ಗಾಂಜಾ ಗ್ಯಾಂಗ್, (ಕಾದಂಬರಿಯಾಧಾರಿತ ದೃಶ್ಯ ರೂಪಕ ) ಪರಿಷ್ಕೃತ ಪ್ರತಿ.
ಗಾಂಜಾ ಗ್ಯಾಂಗ್,
(ಕಾದಂಬರಿಯಾಧಾರಿತ
ದೃಶ್ಯ ರೂಪಕ )
ಪರಿಷ್ಕೃತ ಪ್ರತಿ.
ನಾಂದಿ..........
( ಜಯ ಜಯಾ ಹಸಿರಿಗೆ,
ಜಯ ಜಯಾ ಉಸಿರಿಗೆ. /
ಜಯ ಜಯಾ ಜೀವ ಸಂಕುಲದ ಒಡಲಿಗೆ
/ ಜಯವಾಗಲಿ ತಾಯ ವಾತ್ಸಲ್ಯ ಮಡಿಲಿಗೆ
/ ಅನಂತ ಕಾಲಕು ಆವರಿಸುವ
ಕಡಲಿಗೆ / )
ಮರ ಮರ
ಮರ ಅಮರ /
ಎತ್ತರ ಬಿತ್ತರ
ಹಸಿರು ಚಪ್ಪರ
ಆಳಕೆ ಬೇರು,
ಆಕಾಶಕೆ ಕೊಂಬೆ,
ಬಾನಿಗೆ ಭೂಮಿಗೆ
ಸೇತುವೆ ನೋಡಾ.
ಮೋಡವ ಮುಡಿದ
ಪರ್ವತ ಪತಿವೃತೆ, ಸೂರ್ಯ
ಚಂದ್ರರೇ ತಿಲಕ.
ಪ್ರಾಣಿ ಸಂಕುಲ ಪಕ್ಷಿಕೂಜನ, ಹಣ್ಣು ಹೆಜ್ಜೇನು, ಸಿಹಿ ಸಿಹಿ
ಪುಳಕ.
ನದಿಯ ಜುಳಜುಳು,
ತಂಗಾಳಿಯ ತಿರುಳು, ದಬ ದಬೆ
ಅಬ್ಬರ, ವಿದ್ಯುನ್ಮಾದ,
ಕೋಗಿಲೆ ಕೂಜನ, ಕಪಿಗಳ ಕುಣಿತ,
ನಾಚುವ ಸಿಂಗಳ, ವಿಚಿತ್ರ ವಿನೋದ.
ಶ್.....!! ಹುಷಾರು,
ಅಲ್ಲಿದೆ ಬುಸ್ ಬುಸ್ ಕಾಳಿಂಗ.
ಜಾರುವ ದಾರಿ, ಕತ್ತಲ
ಕಾನು, ಮುಳ್ಳಿನ ಬಾಸಿಂಗ.
ಹಗಲೂ ಇರುಳು ಒಂದಾಗಿದೆ ಇಲ್ಲಿ,
ಕಾಲದ ಗೊಡವೆ ಬೇಡ.
ಹೊಕ್ಕ ಹೊರತು ದಾರಿ ಕಾಣದು, ಸುಮ್ಮನೆ
ಜಡಗೊಳ್ಳಬೇಡ.
( ಪದ್ಯ ೨)
ಕಾಡು ಕಾಡು ಕಾಡು, ಅದರೊಳಗೇನಿದೆ ನೋಡು.
ಬೀಟೆ ಹೊನ್ನೆ
ತೇಗ, ದೇವದಾರು ಶ್ರೀಗಂಧ
ಅದು ನಮ್ಮದು ನಮ್ಮದು, ಅಪ್ಪಿಬಿಡು.
ಕಾಡುವವರನು ಹೊರ ದೂಡಿಬಿಡು.
ಕಾಡು ಕಾಡು ಕಾಡು.
ಹೇಡಿಗೆ
ಕಾಡು, ಕತ್ತಲೆ ಗೂಡು
ಗೂಗೆ ಕಾಗೆಗಳ ಬೀಡು
ಸೂಡಿಯ
ತೋರಿ ಕಳಿಸಿ ಬಿಡು
ಬಂಗಲೆಯೊಳಗಣ
ನುಂಗಣ್ಣಗೆ ಬೇಕು
ಮಂತ್ರಿ ಮಾನ್ಯರಾ ಪ್ರೀತಿಯ ತಾಕು
ವ್ಯಾಘ್ರ
ಚರ್ಮಿಗಳ ಅಧ್ಯಾತ್ಮದ ಸೆಳಕು.
ಕಾಡು ಕಾಡು ಕಾಡು.
Giridhar.... ಹಾಯ್
ತಮಗೆಲ್ರೀಗೂ ನಮಸ್ಕಾರಾ ನಮಸ್ಕಾರಾ.
ಒಂದು ಒಳ್ಳೇ ಪದ್ಯ ಕೇಳಿದ್ರಿ
ಅಲ್ವಾ. ಅಲ್ಲಾ ಕುಣಿತವನ್ನೇ
ನೋಡಿದ್ರಿ. ನೋಡಿ ನೋಡಿ. ತಪ್ಪೇನಿಲ್ಲ. ಆದ್ರೆ
ಜೀವನಾ ಅಂದ್ರೆ ಬರೀ ಪದ್ಯ ಅಲ್ವಲ್ಲಾ...
ಅಲ್ಲಿ ಗದ್ಯವೂ ಇದೆ. ಗದ್ದಲವೂ ಇದೆ. ಒಗಟಿದೆ, ಜಿಗುಟಿದೆ.
ಕತ್ತಲಿದೆ ಬೆಳಕಿದೆ.
ಸುಖವಿದೆ ದುಃಖವಿದೆ. ದುಷ್ಟತೆ ಶಿಷ್ಟತೆ
ಜೊತೆಗೆ ಸಂತೋಷ ಸಂಭ್ರಮ!! ಇಲ್ಲಿ ಅದೂ ಇದೆ.
ಆದರೆ
ಅದರಲ್ಲಿ ನಾವು ಏನನ್ನು ಆಯ್ಕೆ ಮಾಡುತ್ತೇವೋ ಅದರಮೇಲೆ
ನಮ್ಮ ವ್ಯಕ್ತಿತ್ವದ ಭವಿಷ್ಯ... ಅಲ್ವಾ? ಅದಕ್ಕೇ
ಹೇಳೋದು ಪ್ರಕೃತಿ ಎಂದು. ಬದುಕು ಅಂದರೆ ಪ್ರಕೃತಿʼ
ಪ್ರಕೃತಿಯಲ್ಲಿ ಎಲ್ಲವೂ ಇದೆ. ಅದು ಅಡವಿಯ ಹಾಗೆ. ಕಾಗೆಯ
ಜೊತೆಗೆ ಕೋಗಿಲೆಯಿದೆ. ಹುಲಿಯ ಜೊತೆಗೆ
ಜಿಂಕೆಯೂ ಇದೆ. ದೊಡ್ಡ ಕಾಡಲ್ಲಿ
ತಿರುಕನ ಬಳ್ಳಿ ಎಂಬುದಿದೆ ಗೊತ್ತಾ...?
ಅಕಸ್ಮಾತ್ ನೀವು ನಡೆದಾಡುವಾಗ
ಆ ಬಳ್ಳಿಯನ್ನು ದಾಟಿದಿರೋ, ಮುಗಿಯಿತು
ನಿಮ್ಮ ಕೆಲಸಾ. ನೀವು ದಿಕ್ಕು ತಪ್ಪುತ್ತೀರಿ.. ಅಂಡಲೆಯುತ್ತೀರಿ. ಕಾಡಿನ
ಬಗೆಗೆ ಪ್ರೀತಿಯೊಂದೇ ಸಾಲದು, ಎಚ್ಚರವೂ ಬೇಕೇಬೇಕು
ಗೊತ್ತಾ.... ಅದು ಮರಗಳ ಕಾಡು. ಇದು ಜನರ ಕಾಡು. ಮರ ನಿಶ್ಚಲ.ಮೂರ್ತಿ. ನಾವು ಚರಮೂರ್ತಿಗಳು. ಈ ಎಲ್ಲ ಸದ್ದಿಗೆ
ಬೆಲೆ ಬರಬೇಕು ಅಂದ್ರೆ
ಪದ್ಯ ಬೇಕೇಬೇಕು.
ಸರಿ ಸರಿ ಕ್ಷಮಿಸಿ, ನನ್ನ ಪರಿಚಯಾನೇ
ಹೇಳ್ದೇ ಭಾಷಣಾ ಶುರು ಹಚ್ಚಿಬಿಟ್ಟೆ. ನಾನೊಬ್ಬ ಪತ್ರಕರ್ತ. ನನ್ ಹೆಸ್ರು
ಗಿರಿಧರ, ಅಂತ.ʻʻ
ಕ್ಷೇಮ ಸಮಾಚಾರ,ʼʼ ಪತ್ರಿಕೆ ವರದಿಗಾರ. ನನ್ನನ್ನ
ನೀವು ನೋಡಿರ್ಲಿಕ್ಕಿಲ್ಲ. ಆದ್ರೆ ನನ್ ಬರಹ, ವರದಿ, ಲೇಖನ, ಕತೆ ಕಾದಂಬ್ರಿ
ಕೆಲವ್ರಾದ್ರೂ ಗಮನಿಸಿರ್ಲೇ ಬೇಕು.
ಅಲ್ಲಾ ಒಂದ್ ತಾಲೂಕಿನ್ ಮಟ್ಟದಲ್ಲಿ ಅಂದ್ರೆ ಈ ನಿದ್ರಾಪುರದಲ್ಲಿ, ಒಂದ ಪತ್ರಿಕೆಗಾಗಿ ವರದಿ ಮಾಡ್ತಾ
ತಿರುಗಾಡೋ ನನಗೆ ಇಷ್ಟ್
ಮಾತಾಡೋಕೂ ಪುರುಷೊತ್ತಿಲ್ಲ. ನಮ್ ಸಮಾಜ
ಇದ್ಯಲ್ಲಾ, ನಮ್ ಕೆಲಸಾನ, ಗಂಭೀರವಾಗಿ ನೋಡಿಯೇ
ಇಲ್ಲಾ. ಒಂದು ವೃತ್ತಿ
ಅಂತ ಸ್ವೀಕರಿಸಲೂ ಇಲ್ಲ.
ಸರಿಯಾಗಿದ್ದಾರೆ ಬಿಡಿ. ಯಾಕೆಂದ್ರೆ ಒಂದು ಕಾರಿಲ್ಲ...
ಒಂದ್ ಬಂಗ್ಲೆಯಿಲ್ಲಾ. ಸುತ್ ಮುತ್ಲೂ ಬಹುಪರಾಕ್
ಎನ್ನೋ ಬಾಲಂಗೋಚಿಗಳಿಲ್ಲ. ಹಗ್ಲಿಲ್ಲ
ರಾತ್ರಿಯಿಲ್ಲ, ಸದಾ ಸುತ್ತತಾ,
ಸುದ್ದಿಮಾಡ್ತಾ ಇರೋನನ್ನ ಸಮಾಜ ಆದ್ರೂ ಹ್ಯಾಂಗೆ
ಗಂಭೀರವಾಗಿ ಕಂಡೀತು ಹೇಳಿ.
ಸತ್ಯ ಬರೆಯೋದು ಅಂದ್ರೆ
ಸಮಾಜಕ್ಕೊಂದು ದೀಪ ಕೊಟ್ಟಹಾಗೆ. ಅಂತ ಹೇಳ್ತಾರೆ.
ಆದ್ರೆ ಸತ್ಯ ಅನ್ನೋದು
ಬೆಂಕಿಯ ಹಾಗೆ ಮಾರಾಯ್ರೇ. ಸತ್ಯ ಹೇಳ್ದವನನ್ನೇ ಸುಟ್ಟುಬಿಡುತ್ತದೆ. ಹಾಗಾಗಿಯೇ
ಪತ್ರಿಕೆಗಳು, ಅದು ಸತ್ಯವೂ
ಅಲ್ಲ, ಸುಳ್ಳೂ ಅಲ್ಲ. ಗೋಡೆ
ತಲೇಮೇಲೆ ದೀಪ. ಹೇಳ್ತಾರಲ್ಲ,
ಹಾಗೆ. ಆದ್ರೆ ನನ್ನ ವರದಿಗಳು ಸತ್ಯದ ಪ್ರತಿಧ್ವನಿಯಾಗಬೇಕಿತ್ತು, ಶೂನ್ಯದಲ್ಲಿ ಕರಗಿಬಿಡುತ್ತದೆ. ಮಾರಾಯ್ರೆ.
ಆಗ ನಾನು ಖಿನ್ನನಾಗುತ್ತೇನೆ. ದಟ್ಟ
ಕಾಡಿಗೆ ನುಗ್ಗಿ ಸುತ್ತತೊಡಗುತ್ತೇನೆ. ಅರಣ್ಯ ಕೊಡೋ ಅನುಭವ,
ಅನುಭಾವವನ್ನ, ಈ ಜನಾರಣ್ಯ
ಕೊಡೋದಿಲ್ಲ ನೋಡಿ.
ಅಲ್ಲಿ
ಹಸ್ರೇ ರಾಜ. ಕೆಸ್ರೇ
ಆಸ್ತಿ. ದುರ್ಬಲ ಪ್ರಾಣಿ ಬದುಕೋಕೆ
ಓಡಬೇಕು. ಸಮರ್ಥ ಪ್ರಾಣಿಯೂ ಬೇಟೆಗಾಗಿ ಬೆನ್ನುಹತ್ತ ಬೇಕು. ತಪ್ಪಿಸಿಕೊಂಡವ
ಗೆದ್ದ. ಹಿಡಿಯಾಕೆ ಬಂದವ ಸತ್ತ.
ಇದು ಕಾನಿನ ಕಾನೂನು.
ಪ್ಯಾಟೇ
ಮಂದಿ ಬ್ಯಾಟೀಗೆ ಹೋದ್ರೆ,
ಬ್ಯಾಟೇ ಮಂದಿ ಪ್ಯಾಟೀಗೆ
ಬಂದ್ರೆ ಎಂಥಾ ವಿಪ್ಲವ, ಮಾರಾಯ್ರೇ.....
( ಮೆಲ್ಲನೆ
ರಂಗದಲ್ಲಿ ಕತ್ತಲೆ. ನೆಳಲು ಬೆಳಕಾದಾಗ, ನಾಲ್ಕಾರು ಜನ ಕೈಯಲ್ಲಿ ಕಬ್ಬಿಣದ
ದಪ್ಪ ಸಲಾಕೆ ಹಿಡಿದು ಒಟ್ಟಾಗಿ,
ಬ್ರಹತ್ತಾದ ಮರದ ದಿಮ್ಮಿಯನ್ನು
ಉರುಳಿಸಲು ತೊಡಗುತ್ತಾರೆ. ಹಿನ್ನೆಲೆಯಲ್ಲಿ
ಮರಕಡಿದು ಕೆಡವುವ ಸದ್ದು ಕೇಳುತ್ತಿರುತ್ತದೆ
ಮರದಂತೇ ನಿಂತ ಮನುಷ್ಯರನ್ನು
ಕಡಿದು ಕೆಡವುವ ದೃಶ್ಯ)
ಆಲೇಲಿಯಾ.....ಐಸ್ಸಾ.., ಸ್ವಲ್ಪಾ
ಸರ್ದಾ ಐಸ್ಸಾ... ಕೋಗಾರ್
ಘಟ್ಟಾ ಐಸ್ಸಾ. ಹಿಡ್ಕ ನನ್ ಸೊಂಟಾ... ಐ...ಸ್ಸಾ. ಹಿಡ್ತಕ್ ಬರ್ಲಿ ನಾ..ಟಾ.
ಐಸಾ ಐ...ಸಾ. ಹಿಡ್ಕ
ಹುಂಜಾ ಐ...ಸ್ಸಾ. ಎಳ್ಕ
ಗಾಂಜಾ ಐ...ಸ್ಸಾ.
(ನಾಟಾ ಉರುಳಿಸಿ
ಸುಸ್ತಾಗಿ ಅಲ್ಲಿಯೇ ಕುಳಿತು,
ಚಿಲುಮೆ ಹೊರ ತೆಗೆಯುತ್ತಾರೆ. ಅದಕ್ಕೆ
ಒಂದಿಷ್ಟು ಸೊಪ್ಪು ತುಂಬಿ ಬೆಂಕಿ ಹಚ್ಚುತ್ತಾರೆ.
ಒಬ್ವೊಬ್ಬರಾಗಿ, ಸೇದ ತೊಡಗುತ್ತಾರೆ. ಚಿಲುಮೆ ಕೈಯಿಂದ
ಕೈಗೆ ದಾಟುತ್ತದೆ. ಕ್ರಮೇಣ
ಅಮಲೇರುತ್ತದೆ.)
ಪದ್ಯ—೪
ʻʻ ಬನ್ನಿ ಬಂಧುಗಳೇ ಬಾಂಗ್
ಬಾಂಗ್.
ಅಮಲ ಸಿಂಧುಗಳೇ ಬಾಂಗ್
ಬಾಂಗ್.
ಹುಡುಗನ್ನೋಡಿ
ಹುಡುಗೀ ಅಮಲು,
ಹುಡುಗೀ
ನೋಡಿ ಪ್ಯಾಶನ್ ಘಮಲು
ನಾಚ್ ನಾಚ್ ನಂಗಾ ಕುಣಿಯೋ ಮಂಗಾ,
ನಶೆ ನಶೆ ಮಜಾ, ಧೀಮ್ ರಂಗಾ
ಪುಢಾರಿ
ತಲೇಲಿ, ಓಟೀನ್ ಅಮಲು,
ಮಂದಿಗೆಲ್ಲಾ
ದುಡ್ಡೀನ ಅಮಲು.
ನಶೆಯೋ ನಶೆ, ಆಸೆ ದುರಾಸೆ.
ಬಡವಾ ಮಾತ್ರ ಬಿಲ್ಕುಲ್
ಖುಲಾಸೆ.
,ಮತ್ತೇರಿದೆ
ಭಂಗಿ, ಅಂತಃಕರಣಾ ನುಂಗಿ.
ಎಲ್ಲೆಲ್
ನೋಡಿ, ಕುಸ್ತಿ ಜಂಗಿ.
ಯಾಕೆ ಕುಂತೀ,
ನೋಡ್ತಾ ಜಂತಿ,
ಸಾಯೋದ್ ಹ್ಯಾಂಗೂ
ಸಾಯ್ತಿ,
ಸಾಯಿ...!!
ಬಂಗೀ ಪಾನಕ ನುಂಗಿ. ʼʼ
ಜ್ಞಾನ ಪತ್ರೆಯಿದು, ಧ್ಯಾನ ಪಾತ್ರೆಯಿದು
ಸ್ವರ್ಗದಂಗಳದಿ ತೇಲಾಡುವುದು.
ಪುಢಾರಿಯ
ಚಿಲುಮೆ, ಹೊಗೆಯಾಡುವುದು.
ನಮ್ಮಯ
ಹೊಟ್ಟೆ ತುಂಬುವುದು.
( ಕತ್ತಲೆಯಾಗಿ ಬೆಳಕು ಬಂದಾಗ,
ಗಿರಿಧರ ಮೇಜಿನೆದುರು ಕುಳಿತು, ಧ್ಯಾನಸ್ಥನಾಗಿ ಅದೇನೋ ಬರೆಯುತ್ತಿದ್ದಾನೆ.
ಖುರ್ಚಿಯ
ʻʻ ಕ್ಷೇಮ ಸಮಾಚಾರʼʼ
ಪತ್ರಿಕಾಲಯ ಎಂಬ ಫಲಕ ಕಾಣುತ್ತಿದೆ.
ಆಚೀಚೆ
ನೋಡುತ್ತ, ಕಳ್ಳನಹಾಗೇ ಗೋವಿಂದ ಹೆಗಡೆಯ
ಪ್ರವೇಶ. )
ಗೋವಿಂದ
ಹೆಗಡೆ;- ಹ್ವಾಯ್
ನಮಸ್ಕಾರ.
(
ಗಿರಿಧರ ತಲೆಯೆತ್ತದೇ ಬರಹದಲ್ಲಿ
ತಲ್ಲೀನ. ಗೋವಿಂದ ರಂಗ ಪ್ರವೇಶಿಸಿ ಕೆಮ್ಮುತ್ತಾನೆ ಗಂಟಲು ಕೆದರಿ ಧ್ವನಿ ನೀಡುತ್ತಾನೆ. ಗಿರಿಧರ ಬರಹದ ತಲ್ಲೀನತೆಯಿಂದ ಮೆಲ್ಲನೆ ಎಚ್ಚರಗೊಂಡು ತಲೆಯೆತ್ತಿ ನೋಡುತ್ತಾನೆ.)
ಗೋವಿಂದ; ನಾನು
ಗೋವಿಂದ. ಭಾರೀ ದೂರದಿಂದ
ಬಂದೆ. ತಮ್ಮನ್ನೇ ಭೇಟಿ ಮಾಡ್ಬೇಕು
ಅಂತ.
ಗಿರಿಧರ
; ( ಮೌನದಲ್ಲೇ
ಬಂದ ವ್ಯಕ್ತಿಯನ್ನು ನಿರುತ್ಷಾಹದಿಂದ
ಪರೀಕ್ಷಿಸುವಂತೆ ದೃಷ್ಟಿಸುತ್ತಾನೆ.)
ಗೋವಿಂದ
; ಹ್ವಾಯ್, ನೀವು ಪತ್ರಕರ್ತರು ಅಲ್ವಾ...?
ನಿಮ್ ಹತ್ರೆ ಒಂದಷ್ಟು
ಮಾತಾಡ್ಬೇಕಿತ್ತು ಮಾರಾಯ್ರೆ. ಅದ್ಕಾಗಿ
ಹುಡುಕಿ ಬಂದೆ.
ಗಿರಿಧರ ; ಹೌದಾ....
ನಮಗೆ ಈಗ ಹೆರಿಗೆ
ಸಮಯ. ದಿನನಿತ್ಯದ ಹೆರಿಗೆ.
ಸುದ್ದಿ ಇದ್ರೆ ಬರೀಬೇಕು.
ಇಲ್ಲಾ ಸುದ್ದಿ ಮಾಡಬೇಕು. ಈಗಂದೀಗ ಕಳಿಸ್ಬೇಕು. ನಾವು ಸುದ್ದಿಜೀವಿಗಳು. ಸರಿ ಕೂಡ್ರಿ. ಏನ ಬಂದ್ರಿ ಯಾಕೆ ಬಂದ್ರಿ...?
ಗೋವಿಂದ ; ನಂದೊಂದು
ಸಮಸ್ಯೆ ಹೇಳ್ಕೋಳ್ಳೋಕೆ ಬಂದೆ.
ಗಿರಿಧರ ; ನೋಡಿ,
ಮಗ್ಳೀಗೊಂದ್ ಗಂಡು ಹುಡುಕ್ಕೊಡಿ,
ಮಗ್ನಿಗೊಂದು ಹೆಣ್ ಇದ್ರೆ ಹೇಳಿ,
ಎಲ್ಲಾದ್ರೂ ಗನಾ ದನಾ ಇದ್ದನ್ರಾ..... ಅನ್ನೋ
ಬೋಗಾಳಾ ಕೇಳಿ ಕೇಳಿ ಬೋರಾಗ್ಬಿಟ್ಟಿದೆ. ಅದೆಲ್ಲಾ
ಇದ್ರೆ....
ಗೋವಿಂದ
; ಅದಲ್ಲಾ ಅದಲ್ಲಾ
ಅದೂ ಅದೂ......
ಗಿರಿಧರ : ಗೊತ್ತಾಯ್ತು ಗೊತ್ತಾಯ್ತು
ಎಲ್ಲೋ ಕಳ್ ನಾಟಾ ಕೊಯ್ದು ಸಿಕ್ಕಿಕೊಂಡಿದ್ರಿ, ಪಾರೆಸ್ಟ ಅಧಿಕಾರಿಗೆ ಹೇಳ್ಬೇಕು
ಅಲ್ವಾ.....?
ಗೋ ವಿಂದ ; ಅದೂ ಅಲ್ರೋ ಮಾರಾಯ್ರಾ,
ಅದೂ ಅದೂ ......
ಗಿರಿಧರ ; ಗೊತ್ತಾಯ್ತು
ಗೊತ್ತಾಯ್ತು, ಆಚೀಚೆ ಮನೆಯವ್ರತ್ರ
ಹೊಡದಾಟ ಮಾಡಿ, ಅವ್ರು
ನಿಮ್ಮ ಮೇಲೆ ಕಂಪ್ಲೇಂಟ್
ಕೊಟ್ಟೀರ್ಬೇಕು...... ಪೋಲಿಸಿಗೆ ಹೇಳ್ಬೇಕು
ಅದೇ ಅಲ್ವಾ.....
ಗೋವಿಂದ
: ಥೋ
ಥೋ ನಾನಂಥಂವಾ ಅಲ್ರೋ,
ಅಂಥ ಯಾವ್ ಸಮಸ್ಯೆ
ತಂದಿಲ್ಲಾ. ಬತ್ಲೆಕಾನಿನ ನಡುವೆ ಬೈನೇಕಾಡು
ಎಂಬೋ ಊರು ನಂದು. ನನ್ನ ಹೆಸರು ಗೋವಿಂದ್
ಹೆಗಡೆ ಅಂತ.
ಗಿರಿಧರ
: ನೋಡಿ ನಾನು ಹೆಣ್ಗಂಡ್
ದಳ್ಳಾಳಿ ಅಲ್ಲ, ರಿಯಲ್
ಎಸ್ಟೇಟ್ ಕುಳಾನೂ ಅಲ್ಲ,
ಯಾವ್ ಅಧಿಕಾರಿ ಗಡ್ಡಕ್ಕೆ
ಜೋತು ಬೀಳೋನೂ ಅಲ್ಲ. ನಾನೊಬ್ಬ
ವರದಿಗಾರ. ಇದ್ದುದನ್ನ ಇದ್ದ ಹಾಗೇ ಸುದ್ದಿ
ಮಾಡಾಂವಾ.
ಗೋ.......; ನನಗೊಂದು
ಭಾರೀ ಕಷ್ಟ ಮೈಮೇಲೆ
ಬಂದುಬಿಟ್ಟಿದೆ, ಶರ್ಮಾ ವಕೀಲ್ರತ್ರೆ
ಹೋಗಿದ್ದೆ. ಅವ್ರು ನಿಮ್ಮತ್ರೆ
ಹೋಗು ಅಂದ್ರು. ಅದ್ಕಾಗಿ
ಬಂದೆ.
ಗಿರಿ..... ಸರಿ ಸರಿ ಬೇಗ್ ಬೇಗ್ ಹೇಳ್ಬುಡಿ.
ಗೋವಿಂದ
; ಇದು
ಬಹಾಳ ಭಾರೀ ಸೀರಿಯಸ್
ವಿಷಯಾ. ಇದು ನಿಮ್ಮತ್ರೇ
ಇರ್ಬೇಕು. ಎಲ್ಲೂ ಲೀಕ್ ಆಗ್ಬಾರ್ದು,
ಗಿರಿ...... ( ಒಮ್ಮೆಲೇ ರೇಗುತ್ತ)
ಓಯ್ ಇವ್ರೇ ನಾನು ಯಾರು ಅಂತ ತಿಳ್
ದಿದೀರಿ, ಯಾರಾರ್ ಏನೇನೋ ವದ್ರಿದ್ದನ್ನ
ಊರಲ್ಲೆಲ್ಲಾ ಡಂಗುರ ಬಾರಸ್ತಾ ಕೆಲಸಾ ಇಲ್ದೇ
ತಿರಗಾಡ ಮನುಷ್ಯ ಅಂತ ತಿಳದಿದ್ದೀರಾ..?
ನಂಗೂ ಬೇಕಾದಷ್ಟು ಕೆಲಸಾ ಇದೆ. ನಿಮಗೆ ನಂಬ್ಕೆ
ಇದ್ರೆ ಹೇಳಿ. ಇಲ್ಚೇ ಇದ್ರೆ
ಜಾಗ ಖಾಲಿಮಾಡಿ.
ಗೋವಿಂದ : ( ಖಿನ್ನನಾಗಿ...) ಥೋ ಥೋ ಹಾಂಗಲ್ರೋ
ಮಾರಾಯ್ರಾ. ನಾನು ಸಂಸಾರ್ವಂದಿಗ,
ನನ್ ಜೀವಕ್ಕೇ ಕುತ್ತು ಬಂದ್ಬಿಟ್ಟಿದೆ. ನಾ ಬಚಾವ್ ಆಗ್ಬೇಕು.
ನನ್ ಕೆಲಸಾನೂ ಆಗ್ಬೇಕು.
ನೀವು ಬೇಜಾರ ಮಾಡಿಕೊಳ್ಳಬೇಡಿ.
ಗಿರಿ .... ( ಕೊಂಚ ತಣ್ಣಗಾಗಿ ) ಅಂಥಾದ್ದೇನಾಗಿದೆ. ಜೀವಕ್ಕೇ
ಅಪಾಯ ಅಂದ್ರಿ. ಯಾರಿಂದ
ಯಾಕೆ...?
ಗೋವಿಂದ : ( ಭಯದಲ್ಲಿ
ನಡುಗುತ್ತಾ, ಆಚೆ ಈಚೆ ನೋಡುತ್ತಾ, ವರದಿಗಾರನ
ಹತ್ತಿರ ಬಂದು ಅಂತರಂಗದಲ್ಲೇ ಪಿಸುಗುಡುತ್ತಾನೆ.) ಗ ಗ ಗಾಂಜಾ ಗ್ಯಾಂಗ್
ನವರಿಂದ.
ಗಿರಿ..... ಆಶ್ಚರ್ಯ ಚಕಿತನಾಗುತ್ತಾನೆ. ಆಚೆ ಈಚೆ ನೋಡುತ್ತ,
ಮೇಜಿನ ಮೇಲಿರುವ ಪುಸ್ತಕ ಪೇಪರ್ ಗಳನ್ನು
ಆಚೆ ಈಚೆ ಸರಿಸುತ್ತಾನೆ.) ಗಾಂಜಾ
ಗಾಂಜಾ....!! ನನಗೆ ನಂಬ್ಕೇನೇ
ಬರ್ತಾ ಇಲ್ಲ. ಅಂತಾ ಘೋರಾರಣ್ಯದ
ಮನುಷ್ಯಾ ನೀನು. ಕಾಣುವುದಕ್ಕೆ
ಹುಚ್ ನಂತೇನು ಇಲ್ಲ..
ಸಭ್ಯನಾಗಿ ಕಾಣ್ತಿ. ಇಂಥವ್ರು
ಬಾಳಜನಾ ನಮ್ಮತ್ರೆ ಬರ್ತಾರೆ.
ತಮ್ಮ ಹೆಸ್ರ ಗುಟ್ಟಾಗಿಡಬೇಕು. ತಮಗೆ ನ್ಯಾಯ ಸಿಗಬೇಕು.
ಅಪಾಯ ಎದ್ರಾದ್ರೆ ನಮ್ ಪಾಲಿಗೆ. ಅವರು ನುಣಚಿ ಬಿಡ್ತಾರೆ.
ನೀನೂ ಹಾಗೇನೋ ಮತ್ತೆ.
ಗೋವಿಂದ
; ನನ್ನ
ನಂಬಿ ಮಾರಾಯ್ರೇ. ನನ್ ಬದುಕಿನ ಪ್ರಶ್ನೆ.
ನನ್ ಹೆಂಡ್ತಿಮಕ್ಳ ಜೀವನದ ಪ್ರಶ್ನೆ.
ನೀವು ಮನಸ್ ಮಾಡಿದ್ರೇ .........
ಗಿರಿ....; ಒಂದ್
ಕೆಲ್ಸಾ ಮಾಡಿ, ಇಲ್ಲಿ
ನಾನೊಬ್ನೇ ವರದಿಗಾರ ಅಲ್ಲ. ನಮ್ ಅಧ್ಯಕ್ಷರು
ನರಸಿಂಹ ಭಟ್ ಎನ್ನೋರಿದ್ದಾರೆ. ಗುಟ್ಟಾಗಿಡಿ
ಎಂದು ಸೂಚ್ನೆಕೊಟ್ಟು, ಅವ್ರಿಗೂ
ವಿಷ್ಯ ತಿಳಸಿ. ಈಗ್ಲೇ
ಹೊರಡಿ.
( ಎಂದು ಹೇಳುತ್ತಿರುವಾಗಲೇ ರಂಗದಲ್ಲಿ
ಕತ್ತಲೆ. )
ದೃಶ್ಯ ೨.
ಪದ್ಯ- ೩
ʻʻಬೋರ್ ಬೋರ್ ಭಂಗಿ, ಬಂಗಾರಕ್ಕನ್ ತಂಗಿ,
ತತ್ತಾರೇ ಹೆಂಡಾನಾ,
ಸಂಗ್ತೀಗೊಂದಿಷ್ಟ್ ಖಂಡಾನಾ.
ಕೊಟ್ಟೇ ತುಂಬೋರು
ಯಾರೇನ, ಹಿಂಗೇ ದಿನಾ ದೂಡು
ಹೊಟ್ಟೆ ಪಾಡು ಬ್ಯಾಟೇ
ಮಾಡು
ರಂಗದಲ್ಲಿ ನೆಳಲು ಬೆಳಕು.
ಬೇಟೆ ಗದ್ದಲ. ನಾಲ್ಕಾರು
ಜನ ಕೈಯಲ್ಲಿ ಆಯುಧ ಹಿಡಿದು, ಕೂಗು ಹಾಕುತ್ತ
ಒಂದೆಡೆಯಿಂದ ಬರುತ್ತಾರೆ. ಒಂದು ದಿಕ್ಕಿನಿಂದ ಕಾಡುಕೋಣಗಳನ್ನು
ಓಡಿಸುತ್ತ, ಅವುಗಳಿಗೆ ಗುಂಡು ಹಾರಿಸುತ್ತಾರೆ. ಕೋಣ ಸತ್ತು
ಬೀಳುತ್ತದೆ. ಮಾಂಸ ಸುಲಿವ ಕ್ರಿಯೆ,
ಫಾರೆಸ್ಟ ಸಿಬ್ಬಂದಿ ಗಳ
ಪ್ರವೇಶ. ಬೇಟೆಗಾರರ ನಾಯಕ,( ತಂಗವೇಲು). ಅಚ್ಚಬಿಳಿ
ಬಟ್ಟೆ, ಕಪ್ಪುರುಮಾಲು. ಅವರಿಬ್ಬರಲ್ಲಿ
ಮೌನ ಸಂಭಾಷಣೆ. ಫಾರೆಸ್ಟ
ಸಿಬ್ಬಂಧಿಗೆ ಅದೇನನ್ನೋ ಕೊಡುತ್ತಾನೆ.
ಅವರು ಎಚ್ಚರ ಹೇಳುವಂತೇ
ಅಭಿನಯಿಸಿ ಮರೆಯಾಗುತ್ತಾರೆ. ಬಿಳಿ ಬಟ್ಟೆಯವ ಮಾಂಸವನ್ನು
ಚೀಲತುಂಬುವಂತೇ ಆತುರಿಸುತ್ತಾನೆ. )
ರಂಗದ
ಮೇಲೆ ಬೆಳಕು. ಒಂದೆರಡು
ಸಾರ್ವಜನಿಕರು ಕೈಯಲ್ಲಿ ಪೇಪರ್
ಹಿಡಿದು ಬರುತ್ತಿದ್ದಾರೆ.
ಜನ ೧ ಇದೆಂತಾ ಭಾನಗಡೆ
ಮಾರಾಯಾ, ಪೇಪರ್ ನೋಡು.
ಹತ್ತಾರು ಕಾಡುಕೋಣಗಳ ಕಗ್ಗೊಲೆ.
ಸಾಮೂಹಿಕ ಬೇಟೆ, ಮಾಂಸ ಸುಲಿದು, ಅಡವಿಯಲ್ಲಿ
ಯಲುವುಗಳನ್ನು ಹುಗಿದು ಕಳ್ಳರು
ಪರಾರಿ. ಇಲಾಖೆ ನಿರ್ಲಕ್ಷ.
ಸಾರ್ವಜನಿಕರಲ್ಲಿ ಆಕ್ರೋಶ.
ಜನ—೨, ಅಬಾಬಾಬಾ
ಭಾರೀ ಹಗ್ಲ ಧರೋಢೆ.
ಯಾರೂ ಹೇಳೋರು ಕೇಳೋರು
ಇಲ್ಲವೇ...? ದಿನ ನಿತ್ಯಾ ಇಂಥಾ ಬ್ಯಾಟೆ ನಡೀತಾನೇ
ಇರ್ತದೆ. ಎಲ್ಲೋ ಒಂದ್ ಅಪ್ರೂಪಕ್ಕೆ ಪೇಪರ್ನಲ್ಲಿ
ಬರ್ತದೆ.
(
ಅದೇ ಸಮಯಕ್ಕೆ ಗಿರಿಧರ
ಬರುತ್ತಿದ್ದಾನೆ.)
ಜನ-
೧, ಹ್ವಾಯ್ ನಮಸ್ಕಾರ,
ಪತ್ರಕರ್ತರಿಗೆ. ಭಾರೀ ಸುದ್ದಿ
ಮಾಡಿದ್ದೀರಾ. ಅದ್ಯಾರು ಬ್ಯಾಟೆ
ಮಾಡ್ದೋರು. ಅವ್ರು ಯಾಕೆ ತಪ್ಪಿಸಿಕೊಂಡ್ರು. ಅವ್ರನ್ನ
ಹಿಡಿದ ಸುದ್ದಿಯೇ ಇಲ್ವಾ...?
ಗಿರಿಧರ
-- ಹೂಂ ಹಿಡೀತಾರೆ,
ಹಿಡೀತಾರೆ. ಹಿಡ್ದಾಗಾ ಸುದ್ದಿ
ಮಾಡ್ತೇವೆ.
( ಇವರು ಮಾತನಾಡುತ್ತಿರುವಾಗಲೇ ಕಾಖಿ ಡ್ರೆಸ್
ಅಧಿಕಾರಿಯೊಬ್ಬ ಬರುತ್ತಾನೆ.)
ಅಧಿಕಾರಿ
-- ನಮಸ್ಕಾರ ಪತ್ರಕರ್ತರಿಗೆ. ಈಗ ತಾನೇ ನಿಮ್ಮ ಪತ್ರಿಕೆ
ನೋಡಿದೆ. ಕಾಡುಕೋಣ ಬೇಟೆ ಅಂತ ಸುಳ ಸುಳ್ಳೇ ಬರದಿದೀರಲ್ಲಾ.
ಅವುಗಳ ಸಾವು ಬೇಟೆಯಿಂದ
ಅಲ್ಲ. ರೋಗದಿಂದ.
ನಮ್ಮನ್
ಕೇಳಿದ್ರೆ ನಿಮಗೆ ಸರಿಯಾದ
ವಿವರ ಕೊಡ್ತಿದ್ದೆ.
ಗಿರಿಧರ
-- ಯಾವ ರೋಗ, ಏನ್
ಕತೆ. ನಾವೆಲ್ಲಾ ಸ್ಪಾಟಿಗೇ
ಹೋಗಿದ್ವಿ. ಕೋಣ ಕೊಂದು, ಮಾಂಸ ತಗೆದು, ನಾಲ್ಕಾರು
ಸ್ಥಳದಲ್ಲಿ ಹುಗಿದಿದ್ದಾರೆ. ಕೆಲವುಕಡೆ
ನಾಯಿ ಕೆದರಿದೆ. ದುರ್ವಾಸನೆ. ಅದು ಕೋಣಗಳ ಹತ್ಯೆ ಅಲ್ಚೇ ಮತ್ತೇನ್ರೀ...?
ಅಧಿಕಾರಿ --- ರೀ ಸ್ವಾಮೀ. ಬರೆಯುವಾಗ
ನಮ್ಮನ್ನೊಂದು ಅಭಿಪ್ರಾಯ ಕೇಳಬೇಕ್ರಿ.
ಅದು ಕೋಣಗಳ ಹತ್ಯೆ ಅಲ್ಲ. ಅವುಗಳಿಗೆ
ಸಾಂಕ್ರಾಮಿಕ ರೋಗ ಬಂದಿದೆ.
ಬೇಟ್ರೋಸಿಸ್ ಸಿಂಡ್ರೋಮ್ ಅಂತ ಅದ್ರ ಹೆಸರು.
ಅದ್ಕಾಗೇ ತಜ್ಞರು ನಮ್ಮ ಅಡವಿಗೆ ಬರ್ತಿದಾರೆ.
ಜನ
- ೨ ಇವ್ರು
ಯಾರು ಅಂತ ತಿಳದಿದ್ದೀರಿ.
ಭಾರೀ ಸ್ಟ್ರಿಕ್ಟ ಆಫೀಸರ್.
ಪ್ರಾಣಿಗಳ ವಂಶವಾಹಿ, ರೋಗಪತ್ತೆ
ಮೇಲೆ ಸಂಶೋಧನೆ ಮಾಡಿ, ಪ್ರಶಸ್ತಿಪಡೆದವ್ರು. ಗೊತ್ತಾ.
ಅಧಿಕಾರಿ - ನನ್ ಹೆಸ್ರು
ಡಾ. ಹನುಮಂತಪ್ಪ. ಫಾರೆಸ್ಟ ರೇಂಜರ್. ನಾನೇ ಸ್ವಥಹ
ಹೇಳ್ಕೆ
ಕೊಡ್ತಾ ಇದ್ದೇನೆ. ಪತ್ರಿಕೆಯಲ್ಲಿ
ಸುದ್ದಿ ತಪ್ಪಾಗಿ ಬಂದಿದೆ.
ಸರಿಯಾದ ಸುದ್ದಿ ನಾಳೇನಾದ್ರೂ
ಬರ್ಲೇಬೇಕು. ರೋಗದ ಲಕ್ಷಣ ಅದರ ವ್ಯಾಪ್ತಿ
ಎಲ್ಲಾ ವಿವರ ನಿಮಗೆ ತಲುಪಿಸೊ ವ್ಯವಸ್ಥೆ
ಮಾಡ್ತೇನೆ.
ಗಿರಧರ; - ಸರಿ, ಸರಿ,
ನಮ್ ಆಫೀಸಿಗೆ ತಲುಪಿಸಿ.
ದೃಶ್ಯ – ೩.
( ಪತ್ರಿಕಾ ಗೋಷ್ಠಿ.
ನಾಲ್ಕಾರು ಜನ ಪತ್ರಕರ್ತರೆದುರು, ಗೋವಿಂದ
ಹೆಗಡೆ ತನ್ನ ಬವಣೆಯನ್ನು
ಹೇಳಿಕೊಳ್ಳುತ್ತಿದ್ದಾನೆ. )
ಗೋವಿಂದ
ಹೆಗಡೆ. ;-- ನನ್ನೂರು ಇಲ್ಲಿಂದ
ದೂರ ದೂರ. ಬಾಣಾವತಿ ನದಿ
ದಂಡೆಮೇಲೆ, ಘೋರ ಕಾಡಿನ
ನಡುವೆ, ನನ್ನದೊಂದು ಒಂಟಿಮನೆ. ಒಂದಷ್ಟ
ಅಡಿಕೆ ತೆಂಗು, ಬಾಳೆ ತೋಟ.
ಕಾಡಿನ ನಡ್ವೇ ಕಡಿಮೆ
ದರಕ್ಕೆ ಖರೀದಿಸಿದ್ದು. ಹೆಂಡ್ತಿ
ಮತ್ತೆ ಮಗಳು ಇಬ್ರೇ
ಮನೇಲಿ. ಊರಿಗೆ ಹೋಗಬೇಕು ಅಂದ್ರೆ ಕಚ್ಛಾರಸ್ತೇಲಿ ಹತ್ ಮೈಲು.
ಸೀದಾ ಗುಡ್ಡಾ ಇಳಿದ್ರೆ
ನಾಕೇ ಮೈಲಿ. ಕಾಲ್ದಾರಿ.
ಹಾವು ಹರಣೆ, ಹುಲಿ
ಹಂದಿ ಕಾಡಾನೆ. ಯಾವ್ದೂ
ಸಿಗದಿದ್ರೂ ಉಂಬಳಕ್ಕೆ ರಕ್ತದಾನ, ಗ್ಯಾರಂಟಿ. ನದಿ ಆಚೆ
ಮತ್ತೂ ದೊಡ್ ಕಾನು.
ಅದ್ರ ಮಧ್ಯ ಸಪಾಟಾದ
ಜಾಗದಲ್ಲಿ, ಅದೆಷ್ಟೋ ತಿಂಗ್ಳಿಂದ ಭಾರೀ
ದರ್ಬಾರು . ಹೆಕ್ಟೇರ್ ಹೆಕ್ಟೇರ
ಗಟ್ಲೇ ಹಸ್ರೋ ಹಸ್ರು.
ಪರಿಮಳಾ ಸುಗಂಧಾ. ಕಠೋರ ವಾಸನೆ.
ಮೊನ್ನೆ
ಮನೆಯೆದ್ರು ಕವಳಾ ಹಾಕ್ತಾ
ಕೂತಿದ್ದೆ. ……. ಮುಸ್ಸಂಜೇ ಸಮಯಾ. ಒಳಗೆ
ಹೆಂಡ್ತಿ ಅಡಿಗೆ ಮಾಡ್ತಾ
ಇದ್ದಾಳೆ. ಮಗಳು ಮೊಬೈಲ್ ನಲ್ಲಿ
ಮುಳುಗಿದ್ದಾಳೆ. .…..
( ರಂಗದಲ್ಲಿ ಕತ್ತಲೆಯಾಗಿ, ಗೋವಿಂದ
ಹೆಗಡೆ ಮನೆಯ ದೃಶ್ಯ ತೆರೆದು ಕೊಳ್ಳುತ್ತದೆ. ಹಿನ್ನೆಲೆಯಲ್ಲಿ ಭಯ ಮೂಡಿಸುವ
ಸಂಗೀತ ಧ್ವನಿ. ಕಾನು ಜಿರಲೆಯ ಕೂಗು.
ಅಲ್ಲೆಲ್ಲೋ ಹುಲಿಯ ಮೊಳಗು.)
ಗೋವಿಂದ;- ʻʻ(ಆವಲ್ಲೀಗೆ
ಪಯಣವಯ್ಯ ಪ್ರಾಣ ಕಾಂತʼʼ. ಎಂಬ
ಯಕ್ಷಗಾನ ಪದ್ಯವನ್ನು ಗುನುಗುತ್ತಾ
ಎಲೆಯ ತೊಟ್ಟು ತೆಗೆದು, ಸುಣ್ಣ
ಹಚ್ಚುತ್ತಿದ್ದಾನೆ. ನಾಲ್ಕಾರು ಜನ
ಧಾಂಡಿಗರು, ಮನೆಯೆದುರು ನುಗ್ಗುತ್ತಾರೆ. ಗೋವಿಂದ
ಇನ್ನೂ ಪದ್ಯವನ್ನು ಗುನುಗುತ್ತಲೇ ಇದ್ದಾನೆ.
ಹಿಂದಿನಿಂದ ಕಳ್ಳಹೆಜ್ಜೆಯಿಡುತ್ತ ಬಂದ
ಧಾಂಡಿಗ ತಂಗವೇಲು, ಕೈಯಲ್ಲಿರುವ
ಮಚ್ಚು ತೋರಿಸುತ್ತ, ಏ…. ಹೆಗಡೆ….!!. ಎಂದು
ಅರಚುತ್ತಾನೆ. ಗೋವಿಂದ ಹೆದರಿ
ಸ್ಥಬ್ಧನಾಗುತ್ತಾನೆ. .
ಬಂದವರೆಲ್ಲರ ಕೈಯಲ್ಲೂ ಮಾರಕಾಸ್ತ್ರಗಳಿವೆ. ಅವನಾಡುವ
ಮಾತು ಮಲೆಯಾಳೀ ಕನ್ನಡದಲ್ಲಿದೆ. )
ತಂಗವೇಲು;- ಏ……
ಹೆಗಡೆ, ನೀ ಎಲ್ಲೆಲ್ಲಿ
ಹೋಗ್ತೀಯಾ, ಏನೇನ್ ಮಾಡ್ತೀಯ,
ಎಲ್ಲಾ ನಮಗೆ ಗೊತ್ತಾಗ್ತದೆ.
ಈ
ಅಡ್ವೀ ಊರಿಗೆ ರಸ್ತೆ,
ಪೋನು ಎಲ್ಲಾ ಯಾರಿಂದ
ಬಂತು ಅಂತ ತಿಳದಿದ್ದೀ. ಈ
ಅಡವಿ ನಿನ್ ಅಪ್ಪನದಲ್ಲ.
ನಿನ್ ಜಾಗದಲ್ಲಿ ನೀ
ತಿಕಾ ಮುಚ್ಗಂಡ್ ತೆಪ್ಪಗಿರು. ನೀನು
ಹೀಗೆ ಬಾಲಾ ಬಿಚ್ತಾ ಹೋದ್ರೆ
ನಿನ್ ಮನೆ ಮಠಾ
ಖುಲಾಸ್. ನಿನ್ ತೋಟಾ
ಗದ್ದೆ ಹೆಂಡ್ತಿ ಮಕ್ಳಮ್ಯಾಲೆ ಆಸೆ
ಇದ್ರೆ, ನಿನ್ ಹಲ್ಕಟ್
ಕೆಲಸ ಬಿಟ್ಬಿಡು. ಇದೇ
ನಿನಗೆ ಕೊನೇ ಎಚ್ಚರಿಕೆ.
ಯಾರೋ
ಪರಿಸರ ವ್ಯಾಧಿಗಳ ಮನೆಗೆ ಹೋಗಿದ್ದಿ.
ಅಧಿಕಾರಿಗಳ ಕಾಲ್ ಸವ್ರತಾ
ಇದ್ದಿ. ಸುದ್ದಿಗಾರರ ಕಚೇರಿಗೆ
ಹೋಗಿದ್ದಿ. ವಕೀಲ್ರ ಬಾಲಾ ಬಡೀತಿದ್ದಿ. ನಿನಗೇನ್
ಬ್ಯಾರೇ ಹೊರ್ಯಾ ಇಲ್ಲಾ.....?
ಇದೇ
ಕೊನೇ ಎಚ್ಚರಿಕೀ, ಮತ್ತೆ
ಏನಾರಾ ಬಾಲಾ ಬಿಚ್ಚದೀ, ನಿನ್ನ
ಹೆಣಾ ಬಾಣಾವತಿ ಗುಂಡೀಲಿ ಗೋವಿಂದಾ……. ತಿಳ್ಕಾ.
ಗೋವಿಂದ ;-
( ಕಂಗಾಲಾಗಿ
ಅವರನ್ನೇ ದೃಷ್ಟಿಸುತ್ತಾ ಕುಳಿತಿದ್ದಾನೆ. ಅವನ
ಹೆಂಡತಿ ಹೊರಬರುತ್ತಾಳೆ. ಧಾಂಡಿಗರನ್ನು
ದೃಷ್ಟಿಸುತ್ತಾಳೆ. ಅಟ್ಟಹಾಸದ ನಗುಬೀರಿದ
ತಂಗವೇಲು ಸಂಗಡಿಗರು ನಿರ್ಗಮಿಸಿದಾಗ, ಹೆಂಡತಿ
ಗೋವಿಂದನುದ್ದೇಶಿಸಿ
ಮಾತನಾಡತೊಡಗುತ್ತಾಳೆ.)
ಜಾನಕಿ.;- ಎಷ್ಟ್
ದಿನಾ ಆಯ್ತು. ನಾನು ವದ್ರಾಕ್ಹಿಡದು. ನಮಗೆ
ಈ ಜಾಗ ಈ
ಕಾನು ಬ್ಯಾಡ, ಒಂಟಿಮನೆ,
ಕಾಡುಪ್ರಾಣಿ, ಅದ್ರ ಜೊತೀಗೆ, ಈ
ರಾಕ್ಷಸರ ಕಾಟ. ಇವ್ರು ಸಣ್ ಪುಟ್
ಜನಾ ಅಲ್ಲಾ. ಕೋಟಿ
ಹಣಾ ಹೂಡಿ, ಕೋಟಿ
ಕೋಟಿ ಹಣ ಮಾಡ್ತಾರೆ.
ನಾವ್ ಟರ್ ಪುರ್
ಅಂದ್ರೆ ಇಲ್ಲಿ ಉಳಿಯೋದು
ನಮ್ ಹೆಣಾ ಮಾತ್ರ.
ಎಲ್ಲಾದ್ರೂ ದೊಡ್
ಊರಿಗೆ ಹೋಗಿ ಕೂಲಿ
ಮಾಡಾದ್ರೂ ಬದಕಾಣ., ಅಂತ
ಸಾವಿರ ಸಲ ಹೇಳ್ದೆ.
ಇನ್ ನಮಗೆ ಇಲ್ಲಿ ಇರಲು ಸಾಧ್ಯವೇ ಇಲ್ಲ.
ನಾನಂತೂ ಮಕ್ಳ ಕಟ್ಗಂಡು ಹೊರಟು ಬಿಟ್ಟೆ. ನೀವು
ಬಂದ್ರೆ ಬನ್ನಿ. ಬಿಟ್ರೆ ಬಿಡಿ. ನಾವಂತೂ
……
ಗೋವಿಂದ ;- ನನ್ ಕೊಲ್ಲೋದು
ಅಂದ್ರೆ ಹಂದಿ ಕೊಂದಾಂಗೆ
ಹೇಳಿ ತಿಳದಿದ್ಯನೇ. ಯಾವ್ದೋ
ರಾಜ್ಯದಿಂದ ಓಡಿ ಬಂದು ಇಲ್ಲಿ ಟಬ್ರ್
ಹಾರಸ್ತಾರೆ. ಎಲ್ಲಾ ಬಿಟ್ಟ ಭಂಗೀ
ನೆಟ್ಟ, ಎಂಬ ಗಾದೆಯಾತು ಇದು.
ಇಲ್ಲಿಗೇ ಇದ್ನ ಬಿಡೂದಿಲ್ಲಾ. ಅವ್ರ ಬಡಾಕಿ
ಎಷ್ಟು ಹೇಳಿ ನಾನು ನೋಡೇಬಿಡ್ತೆ.
ಜಾನಕಿ;- ಎಂತಾ ನೋಡತ್ರೀ….
ಅವ್ರ ಹಿಂದೆ, ಹಣಾ
ಇದೆ. ಮಂತ್ರಿ ಇದಾನೆ. ದೊಡ್ ದೊಡ್
ಜನಾ ಇದಾರೆ. ಏನ್ ಮಾಡಿದ್ರೂ ದಕ್ಕಿಸಿಕೊಳ್ಳೋ
ತಾಕತ್ ಇದೆ. ಅದೆಷ್ಟ್
ಮನೇ ಖಾಲಿಯಾಯ್ತು ಇವ್ರ
ಕಾಟದಲ್ಲಿ.
ನಾವೆಂತೂ
ಇಲ್ಲಿರೋದೇ ಇಲ್ಲ. ಏಳು ಮಗ್ಳೆ
ನಾವು ಇಲ್ಲಿಂದ ಗುಡ್ಚಾಪೆ ಕಟ್ಟಾಣ.
ಇವ್ರು ಮಹಾ ಪರಿಸರ ಪ್ರೇಮಿಗಳು.
ಅರಣ್ಯ ಉಳಸ್ತಾರಂತೆ. ಹಲ್ಕಟ್ಟ
ಕೆಲಸಾ ಬಂದ್ ಮಾಡಿಸ್ತಾರಂತೆ.
ಎಲ್ಲಾ ಮಾತಾಡಲು ಚಂದಾ. ಬರೀ ಗೈ
ಬಸ್ವಾಆಗಿ, ಬಸ್ವಳಿಯೋದು ಬಿಟ್ರೆ ಮತ್ತೇನಿಲ್ಲಾ….
ತಂಗವೇಲು: ಹಾಂ, ಹಾಂ.
ಹಾಂಗೇಳಿ ತಾಯಿ. ಅವ್ರಿಗೊಂದಿಷ್ಟು ಬುದ್ಧಿಹೇಳಿ. ನಿಮಗೇನಾಗ್ಬೇಕು
ನಮ್ಮತ್ರಾ ಹೇಳಿ. ತೆಪ್ಗೆ
ಬಾಯ್ಮುಚ್ಗಂಡಿರ್ರಿ. ಅಷ್ಟೇ.
( ಗೋವಿಂದ
ಹೈರಾಣಾಗಿ ಕುಳಿತಿದ್ದಂತೇ ಧಾಂಡಿಗರು
ಹೊರ ಹೋಗುತ್ತಾರೆ. ಕತ್ತಲೆ. ಮತ್ತೆ
ಬೆಳಕು. ಪತ್ರಿಕಾ ಗೋಷ್ಠಿ. )
ಪತ್ರಕರ್ತ
;-೧, ಸರಿ ಸರಿ. ನಿಮ್ ಕಷ್ಟ ಗೊತ್ತಾಯ್ತು.
ನಮ್ಮಿಂದೇನಾಗಬೇಕು. ಹೇಳಿ.
ಪತ್ರಕರ್ತ;-
೨. ನಿಮ್ ಏರಿಯಾ
ನಮ್ ತಾಲೂಕಿನಲ್ಲಿಲ್ಲ. ನೀವು
ಅಲ್ಲಿ ಹೋಗಿ ಹೇಳ್ಬೇಕಿತ್ತು. ನೀವು ಇಲಾಖೆಗೆ
ಇನ್ನೂ ತಿಳ್ಸೇ ಇಲ್ವಾ. ಕಾಡು
ಕಾಯಲಿಕ್ಕೇ ಒಂದು ಇಲಾಖೆಇದೆ,
ನಿಮಗೆ ಗೊತ್ತಿಲ್ವಾ…?
ಗೋವಿಂದ:- ಎಲ್ಲಾ
ತಿಳಿಸಿ ಆಗಿದೆ. ನಿಮಗ್ಯಾಕೆ ಉಸಾಬರಿ.
ನಾವು ನೋಡ್ಕೋತೇವೆ ಅಂತಾರೆ.
ಇಲ್ಲಿಂದಾ ಮಂತ್ರಿಗಳ ವರೆಗೂ
ತಳ್ಳಿ ಅರ್ಜಿ ಕಳಸಿದ್ದೇನೆ.
ಪತ್ರಕರ್ತೆ;- ಅಂಥ
ಅಡವಿಗೆ ನಾವು ಬರೋದು
ಹ್ಯಾಗೆ. ಆ ಸ್ಥಳ
ನೋಡೋಕೆ ನಾವು ಬರ್ಲೇಬೇಕು
ಅಂದ್ರೆ ವಾಹನ ವ್ಯವಸ್ಥೆ ಮಾಡತೀರಾ…? ಊಟಾ ತಿಂಡಿ ವ್ಯವಸ್ಥೆ ಮಾಡತೀರಾ…? ನಿಮ್
ಕ್ಷೇತ್ರದ ಎಂ.ಎಲ್. ಎ. ಗೌತಮ್ ಗೋಟಾವಳಿ,
ಅವ್ರ ಗಮನಕ್ಕೆ ತರಲಿಲ್ವಾ,,,?
ಪತ್ರಕರ್ತ- ೧ ಹೌದು,
ಅಂತೂ ನಾವ್ ಹೋದ್ವಿ.
ನಮ್ ರಕ್ಷಣೆ ಹೇಗೆ.
ಅಲ್ಲಿದ್ದವ್ರು ಯಾರೂ ಮನುಷ್ಯರಲ್ಲ. ರಾಕ್ಷಸರು. ಇದು
ಭಾರೀ ಗಂಭೀರ ಪ್ರಕರಣ ಅನ್ನಿಸ್ತದೆ.
ನಾನಂತೂ ಬರೋದಿಲ್ಲ.
ನಾನು ಅದೆಷ್ಟೇ ಚನ್ನಾಗಿ
ಬರದ್ರೂ ನನ್ ಪತ್ರಿಕೆಯೋರು
ಪ್ರಕಟಿಸ್ತಾರೆ ಅನ್ನೋ ಗ್ಯಾರಂಟೀನೂ
ಇಲ್ಲ.
ಪತ್ರಕರ್ತ;-೨. ನಂದೂ
ಅದೇ ಪರಿಸ್ಥಿತಿ. ನೀವ್ಯಾರಾದ್ರೂ ಹೋದ್ರೆ,
ಅಲ್ಲಿ ಕಂಡ ದೃಶ್ಯ, ಆ
ಜನರ ದುಷ್ಕಾರ್ಯ ಅದ್ರ
ಬಗ್ಗೆ ಹೇಳಿ. ಚಂದ
ವರದಿಮಾಡೋದು ಮಾತ್ರ ನನ್
ಜವಾಬ್ದಾರಿ.
ಗಿರಿಧರ;-
ಸಂಗಾತಿಗಳೇ ನಮ್ ಸುದ್ದಿ ವೃತ್ತಿ,
ಬದುಕು ವುದಕ್ಕೊಂದೇ ಅಲ್ಲ. ಮತ್ತೊಬ್ಬರ
ಬದುಕಿಗೆ ಜೀವಕೊಡುವಂಥಹದ್ದು. ಪತ್ರಿಕೆಯೋರು ನಮಗೆ
ಕೊಡೋ ಪಗಾರು ಲೆಕ್ಕಕ್ಕೇ ಇಲ್ಲಾ. ಇದೊಂದು ಹವ್ಯಾಸ.
ಕುಳಿತಲ್ಲೇ ….. ಅವರು ಮಾತನಾಡುತ್ತ, ನುಡಿದರು. ಇವರು
ದೀಪ ಬೆಳಗಿಸಿ ಉದ್ಘಾಟಿಸಿದರು, ಎಂದು ವರದಿ
ಮಾಡುವುದೇ ನಮ್ಮ ಡ್ಯೂಟಿ ಅಲ್ಲ.
ಇದೊಂದು ಸತ್ಯದೆದುರಿಗೆ ಎದೆ ಸೆಟೆಸಿ ನಿಲ್ಲುವ ನೈತಿಕ
ಯುದ್ಧ. ಇದೊಂದು ಸವಾಲು.
ನಾವು ಎದುರಿಸಲೇ ಬೇಕು. ಆ
ಅದ್ಭುತ ಅರಣ್ಯ ಇಲ್ಲಿಯ
ಜನತೆಗೆ ಸೇರಿದ್ದು. ಯಾರೋ
ಬೇಕಾಬಿಟ್ಟಿ ಜನರಿಗೆ ಮಾರಿದ್ದಲ್ಲ.
ಅದ್ರಲ್ಲೂ ಹತ್ತಾರು ಎಕರೆ
ಕಾನೂನು ಬಾಹಿರ ಕೃಷಿಮಾಡ್ತಾ
ದೇಶ ವೊಂದೇ ಅಲ್ಲ, ವಿದೇಶದವರೆಗೂ
ತಮ್ಮ ಬಾಹುಗಳನ್ನು ವಿಸ್ತರಿಸ್ತಾ,
ಇರೋ ಆ
ಗಾಂಜಾ ಗ್ಯಾಂಗ್ ನಮ್ಮ
ಪ್ರದೇಶಕ್ಕೆ ವಕ್ಕರಿಸಿದ ಮಾರಣಾಂತಿಕ ವ್ಯಾಧಿ.
ಮಹಾ ಬುದ್ಧಿಜೀವಿಗಳು ಅಂದುಕೊಳ್ಳೋ
ನಾವು, ಕಂಡೂ ಕಾಣದೇ ಜಾಣ ಕಿವುಡರಾದ್ರೆ, ನಮ್ಮಂತಹ
ಅಪರಾಧಿಗಳು, ಮತ್ಯಾರೂ ಇಲ್ಲ.
ನಮ್ ಕೈಲಾಗೋದು ಏನು..?
ನಿಗೂಢ ದುಷ್ಟ ಜಗತ್ತನ್ನು ಸಾಮಾನ್ಯರಿಗೆ
ತಿಳಿಸೋದು ಅಷ್ಟೆ. ಆಮೇಲೆ ಏನಾಗ್ತದೋ ಆಗ್ಲಿ.
ಅಷ್ಟೇ. ಆ ಅಡವಿ ನಡುವೆ
ತಮ್ಮ ಪಾಡಿಗೆ ಬದುಕ್ತಾಇರೋ, ಇವರಿಗೆ ಸಾಂತ್ವನ ನೀಡಲೇಬೇಕು. ನಾವೂ
ಅವರ ಆಕ್ರೋಷಕ್ಕೆ ಧ್ವನಿಯಾಗದೇ
ಹೋದ್ರೆ ಮತ್ಯಾರು ಬಂದಾರು,
ಅಲ್ವಾ…??
ಸರಿ,
ನಾಳೇನೇ ಆ ಸ್ಪಾಟಿಗೆ
ನಾವೆಲ್ಲ ಹೋಗೋಣ. ಯಾರೋ
ಬಂದು ನಮ್ ಟ್ರಿಜುರಿ
ಹೊತ್ತೊಯ್ಯುತ್ತಾರೆ ಅಂದ್ರೆ ನಾವು
ಸುಮ್ಮನಿರ್ತೇವಾ… ಯಾರ್ಯಾರು ಬರ್ತೀರಿ
ಹೇಳಿ.
(
ಉಳಿದ ಪತ್ರಕರ್ತರು ಮೌನ. ಯಾರಿಂದಲೂ
ಉತ್ತರವಿಲ್ಲ. ಒಬ್ಬೊಬ್ಬರೇ ಹೊರಡುತ್ತಾರೆ.
ಗೋವಿಂದ, ಮತ್ತು ಗಿರಿಧರ
ನಿಂತೇ ಇರುತ್ತಾರೆ. ಕತ್ತಲೆ.)
ದೃಶ್ಯ;- ೪
ಕತ್ತಲ
ಕಾನಂಚು. ಸ್ಥಳೀಯ ಶಾಸಕರ
ಅಭಿವೃದ್ಧಿ ಉತ್ಸವದ ಅದ್ದೂರಿ ತಯಾರಿ.
ಶಾಸಕರದ್ದೇ ಆದ ರೆಸಾರ್ಟನಲ್ಲಿ
ಮಂತ್ರಿಮಹೋದಯರು, ವಿಜ್ಞಾನಿಗಳು, ರಾಜ್ಯ ದೇಶಮಟ್ಟದ ಪತ್ರಕರ್ತರು,
ನೂರಾರು ಅಭಿಮಾನಿಗಳು ಒಗ್ಗೂಡಿದ್ದಾರೆ. ಸಹ್ಯಾದ್ರಿ ಉತ್ಸವದ ಮೆರಗು. ಶಾಸಕರ
ಜನಸೇವೆಯ ೨೫ ವರ್ಷದ ರಜತಮಹೋತ್ಸವ.
ಅದ್ದೂರಿ ಸಮ್ಮಾನ. ಹಾರತುರಾಯಿ,
ಮೈಸೂರು ಪೇಟದಲ್ಲೇ
ಪತ್ರಿಕಾಗೋಷ್ಠಿಗೆ
ಹಾಜರಾಗುತ್ತಾರೆ.
ʻʻದೀನರ ಮಿತ್ರ,
ಸ್ವಜನಬಂಧು, ಉದ್ಧಾರದ ಹರಿಕಾರ,
ಗುಡ್ಡಪ್ಪ ಗೋಟಾವಳಿಯವರಿಗೇ ಜಯವಾಗಲಿ, ರೈತೋದ್ಧಾರಕ,
ಹಸಿರಿನ ಹರಿಕಾರ, ಪರಿಸರ ಸ್ನೇಹಿ,
ಅಪರೂಪದ ಕ್ರಿಯಾಶೀಲ ಶಾಸಕರಿಗೇ
ಜಯವಾಗಲಿʼʼ (ಎಂಬ ಉದ್ಘೋಷ ಹಿಂದಿನಿಂದ
ಕೇಳುತ್ತದೆ)
(
ಪತ್ರಕರ್ತರು ಕಿಕ್ಕಿರಿದು ಸೇರಿದ್ದಾರೆ.
ಎಲ್ಲರಿಗೂ ಕಾಣಿಕೆ ನೀಡಲಾಗುತ್ತಿದೆ. ತಂಗವೇಲು ಚುರುಕಾಗಿ
ಆಚೆ ಈಚೆ ಓಡಾಡುತ್ತಿದ್ದಾನೆ. ಶಾಸಕರ
ಸಂಗಾತಿಗಳು, ನೆನಪಿನ ಕಾಣಿಕೆ
ಹಿಡಿದು ಗಿರಿಧರನೆದುರು ಬರುತ್ತಾರೆ.
ಗಿರಿಧರ ನಿರಾಕರಿಸುತ್ತಾನೆ. ಶಾಸಕ
ದೂರದಿಂದಲೇ ಗಮನಿಸುತ್ತಾನೆ.) )
ಪತ್ರಿಕಾ
ಗೋಷ್ಠಿ ಪ್ರಾರಂಭ.
ಶಾಸಕ:-
ನನ್ನೆಲ್ಲ ಪತ್ರಿಕಾ ಬಂಧುಗಳಿಗೆ
ಆತ್ಮೀಯ ಸ್ವಾಗತ. ನನ್ನ
ಶಾಸಕತನದ ಜವಾಬ್ದಾರಿಯ ಬೆಳ್ಳಿಯ
ಕ್ಷಣವಿದು. ನನ್ನೆಲ್ಲ ಸಾಧನೆ
ಸಿದ್ಧಿಯ ಹಿಂದೆ ತಮ್ಮೆಲ್ಲರ
ಸಹಕಾರ ಪ್ರೋತ್ಸಾಹವಿದೆ. ನಾನು
ಎಡವಿದಾಗ ಎಚ್ಚರಿಸಿದ್ದೀರಿ. ಒಳ್ಳೆಯ
ಕೆಲಸಕ್ಕೆ ಬೆನ್ನುತಟ್ಟಿದ್ದೀರಿ. ಇದೇ
ವಾರ ನನ್ನ ಅಧಿಕಾರದ
ರಜತ ಮಹೋತ್ಸವ ರಾಜ್ಯದ ಗಣ್ಯರೆಲ್ಲರ
ಉಪಸ್ಥಿತಿಯಲ್ಲಿ ನಡೆಯುತ್ತಿದೆ. ಇದು
ನಮ್ಮ ಈ ಸಹ್ಯಾದ್ರಿಯ ಉತ್ಸವ.
ನಿಸರ್ಗ ರಕ್ಷಣೆಗಾಗಿ ಪಣತೊಡುವ ಅಪೂರ್ವ
ಸಮಾರಂಭವಿದು.
ಪತ್ರಕರ್ತ ನಂ
೨, ತಮ್ಮ ಸುದೀರ್ಘ ಜನಸೇವೆಯ
ಅನುಭವವನ್ನು ವರ್ಣಿಸುತ್ತೀರಾ…?
ಶಾಸಕʼ-
ಅವಶ್ಯ. ನಾನು ಬಡವನಾಗಿ
ಹುಟ್ಟಿದೆ. ಬಡವನಾಗಿ ಸಾಯಲಾರೆ
ಎಂದು ಪ್ರತಿಜ್ಞೆಗೈದು ಜನಸೇವೆಗಿಳಿದೆ. ಬಡವನಾಗಿ
ಹುಟ್ಟುವುದು ನಮ್ಮ ತಪ್ಪಲ್ಲ. ಬಡವನಾಗಿಯೇ
ಇರುವುದು ಅಪರಾಧ. ಬಡತನ ನಿವಾರಣೆಯೇ
ನನ್ನ ಗುರಿ. ನನ್ನ ಧ್ಯೇಯ. ನಾನು
ಜನರ ಪ್ರೀತಿಯನ್ನು ಪಡೆದೆ. ಉಚಿತವಾಗಿ
ಪ್ರೀತಿಯನ್ನು ಹಂಚಿದೆ. ನಾನು ಕೊಟ್ಟ
ಪ್ರೀತಿಯ ಮೊತ್ತವೇ ಕಳೆದ
ಇಪ್ಪತ್ತೈದು ವರ್ಷಗಳ ಜನಸೇವೆಯ
ನನ್ನ ಬದುಕು
ಪತ್ರಕರ್ತ;-
ಮಾನ್ಯರೇ ತಾವು ಈವರೆಗೆ
ಮಾಡಿದ ಜನಕಲ್ಯಾಣ ಕಾರ್ಯಕ್ರಮದ
ವಿವರ ನೀಡುತ್ತೀರಾ…?
ಶಾಸಕ:- ನನ್ನ
ಹೃದಯ ಸದಾ
ಅಭಿವೃದ್ಧಿಯ ಧ್ಯಾನದಲ್ಲೇ ಇದೆ.
ದುರ್ಬಲರ ಕಣ್ಣೀರು ಒರೆಸುವ
ಕಾಯಕದಲ್ಲೇ ನಾನಿರುವೆ. ಭೌತಿಕ ಪ್ರಗತಿ
ಅಭಿವೃದ್ಧಿಯಲ್ಲ. ಜನರಲ್ಲಿ ಭರವಸೆ, ಆತ್ವವಿಶ್ವಾಸ ಮೂಡಿಸುವುದೇ
ನನ್ನ ಗುರಿ. ಇಲ್ಲಿರಲಿ ವಿದೇಶದಲ್ಲಿರಲಿ, ನನ್ನದೇ
ಆದ ಹಲವಾರು ಎಸ್ಟೇಟ್
ಗಳಲ್ಲಿ, ನಾನೇ ಸೃಷ್ಟಿಸಿದ
ಮಹತ್ವದ ಸಂಸ್ಥೆಗಳಲ್ಲಿರಲಿ, ಸದಾ ನನ್ನ ಮನಸ್ಸು ತುಡಿಯುವುದು ಪ್ರಗತಿಯನ್ನೇ.
ದೇಶ ನೂರಾರು
ವರ್ಷ ಬದುಕಿ ಬಾಳಬೇಕು.
ದೇಶದ ವಯೋಮಾನದ ದೃಷ್ಟಿಯಲ್ಲಿ
ನನ್ನ ಇಪ್ಪತ್ತೈದು ವರ್ಷ ಏನೂ
ಅಲ್ಲ. ಅದೆಷ್ಟೇ ವರ್ಷ ಕಳೆಯಲಿ, ಪ್ರಗತಿಯ
ಅಸ್ತಿವಾರವನ್ನು ನಿರ್ಮಿಸುವುದೇ ನನ್ನ ಧ್ಯೇಯ.
ಜೀವನವನ್ನೇ ಜನಸೇವೆಗೆಗಾಗಿ ಮುಡಿಪಿಡುವುದೇ
ನನ್ನ ಗುರಿ.
ಗಿರಿಧರ;-
ನಿಮ್ಮಮೇಲೆ ನೂರಾರು
ಆರೋಪ ಇದ್ಯಲ್ಲಾ. ಹಲವಾರು ರಸಿಕ ಸೀಡಿಗಳೂ
ಸಮೂಹ ಮಾಧ್ಯಮದಲ್ಲಿ ಕಾಣ್ತಾ
ಇವೆಯಲ್ಲ.
ಶಾಸಕ:- ಎಷ್ಟೇ
ಪ್ರಾಮಾಣಿಕನಾದ್ರೂ ವಿರೋಧಿಗಳಿದ್ದೇ ಇರ್ತಾರೆ.
ಮತ್ಸರಕ್ಕೆ ಕೊರತೆ ಇರೋದಿಲ್ಲ. ಅದೆಲ್ಲಾ ಸುಳ್ಳು ಆರೋಪ.
ಗಿರಧರ;- ಬಾಣಾವತಿ ನದೀ
ತಗಂಡು, ಬೆಂಗ್ಳೂರಿಗೆ ಹೋಗತೀರಂತೆ.... ಕೋಪನಾಸಿ
ನದೀನೀರನ್ನ ಯಾರಿಗೋ ಕುಡೀಲಿಕ್ಕೆ
ಕೊಡ್ತೀರಂತೆ... ಹೌದಾ..?
ಶಾಸಕ;- ಪ್ರಕೃತಿ,
ನಿಮಗೊಬ್ರಿಗೇ ಸೇರಿದ್ದು ಅಂತ ತಿಳ್ದಿದ್ದೀರಾ..? ಎಲ್ಲಿ
ಕೊರತೆಇದ್ಯೋ ಅಲ್ಲಿಗೆ ಕೊಂಡೊಯ್ತೇವೆ.
ಈ ಪರಿಸರ ವ್ಯಾಧಿಗಳಿದ್ದಾರಲ್ಲಾ ಅವ್ರು ಸಾಮಾನ್ಯಜನ್ರನ್ನ ದಿಕ್ಕು ತಪ್ಪಿಸ್ತಾ ಇದ್ದಾರೆ.
ಇಲ್ಲಿಂದ ನದಿ ಅಲ್ಲಿಗೆ, ಅಲ್ಲಿಂದಾ
ಐವತ್ ಸಾವ್ರ ಕೋಟಿ ಹರಿಯುವುದು ಇಲ್ಲೀಗೆ. ಇಲ್ಲೀ ಜನಕ್ಕೇ
ಉದ್ಯೋಗ. ಹಂಚಿ ಬದುಕುವುದು
ಮನುಷ್ಯಧರ್ಮ.
ಗಿರಿಧರ:-
ಆದ್ರೂ ಹೊಗೆಯಿದೆ. ಬೆಂಕಿ ಇರ್ಲೇಬೇಕಲ್ಲಾ...
ಶಾಸಕ ;- ಓಯ್
ಇವ್ರೇ,, ನೀವು ಕೆಂಪು ಪತ್ರಿಕೆಯವ್ರೋ, ಕಪ್ಪು ಪತ್ರಿಕೆಯೋರೋ, ?? ನೋಡಿ, ಗಾಂಧಿಯವರ ಸತ್ಯ ಅವಶ್ಯ. ಆದ್ರೆ ಮಹಾತ್ಮರ ಅಂತ್ಯ ಒಳ್ಳೇದಲ್ಲ. ನಾವು ನೀವು ಒಂದಾಗಿ, ನಮ್ಮ ಅಭಿವೃದ್ಧಿಗೆ ಶ್ರಮಿಸಬೇಕು.
ಗಿರಿಧರ:-- ತಮ್ಮ ರೆಸಾರ್ಟ ನಿಂದ ಕೆಲವೇ ಮೈಲಿ ದೂರದಲ್ಲಿ, ಕಾನೂನು
ಬಾಹಿರ ಗಾಂಜಾ ಬೆಳೆ ಯುತ್ತಿದೆ. ತಮ್ಮ ಗಮನಕ್ಕೆ
ಬಂದಿರಬೇಕಲ್ಲವೇ...?
ಶಾಸಕ:-
ಅಲ್ಲ ಅಲ್ಲ. ಅದು ಆಯುರ್ವೇದ ಸಸ್ಯಗಳ
ಅಭಿವೃದ್ಧಿ ಕ್ಷೇತ್ರ. ಅಪರೂಪದ ಔಷಧ ಗಿಡಗಳಿಗೆ ಮರುಹುಟ್ಟು ಕೊಡುವ ಮಹತ್ವದ
ಕಾರ್ಯಕ್ರಮ. ಆಯುರ್ವೇದ ನಮ್ಮ ದೇಶದ
ಹೆಮ್ಮೆ. ಜಗತ್ತಿನಾದ್ಯಂತ ಅದು ಪಸರಿಸಬೇಕು. ಅದು ನಮ್ಮ ಗುರಿ.
ಗಿರಿಧರ:-
ಇಲ್ಲಾ ಇಲ್ಲಾ ಆ ಹೆಸರಿನಲ್ಲಿ ಮತ್ತೇನೋ
ನಡೆಯುತ್ತಿದೆ. ಆ ಸ್ಥಳವನ್ನು
ನೀವೇ ಪತ್ರಕರ್ತರಿಗೆ ತೋರಿಸುತ್ತೀರಾ...?
( ಅಷ್ಟರಲ್ಲಿ ಅಲ್ಲಿ ಗದ್ದಲವೇರ್ಪಡುತ್ತದೆ. ಬೇರೆ ಒಂದಿಷ್ಟು ಜನ ಗದ್ದಲವೇರ್ಪಡಿಸುತ್ತಾರೆ.
ಗಜಿ ಬಿಜಿ. ಪತ್ರಕರ್ತರು ಸೇರಿದ ಇನ್ನಿತರ ಜನರು ಚದುರುತ್ತಾರೆ. ಗೋಷ್ಠಿ
ಅಲ್ಲಿಗೇ ನಿಲ್ಲುತ್ತದೆ)
ದೃಶ್ಯ ೫ –
( ಶಂಕರ ಶೆಟ್ಟಿ, ಮತ್ತು ಗಿರಿಧರ
ಇಬ್ಬರೂ ಆಯಾಸವನ್ನು ನಿವಾರಿಸಿಕೊಳ್ಳುತ್ತ, ಕುಳಿತಿದ್ದಾರೆ.
ಪರ್ವತದ ತಳಕ್ಕೆ ಬಂದಿದ್ದಾರೆ.
)
ಗಿರಿಧರ;- ಗುಡ್ಡದ
ತಲೇಮೇಲೆ ನಿಂತಾಗ ಕಂಡ ದೃಶ್ಯವೇ ಬೇರೆ. ನಮ್ಮನ್ ಮುತ್ತೋ
ಮೋಡ. ಹಕ್ಕಿ ಪಕ್ಷಿಗಳ ಕಲರವ. ಕಣ್ಣು ತೀರೋವರ್ಗೂ ಹಸ್ರು ಸಾಮ್ರಾಜ್ಯ. ಸಣ್ ರೇಖೆಯಾಂಗೆ ಕಾಣೋ ಬಾಣಾವತಿ. ಕಾಡು ಯಾವಾಗ್ಲೂ ಅಷ್ಟೇ.
ದೂರ್ದಿಂದ ಚಂದ. ಒಳಗೆ ಹೊಕ್ರೆ ಅಯ್ಯಯ್ಯಪ್ಪ,
ಅದೆಷ್ಟ್ ಕಷ್ಟ. ಅಲ್ವಾ...?
ಶಂಕ್ರ ಶೆಟ್ಟಿ;- ಅದು ಹೌದು ಕಾಣಿ. ಈ ಪಾಟಿ ಕಾನಾಗೆ,
ಇಂಥಾ ಕೊರಕಲ್ ನಾಗೆ ಹ್ಯಾಂಗ್ ಬಪ್ಪೋ
ಧೈರ್ಯಾ ಮಾಡ್ರಿ ಮಾರ್ರೇ.... ಪ್ಯಾಟೀ ಮಂದೀಗೆ
ಯಾಕೆ ಈ ಕಾಡೀನ ಕ್ವಾಟೀ..?. ಆ ಗೋವಿಂದ ಹೆಗ್ಡೇರಿಗೆ
ಹ್ವಾರ್ಯ ಇಲ್ಲಾ. ಅವ್ರಿಗೂ ಒಳಗಿಂದೊಳ್ಗೇ
ಪುಕು ಪುಕು. ನಿಮಗೆ ದಾರಿ ತೋರ್ಸೋಕೆ
ನನ್ ಕಳಸೀರ್.
ನಾನ್
ಬಂದೀದೆ ಅಂಬ್ದು ತಂಗವೇಲ್
ಸಾಹೇಬ್ರಿಗೆ ಗೊತ್ತಾತ್ ಅಂತಾದ್ರೆ
ಬಡಿಗೆ ಬಿತ್ತು ಅಂಬ್ದು ಖಾತ್ರಿ
ಕಾಣಿ.
ಗಿರಿಧರ;- ಅರೇ ಶೆಟ್ರೇ, ಆ ಆಸಾಮಿ ಅಷ್ಟು ಗಟ್ಟೀನಾ. ಅವ್ನೀಗೆ
ಅರಣ್ಯ ಇಲಾಖೆಯೋರು ಏನೂ ಮಾಡ್ಲಿಲ್ವಾ.
?
ಶಂಕ್ರ ಶೆಟ್ಟಿ;- ಹತ್ತೇರಿಕಿ, ಅವ್ನು ಒಲ್ದಾಂಗಾದ್ರೆ ಹ್ವಾಯ್,
ಕರ್ಣಾ. ಕರ್ಣಾ. ತಿರಗಿಬಿದ್ದಾ ಅಂತಾದ್ರೆ
ದುರ್ಯೋದ್ನಾ. ಅವ್ನು ಹೀಂಗಿದ್ದಾ
ಅನ್ಕಾಬ್ಯಾಡಿ. ಅವ್ನ ಕೈ ಇಲ್ಲಿಂದಿಲ್ಲೀವರ್ಗೂ ಚಾಚಿತ್ ,
ಮಂತ್ರಿಗೋಳು, ದೋಡ್ ದುಡ್ಡಿಪ್ಪೋರು
ಬಗ್ಲಾಗಿದ್ರು ಗೊತ್ತೀತಾ...
ಗಿರಿಧರ;- ನಾನ್ ಇದ್ದಿದ್ದು
ಪ್ಯಾಟೆ ಆದ್ರೂ, ನನ್ ಒಡನಾಟ ಕಾಡಿನ್
ಜೊತೀಗೆ ಇದೆ ಶೆಟ್ರೇ.
ಆದ್ರೆ ಇಂಥಾ ಘನ ಘೋರ
ಪ್ರಪಾತ ಇಳದಿರಲಿಲ್ಲ. ಬಾಣಾವತಿ
ಹೊಳೆ ಆಚೆ, ಭಾರೀ ಕಾಮಗಾರಿ ನಡೀತಾ ಇದೆ, ಎಂಬ ಅಂತೆ ಕಂತೆ ಮಾತ್ರ ತಿಳ್ಕೊಂಡಿದ್ದೆ. ಏನೇ ಆಗ್ಲಿ ಈಗ ಸಾಕ್ಷಾತ್ ನೋಡ್ತೇನಲ್ಲ.
ಶಂಕ್ರಶೆಟ್ಟಿ;- ಕಾಡಾಗೆ ನಿಮ್ಮಂತವ್ರ
ಬುದ್ಧಿ ಪ್ರಯೋಜನ ಇಲ್ರಾ. ಹ್ವಾಯ್.... ಇಲ್ಲಿ ಕಾಣಿ, ಕಸ್ವು ಬೇಕ್ರಾ. ಸೊಕ್ ಬೇಕ್ರಾ.
ಗಿರಿಧರ ;- ಅಲ್ಲಾ ಅಲ್ಲಿ ಏನೇನ್ ಬೆಳೀತಾರೆ ಎಷ್ಟ ಔಷಧಿ
ಗಿಡಾ ಇದೆ. ನಿನಗೆ ಗೊತ್ತಿದ್ಯಾ..?
ಶಂಕ್ರಶೆಟ್ಟಿ;- ಎಂತಾ ಔಸ್ದಿನೂ
ಇಲ್ಲಾ ಪೌಸ್ದೀನೂ ಇಲ್ಲಾ..... ಎಲ್ಲೆಲ್ ಕಂಡ್ರೂ
ಬಂಗೀ ಬಂಗೀ ಬಂಗೀ. ನಾನ್ ಹ್ವಾದಾಗ್ಲೇ
ಗನಾಕಿ ಸಪ್ಪು ಬೀಜಾ ತಂದೀದೆ
ಕಾಣಿ. ಅದ್ರ ಸೇದ್ಕಂಡ್ರೆ ಅಬಾಬಾಬಾ
ಮಸ್ತ ಮಜಾ ಆತ್,, ಕಾಣಿ. ಸ್ವರಗಾ
ಸ್ವರಗಾ ಗೊತ್ತೀತಾ. ನೀವ್ ಒಂದ್ಸಾರಿ
ಒಂದ್ ದಮ್ ಎಳೀಕ್,
ಆಗ ಕಾಣಿ ಎಂತಾ ಗಮ್ಜಿಲ್ ಇತ್ತ ಅಂಬ್ದು
ಗೊತ್ತಾತ್.
ಗಿರಿಧರ;- ಶೆಟ್ರೆ ಇನ್ನೆಷ್ಟ್
ದೂರಾ. ಹೋಗೋಣ ನೆಡೀರಿ.
ಶಂಕರ ಶೆಟ್ಟಿ;- ಇನ್ ನಾ ಬರಾದಿಲ್ರಾ. ಅವ್ರಿಗೆಲ್ಲಾ
ನನ್ ಗರುತು ಇತ್ತ ಕಾಣಿ ಶೇರೂಗಾರ
ತಂಗವೇಲು ಸಾಹೇಬ್ರು ನಂಗೆ ಕೆಲ್ಸಾಕೊಟ್ಟದ್ರ್ ಗೊತ್ತಿತ್ತಾ.
ಅಲ್ ಕೆಲ್ಸಕ್ ಹ್ವಾದ್ರೆ
ಕೈತುಂಬಾ ದುಡ್ ಆತಿತ್
ಕಾಣಿ. ಗೋವಿಂದ ಹೆಗ್ಟೇರ್, ಅಲ್ಲೋದ್ರೆ
ಒಂದಿನ ನೀ ಜೈಲಿಗೆ
ಹ್ವಾತೆ ಕಾಣು, ಅಂದ್ರು.
ನಂಗ್ ಪುಕುಪುಕು
ಆಯ್ತು ಮಾರ್ರೇ. ಹೇಂಡ್ತೀ
ಮಕ್ಳ ವಂದಿಗಾ ನಾನು.
ಕೆಲ್ಸಾ ಬಿಟ್ ಒಂದ್ವರ್ಸ
ಆಗೋತು.
ಗಿರಿಧರ;- ಹಾಂಗಾದರೆ ನಾನೊಬ್ನೇ
ಹೋಗ್ಬೇಕಾ...? ನೀನೇನ್ ಮಾಡ್ತೆ..?
ಶಂಕ್ರಶೆಟ್ಟಿ;- ನೀವು ಹ್ವಾಯ್
ಬನ್ನಿ. ನಾನು ಇಲ್ಲೇ ಕೂತ್ಕಂಡಿರ್ತೆ. ಓಯ್ ಅಲ್ ಕಾಣಿ.
ದೋ.... ದೊಡ್ ಬೇಲಿ ಇತ್ತ.
ಹುಸಾರಿಲಿ ದಾಟಕ್. ಅಲ್ ಹುಚ್ಚಂಪಟಿ ಜನಾ ಇತ್ರ್. ಅವ್ರ ಜನಾ ಕಂಡ್ರ ಬಚಾವಿಲ್ಲ
ಮತ್ತೇ.
ಗಿರಿಧರ;- ಹೂಂ ಇಷ್ಟಾದ್ರೂ
ಬಂದೆ. ಒಂದಿಷ್ಟ್ ಪೋಟೋ ತೆಗೀತೆ. ಒಂದ್ಸಲ
ಅಡಗಿಕೊಂಡೇ ನೋಡತೇನೆ. ಬೇಗ್ ಬಂದುಬಿಡ್ತೇನೆ. ಅಲ್ಲೀ ವರೆಗೆ
ಇಲ್ಲೇ ಕೂತಿರು.
ಶಂಕ್ರಶೆಟ್ಟಿ;- ಹುಸಾರೀರೋ,,,
( ಕತ್ತಲೆಯಾಗಿ
ಬೆಳಕಾದಾಗ, ಗಿರಿಧರ ಒಬ್ಬನೇ
ಗಾಂಜಾ ಪ್ರದೇಶಕ್ಕೆ ಪ್ರವೇಶಿಸುತ್ತಾನೆ. ಧಡ್ ನೆ
ನಾಲ್ಕೂ ದಿಕ್ಕಿನಿಂದ ಕಪ್ಪು ವೇಷದ ನಾಲ್ಕು ಜನ
ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಗಿರಿಧರನನ್ನು
ಮುತ್ತುತ್ತಾರೆ. ರಂಗದ ಒಂದು ಕೋನದಲ್ಲಿ ತಂಗವೇಲು
ಹಸನ್ಮುಖದಲ್ಲಿ ನಿಂತಿದ್ದಾನೆ.)
ಧಾಂಡಿಗರು: ( ನಾಲ್ಕೂ
ಜನಸೇರಿ ಒಮ್ಮೆಲೇ ಕೇಳುತ್ತಾರೆ.)
ಇಲ್ಯಾಕೆ ಬಂದಿ. ಯಾರ್ಕೇಳಿ ಬಂದಿ. ಏನ್ ಕೆಲಸಾ ಇತ್ತು, ಬೊಗ್ಳು.
ಹೀಗೆ ಬಂದೋರ್ ಕತೆ ಏನಾಗಿದೆ ಎಂಬೋದು
ಹೊಳೆಯಾಚೆ ಯಾರೂ ಹೇಳಿಲ್ವಾ...?
ಗಿರಿಧರ ; ನಾನು ಅಡ್ವಿ ನೋಡೋಕೆ ಬಂದಂವ.
ಪತ್ರಕರ್ತ. ಒಂದಿಷ್ಟ ಪೋಟೋ ಹೊಡ್ದೆ. ನಿಮದೂ ಇರಲಿ. ( ಕೆಮರಾ ತೆಗೆದು
ಕ್ಲಿಕ್ಕಿಸುತ್ತಾನೆ.)
( ಧಾಂಡಿಗರು ಗಿರಿಧರನ
ಕೈ ಹಿಡಿದು ಸೆಳೆಯುತ್ತಾರೆ. ಕ್ಯಾಮರಾ
ಕಸಿದು ನಾಲ್ಕಾರು ಪೆಟ್ಟು ಹಾಕುತ್ತಾರೆ. ಅಷ್ಟರಲ್ಲಿ
ಹಿಂದಿನಿಂದ ಗುಂಡಿನ ಶಬ್ಧ ಮೊಳಗುತ್ತದೆ.
ಸೇರಿದ ಧಾಂಡಿಗರು ಗಿರಿಧರನ
ಕ್ಯಾಮರಾ ಮತ್ತು ಜೋಳಿಗೆ ಚೀಲವನ್ನು
ಕಸಿದು ಕೊಂಡು ಪಲಾಯನ ಪಠಿಸುತ್ತಾರೆ. ನಾಲ್ಕುಜನ
ಕಾಖಿ ಸಮವಸ್ತ್ರದ ಜನ ಅಲ್ಲಿಗೆ
ನುಗ್ಗುತ್ತಾರೆ. ಕೆಳಗೆ ಬಿದ್ದ ಗಿರಿಧರನನ್ನು ಕೈ ಹಿಡಿದು
ಏಳಿಸುತ್ತಾರೆ. )
ರೇಂಜರ್ ಹನುಮಂತಪ್ಪ. ಏಕಾಏಕೀ ಇಲ್ಲೀಗೆ ಯಾಕೆ ಬಂದ್ರೀ
ಇವ್ರೇ. ನನ್ ಪರ್ಮೀಶನ್
ಇಲ್ದೇ ಒಂದ್ ಸೊಳ್ಳೇನೂ
ಈ ಕಾಡೊಳಗೆ ಬರೋಹಾಗಿಲ್ಲ ಗೊತ್ತೇ....?
ಗಿರಿಧರ;- ಇಲ್ಲೆಲ್ಲ ನಡೀತಾ ಇರೋ
ಚಟುವಟಿಕೆ ನಿಮ್ ಪರವಾನಿಗೆಯಿಂದಲೇ ನಾ ಸಾಹೇಬ್ರೇ.
ಹನುಮಂತಪ್ಪ; - ಇದು ಔಷಧಿಗಿಡಗಳ
ಅಭಿವೃದ್ಧಿ ಕ್ಷೇತ್ರ. ರಾಜ್ಯ ಸರಕಾರದ ಮಟ್ಟದ್ದು.
ಗಿರಿಧರ;- ಓಹೋ ಇಲ್ಲಿ ಬೆಳೆದಿರೋ ಸಸ್ಯಗಳಿಗೆ
ತಾವೂ ನೀರೆರೆದಿದ್ದೀರಾ....? ಯಾಕೆ ಈ ಜನ ನನ್ನ ಮೇಲೆ ಹಲ್ಲೆ ಮಾಡಿದ್ರು....?
ಹನುಮಂತಪ್ಪ;- ಅತಿಕ್ರಮ ಪ್ರವೇಶ
ಮಾಡೋದು ಕಾನೂನು ದೃಷ್ಟಿಯಲ್ಲಿ ಅಪರಾಧ. ಕಾವಲು ಜನ ಅವ್ರು.
ನಾನು ಕಾಣದೇ ಹೋದ್ರೆ
ಅವ್ರು ನಿಮ್ಮನ್ನು ಇನ್ನೂ ಹಿಂಸೆ ನೀಡೋ ಅಪಾಯ ಇತ್ತು.
ಅದಕ್ಕಾಗಿಯೇ ನಾವು ಬೆದರು ಗುಂಡು
ಬಾರಿಸಿದ್ವಿ.
ಗಿರಿಧರ;- ನನ್ನ ಚೀಲ, ಕೆಮರಾ ಎಲ್ಲವನ್ನೂ ಕಸಿದು ಓಡಿಹೋಗಿದ್ದಾರಲ್ಲಾ.
ಹನುಮಂತಪ್ಪ;- ಕೊಡ್ಸೋಣ ಕೊಡ್ಸೋಣ,
ನೀವೀಗ ಇಲ್ಲಿಗೆ ಗುಡ್ಡ ಇಳ್ದು ಬಂದ್ರಿ ಅಲ್ವಾ...?
ನಮ್ಮೊಂದಿಗೆ ನಮ್ಮ ಜೀಪಿನಲ್ಲೇ ಊರಿಗೆ ಹೋಗಬಹುದಂತೆ.
ಗಿರಿಧರ;- ನಿಮ್ ಡ್ಯೂಟಿ
ಇಂದೇ ಇತ್ತಾ..? ಆಕಸ್ಮಿಕ,
ನಾವಿಬ್ರೂ ಇಲ್ಲಿ ಸೇರಿದ್ವಿ.
ಹನುಮಂತಪ್ಪ;- ಇಲ್ಲ ಇಲ್ಲ. ನಿಮ್ಮವ್ರೇ ನಮ್ಗೆ ಮೆಸೇಜ್ ಕೊಟ್ರು.
ಗಿರಿಧರ;- ಓಹ್ ಹೌದಾ...
ನಾನು ನಿಮ್ಮೊಂದಿಗೆ ಬರ್ಲಾರೆ.
ಇದೇ ಗುಡ್ಡದ ತಲೇಮೇಲೆ
ನನ್ ಬೈಕ್ ಇದೆ.
ಹನುಮಂತಪ್ಪ;- ಹೊತ್ತಾಗಿದೆ. ಕತ್ತಲಾಗಿಬಿಡುತ್ತದೆ. ಒಬ್ಬರೇ
ಹೋಗೋದು ಅಪಾಯ. ಕಾಡುಪ್ರಾಣಿಗಳಿವೆ.
ಗಿರಿಧರ;- ಛೇ ಛೇ ಅವು ನಮ್ಮಷ್ಟು ಕೆಟ್ಟವಲ್ಲ. ಅವುಗಳಿಗೆ
ಸ್ವಾರ್ಥವಿಲ್ಲ. ಅದಕ್ಕಿಂತಾ ಪ್ರಾಣಿಗಳು
ನಮ್ಮಂತೇ ಏನನ್ನೂ ಸಂಗ್ರಹಿಸುವುದಿಲ್ಲ. ನಾನು ಬರುತ್ತೇನೆ.
ನನ್ನ ಕೆಮರಾ,... ಚೀಲ....
ಹನುಮಂತಪ್ಪ; ಈ ಹನುಮಂತನ
ಕಣ್ಣು ತಪ್ಪಿಸಿ ಅದೆಲ್ಲಿ ಹೋದೀತು.
ನಾಳೆ ನಿಮ್ ಕಚೇರಿಗೆ
ಕಳಿಸಿಕೊಡ್ತೇನೆ. ನೀವು ಹೊರಡಿ.
ಗಿರಿಧರ;- ಅದ್ರಲ್ಲಿರೋ ವಸ್ತುಗಳಿಗೆ
ಏನೂ ಹಾನಿಯಾಗಬಾರದು ಸಾಹೇಬ್ರೇ..... ನಾನು
ಬರ್ತೀನಿ.
( ಹನುಮಂತಪ್ಪ ಮತ್ತು ಸಂಗಡಿಗರು ಮುಗುಳು ನಗುತ್ತಿರುವಾಗ, ರಂಗದಲ್ಲಿ ಕತ್ತಲೆ. ) ಹಿನ್ನೆಲೆಯಲ್ಲಿ ಹಾಡು........
ದೃಶ್ಯ – ೬.
( ರಂಗದ ತುಂಬೆಲ್ಲ
ಗದ್ದಲವೋ ಗದ್ದಲ. ಎಲ್ಲರ ಕೈಲೂ ಪೇಪರ್.
ಟಿ.ವಿ. ಯಲ್ಲಿ ಬ್ರೇಕಿಂಗ್ ನ್ಯೂಸ್. ರಂಗದ
ಒಂದು ದಿಕ್ಕಿಗೆ ಬೃಹತ್
ಟಿವಿ ಇರಲಿ. ಅದರಲ್ಲಿ
ಶಾಸಕರು ಮತ್ತು ಇನ್ನಿತರರು ಮುಖ ತೋರಿಸಲಿ.)
ಸೇರಿದ ಜನರು. ಪಾಪ
ಒಳ್ಳೇ ಮನುಷ್ಯ. ಸಿಡಿಮಿಡಿಯಾದ್ರೂ ಸಹಾಯ ಮಾಡೋ
ಗುಣ. ಮದ್ವೆಯಿಲ್ಲಾ ಮನೆಕಾಲಿಲ್ಲಾ
ಬರೇ ಸಿಕ್ ಸಿಕ್ಕಲ್ಲಿ
ತಿರುಗೋದು, ಸುದ್ದಿ ಬರ್ಯೋದು, ಅಷ್ಟೇ.
ಪಾಪ ಹೀಂಗಾಗ್ಬಾರ್ದಿತ್ತು. ಎಂದು ಮಾತನಾಡಿಕೊಳ್ಳುತ್ತಾರೆ.)
ಒಬ್ಬ:--- ( ಪೇಪರ್ ಓದುತ್ತಾನೆ, ಮತ್ತೆ ನಾಲ್ಕಾರು
ಜನ ಸುತ್ತ ಸೇರುತ್ತಾರೆ.) ಬೆತ್ತಲ
ಕಾನಲ್ಲಿ ಭಾರೀ ದುರಂತ. ನಿಗೂಢ ಸಾವು.
ಪ್ರತಿಭಾವಂತ, ಪತ್ರಕರ್ತ
ಗಿರಿಧರರ ದಾರುಣ ಅಂತ್ಯ. ಸದಾ ಕಾಡು ಸಂದರ್ಶಿಸುತ್ತಿದ್ದ ಇವರು, ಯಾವ ಸಂಶೋಧನೆಗಾಗಿ
ಕಾಡಿಗೆ ತೆರಳಿದ್ದರು ಎಂಬುದು ತಿಳಿದು
ಬಂದಿಲ್ಲ. ಕಾಡಾನೆ ತುಳಿದಿರಬಹುದು,
ಹುಲಿ ಬೇಟೆಯಾಡಿರಬಹುದು, ಎಂದು ಕಾಡಂಚಿನ
ಜನ ಅಭಿಪ್ರಾಯ ಪಡುತ್ತಿದ್ದಾರೆ. ಪತ್ರಕರ್ತರ
ಸಂಘಗಳು, ನ್ಯಾಯಯುತ ತನಿಖೆಯಾಗಬೇಕೆಂದು, ಆಗ್ರಹಿಸಿದ್ದಾರೆ.
( ಟಿ.ವಿ. ಯಲ್ಲಿ
ಬ್ರೇಕಿಂಗ್ ನ್ಯೂಸ್. ಶಾಸಕರು
ಕಾಣಿಸುತ್ತಿದ್ದಾರೆ. ಅವರೊಂದಿಗೆ ತಂಗವೇಲು
ಸಹ ಹಾಜರು ನಡು ನಡುವೆ ಜಾಹೀರಾತು.)
ರಾಜ್ಯದ ಹಸಿರು ಇಲಾಖೆ,ಯ
ವಕ್ತಾರರು, ʻʻ ಒಬ್ಬ ಶ್ರೇಷ್ಠ ಪರಿಸರ ಪ್ರೇಮಿಯನ್ನು
ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ. ಜನಪ್ರಿಯ
ಶಾಸಕ ಗುಡ್ಡಪ್ಪ ಗೋಟಾವಳಿಯವರು, ನಮ್ಮ ವಾಹಿನಿಯೊಂದಿಗೆ ಮಾತನಾಡುತ್ತ....)
ಶಾಸಕ;- ಪತ್ರಿಕಾ ರಂಗಕ್ಕೊಂದಲ್ಲ, ಸತ್ಯ ನ್ಯಾಯ ಮತ್ತು ಪ್ರಗತಿಯನ್ನೇ ಧ್ಯೇಯವಾಗಿಸಿಕೊಂಡಿದ್ದ, ನನ್ನ ಕ್ಷೇತ್ರದ
ಗಿರಿಧರರ ಆಕಸ್ಮಿಕ
ಸಾವು ನಮ್ಮ ಸಮಾಜಕ್ಕೆ ತುಂಬಲಾರದ
ನಷ್ಟ. ಅವರ ಆತ್ಮಕ್ಕೆ
ಶಾಂತಿಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ
ಸ್ಮರಣಾರ್ಥ ದೇಶಮಟ್ಟದ ಒಂದು ಪ್ರಶಸ್ತಿಯನ್ನು ಸ್ಥಾಪಿಸುವ
ನಿರ್ಣಯ ಕೈಗೊಂಡಿದ್ದೇವೆ. ʼʼ ಎಂದು ತಮ್ಮ ದುಃಖವನ್ನು ಪ್ರಕಟಿಸಿದರು.
ಟಿ.ವಿ. ಸುಪ್ರಸಿದ್ದ ಉದ್ಯಮಿ,
ನಿಸರ್ಗಪ್ರೇಮಿ, ತಂಗವೇಲುರವರು, ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸುತ್ತ, ʻʻ ದಿ. ಗಿರಿಧರ ರವರ ಪ್ರತಿಮೆಯೊಂದನ್ನು ನಿದ್ರಾಪುರ
ಪಟ್ಟಣದ ನಡುವೆ ಸ್ಥಾಪಿಸಲು
ನಾನು ಕೈ ಜೋಡಿಸುತ್ತೇನೆ,ʼʼ ಎಂದು ಆಶ್ವಾಸನೆ ನೀಡಿದ್ದಾರೆ.
ನಗರದ ಜನತೆ ಈ ಯೋಜನೆಯನ್ನು
ಹರ್ಷದಿಂದ ಸ್ವಾಗತಿಸಿದ್ದಾರೆ.
========================================================
ಮಂಗಲ ಪದ್ಯ ----
ಭವ್ಯ ದಿವ್ಯ ದೇವಾಲಯದೊಳಗೆ ದೇವರ ಹುಡುಕುವ
ಬನ್ನಿ
ಕಾಗದದೊಳಗಣ ಸುಂದರ ಕಾನನು
ಅನ್ವೇಶಿಸುವ ಬನ್ನಿ.
ಗೋ ಮುಖವಾಡವ ಕಳಚಲು ಬನ್ನಿ, ವ್ಯಾಘ್ರರಾಗಿ ಬನ್ನಿ
ಅಮಲಿನ ಘಮಲನು ಅಳಿಸಲು ಬನ್ನಿ, ಕೆಚ್ಚಿನ- ಕಿಚ್ಚು ತನ್ನಿ.
ಬದುಕು ದಾರುಣ, ಕಪಟ ಕಾರಣ,
ಬೋಳು ಬೆಟ್ಟಕೆ ಚಾರಣ
ಸುತ್ತಮುತ್ತಲೂ ನರ ಸತ್ತ ಜೀವಗಳು,
ಜಡತನವೇ.... ಇದಕೆಲ್ಲ ಕಾರಣ.
ಹಸನಾಗಲಿ ಹಸಿರು, ಉಸಿರಾಡಲಿ
ಬದುಕು
ಹರಿದಾಡಲಿ ನೆತ್ತರು, ಹರಿಯಲಿ ಎಚ್ಚರದ
ನಸುಕು.
ಮಂಗಲಂ ನಿಮಗೆ ನಮಗೆ. ಈ ಭುವಿಯ ಭವಿಗೆ.
ಮಂಗಲಂ ನಿತ್ಯ ಸುಳಿದಾಡುವ ಗಾಳಿಗೆ , ಸುರಿವ ಮಳೆಗೆ
===================================================
ಗಾಂಧೀ ಗುಂಡಿಗೆ ಗುಂಡೊಳು
ದಮನ,
ಸಾಕ್ರೆಟೀಸನಿಗೆ ವಿಷಪ್ರಾಶನ
ಏಸು ಹೆಗಲಿಗೇ ಶಿಲುಬೆ
ಸಮ್ಮಾನ
ಮಡಗಿದಂಗೆ ಇರು ಓ ಭಡವಾ
ಬಡಬಡಿಸಿದೆಯೋ, ತಗೋ ಬಗ್ಗಡವಾ.
ಹಾಲು ಎಂದು ಹಾಲಾಹಲ ಪಡೆಯುವ
ಶ್ರೀಸಾಮಾನ್ಯರೆ ಕೇಳಿ
ಕೇಡಿಯ ಎದುರು ಹೇಡಿಯಾಗುವುದು ನ್ಯಾಯವೇ
ಹೇಳಿ.
ನಯದ ಮರೆಯಲ್ಲಿ ಹೂವಿನೊರೆಯಲ್ಲಿ, ಹಾವಿದೆ...!! ತಾಳಿ ತಾಳಿ.
ಕೆಂಪಾಗಬೇಕು, ಸೊಂಪಾಗಬೇಕು, ಬಿಟ್ಟು ನಮ್ಮ
ಚಾಳಿ.
ಬೆಳೆದು ನಿಂತಿದೆ ಕಾನು ತನ್ನಷ್ಟಕೆ ತಾನು.
ಇಳೆಯ ಮಾನವ ಕಾಯುವ
ಕಾಡನು
ಕಾಡುವೆಯೇಕೆ ನೀನು.
ನಿನ್ನೊಳಗಿನ ನಿನ್ನನು ನಿರ್ಮಮತೆಯಲಿ
ಕೊಲ್ಲುತಿರುವೆಯೇಕೆ...?
ಮುಂದಿನ ಕಾಲಕೆ ಮರುಭೂಮಿಯ
ಕೊಟ್ಟು
ಸಾಯುತಿರುವಿಯೇಕೆ...?
ನಿತ್ಯ ಸಂಜೀವಿನಿ ನಿರ್ಮಲರೂಪಿಣಿ
ಕಾನನ ಕುಸುಮ ಆಕೆ.
ಮುಗ್ಧತೆಯೇ ಮುಳುವಾಯಿತೇ
ತುತ್ಥಾದಳೇ ಮಕ್ಕಳ ಮರಣ ಕಾಯಕಕೆ.
ನಿನ್ನದಲ್ಲವೋ ಈ ಅವನಿ
ಅದು ಮೊಮ್ಮಕ್ಕಳ ಆಸ್ತಿ
ಕುಡುಗೋಲ ಕೈ ಬಿಡು, ಸೇರು
ನಿನ್ನ ಗೂಡು
ಬಿಟ್ಟು ಅಹಮಿಕೆಯ ಕುಸ್ತಿ.
ಹಸಿರಿನ ತಳಿತ ಹೊಳೆ ಭರಸೆಳೆತ
ದು:ಶ್ಶಾಸನರಿಂದ.
ಹಣ ಹೆಣಗಾಟ, ಮಣ ಮಠ ಮಂತ್ರ
ದುಷ್ಟ ಕೂಟದಿಂದ.
ವಿ. ಸೂ. ತೋಚಿದಾಗೆಲ್ಲ ಗೀಚಿದ
ಪದ್ಯಗಳಿವು. ಸದ್ಯದ ನಮ್ಮ ನಿಸರ್ಗದ ಶೋಷಣೆಯ
ಕಂಡು, ಏನೂ ಮಾಡಲಾಗದೇ
ಮೈ ಪರಚಿಕೊಂಡು ಉದ್ಗರಿಸಿದ
ತುಣುಕುಗಳು ಇವು. ಬೇಕಾದರೆ
ಉಪಯೋಗಿಸಿಕೊಳ್ಳಬಹುದು. ಅಥವಾ ಕೈ ಬಿಡಬಹುದು. ಸಂಭಾಷಣೆಗಳಿಗೆ ಇನ್ನಷ್ಟು
ಜೀವತುಂಬಲು ಪ್ರಯತ್ನಿಸಬಹುದು. )
ನೀವು ನೀಡಿದ ಅವಕಾಶಕ್ಕೆ
ಅನಂತ ಕೃತಜ್ಞತೆಗಳು.
ಸುಬ್ರಾಯ ಮತ್ತೀಹಳ್ಳಿ. ತಾ--
೧ – ೬ – ೨೦೨೬.
Comments
Post a Comment