Sunday, 31 August 2025

ಗೋಡೆ - ದಾಡೆʼʼ

 

                               ಗೋಡೆ -  ದಾಡೆʼʼ

 

ತನ್ನಂತಾನೇ ಒತ್ತೊತ್ತಾಗಿ  ಕತ್ತೆತ್ತದೇ

ಕತ್ತೆಯಂತೇ  ಸತ್ತೆ.

ಮತ್ತೆ  ಮತ್ತೆ  ಹತ್ತಿರತ್ತಿರ  ಸರಿದು,

ಪೊತ್ತೆ ಪೊತ್ತೆ ಮರಿಯಿತ್ತು,

ಹಿಕ್ಕೆ ರಾಶಿಯ ನಡುವೆ ಶ್ವಾನ ಸಂತೆ.

  

     ಎದುರೇನೋ  ಹಳದಿ ಕೆಂಪು ಹಸಿರು ಬಣ್ಣ.

     ಸುಳಿದು ಸೆಳೆಯುವ  ಕಣ್ಣ

     ಒಳಗಿರುವ ಕತ್ತಲೆಯ ತಣ್ಣ

    ನೆಯ ಹುಣ್ಣಲ್ಲಿ  ಮಣ್ಣ ಪ್ರತಿಫಲನ.

    ಎದೆಯೊಳಗಣ  ಹಕ್ಕಿ, ತೇವವನೂ  ನೆಕ್ಕಿ

    ಅವಕಾಶದೊಳಗೆ   ಪಲಾಯನ.

 

ರಂಗು ರಂಗಿನ ಗೋಡೆ. ಒಳಗೆ ಕೋರೆದಾಡೆ

ನಾಲ್ಕು ಕಾಲಿನ ಸ್ಪರ್ಧೆ,  ಎರಡೇಎರಡು  ಕಾಲು.

ಹೊದ್ದಿರುವ  ಕಳೆ ಕಂಟಿ, ಮೈಮನಗಳಿಗಂಟಿ

ಗಾಯ ಮಾಯದ  ಹಾಗೆ  ಆವರಿಸಿದ  ಧೂಳು.

   

   ಪುಟ್ಟ ಪುಟ್ಟ ಕಿಂಡಿ, ಹೆಸರು ಮಾತ್ರ ಕಿಟಕಿ

    ದುರ್ಗಂಧ ಸೇರಿ  ಕೇಳುತಿದೆ  ಕಟಕಿ,

    ಬಿರುಕು ಛಾವಣಿಯಲಿ ಆಗಾಗ ಇಣುಕಿದ

    ಮಳೆ ಮಿಶ್ರಿತ ಬೆಳಕು, ಕುಣಿದಿದೆ  ಕಣ ಕಣವ ಹಿಸುಕಿ.

 

ಒದ್ದೆ ನೆಲ ಹೊದ್ದ  ಬಿದ್ದ ಚಿಂದಿಯ ಸ್ಪರ್ಶ

ಭಾವದ ಕಾವಿಲ್ಲ. ಕನಸು ಚಿಗುರುವುದಿಲ್ಲ

ನಿಗೂಢ ಮೌನ   ಹೈರಾಣ ತಾಣ.

ಹಾವ ಭಾವದಿ ನಗರ ನಾಗರ

ಹುತ್ತ ಹೆತ್ತಿದೆ, ಹೆಡೆಯನೆತ್ತಿದೆ,

ಮತ್ತಿನಲಿ ತೋರುತಿದೆ  ತಾಕತ್ತ.

ಮತ್ತೆ  ಚೀರುತಿದೆ, ಉನ್ಮತ್ತ

ತಾ..........ಕತ್ತ.!!  ಕತ್ತ,,,,!!

 

 

ಮಯೂರ;   ಕಲ್ಪನೆ  ಕವನ,       ಸುಬ್ರಾಯ  ಮತ್ತೀಹಳ್ಳಿ.  ಅಂಚೆ- ತ್ಯಾಗಲಿ.  ತಾ-  ಸಿದ್ದಾಪುರ. ((ಉ.ಕ)  ೫೮೧೩೪೦.

No comments:

Post a Comment