Tuesday, 27 August 2024

ಚಿಂತಕ ಚಳುವಳಿಗಾರ ಚುಟುಕು ಬ್ರಹ್ಮ ʻʻ ದಿನಕರ ದೇಸಾಯಿ. ʼʼ

                         ಅರವಿಂದ  ಶಿಷ್ಯವೃಂದಕೆ  ಪಾಂಡಿಚೇರಿ. / 

                       ನನಗೆ  ಯಾವಾಗಲೂ  ಹರಿಜನರ  ಕೇರಿ

                      ಹೊಲೆಯ ಚಮಗಾರ  ಮಾದಿಗರ  ನಡುಮಧ್ಯೆ/ 

                  ನಿಂತು ದೇವರ  ಜೊತೆಗೆ  ಕಸಗುಡಿಸುತಿದ್ದೆ.   (ದಿನಕರ ದೇಸಾಯಿ )              

 

ʻʻ  ಒಂದೇ ನೆಲ  ಒಂದೇ ಗಾಳಿ  ಆದರೆ  ಮನುಷ್ಯರಲ್ಲೇ  ಅಗಾಧ  ಅಂತರ.  ಕೋಟಿ  ಕೋಟಿ  ಜನತೆ  ವಾಸಿಸಲು  ಯೋಗ್ಯ ಮನೆ, ಹೊಟ್ಟೆ ತುಂಬ  ಆಹಾರ,  ನಿಲ್ಲಲು  ಅವರದೇ  ಆದ  ನೆಲೆಯಿಲ್ಲದೇ  ಆಕ್ರಂದಿಸುವಾಗ, ಅವರಲ್ಲಿ  ದೇಶಪ್ರೇಮ  ಸಂಸ್ಕೃತಿ ಪ್ರೇಮ, ದಂತಹ  ಭಾವವನ್ನು  ನಿರೀಕ್ಷಿಸಲು  ಸಾಧ್ಯವೇ...?  ನಮ್ಮ  ದೇಶದ  ಅಗಾಧ  ತತ್ವಜ್ಞಾನ, ಅಧ್ಯಾತ್ಮ  ವೇದ  ಪುರಾಣಗಳನ್ನು  ಕೇವಲ  ನೆನಪಿಸಿಕೊಳ್ಳುತ್ತ,  ಪಾವನ ಭೂಮಿಯಿದು  ಎಂದು  ಉದ್ಗರಿಸುವುದು  ಅದು  ಎಷ್ಟು  ಕಪಟ...?  ಎಲ್ಲರಿಗೂ  ಆಹಾರ  ವಸತಿ  ಶಿಕ್ಷಣ  ರಕ್ಷಣೆ  ಸಿಕ್ಕಾಗ  ಮಾತ್ರ  ಇಂಥ  ಅಭಿಮಾನಕ್ಕೆ  ಬೆಲೆ.  ನಮ್ಮ  ಭೂತವನ್ನು  ಕೀರ್ತಿಸಿಕೊಳ್ಳುತ್ತ,  ಆದಿವಾಸಿ, ಹಿಂದುಳಿದ , ಅಸ್ಪ್ರಶ್ಯ  ಜನಕೋಟಿಯ  ಬಗೆಗೆ  ನಿರ್ಲಕ್ಷರಾಗಿರುವುದು  ಮಾನವೀಯ  ಮೌಲ್ಯಕ್ಕೇ  ನಾಗರಿಕರು  ಮಾಡುವ  ದ್ರೋಹʼʼ

       ಹೀಗೆಂದು ೧೯೪೫  ರಲ್ಲೇ ವಿಷಾದಪೂರ್ಣವಾಗಿ  ನುಡಿದವರು  ಕನ್ನಡದ   ಮೊಟ್ಟಮೊದಲ  ಬಂಡಾಯ  ಲೇಖಕ ದಿನಕರ ದೇಸಾಯಿ.

    ದಿನಕರ  ದೇಸಾಯಿ  ಎಂಬ  ಹೆಸರೆತ್ತಿದರೆ  ಸಾಕು,  ವಯೋ  ಪರಿಭೇದವಿಲ್ಲದೇ ʻʻ ಚುಟುಕು  ಕವಿʼʼ ಎಂದು  ಪ್ರತಿಕ್ರಿಯಿಸುವ  ಕನ್ನಡಿಗರಿಗೆ,  ಅವರ  ವೈವಿಧ್ಯಪೂರ್ಣ  ಬದುಕಿನ  ಅಸಾಮಾನ್ಯ  ಸಾಮಾಜಿಕ  ಚಳುವಳಿಯ  ರೋಚಕ  ಇತಿಹಾಸ  ಒಂದಿನಿತೂ  ಅರಿವಿಲ್ಲದಿರುವುದು,  ವಿಷಾದದ  ಸಂಗತಿ.

    ಇದು  ಕನ್ನಡದ  ತಿಂಗಳು.  ಕಾರ್ತೀಕ  ಮಾಸ.  ಅಂದರೆ  ಕನ್ನಡ  ಕಾರ್ತಿಕ.  ನಮ್ಮ  ನುಡಿಯ  ಉಳಿವಿಗಾಗಿ,  ಕನ್ನಡ  ನಾಡಿನ  ಒಕ್ಕೂಟಕ್ಕಾಗಿ,  ಇದೇ  ಮಣ್ಣಲ್ಲಿ  ಹುಟ್ಟಿಯೂ  ನೆಲೆಯಿಲ್ಲದೇ  ಅಂತರ್‌  ಪಿಶಾಚಿಗಳಾಗಿ  ಅಲೆದಾಡುತ್ತಿದ್ದ   ಅಸಂಖ್ಯ  ಜನಜಾತಿಗಳ   ಜಾಗ್ರತಿಗಾಗಿ  ಜೀವನವನ್ನೇ  ಮೀಸಲಿಟ್ಟ,  ಹತ್ತು  ಹಲವು  ಮಹನೀಯರುಗಳನ್ನು  ಸ್ಮರಿಸಿಕೊಳ್ಳುವ,  ಮತ್ತು  ಅವರ  ಧ್ಯೇಯೋದ್ದೇಶಗಳನ್ನು  ನಮ್ಮ  ವ್ಯಕ್ತಿತ್ವಕ್ಕೆ  ಆವಾಹಿಸಿ  ಕೊಳ್ಳಬೇಕಾದ   ಮಹತ್ವಪೂರ್ಣ  ದಿನ  ಇದು  ಎಂದು  ತಿಳಿದಿದ್ದೇನೆ.   ನಮ್ಮ  ಮನಸ್ಸುಗಳಿಗೆ  ಅದೆಷ್ಟು  ವಿಸ್ಮೃತಿ  ಆವರಿಸುತ್ತದೆಯೆಂದರೆ   ಕೇವಲ  ವರ್ತಮಾನದ   ಕ್ಷಣಿಕ ಏರಿಳಿವಿನ  ಬದುಕನ್ನೇ  ಅಪ್ಪಿಕೊಂಡು,  ದಿನಪತ್ರಿಕೆಯ  ತುಂಡುಸುದ್ದಿಯನ್ನೊಂದೇ  ಓದುತ್ತ,  ನಮ್ಮ  ಬೆನ್ನಹಿಂದಿನ  ಅಗಾಧ  ಚರಿತ್ರೆಯನ್ನೇ  ಮರೆತುಬಿಡುತ್ತೇವೆ.  ಇಂದು  ನಮ್ಮ ಸುಗಮ ಬದುಕಿಗೆ  ಅನುಕೂಲವಾಗುವಂತಹ  ಅಸಂಖ್ಯ  ಸೌಲಭ್ಯ  ಸವಲತ್ತುಗಳಿಗೆಲ್ಲ  ಅದೆಷ್ಟು  ಮನಸ್ಸುಗಳು,  ತಮ್ಮ  ವೈಯಕ್ತಿಕ  ಬದುಕನ್ನೇ  ಮರೆತು  ಶ್ರಮಿಸಿದ್ದಾರೆಂಬ  ಕನಿಷ್ಟ  ನೆನಹೂ  ಇಲ್ಲದೇ  ದಿನಕಳೆಯುತ್ತಿರುವ  ನಮ್ಮ  ಬಗೆಗೇ  ನಮಗೆ  ಜಿಗುಪ್ಸೆಯುಂಟಾಗುತ್ತದೆ.  ದೇಶದ  ದಾಸ್ಯವಿಮೋಚನೆಗಾಗಿ  ಪ್ರಾಣವನ್ನೇ  ತ್ಯಾಗಗೈದ  ಅಮೂಲ್ಯ  ವ್ಯಕ್ತಿತ್ವಗಳಾಗಲೀ,  ನಮ್ಮ  ಸುತ್ತಲಿನ  ಸಮುದಾಯದ  ನಡುವೆ  ಬೇರುಬಿಟ್ಟ  ಜೀವವಿರೋಧೀ, ಜೀವನವಿರೋಧೀ  ಶಕ್ತಿಗಳ  ವಿರುದ್ಧ   ಸಂಸಾರದ  ಹಂಗುತೊರೆದು  ಹೋರಾಟಗೈದ   ಅದೆಷ್ಟೋ  ಅಪ್ರತಿಮ ವ್ಯಕ್ತಿಗಳನ್ನೇ  ಆಗಲೀ,  ಚರಿತ್ರೆಯ  ಗೋದಾಮಿನ  ಕತ್ತಲೆ  ಮೂಲೆಯಲ್ಲಿ  ಒತ್ತಿ,  ಬದುಕುವುದಿದೆಯಲ್ಲ,  ಅದರಂತಹ  ಅಪಚಾರ  ಬೇರೊಂದಿಲ್ಲ.   ಕನಿಷ್ಟ  ಅವರ  ಸ್ಮರಣೆಯಾದರೂ  ನಮ್ಮಲ್ಲಿ  ಜೀವಂತವಾಗಿದ್ದರೆ  ಅಷ್ಟರ  ಮಟ್ಟಿಗೆ  ನಮ್ಮೊಳಗೆ  ಮಾನವೀಯ  ಮೌಲ್ಯ  ಉಸಿರಾಡುತ್ತಿದೆಯೆಂದರ್ಥ.

    ಅದಕ್ಕೊಂದು  ಸಮರ್ಥ  ಉದಾಹರಣೆ   ಈಗಲೂ  ನಮಗೆ  ತಮ್ಮ  ಸಾವಿರ  ಸಾವಿರ  ಚುಟುಕುಗಳ  ಮೂಲಕ   ಚುಚ್ಚುವ  ಬೆಚ್ಚಿಬೀಳಿಸುವ,  ಎಚ್ಚರದ  ಆಯಾಮಕ್ಕೆ  ಕರೆತರುವ  ಕನ್ನಡದ  ಅಭಿನವ  ಸರ್ವಜ್ಞ, ಚುಟುಕು  ಬ್ರಹ್ಮ, ಕವಿ  ದಿನಕರ  ದೇಸಾಯಿಯವರು. 

        ೧೯೦೯  ರಲ್ಲಿಯೇ  ಉತ್ತರಕನ್ನಡ  ಜಿಲ್ಲೆಯ  ಪುಟ್ಟ  ಹಳ್ಳಿ  ಅಲಗೇರಿಯ  ಜಮೀನುದಾರಿ  ಸಾಂಪ್ರದಾಯಿಕ ಮನೆತನದಲ್ಲಿ  ಜನಿಸಿದ  ದೇಸಾಯಿ,ಯವರ  ಪ್ರಾಥಮಿಕ  ಪ್ರೌಢ  ಶಿಕ್ಷಣ  ತಾಲೂಕು  ಸ್ಥಳ  ಅಂಕೋಲೆಯಲ್ಲಾದರೆ,  ಕಾಲೇಜು  ಶಿಕ್ಷಣ  ಬೆಂಗಳೂರು,  ಮೈಸೂರುಗಳಲ್ಲಿ  ಮುಂದುವರೆಯುತ್ತದೆ.  ಮೈಸೂರಿನಲ್ಲಿ  ವಿದ್ಯಾರ್ಥಿಯಾದಾಗಲೇ   ಕನ್ನಡದ  ಕಣ್ವ  ಬಿ,ಎಂ, ಶ್ರೀಕಂಠಯ್ಯನವರ  ಪ್ರಿಯಶಿಷ್ಯರಾಗುತ್ತಾರೆ. ಅವರೊಂದಿಗೆ  ತಿ.ನಂ. ಶ್ರೀಕಂಠಯ್ಯ, ವಿ,ಸೀತಾರಾಮಯ್ಯ  ಮುಂತಾದ  ಮೇರುವ್ಯಕ್ತಿತ್ವಗಳ  ಪ್ರಭಾವಲಯದಲ್ಲಿ  ವೈಚಾರಿಕತೆ,  ದಾರ್ಶನಿಕತೆ,  ಸತ್ವವನ್ನು  ಮೈಗೂಡಿಸಿಕೊಂಡು,  ಸಾಹಿತ್ಯ  ಸಂಸ್ಕೃತಿ,  ಮತ್ತು  ಕನ್ನಡದ  ಭವ್ಯ ಚರಿತ್ರೆಯ  ಉಪಾಸಕರಾಗಿ  ರೂಪುಗೊಳ್ಳುತ್ತಾರೆ.  ಮುಂದೆ  ಮುಂಬೈ  ವಿಶ್ವವಿದ್ಯಾಲಯದಲ್ಲಿ  ನ್ಯಾಯಶಾಸ್ತ್ರ  ಅಧ್ಯಯನಗೈದು, ಸುವರ್ಣಪದಕ  ವಿಜೇತರಾಗುತ್ತಾರೆ.

      ದೇಸಾಯಿ  ಮೂಲಭೂತವಾಗಿ  ಸಮಾಜ ನಿಷ್ಠ  ಹೋರಾಟಗಾರರು.  ರೈತರ,  ಹಿಂದುಳಿದವರ, ಶೋಷಿತರ  ಕಾರ್ಮಿಕರ  ಶೋಚನೀಯ  ಬದುಕಿಗೆ  ಹೊಸ ಹರಿವು,  ಹೊಸ ಬೆಳಕ  ನೀಡಲು  ಬದುಕಿಡೀ  ಶ್ರಮಿಸಿದವರು. ಅವರ  ಕಾರ್ಯಕ್ಷೇತ್ರ  ಕೇವಲ  ಒಂದು  ಜಿಲ್ಲೆಯಲ್ಲ,  ಕರ್ನಾಟಕ  ಮಹಾರಾಷ್ಟ್ರ  ಬಂಗಾಲ ರಾಜ್ಯಗಳ  ವ್ಯಾಪ್ತಿಯಲ್ಲಿ  ಚಟುವಟಿಕೆ  ವ್ಯಾಪಿಸಿತ್ತು.   ದೇಶದಲ್ಲೇ  ಅತಿ  ಹೆಚ್ಚು  ಕೃಷಿಕ್ಷೇತ್ರ   ಅತೀ  ಕಡಿಮೆ  ಭೂಮಾಲಕರ  ಕೈಯಲ್ಲಿ  ಸಿಲುಕಿ,  ಗೇಣೀದಾರರ  ಅವ್ಯಾಹತ  ಶೋಷಣೆ  ಜರುಗುತ್ತಿದ್ದ  ಉತ್ತರಕನ್ನಡ  ಜಿಲ್ಲೆಯ,    ಸಂಕಟವನ್ನು  ಪರಿಹರಿಸಲೆಂದೇ  ಮೂವತ್ತು  ವರ್ಷಗಳ  ಕಾಲ  ಅವ್ಯಾಹತವಾಗಿ  ಶ್ರಮಿಸಿದ  ಅಪರೂಪದ  ವ್ಯಕ್ತಿ  ಇವರು.  ರೈತ  ಹೋರಾಟದ  ಕಾರಣದಿಂದಲೇ  ಆಂಗ್ಲ  ಸರಕಾರ  ನಲ್ವತ್ತರ  ದಶಕದಲ್ಲಿ,  ದೇಸಾಯಿಯವರಿಗೆ  ಐದು  ವರ್ಷಗಳಕಾಲ  ಜಿಲ್ಲೆಯಿಂದ  ಗಡಿಪಾರು  ಶಿಕ್ಷೆಗೆ  ಗುರಿಯಾಗಿಸುತ್ತದೆ.

   ಅವರ  ಗಂಭೀರ  ಕಾರ್ಯಕ್ಷೇತ್ರ   ಮುಂಬಯಿಯೂ  ಆಗಿತ್ತು.  ಅವರು  ಅಲ್ಲಿ  ಸಂಘಟಿಸಿದ  ಹಡಗು  ಕಾರ್ಮಿಕರ  ಸಂಘಟನೆ,  ಅದರ  ಹತ್ತು  ಸಾವಿರ  ಸದಸ್ಯರು, ಮತ್ತು  ಅವರ ಏಳ್ಗೆಗಾಗಿ  ನಡೆಸಿದ  ಹೋರಾಟ  ಇಂದಿಗೂ  ದೇಶಮಟ್ಟದ  ಅದ್ಭುತ  ದಾಖಲೆಯಾಗಿ  ಉಳಿದಿದೆ.   

   ೧೯೪೫ ರಲ್ಲಿ  ಭಾರತ  ಸರ್ಕಾರದ  ಪ್ರತಿನಿಧಿಯಾಗಿ,   ಡೆನ್ಮಾರ್ಕ  ದೇಶಕ್ಕೆ   ವಿಶ್ವಕಾರ್ಮಿಕ  ಸಮ್ಮೇಳನದ  ಪ್ರಮುಖ  ಸಂಪನ್ಮೂಲ  ವ್ಯಕ್ತಿಯಾಗಿ  ಭೇಟಿನೀಡುತ್ತಾರೆ.  ಸಮ್ಮೇಳನದಲ್ಲಿ  ಅಂದು  ಅವರು  ನೀಡಿದ  ಭಾಷಣ, ಇಂದಿಗೂ  ಒಂದು  ಸರ್ವಶ್ರೇಷ್ಠ  ದಾಖಲೆಯಾಗಿ  ಉಳಿದಿದೆ.

   ಅದೇವರ್ಷ  ಇಂಗ್ಲೆಂಡಿಗೂ  ಭೇಟಿನೀಡಿ,  ಅಲ್ಲಿಯ  ಭಾರತೀಯ  ಸಾವಿರಾರು ಹಡಗು  ಕಾರ್ಮಿಕರ  ದಯನೀಯ ಸ್ಥಿತಿಯನ್ನು  ಕಂಡು,  ಬ್ರಿಟಿಶ್‌  ಸರಕಾರದೊಂದಿಗೆ  ಜಗಳವನ್ನೇ ಕಾದು,  ಕಾರ್ಮಿಕರಿಗೆ  ನ್ಯಾಯ  ಕೊಡಿಸಿದ   ಪ್ರಸಂಗ  ರೋಮಾಂಚನಕಾರಿಯಾಗಿದೆ.  ಅದೊಂದು  ನಲವತ್ತು  ದಿನಗಳ  ಯಾತನಾಮಯ  ಹೋರಾಟವಾಗಿತ್ತು.   ಭಾರತೀಯ  ಕಾರ್ಮಿಕರ  ಬದುಕಿನ  ಸಂಕಷ್ಟಗಳ  ವಿವರಗಳನ್ನೊಳಗೊಂಡ  ಮೂರ್ನಾಲ್ಕು  ಇಂಗ್ಲಿಶ್‌  ಕೃತಿಗಳು  ದಾಖಲೆ  ನಿರ್ಮಿಸಿವೆ.

   ಮಹಾತ್ಮಾ ಗಾಂಧಿಯವರ  ಗುರುವಾದ  ಗೋಪಾಲಕೃಷ್ಣ  ಗೋಖಲೆ  ಸ್ಥಾಪಿಸಿದ್ದ,  ʻʻಭಾರತ  ಸೇವಕ  ಸಮಾಜʼʼ  ಸಂಸ್ಥೆಯ  ಪ್ರಮುಖ  ಸದಸ್ಯರಾಗಿದ್ದ  ದೇಸಾಯಿಯವರು,    ಸಂಸ್ಥೆಯ  ಮೂಲಭೂತ  ಧ್ಯೇಯವಾದ,  ಸರಳತೆ,  ಸಾಮಾನ್ಯತೆ,  ಸಂಕಷ್ಟದಲ್ಲಿರುವ  ಜನಾಂಗದ ಬಗೆಗೆ  ಸೇವಾನಿಷ್ಠತೆ, ಯಂಥ  ನಿಯಮಗಳಿಗೆ  ಬದ್ಧರಾಗಿ  ಬದುಕನ್ನು  ವ್ಯಯಿಸಿದವರು.

    ನಲ್ವತ್ತರ  ದಶಕದಲ್ಲಿ  ಬಂಗಾಲ  ರಾಜ್ಯ  ಎಂದೂ  ಕೇಳರಿಯದ  ಬರಗಾಲಕ್ಕೆ  ತುತ್ತಾಯಿತು. ಲಕ್ಷ  ಲಕ್ಷ  ಜನ  ಉಪವಾಸದಿಂದ  ನರಳಿ  ಸತ್ತರು.  ಅಂಥ  ದುರ್ಭರ  ಪರಿಸ್ಥಿತಿಯಲ್ಲಿ,  ಬರಪರಿಹಾರ  ಸೇವಕರಾಗಿ  ಅವರು  ಸಲ್ಲಿಸಿದ  ಸೇವೆ  ಅವಿಸ್ಮರಣೀಯವಾಗಿದೆ.  ಇಂದೂ  ಬಂಗಾಲದ  ಕೆಲವು  ಮನೆಗಳಲ್ಲಿ  ದಿ.ದೇಸಾಯಿಯವರ  ಚಿತ್ರವಿದೆಯಂತೆ.  ಅದರಂತೇ  ವಿಜಾಪುರ ಜಿಲ್ಲೆಯ  ಬರಗಾಲದ  ಸಂದರ್ಭದಲ್ಲಿ  ಸಹ  ದೇಸಾಯಿಯವರು,  ಮುಂಬಯಿ,  ಬೆಂಗಳೂರುಗಳಿಂದ  ಹಣಸಂಗ್ರಹಿಸಿ,  ಪೀಡಿತ  ಜನರಿಗೆ  ಆಹಾರ  ನೀರನ್ನೊದಗಿಸಿದ್ದು, ಸದಾ  ಸ್ಮರಣೀಯವಾದುದಾಗಿದೆ. 

    ೧೯೬೭ ರಲ್ಲಿ  ಒಂದು  ಬಾರಿ ಸಂಸತ್‌  ಸದಸ್ಯರಾಗಿ  ಆಯ್ಕೆಯಾಗುತ್ತಾರೆ.  ಸಂಸತ್ತಿನಲ್ಲಿ  ಅವರು  ಮಾಡಿದ  ಹತ್ತು  ಹಲವು  ಭಾಷಣಗಳು  ಇಂದಿಗೂ  ಮಾದರಿಯಾಗಿ  ಬೆಳಗುತ್ತಿದೆ.  ಅವರನ್ನು  ಮೆಚ್ಚಿ  ಆದರಿಸಿದ  ನಾಯಕರುಗಳಲ್ಲಿ,  ಇಂದಿರಾ  ಗಾಂಧಿ,  ವಾಜಪೇಯಿ,  ರಾಮ ಮನೋಹರ  ಲೋಹಿಯಾ  ರವರೂ ಸೇರಿದ್ದಾರೆ.

     ೧೯೩೫  ರಲ್ಲಿ  ದಿನಕರರ  ನೇತ್ರತ್ವದಲ್ಲಿ ಉತ್ತರಕನ್ನಡ  ಜಿಲ್ಲೆಯಲ್ಲಿ ಸಂಘಟಿತ  ಗೊಂಡ,  ರೈತ  ಗೇಣೀದಾರರ  ಹೋರಾಟ   ಇಡೀ  ದೇಶಕ್ಕೆ  ಮಾದರಿಯಾಗಿದೆ.  ಕರ್ನಾಟಕ ರಾಜ್ಯದ  ಮೊದಲ ರೈತ ಚಳುವಳಿಯಾಗಿ  ಇತಿಹಾಸ  ನಿರ್ಮಿಸಿದೆ.  ಉಳುವವನೇ  ಹೊಲದೊಡೆಯ  ಎಂಬ  ಘೋಷಣೆ  ಇಡೀ  ರಾಜ್ಯದಲ್ಲಿ  ಮೊಳಗಿತು.  ರೈತ ಚಳುವಳಿ  ಬೃಹತ್ತಾಗಿ  ಬೆಳೆಯಿತು.ಮುಖ್ಯ ಮಂತ್ರಿ  ದೇವರಾಜ  ಅರಸರ  ಆಡಳಿತ  ಕಾಲದಲ್ಲಿ  ಯಶಸ್ವೀಯಾಗಿ, ಭೂ  ಸುಧಾರಣಾ  ಕಾನೂನು  ಜಾರಿಗೆ  ಬಂದಿತು. ಈ  ಕಾನೂನು  ಜಾರಿಗೆ  ಬರುವ  ಹಿನ್ನೆಲೆಯಲ್ಲಿ,  ದೇವರಾಜ  ಅರಸರು  ದೇಸಾಯರ  ಅನುಭವದ  ಸಹಾಯ ಪಡೆದರ;ಲ್ಲದೇ   ಮಂತ್ರಿಸ್ಥಾನ  ನೀಡಲು  ಆಹ್ವಾನಿಸಿದ್ದರು.  ಆದರೆ  ದೇಸಾಯಿಯವರು  ಮಂತ್ರಿಪದವಿಯನ್ನು  ನಿರಾಕರಿಸಿದರು.

    ದೇಸಾಯಿಯವರ  ವ್ಯಕ್ತಿತ್ವಕ್ಕೆ  ಹತ್ತು  ಹಲವು  ಆಯಾಮಗಳಿವೆ.  ಅವರು  ಇಂದು  ಕೇವಲ  ಚುಟುಕು  ಕವಿಯಾಗಿ  ಮಾತ್ರ  ಜನಮಾನಸದಲ್ಲಿ  ನೆಲೆಸಿರುವುದು  ಅವರ  ವ್ಯಕ್ತಿತ್ವಕ್ಕೆ  ಮಿತಿ ನೀಡಿದಂತೆ.  ಅವರ  ಎಪ್ಪತ್ತೆರಡು  ವರ್ಷಗಳ  ಜೀವಿತದಲ್ಲಿ  ಹತ್ತು  ಸಾವಿರ  ಚುಟುಕು  ಸೃಷ್ಟಿಸಿದ್ದಾರೆ.  ಅಭಿನವ  ಸರ್ವಜ್ಞ, ಚುಟುಕು  ಬ್ರಹ್ಮ, ಮುಂತಾದ  ಹಲವು  ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.  ಕನ್ನಡ  ಸಾಹಿತ್ಯಕ್ಕೆ  ಇಷ್ಟು ಬ್ರಹತ್‌  ಪ್ರಮಾಣದ  ಮುಕ್ತಕಗಳನ್ನು  ನೀಡಿ, ಅದರ ಪ್ರಭಾವದಲ್ಲಿ  ನೂರಾರು  ಚುಟುಕು  ಕವಿಗಳನ್ನು  ಸೃಷ್ಟಿಸಿದ  ಅನುಪಮ  ಕವಿ  ಅವರು.  ಇದೀಗ  ರಾಜ್ಯಮಟ್ಟದಲ್ಲಿ  ಚುಟುಕು  ಸಾಹಿತ್ಯ ಪರಿಷತ್‌  ಎಂಬ  ಸಂಸ್ಥೆಯೇ  ಹುಟ್ಟಿ  ಬೆಳೆಯುತ್ತಿದೆ.  ನಿಜಕ್ಕೂ    ಸಂಸ್ಥೆಯ  ಹೆಸರು  ದಿನಕರ  ಸಾಹಿತ್ಯ  ಪರಿಷತ್‌  ಎಂದು  ಹೆಸರಿಸಿದ್ದರೆ,  ದೇಸಾಯರಿಗೆ  ನಿಜಕ್ಕೂ  ಗೌರವ ಸಲ್ಲಿಸಿದಂತಾಗುತ್ತಿತ್ತು.  ಆದರೆ  ಅವರು  ಕೇವಲ  ಚುಟುಕು  ಕವಿಯಾಗಿರಲಿಲ್ಲ.  ನೂರಾರು  ಗಂಭೀರ  ಕವಿತೆಗಳನ್ನು  ಸೃಷ್ಟಿಸಿದ್ದರು. ʻʻ ನನ್ನ ದೇಹದ ಬೂದಿ  ಗಾಳಿಯಲಿ  ತೂರಿಬಿಡಿʼʼ  ಕನ್ನಡ  ಕಾವ್ಯದ  ಕಣಜದಲ್ಲಿ  ರತ್ನವಾಗಿ  ಮಿಂಚುತ್ತಿದೆ. ʻʻ ಗಂಟೆಯ ನೆಂಟನೆ    ಗಡಿಯಾರ,ʼʼ   ʻಬೆಕ್ಕೆ  ಬೆಕ್ಕೇ  ಮುದ್ದಿನ  ಸೊಕ್ಕೆʼ,  ʻʻತಿಪ್ಪಾಭಟ್ಟರು  ನೇಗಿಲ  ಹಿಡಿದರು,ʼʼ   ಮುಂತಾದ    ಮಕ್ಕಳಿಗಾಗಿ  ಬರೆದ,  ಹಿರಿಯರನ್ನೂ  ಆಕರ್ಷಿಸಿದ  ನೂರಾರು ಕವನಗಳು,  ಅಜರಾಮರವಾಗಿ  ಉಳಿಯುತ್ತವೆ.

    ಅವರು  ಗೈದ  ಶಿಕ್ಷಣ ಕ್ರಾಂತಿ  ಇಡೀ  ದಕ್ಷಿಣ  ಭಾರತದಲ್ಲಿ  ಪ್ರಸಿದ್ಧವಾಯಿತು.  ತನ್ನ  ಮಾತೃಜಿಲ್ಲೆಯ  ಅನಕ್ಷರತೆಯನ್ನು  ನಾಶಗೈಯ್ಯಲು,  ಸರಿ ಸುಮಾರು  ನಲ್ವತ್ತು  ಶಿಕ್ಷಣ ಸಂಸ್ಥೆಗಳನ್ನು  ಹುಟ್ಟುಹಾಕುತ್ತಾರೆ. ಅವೆಲ್ಲ  ಇಂದಿಗೂ  ಮಾದರಿಯಾದ  ಶಿಕ್ಷಣಸೇವೆ ಗೈಯ್ಯುತ್ತಿವೆ.

   ಅವರು ಇಂಗ್ಲಿಶ್‌ ಭಾಷೆಯಲ್ಲಿ  ಬರೆದ  ಕನ್ನಡನಾಡಿನ  ಸಂಶೋಧಿತ  ಚಾರಿತ್ರಿಕ  ಗ್ರಂಥ  ʻʻ ಕಲ್ಯಾಣ ಚಾಲುಕ್ಯರ  ಕಾಲದ  ಮಹಾ  ಮಾಂಡಲೀಕರುʼʼ  ಕೃತಿಗೆ  ಮುಂಬಯಿ  ವಿಶ್ವವಿದ್ಯಾಲಯ  ಸುವರ್ಣಪದಕ ನೀಡಿ  ಗೌರಿವಿಸುತ್ತದೆ.  ಐವತ್ತರ  ದಶಕದಲ್ಲೇ  ʻʻಜನಸೇವಕʼʼ  ಪತ್ರಿಕೆಯನ್ನು  ಉತ್ತರಕನ್ನಡ ದಲ್ಲಿ  ಪ್ರಾರಂಭಿಸಿ, ರಾಜ್ಯದೆತ್ತರದಲ್ಲಿ  ಪ್ರಸಿದ್ಧಿ  ಪಡೆಯುತ್ತಾರೆ.  ಅವರು  ಬರೆದ  ಸಾವಿರಕ್ಕೂ  ಮಿಕ್ಕ  ವೈಚಾರಿಕ  ಸಾಂಸ್ಕೃತಿಕ, ರಾಜಕೀಯ  ಸಂಪಾದಕೀಯಗಳು, ರಾಜ್ಯ ರಾಷ್ಟ್ರಗಳ  ವಿವಿಧ  ಭಾಷಾಪತ್ರಿಕೆಗಳಲ್ಲಿ  ಪುನಃ  ಮುದ್ರಣಗೊಳ್ಳುತ್ತವೆ.

   ಒಬ್ಬ  ಸಮಾಜಸುಧಾರಕರಾಗಿ,  ಚಳುವಳಿಯ  ಸಂಘಟಕರಾಗಿ, ಶಿಕ್ಷಣ ತಜ್ಞರಾಗಿ,  ರಾಜಕಾರಣಿಯಾಗಿ  ಬದುಕಿಡೀ  ಚಲನಶೀಲರಾಗಿ  ಜನರ  ನಡುವೆ  ಜೀವಿಸಿದರೂ,  ತಮ್ಮೊಳಗಿನ  ಕವಿಯನ್ನು, ಕಾವ್ಯಸಂವೇದನೆಯನ್ನು  ಜೀವಂತವಾಗಿರಿಸಿಕೊಂಡ   ನಮ್ಮ ದೇಶದ  ಅಪರೂಪದ  ಅಸಾಮಾನ್ಯ  ಸಾಧಕರಾಗಿ  ಬದುಕಿ  ಬಾಳಿದ  ದಿನಕರರು  ಗತಿಸಿ  ಮೂರು  ದಶಕಗಳೇ  ಉರುಳಿಹೋದವು.  ಕೇವಲವ್ಯಕ್ತಿಯಾಗಿ  ಬಾಳಿ  ಗತಿಸಿದವರಲ್ಲ  ಅವರು.  ಬದುಕಿಗೆ  ಶ್ರೇಷ್ಠ  ಜೀವನ ಮೌಲ್ಯನೀಡಿ,  ಅವರೇ  ಒಂದು  ಮೌಲ್ಯವಾಗಿ  ನಮ್ಮ ನಡುವೆ  ಜೀವಂತವಾಗಿದ್ದಾರೆ. 

   ಪ್ರಸ್ತುತದ  ಕ್ರೂರ  ವರ್ತಮಾನದಲ್ಲಿ,  ರಾಜಕಾರಣ, ಸಾಮಾನ್ಯ ಜನಜೀವನ, ಶಿಕ್ಷಣ,  ಧರ್ಮ, ನ್ಯಾಯ  ಎಲ್ಲವೂ  ಭೃಷ್ಟ ಗೊಂಡಿರುವಾಗ,  ದಿನಕರದೇಸಾಯಿಯವರ  ತಾತ್ವಿಕ ಬದುಕು  ಮತ್ತು  ಬರಹಗಳು, ನಮ್ಮನ್ನು  ಎಚ್ಚರಿಸುವ  ಗಂಟೆಯಾಗಬಹುದಾಗಿದೆ.

                                               

   ಗೆದ್ದರೂ  ಕೊಡಬೇಕು  ಸೋತರೂ  ಕೂಡ / ಎಂದೆಂದಿಗೂ  ಇವರ  ಸಹವಾಸ  ಬೇಡ.

   ಕಲಹದಿಂದಲೇ ತುಂಬುವುದು  ಇವರ  ಚೀಲ / ಇವನಾರು  ಗೊತ್ತುಂಟೇ ? ಇವನು ವಕೀಲ.

                                                

 ಕಾಣೆಯಾದಳು  ಹುಡುಗಿ ! ಗೊತ್ತುಂಟೇ  ನಿಮಗೆ ? / ಮಂತ್ರಿಗಳ  ಮನೆಯೊಳಗೆ ಸಿಕ್ಕಿದಳು  ಕೊನೆಗೆ.

  ಖ್ಯಾತಿಯಲಿ  ಮಂತ್ರಿಪದ  ಕಳೆದು ಕೊಂಡ /  ಇತಿಹಾಸ ಪುಟದೊಳಗೆ  ಇದು ಒಂದು  ಕೆಂಡ.

                                                 

ಅಪ್ರತಿಮವಾದದ್ದು  ಈ ಲೋಕಶಾಹಿ /  ಮತ್ತಷ್ಟು  ಅಗಲವಾಗಿದೆ  ಇವರ  ಬಾಯಿ.

ಸರಕಾರಿ  ಪೇದೆಗಳಿಗೂ  ಬಂತು  ಪುಕ್ಕ / ಕೊಡಬೇಕು ಅವರವರ  ಯೋಗ್ಯತೆಗೆ  ತಕ್ಕ.

                                                   

ಅರಸುಗಳು  ಮಣ್ಣು  ಮುಕ್ಕಿದರು  ಅಲ್ಲಲ್ಲಿ / ಇದ್ದ  ಅರಸರಿಗಿಲ್ಲ  ಕಿಮ್ಮತ್ತು  ಬಿಲ್ಲಿ.

ಅರಸುಗಳ  ಬದಲಾಗಿ  ಮಂತ್ರಿಗಳು  ಬಂದು / ರಾಜ್ಯವಾಳಿದರು  ಸಖಿ  ಬೇಕಷ್ಟು ತಿಂದು.

                                                  

ಐದು  ವರುಷದ  ಅವಧಿ  ಸಾಕು  ಕೆಲವರಿಗೆ /ಸರಿಯಾಗಿ  ಗುಡಿಸುವರು  ಹಿಡಿದು  ಕಸಬರಿಗೆ.

ಹಾಕುವರು  ರಾಶಿ  ಗುಡು ಗುಡಿಸಿ  ಅಲ್ಲಲ್ಲಿ / ಕೊನೆಯವರೆಗೂ   ನುಂಗಬಹುದು  ಕೂತಲ್ಲಿ.

                                          ನನ್ನ  ಕನ್ನಡ ನುಡಿಯೇ   ನೀನೆಷ್ಟು ಚೆಂದ !

                                         ಏನು  ಗೀಚಿದರೂ  ಆಗುವುದು  ಶ್ರೀಗಂಧ

                                          ಸಿಂಗರದ  ಗಣಿ  ನಿನ್ನ  ಶಬ್ದ  ಸಂಪತ್ತು

                                          ಬಂಗಾರಕಿಂತಲೂ  ಶ್ರೇಷ್ಠ  ನುಡಿಮುತ್ತು          ( ದಿನಕರ ದೇಸಾಯಿ )

 

(ಗ್ರಂಥ  ಋಣ--   ಕವಿ  ಶ್ರೀ ವಿಷ್ಣುನಾಯಕರ,   ದಿನಕರ ದೇಸಾಯಿ  ಕೃತಿ. )

 

 

 

               ʻʻ ಸುಮ ಸಂಪದ ʼʼ   ಅಂಕಣಕ್ಕಾಗಿ,              ಸುಬ್ರಾಯ  ಮತ್ತೀಹಳ್ಳಿ.

                                  ತಾ -  ೧೪- ೧೧ -೨೦೨೨..

 

 


ʻʻ ಸಹಕಾರ ದಿಂದ ಸಮೃದ್ಧಿಯೆಡೆಗೆ.ʼʼ

 

“ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತ ಮೇಷಾಮ್ | ಸಮಾನಂ ಮಂತ್ರ ಮಭಿಮಂತ್ರಯೇವಃ ಸಮಾನೇನ ವೋ

ಹವಿಷಾ ಜುಹೋಮಿ || ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ” ||

 

ಈ ದೇಶದಲ್ಲಿ ಹುಟ್ಟಿದ ಮಾನವರೆಲ್ಲಾ ಸಮಾನರು. ಸಮಾನ ಮನಸ್ಕರು. ಸಮಾನ ನೀತಿವಂತರು. ಸಮಾನ ಉದ್ದೇಶ ಉಳ್ಳವರು. ಲೋಕದ ಚರಾಚರಗಳೂ ಒಂದಲ್ಲಾ ಒಂದು ಕಾರಣಕ್ಕೆ ನಮಗೆ ಬಂಧು ಸಮಾನರು. ಅವರೆಲ್ಲರ ಬದುಕು ಸುಖ, ಸಹಜ, ನೆಮ್ಮದಿಯಾಗಿರುವತ್ತ ನಮ್ಮ ಜೀವನವಿರಲಿ.

 

          ʻʻ ಸಹಕಾರʼʼ    ಪರಿಕಲ್ಪನೆಯ  ಮೂಲ  ದೇಶೀಯವಾಗಿರಲಿ,  ವಿದೇಶೀಯವಾಗಿರಲಿ  ನಮ್ಮ  ದೇಶದ  ಆರುಲಕ್ಷ  ಕೃಷಿಅವಲಂಬಿತ  ಗ್ರಾಮಗಳ  ಜೀವನಾಡಿಯಾಗಿ  ಬೇರುಬಿಟ್ಟಿರುವುದಂತೂ  ಸತ್ಯ.  ಪ್ರಾರಂಭದಲ್ಲಿ   ಆರ್ಥಿಕ  ದಾಸ್ಯದಲ್ಲಿ  ನಲುಗುತ್ತಿದ್ದ  ಕೃಷಿಕ್ಷೇತ್ರವನ್ನು  ಸ್ವಾವಲಂಬಿಯಾಗಿಸುವ  ಪರಮೋದ್ದೇಶದಿಂದ  ಪ್ರಾರಂಭಗೊಂಡ  ಸಹಕಾರ  ಚಳುವಳಿ,  ಇಂದು  ಅಸಂಖ್ಯಾತ  ಆಯಾಮಗಳನ್ನು  ಪಡೆದುಕೊಂಡು,  ದೇಶದಲ್ಲಿ  ಹೊಸದೊಂದು  ಆಶಾವಾದದ  ಪ್ರವಾಹವನ್ನೇ  ಸೃಷ್ಟಿಸಿರುವುದು  ಶ್ಲಾಘನೀಯ.  ಬಂಡವಾಳಶಾಹೀ  ಆರ್ಥಿಕ  ವ್ಯವಸ್ಥೆ,  ಸರಕಾರೀ  ಆರ್ಥವ್ಯವಸ್ಥೆಯ  ನಡುವೆ   ತನ್ನದೇ  ಆದ  ಅಸ್ಮಿತೆಯನ್ನು  ಸೃಷ್ಟಿಸಿಕೊಂಡ  ಸಹಕಾರೀ  ಅರ್ಥವ್ಯವಸ್ಥೆ  ನಿಜಕ್ಕೂ  ಸಾಮಾನ್ಯ  ಜನತೆಯಲ್ಲಿ  ಒಂದು  ಹೊಸ  ಭರವಸೆ  ಹೊಸ  ಶಕ್ತಿ,  ಹೊಸ  ಚೈತನ್ಯವನ್ನು  ಮೂಡಿಸಿರುವುದು  ಸತ್ಯ.

     ಒಂದು  ಕಾಲದಲ್ಲಿ  ಕೃಷಿಕನಾಗಲೀ  ಕೃಷಿಕೈಗಾರಿಕೆಯಾಗಲೀ,  ಸಾಲಕ್ಕಾಗಿ  ಖಾಸಗೀ  ಅರ್ಥವ್ಯವಸ್ಥೆಗೆ  ತಲೆಕೊಡುವುದು,  ಅದರ  ಅತ್ಯಧಿಕ ಶೋಷಣೆಗೆ  ಒಳಗಾಗುವುದು  ಸಹಜ ವಿದ್ಯಮಾನವಾಗಿತ್ತು.  ಕೃಷಿಕನೆಂದರೆ,  ಸಿರಿವಂತ ವಲಯದಲ್ಲಿ,  ಅಧಿಕಾರಿ ವರ್ಗದಲ್ಲಿ  ಎರಡನೆಯ  ದರ್ಜೆಯ   ಪ್ರಜೆಯಾಗಿ,  ಸ್ವಾಭಿಮಾನವನ್ನೂ  ಅಡವಿಟ್ಟು  ಬದುಕುವ,  ತಲೆಮಾರುಗಳಿಂದ  ಸಾಲದ  ಬೆಂಕಿಯಲ್ಲಿ  ಜರ್ಜರಿತನಾಗುತ್ತ  ಬದುಕಿದ್ದು  ಒಂದು  ದುರಂತ  ಇತಿಹಾಸ. ಪ್ರತಿಯೊಬ್ಬ ಮನುಷ್ಯನಿಗೂ  ಅನ್ನ ಅವಶ್ಯ.  ಆದರೆ  ಅನ್ನ ಉತ್ಪಾದಿಸುವವ  ಮಾತ್ರ ಅಲಕ್ಷಿತ.   

       ರೈತನೆಂದರೆ  ಅಶೀಕ್ಷಿತ,  ಕೃಷಿಕನೆಂದರೆ  ಬಡವ,  ಎಂಬ  ಅಭಿದಾನದಲ್ಲಿ,  ಅತ್ಯಂತ  ಕನಷ್ಠತಮ  ಸೌಲಭ್ಯದಲ್ಲಿ  ಜೀವನ  ನಿರ್ವಹಣೆಗೈಯ್ಯುವ  ವ್ಯಕ್ತಿ  ಎಂದೇ  ರೂಢಿಗತವಾದ  ಸ್ಥಿತಿಯ  ನಡುವೆ,   ವ್ಯಕ್ತಿಗೌರವ,  ಆತ್ಮಾಭಿಮಾನ, ಮತ್ತು  ಆತ್ಮವಿಶ್ವಾಸವನ್ನು  ದೊರಕಿಸಿಕೊಟ್ಟ  ಸಹಕಾರೀ  ಚಳುವಳಿ,  ಭಾರತೀಯ  ಕೃಷಿವಲಯಕ್ಕೆ  ವರವಾಗಿ  ಪರಿಣಮಿಸಿತು.

      ಸಹಕಾರ  ವ್ಯವಸ್ಥೆ  ನಿಜಾರ್ಥದಲ್ಲಿ  ಪ್ರಜಾಪ್ರಭುತ್ವದ  ಶಿಖರಪ್ರಾಯದಲ್ಲಿ  ಮಿಂಚಬೇಕಾಗಿತ್ತು.   ಅರ್ಥವ್ಯವಸ್ಥೆ  ಸಂಪೂರ್ಣ  ಖಾಸಗಿಯಲ್ಲಿ  ನೆಲೆಸುವ  ಬಂಡವಾಳಶಾಹೀ  ಪದ್ಧತಿಯಾಗಲೀ,   ಅಥವಾ  ಸರಕಾರೀ  ವ್ಯವಸ್ಥೆಯ  ಅಡಿಯಾಳಾಗಿರುವ  ಸಾಮ್ಯವಾದ  ಪದ್ಧತಿಯಾಗಲೀ   ಎರಡೂ  ಜೀವವಿರೋಧಿಯಾಗಬಹುದಾಗಿದೆ.  ಅವೆರಡರ  ನಡುವಣ  ಇಂದಿನ  ಭಾರತೀಯ  ಅರ್ಥವ್ಯವಸ್ಥೆಯನ್ನು  ಸಮಾಜವಾದ  ಎಂದು  ನಾವು  ಹೆಸರಿಸಿದ್ದೇವೆ.  ಆದರೆ    ಎರಡೂ  ಮಾರ್ಗಗಳೂ  ಸಾಮಾನ್ಯನನ್ನು  ದೂರಮಾಡುವ  ಸಾಧ್ಯತೆಯನ್ನು  ನಾವು  ಕಾಣುತ್ತಿದ್ದೇವೆ.    ಎರಡೂ ಪ್ರಮುಖ  ಚಿಂತನೆಗಳಿಂದ  ಭಿನ್ನವಾದ, ಪ್ರತ್ಯೇಕವಾದ  ಆರ್ಥಿಕ  ಚಿಂತನೆಯೇ  ಸಹಕಾರೀ  ಆರ್ಥವ್ಯವಸ್ಥೆ  ಎನ್ನಬಹುದಾಗಿದೆ.  ಸಂಪನ್ಮೂಲಗಳು  ಬಂಡವಾಳ ಶಾಹಿಗಳ  ಸುಪರ್ದಿನಲ್ಲಿಯಾಗಲೀ,  ಅಥವಾ  ಪ್ರಭುತ್ವದ  ಹತೋಟಿಯಲ್ಲಾಗಲೀ  ಇರದೇ   ಜನಸಾಮಾನ್ಯರ  ನಿಯಂತ್ರಣದಲ್ಲೇ  ಇರುವ  ಆರ್ಥಿಕಪದ್ಧತಿಯೇ  ಸಹಕಾರೀ  ಅರ್ಥವ್ಯವಸ್ಥೆ  ಎನ್ನಬಹುದಾಗಿದೆ.  

      ಹಾಗೆಂದು  ಸಹಕಾರೀ  ವ್ಯವಸ್ಥೆ  ಬಲಿಷ್ಠವಾಗಿ  ಬೆಳೆಯುತ್ತಿದೆಯೇ...?  ಎಂಬ  ಪ್ರಶ್ನೆ  ಕೇಳಿಕೊಂಡರೆ  ನಿರಾಶೆಯಾದೀತು.  ಗದಗದಲ್ಲಿ  ಇಡೀ  ದೇಶದ  ಪ್ರಪ್ರಥಮ  ಸಹಕಾರಿ  ಸಂಘ  ಜನ್ಮಿಸಿದರೂ  ಅಲ್ಲಿಯೇ  ನೆಲಕಚ್ಚಿತು.  ಉತ್ತರಕನ್ನಡ ಜಿಲ್ಲೆಯಲ್ಲಿ  ಉಜ್ವಲವಾಗಿ  ಬೆಳೆಯಿತು. 

ಸಹಕಾರಿ  ಪ್ರತಿನಿಧಿಗಳಲ್ಲಿ,  ಸಮಾಜ ಪ್ರಜ್ಞೆ, ಕೃಷಿಪ್ರೀತಿ, ಕೃಷಿಸಂಸ್ಕೃತಿಯ ಬಗೆಗಿನ  ನಿಷ್ಠೆ  ಸೇವಾ  ಭಾವ,  ಹೋರಾಟ ಪ್ರವೃತ್ತಿ,  ಅದರ ಜೊತೆಗೇ  ಪ್ರಾಮಾಣಿಕತೆ ಯಂಥ  ಗುಣಗಳು  ಅತ್ಯಂತ  ಅವಶ್ಯ. ಆದರೆ  ಹೆಚ್ಚಿನೆಲ್ಲ  ಸಂದರ್ಭಗಳಲ್ಲಿ, ರಾಜಕಾರಣದ  ಗದ್ದುಗೆಗೆ  ಏರುವ  ಏಣಿಯಾಗಿ,   ಏರಿದ ಮೇಲೆ  ಏಣಿಯನ್ನೇ  ಒದೆಯುವಂಥ  ಸ್ಥಿತಿಯುಂಟಾದರೆ,  ಸಹಕಾರ  ಒಂದು  ಸಾಮಾಜಿಕ  ಆರ್ಥಿಕ  ಕ್ರಾಂತಿಕಾರಕತೆಯನ್ನು  ಪಡೆದುಕೊಳ್ಳದೇ  ಸೋತೀತು.  ಇಂಥ  ಉದಾಹರಣೆಗಳನ್ನು  ನಾವು  ದೇಶದಲ್ಲಿ  ಸಾಕಷ್ಟುಬಾರಿ  ಕಂಡಿದ್ದೇವೆ.  ಅದರ  ದುಷ್ಪ್ರಭಾವವನ್ನು  ಉಂಡಿದ್ದೇವೆ.

     ಸಾಕಷ್ಟು  ಯಶಸ್ವೀ  ಸಹಕಾರೀ  ಸಂಘಗಳನ್ನು  ಸೂಕ್ಷ್ಮವಾಗಿ  ಗಮನಿಸಿದರೆ   ಅದರ  ಯಶಸ್ಸಿನ  ಆಳದಲ್ಲಿ  ಸಾಕಷ್ಟು  ನಿಸ್ವಾರ್ಥ ಸಹಕಾರೀ  ಸಾಧಕರ ಶ್ರಮ ತ್ಯಾಗ  ಹೋರಾಟಗಳನ್ನು  ಕಾಣುತ್ತೇವೆ. 

      ನಮಗೆ  ಭೌತಿಕ  ಅಭಿವೃದ್ಧಿ  ಎಷ್ಟು  ಅವಶ್ಯವೋ   ಆಂತರಿಕ  ವಿಕಾಸವೂ  ಅಷ್ಟೇ  ಅವಶ್ಯ. ನಮ್ಮ ಅಭಿವೃದ್ಧಿಯ  ನಕ್ಷೆಯನ್ನು  ನಾವೇ  ಸಿದ್ಧಗೊಳಿಸುವ  ಅರ್ಹತೆ  ಸಿದ್ಧಿಸುವುದು,  ನಾವು ಸೈದ್ಧಾಂತಿಕವಾಗಿ  ವೈಚಾರಿಕವಾಗಿ  ಸಿದ್ಧಗೊಂಡಾಗ  ಮಾತ್ರ.  ಆಗ  ನಮ್ಮ ಅಭಿವೃದ್ಧಿಗೆ  ನಾವೇ  ಕಾರಣಕರ್ತರಾಗುತ್ತೇವೆ.   ಅದಕ್ಕೆ  ಸರಕಾರ,  ಸಹಕಾರ  ಎಲ್ಲ  ಕ್ಷೇತ್ರಗಳ  ಬೆಂಬಲ ಅವಶ್ಯವಾಗುತ್ತದೆ.  ಅದರಲ್ಲಿಯೂ  ಗ್ರಾಮಾಭ್ಯುದಯದ  ವಿಚಾರದಲ್ಲಂತೂ  ಸಹಕಾರ  ವ್ಯವಸ್ಥೆಯಷ್ಟು  ಅನುಕೂಲವಾದ  ವ್ಯವಸ್ಥೆ  ಬೇರೊಂದಿಲ್ಲ.  ಏಕೆಂದರೆ  ಸಹಕಾರವೆನ್ನುವುದು  ಒಂದು  ದೃಷ್ಟಿಯಲ್ಲಿ  ವಿಶೇಷವಾದ  ಪ್ರಜಾಪ್ರಭುತ್ವವೇ  ಆಗಿದೆ.  ಜನರು  ತಮ್ಮ ಅವಶ್ಯಕತೆಯನ್ನು  ತಾವೇ  ಸಂಘಟಿತರಾಗಿ  ಪೂರೈಸಿಕೊಳ್ಳಬಹುದಾದಂಥ  ಶ್ರೇಷ್ಠ  ವ್ಯವಸ್ಥೆಯಿದು. ನಮ್ಮ ಗ್ರಾಮಾಂತರಗಳಲ್ಲಿ, ಅನಾದಿಯಿಂದಲೂ  ಪರಸ್ಪರ ಶ್ರಮವಿನಿಮಯ ಪದ್ಧತಿ ಜಾರಿಯಲ್ಲಿತ್ತು.  ಕೃಷಿಕೆಲಸಗಳಲ್ಲಿ, ಕೃಷಿಕರೇ ಒಂದಾಗಿ, ಸಾಮೂಹಿಕ ಸಹಕಾರದಲ್ಲಿ, ಕೃಷಿ ಕೆಲಸಗಳನ್ನು ಪೂರೈಸಿಕೊಳ್ಳುತ್ತಿದ್ದರು. ಮುಯ್ಯಾಳು ಎಂದು ಅದಕ್ಕೆ ಹೆಸರಿತ್ತು. ಅದೂ ಪ್ರಸ್ತುತ ಸಹಕಾರೀ ತತ್ವಕ್ಕೆ  ಸಂವಾದಿಯಾಗಿದೆ. ಸಹಕಾರ ವ್ಯವಸ್ಥೆಯ  ಎಲ್ಲ  ಸಾಧ್ಯತೆಗಳನ್ನು  ನಾವಿನ್ನೂ  ತಲುಪಿಯೇ ಇಲ್ಲ.  ಸಹಕಾರೀ  ಕೃಷಿ, ವ್ಯಾಪಾರ  ಕೈಗಾರಿಕೆ,  ಗ್ರಹನಿರ್ಮಾಣ,  ಸಾಮಾಜಿಕ  ಮೂಲಭೂತ  ಸೌಲಭ್ಯಗಳ  ಸೃಷ್ಟಿ  ಮುಂತಾದ  ಬದುಕಿನ  ಎಲ್ಲ  ಆಯಾಮಗಳಿಗೂ  ಯಶಸ್ವೀಯಾಗಿ  ಪ್ರವೇಶಿಸಬಹುದಾದಂಥ  ಅವಕಾಶಗಳು  ಇಲ್ಲಿ  ತೆರೆದೇ ಇದೆ.  ಮೊದಲು  ನಾವು  ಸಹಕಾರೀ  ತತ್ವದಲ್ಲಿ  ನಂಬಿಗೆಯಿಡಬೇಕು.  ಪ್ರಾಮಾಣಿಕವಾಗಿ    ನಿಟ್ಟಿನಲ್ಲಿ  ತೊಡಗಿಕೊಳ್ಳ ಬೇಕಷ್ಟೆ.

    ಈಗಾಗಲೇ  ಸಹಕಾರೀ ವ್ಯವಸ್ಥೆಯಡಿಯಲ್ಲಿ,  ವೈವಿಧ್ಯಮಯವಾದ  ಪ್ರಯೋಗಗಳನ್ನು,  ಜನಪರ  ಕಲ್ಯಾಣ  ಕಾರ್ಯಕ್ರಮಗಳನ್ನು,  ಅಲ್ಲಲ್ಲಿ  ಯಶಸ್ವೀಯಾಗಿ  ಪ್ರಗತಿಸಾಧಿಸುತ್ತಿರುವುದನ್ನು  ಕಾಣುತ್ತಿದ್ದೇವೆ. 

       ವಿವಿಧ ರಾಜ್ಯಗಳ   ಹಾಲು ಉತ್ಪಾದಕರ  ಸಾಧನೆ,  ಗೊಬ್ಬರ  ಕಾರಖಾನೆ,  ಸೂಪರ್‌ ಮಾರ್ಕೆಟ್‌,   ಸಾರ್ವಜನಿಕ  ಸಾರಿಗೆ,   ಕಟ್ಟಡ ನಿರ್ಮಾಣ, ಆರೋಗ್ಯ ಕ್ಷೇತ್ರ, ಬ್ಯಾಂಕಿಂಗ್‌, ಮುಂತಾದವುಗಳು  ಸಾಕಷ್ಟು ಜನಪರವಾಗಿ,ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಇಲ್ಲಿ  ಉದಹರಿಸಬಹುದಾಗಿದೆ.

        ಸ್ಥಳೀಯ  ಪ್ರಾಥಮಿಕ  ಪತ್ತಿನ  ಸಹಕಾರೀ  ಸಂಘಗಳು   ತಮ್ಮ ತಮ್ಮ  ಕ್ಷೇತ್ರದಲ್ಲೇ  ಕೈಗೊಳ್ಳುವ  ಕೃಷಿಕ ಪರ,  ಜನಪರ  ಸೇವಾಯೋಜನೆಗಳನ್ನು  ಗಮನಕ್ಕೆ  ತಂದುಕೊಂಡರೆ,  ನಮ್ಮ  ಹತ್ತು  ಹಲವು  ಕೃಷಿಬಿಕ್ಕಟ್ಟುಗಳ  ನಿವಾರಣೆಗೆ  ಸ್ಪೂರ್ತಿ  ದೊರಕಬಹುದಾಗಿದೆ.

ಉದಾಹರಣೆಗೆ   ನಮ್ಮ ಜಿಲ್ಲೆಯ   ತ್ಯಾಗಲಿ  ಸಹಕಾರಿ ಸಂಘ  ಕಳೆದೊಂದೆರಡು ವರ್ಷಗಳಿಂದ  ಅಡಿಕೆ  ಕೃಷಿಯಲ್ಲಿ  ಬರಬಹುದಾದ.  ಕೃಷಿಕಾರ್ಮಿಕರ  ಕೊರತೆಯನ್ನು  ನಿವಾರಿಸಿಕೊಂಡ  ಒಂದು  ಯಶಸ್ವೀ  ಅಭಿಯಾನವನ್ನು  ಇಲ್ಲಿ  ಉದಹರಿಸಬಹುದಾಗಿದೆ. 

      ಅಡಿಕೆ ಮತ್ತು ತೆಂಗು ಕೊಯ್ಲು  ಕೆಲಸಗಾರರ  ಕೊರತೆ  ಎಲ್ಲೆಡೆಗೂ  ಇದೆ.  ಯುವ  ಕಾರ್ಮಿಕರು  ದೊರೆಯುತ್ತಿಲ್ಲ.  ಅದರಂತೇ  ಮಳೆಗಾಲದ  ಔಷಧ  ಸಿಂಪರಣೆಗೂ  ಅದೇ  ಸಮಸ್ಯೆ.  ಅದಕ್ಕೆ  ತ್ಯಾಗಲಿ  ಸಹಕಾರೀ  ಸಂಘ, ತನ್ನದೇ  ಆದ  ಸ್ಥಳೀಯ  ಯುವಪಡೆಯೊಂದಕ್ಕೆ  ಸೂಕ್ತ  ತರಬೇತಿ,  ಮತ್ತು  ಆಕರ್ಷಕ  ವೇತನವನ್ನು  ನೀಡಿ,  ಆಧುನಿಕವಾಗಿ  ಸಂಶೋಧಿತಗೊಂಡ  ಫೈಬರ್‌  ದೋಟಿಯ  ಮೂಲಕ  ನೆಲದಿಂದಲೇ  ಕೊಯ್ಲು  ಮತ್ತು  ಔಷಧಸಿಂಪರಣಾ  ಪ್ರಕ್ರಿಯೆಯನ್ನು  ಯಶಸ್ವೀಯಾಗಿ  ಮುನ್ನಡೆಸುತ್ತಿದೆ.  ಕೃಷಿಕರ  ಮೆಚ್ಚುಗೆಗೂ  ಕಾರಣವಾಗಿದೆ.  ಸ್ವಂತ  ಕೊಯಿಲು, ಮತ್ತು  ಕೊಯ್ಲೋತ್ತರ  ಸಂಸ್ಕರಣೆಯಂಥ  ಕಾರ್ಯಗಳನ್ನೂ  ನಿರ್ವಹಿಸಲು  ಸಾಧ್ಯವಾಗದಂಥ  ಕೃಷಿಕರಿಗೆ    ನಿಟ್ಟಿನಲ್ಲೂ  ಸಹಾಯ  ಸಲ್ಲಿಸುತ್ತಿದೆ.   

   ಇದೇ  ಮಾದರಿಯಲ್ಲಿ  ಶಿರಸಿ  ಸಿದ್ಧಾಪುರ  ತಾಲೂಕಿನ  ಇನ್ನೂ  ಹಲವು  ಸಂಘಗಳು  ಕಾರ್ಯಪ್ರವೃತ್ತವಾಗಿವೆ.  ಉತ್ತರ  ಕನ್ನಡ ಜಿಲ್ಲೆಯ  ಪ್ರಮುಖ  ಚಿಂತಕ, ಲೇಖಕ  ಶ್ರೀ  ಗಣೇಶ  ಭಟ್‌  ಉಪ್ಪೋಣಿಯವ  ನುಡಿ  ಇಲ್ಲಿ  ಪ್ರಸ್ತುತವಾಗಿದೆ.

 ʻʻ ಆಹಾರ  ಬಟ್ಟೆ  ಶಿಕ್ಷಣ  ವಸತಿ  ಮತ್ತು ಔಷಧೋಪಚಾರಗಳು  ಪ್ರತಿಯೋರ್ವ  ವ್ಯಕ್ತಿಗೂ  ಲಭ್ಯವಾಗಬೇಕು. ಸರ್ಕಾರದ  ಅನುದಾನ  ಅಥವಾ  ಶ್ರೀಮಂತರ  ದಯಾಭಿಕ್ಷೆಯಿಂದ  ಜೀವನದ  ಕನಿಷ್ಠ ಸೌಲಭ್ಯಗಳು  ಎಲ್ಲರಿಗೂ  ಲಭ್ಯವಾಗುವಂತೇ  ಮಾಡುವುದು  ಅಪೇಕ್ಷಣೀಯವಲ್ಲ.  ಪ್ರತಿಯೋರ್ವ  ವ್ಯಕ್ತಿಯೂ  ತನ್ನ  ದುಡಿಮೆಯ ಫಲದಿಂದ  ತನ್ನ  ಹಾಗೂ  ತನ್ನ  ಅವಲಂಬಿತರ  ಜೀವನದ  ಕನಿಷ್ಠ ಅಗತ್ಯತೆಗಳನ್ನು  ಪೂರೈಸಿಕೊಳ್ಳುವ  ಸಾಮರ್ಥ್ಯ  ಹೊಂದಿರುವ  ವ್ಯವಸ್ಥೆ  ನಿಜಕ್ಕೂ  ಆದರ್ಶಮಯ, ಹಾಗೂ  ಅಪೇಕ್ಷಣೀಯ.  ಪ್ರತಿಯೋರ್ವ ವ್ಯಕ್ತಿಗೂ  ದುಡಿಮೆಯ  ಅವಕಾಶ  ನೀಡುವ  ಸಹಕಾರಿ  ಅರ್ಥವ್ಯವಸ್ಥೆಯಲ್ಲಿ  ಮಾತ್ರ  ಇದು  ಕಾರ್ಯಸಾಧ್ಯ.ʼʼ

         ಎಂದು  ಅಭಿಪ್ರಾಯ ಪಡುವ  ಅವರು,  ʻʻ ಸಮಗ್ರ  ಭೂ ಬಳಕೆ ನೀತಿ, ಬೆಳೆಸಂಯೋಜನಾ  ಕ್ರಮಗಳು, ಚಿಕ್ಕ ಹಿಡುವಳಿಗಳನ್ನು  ಲಾಭದಾಯಕ  ಹಿಡುವಳಿಗಾಗಿ ಪರಿವರ್ತಿಸಲು, ಬೇಸಾಯದಲ್ಲಿ  ಸಹಕಾರ  ತತ್ವದ  ಅಳವಡಿಕೆ,  ಕೃಷಿಉತ್ಪನ್ನಗಳ  ವ್ಯವಸ್ಥಿತ  ಸಂಗ್ರಹಣೆ, ಸಂಸ್ಕರಣೆ, ಮಾರಾಟಗಳನ್ನು  ಸಹಕಾರೀ  ವ್ಯವಸ್ಥೆಯಲ್ಲೇ ಕೈಗೊಳ್ಳುವುದರಿಂದ  ಕೃಷಿಗೆ  ಕೈಗಾರಿಕೆ  ಸ್ಥಾನಮಾನ  ಪಡೆಯಲು  ಸಾಧ್ಯ.ʼʼ  ಎಂದು  ಖಚಿತವಾಗಿ  ನುಡಿಯುತ್ತಾರೆ.

       ಸ್ವಾತಂತ್ರ್ಯಾನಂತರದ   ನಮ್ಮೆಲ್ಲ  ಹಳ್ಳಿಗಳ  ಸ್ಥಿತಿಯನ್ನು  ಅವಲೋಕಿಸಿದರೆ,  ಆತಂಕ  ಆವರಿಸುತ್ತದೆ.  ಅಭಿವೃದ್ಧಿ  ಎಂಬ  ಘೋಷಣೆ  ಕೇವಲ  ಮತದ ಕ್ರೋಢೀಕರಣದ  ಮಂತ್ರವಾಗಿ,  ಕೋಟಿ  ಕೋಟಿ   ಹಣ  ನೀರಿನಂತೇ  ಹರಿದರೂ,  ಗ್ರಾಮಗಳಿಗೆ  ಸಂಪೂರ್ಣ  ತಲುಪದೇ  ಮಧ್ಯದಲ್ಲೇ  ಆವಿಯಾಗಿ,  ಗ್ರಾಮಗಳೆಲ್ಲ  ದುಸ್ಥಿತಿಯಲ್ಲೇ  ಇರುವಂತಾದುದು  ಶೋಚನೀಯ  ಸಂಗತಿ. 

        ಸದ್ಯ  ನಮ್ಮ  ಆಳುವ  ಪದ್ಧತಿಯಲ್ಲಿ, ಪ್ರಾಮಾಣಿಕ ಜನಪ್ರತಿನಿಧಿಯೊಬ್ಬ  ಸಂಪೂರ್ಣ  ಜನಪರ  ಕ್ರಿಯೆಯಲ್ಲಿ  ತೊಡಗಿಕೊಳ್ಳಲು  ಸಾಧ್ಯವಾಗದ  ಸ್ಥಿತಿ  ನಿರ್ಮಾಣವಾಗಿದೆ.  ರಾಜಕಾರಣದ  ಕುರುಕ್ಷೇತ್ರದಲ್ಲಿ  ತನ್ನ  ಅಸ್ತಿತ್ವ  ಉಳಿಸಿಕೊಳ್ಳಲು,  ಸದಾ  ಹೆಣಗಾಡುವ,  ಚುನಾವಣಾ  ವೆಚ್ಚಕ್ಕಾಗಿ,  ಅಪಮಾರ್ಗಕ್ಕೆ  ಪ್ರವೇಶಿಸುವ  ಅನಿವಾರ್ಯತೆ,  ನಿರ್ಮಾಣವಾಗಿರುವುದರಿಂದ,   ಅವರಿಂದಲೂ  ವಿಶೇಷ  ಪ್ರಗತಿಯನ್ನು  ಅಪೇಕ್ಷಿಸುವ  ಆಸೆ  ಕ್ಷೀಣಿಸುತ್ತಿದೆ. 

     ಪ್ರತಿ  ಪ್ರಜಾಪ್ರಭುತ್ವವೇ   ಸಹಕಾರ  ರಂಗವಾದುದರಿಂದ,  ಸಾಮಾಜಿಕ  ಆರ್ಥಿಕ  ಶೈಕ್ಷಣಿಕ  ಮತ್ತು  ಕೈಗಾರಿಕಾ  ಕ್ಷೇತ್ರವೆಲ್ಲವನ್ನೂ  ಸಹಕಾರಮಯವಾಗಿ  ಪರಿವರ್ತಿಸಬೇಕಾದ  ಕಾಲ  ಇದೀಗ  ಒದಗಿಬಂದಿದೆ. 

     ಮೊದಲನೆಯದಾಗಿ   ಕೃಷಿಕರಲ್ಲಿ,  ಸಹಕಾರ  ಸಾಕ್ಷರತೆ  ಜಾಗ್ರತಗೊಳ್ಳಬೇಕು.

     ಸಹಕಾರ  ಸಂಘಗಳ  ಪ್ರತಿನಿಧಿಗಳ  ಆಯ್ಕೆಯಲ್ಲಿ,  ಸಾಮಾಜಿಕ  ಸಾಂಸ್ಕೃತಿಕ  ಸೇವಾ ಪರಿಜ್ಞಾನವುಳ್ಳ,  ಪ್ರಾಮಾಣಿಕ ಯುವ ವ್ಯಕ್ತಿಗಳನ್ನೇ  ಆಯ್ಕೆಮಾಡಬೇಕು.

     ಸಹಕಾರೀ  ಪ್ರತಿನಿಧಿಗಳಿಗೆ  ವ್ಯವಸ್ಥಿತ  ವೈಜ್ಞಾನಿಕ  ತರಬೇತಿ  ದೊರೆಯುವಂತಾಗಬೇಕು.

ಪ್ರತಿಯೊಂದು  ಸಹಕಾರಿ ಸಂಘಗಳು,  ತಮ್ಮ ವ್ಯಾಪ್ತಿಯ  ಕೃಷಿಕರ  ಕೃಷಿಕಾರ್ಮಿಕರ,  ಕೃಷಿಕೈಗಾರಿಕೆಗಳ  ಸಮಸ್ಯೆಯನ್ನು  ಅಧ್ಯಯನಗೈದು,  ಅದಕ್ಕೆ ಪರಿಹಾರೋಪಾಯಗಳನ್ನು  ಕಂಡುಕೊಳ್ಳಲು  ಶ್ರಮಿಸಬೇಕು.

      ಪ್ರಸ್ತುತದ  ತಂತ್ರಜ್ಞಾನದ  ಯುಗದಲ್ಲಿ, ವಿದ್ಯುನ್ಮಾನ  ಮತ್ತು  ಮಾಹಿತಿ ತಂತ್ರಜ್ಞಾನದ  ಎಲ್ಲ  ಉಪಯೋಗಗಳನ್ನು  ಸಮರ್ಥವಾಗಿ  ಉಪಯೋಗಿಸಿಕೊಳ್ಳಬೇಕು.

      ಸ್ವಾರ್ಥ  ಭೃಷ್ಟಾಚಾರ, ಸ್ವಜನಪಕ್ಷಪಾತ,  ಪಕ್ಷರಾಜಕೀಯಗಳು,  ಸಂಘದಲ್ಲಿ  ನುಸುಳದಂತೇ  ಎಚ್ಚರವಹಿಸಬೇಕು.

       ಸರಕಾರದ  ಅತೀಯಾದ  ಹಸ್ತಕ್ಷೇಪಕ್ಕೆ  ಮಿತಿಯೊಡ್ಡಬೇಕು.

ಆಗಾಗ  ಸರ್ವಸದಸ್ಯರ  ಮಹಾಸಭೆ  ಸಂಘಟಿಸಿ,  ಕೃಷಿಕರ  ಸಮಸ್ಯೆ  ಸಂಧಿಗ್ಧಗಳನ್ನು  ಅರ್ಥೈಸಿಕೊಂಡು,  ಅವುಗಳ  ಪರಿಹಾರಕ್ಕಾಗಿ  ಶ್ರಮಿಸಬೇಕು.

       ವೈಜ್ಞಾನಿಕ  ಕೃಷಿಪದ್ಧತಿಯ  ಬಗೆಗೆ  ಅರಿವು  ಮೂಡಿಸುವುದರ  ಜೊತೆಗೆ,  ವೈಜ್ಞಾನಿಕ  ಕೃಷಿ  ಸಲಕರಣೆಗಳು  ಕೃಷಿಕರ  ಬಳಕೆಗಾಗಿ   ಸಂಘದಲ್ಲಿ  ದೊರೆಯುವಂತಾಗಬೇಕು.

ಕೊಯ್ಲು  ಸಿಂಪರಣೆಯಂತ  ಪುಟ್ಟ  ಸಲಕರಣೆಯಿಂದ,  ವಾಹನ,  ಜೆ.ಸಿ.ಬಿ. ಯಂಥ  ಬೃಹತ್‌  ಯಂತ್ರಗಳೂ  ಸಹ  ಸಾಮೂಹಿಕ  ಉಪಯೋಗಕ್ಕೆ  ದೊರೆಯುವಂತಾಗಬೇಕು.

       ಇಂಥ  ಪ್ರಗತಿಪರ, ಕೃಷಿಕಪರ  ಚಟುವಟಿಕೆಗಳು,  ನಮ್ಮ  ಕೃಷಿವಲಯದಲ್ಲಿ   ಪರಿಣಾಮಕಾರಿಯಾಗಿ,  ಪ್ರಾರಂಭಗೊಳ್ಳಲಿ.    ಮೂಲಕ  ನಮ್ಮ  ಕುಗ್ರಾಮಗಳೆಲ್ಲ   ಸುಗ್ರಾಮಗಳಾಗಿ,   ಪರಿವರ್ತನೆಗೊಂಡೀತು.  ಹತಾಶತೆಯಿಂದ  ಮುಕ್ತವಾದ  ಸಂತೃಪ್ತ  ಬದುಕು  ನಮ್ಮದಾದೀತು.

           ಸಂಘ  ಶತಮಾನಕ್ಕೆ  ಪ್ರವೇಶಿಸುತ್ತಿದೆ.  ಇದು  ಸಂಭ್ರಮವೂ  ಹೌದು.  ಮಹಾರೋಗ, ಮಹಾಮಳೆ, ಮತ್ತು  ಮಹಾಯುದ್ಧ್ದದ  ಸಂದಿಗ್ಧವೂ  ಹೌದು.  ಇದು  ಕನಸು  ಕಾಣುತ್ತಲೇ  ಕೆಂಡಹಾಯುವ  ಕಾಲವಾಗಿ  ಕಾಣುತ್ತಿದೆ.  ಹೊಸ  ಕಾಲದ  ಹೊಸ  ಸವಾಲುಗಳನ್ನೆದುರಿಸುತ್ತ,  ಇಡೀ  ಸಮುದಾಯಕ್ಕೆ  ಹೊಸ  ಚೈತನ್ಯ, ಹೊಸ  ಹರಿವು  ನೀಡಬೇಕಾದ  ಪರ್ವಕಾಲವೂ  ಹೌದು.   ನಾನು  ಎಂಬುದೆಲ್ಲ  ನಾವಾಗಿ,  ಸಮುದಾಯವೆಲ್ಲ  ಒಂದಾಗಿ  ಅರ್ಥಪೂರ್ಣ  ಬದುಕು ಕಟ್ಟುವ  ಅನುಪಮ  ಒಕ್ಕೂಟವಾಗಿ  ವ್ಯ.ಸೇ.ಸಹಕಾರಿ  ಸಂಘ  ಬಿಸಲಕೊಪ್ಪ ಬೆಳೆಯಲಿ,  ಬೆಳೆದು  ಬಾಳಲಿ.  ಬಾಳೆಲ್ಲ ಬಂಗಾರವಾಗಲಿ  ಎಂದು  ಹೃತ್ಪೂರ್ವಕವಾಗಿ  ಹಾರೈಸುತ್ತಿದ್ದೇನೆ.

 

              ʻʻ ಕೂಡಿ  ಓಡಿ  ಕೂಡಾಡಿ ಕೂಡಿ  ಅರಿಯೋಣ  ಕೂಡಿ  ಕೂಡಿ

               ಕೂಡಿ ತಿಂದು ಕೂಡುಂಡು ಕುಣಿದು  ದುಡಿಯೋಣ  ಕೂಡಿ  ಕೂಡಿ.

               ಕೂಡಿ  ನಡೆದು  ಒಡಗೂಡಿ ಪಡೆದು  ನುಡಿಹೇಳಿ  ಕೇಳಿ   ಕೂಡಿ

               ಕೂಡಿ  ಬೆಳೆದು ಬೆಳಗೋಣ  ದೇವರೊಲು  ಕೂಡಿ  ಕೂಡಿ  ಕೂಡಿ.ʼʼ

                                                                                     ( ದ.ರಾ.ಬೇಂದ್ರೆ.)