ʻʻ ನಯನೋತ್ಸವ.ʼʼ

 

ನಿಯಮ ವಿನಯ ನೇಹದಲ್ಲಿ,

ಸ್ವಚ್ಛಸಿರಿಯ  ಸಹಜದಲ್ಲಿ

ವಿಜ್ಞಾನ ಆಧ್ಯಾತ್ಮದ  ಸಾನ್ನಿಧ್ಯದಲ್ಲಿ

           ನಿತ್ಯೋತ್ಸವ, ನಿತ್ಯ ನಯನೋತ್ಸವ.

 

ಸರಳತೆಯ ಸಾಕಾರ, ಸೂಕ್ಷ್ಮ ಗಂಭೀರ

ಸೌಮನಸ್ಯದ  ಸೂಸು, ಆದರೋಪಚಾರ.

ತೃಣವೊಂದೆ ಧನವೊಂದೆ,  ಸೇವೆಯೊಂದೇ  ಸಾರ

          ನಿತ್ಯೋತ್ಸವ.......ನಿತ್ಯ ನಯನೋತ್ಸವ.

 

ನವದೃಷ್ಟಿ ನವಸೃಷ್ಟಿ, ನವಕಿರಣ ವೃಷ್ಟಿ

ಹಣತೆ ಬಳ್ಳಿಯಲಿ  ಬೆಳಕ ಪುಷ್ಟಿ

ಒಂದಾಗಿದೆ ಶಿವ ಭಕ್ತಿ, ಸೇತೂ ರಾಮಶಕ್ತಿ.

ನಡೆದಿದೆ ನಿತ್ಯ  ದೃಷ್ಟಿಕಾಮೇಷ್ಟಿ.

         ನಿತ್ಯೋತ್ಸವ......ನಿತ್ಯ ನಯನೋತ್ಸವ.

 

ತಣ್ಣನೆಯ ಕಣ್ಣಿನಲಿ,  ಹೊನ್ನಮಣಿ ಮಿನುಗಿತೋ

ಮಣ್ಣಕಣದಿ ಜೀವಚಿಗುರು, ನಕ್ಕು ನಲಿಯಿತೋ.

ದೃಷ್ಟಿಯಿತ್ತರೋ, ಮನಕೆ ಪುಷ್ಟಿ ಕೊಟ್ಟರೋ

ಕತ್ತಲ, ಕಷ್ಟ ಕಳೆದರೋ, ನಡುವೆ ಬೆಳಕನಿಟ್ಟರೋ.

        ನಿತ್ಯೋತ್ಸವ  ನಿತ್ಯ ನಯನೋತ್ಸವ.

 

ಒಳಗಣ್ಣು ತೆರೆಯಲಿ, ಮನಸು ತಿಳಿಯಾಗಲಿ

ಅರಿ ಅಳಿಯಲಿ, ಅರಿವು ಹೊಳೆಯಲಿ

ಸೌಹಾರ್ದ  ಸಿರಿಯಲ್ಲಿ ಸಮುದಾಯ ನೆಲೆಸಲಿ

ಅನುದಿನವೂ ನಡೆಯಲಿಲ್ಲಿ   ದೀಪಾವಳಿ.

        ನಿತ್ಯೋತ್ಸವ  ನಿತ್ಯ ನಯನೋತ್ಸವ.

 

 

                                                         ಸುಬ್ರಾಯ  ಮತ್ತೀಹಳ್ಳಿ.

                                                          ೧೯- ೭ – ೨೦೨೪.

Comments

Popular posts from this blog

ಕವನವೆಂದರೆ.......................

ಯುದ್ಧ ಮತ್ತು ಧರ್ಮ

ದೇವರು ಧರ್ಮ ಮಾನವೀಯತೆ ಇತ್ಯಾದಿ