Thursday, 9 October 2025

ಡಾ- ಕುಸುಮಾ ಸೊರಬ.ʼʼ

 

          ಪಶ್ಚಿಮ ಘಟ್ಟಕ್ಕೆ  ಹೊಸ ಹುಟ್ಟುಕೊಟ್ಟ,  ದಿಟ್ಟ ತಾಯಿ,

                      ಡಾ- ಕುಸುಮಾ  ಸೊರಬ.ʼʼ

ಎಲ್ಲಿಯ ವರೆಗೆ ಈ  ಭೂಮಂಡಲದಲ್ಲಿ  ಮೃಗಪಕ್ಷಿಗಳು,  ಹಸಿರು ವನ  ಕಾನನಗಳು  ತುಂಬಿದ , ಬೆಟ್ಟ ಪರ್ವತಗಳಿರುವವೋ  ಅಲ್ಲಿಯ  ವರೆಗೂ  ನಮ್ಮ ಸಂತತಿ ಪುತ್ರರು  ಮಕ್ಕಳು  ಮೊಮ್ಮಕ್ಕಳು  ಮರಿಮಕ್ಕಳು  ಸುಖದಿಂದ  ಜೀವಿಸುತ್ತಾರೆ.     (ಗರುಡ ಪುರಾಣ )

    

      ಮೂಕ  ಸಹ್ಯಾದ್ರಿಗೆ   ಮಾತು ಕೊಟ್ಟ ಮಾತೆ,  ಘಟ್ಟದ  ದಿಟ್ಟೆ, ಕರಾವಳಿಯ ಕರುಣಿ,  ನದಿಯಿಂದೆದ್ದ ನಿಧಿ, ಸಮಾಜ ವೈದ್ಯೆ,  ಸ್ನೇಹಕುಂಜದ  ಕುಸುಮಕ್ಕ, ಎಂಬ    ಮಣ್ಣಿನ  ಅಪರೂಪದ  ಅನನ್ಯ ಹೋರಾಟಗಾರ್ತಿ,  ನೆಲ ಜಲದ ರಕ್ಷಣೆಯಲ್ಲಿ ತನು ಮನಗಳಿಂದ  ಸಕ್ರಿಯರಾಗಿರುವಾಗಲೇ  ಅಪಘಾತವೊಂದರಲ್ಲಿ  ಆಕಸ್ಮಿಕವಾಗಿ  ನಿಧನಹೊಂದಿ ಕಾಲು ಶತಮಾನ  ಕಳೆಯುವಷ್ಟರಲ್ಲಿ   ಜಿಲ್ಲೆಯ  ಜನಮಾನಸದಿಂದ  ಮರೆಯಾಗುತ್ತಿರುವ  ವಿಷಾದನೀಯ  ಕ್ಷಣದಲ್ಲೇ......

    ಕಳೆದ  ಸಪ್ಟಂಬರ್‌  ೧೮ ರಂದು  ಗೇರಸೊಪ್ಪಾ ಗ್ರಾಮದಲ್ಲಿ ನಡೆದ ಶರಾವತಿ ನದಿ ಪಂಪ್ಡ ಸ್ಟೋರೇಜ ಯೋಜನಾ   ಬೃಹತ್‌  ಅಹವಾಲು ಸಭೆಯಲ್ಲಿ  ಒಗ್ಗೂಡಿದ  ಸಹಸ್ರಾರು ಪರಿಸರ ಪ್ರಿಯರ  ಬಾಯಿಯಲ್ಲಿ  ಮೊಳಗಿದ್ದು ಒಂದೇ  ಒಂದು ಹೆಸರು. ಅದೇ  ದಿ. ಡಾ- ಕುಸುಮಾ ಸೊರಬರದ್ದು. 

    ಬೇಡ್ತಿ  ಅಘನಾಶಿನೀ ಹೋರಾಟ, ಕೈಗಾ ಅಣುಸ್ಥಾವರ ವಿರೋಧೀ ಚಳುವಳಿ, ಶರಾವತಿ ಟೇಲ್ರೇಸ್‌  ಮತ್ತು ಸಾರಾಯಿ ವಿರೋಧೀ  ಆಂದೋಲನ,  ರಾತ್ರಿ ಶಾಲಾ ಅಭಿಯಾನಗಳ  ಬೆನ್ನೆಲುಬಾಗಿ, ಉತ್ತರ ಕನ್ನಡ ಜಿಲ್ಲೆಯ    ತಣ್ಣನೆಯ ಮಣ್ಣಿನ  ಒಂಟಿ ಕಣ್ಣಾಗಿ, ರಾಜ್ಯ ದೇಶ ವ್ಯಾಪ್ತಿಯಲ್ಲಿ ಜಿಲ್ಲೆಯ ಹೆಸರನ್ನು ಚಿಮ್ಮಿಸಿದ,  ನಿಸರ್ಗ ರಕ್ಷಣೆ, ಸಮಾಜಸುಧಾರಣೆಗಾಗಿ  ಯುದ್ಧವನ್ನೇ  ಸಾರಿದ  ಜಿಲ್ಲೆಯ ಏಕೈಕ  ಮಹಿಳೆ  ಕುಸುಮಾ ಸೊರಬ ರವರ  ಜನ್ಮದಿನ ಇದೇ  ಅಕ್ಟೋಬರ್‌  ೧೩. 

    ಚಿಪ್ಕೋ ಚಳುವಳಿಯ  ಸುಂದರಲಾಲ್‌  ಬಹುಗುಣ,  ಕಡಲ ಭಾರ್ಗವ  ಶಿವರಾಮ ಕಾರಂತ,  ಉತ್ತರದ ನರ್ಮದಾ ನದೀ ರಕ್ಷಕಿ, ಮೇಧಾ ಪಾಟ್ಕರ್‌,  ಪೇಜಾವರ ಸ್ವಾಮೀಜಿ,   ಮುಂತಾದ  ದೇಶಮಟ್ಟದ  ಪರಿಸರ ಹೋರಾಟಗಾರರಿಗೂ  ಆದರ್ಶಳಾಗಿ,    ಜಿಲ್ಲೆಯ  ಚಟುವಟಿಕೆಗೆ  ಅವರನ್ನೂ ಆಹ್ವಾನಿಸಿ  ಸಂಚಲನ ಮೂಡಿಸಿದ ಅನುಪಮ ವ್ಯಕ್ತಿತ್ವ  ಕುಸುಮಕ್ಕರದು.

     ಆಗಿನ    ಹಸಿರು ಜಿಲ್ಲೆ  ಈಗಿಲ್ಲ.  ಎಲ್ಲ ಚಳುವಳಿಗಳೂ  ಕಾವುಕಳೆದುಕೊಂಡಿವೆ.  ಗ್ರಾಮಗಳ  ಯುವ ಶಕ್ತಿ ನಗರಪಲಾಯನ  ಪಠಿಸಿವೆ. ಆಗ  ಸಲ್ಲಿಸಿದ್ದ ಪರಿಸರ ಪೂರಕ  ಅಭಿವೃದ್ಧಿ ಕನಸುಗಳೆಲ್ಲ  ಕತ್ತಲೆಯಲ್ಲಿ ಬತ್ತಲಾಗಿವೆ.  ರಾಜಕೀಯ ಇಚ್ಛಾಶಕ್ತಿಯ  ಕೊರತೆ,  ಜನತೆಯ ನಿರ್ಲಕ್ಷ,  ಆಧುನಿಕತೆಯ  ವ್ಯಾಮೋಹ,  ಜಿಲ್ಲೆಯನ್ನು ಒಂದು ಶತಮಾನ  ಹಿಂದೆ ತಳ್ಳಿದೆ.  ದಿನಕರ  ದೇಸಾಯಿ ಯವರ  ಸಾಮಾಜಿಕ  ಕ್ರಾಂತಿ,  ಗೌರೀಶ್‌ ಕೈಕಿಣಿಯವರ  ವೈಚಾರಿಕ ಪ್ರವಾಹ, ಮತ್ತು, ಶ್ರೀಮಂತ  ಪರಿಸರದ  ಆರೋಗ್ಯರಕ್ಷಣೆಗೆ  ಪಣತೊಟ್ಟ ಕುಸುಮಾ ಸೊರಬ,    ಜಿಲ್ಲೆಯ  ಆತ್ಮಸಾಕ್ಷಿಗಳಾಗಿ,  ತಾತ್ವಿಕ ಬದ್ಧತೆ ಹೊಂದಿದ  ನಾಯಕರಾಗಿದ್ದರು.  ಇಂದು  ಅವರೆಲ್ಲರ  ಬಗೆಗೆ  ಗಾಢ  ವಿಸ್ಮೃತಿ ಗೆ  ಈಡಾದ   ಶುಷ್ಕವಾತಾವರಣವನ್ನು ನಾವಿಂದು ಕಾಣುತ್ತಿದ್ದೇವೆ. 

        ಇಪ್ಪತ್ತನೆಯ  ಶತಮಾನದ  ಅರ್ಧಭಾಗದ  ನಂತರದಲ್ಲಿ,  ನಮ್ಮ ಜಿಲ್ಲೆಯಲ್ಲೇ  ಇಡೀ  ರಾಜ್ಯ ಆವರೆಗೆ  ಕಾಣದಂತ,  ಮೂರು  ವೈಶಿಷ್ಟ್ಯಪೂರ್ಣ  ಸಾಂಸ್ಕೃತಿಕ  ಸಾಮಾಜಿಕ,  ಸಾಹಿತ್ಯಿಕ  ಮತ್ತು ಪ್ರಕೃತಿ ನಿಷ್ಠ  ಮಹಾ  ಪ್ರವಾಹಗಳು  ಸೃಷ್ಟಿಗೊಂಡಿದ್ದನ್ನು  ಇತಿಹಾಸ  ಎಂದೂ  ಮರೆಯದು.  ಮರೆತರೆ  ನಮಗೆ  ನಾವೇ  ಆತ್ಮದ್ರೋಹ ಗೈದುಕೊಂಡಂತೆ.    ದಿನಕರ ದೇಸಾಯಿ,  ಸಾಮಾಜಿಕ  ಶೈಕ್ಷಣಿಕ ನೆಲೆಯ  ತೊರೆಯಾದರೆ,  ಸಾಹಿತ್ಯ  ಸೃಜನಶೀಲತೆ, ಚಿಂತನಶೀಲತೆ, ಮತ್ತು ವಿಮರ್ಶಾಕ್ಷೇತ್ರದ  ದಿಗ್ಗಜ   ಗೌರೀಶ್‌  ಕೈಕಿಣಿ,  ಯವರು  ಸಾರಸ್ವತ ಕ್ಷೇತ್ರದ  ರತ್ನವಾಗಿ  ಮೆರೆದವರು.  ಉತ್ತರಕನ್ನಡದ  ಪಶ್ಚಿಮಘಟ್ಟದಮೇಲಣ   ಅವೈಜ್ಞಾನಿಕ  ಅಮಾನವೀಯ, ಅತ್ಯಾಚಾರಗಳನ್ನು  ಅತ್ಯುಗ್ರವಾಗಿ  ಪ್ರತಿಭಟಿಸಿದ,  ಜನಾಂದೋಲನವನ್ನೇ  ಸೃಷ್ಟಿಸಿದ  ಡಾ-  ಕುಸುಮಾ  ಸೊರಬರು,  ಪರಿಸರ ಚಳುವಳಿಯ  ಮೂಲಕ  ದೇಶವ್ಯಾಪೀ  ಹೆಸರು  ಮಾಡಿದವರು. 

       ಉನ್ನತ  ವೈದ್ಯಕೀಯ  ವ್ಯಾಸಂಗಿಯಾಗಿ  ಸ್ನೇಹಕುಂಜ  ಎಂಬ  ವೈದ್ಯಕೀಯ ಸೇವಾ ಸಂಸ್ಥೆಯನ್ನೇ  ಜಿಲ್ಲೆಯಲ್ಲಿ  ಹುಟ್ಟುಹಾಕಿ,  ಜನಪ್ರಿಯ  ವೈದ್ಯರಾಗಿದ್ದರೂ,  ಅದರಾಚೆ  ಅವರ  ಚಟುವಟಿಕೆ  ವೈವಿಧ್ಯಮಯವಾಗಿ  ವ್ಯಾಪಿಸಿತ್ತು.   ಜಿಲ್ಲೆಯ  ಇಂಚಿಂಚೂ  ಮಣ್ಣು  ಅವರ  ಬರಿಗಾಲ  ಸ್ಪರ್ಶದಿಂದ  ಪುಳಕಗೊಂಡಿತ್ತು.  ತನ್ನ ಹುಟ್ಟೂರು  ತನ್ನ ಜಿಲ್ಲೆಯ  ಬಗೆಗಿನ  ಅವರ  ಅನುಪಮ  ಅಭಿಮಾನ, ಸದಾ ಅನುಕರಣೀಯ.

    ಗಾಂಧಿವಾದವನ್ನೇ  ತಮ್ಮ ಉಸಿರಾಗಿಸಿಕೊಂಡ  ಕುಸುಮಕ್ಕ,  ತಮ್ಮ ಸಮಾಜಮುಖೀ  ಚಟುವಟಿಕೆಗಳಿಗೆ  ಪ್ರಯೋಗಶಾಲೆಯನ್ನಾಗಿ  ಜಿಲ್ಲೆಯ  ಹಳ್ಳಿಗಳನ್ನೇ  ಆಯ್ದುಕೊಂಡು  ಪರಿಶಿಷ್ಟ,  ಹಿಂದುಳಿದ  ಹಳ್ಳಿಗಳಲ್ಲಿ  ಚಟುವಟಿಕೆ  ಪ್ರಾರಂಭಿಸಿದರು.  ಮುಂಬಯಿಯಲ್ಲಿ  ಶಸ್ತ್ರಚಿಕಿತ್ಸಾ ತಜ್ಞರಾಗಿ ಅಲ್ಲಿಯೇ  ಸಾಕಷ್ಟು ಜನಪ್ರಿಯರಾಗಿ,  ಅಲ್ಲಿಯ  ಜನರ ಒತ್ತಾಸೆಯನ್ನೂ  ಮೀರಿ  ತನ್ನ ಹುಟ್ಟೂರಿಗೆ  ಮರಳಿದ  ಡಾ. ಕುಸುಮಾ,  ಅಲೋಪತಿ ತಜ್ಞರಾದರೂ   ಆಯುರ್ವೇದ  ನಿಸರ್ಗಚಿಕಿತ್ಸಾ  ಮಾರ್ಗಕ್ಕೇ  ಒತ್ತು ಕೊಟ್ಟು,  ದೀನ  ದುರ್ಬಲರಿಗೆ,  ಉದಾರ ಚಿಕಿತ್ಸೆ  ನೀಡಿದ್ದಲ್ಲದೇ,  ಇಡೀ  ಸಮುದಾಯವನ್ನು  ಆರ್ಥಿಕ  ಸಾಮಾಜಿಕ  ಸಾಂಸ್ಕೃತಿಕವಾಗಿ  ಉನ್ನತಸ್ಥಾನಕ್ಕೇರಿಸಲು  ತಮ್ಮ ಜೀವನವನ್ನೇ  ಮೀಸಲಾಗಿಟ್ಟ ಅವರ  ಬದುಕು  ಸಮಾಜಕ್ಕೊಂದು  ಅತ್ಯುತ್ಕೃಷ್ಠ  ಮಾದರಿ. 

    ಕುಸುಮಾ   ವ್ಯಕ್ತಿತ್ವಕ್ಕೆ  ಅದೆಷ್ಟು ರೋಚಕ  ಆಯಾಮ.  ವಜ್ರಾದಪಿ  ಕಠೋರಾನಿ,  ಮೃದುನೀ  ಕುಸುಮಾದಪಿ,  ಎಂಬ  ಉಕ್ತಿಗೆ  ನಿಷ್ಠವಾದ  ಪ್ರವೃತ್ತಿ,  ಜಡವಾದ  ಸಮುದಾಯವನ್ನು  ಚಲನಶೀಲತೆಯ  ಆಯಾಮಕ್ಕೆ  ತರಲು  ಅದೆಷ್ಟು ಸಾರ್ಥಕವಾಯಿತು  ಎಂಬುದು  ಅವರ  ಜೀವನ ಗಾಥೆಯನ್ನು  ಓದಿದವರಿಗೆ  ಮನವರಿಕೆಯಾಗುತ್ತದೆ.

    ೧೯೮೭ ರಲ್ಲಿ  ಜಿಲ್ಲೆಯಾದ್ಯಂತ  ಜ್ವಲಿಸುತ್ತಿದ್ದ  ಕೈಗಾ ಅಣುಸ್ಥಾವರ  ವಿರೋಧೀ  ಆಂದೋಲನದಲ್ಲಿ  ಒಂದು  ದಿನ,  ಕೈಗಾ  ಕಾಡಿನಲ್ಲಿ  ಅಣುಸ್ಥಾವರಕ್ಕಾಗಿ  ತೋಡಿದ  ಐವತ್ತು ಅಡಿ ಆಳದ  ತಳಪಾಯಕ್ಕೆ,  ಒಂಟಿಗಣ್ಣಿನ,  ನರಪೇತಲ  ಕುಸುಮಕ್ಕ  ಸಶಸ್ತ್ರ ಪೋಲೀಸರ  ಭದ್ರಕೋಟೆಯನ್ನೇ  ಬೇಧಿಸಿ,  ಭಾವಿಗೆ  ಧುಮುಕಿ  ವೃಕ್ಷಾರೋಪಣೆ  ಗೈದ  ಸಾಹಸ  ಎಂದೂ   ಮರೆಯಲಾಗದ  ಅದ್ಭುತ  ಘಟನೆ. ಅಲ್ಲಿ ಸೇರಿದ  ಜಿಲ್ಲೆಯ  ಸಾವಿರಾರು ಚಳುವಳಿಗಾರರಿಗೆ  ತಮ್ಮ ಈ  ಸಾಹಸಮಯ ಪ್ರತಿಭಟನೆಯಿಂದ  ಸ್ಫೂರ್ತಿಯ  ಕೇಂದ್ರವಾದರು.  ದೇಶಾದ್ಯಂತ  ಸುದ್ದಿಯಾದರು.  ೧೯೯೪ ರಲ್ಲಿ ಶಿರಸಿಯ  ಪಾವನಾ ಪ್ರತಿಷ್ಠಾನ  ಕುಸುಮಾ ರವರ  ಅಹನ್ಯಹನಿ  ಪರಿಸರ ಹೋರಾಟ, ಮತ್ತು ಅರ್ಪಣಾ ಮನೋಭಾವಕ್ಕೆ, ಪಾವನಾ ಪ್ರಶಸ್ತಿ ನೀಡಿ ಗೌರವಿಸುತ್ತದೆ.  ಪ್ರಶಸ್ತಿ ಸ್ವೀಕಾರದ  ಸಂಭ್ರಮದ  ಕ್ಷಣದಲ್ಲಿ  ಅವರು ನೀಡಿದ  ಉತ್ತರ, ಮತ್ತೆ  ಮತ್ತೆ  ನಿಜಗೊಳ್ಳುತ್ತಿದೆ.  ಜಿಲ್ಲೆಯ  ಜೀವಂತ  ನದಿಗಳಿಗೆ  ಹಣದ  ಕ್ರಿಮಿಗಳು  ನುಗ್ಗುತ್ತಿವೆ.

ʻʻ ದುರ್ದೈವದಿಂದ   ಇವೊತ್ತು ದುಡ್ಡು ನಮ್ಮ ಸಮಾಜವನ್ನು ಕುಣಿಸುತ್ತಿದೆ.  ಅದಕ್ಕೆ ಪುನಃ ಶರಾವತಿ ಆಣೆಕಟ್ಟಿನ  ನಿರ್ಮಾಣದ  ಕೆಲಸ  ಆರಂಭವಾಗಿದೆ. ಇನ್ನೂ  ನಾವು ಹೋರಾಟಮಾಡಿ  ಶರಾವತಿಯನ್ನು ನಿಲ್ಲಿಸಲು  ಸಾಧ್ಯವಿದೆ.  ಅನ್ನೋ  ಭರವಸೆ  ನನಗಿದೆ. ಯಾಕೆಂದರೆ  ನಿಮ್ಮಂಥ ಸ್ನೇಹಿತರೆಲ್ಲ  ನಮ್ಮ ಜೊತೆಗಿದ್ದೀರಿ.  ಈಗಾಗಲೇ  ಶರಾವತಿ ಹೋರಾಟವನ್ನು ಪರಿಸರ ಸಮಿತಿಯವರು ಕೈಗೆತ್ತಿಕೊಂಡಿದ್ದಾರೆ.  ಇದರ  ಮೊದಲು  ಜನಸಂಘಟನೆಯೇ    ಕ್ಷೇತ್ರದಲ್ಲಿ ಅಸಾಧ್ಯವೆನಿಸಿತ್ತು.  ಯಾಕೆಂದರೆ    ಶರಾವತಿ ಕೊಳ್ಳದಲ್ಲಿ  ಯಾರದ್ದೂ ಒಂದಿಂಚೂ ಭೂಮಿ    ಯೋಜನೆಯಿಂದಾಗಿ  ಕೈಬಿಟ್ಟು ಹೋಗ್ತಾ ಇಲ್ಲ.  ಇನ್ನು ಇಲ್ಲಿ ವಾಸಿಸುವ ಮೂಕ ಪ್ರಾಣಿಗಳ ಬಗ್ಗೆ ಪ್ರಜ್ಞೆಯಾಗಲೀ  ಅನುಕಂಪವಾಗಲೀ  ನಮ್ಮ ಹೊನ್ನಾವರ  ಭಾಗದಲ್ಲಿ  ಇದುವರೆಗೂ  ಬೆಳೆದು ಬಂದಿಲ್ಲ.ʼʼ

     ತಮ್ಮ ಹುಟ್ಟೂರು  ಕೆರವಳ್ಳಿಯ  ಕೆಲವು ಕೃಷಿಕರು  ಹಂಚಿನ ಖಾರ್ಕಾನೆಗೆ  ತಮ್ಮ ಕೃಷಿಭೂಮಿಯ  ಮಣ್ಣನ್ನು ಮಾರತೊಡಗುತ್ತಾರೆ.  ಗುತ್ತಿಗೆದಾರರು  ಕೃಷಿಭೂಮಿಯ  ಮಣ್ಣನ್ನು ನಿಯಮ ಬಾಹಿರವಾಗಿ ಅಗೆದು  ಅವ್ಯಾಹತವಾಗಿ  ಸಾಗಿಸತೊಡಗುತ್ತಾರೆ.  ಸಮತಟ್ಟಾದ  ಭೂಮಿಯಲ್ಲಿ ಅಗಾಧ  ಹೊಂಡಗಳಾಗಿ, ಅಕ್ಕಪಕ್ಕದ  ರೈತರಿಗೆ  ಕೃಷಿವ್ಯವಸಾಯಕ್ಕೂ  ತೀವ್ರ ಸಮಸ್ಯೆಯುಂಟಾದಾಗ,  ಗ್ರಾಮಸ್ಥರು  ಕುಸುಮಕ್ಕನಲ್ಲಿ  ತಮ್ಮ ದುಃಖ  ತೋಡಿಕೊಳ್ಳುತ್ತಾರೆ.  ಗುತ್ತಿಗೆ ದಾರರ  ದಬ್ಬಾಳಿಕೆ, ಮಿತಿಮೀರಿದ  ಆ ಸ್ಥಿತಿಯನ್ನು ಕಂಡ  ಕುಸುಮಕ್ಕ,  ಗ್ರಾಮದ ರೈತರನ್ನೆಲ್ಲ ಸಂಘಟಿಸಿ, ಪ್ರತಿಭಟನೆಗಿಳಿಯುತ್ತಾರೆ. ಸರಕಾರೀ ಅಧಿಕಾರಿಗಳ  ಕುಮ್ಮಕ್ಕಿನಿಂದ  ಗುತ್ತಿಗೆದಾರರ  ಸೊಕ್ಕು ಮಿತಿಮೀರಿದಾಗ,  ಮಣ್ಣು ಸಾಗಿಸುವ  ದಾರಿಯಲ್ಲೇ  ಕುಸುಮಕ್ಕ ಧರಣಿ  ಹೂಡುತ್ತಾರೆ.  ಗ್ರಾಮಸ್ಥರೊಂದಿಗೆ  ಧರಣಿಕುಳಿತ  ಕುಸುಮಕ್ಕ  ರಾತ್ರಿಯಾದರೂ  ಏಳದ್ದನ್ನು ಕಂಡ  ಗುತ್ತಿಗೆದಾರರ  ಚೇಲಾಗಳು,  ಕುಸುಮಕ್ಕರನ್ನು ಅನಾಮತ್ತಾಗಿ  ಹೊತ್ತೊಯ್ದು   ಪಕ್ಕದ  ಶರಾವತಿ ನದಿಗೆಸೆಯಲು  ಹವಣಿಸುತ್ತಾರೆ.  ಕುಸುಮಕ್ಕ  ಎದೆಗುಂದದೇ  ಮೌನವಾಗಿ  ಹೊತ್ತೊಯ್ಯುವವರ  ಹೆಗಲ ಮೇಲೆ  ಕುಳಿತಿರುತ್ತಾರೆ.  ಅಪಹರಿಸಿದವರಿಗೇ  ಏನನ್ನಿಸಿತೋ,  ನದಿಯ ಪಕ್ಕ  ಚಳುವಳಿಗಾರ್ತಿಯನ್ನು  ಕೆಡವಿ  ಓಡಿ ಹೋಗುತ್ತಾರೆ.   ಜನ  ರಾತ್ರಿ  ಹುಡುಕುತ್ತಾ  ನದಿಯಂಚಿಗೆ  ಬಂದಾಗ,  ಬಂಡೆ ಕಲ್ಲಿನಮೇಲೆ  ಕುಸುಮಕ್ಕ  ಶಾಂತವಾಗಿ  ಧ್ಯಾನದಲ್ಲಿ ಲೀನವಾಗಿದ್ದರು. 

    ತಮ್ಮ ಸ್ನೇಹಕುಂಜ  ಆಸ್ಪತ್ರೆಯ  ಪ್ರಧಾನ  ವೈದ್ಯಾಧಿಕಾರಿಯಾದರೂ,  ಗಾಂಧಿವಾದಿ  ಕುಸುಮಕ್ಕ, ಶೌಚಾಲಯ ಶುದ್ಧಿ, ಆವಾರ ಸ್ವಚ್ಛತಾ  ಕಾರ್ಯ,   ರೋಗಿಗಳ  ಶುಶ್ರೂಷೆ,  ರೋಗಿಗಳಿಗೆ  ಊಟೋಪಚಾರದಂತಹ  ಪ್ರಕ್ರಿಯೆಗಳಲ್ಲಿ  ಅವರೇ  ಮುಂದಾಗಿ,  ಇತರರನ್ನು ಸಜ್ಜುಗೊಳಿಸುತ್ತಿದ್ದರು.  ನಿತ್ಯಜೀವನದ  ಸರಳತೆ, ಕರ್ತವ್ಯನಿಷ್ಠತೆ, ನ್ಯಾಯ ನಿಷ್ಠುರತೆ, ಮತ್ತು ಬದ್ಧತೆಗಳು  ಅವರ ಸಂಪರ್ಕಕ್ಕೆ ಬಂದ  ಎಲ್ಲರನ್ನೂ  ಪ್ರಭಾವಿಸಿದ್ದವು.   ಬರಿಗಾಲು ನಡಿಗೆ,  ಖಾದಿ ಉಡುಗೆ  ತೊಡುಗೆ,  ಸರಳ ಆಹಾರಕ್ರಮ   ಮತ್ತು  ಅಧ್ಯಯನಶೀಲ ಗುಣಗಳನ್ನು ನೆನಪಿಸಿ ಕೊಂಡಾಗ     ಆಧುನಿಕ ಬದುಕಿನ  ಸಂತೆಯಲ್ಲೊಬ್ಬಳು  ಸಂತಳಾಗಿ  ತೋರಿದರೆ  ಆಶ್ಚರ್ಯವಿಲ್ಲ. 

       ಜಿಲ್ಲೆಗೆ  ಇಂದಿಗೂ  ವ್ಯವಸ್ಥಿತವಾದ  ಒಂದು  ಸೂಪರ್‌  ಸ್ಪೇಶಾಲಿಟಿ  ಆಸ್ಪತ್ರೆಯಿಲ್ಲ.  ಎಂತಹ  ತುರ್ತು  ಆರೋಗ್ಯ ಸಮಸ್ಯೆಗೂ  ನೂರಾರು ಕಿಲೋಮೀಟರ್‌  ದೂರದ  ಬೇರೆ  ಜಿಲ್ಲೆಗೆ  ಸಾಗಬೇಕಾದ  ಅನಿವಾರ್ಯತೆ  ಇಲ್ಲಿಯ  ಜನತೆಗಿದೆ.   ಆಗಲೇ  ಕುಸುಮಕ್ಕನವರಿಗೆ  ಇಂತಹದೊಂದು  ಘನವಾದ  ಕನಸಿತ್ತು.  ಅವರಂತಹ  ಮತ್ತೊಬ್ಬ ಪ್ರಯತ್ನಶೀಲರನ್ನು    ಜಿಲ್ಲೆ  ಇನ್ನೂ  ಆಸೆ ಕಣ್ಣಲ್ಲಿ ನಿರೀಕ್ಷಿಸುತ್ತಿದೆ.

      ವಿಕಾಸದ  ನೆಲೆಯಲ್ಲಿ  ಕಳೆದ  ಅರ್ಧಶತಮಾನದಿಂದೀಚೆ  ಜಿಲ್ಲೆ ಒಂದಿಂಚೂ  ಮುಂದೆ ಸಾಗಿಲ್ಲ.  ಇದೇ  ವರ್ಷ  ಮತ್ತೆ  ಬೇಡ್ತಿ  ಅಘನಾಶಿನಿ, ಶರಾವತಿ  ನದಿಗಳ ಮೇಲೆ  ಪ್ರಭುತ್ವದ,  ಬಂಡವಾಳಶಾಹಿಗಳ  ದುಷ್ಟಕಣ್ಣು ಬಿದ್ದಿದೆ.  ಸ್ಥಳೀಯ  ಜನಪ್ರತಿನಿಧಿಗಳು, ಅಧಿಕಾರಿಗಳಿಗೂ  ಅರಿವಾಗದೇ  ನಿಗೂಢವಾಗಿ, ಒಂದಿಷ್ಟು  ಅವೈಜ್ಞಾನಿಕ,  ದುರ್ಯೋಜನೆಗಳು  ಆಕ್ರಮಿಸುತ್ತಿವೆ.  ಸಾವಿರ  ವ್ಯಯಿಸಿ  ನೂರು ದುಡಿಯುವ  ಹಾಸ್ಯಾಸ್ಪದ  ಯೋಜನೆಗಳು  ಗುಟ್ಟಾಗಿ  ನುಗ್ಗುತ್ತಿವೆ.   ಆದರೆ  ಜಿಲ್ಲೆಯ  ಸಾಮಾನ್ಯಜನರಲ್ಲಿ ಇಂತಹ  ಯೋಜನಾ  ಹುನ್ನಾರುಗಳ  ಅರಿವು  ಮೂಡುವುದರ  ಒಳಗೇ  ಕರಾಳ ಚಟುವಟಿಕೆಗಳ  ಸಂಚು ಹಸ್ತ ಚಾಚುತ್ತಿದೆ. 

    ಇಂತಹ  ಅಯೋಮಯ  ಕ್ಷಣದಲ್ಲಿ  ಕುಸುಮಕ್ಕ  ನೆನಪಾಗುತ್ತಾಳೆ. 

  ಸ್ನೇಹಕುಂಜದ  ಅವರ  ಕರ್ಮಭೂಮಿಯಲ್ಲಿ  ಅವರ  ಪುತ್ಥಳಿ ನಿರ್ಮಾಣವಾಗಬೇಕಿತ್ತು.  ಜಿಲ್ಲೆಯ  ಮುಖ್ಯ ನಗರ ಪಟ್ಟಣಗಳಲ್ಲಿ  ವೃತ್ತಗಳಿಗೆ  ಅವರ  ಹೆಸರಿರಿಸ  ಬಹುದಾಗಿತ್ತು.  ಸ್ತ್ರೀವಾದಿಗಳ ಸಂಘಟನೆಗಳ  ಚಟುವಟಿಕೆಗಳಿಗೆ  ಕುಸುಮಕ್ಕ ಸ್ಫೂರ್ತಿಯಾಗಿರಬೇಕಿತ್ತು.  ಅವರ  ಜನ್ಮದಿನದ ನೆನಪಿಗಾದರೂ   ಪ್ರತಿಯೊಬ್ಬ  ಒಂದು ಗಿಡ ನೆಡಬೇಕಿತ್ತು.   ಮಾದ್ಯಮಗಳು    ಮೂಲಕ್‌  ಚಳುವಳಿಯ  ಪ್ರಜ್ಞೆಗೆ  ಹೊಸ  ಹರಿವು ನೀಡಬೇಕಿತ್ತು.

    ಜಿಲ್ಲೆ  ಮತ್ತೆ ಜಡಗೊಂಡಿದೆ.  ಮೃತರನ್ನು ಮರೆಯುವುದು ಅಂದರೆ  ಅವರನ್ನು ಮತ್ತೊಮ್ಮೆ ಕೊಂದಂತೆ.   ನಮ್ಮ ಎಲ್ಲ ರೈತಹೋರಾಟ, ಪರಿಸರ ಚಳುವಳಿ, ಸಾಮಾಜಿಕ  ಆಂದೋಲನಗಳ  ರೋಚಕ ನೆನಪನ್ನು  ಡಾ- ಕುಸುಮಾ ಸೊರಬರ  ಜನ್ಮದಿನದ  ಸಂದರ್ಭದಲ್ಲಾದರೂ  ಜಾಗ್ರತಗೊಳಿಸಿಕೊಳ್ಳುತ್ತ, ಜಿಲ್ಲೆಯ  ಸುಸ್ಥಿರತೆಗೆ  ಮನಸ್ಸುಮಾಡಿದರೆ  ಮಾತ್ರ,  ಅಳಿದ    ಹೋರಾಟಗಾರ್ತಿಗೆ  ನಿಜವಾದ  ಗೌರವ  ಸಲ್ಲಿಸಿದಂತಾಗಬಹುದು.   ಹಸಿರು ಜಿಲ್ಲೆ  ಬರಡಾಗಂತೇ  ಕಾಯ್ದುಕೊಳ್ಳಬಹುದೇನೋ.......  

                                             ಪಾರಿಜಾತವು  ಮಣ್ಣಸೇರಿದರು  ಉಷೆಯಲ್ಲಿ

                                     ಪರಿಮಳವ  ಬೀರುವುದು  ಧರಣಿಯ  ನಿಶೆಯಲ್ಲಿ

                                     ಮೊಗ್ಗಾಗಿ ಉಳಿದರೂ  ಹಗಲಿನಲ್ಲಿ

                                     ಮಲ್ಲಿಗೆ  ಅರಳುವುದು  ಸಂಜೆಯಲ್ಲಿ.        (  ಡಾ – ಕುಸುಮಾ  ಸೊರಬ )

 

 

   ತಾ- 5-10-2025  janamadhyama  ದಲ್ಲಿ ಪ್ರಕಟಿತ.                                                                                ಸುಬ್ರಾಯ  ಮತ್ತೀಹಳ್ಳಿ.

No comments:

Post a Comment