Friday, 9 August 2024

ʻʻ ಶಿಕ್ಷಣ ಮತ್ತು ಸಂಸ್ಕೃತಿ.ʼʼ

 

          ಒಬ್ಬ ನಾನೆಂದು  ನೀನೆಂತು ತಿಳಿಯುವೆ  ಜಗದಿ /  ನೂರ್ವರಣಗಿಹರು  ನಿನ್ನಾತ್ಮ ಕೋಶದಲಿ //

         ಪೂರ್ವಿಕರು ,ಜೊತೆಯವರು, ಬಂಧು ಸಖ ಶತ್ರುಗಳು / ಸರ್ವರಿಂ  ನಿನ್ನಗುಣ... ಮಂಕುತಿಮ್ಮ.//

        ದಾರಿಹೋಕ  ಯುವಕನೊಬ್ಬನಿಗೆ  ಭಾರೀ  ಬಾಯಾರಿಕೆಯಾಯಿತು.  ದಾರಿಯ  ಪಕ್ಕದಲ್ಲಿರುವ  ತಿಳಿನೀರ  ಕೆರೆಗಿಳಿದು  ಬೊಗಸೆತುಂಬ  ನೀರು  ಮೊಗೆದು ಕುಡಿಯತೊಡಗಿದ. ಬೊಗಸೆಯೆತ್ತಿ  ನೀರನ್ನೀಂಟುವಾಗ,  ನೀರಿನಲ್ಲಿ ಅಚ್ಚರಿಯೊಂದನ್ನು  ಕಂಡ,  ಆತನ ತಲೆಯ ಮೇಲಿಂದ, ಅಗಲ ರೆಕ್ಕೆ ಹರಡಿ, ಹಾರಾಡುತ್ತಿರುವ, ಅಪರೂಪದ ವಿನ್ಯಾಸದ, ಅನುಪಮ ಸೌಂದರ್ಯದ  ಪಕ್ಷಿಯೊಂದನ್ನು ಕಂಡು  ರೋಮಾಂಚನ ಗೊಂಡ.  ಕೆಂಪು ಕೊಕ್ಕು, ಚಿನ್ನದ ಗರಿ,  ಮೆಲ್ಲನೇ  ಹಾರುವ  ಪರಿ  ಯುವಕನನ್ನು  ಇನ್ನಿಲ್ಲದಂತೇ  ಆಕರ್ಷಿಸಿತು.  ತಲೆಯೆತ್ತಿ  ನೋಡಿದಾಗ,  ಪೂರ್ವದ ದಿಕ್ಕಿಗೆ  ಹಾರುತ್ತ  ಹಾರುತ್ತ  ಮರೆಯಾಯಿತು.   ಕೇವಲ  ನೀರಮೇಲೆ  ಪ್ರತಿಬಿಂಬಿಸಿದ್ದ  ಪಕ್ಷಿಯನ್ನು  ಇನ್ನೊಮ್ಮೆ  ಸರಿಯಾಗಿ  ನೋಡಬೇಕೆಂಬ  ಉತ್ಕಟ  ಇಚ್ಛೆ  ಬಲವಾಗತೊಡಗಿತು.      ದಿಕ್ಕಿಗೇ  ಆತ  ಸಾಗತೊಡಗಿದ.

      ಗುಡ್ಡ ಬೆಟ್ಟ ಹಳ್ಳ ಕೊಳ್ಳ ನದಿ ಸಮುದ್ರ  ಬಯಲುಗಳನ್ನು  ದಾಟುತ್ತ  ದಾಟುತ್ತ  ಅಲೆಯ ತೊಡಗಿದ.  ಪ್ರತಿ  ಊರಲ್ಲೂ  ಜನ  ಕಂಡಿದ್ದರು.  ಅದು ಹಾರಿಹೋದ  ದಿಕ್ಕನ್ನು ಹೇಳುತ್ತಿದ್ದರು.   ಆತ  ಹಿಂಬಾಲಿಸುತ್ತಲೇ  ಇದ್ದ.  ಆತನ ಪ್ರಾಯ  ಕಳೆಯುತ್ತಿತ್ತು.  ಕೂದಲುದುರಿ  ಚರ್ಮ  ನೆರಿಗೆ  ಗಟ್ಟಲು  ಪ್ರಾರಂಭವಾಯಿತು.   ಅಂತೂ  ಒಂದು  ಊರಿನಲ್ಲಿ  ಕಡಿದಾದ  ಪರ್ವತದ  ತುದಿಯಲ್ಲಿ, ಎತ್ತರದ  ಮರದಲ್ಲಿ, ಗೂಡುಕಟ್ಟಿರುವ  ಸಂಗತಿ  ತಿಳಿಯಿತು.

      ಆತ  ಸಂತಸದಲ್ಲಿ  ಪರ್ವತವೇರತೊಡಗಿದ.  ಏರುತ್ತ  ಏರುತ್ತ  ಸಾಕಷ್ಟು ದಣಿದ.  ಪರ್ವತದ  ತುದಿಯನ್ನೇರಿ,  ಅಲ್ಲಿಯೇ  ಆಯಾಸದಿಂದ  ಕುಸಿದು  ಬಿದ್ದ.   ಪ್ರಾಣ  ಬಿಟ್ಟ.  ಆತನ  ಬಲಗೈ  ಮುಷ್ಟಿಕಟ್ಟಿಕೊಂಡಿತ್ತು.  ಮುಷ್ಠಿಯಲ್ಲಿ  ಸುಂದರ ಪಕ್ಷಿಯ  ಸುವರ್ಣಗರಿಯ   ಪುಟ್ಟ ತುಣುಕು  ಬೆಚ್ಚಗೇ  ಕುಳಿತಿತ್ತು.

        ಇದೊಂದು  ವಿದೇಶೀ  ಜಾನಪದ  ಕತೆ. ಮನುಷ್ಯನ  ಪ್ರಜ್ಞೆಯ  ಮಿತಿಗೆ  ಸದಾ  ಗುಟ್ಟಾಗಿಯೇ  ಇರುವ  ಅಲ್ಲಲ್ಲಿ ಕೊಂಚ  ತೆರೆದುಕೊಳ್ಳುವ  ಪ್ರಕೃತಿಯ  ಕಣ್ಣುಮುಚ್ಚಾಲೆಯಾಟವನ್ನು ಈ  ಕಥೆ  ಸೂಕ್ಷ್ಮವಾಗಿ  ಧ್ವನಿಸುತ್ತದೆ.  ಜಗತ್ತಿನ  ಸಂಪೂರ್ಣ  ಅರಿವು  ಕೈಗೆಟುಕಿದೆ  ಎಂದು ತಿಳಿಯುವುದೇ  ಮೂರ್ಖತನ.  ಜ್ಞಾನಾನ್ವೇಷಣೆಯ  ಕಡಿದಾದ  ದಾರಿಯಲ್ಲಿ  ಸಾಗುತ್ತಿದ್ದಂತೇ  ಒಂದುದಿನ,  ತನಗೇನು  ತಿಳಿದಿಲ್ಲ  ಎಂಬ  ಸತ್ಯ  ಅರಿವಿಗೆ  ಬಂದರೆ  ಅದೇ  ಜ್ಞಾನದ  ಪ್ರಾರಂಭ  ಎಂಬ  ನುಡಿಯಿದೆ.  ಪ್ರಕೃತಿಯೆದುರು  ಪ್ರತಿಯೊಬ್ಬನೂ  ವಿದ್ಯಾರ್ಥಿಯೇ.   ಬಸವಣ್ಣ  ಎನಗಿಂತ  ಕಿರಿಯರಿಲ್ಲ,  ಎಂದರೆ, ಕುಮಾರವ್ಯಾಸ   ತಾನು  ಬರಿ  ಲಿಪಿಕಾರ,  ಕವಿ ವೀರ ನಾರಾಯಣ   ಎನ್ನುತ್ತಾನೆ.

      ಇಂದಿನ  ಆಧುನಿಕ  ಶಿಕ್ಷಣ  ಸುಸಂಸ್ಕೃತ  ಮನಸ್ಸುಗಳನ್ನು  ಸೃಷ್ಟಿಸುತ್ತಿದೆಯೇ,  ?   ಮಾನವ  ಬದುಕಿಗೆ  ನಿಜವಾಗಿಯೂ  ಸ್ಪಂದಿಸುತ್ತಿದೆಯೇ...?  ತನ್ನ  ಸಮುದಾಯ,  ತನ್ನ ಪರಿಸರ,  ತನ್ನ ದೇಶದ ಬಗೆಗೆ  ಪ್ರಾಮಾಣಿಕ  ಆಸಕ್ತಿ  ಹೊಂದಿದೆಯೇ...?   ಶಿಕ್ಷಕ.. ಶಿಕ್ಷಿತ  ವಿದ್ಯಾರ್ಥಿ ಗಳಲ್ಲಿ, ಬುದ್ಧಿ  ಭಾವಸಮೃದ್ಧಿ,  ಮಾನವೀಯ  ಮೌಲ್ಯಪ್ರಜ್ಞೆ  ಕಂಡುಬರುತ್ತಿದೆಯೇ..?    ಪ್ರಶ್ನೆಗಳು  ನಮಗೆದುರಾದರೆ  ನಿರುತ್ತರರಾಗುತ್ತೇವೆ.

       ನಾವು  ಹೆಚ್ಚೆಚ್ಚು  ಆಧುನಿಕ  ವಿದ್ಯಾವಂತರಾದಂತೇ  ಸಂಕುಚಿತಗೊಳ್ಳುತ್ತಿದ್ದೇವೆ.  ಬದುಕೆಂದರೆ  ಸಂಪತ್ತು ಗಳಿಸುವ  ಯಂತ್ರವಾಗಿದೆ.  ಐಷಾರಾಮಿ  ವಸ್ತುಗಳ  ರಾಶಿಯಲ್ಲಿ ಖುಷಿಪಡುವ  ಕ್ರೀಡೆಯಾಗಿದೆ.  ನಮ್ಮದೇ ಒಂದು  ಸುಂದರ ಬದುಕನ್ನು ಕಟ್ಟಿಕೊಳ್ಳುವ  ಹಪಾಹಪಿಯಿದ್ದಂತೇ  ಇಡೀ ಸಮುದಾಯದ  ಒಂದು ಕೊಂಡಿಯಾಗಿ, ಸಾಮಾಜಿಕ  ಜವಾಬ್ದಾರಿ  ನಮ್ಮ ಮೇಲಿದೆ  ಎಂಬುದನ್ನೇ  ನಾವು  ಮರೆತಿದ್ದೇವೆ.

        ವಿಚಾರ  ಈಗೇಕೆ  ಮೂಡುತ್ತದೆ ಎಂದರೆ  ವಿಜ್ಞಾನಿಯೊಬ್ಬ  ಹೆಣ್ಣು ಹಣದ  ಆಮಿಷಕ್ಕೆ  ರಾಷ್ಟ್ರದ  ಅತ್ಯಮೂಲ್ಯ ರಹಸ್ಯವನ್ನೂ  ಮಾರುತ್ತಾನೆ.  ಜನಪ್ರತಿನಿಧಿ  ಸ್ವಾರ್ಥಕ್ಕಾಗಿ  ಜನವಿರೋಧಿಯಾಗುತ್ತಾನೆ. ಭೃಷ್ಠ ಮಾರ್ಗದಲ್ಲಿ  ಹಣ ಅಪಹರಿಸಿ  ವಿದೇಶಗಳಿಗೆ  ಸಾಗಿಸುತ್ತಾನೆ.  ಸನ್ಯಾಸಿ  ಭೋಗಕ್ಕಾಗಿ  ಯೋಗವನ್ನೇ ಹರಾಜಿಗಿಡುತ್ತಾನೆ.  ಧರ್ಮಗುರು  ರಾಜಕಾರಣಿಯ ತೆಕ್ಕೆಯಲ್ಲಿ ಸಿಲುಕಿ,  ಆಧ್ಯಾತ್ಮಿಕತೆಗೆ  ತಾತ್ವಿಕತೆಗೆ  ದ್ರೋಹ ಬಗೆಯುತ್ತಾನೆ.  ನ್ಯಾಯಾಧೀಶ  ಹಣಕ್ಕಾಗಿ  ನ್ಯಾಯಕ್ಕೇ  ಅನ್ಯಾಯ ಗೈಯ್ಯುತ್ತಾನೆ.

     ಇವರೆಲ್ಲ  ಶಿಕ್ಷಿತರೇ  ಆದರೂ  ಜ್ಞಾನದಿಂದ  ದೂರವಾದವರು.  ಅಥವಾ ಅಕ್ಷರಸ್ಥ  ಅಶಿಕ್ಷಿತರು.  ಶಿಕ್ಷಣ  ತನ್ನಷ್ಟಕ್ಕೆ ತಾನು  ಯಾರನ್ನೂ  ಒಳ್ಳೆಯವರನ್ನಾಗಿ  ಅಥವಾ  ಕೆಟ್ಟವರನ್ನಾಗಿ  ಮಾಡದು.  ತನ್ನನ್ನು ತಾನು ಎತ್ತರಿಸಿಕೊಳ್ಳಲು  ಅದು  ಸಹಾಯ ಮಾಡಬಹುದಷ್ಟೆ. ʻʻ ನಾವು ಮನುಷ್ಯರಾಗಿ  ಹುಟ್ಟಿಲ್ಲ, ಮನುಷ್ಯರಾಗಲು  ಹುಟ್ಟಿದ್ದೇವೆ ʼʼ  ಕನ್ನಡದ  ಸುಪ್ರಸಿದ್ಧ  ಕತೆಗಾರ  ಯಶವಂತ ಚಿತ್ತಾಲರ  ಉದ್ಗಾರವಿದು.  ವಿದ್ಯೆಯ ಮೂಲಭೂತ  ಗುಣವೂ  ಇದೇ  ಆಗಿದೆ.  ತನ್ನನ್ನು ತಾನು  ಅರ್ಥೈಸಿಕೊಳ್ಳುವುದು   ತನಗೂ  ಸಮುದಾಯಕ್ಕೂ  ಇರುವ  ಸಂಬಂಧ ಗಳನ್ನು  ಶೋಧಿಸಿಕೊಳ್ಳುವುದು,  ತಾನು  ಬದುಕುತ್ತ,  ಸಮುದಾಯದ ಏಳ್ಗೆಯ ಬಗೆಗೆ  ಚಿಂತನೆಯನ್ನು  ವಿಸ್ತರಿಸಿಕೊಳ್ಳುವುದು,  ಶಿಕ್ಷಣದ  ಪರಮ ಧ್ಯೇಯವಾಗಿರಬೇಕಿತ್ತು.    ಆದರೆ  ತನ್ನ ಭೌತಿಕ  ಏಳ್ಗೆಗಾಗಿ  ಸಮಾಜವನ್ನೇ  ನಿಚ್ಚಣಿಕೆಯನ್ನಾಗಿಸಿ ಕೊಳ್ಳುವ  ಶಿಕ್ಷಿತನ  ಹುನ್ನಾರವನ್ನು  ನಾವಿಂದು  ಕಾಣುತ್ತಿದ್ದೇವೆ.  ಇದು  ನಿಜಕ್ಕೂ  ಕ್ರೂರ ವಾಸ್ತವ.

     ಕನ್ನಡದ  ಮಹತ್ವದ  ಕವಿ, ದಿನಕರ ದೇಸಾಯಿ....

                      ʻʻ ಹತ್ತಕ್ಕೆ  ದೋಸೆ, ಇಪ್ಪತ್ತಕ್ಕೆ  ಮೀಸೆ

                       ಮೂವತ್ತಕ್ಕೆ  ಅಪ್ಪ,  ನಲ್ವತ್ತಕ್ಕೆ  ದಪ್ಪ

                       ಐವತ್ತಕ್ಕೆ  ಬೆಪ್ಪ,ʼʼ

ಎಂದು  ನವಶಿಕ್ಷಿತರ  ಬಗೆಗೆ  ವ್ಯಂಗ್ಯವಾಡಿದ್ದು  ನೆನಪಿಗೆ  ಬರುತ್ತಿದೆ.   ಯಾವ ಗುರಿಯಿಲ್ಲದ  ಆಳ ಚಿಂತನೆಯಿಲ್ಲದ ದೂರದೃಷ್ಟಿಯಿಲ್ಲದ  ಪೊಳ್ಳು ವ್ಯಕ್ತಿತ್ವವನ್ನು  ಲೇವಡಿ ಮಾಡುತ್ತಾರೆ  ಕವಿಗಳು. 

      

 ಜಗತ್ತಿನ ಸುಪ್ರಸಿದ್ಧ  ತತ್ವಜ್ಞಾನಿ   ʻʻ ಜಿಡ್ಡು ಕೃಷ್ಣಮೂರ್ತಿʼʼ ತಮ್ಮ ಒಂದು ಕೃತಿಯಲ್ಲಿ ಹೇಳುತ್ತಾರೆ.

   

  ʻʻ  ನಾವು ವಿದ್ಯಾರ್ಥಿಗಳಾಗಲೀ   ಶಿಕ್ಷಕರಾಗಲೀ   ಶಿಕ್ಷಣ ಪಡೆಯುತ್ತಿರುವುದೇಕೆ,  ಕೊಡುತ್ತಿರುವುದೇಕೆ  ಎಂದು  ನಮ್ಮನ್ನೇ ನಾವು  ಕೇಳಿಕೊಳ್ಳುವುದು  ಮುಖ್ಯ.   ಜೀವನದ ಅರ್ಥವೇನು..?  ಹಕ್ಕಿಗಳು  ಹೂವುಗಳು, ಹಸಿರಾದ  ಮರಗಳು,  ಆಕಾಶ  ನಕ್ಷತ್ರ, ಹರಿಯುವ  ನದಿಗಳು, ಅಲ್ಲಿ ಈಜುವ  ಮೀನುಗಳು, ಇವೆಲ್ಲ ಜೀವನವೇ  ಆಗಿದೆ.  ಬಡತನ  ಶ್ರೀಮಂತಿಕೆ,  ಗುಂಪುಗಳ  ನಡುವಣ  ನಿರಂತರ  ಸಂಘರ್ಷ,  ಜನಾಂಗಗಳು, ದೇಶಗಳು, ಇದೂ  ಜೀವನವೇ.   ಜೀವನ  ಒಂದು ಧ್ಯಾನ.  ನಾವು  ಧರ್ಮವೆಂದು  ಕರೆಯುವ  ಸಂಗತಿಯೂ  ಜೀವನವೇ. ಅಷ್ಟೇ ಅಲ್ಲ  ನಮ್ಮ ಅಂತರಂಗದಲ್ಲಿ ಅಡಗಿರುವ  ಸೂಕ್ಷ್ಮವಾದ ಭಾವನೆಗಳು,  ಮತ್ಸರಗಳು, ಮಹತ್ವಾಕಾಂಕ್ಷೆಗಳು,  ಪ್ಯಾಶನ್ಗಳು  ಭಯ ಮತ್ತು ಸುಖಗಳು, ಆತಂಕಗಳು  ಇವು  ಕೂಡ  ಜೀವನದ  ಅಳವಿನಲ್ಲಿ  ಬರುತ್ತವೆ.  ಪಟ್ಟಿಗೆ  ಅಂತ್ಯವೇ ಇಲ್ಲ. ಅದರಾಚೆಗೂ  ಹರಡಿಕೊಂಡಿವೆ.  ಆದರೆ ನಾವು ಸಿದ್ಧಗೊಳ್ಳುವುದು    ಬೃಹತ್ವಿಶ್ವದ ಪುಟ್ಟ ಮೂಲೆಯನ್ನು ಅರ್ಥಮಾಡಿಕೊಳ್ಳಲು  ಮಾತ್ರ. 

      ಪರಿಕ್ಷೆಯಲ್ಲಿ ಪಾಸು,  ಕೆಲಸ ಸಂಪಾದನೆ,  ಮದುವೆ  ಮಕ್ಕಳು,  ಹೀಗೆ  ಯಂತ್ರಗಳಾಗುತ್ತೇವೆ.   ನಮ್ಮ ಭಯ  ಆತಂಕಗಳು  ಹಾಗೆಯೇ  ಉಳಿಯುತ್ತವೆ. ಆದ್ದರಿಂದ  ಮತ್ತೆ  ಅದೇ  ಪ್ರಶ್ನೆ.  ಶಿಕ್ಷಣದ  ಉದ್ದೇಶವೇನು  ಎಂದು.  ಇವೆಲ್ಲ  ಸಮಗ್ರ ಜೀವನವನ್ನು  ಅರಿಯಲು  ಸಹಾಯವಾಗುವುದೇ   ಅಥವಾ  ನಮಗೊಂದು ಕಸುಬು  ಕಲಿಸಿ, ಅತಿಹೆಚ್ಚು ಸಂಬಳ ಬರುವ  ಕೆಲಸ  ದೊರಕಿಸಿ  ಕೊಡುವುದೇ....?ʼʼ

 

        ಒಂದು ದೃಷ್ಟಿಯಲ್ಲಿ ನಮ್ಮದೇಶ  ಮಾನಸಿಕವಾಗಿ ಸ್ವತಂತ್ರಗೊಂಡಿಲ್ಲ.  ಸಾವಿರ ವರ್ಷಗಳ ಪಾರತಂತ್ರ್ಯ  ನಮ್ಮೊಳಗಿನ  ಸಾಂಸ್ಕೃತಿಕ  ಅಸ್ಮಿತೆಯನ್ನೇ  ನಾಶ  ಮಾಡಿದೆ.    ಕಾರಣದಿಂದಲೇ   ನಮ್ಮದೆಲ್ಲವೂ  ಕೀಳು, ವಿದೇಶದ  ಎಲ್ಲವೂ  ಶ್ರೇಷ್ಠ  ಎಂಬ  ಹುಸಿಭ್ರಮೆಯಲ್ಲಿ ತೊಳಲಾಡುತ್ತಿದ್ದೇವೆ.  ವಿದೇಶೀ  ಅಂಧಾನುಕರಣೆಯೇ  ನಿಜವಾದ ಬದುಕು ಎಂಬ  ನಿರ್ಣಯಕ್ಕೆ  ತಲುಪಿದ್ದೇವೆ.  ಪಾಶ್ಚಾತ್ಯ ವಿಚಾರಧಾರೆ  ಪಾಶ್ಚಾತ್ಯ ತಂತ್ರಜ್ಞಾನ  ಜೀವನವಿಧಾನ, ಗಳನ್ನು  ಅನುಕರಿಸುತ್ತ ದ್ವಂದ್ಚದಲ್ಲಿ  ನರಳುತ್ತಿದ್ದೇವೆ.

     ಬ್ರಿಟೆಶ್‌  ಆಡಳಿತದ  ಅವಶ್ಯಕತೆಗೆ  ತಕ್ಕಂತೇ  ಆಧುನಿಕ ಶಿಕ್ಷಣ  ರೂಪುಗೊಂಡಿತು. ಆಢಳಿತ ಯಂತ್ರಕ್ಕೆ  ಬೇಕಾಗಿದ್ದ ಸಾವಿರ ಸಾವಿರ  ಕಾರಕೂನರುಗಳ  ನಿರ್ಮಾಣಕ್ಕಾಗಿ ರೂಪುಗೊಂಡ  ಶಿಕ್ಷಣ  ವ್ಯವಸ್ಥೆ  ಭಾರತೀಯ ಸಂಸ್ಕೃತಿಯ  ಪಾಲಿಗೆ  ನಿಧಾನ ವಿಷವಾಯಿತು.  ಆಧುನಿಕ  ಶಿಕ್ಷಿತ  ಅರಿವಿಲ್ಲದಂತೇ  ತನ್ನ ಕರುಳು ಬಳ್ಳಿಯಿಂದ  ದೂರವಾಗತೊಡಗಿದ.

      ಯಾವ  ಶಿಕ್ಷಣ  ತನ್ನ ಸಮುದಾಯದೊಂದಿಗೆ  ಬೆರೆಯುವ  ವಿಶಾಲ ಮನೋಭಾವವನ್ನು ರೂಢಿಸಿಕೊಳ್ಳುವ  ಸಾಮುದಾಯಿಕ  ಪ್ರಜ್ಞೆಯನ್ನು  ಜಾಗ್ರತಗೊಳಿಸುವ,  ಮತ್ತು  ಸಾಂಸ್ಕೃತಿಕ  ಸಂಪನ್ನತೆಯನ್ನು  ಸಮೃದ್ಧಗೊಳಿಸುವ  ಶಕ್ತಿ  ನೀಡಬೇಕಿತ್ತೋ   ಅದು ಅಂಥ  ಮಹತ್ವಪೂರ್ಣ  ತಾತ್ವಿಕತೆಯಿಂದ  ದೂರಗೊಂಡಿತು.   ಕೇವಲ  ಭೌತಿಕ  ಉಪಯೋಗಕ್ಕಾಗಿ  ನಿರ್ಮಾಣಗೊಂಡ  ಆಧುನಿಕ  ವಿದ್ಯಾವಂತ  ತನ್ನ ಪರಂಪರೆಯ  ಮಣ್ಣಿನಿಂದ  ಬೇರ್ಪಟ್ಟ.   ಕುಂಡದಲ್ಲಿ ಬೆಳೆಸಿಟ್ಟ  ಗಿಡವಾಗಿಬಿಟ್ಟ.

       ವಿದೇಶೀ  ಶಿಕ್ಷಣ  ಕೇವಲ ಭೌತಿಕತೆಗೆ  ಒತ್ತು ಕೊಟ್ಟರೆ,  ಭಾರತೀಯ  ಪಾರಂಪರಿಕ  ಶಿಕ್ಷಣ  ಅಂತರಂಗದ  ವಿಕಾಸಕ್ಕೆ  ಪ್ರಯತ್ನಿಸುತ್ತದೆ.   ಆಧುನಿಕ  ಅಭಿವೃದ್ಧಿ ಸಿದ್ಧಾಂತ  ವೈಭೋಗ  ಐಷಾರಾಮಿತನವನ್ನು  ಉದ್ದೀಪಿಸಿದರೆ,   ಭಾರತೀಯ  ಶಿಕ್ಷಣ  ಸಿದ್ಧಾಂತ  ಆಧ್ಯಾತ್ಮಿಕತೆಗೆ  ಸ್ಪಂದಿಸುತ್ತದೆ.  ಭೌತಿಕತೆ  ಮತ್ತು  ಆಧ್ಯಾತ್ಮಿಕತೆಯನ್ನು  ಸಮಾನವಾಗಿ  ಬೆಸೆದಾಗ  ಮಾತ್ರ  ನಿಜವಾದ  ಶಿಕ್ಷಣ  ಸೃಷ್ಟಿಯಾದೀತು.   ಇದು  ಭಾರತೀಯ  ಶಿಕ್ಷಣದ  ಮೂಲ  ಧ್ಯೇಯ.  ಇಲ್ಲದಿದ್ದರೆ  ಶಿಕ್ಷಣ   ಒಂದು  ಉದ್ಯಮವಾಗಿ,  ಶಿಕ್ಷಕ  ಕೇವಲ  ಕಾರ್ಮಿಕನಾಗುತ್ತಾನೆ.  ವಿದ್ಯಾರ್ಥಿ  ಜ್ಞಾನವನ್ನು  ಖರೀದಿಸುವ   ಗ್ರಾಹಕನಾಗುತ್ತಾನೆ.

    ನಮ್ಮ ಆಧುನಿಕ  ಜೀವನವಿಧಾನ  ಶ್ರಮ ಸಂಸ್ಕೃತಿಯನ್ನು  ಅಲಕ್ಷಿಸಿ  ಐಷಾರಾಮಿತನಕ್ಕೆ  ಬೆಂಬಲ  ನೀಡುತ್ತದೆ.   ಭೌತಿಕತೆಯನ್ನು ವಿಜ್ರಂಭಿಸಿ  ಕೊಳ್ಳುಬಾಕತನಕ್ಕೆ  ಇಂಬು ನೀಡುತ್ತದೆ. ತಂತ್ರಜ್ಞಾನದ  ಅಸಂಖ್ಯಾತ  ಆವಿಷ್ಕಾರಗಳು,  ಅನವಶ್ಯವಾದರೂ  ಅತ್ಯಾವಶ್ಯ ಎಂಬ  ಭ್ರಮೆ  ಮೂಡಿಸುತ್ತದೆ.  ʻʻ   ಭೂಮಿ  ಮನುಷ್ಯನ  ಆಸೆಯನ್ನು  ಪೂರೈಸೀತು, ದುರಾಸೆಯನ್ನಲ್ಲ.ʼʼಎಂಬ  ಮಹಾತ್ಮಾ  ಗಾಂಧಿಯವರ  ಮಾತು  ಇಲ್ಲಿ  ಪ್ರಸ್ತುತವಾದೀತು.

ಅಸ್ಪ್ರಶ್ಯ ಮನೋಭಾವ, ಜಾತೀಯತೆ,  ಅಹಮಿಕೆ, ಸ್ವಾರ್ಥ  ಸಂಕುಚಿತತೆ  ಮತ್ತು ಭೃಷ್ಠತೆ  ಮುಂತಾದ  ದೌರ್ಬಲ್ಯಗಳು  ಸುಶೀಕ್ಷಿತನಲ್ಲೇ  ಬೇರು ಬಿಡುತ್ತಿವೆ.   

   ತಂತ್ರಜ್ಞಾನದ  ಅತಿಯಾದ  ಅವಲಂಬನೆ  ಮನುಷ್ಯನನ್ನು  ದುರಾಸೆಯ  ಕೂಪವನ್ನಾಗಿಸೀತು.   ಕೊನೆಯಿಲ್ಲದ  ಅತೃಪ್ತಿ  ಮತ್ತು  ಗೊಂದಲದಲ್ಲಿ  ಕೆಡವೀತು.  ಸಂಸ್ಕೃತಿ  ನಿಷ್ಠೆ, ಪ್ರಕೃತಿ ಪ್ರೇಮದಂತಹ  ಗುಣಗಳಿಂದ   ದೂರಮಾಡೀತು.  ಕಾಂಕ್ರೀಟ  ಕಾಡಿನಲ್ಲಿ  ಬಂಧಿಸೀತು.   ಇಂತಹ  ಸ್ಥಿತಿ  ಈಗಾಗಲೇ  ಸೃಷ್ಟಿಯಾಗಿದೆ.

    ಮತ್ತೊಬ್ಬನಿಗೆ  ತಾನು  ಸುಖವಾಗಿದ್ದೇನೆ   ಎಂದು  ನಟಿಸುವುದೇ  ಜೀವನವಾಗಿರುವಾಗ,   ಕಾರು  ಬಂಗಲೆ  ಹಣ  ಅಧಿಕಾರಗಳ  ಸುತ್ತಲೇ  ಮನಸ್ಸು  ಗಿರಕಿ  ಹಾಕುತ್ತಿರುತ್ತದೆ.

     ಉಪನಿಷತ್ತಿನ  ಒಂದು  ಸುಂದರ  ರೂಪಕ  ನೆನಪಾಗುತ್ತಿದೆ.

ವೈಭವ ಪೂರ್ಣ  ಇಂದ್ರನ  ಅರಮನೆಯಲ್ಲಿ  ದೇವತೆಗಳು  ಕಿಕ್ಕಿರಿದು  ಸೇರಿದ್ದಾರೆ.  ಸುವರ್ಣಲೇಪಿತ  ಗೋಡೆ  ಛಾವಣಿಗಳು, ರತ್ನ  ವಜ್ರ  ವೈಢೂರ್ಯಗಳಿಂದ  ಸಜ್ಜಾದ   ಕಂಬಗಳು  ಛಾವಣಿಯಿಂದ  ನೇತಾಡುತ್ತಿರುವ  ಮಣಿ  ರತ್ನ  ಸರಗಳು,  ಇಡೀ  ಸಭೆಯನ್ನು  ಪ್ರತಿಬಿಂಬಿಸುತ್ತಿವೆ.   ಸಭಾಸದರ  ಕಣ್ಣುಗಳಲ್ಲಿ  ಇಡೀ  ಸಭಾಭವನ  ಪ್ರತಿಫಲಿಸುತ್ತಿದೆ.  ನಿರ್ಜೀವ   ಗೋಡೆ  ಸ್ಥಂಭಗಳಲ್ಲಿ  ಜೀವಂತ  ಸಭೆ  ಪ್ರತಿಬಿಂಬಿಸಿದರೆ,  ನಿರ್ಜೀವ  ಅರಮನೆ,  ಸಭಾಸದರ  ಕಣ್ಣಲ್ಲಿ  ಜೀವ  ಪಡೆಯುತ್ತಿದೆ.    ಮನುಷ್ಯ ಮತ್ತು ಸುತ್ತಲಿನ  ಪರಿಸರದ  ನಡುವಣ  ಸಾವಯವ  ಸಂಬಂಧ ವನ್ನು  ಧ್ವನಿಸುವ  ಪ್ರಸ್ತುತ  ರೂಪಕ  ನಮ್ಮ ವರ್ತಮಾನಕ್ಕೊಂದು  ಮಹತ್ವದ  ಪಾಠವಾಗುತ್ತದೆ. 

     ದೇಶದ  ಆರೂವರೆ  ಲಕ್ಷ  ಗ್ರಾಮಗಳು  ಯುವ ರಕ್ತ  ಯುವ  ಶಕ್ತಿಯಿಲ್ಲದೇ  ಸೊರಗುತ್ತಿದೆ.  ಪರಸ್ಪರ  ಸುಖ  ದುಃಖಗಳಿಗೆ  ನೋವು ತಲ್ಲಣಗಳಿಗೆ  ಸ್ಫಂದಿಸುವ  ಹೃದಯ  ಕಾಣೆಯಾಗುತ್ತಿದೆ. ಯುವ ಪಡೆ  ಡಾಲರ್‌ ಹಿಂದೆ  ಧಾವಿಸುತ್ತಿದೆ. ವೃದ್ಧ ಸಮುದಾಯ  ವೃದ್ಧಾಶ್ರಮ ಸೇರುತ್ತಿವೆ.  ಅಥವಾ ನಮ್ಮ  ಹಳ್ಳಿಗಳೇ  ವೃದ್ಧಾಶ್ರಮಗಳಾಗುತ್ತಿವೆ.

     ಮಹಾತ್ಮಾ ಗಾಂಧಿಯವರ  ಗ್ರಾಮ ಭಾರತದ  ಕನಸು, ನೆಹರೂರವರ  ಆಧುನಿಕ  ಔದ್ಯಮಿಕ  ಇಂಡಿಯಾದ  ಪ್ರವಾಹದಲ್ಲಿ  ಕೊಚ್ಚಿಹೋಗಲು,  ಕಾರಣವಾದದ್ದೇ   ನಮ್ಮೊಳಗಿನ  ಸಾಂಸ್ಕೃತಿಕ  ಸತ್ವದ  ಕೊರತೆ  ಎಂದು  ತಿಳಿಯಬಹುದಾಗಿದೆ.

     ʻʻ ಗ್ರಾಮಗಳು  ಒಂದು  ಹೆಜ್ಜೆ  ಮುಂದಿಟ್ಟರೆ  ದೇಶವೇ  ಒಂದು ಹೆಜ್ಜೆ ಮುಂದೆ  ಬಂದಂತೆ  ಎಂಬ  ಗಾಂಧಿ  ಉದ್ಘಾರ   ಮರೆಯಾಗಿ,  ನಗರಕೇಂದ್ರಿತ,  ಉದ್ಯಮ  ಕೇಂದ್ರಿತ  ಬದುಕು,  ಸುಂದರ ಭಾರತದ  ಕನಸನ್ನೇ  ನುಚ್ಚುನೂರಾಗಿಸಿತು. 

   ಈಗಲೂ  ಕಾಲ  ಮಿಂಚಿಲ್ಲ. ಶಿಕ್ಷಿತನ   ಸ್ಥಾನ  ನಗರದಲ್ಲಿ ಮಾತ್ರ,  ದೈಹಿಕ ಶ್ರಮ ಆತನದ್ದಲ್ಲ,  ಕಾಯಕ ವಂತಿಕೆ  ಕೀಳು, ಎಂಬ  ಕೃತಕ  ಭೃಮೆಯಿಂದ   ಶಿಕ್ಷಿತ  ಹೊರ ಬರಬೇಕಿದೆ.  ನಿಜವಾದ  ಶಿಕ್ಷಣ  ಮಾನವೀಯ  ವರ್ತನೆಯಲ್ಲಿದೆ.  ಮಾನವ  ಸಂಬಂಧದ  ಸರಪಣಿಯನ್ನು  ಭದ್ರಗೊಳಿಸುವುದರಲ್ಲಿದೆ. 

       ಚಿಂತಕ  ಲೇಖಕ  ದಿ. ಆರ್‌ ಪಿ  ಹೆಗಡೆಯವರ  ಮಾತು  ಇಲ್ಲಿ  ಸ್ಮರಣಾರ್ಹ.

 

ʻʻ ಬಹಿರಂಗದ  ಆಕೃತಿಗಳನ್ನು ಮಕ್ಕಳಲ್ಲಿ  ಕಟ್ಟಿದರೆ  ಸಾಲದು. ಅದಕ್ಕೂ  ಮುಖ್ಯವಾಗಿದ್ದು  ಅಂತರಂಗದ  ಆಕೃತಿ.  ನೈತಿಕ  ಪ್ರಜ್ಞೆ, ಶುಚಿಯಾದ  ಶೀಲ,  ಮಾನವೀಯತೆ,  ಸ್ವಾರ್ಥವನ್ನು ಮೀರಿದ  ಮಾನವೀಯ  ಅನುಕಂಪ, ವನ್ನು  ಮಕ್ಕಳಲ್ಲಿ  ಮೂಡಿಸದೇ  ಹೋದರೆ  ನಾವು ನೀಡುವ  ಶಿಕ್ಷಣ  ಸಂಪೂರ್ಣ  ವಿಫಲವಾದಂತೆ.  ʼʼ

 

 

        ಸುಬ್ರಾಯ  ಮತ್ತೀಹಳ್ಳಿ.  ತಾ- ೭-೮-೨೦೨೪.

ಸಪ್ಟಂಬರ  ಸಂಚಿಕೆಗೆ    ಸುಮ ಸಂಪದ  ಅಂಕಣಕ್ಕಾಗಿ.

No comments:

Post a Comment