ʻʻವೃದ್ಧ ಮತ್ತು ಸಮುದ್ರʼʼ
ವೃದ್ಧ ಮತ್ತು ಸಮುದ್ರʼʼ
ʻʻ ಒಂದೇ ನೋವಿಗೆ
ಹಲವೊಂದು ಹೆಸರು. ತಿಳಿವಿನ
ನೋವಿಗೆ ತಪ್ಪೆಂದೂ, ನುಡಿಯ ನೋವಿಗೆ ಹುಸಿಯೆಂದೂ,
ನಡೆಯ ನೋವಿಗೆ ಕೇಡೆಂದೂ,
ಎದೆಯ ನೋವಿಗೆ ದುಗುಡವೆಂದೂ,
ಒಗೆತನದ ನೋವಿಗೆ ಹಗೆತನವೆಂದೂ,
ಹೆಸರು. ತಪ್ಪು ಒಪ್ಪಾಗಲಿಕ್ಕೂ, ಹುಸಿಯು
ಹುರುಳಾಗಲಿಕ್ಕೂ, ಕೇಡು ಒಳಿತಾಗಲಿಕ್ಕೂ,
ದುಗುಡ ಸೊಗಸಾ
ಗಲಿಕ್ಕೂ, ಹಗೆ ನಗೆಯಾಗಲಿಕ್ಕೂ,
ನೋವಿನ ನೆರವು ಬೇಕು. ನೋವನ್ನರಿತವನೇ ಅರಿತವನು.ʼʼ
( ದ.ರಾ.ಬೇಂದ್ರೆ)
ವ್ಯಕ್ತಿ
ಯಾರಾದರೇನು, ತಲ್ಲಣದ ಬಣ್ಣವೊಂದೇ.
ಪ್ರದೇಶ ಯಾವುದಾದರೇನು ಪರಿಸ್ಥಿತಿಯೊಂದೇ. ಭಾಷೆ ಭಿನ್ನವಿದ್ದರೇನು ಭಾವದ ಬಗೆಯೊಂದೇ. ಅದಕ್ಕೇ
ಭೂಮಿಯ ಮೇಲಣ ಮನುಷ್ಯನ
ಅನುಭವಗಳು, ಭಾಷಾತೀತವಾಗಿ ಸಂವಹಿಸುತ್ತವೆ.
ಪ್ರೀತಿಯಿರಲಿ ಧ್ವೇಷವಿರಲಿ, ಅವೆಲ್ಲ
ಸಂಬಂಧಗಳ ಕೊಂಡಿಗಳು. ಆ ಮೂಲಕ
ಮನುಷ್ಯ ಮನುಷ್ಯನನ್ನು ಸಂಪರ್ಕಿಸುವ
ಮಾಧ್ಯಮಗಳು ಅವು. ಅಮೇರಿಕಾ ಎಲ್ಲೋ,
ವಿಶ್ವದ ಮತ್ರೊಂದು ಮೂಲೆ ನನ್ನ
ಹಳ್ಳಿಯೆಲ್ಲೋ, ಅಲ್ಲಿಯ ಸಾಹಿತ್ಯಿಕ
ಕೃತಿಯೊಂದು, ನನ್ನೊಳಗೆ ನುಗ್ಗಿ
ಮನಸ್ಸನ್ನು ಕಲಕಿ, ಕಚಕುಳಿಯಿಡುತ್ತಲೇ ಕಷ್ಟ ನಷ್ಟ, ಪಾಪ ಪುಣ್ಯ, ಶಕ್ತಿ ದೌರ್ಬಲ್ಯ, ಪ್ರೀತಿ ಪ್ರೇಮ,
ಸೋಲು ಹತಾಶೆ, ಮತ್ತು ಯೌವ್ವನ ಮುದಿತನಗಳ,
ಮಾನವೀಯ ಅನುಭವಗಳನ್ನು ಸುರುವಿ,
ಬದುಕೆಂದರೇನು ಎಂಬ ಪ್ರಶ್ನೆಗೆ
ಉತ್ತರ ಹುಡುಕಲು ಒತ್ತಾಯಿಸುವಂತಹ ಸಂದರ್ಭ
ಎದುರಾದುದು ಮಾತ್ರ ಸತ್ಯ.
ಇದಕ್ಕೆ ಕಾರಣ, ವೃದ್ಧ ಮತ್ತು ಸಮುದ್ರ, ಎಂಬ ಕಾದಂಬರಿ. (ಡಾ. ಟಿ.ಡಿ. ರಾಜಣ್ಣ,ತಗ್ಗಿ,ಇವರ ಅನುವಾದ.} ಅಮೇರಿಕಾದ ಜಗತ್ಪ್ರಸಿದ್ಧ
ಕಾದಂಬರಿಕಾರ, ಅರ್ನೆಸ್ಟ ಹೆಮಿಂಗ್ ವೇ,
ರಚಿಸಿದ `` oldman and the Sea’’ಇಂಗ್ಲೀಶ್ ಕೃತಿಯ ಕನ್ನಡದ ಅನುವಾದ.
ಕನ್ನಡದಲ್ಲಿ, ಎಪ್ಪತ್ತರ ದಶಕದಿಂದಲೂ
ಹಲವುಲೇಖಕರಿಂದ ಅನುವಾದಗೊಳ್ಳುತ್ತ ನಿತ್ಯನೂತನವಾಗಿ ರಾರಾಜಿಸುತ್ತಿರುವ ಈ ಕೃತಿ,
ವಿಶ್ವವಿದ್ಯಾಲಯಗಳ ಪದವಿ ತರಗತಿಗೆ
ಪಠ್ಯವಾಗಿದ್ದ ನೆನಪು. ಪ್ರತೀ ತಲೆಮಾರನ್ನೂ
ತನ್ನೊಳಗೆ ಸೆಳೆದುಕೊಂಡು ಸಂಚಲನ ಸೃಷ್ಟಿಸಿದ ಪ್ರಸ್ತುತ
ಕೃತಿ ಕೇವಲ ೧೧೦ ಪುಟಗಳ ಪುಟ್ಟ ಕೃತಿಯಾದರೂ, ಜಗತ್ತಿನ
ಎಲ್ಲಭಾಷೆಗಳಿಗೂ ಅನುವಾದಗೊಂಡು, ಸಾವಿರಾರು
ಪುಟಗಳ ವ್ಯಾಖ್ಯಾನ, ವಿಮರ್ಶೆಗಳನ್ನು
ಪಡೆದುಕೊಂಡಿದೆ. ೧೯೫೪ ರಲ್ಲೇ ನೋಬೆಲ್
ಪ್ರಶಸ್ತಿ, ಪುಲಿಟ್ಜರ್ ಪ್ರಶಸ್ತಿಗಳನ್ನು ತನ್ನ ಒಡಲಿಗೆ
ಸೆಳೆದುಕೊಂಡ ಈ ಕೃತಿ, ಪ್ರಕಟವಾದ ಎರಡೇ ವಾರದಲ್ಲಿ, ಐದು ಮಿಲಿಯನ್ ಪ್ರತಿಮಾರಾಟಗೊಂಡು ದಾಖಲೆನಿರ್ಮಿಸಿದ್ದು ಈಗ ಇತಿಹಾಸ.
ಈಗಲೂ
ದಿನದಿಂದ ದಿನಕ್ಕೆ
ತನ್ನ ಜನಪ್ರಿಯತೆಯನ್ನು ವೃದ್ಧಿಸಿಕೊಳ್ಳುತ್ತಲೇ ಸಾಗುತ್ತಿದೆ.
ಅನುವಾದವೂ ಒಂದು ವಿಶೇಷ ಕಲೆ. ಮೂಲದ ಆಶಯವನ್ನು ಸಮರ್ಥವಾಗಿ ನ್ಯಾಯವಾಗಿ,
ಮತ್ತೊಂದು ಭಾಷೆಯ ಜಾಯಮಾನಕ್ಕೆ
ಒಗ್ಗಿಸಿ, ಅನುವಾದಿಸುವುದು ಕಠಿಣವೇ.
ಪ್ರಸ್ತುತ ಅನುವಾದಕರಾದ ಡಾ.ರಾಜಣ್ಣ ತಗ್ಗಿ, ಕಾದಂಬರಿಯ
ಸರಳತೆ, ಸೂಕ್ಷ್ಮತೆ, ಸಂಕ್ಷಿಪ್ತತೆ ಮತ್ತು ತಾತ್ವಿಕ ಆಶಯವನ್ನು ಪರಿಣಾಮಕಾರಿಯಾಗಿ ಕನ್ನಡದಲ್ಲಿ
ಪ್ರತಿಬಿಂಬಿಸಿದ್ದಾರೆ. ಜೊತೆಗೆ ಅವರೇ ಬರೆದ ಮುನ್ನುಡಿಯಲ್ಲಿ, ಕಾದಂಬರಿಯ
ತಾತ್ವಿಕ ಆಶಯ, ಪಾತ್ರಸೃಷ್ಟಿ, ಮತ್ತು ಮಾನವ ಬದುಕಿನ
ದ್ವಂದ್ವಗಳ ಬಗೆಗೆ ಅಧ್ಯಯನಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ.
ಎಂಭತ್ತು ವರ್ಷ ಮೀರಿದ ವೃದ್ಧ
ಮೀನುಗಾರ ಸ್ಯಾಂಟಿಯಾಗೋ, ಬೃಹತ್
ಮೀನು ಬೇಟೆಯಲ್ಲಿ ಸುದೀರ್ಘಕಾಲ ತಪಸ್ಸಿನಂತೇ
ತೊಡಗಿಕೊಂಡವ. ಆ ಊರಿನ ಮೀನುಗಾರರೆಲ್ಲರಿಗಿಂತ ಹಿರಿಯ.
ಆದರೆ ಕಳೆದ ಎಂಭತ್ತೈದು
ದಿನಗಳ ಮೀನುಬೇಟೆಯಲ್ಲಿ ಒಂದು ದಿನವೂ
ಮೀನುಸಿಗದೇ ಬರಿಗೈಯಲ್ಲಿ ಮರಳುತ್ತಾನೆ.
ಸುತ್ತಲಿನ ಮೀನುಗಾರರ ಗೇಲಿಗೆ
ಒಳಗಾಗುತ್ತಾನೆ. ಅವನೊಂದಿಗೆ ಜೊತೆಯಾಗಿ, ಬಂದ
ಹದಿಹರೆಯದ ಹುಡುಗ ಮುದುಕನಿಂದಲೇ
ಮೀನುಗಾರಿಕೆಯನ್ನು ಕಲಿಯುತ್ತಾ, ಅವನ ಸಂಗಾತಿಯಾಗಿ ಕೆಲಸ ನಿರ್ವಹಿಸುತ್ತಿರುತ್ತಾನೆ. ಸುದೀರ್ಘ
ದಿನಗಳ ವೈಫಲ್ಯ ಅವರ ಸಮುದಾಯದ
ಟೀಕೆಗೆ ಗುರಿಯಾಗಿದ್ದು, ಒಂದು ಕಾರಣವಾದರೆ, ಹುಡುಗನ
ತಂದೆ ತಾಯಿಯರು, ದುರದೃಷ್ಟ ಮುದುಕನೊಂದಿಗೆ
ಹೋಗದಂತೆ ತಡೆಯುತ್ತಾರೆ. ಹುಡುಗ
ಮುದುಕನೊಂದಿಗೆ ಸಮುದ್ರಕ್ಕೆ ಹೋಗದಿದ್ದರೂ
ಮುದುಕನ ಸಂಪರ್ಕ ಬಿಡಲಾರ. ಪ್ರೀತಿಯಿಂದ
ಸ್ಯಾಂಟಿಯಾಗೋನ ಬಡತನದ ಬವಣೆಗೆ
ಸ್ಪಂದಿಸುತ್ತಾನೆ. ಸಮುದಾಯದ ಗೇಲಿಗೆ
ವಿಚಲಿತನಾದ ವೃದ್ಧ ಒಂಟಿಯಾಗಿಯೇ
ಸಮುದ್ರಕ್ಕಿಳಿಯುತ್ತಾನೆ. ಸಮುದ್ರ ಅವನ ಜೀವನ
ಸಂಗಾತಿ. ಒಂಟಿತನದ ಯಾವ ವ್ಯಾಕುಲವೂ ಇಲ್ಲದೇ
ಬಹುದೂರ ಸಮುದ್ರದಲ್ಲಿ ಪಯಣಿಸುತ್ತಾನೆ.
ಅಲ್ಲಿಂದ ಅವನ ನಿಜವಾದ ಛಲ, ಹೋರಾಟ,
ನೋವು, ತಲ್ಲಣಗಳ ಸರಮಾಲೆ ಪ್ರಾರಂಭವಾಗುತ್ತದೆ. ಗಾಳಕ್ಕೆ
ಎರೆಮೀನುಸಿಕ್ಕಿಸಿ ನೂರಾರು ಅಡಿಗಳ ಆಳಕ್ಕೆ ಬಿಡುತ್ತಾನೆ.
ಅಗಾಧ ಆಳದಲ್ಲಿ ಬ್ರಹತ್ತಾದ
ಮಾರ್ಲಿನ್ ಮೀನೊಂದು ಗಾಳಕ್ಕೆ ಸಿಕ್ಕಿಬೀಳುತ್ತದೆ. ಗಾಳ ಕಚ್ಚಿದ
ಮೀನು ದಿನವಿಡೀ ಗಾಳಕ್ಕೆ
ಕಟ್ಟಿದ ಹುರಿಯನ್ನು ಎಳೆಯುತ್ತ,
ದೋಣಿಯನ್ನೂ ಎಳೆದೊಯ್ಯುತ್ತದೆ. ಹಗ್ಗ ಹಿಡಿದ
ಕೈ ಹಗ್ಗದ ಬಲವಾದ ಎಳೆತದಿಂದ ಗಾಯವಾಗಿ
ರಕ್ತ ಸೋರತೊಡಗುತ್ತದೆ. ಆಗಾಗ ಮೀನನ್ನು ಬಲಪ್ರಯೋಗಿಸಿ ಮೇಲೆ ಸೆಳೆಯಲು ಪ್ರಯತ್ನಿಸುತ್ತಾನೆ. ಅದರ ಭಾರಕ್ಕೆ
ಮುದುಕ ದೋಣಿಯ ಮೇಲೆ ಬೀಳುತ್ತಾನೆ. ಮೈ ಕೈ ಗಾಯಗಳಾಗುತ್ತವೆ. ಒಂದು ಕೈಯಲ್ಲೇ
ಚಿಕ್ಕ ಮೀನೊಂದನ್ನು ಹಿಡಿದು ತಿನ್ನುತ್ತಾನೆ. ತಂದ ಕುಡಿಯುವ ನೀರೂ ಖಾಲಿಯಾಗುತ್ತದೆ. ರಾತ್ರಿ
ಭಾರೀ ಚಳಿ. ಕೈ ಚಳಿಯಿಂದ
ಮುರುಟುತ್ತದೆ. ಮೀನಿನ ಸೆಳೆತ
ಆಳದಲ್ಲಿ ಹಾಕುವ ಗಿರಕಿಗಳನ್ನು ಕೈ ಮೈಯಿಂದ
ನಿಗ್ರಹಿಸುತ್ತ, ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಾನೆ.
ಅಂತೂ ಮೀನು ಸೋತು ಮೇಲಕ್ಕೆ
ಬಂದಾಗ, ಮೀನನ್ನು ಪ್ರೀತಿಯಿಂದ
ಸ್ವಾಗತಿಸಿ, ಬರ್ಚಿಯಿಂದ ಕುಕ್ಕಿ
ಕೊಲ್ಲುತ್ತಾನೆ. ಆಗಲೇ ಎರಡುದಿನ ಕಳೆದಿರುತ್ತದೆ. ಅವನ ದೋಣಿಗಿಂತಲೂ ಗಾತ್ರದಲ್ಲಿ
ಹಿರಿದಾದ ಬೃಹತ್ ಮೀನು, ಟನ್ನಿಗೂ
ಹೆಚ್ಚು ಭಾರವಿದ್ದುದರಿಂದ, ದೋಣಿಯ ಪಕ್ಕಕ್ಕೆ
ಎಳೆದು ಬಿಗಿದು, ತನ್ನ ಮರ್ಯಾದೆಗೆ, ಸ್ವಾಭಿಮಾನಕ್ಕೆ ಗೌರವ ನೀಡಿದ ಮೀನಿಗೆ ಕೃತಜ್ಞತೆಯನ್ನರ್ಪಿಸಿ, ಊರಿಗೆ
ಹೊರಡುತ್ತಾನೆ.
ಆದರೆ ಅವನ ಅದೃಷ್ಟ
ಕೈ ಕೊಡುತ್ತದೆ. ಶಾರ್ಕ ಮೀನೊಂದು ವೃದ್ಧನ
ಮೀನಿಗೆ ಬಾಯಿಹಾಕಿ ಕಚ್ಚುತ್ತದೆ.
ಮುದುಕ ಆ ಕ್ಷಣ ಬರ್ಚಿಯಿಂದ
ಶಾರ್ಕ ಮೀನನ್ನು ಕೊಲ್ಲುತ್ತಾನೆ. ಶಾರ್ಕ ಮೀನು ಮಾಡಿದ ಗಾಯದಿಂದ
ಪ್ರವಾಹ ರೂಪದಲ್ಲಿ ರಕ್ತ ಹೊರಸೂಸುತ್ತದೆ.
ಅದರ ವಾಸನೆಗೆ ಶಾರ್ಕ ಗುಂಪೇ ಬಂದು ಮೀನಿನ ಒಂದೊಂದೇ
ಭಾಗದ ಮಾಂಸವನ್ನು ಅಪಹರಿಸ ತೊಡಗುತ್ತವೆ. ವೃದ್ಧ ಮೂರುದಿನದ ಉಪವಾಸ,
ಅಗಾಧ ಶ್ರಮದಿಂದ ಆಯಾಸಹೊಂದಿದ್ದರೂ ಶಾರ್ಕ ಗುಂಪಿನೊಂದಿಗೆ ಯುದ್ಧಗೈಯ್ಯುತ್ತಲೇ ಊರಿಗೆ ಮರಳುತ್ತಿರುತ್ತಾನೆ. ಮಧ್ಯರಾತ್ರಿ
ತೀರಕ್ಕೆ ತಲುಪುವಾಗ, ಮುದುಕನ
ದೋಣಿಗೆ ಬಿಗಿದಿರಿಸಿದ್ದು ಮಾರ್ಲಿನ್
ಮೀನಾಗಿರಲಿಲ್ಲ. ಅದರ ಅಸ್ತಿಪಂಜರವಾಗಿತ್ತು.
ಇದು ಕಾದಂಬರಿಯ
ಸ್ಥೂಲ ಕಥಾವಸ್ತು. ಆದರೆ ಅಷ್ಟೇ ಆಗಿದ್ದರೆ
ಅದೊಂದು ಸಾಹಸಮಯ ರಂಜನೀಯ ಕಥಾನಕವಾಗುತ್ತಿತ್ತು. ಹತ್ತರಲ್ಲಿ ಹನ್ನೊಂದಾಗುತ್ತಿತ್ತು.
ಹೆಮಿಂಗ್ವೇ
ಅವರ The Old Man and the Sea ಕೃತಿ
ಕೇವಲ ಒಬ್ಬ
ವೃದ್ಧ ಮೀನುಗಾರನ
ಕೇವಲ ಮೀನು ಬೇಟೆಯ
ಕತೆಯಾಗದೇ ಅದು ಮಾನವ
ಜೀವನದ ಹೋರಾಟ,
ಸೋಲು-ಗೆಲುವಿನ
ಅರ್ಥ, ಅಸ್ತಿತ್ವದ
ಮೌಲ್ಯ ಮತ್ತು
ಮಾನವ ಆತ್ಮದ ಗೆಲುವಿನ ಕುರಿತು
ಒಂದು ಗಾಢ
ತಾತ್ವಿಕ ರೂಪಕವಾಗಿ ತೋರುತ್ತದೆ.
ಮುದುಕ
ತನ್ನ ಸೋಲಿನ ತುತ್ತ ತುದಿಯಲ್ಲೂ ಅದೃಷ್ಟಕ್ಕಾಗಿ
ಹಂಬಲಿಸುತ್ತಾನೆ. ಎಂದೂ ಚರ್ಚಿಗೆ
ಹೋಗದವ ದೇವರನ್ನು ಪ್ರಾರ್ಥಿಸತೊಡಗುತ್ತಾನೆ.
ಗೇಲಿಗೈದ
ಸಮುದಾಯಕ್ಕೆ ತನ್ನ ಸಾಹಸದ ಮೂಲಕವೇ
ಉತ್ತರಿಸಬೇಕೆಂದಿದ್ದ ಮುದುಕನಿಗೆ ಹಿಡಿದ
ಮೀನನ್ನು ಭಕ್ಷಿಸುತ್ತಿರುವ ಶಾರ್ಕಗಳೇ
ತಡೆಯೊಡ್ಡುತ್ತವೆ. ಎಲ್ಲ ಆಯುಧಗಳನ್ನು
ಕಳೆದುಕೊಂಡು, ಅಕ್ಷರಶಹ ಅನಾಥನಾಗಿದ್ದ ಸೇಂಟಿಯಾಗೋನಿಗೆ ಆಗ
ಅದೃಷ್ಟ ತನಗೊಲಿಯಬಹುದೇ ಎಂಬ ಆಲೋಚನೆ
ಕಾಡತೊಡಗುತ್ತದೆ.
ʻʻ ಅದೃಷ್ಟವನ್ನು
ಮಾರುವವರು ಎಲ್ಲಿಯಾದರೂ ಇದ್ದರೆ ನಾನು ಸ್ವಲ್ಪ ಆದೃಷ್ಟ ಖರೀದಿಸ ಬೇಕಿದೆ. ಎಂದು ಮುದುಕ
ನಿರಾಸೆಯಿಂದ ಅಂದುಕೊಂಡ. ಏನನ್ನು ಕೊಟ್ಟು ನಾನು ಅದೃಷ್ಟವನ್ನು ಕೊಂಡುಕೊಳ್ಳಲಿ..? ಎಂದು ತನ್ನನ್ನು
ತಾನು ಪ್ರಶ್ನಿಸಿಕೊಂಡ. ತೊಲಗಿಹೋದ
ಬರ್ಚಿಯಿಂದಲೋ, ಇಲ್ಲವೇ
ಮುರಿದುಹೋದ ನನ್ನ ಕತ್ತಿಯಿಂದಲೋ, ಅದಲ್ಲದೇ
ಹಾಳಾಗಿ ಕೆಲಸಕ್ಕೆ ಬಾರದಂತೇ
ತಯಾರಾಗಿರುವ ನನ್ನ ಕೈಗಳಿಂದಲೋ. ಯಾವುದರಿಂದ
ಕೊಳ್ಳಲಿ…?? ( ಪು- ೧೦೦ )
ಕಾದಂಬರಿಯ ತುಂಬೆಲ್ಲ ವ್ಯಾಪಿಸಿರುವ ಸಮುದ್ರ,
ಪ್ರಕೃತಿಯ ಒಂದು ಭಾಗವಾಗಿ ಬರದೇ
ಜೀವನದ ಪ್ರತೀಕವಾಗಿ ಶೋಭಿಸುತ್ತಿದೆ.
ʻʻ ಅದು ಉಪ್ಪುನೀರ ಕಡಲಲ್ಲೋ,
ನಮ್ಮೊಡಲಲ್ಲು ಅದರ ನೆಲೆಯು ʼʼ
ಎಂಬ ವರಕವಿ ಬೇಂದ್ರೆಯವರ
ಕವಿವಾಣಿಯಂತೇ, ಸಮುದ್ರ ಇಲ್ಲಿ
ಮಾನವ ಜೀವನವನ್ನೇ ಧ್ವನಿಸುತ್ತ,
ಅನಿಶ್ಚಿತತೆ, ಅಗಾಧತೆ, ಕರುಣೆ, ಮತ್ತು
ಕ್ರೌರ್ಯಗಳ ರೂಪಕವನ್ನಾಗಿಸುತ್ತಾರೆ ಲೇಖಕರು. ಜೀವನದಲ್ಲಿ
ನಾವು ಎದುರಿಸುವ ಸುಖ ದುಃಖ
ಸವಾಲುಗಳು, ವಿಫಲತೆಗಳು ಮತ್ತು
ನಿರೀಕ್ಷೆಗಳು ಸಮುದ್ರದ ಅಲೆಗಳಂತೆ
ಬರುತ್ತಿರುತ್ತವೆ.
ವೃದ್ಧ
ಮೀನುಗಾರ ಸ್ಯಾಂಟಿಯಾಗೋ
ಜೀವನದ ಸಂಧ್ಯಾಕಾಲದಲ್ಲಿದ್ದರೂ,
ತನ್ನ ಕನಸನ್ನು
ಕೈಬಿಡುವುದಿಲ್ಲ. ಅವನು ಮಾನವನ ಆಶಾವಾದದ
ಸಂಕೇತವಾಗುತ್ತಾನೆ. ವಯಸ್ಸು, ಪರಿಸ್ಥಿತಿ
ಅಥವಾ ವೈಫಲ್ಯಗಳು
ವ್ಯಕ್ತಿಯ ಅಂತರಂಗದ
ಶಕ್ತಿಯನ್ನು ನಿರ್ಧರಿಸುವುದಿಲ್ಲ
ಎಂಬ ಸಂದೇಶ
ವನ್ನು
ಬಿತ್ತರಿಸುತ್ತಾನೆ.
ಸ್ಯಾಂಟಿಯಾಗೋಗೆ
ದೊರೆತ ಮಾರ್ಲಿನ್
ಮೀನು ಕೇವಲ
ಆಹಾರ ಅಥವಾ
ಆರ್ಥಿಕ ಲಾಭದ
ಸಾಧನವಲ್ಲ. ಅದು
ಅವನ ಕನಸು,
ಅವನ ಆತ್ಮಗೌರವ,
ಅವನು ಮೂರು
ದಿನಗಳ ಕಾಲ
ಮೀನಿನೊಂದಿಗೆ ನಡೆಸುವ
ಹೋರಾಟ, ಮಾನವನು
ತನ್ನ ಗುರಿ
ಮತ್ತು ಆದರ್ಶಗಳಿಗಾಗಿ
ನಡೆಸುವ ಆಂತರಿಕ
ಹೋರಾಟದ ಸಂಕೇತವಾಗಿದೆ.
ಈ ಹೋರಾಟದಲ್ಲಿ
ಮುಖ್ಯವಾದುದು ಫಲವಲ್ಲ;
ಹೋರಾಟದ ಗೌರವ.
ಹೆಮಿಂಗ್ವೇ
ಇಲ್ಲಿ ಹೇಳುವ
ಮಹತ್ವದ ತತ್ವವೆಂದರೆ:
“ಮನುಷ್ಯನನ್ನು ಕೊಲ್ಲಬಹುದು, ಆದರೆ
ಸೋಲಿಸಲಾಗುವುದಿಲ್ಲ.”
ಇದು ಕೃತಿಯ ತಾತ್ವಿಕ
ಸಂದೇಶ. ದೇಹ
ದುರ್ಬಲವಾಗಬಹುದು, ಸಂಪತ್ತು
ಕಳೆದುಹೋಗಬಹುದು, ಕನಸುಗಳು
ಭಗ್ನವಾಗಬಹುದು; ಆದರೆ
ಆತ್ಮವಿಶ್ವಾಸ ಮತ್ತು
ಮಾನವ ಘನತೆ
ಉಳಿದಿದ್ದರೆ ನಿಜವಾದ
ಸೋಲು ಸಂಭವಿಸುವುದಿಲ್ಲ.
ಸ್ಯಾಂಟಿಯಾಗೋ
ಮೀನನ್ನು ಹಿಡಿಯುತ್ತಾನೆ.
ಆದರೆ ಶಾರ್ಕ್ಗಳು
ಅದರ ಮಾಂಸವನ್ನು
ತಿಂದುಹಾಕುತ್ತವೆ. ಹೊರನೋಟಕ್ಕೆ
ಇದು ಸೋಲು.
ಆದರೆ ತಾತ್ವಿಕ
ದೃಷ್ಟಿಯಿಂದ ನೋಡಿದರೆ
ಅದು ವಿಜಯ.
ಏಕೆಂದರೆ ಅವನು
ತನ್ನ ಸಾಮರ್ಥ್ಯದ
ಪರಮಾವಧಿಯನ್ನು ಮುಟ್ಟಿದ್ದಾನೆ.
ಅವನು ತನ್ನ
ಭಯವನ್ನು ಗೆದ್ದಿದ್ದಾನೆ.
ತನ್ನ ಮಿತಿಗಳನ್ನು
ಮೀರಿ ಪ್ರಯತ್ನಿಸಿದ್ದಾನೆ.
ಸ್ಯಾಂಟಿಯಾಗೋ
ಮೀನನ್ನು ಶತ್ರುವಾಗಿಸದೇ ಆತ್ಮೀಯವಾಗಿ
ಕಾಣುತ್ತಾನೆ. ಅದಕ್ಕೆ ಬದುಕುವುದು ಸವಾಲಾದರೆ,
ಕೊಲ್ಲುವುದು ವೃದ್ಧನ
ಕರ್ತವ್ಯವಾಗುತ್ತದೆ. ಸಮುದ್ರ ಸೇರಿ, ಪಕ್ಷಿಗಳು ಮೀನುಗಳು, ಎಲ್ಲವೂ ಸ್ಯಾಂಟಿಯಾಗೋನ
ಸಹಜೀವಿಗಳು. ಮನುಷ್ಯ ಪ್ರಕೃತಿಯ ಒಂದು
ಅಂಗವೇ ಹೊರತು ಒಡೆಯನಲ್ಲ, ಎಂಬ
ಮೌನ ಸಂದೇಶ ಕೃತಿಯಲ್ಲಿ ಹೊರಸೂಸುತ್ತದೆ.
ಪ್ರಯತ್ನದ ಮೌಲ್ಯ ಫಲಕ್ಕಿಂತ
ಹಿರಿದಾದುದು, ನಿಜವಾದ ಸೋಲು
ಬಾಹ್ಯದಿಂದಲ್ಲ, ಆಂತರ್ಯದಿಂದ ಎಂಬುದನ್ನು
ಮುದುಕ ಧ್ವನಿಸಿದರೂ, ಕೃತಿಯ
ಲೇಖಕ ಹೆಮಿಂಗ್ ವೇ ತನ್ನ
ವೈಯಕ್ತಿಕ ಜೀವನದ ಹತಾಶೆಯ
ಭಾರದಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ
ಮಾಡಿಕೊಳ್ಳುತ್ತಾರೆ. ಅವರಲ್ಲಿ ಬದುಕಿನ
ಬಗೆಗೆ ಅದೆಷ್ಟು ಹತಾಶೆ
ಬೇರೂರಿತ್ತು ಎಂದರೆ ದೊರಕಿದ
ನೋಬೆಲ್ ಪುಲಿಟ್ಜರ್ ಪ್ರಶಸ್ತಿ,
ಹೇರಳ ಆಸ್ತಿ, ಎಲ್ಲವೂ ಗೌಣವಾಗಿ,
ಸಾವಿಗೆ ಶರಣಾದದ್ದು, ಮಾತ್ರ
ವಿಚಿತ್ರ ದುರಂತ.
ಏನೇ ಇರಲಿ, ಕಾದಂಬರಿ ಮಾತ್ರ, ಒಬ್ಬ
ಮೀನುಗಾರನ ಕತೆಯನ್ನೂ ಮೀರಿ, ಮನುಷ್ಯ ಬದುಕಿನ ಮಹಾಕಾವ್ಯವಾಗಿ
ರೂಪುಗೊಂಡಿದೆ. ಅಜೇಯ ಆತ್ಮದ
ಪ್ರತೀಕವಾಗಿದೆ.
(ಸುಬ್ರಾಯ ಮತ್ತೀಹಳ್ಳಿ.
ತಾ- ೧೫-೭- ೨೦೨೬. ಸುಮ-ಸಂಪದ
ಅಂಕಣಕ್ಕೆ. )
ವೃದ್ಧ ಮತ್ತು ಸಮುದ್ರ. ---ಪುಟ ೧೪೪. ಬೆಲೆ-
೧೮೦-೦೦.
ಲೇಖಕ ಅರ್ನೆಸ್ಟ ಹೆಮಿಂಗ್ ವೇ.
ಅನುವಾದ. ಟಿ.ಡಿ.ರಾಜಣ್ಣ.ತಗ್ಗಿ.
ಪ್ರಕಾಶನ:-
ಸೃಷ್ಟಿಪಬ್ಲಿಕೇಶನ್ಸ್. ವಿಜಯನಗರ ಬೆಂಗಳೂರು.
Comments
Post a Comment