ಸತ್ವಪೂರ್ಣ ಕಾವ್ಯ,,
ಸುಂದರ ಅನುಸ್ಪಂದ
ʻʻ ಸಾವಿತ್ರಿʼʼ ಮಹಾಕಾವ್ಯ.
ʻʻಮನದ ಮಿತಿ – ಮತಿಯ ಖತಿಗೆ ಜ್ಞಾನವದು ಬಂಧನಕೆ ತಾನು ಸಿಲುಕಿ
ಮತ್ತೆ ಜೀವನವು ಜಾಲ – ಪಾಶದಲಿ ಸೆಳೆ ಸೆಳೆತದೊಳಗೆ ಕುಲುಕಿ,
ವಾಂಛೆಗಳ ಹೆಣಿಕೆ ಹೆಣಿಕೆಯಲಿ ಹೆಣೆದ ಆ ಮಾಯೆ ಬಲೆಯ ಒಳಗೆ
ಜಡವು ಅಡಗಿಸಿದೆ ಪ್ರಾಣವನು ಅದರರಿವು ಅದಕಿರದ ಹಾಗೆ.ʼʼ ( ಶ್ರೀ ಅರವಿಂದರು. ಅನು- ಪು.ಕು.}
ಭಾರತೀಯವಾದ
ಯಾವುದೇ ಸಂಸ್ಕೃತಿ, ತತ್ವ, ಪರಂಪರೆಯ ಲವಲೇಶವೂ
ತಾಗಬಾರದೆಂಬ ಮಹದೊದ್ದೇಶದಿಂದ ಏಳು ವರ್ಷದ
ಬಾಲಕನನ್ನು ಇಂಗ್ಲೆಂಡಿನಲ್ಲಿಟ್ಟು, ಅಲ್ಲಿಯ
ಸಂಸ್ಕೃತಿಯಲ್ಲೇ ಮೀಯಿಸಿ, ಅಲ್ಲಿಯ
ಶಿಕ್ಷಣವನ್ನೇ ಅರೆದು ಕುಡಿಸಿದ ಭಾರತೀಯ
ತಂದೆಯೊಬ್ಬನ ಈ ಕಾರ್ಯಾಚರಣೆ
ಮಾತ್ರ ತದ್ವಿರುದ್ಧವಾಗಿ, ಭಾರತೀಯ ತತ್ವಜ್ಞಾನವೇನು,
ವಿಶ್ವತತ್ವಜ್ಞಾನದ ಮೇರು ಶಿಖರವಾಗಿ ರೂಪುಗೊಂಡ, ಮಹರ್ಷಿ
ಅರವಿಂದರನ್ನು(೧೮೭೨ – ೧೯೫೦) ಸೃಷ್ಟಿಸಿತು ಎಂಬುದು, ಭಾರತೀಯ ಆಧ್ಯಾತ್ಮಿಕ
ವೈಚಾರಿಕ ಕ್ಷೇತ್ರದಲ್ಲಿ ಒಂದು ಸುವರ್ಣ ಅಧ್ಯಾಯವಾಗಿ
ಜಗಮಗಿಸುತ್ತಿದೆ.
ಶ್ರೀ ಅರವಿಂದರ
ಅಸಾಮಾನ್ಯ ಚಿಂತನ ಗಳ ರಾಶಿ, ತನ್ನೊಳಗಿನ ತಾತ್ವಿಕತೆ
ಆಧ್ಯಾತ್ಮಿಕತೆಗಳ ಅಗಾಧ ಆಳ ಎತ್ತರ
ವಿಸ್ತಾರಗಳನ್ನು ಜಗತ್ತಿಗೆ ಕೊಂಚ ಕೊಂಚವೇ
ಪ್ರಕಟಿಸುತ್ತ, ಬೆರಗು ಗೊಳಿಸುತ್ತ, ತಲೆಮಾರಿಂದ ತಲೆಮಾರಿಗೆ
ಗುಪ್ತಗಾಮಿನಿಯಾದ ಸರಸ್ವತಿ ನದಿಯಂತೇ ಹರಿಯುತ್ತಿರುವುದು ಭಾರತೀಯರ
ಭಾಗ್ಯ.
ನಾಲ್ಕು ದಶಕಗಳ ಕಾಲ, ನಾಲ್ಕಾರುಬಾರಿ, ಬರೆದು ತಿದ್ದಿ, ಪರಿಷ್ಕಾರಗೊಂಡ ಶ್ರೀ ಅರವಿಂದರ ʻʻಸಾವಿತ್ರಿʼʼ
ಮಹಾಕಾವ್ಯ ಜಗತ್ತಿನ ಪಂಚಮಹಾಕಾವ್ಯಗಳ
ಸಾಲಿನಲ್ಲಿ ಆರನೆಯದಾಗಿ ವಿಜ್ರಂಭಿಸುತ್ತಿರುವುದು ಅದರ ಮಹತ್ತನ್ನು
ಎತ್ತಿ ತೋರಿಸುತ್ತಿದೆ. ಮೂಲ ಇಂಗ್ಲಿಶ್
ಭಾಷೆಯಲ್ಲಿ ರಚಿತವಾದ ಸಾವಿತ್ರಿ
ಮಹಾಕಾವ್ಯ, (೧೯೫೦) ಭಾರತೀಯ ತತ್ವಶಾಸ್ತ್ರದ ನೆಲೆಗಟ್ಟಿನ
ಮೇಲೆ, ಇಡೀ ವಿಶ್ವ ತಾತ್ವಿಕತೆಯನ್ನು ಮೈಗೂಡಿಸಿಕೊಂಡ
ಅನನ್ಯ ಕಾವ್ಯ. ಇಂಗ್ಲಿಶ್ ಭಾಷೆಯ ಘನತೆಯನ್ನು ನೂರ್ಮಡಿ ವೃದ್ಧಿಸಿದ,
ಇಂಗ್ಲಿಶ್ ಮಾತ್ರಭಾಷಾ ತಜ್ಞರನ್ನೂ ಬೆರಗುಗೊಳಿಸಿದ ಸಾವಿತ್ರಿ,
ಪಾಶ್ಚಾತ್ಯರ ಕುತೂಹಲ, ಆಸಕ್ತಿಗಳನ್ನು ಹೆಚ್ಚಿಸುತ್ತ,
ವಿಶೇಷ ಅಧ್ಯಯನಕ್ಕೆ ಆಹ್ವಾನಿಸುತ್ತಿದೆ.
ಕಳೆದ ತಲೆಮಾರಿನ
ಬೇಂದ್ರೆ, ಕುವೆಂಪು, ಮಧುರ ಚೆನ್ನ ವಿಕೃ
ಗೋಕಾಕ್ ರಂತಹ ಕವಿ, ಚಿಂತಕರನ್ನು, ಆಧ್ಯಾತ್ಮಿಕ
ಕೇಂದ್ರಕ್ಕೆ ಸೆಳೆದು, ಅವರ ಸಾಹಿತ್ಯ
ಸೃಷ್ಟಿಗೆ, ತಾತ್ವಿಕತೆಯ ಚೈತನ್ಯ ನೀಡಿದ
ಸಾವಿತ್ರಿ ಮಹಾಕಾವ್ಯ, ಇಡೀ ಭಾರತದ ಆ ಕಾಲದ ಚಿಂತಕರನ್ನು
ತನ್ನ ಚಿಂತನದ ತೆಕ್ಕೆಯಲ್ಲಿ ಸೆಳೆದು ಕೊಂಡಿತ್ತು ಎಂಬುದು ಈಗ ಇತಿಹಾಸ.
ಇಂಗ್ಲಿಶ್ ಲ್ಯಾಟಿನ್
ಗ್ರೀಕ್ ಫ್ರೆಂಚ್ ಸಂಸ್ಕೃತ, ಬಂಗಾಲಿ, ತಮಿಳು ಸೇರಿ ೧೮ ಭಾಷಾ
ತಜ್ಞರಾಗಿದ್ದ ಶ್ರೀ ಅರವಿಂದರು,
ಈ ಸಹಸ್ರಮಾನದ ಅನುಪಮ ಪ್ರತಿಭೆ. ವಿಜ್ಞಾನ, ತತ್ವಜ್ಞಾನ, ಖಗೋಳ ವಿಜ್ಞಾನ ಮನೋವಿಜ್ಞಾನ, ಮತ್ತು ವಿಶ್ವ ಮಹಾಕಾವ್ಯಗಳ ಪರಂಪರೆಗಳೆಲ್ಲವನ್ನೂ ಎರಕ ಹೊಯ್ದು,
ಇಂಗ್ಲಿಶ್ ಭಾಷೆಯಲ್ಲಿ ರಚಿಸಿದ ಈ ಮಹಾನ್ ಕೃತಿಯಾಳದಲ್ಲಿ, ಮಾನವೀಯ
ಮೌಲ್ಯಗಳು ಜೀವಂತವಾಗಿ ನಲಿದಾಡುತ್ತಿವೆ. ಮಹಾಯುದ್ಧ,
ಮಹಾರೋಗ, ಮಹಾ ಪ್ರವಾಹಗಳಂತಹ ಅಗಾಧ ಉತ್ಪಾತಗಳ ನಡುವೆ,
ಮನುಷ್ಯನ ನಿಃಸಹಾಯಕತನವನ್ನು, ಅವನಲ್ಲಿರುವ
ಶಕ್ತಿ ದೌರ್ಬಲ್ಯಗಳನ್ನು, ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುತ್ತ, ಹೊಚ್ಚ ಹೊಸ ಭವಿಷ್ಯವನ್ನು ಸೃಷ್ಟಿಸುವ ಕನಸನ್ನು
ಹೊತ್ತಿರುವ ಸಾವಿತ್ರಿ, ಸಾಂಪ್ರದಾಯಿಕ
ಮಹಾಕಾವ್ಯಗಳಿಗಿಂತ ಭಿನ್ನವಾಗಿ, ಆಧುನಿಕ
ಕಾಲಕ್ಕೆ ಸ್ಪಂದಿಸುತ್ತಿದೆ. ಅರಿಸ್ಟಾಟಲ್,
ಲಿಬ್ನಿಚ್, ಹೆಗೆಲ್, ರವರ ಭೌತಿಕವಾದ, ಮತ್ತು ಭಾರತೀಯ
ಪಾಶ್ಚಾತ್ಯ ಆದರ್ಶಗಳ ಸಂಗಮವಾಗಿರುವ ಅವರ ಮಹಾಕಾವ್ಯ ಉಪನಿಷತ್ತಿನಿಂದ
ಆಧ್ಯಾತ್ಮಿಕ ಪರಿಕಲ್ಪನೆ, ಋಗ್ವೇದದಿಂದ ಆತ್ಮಸಾಕ್ಷಿಯನ್ನು ಮತ್ತು ಬೌದ್ಧ ತತ್ವಜ್ಞಾನದಿಂದ ಆತ್ಮವಿಶ್ವಾಸವನ್ನು ಪಡೆದುಕೊಂಡಿರುವ
ಅರವಿಂದರ ಕಾವ್ಯ, ಇಂದಿನ ಕ್ರೂರ ವಾಸ್ತವಕ್ಕೆ
ಸಮರ್ಥ ಸಾಂತ್ವನವಾಗಿ ಮೂಡಿಬಂದಿದೆ.
ಭೂತವನ್ನೆಲ್ಲ ಹೀರಿ ಹೊಸ ಭವಿಷ್ಯನಿರ್ಮಾಣ ಗೈಯ್ಯುವ ಅಸಾಮಾನ್ಯ ಗ್ರಂಥರತ್ನವಾಗಿ ಅವತರಿಸಿದೆ.
ಇಪ್ಪತ್ತನೇ ಶತಮಾನದ
ಪ್ರಾರಂಭದಲ್ಲಿ, ಉದಯಿಸಿದ ಶ್ರೀ ಅರವಿಂದರು, ಅವರ ತಂದೆಯಾದ ಕೃಷ್ಣಧನ್ ಘೋಷ್, ಆ ಕಾಲದ ಸುಪ್ರಸಿದ್ದ
ಅಲೋಪತಿ ವೈದ್ಯರು. ಪಾಶ್ಚಾತ್ಯ ಶಿಕ್ಷಣ, ಪಾಶ್ಚಾತ್ಯ ಸಂಸ್ಕೃತಿ, ಜೀವನ ವಿಧಾನಕ್ಕೆ ಮಾರುಹೋದ
ಅವರಲ್ಲಿ, ಭಾರತೀಯ ಸಂಸ್ಕೃತಿಯ
ಮೇಲಣ ತಿರಸ್ಕಾರ, ರೇಜಿಗೆಗಳು
ಆಳವಾಗಿ ಬೇರೂರಿದ್ದವು. ತಮ್ಮ ಮಕ್ಕಳು
ಮಾತ್ರ ಈ ಸಂಸ್ಕೃತಿಯಲ್ಲಿ
ಜೀವಿಸಬಾರದೆಂಬ ಉದ್ದೇಶದಿಂದಲೇ ಪಾಶ್ಚಾತ್ಯ
ಶಿಕ್ಷಣಕ್ಕೆ ರವಾನಿಸಿದ್ದರು.
ಆದರೆ ಈ ದೇಶದ ಪುಣ್ಯ,
ಅರವಿಂದರು ಅಲ್ಲಿದ್ದೂ ಇಲ್ಲಿಯ ರತ್ನವಾಗಿ ಬೆಳೆದರು. ಪಾಶ್ಚಾತ್ಯ
ಪ್ರಾಚೀನ ಗ್ರಂಥಗಳನ್ನೆಲ್ಲ ಆಳವಾಗಿ ಅಧ್ಯಯನ ಗೈದರು. ಪಶ್ಚಿಮ ಪೂರ್ವಗಳ ಜ್ಞಾನಶಿಸ್ತುಗಳಲ್ಲೆಲ್ಲ ಪ್ರಭುತ್ವ ಪಡೆದ, ಮಹಾ ಮೇಧಾವಿಗಳಾದರು. ಇಂಗ್ಲೆಂಡಿನಲ್ಲಿ ವ್ಯಾಸಂಗ
ಪೂರೈಸಿ, ಭಾರತಕ್ಕೇ ಧಾವಿಸಿದರು.
ಶತಮಾನ ಕಾಲಗಳಿಂದ ದಾಸ್ಯದಿಂದ
ಬಳಲುತ್ತಿದ್ದ ಬೃಹತ್ ಭಾರತದ ದಯನೀಯ
ಸ್ಥಿತಿ ಕಂಡ ಅರವಿಂದರಲ್ಲಿ,
ಸ್ವಾತಂತ್ರ್ಯ ಹೋರಾಟದ ಕಿಚ್ಚು ಉಜ್ವಲವಾಗಿ ದಹಿಸತೊಡಗಿತು.
ಅದೇ ಕಾಲಕ್ಕೆ ಗೋಖಲೆಯವರ
ಸಾಂಗತ್ಯವೂ ಅವರಿಗೆ ದೊರಕಿತು.
ವಂದೇ ಮಾತರಂ ಪತ್ರಿಕೆಯ
ಸಂಪಾದಕರಾಗಿ, ಸತ್ಯನಿಷ್ಠ ಬರಹಗಳಿಂದ
ದೇಶಾದ್ಯಂತ ಮನೆಮಾತಾದರು.೧೯೦೨- ೧೯೧೦ ರವರೆಗಿನ ಕೆಲವೇ ವರ್ಷಗಳಲ್ಲಿ,
ತಮ್ಮ ಉದ್ಭೋದಕ ಮಾತು, ಕ್ರಾಂತಿಕಾರಕ ಬರಹಗಳಿಂದ,
ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದರು.
ಕ್ರಾಂತಿಕಾರಿಗಳಾಗಿ, ಆಂಗ್ಲರ ವಿರುದ್ಧ
ಬಂಡೆದ್ದರು. ಯುವಕರಲ್ಲಿ ಸ್ವಾತಂತ್ರ್ಯದ
ಅರಿವು ಮೂಡಿಸುತ್ತ, ಸಕ್ರಿಯವಾದ
ಹೋರಾಟಗೈಯ್ಯಲು ಪ್ರಾರಂಭಿಸಿದಾಗ, ಬ್ರಿಟೀಶ್
ಸರಕಾರ ಅವರನ್ನು ಜೈಲಿಗೆ ದೂಡುತ್ತದೆ.
ಜೈಲು ಅವರಿಗೆ ಅಧ್ಯಯನ
ಬರಹಗಳಿಗೆ ಸ್ಫೂರ್ತಿ ನೀಡಿತು. ಧ್ಯಾನ, ಯೋಗಸಾಧನೆಯ
ತಾಣವಾಯಿತು.
ಆ ಕಾಲದ ಹೋರಾಟಗಾರರಲ್ಲಿಯ
ನಿಸ್ಸತ್ವ, ನಿಃಶ್ಶಕ್ತಿ,
ತಾತ್ವಿಕ ಶೂನ್ಯ ಗುಣಗಳನ್ನು ಗ್ರಹಿಸಿ ಭ್ರಮನಿರಸನ
ಗೊಳ್ಳುತ್ತಾರೆ. ಜೈಲಿಂದ ಬಿಡುಗಡೆಯಾದರೂ
ಬ್ರಿಟಿಶರ ಕೆಂಗಣ್ಣು ಅವರಮೇಲೆ
ಸದಾ ತೂಗಾಡುತ್ತಿತ್ತು. ಆ ಸಂದರ್ಭದಲ್ಲಿ ಫ್ರೆಂಚ್
ಆಡಳಿತದ ಪಾಂಡಿಚೇರಿಗೆ ಧಾವಿಸುತ್ತಾರೆ.
ಅಲ್ಲಿ ಆಶ್ರಮ ಸ್ಥಾಪಿಸುತ್ತಾರೆ. ( ೧೯೨೬) ಅವರೊಳಗೆ
ಸುಪ್ತವಾಗಿದ್ದ ಯೌಗಿಕ ಶಕ್ತಿ ಜಾಗ್ರತಗೊಂಡಿತು. ಆಳ ಅಧ್ಯಯನ, ತಪಸ್ಸಾಗಿ
ಪರಿವರ್ತನೆ ಗೊಂಡ ಆಧ್ಯಾತ್ಮಿಕ ಚಟುವಟಿಕೆಗಳು
ಒಂದೆರಡು
ವರ್ಷಗಳಲ್ಲೇ ಅಂತರರಾಷ್ಟೀಯವಾಗಿ ಗಮನಸೆಳೆಯಲು
ತೊಡಗಿತು.
ಆಧ್ಯಾತ್ಮಿಕ ಸಹಕಾರಿಣಿಯಾಗಿ
ಧಾವಿಸಿ ಬಂದ ಫ್ರೆಂಚ್ ಮಹಿಳೆ ಮೀರಾ ಅಲ್ಪಾಸ್ಸಾ ಆಶ್ರಮದ
ಆಧ್ಯಾತ್ಮಿಕ ಚೈತನ್ಯವಾಗಿ ಪರಿವರ್ತಿತರಾದರು. ಅರವಿಂದ
ಆಶ್ರಮವನ್ನು ಅತ್ಯುನ್ನತ ತಾತ್ವಿಕ
ಕೇಂದ್ರವನ್ನಾಗಿಸಿ, ಮಹಾ ತಾಯಿ ಎಂದೆನ್ನಿಸಿಕೊಂಡರು.
ಆ ಕಾಲದ ಅಮೇರಿಕಾ ದೇಶದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ನರ
ಪುತ್ರಿ ಮಾರ್ಗರೆಟ್ ವಿಲ್ಸನ್,
ಆಶ್ರಮಕ್ಕೆ ಆಗಮಿಸಿ, ಅರವಿಂದರ ಶಿಷ್ಯತ್ವವನ್ನು ಸ್ವೀಕರಿಸಿ, ತಮ್ಮ ಜೀವನದ
ಕೊನೆಯವರೆಗೂ ಇಲ್ಲಿಯೇ ವಾಸಿಸಿ,
ಆಶ್ರಮದ ಸಾಧನೆಗೆ
ತಮ್ಮ ಜೀವನವನ್ನೇ ಅರ್ಪಿಸಿದರು.
ಅರವಿಂದರ ಅಂತರಂಗದ
ಆಳದಲ್ಲಿ ಬೆಳೆದು ಸಮೃದ್ಧಗೊಂಡಿದ್ದ, ತಾತ್ವಿಕತೆ, ಆಧ್ಯಾತ್ಮಿಕತೆ
ಚಿಂತನ ಶೀಲತೆ, ಮತ್ತು ವೈಜ್ಞಾನಿಕತೆಗಳೆಲ್ಲ ಒಂದು ಸುವರ್ಣಬಿಂದುವಿನಲ್ಲಿ ಸೇರಿ, ಪೂರ್ಣಯೋಗವಾಗಿ ಬನಿಗೊಂಡಾಗಲೇ,
ಅವರ ಹೃದಯದಲ್ಲಿ ಸದಾ ನೆಲೆಸಿದ್ದ ಕವಿಯನ್ನು ಎಚ್ಚರಿಸಿತು. ಸಮೃದ್ಧ ಜೀವನ ನಿಷ್ಠ ಮಾನವೀಯ
ಮೌಲ್ಯಗಳಿಂದ ತುಂಬಿಕೊಂಡ, ಸಾವಿತ್ರಿ ಮಹಾಕಾವ್ಯ ತನ್ನಂತಾನೇ
ಉದ್ಭವಗೊಳ್ಳತೊಡಗಿತು. ಸಮಗ್ರ ವಿಶ್ವದೊಂದಿಗೆ ಸಂವಹಿಸುವ ನೆಲೆಯಲ್ಲಿ
ಪ್ರೌಢ, ಶ್ರೀಮದ್ಗಂಭೀರ ಪ್ರತಿಮಾಬದ್ಧ
ಇಂಗ್ಲಿಶ್ ಭಾಷೆಯಲ್ಲಿ ಚಿಮ್ಮಿತು. ಪ್ರತಿಯೊಂದು
ಶಬ್ಛ ವಾಕ್ಯ ಚರಣಗಳ ಒಡಲಲ್ಲಿ
ಅರ್ಥ ಸಾಗರವನ್ನೇ ಆವಾಹಿಸಿಕೊಂಡು, ಧುಮ್ಮಿಕ್ಕಿತು.
ಕ್ಲಿಷ್ಟ ಸಂಕೀರ್ಣ ಇಂಗ್ಲಿಶ್ ಭಾಷಾಪ್ರಯೋಗದ
ಸಾವಿತ್ರಿ ಮಹಾಕಾವ್ಯವನ್ನು ಬೇಂದ್ರೆ
ಕುವೆಂಪು ರಂ.ಶ್ರೀ.ಮುಗಳಿ, ಮುಂತಾದ ದಿಗ್ಗಜ
ಸಾಹಿತಿಗಳು ಅನುವಾದಿಸಲು ಪ್ರಯತ್ನಿಸಿದ್ದರೂ, ಕೋ ಚೆನ್ನಬಸಪ್ಪನವರ ಗದ್ಯಾನುವಾದ
ಮಾತ್ರ ಸಮಗ್ರವಾಗಿ ಮೂಡಿಬಂದಿತ್ತು.
ಮತ್ತೆ ಇತ್ತೀಚಿನ ದಿನಗಳಲ್ಲಿ
ಅನುವಾದ ಅನುಸ್ಪಂದನ ಪ್ರಕ್ರಿಯೆ
ಪ್ರಾರಂಭಗೊಂಡಿರುವುದು ಕನ್ನಡದ ಸುಯೋಗ. ಕಳೆದವರ್ಷವಷ್ಟೇ
ಮಂದರ್ಕೆ ಮಾಧವ ಪೈ ಮಧ್ಯಗನ್ನಡದಲ್ಲಿ, ಮಹಾಛಂದಸ್ಸಿನಲ್ಲಿ, ಸಾವಿತ್ರಿಯನ್ನು
ಕನ್ನಡಕ್ಕೆ ಆಹ್ವಾನಿಸಿದ್ದಾರೆ.
ಇದೀಗ
ಕವಿ ಪುಟ್ಟು ಕುಲಕರ್ಣಿಯವರಿಂದ, ( ಶ್ರೀ ಅರವಿಂದೋ
ಸೊಸೈಟಿ ಯ ಅಖಿಲ ಭಾರತ
ಪತ್ರಿಕೆಯ ಕನ್ನಡ ವಿಭಾಗದ
ಸಂಪಾದಕರು) ಮಯೂರ ಛಂದಸ್ಸಿನಲ್ಲಿ,
ಹೊಸಗನ್ನಡದಲ್ಲಿ,ʻʻಚಿನ್ಮಯದ ದೀಪ್ತಿʼʼ
ಎಂಬ ಶಿರೋನಾಮೆಯಲ್ಲಿ ಮತ್ತೆ ಅವತರಿಸಿ ಕುತೂಹಲ
ಮೂಡಿಸಿದೆ. ಸಾವಿತ್ರಿ ಕಥಾಪ್ರಧಾನ
ಕಾವ್ಯವಲ್ಲ. ಕಥನಪ್ರಧಾನ. ವಿಶ್ವದ ಭೂತ ವರ್ತಮಾನ
ಮತ್ತು ಭವಿಷ್ಯವನ್ನು ಧ್ವನಿಸುವ, ಹುಟ್ಟು ಸಾವುಗಳ ನಡುವಣ ಮಾನವ ಬದುಕಿನ ಅರ್ಥವಂತಿಕೆಯನ್ನು ಶೋಧಿಸುವ,
ಚಿಂತನಪರ, ತಾತ್ವಿಕ ಮಹಾಕಾವ್ಯವಾಗಿ ಮೈದಳೆದಿದೆ.
ಸಾವಿತ್ರಿಯ ಕಥಾವಸ್ತು ಮಹಾಭಾರತದ
ವನಪರ್ವದಲ್ಲಿನ ಸಾವಿತ್ರಿ–ಸತ್ಯವಾನ್ ಉಪಾಖ್ಯಾನದಿಂದ ಪಡೆದದ್ದು. ಮೂಲ ಕಥೆಯಲ್ಲಿ ಸಾವಿತ್ರಿಯು ತನ್ನ ಪತಿಭಕ್ತಿಯಿಂದ ಮರಣದ ದೇವತೆಯನ್ನು ಮೆಚ್ಚಿಸಿ, ಸತ್ಯವಾನನ ಪ್ರಾಣವನ್ನು ಮರಳಿ ಪಡೆಯುತ್ತಾಳೆ. ಆದರೆ ಅರವಿಂದರು ಈ ಕಥೆಯನ್ನು ನೀತಿಕಥೆಯ
ಮಟ್ಟದಲ್ಲಿ ನಿಲ್ಲಿಸದೆ, ಮಾನವ ಆತ್ಮ ಮತ್ತು ಅಜ್ಞಾನಶಕ್ತಿಯ ನಡುವಿನ ಶಾಶ್ವತ ಸಂಘರ್ಷದ ಸಂಕೇತವಾಗಿ ವಿಸ್ತರಿಸುತ್ತಾರೆ. ಅರವಿಂದರು ತಮ್ಮ Author’s Noteನಲ್ಲಿ ಹೀಗೆ
ಹೇಳುತ್ತಾರೆ:
“The story of Savitri is not an invention, but a legend which has a profound symbolic meaning.”
ʻʻ ದಿವ್ಯ ಜೀವನಕೆ
ಮಂತ್ರ ಸಾವಿತ್ರಿ, ಇದು ಪೂರ್ಣ ಪಥದಿ ಯೋಗ
ಯೋಗ ಸಮನ್ವಯದೊಳಗೆ ಚೇತನವು, ಋತದೊಡನೆ
ಮಿಲನವೀಗ ʼʼ
ಎಂಬ ತಾತ್ವಿಕ ನುಡಿಯೊಂದಿಗೆ
ಪ್ರಾರಂಭವಾಗುವ ಅನುವಾದ, ಮಹಾಕಾವ್ಯದ
ನಿಗೂಢಾತಿ ನಿಗೂಢ ಅರ್ಥಸಾಂದ್ರತೆಯೊಡನೆ ಅನುಸಂಧಾನಿಸಿಕೊಳ್ಳುತ್ತ, ಮನೋವಿಜ್ಞಾನ, ಖಗೋಲ, ತಂತ್ರಜ್ಞಾನ, ಮತ್ತು ಆಧ್ಯಾತ್ಮಿಕ ಸಾಗರದಲ್ಲಿ,
ಈಜುತ್ತ, ಕನ್ನಡ ಪರಂಪರೆಯಲ್ಲಿ
ಬೆರೆಯುವ ಅಸಾಮಾನ್ಯ ಸಾಹಸಕ್ಕೆ
ಪುಟ್ಟು ಕುಲಕರ್ಣಿ ಹೆಜ್ಜೆಯಿಟ್ಟಿದ್ದಾರೆ. ಅರವಿಂದರ
ಮಹಾಕಾವ್ಯ, ರಂಜನೆಯ ದಾರಿ ಹಿಡಿದಿಲ್ಲ. ಚಿಂತನೆಯ
ಗುಹಾಲಯದಲ್ಲಿ, ಮನುಷ್ಯನೊಳಗಿನ ದೈವತ್ವದ
ಜಾಗ್ರತಿಗೆ ಹವಣಿಸುತ್ತದೆ. ಮಾನವ ಮಿದುಳಿನ ಶಕ್ತಿ ಮತ್ತು ದೌರ್ಬಲ್ಯಗಳೆಡೆಗೆ ಬೆಳಕು ಬೀರುತ್ತ, ಸಾಗಬೇಕಾದ ದಾರಿಯನ್ನು ಅನ್ವೇಷಿಸಲು ಮುನ್ನುಗ್ಗುತ್ತದೆ.
ಕನ್ನಡದ ಅನುಭಾವೀ
ಪರಂಪರೆಯ ಮಹಾನಾಯಕ ಅಲ್ಲಮಪ್ರಭು.
ಅವರ ದಾರಿಯೂ ಸಹ ಗೂಢ
ಪಥದಲ್ಲಿ ನಿಗೂಢದ ಶೋಧನೆ.
ಅಲ್ಲಿ ಬರುವ ಪ್ರತಿಮೆಗಳು, ಸಂಕೇತಗಳು, ಚಿಂತನೆಗಳು,
ಹೇಗೆ ಸಾಮಾನ್ಯ ಓದುಗನಿಗೆ ಕಬ್ಬಿಣದ
ಕಡಲೆಯೋ, ಹಾಗೆಯೇ ಅರವಿಂದರ
ಕಾವ್ಯ ಕೂಡಾ. ಅರವಿಂದರ ಇಂಗ್ಲಿಶ್
ಭಾಷೆಯಾಗಲೀ, ಪುಟ್ಟು ಕುಲಕರ್ಣಿಯವರ ಸಂಸ್ಕೃತಭೂಯಿಷ್ಠ ಕನ್ನಡದ
ಅನುವಾದವಾಗಲೀ, ಓದುಗನಲ್ಲಿ ಒಂದಿಷ್ಟು ತಾತ್ವಿಕ
ಆಧ್ಯಾತ್ಮಿಕ ಸಿದ್ಧತೆಯನ್ನು ಅಪೇಕ್ಷಿಸುತ್ತದೆ.
ಅರವಿಂದರ ಕಾವ್ಯ ಪ್ರಕಟಗೊಂಡು ಶತಮಾನ
ಸಮೀಪಿಸುತ್ತಿದ್ದರೂ, ವಿಶ್ವದಾದ್ಯಂತ ಚಿಂತಕರ
ಕುತೂಹಲ ಕೆರಳಿಸುತ್ತಿದೆಯೇ ಹೊರತು,
ಕಾವ್ಯದ ಅಂತರಂಗ ಪ್ರವೇಶಿಸಲು
ಇನ್ನೂ ದ್ವಾರ ತೆರೆದಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕಿದೆ.
ಈ ಹಿನ್ನೆಲೆಯಲ್ಲಿ ದಶಕಗಳ ಕಾಲದ ಅಧ್ಯಯನ
ಅನ್ವೇಷಣಾ ಮಾರ್ಗದಲ್ಲಿ ಪುಟ್ಟು ಕುಲಕರ್ಣಿ ಸಾಕಷ್ಟು ಯಶ
ಸಾಧಿಸಿದ್ದಾರೆ. ಇದೀಗ ಹನ್ನೆರಡು
ಭಾಗಗಳ ಸಾವಿತ್ರಿ ಮಹಾಕಾವ್ಯದ ಒಂದನೆಯ
ಭಾಗ ಚಿನ್ಮಯದ ದೀಪ್ತಿ
ನಮ್ಮ ಕೈಯ್ಯಲ್ಲಿದೆ.
ಇದು ಮಕ್ಕಿಕಾ ಮಕ್ಕಿ
ಅನುವಾದವಲ್ಲ. ಅನುವಾದಕನಿಗೆ ದಕ್ಕಿದ
ಅರ್ಥಸಂಪತ್ತಿನ ಛಂದೋಬದ್ಧ ಅನುಸೃಷ್ಟಿ ಎನ್ನಬಹುದಾಗಿದೆ. ಮೂಲದಲ್ಲಿ
ಅರವಿಂದರು ಇಂಗ್ಲಿಶ್ ಪರಂಪರೆಗೆ
ತಮ್ಮ ಪ್ರತಿಭಾ ಸಾಮರ್ಥ್ಯದಿಂದ ಹೊಸ ವಿಸ್ಥಾರ
ನೀಡಿದಂತೇ ಕುಲಕರ್ಣಿಯವರು ಕನ್ನಡದ
ಜಾಯಮಾನಕ್ಕೆ ಒಗ್ಗಿಸಿ, ಕನ್ನಡ ಭಾಷಾವೈಭವದ ಔನ್ನತ್ಯಕ್ಕೇರಿ, ಕನ್ನಡದ್ದೇ
ಆದ ಹೊಸ ಸಾವಿತ್ರಿಯನ್ನು
ಸೃಷ್ಟಿಸಿದ್ದಾರೆ.
ಕನ್ನಡದ್ದೇ ಆದರೂ ಒಂದೇ
ಓದಿಗೆ ತನ್ನ ಗೂಢತೆಯನ್ನು ಬಿಟ್ಟುಕೊಡದಿದ್ದರೂ, ಪ್ರತಿ ಓದಿಗೆ
ಅಮೂಲ್ಯ ವೈವಿಧ್ಯಮಯ ಅರ್ಥವಂತಿಕೆಯನ್ನು ಜಿನುಗಿಸುತ್ತಲೇ
ಇರುತ್ತದೆ.
ʻʻದಿವ್ಯ ಮೌನದಾ
ಹೃದಯವದು ತಾನು, ಉಲ್ಲಸಿತ
ಕರದೊಳಿರಲು
ಶ್ರೀಮಂತ ಸೃಷ್ಟಿ ಭಾವದಲಿ,
ಮಿಡಿತದೊಡನಿಂದು ವಾಸವಿರಲು.
ಬೇಡದಲೆ ಕೊಡುವ
ಒಡಲಾಳ ಪ್ರೇಮ ,
ಅವಳೆದೆಯ ಒಲವಿನಲ್ಲಿ
ಅವಳ ಆ ತೀವ್ರ
ಭಾವತನ್ಮಯತೆ, ಸಮಬಲದಿ
ಕಾಂತಿಯಲ್ಲಿ.ʼʼ
“Savitri
is philosophy transmuted into poetry.” ಎಂಬ ಸುಪ್ರಸಿದ್ಧ
ಹೇಳಿಕೆಯಿದೆ.
ಇದುಮಹಾಕಾವ್ಯ ಎಂದೆನ್ನಿಸಿಕೊಂಡಿದ್ದರೂ ಸಾಂಪ್ರದಾಯಿಕ
ಮಹಾಕಾವ್ಯದ ಅಷ್ಟಾದಶ ವರ್ಣನೆಯೋ,
ಆದಿ ಕವಿಗಳ ಸ್ಮರಣೆಯೋ ಯಾವುದನ್ನೂ
ಪರಿಗಣಿಸದೇ ತನ್ನದೇ
ರಾಜಮಾರ್ಗದಲ್ಲಿ ಸಾಗುತ್ತದೆ. ಯಜುರ್ವೇದದಲ್ಲಿ
ಬರುವ ಸಾವಿತ್ರಿ ಉಪನಿಷತ್ತಿನ
ವಿಸ್ತ್ರತ ರೂಪವೇ ಮಹಾಕಾವ್ಯವಾಗಿ
ಮೂಡಿ ಬಂದಿದೆ.
ಅರವಿಂದರು
ಜೀವನದ ದ್ವಂದ್ವಗಳನ್ನು ಗಮನಿಸುತ್ತಾರೆ.—ಸತ್ಯ–ಮಿಥ್ಯ, ನಿತ್ಯ–ಅನಿತ್ಯ, ಸುಖ–ದುಃಖ, ಅಹಂ–ನಿರಹಂ. ಈ ದ್ವಂದ್ವಗಳು ತತ್ತ್ವಚಿಂತನೆಯ ಗಾಢತೆಯೊಂದಿಗೆ ಹೇರಳವಾಗಿ ಕಾಣಿಸುತ್ತವೆ. ಪ್ರಶ್ನಿಸಿ, ಪ್ರತಿಪ್ರಶ್ನಿಸಿ, ಮೌನದ ಭಾಷೆಯನ್ನು ಕೇಳಿ, ಅದು ನೀಡಿದ ಉತ್ತರವನ್ನು ಸಾಹಿತ್ಯದ ರೂಪದಲ್ಲಿ ದಾಖಲಿಸುತ್ತಾರೆ.
ಶ್ರೀ ಅರವಿಂದರಿಗೆ ಬರಹ ಒಂದು ತಪಸ್ಸಿನಂತೆ. ತಪಸ್ಸು ಎಂದರೆ ಮೌನ, ಏಕಾಗ್ರತೆ, ಶುದ್ಧ ಸ್ವಭಾವ, ಮತ್ತು ಗುರಿಯತ್ತ ಕಾಳಜಿ. ಬರೆಯುವ ಕ್ರಿಯೆಯಲ್ಲೇ ಅವರು ಸತ್ಯದ ದರ್ಶನ ಪಡೆಯಲು ಪ್ರಯತ್ನಿಸುತ್ತಾರೆ.
ಅಂತಹ ಬರಹಗಳು ಕಾಲಾತೀತವಾಗುತ್ತವೆ, ಏಕೆಂದರೆ ಅವು ಯುಗಾಂತರಗಳ ಮನುಷ್ಯರನ್ನು ಒಂದೇ ರೀತಿಯಲ್ಲಿ ಸ್ಪರ್ಶಿಸುತ್ತವೆ.
ಅರವಿಂದರ
ಸಾಹಿತ್ಯ ಕೇವಲ ಕಲೆಗಿಂತಲೂ ಮೇಲಕ್ಕೆ ಎತ್ತುತ್ತದೆ. ಅದು ಜ್ಞಾನ, ಅನುಭವ, ಮೌಲ್ಯ ಮತ್ತು ಆತ್ಮಭಾವಗಳ ಸಂಯೋಜನೆ. ಇಂತಹ ಸಾಹಿತ್ಯ ಮಾನವನ ಆಂತರಿಕ ಬೆಳವಣಿಗೆಗೆ ದಾರಿಯಾಗಿದೆ; ಸಮಾಜಕ್ಕೆ ನೈತಿಕ ಜಾಗೃತಿ ನೀಡುತ್ತದೆ; ಜೀವನದ ಗಹನ ಸತ್ಯಗಳಿಗೆ ಸ್ಪರ್ಷ ನೀಡುತ್ತದೆ. ಈ ಕಾರಣಕ್ಕೆ ಇವರು ಕೇವಲ
ಲೇಖಕರಲ್ಲ, ದಾರ್ಶನಿಕರು. ಆತ್ಮಯಾತ್ರಿ
ಮತ್ತು ಮಾನವಿಯ ಪಥಪ್ರದರ್ಶಕ.
ಜೀವನದ
ದ್ವಂದ್ವಗಳನ್ನು ತಾತ್ವಿಕವಾಗಿ ಗ್ರಹಿಸುವ ಸಾಮರ್ಥ್ಯ. ಸುಖ–ದುಃಖ, ನಿತ್ಯ–ಅನಿತ್ಯ, ಶಾಶ್ವತ–ಕ್ಷಣಿಕ, ಆಕಾಂಕ್ಷೆ–ವೈರಾಗ್ಯಗಳ ನಡುವೆ ನಡೆಯುವ ಮಾನಸಿಕ ಸಂಘರ್ಷವು ಇಲ್ಲಿ
ತತ್ವಜಿಜ್ಞಾಸೆಯಾಗಿ ಮೂಡಿ ಬರುತ್ತದೆ. ಇಂತಹ ದ್ವಂದ್ವಗಳು ಸಾಹಿತ್ಯವನ್ನು ‘ಅನ್ವೇಷಣಾತ್ಮಕ’ ರೀತಿಗೆ ಕರೆತರುತ್ತವೆ ಮತ್ತು ರಚನೆಗೆ ದಾರ್ಶನಿಕ ಆಳವನ್ನು ನೀಡುತ್ತವೆ.
ಇಲ್ಲಿ ಕಲೆ, ಆತ್ಮಜ್ಞಾನ ಮತ್ತು ಮಾನವೀಯತೆ ಮೂರೂ ಸಮಾನ ದಿಕ್ಕಿನಲ್ಲಿ ಬೆಳೆಯುತ್ತವೆ. ಈ ಪರಿಕಲ್ಪನೆ ಸಾಹಿತ್ಯ ಸೃಷ್ಟಿಗೆ ಹೊಸ ತಾತ್ವಿಕ ಆಳವನ್ನು ನೀಡುತ್ತದೆ ಮತ್ತು ಲೇಖಕನನ್ನು ಕೇವಲ ಕಥೆಗಾರನನ್ನಾಗಿ ರೂಪಿಸದೇ ಆತ್ಮಸಾಕ್ಷಾತ್ಕಾರದಿಂದ ಬೆಳಗುವ ಚಿಂತಕರನ್ನಾಗಿ ರೂಪಿಸುತ್ತದೆ.
ಯುದ್ಧ, ಹಿಂಸೆ,
ಮಾನಸಿಕ ಅಶಾಂತಿ
ಮತ್ತು ಅರ್ಥಶೂನ್ಯತೆಯಿಂದ
ಬಳಲುತ್ತಿರುವ ಆಧುನಿಕ
ಸಮಾಜದಲ್ಲಿ ಸಾವಿತ್ರಿ
ಹೊಸ ಆಶಾಕಿರಣವನ್ನು
ಬೀರುತ್ತಿದೆ. ಇದು
ಮಾನವ ಜೀವನ
ಅನಿವಾರ್ಯವಾಗಿ ದುಃಖಮಯವೆಂಬ
ನಿರಾಶಾವಾದವನ್ನು ಪ್ರಶ್ನಿಸಿ,
ಪರಿವರ್ತಿತ ಮಾನವತೆಯ
ಕನಸನ್ನು ಮುನ್ನಿರಿಸುತ್ತದೆ.
ಈ ಅರ್ಥದಲ್ಲಿ
ಸಾವಿತ್ರಿ ಭವಿಷ್ಯಮುಖಿ
ಮಹಾಕಾವ್ಯವಾಗಿದೆ.
ಸಾವಿತ್ರಿ ಮರಣವನ್ನು
ತಿರಸ್ಕರಿಸುವುದಿಲ್ಲ; ಅವನ
ನಿಯಮಗಳ ಮಿತಿಯನ್ನು
ಪ್ರಶ್ನಿಸುತ್ತಾಳೆ. ಅವಳ
ದೃಷ್ಟಿಯಲ್ಲಿ ಮರಣ
ಅಂತಿಮ ಸತ್ಯವಲ್ಲ;
ಅದು ಮಾನವ
ಚೇತನದ ಬೆಳವಣಿಗೆಯ
ಒಂದು ಹಂತ
ಮಾತ್ರ. ಈ
ಸಂವಾದದ ಮೂಲಕ
ಅರವಿಂದರು ವೇದಾಂತೀಯ
ಮತ್ತು ಯೋಗಾತ್ಮಕ
ತತ್ತ್ವಗಳನ್ನು ಕಾವ್ಯರೂಪದಲ್ಲಿ
ಅನಾವರಣಗೊಳಿಸುತ್ತಾರೆ.
ಪ್ರಸ್ತುತ
ಸಾವಿತ್ರಿ ರಸಾನುಭವ, ಆನಂದ, ಮತ್ತು
ಸತ್ಯಗಳ ಸುವರ್ಣಸಂಗಮವಾಗಿ ಶೋಭಿಸುತ್ತಿದೆ.
ವೇದ ಉಪನಿಷತ್ತುಗಳಂತೇ ಶ್ರೀಮದ್ಗಂಭೀರ
ಶೈಲಿಯಲ್ಲಿದೆ. ಅದಕ್ಕೆ ಸಮದಂಡಿಯಾಗಿ,
ಕುಲಕರ್ಣಿಯವರು ಕಾವ್ಯಕ್ಕೆ ಕನ್ನಡದಲ್ಲಿ
ಅನುಸ್ಪಂದಿಸಿದ್ದಾರೆ. ಇಷ್ಟೊಂದು
ಸಮಗ್ರವಾಗಿ , ಆಳವಾಗಿ ಛಂದೋಬದ್ಧವಾಗಿ ಸಾವಿತ್ರಿ
ಮಹಾಕಾವ್ಯ ಕನ್ನಡದಲ್ಲಿ ಬಂದಿಲ್ಲ. ಇದೊಂದು
ಅಪೂರ್ವ ದಾಖಲೆ. ಕಾವ್ಯಾಸಕ್ತ ತಾತ್ವಿಕ ಸಹೃದಯರಿಗೊಂದು
ಅಮೂಲ್ಯ ಕೊಡುಗೆ.
ಓ ಸಾವಿತ್ರಿ……….
ನನ್ನ
ಪ್ರಾಣದಾ ಸಾಮರ್ಥ್ಯವನ್ನು ನಿನ್ನದೇ
ಲೀಲೆಗಿಳಿಸಿ
ನನ್ನ
ಈ ಅಮರ –ವಾಣಿಯಲಿ ನಿಯತ ಧ್ವನಿಯಲಿ ,
ಅಭಿವ್ಯಕ್ತಗೊಳಿಸಿ
ಕಾಲ –
ಪಥಗಳಲಿ ಸಾರೂಪ್ಯಗೊಂಡ ಋತದ , ಆ
– ಯಾಮವಿಂತು
ಗಮ್ಯ
ಪಥಗಳಲಿ ಪರಮನೆಡೆಗೆ ಚಲಿಸೆ, ಮನುಜರೆದೆಗಿರಿಸು ಗುರುತು. (
ಅರವಿಂದರು )
ಸುಬ್ರಾಯ ಮತ್ತೀಹಳ್ಳಿ. ತಾ- ೨೦ -೧೨ -೨೦೨೫.
ಶ್ರೀ ಅರವಿಂದರ ಸಾವಿತ್ರಿ.
ದಳ- ೧. ಚಿನ್ಮಯದ ದೀಪ್ತಿ.
ಪುಟ ೧೯೨. ಬೆಲೆ-
ರೂ ೨೫೦-೦೦. ಚಿದ್ರೂಪ ಪ್ರಕಾಶನ. ಕುಮಟಾ.
ಗ್ರಂಥ
ಋಣ, ೧
ಅಖಿಲ ಭಾರತ ಪತ್ರಿಕೆ. ಅರವಿಂದ ಟ್ರಸ್ಟ. ೨- K.R.
Srinivasa Iyengar – Sri Aurobindo: A Biography and a History ೩
Prema Nandakumar – The Poetic Vision of Sri Aurobindo
ಪುಟ್ಟು
ಕುಲಕರ್ಣಿಯವರ ವಿವಿಧ ಲೇಖನಗಳು.
No comments:
Post a Comment