ʻʻಬಾಣ ಭಟ್ಟ, ಭಾಷೆಗೆ ಹೊಸ ಬೆಳಕು ಕೊಟ್ಟ.ʼʼ

 

ʻʻಹಣಕ್ಕೆ   ಸ್ನೇಹದ  ಬಂಧನವಿಲ್ಲ. ಕುಲದ  ಗುರುತಿಲ್ಲ. ರೂಪದ  ಒಲವಿಲ್ಲ. ಒಂದೇ  ಮನೆತನದಲ್ಲಿ ಬಹುಕಾಲ   ಉಳಿಯುವ  ಅಭ್ಯಾಸವಂತೂ  ಇಲ್ಲವೇ  ಇಲ್ಲ. ಅದು  ಸ್ವಭಾವವನ್ನು  ಕಾಣದು.  ಪಾಂಡಿತ್ಯವನ್ನು ಗಣಿಸದು. ಶಾಸ್ತ್ರವನ್ನು ಆಲಿಸದು. ಧರ್ಮವನ್ನು  ನಂಬದುʼʼ                      . (  ಬಾಣ ಭಟ್ಟ)

          ಶ್ರೇಷ್ಠ  ಸಾಹಿತ್ಯಕೃತಿಗೆ   ಕಾಲದ  ಹಂಗಿಲ್ಲ.  ಸಾರ್ವಕಾಲಿಕವಾಗಿ  ತನ್ನ ಜೀವಂತಿಕೆಯನ್ನ,  ಹೊಸತನವನ್ನ  ಸದಾ  ಕಾಯ್ದುಕೊಂಡು,  ವರ್ತಮಾನದ  ಮಾನವ  ಬದುಕಿಗೆ  ಸಾಂತ್ವನ  ನೀಡುತ್ತಲೇ  ಇರುತ್ತದೆ.   ಮಾನವ  ಬದುಕಿನ  ನೋವು ತಲ್ಲಣಗಳಿಗೆ  ಸ್ಪಂದಿಸುತ್ತ,  ಮಾನವ  ದೌರ್ಬಲ್ಯಗಳೆಡೆಗೆ  ಕ್ಷ  ಕಿರಣ  ಬೀರುತ್ತ,  ಎಚ್ಚರ  ಮೂಡಿಸುತ್ತಲೇ  ಇರುತ್ತದೆ.  ರಾಮಾಯಣ  ಮಹಾಭಾರತಗಳು  ಸೇರಿ,  ಜಗತ್ತಿನ   ಹತ್ತು  ಹಲವು ಸರ್ವಶ್ರೇಷ್ಠ ಕೃತಿಗಳೇ  ಇದಕ್ಕೆ  ಸಾಕ್ಷಿ. 

     ಸಾರ್ವಕಾಲಿಕ  ಮೌಲ್ಯವುಳ್ಳ   ಇಂದಿಗೂ   ತನ್ನ  ಸತ್ವವನ್ನು  ಪರಿಣಾಮಕಾರಿಯಾಗಿ  ನಮ್ಮಮೇಲೆ  ಬೀರುವ,  ಬೆರಗು  ರೋಮಾಂಚನಕ್ಕೀಡುಮಾಡುವ    ಏಳನೆಯ  ಶತಮಾನದಲ್ಲೇ ರಚಿತಗೊಂಡಿರುವ,   ಕೃತಿಯೊಂದು   ಮತ್ತೆ   ಮನಸೆಳೆಯಿತು.    ಸಾಮ್ರಾಟ್‌ ಶ್ರೀ ಹರ್ಷನ ಆಸ್ಥಾನ   ವಿದ್ವಾಂಸನಾಗಿದ್ದ   ಬಾಣಭಟ್ಟ,( ಕ್ರಿ.ಶ. ೬೪೫)  ಎಂಬ   ಮಹಾಕವಿಯಿಂದ   ರಚಿತಗೊಂಡ   ಸಂಸ್ಕೃತ  ಗದ್ಯಕಾವ್ಯ,    ʻʻ  ಕಾದಂಬರಿ ʼʼ  ಎಂಬ  ಕೃತಿ   ಮತ್ತೊಮ್ಮೆ  ನನ್ನನ್ನು  ಆಕರ್ಷಿಸಿತು. 

     ಕಳೆದ   ಒಂದು  ಶತಮಾನದಲ್ಲಿ  ಹತ್ತಾರು  ಜನರಿಂದ ಹೊಸ ಕನ್ನಡ  ಭಾಷೆಗೆ ಅನುವಾದಿಸಲ್ಪಟ್ಟಿರುವ   ಪ್ರಸ್ತುತ   ಕೃತಿ,   ಕನ್ನಡದ  ಬಾಣಭಟ್ಟರೆಂದೇ   ಪ್ರಸಿದ್ಧರಾದ   ಬನ್ನಂಜೆ  ಗೋವಿಂದಾಚಾರ್ಯರಿಂದ    ಅರ್ಧ  ಶತಮಾನದ  ಹಿಂದೆಯೇ   ಕನ್ನಡಕ್ಕೆ  ಆಗಮಿಸಿತ್ತು.    ಮೂಲ  ಸಂಸ್ಕೃತವಾದರೂ,  ಬನ್ನಂಜೆಯವರ   ಅತ್ಯುನ್ನತ  ಪ್ರತಿಭೆ,   ಕನ್ನಡದಲ್ಲಿಯೇ   ಪ್ರಸ್ತುತ  ಕೃತಿ  ಜನ್ಮಿಸಿದೆಯೋ   ಎನ್ನುವಂತೇ    ಕನ್ನಡ  ಭಾಷೆಯ   ಸೌಂದರ್ಯ,  ಶಕ್ತಿ,  ಸೊಬಗು,  ಮತ್ತು  ಆಕರ್ಷಕಗುಣಗಳಿಂದ,  ಪುನಃಸೃಷ್ಟಿಗೊಂಡಿದೆ.

    ಬನ್ನಂಜೆಯವರ      ಕೃತಿ   ಕೇವಲ  ಅನುವಾದವಲ್ಲ.  ಅದೊಂದು  ಅನುಸೃಷ್ಟಿ.  ಅನುಸ್ಪಂದನ.   ಕನ್ನಡ  ಭಾಷೆಯ   ಚಲುವೆಲ್ಲವನ್ನೂ  ಸೂರೆಗೈದು   ಸಿಂಗಾರಗೊಂಡ   ಕಾದಂಬರಿ   ಮುದ್ರಣಗೊಳ್ಳುತ್ತಲೇ  ಇದೆ.   ಯುವ  ಓದುಗರನ್ನು  ನಿರಂತರ  ಆಕರ್ಷಿಸುತ್ತಲೇ  ಇದೆ.     ಕೃತಿಯನ್ನು  ಗಮನಿಸಿಯೇ   ಚುಟುಕು  ಕವಿ  ದಿನಕರ  ದೇಸಾಯಿ   ಉದ್ಗರಿಸಿರಬಹುದೆಂದೆನ್ನಿಸುತ್ತದೆ. 

         ʻʻ ನನ್ನ  ಕನ್ನಡ  ನುಡಿಯೇ   ನೀನೆಷ್ಟು  ಚಂದ,

ಏನು  ಗೀಚಿದರೂ  ಆಗುವುದು  ಶ್ರೀಗಂಧ.

ಸಿಂಗರದ  ಗಣಿ  ನಿನ್ನ ಶಬ್ದಸಂಪತ್ತು

ಬಂಗಾರಕಿಂತಲೂ  ಶ್ರೇಷ್ಟ ನಿನ್ನ ನುಡಿಮುತ್ತು.ʼʼ

 

    ಸಿರಿಗನ್ನಡ  ಸಾಹಿತ್ಯದ   ಮಹತ್ವಪೂರ್ಣ ಗದ್ಯ  ವಿಭಾಗವೊಂದಕ್ಕೆ  ಇದೇ  ಬಾಣಭಟ್ಟನ   ಕಾದಂಬರಿ,  ಎಂಬ  ಶಿರೋನಾಮೆಯೇ   ಸ್ಧಿರವಾಗಿ  ನಿಂತಿದ್ದು,  ಎಂಬುದನ್ನು   ನಾವು  ಸ್ಮರಿಸಲೇಬೇಕು.   ಭಾರತೀಯ   ಭಾಷೆಗಳಲ್ಲಿ    ಕನ್ನಡ  ಕಾದಂಬರಿ  ಕೃತಿಗಳು,  ಅತ್ಯಂತ ಎತ್ತರದಲ್ಲಿವೆ  ಎಂಬುದು   ನಿಜಕ್ಕೂ  ಹೆಮ್ಮೆತರುವ  ಸಂಗತಿ.

   ಸಂಸ್ಕೃತ  ಸಾಹಿತ್ಯಸಾಗರದಲ್ಲಿ,  ತನ್ನದೇ  ಆದ  ವಿಶಿಷ್ಟ  ಒಳನೋಟ,  ಹದಿಹರೆಯದ  ಕಾಮ  ಪ್ರೇಮ,  ವೈವಿಧ್ಯಮಯ  ನಿಸರ್ಗ,    ಪಕ್ಷಿಗಳ  ಕಲರವ,   ಪ್ರಾಣಿಗಳ  ಚಲನವಲನ,   ಸ್ನೇಹ  ಪ್ರೀತಿ,  ತ್ಯಾಗ,  ತಪಸ್ಸು, ಶೌರ್ಯ,  ಮತ್ತು ಗಾಢ  ವಿರಹಗಳೇ   ಪ್ರಸ್ತುತ  ಕೃತಿ ಸೃಷ್ಟಿಯ  ಹಿನ್ನೆಲೆಯಲ್ಲಿ  ವಿಶಾಲವಾಗಿ  ವ್ಯಾಪಿಸಿದೆ.    ಕಥೆಯೊಳಗೆ  ಕಥೆಗಳು, ಸರಣಿ ಸರಣಿಯಾಗಿ  ಉದ್ಭವಿಸುತ್ತ,  ಲೌಕಿಕ  ಮಾನವಾನುಭವಗಳ  ಮಾಲೆಯಾಗುತ್ತ,   ಮಾನವ  ಬದುಕಿನ  ಸುಖ  ದುಃಖ,  ಏರು  ಇಳಿವು,  ಪ್ರೀತಿ,  ವಿರಹಗಳ   ನಡುವೆ,   ಪ್ರಕೃತಿಯನ್ನೂ  ಜೀವಂತಪಾತ್ರವಾಗಿಸುತ್ತ,  ಪುಟದಿಂದ  ಪುಟಕ್ಕೆ  ಕಾವ್ಯಾತ್ಮಕ  ಸಾಲುಗಳಿಂದ  ಸಿಂಗರಿಸಲ್ಪಟ್ಟ,  ಕಾದಂಬರಿ,   ಏಳನೆಯ  ಶತಮಾನದಲ್ಲೇ  ರಚನೆಯಾಗಿದ್ದು  ಎಂದರೆ  ಅತ್ಯಾಶ್ಚರ್ಯವೆನಿಸುತ್ತದೆ.  

    ಸಮೃದ್ಧ  ಸುಂದರ  ಸಂಸ್ಕೃತಭಾಷೆಗೆ  ಸರಿದೊರೆಯಾದ   ಕನ್ನಡ  ಅನುವಾದ,  ಬನ್ನಂಜೆಯವರದ್ದು.  ಕನ್ನಡದ  ಬಾಣಭಟ್ಟರೆಂದೇ  ಹೆಸರಿಸ ಬಹುದಾದ,  ವಿದ್ವಾಂಸ  ಬನ್ನಂಜೆ  ಗೋವಿಂದಾಚಾರ್ಯರು,  ೧೯೬೦ ರದಶಕದಲ್ಲೇ,  ಪತ್ರಿಕೆಯೊಂದರಲ್ಲಿ  ಧಾರಾವಾಹಿಯಾಗಿ   ಕಾದಂಬರಿ  ಕೃತಿಯನ್ನು  ಪ್ರಕಟಿಸಿದ್ದರು. ಬನ್ನಂಜೆಯವರ   ಕಾದಂಬರಿ  ಧಾರಾವಾಹಿಗಾಗಿಯೇ    ಪತ್ರಿಕೆಯನ್ನು  ಜನ  ಮುಗಿಬಿದ್ದು ಖರೀದಿಸುತ್ತಿದ್ದರು.   ವರಕವಿ  ಬೇಂದ್ರೆ     ಅನುವಾದವನ್ನು  ಓದಿ  ಆಕರ್ಷಿತರಾಗುತ್ತಾರೆ.   ಪ್ರಕಟಿಸಲು  ಒತ್ತಾಯಿಸುತ್ತಾರೆ.   ಬನ್ನಂಜೆಯವರು,  ತಾವು  ಮುನ್ನುಡಿ  ನೀಡಿದರೆ  ಮಾತ್ರ   ನಾನು  ಪ್ರಕಟಿಸುತ್ತೇನೆ,  ಎಂಬ  ಶರತ್ತನ್ನು  ಬೇಂದ್ರೆಯವರ  ಎದುರಿಡುತ್ತಾರೆ.    ಕವಿ  ಬೇಂದ್ರೆ   ಅತ್ಯಂತ  ಸಂತಸದಿಂದ  ಮುನ್ನುಡಿ  ನೀಡುತ್ತಾರೆ. 

   ʻʻ  ಇಲ್ಲಿಯ  ಗದ್ಯವು  ಚರ್ವಣಾನುಕೂಲವಾಗಿದೆ.  ವಜ್ರದಂತಕ್ಕಾಗಿ  ಸೃಷ್ಟಿಸಿದ  ಕಬ್ಬಿಣದ  ಕಡಲೆ  ಇಲ್ಲಿ  ಇಲ್ಲ. ಮಾತು  ಕಬ್ಬಿನ  ಗಣಿಕೆ. ಕಬ್ಬದ  ತುಣುಕೆ.  ಸಬ್ಬವದ  ಹಬ್ಬ. ಮಿಣು  ಮಿಣುಕೆ.  ಬನ್ನಂಜೆಯವರ  ಸಾಮರ್ಥ್ಯ    ಕೃತಿಯಿಂದ  ಪ್ರತೀತಿಗೆ  ಬಂದಿತು.  ಉಡುಪಿಯ  ಪ್ರಸಾದ   ಕಜ್ಜಾಯವಾಗಿ, ಕಡಲಿನ   ಉಪ್ಪು  ಲಾವಣ್ಯದ್ಯೋತಕವಾಗಿ  ಬರಲಿ.  ನಾಡು  ನಲಿಯಲಿ.  ನುಡಿ  ಬೆಳಗಲಿ. ಜನತೆ  ಔದಾರ್ಯದಿಂದ  ಬಾಳುವಂತಾಗಲಿ. ʼʼಎಂದು  ಹಾರೈಸುತ್ತಾರೆ. 

    ಸಂಸ್ಕೃತ  ಸಾಹಿತ್ಯದಲ್ಲಿ  ಗದ್ಯಲೋಕದ  ಮೇರುಶಿಖರವಾದ  ಪ್ರಸ್ತುತ  ಕೃತಿ ಪ್ರತಿಪಾದಿಸಿದ   ಪ್ರೀತಿ,  ಪ್ರೇಮ  ವಿರಹ,  ಸ್ನೇಹ,  ಧರ್ಮಪ್ರಜ್ಞೆ,  ಜನ್ಮ  ಪುನರ್ಜನ್ಮ  ಮುಂತಾದ  ಮಾನವೀಯ  ವರ್ತನೆ  ಮತ್ತು  ನಂಬಿಕೆಗಳನ್ನು  ಆಧರಿಸುತ್ತಲೇ,  ಪ್ರಕೃತಿ  ಮತ್ತು  ಜೀವಿಗಳ  ಅವಿನಾಭಾವ  ಸಂಬಂಧಗಳ  ಗಾಢ  ವಿವರಗಳು  ಸುವಿಸ್ತಾರವಾಗಿ  ಇಲ್ಲಿ  ಮೈದಳೆದಿದೆ.   ಕುಮಾರವ್ಯಾಸನಿಗೆ  ಉಪಮಾಲೋಲ  ಎಂದಂತೇ   ಬಾಣಭಟ್ಟನಿಗೆ  ರೂಪಕ  ಚಕ್ರವರ್ತಿ  ಎಂದು  ಖುಷಿಯಿಂದ  ಸಂಬೋಧಿಸಬಹುದು.

    ಇಪ್ಪತ್ತನೆಯ  ಶತಮಾನದ   ನಾಟಕ,  ಸಿನಿಮಾಗಳ   ಮುಖ್ಯ  ಅಭಿವ್ಯಕ್ತಿಯೇ  ಪ್ರೀತಿ  ಪ್ರೇಮ ಕಾಮ  ವಿರಹಗಳಾಗಿತ್ತು.  ಅದಕ್ಕೆಲ್ಲ  ಮೂಲ  ಸ್ಪೂರ್ತಿಯೇ  ಕಾದಂಬರಿ  ಕೃತಿಯಾಗಿತ್ತು  ಎಂದರೆ  ಅತಿಶಯೋಕ್ತಿಯಲ್ಲ.  ಭಾರತೀಯ  ಭಾಷೆಗಳಲ್ಲಿ  ಸಂಸ್ಕೃತವೂ ಸೇರಿ  ಸುಪ್ರಸಿದ್ಧವಾದ  ಕೃತಿಗಳೆಲ್ಲವೂ  ರಾಮಾಯಣ  ಮಹಾಭಾರತ  ಪುರಾಣಗಳನ್ನೇ  ಆಧರಿಸಿ  ರಚನೆಗೊಂಡಿದ್ದರೆ,  ಬಾಣ ಭಟ್ಟ,  ತನ್ನ ಸ್ವಂತ  ಕಲ್ಪನಾಶಕ್ತಿಯಿಂದ  ವಿಭಿನ್ನವಾಗಿ  ತೋರುತ್ತಾನೆ.  ಕಲ್ಪನೆ,  ಭಾಷಾವೈಭವ,  ಮಾನವ  ಮನಸ್ಸುಗಳ  ಸೂಕ್ಷ್ಮವಾದ  ಗ್ರಹಿಕೆ,  ಮತ್ತು  ಪ್ರಕೃತಿಸೌಂದರ್ಯದ  ವರ್ಣನೆಗಳಿಂದ,  ಸಹಸ್ರಮಾನ  ಕಳೆದರೂ,  ಇಂದಿನ  ಮನಸ್ಸಿನ  ದ್ವಂದ್ವಗಳನ್ನೂ  ಅರ್ಥಪೂರ್ಣವಾಗಿ  ಧ್ವನಿಸುತ್ತಾನೆ.   ಅಂತರಂಗದ  ದ್ವಂದ್ವ,ಸ್ಥಿತಿ,  ವಿರಹದ  ತಹ ತಹ ಗಳು,  ಪ್ರಕೃತಿಯೊಂದಿಗೆ  ಸಮೀಕರಣಗೊಂಡು,  ಸೃಷ್ಟಿಯಾಗುವ  ರೋಚಕ  ಘಟನೆಗಳು  ಮೈನವಿರೇಳಿಸುತ್ತವೆ.  

 ಚಂದ್ರಾಪೀಡ – ಕಾದಂಬರಿ,  ಮಹಾಶ್ವೇತಾ – ಪುಂಡರೀಕ,   ಶುಕನಾಸ – ತಾರಾಪೀಡ,  ಚಂದ್ರಹಾಸ  ಎಂಬ  ಕುದುರೆ, ಮುಂತಾದ  ಪಾತ್ರಗಳು   ಕೇವಲ  ಕಥಾ  ಪಾತ್ರಗಳಲ್ಲ.  ಪ್ರೀತಿ  ತ್ಯಾಗ  ನಿಷ್ಠೆ  ಕಷ್ಟಸಹಿಷ್ಣುತೆ ಯಂತಹ  ಮೌಲ್ಯಗಳ  ಪ್ರತಿನಿಧಿಗಳಾಗಿ  ಮಿಂಚುತ್ತವೆ.

    ಸಾಮಾನ್ಯ  ಕಥೆಗಾರನಲ್ಲಿ    ಒಂದು  ಸಾಮಾನ್ಯ  ಪ್ರೇಮ  ಕಾಮದ  ವಿಕೃತ  ವರ್ಣನೆಯಾಗ  ಬಹುದಾಗಿದ್ದ,    ಕೃತಿ,  ಬಾಣಭಟ್ಟನ  ಉನ್ನತ  ಪ್ರತಿಭಾಶಕ್ತಿಯಿಂದ,  ಸಾಂಸ್ಕೃತಿಕ  ತಾತ್ವಿಕ  ಘನತೆಯನ್ನು  ಪಡೆದುಕೊಂಡಿದೆ.  ಹದಿಹರೆಯದ  ಅವಸ್ಥೆಯಲ್ಲಿ,  ಮನುಷ್ಯ  ಕೊಂಚ  ಎಚ್ಚರ ತಪ್ಪಿದರೂ  ಪ್ರಪಾತಕ್ಕೆ  ಬೀಳುತ್ತಾನೆ  ಎಂಬುದನ್ನು  ವರ್ಣಿಸುವ   ಪರಿಯನ್ನು  ಒಮ್ಮೆ  ಗಮನಿಸಬೇಕು.  ಧರ್ಮರಾಜನಿಗೆ  ಹೋಲುವ   ಮಂತ್ರಿ  ಶುಕನಾಸ  ಯುವಾವಸ್ಥೆಯ  ಬಗೆಗೆ  ಹೇಳುವುದು  ಕುತೂಹಲ  ಕೆರಳಿಸುತ್ತದೆ.

   ʻʻ ಯೌವ್ವನದ  ಕಣ್ಣಿಗೆ  ಮಬ್ಬು  ಕವಿಯುತ್ತದೆ.  ಹರೆಯದ  ಹಮ್ಮು  ಸ್ನೇಹವನ್ನೂ  ತೊಳೆದುಬಿಡುತ್ತದೆ.  ಕವಿಬುದ್ಧಿಯಂತೇ  ಚಪಲತೆಯಿಂದ  ನೂರು  ಕನಸುಗಳನ್ನು  ಕಾಣುತ್ತದೆ.  ಯುವ  ಮನಸ್ಸು  ಎಂದರೆ  ಕಾಮ ನೆಂಬ  ಚಿತ್ರಗಾರನ  ಕೈಯ್ಯ  ಕುಂಚ.  ಅದು  ಬಿಡಿಸುವ  ಚಿತ್ರಗಳಿಗೆ  ತುದಿಯಿಲ್ಲ,  ಮೊದಲಿಲ್ಲ. ರೂಪದ  ಮದದಿಂದ  ಮೈಮರೆತ  ಆತ್ಮಾಭಿಮಾನ,  ಸೂಳೆಯಂತೇ.  ಸಿಕ್ಕಿದವರನ್ನು  ಮೋಹಿಸುತ್ತದೆ.  ಬಯಕೆ  ಕನಸಿನಂತೇ  ಕಾಣದ್ದನ್ನೆಲ್ಲ  ಕಾಣಿಸುತ್ತದೆ.  ದುರಾಶೆ  ಮಂತ್ರದಂಡದಂತೇ  ಅಸಂಭವವನ್ನೂ  ಕಣ್ಣಮುಂದೆ  ಕುಣಿಸುತ್ತದೆ.ʼʼ 

       ʻʻಯೌವನ  ಬಂತು ಎಂದರೆ  ತೀರಿತು ಬಾಲ್ಯದ  ಜೊತೆಗೆಯೇ  ಗುರುಜನ ಸ್ನೇಹ   ಜಾರಿ ಹೋಗುತ್ತದೆ.  ಹೊಸ  ಒಲವು  ಒಸರುತ್ತದೆ.  ಬಯಕೆ  ಬಲಿಯುತ್ತದೆ.  ಬಲದ  ಜೊತೆಗೆ  ಮದವೂ  ಸೇರುತ್ತದೆ.  ಬುದ್ಧಿ  ಸ್ಥೂಲವಾಗುತ್ತದೆ.  ಓದಿದ  ಶಾಸ್ತ್ರ  ಬೆಟ್ಟವೇರುತ್ತದೆ.  ಅವಿನಯ  ಬೆಳೆಯುತ್ತದೆ.  ಮೀಸೆಯ  ಜೊತೆಗೆ  ಮೋಹವೂ  ಚಿಗುರುತ್ತದೆ.   ದೂರದೃಷ್ಟಿ  ಮಂದವಾಗುತ್ತದೆ.  ತಿಳಿವಿನ  ಬಾಗಿಲು  ಮುಚ್ಚುತ್ತದೆ.  ರಸಿಕತೆ  ಮಾಡಬಾರದ  ಕೆಲಸ  ಮಾಡಿಸುತ್ತದೆ.  ನಾಚಿಕೆಯ  ಕೋಟೆ  ಕುಸಿದಮೇಲೆ,  ಹೃದಯ  ಮಂದಿರವನ್ನು  ಕಾಮದೇವ  ಆಕ್ರಮಿಸಿದರೆ  ತಡೆಯುವುದು  ಯಾರಿಗೆ  ತಾನೇ  ಸಾಧ್ಯ.ʼʼ 

     ನಾಗವರ್ಮ  ಎಂಬ  ಹಳೆಗನ್ನಡ  ಕವಿ,   ಹತ್ತನೇ  ಶತಮಾನದಲ್ಲೇ   ಕನ್ನಡಕ್ಕೆ  ಅನುವಾದಿಸಿದ್ದನ್ನು  ನೆನಪಿಸಿಕೊಳ್ಳ ಬಹುದಾಗಿದೆ.   ಹನ್ನೆರಡನೇ  ಶತಮಾನದಲ್ಲಿ,  ಸುಪ್ರಸಿದ್ಧ  ಜೈನ ಕವಿ,  ನೇಮಿನಾಥ,  ಬಾಣನ  ಕೃತಿಯ  ಪ್ರಭಾವದಿಂದ,   ಲೀಲಾವತಿ  ಪ್ರಬಂಧ  ಎಂಬ  ಕನ್ನಡ  ಗದ್ಯದಲ್ಲಿ,  ಶೃಂಗಾರ  ರಸಪೂರ್ಣ  ಗದ್ಯಕಾವ್ಯವೊಂದನ್ನು  ರಚಿಸಿ  ಅದೆಷ್ಟು  ಪ್ರಸಿದ್ಧನಾದನೆಂದರೆ,   ಬಾಣನ  ಕಾದಂಬರಿ  ಕೃತಿಯನ್ನು  ನೇಮಿನಾಥನ  ಅಭಿಮಾನಿಗಳು  ಬಾಣನ  ಕಾದಂಬರಿ  ಕೃತಿಯನ್ನು  ಅಕ್ಷರಶಃ  ಸುಟ್ಟು  ಅದರ  ಬೂದಿಯನ್ನು  ಲೀಲಾವತಿ  ಕೃತಿಗೆ  ಲೇಪಿಸುತ್ತಾರಂತೆ.   ಇದೊಂದು  ದಂತಕಥೆಯಿರಬಹುದಾದರೂ,   ಬಾಣನ  ಮತ್ತು  ನೇಮಿನಾಥನ,  ಜನಪ್ರಿಯತೆಯನ್ನು  ಎತ್ತಿ  ತೋರಿಸುತ್ತದೆ.

   ಬನ್ನಂಜೆಯವರು  ಲಭ್ಯವಿರುವ   ಬಾಣಭಟ್ಟನ  ಜೀವನ  ವಿವರ  ಮತ್ತು  ಸಾಹಿತ್ಯ ಸಾಧನೆಗಳ  ಸಂಕ್ಷಿಪ್ತ ನೋಟವನ್ನು  ಕೊಟ್ಟಿದ್ದಾರೆ.   ಪ್ರಸ್ತುತ  ಕೃತಿ  ಬಾಣಭಟ್ಟನಿಂದ  ಅರ್ಧಮಾತ್ರ  ರಚನೆಗೊಂಡಿತ್ತು. ಅಷ್ಟರಲ್ಲಿ ಆತ  ಮರಣಹೊಂದುತ್ತಾನೆ.  ಅವನ  ಮಗ  ಭೂಷಣ  ಭಟ್ಟ  ತಂದೆ  ಅರ್ಧಕ್ಕೆ  ನಿಲ್ಲಿಸಿದ  ಕೃತಿಗೆ  ಪೂರ್ಣಸ್ವರೂಪ  ನೀಡುತ್ತಾನೆ. 

   ಸುದೀರ್ಘ  ಸಮಾಸಗಳು, ಅಲಂಕಾರಪೂರ್ಣ  ಭಾಷಾವೈಭವ, ಚಿತ್ರಕ ಶಕ್ತಿ,  ಅಪೂರ್ವವಾಗಿ  ಮೂಡಿಬಂದಿವೆ.  ಸಹಜ  ಗದ್ಯವೂ  ಮಹಾಕಾವ್ಯದ  ಮಟ್ಟಕ್ಕೆ  ಏರಬಹುದೆಂಬ  ಪಾಠವನ್ನು  ಸಂಸ್ಕೃತ  ಸಾಹಿತ್ಯಕ್ಕೆ  ನೀಡಿದ  ಮಹಾಪ್ರತಿಭಾವಂತ  ಬಾಣಭಟ್ಟ.  ಚಕ್ರವರ್ತಿ  ಶ್ರೀಹರ್ಷನ   ಆಸ್ಥಾನ  ಕವಿಯಾಗಿದ್ದ  ಈತ,  ಹರ್ಷಚರಿತ  ಎಂಬ  ಸುಪ್ರಸಿದ್ಧ  ಕೃತಿಯನ್ನೂ  ರಚಿಸಿದ್ದಾನೆ.     ಸಂಸ್ಕೃತ ಸಾಹಿತ್ಯದಲ್ಲಿ ಒಂದು ಪ್ರಸಿದ್ಧ ನುಡಿ ಇದೆ: ʻʻಕಾದಂಬರಿ  ರಸಜ್ಞಾನಾಂ,  ಆಹಾರೋಪಿ ನ  ರೋಚತೇʼʼ   (ಅಂದರೆ  ಕಾದಂಬರಿ  ಕೃತಿಯ  ರಸಾಸ್ವಾದನೆ  ಗೈದವರಿಗೆ,  ಉಳಿದ  ಯಾವ  ಕೃತಿಯೂ  ಸುಲಭವಾಗಿ  ರುಚಿಸುವುದಿಲ್ಲ.)  ಎಂಬ  ನಾಣ್ಣುಡಿಯೇ  ಸೃಷ್ಟಿಯಾಗಿತ್ತು.

     ಅತಿರಂಜಿತ  ವರ್ಣನೆ,  ಅತಿವಿಸ್ತಾರ,  ಪಾತ್ರಪೋಷಣೆಗಾಗಿ  ನೀಡುವ  ವಿವರಗಳಿಂದ,   ಕಥಾಗತಿ  ನಿಧಾನವಾದಂತೆನ್ನಿಸಿದರೂ,    ಮೊದಲಿಂದ  ಕೊನೆಯವರೆಗೂ, ಭಾವ ತೀವ್ರತೆಯನ್ನು ಉಳಿಸಿಕೊಳ್ಳುತ್ತದೆ.

    ಬನ್ನಂಜೆ ಗೋವಿಂದಾಚಾರ್ಯ ಅವರ ಕನ್ನಡ ಅನುವಾದದ ಕಾದಂಬರಿ  ಸಂಸ್ಕೃತ ಮೂಲದ ಗಾಂಭೀರ್ಯ ಮತ್ತು ಕಾವ್ಯಮಯತೆಯನ್ನು ಕನ್ನಡದಲ್ಲಿ ಸಮರ್ಥವಾಗಿ ಪುನರುಜ್ಜೀವನಗೊಳಿಸಿದ ಮಹತ್ವದ ಕೃತಿಯಾಗಿದೆ.    ಸಂಸ್ಕೃತ ಮೂಲದ ಗಹನತೆ ಕಡಿಮೆಯಾಗದಂತೆ, ಕನ್ನಡ ಓದುಗರಿಗೆ ಸುಗಮವಾದ ಓದುವ ಅನುಭವವನ್ನು ಒದಗಿಸುತ್ತದೆ. ಭಾಷೆ ಇಲ್ಲಿ ಕೇವಲ ಅಭಿವ್ಯಕ್ತಿಯ ಸಾಧನವಲ್ಲ; ಅದು ಭಾವ, ಸೌಂದರ್ಯ ಮತ್ತು ಸಂಸ್ಕೃತಿಯ ಸಂವಹನ ಮಾಧ್ಯಮವಾಗಿ  ಕಾರ್ಯನಿರ್ವಹಿಸುತ್ತದೆ.  ಬಾಣಭಟ್ಟನ ಗದ್ಯದ ಸಂಕೀರ್ಣತೆ, ಅಲಂಕಾರ ವೈಭವ ಮತ್ತು ಭಾವಸಾಂದ್ರತೆಯನ್ನು ಕನ್ನಡದ ಸಹಜ ಲಾಲಿತ್ಯದೊಂದಿಗೆ ಮೇಳೈಸಿರುವುದು ಅನುವಾದದ ವಿಶೇಷತೆಯಾಗಿದೆ.

 

ಜುಲೈ  ತಿಂಗಳ,  ಸುಮ-ಸಂಪದ  ಅಂಕಣಕ್ಕೆ.  ತಾ- ೨೫- ೬ – ೨೦೨೬.

ಸುಬ್ರಾಯ  ಮತ್ತೀಹಳ್ಳಿ.

 

 

Comments

Popular posts from this blog

ಕವನವೆಂದರೆ.......................

ಯುದ್ಧ ಮತ್ತು ಧರ್ಮ

ದೇವರು ಧರ್ಮ ಮಾನವೀಯತೆ ಇತ್ಯಾದಿ