ಶ್ರೀ ಜನಾರ್ಚಿತ ಸತ್ಯ ಸಾಕ್ಷಿಯೆ / ಭೂಜನೈಕೋ ಗುರುವೆ,
ದೇವಜ /
ರಾಜಿಪವನೀ ರವಿಯೇ ಸುಪಥವೆ
ಜೀವದಧಿಪತಿಯೇ //
ತೇಜದುದಯವೇ ದೇವಕಾಂತಿಯೇ / ಮೂಜಗನ್ನಾಥೇಸೋ
, ನಿನ್ಮುಖ /
ಮಾಜಿಕೊಳ್ಳದೆ , ಮೂಡು ಭಕ್ತರ ಹೃದಯ ಕಮಲದೊಳು
//
ವೈದರಾತನ ದಂಡಿನಾಳ್ಗಳು
/ ಹೊಯಿದರಾತನ ಬಾರು ಹಗ್ಗದಿ /
ಗೈದರಾತಗೆ ಹಾಸ್ಯ ರಾಜನ ಸೋಗ ತೊಡಿಸುತಲೆ //
ಕೊಯ್ದರಾತನ ತಲೆಯ, ಮುಳ್ಳಿಂ / ಬೈದರಾತನ ರಾಜ ಎನುತಲಿ /
ಕೈದುವೆನುತಲೆ ಕೊಟ್ಟ ಬೆತ್ತದಿ / ಹೊಡೆದರಾತನಿಗೆ // ( ರೆವರೆಂಡ್ ಎಫ್ ಕಿಟ್ಟೆಲ್)
ಬಿಳಿಯ
ಸ್ಪುರದ್ರೂಪೀ ವಿದೇಶೀ ತರುಣನೊಬ್ಬ ( 1853 )ಧಾರವಾಡದ
ಸಂತೆಯಲ್ಲಿ ಸಂದು ಸಂದುಗಳಲ್ಲಿ
ಅಲೆಯುತ್ತಾನೆ. ಹಳ್ಳಿಗರು ಸೇರುವಲ್ಲಿ ಮೌನವಾಗಿ ಕುಳಿತು
ಅವರ ಮಾತು ಕತೆಯನ್ನಾಲಿಸುತ್ತಾನೆ.
ಬೀದಿ ವ್ಯಾಪಾರಿಗಳೊಡನೆ ಕನ್ನಡದಲ್ಲೇ
ಸಂಭಾಷಿಸುತ್ತಾನೆ. ದೇವಾಲಯ
ಮಠ ಮಸೀದಿ
ಚರ್ಚುಗಳ ಹೊರಗೆ
ನಿಂತು ಬಂದುಹೋಗುವವರನ್ನು ಗಮನಿಸುತ್ತಾನೆ.
ಸಾಲಲ್ಲಿ ಕುಳಿತ
ಬಿಕ್ಷುಕರನ್ನೂ ಬಿಡದೆ ಕಷ್ಟ ಸುಖವನ್ನಾಲಿಸುತ್ತಾನೆ.
ಕೈಯಲ್ಲಿರುವ ಪುಸ್ತಕದಲ್ಲಿ
ಅದೇನೋ ಗೀಚುತ್ತಾನೆ.
ಅಲ್ಲಿಗೇ ಮುಗಿಯದು
ಅವನ ಅಲೆದಾಟ,
ಬೆಳಗಾವಿ ಬೀದರ್
ಹೊನ್ನಾವರ, ಬೆಂಗಳೂರು
ಮಂಗಳೂರು ಯಾವ
ಪ್ರದೇಶ ಬೇಧವಿಲ್ಲದೇ ಹಳ್ಳಿ ಪಟ್ಟಣಗಳನ್ನು
ಸುತ್ತುತ್ತಾನೆ. ಗುಡಿಸಲಲ್ಲೂ
ವಾಸಮಾಡುತ್ತಾನೆ.ಅರಣ್ಯ ಪರ್ವತಗಳ ನಡುವೆ ಅಲೆದಾಡುತ್ತ, ಗಿಡ ಮರಗಳ
ಜೊತೆಗೆ ಸಂವಾದಿಸುತ್ತಾನೆ.
ಶ್ರೀಮಂತರನ್ನೂ ಸಂಪರ್ಕಿಸುತ್ತಾನೆ.
ಪಂಡಿತರೊಂದಿಗೆ ಚರ್ಚಿಸುತ್ತ,
ಸಾಮಾನ್ಯರೊಂದಿಗೆ ಬೆರೆಯುತ್ತ,
ಇಪ್ಪತ್ತು ವರ್ಷಗಳ ಕಾಲ
ಕರ್ನಾಟಕದ ಇಂಚಿಂಚು ಸ್ಥಳವನ್ನೂ
ತನ್ನ ಸೂಕ್ಷ್ಮ ಸಂವೇದನೆಯಲ್ಲಿ ಅಳೆಯುತ್ತಾನೆ.
ಆವರೆಗೂ ಆತ
ಯಾರೆಂದು ಯಾರಿಗೂ
ತಿಳಿದಿರಲಿಲ್ಲ. ಅದು
೧೯ ನೆಯ ಶತಮಾನದ
ಮಧ್ಯ ಭಾಗ. ಪತ್ರಿಕೆಯಂತಹ
ಯಾವ ಸಂಪರ್ಕಮಾಧ್ಯಮವೂ
ಇರದ ಕಾಲ.
ಒಮ್ಮೆಲೇ ಎಲ್ಲ ಭಾರತೀಯ
ಭಾಷೆಗಳೂ ನಿಬ್ಬೆರಗಾಗುವಂತಹ
ಅದ್ಭುತವಾದ ಕನ್ನಡದ
ಶಬ್ದಕೋಶವೊಂದು ಕನ್ನಡದಲ್ಲಿ
ಪ್ರಕಟವಾದ ಆ ಶುಭಘಳಿಗೆಯಲ್ಲಿ,
ರೆವರೆಂಡ್ ಎಫ್
ಕಿಟ್ಟೆಲ್ಲ್(೧೮೩೨- ೧೯೦೩) ಎಂಬ
ಅಪ್ರತಿಮ ಕನ್ನಡಿಗ
ಜನಮಾನಸದಲ್ಲಿ ನೆಲೆಯೂರುತ್ತಾನೆ. ಉತ್ತರಕನ್ನಡ ಜಿಲ್ಲೆಯಲ್ಲೂ
ಆತ ಕೆಲವು ಕಾಲ ವಾಸಿಸಿದ್ದನಂತೆ.
ಕಿಟ್ಟೆಲ್ಲರ ಸಂಸ್ಕೃತ
ನುಡಿಗಾರಿಕೆ ಗಮನಿಸಿದ ಸ್ಥಳೀಯ
ಜನ ಕಿಟ್ಟೂ ಭಟ್ಟ ಎಂದು ಹೆಸರಿಸಿದ್ದರಂತೆ. ಜರ್ಮನಿಯ
ವಿಶ್ವವಿದ್ಯಾಲಯವೊಂದು ಆತ
ಗೈದ ಅಸಾಧಾರಣ
ಕನ್ನಡ – ಇಂಗ್ಲಿಶ್ ಶಬ್ದಕೋಶದ
ಸೃಷ್ಟಿಗಾಗಿ, ಗೌರವಡಾಕ್ಟರೇಟ್
ನೀಡಿ ಸಮ್ಮಾನಿಸಿದಾಗ,
ಕನ್ನಡ ಜನತೆ
ಸಂಭ್ರಮಿಸುತ್ತಾರೆ. ಏಕೆಂದರೆ
ಆಗ ಕರ್ನಾಟಕದಲ್ಲಿ
ಒಂದು ವಿಶ್ವವಿದ್ಯಾಲಯವೂ ಇರಲಿಲ್ಲ.
ಆದರೆ ಕನ್ನಡಕ್ಕೆ
ಸಂದ ಮೊದಲ
ಡಾಕ್ಟರೇಟ್, ಜರ್ಮನಿಯ
ಪಾದ್ರಿ ಕಿಟ್ಟೆಲರ
ಕನ್ನಡತನಕ್ಕೆ ದೊರಕಿತು.
ಕಿಟ್ಟೆಲ್
ಕರ್ನಾಟಕಕ್ಕೆ ಆಗಮಿಸಿದ್ದು
ಕ್ರಿಶ್ಚನ್ ಧರ್ಮಪ್ರಸಾರಕ್ಕಾಗಿ.
ಇಲ್ಲಿಯ ಹಿಂದೂ
ಮುಸ್ಲಿಂ ಇನ್ನಿತರ
ಮತಗಳ ಜನರನ್ನು ಆಕರ್ಷಿಸಿ, ಕ್ರಿಶ್ಚನ್ ದೀಕ್ಷೆ
ನೀಡುವುದು ಅವನ ಕಾರ್ಯವಾಗಿತ್ತು.
ಆತ
ಕರ್ನಾಟಕದ ಧಾರವಾಡಕ್ಕೆ
ಮತಪ್ರಚಾರಕನಾಗಿ ಬಂದಾಗ,
ಆತನಿಗೆ ಕಾಡಿದ್ದು
ಸ್ಥಳೀಯ ಭಾಷೆ. ಜನರೊಂದಿಗೆ
ಸಂವಹಿಸಲು ತೊಡಕಾದ ಭಾಷಾಸಮಸ್ಯೆಯ
ಬಗೆಗೆ ಚಿಂತಿಸುತ್ತ,
ಕನ್ನಡ ಕಲಿಯಲು ತೊಡಗುತ್ತಾನೆ.
ಸತತ ಹತ್ತು ವರ್ಷ,
ಕನ್ನಡ ಮಲೆಯಾಳಮ್
ತಮಿಳು ಸಂಸ್ಕೃತ, ಮತ್ತು ತುಳು, ಭಾಷೆಗಳನ್ನು
ಏಕಕಾಲದಲ್ಲಿ ಮನನ ಮಾಡಿಕೊಳ್ಳುತ್ತಲೇ ಕನ್ನಡದ
ಸತ್ವ ಮತ್ತು ಸೌಂದರ್ಯಕ್ಕೆ
ಮನಸೋಲುತ್ತಾನೆ. ಪ್ರಾಚೀನ ಕನ್ನಡ
ವಾಙ್ಮಯ, ಜಾನಪದ , ಪುರಾಣ,
ಮೌಖಿಕ ಮಹಾಕಾವ್ಯ, ಮತ್ತು ವೈವಿಧ್ಯಮಯ
ಆಡುನುಡಿಗಳನ್ನು ಅಮೂಲಾಗ್ರವಾಗಿ
ಶೋಧಿಸತೊಡಗುತ್ತಾನೆ. ಹಾಗೆಂದು
ಆತ ಜರ್ಮನಿಯಿಂದ
ಭಾರತಕ್ಕೆ ಆಗಮಿಸುವಾಗಲೇ ಹಿಬ್ರೂ,
ಗ್ರೀಕ್ ಲ್ಯಾಟೀನ್, ಫ್ರೆಂಚ್, ಮತ್ತು ಇಂಗ್ಲಿಶ್
ಭಾಷೆಗಳನ್ನು ಮನೋಗತ
ಮಾಡಿಕೊಂಡ, ವಿಶ್ವಭಾಷಾ
ತಜ್ಞನಾಗಿದ್ದ. ಪಾಶ್ಚಾತ್ಯ
ಸಾಹಿತ್ಯದ ಶಕ್ತಿ
ಸಾಧನೆಗಳ ಸಂಪೂರ್ಣ
ಅರಿವು ಆತನಿಗಿತ್ತು.
ಮತ ಪ್ರಚಾರ
ಬಿಟ್ಟು ನಾಡು ನುಡಿಗಳ
ಸಂಶೋಧನೆಗಿಳಿದ ಕಿಟ್ಟೆಲ್
ಚರ್ಚುಗಳಿಂದ ದೂಷಣೆಗೊಳಗಾಗುತ್ತಾನೆ. ಯಾರನ್ನೂ ಒಮ್ಮೆಯೂ
ಮತಾಂತರಿಸದಿದ್ದುದು ಅವರ
ಅಸಹನೆಗೆ ಕಾರಣವಾಗಿತ್ತು. ಅವರಿಂದ
ಸ್ಥಾನಾಂತರದ ಶಿಕ್ಷೆಗೊಳಗಾಗುತ್ತಾನೆ. ದೂರದ
ತಮಿಳುನಾಡಿಗೆ ಅವನನ್ನು ವರ್ಗಾಯಿಸಲಾಗುತ್ತದೆ.
ವರ್ಗಾವಣೆಯೂ ಕಿಟ್ಟೆಲ್ ನಿಗೆ
ಅನುಕೂಲವೇ ಆಗುತ್ತದೆ. ಅಲ್ಲಿ ತಮಿಳಿನ
ಹೆಚ್ಚಿನ ಅಧ್ಯಯನಕ್ಕೆ
ಸಹಾಯವಾಗುತ್ತದೆ.
ಆ
ಕಾಲದಲ್ಲಿ, ಪಂಪ
ಕುಮಾರವ್ಯಾಸ ರಿಂದ
ವಚನಸಾಹಿತ್ಯದವರೆಗೆ ಯಾವುದೂ
ಇನ್ನೂ ಪ್ರಕಟಗೊಂಡಿರಲೇ
ಇಲ್ಲ. ಎಲ್ಲವೂ
ತಾಡವಾಲೆಗಳಲ್ಲಿ, ಯಾರ
ಯಾರದ್ದೋ ಮನೆಗಳಲ್ಲಿ,
ಮಠಮಾನ್ಯಗಳಲ್ಲಿ ಮೂಲೆಸೇರಿತ್ತು.
ಬರಿಗಾಲ ವೈದ್ಯನಾಗಿ,
ಊರಿಂದೂರಿಗೆ ಪಾದಯಾತ್ರೆಗೈಯ್ಯುತ್ತ,
ತಾಡವಾಲೆ ಗ್ರಂಥಗಳನ್ನೆಲ್ಲ
ಸಂಗ್ರಹಿಸುತ್ತ, ಅವುಗಳಲ್ಲಿ
ಕೆಲವನ್ನು ಮುದ್ರಿಸುತ್ತ,
ಆಸಕ್ತರಿಗೆ ಹಂಚುತ್ತ,
ತಾನೇ ಪ್ರಕಟಿಸುತ್ತಿದ್ದ
ಸಮಾಚಾರ ಪತ್ರಿಕೆಗಳಲ್ಲಿ
ಕನ್ನಡ ಕೃತಿಗಳ ಮಹತ್ವದ ಬಗೆಗೆ
ಸರಳ ಕನ್ನಡದಲ್ಲಿ ಬರೆಯುತ್ತ,
ಕನ್ನಡ ನುಡಿಯ ಸಂಜೀವಿನಿಯಾಗಿ
ಬೆಳೆದು ಬಾಳಿದ
ಕಿಟ್ಟೆಲ್ ಒಂದೂವರೆ
ಶತಮಾನದ ನಂತರವೂ
ಕನ್ನಡಿಗರ ಕಣ್ಮಣಿಯಾಗಿ
ಬೆಳಗುತ್ತಿದ್ದಾನೆ. ಬೆಂಗಳೂರಿನಲ್ಲಿ ಭವ್ಯವಾಗಿ
ನಿಂತಿರುವ, ಕಿಟ್ಟೆಲ್ಲರ
ಪ್ರತಿಮೆಯಾಗಲೀ, ಅಲ್ಲಿಯ
ಒಂದು ನಗರದ ಹೆಸರಾಗಿಯಾಗಲೀ,
ಧಾರವಾಡದ ಕಿಟೆಲ್
ಕಾಲೇಜಿನ ಆವರಣವಾಗಲೀ,
ಈಗಲೂ ಕಿಟ್ಟೆಲ್ಲರನ್ನು
ಸಜೀವವಾಗಿ ಇಟ್ಟಿದೆ.
ಸಂಸ್ಕೃತ
ಮತ್ತು ಇಂಗ್ಲಿಶ್ ಭಾಷೆಗಳ
ಯಜಮಾನಿಕೆಯ ಉಚ್ಛ್ರಾಯ
ಕಾಲದಲ್ಲಿ ಕನ್ನಡ
ಪಾಮರರ ಆಡುನುಡಿಯಾಗಿ,
ಕೀಳರಿಮೆಯಿಂದ ಬಳಲುತ್ತಿರುವಾಗ,
ಕನ್ನಡದ ಧೀಮಂತಿಕೆಯನ್ನು
ವಿಶ್ವದ ಗಮನಕ್ಕೆ ತಂದ
ಧೀಮಂತ ಕಿಟ್ಟೆಲ್.
ಈಗಲೂ ಹಳೆಗನ್ನಡವೆಂದರೆ
ಕಬ್ಬಿಣದ ಕಡಲೆ
ಎಂದು ಮೂಗುಮುರಿಯುವ
ಸುಶೀಕ್ಷಿತ ಕನ್ನಡಿಗರ
ಎದುರು, ಹಳೆಗನ್ನಡ
ಶಬ್ದಗಳನ್ನು ಅರ್ಥೈಸಿ,
ವಿಶ್ಲೇಷಿಸಿ, ಕನ್ನಡಿಗರೆದುರು
ಮಂಡಿಸಿದ ಜರ್ಮನ್ ಪ್ರತಿಭೆಗೆ
ಕನ್ನಡಿಗರು ಸದಾ
ಕೃತಜ್ಞರಾಗಿರಬೇಕು.
ಹಾಗೆಂದು
ನಂತರದ ವರ್ಷಗಳಲ್ಲಾದರೂ
ಕನ್ನಡದ ಶ್ರೇಯೋಭಿವೃದ್ಧಿಗೆ
ಶ್ರಮಿಸಿದ ಮಹನೀಯರುಗಳನ್ನು
ಸ್ಮರಿಸಿದರೆ, ಕನ್ನಡ
ಮಾತೃಭಾಷೆಯಲ್ಲದ ಕನ್ನಡಕ್ಕಾಗಿ
ಜೀವನವನ್ನೇ ಮೀಸಲಿಟ್ಟ
ಹಲವು ಉದಾಹರಣೆಗಳು
ಗೋಚರಿಸುತ್ತವೆ. ಬಿ.ಎಲ್.ರೈಸ್,(ಇಂಗ್ಲಿಶ್) ಕಥನ ಭೀಷ್ಮ, ಮಾಸ್ತಿ ವೆಂಕಟೇಶ್
ಅಯ್ಯಂಗಾರ್,(ತಮಿಳು) ಬೇಂದ್ರೆ ( ಮರಾಠಿ)
ಡಿ.ವಿ.ಗುಂಡಪ್ಪ (ತೆಲಗು) ನಿಸಾರ್ ಅಹಮದ್ (ಉರ್ದು)
ಇನ್ನೂ ಸಾಕಷ್ಟು
ಕನ್ನಡೇತರ ಕನ್ನಡ ಪ್ರತಿಭೆಗಳ
ಉದಾಹರಣೆ ನೀಡಬಹುದು.
ಸಾಮಾನ್ಯವಾಗಿ
ರೆವರೆಂಡ್ ಕಿಟ್ಟೆಲ್
ಇಂದೂ ಜನಮಾನಸದಲ್ಲಿ ನೆಲೆನಿಂತಿರುವುದು,
ಅವರ ಜೀವಮಾನದ
ಅನನ್ಯ ಸಾಧನೆಯಾದ ಕನ್ನಡ – ಇಂಗ್ಲಿಶ್
ಶಬ್ದಕೋಶದ ಮೂಲಕ
ಮಾತ್ರ. ಅದರ
ಅಗಾಧ ಅಂದರೆ
ಎಪ್ಪತ್ತು ಸಾವಿರ ಶಬ್ದಗಳ,೧೭೫೨ ಪುಟಗಳಲ್ಲಿ ಹಬ್ಬಿದ ಅಗಾಧ ಕೃತಿ,
ಶಬ್ಧೋತ್ಪತ್ತಿ, ಶಬ್ದದ
ಮೂಲ, ಇಂಗ್ಲಿಶ್ ಅರ್ಥ, ಅದರ ಸರಿಯಾದ
ಉಚ್ಛಾರ, ಮುಂತಾದ ವಿವರಗಳಿಂದ
ಸಮೃದ್ಧಗೊಂಡಿರುವ ಕನ್ನಡದ ಪ್ರಥಮ
ಶಬ್ದಕೋಶ, ಶತಮಾನಗಳ ನಂತರವೂ ಕನ್ನಡಿಗರ
ಕೈಮುದ್ದಾದ ಕೋಶವಾಗಿ
ವಿಜ್ರಂಭಿಸುತ್ತಿರುವುದು, ಬೆರಗು ಮೂಡಿಸುತ್ತದೆ.
ಸಾವಿರ ಸಾವಿರ
ಗಾದೆ ಮಾತುಗಳು, ಒಗಟುಗಳಿಂದ ಸಮೃದ್ಧಗೊಂಡ
ಪ್ರಸ್ತುತ ಕೋಶ
ಅತ್ಯಂತ ಸ್ಪಷ್ಟ, ನಿಖರತೆಗೆ
ಹೆಸರಾಗಿದೆ. ಆ ವರೆಗೆ
ಕನ್ನಡದಲ್ಲಿ, ಬಂದಿದ್ದ ಅದೆಷ್ಟೋ
ಶಬ್ಧ ನಿಘಂಟುಗಳನ್ನು ಮೀರಿಸಿ
ವೈಜ್ಞಾನಿಕತೆ, ಖಚಿತತೆ,
ಮತ್ತು ಆಪ್ತಗುಣಗಳಿಂದ, ಕನ್ನಡಭಾಷೆಗೆ
ಹೊಸ ಜೀವ ನೀಡುವಲ್ಲಿ ದಾಖಲೆಯ ಕೆಲಸವಾಗಿದ್ದರಿಂದಲೇ
ವರಕವಿ ಬೇಂದ್ರೆ ʻʻ ಕನ್ನಡಕೆ
ಕನ್ನಡಿ ಹಿಡಿದು ದುಡಿದವ ʼʼ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕೇವಲ ಶಬ್ದಕೋಶ
ರಚನೆಕಾರರೆಂದು ನಾವು ತಿಳಿದರೆ
ಕಿಟ್ಟೆಲ್ ವ್ಯಕ್ತಿತ್ವಕ್ಕೆ
ಅಪಚಾರಗೈದಂತಾದೀತು. ಏಕೆಂದರೆ
ಮೂಲಭೂತವಾಗಿ ಆತ
ಸಂವೇದನಾ ಶೀಲ ಅಪ್ಪಟ
ಕವಿ. ಕನ್ನಡದಲ್ಲಿ
ಪ್ರಥಮವಾಗಿ ಏಸುವಿನ
ದುರಂತಮಯ ಜೀವನ ಕಥೆಯನ್ನು
ಖಂಡಕಾವ್ಯದ ಮೂಲಕ
ಭಾಮಿನಿ, ವಾರ್ಧಕ
ಷಟ್ಪದಿಗಳಲ್ಲಿ, ರಚಿಸಿದರು. ಏಸುವಿನ
ಜೀವನ ವೃತ್ತಾಂತವಾದ ಆ
ಖಂಡಕಾವ್ಯದಲ್ಲಿ, ೨೮೦ ಭಾಮಿನಿ, ೭೫ ವಾರ್ಧಿಕ
ಷಟ್ಪದಿ ಯಿಂದ ಅಲಂಕೃತಗೊಂಡಿದೆ. ಆಕಾಲದ
ಶಿಕ್ಷಣಕ್ಕಾಗಿ, ಪ್ರಾಥಮಿಕ ಶಾಲಾ ಕನ್ನಡ
ವ್ಯಾಕರಣ, ಮಕ್ಕಳಿಗಾಗಿ
ಕವಿತೆಗಳು, ಪಠ್ಯ ಪುಸ್ತಕಗಳು, ಅದೇ ಪ್ರಥಮವಾಗಿ
ರಚನೆಗೊಂಡರೆ, ಕರ್ನಾಟಕ ಇತಿಹಾಸ,
ಕೇಶೀರಾಜನ ಶಬ್ಧಮಣಿ ದರ್ಪಣ,
ಕರ್ನಾಟಕ ಕಾವ್ಯಮಾಲೆ,
ನಾಗವರ್ಮನ ಕನ್ನಡ ಛಂದಸ್ಸುಕೃತಿ, ʻʻ ಛಂದೋಂಭುಧಿʼʼ ಪಂಚತಂತ್ರ, ಮುಂತಾದ
ಕೃತಿಗಳು ಅವರಿಂದ ರಚಿಸಲ್ಪಟ್ಟಿವೆ. ಪ್ರಾರಂಭದಲ್ಲಿ ನೀಡಿದ
ಭಾಮಿನಿ ಪದ್ಯದ
ತುಣುಕೊಂದು, ಕಿಟ್ಟೆಲ್ಲರ ಕನ್ನಡ
ಛಂದಸ್ಸಿನಮೇಲಿನ ಪ್ರಭುತ್ವವನ್ನು
ದರ್ಶಿಸುತ್ತದೆ.
ದೂರದ
ಜರ್ಮನ್ ನಾಡಿನಿಂದ
ಕನ್ನಡಕ್ಕೆ ವರವಾಗಿ ಬಂದ ಕಿಟ್ಟೆಲ್ ಕನ್ನಡದ
ಲಿಪಿಸೌಂದರ್ಯಕ್ಕೆ ಮನಸೋತ.
ಪ್ರಾಚೀನ ಕವಿಗಳ
ಸಾರಸ್ವತ ಸಾಧನೆಗೆ
ತಲೆಬಾಗಿದ. ಕನ್ನಡ ಜನತೆಯ
ಮುಗ್ಧತೆ, ಆತ್ಮೀಯತೆ, ಸಂಸ್ಕೃತಿಪ್ರೀತಿಗೆ ಶರಣಾದ. ಆ ಕಾಲದ
ಭಾರತೀಯ ಭಾಷಾತಜ್ಞರಲ್ಲೊಬ್ಬರಾದ
ಕಿಟ್ಟೆಲ್, ಸಾಮಾನ್ಯಜನತೆಯ ಆಪ್ತನಾಗಿ,
ಅವರವರ ಮನೆಗಳಲ್ಲೇ
ಉಳಿದು, ನಡೆ
ನುಡಿ, ಆರಾಧನೆ, ಅಪರಕ್ರಿಯೆ, ತೇರು
ಜಾತ್ರೆ, ಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ
ಬೆರೆತು ಸಂಸ್ಕೃತಿಯ
ಸಾರವನ್ನು ಹೀರಿದ.
ಅತ್ಯಂತ ವೈಜ್ಞಾನಿಕವಾಗಿ
ದಾಖಲಿಸಿದ.
ಸರಾಸರಿ
ಅರ್ಧ ಶತಮಾನ ಕಾಲ ಅಹೋರಾತ್ರಿ
ಕನ್ನಡದ ಸಂಶೋಧನೆ, ಕೃತಿ ರಚನೆ, ಪತ್ರಿಕೆ ಪ್ರಕಟಣೆ,
ಎಲ್ಲೆಂದರಲ್ಲಿ ಅಧ್ಯಯನದ
ಪಾದಯಾತ್ರೆಗಳಲ್ಲಿ ವ್ಯಯಿಸಿದ
ಕಿಟ್ಟೆಲ್ ತನ್ನ ಕೊನೆಯ
ಕೆಲವು ವರ್ಷಗಳನ್ನು ಜರ್ಮನಿಯಲ್ಲೇ
ಕಳೆದ. ೧೯೦೩ ರಲ್ಲಿ
ತನ್ನ ೭೧ ರ ವಯಸ್ಸಿನಲ್ಲಿ
ಹಾಸಿಗೆ ಹಿಡಿದ.
ಜರ್ಮನಿಯಲ್ಲೇ ಇದ್ದ
ಕನ್ನಡಿಗರೊಬ್ಬರು ಕಿಟ್ಟೆಲ್ ರನ್ನು
ನೋಡಲು ಬರುತ್ತಾರೆ.
ಇಂಗ್ಲಿಶ್ ನಲ್ಲಿ ಮಾತಾಡತೊಡಗುತ್ತಾರೆ.
ಕಿಟ್ಟೆಲ್ ಅಸಹನೆಗೊಳಗಾಗಿ, ʻʻ ದಯವಿಟ್ಟು ನೀವು ನಿಜವಾದ
ಕನ್ನಡಿಗರಾದರೆ ಕನ್ನಡದಲ್ಲೇ ಮಾತನಾಡಿ.
ಕನ್ನಡ ನುಡಿ
ಕಿವಿಗೆ ಬೀಳದೇ ವರ್ಷಗಳೇ
ಕಳೆದವು. ಇನ್ನೊಮ್ಮೆ ಆಸ್ವಾದಿಸಿ ಜೀವ ತೊರೆಯುತ್ತೇನೆʼʼ ಎಂದು ನೊಂದು
ನುಡಿದರಂತೆ.
ಅಂದೇ ಅವರು
ರಚಿಸಿದ ಕನ್ನಡದ
ಕೃತಿಯೊಂದು ಪ್ರಕಟಗೊಂಡು
ಅವರ ಕೈ
ತಲುಪಿತು. ಮಾರನೆಯ
ದಿನವೇ ಅವರು ಜೀವ
ತ್ಯಜಿಸಿದರು. ಆಗ
ಅವರ ಕೈಯ್ಯಲ್ಲಿ
ಆ ಪುಸ್ತಕವೂ
ಬೆಚ್ಚಗೇ ಕುಳಿತು
ಕಂಬನಿ ಸುರಿಸುತ್ತಿತ್ತು.
ʻʻನಿನ್ನಂಥ
ಮತ್ತೊಬ್ಬ ಇಲ್ಲಿ ಹುಟ್ಟಿಲ್ಲ
ನುಡಿಯ
ನೀರವತೆ ಮತ್ಯಾರಿಗೂ ತಟ್ಟಿಲ್ಲ
ಸಡಿಲಾದ ಸರಪಳಿಯ
ಮತ್ತೆ ಕಟ್ಟಿಲ್ಲ
ಈ
ನಾಡ ನುಡಿಗುಡಿಯ ಅಪ್ರತಿಮ
ವಿಟ್ಠಲಾ
ಕನ್ನಡದ
ಕಣ್ಮಣಿ ರೆವರೆಂಡ
ಕಿಟ್ಟೆಲಾ.ʼʼ
ಸುಬ್ರಾಯ ಮತ್ತೀಹಳ್ಳಿ. ತಾ- ೨೬-೯-೨೦೨೫.
ನವೆಂಬರ್ ಸಂಚಿಕೆಗೆ. ( ಸುಮಸಂಪದ ಅಂಕಣಕ್ಕೆ.)
No comments:
Post a Comment