ಭೂಕಜನ ರೀಯ ತೋ
ಸಾಕಿ ಕ್ಯುಂ
ವೀಯ....?
ಸಾಕೀಜ ನ ರೀಯ ತೋ
ಮನಕ್ಯಾ ಕ್ಯುಂ ಚಾಲಿಯ..?
(ಹಸಿವೆಯೊಂದಿರದಿದ್ದರೆ ಕತೆ ಹೇಗೆ ಜನಿಸೀತು..?
ಕತೆಯೇ ಇರದಿದ್ದರೆ ಮನುಷ್ಯ ಹೇಗೆ
ಜೀವದಿಂದಿದ್ದಾನು...? )
ಕನ್ನಡ ಸಾಹಿತ್ಯ
ತನ್ನೆಲ್ಲ ಚಳುವಳಿಗಳನ್ನ, ಕ್ರಾಂತಿಕಾರಕ ಆಯಾಮಗಳನ್ನ
ಕಳೆದುಕೊಂಡು, ನಿಸ್ತೇಜವಾಗಿರುವ ಈ ವಾಸ್ತವದಲ್ಲಿ, ರಾಜ್ಯದ
ಮೂಲೆ ಮೂಲೆಯಲ್ಲಿ, ಅಲ್ಲಲ್ಲಿ ಪಾರಂಪರಿಕ
ಬದುಕಿನ ಸೂಕ್ಷ್ಮಗಳ ಬಗೆಗೆ, ಚರಿತ್ರೆಯ ಮರುಶೋಧನೆಯ ನೆಲೆಯಲ್ಲಿ
ತಲಸ್ಪರ್ಶೀ ಅಧ್ಯಯನ ಮತ್ತು ಕಲಾತ್ಮಕ ಅಭಿವ್ಯಕ್ತಿಗಳನ್ನು ಕಾಣುತ್ತಿದ್ದೇವೆ. ಕಳೆದ ಕೆಲವು
ವರ್ಷಗಳೀಚೆ, ಕನ್ನಡದಲ್ಲಿ ಕುತೂಹಲ ಕೆರಳಿಸುವಂತಹ ಹತ್ತಾರು
ಸೃಜನಶೀಲ ಕೃತಿಗಳು ಬೆಳಕಿಗೆ ಬಂದು, ಹಳೆಯ ಕಾಲದ ಹೊಚ್ಚಹೊಸ
ಸಂಗತಿಗಳೆಡೆ ನಮ್ಮ ಗಮನಸೆಳೆಯುತ್ತಿರುವುದು ನಿಜಕ್ಕೂ
ಖುಷಿ ತರುವ ವಿದ್ಯಮಾನ.
ರಾಘವೇಂದ್ರ ಪಾಟೀಲರ,
ಗೈರ ಸಮಜೂತಿ, ಗೋಪಾಲ ಕೃಷ್ಣ ಪೈ ಯವರ ಸ್ವಪ್ನ ಸಾರಸ್ವತ, ಗಜಾನನ ಶರ್ಮರ
ಚನ್ನಭೈರಾದೇವಿ, ಪುನರ್ವಸು, ಪ್ರಮೇಯ, ವಿ.ಟಿ. ಶೀಗೇಹಳ್ಳಿಯವರ, ತಲೆಗಳಿ, ವಸುಧೇಂದ್ರರ
ತೇಜೋ ತುಂಗಭದ್ರಾ, ಶಿವಾನಂದ ಕಳವೆಯವರ ಮದ್ಯಘಟ್ಟ,
ರಾಜಶೇಖರ ಜೋಗಿನ ಮನೆ, ಯವರ ಕೇಳು ಧನಂಜಯ,
ಶ್ರೀಧರ ಬಳಗಾರರ, ಆಡುಕುಳ, ಮತ್ತು ವಿಷ್ಣುನಾಯಕರ ಹಾಲಕ್ಕಿ ಜನಾಂಗದ ಸಂಸ್ಕೃತಿಯ
ಹಿನ್ನೆಲೆಯಲ್ಲಿ ಮೂಡಿ ಬಂದ, ಜಂಗುಂ ಜಕ್ಕುಂ,
ಮುಂತಾದ
ಕಾದಂಬರಿಗಳು, ಗತವನ್ನು ಮತ್ತೊಮ್ಮೆ ಧ್ಯಾನಿಸುವಲ್ಲಿ ನಮ್ಮನ್ನು ತೊಡಗಿಸುತ್ತವೆ.
ಅದರಂತೇ ಇತ್ತೀಚೆಗೆ
ಉತ್ತರಕನ್ನಡದಲ್ಲಿ, ಶ್ರೇಷ್ಠ ಜನಪ್ರಿಯ ವೈದ್ಯರಾಗಿ,
ಸೇವೆಗೈದು, ನಿವೃತ್ತಿಯ ನಂತರ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಅರ್ಥಪೂರ್ಣ
ಸಾಹಿತ್ಯಕೃತಿಗಳನ್ನು ನೀಡುತ್ತಿರುವ ಎಂಭತ್ತರ ಉತ್ಸಾಹೀ
ಯುವಕ, ಡಾ|| ಕೆ.ಬಿ.ಪವಾರ,( ನಮ್ಮೆಲ್ಲರ ಡಾಕ್ಟರ್ ಮಾಮಾ) ತಮ್ಮ ಎಂಭತ್ತರ
ಹರೆಯದಲ್ಲೂ ನಿರಂತರ ಅಕ್ಷರ ಚಟುವಟಿಕೆಯಲ್ಲಿ ನಿರತರಾಗಿರುವುದು ಸಂತಸ ತರುತ್ತಿದೆ. ಇದೇ ವರ್ಷ ಬೆಳಕು ಕಂಡಿರುವ ಅವರ ಉಪ ಸಂಸ್ಕೃತಿಯೊಂದರ, ಶ್ರೀಮಂತ ಸಾಂಸ್ಕೃತಿಕ ಸಂಕಥನವೆಂದೇ ಹೇಳಬಹುದಾದ ಬೃಹತ್
ಕಾದಂಬರಿ ʻʻ ಕೊಳ್ಳ
ʼʼ ಸ ಹೃದಯರ ಕೈ ಸೇರಿದೆ.
ಬಂಜಾರ ಸಂಸ್ಕೃತಿಯ ಹಿನ್ನೆಲೆಯಲ್ಲಿ ಪ್ರಕಟವಾಗುತ್ತಿರುವ ಪವಾರರ
ಎರಡನೆಯ ಕಾದಂಬರಿಯಿದು.
ಶ್ರೇಷ್ಠ ಕಾದಂಬರಿಯೊಂದು
ಮಹಾಕಾವ್ಯಕ್ಕೆ ಸರಿಸಾಟಿಯಾದ ಪ್ರಭಾವ ಬೀರಬಲ್ಲದು. ಬದುಕಿನ
ಎಲ್ಲ ಸೂಕ್ಷ್ಮ ಆಯಾಮಗಳನ್ನು ಪರಿಚಯಿಸ ಬಲ್ಲದು.
ಮಾನವ ಬದುಕಿನ ಶಕ್ತಿ ದೌರ್ಬಲ್ಯ, ಸೌಂದರ್ಯ, ಸಂಕಟಗಳನ್ನೆಲ್ಲ ಕಲೆಯ ಮೂಸೆಯಲ್ಲಿ ಎರಕ ಹೊಯ್ದು ಹೊಸ ಎಚ್ಚರವನ್ನು ಮೂಡಿಸ ಬಲ್ಲದು. ಅದೇ ಕಾರಣಕ್ಕಿರಬಹುದು ಕಾದಂಬರಿಯಷ್ಟು ಜನಪ್ರಿಯ ಸಾಹಿತ್ಯ ಮತ್ತೊಂದಿಲ್ಲ.
ಭಾರತದ ಚರಿತ್ರೆ
ಕೇವಲ ಒಂದೆರಡು ವರ್ಗಗಳ
ವರ್ಣನೆಯಲ್ಲಿ ನಿಂತಿಲ್ಲ.ರಾಜ ಮಹಾರಾಜರ ವೈಭವದ
ದಾಖಲೆಯಲ್ಲ. ಬಹು ಸಂಸ್ಕೃತಿಯ ಬಹು ಆಯಾಮದಲ್ಲಿ ವ್ಯಾಪಿಸಿಕೊಂಡಿದ್ದರೂ, ಆ ನೆಲೆಯಲ್ಲಿ ಸಾಕಷ್ಟು ಗಮನ ಹರಿದೇ ಇಲ್ಲ. ಆದರೆ ಮುಖ್ಯ ಪ್ರವಾಹದ ಅಂಚಿನಲ್ಲಿ ಸಾವಿರಾರು ವರ್ಷಗಳಿಂದ ಬದುಕಿ ಬಾಳುತ್ತ, ಮಾನವ ಜೀವಿತಕ್ಕೆ ಅಕ್ಷರದಿಂದ ಹೊರತಾದ ತಾತ್ವಿಕತೆಯನ್ನು ನೀಡುತ್ತ, ದಾಖಲೆಯ ಸೌಭಾಗ್ಯವಿಲ್ಲದೇ ಈವರೆಗೂ
ಮರೆಯಲ್ಲಿದ್ದ, ಅದೆಷ್ಟೋ ಸಮುದಾಯಗಳಲ್ಲಿ, ಶಿಕ್ಷಣದ ಬೆಳಕು ಮೂಡಿದ್ದು, ಅವು ತಮ್ಮ ಅಸ್ಮಿತೆಯನ್ನು ಅಭಿವ್ಯಕ್ತಿಸುತ್ತಿವೆ.
ʻʻ
ಬಂಜಾರಾʼʼ ಅಥವಾ ʻʻ ಲಮಾಣಿʼʼ ಎಂಬ ಜನಾಂಗವೊಂದರ
ನೂರಾರು ವರ್ಷದ ಹರಿದಾಟ, ಮತ್ತು ಆ ಸಮುದಾಯದ
ಸಾಂಸ್ಕೃತಿಕ ಶ್ರೀಮಂತಿಕೆ, ಇಡೀದೇಶವನ್ನು ಸುತ್ತಾಡಿ,
ಹತ್ತಾರು ರಾಜ್ಯಗಳ ಅನುಭವಗಳನ್ನು ತಮ್ಮ ಭಾಷೆ
ನಡೆ ನುಡಿಗಳಲ್ಲಿ ದಾಖಲಿಸಿಕೊಂಡು,
ಬದುಕುತ್ತಿರುವ ರೀತಿ, ನಿಜಕ್ಕೂ ಅದೊಂದು
ರೋಚಕ ಅನುಭವ. ವಲಸೆಯನ್ನೇ ಅವಲಂಬಿಸಿದ ಜನಾಂಗವೊಂದರ
ಚರಿತ್ರೆ, ಒಂದು ಮಹಾ ನದಿಯ ಪರಿಕ್ರಮಣವನ್ನೇ
ಹೋಲುತ್ತದೆ.
ಡಾ|| ಪವಾರ್
ಇಂಥಹ ಅಪರೂಪವಾದ ಅನನ್ಯವಾದ
ಬಂಜಾರಾ ಇತಿಹಾಸವನ್ನು ಕಾದಂಬರಿಯ
ಸ್ವರೂಪದಲ್ಲಿ ಕಟ್ಟಿ ಕೊಟ್ಟು ಉಪಕರಿಸಿದ್ದಾರೆ.
ಸ್ವಥಃ ಬಂಜಾರ ಸಮುದಾಯದ ಪ್ರತಿನಿಧಿಯಾದ
ಪವಾರರು, ಹತ್ತೊಂಬತ್ತನೆಯ ಶತಕದ ಮಧ್ಯದಿಂದ, ಇಪ್ಪತ್ತನೆಯ
ಶತಮಾನದ ನಡುವಿನ ಕಾಲದ ವರೆಗಿನ, ಸರಿಸುಮಾರು
ಒಂದು ಶತಮಾನ ಕಾಲದ, ನಾಲ್ಕು ತಲೆಮಾರುಗಳು, ಸಾಗಿಬಂದ
ಜೀವನ ಪ್ರವಾಹವನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ನಿಂತಲ್ಲಿ
ನಿಲ್ಲದೇ, ಸದಾ ವಲಸೆಯಲ್ಲಿ ನಿರತರಾಗಿ, ವ್ಯಾಪಾರ,
ಗೋಸಾಕಣಿಕೆ, ಅರಣ್ಯ ವಸ್ತು ಸಂಗ್ರಹ, ಮತ್ತು ಕೂಲಿ
ನಾಲಿಗಳಲ್ಲೇ ಬದುಕು ಸಾಗಿಸುತ್ತ, ಬಡತನದಲ್ಲೂ
ಪರಂಪರೆಯ ಬಗೆಗಿನ ಆಸಕ್ತಿ,
ಉತ್ಕಟ ಆತ್ಮಾಭಿಮಾನ, ಶ್ರಮ ಮತ್ತು ಶೌರ್ಯಪ್ರವೃತ್ತಿ,ಯಂತಹ ಧನಾತ್ಮಕ
ಗುಣಗಳಿಂದ, ಜನಮಾನಸಕ್ಕೆ ಹತ್ತಿರವಾಗಿರುವ ಬಂಜಾರರ
ವರ್ಣಮಯ ಬದುಕಿನ ಚಿತ್ರಣ ನಿಜಕ್ಕೂ
ಮೈ ನವಿರೇಳಿಸುತ್ತದೆ.
ಮುಖ್ಯವಾಗಿ,
ಇಲ್ಲಿ ಇಸರಾ ಎಂಬ ಬಂಜಾರ ಸಮುದಾಯದ ಮುಖ್ಯಸ್ಥನೊಬ್ಬನ ಕುಟುಂಬದಿಂದ
ಪ್ರಾರಂಭಗೊಳ್ಳುವ ಕಾದಂಬರಿಯ ಹರಿವು,
ಸುದೀರ್ಘವಾಗಿ, ೫೩೨ ಪುಟಗಳ ಮೂಲಕ, ನಾಲ್ಕು ತಲೆಮಾರುಗಳನ್ನು ಸ್ಪರ್ಶಿಸುತ್ತದೆ. ಗಾತ್ರ ಮತ್ತು ಸ್ವರೂಪದಲ್ಲಿ, ಕಾರಂತರ
ಮರಳಿ ಮಣ್ಣಿಗೆ ಮಿರ್ಜಿಯವರ ನಿಸರ್ಗ,
ಕೃತಿಗಳನ್ನು ನೆನಪಿಸುವ ಕೊಳ್ಳ
ಕಾದಂಬರಿ, ವಲಸೆಯಲ್ಲೇ ಬದುಕುತ್ತಿದ್ದ
ಸಮುದಾಯವೊಂದು, ಒಂದೆಡೆ ನೆಲೆನಿಂತು,
ಕೃಷಿಯಲ್ಲಿ ತೊಡಗಿಕೊಂಡು, ಆಧುನಿಕ ಶಿಕ್ಷಣಕ್ಕೂ
ತನ್ನನ್ನು ಒಗ್ಗಿಸಿಕೊಂಡು, ಮೇಲ್ಮುಖವಾಗಿ ಚಲಿಸುತ್ತ,
ಮುಖ್ಯಪ್ರವಾಹಕ್ಕೆ ಸೇರಿಕೊಳ್ಳುವ ಪ್ರಕ್ರಿಯೆಯನ್ನು ಕಾಣಬಹುದಾಗಿದೆ.
ವಿಶಿಷ್ಟವಾದ ಬಂಜಾರ ಭಾಷೆ ಅದರ ಮೃದು ಮಧುರತೆಯ
ಗುಣದಿಂದ ಆಕರ್ಷಿಸುತ್ತದೆ. ಆ ಭಾಷೆಯ
ಬಗೆಗೂ ವಿಶೇಷ ಅಧ್ಯಯನವಾಗಬೇಕಿದೆ. ಬಂಜಾರ
ಭಾಷೆಯಲ್ಲಿ ಮೌಖಿಕವಾಗಿ ನೆಲೆಗೊಂಡಿರುವ
ಅಸಂಖ್ಯ ಹಾಡುಗಳಲ್ಲಿ ಹಲವು ಪ್ರಸ್ತುತ ಕೃತಿಯಲ್ಲಿ
ಕನ್ನಡ ಅನುವಾದದೊಂದಿಗೆ ಮೂಡಿ ಬಂದಿದೆ. ಹುಟ್ಟು,
ಮದುವೆ, ಸಾವು ಅಂತ್ಯಕ್ರಿಯೆ
ಮುಂತಾದ ಅವಸ್ಥೆಗಳಲ್ಲಿ ಮಂತ್ರ ಸದೃಷವಾದ
ಪದ್ಯಗಳು, ಬಂಜಾರ ಜನಪದರಲ್ಲಿ ಅದೆಷ್ಟು
ಹಾಸುಹೊಕ್ಕಾಗಿದೆ, ಅರ್ಥಪೂರ್ಣವಾಗಿವೆ ಎಂದೆನ್ನಿಸುತ್ತಿದೆ.
ಧಾಗಾ
ತೂಟ್ಜಾಯ, ಫರನ್ ಸಂಗ್ಜಾಯ/ ತನ್
ತೂಟ್ಜಾಯತೋ ಅಗನೇಮ
ಬಳ್ಜಾಯ /
ಬಾಕಿ ಸೇ ಅತ್ತಜ ರೇಜಾಯ /
ಝೂಟೇ ಮಾಯಾ
ಝೂಟೀ ಕಾಯಾ / ಈ
ಘರ್ ತಾರೋನ
ಮಾರೋ /
ದಾರ ಹರಿದೀತು,
ಕಟ್ಟಿದ್ರ ಮತ್ತೆ
ಕೂಡೀತು / ಮನಸಾ ಸತ್ರ ಬೆಂಕೀಯೊಳಗ ಸುಟ್ಟೀತು /
ಉಳಿದಿದ್ದೆಲ್ಲಾ ಇಲ್ಲೇ
ಉಳಿದೀತು / ಸುಳ್ಳು ಮಾಯಾ
ಮತ್ತ ಸುಳ್ಳಿದು ಕಾಯಾ /
ಈ ಮನಿ ನಿನ್ನದೂ
ಅಲ್ಲಾ ನನ್ನದೂ
ಅಲ್ಲಾ / ಇರೂದೆಲ್ಲಾ ದೇವ್ರದ್ದು ನಮ್ದನ್ನೂದು ಬಾಡ್ಗೀದು / ಅಂವಾ
ಬಿಡು ಎಂದಾಗ ಬಿಡ್ಬೇಕಲ್ಲಾ !!
ಆಧುನಿಕರೆದುರು ಅವರು ನಿರಕ್ಷರರು.
ಆದರೆ ಅವರ
ಅಂತರಾಳದಲ್ಲಿ ಹುದುಗಿರುವ ತಾತ್ವಿಕತೆ, ಆಧ್ಯಾತ್ಮ, ಜೀವನಾನುಭವ,
ಮತ್ತು ಮಾನವ ಪ್ರವೃತ್ತಿ ಮತ್ತು ವರ್ತನೆಗಳ
ಬಗೆಗಿನ ಜ್ಞಾನ ಅವರ ಹಾಡುಗಳಲ್ಲಿ ಬನಿಗೊಂಡಿವೆ. ಬಂಜಾರರು
ಆರಾಧಿಸುವ ಮರ್ಯಾಮಾ ದೇವತೆ,((ಮಾರಿಯಮ್ಮ)ಯೆದುರು
ಪ್ರಾರ್ಥಿಸುವ ಗೀತೆಗಳು, ಮದುವೆಯ ಸುದೀರ್ಘ ಸಂಭ್ರಮದ
ಕ್ಷಣಗಳಲ್ಲಿ ಹಾಡುವ ಹಾಡುಗಳು, ಕುತೂಹಲ ಕೆರಳಿಸುತ್ತವೆ.
ಪ್ರಕೃತಿ ಪಕ್ಷಿ
ಪ್ರಾಣಿಗಳ ನಡುವಣ ಮೈತ್ರಿ ಮತ್ತು ಸಂಘರ್ಷ, ಆಚಾರ-ವಿಚಾರ,
ಕಷ್ಟ-ನಷ್ಟ, ವಾದ-ವಿವಾದ, ನಂಬಿಕೆ ಆಚಾರ-ವಿಚಾರ, ಆಚರಣೆ,
ಹೀಗೆ ಬಂಜಾರ ಸಮುದಾಯದ
ಅನ್ಯಾದೃಷ ಚಿತ್ರಣ ಅದ್ಭುತವಾಗಿ ಮೂಡಿಬಂದಿದೆ.
ಸಮುದಾಯದೊಳಗಣ ಮಾನವ ಸಂಬಂಧಗಳ
ತಲಸ್ಪರ್ಶೀಯಾದ ಆತ್ಮೀಯ ವರ್ಣನೆ
ಖುಷಿ ನೀಡುತ್ತದೆ. ಎಲ್ಲಿಯವರೆಗೆ ಪ್ರಕೃತಿನಿಷ್ಠರಾಗಿ ಕೇವಲ ಅಲೆಮಾರಿಯಾಗಿದ್ದರೋ ಅಲ್ಲಿಯ ವರೆಗೂ
ಸಮುದಾಯದ ಭಾವಸಂಬಂಧ ಒಗ್ಗಟ್ಟು
ಭದ್ರವಾಗಿದ್ದರೆ, ಕೃಷಿಕರಾಗಿ ಭೂಮಿಗೆ ಹಕ್ಕುದಾರರಾದಾಗ ಕೂಡು ಕುಟುಂಬಗಳು ಛಿದ್ರಗೊಳ್ಳಲು
ಪ್ರಾರಂಭಗೊಳ್ಳುತ್ತದೆ.
ಮತಾಂತರದಂತಹ ಸಮಸ್ಯೆಗಳು
ಸಮುದಾಯವನ್ನು ಆಕ್ರಮಿಸಿದಾಗ, ಪರಂಪರೆ ಶಿಥಿಲಗೊಳ್ಳತೊಡಗುತ್ತದೆ. ಬುಧಿಯಾ
ಎಂಬ ಪಾತ್ರ ಮತಾಂತರದ
ಆಮಿಷಕ್ಕೊಳಗಾಗಿ, ಸಮುದಾಯದಿಂದ ದೂರಗೊಂಡು, ಮತ್ತೊಂದು ಧರ್ಮದ ತೆಕ್ಕೆಯಲ್ಲಿ ಕೆಲವುಕಾಲ ಕಳೆದು, ಬ್ರಮನಿರಸನಗೊಂಡು ಸಮುದಾಯಕ್ಕೆ
ಮರಳಿದರೂ, ನೈತಿಕವಾಗಿ ಪತನಗೊಂಡು,
ಸಂಸ್ಕೃತಿಗೆ ಸವಾಲಾಗುತ್ತಾನೆ. ಕುತ್ಸಿತ
ರಾಜಕಾರಣಿಯಾಗಿ ಸಮುದಾಯದ ಶೋಷಣೆಯಲ್ಲಿ
ನಿರತನಾಗುತ್ತಾನೆ.
ಆದರೆ ಭಿಮಲಾ ಎಂಬ ನಾಲ್ಕನೆಯ
ತಲೆಮಾರಿನ ಆಧುನಿಕ ಶಿಕ್ಷಣ
ಪಡೆದ ಯುವಕ ಬಂಜಾರಾ ಸಮುದಾಯಕ್ಕೆ ಹೊಸ ಬೆಳಕಾಗಿ ಪರಿಣಮಿಸುತ್ತಾನೆ.
ರಾಜಸ್ಥಾನದಿಂದ ಕರ್ನಾಟಕದ ವರೆಗಿನ ಮುನ್ನೂರು
ನಾಲ್ಕುನೂರು ವರ್ಷಗಳ, ಸುದೀರ್ಘ
ಅಲೆಮಾರಿತನದ, ವೈವಿಧ್ಯಮಯ ವಿವರಗಳ
ಜೊತೆಗೆ, ಬಂಜಾರ ಸಮುದಾಯದ
ಸಮೃದ್ಧ ಸಾಂಸ್ಕೃತಿಕ ಚಟುವಟಿಕೆಗಳ ವರ್ಣನೆಗಳು,
ಓದುಗರನ್ನು ಹೊಚ್ಚ ಹೊಸ ಅನುಭವಗಳಿಗೆ
ಕೊಂಡೊಯ್ಯುತ್ತದೆ. ರಾಣಾ ಪ್ರತಾಪರ ಸೈನಿಕರಾಗಿದ್ದ ಅನುಭವಗಳು, ಬ್ರಿಟಿಶ್ ಆಡಳಿತದ
ಶೋಷಣೆ, ಪ್ಲೇಗ ಮಲೇರಿಯಾ ದಂತಹ
ಸಾಂಕ್ರಾಮಿಕ ಪಿಡುಗುಗಳು, ಭೀಕರ ಬರಗಾಲದ
ದಟ್ಟ ವಿವರಗಳು ಮನಸ್ಸು ತಟ್ಟುತ್ತವೆ. ಪ್ರಸ್ತುತ
ಕೃತಿ ಡಾ|| ಪವಾರರ ಹಲವು ವರ್ಷಗಳ
ಅಧ್ಯಯನ ಮತ್ತು ಧ್ಯಾನದ ಫಲವಾಗಿ ಮೂಡಿ ನಿಂತಿದೆ.
ಪ್ರತಿ ಪುಟಗಳೂ ಅಪರಿಚಿತ
ಸಂಗತಿಯನ್ನು ಕಟ್ಟಿಕೊಡುತ್ತವೆ. ಆಹಾರ ಪದ್ಧತಿ, ಆಡುನುಡಿಯ ವೈಶಿಷ್ಟ್ಯ, ನುಡಿಗಟ್ಟು ಗಾದೆಗಳು,
ಪ್ರಾದೇಶಿಕ ಮತ್ತು ಪ್ರಾಕೃತಿಕ ಸಂಗತಿಗಳು,
ಕೃತಿಗೆ ಗಂಭೀರತೆಯ ಆಯಾಮ ನೀಡಿವೆ.
ಆದರೂ ಕೃತಿಯ ಕೊನೆಯಲ್ಲಿ, ಬುಧಿಯಾ
ಮಾಡುವ ಶಂಕ್ರ್ಯಾನ ಕೊಲೆ ಮತ್ತು,
ಶಂಕ್ರ್ಯಾನ ಹೆಂಡತಿ ಕೈಗೊಳ್ಳುವ
ಪ್ರತಿ ಸೇಡಿನ ಬುಧಿಯಾನ ಕೊಲೆಗಳ ವಿವರಗಳು, ಕೊಂಚ ಜನಪ್ರಿಯ ಜಾಡಿನ,
ರೋಚಕತೆಯನ್ನು ಉದ್ದೀಪಿಸುವ ಪ್ರಯತ್ನವಾಗಿ ಕಂಡು ಬಂದರೂ, ಪಾಪಗಳಿಗೆ ತಕ್ಕ ಶಿಕ್ಷೆ ಇದೇ ಜನ್ಮದಲ್ಲಿದೆ ಎಂಬ ಸಾಂಪ್ರದಾಯಿಕ ನಂಬುಗೆಗೆ
ಒತ್ತು ನೀಡಿದೆ.
ಕೃತಿ ಕೇವಲ ನಾಯಕನ ಬದುಕಿನ
ವರ್ಣನೆಯಲ್ಲ. ಇಲ್ಲಿ ಬರುವ ಎಲ್ಲ ಪಾತ್ರಗಳೂ
ಮುಖ್ಯವೇ ಆಗಿವೆ. ಮಹಿಳೆಯ ಸಂಸಾರನಿಷ್ಠೆ, ಸಹನೆ, ಪುರುಷರ
ಶ್ರಮಿಕತೆ, ಶೌರ್ಯ, ಭಕ್ತಿ, ನ್ಯಾಯ ಪ್ರವೃತ್ತಿ,
ಮತ್ತು ಒಗ್ಗಟ್ಟು ಮುಂತಾದವುಗಳ ಅಭಿವ್ಯಕ್ತಿಯಲ್ಲಿ ಎಲ್ಲ ಪಾತ್ರಗಳೂ
ಸಮಾನ ಕರ್ತವ್ಯ ನಿರ್ವಹಿಸುತ್ತವೆ.
ʻʻ ಇಲ್ಲಿ
ಯಾರೂ ಮುಖ್ಯರಲ್ಲ, ಅಮುಖ್ಯರಲ್ಲ, ಯಾವುದೂ ಯಃಕಶ್ಚಿತ್ತವಲ್ಲ. ಯಾವುದಕ್ಕೂ ಮೊದಲಿಲ್ಲ, ತುದಿಯಿಲ್ಲ.
ಯಾವುದೂ ಎಲ್ಲಿಯೂ ನಿಲ್ಲುವುದಿಲ್ಲ. ಕೊನೆ ಮುಟ್ಟುವುದಿಲ್ಲ. ಇಲ್ಲಿ ಅವಸರವೂ
ಸಮಾಧಾನದ ಬೆನ್ನೇರಿದೆ. ಇಲ್ಲಿ, ಎಲ್ಲಕ್ಕೂ ಇದೆ ಅರ್ಥ. ಯಾವುದೂ
ಅಲ್ಲ ವ್ಯರ್ಥ. ನೀರೆಲ್ಲವೂ ತೀರ್ಥʼʼ
( ಕುವೆಂಪು )
ಮಲೆಗಳಲ್ಲಿ ಮಧುಮಗಳು
ಕೃತಿಯ ಪ್ರಸ್ಥಾವನೆಯಲ್ಲಿ ಕುವೆಂಪು
ಹೇಳಿದ ಮಾತು ಇಲ್ಲಿ ನೆನಪಾಗುತ್ತದೆ. ಒಂದು ಕಾದಂಬರಿ ಕೃತಿಯಾದ ʻʻ ಕೊಳ್ಳʼʼ ಮಾನವ ಶಾಸ್ತ್ರದ
ಅಧ್ಯಯನ ಗ್ರಂಥವಾಗಿ, ಅಂಚಿನ ಸಮುದಾಯದ
ಅನನ್ಯ ಸಂಸ್ಕೃತಿಯ ಅಪ್ಪಟ ಪಠ್ಯವಾಗಿ
ರೂಪುಗೊಂಡು, ಆಧುನಿಕರ ಗಮನಸೆಳೆಯುತ್ತಿದೆ.
ಸುಬ್ರಾಯ ಮತ್ತೀಹಳ್ಳಿ, ತಾ- ೨-೮-೨೦೨೪.
ʻʻಕೊಳ್ಳʼʼ ಕಾದಂಬರಿ. ಪುಟ
೫೮೦.
ಬೆಲೆ—ರೂ- ೫೮೨-೦೦
ಲೇ--- ಡಾ|| ಕೆ.ಬಿ. ಪವಾರ. ಶಿರಸಿ.
ಪ್ರ-- ಕಣ್ವ ಪ್ರಕಾಶನ ಬೆಂಗಳೂರು.
No comments:
Post a Comment