ಕವಿತೆ ಮನುಷ್ಯನ
ಆತ್ಮದ ಮಾತು, ಎಂಬ ನಾಣ್ಣುಡಿಯಿದೆ. ಕವಿತೆ
ಬರಿ ಮಾತಲ್ಲ. ಅಂತರಂಗದ
ಗಾಢ ಅನುಭವಗಳ ಮಾತೆ. ಮನಸ್ಸಿನಾಳದ ಸಂವೇದನೆ
ಬನಿಗೊಂಡು ಹರಳುಗಟ್ಟಿ, ಅಭಿವ್ಯಕ್ತಗೊಂಡ
ಸುಂದರ ಉದ್ಗಾರ ಅದು. ಮಾನವನ ಅನುಭವಗಳು,
ಅಂತರಂಗದಲ್ಲಿ ಕಾದು ಕುದಿದು
ಪಾಕಗೊಂಡು ಹೊರಹೊಮ್ಮುವ ತಾತ್ವಿಕ
ನುಡಿಗಟ್ಟುಗಳು ಅವು. ನಮ್ಮೊಳಗಿನ
ಭಾವಗಳು ಅಕ್ಷರದಲ್ಲಿ ಜೀವಪಡೆಯುವುದು
ಅಂದರೆ ಅದೊಂದು ಪ್ರಸವವೇ
ಆದಹಾಗೆ. ಅನುಭವಗಳು ಅಂತರಂಗದಲ್ಲಿಯೇ
ಭ್ರೂಣಗೊಂಡು, ನಿರ್ದಿಷ್ಟ ರೂಪಪಡೆದು,
ತಕ್ಕಕಾಲದಲ್ಲಿ ಅಕ್ಷರದ ಶರೀರ ಪಡೆದು
ಜನಿಸುತ್ತದೆ. ಅಕ್ಷರವೇ ಕಾವ್ಯವಾಗುತ್ತದೆಯೇ ? ಇಲ್ಲ. ಅದು ಕೇವಲ ಶರೀರಮಾತ್ರ. ಕಾವ್ಯಕ್ಕೆ
ಸಂವಹನೆಗಾಗಿರುವ ಒಂದು ಆವಶ್ಯಕ
ಮಾಧ್ಯಮ. ನಿಜವಾದ ಕಾವ್ಯ ತನ್ನ ಅಕ್ಷರ ಶರೀರವನ್ನು ಮೀರಿ, ಅದರಾಚೆಗೆಲ್ಲೋ
ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿರುತ್ತದೆ. ಕವಿಯ ಮನದಲ್ಲಿ ಉದ್ಭವಿಸಿ,
ಅಕ್ಷರದ ಸೇತುವೆಯ ಮೂಲಕ ಸಹೃದಯನ ಮನೋಭಿತ್ತಿಯಮೇಲೆ ಮೂಡಿಕೊಳ್ಳುತ್ತದೆ. ಅದು ಮತ್ತೆ
ಭಾವದ ಗುಚ್ಛವಾಗುತ್ತದೆ. ಸಹೃದಯನ
ಮನಸ್ಸನ್ನು ಕಲಕಿ ಅವನಲ್ಲೂ
ಒಂದು ಹೊಸ ಭಾವದ ಚಿಲುಮೆಯನ್ನು ಸೃಷ್ಟಿಸುತ್ತದೆ.
ಕಾವ್ಯದ ಓದುಗರು
ಯಾವಾಗಲೂ ಅಲ್ಪಸಂಖ್ಯಾತರೇ. ಆದರೆ ಯಾರ ವ್ಯಕ್ತಿತ್ವ
ಕಾವ್ಯದ ಅನುಸಂಧಾನದಲ್ಲಿ ಸಮೃದ್ಧಗೊಳ್ಳುತ್ತದೆಯೋ ಆ ವ್ಯಕ್ತಿಯೇ ಒಂದು ಕಾವ್ಯವಾಗಿ ಬಿಡುತ್ತಾನೆ.
ಮಾನವೀಯ ಮೌಲ್ಯಗಳಿಂದ ತುಂಬಿ ತುಳುಕುತ್ತಾನೆ. ಕರುಣೆ ಸ್ನೇಹ,
ಪ್ರೀತಿ ಕ್ರಿಯಾಶೀಲತೆ, ಮತ್ತು ವೈಚಾರಿಕ
ಗುಣಗಳಿಂದ ಸಹಸ್ರ ಸಹಸ್ರ ಮನಸ್ಸುಗಳಮೇಲೆ ಪ್ರಭಾವ ಬೀರುತ್ತಾನೆ. ಕಾವ್ಯ ಅದೊಂದು ಸಾತ್ವಿಕ
ಪ್ರತಿಭಟನೆ. ತಾತ್ವಿಕ ಪ್ರಕ್ರಿಯೆ. ಎಲ್ಲ ಮಾನವೀಯ ದೌರ್ಬಲ್ಯಗಳನ್ನು ಒಳಗೊಂಡೂ,
ಸೌಹಾರ್ದತೆ, ಸಹನಶೀಲತೆ, ಸಂಬಂಧ ಸ್ಥಾಪನೆ ಗಳಿಗೆ
ಸದಾ ತುಡಿಯುತ್ತಲೇ ಇರುತ್ತದೆ.
ಇದೇ ಕಾರಣಕ್ಕೇ ಕಾವ್ಯ ಕೆಲವರನ್ನು ಮಾತ್ರ ಆಕರ್ಷಿಸಿದರೂ ಆ ಕೆಲವೇ ಮನಸ್ಸುಗಳು
ಸಮುದಾಯದಲ್ಲಿ ನೈತಿಕ ಸಾಂಸ್ಕೃತಿಕ, ತಾತ್ವಿಕ ಮತ್ತು ಆಧ್ಯಾತ್ಮಿಕ
ಮೌಲ್ಯಗಳನ್ನು ಬಿತ್ತುತ್ತಾರೆ. ಬದುಕನ್ನು
ಸಹನಶೀಲವಾಗುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾರೆ.
ಗಾಂಧಿ ವ್ಯಕ್ತಿತ್ವದ ಆಳದಲ್ಲಿ ರಾಮಾಯಣ
ಮಹಾಭಾರತ ಕಾವ್ಯಗಳಿವೆ. ಮದರ್ ಥೆರೇಸಾರ ಹಿನ್ನೆಲೆಯಲ್ಲಿ
ಪಾಶ್ಚಿಮಾತ್ಯ ಸಾಹಿತ್ಯದ ಮತ್ತು ಬೈಬಲ್ಲಿನ ಗಾಢ ಪ್ರಭಾವವಿದೆ.
ಮಹರ್ಷಿ ಅರವಿಂದರು ಸ್ವಥಃ ಮಹಾ ಕವಿ, ಕಾವ್ಯಾಭ್ಯಾಸಿಯೂ ಹೌದು.
ರೆವರೆಂಡ್ ಕಿಟ್ಟೆಲ್ಲ್, ಕೇವಲ ನಿಘಂಟುಕಾರರಲ್ಲ. ಜಾಗತಿಕ
ಕಾವ್ಯದ ಜೊತೆಗೆ ಕನ್ನಡ ಕಾವ್ಯಪರಂಪರೆಯೊಂದಿಗೂ ಸಂಬಂಧ ಸ್ಥಾಪಿಸಿಕೊಂಡ ಅವರು ಸ್ವಥಹ ಕವಿಯೂ ಆದರು.
ದಿನಕರ ದೇಸಾಯಿ ಕೇವಲ ಕವಿಗಳಲ್ಲ. ಸಾಮಾಜಿಕ
ಶೈಕ್ಷಣಿಕ ಹೋರಾಟಗಾರರು.
ಕಾವ್ಯವನ್ನು ಆಸ್ವಾದಿಸೋಣ,
ಮನುಷ್ಯರಾಗೋಣ. ೧೩-೧೦-೨೦೨೦. ಪೌರ್ಣಿಮೆ.ವೇದಿಕೆ.16-10-2020
pablished.
No comments:
Post a Comment