ಪೌರ್ಣಿಮೆಯ ಸ್ನೇಹಿತರೇ.
ಈ ಕಾವ್ಯಕುಟಿಗೆ ಸ್ವಾಗತ. ಸುಸ್ವಾಗತ.
ನಾನು ಸುಬ್ರಾಯ
ಮತ್ತೀಹಳ್ಳಿ.
ಕವಿತೆಯಂದರೇನು ಎಂದು ನೀವು ಪ್ರಶ್ನಿಸಿದರೆ
ಏನಲ್ಲ…? ಎಂದು ಉತ್ತರಿಸಬೇಕಾದೀತು. ಕವಿತೆಯಿಂದ
ಏನಾಗುತ್ತದೆ…? ಎಂಬ ಪ್ರಶ್ನೆಗೆ ಏನಾಗಬೇಕಿತ್ತು..? ಎಂಬ ಪ್ರಶ್ನೆಯಿಂದಲೇ
ಉತ್ತರಿಸ ಬೇಕಾದೀತು. ಎಂದು ಗೌರೀಶ ಕೈಕಿಣಿಯವರು ಕಾವ್ಯದ
ಬಗೆಗೆ ಉದ್ಗರಿಸಿದ್ದರು. ಹೌದು. ಕಾವ್ಯ ಪ್ರೇಮ ಮತ್ತು ದೇವರು, ಎಲ್ಲವೂ
ಒಂದೇ. ಎಲ್ಲರೂ ಆರಾಧಿಸುತ್ತಾರೆ. ಆದರೆ ಯಾರಿಗೂ
ಅರ್ಥವೇ ಆಗಿಲ್ಲ. ಏಕೆಂದರೆ
ಅದು ಅಮೂರ್ತ. ಆದರೂ ಕವಿಭಾವದಿಂದ ಹೊರಹೊಮ್ಮಿ,
ಸಹೃದಯನ ಮನದಲ್ಲಿ, ಭಾವಚಿಲುಮೆಯನ್ನು ಚಿಮ್ಮಿಸುವ
ಮೃದುವಾದ ಒರತೆ. ಕವಿತೆ.
ನಿಜವಾದ
ಕಾವ್ಯ ಕಾಡಬೇಕು. ಸುಖವಾದ ನೋವೊಂದನ್ನು ಎದೆಯಲ್ಲಿ ಚಿಮ್ಮಿಸಬೇಕು.
ಅದು ಬೋಧನೆಯಲ್ಲ. ಉಪದೇಶವಲ್ಲ.
ಆಕ್ರೋಶವಲ್ಲ. ಆದರೆ ಅವೆಲ್ಲವನ್ನೂ
ಒಳಗೊಂಡ ಅನುನಯ. ಪ್ರತಿಮೆ ಲಯ ಛಂದಸ್ಸು
ಗಳೆಲ್ಲ ಕಾವ್ಯದ ಉಪಕರಣ ಅಷ್ಟೇ. ಅವೆಲ್ಲ ಅವಶ್ಯವೇ.
ಆದರೆ ಅವುಗಳೇ ಕಾವ್ಯವಲ್ಲ. ಅವು ಕಾವ್ಯದ ಭೌತಿಕ ಸಾಮಗ್ರಿ. ಒಳಗೆ ಜೀವವಿರಬೇಕು ಅಷ್ಟೇ. ನೋವು ತಲ್ಲಣ,
ಪ್ರೀತಿ ಪ್ರೇಮ, ಕಾಮ, ಕಷ್ಟ ಸುಖ, ಮೋಸ ವಂಚನೆ,
ಶೌರ್ಯ ಹೇಡಿತನದಂಥ ಮಾನವ ವರ್ತನೆಗಳ ಆಳದಲ್ಲಿ ನಿಜವಾದ
ಮಾನವೀಯತೆಯನ್ನು ಶೋಧಿಸುವ ಒಂದು ಅದ್ಭುತ ಪ್ರಕ್ರಿಯೆ.
ನಾವು
ಮನುಷ್ಯರಾಗಿ ಹುಟ್ಟಿಲ್ಲ. ಮನುಷ್ಯರಾಗಲು
ಹುಟ್ಟಿದ್ದೇವೆ. ಇದೊಂದು ಅತ್ಯಂತ ಜನಪ್ರಿಯ ನುಡಿಗಟ್ಟು. ಕತೆಗಾರ ದಿ. ಯಶವಂತ ಚಿತ್ತಾಲರು ಉದ್ಗರಿಸಿದ್ದು. ಕಾವ್ಯದ ಪರಮೋದ್ದೇಶವೂ ಅದೇ ಆಗಿದೆ.
ನಮ್ಮ ಬದುಕು, ಮಾನವ ಸಂಬಂಧ, ನಮ್ಮ ವರ್ತನೆ, ನಮ್ಮ ದಾಹ,ನಮ್ಮ ಸ್ವಾರ್ಥ ಇವೆಲ್ಲವುಗಳೊಂದಿಗೆ ಮುಖಾಮುಖಿಯಾಗುತ್ತ, ನಮ್ಮನ್ನೇ ನಾವು ಪರೀಕ್ಷಿಸಿಕೊಳ್ಳುತ್ತ, ನಮ್ಮ ಮನಸ್ಸಿನೊಂದಿಗೇ ಸಂಘರ್ಷಕ್ಕಿಳಿಯುತ್ತ, ಹೊಸದಾದ ಒಂದು ಆಹ್ಲಾದಕರ ಮನೋನಂದನವನ್ನು ನಿರ್ಮಿಸುವ
ಹೋರಾಟ ಕವಿಯದ್ದಾಗಬೇಕು. ನಾವು ನಾವೇ ನಮ್ಮೊಳಗೊಂದು
ಸ್ನೇಹದ ಭಾವಸರಪಣಿಯನ್ನು ನಿರ್ಮಿಸಿಕೊಳ್ಳುವ ಮಾನವೀಯ
ಚಟುವಟಿಕೆಯಾಗಬೇಕು ಕಾವ್ಯ.
ಮಹಾಕವಿ ಪಂಪ ಕಲಿಯಾದವ ಕವಿಯಾದ. ಅಹಿಂಸೆಯ ಪ್ರತಿಪಾದಕನಾದ. ಕ್ಷತ್ರಿಯನಾಗಿಯೂ ಹಿಂಸೆತೊರೆದು, ಮಾನವದೌರ್ಬಲ್ಯವನ್ನು ತೊಳೆದು ಶುದ್ಧೀಕರಿಸಲು
ಪಣತೊಟ್ಟ ಬುದ್ಧನೋ ಅವನೇ ಒಂದು ಕಾವ್ಯವಾದ. ಲಿಯೋ ಟಾಲಸ್ಟಾಯ್ ಸ್ವಥಃ ಯೋಧರಾಗಿ, ಹಿಂಸೆಯ ಪರಾಕಾಷ್ಠೆಯನ್ನು ಅನುಭವಿಸಿ, ಒಂದು ದಿನ ಕಾವ್ಯ ಋಷಿಯಾಗಿಬಿಟ್ಟರುಅವರ ʻʻ ಯುದ್ಧ ಮತ್ತು ಶಾಂತಿʼʼ ಕಾದಂಬರಿ
ಅದೊಂದು ಮಹಾಕಾವ್ಯವೇ ಆಗಿದೆ. ಅವರು ಯುದ್ಧವಿರೋಧೀಯಾಗಿ, ಸೌಹಾರ್ದದ ಪ್ರತಿಪಾದಕರಾಗಿ, ಪರಿವರ್ತನೆಯಾದದ್ದು ಈಗ ಇತಿಹಾಸ.
ಕನಕದಾಸರು ಸೈನ್ಯದ
ಡಣ್ಣಾಯಕರು. ಒಂದೇ ಒಂದು ಸೋಲಿಗೆ
ಯುದ್ಧಬಿಟ್ಟು ದಾಸರಾಗಿಬಿಡುತ್ತಾರೆ. . ವಿಜಯನಗರ
ಸಾಮ್ರಾಜ್ಯದ ಉತ್ತುಂಗದಲ್ಲಿ ತಾತ್ವಿಕತೆಯ
ಪ್ರತಿಮೆಯಾಗಿ ಬಿಟ್ಟರು. ಮೋಹನ ತರಂಗಿಣಿ ಮಹಾಕಾವ್ಯವನ್ನೇ
ರಚಿಸುತ್ತಾರೆ. ಕೃಷ್ಣದೇವರಾಯನನ್ನೇ ಕೃಷ್ಣನನ್ನಾಗಿ
ಚಿತ್ರಿಸುತ್ತಾರೆ. ಕಾವ್ಯ ರಕ್ಕಸತನವನ್ನ
ತಹಬಂದಿಗೆ ತಂದು ಮಾನವೀಯತೆಯೆಡೆಗೆ ಸೆಳೆದೊಯ್ಯುವ
ಮಾಂತ್ರಿಕ ಪ್ರವಾಹ. ತಾತ್ವಿಕತೆಯ
ಕಣಜ.
ಗದ್ಯ ಸದ್ಯಕ್ಕೆ. ಕಾವ್ಯ ಭವಿಷ್ಯಕ್ಕೆ. ನಿಜವಾದ ಕಾವ್ಯ ಅರ್ಥವಾಗದೆಯೂ ಸಂವಹನೆ ಸಾಧಿಸುವ ಗುಣ ಹೊಂದಿರುತ್ತದೆ.
ಅದು ಶುದ್ಧ ನೀರಿನಂತೆ. ಪ್ರವೇಶಿಸಿದ ಪಾತ್ರೆಯ ಆಕಾರ ಬಣ್ಣಗಳನ್ನ ಪಡೆದುಕೊಳ್ಳುವಂತೆ, ಓದುಗನ ಅರ್ಹತೆಯನ್ನಾಧರಿಸಿ ಅರ್ಥದ ಆವರಣವನ್ನು ಸೃಷ್ಟಿಸುತ್ತದೆ.
ಕಾವ್ಯ ಜನಿಸಲು ಪಾಂಡಿತ್ಯದ ಹಂಗಿಲ್ಲ. ಜೀವನಾನುಭವ,
ಬದುಕನ್ನು ಸೂಕ್ಷ್ಮವಾಗಿ ದೃಷ್ಟಿಸುವ ಗುಣ, ಧ್ಯಾನಸ್ಥ ಮನೋಸ್ಥಿತಿ, ಮತ್ತು ಸಂವೇದನಾ ಶೀಲತೆಗಳು ಕಾವ್ಯದ ಗಂಗೋತ್ರಿಯೆನ್ನಬಹುದು. ಅಧ್ಯಯನ ಪಾಂಡಿತ್ಯಗಳು
ಕಾವ್ಯಕ್ಕೇನೂ ಪಥ್ಯವಲ್ಲ. ಅದರಿಂದ ಕಾವ್ಯಕ್ಕೆ ಹೊಸ ಮಿಂಚು ಹೊಸ ಮೆರಗು ಮೂಡಬಹುದು.
ನಮ್ಮ ಜನಪದರು ಸೃಷ್ಟಿಸಿದ ಸಾವಿರ ಸಾವಿರ ಕತೆಗಳು, ಹಾಡುಗಳು ಅವರ ದಟ್ಟ ಜೀವನಾನುಭವದಿಂದ
ಮೂಡಿಬಂದಿದೆಯೇ ಹೊರತು, ಪಾಂಡಿತ್ಯದಿಂದಲ್ಲ.
ಕಾವ್ಯ ಎನ್ನುವುದು ಕರೆದರೆ ಬರುವ ಕೂಲಿಯಲ್ಲ. ಕಾಯಬೇಕು ಶಬ್ದಕ್ಕೆ. ಅರ್ಥಕ್ಕೆ. ಅನುಭವಕ್ಕೆ. ಅನುಭಾವಕ್ಕೆ.
ಕವಿ ಎಚ್ಎಸ್ ವೆಂಕಟೇಶ ಮೂರ್ತಿ ಕಾವ್ಯವನ್ನು ಹಂಬಲಿಸುವ
ಪರಿನೋಡಿ.
ಶಬ್ದಗಳೇ ಒದಗಿ
ನಿಶ್ಶಬ್ದಗಳೇ ಒದಗಿ / ಶಬ್ದ ಶಬ್ದಗಳ ಪ್ರಾರಬ್ಧಗಳೇ ಒದಗಿ/
ನೀಲ ನಿಶ್ಶಬ್ಧಕ್ಕೆ ಚೆಲ್ಲಿಬಿದ್ದಕ್ಷರದ / ಅಕ್ಷಗಳೇ ಒದಗಿ /
ಮಾತಲ್ಲಿ ಹೂತಂತ ಆ ನಾದ ಈ
ನಾದ / ನಾನಾದ ಗಳಿಗೆಗಳೇ ಈ ಗಳಿಗೆ ಒದಗಿ / ೩೨5
ಧ್ವನಿ ಮುದ್ರಣ- ೨೦-೧೦-೨೦
No comments:
Post a Comment