ಇರುವುದೆಲ್ಲವ ಬಿಟ್ಟು......ʼʼ
ತಂದೆ ತಾಯಿಯರು
ನಮ್ಮ ಆಯ್ಕೆಯಲ್ಲ. ಜಾತಿ ಪ್ರದೇಶ ಲಿಂಗ ನಮ್ಮ
ಆಯ್ಕೆ ಅಲ್ಲವೇ ಅಲ್ಲ. ನಾವೆಷ್ಟು ದಿನ
ವರ್ಷ ಬದುಕುತ್ತೇವೆಂಬುದು ನಮಗರಿವಿಲ್ಲ. ಪ್ರಾರಂಭ
ಮತ್ತು ಅಂತ್ಯದ ಪುಟಗಳನ್ನು ಹರಿದಿಟ್ಟ ಅಮೂಲ್ಯ ಗ್ರಂಥ ನಮ್ಮ ಜೀವನ.
ಆದಿ ಅಂತ್ಯ ಎರಡೂ ನಿಗೂಢ. ನಿರುತ್ತರ. ಹುಟ್ಟು ಸಾವುಗಳ
ನಡುವೆ ನಮಗೊಂದಿಷ್ಟು ಸ್ವಾತಂತ್ರ್ಯವಿದೆ. ಪರಂಪರೆಯಿಂದ
ಹರಿದು ಬಂದ ಆಡುನುಡಿ, ಸಂಪ್ರದಾಯ ಸಂಸ್ಕೃತಿಗಳು ನಮಗೊಂದು
ವ್ಯಕ್ತಿತ್ವ ನೀಡಿದೆ. ಸುಖ ದುಃಖ ನೋವು
ತಲ್ಲಣ, ಜಗಳ ಪ್ರೀತಿ, ಪ್ರೇಮ ಕಾಮಗಳಲ್ಲಿ ಲೀನವಾದ ನಮ್ಮ ಬದುಕು
ಸ್ವಯಂ ಚಾಲಿತವಾಗಿ ಸಾಗುತ್ತದೆ. ಈ ನಡುವೆ ಅಪರೂಪದಲ್ಲಿ
ಕೆಲವು ವಿಶಿಷ್ಟ ವ್ಯಕ್ತಿತ್ವಗಳು ತಮ್ಮ ಹೆಜ್ಜೆಗುರುತುಗಳನ್ನು ಸಮುದಾಯದ
ಮನೋಭಿತ್ತಿಯ ಮೇಲೆ ಮೂಡಿಸಿ
ಸಾಗುತ್ತವೆ. ಅಂತಹ ಬದುಕುಗಳೇ
ಮುಂದೆ ಒಂದು ಮೌಲ್ಯವಾಗಿ, ಪ್ರಗತಿಗೆ
ವಿಕಾಸಕ್ಕೆ ಏಣಿಗಳಾಗಿ ಮಾರ್ಪಡುತ್ತವೆ. ಪ್ರಜ್ಞೆ
ಎಂಬ ಅನುಪಮ ಶಕ್ತಿ ಪಡೆದ ಮನುಷ್ಯ ಒಂದಲ್ಲಾ ಒಂದು ದಿನ ನಾನೇಕೆ
ಜನ್ಮಿಸಿದೆ. ನನ್ನ ಬದುಕಿನ ಗುರಿಯೇನು.
ಈ ಜೀವನದಾಚೆ ಏನಿದೆ.
ಹಿಂದೆ ಹೇಗಿತ್ತು, ಎಂಬ ಚಿಂತನೆಗೆ
ಇಳಿದೇ ಇಳಿಯುತ್ತಾನೆ. ಅದರಲ್ಲಿ ಕೆಲವು ಮನಸ್ಸುಗಳು
ಮಾನವ ಜೀವನದ ಶಕ್ತಿ ದೌರ್ಬಲ್ಯ, ಅತಿ-ಮಿತಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತವೆ. ಇದೊಂದು
ಮುಗಿಯದ ಯುದ್ಧ. ಆದರೆ ಅಂತಹ ಪ್ರಯತ್ನ
ವಿಫಲವೇನೂ ಅಲ್ಲ. ಅಂಥಹ ಪ್ರಯತ್ನಗಳೇ ನಮ್ಮ ವಿಕಾಸದ ದಾರಿದೀಪಗಳಾಗಿ
ಪಾತ್ರವಹಿಸಿವೆ.
ಅಂತರಂಗ ಜಗತ್ತಿನಲ್ಲಿ ನಡೆಯುವ ಗೊಂದಲ ದ್ವಂದ್ವ ಹುಡುಕಾಟ, ತಡಕಾಟ, ತಾತ್ವಿಕತೆಯ ನೆಲೆಯಲ್ಲಿ ಸಾಗುತ್ತ,
ಅದೇ ತತ್ವಜ್ಞಾನವಾಗಿ, ಕಾವ್ಯವಾಗಿ, ವಿಜ್ಞಾನವಾಗಿ
ರೂಪುಗೊಳ್ಳುತ್ತ, ನಮ್ಮ ಶ್ರೀಸಾಮಾನ್ಯರ ಅತಂತ್ರತೆಗೊಂದು
ಊರುಗೋಲಾಗಿ, ತಲ್ಲಣಗಳಿಗೆ ಸಾಂತ್ವನವಾಗಿ, ಗೊಂದಲಗಳಿಗೆ ತಾತ್ಕಾಲಿಕ
ಶಮನವಾಗಿ, ಕಾಲಯಾನದಲ್ಲಿ ಕೊಂಡೊಯ್ಯುತ್ತಿದೆ.
ಅವರವರ ಮನೋಪ್ರವೃತ್ತಿ,
ಜ್ಞಾನ, ಜಿಜ್ಞಾಸಾ ಮನೋಭಾವಕ್ಕೆ ಅನುಗುಣವಾಗಿ,
ಅಸಂಖ್ಯಾತ ಆಯ್ಕೆ ಎದುರಿಗಿವೆ.
ಅದು ಗದ್ಯವಿರಲಿ, ಪದ್ಯವಿರಲಿ, ಲಲಿತ ಕಲೆಗಳಿರಲಿ, ತತ್ವಜ್ಞಾನ
ಮನೋವಿಜ್ಞಾನವಿರಲಿ, ಅಥವಾ ಆಧುನಿಕ
ವಿಜ್ಞಾನವೇ ಇರಲಿ, ಎಲ್ಲವೂ
ಮನುಷ್ಯಮುಖಿಯೇ. ಸಮಾಜ ಮುಖಿಯೇ. ಆಗಿದೆ. ಆದರೂ
ಮನುಷ್ಯ ಎಂಬ ಜೀವಪ್ರಭೇದ ಸದಾ ಆತಂಕ ಭಯ, ಶಂಖೆಗಳಲ್ಲಿ ತೊಳಲಾಡುತ್ತ
ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ.
ವ್ಯಕ್ತಿ ವ್ಯಕ್ತಿಗಳಲ್ಲಿ
ವೈಮನಸ್ಸು, ಸಮುದಾಯ ಸಮುದಾಯಗಳಲ್ಲಿ ಭಿನ್ನತೆ, ದೇಶ ದೇಶಗಳ ನಡುವೆ ವೈಷಮ್ಯ, ಯುದ್ಧ,
ಹಿಂಸೆ, ಮಾರಣ ಕ್ರಿಯೆಗಳಲ್ಲಿ ತೊಡಗಿಕೊಂಡಿರುವುದನ್ನು
ಕಾಣುತ್ತೇವೆ. ಅಂತರಂಗದಲ್ಲಿ ಕಾಡುವ ಅತಂತ್ರತೆ, ಅಕಾರಣ
ಭಯಗಳು, ಅತೀವ ಸ್ವಾರ್ಥಕ್ಕೆ, ಧ್ವೇಷಕ್ಕೆ ಜಗಳಕ್ಕೆ
ಯುದ್ಧಕ್ಕೆ ತೊಡಗುವಂತೇ ಮಾಡಿಬಿಡುತ್ತದೆ. ಬದುಕು
ನಂದನವಾಗುವುದರ ಬದಲು ನರಕವಾಗಲು
ನಮ್ಮ ಅಪವರ್ತನೆಯೇ ಕಾರಣವಾಗಿಬಿಡುತ್ತದೆ. ಇಂತಹ ಅಯೋಮಯ ಸಂದರ್ಭದಲ್ಲೇ
ಒಂದು ಕವನ ಕಾಡತೊಡಗುತ್ತದೆ.
ಯಾವ ಮೋಹನ
ಮುರಲಿ ಕರೆಯಿತು
ದೂರ ತೀರಕೆ ನಿನ್ನನು
ಯಾವ ಬೃಂದಾವನವು
ಸೆಳೆಯಿತು ನಿನ್ನ ಮಣ್ಣಿನ ಕಣ್ಣನು.!
ಗೋಪಾಲ ಕೃಷ್ಣ ಅಡಿಗ, ಎಂಬ ಹೆಸರು ಕನ್ನಡಸಾಹಿತ್ಯದಲ್ಲಿ ಮನೆಮಾತು.
ಅವರದೊಂದು ಕವನ ಮೋಹನ ಮುರಲಿ,
ಕನ್ನಡ ನಾಡಿನಲ್ಲಿ ಮನೆಮಾತಾದ ಈ ಪದ್ಯ ಅದರ ಲಯ
ಛಂದಸ್ಸು, ತಾತ್ವಿಕತೆ ಚಿಂತನಶೀಲ ಗುಣಗಳೊಂದಲ್ಲದೇ ಸುಪ್ರಸಿದ್ಧ ಗಾಯಕ ಗಾಯಕಿಯರ ಸುಮಧುರ
ಹಾಡುಗಾರಿಕೆಯಿಂದ ಲಕ್ಷಾಂತರ ಮನಸ್ಸುಗಳಿಗೆ
ತಂಪೆರೆದಿದೆ. ʻʻ ಒಂದು
ಶ್ರೇಷ್ಠ ಕವನ ಅರ್ಥವಾಗದೆಯೂ ಸಂವಹನ ಗೈಯ್ಯುತ್ತದೆʼʼ ಎಂಬ ಮಾತು ಅಡಿಗರದ್ದೇ ಆಗಿದೆ. ನನ್ನ ಬಾಲ್ಯದಿಂದಲೂ ಸದಾ ನನ್ನ
ಒಡನಾಡಿಯಾಗಿ, ಅತ್ಯಂತ ಖುಷಿಯ ಕ್ಷಣದಲ್ಲಿ,
ಖಿನ್ನತೆಯ ಕತ್ತಲಲ್ಲಿ ಧುತ್ ಎಂದು ಮನಸ್ಸಿನಲ್ಲಿ ಪ್ರತ್ಯಕ್ಷವಾಗಿ, ಸಾಂಗತ್ಯನೀಡುತ್ತಿರುವ ಮೋಹನ ಮುರಲಿ, ಸರಳವಾಗಿದ್ದೂ ಅಸಾಧ್ಯ ಆಳವನ್ನು ಹುದುಗಿಸಿಕೊಂಡ, ಪದ್ಯವಾಗಿ
ನನ್ನನ್ನು ಕಾಡುತ್ತಿದೆ. ಕಾಪಾಡುತ್ತಿದೆ.
ಭಾರತೀಯ ಭಾಷೆಯಲ್ಲಿಯ
ಕೆಲವೇ ಕೆಲವು ಭಾವಗೀತೆಗಳಲ್ಲಿ
ಈ ಕವನವೂ ಮುಂಚೂಣಿಯಲ್ಲಿದೆ. ವಿಶ್ವ ಭಾವಗೀತೆಯ ಸಾಲಿಗೆ
ಸೇರುವ ತಾಕತ್ತು ಪಡೆದಿರುವ ಮೋಹನ ಮುರಲಿ
ಅದೆಷ್ಟು ಜನರ ಬದುಕಿನಲ್ಲಿ
ಪ್ರವೇಶಿಸಿ, ಸಾಂತ್ವನಗೈದು ಸಂತಸ ನೀಡಿದೆ
ಎಂಬುದನ್ನು ಲೆಕ್ಕವಿಟ್ಟವರಿಲ್ಲ.
ಬೆಂಗಳೂರಿನ ಗಲ್ಲಿಯೊಂದರಲ್ಲಿ ಸಾಯಂಕಾಲದ
ಹೊತ್ತು ನಡೆಯುತ್ತಾ ಸಾಗುತ್ತಲಿರುವಾಗ, ಅದೊಂದು
ಮನೆ ಒಮ್ಮೆಲೇ ಆಕರ್ಷಿಸಿತು.
ಮನೆಯ ಎದುರಿನ ಗೋಡೆಯಮೇಲೆ, ʻʻ
ಮೋಹನ ಮುರಲಿʼʼ ಎಂಬ ಹೆಸರು ರಾರಾಜಿಸುತ್ತಿತ್ತು. ಖುಷಿಯಲ್ಲಿ
ಮನೆಯ ಗೇಟಿನೆದುರು ನೋಡುತ್ತಾ ನಿಂತಿದ್ದೆ. ಮನೆಯ ಯಜಮಾನ ಬಾಗಿಲಲ್ಲೇ
ನಿಂತಿದ್ದರು. ನಾಮಫಲಕವನ್ನು ಗಮನಿಸುತ್ತಿದ್ದ ನನ್ನನ್ನು
ಕಂಡು ಎದುರು ಬಂದು, ಏನು ನೋಡುತ್ತಿದ್ದೀರಿ, ಏನು ಬೇಕಿತ್ತು...
? ಎಂದು ಪ್ರಶ್ನಿಸಿದರು. ʻʻಅಡಿಗರ ಸುಪ್ರಸಿದ್ಧ ಪದ್ಯದ ಅಭಿಮಾನಿ
ನಾನು. ತಾವು ಅದೇ ಪದ್ಯದ ಶೀರ್ಷಿಕೆಯನ್ನು
ಮನೆಯ ಹೆಸರಾಗಿಸಿದ್ದೀರ. ಸಂತಸಗೊಂಡು
ನೋಡಿದೆ.ʼʼ ಎಂದೆ. ಅವರು ಒಳಗೆ
ಬನ್ನಿ ಎಂದು ಕರೆದರು. ಒಳಗೆ ಗೋಡೆಯಮೇಲೆ, ಅದೇ ಕವನದ ಸಾಲುಗಳು
ರಾರಾಜಿಸುತ್ತಿತ್ತು. ಶೋ ಕೇಸಿನಲ್ಲಿ, ಗೋಪಾಲ
ಕೃಷ್ಣ ಅಡಿಗರ ಭಾವಚಿತ್ರದೊಂದಿಗೆ, ಕಾವ್ಯ ಕೃತಿಗಳು ಮಿಂಚುತಿತ್ತು. ಅಂದು ಪರಿಚಯವಾದ
ಅವರು ಶಾಶ್ವತ ಗೆಳೆಯರಾದರು.
ನಮ್ಮಿಬ್ಬರನ್ನು ಮೋಹನ ಮುರಲಿ ಒಂದಾಗಿಸಿತ್ತು.
ಅದರಂತೇ ಇದೊಂದು
ಕವನ ಅನಿರೀಕ್ಷಿತವಾಗಿ ಇನ್ನೊಬ್ಬ ಸಹೃದಯರನ್ನೂ ಗಳಿಸಿಕೊಟ್ಟಿದ್ದು, ನನ್ನ ಅದೃಷ್ಟ.
ಜಿ.ಕೆ.ರವೀಂದ್ರಕುಮಾರ್, ಕನ್ನಡದ
ಮಹತ್ವದ ಪ್ರತಿಭಾಪೂರ್ಣ ಕವಿ. ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದ ಅವರ ಆಕರ್ಷಕ ಮಂದ್ರಸ್ವರದಿಂದ
ಕೇಳುಗರ ಅಚ್ಚುಮೆಚ್ಚಿನ ಉದ್ಘೋಷಕರಾಗಿದ್ದರು. ಒಂದೆರಡೇ
ಕವನ ಸಂಕಲನದಿಂದ ಕಾವ್ಯಪ್ರಿಯರ ಮೆಚ್ಚುಗೆ ಗಳಿಸಿದ್ದ ಅವರು ಕಿರಿಯ ವಯಸ್ಸಿನಲ್ಲೆ ದೂರವಾಗಿದ್ದು
ಬಹುದೊಡ್ಡ ನಷ್ಟ. ಒಂದು ಸಾಹಿತ್ಯವೇದಿಕೆಯಲ್ಲಿ ಅಡಿಗರ ʻʻ ಮೋಹನ
ಮುರಳಿʼʼ ಕವನವನ್ನು ಉದಹರಿಸುತ್ತ, ನನ್ನನ್ನು ಅದು
ಕಾಡಿದ ಪರಿಯನ್ನು ನಿವೇದಿಸುತ್ತಿದ್ದೆ. ಅದೇ ವೇದಿಕೆಯಲ್ಲಿ ಅವರಿದ್ದರು. ತಮ್ಮ ಮಾತಿನಲ್ಲಿ,ʻʻ
ಅದೇ ಕವನ
ನನ್ನ ಸಂಗಾತಿಯಾಗಿ ಸಾಕಷ್ಟು ವರ್ಷವಾಗಿದೆ. ಸದಾ ನನ್ನ
ಜೊತೆಯಲ್ಲಿದೆ, ʼʼ ಎಂದಿದ್ದರು. ಆ ಕಾವ್ಯಕಾರಣದಿಂದಲೇ ನಮ್ಮಿಬ್ಬರ
ಸ್ನೇಹ ಬಂಧ ಗಟ್ಟಿಯಾಯಿತು. ಇದೇ ಕವನ ತಮ್ಮನ್ನು ಕಾಡಿದ ಬಗೆಯನ್ನು
ಮುಂದೆ ತಮ್ಮ ಲೇಖನಗಳಲ್ಲಿ ಮಾರ್ಮಿಕವಾಗಿ ವಿವರಿಸಿದ್ದರು.
ಮೊದಲೆರಡು ಚರಣಗಳಲ್ಲಿ
ಮಾನವ ಜನ್ಮದ ಸೌಂದರ್ಯವನ್ನು
ಸಂಭ್ರಮಿಸುವ ಪದ್ಯ
ಹೂವು ಹಾಸಿಗೆ ಚಂದ್ರ ಚಂದನ ಬಾಹು
ಬಂಧನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ
ರಿಂಗಣ !!
ಬಯಕೆ ಸಹಜ. ಆದರೆ
ಅದಕ್ಕೊಂದು ಮಿತಿಯಿರಬೇಕು. ಆಗ ಬದುಕೊಂದು ಅದ್ಭುತ
ಸ್ವರ್ಗ. ಆದರೆ ಮೌಲ್ಯವನ್ನು ಉಲ್ಲಂಘಿಸಿದಾಗ ಮಾತ್ರ,
ದುರಂತ ದ ಕಪಿಮುಷ್ಠಿಗೆ ಜೀವ ಸಿಲುಕುತ್ತದೆ
ಎಂಬ ಎಚ್ಚರವನ್ನ ಪದ್ಯ ಕೊಡತೊಡಗುತ್ತದೆ.
ನಂತರದಲ್ಲಿ ಚರಣದಿಂದ ಚರಣಕ್ಕೆ
ಸಾಲಿಂದ ಸಾಲಿಗೆ ಜೀವನದ ನಿಗೂಢ ತಿರುವುಗಳನ್ನು ಸ್ಪರ್ಶಿಸುತ್ತದೆ. ಕ್ಷಣಿಕ
ಬದುಕಿನ ಕುದಿತದ ನಡುವೆಯೂ
ಮುದಿತದ ಅನ್ವೇಷಣೆಗೆ
ಮನುಷ್ಯ ಇಳಿಯುವುದನ್ನು ವರ್ಣಿಸತೊಡಗುತ್ತಾರೆ.
ಮರದೊಳಡಗಿದ ಬೆಂಕಿಯಂತೇ ಎಲ್ಲೋ ಮಲಗಿದೆ ಬೇಸರ
ಏನೋ ತೀಡಲು ಏನೋ ತಾಗಲು ಹೊತ್ತಿ
ಉರಿವುದು ಕಾತರ !
ಅದೆಷ್ಟೇ ಸೌಖ್ಯ ಸಮೃದ್ಧಿಯಿರಲಿ, ಅಂತರಂಗದ ಆಳದಲ್ಲಿ
ನೋವು ಮಡುಗಟ್ಟಿದೆ. ಅದೆಷ್ಟೇ ಮರತೇನೆಂದರೂ
ಕಿಡಿಯೆದ್ದು ದಹಿಸತೊಡಗುತ್ತದೆ. ʻʻ ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ
ಕಾದಿದೆ, ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೆ
ಹಾಯಿತೇ !! ʼʼ
ನಮ್ಮ ಆಸೆ ಕನಸುಗಳೋ
ಸಪ್ತಸಾಗರವನ್ನೂ ಮೀರಿಸಿದೆ. ಆದರೆ ಅಂತರಂಗದ
ಸಾಗರದಲ್ಲಿ ಚಲನೆಯೇ ಇಲ್ಲದ ಶುಷ್ಕ
ವಾತಾವರಣ ಹೆಪ್ಪುಗಟ್ಟಿದೆ. ಕನಸಿಗೂ
ವಾಸ್ತವಕ್ಕೂ ಹೇಗೆ ಸೇತುವೆ
ನಿರ್ಮಿಸೋಣ...?. ಇಷ್ಟು ಸಾಕೆಂದಿದ್ದೆಯಲ್ಲೋ ಇಂದು ಏನಿದು
ಬೇಸರ....? ಎಂದು ಕವಿ ಪ್ರಶ್ನಿಸುತ್ತಾರೆ.
ಕವಿ ರವೀಂದ್ರ ಕುಮಾರ್
ತಮ್ಮ ಸುಪ್ತಸ್ವರ ಕೃತಿಯಲ್ಲಿ, ಪ್ರಸ್ತುತ
ಕವನ ಗಾಯಕರ
ಮೂಲಕ ಹೇಗೆ
ಒಂದು ಭಾವ
ಪ್ರವಾಹವಾಗಿ ಪ್ರವಹಿಸಿತು, ಎಂಬುದನ್ನು
ಮೋಹಕವಾಗಿ ವರ್ಣಿಸಿರುವುದನ್ನು ಗಮನಿಸಬಹುದಾಗಿದೆ.
ʻʻ ಸಹಜವಾಗಿ ಇದು ನಮ್ಮ ಸುಗಮ ಸಂಗೀತಗಾರರನ್ನು ಸೆಳೆಯಿತು. ಪ್ರಥಮವಾಗಿ ಎಚ್.ಕೆ.ನಾರಾಯಣರ ಧ್ವನಿಯಲ್ಲಿ ಮೃದುತ್ವವೇ ಮೈವೆತ್ತಿ ಬಂದಂತೆ ತಮ್ಮ ರಾಗ ಸಂಯೋಜನೆಯಲ್ಲಿ,( ಬೃಂದಾವನೀ ಸಾರಂಗ) ಇದನ್ನು ಘನವಾಗಿ ಮೂರ್ತೀಕರಿಸಿದರು. ಯಾವ ಮೋಹನ ದಿಂದ, ಮಣ್ಣಿನ ಕಣ್ಣಿನ ವರೆಗೆ ಸ್ವಲ್ಪ ಶಾಸ್ತ್ರೀಯವಾಗಿಯೇ ಸಾಗುವ ಧಾಟಿ ಎರಡು ನಿಲುಗಡೆಗಳಲ್ಲಿ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಮುರಲಿ ಎಂದು ಹೇಳುವಾಗ ಕೊಂಚ ವಿಳಂಬವಾಗುವ ಗಾಯಕ, ಮುರಲಿಯ ಕಥೆಗೆ ಕೇಂದ್ರ ಸಿದ್ಧಮಾಡಿಕೊಳ್ಳುತ್ತಾನೆ. ಯಾ....ವ, ದೂ.....ರ ಎಂದು ಹೇಳುತ್ತ ಅಂತರವನ್ನು ದಟ್ಟಗೊಳಿಸಿ ನಿನ್ನನ್ನು ಎಂಬುದನ್ನು ಪ್ರತ್ಯೇಕಿಸಿ ಸ್ಥಾಪಿಸುತ್ತಾರೆ. ಇದರ ವಿಶೇಷವೆಂದರೆ ಕಾದಿದೆ, ಹಾಯಿತೇ ಚೇತನ, ಜೀವನ, ಹೀಗೆ ಪ್ರತೀ ಸಾಲೂ ಮೇಲು ಸ್ಥರಕ್ಕೆ ಒಯ್ದು ಏಕೆ ಹೀಗೆ ? ಎಂದು ಕೇಳಿಕೊಳ್ಳಲು ನಮ್ಮನ್ನು ನಿಲ್ಲಿಸುತ್ತಲೇ ಮತ್ತೆ ಗಮಕದ ಪಲಕುಗಳ ಮೂಲಕ ಮೋಹನ ಮುರಲಿಗೆ ಭಾವ ಘಾಸಿಯಾಗದಂತೆ ಕರೆ ತರುತ್ತದೆ. ಹೀಗೆ ಕರೆತಂದು ಮತ್ತೆ ಪಲ್ಲವಿ ಶುರು ಮಾಡುವಾಗ ಹೌದೋ ಅಲ್ಲವೋ ಎಂಬ ಪುಟ್ಟ ಚಡಪಡಿಕೆ ಜಾಗಮಾಡಿಕೊಳ್ಳುತ್ತದೆ. ನಾರಾಯಣರ ಹೊರತಾಗಿ ಉಳಿದ ಗಾಯಕರು ಎತ್ತಿಕೊಳ್ಳುವಾಗ ಅದೊಂದು ಆವೇಶವಾಗಿ ಪರಿವರ್ತನೆ ಗೊಳ್ಳುವುದನ್ನು ನಾನು ಗಮನಿಸಿದ್ದೇನೆ.ʼʼ
ಕವಿತೆಯೊಂದು ಗಾಯಕರನ್ನು
ಸಹೃದಯರನ್ನ ಆವರಿಸುತ್ತ, ವಿವಿಧ ಆಯಾಮದಲ್ಲಿ
ಮುಂದುವರೆದ ರೀತಿಯನ್ನು ರತ್ನಮಾಲಾ
ಪ್ರಕಾಶ ರವರ ದೇಸ್ ರಾಗದ
ಹಿನ್ನೆಲೆಯಲ್ಲಿ ಅನಂತಸ್ವಾಮಿ ಯವರ ಸಂಯೋಜನೆಯಲ್ಲಿ
ರಚಿತವಾದಾಗ, ಹೊಸದೊಂದು ಆಯಾಮವೇ
ದಕ್ಕಿದ ರೀತಿಯನ್ನು ರವೀಂದ್ರ ಕುಮಾರ್ ವಿವರಿಸುತ್ತಾರೆ. ಅಲ್ಲಿ ದೂರ
ಸಂಕ್ಷೇಪವಾಯಿತು. ಕೊಳಲು ಸಂತೂರ್, ಸಿತಾರ್ ಗಳ ಪ್ರಭಾವಯುಕ್ತ
ಬಳಕೆ ವಿವಶ ಸ್ಥಿತಿಯನ್ನು ಜಲಪಾತವಾಗಿಸಿತು. ದಶಕಗಳ
ಕಾಲ ಈ ಹಾಡು ಆಳಿತು,
ಎಂದೆನ್ನುತ್ತ, ಮುಂದೆ ಮನೋಮೂರ್ತಿಯವರ
ಸಂಗೀತ ನಿರ್ದೇಶನದಲ್ಲಿ, ಅಮೇರಿಕಾ ಅಮೇರಿಕಾ
ಚಿತ್ರದಲ್ಲಿ, ಗಂಡು –ಹೆಣ್ಣು ದನಿಯಲ್ಲಿ,
ಯುಗಳವಾಗದೇ ಸಮಾನಾಂತರ ರೇಖೆಯಲ್ಲಿ, ( ಕೀರ್ವಾಣಿ
ರಾಗದಲ್ಲಿ) ವಿಷಾದ ಪೂರ್ಣತೆಯಲ್ಲಿ ಅಭಿವ್ಯಕ್ತವಾಯಿತು ಎಂದು ಅಭಿಪ್ರಾಯ
ಪಡುತ್ತಾರೆ. ಮುಂದೆ ಸಂಗೀತಾ
ಮತ್ತು ರಾಜೂ ಅನಂತಸ್ವಾಮಿ ಜೋಡಿ,, ಮತ್ತಷ್ಟು ಜೀವ ತುಂಬಿದ್ದಾರೆ. ಹೆಣ್ಣು ಧ್ವನಿ ದೃಢತೆಯನ್ನು ಸಾಧಿಸಿದರೆ,
ಗಂಡು ಧ್ವನಿ ಆಳದ ಬಾವಿಯಿಂದ ಎದ್ದು ಬಂದಂತೇ ಸೇರಿಕೊಳ್ಳುತ್ತದೆ.
ಕವಿತೆಯಲ್ಲಿ ನಾಯಕ ನಾಯಕಿಯರಿಲ್ಲ.
ಕೃಷ್ಣ ರಾಧೆಯರಿಲ್ಲ. ಕೃಷ್ಣನಿಂದ ದೂರವಾದ
ರಾಧೆಯ ಮೌನ ಆಕ್ರಂದನದಂತೇ
ಭಾಸವಾಗುವ ಕವಿತೆ, ಓದುಗನನ್ನೇ
ಒಳ ಸೆಳೆದು, ಆತ್ಮವಿಮರ್ಶೆಗೆ ತಳ್ಳಿಬಿಡುತ್ತದೆ. ಕೇವಲ ಹದಿನಾರು ಸಾಲಿನ ಈ
ಕವಿತೆ
ಬದುಕಿನ ಆಸೆ ಆಕಾಂಕ್ಷೆ,
ಸೋಲು ಗೆಲುವುಗಳ ನಡುವೆ, ತನ್ನಂತಾನೇ
ಹರಿದು ಸಾಗುವ ಜೀವನವನ್ನು ಆಧ್ಯಾತ್ಮಿಕ
ಎತ್ತರಕ್ಕೆ ಕೊಂಡೊಯ್ದು ಬಿಡುತ್ತದೆ. ಸಕ್ಕರೆ
ಲೇಪಿತ ಕಹಿಗುಳಿಗೆಯಂತೇ ಮನಮೋಹಕ
ಶಬ್ದಜಾಲದಲ್ಲಿ ಬದುಕಿನ ಕಠೋರತೆಯನ್ನು
ದರ್ಶಿಸುತ್ತದೆ.
ವಿವಶವಾಯಿತು ಪ್ರಾಣ..ಹಾ....
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ !!
ಎಂದು ಮನುಷ್ಯನ ನಿಸ್ಸಹಾಯಕತೆಯನ್ನು, ಛಂದೋಬದ್ಧ, ಸರಳ, ಮತ್ತು ಸಮಗ್ರವಾಗಿ, ಮಾನವ ಬದುಕನ್ನು
ಚಿತ್ರಿಸಿರುವ ಕವಿ ನಂತರದಲ್ಲಿ
ಮುಕ್ತಛಂದಕ್ಕೆ ದಾಂಗುಡಿಯಿಟ್ಟು, ಕನ್ನಡ
ಕಾವ್ಯವನ್ನು ಗಾಯನದಿಂದ ಮುಕ್ತಗೊಳಿಸಿ,
ಚಿಂತನೆಯ ಆಯಾಮಕ್ಕೆ ತಂದರು.
ಕನ್ನಡ ಕಾವ್ಯಕ್ಕೆ ನವ್ಯದ ಸ್ವರೂಪ ನೀಡಿದ ಅಡಿಗರು,
ಕನ್ನಡ ಸಾಹಿತ್ಯದ ಅಪ್ರತಿಮ ಸಾಧಕರು.
ಸುಮ ಸಂಪದ ಅಂಕಣಕ್ಕೆ.
ತಾ- ೨೭-೩-೨೦೨೬. ಸುಬ್ರಾಯ ಮತ್ತೀಹಳ್ಳಿ.
No comments:
Post a Comment