ʻʻ ಆಪ್ತವಾಗುವ ಆತ್ಮಗೀತೆಗಳು.ʼʼ

 

        

 

 

 

    ʻʻ ಆಪ್ತವಾಗುವ  ಆತ್ಮಗೀತೆಗಳು.ʼʼ

                  

 

                    ಕಳೆದು  ಹೋಗುವ  ಹಗಲೆ  ನಗುಸಂಜೆಯುಳಿಸಿ  ಹೋಗು

                     ಸರಿದು  ಹೋಗುವ  ಮುಗಿಲೆ  ಮಳೆಬಿಲ್ಲ  ಕಳಿಸಿ  ಹೋಗು.

                     ಪಾದಕಂಟಿದ  ಮಳಲೆ  ಕೆಳೆಯ  ಹನಿಯಿಸಿ  ಹೋಗು.

                     ಕಿವಿಯ  ತುಂಬುವ  ಕೊಳಲೆ  ಇರವ  ಬೆಳಗಿಸಿ  ಹೋಗು.    ( ಜಂಗಮ)

 

        ಕಾವ್ಯ  ಅದು  ಮನುಷ್ಯನ  ಆತ್ಮದ  ಮಾತು,  ಎನ್ನುತ್ತಾರೆ.   ಭಯ  ಆತಂಕ  ತಲ್ಲಣ  ಪ್ರೀತಿ  ವಿರಹ,  ಸೌಜನ್ಯ  ಸ್ನೇಹ,   ಹತಾಶೆ,  ಭ್ರಮನಿರಸನ,  ದ್ರೋಹ,   ಹೀಗೆ   ಬದುಕಿನ  ಎಲ್ಲ ಆಯಾಮಗಳನ್ನೂ  ತನ್ನ  ಒಡಲೊಳಗೆ  ಜೀರ್ಣಿಸಿಕೊಂಡು,  ಸೌಹಾರ್ದ  ಸುಖದ  ಧಾರೆಯನ್ನೇ  ಸೃಷ್ಟಿಸುವ  ಕವಿತೆಗಳು,  ಮನುಷ್ಯ  ತನಗಾಗಿಯೇ  ಸೃಷ್ಟಿಸಿಕೊಂಡ  ಸಾಂತ್ವನದ  ಸುಂದರ  ಶಕ್ತಿಯೆಂದರೆ   ಕವಿತೆಗಳೇ.  ಸಮರ್ಥ  ಕವಿತೆಯೊಂದು,  ಸಶಕ್ತ  ರಾಗದಲ್ಲಿ  ಸಮ್ಮಿಲಿತಗೊಂಡು,  ಹಾಡಾಗಿ  ಪರಿವರ್ತನೆಗೊಂಡಾಗ,  ಕವಿತೆಯ  ಶಕ್ತಿ  ದ್ವಿಗುಣಗೊಳ್ಳುತ್ತದೆ.   ಜಡ  ಅಕ್ಷರದಲ್ಲಿರುವ  ಕಾವ್ಯ,  ಸೂಕ್ತ  ಭಾವರಸವನ್ನು  ಹೀರಿ, ರಾಗವಾಗಿ  ಉಲಿದಾಗ,  ಅದರ  ಕಲರವ,  ನೀಡುವ  ಅನುಭೂತಿಯಂತೂ  ಅನನ್ಯ.

        ಮೊನ್ನೆ  ಮೊನ್ನೆ  ಹುಬ್ಬಳ್ಳಿ  ನಗರದ   ಎಂ. ಎಂ. ಜೋಶಿ  ಸಭಾಭವನದಲ್ಲಿ,  ` ಜಂಗಮ ‘  ಕಾವ್ಯನಾಮದ   ಗಜಲ್‌  ಕವಿ  ಡಾ. ಗೋವಿಂದ  ಹೆಗಡೆಯವರ,   ಎರಡೆರಡು  ಮಹತ್ವಪೂರ್ಣ   ಗಜಲ್‌  ಕೃತಿಗಳು,  ಲೋಕಾರ್ಪಣ  ಗೊಂಡಿದ್ದು,  ಮಾತುಗಳ  ಮೂಲಕವಲ್ಲ.  ಗಜಲ್‌  ಕವಿತೆಗಳ  ಸುಶ್ರಾವ್ಯ  ಹಾಡುಗಳ  ಮೂಲಕ.  ಯುವ  ಹಿಂದೂಸ್ಥಾನಿ  ಗಾಯಕಿ, ಶ್ರೀಮತಿ,  ರೇಖಾ ಭಟ್‌, ಗಜಲ್‌ ಗಳಿಗೆ  ರಾಗದ  ಸೌಂದರ್ಯ, ಮತ್ತು ಭಾವಗಳಿಗೆ  ಆಳ, ಒದಗಿಸಿದರು.

        ಕನ್ನಡ  ಸಾಹಿತ್ಯ  ಸದ್ಯದ  ಸಂದರ್ಭದಲ್ಲಿ,   ತನ್ನ ಪ್ರಯೋಗಶೀಲತೆ,  ನವೀನತೆ,  ಆಕರ್ಷಕತೆಗಳಿಂದ   ದೂರವಾಗಿ,  ನಿಂತ  ನೀರಾದಂತೆನ್ನಿಸುತ್ತಿರುವಾಗ,   ಹೊಸ  ಕನಸು,  ನವೀನ  ಸಂವೇದನೆ,  ಆಪ್ತ ಭಾಷೆಗಳಿಂದ  ಸಮೃದ್ಧಗೊಳ್ಳುತ್ತ,  ಪರ್ಶೀಯನ್‌ ಮೂಲದಿಂದ  ಆಗಮಿಸಿ,,  ಉರ್ದು  ಹಿಂದಿ  ಭಾಷೆಗಳಲ್ಲಿ  ಸಂಚಲನವನ್ನೇ  ಸೃಷ್ಟಿಸಿಕೊಂಡು,  ಮಿಂಚುತ್ತಿರುವ  ಗಜಲ್‌  ಕಾವ್ಯ ಚಳುವಳಿ,   ಕನ್ನಡದ  ನೆಲದಲ್ಲಿ  ಬೇರಿಳಿಸುತ್ತ,  ಕನ್ನಡದ  ಸಂಸ್ಕೃತಿ  ಪರಂಪರೆಗಳನ್ನು  ಹೀರುತ್ತ,  ಚೇತೋಹಾರಿ  ವಾತಾವರಣವನ್ನು  ಸೃಷ್ಟಿಸುತ್ತಿರುವುದು,  ಆಶಾದಾಯಕ  ಬೆಳವಣಿಗೆ.   

       ಕನ್ನಡದ  ಸುಪ್ರಸಿದ್ದ  ಕವಿ,  ಚಿಂತಕ,  ದಿ. ಶಾಂತರಸ ರಿಂದ,      ಎರಡು  ದಶಕಗಳ  ಹಿಂದೆಯಷ್ಟೇ ಪಾದಾರ್ಪಣಗೊಂಡ,  ಗಜಲ್‌  ಚಳುವಳಿ,   ಇಂದು   ಕನ್ನಡದ   ಕಾವ್ಯಭೂಮಿಯಲ್ಲಿ  ಸಮರ್ಥವಾಗಿ  ತನ್ನ ಪ್ರಭಾವ  ಬೀರುತ್ತಿದೆ.   ಈಗಾಗಲೇ  ನೂರಾರು  ಯುವ ಕವಿಗಳು,  ಗಜಲ್‌ ರಚನೆಯ  ಮೂಲಕ  ಕನ್ನಡಕ್ಕೊಂದು  ಹೊಚ್ಚ ಹೊಸ  ಆಶಾದಾಯಕ  ಆವರಣವೊಂದನ್ನು  ಸೃಷ್ಟಿಸುತ್ತಿದ್ದಾರೆ.

         ಸದ್ಯ ಲೋಕಾರ್ಪಣೆಗೊಂಡ,  ಗೋವಿಂದ  ಹೆಗಡೆಯವರ ʻʻ ಬದುಕು  ಬಾರಾ ಕಮಾನುʼʼ  ಎಂಬ  ಗಜಲ್‌ ಗಳ  ಕವನ ಸಂಕಲನ,  ಮತ್ತು  ಗಜಲ ಪರಂಪರೆಯ  ಅಧ್ಯಯನ ಲೇಖನಗಳ  ಗುಚ್ಛ  ಗಜಲ್‌ ತಿಳಿಯೋಣ  ಬನ್ನಿ,  ಕೃತಿಗಳು,  ಗಜಲ್‌ ಅಂದರೇನು  ಎಂಬ  ಪ್ರಶ್ನೆಗೆ  ಉತ್ತರಿಸುತ್ತಲೇ, ಅದರ   ಲಯ  ಛಂದೋಬಂಧ,  ಆಶಯ,  ಮತ್ತು  ತಾತ್ವಿಕತೆಯನ್ನು  ಸರಳವಾಗಿ  ವಿವರಿಸಿದ  ಅಪರೂಪದ  ಕೃತಿಗಳಾಗಿ  ಮೂಡಿಬಂದಿವೆ. 

       ಅದೇ ಊರು  ಅದೇ  ಮರ,  ಈಗ ಬದಲಾಗಿದೆ

       ನಾವು  ಕಟ್ಟಿದ  ಸ್ವರ್ಗ  ಅಳಿದಮೇಲೆ  ಏನಿದೆ..?                                   

 

        ಎಂದು  ಪ್ರಶ್ನಿಸುತ್ತಲೇ,  ʻʻ ಬಡಿವಬ್ಬರದ  ಸಿಡಿಲೇ  ಕಣ್ಣ  ಕರುಣಿಸಿ  ಹೋಗು |  ನೆಲದ  ಮಾಯದ  ಒಡಲೇ  ಬಯಲ  ಬೆಳೆಯಿಸಿ  ಹೋಗು |ʼʼ   ಎಂದು,  ಚಿಂತನೆಗೆ  ಸಂವೇದನೆಗೆ   ಹೊಸ  ಯೌವ್ವನವನ್ನು  ನೀಡಲು  ಪ್ರಯತ್ನಿಸುತ್ತಾರೆ.   ಕ್ರೂರ  ವಾಸ್ತವದ  ಜಂಜಾವಾತದಲ್ಲಿ  ಸಿಲುಕಿದ   ಮನಸ್ಸನ್ನು,  ತಹಬಂದಿಗೆ  ತರುವ   ಸಾಹಸಕ್ಕೆ  ತೊಡಗುತ್ತಾರೆ.  ʻʻ  ಕಣ್ಣಿಗೆ  ಕಟ್ಟಿದ  ಪಟ್ಟಿ ,  ಆದರೂ  ಹುಡುಕುತ್ತಲೇ  ಇರುವೆ, |  ಬೆಳಗು  ಕಾಣದ  ತೀರಗಳಲ್ಲಿ  ಅಲೆಯುತ್ತಲೇ  ಇರುವೆ |ʼʼ    ಎಂದೆನ್ನುತ್ತ,  ಮಾನವ  ಬದುಕಿನ  ಸಂಕೀರ್ಣ  ಚಲನೆಗಳ  ವೈವಿಧ್ಯಮಯ   ಅನುಭವಗಳನ್ನು   ಸರಳ  ಸಂಕ್ಷಿಪ್ತ  ಮತ್ತು  ಸಮಗ್ರವಾಗಿ  ಚಿತ್ರಿಸುವ  ಪ್ರಯತ್ನದಲ್ಲಿ  ತೊಡಗುತ್ತಾರೆ.

 

       ಕಾವ್ಯವೆಂದರೆ ಮನುಷ್ಯನ ಅಂತರಂಗದ ಅತ್ಯಂತ ಸೂಕ್ಷ್ಮ ಕಂಪನಕ್ಕೆ ಸಿಕ್ಕಿರುವ ಶಬ್ದರೂಪ. ಕಾಲ ಬದಲಾಗುತ್ತಾ ಹೋದಂತೆ ಕಾವ್ಯದ ರೂಪಗಳು ಬದಲಾಗುತ್ತವೆ; ಆದರೆ ಮನುಷ್ಯನ ಪ್ರೀತಿ, ವಿರಹ, ನಿರೀಕ್ಷೆ, ನೋವು, ಕನಸು, ಹತಾಶೆ, ಹೋರಾಟ ಮತ್ತು ಬದುಕಿನ ಅರ್ಥದ ಹುಡುಕಾಟ ಮಾತ್ರ ಬದಲಾಗುವುದಿಲ್ಲ. ಈ ಶಾಶ್ವತ ಮಾನವಾನುಭವಗಳಿಗೆ ಹೊಸ ಲಯ ಮತ್ತು ಹೊಸ ಭಾಷೆಯನ್ನು ನೀಡಿದ ಕಾವ್ಯಪ್ರಕಾರಗಳಲ್ಲಿ ಗಜಲ್‌ ವಿಶಿಷ್ಟವಾದದ್ದು.   ಆದರೆ  ಗಜಲ್‌ ಗಳ  ಬಾಹ್ಯರೂಪವೊಂದನ್ನೇ  ಅನುಕರಿಸುತ್ತ,  ಕ್ಲೀಷೆಯಾದ  ವಸ್ತುಗಳಿಗೇ  ಗಜಲ್‌  ವೇಷ  ತೊಡಿಸುತ್ತಿರುವ  ಸದ್ಯದ  ಸಂದರ್ಭದಲ್ಲಿ  ಗೋವಿಂದ  ಹೆಗಡೆಯವರ  ಅಭಿವ್ಯಕ್ತಿ  ಸಂತಸ  ತರುತ್ತಿದೆ. 

      ಕನ್ನಡವೂ ಈ ಸೌಂದರ್ಯಮಯ ಕಾವ್ಯಪ್ರಕಾರವನ್ನು ತನ್ನ ಹೃದಯದಿಂದ ಸ್ವೀಕರಿಸಿದೆ. ಇಂದು ಕನ್ನಡದಲ್ಲಿ ಗಜಲ್‌ ಬರೆಯುವ ಕವಿಗಳ ಸಂಖ್ಯೆ ಹೆಚ್ಚುತ್ತಿರುವುದು ಮಾತ್ರವಲ್ಲ; ಗಜಲ್‌ ಓದುವ, ಹಾಡುವ, ಚರ್ಚಿಸುವ ಮತ್ತು ಆಸ್ವಾದಿಸುವ ಸಹೃದಯರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಕನ್ನಡದಲ್ಲಿ ಗಜಲ್‌ ಕಾವ್ಯದ ಒಂದು ರೀತಿಯ “ಸುಗ್ಗಿ” ನಡೆಯುತ್ತಿದೆ ಎನ್ನುವುದು ಅತಿಶಯೋಕ್ತಿಯಲ್ಲ.

       ಗಜಲ್‌ನ ಮತ್ತೊಂದು ಮುಖ್ಯ ಸೌಂದರ್ಯವೆಂದರೆ ಅದರ ಲಯ. ಗಜಲ್‌ ಓದಿದಾಗ ಅದು ಕಿವಿಗೆ ಸಂಗೀತದಂತೆ ತಾಗುತ್ತದೆ. ಪದಗಳ ಆಯ್ಕೆ, ಪ್ರಾಸ, ಪುನರಾವರ್ತನೆ, ರದೀಫ್‌, ಕಾಫಿಯಾ ಮುಂತಾದ ರಚನಾತ್ಮಕ ಅಂಶಗಳು ಗಜಲ್‌ಗೆ ವಿಶಿಷ್ಟವಾದ ಶ್ರವಣಾನುಭವವನ್ನು ನೀಡುತ್ತವೆ. ಅದಕ್ಕಾಗಿಯೇ ಗಜಲ್‌ ಕಾವ್ಯವು ಪಠಣಕ್ಕೂ, ಗಾಯನಕ್ಕೂ ಸಹಜವಾಗಿ ಹೊಂದಿಕೊಳ್ಳುತ್ತದೆ.

      ಪ್ರಸ್ತುತ  ಕೃತಿಯಲ್ಲಿಯ  ಅರವತ್ತು  ರಚನೆಗಳು   ವೈವಿಧ್ಯ ಅನುಭವಗಳಿಗೆ  ಸ್ಪಂದಿಸುತ್ತವೆ.  ವಿಷಾದದ  ವಿಶಾಲ  ಆವರಣದಲ್ಲಿ  ಸಾಮಾಜಿಕ  ಸಾಂಸ್ಕೃತಿಕ,  ಆಧ್ಯಾತ್ಮಿಕತೆಗಳು,  ಸುತ್ತಮುತ್ತಲ  ಬದುಕು  ಮತ್ತು ಪ್ರಕೃತಿಗಳನ್ನೇ  ರೂಪಕವಾಗಿಸುತ್ತ,  ಸಹೃದಯನ  ಆಂತರ್ಯಕ್ಕೆ  ಲಗ್ಗೆಯಿಡುತ್ತವೆ.    ಕೃತಿಕಾರರೇ  ಅಭಿಪ್ರಾಯಿಸಿದಂತೇ  ಒಂದು  ದಶಕದ  ಗಜಲ್‌  ಸಾಂಗತ್ಯದಲ್ಲಿ  ೫೦೦  ಕ್ಕೂ  ಹೆಚ್ಚು ಗಜಲ್‌ ಗಳನ್ನು  ರಚಿಸಿ  ಸಮರ್ಥ  ಗಜಲ್ ಕಾರರಾಗಿ  ರೂಪುಗೊಂಡಿದ್ದಾರೆ. 

    ಕನ್ನಡ  ನೆಲಕ್ಕೆ  ಗಜಲ್‌ ಎಂಬ  ಕಾವ್ಯಪ್ರಕಾರ  ದಾಂಗುಡಿಯಿಟ್ಟಿದ್ದು  ಸ್ವಾಗತಾರ್ಹವಾದರೂ,  ಇಂಗ್ಲಿಶ್‌  ಪರಂಪರೆಯ  ಲಿರಿಕ್‌    ನಮ್ಮ  ಮಣ್ಣಲ್ಲಿ  ಭಾವಗೀತೆ  ಎಂಬ  ನಾಮಧೇಯ  ಪಡೆದಂತೇ,   ಗಜಲ್‌  ಕೂಡಾ  ʻʻ ಆತ್ಮಗೀತೆ ʼʼ  ಎಂಬ  ಪ್ರಕಾರವಾದರೆ   ಇನ್ನಷ್ಟು ಆಪ್ತವಾದೀತು.

ಕನ್ನಡದ  ಇನ್ನೊಬ್ಬ  ಗಜಲ್‌  ಕವಿ,  ಡಾ. ಗಿರೀಶ್‌  ಜಕಾಪುರೆಯವರ  ಮುನ್ನುಡಿ,  ಮತ್ತು  ಕವಿ  ಕಮಲಾಕರ  ಕಡವೆ ,  ಇವರುಗಳ,  ಅಭ್ಯಾಸಪೂರ್ಣ   ಮತ್ತು ಸಹೃದಯ  ಸ್ಪಂದನವಾದ  ಹಿನ್ನುಡಿಗಳು,  ಗಜಲ್‌  ಕೃತಿಗೆ  ಇನ್ನಷ್ಟು  ಮೆರಗು  ನೀಡಿವೆ.

      ಅಂದೇ  ಬಿಡುಗಡೆಗೊಂಡ,  ಮತ್ತೊಂದು  ಕೃತಿ, ʻʻ ಗಜಲ್‌  ತಿಳಿಯೋಣ  ಬನ್ನಿʼʼ ಯಲ್ಲಿ  ಹತ್ತು ಮೌಲಿಕ  ಅಧ್ಯಯನಪೂರ್ಣ  ಲೇಖನಗಳಿವೆ.   ಗಜಲ್  ಕಾವ್ಯದ  ಸಾವಿರ  ವರ್ಷದ  ಚರಿತ್ರೆಯ  ಜೊತೆಗೆ,  ಕವಿತೆಗಳ  ನಿಯಮ, ಛಂದೋಬದ್ಧತೆ,  ಆಶಯ,  ಮತ್ತು ವೈಶಿಷ್ಟ್ಯಗಳ   ತಲಸ್ಪರ್ಶೀ  ವಿವರಗಳು,  ಲೇಖನಗಳಲ್ಲಿ  ಮೂಡಿವೆ. 

      ಗಜಲ್‌  ಓದುಗನಿಗೆ,  ಕೇಳುಗನಿಗೆ,  ವ್ಯವಸ್ಥಿತ  ಮಾನಸಿಕ   ಸಿದ್ಧತೆಗೆ  ಅನುವಾಗುವ  ಈ  ಕೃತಿ,  ಗಜಲ್‌  ಪರಂಪರೆಯನ್ನು  ಯಶಸ್ವೀಯಾಗಿ  ಪರಿಚಯಿಸುವ  ಅಪರೂಪದ  ಕೃತಿಯಾಗಿದೆ.

     ಒಟ್ಟಿನಲ್ಲಿ   ಒಂದು ಕಾವ್ಯಪ್ರಕಾರ ಮತ್ತೊಂದು ಭಾಷೆಗೆ ಬಂದಾಗ ಅದು ಕೇವಲ ಭಾಷಾಂತರಗೊಂಡರೆ ಜೀವಂತವಾಗುವುದಿಲ್ಲ. ಅದು ಆ ಭಾಷೆಯ ಸಂಸ್ಕೃತಿ, ನುಡಿಗಟ್ಟು, ನೆಲದ ವಾಸನೆ ಮತ್ತು ಜನಜೀವನದೊಂದಿಗೆ ಬೆರೆತಾಗ ಮಾತ್ರ ಸ್ವಂತಿಕೆಯನ್ನೂ ಪಡೆಯುತ್ತದೆ. ಕನ್ನಡ ಗಜಲ್‌ನ ಪ್ರಮುಖ ಸೌಂದರ್ಯ ಇಲ್ಲಿಯೇ ಇದೆ. ಕನ್ನಡದ ಗಾದೆಗಳು, ನುಡಿಗಟ್ಟುಗಳು, ಗ್ರಾಮೀಣ ಬದುಕಿನ ಚಿತ್ರಗಳು, ಮಲೆನಾಡಿನ ಮಳೆ, ಕರಾವಳಿಯ ಸಮುದ್ರ, ಉತ್ತರ ಕರ್ನಾಟಕದ ಬಿಸಿಲು, ನಗರದ ಗದ್ದಲ, ಹಳ್ಳಿಯ ಮೌನ—ಇವೆಲ್ಲವೂ ಗಜಲ್‌ನ ಭಾವಲೋಕಕ್ಕೆ ಪ್ರವೇಶಿಸಿದಾಗ ಅದು ಕನ್ನಡದ ಸ್ವರ ಪಡೆದುಕೊಳ್ಳುತ್ತದೆಉರ್ದು ಗಜಲ್‌ನಿಂದ ಬಂದ ರೂಪಶಿಸ್ತನ್ನು ಉಳಿಸಿಕೊಂಡು, ಕನ್ನಡದ ಭಾವಸಂಪತ್ತನ್ನು ಅದರಲ್ಲಿ ತುಂಬುವುದು ಸವಾಲೂ ಹೌದು; ಸೌಂದರ್ಯವೂ ಹೌದು. ಈ ಸೃಜನಾತ್ಮಕ ಸಂಧಿಯೇ ಕನ್ನಡ ಗಜಲ್‌ಗೆ ವಿಶಿಷ್ಟವಾದ ಅಸ್ತಿತ್ವವನ್ನು ನೀಡಬಲ್ಲದು.  ಈ  ನಿಟ್ಟಿನಲ್ಲಿ,  ಕವಿ  ಗೋವಿಂದರ  ಶಕ್ತ  ರಚನೆಗಳು  ಗಜಲ್‌  ಪರಂಪರೆ, ಮತ್ತು  ಕನ್ನಡ  ಸಂಸ್ಕೃತಿಯ  ಸುವರ್ಣ  ಸಂಗಮವಾಗಿ  ಶೋಭಿಸುತ್ತಿವೆ.

                                                              ಸುಬ್ರಾಯ  ಮತ್ತೀಹಳ್ಳಿ.  ೯೪೮೩೬೪೭೮೮೭. ( watsup)

 

 

ಬದುಕು  ಬಾರಾ  ಕಮಾನು.   ಗಜಲ್‌  ಸಂಕಲನ.  ಡಾ. ಗೋವಿಂದ  ಹೆಗಡೆ.

ಪು- ೮೮.  ಬೆಲೆ—ರೂ- ೧೩೫.

ಗಜಲ್‌  ತಿಳಿಯೋಣ  ಬನ್ನಿ.   ಗಜಲ್‌  ಬಗೆಗೆ  ಲೇಖನಗಳು.

ಪುಟ- ೯೬.  ಬೆಲೆ- ೧೫೦-೦೦.

ಎರಡೂ  ಕೃತಿಗಳ  ಪ್ರಕಾಶನ,-  ಸಂಸ್ಕೃತಿ  ಪಬ್ಲಿಶಿಂಗ್‌  ಹೌಸ್.‌ ಮೈಸೂರು.

 

 

 

                                                                     

 

 

 

Comments

Popular posts from this blog

ಕವನವೆಂದರೆ.......................

Vishwambhara ---3

Vishwambhara -5. ಸುಮನಾಂಬರ ಅಂಕಣ - ೨೦.