ತಾತ್ವಿಕ ತುರೀಯಕ್ಕೆ ಸಾಗಿದ ʻʻಎಚ್.ಎಸ್.ವಿ.ʼʼ
ʻʻಬತ್ತಿ ಸುಟ್ಟು ಎಣ್ಣೆತೀರಿ, ಉದ್ವಿಗ್ನ ದೀಪ ನಿಷ್ಪಂದ
ಶಾಂತ.
ಮತ್ತೆ ಬತ್ತಿ ಪೋಣಿಸಿ
ಎಣ್ಣೆ ರೆಡಿಮಾಡಿ ದೀಪ ಹಚ್ಚಿಟ್ಟಾಗ
ಖಾಲಿ ಗೋಡೆಯ ನಡುವೆ ಒಂದು ನಿಶ್ಶಬ್ದ
ನಿರುಂಬಳ ನಗೆ.
ದೀಪಶಿಖೆಯಿಂದೇಳುತ್ತಿದೆ ಸುರುಳಿ ಸುರುಳಿ
ಕಪ್ಪುಹೊಗೆ. ʼʼ ( ಉತ್ತರಾಯಣ
)
ಕವಿ ಕಾಲಾತೀತ. ಪ್ರದೇಶಾತೀತ.
ಸಾಮಾನ್ಯನನ್ನು ಕಾಲ ಕಟ್ಟಿಹಾಕಿದರೆ,
ಕವಿ ಕಾಲವನ್ನೇ ಕಟ್ಟಿಹಾಕುತ್ತಾನೆ. ಭೌತಿಕವಾಗಿ
ಆತನಿಲ್ಲದೇ ಹೋದರೂ ಸಾರ್ವಕಾಲಿಕವಾಗಿ ಮಾನವಜಗತ್ತಿನ
ಜೀವಂತ ಮೌಲ್ಯವಾಗಿ, ಸಂಗಾತಿಯಾಗಿರುತ್ತಾನೆ. ನಿಜವಾದ
ಕಾವ್ಯ ಮಾನವನ ಆತ್ಮದ ಮಾತು. ಕವಿಯ ಮಾತೇ ಮಾತೆಯಾಗಿ
ಸಾಂತ್ವನಿಸುತ್ತದೆ. ಎಚ್ಚರಿಸುತ್ತದೆ. ಬೆಚ್ಚಿಸುತ್ತದೆ. ಅಂತರಂಗದ
ಕಾವಳ ಹೊಕ್ಕು ನಿಜದ ದಾರಿಯ ಶೋಧಿಸುತ್ತದೆ.
ಮನುಷ್ಯನೆಂದರೆ ಯಾರು ? ಅವನಿಂದೇನಾಗಬೇಕು, ಏನಾಗಿದ್ದಾನೆ
ಏನಾಗಿದ್ದರೆ ಚನ್ನಾಗಿತ್ತು, ಏಕೆ ಹೀಗೆ
? ಎಂಬೆಲ್ಲ ಪ್ರಶ್ನೆಗಳನ್ನು ತಾನೇ ಕೇಳಿಕೊಳ್ಳುತ್ತ, ತಾನೇ ಉತ್ತರವನ್ನ
ಅನ್ವೇಷಿಸುತ್ತ, ಮನುಷ್ಯತ್ವದೆಡೆಗೆ ತಾನೇ ಒಂದು ಹೆಜ್ಜೆಯನ್ನಿಡುತ್ತ, ಎಲ್ಲ ಸಂಕೀರ್ಣತೆಗಳನ್ನ, ಎಲ್ಲ ದ್ವಂದ್ವಗಳನ್ನ ಮೀರಿ ಸಾಗುವವನೇ
ನಿಜವಾದ ಕವಿ. ಕೇವಲ ವರ್ತಮಾನದಲ್ಲಿ ಬದುಕುವುದು
ಎಂದರೆ, ಉಸುಕಿಗೆ ನೀರು ಹೊಯ್ದಂತೆ. ಭೂತದ ಸುಭದ್ರ
ಸಾಂಗತ್ಯದಲ್ಲಿ, ಭವಿಷ್ಯದ ಗಾಢ ಚಿಂತನೆ ಮಾತ್ರ ವರ್ತಮಾನಕ್ಕೆ ಚೈತನ್ಯ ನೀಡೀತು. ಕಟು ವಾಸ್ತವದ
ಕುರುಡುತನಕ್ಕೆ ಹೊಸ ದೃಷ್ಟಿನೀಡಿ ಸಮುದಾಯಕ್ಕೆ
ಪುಷ್ಟಿಯಾದೀತು.
ತಾತ್ವಿಕತೆ ಆಧ್ಯಾತ್ಮಿಕ ತೆ ಸಾಂಸ್ಕೃತಿಕ ಚೆಲುವು, ಪಾರಂಪರಿಕತೆ ಆಧುನಿಕತೆ, ವೈಚಾರಿಕತೆ ಮತ್ತು ಇತಿಹಾಸ ಗಳ ಸುಂದರ ಮೂರ್ತಿ ಯಾಗಿ, ಕನ್ನಡ ಭಾಷೆಯ ಅಸ್ಮಿತೆಯಾಗಿ ಎಂಟು ದಶಕದ ಕಾಲ ಈ ಮಣ್ಣಿನಲ್ಲಿ ಬೆಳೆದು
ಬಾಳಿ, ಸಾರ್ವಕಾಲಿಕ ನೆನಪಾಗಿ ಉಳಿದ ಕವಿ ಡಾ.
ಎಚ್.ಎಸ್.ವೆಂಕಟೇಶಮೂರ್ತಿ, ನಮ್ಮನ್ನಗಲಿದ ಈ ತಲ್ಲಣದ ಕ್ಷಣದಲ್ಲಿ,
ಅನವರತ ಕಾವ್ಯಧ್ಯಾನದಲ್ಲಿ ಸುದೀರ್ಘ
ಕಾವ್ಯಸೃಷ್ಟಿಗೈದ, ಆಮೂಲಕವೇ ಸಹೃದಯರಲ್ಲಿ ಸಾರ್ವಕಾಲಿಕವಾಗಿ ಜೀವಂತವಾಗಿರುವ
ಕವಿಯ ಬಗೆಗಿನ ನೆನಪನ್ನು ಬಗೆಯುವಂತಾಗಿದೆ.
ಪಂಪ
ಕುವೆಂಪು ಗಳ ಶಕ್ತಿ, ಪುತಿನ ಅಡಿಗರ ಜೀವಂತಿಕೆ, ಅನಂತಮೂರ್ತಿ ತೇಜಸ್ವಿ,ಗಳ ಚಿಂತನಶೀಲತೆಗಳ ಸಮರ್ಥ
ಪ್ರತಿನಿಧಿಗಳಾಗಿ, ತಮ್ಮದೇಆದ ವೈಶಿಷ್ಟ್ಯ ಪೂರ್ಣವಾದ, ಸರಳ ಸುಂದರ ಮತ್ತು ಆಳವಾದ ಭಾಷೆಯನ್ನು ಸಿದ್ಧಿಸಿಕೊಂಡ ಎಚ್.ಎಸ್.ವಿ. ತೂಗು ಮಂಚದಿಂದ ಬುದ್ದ ಚರಣದ ವರೆಗಿನ ಕಾವ್ಯಯಾನ ಕನ್ನಡದಲ್ಲೊಂದು ಅಪೂರ್ವ ಇತಿಹಾಸ.
ಕುಮರವ್ಯಾಸ
ಮಹಾಕವಿಯ ವಂಶ ಜರಾದರೂ ಕವಿಯ ಬದುಕು ಅದೊಂದು
"ಉರಿಯ ಉಯ್ಯಾಲೆ. ಹಳ್ಳಿಯಿಂದ ನಗರಕ್ಕೆ ಹರಿದ
ಸಾರಸ್ವತ ನಾಲೆ. ಭಾರತೀಯ ತತ್ವಪರಂಪರೆ ಮತ್ತು ಆಧುನಿಕ ಚಿಂತನಶೀಲತೆಗಳನ್ನು ಸುವರ್ಣಮಾಧ್ಯಮದಲ್ಲಿ ಬೆಸೆದು, ಪಾಮರರಿಂದ ಪಂಡಿತರ ವರೆಗೂ ವ್ಯಾಪಿಸಿದ ತತ್ವ ಶಾಲೆ, ಇವರು.
ಕಾವ್ಯ
ಮಹಾಕಾವ್ಯ ನಾಟಕ ಶಿಶುಸಾಹಿತ್ಯ ಅನಾತ್ಮಕಥನ, ಕಾದಂಬರಿ ಮತ್ತು ಕೃತಿಸಂಪಾದನೆ ಗಳ ವೈವಿಧ್ಯಮಯ ಸೃಜನಶೀಲ ಕೃತಿಗಳು
ಶತಕ ದಾಟಿವೆ. ಕೃಷ್ಣ ಮತ್ತು ಬುದ್ದರ ಮಧ್ಯದ ತಾತ್ವಿಕ ನಂದನದಲ್ಲಿ ಮಾನವ ಬದುಕಿನ ನಿಜದ ಹುಡುಕಾಟದಲ್ಲಿ ತೊಡಗಿಕೊಂಡ ಕವಿಯ ಚಟುವಟಿಕೆ ಸಾವಿನಂಚಲ್ಲೂ ಚುರುಕಾಗಿತ್ತು.
" ಕುಮಾರವ್ಯಾಸನ
ಕೃಷ್ಣ ದೈವೋತ್ತಮನಾದರೆ, ಪುತಿ ನರಸಿಂಹಾಚಾರ್ ಆಧ್ಯಾತ್ಮಿಕ ಮೂರ್ತಿಯಾಗಿ ಶ್ರೀ ಹರಿಚರಿತೆಯಲ್ಲಿ ಚಿತ್ರಿಸಿಯಾಗಿತ್ತು. ಕೃಷ್ಣ ನನಗೆ ಸವಾಲಾಗಿದ್ದ. ಕೃಷ್ಣ ದೂರದಲ್ಲಿಲ್ಲ. ನಮ್ಮೆಲ್ಲರ ಮನ ಮನೆಯಲ್ಲಿದ್ದಾನೆ. ಕೃಷ್ಣ ರಾಧೆ ಪ್ರೀತಿ ಸ್ನೇಹ ಬಂಧುತ್ವದ ಪ್ರತೀಕ. ಬಾಲಲೀಲೆಯಲ್ಲೇ ಬಾಳಿನ ನೋವು ತಲ್ಲಣ, ಒಲವು ಚಲುವುಗಳನ್ನು ಚಲ್ಲಾಡಿದ ಕೃಷ್ಣ ಪ್ರೌಢನಾದಮೇಲೆ ಗೈದ ಭಗವದ್ಗೀತಾ ಬೋಧನೆ, ಆಧುನಿಕ ಬದುಕಿಗೂ ಸಲ್ಲುವಂತಹದ್ದು." ಎಂದು ನುಡಿಯುತ್ತಿದ್ದ ಕವಿ, ನವೋದಯ ನವ್ಯ ಬಂಡಾಯ ದಲಿತ ಪ್ರವಾಹಗಳ ನಡುವೆಯೇ ತಮ್ಮದೇ ಆದ ಹೆದ್ದಾರಿ ನಿರ್ಮಿಸಿಕೊಂಡು
ಕನ್ನಡ ಸಾಹಿತ್ಯ ದ ಕಣ್ಮಣಿಯಾದರು.
ಇರಬೇಕು ಇರುವಂತೆ ತೊರೆದು ಬಾಳಿನ ಚಿಂತೆ / ಮಳೆ ಸುರಿಸಿ ಹಗುರಾದ ಮುಗಿಲಿನಂತೆ//
ತಾನು ಬಿಸಿಲಲಿ ನಿಂತು
ತನ್ನ ಬಳಿ ಬರುವವಗೆ / ತಣ್ಣಗಿನ ಆಸರೆಯ ನೆರಳ
ಕೊಟ್ಟು/
ಹೇಗೆ ಗೆಲುವಾಗುವುದೋ
ಹಸಿರೆಲೆಯ ಹೊಂಗೆ ಮರ / ಹಾಗೆ ಬಾಳಿಸು
ಗುರುವೆ ಕರುಣೆಯಿಟ್ಟು.
ಎಂದು ತಮ್ಮೊಂದಿಗೇ
ತಾವು ಸಂಭಾಷಿಸಿಕೊಳ್ಳುತ್ತ, ಸಂಭಾಳಿಸಿಕೊಳ್ಳುತ್ತ, ಸುದೀರ್ಘ ಬದುಕನ್ನು ಸತ್ವಪೂರ್ಣವಾಗಿಸಿದರು.
ಯಶಸ್ವೀ
ಬದುಕು ಹಾಗೇ ಸುಮ್ಮನೇ
ಲಭಿಸುವುದಿಲ್ಲ. ಅದಕ್ಕೂ ಹೋರಾಟಬೇಕು, ಚಿಂತನೆಬೇಕೆಂದು ಪ್ರತಿಪಾದಿಸಿದ
ಕವಿ, ತಮ್ಮ ಆಪ್ತಗೀತ
ಎಂಬ ಯಶಸ್ವೀ ಕವನವೊಂದರಲ್ಲಿ,
ಕೃಷ್ಣ ಅರ್ಜುನನೊಂದಿಗೆ ಸಂಭಾಷಿಸುತ್ತ,
ʻʻ ಈ ಯಾದವ ಸುಮ್ಮನೇ ದೊಡ್ಡವ
ಅಲ್ಲ. ಬದುಕಿನ ಹತು ಹಲವು
ಆಯಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಕಾದವನಾಗಿ,
ಯೋಧನಾಗಿ, ಶ್ರಾವಕ ನಾಗಿ, ಸೇವಕನಾಗಿ, ಮಗನಾಗಿ ಪ್ರೇಮಿಯಾಗಿ,
ಅವೆಲ್ಲವುಗಳನ್ನೂ ಆತ್ಮೀಕರಿಸಿ ಕೊಂಡು ಬಾಳಿ ಬೆಳೆದವ ನಾನುʼʼ
ಎಂದು ಹೇಳಿಕೊಳ್ಳುತ್ತಾನೆ. ಪುರಾಣದ
ಕೃಷ್ಣ ಕೇವಲ ದೇವರಾಗುವುದಿಲ್ಲ. ಗ್ರಾಮದ
ಶ್ರಮಿಕನ, ಕೃಷಿಕನ, ಪ್ರತಿನಿಧಿಯಾಗಿ
ಅವರೆಲ್ಲರ ತಲ್ಲಣಗಳಿಗೆ ಸ್ಪಂದಿಸುತ್ತಲೇ
ಮಹಾಮಾನವನಾಗಿ ಎತ್ತರಕ್ಕೇರುವ ಪ್ರಕ್ರಿಯೆಯನ್ನು ಚಿತ್ರಿಸುತ್ತಾರೆ. ನಾಯಕತ್ವದ
ಆದರ್ಶವನ್ನು ಮನಸ್ಸಿಗೆ ಅಚ್ಚೊತ್ತುವಂತೇ ಕೃಷ್ಣನ
ಮೂಲಕ ಅಭಿವ್ಯಕ್ತಿಸುತ್ತಾರೆ.
ಕವಿ
ಕರ್ನಾಟಕದ ಇಂಚಿಂಚೂ ವ್ಯಾಪಿಸಿ
ಜನಪ್ರಿಯತೆಯ ಉತ್ತುಂಗಕ್ಕೇರಿದ್ದು, ಸುಮಧುರ,
ಸುಂದರ, ಆಪ್ತ ಭಾವಗೀತೆಗಳಿಂದ. ಅವರ ಗೀತೆಗಳ ಕ್ಯಾಸೆಟ್, ಸಿ.ಡಿ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಮಾರಾಟವಾಯಿತು. ಕ್ಯಾಸೆಟ್
ಕವಿಗಳೆಂದು ಟೀಕೆಗೂ ಒಳಗಾದರು.
ಆದರೆ ಕವಿ ರಚಿಸಿದ ನೂರಾರು
ಗಂಭೀರ ಕವನಗಳು, ಋಗ್ವೇದ ಸ್ಪಂದನ, ಗೀತಾ
ವ್ಯಾಖ್ಯಾನ, ಕಾಳೀದಾಸ ಮಹಾಕವಿಯ ಋತುಸಂಹಾರ, ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಮುಂತಾದ ಆದಿಕವಿಗಳ
ಬಗೆಗಿನ ಕೃತಿಗಳು ಹೆಚ್ಚು ಚರ್ಚೆಗೆ ಒಳಗಾಗಲೇ
ಇಲ್ಲ.
ಎಚ್ ಎಸ್ವಿಯವರ ಸಮಗ್ರ ಜೀವನಾನುಭವದ ರಸಪಾಕವಾಗಿ. ತಾತ್ವಿಕ ಸಾಮಾಜಿಕ
ಆಧ್ಯಾತ್ಮಿಕ ಆಳ ಅಭಿವ್ಯಕ್ತಿಯಾಗಿ ಮೂಡಿಬಂದ
ʻʻ ಬುದ್ಧಚರಣʼʼ ಮಹಾಕಾವ್ಯ ಅವರ
ಜೀವನದ ಅಂತಿಮ ಮಹಾಕೃತಿಯಾಗಿ
ಜನ್ಮತಾಳಿತು. ಅತೀವವಾಗಿ ಬಾಧಿಸುತ್ತಿದ್ದ
ವಯೋಸಹಜ ಸ್ವಂತ ಸಂಕಟವನ್ನೂ ಉಲ್ಲಂಘಿಸಿ, ಲೋಕಸಂಕಟದ
ಬಗೆಗೆ ಚಿಂತಿಸುತ್ತ ಬುದ್ಧಧ್ಯಾನಕ್ಕೆ ಬದ್ಧರಾದುದು
ಕನ್ನಡಿಗರಿಗೆ ದೊರಕಿದ ಮಹಾ ಕೊಡುಗೆ.
ಎಲ್ಲ ಕಾಲದ
ಮಾನವ ವರ್ತನೆಯೂ ಒಂದೇ. ನಿತ್ಯವೂ
ಕಲುಷಿತಗೊಳ್ಳುವ ಮನಸ್ಸಿಗೆ ನಿತ್ಯ ಸ್ನಾನ
ಅನಿವಾರ್ಯ. ಸದಾ ಅಧಿಕಾರ ಸಂಪತ್ತು ಸ್ವಾರ್ಥ ಮತ್ತು ವೈಭೋಗಕ್ಕಾಗಿ ಹಪಾಹಪಿಸುವ
ಮಾನವ ಪ್ರವೃತ್ತಿಯ ವಿರುದ್ಧ ಬುದ್ಧ ಸೆಣಸಾಡಿದಂತೇ ಈ ಕಟುವಾಸ್ತವಕ್ಕೆ
ಸಾತ್ವಿಕವಾಗಿ ಪ್ರತಿರೋಧಿಸಿದ ಕವಿ, ಬುದ್ಧನನ್ನು ವರ್ತಮಾನಕ್ಕೆ
ಮತ್ತೆ ಕರೆತಂದರು, ಅದೇ ಮಹಾಕಾವ್ಯದಲ್ಲಿ ಬುದ್ಧಗುರುವಿನ
ವಾಣಿಯಲ್ಲಿ ಮಾನವ ಪ್ರವೃತ್ತಿಯ
ವಿಷಮ ಸ್ಥಿತಿಯನ್ನು ಹೇಳಿಸುವ ಒಂದೇ ಪದ್ಯವನ್ನು ನಾವು ಗಮನಿಸಬಹುದು.
ʻʻ
ಈಗೀಗ
ಅಧಿಕಾರಕ್ಕೆ ಹೊಲಸಿಗೆ ಮುತ್ತುವ ನೊಣ / ವಾಗಿ
ಮುಗಿಬೀಳ್ವರು ಮಂದಿ.
ಹೊಗಿಸಿ ಪಾದವನಾ
ಪಿಚಿ ಪಿಚಿ ಕೆಸರಲ್ಲಿ ತನ್ಮಯ / ರಾಗಿ ಹಾ!
ಇದೇ ಸುಖವೆಂದು.
ಹದ್ದಂತೆ ಮೇಲೆರಗುವ ಅಧಿಕಾರ
ಅಂತಸ್ತನ್ನು ಕಾಲ/ ಲ್ಲೊದ್ದು ತೊಲಗೆಂದು,
ಅಧಷ್ಠಾನವೆಂಬ ಪಾರಮಿಯ ಪೂರೈಸಬೇಕು ನಾವು./ ಅದೆಂತೆಂದು ಹೇಳುವೆನು
ಕೇಳಿ.ʼʼ
ಹೀಗೆ ಕ್ರೂರ ವಾಸ್ತವಕ್ಕೆ ಸ್ಪಂದಿಸುವ ಬುದ್ಧಚರಣ ಸೃಷ್ಟಿಗೆ
ಕವಿ ಹೇಗೆ ಸಿದ್ದಗೊಂಡರು
ಎಂಬ ವಿವರ ಮಹಾಕಾವ್ಯದ
ಪ್ರಾರಂಭದಲ್ಲೇ ದೊರಕುತ್ತದೆ.
ʻʻ ರಾಮಕೃಷ್ಣರಂತೇ ಬುದ್ಧನೂ ನನ್ನ ಅಂತಸ್ಥ ಪುತ್ಥಳಿಯಾಗುವುದಕ್ಕೆ ಸುದೀರ್ಘವಾದ ಧ್ಯಾನಚಾರಣವನ್ನು
ನಾನು ಕೈಗೊಳ್ಳಬೇಕಾಯಿತು. ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು
ನಿರ್ಮಿಸಿದ ಭೂಮಾಕಾರದ ಬುದ್ಧವಿಹಾರವನ್ನು ಸಂದರ್ಶಿಸಿ ಅಲ್ಲಿ ಧ್ಯಾನಕ್ಕೆ ತೊಡಗಿದಾಗ, ಈಗ ಇದು
ಆರಂಭ. ಇನ್ನು ಈ ಕೃತಿಯನ್ನು ಮುಗಿಸುವೆನು ಎಂಬ ವಿಲಕ್ಷಣ
ಬೋಧೆ ಮನಸ್ಸಿನಲ್ಲಿ ಉಂಟಾಯಿತು. ಬುದ್ಧಕಾವ್ಯಕ್ಕೆ ಈಗ ಪ್ರವಾಹದ
ತುರುಸು ಉಂಟಾಯಿತು. ಕರೋನಾ ವಿಧಿಸಿದ ಗ್ರಹಬಂಧನ, ದೊರಕಿಸಿದ
ಸಾವಿನ ನಿತ್ಯಸನ್ನಿಧಿ ನನಗೆ ಅತ್ಯಗತ್ಯವಾಗಿದ್ದ ಏಕಾಂತವನ್ನೂ ಅತೀವವಾದ ಮನಸ್ಸಿನ ಒತ್ತಡವನ್ನೂ ದೊರಕಿಸಿತು.
ನನಗೆ ವಿಮೋಚನೆಯ ಮಾರ್ಗವೇ
ಇರಲಿಲ್ಲ.( ಮಹಾಕಾವ್ಯದ ಕವಿನುಡಿ)
ಭಾವಗೀತೆಯ ಕವಿ, ಸಿನಿಮಾ ಹಾಡುಗಳ
ರಚನಾಕಾರ ಎಂದು ಮಾತ್ರ ತಿಳಿದ ಸಾಮಾನ್ಯ ಓದುಗನನ್ನು, ಸರಳ ಸಮಗ್ರ ಸಂಕ್ಷಿಪ್ತ
ಮತ್ತು ಸೂಕ್ಷ್ಮ ಕಾವ್ಯವಾದ ಬುದ್ಧಚರಣ ಇನ್ನಷ್ಟೇ ತಲುಪಬೇಕಾಗಿದೆ.
ಎರಡು ದಶಕಗಳ ಹಿಂದೆಯೇ
ಆಕಸ್ಮಿಕವಾಗಿ ಕವಿ ನನ್ನ ಬದುಕಿನಲ್ಲೂ ಪ್ರವೇಶಿಸಿದರು.
ಆಗಿನ ಸರಕಾರದ (೨೦೦೯}ಪ್ರೌಢಶಾಲಾ ಪುಸ್ತಕ ಆಯ್ಕೆ
ಸಮಿತಿಯ ಅಧ್ಯಕ್ಷರಾಗಿದ್ದ ಎಚ್.ಎಸ್.ವಿ ಯವರ ಜೊತೆಗೆ ಎರಡು ವರ್ಷ ಸದಸ್ಯನಾಗಿ ನಾನೂ ಇದ್ದೆ. ಇನ್ನಿಬ್ಬರೂ
ಇದ್ದರು. ಶಾಲಾ ವಾಚನಾಲಯದಲ್ಲಿ ಇರಲೇ ಬೇಕಾದ
ಕನ್ನಡ ಪುಸ್ತಕಗಳ ಯಾದಿ ತಯಾರಿಸಬೇಕಾದ ಅನಿವಾರ್ಯತೆಯಿತ್ತು. , ಕನ್ನಡ ಸಾಹಿತ್ಯದ
ಅತ್ಯಂತ ಪ್ರಮುಖ ಕೃತಿಗಳ
ಶೀರ್ಷಿಕೆಯನ್ನು, ಕೇವಲ ಹತ್ತೇ ಹತ್ತು ನಿಮಿಷಗಳಲ್ಲಿ
ಹೆಸರಿಸಿ ನಮ್ಮನ್ನು ಬೆರಗಾಗಿಸಿದ್ದರು. ಗುರುವಾಗಿ
ಬಂಧುವಾಗಿ ಕುಟುಂಬದ ಆತ್ಮೀಯರಾಗಿ
ನನ್ನ ಬದುಕಲ್ಲಿ ಪ್ರವೇಶಿಸಿದ
ಕವಿ, ನನ್ನದೊಂದು ಕೃತಿಯ ಲೋಕಾರ್ಪಣೆಗೈದು ಹಾರೈಸಿದ
ಸುಂದರ ಕ್ಷಣವನ್ನು ನಾನೆಂದೂ
ಮರೆಯಲಾರೆ.
ಒಮ್ಮೆ
ನಮ್ಮ ಮನೆಗೆ ಬಂದಿದ್ದಾಗ, ಉತ್ತರಕನ್ನಡದ
ಅಪರೂಪದ ಸಿಹಿಖಾದ್ಯ ʻʻ
ತೊಡೆದೇವು ʼʼ ಎಂಬ ಸಿಹಿಖಾದ್ಯವನ್ನು ಅತ್ಯಂತ
ಇಷ್ಟಪಟ್ಟು ಚಪ್ಪರಿಸಿದ್ದಲ್ಲದೇ, ಅದೇ ವರ್ಷ ಬೆಂಗಳೂರಿನ ತಮ್ಮ ಮನೆಯ
ವಿಶೇಷ ಕಾರ್ಯಕ್ರಮವೊಂದಕ್ಕೆ ತೊಡೆದೇವ ನ್ನು
ಇಲ್ಲಿಂದ ಕೊಂಡೊಯ್ದಿದ್ದರು. ನಂತರದ
ವರ್ಷಗಳಲ್ಲಿ, ಹಲವುಬಾರಿ ಅದೇ ಸಿಹಿಖಾದ್ಯದ ನೆನಪನ್ನು
ಹಂಚಿಕೊಂಡಿದ್ದರು.
ಕಳೆದ
ಕಾಲು ಶತಮಾನದಿಂದೀಚೆ ಕವಿ ಸ್ವಂತಬದುಕಲ್ಲೂ ಸಾಕಷ್ಟು
ನೋವನ್ನೆದುರಿಸುತ್ತ, ತಮ್ಮ ಬದುಕಿನ
ಮಹತ್ವಾಕಾಂಕ್ಷೀ ನಿರ್ಣಯಕ್ಕೆ ಪ್ರವೇಶಿಸಿದ್ದರು. ಅದು ಬುದ್ಧಮಹಾಕಾವ್ಯ
ಸೃಷ್ಟಿಯ ಹಂಬಲ. ದಿನನಿತ್ಯ
ಬುದ್ದನದೇ ಧ್ಯಾನ. ಅಧ್ಯಯನ. ದೇಶದ ತುಂಬೆಲ್ಲ ಸುತ್ತಾಟ.
ಬುದ್ಧ ಉಸಿರಾಡಿದ ಪವಿತ್ರಸ್ಥಳಗಳಲ್ಲೇ ಆಕುರಿತು
ಧ್ಯಾನ. ತಕ್ಕ ಛಂದಸ್ಸಿಗಾಗಿ
ತಡಕಾಟ. ಇದು ತಮ್ಮಿಂದ
ಸಾಧ್ಯವೇ ಎಂಬ ತಾಕಲಾಟ.
ಈ
ನಡುವಲ್ಲೂ ಪಂಪ ಕುಮಾರವ್ಯಾಸರನ್ನು ಸರಳಕನ್ನಡದಲ್ಲಿ
ಪ್ರತಿಬಿಂಬಿಸಿದ್ದು, ಚಲನಚಿತ್ರಗಳ ಸಂಭಾಷಣೆ
ಬರೆದಿದ್ದು, ಗೀತಕಾರರಾದದ್ದು, ನಟರಾದದ್ದು, ಜೊತೆಗೆ
ನಿರ್ದೇಶಕರಾಗಿಯೂ ಬೆಳೆದು ನಿಂತಿದ್ದು, ಇವರ ವ್ಯಕ್ತಿತ್ವಕ್ಕೆ ಅದೆಷ್ಟು ವೈವಿಧ್ಯ, ಅದೆಷ್ಟು
ಆಯಾಮ. ಒಬ್ಬ ವ್ಯಕ್ತಿಯಿಂದ ಇಷ್ಟುಸಾಧ್ಯವೇ
ಎಂದೆನ್ನಿಸುವಷ್ಟು ಸಾಧನೆ ಮತ್ತು ಸಿದ್ಧಿ.
ವೆಂಕಟೇಶ
ಮೂರ್ತಿಯವರ ಆಪ್ತಸ್ನೇಹಿ, ಕಾಳಿದಾಸ ಕೃತಿ ʻ
ಋತುಸಂಹಾರ,ʼ ಕನ್ನಡ ಅನುಸ್ಪಂದನಕ್ಕೆ ಮಾರ್ಗದರ್ಶಿಗಳಾದ ಡಾ. ಶ್ರೀರಾಮ ಭಟ್, ರವರು, ಕವಿಯ ಬಗೆಗೆ,
ನುಡಿಯುತ್ತ, ʻʻ ಎಂದೂ ಅವರ ಮಾತಿನಲ್ಲಿ
ಒಮ್ಮೆಯೂ ಅಹಮಿಕೆಯ ಹೆಡೆ ಎದ್ದಿಲ್ಲ.
ಸದಾ ಸರ್ವದಾ ಸೌಜನ್ಯಪೂರ್ಣ ಮೆಲುದನಿಯ
ಮಾತು. ಆಪ್ತತೆಯ ಅಭಿವ್ಯಂಜನೆ
ಎಚ್ಚೆಸ್ವಿ ಮಾತಿನ ಸ್ಥಾಯಿ . ವ್ಯಂಗ್ಯ ಚುಚ್ಚು
ಮೊನಚು ಇರಿತ ತಿವಿತ ಎಚ್ಚೆಸ್ವಿ ಮಾತಿನಲ್ಲಷ್ಟೇ
ಅಲ್ಲ, ಬರೆಹದಲ್ಲೂ ನಾನು ಕಂಡಿಲ್ಲ.
ಲೇಖನಿ ಖಡ್ಗವಾದ ಕಾಲವನ್ನು ದಾಟಿಬಂದರೂ ಅವರ ಲೇಖನಿ, ಲೇಖನಿಯಾಗಿಯೇ
ಉಳಿದಿದೆ. ಅಲ್ಲಿ ನೋವಿಲ್ಲವೇ
? ಇದೆ. ವಿಷಾದವಿದೆ. ಖೇದವಿದೆ ತಲ್ಲಣವಿದೆ.
ಪಟ್ಟ ಪಾಡೂ ಇದೆ. ಆದರೆ ಅದು ಬೆಂಕಿಯ
ಝಳವಾಗಿಲ್ಲ. ಬೆಳಕಿನ ಹೊಳಪಾಗಿದೆ.
ಎಲ್ಲವೂ ಮೇಧಾಗ್ನಿಯಲ್ಲಿ ಕಾದು ಸೋಸಿ ತಣ್ಣಗೆ
ಮಿತ್ರನ ಮಾತಾದ ಮಿತ್ರಸಂಹಿತೆ.
ಒಂದರ್ಥದಲ್ಲಿ ಲೇಖಕನೂ ಲೋಕಮಿತ್ರ
ತಾನೇ.ʼʼ
ಎಂದೆನ್ನುತ್ತ ಕವಿಯ ಜೀವನದೃಷ್ಟಿಯನ್ನು ದರ್ಶಿಸುತ್ತಾರೆ.
ಕವಿ ವೈದೇಹಿಯನ್ನುದ್ದೇಶಿಸಿ ಆಡಿದ ಮಾತು ಅವರ ಅಂತಿಮ ಕ್ಷಣಕ್ಕೂ
ಅನ್ವಯಿಸುತ್ತದೆ.
ʻʻ ಇನ್ನು ನಿನ್ನ ಕಾಡದು ದುರ್ದಮ್ಯ
ನೋವು. ಹಸಿವು ನಿದ್ದೆ
ನೀರಡಿಕೆ.
ಉಸಿರೊತ್ತಿನುಬ್ಬಸ ಸುಸ್ತು.
ನಿರ್ಜರೆ ನಿರ್ಮರಣೆ,
ನಿರಾತಂಕೆ, ಜೀವ ಪುಟಿಯುವ
ನನ್ನ ಆಕೃತಿಯೇ
ಕೃತಿಯೇ,…….ಶುಭಮಸ್ತು.ʼʼ
ನೂರಕ್ಕೂ
ಮಿಕ್ಕ ಗ್ರಂಥ ಸೃಷ್ಟಿ, ಅನವರತ ತಿರುಗಾಟ. ಅದೇ ಸರಳತೆ,
ಅದೇ ಸೌಜನ್ಯ. ಅದೇ ಬಂಧುತ್ವ.
ನಗುವ ನಗಿಸುವ ವ್ಯಕ್ತಿಯ
ಆಳದಲ್ಲಿ ಅದೆಷ್ಟುಸುಂದರ ಮೌಲ್ಯದ
ಗಣಿಯಿದೆ. ಅದೇ ದೊಡ್ಡ ಅಚ್ಚರಿ. ಮಗುತನ, ದಾರ್ಶನಿಕತೆ, ಪರಂಪರಾ ನಿಷ್ಠತೆ,
ಮತ್ತು ಚಿಂತನಶೀಲತೆಯ ಸುವರ್ಣಸಂಗಮವಾಗಿದ್ದ ಕವಿ, ತಾತ್ವಿಕತೆಯ
ಮೊತ್ತವಾಗಿ, ಬಾಳು ಮುಗಿಸಿದರೂ ಬೆಳಗುವ
ದೀಪವಾಗಿದ್ದಾರೆ.
ದೃಷ್ಟಿಯಿತ್ತರೋ ಮನಕೆ ಪುಷ್ಠಿಕೊಟ್ಟರೋ
ಕತ್ತಲೆಯ ಕಷ್ಟಕಳೆದರೋ
ನಡುವೆ
ದೀಪವಿಟ್ಟರೋ.
ತಣ್ಣನೆಯ ಕಣ್ಣಲ್ಲಿ ಕನಸಿನ ಮಣಿಯಿತ್ತು
ಮಣ್ಣ ಕಣದಿ ಜೀವ ಬಿತ್ತಿ
ನೀರನೆರೆದರೋ
ನಕ್ಕು ನಲಿದರೋ.
ಬಾನಿಗೆಲ್ಲ ಕೈಯ್ಯ ಚಾಚಿ, ಬುವಿಗೆಲ್ಲ ಹಸಿರ ರಾಚಿ
ಬಂಧುತನಕೆ ಬದ್ಧರಾಗಿ ಇದ್ದು ಮೆರೆದರೋ
ಪ್ರ ಬುದ್ಧರಾದರೋ……… ಸದ್ದಿಲ್ಲದೇ
ಎದ್ದು ಹೋದರೋ.
ಸುಬ್ರಾಯ ಮತ್ತೀಹಳ್ಳಿ.
ತಾ- ೩೧-೫- ೨೦೨೫.
ಜೂನ್ ಸಂಚಿಕೆಗಾಗಿ.
ಸುಮ ಸಂಪದ ಅಂಕಣಕ್ಕೆ.
ಈಗಾಗಲೇ ಕಳುಹಿಸಿದ
ʻʻ ಧರ್ಮ ಮತ್ತು ಯುದ್ಧʼʼ
ಲೇಖನವನ್ನು ಜುಲೈ ಸಂಚಿಕೆಗೆ ಮುಂದುವರೆಸಿ ದಯವಿಟ್ಟು.
ಇದು ಕವಿ ಎಚ್ಎಸ್ವಿ ಯವರ ಬಗೆಗಿನ
ಶೃದ್ಧಾಂಜಲಿ.
No comments:
Post a Comment