ʻʻ ಕನ್ನಡದ
ಅನರ್ಘ್ಯ ರತ್ನ, ದೇವುಡು.ʼʼ
ಬಾಲನಂತ ದೇವುಡು, ಉನ್ಮತ್ತನಂಥ ದೇವುಡು, |
ಜಡಪಿಶಾಚಿ ದೇವುಡು, ಹುಚ್ಚು ಮರುಳು ದೇವುಡು ||
ಜೀವನವೇ ನಾಟಕ, ತಾನೂ ಒಬ್ಬ ನೋಟಕ |
ಆಟವೋ ಬೂಟಾಟವೋ , ನೋಟವೆಂದ ದೇವುಡು || ( ದ, ರಾ ಬೇಂದ್ರೆ )
೧೯೪೦ ರ ವರ್ಷ್.
ಉಡುಪಿಯ ಶ್ರೀ ಕೃಷ್ಣಮಠದ ಸಭಾಭವನದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ,
ಕರ್ನಾಟಕದ ಸುಪ್ರಸಿದ್ಧ ಭಾಷಣಕಾರರೊಬ್ಬರ ವಾಗ್ವೈಭವವನ್ನು
ಕೇಳಲು ಕಾತರರಾಗಿ ಕುಳಿತ, ಕೇಳುಗರ
ನಡುವೆ, ಅಜಾನುಬಾಹು, ಗೌರವರ್ಣದ ನಿಲುವಂಗಿ ಪಂಚೆಯ ಸರಳ
ಉಡುಗೆಯ ಸ್ಪುರದ್ರೂಪಿ ವ್ಯಕ್ತಿಯೊಬ್ಬರು ಶ್ರೀಮದ್ಗಾಂಭೀರ್ಯದಲ್ಲಿ ವೇದಿಕೆಯನ್ನೇರುತ್ತಾರೆ. ಅಷ್ಟಮಠದ
ಯತಿಗಳ ನಡುವೆ ಇನ್ನೇನು
ಆಸೀನರಾಗಬೇಕು ಎನ್ನುವಾಗಲೇ ಅವರ ಬಳಿಗೆ
ಟೆಲಿಗ್ರಾಮ್ ಒಂದು ಬರುತ್ತದೆ.
ಬಿಚ್ಚಿ ಓದುತ್ತಾರೆ. ಅವರ ಮುಖದಲ್ಲಿ
ಒಂದು ಆತಂಕ ಸುಳಿದು ಶಾಂತವಾಗುತ್ತದೆ.
ಕೆಲವೇ ಕ್ಷಣದಲ್ಲಿ ಶ್ರೀಯುತರ ಕಂಚಿನ ಕಂಠದ
ಮಂದ್ರಸ್ವರದ ಗಂಭೀರ ಧ್ವನಿ ಮೊಳಗತೊಡಗಿತು.
ಅಂದಿನ ಅವರ ಉಪನ್ಯಾಸದ
ವಿಷಯ ʻʻಸ್ಥಿತ
ಪ್ರಜ್ಞತೆ ʼʼ ಎಂಬುದಾಗಿತ್ತು. ಒಂದೂವರೆ ಘಂಟೆಯ
ಕಾಲ ನಿರರ್ಗಳ ವಾಗ್ಜರಿ
ಮನೋವಿಜ್ಞಾನದ ಪಾತಳಿಯಲ್ಲಿ, ಮಾನವ ಬದುಕಿನ ನೋವು ತಲ್ಲಣ,
ಏರು ಇಳಿವು, ಬದುಕಿನ ಸಾರ್ಥಕತೆ,
ಮನುಷ್ಯಸಂಬಂಧಗಳ ಆಳ ವಿಶ್ಲೇಷಣೆಯೊಂದಿಗೆ, ಭಗವದ್ಗೀತೆಯ
ಸಂದೇಶವನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿದ
ಅವರ ನುಡಿಗಳು, ಕಿಕ್ಕಿರಿದ ಇಡೀ ಸಭೆಯನ್ನು ಮಂತ್ರಮುಗ್ಧವಾಗಿಸಿತು. ಅವರ ಉಪನ್ಯಾಸ ಒಂದು ದಾಖಲೆಯನ್ನೇ ಸೃಷ್ಟಿಸಿತು.
ಐದಾರು ನಿಮಿಷ ಕರತಾಡನ ಮೊಳಗಿತು.
ಇನ್ನೂ ಎರಡು ಮೂರುದಿನ
ಅವರ ಉಪನ್ಯಾಸ ನಿಗದಿಯಾಗಿತ್ತು. ಆದರೆ ಅವರು
ಸಂಘಟಕರೊಂದಿಗೆ, ತನಗೆ ಈಗಿಂದೀಗ ಬೆಂಗಳೂರಿಗೆ
ಪ್ರಯಾಣಿಸಬೇಕಿದೆ. ವಾಹನವ್ಯವಸ್ಥೆ ಮಾಡಿಕೊಡಿ ಎಂದು ಅಂಗಲಾಚಿದರು. ಏಕೆ ಅಷ್ಟು
ಆತುರ ಎಂದು ಪ್ರಶ್ನಿಸಿದಾಗ,
ಅವರಿಂದ ಬಂದ ಉತ್ತರ ಸಂಘಟಕರನ್ನು ದಂಗುಬಡಿಸಿತ್ತು. ಎಂಜಿನಿಯರ್ ಆಗಿ ಅದೇ
ಆಗ ಉದ್ಯೋಗ ಪ್ರಾರಂಭಿಸಿದ್ದ
ಓರ್ವ ಮಗ, ವಾಹನ ಅಪಘಾತದಲ್ಲಿ ಮರಣಹೊಂದಿದ್ದ.
ಆದರೂ ಅದು ಹೇಗೆ
ಇಷ್ಟು ಸುಂದರವಾದ ಅದೆಷ್ಟು ಆಳವಾದ ಉಪನ್ಯಾಸ
ಮಾಡಿದಿರಿ..? ಎಂದು ಕೇಳಿದಾಗ,
ʻʻಗೀತೆಯ ಸ್ಥಿತಪ್ರಜ್ಞತೆಯ ಸಂದೇಶವನ್ನು
ನಾನೆಷ್ಟು ಅನುಸಂಧಾನಿಸಿಕೊಂಡಿದ್ದೇನೆ ಎಂಬುದರ ಪರೀಕ್ಷೆ
ಇಂದು ನನಗೆದುರಾಯಿತು. ನಮ್ಮ ಜ್ಞಾನ
ಕೇವಲ ಬೌದ್ಧಿಕವಾದರೆ ಸಾಲದು.
ಪ್ರಜ್ಞೆಯ ಆಳದಲ್ಲಿ ನೆಲೆಸಿರಬೇಕು.
ಆ ಸವಾಲನ್ನು ನಾನು ಇಂದು
ಎದುರಿಸಿದ್ದೇನೆ. ನನಗೆ ನಾನೇ ಸ್ಥಿತಪ್ರಜ್ಞತೆಯನ್ನು ಬೋಧಿಸಿಕೊಂಡೆ.ʼʼ ಎಂದು ಉತ್ತರಿಸುತ್ತ, ವೇದಿಕೆಯನ್ನಿಳಿದರು.
ತಮ್ಮ ಹೆಸರಿನ ಹಿಂದೆ ʻʻ
ದೇವುಡುʼʼ( ಕನ್ನಡದಲ್ಲಿ ದೇವರು ) ಎಂಬ ಉಪನಾಮ ಹೊಂದಿದ್ದ, ದೇವುಡು
ನರಸಿಂಹ ಶಾಸ್ತ್ರಿಯವರೇ ( ೧೮೮೬ – ೧೯೬೨) ಅಂದಿನ
ಉಪನ್ಯಾಸಕರು.
ಕನ್ನಡ ಸಾಹಿತ್ಯದ
ಅನರ್ಘ್ಯ ರತ್ನಗಳಲ್ಲಿ ಒಬ್ಬರಾದ ದೇವುಡು ರವರನ್ನು ನೆನಪಿಸಿಕೊಂಡಾಗಲೆಲ್ಲ, ಮಹಾಬ್ರಾಹ್ಮಣ, ಮಹಾಕ್ಷತ್ರಿಯ,
ಮಹಾದರ್ಶನ, ಎಂಬ ಅಪೂರ್ವ ಮೂರು ಕೃತಿಗಳು ಕಣ್ಣೆದುರು
ಬೆಳಗುತ್ತವೆ. ವೇದ ಉಪನಿಷತ್ತುಗಳ
ವಿಶಾಲ ಅಧ್ಯಯನದಿಂದ ರೂಪುಗೊಂಡ,
ವೇದಕಾಲದ ಜನಜೀವನವನ್ನು ಪುನಃಸೃಷ್ಟಿಸಿದ, ಭಾರತೀಯ
ಕಾದಂಬರಿ ಧಾರೆಗೆ ತಮ್ಮದೇ ಆದ ಹೊಸ ಅನುಭವ
ಪ್ರಪಂಚವನ್ನು ಸೃಷ್ಟಿಸಿಕೊಟ್ಟ, ದೇವುಡು, ಕನ್ನಡ ಅಕ್ಷರ
ಲೋಕದಲ್ಲಿ ಶಾಶ್ವತ ಸ್ಥಾನವನ್ನು
ಪಡೆದುಕೊಂಡಿದ್ದಾರೆ.
ಪಾಶ್ಚಾತ್ಯ ಪೌರಾತ್ಯ
ಜ್ಞಾನಶಿಸ್ತಿನಿಂದ ಸಮೃದ್ಧಗೊಂಡಿದ್ದ ಅವರ ಪ್ರತಿಭಾ ಸಾಮರ್ಥ್ಯ ಸಾವಿರ ಸಾವಿರ
ಪುಟಗಳಲ್ಲಿ ದಾಖಲಾಗಿವೆ. ಶಿಕ್ಷಕರಾಗಿ, ಸರಕಾರಿ ಅಧಿಕಾರಿಗಳಾಗಿ,
ಸಂಶೋಧಕರಾಗಿ, ಚಲನಚಿತ್ರ ಸಾಹಿತಿಗಳಾಗಿ,
ನಾಟಕ ಕಲಾವಿದ, ಸಾಹಿತಿ,
ರಂಗ ನಿರ್ದೇಶಕರಾಗಿ,ಚಲನಚಿತ್ರ ನಟರಾಗಿ,
ಅವರು ಕಾರ್ಯನಿರ್ವಹಿಸಿದ ಬಗೆಗಳನ್ನು
ಕಂಡಾಗ, ಮೈ ನವಿರೇಳುತ್ತದೆ. ಒಂದೇ ಒಂದು ವ್ಯಕ್ತಿತ್ವದಲ್ಲಿ ಅದೆಷ್ಟು ವೈವಿಧ್ಯ. ಅದೆಷ್ಟು ವಿಸ್ತಾರ. !!
ಅವರು ರಚಿಸಿದ
ಹಲವು ಕೃತಿಗಳು ಈಗಲೂ ಪುನರ್ಮುದ್ರಣ
ಗೊಳ್ಳುತ್ತಲೇ ಇವೆ. ಜನಪ್ರಿಯತೆ ಇನ್ನೂ ಉಜ್ವಲವಾಗಿಯೇ ಇದೆ.
ಕನ್ನಡ ಸಾಹಿತ್ಯ
ಸದ್ಯ ಯಾವ ಚಳುವಳಿ, ಯಾವ ಸಂಚಲನವಿಲ್ಲದೇ
ಜಡವಾಗುತ್ತಿದೆ ಎಂದೆನ್ನಿಸುತ್ತಿರುವಾಗ,
ಮತ್ತೆ ನಾವು ನಮ್ಮ ಮೂಲಕ್ಕೆ
ಮರಳುವುದು ಅನಿವಾರ್ಯವೇನೋ ಎಂದೆನ್ನಿಸುತ್ತಿದೆ. ಪಂಪನಿಂದ
ಕುವೆಂಪುವರೆಗಿನ ಭಾಷೆ ಮತ್ತು ವೈಚಾರಿಕ ಸಾಧನೆಗಳ ಮರು ಅನುಸಂಧಾನ
ಮಾತ್ರ ಕನ್ನಡಕ್ಕೊಂದು ಹೊಸಜೀವ
ತಂದುಕೊಡಲು ಸಾಧ್ಯ. ಪರಂಪರೆಯ
ಪ್ರಜ್ಞೆಯಿಲ್ಲದ, ಕೇವಲ ವರ್ತಮಾನದ ಅನುಭವ ಕ್ಲೀಷೆಯಾಗುತ್ತಿರುವುದನ್ನು
ಕಾಣುತ್ತಿದ್ದೇವೆ. ಭಾಷೆ ಅನುಭವಗಳು
ಸೋಲತೊಡಗಿದ ಕ್ಷಣದಲ್ಲೇ ಮತ್ತೆ ಜಾನಪದದ ಮಡಿಲಿಗೆ
ಶರಣಾಗುತ್ತಿರುವುದು, ಒಳ್ಳೆಯ ಬೆಳವಣಿಗೆ. ಪರಿಸರ, ಸಾಮುದಾಯಿಕ ಸಂಸ್ಕೃತಿ,
ಇತಿಹಾಸ ಮತ್ತು ಆಡುಭಾಷೆಗಳ ಕೃತಿಗಳು ಮತ್ತೆ
ನಮ್ಮನ್ನು ಜಾಗ್ರತಗೊಳಿಸುತ್ತಿವೆ.
ಕೀಳರಿಮೆಯಲ್ಲಿ ಬಳಲುತ್ತಿದ್ದ ಕನ್ನಡಭಾಷೆಗೊಂದು ಆತ್ಮವಿಶ್ವಾಸ, ಆತ್ಮಸ್ಥೈರ್ಯವೊದಗಿಸುವ ಅದ್ಭುತ
ಕನ್ನಡ ಕೈಂಕರ್ಯವನ್ನು ಬದುಕಿಡೀ ಮುನ್ನಡೆಸಿದ
ದೇವುಡು ರಂಥ ಹಿರಿಯರ ಸಾಧನೆ ಅನನ್ಯ- ಅಸಾಧಾರಣ. ಕೇವಲ ಕಥೆ ಕಾದಂಬರಿಕಾರರಾಗಿ ಕೃತಿ ರಚಿಸುತ್ತಿದ್ದರೂ ಸಾಕಿತ್ತು.
ಆದರೆ ಅವರ ವ್ಯಕ್ತಿತ್ವದ
ವೈಶಿಷ್ಟ್ಯಪೂರ್ಣ ಆಯಾಮಗಳು, ಅಲ್ಲಿಗೇ ನಿಲ್ಲದೇ
ತಾತ್ವಿಕ ಚಿಂತನೆಯಲ್ಲಿ ತೊಡಗಿಕೊಂಡಿತು. ಕನ್ನಡದಲ್ಲಿ ಇಲ್ಲದಿದ್ದ, ವಿಮರ್ಶೆ, ಮಕ್ಕಳ ಸಾಹಿತ್ಯ,
ಪ್ರಬಂಧ ಪ್ರಕಾರ, ಸಾಂಸ್ಕೃತಿಕ ಸಂಶೋಧನೆ, ನಾಟಕ,
ಮತ್ತು ಕಾದಂಬರಿ ಪ್ರಕಾರಗಳಿಗೆ, ಇಪ್ಪತ್ತನೆಯ
ಶತಕದ ಪ್ರಾರಂಭದ ಅವಧಿಯಲ್ಲಿ, ಒಬ್ಬೊಬ್ಬರೂ ಪ್ರತಿಯೊಂದು
ವಿಭಾಗದಲ್ಲೂ ಅದ್ಭುತ ಸಾಧನೆ ಗೈದು, ಕನ್ನಡವನ್ನು ಜಾಗತಿಕ ಮಟ್ಟಕ್ಕೇರಿಸಿದ್ದು ಇದೀಗ ಇತಿಹಾಸ.
ಅಂತಹ
ಸಾಧಕರಲ್ಲಿ ದೇವುಡು ಶಾಸ್ತ್ರಿಗಳೂ ಪ್ರಮುಖರು. ಜೀವನದ ಗಾಢ
ಸತ್ಯಗಳು, ಧರ್ಮ ನೀತಿ ವಿಚಾರಗಳು ಮಾನವ ಸ್ವಭಾವದ ಸೂಕ್ಷ್ಮತೆಗಳು ಮತ್ತು ಆತ್ಮಜಿಜ್ಞಾಸೆಯ ಮೌಲ್ಯಗಳು ಅವರ ಕೃತಿಗಳಲ್ಲಿ ಗಾಢವಾಗಿ ಚಿತ್ರಣಗೊಂಡಿವೆ.
ಕ್ಷತ್ರಿಯನಾದ ಕೌಶಿಕ ಮಹಾರಾಜ
ತನ್ನ ಸಾಧನೆಯಿಂದ ಮಹಾಬ್ರಾಹ್ಮಣ ವಿಶ್ವಾಮಿತ್ರನಾಗಿ ರೂಪುಗೊಂಡ
ಕಥೆ ʻʻ ಮಹಾಬ್ರಾಹ್ಮಣʼʼ
( ೧೯೫೦) ಕೃತಿಯಲ್ಲಿದ್ದರೆ, ಯಾಜ್ಞವಲ್ಕ್ಯ ನ ಸಿದ್ಧಿ
ಸಾಧನೆಗಳ ರೋಚಕ ವಿವರಗಳು, ʻʻ ಮಹಾದರ್ಶನʼʼ(೧೯೬೦)
ಕಾದಂಬರಿಯಲ್ಲಿ ಚಿತ್ರಣಗೊಂಡಿದೆ. ಮಹಾಕ್ಷತ್ರಿಯ ಕಾದಂಬರಿಯಲ್ಲಿ, ( ೧೯೬೨) ನಹುಷ ಚಕ್ರವರ್ತಿಯ ವೃತ್ತಾಂತ ಬಿಚ್ಚಿಕೊಳ್ಳುತ್ತದೆ. ಮೂರೂ ಮಹಾಕೃತಿಗಳು, ವೇದಕಾಲದ
ಸಂಸ್ಕೃತಿ ಜನಜೀವನ ಮತ್ತು ಜನಾಂಗೀಯ
ಸಮನ್ವಯವನ್ನು ದಾಖಲಿಸುತ್ತ, ವಾಸ್ತವದ
ಸಾಮಾಜಿಕ ದೌರ್ಬಲ್ಯದೆಡೆಗೆ ಕ್ಷ ಕಿರಣ ಬೀರುತ್ತವೆ.
ಅವರ ಕಾದಂಬರಿಗಳಲ್ಲಿ
“ಧರ್ಮ” ಎಂಬುದು
ಕೇವಲ ಆಚರಣೆಗಳಲ್ಲ;
ಅದು ಮಾನವನ
ಅಂತರಂಗದ ಶುದ್ಧತೆಯ
ರೂಪ. ಸತ್ಯ,
ತ್ಯಾಗ, ಕರುಣೆ,
ಕ್ಷಮೆ ಇವುಗಳೇ
ನಿಜವಾದ ಧರ್ಮವೆಂದು
ಅವರು ಸಾರುತ್ತಾರೆ.
ಧರ್ಮ ಮತ್ತು
ಮಾನವೀಯತೆ ಒಂದೇ
ನಾಣ್ಯದ ಎರಡು
ಮುಖಗಳೆಂಬ ದೃಷ್ಟಿಕೋನ
ಅವರ
ಸಮಗ್ರ ಸಾಹಿತ್ಯದಲ್ಲಿ ಗೋಚರಿಸುತ್ತದೆ.
ದೇವುಡು ಕೇವಲ ಪೌರಾಣಿಕ
ಆಧ್ಯಾತ್ಮಿಕ ಕೃತಿಕಾರರಲ್ಲ, ಪತ್ರಕರ್ತರಾಗಿ, ನವಜೀವನ ಪತ್ರಿಕೆಯನ್ನು ಪ್ರಾರಂಭಿಸಿ, ತಮ್ಮ ಕಾಲದ ರಾಜಕೀಯ,
ಸಂಸ್ಕೃತಿ , ಕಲೆ ಕ್ರೀಡೆಗಳಿಗೆ ಒತ್ತು ನೀಡಿದರೆ, ಮಕ್ಕಳ
ಸಾಹಿತ್ಯದ ಕೊರತೆಯನ್ನು ಅನುಲಕ್ಷಿಸಿ,
ಮಕ್ಕಳ ಮನೋಜಗತ್ತನ್ನು ಅರಳಿಸುವ ಉದ್ದೇಶದಲ್ಲೇ
ಎರಡು ದಶಕಗಳ ಕಾಲ ʻʻ ನಮ್ಮ
ಪುಸ್ತಕ ʼʼ ಎಂಬ ಪತ್ರಿಕೆಯನ್ನು ಯಶಸ್ವೀಯಾಗಿ ಪ್ರಕಟಿಸುತ್ತಾರೆ. ರಂಗಭೂಮಿಗೇ ಮೀಸಲಾದ ಪತ್ರಿಕೆಗೆ
ಜನ್ಮನೀಡುತ್ತಾರೆ. ಮಕ್ಕಳ ಮನೋಲೋಕವನ್ನು
ದೃಷ್ಟಿಯಲ್ಲಿಟ್ಟು ೧೬ ಕೃತಿಯನ್ನು ನೀಡುತ್ತಾರೆ.
ಆ ಕಾಲದ ಮುಖ್ಯಮಂತ್ರಿಯಾಗಿದ್ದ (
೧೯೫೩) ಕೆಂಗಲ್ ಹನುಮಂತಯ್ಯನವರ ಮನವೊಲಿಸಿ,
ಕನ್ನಡ ಸಂಸ್ಕೃತಿ ಇಲಾಖೆಯನ್ನು ಪ್ರಾರಂಭಿಸುತ್ತಾರೆ. ಕ.ಸಾಹಿತ್ಯ ಪರಿಷತ್ತಿನ ಕಾರ್ಯಕಾರೀ
ಮಂಡಳಿಯ ಸದಸ್ಯರಾಗಿ, ಪರಿಷತ್ತಿಗೆ
ವೇಗನೀಡುತ್ತಾರೆ.
ಅವರು ರಚಿಸಿದ ʻʻ
ಮಯೂರʼʼ ಕಾದಂಬರಿ ಮುಂದೆ
ಚಲನಚಿತ್ರವಾಗಿ ಯಶ ಪಡೆದಿದ್ದನ್ನು
ಸ್ಮರಿಸಬಹುದಾಗಿದೆ. ಕನ್ನಡದ ಪ್ರಪ್ರಥಮ
ಚಕ್ರವರ್ತಿಯಾದ ಮಯೂರ ಮಹಾರಾಜನ
ಮೂಲಕ ಕನ್ನಡ ಅಸ್ಮಿತೆಯನ್ನು ಉಜ್ವಲಗೊಳಿಸುವಲ್ಲಿ, ಅವರ ಪಾತ್ರ ಬಹು
ಹಿರಿದಾಗಿದೆ. ಕಾಮ ಪ್ರೇಮಗಳ
ದ್ವಂದ್ವಗಳನ್ನು ಚಿತ್ರಿಸುವ ಅಂತರಂಗ
ಎಂಬ ಕಾದಂಬರಿ, ಕನ್ನಡದ
ಮೊಟ್ಟಮೊದಲ ಮನೋ ವಿಶ್ಲೇಷಣಾತ್ಮಕ
ಕೃತಿಯೆಂದು ಪ್ರಸಿದ್ಧವಾಗಿದೆ.
೧೪ ಕಾದಂಬರಿ, ೨೬ ಕಥಾಸಂಕಲನ, ೯ ಪ್ರಾಚೀನ
ಕಾವ್ಯಾನುವಾದ, ೬ ನಾಟಕ, ೧೮ ವೈಚಾರಿಕ ವಾದ ಇತರ ಕೃತಿಗಳೆಲ್ಲ ಸೇರಿ
೮೦ ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ
ಪ್ರಪಂಚಕ್ಕೆ ನೀಡಿದ್ದಾರೆ.
ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ರವರ
ಪಟ್ಟಶಿಷ್ಯರಾಗಿದ್ದ ದೇವುಡು ರವರ
ಸಾಹಿತ್ಯಸಾಧನೆಯನ್ನು ರಾಧಾಕೃಷ್ಣರೇ ಮುಕ್ತ ಕಂಠದಿಂದ
ಶ್ಲಾಘಿಸಿದ್ದಾರೆ.
ತಾತ್ವಿಕ ಗ್ರಂಥವಾದ ಸಂಸ್ಕೃತದ ಯೋಗವಾಸಿಷ್ಠ
ಕೃತಿಯನ್ನು ೨೧ ಭಾಗಗಳಲ್ಲಿ ಕನ್ನಡಕ್ಕೆ ಅನುವಾದಿಸಿದ ದೇವುಡುರವರ
ಈ ಸಾಧನೆ ಕನ್ನಡಕ್ಕೊಂದು
ಅಪರೂಪದ ಕೊಡುಗೆ. ೧೯೫೨ ರಲ್ಲಿ
ದೇವುಡು ರವರ ಸಾಹಿತ್ಯಸಾಧನೆಗೆ ರಾಷ್ಟ್ರಪತಿ ಪದಕ, ಡಾ. ರಾಜೇಂದ್ರ ಪ್ರಸಾದರ ಮೂಲಕ
ದೊರೆತಿದ್ದು, ಅವರ ಸಾಧನೆಗೆ
ಮತ್ತೊಂದು ಗರಿ ಮೂಡಿದಂತಾಗಿತ್ತು.
ದೇವುಡು ರವರ ಪಾತ್ರಗಳು
ಅದು ಪೌರಾಣಿಕ, ಐತಿಹಾಸಿಕ, ಅಥವಾ ಸಾಮಾಜಿಕ ನೆಲೆಯಲ್ಲಿರಲಿ, ಸಾಮಾನ್ಯವಾಗಿ
ನೈತಿಕ ಸಂಘರ್ಷಗಳನ್ನು
ಅನುಭವಿಸುತ್ತವೆ. ಸತ್ಯ–ಅಸತ್ಯ,
ಧರ್ಮ–ಅಧರ್ಮಗಳ
ನಡುವಿನ ಹೋರಾಟವು
ತಾತ್ವಿಕ ಚಿಂತನೆಗೆ
ದಾರಿ ಮಾಡಿಕೊಡುತ್ತದೆ.
ಈ ಸಂಘರ್ಷಗಳ
ಮೂಲಕ ಜೀವನದ
ಸೂಕ್ಷ್ಮ ಸತ್ಯಗಳನ್ನು
ಅವರು ತೆರೆದಿಡುತ್ತಾರೆ.
ಪುರಾಣಪಾತ್ರಗಳನ್ನು ಅವರು
ಮಾನವೀಯ ದೃಷ್ಠಿಯಿಂದ
ವಿಶ್ಲೇಷಿಸಿದ್ದಾರೆ. ದೈವೀಕರಿಸಿದ
ಪಾತ್ರಗಳಲ್ಲಿಯೂ ಮಾನವೀಯ
ದೌರ್ಬಲ್ಯ–ಮಹತ್ವಗಳನ್ನು
ತೋರಿಸುವ ಮೂಲಕ
ಜೀವನದ ವಾಸ್ತವತೆಯನ್ನು
ಒತ್ತಿ ಹೇಳುತ್ತಾರೆ.
ಇದರಿಂದ ಅವರ
ಸಾಹಿತ್ಯಕ್ಕೆ ತಾತ್ವಿಕ
ಆಳ ದೊರಕಿದೆ. ಭಕ್ತಿ ಮತ್ತು ಆಧ್ಯಾತ್ಮಿಕತೆ,
ವೇದಾಂತ ಚಿಂತನೆಗಳ ಮೌಲ್ಯಗಳನ್ನು
ಆಧುನಿಕ ದೃಷ್ಟಿಯಲ್ಲಿ ಚಿತ್ರಿಸುತ್ತಾರೆ. ಮಾನವೀಯ ಮೌಲ್ಯಗಳ ಬಗೆಗಿನ ಅವರ
ಧ್ಯಾನ, ಪ್ರಸ್ತುತ ಕ್ರೂರ
ವರ್ತಮಾನಕ್ಕೆ ಹೊಸ ಪಾಠವಾಗಿ,
ಎಚ್ಚರಿಸುತ್ತದೆ.
ಅವರ ಸಾಹಿತ್ಯಸೃಷ್ಟಿ ಕೇವಲ
ರಂಜನೆಯ ಸರಕಾಗಿ ಸೃಷ್ಟಿಯಾಗಿಲ್ಲ. , ಸಾಹಿತ್ಯವು
ಕೇವಲ ಕಥಾನಕವಲ್ಲ;
ಅದು ಜೀವನದ
ತತ್ವಗಳನ್ನು ಅರಿಯುವ
ಆತ್ಮಯಾತ್ರೆ. ಭಾರತೀಯ
ಪರಂಪರೆ ಮತ್ತು
ಮಾನವೀಯ ಮೌಲ್ಯಗಳನ್ನು
ಸಂಯೋಜಿಸಿದ ಅವರ
ತಾತ್ವಿಕ ದೃಷ್ಟಿ ಕನ್ನಡ ಸಾಹಿತ್ಯಕ್ಕೆ
ಶಾಶ್ವತವಾದ ಕೊಡುಗೆಯಾಗಿದೆ.
ಸುಬ್ರಾಯ ಮತ್ತೀಹಳ್ಳಿ.
ತಾ- ೨೪ -೨- ೨೦೨೪.
ಸಾರಾಂಶವಾಗಿ
No comments:
Post a Comment