ʻʻಕಥೆಯ ಒಡಲಲ್ಲಿ
ವ್ಯಥೆಯ ಬೆಂಕಿʼʼ
ಕಥೆ ಅಂದರೆ
ಸಾಂತ್ವನ. ಜಡತೆಗೆ ಚೇತನ. ಮಾನವೀಯ
ಸಂಚಲನ. ಸಾತ್ವಿಕ ಪ್ರತಿಭಟನ.
ಮನುಷ್ಯ ಸಂಬಂಧಗಳ ಉದ್ದೀಪನ.
ಇವೇ ಕಥಾಸೃಷ್ಟಿಯ
ಮೂಲ ಸ್ರೋತ. ಕಥೆ ಎಂದೂ ಉಪದೇಶಿಸಲಾರದು.
ಅಭಿನಯಿಸಿ ತೋರಿಸುತ್ತದೆ. ಭೂತದ
ನೆನಪನ್ನು ಜಾಗ್ರತ ಗೊಳಿಸಿ, ವರ್ತಮಾನಕ್ಕೆ ಚುರುಕು ನೀಡುತ್ತದೆ.
ಭವಿಷ್ಯದ ಹೂಗನಸಿಗೆ
ನೀರೆರೆಯುತ್ತದೆ.
ಬದುಕು
ನಿಂತ ನೀರಲ್ಲ.
ಅದಕ್ಕಿರುವ ಸಹಜ ಚಲನೆಗೆ
ಒಮ್ಮೊಮ್ಮೆ ತಡೆಯುಂಟಾದಾಗ,
ತಡೆಗೆ ಕಾರಣವಾದ
ಸಂಗತಿಯೆಡೆಗೆ ಸಂವೇದನಾಶೀಲ
ಮನಸ್ಸು ಲಕ್ಷ ಕೊಡಲೇ ಬೇಕಾಗುತ್ತದೆ. ಅದು
ಕಲೆ ಸಾಹಿತ್ಯ ಕಾವ್ಯ
ಅಥವಾ ಚಳುವಳಿಗಳ
ರೂಪದಲ್ಲಿ ಪ್ರಕಟಗೊಳ್ಳಬಹುದು. ಒಟ್ಟಿನಲ್ಲಿ
ದಾರಿತಪ್ಪಿದ ಬದುಕಿನ
ಲಯವನ್ನು ಸರಿದಾರಿಗೆ ತರುವ
ಸಾತ್ವಿಕ ಹೋರಾಟ
ನಿತ್ಯ ನಿರಂತರ ಜರುಗುತ್ತಲೇ
ಇದ್ದರೆ ಮಾತ್ರ
ಮಾನವ ಪ್ರಪಂಚ ಸುಸ್ಥಿರವಾಗಿರಬಲ್ಲದು.
ಇಂಥ ಧ್ಯೇಯವೇ
ಪ್ರಧಾನ ಆಶಯವಾಗಿ,
ರೂಪುಗೊಂಡ ಅಪರೂಪದ
ಕಥಾ ಸಂಕಲನವೊಂದು ಇದೀಗ
ನನ್ನ ಗಮನಕ್ಕೆ ಬಂದಾಗ.
ಪ್ರತಿಕ್ರಿಯಿಸಲೇ ಬೇಕೆಂಬ
ಉತ್ಕಟ ಅಭಿಲಾಷೆ
ನನ್ನನ್ನು ಸ್ಪರ್ಶಿಸಿತು.
ಭಾರತೀಯ
ಮಹಳಾ ಸೃಜನಶೀಲ
ಚಟುವಟಿಕೆ, ಪ್ರಾರಂಭದಲ್ಲಿ
ಕೇವಲ ಆಕ್ರೋಶ ಅಸಹಾಯಕತೆಯಲ್ಲಿ ನರಳಿದರೆ,
ಸರಿಸುಮಾರು ತೊಂಭತ್ತರ
ದಶಕದಲ್ಲಿ ತನ್ನತನವನ್ನು ಅನ್ವೇಷಿಸಿಕೊಳ್ಳುತ್ತ, ಹೊಸ ಶತಮಾನದಲ್ಲಿ,
ಸದೃಢ ಹೆಜ್ಜೆಯಿಟ್ಟು ಸಮಾಜದೆದುರು
ತನ್ನ ದೃಢವಾದ ಅಸ್ತಿತ್ವವನ್ನು
ಸ್ಥಾಪಿಸಿಕೊಳ್ಳುವಲ್ಲಿ ವಿಜಯಸಾಧಿಸಿದ್ದನ್ನು
ಕಾಣಬಹುದಾಗಿದೆ. ಇಂದು
ಮಹಿಳಾಸಾಹಿತ್ಯವನ್ನು ಅಡಿಗೆಮನೆ ಸಾಹಿತ್ಯವೆಂದು
ಮೂಗುಮುರಿಯುವವರಿಗೆ ಸಮರ್ಥ
ಉತ್ತರವಾಗಿ, ಕಾವ್ಯ
ಮಹಾಕಾವ್ಯ, ಸಂಶೋಧನೆ,
ಕಥೆ ಕಾದಂಬರಿಗಳ
ಮೂಲಕ ಆತ್ಮವಿಶ್ವಾಸದಿಂದ
ಮುನ್ನುಗ್ಗುತ್ತಿರುವುದನ್ನು ಕಂಡಾಗ,
ಬೆರಗು ಮೂಡುತ್ತದೆ.
ತಾಯ್ತನದ ಮಾರ್ದವ, ಚಿಂತನಶೀಲ ಧೀಶಕ್ತಿ,
ಸೃಜನಶೀಲ ಉತ್ಸಾಹ ಮತ್ತು
ಸತ್ಯಶೋಧನೆಯ ಅತ್ಯುನ್ನತ
ಆಕಾಂಕ್ಷೆಗಳನ್ನು ಕಂಡಾಗ,
ಹೆಣ್ಣು ತನ್ನದೇ ಆದ
ಅಭಿವ್ಯಕ್ತಿ ಮಾರ್ಗದಲ್ಲಿ, ಹೊಸ ಭಾಷೆ,
ಹೊಸ ಹರಿವು,
ಹೊಚ್ಚಹೊಸ ಕಣ್ಣೋಟ,
ಮತ್ತು ಸ್ವಾಭಿಮಾನದ ಚಲನೆಯನ್ನು ದಕ್ಕಿಸಿಕೊಂಡಿದ್ದನ್ನು
ನಾವಿಂದು
ಕಾಣುತ್ತಿದ್ದೇವೆ.
ಇದಕ್ಕೆ
ಸಾರ್ಥಕ ಉದಾಹರಣೆಯೆಂದರೆ,
ಲೇಖಕಿ ಭಾನುಮುಷ್ತಾಕ್
ರವರ ʻʻ ಎದೆಯ ಹಣತೆʼʼ
ಕಥಾ ಸಂಕಲನ, ಜಾಗತಿಕ ಮಟ್ಟದ
ಬುಕರ್ ಪ್ರಶಸ್ತಿ ಪಡೆದಿದ್ದು.
ಇದು ಇಂದಿನ
ಮಹಿಳಾ ಸೃಜನಶೀಲ ಚಟುವಟಿಕೆಯ
ಅನುಪಮ ಕ್ಷಣ.
ಕಾವ್ಯವಾಗಲೀ
ಕತೆಯಾಗಲೀ ಅದು
ರಂಜನೆಯ ಆಟಿಗೆಯಲ್ಲ. ರಂಜನೆ
ಅದರ ತಂತ್ರ ಅಷ್ಟೇ.
ಶೋಕವೇ ರಾಮಾಯಣದಲ್ಲಿ ಶ್ಲೋಕವಾದಂತೇ,
ವ್ಯಥೆಯೇ ಮಹಾಭಾರತದಲ್ಲಿ
ಕತೆಯಾಗಿ ಜನ್ಮತಾಳಿತು.
ಮೂಲಭೂತವಾಗಿ ಮನುಷ್ಯ
ಸ್ವಾರ್ಥಿ. ಅವಕಾಶ ಸಿಕ್ಕಾಗಲೆಲ್ಲ
ಸ್ವಾರ್ಥದ ಮಿತಿ ದಾಟಿ,
ಶೋಷಣೆಯ ಆಖಾಡಕ್ಕಿಳಿದಾಗಲೆಲ್ಲ, ಪ್ರತಿರೋಧ
ಸೃಷ್ಟಿಯಾಗಲೇ ಬೇಕು. ಜಗತ್ತಿನಲ್ಲಿ
ಇದಕ್ಕೆ ಸಮರ್ಥ ಉದಾಹರಣೆ ಹೆಣ್ಣು.
ಅದು ಧರ್ಮವಿರಲಿ, ರಾಜಕಾರಣವಿರಲಿ,
ಕುಟುಂಬವಿರಲಿ, ಅಥವಾ
ಯುದ್ಧವೇ ಇರಲಿ, ಕೊಟ್ಟಕೊನೆಗೆ
ಪರ್ಯಾವಸಾನಗೊಳ್ಳುವುದು ಹೆಣ್ಣಿನ
ಕಣ್ಣೀರಿನಲ್ಲಿ. ಗಂಡಿನ
ಸ್ವಾರ್ಥ, ಅಹಮಿಕೆಗಳಿಗೆ ಅಧಿಕಾರ ಲಾಲಸೆಗೆ
ಬಲಿಯಾಗಿದ್ದು,ಹೆಣ್ಣೊಬ್ಬಳೇ.
ಈ ವಿಚಾರಕ್ಕೆ
ಪ್ರಚೋದನೆಯಾದದ್ದು, ಇತ್ತೀಚೆಗೆ ಪ್ರಕಟವಾಗಿ
ಸಂಚಲನ ಮೂಡಿಸಿದ ಕವಯತ್ರಿ
ಮಾಧವಿ ಭಂಡಾರಿಯವರ ಅಪರೂಪದ
ಕಥಾಸಂಕಲನ ʻʻ ಗುಲಾಬಿ ಕಂಪಿನ ರಸ್ತೆʼʼ ಕೃತಿ,
ಎಂದರೆ
ಅತಿಶಯೋಕ್ತಿಯಲ್ಲ. ಗ್ರಾಮೀಣ
ಮಹಿಳೆಯ ಕಷ್ಟಸಹಿಷ್ಣುತೆ,
ಸಂಸ್ಕೃತಿ ನಿಷ್ಠೆ, ಛಲ, ತಾಯ್ತನ, ನೈತಿಕತೆ, ಮತ್ತು ಕುಟುಂಬ ವಾತ್ಸಲ್ಯಗಳನ್ನೆಲ್ಲ,
ಮಹಿಳೆಯ ಅಂತರಂಗದಿಂದಲೇ
ಉತ್ಖನನಗೈದು ಕಲೆ
ಮತ್ತು ಪರಿಸರದ
ಸುವರ್ಣಚೌಕಟ್ಟಿನಲ್ಲಿಟ್ಟು ದರ್ಶಿಸಿದ
ಉತ್ಕೃಷ್ಟ ರಚನೆಗಳಾಗಿ ರೂಪುಗೊಂಡಿರುವ
ಪ್ರಸ್ತುತ ಕೃತಿ
ಖುಷಿಕೊಡುವುದರ ಜೊತೆಗೆ
ಭೂತದ ವಿಷಾದವನ್ನು ನೆನಪಿಸುತ್ತ
ಬೆಚ್ಚಿಬೀಳಿಸುತ್ತದೆ.
ಹಲವು ಸ್ಪರ್ಧೆಗಳಲ್ಲಿ ಬಹುಮಾನಿತ
ಕತೆಗಳೂ ಸೇರಿ
ಹನ್ನೆರಡು ಕತೆಗಳು, ಒಂದಕ್ಕಿಂತ
ಒಂದು ವಿಭಿನ್ನ ಆಯಾಮಗಳಲ್ಲಿ, ವೈವಿಧ್ಯಮಯ
ಸ್ತ್ರೀ ಬದುಕಿನ ತಲ್ಲಣಗಳನ್ನು
ಅನಾವರಣ ಗೊಳಿಸಿವೆ. ಅದು
ಮತೀಯತೆಯ ಸಂಘರ್ಷವಿರಲಿ,
ಮೂಢ ಆಚರಣೆಗಳಿರಲಿ, ದಾಂಪತ್ಯದ ಆಂತರ್ಯವಿರಲಿ,
ಸಾಮುದಾಯಿಕ ಆಚರಣೆಗಳಿರಲಿ, ಅಥವಾ
ಲೈಂಗಿಕ ಚಟುವಟಿಕೆಗಳಿರಲಿ, ಅವುಗಳೆಲ್ಲವೂ
ಹೆಣ್ಣಿನ ಮನೋಭಿತ್ತಿಯಮೇಲೆ
ಮಾಡುವ ಸೂಕ್ಷ್ಮ ಆಕ್ರಮಣಗಳ
ನಂಜನ್ನು ಅತ್ಯಂತ
ಸಹನೆಯಿಂದ, ಅಷ್ಟೇ
ಆಳವಾಗಿ ಶೋಧಿಸಿದ
ಗಮನಾರ್ಹ ರಚನೆಗಳಾಗಿ
ಮೂಡಿಬಂದಿರುವ ಇಲ್ಲಿಯ
ಕತೆಗಳು, ವ್ಯಥೆಯೇ ಮೂರ್ತಗೊಂಡ
ಬದುಕಿನ ನೈಜ
ಅಭಿವ್ಯಕ್ತಿಯಾಗಿವೆ.
ಕೃತಿಗೆ
ಆಸಕ್ತಿಪೂರ್ಣ ಸುದೀರ್ಘ
ಮುನ್ನುಡಿ ನೀಡಿದ
ಕನ್ನಡ ಪ್ರಾಧಿಕಾರದ ಅಧ್ಯಕ್ಷ
ಡಾ. ಪುರುಷೋತ್ತಮ ಬಿಳಿಮಲೆ,
ಕೃತಿಯ ಸೂಕ್ಷ್ಮ
ಕಳಕಳಿಯನ್ನು ಆತ್ಮೀಯವಾಗಿ
ಗುರುತಿಸುತ್ತ,
ʻʻ ಮಾಧವಿ ಭಂಡಾರಿಯವರ
೧೨ ಕತೆಗಳು ಮಹಿಳಾ ಲೋಕದ ವಿಭಿನ್ನ ಕಷ್ಟಗಳನ್ನು ಹೃದಯಂಗಮವಾಗಿ
ವಿವರಿಸುತ್ತವೆ. ಈ ಲೋಕದಲ್ಲಿ
ಕೌಟುಂಬಿಕ ಕಷ್ಟಗಳಿವೆ, ಗಂಡಿನ
ಲೈಂಗಿಕ ದೌರ್ಜನ್ಯಗಳಿವೆ. ಬಡತನದ ದಾರುಣತೆಯಿದೆ.
ಹೆಣ್ಣಿನ ಶೋಷಣೆಯ ವಿವಿಧ ಮುಖಗಳಿವೆ.
ಮುಟ್ಟಿನ
ಕುತೂಹಲದ ಜೊತೆಗೆ ಜಾತ್ರೆಯ
ಸಂಭ್ರಮವೂ ಇದೆ. ಇವೆಲ್ಲವುಗಳ
ಜೊತೆಗೆ ತಾಯ್ತನದ ಕರುಣೆ,
ಮತ್ತು ಕನಸುಗಳೂ ಸೇರಿಕೊಂಡು ಕತೆಗಳನ್ನು ಅನನ್ಯ ವಾಗಿಸಿವೆʼʼ ಎಂದು ಮುಕ್ತವಾಗಿ
ಶ್ಲಾಘಿಸಿದ್ದಾರೆ.
ಕೃತಿಯನ್ನು ಅವಲೋಕಿಸಿ
ಉತ್ಕಟವಾಗಿ ಸ್ಪಂದಿಸಿದ
ಕನ್ನಡದ ಸಮರ್ಥ ಕತೆಗಾರ್ತಿ,
ಸುನಂದಾ ಕಡಮೆ, ʻʻಮಾಧವಿ ತಮ್ಮ ಕಣ್ಣಾಚೆಗೂ
ಬೆಳೆವ ನಿಲುಕುಗಳಿಗೆ ಕೈ ಚಾಚುವವಳು.
ಅವಳ ಇಡೀ ವ್ಯಕ್ತಿತ್ವದ ಗಮ್ಯತೆಯನ್ನು ಹಿಡಿಯುವ ಅನುಭಾವ ಕೂಡ ಕತೆಗಾರ್ತಿಯ ಅನುಭವದ
ನೆಲೆಯಲ್ಲಿ ಕಟ್ಟಿಕೊಂಡ ಅಪೂರ್ವ ಶಕ್ತಿಯೇ. ಅಷ್ಟೇ ಏಕಾಗ್ರತೆಯಿಂದ ಅತ್ಯಂತ
ಉತ್ಕಟವಾಗಿ ತನ್ನ ದೈನಿಕಕ್ಕೆ ಸ್ಪಂದಿಸುತ್ತ,
ಪ್ರಾಮಾಣಿಕವಾಗಿ ಬದುಕುತ್ತಿರುವ ಮಾಧವಿಯ,
ಬೆರಗು ಮತ್ತು ನಿಗೂಢತೆ ತುಂಬಿದ ಇಲ್ಲಿಯ ಕತೆಗಳ ಭಾವ
–ಭಾಷೆಗಳ ಪಾಕ ಅಪ್ರತಿಮ. ಬುದ್ಧಿಗೆ
ಬೆಳಕು, ಎದೆಗೆ ಸಾಂತ್ವನ, ಬದುಕಿಗೆ ದಾರಿ ಕಾಣಿಸುವ
ಕತೆಗಳನ್ನು ಮೂಡಿಸಿದ ಈ ಕತೆಗಾರ್ತಿಗೆ
ಒಂದು ಅಕ್ಕರೆಯ ನಮಸ್ಕಾರʼʼ
ಎಂದು ಹಾರೈಸುತ್ತಾರೆ.
ಈಗಾಗಲೇ ಲೇಖಕಿ
ಮಾಧವಿ ಭಂಡಾರಿ,
ಕರ್ನಾಟಕ ಲೇಖಕಿಯರ
ಸಂಘದ ಪ್ರಶಸ್ತಿ,
ಅತ್ತಿಮಬ್ಬೆ ಪ್ರತಿಷ್ಠಾನ
ಪ್ರಶಸ್ತಿ, ದಿನಕರ ದೇಸಾಯಿ
ರಾಷ್ಟ್ರೀಯ ಕಾವ್ಯಪ್ರಶಸ್ತಿ,
ಮೋಹನ ಕುರಡಗಿ
ಕಾವ್ಯಪ್ರಶಸ್ತಿ ಮುಂತಾದ ಗೌರವಗಳನ್ನು
ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರ ಇದೇ ಕೃತಿಯ ಶೀರ್ಷಿಕೆಯ ಕತೆಯೊಂದು,
ಕರ್ನಾಟಕ ವಿಶ್ವವಿದ್ಯಾಲಯದ ತರಗತಿಯೊಂದಕ್ಕೆ
ಪಠ್ಯವಾಗಿ ಆಯ್ಕೆಗೊಂಡಿರುವುದು ಕತೆಗಾರ್ತಿಯ
ಪ್ರತಿಭೆಗೆ ಗರಿಮೂಡಿದಂತಾಗಿದೆ. ಈವರ್ಷವಷ್ಟೇ
ಶಿಕ್ಷಕ ವೃತ್ತಿಯಿಂದ ನಿವೃತ್ತಿ
ಪಡೆದ ಇವರು,
ಸಮರ್ಥ ಯಕ್ಷಗಾನ
ಅರ್ಥಧಾರಿಗಳು. ಪ್ರತಿಭಾವಂತ
ರಂಗ ಕಲಾವಿದರು.
ಕನ್ನಡ
ಪುಸ್ತಕ ಪ್ರಾಧಿಕಾರದ
ಸದಸ್ಯರಾಗಿ ಕಾರ್ಯನಿರ್ವಹಿಸಿದ
ಅನುಭವ. ತಮ್ಮ ತಂದೆ
ಆರ್.ವಿ. ಭಂಢಾರಿ ನೆನಪಿನ
ಸಹಯಾನ ಸಂಸ್ಥೆಯ
ಸಂಘಟಕರಾಗಿ, ತಮ್ಮ ಊರಿನಲ್ಲೇ
ರಾಜ್ಯಮಟ್ಟದ ಸಾಹಿತ್ಯಿಕ
ಸಾಂಸ್ಕೃತಿಕ ವೈಚಾರಿಕ ಮತ್ತು
ಮಕ್ಕಳ ರಂಗಶಿಬಿರಗಳನ್ನು ಸಂಘಟಿಸುವ
ಮೂಲಕ ನಿರಂತರ
ಚಟುವಟಿಕೆಯಲ್ಲಿರುವುದು ವಿಶೇಷ.
ಪ್ರಕಟಗೊಂಡು
ವರ್ಷತುಂಬುವ ಒಳಗೇ
ಮರುಮುದ್ರಣದ ಹೊಸಿಲಿಗೆ
ಪ್ರವೇಶಿಸಿರುವ ಮೂಲಭೂತವಾಗಿ
ಗ್ರಾಮೀಣ ಸ್ತ್ರೀ ಸಂಕುಲವನ್ನು
ದೃಷ್ಟಿಯಲ್ಲಿಟ್ಟು, ಅವರ
ಒಡಲನೋವುಗಳಿಗೆ ಕಿವಿಗೊಡುವ,
ಅವರ ಅಂತರಂಗದ
ತಲ್ಲಣಗಳಿಗೆ ಮಿಡಿಯುವ ಗುಣವನ್ನು, ಜೊತೆಗೆ
ಬೆಂಕಿಯಲ್ಲಿದ್ದೂ ತಂಪಾದ
ಅನುಭವ ನೀಡುವ,
ಮೌನ ಹೋರಾಟದ ಕಣದಲ್ಲಿ,
ಗಟ್ಟಿಗಿತ್ತಿಯಾಗಿ, ತನ್ನತನ
ಮೆರೆಯುವ ನಮ್ಮ ತಾಯಂದಿರ
ಚಟುವಟಿಕೆಗಳನ್ನು,
ತಮ್ಮೆಲ್ಲ ಕತೆಗಳಲ್ಲಿ
ಕಲಾತ್ಮಕವಾಗಿ ದಾಖಲಿಸಲು
ಹವಣಿಸುವ
ಕತೆಗಾರ್ತಿ ನಮ್ಮ ಮನಸ್ಸನ್ನು
ಕದಡುತ್ತಾರೆ. ಕೆಣಕುತ್ತಾರೆ.
ಗುಲಾಬಿ ಕಂಪಿನ ರಸ್ತೆ,
ಎಂಬ ಕತೆಯಿಂದ ಪ್ರಾರಂಭವಾಗುವ
ಕೃತಿ, ಲೋಕಾಂತದಲ್ಲೊಂದು ಏಕಾಂತ,
ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ ಮುಕ್ತಾಯ
ಕಾಣುತ್ತದೆ. ಪ್ರತಿ ರಚನೆಯ ಪಾತ್ರ ಘಟನೆಗಳು
ಬೇರೆಯಾದರೂ, ಸಮಗ್ರವಾಗಿ ದೃಷ್ಟಿಸಿದಾಗ,
ಗ್ರಾಮೀಣ ಮಹಿಳೆಯ ಸಮಗ್ರ ಸಂಕಥನವಾಗಿ, ಅವಳ ಶಕ್ತಿ ತಲ್ಲಣ ಪ್ರೀತಿ ಪ್ರೇಮ ಮತ್ತು ಹೊಂದಾಣಿಕೆಯ ಗುಣಗಳನ್ನು ಆತ್ಮೀಯವಾಗಿ ಕಟ್ಟಿಕೊಟ್ಟ, ವೈವಿಧ್ಯಮಯ ಕಲಾಗುಚ್ಛವಾಗಿ
ಕೃತಿ ಮೂಡಿಬಂದಿದೆ. ಮೊಹಬ್ಬತ್
ಕೀ ಘರ್, ಎದೆಹಾಲು
ಸುರಿಯಿತು, ತವರ ಕನ್ನಡಿ ಚೂರು,
ಒಡಲ ಬೆಂಕೀಲಿ ಹೆಣ ಬೆಂದೋ, ಮುಂತಾದ
ಶೀರ್ಷಿಕೆಗಳಲ್ಲೇ, ಏಕಸೂತ್ರತೆ ಪಡೆದುಕೊಂಡ
ಇಲ್ಲಿಯ ಕತೆಗಳು, ಒಟ್ಟಂದದಲ್ಲಿ
ಕಟು ವಾಸ್ತವದ ಸ್ತ್ರೀ ಬದುಕಿನ
ಅಯೋಮಯ ಬದುಕಿನ ನೈಜ ಚಿತ್ರಣದ ಮಾಲೆಯಾಗಿ
ಕೃತಿ ರೂಪುಗೊಂಡಿದೆ.
ಮತೀಯ ಸಾಮರಸ್ಯದಿಂದ
ಸಮೃದ್ಧ ಮಾನವ ಸರಪಳಿಯಾಗಿದ್ದ ಊರೊಂದರಲ್ಲಿ,
ಕೆಲವೇ ಕೆಲವು ಸ್ವಾರ್ಥಿ
ಮತಾಂಧರಿಂದ ಇಡೀ ಊರೇ ಯುದ್ಧಭೂಮಿಯಾಗಿ ಮಾರ್ಪಾಟಾದ
ದುರಂತ ʻ ಗುಲಾಬಿ ಕಂಪಿನ ರಸ್ತೆ
ಕತೆಯಲ್ಲಿ ಅನಾವರಣ ಗೊಂಡರೆ,
,ಮತೀಯ ಸಾಮರಸ್ಯದ
ಸುಂದರ ಉದಾಹರಣೆಯಾಗಿʻ
ಮೊಹಬ್ಬತ್ ಕೀ ಘರ್ʼ ಕತೆ
ಗಮನ ಸೆಳೆಯುತ್ತದೆ. ಮುಸ್ಲಿಮ್ ವೃದ್ಧರ ಶ್ರೀಮಂತ ಮಗ ಹೊಸ ಮನೆ ನಿರ್ಮಿಸುತ್ತಾನೆ. ಅದು ಹಿಂದೂ ಸಂಪ್ರದಾಯಸ್ಥರ
ಸ್ಥಳ. ಮನೆಯೆದುರು ಒಂದು ಸುಂದರವಾದ ತುಳಸಿ ವೃಂದಾವನವಿದೆ. ಸ್ಥಳ ನೀಡಿದ ಹಿಂದೂ ಕುಟುಂಬ ತುಳಸಿ ಕಟ್ಟೆಯನ್ನು ಪಾರಂಪರಿಕವಾಗಿ ಪೂಜಿಸುತ್ತ ಬಂದವರು. ಮುಸ್ಲಿಂ
ವೃದ್ಧ ತುಳಸಿಕಟ್ಟೆಯನ್ನು ಖುಲ್ಲಾ ಪಡಿಸಲು
ವಿರೋಧಿಸುತ್ತಾನೆ.
ʻʻ ನಾನು ಹಟಾ ಮಾಡ್ದೆ,
ತುಳಸಿಕಟ್ಟೆ ತೆಗೆದ್ರೆ ನಾನು ಈ ಮನೀಗೆ ಕಾಲಿಡಾಂಗಿಲ್ಲ. ಅಂದೆ. ಅವ್ರು ಪ್ರೀತಿಂದ ಬೆಳೆಸಿದ್ದು.
ದಿನಾಕ್ ಪೂಜೆ ಮಾಡ್ತಿದ್ರು, ಈಗ್ ನಾವ್ ವಗಾಯಿಸಿದ್ರೆ
ಅವ್ರು ಜನಾಕ್ಕೆ ಬೇಜಾರಾಗಾಂಗಿಲ್ಲಾ...? ನಮ್ದು ಮಂದೀಗೆ
ಇದು ಆಗ್ಬರಾಂಗಿಲ್ಲಾ. ನೀನೇ ಹೇಳು
ಯಮ್ನಾ.... ಒಡೆಯೋದು ಸುಲಭಾ, ಐತೆ. ಕಟ್ಟೋದು ಕಷ್ಟಾ ಐತೆ.
ನಮ್ದು ದೌಲತ್ ಐತೆ ಅಂದು ಇನ್ನೊಬ್ರುದು ಎದೀಗೆ ಒದ್ರೆ ನಮ್ದು
ಮಕ್ಳು ಮರೀಗೆ ಚಲೋ ಆಗ್ತೈತೆ.....?
ಅದ್ಕೇ ಅಂಗ್ಳದ್ ನಡುವೇ ಇದ್ದ
ತುಳಸೀ ಕಟ್ಟೆ ಈಗ ಆ ಎಡಮೂಲೀಕ್
ಹೋಗ್ ಕುಂತೈತೆ.ʼʼ
ದೂರದ
ಬೆಳಗಾವಿಯ ಕನ್ನಡದ ಸುಪ್ರಸಿದ್ಧ ಮುಸ್ಲಿಮ್ ಕವಿ, ದಿವಂಗತ
ಬಿ.ಎ. ಸನದಿ ಯವರು, ಉತ್ತರಕನ್ನಡದಲ್ಲಿ ಹಿಂದುವೊಬ್ಬರ
ಮನೆ ಖರೀದಿಸಿ ಇಲ್ಲಿಯೇ ವಾಸಿಸಿದ್ದರು.
ಮನೆ ಕೊಂಡಾಗ ಎದುರಿದ್ದ
ತುಳಸಿ ವೃಂದಾವನವನ್ನು ತಾವು ಇರುವ ವರೆಗೂ ಜೋಪಾನವಾಗಿ ಸಾಕಿ ಸಲಹಿ, ಸಾಮರಸ್ಯವನ್ನು
ಸಾರಿದ್ದರು. ಈ ಸುಂದರ ನೆನಪನ್ನು
ಕತೆಗಾರ್ತಿ ಶಾಶ್ವತವಾಗಿಸಿದ್ದಾರೆ ಈ ಕತೆಯಲ್ಲಿ.
ಹೆಣ್ತನದ ಸತ್ವ, ಸ್ವತ್ವ, ಗಳನ್ನು ಮನಮೋಹಕವಾಗಿ
ವರ್ಣಿಸಿದ, ಯಶಸ್ವೀ ರಚನೆ, ʻʻಎದೆಹಾಲು
ಸುರಿಯಿತುʼʼ ಹೆಣ್ಣೊಬ್ಬಳು ಮಾತ್ರ ಅಭಿವ್ಯಕ್ತಿಸಬಹುದಾದ ಅಪರೂಪದ
ಕತೆ.
ʻʻಆಹಾ! ಎಂಥ ಸುಖದ ದಿನ, ಒಡಲಲ್ಲಿ
ಬಲಿತ ಭ್ರೂಣದ ಹೃದಯಬಡಿತದ ತಾಳದ ಲಯದೊಂದಿಗೆ ಮೂರು ತಿಂಗಳು
ಆರು ತಿಂಗಳು, ಏಳು ತಿಂಗಳು. ಹೆಂಗಳೆಯರೆಲ್ಲ ಸೇರಿದ್ದಾರೆ. ಹಸಿರು ಸೀರೆಯನ್ನುಡಿಸಿ ಹಸಿರು ಬಳೆಯನ್ನು
ತೊಡಿಸಿ, ಮುಡಿಗೆ ಮಲ್ಲಿಗೆ ಮುಡಿಸಿ,
ಮುತ್ತೈದೆಯರೆಲ್ಲ ಮಡಿಲು ತುಂಬುವಾಗ, ಸುರಿದ
ಅಕ್ಕಿಯ ಸ್ಪರ್ಶಕ್ಕೆ ಒಡಲಲ್ಲಿ ಬಲಿತ
ಜೀವ ಸಂಚಲನವಾದಂತಾಗಿ ಯಾರೋ ಮೈಗೆ ಕಚಕುಳಿಯಿಟ್ಟಂತಾಗಿ ಪಕ್ಕನೇ
ಕಣ್ಣು ತೆರೆದೆʼʼ
ಎಂದು ಪ್ರಾರಂಭಗೊಳ್ಳುವ ಕತೆ, ತಾಯ್ತನದ ಆ ಅಕ್ಕರೆ, ಆಪ್ತತೆ
ಪ್ರಕೃತಿಯ ಸಸ್ಯಗಳಲ್ಲಿ ಸಿಂಗಾರ ಮೊಳೆತು
ಕಾಯಾಗುವ ವೈಭವ, ಹೂ ಹಣ್ಣುಗಳಿಂದ
ತುಂಬಿದ ಆಹ್ಲಾದ ವಾತಾವರಣ ಸೃಷ್ಠಿ, ಕತೆಯನ್ನು
ಭಾವತೀವ್ರತೆಗೆ ಕೊಂಡೊಯ್ಯುತ್ತದೆ.
ʻʻಹೌದು ಈ ಮಕ್ಕಳೇ
ಹಾಗೆ. ಏಕಾಂತದಲ್ಲಿ ಅಂತರಂಗದ ಕದ ತೆರೆದುಬಿಡುತ್ತಾರೆ. ಮರಳಿ ಮೋಹನರಾಗಿ ಇಹವ ಮರೆಸುತ್ತಾರೆ. ದಿನದ ಜಂಜಡವ ಮೋಹದ ನಗು
ನಕ್ಕು ನೀರಾಗಿಸುತ್ತಾರೆ. ಮುದ್ದು ಮಾತಿಂದ
ಮನವ ಒದ್ದೆಯಾಗಿಸುತ್ತಾರೆ. ಅಂಬೆಗಾಲಿಕ್ಕಿ
ನಾಳಿನ ಬದುಕಿಗೆ ಸೇತು ಕಟ್ಟುತ್ತಾರೆ. ಸುರಗಿ ಸುರಹೊನ್ನೆಯಂತ ಕಂಪಾದ ಮಗುವಿಲ್ಲ, ಬಿಚ್ಚಿದಷ್ಟೂ
ಮುಚ್ಚಿಕೊಳ್ಳುವ ಮೆತ್ತನೆಯ ಮುಷ್ಠಿಯಿಲ್ಲ. ಸೋಂಕಿದರೆ ಪುಳಕ ನೀಡುವ ಚೂಟಿ
ಬೆರಳುಗಳಿಲ್ಲ. ಪರಾಗದಂತ ಮೆದುವಾದ ತುಟಿಯಿಲ್ಲ.
ಕನ್ನಡಿಯ ಕದಪುಗಳಿಲ್ಲ. ಎದೆಗೊದೆವ ನಸುಗುಲಾಬಿ ಬಣ್ಣದ ಪುಟ್ಟ ಪಾದಗಳಿಲ್ಲ. ಬ್ರಹ್ಮಾಂಡ ದರ್ಶಿಸುವ ಜೊಲ್ಲು ಬಾಯಿಗಳಿಲ್ಲ. ಕೊರಳಿಗೆ
ತೆಕ್ಕೆ ಬೀಳುವ ಉರುಟಾದ ಕೈಗಳಿಲ್ಲ.
ಈ ಇಲ್ಲಗಳ ಸಾಮ್ರಾಜ್ಯದ
ಒಡತಿಯಾಗುವದು ನನಗಿಷ್ಟವಿಲ್ಲʼʼ
ಹೀಗೆ ಮಗುವನ್ನು ಹೃದಯಂಗಮವಾಗಿ ಕಣ್ಣೆದುರು ತಂದು ಮುದಕೊಟ್ಟ. ಕಥಾನಾಯಕಿ, ಅವಿವಾಹಿತೆ. ಮುಟ್ಟುನಿಂತಾದಮೇಲಿನ, ತಾಯ್ತನದ ಕನಸಿನಲ್ಲಿ ಲೀನವಾದ ಅವಳ ಮನಸ್ಸು ಮಗುವಿನ ಅಕ್ಕರೆಯ ಕನಸು ಕಾಣುತ್ತಾಳೆ. ಮುಟ್ಟು ನಿಂತಮೇಲೂ ಮಗುಪಡೆಯಬಹುದಾದ ವೀಜ್ಞಾನ ನೀಡಿದ ಅನ್ವೇಷಣೆಯನ್ನ ಓದಿ, ತಾಯ್ತನದ ಕನಸಿನಲ್ಲಿ ಲೀನವಾಗುತ್ತಾಳೆ.
ʻʻ ಬಿಗಿದ ಮೊಲೆ ಸಡಿಲಾಗದೇ ಚಿಟುಗುಡುವ
ನೋವಿನೊಂದಿಗೆ ಸುರಿವ ಎದೆಹಾಲು ಮಾತ್ರ
ಬಿಕ್ಕುತ್ತಲೇ ಇದೆ. ʼʼ ಎಂಬ ನುಡಿಯೊಂದಿಗೆ ಕತೆ ಮುಕ್ತಾಯಗೊಳ್ಳುತ್ತದೆ.
ಸಾಮಾಜಿಕ ಜೀವನದಲ್ಲಿ
ಅವಿವಾಹಿತ ಒಂಟಿ ಹೆಣ್ಣು
ಎದುರಿಸಲೇ ಬೇಕಾದ, ಪುರುಷಾಹಂಕಾರ,
ಲೈಂಗಿಕ ಚೇಷ್ಟೆ, ನಿಕೃಷ್ಟತೆಗಳಂತಹ ದುರ್ನಡತೆಗಳೆಡೆಗೂ ಸೂಕ್ಷ್ಮವಾಗಿ
ಕ್ಷ ಕಿರಣ ಬೀರುವ ಈ ಕತೆ ತನ್ನ
ವೈಚಾರಿಕತೆ ಮತ್ತು ಕಾವ್ಯಾತ್ಮಕತೆಗಳಿಂದ ಗಮನಸೆಳೆಯುತ್ತದೆ.
ಪ್ರಸ್ತುತ ಕೃತಿ ಮುಖ್ಯವಾಗುವುದು ಒಂದಿಷ್ಟು ಘಟನೆಗಳನ್ನು ಜೋಡಿಸಿ ರಂಜನೆಯೊದಗಿಸುವ, ಚರ್ವಿತ ಚರ್ವಣ ಸಿನಿಮೀಯ ಸಂಗತಿಗಳನ್ನು
ಹೇಳುವುದರಲ್ಲಿಲ್ಲ. ಚಿಂತನಶೀಲತೆ. ಸಾತ್ವಿಕ
ಪ್ರತಿಭಟನೆ, , ಮತ್ತು ಮನುಷ್ಯನಲ್ಲಿ ಹಾಸುಹೊಕ್ಕಾಗಿರುವ
ಸ್ವಾರ್ಥ ಅಹಮಿಕೆ ಮತ್ತು ಬ್ರಷ್ಠತೆಗಳನ್ನು
ಮಾತೃಸಂಹಿತೆಯ ಮೂಲಕ ಕಲಾತ್ಮಕವಾಗಿ
ಚಿತ್ರಿಸುವ ಮಹತ್ವಾಕಾಂಕ್ಷೆಯಿಂದ. ಹೆಣ್ಣಿನ
ತಲ್ಲಣಗಳನ್ನು ಹೇಳುವ ಅತ್ಯುತ್ಸಾಹದಲ್ಲಿ, ಕೆಲವೆಡೆ ವಾಚ್ಯವಾದಂತೆನ್ನಿಸಿದರೂ, ಕತೆಗಾರ್ತಿಯ
ಜೀವನ್ಮುಖೀ ಧೋರಣೆ ಕತೆಯನ್ನು ಅನನ್ಯವಾಗಿಸುತ್ತವೆ.
ಇಟಲಿಯ ಸುಪ್ರಸಿದ್ಧ ಯುವ ಕವಯತ್ರಿ, ʻʻ ಇಲಾರಿಯಾ ಜುವಿನಾಟ್ಸೋʼʼ
ಳ ಮಾತು ಇಲ್ಲಿ ನೆನಪಾಗುತ್ತಿದೆ.
ʻʻ ಹೆಣ್ಣು
ಬಗೆ ಬಗೆಯ ಭಾವನಾತ್ಮಕ ಹಂತಗಳ ಮೂಲಕ ಮಾತ್ರವಲ್ಲದೇ
ವಾಸ್ತವಿಕ ಬದುಕಿನ ಹಲವು ಹಂತಗಳ ಮೂಲಕವೂ
ಹಾದು ಹೋಗುತ್ತಾಳೆ. ಇದೊಂದು
ಸಾಹಸವೇ ಸೈ. ಮನುಷ್ಯನ ನೈತಿಕತೆ
ಮತ್ತು ಆತ್ಯಂತಿಕ ಚೆಲುವನ್ನು ಒಟ್ಟಿಗೇ ಹಿಡಿಯುವುದು, ವಾಸ್ತವವಾಗಿ ಅಸ್ತಿತ್ವದಲ್ಲಿರುವ ಎಲ್ಲದರ
ಅದ್ಭುತ ಸಂಯೋಜನೆಯನ್ನು ಇಡಿಯಾಗಿ ಕೆಲವೊಮ್ಮೆ
ಬಿಡಿಯಾಗಿ, ಪರೀಕ್ಷಿಸಿ ನೋಡುವ ಧರ್ಮಪಥದ ಕಲ್ಪನೆ
ಅವಳ ಸಾಮಾನ್ಯ ಸೂತ್ರವಾಗಬೇಕು.ʼʼ
ಈ ಮಾತು ಪ್ರಸ್ತುತ ಸಂಕಲನಕ್ಕೆ
ಅರ್ಥಪೂರ್ಣವಾಗಿ ಅನ್ವಯಿಸುತ್ತದೆ.
ಸುಬ್ರಾಯ
ಮತ್ತೀಹಳ್ಳಿ. ೨೩-೮- ೨೦೨೫. ಸುಮ ಸಂಪದ
ಅಂಕಣಕ್ಕೆ.
ಗುಲಾಬಿ ಕಂಪಿನ ರಸ್ತೆ.
( ಕಥಾ ಸಂಕಲನ)
ಲೇ- ಮಾಧವಿ ಭಂಡಾರಿ
ಕೆರೆಕೋಣ.
ಬಂಡಾಯ ಪ್ರಕಾಶನ. ಸಹಯಾನ.
ಕೆರೆಕೋಣ.
ಅರೇಅಂಗಡಿ ಹೊನ್ನಾವರ. ೫೮೧೩೩೪
ಬೆಲೆ – ರೂ ೧೫೦. ಪುಟ – ೧೫೦.
No comments:
Post a Comment