Tuesday, 20 May 2025

ಮತ್ತೆ ಮತ್ತೆ -- ಕವಿಯ ಜೊತೆ.

 

ಕುಮಾರವ್ಯಾಸನು  ಹಾಡಿದನೆಂದರೆ           

 ಕಲಿಯುಗ  ದ್ವಾಪರವಾಗುವುದು             

  ಭಾರತ  ಕಣ್ಣಲಿ  ಕುಣಿವುದು !  ಮೈಯಲಿ,  

   ಮಿಂಚಿನ  ಹೊಳೆ  ತುಳುಕಾಡುವುದು.ʼʼ     ( ಕು.ವೆಂ.ಪು.)

 

         ಕುಮಾರ ವ್ಯಾಸ,    ಹೆಸರು  ಹೇಳಿದರೆ  ಸಾಕು,  ಕನ್ನಡದ  ಕೆಚ್ಚು ಉಕ್ಕುವುದು,  ಅತ್ಯುನ್ನತ ಭಾಷಾವೈಭವ  ಮೈ  ನವಿರೇಳಿಸುವುದು.  ನರ್ತಿಸುವ  ಪ್ರಾಸ  ಅನುಪ್ರಾಸ,  ವಿರಹ  ಪ್ರೇಮ,  ಶೂರತ್ವ,  ಪ್ರಕೃತಿ ವರ್ಣನೆ,  ಗಾದೆ  ಒಗಟು,  ಮಂಡಿಗೆ,  ತೀಕ್ಷ್ಣ ಸೂಕ್ಷ್ಮ ವೈಚಾರಿಕತೆ,  ಜಾನಪದೀಯತೆ,  ಗ್ರಾಮೀಣ  ನುಡಿ ಸೌರಭ,  ಸಂಸ್ಕೃತ  ಕನ್ನಡ ಶಬ್ದಸಂಯೋಗ,  ಜೊತೆಗೆ  ಮೈ ನವಿರೇಳಿಸುವ  ರೂಪಕ ಸಾಮ್ರಾಜ್ಯವಾದ   ಕುಮಾರವ್ಯಾಸ  ಭಾರತ,  ಅಂದರೆ  ಕರ್ಣಾಟ ಭಾರತ  ಕಥಾಮಂಜರಿ,  ಅಥವಾ  ಗದುಗಿನ  ಭಾರತ,  ತಲೆ  ತಲೆಮಾರುಗಳಿಂದ  ತನ್ನ  ನಿತ್ಯನೂತನ  ಶ್ರೀಮಂತಿಕೆಯಿಂದ,  ವಿಶ್ವಮಹಾಕಾವ್ಯದ  ಸಾಲಿನಲ್ಲಿ  ಶೋಭಿಸುತ್ತಿದೆ. 

    ಪಶ್ಚಿಮದ  ಹಾರ್ವರ್ಡ  ವಿಶ್ವವಿದ್ಯಾಲಯದ  ಕುಮಾರವ್ಯಾಸ  ಅಧ್ಯಯನ  ಪೀಠದಲ್ಲಿಯ  ವಿದೇಶೀ  ವಿದ್ಯಾರ್ಥಿಗಳನ್ನು  ಇಂಗ್ಲಿಶ್‌  ಅನುವಾದದಲ್ಲಿ  ಆಕರ್ಷಿಸಿ,    ಕನ್ನಡವನ್ನೇ ಕಲಿಯುವ,  ಅದರ  ಮೂಲದಲ್ಲೇ  ಓದುವ  ಉತ್ಸಾಹವನ್ನು  ಸೃಷ್ಟಿಸಿದ  ಮಹಾನ್‌  ಕೃತಿಯಾದ    ಮಹಾಕಾವ್ಯ  ಕನ್ನಡಭಾಷೆಯದು,  ನಮ್ಮ ಸಂಸ್ಕೃತಿಯ  ಕೊಡುಗೆ  ಎಂಬ  ಸಂಗತಿಯೇ  ಹೆಮ್ಮೆ ತರುತ್ತಿದೆ. 

    ಕಳೆದವರ್ಷವಷ್ಟೇ  ಕರ್ನಾಟಕ  ಸರಕಾರದ  ಕೃಪೆಯಲ್ಲಿ,ಕನ್ನಡ  ಪುಸ್ತಕ ಪ್ರಾಧಿಕಾರದ  ನೇತ್ರತ್ವದಲ್ಲಿ,  ಪ್ರತಿ ಪದ್ಯದ  ಅರ್ಥಸಹಿತವಾಗಿ,  ಗಟ್ಟಿಮುಟ್ಟಾದ  ಬೈಂಡಿಂಗ್‌,  ಗುಣಮಟ್ಟದ  ಕಾಗದ,  ತಪ್ಪಿಲ್ಲದ  ಮುದ್ರಣ,  ಮತ್ತು,  ಉಪಯುಕ್ತ ಪರಿಷ್ಕರಣದೊಂದಿಗೆ,  ಸಾಮಾನ್ಯ ಓದುಗನ  ಕೈಗೆ  ತಲುಪಿ  ಸಂತಸ  ತಂದಿದೆ. 

   ವಿದ್ವಾಂಸರಾದ,  ಟಿ.ವಿ. ವೆಂಕಟಾಚಲ  ಶಾಸ್ತ್ರೀ  ಯವರ ಪ್ರಧಾನ ಸಂಪಾದಕತ್ವ, ಮತ್ತು ಅಭ್ಯಾಸಪೂರ್ಣ  ಪ್ರವೇಶಿಕೆಯೇ  ನೂರುಪುಟಗಳಷ್ಟು  ವಿಸ್ತಾರ ಪಡೆದು,  ಕೃತಿಯ  ಆಳಕ್ಕೆ  ಪ್ರವೇಶಿಸಲು  ಸಹೃದಯನಿಗೆ  ಸಹಾಯಗೈದಿದೆ.   ೧೯೫೮  ರಷ್ಟು ಹಿಂದೆಯೇ  ಆಗಿನ  ಮೈಸೂರು  ಸಂಸ್ಥಾನ,  ಕವಿ  ಕುವೆಂಪು,  ಮತ್ತು,  ಸಾಹಿತಿ  ಕತೆಗಾರ  ಮಾಸ್ತಿ  ವೆಂಕಟೇಶ್‌  ಅಯ್ಯಂಗಾರ್‌, ರವರ  ಸಂಪಾದಕತ್ವ ದಲ್ಲಿ,  ಕೇವಲ  ಎರಡು ರೂಪಾಯಿ  ಬೆಲೆಯಲ್ಲಿ  ಪ್ರಸ್ತುತ  ಕನ್ನಡ  ಮಹಾಭಾರತವನ್ನು  ಪ್ರಕಟಿಸಿತ್ತು.    ಪರಂಪರೆ  ನಿಲ್ಲದೇ  ಇಂದಿಗೂ  ಮುಂದುವರೆಯುತ್ತಿರುವುದು  ಕನ್ನಡಿಗರ  ಭಾಗ್ಯ.  ಕನ್ನಡ ಭಾಷೆಗೆ  ಸಂದ  ಅತ್ಯುನ್ನತ  ಗೌರವ. 

       ಮೊದಲ  ಪ್ರಕಟಣೆ  ಸುಮಾರು  ೬೫೦ ಕ್ಕೂ  ಹೆಚ್ಚು ಪುಟಗಳಿದ್ದರೆ,   ಪ್ರಸ್ತುತ  ಪರಿಷ್ಕೃತ  ಮುದ್ರಣ,   ಎರಡು  ಬ್ರಹತ್‌  ಸಂಪುಟವಾಗಿದೆ.  ಮಹಾಕಾವ್ಯದ  ೮೨೩೯  ಷಟ್ಪದಿಗಳಿಗೂ  ಸರಳಾರ್ಥ, ಮತ್ತು ಶಬ್ದಾರ್ಥಗಳನ್ನು  ನೀಡಲಾಗಿದೆ.   ಎರಡು  ಸಾವಿರ  ಪುಟಗಳಲ್ಲಿ  ವಿಸ್ತರಣೆಗೊಂಡಿದೆ.  ಬೆಲೆ  ಮಾತ್ರ  ಕೇವಲ  ೫೦೦-೦೦  ರೂಪಾಯಿಗಳು  ಮಾತ್ರ.   ವೆಂಕಟಾಚಲ  ಶಾಸ್ತ್ರೀಯವರ  ಸುದೀರ್ಘ  ಕಾವ್ಯಾವಲೋಕನದೊಂದಿಗೆ.  ಸಂಪಾದಕ  ಮಂಡಳಿಯ   ಕೆ.ಆರ್.‌ ಗಣೇಶ್‌   ಮತ್ತು  ಅ.ರಾ.ಮಿತ್ರ  ಇವರುಗಳ,  ಕುಮಾರವ್ಯಾಸ  ಕಾವ್ಯದ  ರಸಾವಲೋಕನವೂ  ಸೇರಿಕೊಂಡಿದೆ. 

      ೧೯೫೮ ರ  ಮುದ್ರಣದಲ್ಲಿ  ಪ್ರಕಟಗೊಂಡಿದ್ದ  ಮಹಾಕವಿ  ಕುವೆಂಪುರವರ,  ʻʻ ತೋರಣ  ನಾಂದಿʼʼ ಕಾವ್ಯಪೀಠಿಕೆಯೂ   ಇಲ್ಲಿಯೇ  ಸೇರಿದ್ದರೆ  ಅಭ್ಯಾಸಿಗಳಿಗೆ  ಇನ್ನಷ್ಟು  ಅನುಕೂಲವಾಗುತ್ತಿತ್ತು.  ಕುಮಾರವ್ಯಾಸನ   ಉನ್ನತ  ಪ್ರತಿಭೆಯ  ಉಜ್ವಲ  ಬೆಳಕನ್ನು,  ಆಹ್ಲಾದಕರವಾಗಿ  ಸೂಸಿದ  ಅದ್ಭುತ  ಲೇಖನ  ಅದಾಗಿದೆ. 

           ವ್ಯಾಸ ಮಹರ್ಷಿಯ  ಮಹಾಭಾರತವನ್ನು, ಕನ್ನಡ  ಸಂಸ್ಕೃತಿಯ  ನೀರೆರೆದು,   ಕನ್ನಡದ  ಮಣ್ಣಲ್ಲಿ ನೆಟ್ಟು  ಪೋಷಿಸಿದ  ಕೀರ್ತಿ  ಕುಮಾರವ್ಯಾಸನಿಗೇ  ಸಲ್ಲಬೇಕು.  ಇಡೀ  ರಾಜ್ಯದ  ಮನೆ  ಮನಗಳಲ್ಲಿ  ತತ್ವ ಮತ್ತು ಭಕ್ತಿಯ  ಸಮರ್ಥ ಚಿಲುಮೆಯಾಗಿ,   ಮಹಾಭಾರತದ  ಎಲ್ಲ ಪಾತ್ರಗಳು  ಮನೆಮಾತಾಗುವಂತೇ   ಕ್ರಾಂತಿಗೈದ  ಕುಮಾರವ್ಯಾಸನ  ಯಶಸ್ಸು ಇರುವುದು,  ಆತನ  ಚಲುವಾದ  ಭಾಷೆಯಿಂದ.  ಭಾಮಿನಿ ಷಟ್ಪದಿಯನ್ನು  ಜನಪ್ರಿಯಗೊಳಿಸಿದ  ಕೀರ್ತಿ  ಅವನಿಗೇ  ಸಲ್ಲುತ್ತದೆ.  

           ಕುಮಾರವ್ಯಾಸನಿಗಿಂತ  ನಾಲ್ಕುನೂರು  ವರ್ಷಗಳ  ಹಿಂದೆಯೇ  ಪಂಪ  ಮಹಾಕವಿ  ಮಹಾಭಾರತವನ್ನು  ಕನ್ನಡಕ್ಕೆ  ಪರಿಚಯಿಸಿದರೂ,  ಸಾಮಾನ್ಯನನ್ನು  ತಲುಪಲು  ವಿಫಲಗೊಂಡಿತು.  ಎಲ್ಲ ಕಾವ್ಯಗಳೂ  ಧರ್ಮಾವಲಂಬಿಯಾಗಿ,  ಅವರವರ  ಧರ್ಮಪ್ರಚಾರಕ್ಕೇ  ಮೀಸಲಾಗಿದ್ದಂತ  ಕಾಲಖಂಡದಲ್ಲಿ,  ಜೈನಕವಿ  ಪಂಪ,  ವೈದಿಕ  ಮಹಾಕಾವ್ಯವನ್ನು  ಪುನಹ  ಸೃಷ್ಟಿಸಲು  ತೊಡಗಿದ.  ಅದೂ  ಲೌಕಿಕ ಕಾವ್ಯವಾಗಿ. ಜೈನರಿಗೆ  ಅದು  ವೈದಿಕ,  ವೈದಿಕರಿಗೆ  ಅದು  ಜೈನ. ಪಂಪನ  ಕೃಷ್ಣ  ಕೇವಲ  ಜಾಣ, ಚಾಣಾಕ್ಷ ವ್ಯಕ್ತಿಯಾಗಿ,  ಕಾಣಿಸಿಕೊಳ್ಳುತ್ತಾನೆ.  ವೈದಿಕ  ಮನಸ್ಸು  ಲೌಕಿಕ ಕಾವ್ಯವನ್ನು  ಸ್ವೀಕರಿಸಲೇ  ಇಲ್ಲ. ಅದರಲ್ಲೂ  ಮೂಲ ಮಹಾಭಾರತದ  ಕಥೆಯನ್ನು ಪಂಪ  ತನಗೆ  ಬೇಕಾದಂತೇ  ಪರಿವರ್ತಿಸಿಕೊಳ್ಳುತ್ತಾನೆ. ಅರಿಕೇಸರಿ  ಎಂಬ  ಸಾಮಂತ ರಾಜನಿಗೆ  ಸಂವಾದಿಯಾಗಿ,   ಅರ್ಜುನ  ಅವತರಿಸುತ್ತಾನೆ.   ದ್ರೌಪದಿ  ಅವನೊಬ್ಬನ ರಾಣಿಯಾಗಿ,  ಯುದ್ಧಾನಂತರ  ಪಟ್ಟಾಭಿಷೇಕವೂ  ಅರ್ಜುನನಿಗೇ  ಸಲ್ಲುವುದನ್ನು  ಸಾಮಾನ್ಯ  ಕಾವ್ಯಪ್ರಿಯ  ಸ್ವೀಕರಿಸಲೇ  ಇಲ್ಲ.

     ಆದರೆ  ಕುಮಾರ ವ್ಯಾಸ  ಮೂಲಭೂತವಾಗಿ  ಕೃಷ್ಣಭಕ್ತ. ʻʻ ತಿಳಿಯ  ಹೇಳುವೆ  ಕೃಷ್ಣಕಥೆಯನು / ಇಳೆಯ  ಜಾಣರು  ಮೆಚ್ಚುವಂತಿರೆ / ನೆಲೆಗೆ  ಪಂಚಮ ಶ್ರುತಿಯ ನೊರೆವೆನು  ಕೃಷ್ಣ ಮೆಚ್ಚಲಿಕೆ / ʼʼ

ಎಂದು  ಉದ್ಘೋಷಿಸುತ್ತಲೇ   ಕಾವ್ಯಸೃಷ್ಟಿಗಿಳಿಯುವ  ಕುಮಾರವ್ಯಾಸ, ʻʻ ನಾನು  ಕವಿಯಲ್ಲ,  ಕವಿ  ಗದುಗಿನ  ವೀರನಾರಾಯಣ.  ನಾನು  ಕೇವಲ  ಲಿಪಿಕಾರ  ಮಾತ್ರʼʼ  ಎಂದು  ಭಕ್ತಿಯಿಂದ  ನಿವೇದಿಸಿಕೊಳ್ಳುತ್ತಾನೆ.  ವ್ಯಾಸರ  ಕಥೆಗೆ  ಕನ್ನಡ  ಮಣ್ಣಿನ  ಸ್ವಾದ,  ಕನ್ನಡದ  ಆಡುನುಡಿಯ ಲೇಪ  ನೀಡಿ,  ಕನ್ನಡದ್ದೇ  ಸ್ವಂತದ್ದಾದ  ಮಹಾಭಾರತವನ್ನು  ಪುನಃಸೃಷ್ಟಿಸುತ್ತಾನೆ. 

       ಕುಮಾರವ್ಯಾಸ  ಕವಿಯ  ಮೂಲ  ಹೆಸರು  ನಾರಣಪ್ಪ ಎಂದು.   ಆತನ  ಕುಲದೇವರು  ಗದುಗಿನ  ವೀರನಾರಾಯಣ.   ಅದೇ  ದೇವಾಲಯದ  ನವರಂಗದ  ಭವ್ಯ ಸ್ಥಂಭಕ್ಕೆ  ಆತು  ಕುಳಿತು,  ದೇವರೆದುರೇ  ಮಹಾಭಾರತವನ್ನು  ಬರೆಯುತ್ತಾನೆ.  ಕವಿಯ  ಬಗೆಗೆ  ಆತ  ರಚಿಸಿದ  ಕಾವ್ಯದ  ಬಗೆಗೆ  ಸಾಕಷ್ಟು  ರೋಚಕ  ದಂತಕತೆಗಳಿವೆ. 

       ಕಾಲದಲ್ಲಿ  ನಿರಕ್ಷರಿಗಳೇ  ಹೆಚ್ಚಾಗಿದ್ದ  ಸಂದರ್ಭದಲ್ಲಿ,  ಗಮಕಿಗಳು  ಹರಿ ದಾಸರು,  ವ್ಯಾಖ್ಯಾನಕಾರರು,  ಪೌರಾಣಿಕರು  ಕನ್ನಡನಾಡಿನ  ತುಂಬೆಲ್ಲ  ಕಾವ್ಯವನ್ನು  ಮೌಖಿಕವಾಗಿ  ಪ್ರಸರಿಸುವಲ್ಲಿ  ದೊಡ್ಡ  ಪಾತ್ರವಹಿಸಿದರು.  ಯಕ್ಷಗಾನದ  ಕವಿಗಳಿಗಂತೂ  ಇದೇ  ಕಾವ್ಯ ಸುವರ್ಣಗಣಿ.. ಈ  ಮಹಾಕಾವ್ಯದ  ಪಾತ್ರಗಳೇ   ಯಕ್ಷಗಾನದಲ್ಲಿ  ಮತ್ತೆ  ಜೀವಪಡೆದು  ಮಿಂಚಿವೆ, ಇನ್ನೂ  ಮಿಂಚುತ್ತಿವೆ.

       ಕವಿ  ಕುವೆಂಪು ವಿಗಂತೂ  ಕುಮಾರವ್ಯಾಸ  ಭಾರತದ  ಬಗೆಗೆ  ಅದೆಷ್ಟು ವರ್ಣಿಸಿದರೂ  ತೃಪ್ತಿಯಿಲ್ಲ.

                 

     ``  ಶೈಲಿಯ  ನುಣ್ಪು, ಧ್ವನಿಸೂಕ್ಷ್ಮತೆ,  ವ್ಯವಹಾರ  ಭೂಮಿಕೆಯಲ್ಲಿ ನಡೆಯುವ  ನಾಗರಿಕ ವ್ಯಾಪಾರ,  ನಿರೂಪಣೆಯಲ್ಲಿ ಮೈದೋರುವ  ನಯರುಚಿಯ  ಸಂಸ್ಕೃತಿ,  ಪ್ರಕೃತಿ  ಪ್ರಪಂಚದ  ವಿವರ  ಪರಿಜ್ಞಾನ,  ಪ್ರಕೃತಿ ಸೌಂದರ್ಯದಲ್ಲಿ  ಗಾಢ ಮೋಹ,  ಅದರ  ಬಣ್ಣನೆಯಲ್ಲಿ  ಅನುರಕ್ತಿ,  ಅದರ  ಶತಸಹಸ್ರ  ಮುಖವಾದ  ವೈವಿಧ್ಯದ  ಒಂದೊಂದು  ವಿವರದಲ್ಲಿಯೂ  ಅಕ್ಕರೆಯಿಂದ  ಉಣ್ಮುವ  ಆಸಕ್ತಿ,  ಇತ್ಯಾದಿ  ಕಲಾದೃಷ್ಟಿಯಿಂದ  ಪಂಪನಿಗೆ  ದ್ವಿತೀಯನೂ  ಆಗದಿದ್ದರೂ   ಭಾವತೀಕ್ಷಣತೆಯಲ್ಲಿ,  ರಸಾವೇಶದಲ್ಲಿ, ಪ್ರತಿಭಾಪ್ರವಾಹದ  ದುರ್ದಮ್ಯ  ವೇಗದಲ್ಲಿ,  ಸಂಸ್ಕೃತಿಗೆ  ತುಸು  ದೂರವಾದರೂ,  ಪ್ರಕೃತಿ ಸಹಜವಾದ  ಪಾರ್ವತಾರಣ್ಯಕ  ರುಂದ್ರ ರೂಕ್ಷತಾ  ಶಕ್ತಿಯಲ್ಲಿ   ಸರ್ವವನ್ನೂ  ಸರ್ವರನ್ನೂ  ಸರ್ವಕಾಲದಲ್ಲಿಯೂ  ಸರ್ವಭಾವದಲ್ಲಿಯೂ  ಭಗವದ್ಭಕ್ತಿಯ  ಶ್ರೀಮಂತ  ಕಾಂತಿಯ  ಕಣ್ಣಿನಿಂದಲೇ  ಕಾಣುವ  ʻವಿರಾಡ್‌ ದರ್ಶನʼ ದಲ್ಲಿ,   ಲೌಕಿಕ  ಆಗಮಿಕ ಐಹಿಕ  ಆಮುಷ್ಮಿಕ  ಎಂದು  ಕವಲೊಡೆಯದೇ   ಹಂಚದೇ  ಅವಿಭಕ್ತವಾಗಿ  ಆಕಾಶೋನ್ನತವಾಗಿ,  ಬ್ರಾಹ್ಮಭೂಮವಾಗಿ,  ಪರಮ ಪುರುಷಾರ್ಥ ಸಂಸ್ಪರ್ಶಿಯಾಗಿ  ಬದುಕಿಗೆ  ಬೆಳಕಿತ್ತು,  ಬಾಳನ್ನು  ಹುರಿದುಂಬಿಸುವ  ಆತ್ಮಶ್ರೀಯ  ದಿವ್ಯಾಗ್ನಿಯಲ್ಲಿ,  ಆದಿಕವಿ  ಪಂಪನಿಗೂ  ಅದ್ವಿತೀಯನಾಗಿ,  ಆತನನ್ನೂ  ದ್ವಿತೀಯನನ್ನಾಗಿ  ಮಾಡುವ  ಯೋಗಿ  ಕವಿ  ಪೂಜ್ಯ  ʻʻನಾರಣಪ್ಪʼʼ.

         ಎಂದು  ಮನಃಪೂರ್ವಕವಾಗಿ   ಕುಮಾರವ್ಯಾಸನನ್ನು  ಸ್ತುತಿಸುತ್ತಾರೆ. 

  ಕವಿ  ಶಬ್ದಸಾಮ್ರಾಟ,  ರೂಪಕ  ಚಕ್ರವರ್ತಿ, ಶ್ರೀಕೃಷ್ಣ ಭಕ್ತ.   ಸಂಸ್ಕೃತ  ಕನ್ನಡ  ಉರ್ದು  ಮರಾಠಿ ಭಾಷಾ  ಪಾರಂಗತ.  ಆತನಿದ್ದುದು  ಆರು ನೂರು ವರ್ಷಗಳ  ಹಿಂದೆ.  ಆಗಲೇ  ವಚನಕ್ರಾಂತಿ  ಕನ್ನಡದ  ಸರಳತನಕ್ಕೆ  ಇಂಬುನೀಡಿ,  ಸಾಮಾನ್ಯನ  ಬಳಿಗೆ  ಸಾಹಿತ್ಯವನ್ನು  ತಲುಪಿಸಿತ್ತು.  ಕುಮಾರವ್ಯಾಸನ  ಭಾಷೆ  ನಡುಗನ್ನಡದ  ನಡೆಯಲ್ಲಿ,  ಸಂಸ್ಕೃತ ಭಾಷೆಯನ್ನೂ  ಕನ್ನಡ ಜಾಯಮಾನಕ್ಕೊಗ್ಗಿಸಿ  ಲೌಕಿಕ  ಅಲೌಕಿಕತೆಗಳೆರಡನ್ನೂ  ಸಾಧಿಸಿ,  ಹೊಚ್ಚಹೊಸ  ಕನ್ನಡ ಭಾರತವನ್ನು ಸೃಷ್ಟಿಸಿದ   ಅಗಾಧ  ಪ್ರತಿಭೆ  ಕನ್ನಡವನ್ನು  ವಿಶ್ವಮಟ್ಟಕ್ಕೇರಿಸುವಂತಾಯಿತು. 

     ಆದರೆ  ಇಂದಿನ  ನಮ್ಮ ಕನ್ನಡದ  ಸ್ಥಿತಿಯನ್ನು  ಗಮನಿಸಿದರೆ   ಅದೆಷ್ಟು ಸೊರಗಿದೆ,  ಅದೆಷ್ಟು ನಿಶ್ಶಕ್ತವಾಗಿದೆ  ಎಂಬ   ಕಟು ಸತ್ಯ  ಪ್ರಸ್ತುತ  ಕಾವ್ಯಕೃತಿಯೆದುರು  ಧುತ್‌  ಎಂದು  ಎರಗುತ್ತದೆ.  ಅದೆಷ್ಟು  ಸಾವಿರ  ಪದಗಳನ್ನು  ದೂರಗೊಳಿಸಿದ್ದೇವೆ  ಎಂಬುದು    ಗದುಗಿನ ಭಾರತವನ್ನು  ಗಮನಿಸುವಾಗ  ಮನಸ್ಸನ್ನು  ಕಾಡತೊಡಗುತ್ತದೆ.  ಉದಾಹರಣೆಗೆ  ದ್ರೌಪದಿ  ಸ್ವಯಂವರ  ಮಂಟಪದ  ಉದಾಹರಣೆಯನ್ನೇ  ಗಮನಿಸಬಹುದಾಗಿದೆ.

                              ಝಳವ  ಝೋಂಪಿಸಿ  ಬೀಸಿದವು  ತಂ

                              ಬೆಲರ  ಬೀಸಣಿಗೆಗಳು  ಪರಿಮಳ

                              ಕಲಿತ  ಮಕರಂದದ  ತುಷಾರದ  ತುಹಿನ  ರೇಣುಗಳ |

                              ಸುಳಿವ  ಸುತ್ತಣ  ಸಾಲಭಂಜಿಕೆ 

                              ಗಳಲಿ  ಸೂತ್ರಿಸಿ  ರಚಿಸಿದರು  ಮಂ

                              ಗಳದ  ರಿಂಗಣ  ಝಾಡಿಸಿತು  ವೈವಾಹ  ಮಂಟಪವ  ||

(  ಸುವಾಸನಾ  ಯುಕ್ತ  ಬೀಸಣಿಕಗಳಲ್ಲಿರುವ  ಹೂವಿನ  ರಸದ   ತಂಪಾದ  ತುಂತುರು  ಹನಿಗಳು  ಸೆಕೆಯ  ತಾಪವನ್ನು  ಪರಿಹರಿಸುತ್ತಿವೆ. ವಿವಾಹ  ಮಂಟಪದ  ಸುತ್ತ ಸಾಲಾಗಿ  ನಿಲ್ಲಿಸಿದ  ಸಾಲಭಂಜಿಕೆಗಳಲ್ಲಿ  ತುಂಬಿಸಿದ  ಸುಗಂಧ,  ಸುತ್ತಲೂ  ಪಸರಿಸುತ್ತಿರುವಂತೇ  ಮನಮೋಹಕ  ನರ್ತನ  ಶೋಭಿಸಿತು.ʼʼ)

        ಕನ್ನಡದ  ಸುಪ್ರಸಿದ್ಧ  ಕವಿ  ಎಚ್. ಎಸ್.‌ ವೆಂಕಟೇಶ  ಮೂರ್ತಿ ಯವರು,  ಇತ್ತೀಚಿನ   ಕುಮಾರವ್ಯಾಸ  ಕಥಾಂತರ  ಎಂಬ   ಮಹಾಕಾವ್ಯದ  ರಸಾವಲೋಕನ  ಕೃತಿಯಲ್ಲಿ,  ಕವಿಯು  ಕೊಟ್ಟಿರುವ   ಮಾನವ  ಜಗತ್ತಿನ   ಸೋಲು  ಗೆಲುವು,  ಶಕ್ತಿ ದೌರ್ಬಲ್ಯ,   ಮಾನವ ಸಂಬಂಧಗಳ  ನಡುವಣ  ದ್ವಂದ್ವ,  ಮತ್ತು ದೈವಿಕ ಭಾವಗಳನ್ನು,  ಸೂಕ್ಷ್ಮವಾಗಿ  ಗುರುತಿಸುತ್ತ,  ಮನುಷ್ಯ ಬದುಕಿನ  ನೈಜಚಿತ್ರಣ ನೀಡಿದ   ಕುಮಾರ  ವ್ಯಾಸನ  ಕೃತಿಯನ್ನು  ತಲಸ್ಪರ್ಶೀಯಾಗಿ  ವ್ಯಾಖ್ಯಾನಿಸಿದ್ದಾರೆ.

 

            ʻʻ  ಹೇಳಿಕೇಳಿ  ಕುಮಾರವ್ಯಾಸ ಭಾರತವು  ಬಹುದೊಡ್ಡ ವಿನಾಶದ  ಕಥನವನ್ನು ಒಳಗೊಂಡಿದೆ. ಮೊದಲು  ಸಂಭವ ಕಥನ. ಆಮೇಲೆ ಬದುಕಿನ   ನಾನಾ  ತಿರುವುಗಳಲ್ಲಿ  ಪ್ರವಹನ. ಕೊನೆಗೆ  ಮೃತ್ಯುವೆಂಬ  ಮಹಾಬ್ಧಿಯಲ್ಲಿ  ಸಮ್ಮಿಲನ.  ಇದು  ಮಹಾಭಾರತದ  ಕಥನದ  ಹರಿವು. ʼʼ

       ಎಂದೆನ್ನುತ್ತ  ತಾತ್ವಿಕವಾಗಿ  ಮಹಾಕಾವ್ಯವನ್ನು  ಅನುಸಂಧಾನಿಸುತ್ತಾರೆ. ಕಾವ್ಯ  ಹಳೆಯದಾದರೇನು,  ಸಂದೇಶ  ಮಾತ್ರ  ಸರ್ವಕಾಲೀನ, ಚಿರ ನೂತನ, ಎಂದು  ಪ್ರತಿಪಾದಿಸುತ್ತಾರೆ.

       ಕವಿಯೇ  ತನ್ನ ಕಾವ್ಯದ  ಕೊನೆಗೆ  ಫಲಶ್ರುತಿಯ  ಪದ್ಯದಲ್ಲಿ,  ಮೇದಿನಿಯನೊಲಿದಿತ್ತ ಫಲ / ವಸ್ತ್ರಾದಿ  ಕನ್ಯಾದಾನ  ಫಲವಹುದು / ಆದರಿಸಿ  ಭಾರತದೊಳೊಂದಕ್ಷರವ  ಕೇಳ್ದರಿಗೆ /  ಎಂದು  ನುಡಿಯುತ್ತಾನೆ.  ಮಹಾಭಾರತ  ಪ್ರಮುಖವಾಗಿ  ಘಟಿಸಿದ್ದೇ  ಭೂಮಿದಾಹದಿಂದ,  ಹೆಣ್ಣಿನ  ವಸ್ತ್ರಾಪಹರಣದಿಂದ,  ಅಧಿಕಾರ  ಲಾಲಸೆಯಿಂದ. ದಾಯಾದಿ ಮತ್ಸರದಿಂದ,  ಸ್ವಜನ ಪಕ್ಷಪಾತದಿಂದ.  ಅದಕ್ಕೆ  ಪ್ರತಿಯಾಗಿ,  ಕುಮಾರವ್ಯಾಸ  ನಮ್ಮಲ್ಲೂ ಇರಬಹುದಾದ  ಇಂತಹ  ದಾಹಕ್ಕೆ  ಪ್ರತಿಯಾಗಿ,  ಭೂದಾನ,   ವಸ್ತ್ರದಾನ ಗಳಿಂದ    ಕಾಡುವ  ದುರಾಸೆಯನ್ನು  ಪರಿಹರಿಸಿ ಕೊಳ್ಳಿ.   ಪ್ರೀತಿಯೇ  ಮಾನವ  ಧರ್ಮ  ಎಂಬ  ಆಶಯವನ್ನು  ಅಭಿವ್ಯಕ್ತಿಸುತ್ತಾನೆ.  ʻʻ ಅಧರ್ಮವೆಂದರೇನೆಂದು  ಅರಿವಿದೆ, ಬಿಡಲಾರೆ. ಧರ್ಮವೆಂದರೇನೆಂದೂ  ತಿಳಿದಿದೆ,  ಆದರೆ  ಅನ್ವಯಿಸಿ ಕೊಳ್ಳಲಾರೆʼʼ  ಎಂಬ  ದುರ್ಯೋಧನನ  ದ್ವಂದ್ವ, ಆಧುನಿಕರಾದ  ನಮ್ಮನ್ನೂ  ಕಾಡುತ್ತದೆ.  ವ್ಯಾಖ್ಯಾನಿಸಿದಷ್ಟೂ  ಕಾವ್ಯ  ಅದರಾಚೆ ಉಳಿಯುತ್ತದೆ.  ನೇರ  ಕಾವ್ಯಕ್ಕೇ  ಮುಖಾಮುಖಿಯಾದಾಗ  ಮಾತ್ರ  ತಾತ್ವಿಕವಾಗಿ  ನಾವು  ಮೇಲೇರುತ್ತೇವೆ.

 

        ಇತ್ತೀಚಿನ  ವರ್ಷಗಳಲ್ಲಿ  ಶಾಲಾ  ಪಠ್ಯಗಳಲ್ಲೂ  ಕುಮಾರವ್ಯಾಸ  ಮರೆಯಾಗಿದ್ದಾನೆ.  ಹೊಸ  ತಲೆಮಾರಿನ  ವಿದ್ಯಾರ್ಥಿಗಳಲ್ಲಿ  ಕನ್ನಡ ಪ್ರಜ್ಞೆ  ಮರೆಯಾಗುತ್ತಿದೆ.  ಕನ್ನಡ  ಕೇವಲ  ನುಡಿಯಾಗಿ,  ಓದಲು  ಕನ್ನಡದ  ಲಿಪಿಯ  ಅರಿವೇಇಲ್ಲದ  ಅತಂತ್ರ  ತಲೆಮಾರೊಂದು  ಸೃಷ್ಟಿಯಾಗುತ್ತಿದೆ.   ಆಡುವ  ನುಡಿಯೂ  ಇಂಗ್ಲಿಷ್‌  ಕಲಬೆರಕೆಯಾಗಿ,   ಅದೇ  ಪ್ರತಿಷ್ಠೆಯಾಗಿ   ಮೆರೆಯುತ್ತಿರುವುದು  ಶೋಚನೀಯ. 

         ಕವಿ  ತನ್ನೆಲ್ಲ ಕ್ಲಿಷ್ಟತೆಯನ್ನು  ಪರಿಹರಿಸಿಕೊಂಡು,  ತಿಳಿಯಾದ  ಸರಳ ಕನ್ನಡದಲ್ಲಿ,  ಸುಲಿದ ಬಾಳೆಯ  ಹಣ್ಣಿನಂದದಿ,  ನಮ್ಮೆದುರು  ಮತ್ತೆ  ಮತ್ತೆ  ಅವತರಿಸುತ್ತಿದ್ದಾನೆ.  ನಮ್ಮ ಈ  ಕಟುವಾಸ್ತವಕ್ಕೂ  ಸ್ಪಂದಿಸುತ್ತ,  ವರ್ತಮಾನದ  ತಲ್ಲಣಗಳಿಗೆ  ಸಾಂತ್ವನವಾಗುತ್ತಿದ್ದಾನೆ.  ಕರ್ಣಾಟ  ಭಾರತ  ಕಥಾ  ಮಂಜರಿ  ಅತ್ಯಂತ  ಸುಲಭ ಬೆಲೆಯಲ್ಲಿ,  ನಮಗೆ  ದೊರಕುತ್ತಿದೆ.   ಕೊಳ್ಳುವುದು,  ಸಾಧ್ಯವಾದರೆ  ಓದಿಕೊಳ್ಳುವುದು  ಮಾತ್ರ  ನಮ್ಮೆದುರಿಗಿರುವ   ಸಾಧ್ಯತೆ.  ಅಷ್ಟೇ.

 

ಸುಬ್ರಾಯ  ಮತ್ತೀಹಳ್ಳಿ.    ಸುಮ- ಸಂಪದ  ಅಂಕಣಕ್ಕೆ.  ತಾ- ೨೧-೪-೨೦೨೫.

No comments:

Post a Comment