“ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತ ಮೇಷಾಮ್
| ಸಮಾನಂ ಮಂತ್ರ ಮಭಿಮಂತ್ರಯೇವಃ ಸಮಾನೇನ ವೋ
ಹವಿಷಾ ಜುಹೋಮಿ || ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು
ವೋ ಮನೋ ಯಥಾ ವಃ ಸುಸಹಾಸತಿ” ||
ಈ ದೇಶದಲ್ಲಿ ಹುಟ್ಟಿದ ಮಾನವರೆಲ್ಲಾ ಸಮಾನರು. ಸಮಾನ
ಮನಸ್ಕರು. ಸಮಾನ ನೀತಿವಂತರು. ಸಮಾನ ಉದ್ದೇಶ ಉಳ್ಳವರು. ಲೋಕದ ಚರಾಚರಗಳೂ ಒಂದಲ್ಲಾ ಒಂದು
ಕಾರಣಕ್ಕೆ ನಮಗೆ ಬಂಧು ಸಮಾನರು. ಅವರೆಲ್ಲರ ಬದುಕು ಸುಖ, ಸಹಜ, ನೆಮ್ಮದಿಯಾಗಿರುವತ್ತ ನಮ್ಮ
ಜೀವನವಿರಲಿ.
ʻʻ ಸಹಕಾರʼʼ ಈ ಪರಿಕಲ್ಪನೆಯ
ಮೂಲ ದೇಶೀಯವಾಗಿರಲಿ, ವಿದೇಶೀಯವಾಗಿರಲಿ ನಮ್ಮ
ದೇಶದ ಆರುಲಕ್ಷ ಕೃಷಿಅವಲಂಬಿತ
ಗ್ರಾಮಗಳ ಜೀವನಾಡಿಯಾಗಿ ಬೇರುಬಿಟ್ಟಿರುವುದಂತೂ ಸತ್ಯ.
ಪ್ರಾರಂಭದಲ್ಲಿ ಆರ್ಥಿಕ ದಾಸ್ಯದಲ್ಲಿ
ನಲುಗುತ್ತಿದ್ದ
ಕೃಷಿಕ್ಷೇತ್ರವನ್ನು
ಸ್ವಾವಲಂಬಿಯಾಗಿಸುವ ಪರಮೋದ್ದೇಶದಿಂದ ಪ್ರಾರಂಭಗೊಂಡ
ಸಹಕಾರ ಚಳುವಳಿ, ಇಂದು
ಅಸಂಖ್ಯಾತ ಆಯಾಮಗಳನ್ನು ಪಡೆದುಕೊಂಡು,
ದೇಶದಲ್ಲಿ ಹೊಸದೊಂದು ಆಶಾವಾದದ
ಪ್ರವಾಹವನ್ನೇ ಸೃಷ್ಟಿಸಿರುವುದು ಶ್ಲಾಘನೀಯ.
ಬಂಡವಾಳಶಾಹೀ ಆರ್ಥಿಕ ವ್ಯವಸ್ಥೆ,
ಸರಕಾರೀ ಆರ್ಥವ್ಯವಸ್ಥೆಯ ನಡುವೆ
ತನ್ನದೇ ಆದ ಅಸ್ಮಿತೆಯನ್ನು
ಸೃಷ್ಟಿಸಿಕೊಂಡ ಸಹಕಾರೀ ಅರ್ಥವ್ಯವಸ್ಥೆ
ನಿಜಕ್ಕೂ ಸಾಮಾನ್ಯ ಜನತೆಯಲ್ಲಿ
ಒಂದು ಹೊಸ ಭರವಸೆ
ಹೊಸ ಶಕ್ತಿ, ಹೊಸ ಚೈತನ್ಯವನ್ನು ಮೂಡಿಸಿರುವುದು
ಸತ್ಯ.
ಒಂದು ಕಾಲದಲ್ಲಿ ಕೃಷಿಕನಾಗಲೀ
ಕೃಷಿಕೈಗಾರಿಕೆಯಾಗಲೀ, ಸಾಲಕ್ಕಾಗಿ ಖಾಸಗೀ
ಅರ್ಥವ್ಯವಸ್ಥೆಗೆ ತಲೆಕೊಡುವುದು, ಅದರ
ಅತ್ಯಧಿಕ ಶೋಷಣೆಗೆ ಒಳಗಾಗುವುದು ಸಹಜ ವಿದ್ಯಮಾನವಾಗಿತ್ತು. ಕೃಷಿಕನೆಂದರೆ,
ಸಿರಿವಂತ ವಲಯದಲ್ಲಿ, ಅಧಿಕಾರಿ
ವರ್ಗದಲ್ಲಿ ಎರಡನೆಯ ದರ್ಜೆಯ
ಪ್ರಜೆಯಾಗಿ, ಸ್ವಾಭಿಮಾನವನ್ನೂ ಅಡವಿಟ್ಟು
ಬದುಕುವ, ತಲೆಮಾರುಗಳಿಂದ ಸಾಲದ
ಬೆಂಕಿಯಲ್ಲಿ ಜರ್ಜರಿತನಾಗುತ್ತ ಬದುಕಿದ್ದು
ಒಂದು ದುರಂತ ಇತಿಹಾಸ. ಪ್ರತಿಯೊಬ್ಬ ಮನುಷ್ಯನಿಗೂ ಅನ್ನ ಅವಶ್ಯ.
ಆದರೆ ಅನ್ನ ಉತ್ಪಾದಿಸುವವ ಮಾತ್ರ ಅಲಕ್ಷಿತ.
ರೈತನೆಂದರೆ ಅಶೀಕ್ಷಿತ, ಕೃಷಿಕನೆಂದರೆ
ಬಡವ, ಎಂಬ ಅಭಿದಾನದಲ್ಲಿ,
ಅತ್ಯಂತ ಕನಷ್ಠತಮ ಸೌಲಭ್ಯದಲ್ಲಿ
ಜೀವನ ನಿರ್ವಹಣೆಗೈಯ್ಯುವ ವ್ಯಕ್ತಿ
ಎಂದೇ ರೂಢಿಗತವಾದ ಸ್ಥಿತಿಯ
ನಡುವೆ, ವ್ಯಕ್ತಿಗೌರವ, ಆತ್ಮಾಭಿಮಾನ, ಮತ್ತು ಆತ್ಮವಿಶ್ವಾಸವನ್ನು ದೊರಕಿಸಿಕೊಟ್ಟ
ಸಹಕಾರೀ ಚಳುವಳಿ, ಭಾರತೀಯ
ಕೃಷಿವಲಯಕ್ಕೆ ವರವಾಗಿ ಪರಿಣಮಿಸಿತು.
ಸಹಕಾರ ವ್ಯವಸ್ಥೆ ನಿಜಾರ್ಥದಲ್ಲಿ
ಪ್ರಜಾಪ್ರಭುತ್ವದ ಶಿಖರಪ್ರಾಯದಲ್ಲಿ ಮಿಂಚಬೇಕಾಗಿತ್ತು. ಅರ್ಥವ್ಯವಸ್ಥೆ
ಸಂಪೂರ್ಣ ಖಾಸಗಿಯಲ್ಲಿ ನೆಲೆಸುವ
ಬಂಡವಾಳಶಾಹೀ ಪದ್ಧತಿಯಾಗಲೀ, ಅಥವಾ
ಸರಕಾರೀ ವ್ಯವಸ್ಥೆಯ ಅಡಿಯಾಳಾಗಿರುವ
ಸಾಮ್ಯವಾದ ಪದ್ಧತಿಯಾಗಲೀ ಎರಡೂ
ಜೀವವಿರೋಧಿಯಾಗಬಹುದಾಗಿದೆ.
ಅವೆರಡರ ನಡುವಣ ಇಂದಿನ
ಭಾರತೀಯ ಅರ್ಥವ್ಯವಸ್ಥೆಯನ್ನು ಸಮಾಜವಾದ
ಎಂದು ನಾವು ಹೆಸರಿಸಿದ್ದೇವೆ. ಆದರೆ
ಈ ಎರಡೂ ಮಾರ್ಗಗಳೂ
ಸಾಮಾನ್ಯನನ್ನು ದೂರಮಾಡುವ ಸಾಧ್ಯತೆಯನ್ನು
ನಾವು ಕಾಣುತ್ತಿದ್ದೇವೆ. ಈ ಎರಡೂ
ಪ್ರಮುಖ ಚಿಂತನೆಗಳಿಂದ ಭಿನ್ನವಾದ, ಪ್ರತ್ಯೇಕವಾದ ಆರ್ಥಿಕ
ಚಿಂತನೆಯೇ ಸಹಕಾರೀ ಆರ್ಥವ್ಯವಸ್ಥೆ
ಎನ್ನಬಹುದಾಗಿದೆ. ಸಂಪನ್ಮೂಲಗಳು ಬಂಡವಾಳ ಶಾಹಿಗಳ
ಸುಪರ್ದಿನಲ್ಲಿಯಾಗಲೀ, ಅಥವಾ ಪ್ರಭುತ್ವದ
ಹತೋಟಿಯಲ್ಲಾಗಲೀ ಇರದೇ ಜನಸಾಮಾನ್ಯರ
ನಿಯಂತ್ರಣದಲ್ಲೇ ಇರುವ ಆರ್ಥಿಕಪದ್ಧತಿಯೇ ಸಹಕಾರೀ
ಅರ್ಥವ್ಯವಸ್ಥೆ ಎನ್ನಬಹುದಾಗಿದೆ.
ಹಾಗೆಂದು ಸಹಕಾರೀ ವ್ಯವಸ್ಥೆ
ಬಲಿಷ್ಠವಾಗಿ ಬೆಳೆಯುತ್ತಿದೆಯೇ...? ಎಂಬ
ಪ್ರಶ್ನೆ ಕೇಳಿಕೊಂಡರೆ ನಿರಾಶೆಯಾದೀತು.
ಗದಗದಲ್ಲಿ ಇಡೀ ದೇಶದ
ಪ್ರಪ್ರಥಮ ಸಹಕಾರಿ ಸಂಘ ಜನ್ಮಿಸಿದರೂ
ಅಲ್ಲಿಯೇ ನೆಲಕಚ್ಚಿತು. ಉತ್ತರಕನ್ನಡ ಜಿಲ್ಲೆಯಲ್ಲಿ ಉಜ್ವಲವಾಗಿ
ಬೆಳೆಯಿತು.
ಸಹಕಾರಿ
ಪ್ರತಿನಿಧಿಗಳಲ್ಲಿ, ಸಮಾಜ ಪ್ರಜ್ಞೆ,
ಕೃಷಿಪ್ರೀತಿ, ಕೃಷಿಸಂಸ್ಕೃತಿಯ ಬಗೆಗಿನ
ನಿಷ್ಠೆ ಸೇವಾ ಭಾವ,
ಹೋರಾಟ ಪ್ರವೃತ್ತಿ, ಅದರ ಜೊತೆಗೇ ಪ್ರಾಮಾಣಿಕತೆ ಯಂಥ ಗುಣಗಳು
ಅತ್ಯಂತ ಅವಶ್ಯ. ಆದರೆ ಹೆಚ್ಚಿನೆಲ್ಲ
ಸಂದರ್ಭಗಳಲ್ಲಿ, ರಾಜಕಾರಣದ
ಗದ್ದುಗೆಗೆ ಏರುವ ಏಣಿಯಾಗಿ,
ಏರಿದ ಮೇಲೆ ಏಣಿಯನ್ನೇ ಒದೆಯುವಂಥ
ಸ್ಥಿತಿಯುಂಟಾದರೆ, ಸಹಕಾರ ಒಂದು
ಸಾಮಾಜಿಕ ಆರ್ಥಿಕ ಕ್ರಾಂತಿಕಾರಕತೆಯನ್ನು ಪಡೆದುಕೊಳ್ಳದೇ
ಸೋತೀತು. ಇಂಥ ಉದಾಹರಣೆಗಳನ್ನು
ನಾವು ದೇಶದಲ್ಲಿ ಸಾಕಷ್ಟುಬಾರಿ
ಕಂಡಿದ್ದೇವೆ. ಅದರ ದುಷ್ಪ್ರಭಾವವನ್ನು ಉಂಡಿದ್ದೇವೆ.
ಸಾಕಷ್ಟು ಯಶಸ್ವೀ ಸಹಕಾರೀ
ಸಂಘಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ
ಅದರ ಯಶಸ್ಸಿನ
ಆಳದಲ್ಲಿ ಸಾಕಷ್ಟು ನಿಸ್ವಾರ್ಥ ಸಹಕಾರೀ ಸಾಧಕರ ಶ್ರಮ ತ್ಯಾಗ ಹೋರಾಟಗಳನ್ನು
ಕಾಣುತ್ತೇವೆ.
ನಮಗೆ ಭೌತಿಕ ಅಭಿವೃದ್ಧಿ
ಎಷ್ಟು ಅವಶ್ಯವೋ ಆಂತರಿಕ
ವಿಕಾಸವೂ ಅಷ್ಟೇ ಅವಶ್ಯ. ನಮ್ಮ ಅಭಿವೃದ್ಧಿಯ ನಕ್ಷೆಯನ್ನು
ನಾವೇ ಸಿದ್ಧಗೊಳಿಸುವ ಅರ್ಹತೆ
ಸಿದ್ಧಿಸುವುದು, ನಾವು ಸೈದ್ಧಾಂತಿಕವಾಗಿ ವೈಚಾರಿಕವಾಗಿ
ಸಿದ್ಧಗೊಂಡಾಗ ಮಾತ್ರ. ಆಗ ನಮ್ಮ
ಅಭಿವೃದ್ಧಿಗೆ ನಾವೇ ಕಾರಣಕರ್ತರಾಗುತ್ತೇವೆ. ಅದಕ್ಕೆ
ಸರಕಾರ, ಸಹಕಾರ ಎಲ್ಲ
ಕ್ಷೇತ್ರಗಳ ಬೆಂಬಲ
ಅವಶ್ಯವಾಗುತ್ತದೆ. ಅದರಲ್ಲಿಯೂ ಗ್ರಾಮಾಭ್ಯುದಯದ
ವಿಚಾರದಲ್ಲಂತೂ ಸಹಕಾರ ವ್ಯವಸ್ಥೆಯಷ್ಟು
ಅನುಕೂಲವಾದ ವ್ಯವಸ್ಥೆ ಬೇರೊಂದಿಲ್ಲ.
ಏಕೆಂದರೆ ಸಹಕಾರವೆನ್ನುವುದು ಒಂದು
ದೃಷ್ಟಿಯಲ್ಲಿ ವಿಶೇಷವಾದ ಪ್ರಜಾಪ್ರಭುತ್ವವೇ ಆಗಿದೆ.
ಜನರು ತಮ್ಮ ಅವಶ್ಯಕತೆಯನ್ನು ತಾವೇ
ಸಂಘಟಿತರಾಗಿ
ಪೂರೈಸಿಕೊಳ್ಳಬಹುದಾದಂಥ ಶ್ರೇಷ್ಠ ವ್ಯವಸ್ಥೆಯಿದು. ನಮ್ಮ ಗ್ರಾಮಾಂತರಗಳಲ್ಲಿ,
ಅನಾದಿಯಿಂದಲೂ ಪರಸ್ಪರ ಶ್ರಮವಿನಿಮಯ ಪದ್ಧತಿ
ಜಾರಿಯಲ್ಲಿತ್ತು. ಕೃಷಿಕೆಲಸಗಳಲ್ಲಿ, ಕೃಷಿಕರೇ
ಒಂದಾಗಿ, ಸಾಮೂಹಿಕ ಸಹಕಾರದಲ್ಲಿ, ಕೃಷಿ ಕೆಲಸಗಳನ್ನು ಪೂರೈಸಿಕೊಳ್ಳುತ್ತಿದ್ದರು. ಮುಯ್ಯಾಳು
ಎಂದು ಅದಕ್ಕೆ ಹೆಸರಿತ್ತು. ಅದೂ ಪ್ರಸ್ತುತ ಸಹಕಾರೀ ತತ್ವಕ್ಕೆ ಸಂವಾದಿಯಾಗಿದೆ. ಸಹಕಾರ ವ್ಯವಸ್ಥೆಯ ಎಲ್ಲ
ಸಾಧ್ಯತೆಗಳನ್ನು ನಾವಿನ್ನೂ ತಲುಪಿಯೇ ಇಲ್ಲ.
ಸಹಕಾರೀ ಕೃಷಿ, ವ್ಯಾಪಾರ ಕೈಗಾರಿಕೆ,
ಗ್ರಹನಿರ್ಮಾಣ, ಸಾಮಾಜಿಕ ಮೂಲಭೂತ
ಸೌಲಭ್ಯಗಳ ಸೃಷ್ಟಿ ಮುಂತಾದ
ಬದುಕಿನ ಎಲ್ಲ ಆಯಾಮಗಳಿಗೂ
ಯಶಸ್ವೀಯಾಗಿ ಪ್ರವೇಶಿಸಬಹುದಾದಂಥ ಅವಕಾಶಗಳು
ಇಲ್ಲಿ ತೆರೆದೇ ಇದೆ. ಮೊದಲು
ನಾವು ಸಹಕಾರೀ ತತ್ವದಲ್ಲಿ
ನಂಬಿಗೆಯಿಡಬೇಕು. ಪ್ರಾಮಾಣಿಕವಾಗಿ ಆ
ನಿಟ್ಟಿನಲ್ಲಿ ತೊಡಗಿಕೊಳ್ಳ ಬೇಕಷ್ಟೆ.
ಈಗಾಗಲೇ ಸಹಕಾರೀ
ವ್ಯವಸ್ಥೆಯಡಿಯಲ್ಲಿ, ವೈವಿಧ್ಯಮಯವಾದ ಪ್ರಯೋಗಗಳನ್ನು,
ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು, ಅಲ್ಲಲ್ಲಿ
ಯಶಸ್ವೀಯಾಗಿ ಪ್ರಗತಿಸಾಧಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ವಿವಿಧ
ರಾಜ್ಯಗಳ ಹಾಲು ಉತ್ಪಾದಕರ ಸಾಧನೆ,
ಗೊಬ್ಬರ ಕಾರಖಾನೆ, ಸೂಪರ್ ಮಾರ್ಕೆಟ್, ಸಾರ್ವಜನಿಕ
ಸಾರಿಗೆ, ಕಟ್ಟಡ ನಿರ್ಮಾಣ, ಆರೋಗ್ಯ ಕ್ಷೇತ್ರ,
ಬ್ಯಾಂಕಿಂಗ್, ಮುಂತಾದವುಗಳು ಸಾಕಷ್ಟು ಜನಪರವಾಗಿ,ಪಾರದರ್ಶಕವಾಗಿ
ಕಾರ್ಯನಿರ್ವಹಿಸುತ್ತಿರುವುದನ್ನು ಇಲ್ಲಿ
ಉದಹರಿಸಬಹುದಾಗಿದೆ.
ಸ್ಥಳೀಯ ಪ್ರಾಥಮಿಕ ಪತ್ತಿನ
ಸಹಕಾರೀ ಸಂಘಗಳು ತಮ್ಮ ತಮ್ಮ
ಕ್ಷೇತ್ರದಲ್ಲೇ ಕೈಗೊಳ್ಳುವ ಕೃಷಿಕ ಪರ,
ಜನಪರ ಸೇವಾಯೋಜನೆಗಳನ್ನು ಗಮನಕ್ಕೆ
ತಂದುಕೊಂಡರೆ, ನಮ್ಮ ಹತ್ತು
ಹಲವು ಕೃಷಿಬಿಕ್ಕಟ್ಟುಗಳ ನಿವಾರಣೆಗೆ
ಸ್ಪೂರ್ತಿ ದೊರಕಬಹುದಾಗಿದೆ.
ಉದಾಹರಣೆಗೆ
ನಮ್ಮ ಜಿಲ್ಲೆಯ ತ್ಯಾಗಲಿ ಸಹಕಾರಿ ಸಂಘ
ಕಳೆದೊಂದೆರಡು ವರ್ಷಗಳಿಂದ ಅಡಿಕೆ ಕೃಷಿಯಲ್ಲಿ
ಬರಬಹುದಾದ. ಕೃಷಿಕಾರ್ಮಿಕರ ಕೊರತೆಯನ್ನು
ನಿವಾರಿಸಿಕೊಂಡ ಒಂದು ಯಶಸ್ವೀ
ಅಭಿಯಾನವನ್ನು ಇಲ್ಲಿ ಉದಹರಿಸಬಹುದಾಗಿದೆ.
ಅಡಿಕೆ ಮತ್ತು ತೆಂಗು ಕೊಯ್ಲು
ಕೆಲಸಗಾರರ ಕೊರತೆ ಎಲ್ಲೆಡೆಗೂ
ಇದೆ. ಯುವ ಕಾರ್ಮಿಕರು
ದೊರೆಯುತ್ತಿಲ್ಲ. ಅದರಂತೇ ಮಳೆಗಾಲದ
ಔಷಧ ಸಿಂಪರಣೆಗೂ ಅದೇ
ಸಮಸ್ಯೆ. ಅದಕ್ಕೆ ತ್ಯಾಗಲಿ
ಸಹಕಾರೀ ಸಂಘ, ತನ್ನದೇ ಆದ
ಸ್ಥಳೀಯ ಯುವಪಡೆಯೊಂದಕ್ಕೆ ಸೂಕ್ತ
ತರಬೇತಿ, ಮತ್ತು ಆಕರ್ಷಕ
ವೇತನವನ್ನು ನೀಡಿ, ಆಧುನಿಕವಾಗಿ
ಸಂಶೋಧಿತಗೊಂಡ ಫೈಬರ್ ದೋಟಿಯ
ಮೂಲಕ ನೆಲದಿಂದಲೇ ಕೊಯ್ಲು
ಮತ್ತು ಔಷಧಸಿಂಪರಣಾ ಪ್ರಕ್ರಿಯೆಯನ್ನು ಯಶಸ್ವೀಯಾಗಿ
ಮುನ್ನಡೆಸುತ್ತಿದೆ. ಕೃಷಿಕರ ಮೆಚ್ಚುಗೆಗೂ
ಕಾರಣವಾಗಿದೆ. ಸ್ವಂತ ಕೊಯಿಲು, ಮತ್ತು
ಕೊಯ್ಲೋತ್ತರ ಸಂಸ್ಕರಣೆಯಂಥ ಕಾರ್ಯಗಳನ್ನೂ
ನಿರ್ವಹಿಸಲು ಸಾಧ್ಯವಾಗದಂಥ ಕೃಷಿಕರಿಗೆ
ಆ ನಿಟ್ಟಿನಲ್ಲೂ ಸಹಾಯ
ಸಲ್ಲಿಸುತ್ತಿದೆ.
ಇದೇ ಮಾದರಿಯಲ್ಲಿ ಶಿರಸಿ
ಸಿದ್ಧಾಪುರ ತಾಲೂಕಿನ ಇನ್ನೂ
ಹಲವು ಸಂಘಗಳು ಕಾರ್ಯಪ್ರವೃತ್ತವಾಗಿವೆ. ಉತ್ತರ
ಕನ್ನಡ ಜಿಲ್ಲೆಯ ಪ್ರಮುಖ ಚಿಂತಕ, ಲೇಖಕ
ಶ್ರೀ ಗಣೇಶ ಭಟ್
ಉಪ್ಪೋಣಿಯವ ನುಡಿ ಇಲ್ಲಿ
ಪ್ರಸ್ತುತವಾಗಿದೆ.
ʻʻ ಆಹಾರ ಬಟ್ಟೆ
ಶಿಕ್ಷಣ ವಸತಿ ಮತ್ತು ಔಷಧೋಪಚಾರಗಳು ಪ್ರತಿಯೋರ್ವ
ವ್ಯಕ್ತಿಗೂ ಲಭ್ಯವಾಗಬೇಕು.
ಸರ್ಕಾರದ ಅನುದಾನ ಅಥವಾ
ಶ್ರೀಮಂತರ ದಯಾಭಿಕ್ಷೆಯಿಂದ ಜೀವನದ
ಕನಿಷ್ಠ ಸೌಲಭ್ಯಗಳು ಎಲ್ಲರಿಗೂ ಲಭ್ಯವಾಗುವಂತೇ
ಮಾಡುವುದು ಅಪೇಕ್ಷಣೀಯವಲ್ಲ. ಪ್ರತಿಯೋರ್ವ
ವ್ಯಕ್ತಿಯೂ ತನ್ನ ದುಡಿಮೆಯ ಫಲದಿಂದ ತನ್ನ
ಹಾಗೂ ತನ್ನ ಅವಲಂಬಿತರ
ಜೀವನದ ಕನಿಷ್ಠ ಅಗತ್ಯತೆಗಳನ್ನು ಪೂರೈಸಿಕೊಳ್ಳುವ
ಸಾಮರ್ಥ್ಯ ಹೊಂದಿರುವ ವ್ಯವಸ್ಥೆ
ನಿಜಕ್ಕೂ ಆದರ್ಶಮಯ, ಹಾಗೂ ಅಪೇಕ್ಷಣೀಯ.
ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ
ನೀಡುವ ಸಹಕಾರಿ ಅರ್ಥವ್ಯವಸ್ಥೆಯಲ್ಲಿ ಮಾತ್ರ
ಇದು ಕಾರ್ಯಸಾಧ್ಯ.ʼʼ
ಎಂದು ಅಭಿಪ್ರಾಯ ಪಡುವ ಅವರು, ʻʻ ಸಮಗ್ರ
ಭೂ ಬಳಕೆ ನೀತಿ, ಬೆಳೆಸಂಯೋಜನಾ
ಕ್ರಮಗಳು, ಚಿಕ್ಕ ಹಿಡುವಳಿಗಳನ್ನು
ಲಾಭದಾಯಕ ಹಿಡುವಳಿಗಾಗಿ ಪರಿವರ್ತಿಸಲು,
ಬೇಸಾಯದಲ್ಲಿ ಸಹಕಾರ ತತ್ವದ
ಅಳವಡಿಕೆ, ಕೃಷಿಉತ್ಪನ್ನಗಳ ವ್ಯವಸ್ಥಿತ
ಸಂಗ್ರಹಣೆ, ಸಂಸ್ಕರಣೆ, ಮಾರಾಟಗಳನ್ನು
ಸಹಕಾರೀ ವ್ಯವಸ್ಥೆಯಲ್ಲೇ
ಕೈಗೊಳ್ಳುವುದರಿಂದ ಕೃಷಿಗೆ ಕೈಗಾರಿಕೆ
ಸ್ಥಾನಮಾನ ಪಡೆಯಲು ಸಾಧ್ಯ.ʼʼ ಎಂದು ಖಚಿತವಾಗಿ
ನುಡಿಯುತ್ತಾರೆ.
ಸ್ವಾತಂತ್ರ್ಯಾನಂತರದ ನಮ್ಮೆಲ್ಲ ಹಳ್ಳಿಗಳ
ಸ್ಥಿತಿಯನ್ನು ಅವಲೋಕಿಸಿದರೆ, ಆತಂಕ
ಆವರಿಸುತ್ತದೆ. ಅಭಿವೃದ್ಧಿ ಎಂಬ
ಘೋಷಣೆ ಕೇವಲ ಮತದ ಕ್ರೋಢೀಕರಣದ ಮಂತ್ರವಾಗಿ,
ಕೋಟಿ ಕೋಟಿ ಹಣ
ನೀರಿನಂತೇ ಹರಿದರೂ, ಗ್ರಾಮಗಳಿಗೆ
ಸಂಪೂರ್ಣ ತಲುಪದೇ ಮಧ್ಯದಲ್ಲೇ
ಆವಿಯಾಗಿ, ಗ್ರಾಮಗಳೆಲ್ಲ ದುಸ್ಥಿತಿಯಲ್ಲೇ
ಇರುವಂತಾದುದು ಶೋಚನೀಯ ಸಂಗತಿ.
ಸದ್ಯ ನಮ್ಮ ಆಳುವ
ಪದ್ಧತಿಯಲ್ಲಿ, ಪ್ರಾಮಾಣಿಕ ಜನಪ್ರತಿನಿಧಿಯೊಬ್ಬ
ಸಂಪೂರ್ಣ ಜನಪರ ಕ್ರಿಯೆಯಲ್ಲಿ
ತೊಡಗಿಕೊಳ್ಳಲು ಸಾಧ್ಯವಾಗದ ಸ್ಥಿತಿ
ನಿರ್ಮಾಣವಾಗಿದೆ. ರಾಜಕಾರಣದ ಕುರುಕ್ಷೇತ್ರದಲ್ಲಿ ತನ್ನ
ಅಸ್ತಿತ್ವ ಉಳಿಸಿಕೊಳ್ಳಲು, ಸದಾ
ಹೆಣಗಾಡುವ, ಚುನಾವಣಾ ವೆಚ್ಚಕ್ಕಾಗಿ,
ಅಪಮಾರ್ಗಕ್ಕೆ ಪ್ರವೇಶಿಸುವ ಅನಿವಾರ್ಯತೆ,
ನಿರ್ಮಾಣವಾಗಿರುವುದರಿಂದ,
ಅವರಿಂದಲೂ ವಿಶೇಷ ಪ್ರಗತಿಯನ್ನು
ಅಪೇಕ್ಷಿಸುವ ಆಸೆ ಕ್ಷೀಣಿಸುತ್ತಿದೆ.
ಪ್ರತಿ ಪ್ರಜಾಪ್ರಭುತ್ವವೇ ಸಹಕಾರ
ರಂಗವಾದುದರಿಂದ, ಸಾಮಾಜಿಕ ಆರ್ಥಿಕ
ಶೈಕ್ಷಣಿಕ ಮತ್ತು ಕೈಗಾರಿಕಾ
ಕ್ಷೇತ್ರವೆಲ್ಲವನ್ನೂ
ಸಹಕಾರಮಯವಾಗಿ ಪರಿವರ್ತಿಸಬೇಕಾದ ಕಾಲ
ಇದೀಗ ಒದಗಿಬಂದಿದೆ.
ಮೊದಲನೆಯದಾಗಿ ಕೃಷಿಕರಲ್ಲಿ, ಸಹಕಾರ
ಸಾಕ್ಷರತೆ ಜಾಗ್ರತಗೊಳ್ಳಬೇಕು.
ಸಹಕಾರ ಸಂಘಗಳ ಪ್ರತಿನಿಧಿಗಳ
ಆಯ್ಕೆಯಲ್ಲಿ, ಸಾಮಾಜಿಕ ಸಾಂಸ್ಕೃತಿಕ
ಸೇವಾ ಪರಿಜ್ಞಾನವುಳ್ಳ, ಪ್ರಾಮಾಣಿಕ ಯುವ
ವ್ಯಕ್ತಿಗಳನ್ನೇ ಆಯ್ಕೆಮಾಡಬೇಕು.
ಸಹಕಾರೀ ಪ್ರತಿನಿಧಿಗಳಿಗೆ ವ್ಯವಸ್ಥಿತ
ವೈಜ್ಞಾನಿಕ ತರಬೇತಿ ದೊರೆಯುವಂತಾಗಬೇಕು.
ಪ್ರತಿಯೊಂದು
ಸಹಕಾರಿ ಸಂಘಗಳು, ತಮ್ಮ
ವ್ಯಾಪ್ತಿಯ ಕೃಷಿಕರ ಕೃಷಿಕಾರ್ಮಿಕರ,
ಕೃಷಿಕೈಗಾರಿಕೆಗಳ ಸಮಸ್ಯೆಯನ್ನು ಅಧ್ಯಯನಗೈದು,
ಅದಕ್ಕೆ ಪರಿಹಾರೋಪಾಯಗಳನ್ನು
ಕಂಡುಕೊಳ್ಳಲು ಶ್ರಮಿಸಬೇಕು.
ಪ್ರಸ್ತುತದ ತಂತ್ರಜ್ಞಾನದ ಯುಗದಲ್ಲಿ, ವಿದ್ಯುನ್ಮಾನ ಮತ್ತು
ಮಾಹಿತಿ ತಂತ್ರಜ್ಞಾನದ ಎಲ್ಲ ಉಪಯೋಗಗಳನ್ನು
ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು.
ಸ್ವಾರ್ಥ ಭೃಷ್ಟಾಚಾರ,
ಸ್ವಜನಪಕ್ಷಪಾತ, ಪಕ್ಷರಾಜಕೀಯಗಳು, ಸಂಘದಲ್ಲಿ
ನುಸುಳದಂತೇ ಎಚ್ಚರವಹಿಸಬೇಕು.
ಸರಕಾರದ ಅತೀಯಾದ ಹಸ್ತಕ್ಷೇಪಕ್ಕೆ
ಮಿತಿಯೊಡ್ಡಬೇಕು.
ಆಗಾಗ
ಸರ್ವಸದಸ್ಯರ ಮಹಾಸಭೆ ಸಂಘಟಿಸಿ,
ಕೃಷಿಕರ ಸಮಸ್ಯೆ ಸಂಧಿಗ್ಧಗಳನ್ನು
ಅರ್ಥೈಸಿಕೊಂಡು, ಅವುಗಳ ಪರಿಹಾರಕ್ಕಾಗಿ
ಶ್ರಮಿಸಬೇಕು.
ವೈಜ್ಞಾನಿಕ ಕೃಷಿಪದ್ಧತಿಯ ಬಗೆಗೆ
ಅರಿವು ಮೂಡಿಸುವುದರ ಜೊತೆಗೆ,
ವೈಜ್ಞಾನಿಕ ಕೃಷಿ ಸಲಕರಣೆಗಳು
ಕೃಷಿಕರ ಬಳಕೆಗಾಗಿ ಸಂಘದಲ್ಲಿ
ದೊರೆಯುವಂತಾಗಬೇಕು.
ಕೊಯ್ಲು
ಸಿಂಪರಣೆಯಂತ ಪುಟ್ಟ ಸಲಕರಣೆಯಿಂದ,
ವಾಹನ, ಜೆ.ಸಿ.ಬಿ. ಯಂಥ ಬೃಹತ್
ಯಂತ್ರಗಳೂ ಸಹ ಸಾಮೂಹಿಕ
ಉಪಯೋಗಕ್ಕೆ ದೊರೆಯುವಂತಾಗಬೇಕು.
ಇಂಥ ಪ್ರಗತಿಪರ, ಕೃಷಿಕಪರ ಚಟುವಟಿಕೆಗಳು,
ನಮ್ಮ ಕೃಷಿವಲಯದಲ್ಲಿ ಪರಿಣಾಮಕಾರಿಯಾಗಿ, ಪ್ರಾರಂಭಗೊಳ್ಳಲಿ. ಆ
ಮೂಲಕ ನಮ್ಮ ಕುಗ್ರಾಮಗಳೆಲ್ಲ
ಸುಗ್ರಾಮಗಳಾಗಿ, ಪರಿವರ್ತನೆಗೊಂಡೀತು. ಹತಾಶತೆಯಿಂದ
ಮುಕ್ತವಾದ ಸಂತೃಪ್ತ ಬದುಕು
ನಮ್ಮದಾದೀತು.
ಸಂಘ ಶತಮಾನಕ್ಕೆ ಪ್ರವೇಶಿಸುತ್ತಿದೆ. ಇದು
ಸಂಭ್ರಮವೂ ಹೌದು. ಮಹಾರೋಗ, ಮಹಾಮಳೆ, ಮತ್ತು ಮಹಾಯುದ್ಧ್ದದ
ಸಂದಿಗ್ಧವೂ ಹೌದು. ಇದು
ಕನಸು ಕಾಣುತ್ತಲೇ ಕೆಂಡಹಾಯುವ ಕಾಲವಾಗಿ
ಕಾಣುತ್ತಿದೆ. ಹೊಸ ಕಾಲದ
ಹೊಸ ಸವಾಲುಗಳನ್ನೆದುರಿಸುತ್ತ, ಇಡೀ
ಸಮುದಾಯಕ್ಕೆ ಹೊಸ ಚೈತನ್ಯ, ಹೊಸ
ಹರಿವು ನೀಡಬೇಕಾದ ಪರ್ವಕಾಲವೂ
ಹೌದು. ನಾನು ಎಂಬುದೆಲ್ಲ
ನಾವಾಗಿ, ಸಮುದಾಯವೆಲ್ಲ ಒಂದಾಗಿ
ಅರ್ಥಪೂರ್ಣ ಬದುಕು ಕಟ್ಟುವ ಅನುಪಮ
ಒಕ್ಕೂಟವಾಗಿ ವ್ಯ.ಸೇ.ಸಹಕಾರಿ ಸಂಘ
ಬಿಸಲಕೊಪ್ಪ ಬೆಳೆಯಲಿ, ಬೆಳೆದು ಬಾಳಲಿ.
ಬಾಳೆಲ್ಲ ಬಂಗಾರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತಿದ್ದೇನೆ.
ʻʻ ಕೂಡಿ
ಓಡಿ ಕೂಡಾಡಿ ಕೂಡಿ ಅರಿಯೋಣ
ಕೂಡಿ ಕೂಡಿ
ಕೂಡಿ ತಿಂದು ಕೂಡುಂಡು ಕುಣಿದು ದುಡಿಯೋಣ
ಕೂಡಿ ಕೂಡಿ.
ಕೂಡಿ ನಡೆದು ಒಡಗೂಡಿ ಪಡೆದು
ನುಡಿಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣ
ದೇವರೊಲು ಕೂಡಿ ಕೂಡಿ
ಕೂಡಿ.ʼʼ
( ದ.ರಾ.ಬೇಂದ್ರೆ.)
No comments:
Post a Comment