Saturday, 25 January 2025

ಜೆನ್ ಮಹಾಯಾನ ʼʼ

 

             ದೇಹವೆಂಬುದು  ಬೋಧಿವೃಕ್ಷ /   ಆತ್ಮವೆಂಬುದು  ಹೊಳೆವ  ಕನ್ನಡಿ /

             ಮಾಲಿನ್ಯ  ಹತ್ತದಂತೇ  ಅದನು /  ಸದಾ  ಸ್ವಚ್ಛವಾಗಿರಿಸ ಬೇಕು  ಕಾಣ   (  ಜೆನ್  ಕವಿತೆ )

 

     ಕೃತಿಯೊಂದು  ಕಾಡಬೇಕು.  ಕಾಡಿ  ಕೂಡಬೇಕು.   ಕೂಡಿ  ಹಾಡಬೇಕು.   ಅದು  ಒಂದು   ಸಾಹಿತ್ಯಕೃತಿಯ  ಹೆಗ್ಗಳಿಕೆ.  ನಮ್ಮ ನಡುವಣ  ಸೂಕ್ಷ್ಮ ಸಂವೇದನಾಶೀಲ,  ಸೃಜನಶೀಲ,  ಜೊತೆಗೆ  ಸಾಹಿತ್ಯದ  ಸಮರ್ಥ ವಿಮರ್ಶಕರಾಗಿ  ಗುರುತಿಸಿಕೊಂಡಿರುವ   ಆರ್.ಡಿ.ಹೆಗಡೆ  ಇದೇ  ಅಕ್ಷರ ವರ್ಷದಲ್ಲಿ  ಉತ್ತರಕನ್ನಡ  ಜಿಲ್ಲಾ  ಸಾಹಿತ್ಯಸಮ್ಮೇಳನದ  ಸರ್ವಾಧ್ಯಕ್ಷರಾಗಿ  ತಮ್ಮ ನುಡಿಸೇವೆ  ಗೈದರು.  ಅವರದ್ದೇ ಆದ    ಕನ್ನಡದಲ್ಲೇ  ಅತ್ಯಂತ  ಅಪರೂಪವಾದ  ʻʻ ಜೆನ್‌  ಮಹಾಯಾನ ʼʼ  ಶೀರ್ಷಿಕೆಯ  ಒಂದು  ಪುಸ್ತಕ  ಬೆಂಗಳೂರಿನ  ನವಕರ್ನಾಟಕ ಪ್ರಕಾಶನದಿಂದ   ನಾಲ್ಕಾರು  ವರ್ಷಗಳ  ಹಿಂದೆಯೇ  ಪ್ರಕಟಗೊಂಡು, ಮತ್ತೆ  ಮತ್ತೆ  ಮುದ್ರಣಗೊಳ್ಳುತ್ತ, ಸಹೃದಯರ  ಗಮನಸೆಳೆಯುತ್ತಿದೆ.   ಬೌದ್ಧ ದರ್ಮದ   ಮಾನವ  ಜಗತ್ತಿಗೆ ಅಪೂರ್ವಕೊಡುಗೆಯಾದ  ಜೆನ್‌  ಎಂಬ  ತಾತ್ವಿಕ  ಆ‍ಧ್ಯಾತ್ಮಿಕ  ಸಾಂಸ್ಕೃತಿಕ  ಸಾಹಿತ್ಯದ   ಅಮೂಲಾಗ್ರ  ಇತಿಹಾಸ,  ಅದರ  ಆಳ, ವೈಶಾಲ್ಯ,  ಮತ್ತು  ಆಧ್ಯಾತ್ಮಿಕ  ಸತ್ವವನ್ನು  ಅತ್ಯಂತ  ಸುಂದರ, ಕಾವ್ಯಾತ್ಮಕ  ನಿರೂಪಣೆಯ  ಮೂಲಕ,  ಜೆನ್‌  ಜಗತ್ತಿಗೆ  ಯಶಸ್ವೀಯಾಗಿ  ಸೆಳೆದ  ಪ್ರಸ್ತುತ  ಕೃತಿ,  ಓದುಗನನ್ನು  ವಿಶಿಷ್ಟ  ಲೋಕವೊಂದಕ್ಕೆ  ಕರೆದೊಯ್ಯುತ್ತದೆ. 

      ಜೆನ್‌  ಬಗೆಗೆ  ಕನ್ನಡದಲ್ಲಿ  ಬಂದ  ಕೃತಿಗಳು  ಕಡಿಮೆಯೇನಿಲ್ಲ.  ಕೃತಿಕಾರರು  ಜೆನ್‌  ನಿಂದ  ಪ್ರಭಾವಿತರಾದಷ್ಟು,  ಅದನ್ನೋದಿದ   ಓದುಗನನ್ನು  ಪ್ರಭಾವಿಸಿರಲಿಲ್ಲ.ಪ್ರಸ್ತುತ  ಕೃತಿಯಲ್ಲಿ   ಜೆನ್‌  ಸಿದ್ಧಾಂತದ  ವಿವರಗಳು,  ಸಂಕ್ಷಿಪ್ತವಾದಂತೆನ್ನಿಸಿದರೂ,  ಇನ್ನಷ್ಟು  ಜೆನ್‌  ಬಗೆಗೆ  ಓದಬೇಕೆಂಬ  ಆತುರವನ್ನಂತೂ  ಕೃತಿ  ಸೃಷ್ಟಿಸುತ್ತದೆ. 

    ಅತಿ ಯಾಂತ್ರಿಕತೆ,  ಅತಿ  ತಾಂತ್ರಿಕತೆ,  ಆಲಸಮಯ  ಶ್ರಮರಹಿತ  ಜೀವನವಿಧಾನ,  ಮನುಷ್ಯಸಂಬಂಧಗಳಲ್ಲಿಯ  ಕ್ಷೀಣತೆಗಳ  ನಡುವೆ,  ಜೆನ್‌  ನಮ್ಮನ್ನು  ಮತ್ತೆ  ನಿಜವಾದ  ಮನುಷ್ಯಬದುಕಿನ  ಪಾತಳಿಗೆ  ಕೊಂಡೊಯ್ಯುವ  ಶಕ್ತಿ  ಪಡೆದಿದೆ.   ಆಧುನಿಕ  ಮಾನವ  ಮನಸ್ಸಿನ   ಅತೃಪ್ತಿ,  ಖಾಲಿತನ,  ಏಕಾಂಗಿತನದ  ಸಂಕೀರ್ಣ  ಸ್ಥಿತಿಯಿಂದ  ಹೊರಸೆಳೆಯುವ  ಮಹತ್ವದ  ಶಕ್ತಿ    ಸಾಹಿತ್ಯಪ್ರಕಾರಕ್ಕಿರುವುದರಿಂದಲೇ   ಇತ್ತೀಚಿನ  ದಶಕಗಳಲ್ಲಿ,  ಪಾಶ್ಚಾತ್ಯ  ಪೌರಾತ್ಯರ  ಧಾರ್ಮಿಕ    ಭೇದವಿಲ್ಲದೇ   ಭಾಷೆಯ  ಮಿತಿಯನ್ನೂ  ದಾಟಿ,  ಆಕರ್ಷಿಸುತ್ತಿದೆ. 

    ಬುದ್ಧಗುರುವಿನ  ಕಾಲಕ್ಕಾಗಲೇ  ಭಾರತದಲ್ಲಿ ನಿಂತ ನೀರಾಗಿದ್ದ  ವೈದಿಕಧರ್ಮವನ್ನು, ಗೌತಮ ಬುದ್ದ  ಮೊದಲಬಾರಿ  ಪ್ರಶ್ನಿಸಿದ್ದ. ಧರ್ಮಗ್ರಂಥಗಳ  ಅವಲಂಬನೆಯನ್ನೇ  ವರ್ಜ್ಯಗೊಳಿಸಿದ್ದ.  ಧರ್ಮವು ಲೋಕರೂಢಿಯಾಗಿ,  ಮೌಖಿಕ ಪರಂಪರೆಯಿಂದ  ಹೃದಯಂಗಮವಾಗುತ್ತ,  ಜಡ  ಕರ್ಮಾನುಷ್ಠಾನಗಳ ಗೋಜಲಾಗದೇ,  ಮಿತಿಯಿಲ್ಲದ ದಯೆ  ಮತ್ತು  ಕರುಣೆಗಳ  ಮೂಲಕ  ನಿರಂತರವಾಗಲಿ  ಎಂದು  ಆಶಿಸಿದ್ದ.  ಇದೇ  ಆಶಯವನ್ನು  ಜೆನ್‌  ಒಂದು  ಮಾರ್ಮಿಕವಾಗಿ  ಪ್ರಕಟಿಸುತ್ತದೆ.

             ʻʻಧರ್ಮಗಳ  ಸಂವಹನಕ್ಕೆ  ಧರ್ಮಗ್ರಂಥಗಳು ಬೇಕಿಲ್ಲ

              ಧರ್ಮ  ಮಾತುಗಳನ್ನು ಅವಲಂಬಿಸುವುದಿಲ್ಲ.

              ಅದು  ನಮ್ಮ ಆತ್ಮಕ್ಕೆ ನೇರ  ಗುರಿಯಿಡುತ್ತದೆ.

              ನಮ್ಮ ಪ್ರಜ್ಞೆ,  ನಮ್ಮ ಬುದ್ಧತ್ವ.ʼʼ

 

ಇದೇ ವೈಚಾರಿಕ  ತಾತ್ವಿಕ ನೆಲೆಯಲ್ಲಿ, ಸಾಮಾನ್ಯರ  ನಡುವೆ  ಸಾಮಾನ್ಯನ  ಭಾಷೆಯಲ್ಲಿ, ಧರ್ಮದ  ನಿಜವಾದ  ಮಾರ್ಗವನ್ನು  ಕಾಣಿಸಲು,  ಬೌದ್ಧದರ್ಮ  ಪ್ರಯತ್ನಿಸಿದಂತೇ  ಅದರದ್ದೇ  ಅಂಗವಾದ  ಜೆನ್‌  ಮತ,  ಮತ್ತಷ್ಟು  ಸರಳವಾಗಿ,  ಅಷ್ಟೇ  ಆಳದ  ಒಗಟಾಗಿ  ಜನರಲ್ಲಿ ಮಿಳಿತವಾಯಿತು.

    ಮೇಲ್ನೋಟಕ್ಕೆ   ವ್ಯಂಗ್ಯ  ವಿಡಂಬನೆ  ಹಾಸ್ಯದಂತೇ  ತೋರುವ  ಜೆನ್‌ ಕವಿತೆಗಳು, ಪುಟ್ಟ ಪುಟ್ಟ ಕತೆಗಳು,  ನಮ್ಮೊಳಗೆ  ನುಗ್ಗಿ  ಸಂಚಲನವನ್ನುಂಟು  ಮಾಡುವ  ಶಕ್ತಿ  ಪಡೆದಿವೆ.  ಅತಿ  ಗಾಂಭೀರ್ಯವೇ  ಭಾರವಾಗಿ,  ಕೃತಕವಾದ  ಅಹಮಿಕೆ,  ಕಾಡುತ್ತಿರುವ   ಕಟುವಾಸ್ತವದಲ್ಲಿ  ಜೆನ್‌  ಕಚಕುಳಿಯಿಡುತ್ತದೆ.  ಅಂತರಂಗವನ್ನು  ಚುಚ್ಚುತ್ತದೆ.  

        ʻʻ ಒಂದು  ದಿನ  ಗುರು  ನನ್-ಸೆನ್  ನಿಗೆ  ಶಿಷ್ಯ  ಪ್ರಶ್ನೆಯಿಟ್ಟ.  ನಿಜವಾದ  ಮಾರ್ಗ  ಯಾವುದು  ಗುರುಗಳೇ..?

   ʻʻ  ಪ್ರತಿದಿನದ  ಮಾರ್ಗವೇ  ನಿಜವಾದ  ಮಾರ್ಗ. ʼʼ  ಗುರು  ಉತ್ತರಿಸಿದ.

ಹಾಗಾದರೆ   ಗುರುಗಳೇ  ನಾನು  ಅಧ್ಯಯನ  ಮಾಡಲೇ...?   ಶಿಷ್ಯ  ಕೇಳಿದ.    ಗುರು  ಇದಕ್ಕೆ  ಒಪ್ಪಿಕೊಳ್ಳಲಿಲ್ಲ.    ʻʻ  ನೀನು  ಎಷ್ಟು ಹೆಚ್ಚು ಇದರ  ಅಧ್ಯಯನ  ಮಾಡುತ್ತೀಯೋ  ನಿಜವಾದ  ಮಾರ್ಗದಿಂದ  ಅಷ್ಟುದೂರ   ಸಾಗುತ್ತೀಯ.ʼʼ

        

       ಜೆನ್‌  ಜಪಾನಿ  ಭಾಷೆಯ  ಶಬ್ದ.  ಅದರ  ಮೂಲ  ಧ್ಯಾನ  ಎಂದು.  ಉಪನಿಷತ್‌  ಮೂಲದಿಂದಲೇ  ಜನ್ಮಿಸಿದ  ಜೆನ್‌,  ಚೀನಾ  ಜಪಾನು  ದೇಶಗಳಲ್ಲಿ  ಪ್ರವೇಶಿಸಿ,  ಅಲ್ಲಿಯ  ಸಂಸ್ಕೃತಿಯನ್ನು  ತನ್ನ ಒಡಲೊಳಗೆ  ಆಹ್ವಾನಿಸಿಕೊಂಡು,  ಪ್ರತ್ಯೇಕ  ಸಿದ್ಧಾಂತವಾಗಿಯೇ  ರೂಪುಗೊಂಡಿದೆ.   ಉಪನಿಷತ್‌  ನಂತೇ  ಗುರು ಶಿಷ್ಯರ  ಆಪ್ತ  ಸಂವಾದವಾಗಿ  ಬೆಳೆದು ಬಂದ  ಜೆನ್‌,  ಜನರ  ಆಡುಭಾಷೆಯಲ್ಲಿ  ಸಮೃದ್ಧ ಫಸಲು  ಪಡೆಯಿತು.  ಬೌದ್ಧಮತದ  ಒಂದು  ಪ್ರಮುಖ  ಅಂಗವಾಗಿ  ಜನರನ್ನು ಆಕರ್ಷಿಸಿತು.

      ತುಂಬ  ಗಾಳಿಬೀಸುತ್ತಿದ್ದ ಒಂದು  ದಿನ  ಹಾರಾಡುತ್ತಿರುವ  ಧ್ವಜವನ್ನು ನೋಡಿದ 

      ಇಬ್ಬರು  ಬಿಕ್ಕುಗಳು  ವಾದಕ್ಕಿಳಿದರು. 

      ಒಬ್ಬ ಹೇಳಿದ    ʻʻ ಧ್ವಜ ಬೀಸುತ್ತಿದೆ, ಬೀಸುತ್ತಿರುವುದು  ಗಾಳಿಯಲ್ಲ. ʼʼ

     ಅದನ್ನು ಒಪ್ಪದೇ  ಮತ್ತೊಬ್ಬ ಹೇಳಿದ,  ʻʻ ಗಾಳಿ ಬೀಸುತ್ತಿದೆ,  ಧ್ವಜವಲ್ಲ....ʼʼ

     ಅತ್ತ ಬಂದ  ಮೂರನೆಯ  ಭಿಕ್ಷು  ಮಾತುಗಳನ್ನು ಕೇಳಿಸಿಕೊಂಡು  ಹೇಳಿದ.

    ʻʻಗಾಳಿಯೂ  ಬೀಸುತ್ತಿಲ್ಲ, ಧ್ವಜವೂ  ಬೀಸುತ್ತಿಲ್ಲ, ಬೀಸುತ್ತಿರುವುದು  ನಿಮ್ಮಿಬ್ಬರ  ಮನಸ್ಸುʼʼ

 

      ಜೆನ್‌  ಅದೊಂದು  ಆಧ್ಯಾತ್ಮಿಕ  ಪ್ರವಾಹ.    ಕ್ರಿ. ಶಕ  ೫೨೦ ರಲ್ಲಿ, ಭಾರತದ  ಪ್ರಜ್ಞಧರನೆಂಬ  ಪ್ರಖ್ಯಾತ  ಧರ್ಮಗುರು,  ತನ್ನ ಪ್ರಮುಖ  ಶಿಷ್ಯನಾದ  ಬೋಧಿಧರ್ಮನನ್ನು,  ʻʻ ಕಡಲನ್ನು ಲಂಘಿಸಿ  ನಡೆ. ಬೆಟ್ಟವನ್ನು ದಾಟು, ಭರತಖಂಡದ  ಆಚೆ  ಧರ್ಮವನ್ನು ಬಿತ್ತುʼʼ  ಎಂದು ಆದೇಶಿಸುತ್ತಾನೆ.  ಗುರುವಿನ  ಆದೇಶದಂತೆ  ಬೋಧಿಧರ್ಮ   ಕಡಲು  ದಾಟಿ,  ಚೀನಾ  ಪ್ರವೇಶಿಸುತ್ತಾನೆ.    ಅಲ್ಲಿ  ಆತ  ಕೇವಲ  ಒಂಭತ್ತು ವರ್ಷಗಳ  ಕಾಲ  ಬೌಧ್ಧಧ್ಯಾನ  ತತ್ವವನ್ನು ಬೋಧಿಸುತ್ತಾನೆ.  ಅಷ್ಟೇ  ಕಿರು  ಅವಧಿಯಲ್ಲಿ,  ಚೀನಾ  ದೇಶಾದ್ಯಂತ  ಪ್ರಸಿದ್ಧಿ  ಪಡೆಯುತ್ತಾನೆ.  ನೂರಾರು  ಶಿಷ್ಯರಿಗೆ  ತರಬೇತಿ  ನೀಡಿ  ಭಾರತಕ್ಕೆ  ಮರಳುತ್ತಾನೆ.

    ಧ್ಯಾನ  ಚೀನಾದಲ್ಲಿ,  ಚಾನ್‌  ಎಂದು  ಹೆಸರು ಪಡೆಯುತ್ತದೆ. ಜನರನ್ನಾಕರ್ಷಿಸುತ್ತ, ದೇಶದ  ಗಡಿಮೀರಿ  ಜಾಪಾನ್‌ ನಲ್ಲಿ, ಜೆನ್‌  ಎಂದು  ಹೆಸರು  ಪಡೆದು  ಮತ್ತಷ್ಟು  ಶಕ್ತಿ ಪಡೆಯುತ್ತದೆ.  ವಿಯೇಟ್ನಾಮ್‌  ದಲ್ಲಿ  ʻʻತಿಯೆನ್‌ʼʼ  ಎಂದು,  ಕೋರಿಯಾದಲ್ಲಿ  ʻʻಸಿಯೆನ್‌ʼʼ  ಎಂದು,  ಹೆಸರಾಗಿ,  ಭಾರತದಿಂದ  ಬುದ್ಧನ  ಧ್ಯಾನ ಪ್ರವಾಹ  ಅಷ್ಟೆಲ್ಲ  ಸುದೀರ್ಘವಾದ  ಪಯಣ ಗೈದು,  ಜಗತ್ತಿನ  ಎರಡನೆಯ  ಅತಿದೊಡ್ಡ ಧರ್ಮವಾಗಿ  ಬೆಳೆದಿದ್ದು  ನಿಜಕ್ಕೂ  ಬೆರಗು  ಮೂಡಿಸುವ ಇತಿಹಾಸ.

   ಪ್ರಸ್ತುತ  ಕೃತಿಯಲ್ಲಿ  ಲೇಖಕರು  ಜೆನ್‌  ಬಗೆಗಿನ  ಹತ್ತು ಹಲವು  ಕನ್ನಡ  ಇಂಗ್ಲಿಶ್‌  ಗ್ರಂಥಗಳನ್ನು  ಜಾಲಾಡಿದ್ದಾರೆ.  ಐವತ್ತಕ್ಕೂ  ಮಿಕ್ಕು  ಆಕರ್ಷಕ  ಜೆನ್‌  ಕತೆಗಳನ್ನು  ಅನುವಾದಿಸಿ  ನೀಡಿದ್ದಾರೆ.

ಆರ್.ಡಿ. ಹೆಗಡೆಯವರು   ತಮ್ಮ  ನುಡಿಯಲ್ಲಿ,

  ʻʻʻ  ಜೆನ್  ಚಾಟೂಕ್ತಿಗಳ  ಬೃಹತ್‌  ಸಂಗ್ರಹವೇ  ಅಂತರ್ಜಾಲದಲ್ಲಿ  ದೊರೆಯುತ್ತದೆ.   ಆದರೆ  ನಾನು   ಹೆಕ್ಕಿಕೊಂಡಿರುವುದು  ಚೀನದ  ಮತ್ತು ಜಪಾನಿನ  ಜೆನ್‌  ಗುರುಗಳ  ಕತೆ  ಒಗಟುಗಳನ್ನು  ಮಾತ್ರ.  ಅಲ್ಲೀಯೂ  ಕೂಡಾ  ಪುರಾತನರನ್ನೇ  ಹೆಚ್ಚು ಅವಲಂಬಿಸಿದ್ದೇನೆ.  ಕಾರಣ  ಪುರಾತನರ  ಕತೆಗಳೆಲ್ಲ  ಅವರ  ಜೀವನದ  ಪ್ರಸಂಗಗಳು. ಥಟ್ಟನೆ  ಉಮ್ಮಳಿಸಿದವು.  ಧರ್ಮವನ್ನು  ಬೀಜವಾಕ್ಯಗಳಿಂದ  ಬೋಧಿಸಿದಂತಹವು.   ಮತ್ತು    ಯಾವ  ಕತೆಗಳೂ  ದೈವಿಕ  ಹುಚ್ಚನ್ನು  ವೈಭವೀಕರಿಸುವುದಿಲ್ಲ.ʼʼ

   ಎಂದು  ಸ್ಪಷ್ಟಪಡಿಸಿದ್ದಾರೆ. 

      ಲೇಖಕರು   ಜೆನ್  ಬಗೆಗೆ   ಹೇಳುವ    ಮಾತು  ಜೆನ್‌ ಮತವನ್ನು  ಇನ್ನಷ್ಟು ಸರಳಗೊಳಿಸುತ್ತದೆ.

     

      ʻʻ ಜೆನ್‌  ಮುಚ್ಚು ಮರೆಯಿಲ್ಲದ  ಧರ್ಮ. ಇದರಲ್ಲಿ ತತ್ವವಿಧಿಗಳಿಲ್ಲ. ಶಾಸ್ತ್ರಗಳಿಲ್ಲ. ಪುರಾಣಗಳಿಲ್ಲ. ಜೆನ್‌  ಸಿದ್ಧಿಯಾದಾಗ  ಸ್ಥಿರವಾದುದರಲ್ಲಿ ಚಲನೆಯೂ, ಚಲನೆಯಲ್ಲಿ ಸ್ಥಿರವಾದುದೂ  ಗೋಚರಿಸುತ್ತದೆ.  ಇದು ಮುಚ್ಚು ಮರೆಯಿಲ್ಲದ  ಮುಕ್ತತೆ.   ಬುದ್ಧತ್ವದ  ಮನಸ್ಸು ಎಂದರೆ  ಮನಸ್ಸು ಎಂಬ  ಇಂದ್ರಿಯವೂ  ಅಲ್ಲ. ಶೂನ್ಯತ್ವದ  ಸ್ವಭಾವ. ಇಂತಹ  ಮನಸ್ಸು ಶುದ್ಧವೂ  ಅಲ್ಲ. ಅಶುದ್ಧವೂ  ಅಲ್ಲ.  ಬುದ್ಧತ್ವಕ್ಕೆ  ಕಾಯಬೇಕಾದ ಒಂದು  ಪೂರ್ವಸ್ಥಿತಿ  ಇರುತ್ತದೆ.  ಅದು  ಕೆಡುಕನ್ನಾಗಲೀ   ಒಳ್ಳೆಯದನ್ನಾಗಲೀ   ಬಯಸುವುದಿಲ್ಲ.  ಬುದ್ಧತ್ವ ದ್ವಂದ್ವಾತೀತ.  ಅಚಲ  ಮತ್ತು  ಉದ್ವೇಗ ಮುಕ್ತ.  ಅದು  ಒಳಗಿಲ್ಲವಾದರೆ   ಹೊರಗೂ  ಕಾಣಲಾರದು.   ಬುದ್ಧತ್ವಕ್ಕೆ  ಲಾಂಛನಗಳಿಲ್ಲ.ʼʼ

   

       ಹೀಗೆ   ಸಾಲಿನಿಂದ  ಸಾಲಿಗೆ   ಜೆನ್‌  ಬಗೆಗೆ  ವಿವರಿಸುತ್ತಲೇ   ತಮ್ಮಮೇಲೆ  ಪ್ರಪ್ರಥಮವಾಗಿ  ಗಾಢ  ಪ್ರಭಾವ  ಬೀರಿದ  ನಮ್ಮ ನಾಡಿನ   ಜೆನ್‌  ಸಾಧಕ  ಚಿನ್ನಪ್ಪ  ಎಂಬ   ಅಪರೂಪದ  ವ್ಯಕ್ತಿಯ  ಬಗೆಗೂ  ಪ್ರಸ್ಥಾಪಿಸುತ್ತಾರೆ.   ಬಾಹ್ಯದಲ್ಲಿ  ಎಲ್ಲೂ  ಪ್ರಕಟಗೊಳ್ಳದೇ   ಮೌನವಾಗಿ  ಜೆನ್‌  ಅನುಸಂಧಾನ  ಗೈದಿದ್ದ,  ವ್ಯಕ್ತಿಯ  ಸಂಪರ್ಕ  ಲೇಖಕರಿಗಾಗುತ್ತದೆ.   ಅವರ  ಆಳದಲ್ಲಿ  ನೆಲೆಸಿದ್ದ  ಜೆನ್‌  ತತ್ವದ  ಫಲಾನುಭವಿಯಾಗಿ,   ಆರ್.ಡಿ. ಹೆಗಡೆಯವರು  ಜೆನ್‌  ಅಧ್ಯಯನಕ್ಕಿಳಿಯುತ್ತಾರೆ.  ಜೆನ್‌  ಬಗೆಗೆ   ವಿವರಪೂರ್ಣವಾದ  ಕೃತಿ  ರಚಿಸುತ್ತಾರೆ.  ಆದರೆ  ದುರ್ದೈವ.  ಕೃತಿ  ಪ್ರಕಟವಾಗುವಾಗ.  ಜೆನ್‌  ಚಿನ್ನಪ್ಪ  ಮೃತರಾಗುತ್ತಾರೆ. 

      ಶುದ್ಧ  ಜ್ಞಾನ  ಯಾವ  ಮೂಲದಿಂದಾದರೂ  ಬರಲಿ,  ಸ್ವೀಕರಿಸೋಣ,  ಎಂಬ  ಉಪನಿಷತ್‌  ಘೋಷಕ್ಕೆ   ಲೇಖಕರೂ  ಸ್ಪಂದಿಸುತ್ತಾರೆ.   ತಮಗಾದ  ರೋಮಾಂಚನವನ್ನು  ಸಹೃದಯರಲ್ಲೂ  ಬಿತ್ತುತ್ತಾರೆ. 

        ಕೊನೆಯಲ್ಲಿ   ಇದೇ  ಕೃತಿಯಲ್ಲಿ  ಪ್ರಕಟವಾದ   ಪುಟ್ಟ  ಜೆನ್‌  ಕತೆಯೊಂದನ್ನು  ನೀಡಿ   ಲೇಖನಕ್ಕೆ  ಮಂಗಳ  ಹಾಡುತ್ತೇನೆ.

 

                                                     ʻʻಹ್ಯುಕುಜೋ   ಹೇಳಿದ  ಪಾಠ.ʼʼ

 ಎಂಬತ್ತರ   ಇಳಿವಯದಲ್ಲೂ  ಹ್ಯುಕುಜೋ  ತನ್ನ ಶಿಷ್ಯರ  ಜೊತೆಗೆ  ಸೇರಿಕೊಂಡು  ದುಡಿಯುತ್ತಿದ್ದ.  ತೋಟದಲ್ಲಿ  ಅಗೆಯುತ್ತಿದ್ದ. ಪಾತಿ  ಮಾಡುತ್ತಿದ್ದ. ಕಳೆ ಕೀಳುತ್ತಿದ್ದ.  ಗೊಬ್ಬರ  ಹೊರುತ್ತಿದ್ದ.  ನೀರುಣಿಸುತ್ತಿದ್ದ.

       ಗುರುಗಳ    ಕಾಯಕ ಪ್ರೀತಿಯಿಂದ  ಶಿಷ್ಯರಿಗೆ  ಸಮಸ್ಯೆಯಾಯಿತು.  ಗುರುವಿಗೆ  ಅಡ್ಡಿಮಾಡುವಂತಿಲ್ಲ. ತಮ್ಮೊಳಗೆ  ಸಮಾಲೋಚನೆ  ನಡೆಸಿ,  ಅವರು  ತೋಟದಲ್ಲಿ  ಬಳಸುತ್ತಿದ್ದ  ಹಾರೆ,  ಕೊಡ, ಗುದ್ದಲಿ  ಮುಂತಾದ  ಸಲಕರಣೆಗಳನ್ನು  ಅಡಗಿಸಿಟ್ಟರು.  ಸಲಕರಣೆಗಳು  ಕಾಣದ್ದರಿಂದ  ಗುರು  ಹ್ಯುಕೋಜೋ  ಆದಿನ  ಕೆಲಸ  ಮಾಡಲಾಗಲಿಲ್ಲ.  ಮಾರನೆಯ  ಆಮಾರನೆಯ  ದಿನ  ಕೂಡ  ಕೆಲಸ  ಮಾಡಲಾಗಲಿಲ್ಲ. ಅದಕ್ಕಾಗಿ  ಗುರು  ಊಟವನ್ನೂ  ಮುಟ್ಟಲಿಲ್ಲ. ಗುರು  ಇಚ್ಛಾಪೂರ್ವಕವಾಗಿ  ಉಪವಾಸವನ್ನು ಆಚರಿಸುತ್ತಿದ್ದ. ಇದರಿಂದ  ಶಿಷ್ಯರು  ಅಧೀರರಾದರು.  ತಮ್ಮ ಕೃತ್ಯದಿಂದ  ಗುರುವಿಗೆ  ಕೋಪ ಬಂದಿದೆಯೆಂದು  ತರ್ಕಿಸಿದರು.   ಆದ್ದರಿಂದ   ಸಲಕರಣೆಗಳನ್ನು  ಮೊದಲಿದ್ದ ಸ್ಥಳದಲ್ಲೇ ತಂದಿಟ್ಟರು.   ಸಲಕರಣೆ  ಸಿಕ್ಕಕೂಡಲೇ  ಗುರು ಎಂದಿನಂತೇ  ತೋಟದ  ಕೆಲಸ  ಮಾಡಿದ.  ನಂತರ  ಊಟವನ್ನೂ  ಮಾಡಿದ. ಸಂಜೆಯ  ಉಪದೇಶದಲ್ಲಿ  ಗುರು  ಶಿಷ್ಯರಿಗೆ  ಉಪದೇಶಿಸಿದ. 

                    ʻʻ ದುಡಿಮೆಯಿಲ್ಲ  ಊಟವೂ  ಇಲ್ಲ.ʼʼ

  ಜೆನ್‌  ಪಾಠ  ಜಗತ್ತಿನಾದ್ಯಂತ  ಇಂಗ್ಲಿಶ್‌  ಮೂಲಕ  ʻʻ A day  without  work  is  a  day  without  food ‘’  ಎಂದು  ಪ್ರಸಿದ್ಧವಾಗಿದೆ.

 

                       ಸುಮ- ಸಂಪದ  ಅಂಕಣಕ್ಕೆ.     ಸುಬ್ರಾಯ  ಮತ್ತೀಹಳ್ಳಿ.  ತಾ- ೨೩-೧೨-೨೦೨೪.

 

ಜೆನ್‌ ಮಹಾಯಾನ.   ಲೇ-  ಆರ್.ಡಿ.ಹೆಗಡೆ.  ಆಲ್ಮನೆ.

ಪುಟ- ೧೨೪.  ಬೆಲೆ-  ೯೫-೦೦,  ನವಕರ್ನಾಟಕ  ಪ್ರಕಾಶನ.  ಬೆಂಗಳೂರು.

 

No comments:

Post a Comment