ಭೋಗದ
ಬೆಂಕಿಗೆ – ತಾಯ್ತನದ ಅಂಕೆ.
ʻʻ ಪರಿತ್ಯಕ್ತೆʼʼ
ಭವ್ಯಾ ಹಳೇಯೂರು, ನಮ್ಮಜಿಲ್ಲೆಯ
ಉದಯೋನ್ಮುಖ ಸೃಜನಶೀಲ ಪ್ರತಿಭೆಯಾಗಿ ಹೊರಹೊಮ್ಮುತ್ತಿರುವುದು ಸಂತಸ ತರುವ
ಕ್ಷಣವಾಗಿದೆ. ಇತ್ತೀಚಿನ ದಿನಗಳಲ್ಲಿ
ಕಥೆ ಕವನ ಅಂಕಣ ಗಳ ಮೂಲಕ
ಚುರುಕಾಗಿ ಬರೆಯುತ್ತ ಸಹೃದಯರ ಗಮನಸೆಳೆಯುತ್ತಿರುವ ಭವ್ಯಾ ಇದೀಗ ಕಾದಂಬರಿ ಪ್ರಪಂಚಕ್ಕೆ ಅಡಿಯಿಡುತ್ತಿದ್ದಾರೆ. ಆದಿಯಿಂದಲೂ
ಕಗ್ಗಂಟಾಗಿರುವ ವೇಶ್ಯಾವೃತ್ತಿ ಯ ಸಾಂಸ್ಕೃತಿಕ
ಸಾಮಾಜಿಕ, ಸಾಂಸ್ಕೃತಿಕ ನೆಲೆಯಲ್ಲಿ, ಪರೀಕ್ಷಿಸುತ್ತ,
ಸಂವೇದನಾಶೀಲವಾಗಿ ಪ್ರತಿಕ್ರಿಯಿಸುತ್ತಿರುವ ಒಂದು ಕಥನವಾಗಿ ಪರಿತ್ಯಕ್ತೆ
ಎಂಬ ಕಾದಂಬರಿಯೊಂದನ್ನು ಇದೀಗ ಅಕ್ಷರಲೋಕಕ್ಕೆ
ನೀಡುತ್ತಿದ್ದಾರೆ.
ವಿಶಾಲ ಓದು, ಶೀಕ್ಷಣ ಕ್ಷೇತ್ರದ ಸಾಂಗತ್ಯ, ಸಾಹಿತ್ಯೋಪನ್ಯಾಸಗಳಲ್ಲಿ ತೊಡಗಿಕೊಂಡಿರುವ ಲೇಖಕಿ,
ಸುತ್ತಲಿನ ಸಮುದಾಯವನ್ನು ಸೂಕ್ಷ್ಮವಾಗಿ
ದೃಷ್ಟಿಸುತ್ತ, ಸಾಂಸ್ಕೃತಿಕ ಏಳು ಬೀಳು,
ಸೋಲು ಗೆಲುವುಗಳ ಬಗೆಗೆ ತಮ್ಮದೇ ಆದ
ಪ್ರತಿಕ್ರಿಯೆ ನೀಡುವ ಶಕ್ತಿಯನ್ನು ಗಳಿಸಿಕೊಳ್ಳುತ್ತಿದ್ದಾರೆ. ಸವೆದ ಸಾಂಪ್ರದಾಯಿಕ
ದಾರಿಬಿಟ್ಟು, ತಮ್ಮದೇಆದ ಚಿಂತನೆಯ ಪಥದಲ್ಲಿ ಸಾಗಬೇಕೆಂಬ ಗುರಿಯ ಹಿನ್ನೆಲೆಯಲ್ಲಿ, ಕೈಗೊಳ್ಳುತ್ತಿರುವ ಅಕ್ಷರ ಚಟುವಟಿಕೆಗಳನ್ನು ಕಂಡಾಗ, ಅವರ
ಎಲ್ಲ ಚಿಕ್ಕ ದೊಡ್ಡ ಪ್ರಯತ್ನಗಳು ಮುಂದಿನ
ಖಚಿತ ಸೃಷ್ಟಿಗೆ ತಳಪಾಯದ ಸಿದ್ಧತೆಯಾಗಿ
ತೋರುತ್ತಿದೆ.
ಸೈದ್ಧಾಂತಿಕ ಬದ್ಧತೆ, ವೈಚಾರಿಕ ನಿಲುವು, ನಿರ್ಭಯ
ನಿರ್ವಹಣೆ, ಮತ್ತು ಅಭಿವ್ಯಕ್ತಿಗೆ ಭಾಷೆಯನ್ನು ಪಳಗಿಸಬೇಕಾಗಿರುವುದು ಉದಯೋನ್ಮುಖರೆದುರಿನ ಸವಾಲಾದರೆ,
ಅವೆಲ್ಲ ಸಿದ್ಧಿಸುವುದು ರಚನೆಯಿಂದ ರಚನೆಗೆ ಸಾಗುವ ದಾರಿಯಲ್ಲಿಮಾತ್ರ.
ಬದುಕಿನ ಸೂಕ್ಷ್ಮ ನಿರೀಕ್ಷಣೆ, ಅಧ್ಯಯನ ಮತ್ತು ಸೃಷ್ಟಿಕ್ರಿಯೆ ಸಮಾನಾಂತರವಾಗಿ
ಸಾಗಿದರೆ ಮಾತ್ರ, ಅನನ್ಯವಾದ ಕೃತಿಯ ಹುಟ್ಟು
ಸಾಧ್ಯ. ಪ್ರತೀ ಕೃತಿಯೂ
ಪ್ರಗತಿಯ ಒಂದೊಂದು ಮೆಟ್ಟಿಲು.
ಅನುಭವಗಳ ತೊಟ್ಟಿಲು.
ಕನ್ನಡ
ಸ್ರೀವಾದೀ ಸಾಹಿತ್ಯಕ್ಕೆ ಶತಮಾನದ ಚರಿತ್ರೆಯಿದೆ. ಆತ್ಮಾನುಕಂಪ,
ಆತ್ಮಶೋಧನೆ ಆತ್ಮವಿಶ್ವಾಸ, ಮತ್ತು ಆತ್ಮನಿರ್ಭರತೆ, ಹೀಗೆ ಹಲವು ಮಾನವೀಯ ಆಯಾಮಗಳನ್ನು ದಾಟುತ್ತ,ಮೀರುತ್ತ, ತನ್ನತನವನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ, ಕನ್ನಡ ಮಹಿಳಾಸಾಹಿತ್ಯ, ಸದೃಢ ಸ್ಥಾನವನ್ನು ಪಡೆದು ಕೊಳ್ಳುತ್ತಿರುವುದು ಸಂತಸ ತರುತ್ತಿರುವ ಕ್ಷಣವಾಗಿದೆ.
ಪುರುಷಾಢಳಿತದ ಭಾರದಲ್ಲಿ ಕತ್ತಲೆಯಲ್ಲೇ
ಕಳೆದುಹೋಗಿದ್ದ ಮಹಿಳಾ ಸಂವೇದನೆ, ಇತ್ತೀಚಿನ
ವರ್ಷಗಳಲ್ಲಿ ಸಂಕೋಚ, ಮುಜುಗರ, ಭಯಗಳನ್ನೆಲ್ಲ ದಾಟಿ, ಬದುಕಿನ ನಿಜದ ಶೋಧನೆಗೆ
ಸೃಜನಶೀಲ ನೆಲೆಯಲ್ಲಿ ಹೆಜ್ಜೆಯಿಡುತ್ತಿರುವುದು ಕನ್ನಡ ಸಾಹಿತ್ಯಕ್ಕೇ ಹೊಸದೊಂದು
ಬಲಬಂದಂತಾಗಿದೆ. ಕನ್ನಡದ ಹಿರಿಯ ಸಾಹಿತಿಗಳ
ಕೃತಿಗಳಲ್ಲೂ ಹೆಣ್ಣಿನ ಸ್ಥಾನಮಾನವನ್ನು
ಹುಡುಕಾಟಗೈಯ್ಯಲು, ಸ್ತ್ರೀವಾದೀ ದೃಷ್ಟಿಯಲ್ಲಿ
ಮರುಓದು ನಡೆಯುತ್ತಿರುವುದು ಒಂದೆಡೆಯಾದರೆ, ಸ್ತ್ರೀವಾದೀ
ನೆಲೆಯಲ್ಲಿಯೇ ಹೊಸ ಹೊಸ ಮಾನವೀಯ
ಕಥನಗಳು ಸೃಷ್ಟಿಯಾಗುತ್ತಿರುವುದು, ಒಟ್ಟೂ ಮಾನವೀಯ ಅನುಭವಗಳ
ಅಭಿವ್ಯಕ್ತಿಗೆ ಪೂರ್ಣರೂಪ ಒದಗುವಂತಾಗಿದೆ.
ಈ ನಿಟ್ಟಿನಲ್ಲಿ
ಭವ್ಯಾ ರವರ ಧೈರ್ಯ ಪರಿಶ್ರಮ
ಮತ್ತು ಆಸಕ್ತಿ ಮೆಚ್ಚುವಂತಹದ್ದಾಗಿದೆ.
ತಮ್ಮ ಪ್ರಪ್ರಥಮ ಪ್ರಯತ್ನದಲ್ಲೇ ಸಾಕಷ್ಟು ಮುನ್ನಡಿಯಿಡುತ್ತಿದ್ದಾರೆ. ಸಮಾಜದ ಬಿಡಲೂ ಆಗದ ಅನುಭವಿಸಲೂ
ಆಗದ, ಅನಿವಾರ್ಯ ಪಾತಕಗಳಲ್ಲಿ ಕುಡಿತದಂತೆ ವೇಶ್ಯಾಸಮಸ್ಯೆಯೂ ಒಂದಾಗಿದೆ.
ನೈತಿಕವಾಗಿ ಬೆಂಬಿಡದೇ ಕಾಡುವ,
ಅನಿವಾರ್ಯ ಸಾಂಗತ್ಯದಲ್ಲಿ ನೆಲೆಸಿರುವ ಇಂತಹ ಚಟಿವಟಿಕೆ, ಮಾನವ ಜಗತ್ತಿಗೇ
ಬಹುದೊಡ್ಡ ಸವಾಲು. ವೇಶ್ಯಾ ಸಮಸ್ಯೆಯ ಮಾರಕತೆಗಳ
ಬಗೆಗೆ ಕನ್ನಡದಲ್ಲಿ ಸಾಕಷ್ಟು ಕೃತಿಗಳು ಬಂದಿವೆ.
ಅನಕೃ, ತರಾಸು, ಕಾರಂತರಂತಹ
ದಿಗ್ಗಜ ಕೃತಿಕಾರರನ್ನೂ ಬಿಡದೇ ಅಲುಗಾಡಿಸಿದ
ವೇಶ್ಯಾ ಸಮಸ್ಯೆ, ಪ್ರಸ್ತುತ ಪರಿತ್ಯಕ್ತೆ
ಕಾದಂಬರಿಯ ತನಕವೂ ಬಂದು ತಲುಪಿದೆ.
ವೇಶ್ಯಾ
ಸಮಸ್ಯೆ ಎಂಬುದು ಕೇವಲ ನೈತಿಕತೆ
ಅಥವಾ ವೈಯಕ್ತಿಕ ಆಯ್ಕೆಯ ಪ್ರಶ್ನೆಯಾಗದೇ
ಪಿತೃಸತ್ತಾತ್ಮಕ ಸಾಮಾಜಿಕ ವ್ಯವಸ್ಥೆ, ಆರ್ಥಿಕ ಅಸಮಾನತೆ,
ದಾರಿದ್ರ್ಯ, ಜಾತಿ ವರ್ಗಗಳ ತಾರತಮ್ಯ, ಕಾನೂನು, ಮತ್ತು ಸಂಸ್ಕೃತಿಯಾಳದ ದ್ವಂದ್ವಗಳ,
ಸಂಕೀರ್ಣ ಫಲಿತಾಂಶಗಳು ಸ್ತ್ರೀವಾದದ ಮುಖ್ಯ
ಕೇಂದ್ರವಾಗುತ್ತದೆ.
ಇಂತಹ
ಸೂಕ್ಷ್ಮ ಆಶಯಗಳನ್ನೇ ಹೊತ್ತ, ಈ ಪರಿತ್ಯಕ್ತೆ
ಕೃತಿ, ಮೋನಿಕಾ ಮತ್ತು ವಾಸವಿ ಎಂಬ ಎರಡು ಪಾತ್ರಗಳ, ಭಿನ್ನ ಜೀವನದೃಷ್ಟಿ, ವಿಭಿನ್ನ ಪ್ರವೃತ್ತಿಗಳನ್ನು ಮುಖಾಮುಖಿಯಾಗಿಸಿ ಆಧುನಿಕ ಬದುಕಿನ
ಪರಂಪರೆ ಮತ್ತು ಆಧುನಿಕತೆಗಳ ನಡುವಣ ದ್ವಂದ್ವವನ್ನು ಚಿತ್ರಿಸಲು
ಪ್ರಯತ್ನಿಸುತ್ತದೆ.
ಆನಂದ
ಮತ್ತು ಶಶಿ ಎಂಬ ಎರಡು ಪುರುಷಪಾತ್ರಗಳು, ಮೋನಿಕಾ ಮತ್ತು ವಾಸವಿಯರ ಬದುಕಿನ
ನೇರ ಒಡನಾಡಿಗಳಾಗಿ, ಅವರ ಜೀವನದ ಏರು ಇಳಿವು,
ಸಂತಸ ತಲ್ಲಣಗಳಲ್ಲಿ ಭಾಗವಹಿಸುತ್ತಾರೆ.
ಕೃತಿಯ
ಪ್ರಾರಂಭದಲ್ಲೇ ವಾಸವಿ ಮೋನಿಕಾರ
ಪ್ರವೃತ್ತಿ, ಜೀವನದ ಧೋರಣೆಗಳು ಅನಾವರಣಗೊಳ್ಳುತ್ತ, ಮೆಲ್ಲನೆ
ಬದುಕಿನ ವೈವಿಧ್ಯಮಯ ಅಧ್ಯಾಯ
ಬಿಚ್ಚಿಕೊಳ್ಳತೊಡಗುತ್ತದೆ. ಜೊತೆ ಜೊತೆಯಲ್ಲೇ ಕೌಟುಂಬಿಕ ಸಂಬಂಧ, ಸಾಮಾಜಿಕ ಆವರಣಗಳು, ಪರಿಸರದ ಸೌಂದರ್ಯ ಮತ್ತು ಸವಾಲುಗಳ ವಿವರಗಳು ಜೀವತಳೆಯಲು ಪ್ರಾರಂಭಿಸುತ್ತವೆ.
ವಾಸವಿಯ ಶಶಿಯೊಂದಿಗಿನ ಹದಿಹರೆಯದ
ಮುಗ್ಧಪ್ರೇಮ ಮಾಗುತ್ತ, ಪ್ರೇಮವೆಂಬ
ಭಾವ ವೈಚಾರಿಕತೆಯತ್ತ, ತಾತ್ವಿಕತೆಯತ್ತ ಪಲ್ಲವಿಸುತ್ತ, ಭೌತಿಕವಾಗಿ
ಒಂದಾಗದಿದ್ದರೂ ಮಾನಸಿಕವಾಗಿ ದೈವಿಕ ಪ್ರೇಮಿಗಳಾಗಿ, ಜೀವನವನ್ನೆದುರಿಸಲು ಸಿದ್ದಗೊಳ್ಳುತ್ತಾರೆ.
ಮೋನಿಕಾ
ಹದಿಹರೆಯದಲ್ಲೇ ತನ್ನ ಬಡತನದ ನಡುವೆ ಶ್ರೀಮಂತಿಕೆಯ ಕನಸು, ಮತ್ತು
ದೈಹಿಕ ಲಾಲಸೆಗೆ ಬಲಿಯಾಗಿ, ಕರೆವೆಣ್ಣಾಗಿ
ಮಾರ್ಪಾಡು ಹೊಂದುತ್ತಾಳೆ. ಹುದುಗಿಟ್ಟ ತನ್ನ
ದೈಹಿಕ ವಾಂಛೆ, ವೈಭೋಗ ಲಾಲಸೆ, ಮತ್ತು ಹಣದ ದಾಹಕ್ಕೆ
ದಾಸಳಾಗಿ, ಸುಪ್ರಸಿದ್ಧ ವೇಶ್ಯೆಯಾಗಿಬಿಡುತ್ತಾಳೆ. ವಿಟಪುರುಷರ ಆಕ್ರಮಣಕಾರಿ, ರಕ್ಕಸರೂಪದ ಮೂಕ ಪ್ರೇಕ್ಷಕಳಾಗಿ, ದೇಹ ಮತ್ತು ಮನಸ್ಸುಗಳ ಸಮತೋಲತೆಯನ್ನೇ
ಕಳೆದುಕೊಳ್ಳತೊಡಗುತ್ತಾಳೆ. ವೇಶ್ಯಾ ಮಾರುಕಟ್ಟೆಯಲ್ಲಿ ದೇಹಕ್ಕೆ ಬೆಲೆಯೇ ಹೊರತು ಮನಸ್ಸಿಗಲ್ಲ. ಸಂಪತ್ತು
ವೃದ್ಧಿಸಿತು. ನೆಮ್ಮದಿ ಆಹುತಿಯಾಯಿತು.
ಇಂತಹ
ಸಂಧಿಗ್ಧದಲ್ಲೇ ಅವಳಲ್ಲಿ ಸಹಜವಾಗಿ
ತಾಯ್ತನದ ಭಾವ ತೀವ್ರವಾಗಿ
ಕಾಡತೊಡಗಿದಾಗ ವಾಸ್ತವ ಪ್ರಪಂಚದ
ಅರಿವು ಅವಳಲ್ಲಿ ಜಾಗ್ರತಗೊಳ್ಳುತ್ತದೆ. ತನ್ನ ಬಳಿ ಬಂದ ಆನಂದ ಎಂಬ
ಎಂಜಿನಿಯರ್ ನನ್ನೇ ಮೊದಲ ಬಾರಿ ಪ್ರೇಮಿಸತೊಡಗುತ್ತಾಳೆ. ಅವನಿಂದ
ಒಂದು ಹೆಣ್ಣುಮಗುವನ್ನೂ ಹೆರುತ್ತಾಳೆ. ಆದರೆ ಆತ ತಂದೆಯೆನ್ನಿಸಿಕೊಳ್ಳಲು ಹಿಂಜರಿದಾಗ,
ಮಗಳ ಭವಿಷ್ಯ ಅತಂತ್ರವಾಗುವುದನ್ನು ನೆನೆದು, ಭ್ರಮನಿರಸನಗೊಳ್ಳುತ್ತಾಳೆ. ಇಡೀ ಪುರುಷಸಮೂಹವನ್ನೇ ದ್ವೇಷಿಸತೊಡಗುತ್ತಾಳೆ.
ಹಲವು ವರ್ಷಗಳಾದ ಮೇಲೆ ಗೆಳತಿ ವಾಸವಿಯ ಸಂಪರ್ಕಕ್ಕೆ
ಬಂದಾಗ, ವಾಸವಿಯ ಪ್ರಾಮಾಣಿಕ ಚಿಂತನೆ, ಜ್ಞಾನಾಕಾಂಕ್ಷೆ, ಬದುಕಿನ ಬಗೆಗಿರುವ ಖಚಿತ ನಿಲುವು,
ಮತ್ತು ಹೋರಾಟಮನೋಭಾವನೆಗಳು ಮೋನಿಕಾಳನ್ನು ಪ್ರಭಾವಿಸುತ್ತದೆ. ಮೋನಿಕಾ
ವೇಶ್ಯಾವೃತ್ತಿ ಬಿಟ್ಟು, ವೇಶ್ಯಾಪ್ರಪಂಚದಲ್ಲಿ
ನಡೆಯುವ ಅಮಾನವೀಯ ಶೋಷಣೆ, ಮುಗ್ಧ ಹೆಣ್ಣುಗಳ
ಬವಣೆಗಳನ್ನು ಪರಿಹರಿಸಲು ತನ್ನದೇ ಮಿತಿಯಲ್ಲಿ
ಹೋರಾಟಕ್ಕಿಳಿಯುತ್ತಾಳೆ.
ಆದರೆ
ಕ್ರೂರ ವ್ಯವಸ್ಥೆ, ಬೃಷ್ಠ ಪ್ರಭುತ್ವ, ಬೇಜವಾಬ್ದಾರೀ ಸಮುದಾಯಗಳ
ಆಟಕ್ಕೆ ಬಲಿಯಾಗುವ ದುರಂತ ಮೋನಿಕಾಳಿಗೆ ಎದುರಾದರೂ,
ವಾಸವಿಯ ತಾಯ್ತನದ ಕರುಣಾಗುಣ,
ಮೋನಿಕಾಳ ಮಗಳನ್ನು ಕ್ಷೇಮವಾಗಿ ಕಾಪಾಡಲು ಕಾರಣವಾಗುತ್ತದೆ.
ಸಾಮಾಜಿಕ
ಸಾಂಸ್ಕೃತಿಕವಾದ ಎಲ್ಲ ಪಲ್ಲಟಗಳ ಮೊದಲ ಪರಿಣಾಮ ಹೆಣ್ಣುಗಳ
ಮೇಲೆಯೇ.! ಸಂಪ್ರದಾಯದ ಹೊಸಿಲು
ದಾಟಿದ ಹೆಣ್ಣು ಬದಲಾದ ಆಧುನಿಕ ಜೀವನದಲ್ಲಿ ನೈತಿಕ ಸಾಧನೆಗಿಳಿದರೂ ಸಮಾಜ ಸಂಶಯದ ದೃಷ್ಟಿಯಿಂದ
ಹೊರಬರದಿರುವುದು ಕ್ರೂರ ಸತ್ಯ. ನಿಸ್ಪಕ್ಷ ಪಾತವಾಗಿ ಕಾಣುವ ಸುಶಿಕ್ಷಿತ
ಶಶಿಯಂತಹ ಆದರ್ಶ ವ್ಯಕ್ತಿತ್ವವೂ ಸಮಾಜದಲ್ಲಿದೆ.
ಸ್ತ್ರೀ ಶೋಷಣೆಯ
ವಿರುದ್ಧ ಸೆಣಸಾಟದಲ್ಲಿ, ಶಶಿಯಂತ ಪ್ರಗತಿಪರ, ವ್ಯಕ್ತಿಗಳ ಮನೋಬಲ ವಿರುವುದರಿಂದಲೇ ಸ್ತ್ರೀವಾದ ತನ್ನ ಗಟ್ಟಿಹೆಜ್ಜೆ ಮೂಡಿಸುತ್ತಿದೆ. ಅದೇ ಆನಂದನಂತಹ ಪುಕ್ಕಲು
ಸ್ವಾರ್ಥಿ ಗಂಡುಗಳು, ಯಾವುದೇ
ಮುಂಚಲನೆಗೆ ಅಡ್ಡಗಾಲು ನೀಡಿ, ಪ್ರಗತಿಗೆ ಕಂಟಕರಾಗುತ್ತಾರೆ.
ವೇಶ್ಯಾವೃತ್ತಿಯ ಬದುಕನ್ನು
ಪ್ರಮುಖವಾಗಿ ದೃಷ್ಟಿಸುವ ಈ ಕೃತಿ ಹೆಣ್ಣಿನ ದೇಹವನ್ನೇ ವಸ್ತುವಾಗಿ, ಆಸ್ತಿಯಾಗಿ ನೋಡುವ ಸಮಾಜದ ದುಷ್ಟ ಪ್ರವೃತ್ತಿಯನ್ನೇ ಪ್ರಶ್ನಿಸುತ್ತ ಸಾಗುತ್ತದೆ. ಇಲ್ಲಿಯ
ಹೆಣ್ಣು ಪಾತ್ರಗಳು ಅನುಭವದ ವಸ್ತುವಾಗಿಲ್ಲ. ತನ್ನದೇ ಕಥೆಯ
ಕರ್ತ್ರು. ತಪ್ಪು ಒಪ್ಪು ನೋವುಗಳ ಸಾಕ್ಷಿ ಅವಳು.
ಇಲ್ಲಿ ಅಂತಹ ಪಾತ್ರವನ್ನು ಕೇವಲ ಕರುಣೆ ಕುತೂಹಲ ಅಸಹನೆಗಳ
ಚೌಕಟ್ಟಿನಲ್ಲಿ ನೋಡದೇ ಅವಳ ಆಳದಲ್ಲಿರುವ ಆತ್ಮಗೌರವ, ತಾಯ್ತನ ಮತ್ತು ಬದುಕಿನ
ಸರಿತಪ್ಪುಗಳ ನಡುವೆಯೇ ಬದುಕಿಗೊಂದು
ಧನಾತ್ಮಕ ಆಯಾಮ ನೀಡಬಲ್ಲ ಆಶಾವಾದೀ
ಸಂದೇಶ ನೀಡುತ್ತದೆ.
ವೇಶ್ಯಾ ಸಮಸ್ಯೆಯೆಂದರೆ ಕೇವಲ ನೈತಿಕ ಪತನವಲ್ಲ. ಅತಿಸಾಂಪ್ರದಾಯಿಕತೆ, ಆಧುನಿಕ ಬದುಕಿನ
ಮೂಢ ಪಾಲನೆ, ಉದ್ಯೋಗಾವಕಾಶ, ಕಾನೂನು ರಕ್ಷಣೆ
ಮುಂತಾದವುಗಳ ವಿಫಲತೆಗಳು, ಮಹಿಳೆಯನ್ನು ಈ ವೃತ್ತಿಗೆ ತಳ್ಳಲು ಕಾರಣವಾಗುವ
ಸಾಧ್ಯತೆಯಿದೆ. ಇದೇ ಕಾರಣಕ್ಕೇ
ವ್ಯಕ್ತಿಗಳ ಕಥೆ ಹೇಳುತ್ತಲೇ ಸಾಮಾಜಿಕ ಜವಾಬ್ದಾರಿಯನ್ನು ಕಟುವಾಗಿ ಎಚ್ಚರಿಸುವ, ಈ ಕೃತಿ ರಾಜಕೀಯ ಪಠ್ಯವೂ ಆಗಿಬಿಡುತ್ತದೆ.
ಇದು ಒಂದು ಕಥೆಯಲ್ಲ. ಸಮಾಜದ ಜಾಣಾಂಧತನ, ಜಾಣ ಕುರುಡುತನಗಳ ಎದುರು ಜಾಣ
ಮೌನವನ್ನು ಮುರಿಯುವ ಯತ್ನವಾಗಿ
ತೋರಿದರೆ ಆಶ್ಚರ್ಯವಿಲ್ಲ.
ಮೋನಿಕಾ ಇಲ್ಲಿ, ಯಾವುದೇ ನೈತಿಕ
ಪಾಠದ ಸರಕಾಗಿಲ್ಲ. .
ಸಮಾಜದ ಅಂಚಿಗೆ
ತಳ್ಳಲ್ಪಟ್ಟರೂ, ಆ
ಅಂಚಿನಿಂದಲೇ ಸಮಾಜವನ್ನು
ಪ್ರಶ್ನಿಸುವ ಧ್ವನಿಯಾಗುತ್ತಾಳೆ ಅವಳು.
ಅವಳ
ದೇಹವನ್ನು ಮಾರುಕಟ್ಟೆಯ
ವಸ್ತುವಾಗಿ ಪರಿವರ್ತಿಸಿದ
ಸಂಸ್ಕೃತಿ, ಅವಳ
ಮನಸ್ಸನ್ನು ನಿರಾಕರಿಸಿದ
ವ್ಯವಸ್ಥೆ, ಮತ್ತು
ಅವಳ ಬದುಕಿನ
ಆಯ್ಕೆಗಳನ್ನು ಅಪರಾಧವನ್ನಾಗಿಸಿದ ಮೌಲ್ಯಧಾರಣೆ—ಇವೆಲ್ಲವನ್ನು
ಈ ಕೃತಿ
ಪ್ರಶ್ನಿಸುತ್ತದೆ.
ಒಟ್ಟಿನಲ್ಲಿ ಭವ್ಯಾ ಸಾಮಾಜಿಕ ಸಾಂಸ್ಕೃತಿಕ
ಜಾಡ್ಯವೊಂದನ್ನು ಸೂಕ್ಷ್ಮವಾಗಿ ಗುರುತಿಸುತ್ತ, ಕಲಾತ್ಮಕವಾಗಿ ದಾಖಲಿಸಲು ಪ್ರಯತ್ನಿಸಿದ್ದಾರೆ. ಅಸ್ಪೃಶ್ಯವೆನ್ನಲ್ಪಟ್ಟ ಬದುಕಿಗೆ
ಮಾನವೀಯ ಗೌರವ
ನೀಡುವ ಒಂದು
ವಿನಮ್ರ ಆದರೆ
ದೃಢವಾದ ಪ್ರಯತ್ನವಾಗಿ
ಈ ಕಾದಂಬರಿಯನ್ನು
ಕಾಣಬಹುದಾಗಿದೆ.
ಸುಂದರ ಭಾಷೆ
ಭವ್ಯಾರಲ್ಲಿದೆ. ಸುಲಲಿತ ನಿರೂಪಣೆಯಿದೆ. ಭಾವಕ್ಕೂ ಭಾಷೆಗೂ ಸಂಬಂಧ ವೇರ್ಪಡಲು ಇನ್ನಷ್ಟು ಬರಹಗಳು ಸೃಷ್ಟಿಯಾಗಬೇಕು. ಸಾಹಿತ್ಯಿಕ ಅನುಭವವೊಂದೇ ಅಲ್ಲ.—ಅದು
ಸಾಮಾಜಿಕ ಸಂವಾದವಾಗಬೇಕು. ನಿರೂಪಕಿಯಿಂದ ಪಾತ್ರಗಳಿಗೆ ಇನ್ನಷ್ಟು ಸ್ವಾತಂತ್ರ್ಯ ಲಭಿಸಬೇಕೆಂದೆನ್ನಿಸುತ್ತದೆ. ಪಾತ್ರಗಳ ಪ್ರವೃತ್ತಿ, ಚಿಂತನೆ
ವರ್ತನೆಗಳು ಪಾತ್ರದ ಆಳದಿಂದಲೇ ಮೂಡಿಬಂದರೆ
ಇನ್ನಷ್ಟು ಅರ್ಥಪೂರ್ಣತೆ ಒದಗುತ್ತಿತ್ತು.
ಕಾದಂಬರಿ
ಮಾಧ್ಯಮ ಸರಳವಿದ್ದಂತೇ ಸಂಕೀರ್ಣವೂ
ಹೌದು. ಬದುಕಿನ ಚೆಲುವನ್ನು ಸೆರೆಹಿಡಿಯುತ್ತ, ಇನ್ನೂ ಎತ್ತರದ ಅನುಭವ ಪ್ರಪಂಚಕ್ಕೆ ಮುಂದಿನ
ಕೃತಿಗಳು ಸಾಗಲಿ ಎಂದು ಆತ್ಮೀಯವಾಗಿ ಹಾರೈಸುತ್ತಿದ್ದೇನೆ.
ಪ್ರೀತಿಯಿಂದ
ಅಭಿಪ್ರಾಯಿಸಲು ಅವಕಾಶ ನೀಡಿದ್ದಕ್ಕೆ ಕಿರಿಯ ಲೇಖಕಿಗೆ ಅನಂತ ಕೃತಜ್ಞತೆಗಳು.
==============================================================
ಮುನ್ನುಡಿ.
ತಾ- ೧೦-೧- ೨೦೨೬. ಸುಬ್ರಾಯ
ಮತ್ತೀಹಳ್ಳಿ.
ಲೇಖಕ.
=============================================================
No comments:
Post a Comment