ಹಳಿಯಬೇಡಿ ಹಳ್ಳಿಯ, ಹಿಡಿಯಬೇಡಿ ಕೊಳ್ಳಿಯ
ಹಿರಿಯಬೇಡಿ ಬಳ್ಳಿಯ , ಕೊಲ್ಲಬೇಡಿ ಹುಲ್ಲೆಯ.
ಬೇರು ಮರೆತು ಕಾಂಡ ತಬ್ಬಿ ಟೊಂಗೆ
ಕಡಿದು ತೋರಣ
ಜಾರು ದಾರಿ ಮುರಿದ ಬಿರಿ, ಬರೀ ಕನಸು ಚಾರಣ. ( ಸು.ಮ )
ಜೈಜವಾನ್, ಜೈಕಿಸಾನ್,
ಎಂಬ ಘೋಷ ಆಳುವ ದೊರೆಗಳ ಬೀಜಮಂತ್ರ.
ಆದರೆ ಕೃಷಿಕನಾಗಲೀ ಸೈನಿಕನಾಗಲೀ
ಅನುಭವಿಸಿದ ಅನುಭವಿಸುತ್ತಿರುವ ಸಂಕಟಗಳನ್ನು
ಕಂಡರೆ ನಿಜಕ್ಕೂ ನಗುವುಕ್ಕುತ್ತದೆ. ಕೃಷಿಪ್ರಧಾನವಾದ ಒಂದು ದೇಶದ ಅಸಹನೀಯ
ಸ್ಥಿತಿಕಂಡು ಮರುಕ ಮೂಡುತ್ತದೆ.
ಗ್ರಾಮಧ್ಯಾನ,
ಗ್ರಾಮಸಂಚಲನ, ಗ್ರಾಮವಿಕಾಸ ಇಂಥ ಶಬ್ದಗಳು ಎದುರಾದಾಗಲೆಲ್ಲ, ಮಹಾತ್ಮಾ ಗಾಂಧಿ, ಅಣ್ಣಾ ಹಜಾರೆ, ಮಣಿಭಾಯಿ ದೇಸಾಯಿ, ಯಂತವರು ನೆನಪಾಗುತ್ತಾರೆ. ಆ ಸಾಲಿನಲ್ಲಿ,
ನಮ್ಮ ಕರ್ನಾಟಕದ ಆಧುನಿಕ ಗ್ರಾಮವಿಕಾಸದ ಚರಿತ್ರೆಗೆ
ಡಾ- ಪ್ರಕಾಶ ಭಟ್ ಅವಶ್ಯವಾಗಿ ಸೇರುತ್ತಾರೆ.
ಅರ್ಪಣಾ ಮನೋಭಾವದಿಂದ ಯಾವ ಪ್ರಚಾರಾಭಿಲಾಷೆಯ ವ್ಯಾಮೋಹವಿಲ್ಲದೇ ತಮ್ಮಷ್ಟಕ್ಕೆ ತಾವು, ಗ್ರಾಮಾಂತರದ ವಿಕಾಸದಲ್ಲಿ ಜೀವನವನ್ನೇ ವ್ಯಯಿಸಿ, ಸದ್ಯ ನಿವೃತ್ತ ಜೀವನದಲ್ಲಿರುವ ಭಟ್ಟರು
ಸಾರ್ವಜನಿಕ ಮರೆವಿನ ಪರದೆಗೆ
ಸೇರಿಬಿಡುತ್ತಿದ್ದರೇನೋ. ಆದರೆ, ʻʻ ಹಳ್ಳಿಗಳನ್ನು ಕಟ್ಟುವ
ಕಷ್ಟ ಸುಖ ʼʼ ಎಂಬ ಕೃತಿಯ ಮೂಲಕ, ಅವರ ಬದುಕಿನ ಅನುಭವಗಳೊಂದಿಗೆ, ಗ್ರಾಮಗಳ ಆತ್ಮಕತೆಯನ್ನಾಗಿಸಿ ಗ್ರಾಮತತ್ವಜ್ಞಾನವೊಂದನ್ನ ಸಮರ್ಥವಾಗಿ ಮಂಡಿಸಿದ್ದಾರೆ. ಕೃತಿ ಪ್ರಕಟಗೊಳ್ಳುತ್ತಿದ್ದಂತೇ
ಪ್ರಸರಿಸುತ್ತ, ಮರು ಮುದ್ರಣಗೊಳ್ಳುತ್ತ, ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಸಮುದಾಯದಲ್ಲಿ
ಸಂಚಲನ ಮೂಡಿಸಿದ್ದು ಪುಸ್ತಕದ
ಮಹತ್ವವನ್ನು ಸಾರುತ್ತಿದೆ.
ಒಬ್ಬನೇ ಒಬ್ಬ ಸಾಮಾಜಿಕ ಉನ್ನತಿಯ
ಕನಸುಕಂಡು, ಕ್ರಿಯಾಶೀಲನಾದರೆ ಅದೆಂತಹ
ಸಂಚಲನ ಮೂಡಿಸಬಹುದೆಂಬುದನ್ನು, ಪ್ರಕಾಶ ಭಟ್ಟರ
ಪ್ರಸ್ತುತ ಕೃತಿ ಸಾಕಾರಗೊಳಿಸುತ್ತದೆ.
ಇಂತಹ ಉದಾಹರಣೆಗಳು, ಕ್ವಚಿತ್ತಾಗಿ
ನಮ್ಮದೇಶದಲ್ಲಿ ಕಾಣಿಸುತ್ತಲೇ ಇದ್ದರೂ,
ಸಾವಿರಾರು ವರ್ಷಗಳಿಂದ ನಿರಂತರ
ಬಾಧಿಸುತ್ತಿರುವ ಆಳುವ ವರ್ಗದ ಜಾಡ್ಯ, ಅಧಿಕಾರ ಶಾಹಿ,
ಅಸಾಮಾನ್ಯ ಭೃಷ್ಠತೆ, ಮತ್ತು ಜನತೆಯಲ್ಲೂ
ಆಳವಾಗಿ ಬೇರೂರಿರುವ ಅಲಕ್ಷ್ಯ
ಅಜ್ಞಾನ, ಇವೆಲ್ಲ ಸೇರಿ, ದೇಶವನ್ನೇ
ನಿಂತನೀರನ್ನಾಗಿಸಿದೆ, ಅಲ್ಲಲ್ಲಿ ಓಯಾಸಿಸ್
ನಂತೇ ಚಿಗುರಿಕೊಳ್ಳುವ ಗ್ರಾಮವಿಕಾಸದ
ಕನಸು, ರಾವಣನ ಹೊಟ್ಟೆಗೆ
ಅರಕಾಸಿನ ಮಜ್ಜಿಗೆಯಾಗುವ ದುರಂತ ನಮ್ಮೆದುರಿಗಿದೆ.
ಗ್ರಾಮವೆಂದರೆ ನಾಗರಿಕನಿಗೆ
ಕನಿಷ್ಠವರ್ಗ, ರಾಜಕಾರಣಿಗೆ ಮತದ ಚಿಲುಮೆ,
ಆಧುನಿಕ ವಿದ್ಯಾವಂತನಿಗೆ ಅನಾಗರಿಕ ಅಶಿಕ್ಷಿತ
ಸಮುದಾಯ. ಧರ್ಮಗಳಿಗೆ ಅನುಕಂಪ ಸಲ್ಲುವ
ಜನವರ್ಗ.
ಇಂತಹ ವಾತಾವರಣವಿರುವಾಗ, ಗ್ರಾಮಗಳ
ವಿಕಾಸವನ್ನೇ ಜೀವನದ ಸವಾಲಾಗಿಸಿಕೊಂಡು, ಗ್ರಾಮವನ್ನೇ
ಅನುಸಂಧಾನಿಸಿಕೊಂಡ ಜನರನ್ನು ಗ್ರಾಮಭಾರತದಲ್ಲಿ ಹುಡುಕುವುದು
ಮಹಾ ಸಾಹಸವೇ ಆಗುತ್ತದೆ.
ಆರು ಲಕ್ಷ ಹಳ್ಳಿಗಳ ಅರವತ್ತು
ಕೋಟಿ ಜನರ ಹಸಿರು ಉಸಿರಿನ
ಉಲಿತದಲ್ಲಿ, ಕೃಷಿಪ್ರಧಾನ ರಾಷ್ಟ್ರವೆಂದೆನ್ನಿಸಿಕೊಂಡಿರುವ ಭಾರತ, ಅವರ ನೋವು ತಲ್ಲಣ. ಏರು ಇಳಿವು,
ಸಂಪ್ರದಾಯ ಸಂಸ್ಕೃತಿ ಗಳನ್ನೆಲ್ಲ ತನ್ನ ಒಡಲಲ್ಲಿ
ಧರಿಸಿಕೊಂಡು, ಅಳುತ್ತಿದೆಯೋ ಬೆಳೆಯುತ್ತಿದೆಯೋ ಎಂಬುದೇ
ಬಹುದೊಡ್ಡ ಪ್ರಶ್ನೆಯಾಗಿ ಇಂದೂ ಕಾಡುತ್ತಿದೆ. ಹವಾಮಾನದ
ಸವಾಲು, ಮಾರುಕಟ್ಟೆಯ ಅನಿಶ್ಚಿತತೆ,
ಅಧಿಕಾರ ಶಾಹಿತನ, ಅಶೃದ್ಧೆ, ತುಂಡು ಭೂಮಿ, ಮತ್ತು ಅಜ್ಞಾನಗಳ
ಗೂಡಾಗಿರುವ ನಮ್ಮ ಹಳ್ಳಿಗಳು, ದೇಶ ವಿದೇಶಗಳ ಸಾಕಷ್ಟು
ಗ್ರಾಮ ಸಂಶೋಧಕರಿಗೆ ಅಚ್ಚರಿ
ಮೂಡಿಸಿದೆ. ಅದೇ ಬಡತನ, ಅದೇ ಅನಕ್ಷರತೆ,
ಅದರ ಆಳದಲ್ಲೂ ದೇಶೀ ಕೃಷಿತಂತ್ರಗಳು, ಕೃಷಿಕರಲ್ಲಿರುವ
ಆಧ್ಯಾತ್ಮಿಕತೆ, ಜೀವನ ಪ್ರೀತಿ ಮತ್ತು ಸಾಮಾಜಿಕ ರೀತಿನೀತಿಗಳು
ಬೆರಗು ಮೂಡಿಸಿವೆ. ಸಾವಿರಾರು
ವರ್ಷಗಳಿಂದ ಆರಕ್ಕೇರದೆ, ಮೂರಕ್ಕಿಳಿಯದೇ
ಬದುಕು ಕಟ್ಟಿಕೊಂಡು ಬಾಳುತ್ತಿರುವ
ರೈತಾಪಿವರ್ಗದ ಸ್ಥಿತಿ ಯನ್ನು ಕಂಡ ಆಧುನಿಕ ಶಿಕ್ಷಿತ
ಮನಸ್ಸು ಒಂದಿಷ್ಟು ಹಳವಂಡಗಳನ್ನು
ಸೃಷ್ಟಿಸಿದೆ.
ಗ್ರಾಮಗಳು
ಜಡವಾಗಿವೆ, ಆಧುನಿಕತೆಯ ಬಗೆಗೆ ಸ್ಪಂದನವಿಲ್ಲ,
ಜಾತಿ ವೈಷಮ್ಯ, ವಿಜ್ಞಾನ ತಂತ್ರಜ್ಞಾನಗಳ
ಬಗೆಗೆ ನಿರ್ಲಕ್ಷ, ಸಂಪ್ರದಾಯ
ನಿಷ್ಠ ಮನೋಭಾವ, ಇದರಿಂದ ಗ್ರಾಮಗಳು
ನಿಂತನೀರಾಗಿವೆಯೆಂದೇ ಸಾರ್ವತ್ರಿಕ ಅಭಿಪ್ರಾಯ
ಮೂಡಿಕೊಂಡಿದೆ. ನಗರೀಕೃತ ಮನಸ್ಸುಗಳಲ್ಲಿ, ವಿಚಿತ್ರ ಮೇಲರಿಮೆ,
ಬೇರುಬಿಟ್ಟು, ಗ್ರಾಮವಾಸಿಯ ಬಗೆಗೆ ಅಸಹನೆ,
ಅನುಕಂಪ ಸೃಷ್ಟಿಯಾಗಿದೆ.
ಇಷ್ಟೆಲ್ಲ ಹಳವಂಡಗಳ
ನಡುವೆಯೂ, ಪ್ರಕಾಶ್ ಎಂಬ ಯುವ ಉತ್ಸಾಹಿ,
ಗ್ರಾಮಸಂವೇದನೆಯನ್ನೇ ಅಪ್ಪಿಕೊಂಡು, ಎದುರಾದ
ಅದೆಷ್ಟೋ ಬಿಳಿಕಾಲರ್ ಉದ್ಯೋಗವನ್ನು
ತೊರೆದು, ಗ್ರಾಮದ ಸಾನ್ನಿಧ್ಯಕ್ಕೆ
ತನ್ನನ್ನು ಅರ್ಪಿಸಿಕೊಂಡು, ಗ್ರಾಮಾಭ್ಯುದಯವನ್ನೇ ಸವಾಲಾಗಿ
ಸ್ವೀಕರಿಸಿ, ಗ್ರಾಮಗಳ ನಡುವೆ ಪ್ರತ್ಯಕ್ಷನಾದ ಘಟನೆಗೆ
ಮೂರು ದಶಕಗಳೇ ಕಳೆದು ಹೋದವು.
ಗ್ರಾಮವಿಕಾಸದ ತಾತ್ವಿಕ
ಕನಸನ್ನು ಜೀವನೋದ್ದೇಶಕ್ಕೇ ಸಮರ್ಪಿಸಿದ ಡಾ- ಮಣಿಭಾಯಿ
ದೇಸಾಯಿಯವರ ಗಾಢ ಪ್ರಭಾವಕ್ಕೆ
ಒಳಗಾದ ಪ್ರಕಾಶ ಭಟ್ಟರಿಗೆ,
ಒತ್ತಾಸೆಯಾಗಿ ನಿಂತವರು, ಬೈಫ್ ಸಂಸ್ಥೆಯ
ಮುಖ್ಯಸ್ಥರಾದ ಡಾ- ನಾರಾಯಣ ಹೆಗಡೆಯವರು. ಡಾ- ಜಿ.ಎನ್.ಎಸ್.ರೆಡ್ಡಿಯವರ ಮಾರ್ಗದರ್ಶನ,
ಭಟ್ಟರ ಕ್ಷೇತ್ರಕಾರ್ಯದ ಆಯುಧವಾಯಿತು, ಎಂದು ಅವರೇ ಹೇಳಿಕೊಳ್ಳುತ್ತಾರೆ.
ಉತ್ತರಕನ್ನಡ ಮತ್ತು ದಾರವಾಡ
ಜಿಲ್ಲೆಗಳ, ಸರಿಸುಮಾರು ಐವತ್ತು ಗ್ರಾಮಗಳು, ಪ್ರಕಾಶರ ಕರ್ಮಭೂಮಿಯಾಗಿ,
ಪ್ರಯೋಗಕ್ಷೇತ್ರವಾಗಿ ಪರಿಣಮಿಸಿತು.
ʻʻ ಐದು ಸಾವಿರಕ್ಕೂ ಹೆಚ್ಚಿನ
ಕುಟುಂಬಗಳೊಂದಿಗೆ ಕೆಲಸಮಾಡಿ ಅವರ ಆರ್ಥಿಕ
ಸಾಮಾಜಿಕ ಆರೋಗ್ಯ ಮತ್ತು ನೈರ್ಮಲ್ಯಗಳಲ್ಲಿ ಅಪೇಕ್ಷಿತ ಬದಲಾವಣೆ ತರುವುದೇ ನಮ್ಮ ಮುಂದಿದ್ದ ಗುರಿಯಾಗಿತ್ತು. ಆರು ಸಾವಿರ ಕುಟುಂಬಗಳು ಬಡತನ ರೇಖೆಯ ಮೇಲೇರುವಂಥ ಕೆಲಸವಾಗಬೇಕಿತ್ತು. ಐವತ್ತು
ಅರವತ್ತು ಕಾರ್ಯಕರ್ತರೊಂದಿಗೆ ನಾವು ಸಾಧಿಸಿದ್ದು ಸಮಗ್ರ ಗ್ರಾಮಾಭಿವೃದ್ಧಿಯ ಪ್ರಯತ್ನಗಳಿಗೆ
ಮಾದರಿಯಾಯಿತು. ಹಳ್ಳಿಗಳಲ್ಲೇ ವಾಸಮಾಡಿ
ಕಾರ್ಯಕರ್ತರ ತಂಡ ತಮ್ಮ ಪ್ರಾಮಾಣಿಕ ಪಾರದರ್ಶಕತೆಗಳ
ಬಲದಿಂದ ಗ್ರಾಮೀಣರ ವಿಶ್ವಾಸ ಗಳಿಸಿದರು.
ಹಗಲು ರಾತ್ರಿಗಳನ್ನು ಒಂದಾಗಿಸಿ ಜನಸಂಘಟನೆ ಮಾಡಿ, ಜನರ ಮೂಲಕವೇ
ಕಾರ್ಯ ಕೈಗೊಂಡರು. ಗ್ರಾಮೀಣ ಮಹಿಳೆಯರು ಗಂಡಸರು
ಸೇರಿ, ನಾವಂದುಕೊಂಡಿದ್ದಕ್ಕಿಂತ ಹತ್ತು ಹೆಜ್ಜೆ ಹೆಚ್ಚೇ
ಇಟ್ಟರು.ʼʼ
ಅಂದರೆ ಈ ಎಲ್ಲ ಕ್ರಾಂತಿಕಾರಕ
ಬೆಳವಣಿಗೆಗಳು, ರಾತ್ರಿ ಬೆಳಗಾಗುವುದರಲ್ಲಿ ಘಟಿಸಲಿಲ್ಲ.
ಆಧುನಿಕ ಶಿಕ್ಷಣ ಪಡೆದ ವ್ಯಕ್ತಿಯೊಬ್ಬ
ಗ್ರಾಮವಿಕಾಸದ ಕನಸನ್ನು ಕಟ್ಟಿಕೊಳ್ಳುತ್ತಾನೆಂದರೆ ಅದೊಂದು ಪವಾಡವೇ
ಸರಿ. ಇಲ್ಲಿ ಅದು ನನಸಾಗಿದೆ. ವಿಕಾಸದ
ಕನಸು ಹೊತ್ತ, ಯುವ ಪಡೆಯೇ ಕಣಕ್ಕಿಳಿದಿದೆ.
ಅದಕ್ಕೆ ಬೇಕಾದ ಮಾನಸಿಕ
ಬೌದ್ಧಿಕ ತಾತ್ವಿಕತೆಯ ಸಾಮರ್ಥ್ಯ ಪಡೆದಿರುವ ಪ್ರಕಾಶರ
ನಾಯಕತ್ವ, ದೇಶಕ್ಕೇ ಒಂದು ಮಾದರಿಯಾದ ಅರ್ಥಪೂರ್ಣ
ಸಂದೇಶವನ್ನು ಸಾರಿತು.
ಕೃತಿಯ ಮುನ್ನುಡಿಯಲ್ಲಿ, ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ
ಡಾ. ತೇಜಸ್ವಿ ಕಟ್ಟೀಮನಿಯವರು, ಕೃತಿಯ ಮುನ್ನುಡಿಯಲ್ಲಿ,
ʻʻ ನನಗೆ ಆಶ್ಚರ್ಯವೆಂದರೆ ಮೂವತ್ತು
ವರ್ಷಗಳ ಹಿಂದೆಯೇ ಯೋಜನಾ ಪದ್ಧತಿಯನ್ನು ಪ್ರಕಾಶ ಭಟ್ ಪ್ರತಿಪಾದಿಸಿದ್ದಾರೆ. ಸಮಗ್ರ ಶಿಕ್ಷಣದಂತೆ ಸಮಗ್ರ ಕೃಷಿ,
ಹೊಲದಲ್ಲಿ ಬೀಳುವ ಮಳೆಯನ್ನು ನಿಲ್ಲಿಸುವುದು, ಒಡ್ಡು ಹಾಕುವುದು, ಅಲ್ಲಿ ಹೂ ಹಣ್ಣು ಕಾಡಿನ ಗಿಡ ಬೆಳೆಸುವುದು,
ಹುಲ್ಲು ಬೆಳೆಸುವುದು, ದನ ಕರು ಕುರಿ ಕೋಳಿಗಳನ್ನು
ಸಾಕುವುದು, ಸ್ವಸಹಾಯ ಗುಂಪುಗಳನ್ನು ರಚಿಸುವುದು, ಜನರಲ್ಲಿ ಮುಂದಾಳು ತನ ಬೆಳೆಯುವಂತೆ ನೋಡುವುದು,
ಉಳಿತಾಯ ಗುಣ ಹೆಚ್ಚಿಸುವುದು, ಪರಸ್ಪರ ಸಹಾಯ
ನಂಬಿಕೆ ಮತ್ತಷ್ಟು ಗಟ್ಟಿಯಾಗುವಂತೆ ನೋಡಿಕೊಳ್ಳುವುದು, ಹೀಗೆ ಲೇಖಕರು ತಮ್ಮ ಕನಸುಗಳನ್ನು ನನಸು ಮಾಡಿರುವುದನ್ನು ನಾವು ಇಲ್ಲಿ
ನೋಡುತ್ತೇವೆ.
ಹಳ್ಳಿಗರ ಅನುಭವಗಳನ್ನು ಹೇಳುತ್ತಾ ಹೋದಂತೆ ಡಾ. ಪ್ರಕಾಶ
ಭಟ್ ತಾವೇ ಆಯ್ದುಕೊಂಡ ಅಗ್ನಿಪರೀಕ್ಷೆಯಲ್ಲಿ ಗೆದ್ದ ಕಥೆ
ಈ ಪುಸ್ತಕದ ಜೀವಾಳವಾಗಿದೆ. ʼʼ ಎಂದೆನ್ನುತ್ತ, ರಾಜ್ಯದ
ಅತ್ಯಂತ ಅಪರೂಪದ ಗ್ರಾಮಾಭ್ಯುದಯದ ಅಗ್ನಿದಿವ್ಯವನ್ನು ಮನಸಾರೆ
ಶ್ಲಾಘಿಸಿದ್ದಾರೆ.
ಲೇಖಕರೇ ಕೃತಿಯಲ್ಲಿ
ತಮ್ಮ ಪ್ರಾರಂಭಿಕ ಪ್ರಯತ್ನದ ವಿವರ ಕಟ್ಟಿಕೊಡುತ್ತಾ,
ನಮಗೆ ಆಗತೊಡಗಿದವು. ಒಂದು ಹೆಜ್ಜೆ ಇನ್ನೊಂದು
ಹೆಜ್ಜೆಗೆ ನಮ್ಮನ್ನೊ ʻʻ ನಮಗೆ ಹಳ್ಳಿಯ ಕಡುಬಡವರೊಡನೆ ಯಾವುದೇ
ಸಂಪನ್ಮೂಲ ಅಥವಾ ಕೌಶಲ್ಯಗಳಿಲ್ಲದ
ಅವರೊಡನೆ ಕೆಲಸ ಮಾಡಿದ ಅನುಭವದ ಕೊರತೆಯಿತ್ತು.
ಅಂತಹ ಅನುಭವವಿರುವವರೂ ಯಾರೂ ಸಹಾಯಕ್ಕೆ ಇರಲಿಲ್ಲ. ಹೇಗೆ
ಕೆಲಸಮಾಡಬೇಕೆಂಬುದು ನಮಗೆ ಕತ್ತಲೆಯ
ದಾರಿಯೇ ಆಗಿತ್ತು. ಆದರೆ ತಡಕಾಡಿ ದಾರಿಹುಡುಕಿ
ನಾವು ಸಾಧಿಸಿದ್ದನ್ನು ಈಗ ಹಿಂದಿರುಗಿ
ನೋಡಿ ಗಮನಿಸಿದಾಗ ನಮಗೇನೂ ಗೊತ್ತಿಲ್ಲದಿರುವುದೇ ವರವಾಯ್ತು
ಎಂಬುದು ಮನದಟ್ಟಾಗುತ್ತದೆ. ಉತ್ಪನ್ನಕ್ಕಿಂತ
ಪ್ರಕ್ರಿಯೆ ಮುಖ್ಯ. ಎನ್ನುವುದು ಧ್ಯೇಯವಾಕ್ಯವೇ
ಆಗುವಂತಹ ಅನುಭವಗಳು ನಮಗೆದುರಾಯಿತು.ʼʼ
ಎಂದು ಸಂತಸದಿಂದ
ಹೇಳಿಕೊಂಡರೂ, ಸವಾಲುಗಳು, ಸಂದಿಗ್ಧಗಳು ಎದುರಾಗದೇ
ಇರಲಿಲ್ಲ. ಭೂರಹಿತ ಶ್ರಮಿಕರು, ಭಿಕ್ಷುಕರು,
ಅಶಿಕ್ಷಿತ
ಮಹಿಳೆಯರುಗಳನ್ನೆಲ್ಲ ಸಂಘಟಿಸಿ, ಸ್ವಸಹಾಯ
ಗುಂಪುಗಳ ಸೃಷ್ಟಿಸಿ, ಅವರನ್ನೆಲ್ಲ
ವಿವಿಧ ಕೈಗಾರಿಕಾ ಕ್ಷೇತ್ರಗಳಿಗೆ ಕೊಂಡೊಯ್ದು,
ಅವರಲ್ಲೂ ಉದ್ಯಮಶೀಲತೆಯನ್ನು ಜಾಗ್ರತಗೊಳಿಸಿ, ಅವರೂ ಗ್ರಾಮಾಂತರದಲ್ಲಿ ಪುಟ್ಟ ಪುಟ್ಟ
ಕೈಗಾರಿಕೆ, ವ್ಯಾಪಾರಗಳಲ್ಲಿ ತೊಡಗಿಕೊಳ್ಳುವಂತೇ ಮಾಡಿದ್ದು,
ನಿಜಕ್ಕೂ ಬೆರಗು ಮೂಡಿಸುತ್ತದೆ. ಸರಕಾರಿ
ಗ್ರಾಮಾಭಿವೃದ್ಧಿ ಚಟುವಟಿಕೆಗಳಲ್ಲಿ ಒಂದಿಷ್ಟು
ನಾಟಕೀಯ ತರಬೇತಿ, ಒಂದಿಷ್ಟು ಸಹಾಯಧನದ
ಭಿಕ್ಷೆನೀಡಿ ಕೈತೊಳೆದುಕೊಳ್ಳುವ ಪ್ರಕ್ರಿಯೆಯಲ್ಲಿ, ವೈಫಲ್ಯವೇ ಕಟ್ಟಿಟ್ಟ ಬುತ್ತಿಯಂತಾಗಿರುವ ಕಟುವಾಸ್ತವದಲ್ಲಿ, ಅವರೊಂದಿಗೇ
ಬೆರೆತು ಹಳ್ಳಿಗರ ಮನಪರಿವರ್ತನೆಗೈದು, ಹೊಸ ಬೆಳಕು
ಬಿತ್ತಿದ ಭಟ್ಟರ ಮತ್ತು ಅವರ ಸಂಗಾತಿಗಳ
ಶ್ರಮ, ಆಸಕ್ತಿ ಮಾದರಿಯಾಗಿ ನಿಲ್ಲುತ್ತದೆ.
ಹೊಲಗಳಲ್ಲಿ ಇಂಗುಗುಂಡಿ,
ಕೃಷಿಅರಣ್ಯ ನಿರ್ಮಾಣ, ಹಣ್ಣುಹಂಪಲು ದವಸ ಧಾನ್ಯಗಳ ಬೆಳೆಗಳ ಕ್ಷೇತ್ರದಲ್ಲಿ ಕೈಗೊಂಡ
ರಚನಾತ್ಮಕ ಚಟುವಟಿಕೆಗಳು, ಕೃಷಿಕ್ಷೇತ್ರಕ್ಕೇ ಹೊಸ ಪಾಠ
ನೀಡಿತು ಎಂದರೆ ಅತಿಶಯೋಕ್ತಿಯಲ್ಲ.
ಭಟ್ಟರ ಸಂಘಟನೆಯ
ಕೇವಲ ಐದಾರು ವರ್ಷಗಳ
ಕ್ರಾಂತಿಕಾರಕ ಚಟುವಟಿಕೆ ರಾಜ್ಯದಾದ್ಯಂತ
ಗಮನಸೆಳೆದು, ಪ್ರತಿದಿನ ಸಂದರ್ಶಕರ
ಸಂಖ್ಯೆ ಏರತೊಡಗಿದಂತೇ, ಯಾವುದೇ
ಮೂಲಭೂತ ವಾದ , ವಸತಿ, ಸಭಾಭವನದಂತಹ ವ್ಯವಸ್ಥೆಯಿಲ್ಲದೇ ತೊಡಕುಂಟಾದಾಗ,
ಅಂಥ ವ್ಯವಸ್ಥೆ ಅನಿವಾರ್ಯವಾದಾಗ, ಆಗಲೇ ಇನ್ನೂರಕ್ಕೂ ಹೆಚ್ಚು
ಸ್ವಸಹಾಯ ಸಂಘಗಳು, ಇಪ್ಪತ್ತೆರಡು
ಗ್ರಾಮವಿಕಾಸ ಸಂಸ್ಥೆಗಳೆಲ್ಲ ಒಗ್ಗೂಡಿ,
ನಿರ್ಮಿಸಿಕೊಂಡಿದ್ದ ಸರ್ವೋದಯ ಮಹಾಸಂಘದ
ಕೆಲ ಆರ್ಥಿಕ ಮೂಲಧನ,
ಜೊತೆಗೆ ಸಾರ್ವಜನಿಕರಿಂದ ಸಂಗ್ರಹಗೊಂಡ
ಸಂಪನ್ಮೂಲಗಳನ್ನು ಸೇರಿಸಿ ʻʻ ಗ್ರಾಮಚೇತನ
ʼʼ ಎಂಬ
ಬೃಹತ್ ಕಟ್ಟಡ ತಲೆಯೆತ್ತಿ
ನಿಂತಿತು.
ಸಾರ್ವಜನಿಕ ಸಭೆಯಲ್ಲಿ
ಕಟ್ಟಡ ನಿರ್ಮಿಸುವ ನಿರ್ಧಾರ ಕೈಗೊಂಡಾಗ,
ಹಣಕಾಸನ್ನು ಎಲ್ಲಿಂದ ತರುವುದು
ಎಂಬ ಪ್ರಶ್ನೆಗೆ ನಿರುತ್ತರವೇ
ಎದುರಾದಾಗ, ಸ್ವಥಃ ಭಟ್ಟರೇ
ತಮ್ಮಲ್ಲಿದ್ದ ಬಂಗಾರದ ಆಭರಣಗಳನ್ನೇ
ಮೊಟ್ಟಮೊದಲು ದೇಣಿಗೆಯಾಗಿ ನೀಡಿದಾಗ,
ಜನರಲ್ಲೂ ಜಾಗ್ರತಿ ಮೂಡಿತು.
ಸಾರ್ವತ್ರಿಕವಾಗಿ ಸೇರಿದ ಹಳ್ಳಿಗರೆಲ್ಲ
ತಮ್ಮ ತಮ್ಮ ದೇಣಿಗೆ ನೀಡಿ, ಹನಿ ಹನಿ ಹಳ್ಳವಾಯಿತು.
ರಾಜ್ಯಕ್ಕೇ ಮಾದರಿಯಾದ ಸುಸಜ್ಜಿತ
ಕಟ್ಟಡವೊಂದು ಸರಕಾರದ ನೆರವಿಲ್ಲದೇ
ತಲೆಯೆತ್ತಿ ನಿಂತಿತು. ಇದಕ್ಕೆ ಮೂಲಸ್ಫೂರ್ತಿ
ಮಹಾತ್ಮಾ ಗಾಂಧಿ, ಮತ್ತು, ಮಂಥನ್
ಎಂಬ ಸಿನಿಮಾ, ಎಂದು ಭಟ್ಟರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.
ʻʻ
ನಗರಗಳು
ಔದ್ಯಮಿಕ ಕ್ರಾಂತಿ ಗೈದು ಹಳ್ಳಿಗಳ
ಕೆಲಸವನ್ನು ಕಸಿದು ಕೊಂಡವು.
ಹಳ್ಳಿಗಳು ಆರ್ಥಿಕತೆಯಲ್ಲಿ ಸೊರಗಿದವು.
ಔದ್ಯೋಗಿಕವಾಗಿ ಹಳ್ಳಿ ಬಡವಾಯಿತು. ಹಳ್ಳಿ ಹಾಗೂ
ನಗರಗಳು, ಪರಸ್ಪರ ವಿಷಪ್ರಾಶನದಲ್ಲಿ ತೊಡಗಿಕೊಂಡವು.
ʼʼ
ಎಂದು ವಿಷಾದಪೂರ್ಣವಾಗಿ ನುಡಿಯುವ
ಪ್ರಕಾಶ ಭಟ್ಟ್, ಹಳ್ಳಿಗಳ
ಕೃಷಿ ಕೈಗಾರಿಕೆ, ಚಿಕ್ಕ ಉದ್ಯಮಗಳಿಗೆ ಪ್ರೋತ್ಸಾಹ
ನೀಡದೇ ಹೋದರೆ ಕೋಟಿ ಕೋಟಿ ಹಳ್ಳಿಗರ
ನಗರಪಲಾಯನ , ಮತ್ತೊಂದು ದಯನೀಯ ದುಷ್ಪರಿಣಾಮಗಳಿಗೆ ದೇಶ ಪಕ್ಕಾದೀತು ಎಂದು ಎಚ್ಚರಿಸುತ್ತಾರೆ.
೨೮೦ ಪುಟಗಳಷ್ಟು ಸುದೀರ್ಘವಾದ
ಭಟ್ಟರ ಗ್ರಾಮಾತ್ಮಕತೆ ನೆಲಮೂಲದ
ಶಕ್ತಿ ದೌರ್ಬಲ್ಯ, ನೋವು ಸಂಕಟ, ಸಂಸ್ಕೃತಿ
ಮತ್ತು ಪಾರಂಪರಿಕವಾಗಿ ಗ್ರಾಮಗಳಲ್ಲಿ
ಹರಿದುಬಂದ ದೇಶೀತಂತ್ರಜ್ಞಾನಗಳ ತಲಸ್ಪರ್ಶೀ
ವಿವರಗಳಿಂದ ಸಮೃದ್ಧಗೊಂಡ ಒಂದು ಅರ್ಥಪೂರ್ಣ ಕೃತಿಯಾಗಿ
ಮೂಡಿಬಂದಿದೆ. ಇದು ಕೇವಲ ಕನ್ನಡಕ್ಕಾಗಿಯಲ್ಲ. ಭಾರತೀಯ ಎಲ್ಲ ಭಾಷೆಗಳಿಗೆ ಅನುವಾದ ಗೊಳ್ಳಬೇಕು. ಹಳ್ಳಿಗಳ
ಪ್ರತಿ ಮನ ಮನೆಗಳಿಗೆ
ತಲುಪಬೇಕು.
ಸುಮ-ಸಂಪದ ಅಂಕಣಕ್ಕೆ.
ಸುಬ್ರಾಯ ಮತ್ತೀಹಳ್ಳಿ.೨೦-೧-೨೦೨೫.
ಹಳ್ಳಿಗಳನ್ನು ಕಟ್ಟುವ ಕಷ್ಟ-ಸುಖ,
ಲೇ-- ಡಾ. ಪ್ರಕಾಶ ಭಟ್.
ಪ್ರಕಾಶನ,-- ಬಹುರೂಪಿ ಬೆಂಗಳೂರು.
ಪುಟ- ೨೮೦. ಬೆಲೆ- ೩೦೦- ೦೦
No comments:
Post a Comment