ತಮದ ನಡುವೆ ತನನನ.ʼʼ

 

                        ʻʻತಮದ  ನಡುವೆ  ತನನನ.ʼʼ

ಹಕ್ಕಿಗಳೇಕೆ  ಹಾಡುತ್ತವೋ, 

 ಕಿವುಡು  ಕಿವಿಗಳ  ನಡುವೆ

       ಹೂ  ಬಣ್ಣಗಳನೇಕೆ  ಹಂಚುವವೋ  ಗಿಡಗಳು

       ಕುರುಡು  ಕಂಗಳ  ನಡುವೆ.

ಸೂರ್ಯನಿಗೂ  ಅಷ್ಟೇ ,   ಕೆಲಸವೇ  ಇಲ್ಲ

ದುಂದು ಗೈಯ್ಯುತ್ತಾನೆ  ಬೆಳಕನ್ನ

ಕೊಳ್ಳದವರ  ನಡುವೆ.

       ಸಾಗರದ  ತೆರೆಗಳು  ಸತತ,   ಭುವಿಯ  ಮೈ  ತಟ್ಟಿ

       ಅರಚುತ್ತಿವೆ  ಕಿರಿಚುತ್ತಿವೆ,   ಎಸೆದು ಬಿಡು ನನ್ನೊಡಲಿಗೆ

       ನಿನಗೇಕೆ  ನಿರ್ವೀರ್ಯರ  ಗೊಡವೆ.

 ನವಿಲೇಕೆ  ನರ್ತಿಸಬೇಕು, ಸುಮ್ಮನೆ..?

ರೆಕ್ಕೆ  ಕಾಲುಗಳಿಗೆ  ವ್ಯರ್ಥ  ದಣಿವು.

ನಡೆದಾಡುವ  ಹೆಣಗಳ  ನಡುವೆ.

       ಗುಡಿಗಳಲಿ  ಗಂಟೆ  ಸದ್ದೇಕೆ, 

       ಮಂತ್ರ ತಂತ್ರಗಳ  ಕುತಂತ್ರ ವೇಕೆ..?

       ಜೀವವೇ  ಇಲ್ಲದ  ಗರ್ಭ ಗುಡಿಯ  ನಡುವೆ.

  ನಾದಬೇಕು  ನರವ,  ನಾದಬೇಕು  ನರನ

  ನೂರೆಂಟು  ಪಟ್ಟುಗಳ  ಪ್ರಯೋಗ ಬೇಕು.

  ಗದ್ದಲದ  ಬಾಗಿಲಿಗೆ  ಬೀಗ ಬೀಳಲೇ  ಬೇಕು

ಮೌನದರಮನೆಯ  ದ್ವಾರ  ತೆರೆಯ  ಬೇಕು.

(ಶಿರನಾಲಾ   ಊರಿನ   ಗೋಕುಲ   ಸಂಗೀತ  ಶಾಲಾ  ವಾರ್ಷಿಕೋತ್ಸವದಲ್ಲಿ  ಪ್ರಸ್ತುತಿ.)

ತಾ೧೫ -- ೨೦೨೫

Comments

Popular posts from this blog

ಕವನವೆಂದರೆ.......................

ಯುದ್ಧ ಮತ್ತು ಧರ್ಮ

ದೇವರು ಧರ್ಮ ಮಾನವೀಯತೆ ಇತ್ಯಾದಿ