Saturday, 20 July 2024

ಸಹಕಾರ ಸರದಾರ – ಸಂಸ್ಕೃತಿಯ ಹರಿಕಾರ

 

                 ʻʻ ಶ್ರೀಪಾದ ಹೆಗಡೆ  ಕಡವೆ ʼʼ

ʻʻಈ ನೆಲದಿ  ಅವಿತಿರುವನೊಬ್ಬ, ಅಸದೃಷ  ವ್ಯಕ್ತಿ.  ಸಹಕಾರ  ಸೌಮನಸ್ಯದ  ಮಾರ್ಗಾನುಗಾಮಿ

ಓದಿ  ಓದಿ ಓಡಾಡಿ ಕಾಡಿ,  ಗುಣಕೆ ಮಣಿದು ಜಡತೆಗೆ  ಸಿಡಿದ

ಧ್ಯಾನಿ, ಜಗದ ಜ್ಞಾನಿ, ಛಲದ ಕಣಿ  ತಾರತಮ್ಯವ ಮುರಿದ ವೀರಾಗ್ರಣಿ.

ಅಪರೂಪದ  ಅನುಪಮ ಜನಪರ  ರಾಜಕಾರಣಿ. 

ದಿಲ್ಲಿಯೇರಲಿಲ್ಲ,  ದಿಲ್ಲಿಯನ್ನೇ ಇಲ್ಲಿ ಕರೆದ, ʻಇಲ್ಲʼ ಸೊಲ್ಲಳಿಸಿ  ಎಲ್ಲವನು ತಂದು ಸುರಿದ

.ಕಡವೆಗೆ  ಕಡವೆಯೇ  ಉಪಮೆ.  ಸಹಕಾರದ  ಸಮರ್ಥ  ಪ್ರತಿಮೆ.ʼʼ

 

           ಮಾನವ ಜಗತ್ತಿನಲ್ಲಿ  ಸಾಮಾನ್ಯವಾಗಿ  ಎರಡು ಬಗೆಯ ವ್ಯಕ್ತಿಗಳನ್ನು ನಾವೆಂದೂ  ಕಾಣುತ್ತೇವೆ.  ಸಂಸಾರ ನಿಷ್ಠರು, ಮತ್ತು ಸಮುದಾಯ ನಿಷ್ಠರು, ಎಂದು ಸರಳವಾಗಿ ವಿಭಾಗಿಸಬಹುದಾಗಿದೆ.  ಸಮುದಾಯ ನಿಷ್ಠರು ಸಾಮಾನ್ಯವಾಗಿ ಅಲ್ಪಸಂಖ್ಯಾತರೇ. ಆದರೆ ಸಮಾಜ ಚಲನಶೀಲವಾಗಿ  ಜೀವಂತವಾಗಿರುವುದೇ ಅಂತಹ ವ್ಯಕ್ತಿಗಳಿಂದ.  ಅವರು ಇರುವ ವರೆಗೂ ಸಮುದಾಯದ ಪ್ರಗತಿಯ ಧ್ಯಾನದಲ್ಲೇ ಇರುತ್ತಾರೆ. ನಂತರ ಅವರೇ ಮುಂದಿನ ಪೀಳಿಗೆಗೆ ಸ್ಫೂರ್ತಿಚಿಲುಮೆಯಾಗಿ, ಸದಾ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ. ಭೌತಿಕವಾಗಿ ಅವರಿಲ್ಲವಾದರೂ, ಸ್ಮರಣೆಯಲ್ಲಿ  ಸದಾ ಬೆಳಗುತ್ತಲೇ ಇರುತ್ತಾರೆ.

  ಈ ನುಡಿಗೆ  ಅನ್ವರ್ಥಕರಾದವರು, ನಮ್ಮ ಉತ್ತರಕನ್ನಡ ಜಿಲ್ಲೆಯ  ಸಹಕಾರಿ ಸಾಧಕ, ಸಾಮಾಜಿಕ ಪ್ರತಿಭೆ  ದಿ. ಕಡವೆ ಶ್ರೀಪಾದ ಹೆಗಡೆಯವರು.  ಜಿಲ್ಲೆಯ ಶಿರಸಿ, ಸಿದ್ದಾಪುರ  ಯಲ್ಲಾಪುರ ತಾಲೂಕುಗಳು ಅವರ ಕರ್ಮಭೂಮಿಯಾದರೂ, ಹೆಗಡೆಯವರು ಸೃಷ್ಟಿಸಿದ ಸಹಕಾರ ಕ್ರಾಂತಿ, ಇಡೀ ರಾಜ್ಯಕ್ಕೇ ಮಾದರಿಯಾಯಿತು. ಇಡೀ ದೇಶದಲ್ಲೇ ಬೆರಳೆಣಿಕೆಯಲ್ಲಿರುವ ಯಶಸ್ವೀ ಸಹಕಾರಿ ಸಂಘಗಳಲ್ಲಿ ಒಂದಾದ  ಶಿರಸಿಯ  ತೋಟಗಾರರ ಸಹಕಾರಿ ಸಂಘ ( ಟಿ.ಎಸ್ಎಸ್‌ ) ಇಂದೂ  ಸಹ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಕೃಷಿಕರಿಗೆ, ಸಹಕಾರಿ ಧುರೀಣರಿಗೆ, ಅಧಿಕಾರಿಗಳಿಗೆ, ಈ ಸಂಘವೊಂದು ಅಧ್ಯಯನಕ್ಕೆ ಅನುಪಮ ಕ್ಷೇತ್ರವಾಗಿ ಬೆಳೆದು ಬಾಳುತ್ತಿದೆ. ರಾಷ್ಟ್ರದಾದ್ಯಂತ, ಕೇಂದ್ರ ಮತ್ತು ವಿವಿಧ ರಾಜ್ಯಗಳ ಸಹಕಾರಿ ಪ್ರತಿನಿಧಿಗಳು, ವರ್ಷವಿಡೀ ಭೇಟಿನೀಡುತ್ತಲೇ ಇರುತ್ತಾರೆ. ಇತ್ತೀಚೆಗೆ ವಿದೇಶದಿಂದಲೂ ಸಹಕಾರಿ ಆಂದೋಲನದ ಅಧ್ಯಯನಕ್ಕೆ ಜಾಗತಿಕ ಮಟ್ಟದ ನಿಯೋಗ ಭೇಟಿನೀಡಿ, ಸಂಸ್ಥೆಯ ಕಾರ್ಯಶೈಲಿ, ಪ್ರಾಮಾಣಿಕ ಸೇವೆ, ಕೃಷಿಕರ ಹಿತಾಸಕ್ತಿಗಾಗಿನ ಸ್ಪಂದನೆ, ಮತ್ತು ಕೃಷಿಕಪರ ವೈವಿಧ್ಯಮಯ ಚಟುವಟಿಕೆಗಳನ್ನು ಕಂಡು ಮನಃಪೂರ್ವಕವಾಗಿ ಮೆಚ್ಚಿ ಹಾರೈಸಿದ್ದಾರೆ.

   ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕದಲ್ಲಿ,( ೧೯೨೫ -೧೯೯೫ ) ಕಡವೆ ಎಂಬ ಪುಟ್ಟಗ್ರಾಮದಲ್ಲಿ, ಕಡವೆ ಗಾಂಧಿ ಎಂದೇ ಹೆಸರಾದ, ಸ್ವಾತಂತ್ರ್ಯಹೋರಾಟಗಾರ,  ಕಡವೆ ರಾಮಕೃಷ್ಣ ಹೆಗಡೆಯವರ ಮಗನಾಗಿ ಜನಿಸಿದ  ಶ್ರೀಪಾದ ಹೆಗಡೆಯವರು, ತಂದೆಯವರ ಗಾಂಧೀ ತತ್ವದ ಪ್ರಭಾವದಲ್ಲೇ ಬೆಳೆದು, ತಮ್ಮ ಇಡೀ  ಬದುಕನ್ನೇ ಸಹಕಾರೀ ಚಳುವಳಿಗೆ ಸಮರ್ಪಿಸಿದ ಅನನ್ಯ ವ್ಯಕ್ತಿ.

   ಶ್ರೀಮಂತ ಜಮೀನುದಾರರಾಗಿದ್ದ ಹೆಗಡೆಯವರು, ಆ ಕಾಲದಲ್ಲೆ ತಮ್ಮ ಗ್ರಾಮದಲ್ಲಿ ಪ್ರೌಢಶಾಲೆ ಸ್ಥಾಪಿಸುತ್ತಾರೆ. ತಮ್ಮ ತಾಲೂಕಾ ಸ್ಥಳದಲ್ಲಿ  ಕಾಲೇಜು ಸ್ಥಾಪನೆಗೆ ಕಾರಣಕರ್ತರಾಗುತ್ತಾರೆ. ಹಿಂದುಳಿದ  ಶೋಷಿತ ಜನರಿಗಾಗಿ, ಹರಿಜನ ಹೌಸಿಂಗ್‌ ಸಹಕಾರಿ ಸಂಸ್ಥೆಯನ್ನೇ ಹುಟ್ಟುಹಾಕಿ, ಸ್ವಥಃ ಮೇಲ್ವರ್ಗದವರಾದರೂ  ದಶಕಗಳ ಕಾಲ ಹರಿಜನ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಪ್ರಾಮಾಣಿಕತೆ, ಹೋರಾಟ ಮತ್ತು ದಲಿತರ ಬಗೆಗಿನ ಕಳಕಳಿಯಂತಹ ಗುಣಗಳೇ  ಅಧ್ಯಕ್ಷತೆಯ ಗೌರವವನ್ನು ನೀಡಿದೆಯೆನ್ನಬಹುದಾಗಿದೆ.

   ಜಿಲ್ಲೆಗೆ  ನವೋದಯ ಶಾಲೆ ಮಂಜೂರಾಗಿತ್ತು. ಜಿಲ್ಲೆಯ ಯಾವ ತಾಲೂಕುಗಳಲ್ಲೂ ಆವಶ್ಯಕ ಸ್ಥಳ ದೊರೆಯದೇ ಪರಜಿಲ್ಲೆಗೆ ಸ್ಥಳಾಂತರಿಸಬೇಕಾದ ಅನಿವಾರ್ಯಸಂದರ್ಭ  ಕಡವೆಯವರಿಗೆ ತಿಳಿದ ತಕ್ಷಣವೇ ತಮ್ಮ ಖಾಸಗಿ ಜಮೀನಿನಲ್ಲೇ ಮೂವತ್ತು ಎಕರೆ ಸ್ಥಳವನ್ನು ದಾನ ನೀಡಿ, ಶಾಲೆ ಸ್ಥಾಪನೆಯಾಗುವಂತೇ ಮಾಡಿದ ಅವರ ಉದಾರತೆಯನ್ನು  ಇಂದೂ ಜನ ಸ್ಮರಿಸುತ್ತಾರೆ.  ಜಿಲ್ಲೆಯ ಶೈಕ್ಷಣಿಕ ಹರಿಕಾರ ದಿ. ದಿನಕರ ದೇಸಾಯಿಯವರು ಅದೇ ಸಂದರ್ಭದಲ್ಲಿ, ಕಡವೆಯವರ ಶಿಕ್ಷಣ ಸಾಧನೆಯನ್ನು ಮನದುಂಬಿ ಶ್ಲಾಘಿಸಿದ್ದಾರೆ.

   ಐವತ್ತರ ದಶಕದವರೆಗೂ, ಕೃಷಿಹುಟ್ಟುವಳಿಯ ವ್ಯಾಪಾರ ಖಾಸಗಿ ವ್ಯಾಪಾರಸ್ಥರ ಕೈಯಲ್ಲೇ ಸಿಲುಕಿತ್ತು. ಕೃಷಿಕ ಬೆಳೆದ ಫಸಲು ಮಾರಾಟವಾಗಲು, ಅದರ ಹಣ ಪಡೆಯಲು ಖಾಸಗಿಯವರ ಮರ್ಜಿಕಾಯಬೇಕಾಗಿತ್ತು. ನ್ಯಾಯಯುತ ಬೆಲೆ ಸಿಗದೇ ಅನ್ಯಾಯವಾಗುತ್ತಿತ್ತು. ಪಡೆದ ಸಾಲಕ್ಕೆ ಅತ್ಯಧಿಕ ಬಡ್ಡಿಆಕರಿಸಿ, ಸದಾ ಸಾಲದಲ್ಲೇ ತೊಳಲಾಡುವ ದಯನೀಯ ಸ್ಥಿತಿ ರೈತನದ್ದಾಗಿತ್ತು. ಆ ಕಾಲದ ಶೋಷಣೆಯನ್ನು ಕಣ್ಣಾರೆ ಕಂಡ  ಶ್ರೀಪಾದ ಹೆಗಡೆಯವರು, ಸಹಕಾರ ಚಳುವಳಿಯನ್ನು ಸಂಘಟಿಸಲು, ಪಣ ತೊಟ್ಟರು. ದಶಕಗಳ ಕಾಲ ಹಳ್ಳಿ ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ರೈತರ ಮನವೊಲಿಸಿ, ಸಹಕಾರ ಕ್ಷೇತ್ರಕ್ಕೇ ಆಹ್ವಾನಿಸಿದರು.  ಶಿರಸಿ ನಗರದ ತುಂಬೆಲ್ಲ ಚದುರಿಹೋಗಿದ್ದ ಖಾಸಗಿ ದಲಾಲರ ಲಾಭಕೋರತನದ ವಿರುದ್ಧ  ಸಿಡಿದೆದ್ದು, ನಗರದ ಹೊರ ಆವರಣದಲ್ಲಿ ವ್ಯವಸ್ಥಿತ ಮಾರುಕಟ್ಟೆ ರಚಿಸಿ, ಸಹಕಾರಸಂಘವೊಂದಲ್ಲದೇ ಖಾಸಗಿಯವರನ್ನೂ ಒಂದೇ ಸ್ಥಳದಲ್ಲಿ ಸ್ಥಾಪಿಸಿದ್ದು  ಅವರ ಬಹುದೊಡ್ಡ ಸಾದನೆ.

   ಸಹಕಾರ ತತ್ವದಡಿಯಲ್ಲಿ, ಕೃಷಿಕರ ಪ್ರಗತಿಗೆ ಅದೆಷ್ಟು ಸಾಧ್ಯತೆಯಿದೆಯೆಂಬುದನ್ನು ಹೊರಜಗತ್ತಿಗೆ ತಮ್ಮ ಸಾದನೆಯಮೂಲಕವೇ ಬಿತ್ತರಿಸಿದರು. ಅವರು ಸೃಷ್ಟಿಸಿದ  ಟಿ.ಎಸ್.ಎಸ್.‌ ಸಂಸ್ಥೆಯ ‍ಕೃಷಿಕಪರ ಸಾಧನೆಯನ್ನು ಗಮನಿಸಿದ ಆಗ ಮುಖ್ಯಮಂತ್ರಿಯಾಗಿದ್ದ  ದೇವರಾಜ ಅರಸ್‌ ರವರು  ಕಡವೆಯವರನ್ನು ಸಹಕಾರಿ ಮಂತ್ರಿಗಳಾಗಲು ಆಮಂತ್ರಿಸಿದ್ದರು. ಆದರೆ ಕಡವೆಯವರು ನಿರಾಕರಿಸಿದರು.

  ಒಂದು ಅವಧಿ ಶಾಸಕರಾದರೂ, ಮತ್ತೆ ಚುನಾವಣೆಗೆ ನಿಲ್ಲುವ ಆಸಕ್ತಿಯನ್ನೂ ತೊರೆದರು. ಆದರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ದಶಕಗಳ ಕಾಲ ಪಕ್ಷದ ಬೆನ್ನೆಲುಬಾಗಿ ಸೇವೆಸಲ್ಲಿಸಿದರು.  ಪಕ್ಷಕ್ಕೆ ಸಾಕಷ್ಟು ಯುವ ನೇತಾರರನ್ನು ಸೃಷ್ಟಿಸಿದರು.

  ದೇಶದಲ್ಲೇ ಪ್ರಪ್ರಥಮ ರಾಷ್ಟ್ರಮಟ್ಟದ ಪರಿಸರ ಸಮ್ಮೇಳನವನ್ನು ಶಿರಸಿ ನಗರದಲ್ಲಿ, ಟಿ.ಎಸ್.ಎಸ್.‌ ಪ್ರಾಂಗಣದಲ್ಲಿ ಯಶಸ್ವೀಯಾಗಿ ಜರುಗಿಸಿದ ಅಪೂರ್ವ ಸಾಧನೆ ಕಡವೆಯವರದ್ದಾಗಿದೆ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಸ್ತುತ ಸಮ್ಮೇಳನದಲ್ಲಿ (೧೯೮೦ ) ರಾಷ್ಟ್ರದ ಪ್ರಮುಖ ಪರಿಸರ ವಿಜ್ಞಾನಿಗಳು ಉಪಸ್ಥಿತರಿದ್ದು, ಪರಿಸರ ನಾಶದ ಅಪಾಯವನ್ನು ಸಾಮಾನ್ಯ ಜನತೆಗೆ ತಿಳಿಹೇಳುವಲ್ಲಿ ಯಶಪಡೆದರು.  ನಂತರ ನಡೆದ ಬೇಡ್ತಿ ಅಘನಾಶಿನಿ ಜಲವಿದ್ಯುತ್‌ ವಿರೋಧಿ ಚಳುವಳಿ ಯಶ ಕಾಣಲು  ಪ್ರಸ್ತುತ ವಿಚಾರ ಸಂಕಿರಣ ಕಾರಣವಾಗಿದ್ದನ್ನು ಮರೆಯಲಾಗದು.

   ತೋಟಗಾರರ ಸಹಕಾರಿ ಸಂಘ ರಾಜ್ಯಕ್ಕೇ ಮಾದರಿಯಾಗಿ, ಬೆಳೆದದ್ದು ನಿಜ. ಸಹಕಾರಿ ತತ್ವದ ನೆಲೆಯಲ್ಲಿ, ಜನಪರ, ಕೃಷಿಕ ಪರ ಧ್ಯೇಯದಲ್ಲಿ, ಅದೆಷ್ಟು ವೈವಿಧ್ಯಮಯ ಚಟುವಟಿಕೆಗಳನ್ನು ನಿರ್ವಹಿಸಬಹುದೆಂಬುದಕ್ಕೆ,( ವಾರ್ಷಿಕವಾಗಿ ೨೦೦೦ ಕೋಟಿ ಆಯ ವ್ಯಯ) ಸಮರ್ಥ ಉದಾಹರಣೆಯಾಗಿ ಇಂದು ಈ ಸಹಕಾರಿ ಸಂಘ ಬೆಳಗಿ ಬಾಳುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ, ಚುನಾವಣೆಯ ಸೋಲು, ಸ್ವಜನಪಕ್ಷಪಾತ, ಆರ್ಥಿಕ ಅಪವ್ಯಯದಂತಹ  ಋಣಾತ್ಮಕ ಚಟುವಟಿಕೆಗಳು, ನ್ಯಾಯಾಲಯದ ಕಟ್ಟೆಯನ್ನೂ ಏರಿ, ನಲ್ವತ್ತು ಸಾವಿರಕ್ಕೂ ಮೀರಿದ ಕೃಷಿಕ ಸಹಕಾರಿ ಸದಸ್ಯರ ಬದುಕೇ ಅತಂತ್ರತೆಗೆ ಸಿಲುಕುವಂತಹ ಸ್ಥಿತಿ ನಿರ್ಮಾಣವಾಗುತ್ತಿರುವುದು, ವಿಷಾದನೀಯ. ಸಹಕಾರ ತತ್ವದ ನೆಲೆಯಲ್ಲಿ ರೈತರ ಬದುಕನ್ನು ಬೆಳಗಿಸುವ ಅದೆಷ್ಟು ಸಾಧ್ಯತೆಯಿದೆ  ಎಂಬುದನ್ನು  ಸೃಷ್ಟಿಸಿಯೇ ತೋರಿಸಿದ, ಅಭಿವೃದ್ಧಿಯಲ್ಲಿ ಪ್ರತಿ ಸರಕಾರವೇ ಆದ,  ಇಂಥದೊಂದು ಬೃಹತ್‌ ಸಂಘಟನೆ ಎಂದೂ ಸೋಲಬಾರದು.  ಕಡವೆ ಶ್ರೀಪಾದ ಹೆಗಡೆಯವರ ಜನಪರ ನಿಲುಮೆ, ಹೋರಾಟಗಳು ಹುಸಿಯಾಗಬಾರದು.

   ಕನ್ನಡದ ಮಹತ್ವಪೂರ್ಣ ಲೇಖಕ  ಗೌರೀಶ ಕೈಕಿಣಿಯವರು, ಶ್ರೀಪಾದ ಹೆಗಡೆಯವರ ಬಗೆಗೆ ಮನತುಂಬಿ ಅಭಿವ್ಯಕ್ತಿಸಿದ ಅಭಿಪ್ರಾಯವನ್ನು ಇಲ್ಲಿ ಸ್ಮರಿಸಲೇ ಬೇಕು.

 ʻʻ ಹೆಗಡೆಯವರ ವ್ಯಕ್ತಿತ್ವ ನಿರಾಡಂಬರವಿದ್ದಷ್ಟೇ ನಿರಾವರಣ.  ಉಗ್ರವಲ್ಲದ ಗಾಂಭೀರ್ಯ. ಹಗುರಾಗದ ಹಾಸ್ಯ. ದೌರ್ಬಲ್ಯವಾಗದ ಸೌಜನ್ಯ. ಚಾಲಾಕು ಎನಿಸದ ಚಾತುರ್ಯ. ಅಕೃತ್ರಿಮ ಸಂಯಮ.  ಪ್ರದರ್ಶನವಿಲ್ಲದ ವೈಚಾರಿಕತೆ, ಆಢ್ಯತೆಗೆ ಹಾಯದ ಮಾರ್ಗದರ್ಶಿತನ, ಅಹಂಕಾರವಾಗದ ಸ್ವಾಭಿಮಾನ.  ತಾಪವಲ್ಲದ ತೇಜಸ್ಸು.  ಸಂಪ್ರದಾಯಸ್ಥರು ಆದರೆ ಕರ್ಮಠರಲ್ಲ. ಸಜ್ಜನ ಹಿತೈಷಿಗಳು ಅನ್ಯರಿಗೆ ದ್ರೋಹಿಗಳಲ್ಲ.  ಶಿಸ್ತು ನಿಷ್ಠೆ ಅವರ ವೃತ.  ಜಿಲ್ಲೆಯಲ್ಲಿ ಕಾಂಗ್ರೆಸ್‌ ಭದ್ರವಾಗಲು ಸುದೀರ್ಘ ಕಾಲದ ಅವರ ಅಧ್ಯಕ್ಷತೆಯೇ ತಳಪಾಯ.

   ಈ ಟಿ.ಎಸ್ಎಸ್‌, ಎಂಬ ಮಹಾ ಸಂಸ್ಥೆಯೇ ಸಾಕು ಅವರ ಚರಿತ್ರೆ ಚಾರಿತ್ರ್ಯಗಳ ಭವ್ಯ ಸ್ಮಾರಕವಾಗಿ ಗೆಲುವಿನ ಗೋಪುರವಾಗಿ ನಿಲ್ಲಲಿಕ್ಕೆ. ʼʼ

   ಅವರು ಸಂಸ್ಥಾಪಕರಾಗಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ  ಹತ್ತಾರು  ಸಂಸ್ಥೆಗಳು ಇಂದೂ ಮಾದರಿಯಾಗಿ ಮುನ್ನಡೆಯುತ್ತಿದೆ. ಒಬ್ಬ ಜನನಾಯಕನಲ್ಲಿರಲೇ ಬೇಕಾದ, ಛಲ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ. ಜನಪ್ರೀತಿ, ಪರಂಪರೆಯ ಬಗೆಗಿನ ಪ್ರೀತಿ, ಮತ್ತು ನಿರಂತರ ಕ್ರಿಯಾಶೀಲತೆ ಯಂತಹ ಎಲ್ಲ ಗುಣಗಳ ಗಣಿಯಾಗಿ, ಮುಂದಿನ ನಾಯಕರುಗಳಿಗೊಂದು ಸಮರ್ಥ ಆದರ್ಶವಾಗಿ ರಾಜ್ಯದ ಜನಮಾನಸದಲ್ಲಿ ಜೀವಂತ ಸ್ಫೂರ್ತಿಯಾಗಿ ನಮ್ಮೊಂದಿಗಿದ್ದಾರೆ, ಕಡವೆ ಶ್ರೀಪಾದ ಹೆಗಡೆಯವರು.

                                               ಸುಬ್ರಾಯ ಮತ್ತೀಹಳ್ಳಿ.  ತಾ- ೨-೭-೨೦೨೪.

  

 

No comments:

Post a Comment