಭದ
ತಳದಲ್ಲಿ ಒಬ್ಬ ಕುಡುಕ ರಸ್ತೆಯ ಮೇಲೆ
ಚಕ್ರಾಕಾರವಾಗಿ ಎರಚಿಕೊಂಡಿದ್ದ ಬೆಳಕನ್ನು
ಕಂಡುಕೊಂಡು ಅದು ಗಿರಗಿರನೆ ತಿರುಗುತ್ತಿರುವುದನ್ನು ಕುಡುಕನ ಭಾಷೆಯಲ್ಲಿ ವರ್ಣಿಸುತ್ತಿದ್ದನಂತೆ. ಕುಡಿತದ
ಅಮಲಿನ ಸ್ಥಿತಿಯಲ್ಲಿ ವಿದ್ಯುತ್ ಬೆಳಕು ಗಿರಗಿರನೆ ತಿರುಗಿದಂತೇ
ಭಾಸವಾಗುತ್ತಿತ್ತು ಅವನಿಗೆ. ರತ್ನರು
ಸೂಕ್ಷ್ಮವಾಗಿ ಆತನನ್ನು ಗಮನಿಸುತ್ತಾರೆ. ಮನೆಗೆ ಹೋಗಿ ಆತನ ಭಾಷೆಯಲ್ಲೇ
ಒಂದು ಕವನ ರಚಿಸಿ, ಆ ಕಾಲದ ಪ್ರತಿಷ್ಠಿತ ಪತ್ರಿಕೆ
ಕರ್ನಾಟಕ ಭಾರತಿ ಗೆ ಕಳುಹಿಸುತ್ತಾರೆ. ಮರುವಾರವೇ
ಕವನ ಪ್ರಕಟಗೊಂಡು, ವಾಚಕರಲ್ಲಿ ಸಂಚಲನ ಮೂಡಿಸುತ್ತದೆ.
ಸಂಪಾದಕರ ಆತ್ಮೀಯ ಶ್ಲಾಘನೆ ದೊರಕಿದಾಗ,
ಕವಿ ಉತ್ತೇಜಿತರಾಗಿ, ಕುಡುಕರದ್ದೇ ಆದ
ವಿಶಿಷ್ಟ ಲೋಕವೊಂದಿದೆ. ಅದನ್ನು ಅಧ್ಯಯನಗೈಯ್ಯಬೇಕೆಂದು, ಊರಿನಲ್ಲೇ
ಇರುವ ಮದ್ಯದಂಗಡಿಯ ಮುಂದೆ ಪ್ರತಿದಿನ ಸಂಜೆ ಕುಳಿತು,
ಕುಡುಕರ ಮಾತು ಕತೆ, ಜಗಳ ಪ್ರೀತಿ, ಯ
ದೃಶ್ಯಗಳನ್ನು ಮನಸಾರೆ ಆಸ್ವಾದಿಸುತ್ತಾರೆ. ದಿನ ದಿನವೂ
ಅವರಿಗೆ, ವಿಚಿತ್ರವಾದ, ಆದರೆ ನೈಜವಾದ
ವಿಶಿಷ್ಟಬದುಕೊಂದು ತೆರೆದುಕೊಳ್ಳುತ್ತದೆ. ಅಲ್ಲಿಯ
ಅನುಭವಗಳು ಮನದಾಳಕ್ಕಿಳಿದು, ಯೆಂಡ್ಗುಡುಕ ರತ್ನ, ಮುನಿಯ,
ಪುಟ್ನಂಜಿ, ಮುಂತಾದ ಪಾತ್ರಗಳ
ಸೃಷ್ಟಿಗೆ ಸ್ಫೂರ್ತಿ ನೀಡುತ್ತವೆ. ಒಂದೊಂದು
ಕವಿತೆ ರಚನೆಯಾದಂತೇ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತ ಸಾಗಿದಂತೇ,
ಅವರ ಆಡುಭಾಷೆಯ ಸೊಗಡು,
ಅಮಲಿನ ಸಂದರ್ಭದ ಆಧ್ಯಾತ್ಮ, ಅಲ್ಲಿ ತೆರೆದು ಕೊಳ್ಳುವ ಬದುಕಿನ
ನೈಜ ಅನುಭವಗಳು, ಆ ಕಾಲದಲ್ಲಿ ಬಹು ಚರ್ಚೆಗೊಳಗಾಯಿತು.
ಏಳ್ಕೊಳ್ಳಾಕ್ ಒಂದ್ ಊರು / ತಲೇಮೇಲೆ ಒಂದ್ ಸೂರು /
ಮಲ್ಗಾಕೆ ಬೂಮ್ತಾಯಿ ಮಂಚ /
ಕೈ ಯಿಡ್ದೋಳು ಪುಟ್ನಂಜಿ / ನೆಗ ನೆಗ್ತಾ
ಉಪ್ಗಂಜಿ /
ಕೊಟ್ರಾಯ್ತು ರತ್ನನ್
ಪರ್ಪಂಚ !
ಕನ್ನಡವನ್ನೇ ಕುಲಗೆಡಿಸುವ
ಕವಿ ಎಂಬ ದೂಷಣೆಗೂ
ಒಳಗಾದರು.
ಟೀಕೆ ಶ್ಲಾಘನೆಗಳಿಂದ ಉತ್ತೇಜಿತರಾದ
ಕವಿ, ನಾಗ ಎಂಬ ಮತ್ತೊಂದು
ಪಾತ್ರವನ್ನೂ ಸೃಷ್ಟಿಸಿ, ಅದೇ ಆಡು ನುಡಿಯಲ್ಲೇ
ಸಾಮಾನ್ಯನ ಬದುಕಿನ ತಾತ್ವಿಕತೆಯನ್ನು ಅಭಿವ್ಯಕ್ತಿಸಲು ತೊಡಗುತ್ತಾರೆ. ತಮ್ಮ ನೂರಾರು
ಕವನಗಳ ಜೊತೆಯಲ್ಲೇ ಶಿಷ್ಟ ಸುಂದರ
ಭಾಷೆಯಲ್ಲಿ, ಬೌದ್ಧ, ಜೈನ, ಕ್ರೈಸ್ತ, ಮತ್ತು
ಇಸ್ಲಾಮ್ ಮತಗಳ ಬಗೆಗೂ ಅಧ್ಯಯನ
ಪೂರ್ಣ ಲೇಖನಗಳನ್ನು ಬರೆಯುತ್ತಾರೆ.
ವೈವಿಧ್ಯಮಯ
ಆಡುಭಾಷೆಗಳನ್ನು ಹೊಂದಿದ ಕನ್ನಡದ ಆಡು ನುಡಿಗೆ, ಶಿಷ್ಟಕನ್ನಡಕ್ಕಿಂತ, ಜೀವಶಕ್ತಿಯಿದೆ. ಲಯವಿದೆ. ಕನ್ನಡದ
ಪ್ರಪ್ರಥಮ ಸಾಮಾಜಿಕ ನಾಟಕವೆಂದು ಪ್ರಖ್ಯಾತವಾದ
ʻʻ ಇಗ್ಗಪ್ಪಹೆಗಡೇ ವಿವಾಹ ಪ್ರಹಸನʼʼ ಕೃತಿ ರಚನೆಯಾದದ್ದು ಉತ್ತರ ಕನ್ನಡದ
ಆಡುಭಾಷೆ ಹವಿಗನ್ನಡದಲ್ಲಿ. ಕರ್ಕಿ ವೆಂಕಟ್ರಮಣ ಶಾಸ್ತ್ರಿ
ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಮುಂಬಯಿಯಲ್ಲಿ ಪತ್ರಿಕಾವೃತ್ತಿಯಲ್ಲಿರುವಾಗ, ಬರೆಯುತ್ತಾರೆ.
ಕನ್ನಡದ ಅಸಂಖ್ಯ ಆಡುನುಡಿಗಳಲ್ಲಿರುವ ಆಸಕ್ತಿಪೂರ್ಣ
ಶಬ್ದಗಳು, ಗಾದೆ ಒಗಟುಗಳು ಇನ್ನಾದರೂ
ಸಂಗ್ರಹವಾಗ ಬೇಕಿದೆ. ಪರಭಾಷೆಗಳ ಸಂಕ್ರಮಣದಲ್ಲಿ
ಕನ್ನಡವೇ ಸೊರಗುತ್ತಿರುವ ಈ ಸಂದರ್ಭದಲ್ಲಿ ಭಾಷೆಗೆ
ಪುನರ್ಜೀವ ನೀಡುವಲ್ಲಿ ಸಹಾಯವಾಗಬಹುದಾಗಿದೆ.
ರಂಜನೆ ಮತ್ತು ಚಿಂತನೆಯ ಸುವರ್ಣಮಾಧ್ಯಮದಲ್ಲಿ, ಆಡುಭಾಷೆಯ ಮೂಲಕ ಸರ್ವರಿಗೂ
ಪ್ರಿಯರಾಗಿ, ಕನ್ನಡದ ಓದುಗರನ್ನು ಸಂತಸದಲ್ಲಿ ಅದ್ದುತ್ತಾ, ಕನ್ನಡಾಭಿಮಾನವನ್ನು
ಜಾಗ್ರತಗೊಳಿಸಿದ ರಾಜರತ್ನಂ, ಕನ್ನಡದ ಅಮೂಲ್ಯ ರತ್ನ.
---------------------------------------------------------------------------------------------------------------------------------------------------------------------------------------------------ಸು.ಮ. ( ಸುಮನಾಂಬರ
ಅಂಕಣಕ್ಕೆ ) ತಾ- ೨೨-೧೦-೨೦೨೫.
No comments:
Post a Comment