ಕನ್ನಡದ ಮುದ್ದುಕಾಜಾಣ ಮುದ್ದಣ
ಹೊನ್ನ ಹಾರಕ್ಕೆ ರತ್ನ, ನುಡಿ ತೋರಣ
ಪದ ಪದಕೆ ಹೊಸ ಮಿಂಚು ನವ ಜೀವೋದಯ
ಪಾದವೂರುವ ಮೊದಲೇ ಪಾರಾದೆಯ....?
ಕನ್ನಡದ ಮುಂಗೋಳಿ, ಸಹಸ್ರಮಾನದ ಪ್ರತಿಭೆ, ಹಿರಿಯ ಸಾಧನೆಗೈದು ಕಿರಿವಯದಲ್ಲೇ ಕಾಣೆಯಾದ ಕನ್ನಡದ
ಮಹಾಕವಿ ಮುದ್ದಣ, ಕನ್ನಡದ ಮಣ್ಣು ಸೃಷ್ಟಿಸಿದ ಅನುಪಮ ಪ್ರತಿಭೆ. ಒಂದೂವರೆ ಶತಮಾನದ ಪೂರ್ವದಲ್ಲೇ ಜನಿಸಿ,(ನಂದಳಿಕೆ,
ಉಡುಪಿ ೧೮೭೦ - ೧೯೦೧) ಶತ ಶತಮಾನಗಳ ಕಾಲ ಕನ್ನಡದ ಮನೋನಂದನದಲ್ಲಿ ಹೂವಾಗಿ ಅರಳಿ, ಸದಾ ಬಾಡದಂತೇ ಜೀವಂತವಾಗಿ
ನಮ್ಮೊಂದಿಗೆ ಬಾಳಿ ಬೆಳಗುತ್ತಿರುವ ಮುದ್ದಣ, ಯಾವ ವಿಶ್ವವಿದ್ಯಾಲಯದ ಉತ್ಪನ್ನವಲ್ಲ. ಅದ್ಯಾವ ಗುರುಕುಲವೂ
ಮುದ್ದಣನನ್ನು ಸಾಕಿಲ್ಲ. ಸಂಸ್ಕೃತಿ ನಿಷ್ಠೆ, ಕಲೆಯಮೇಲಣ ಪ್ರೀತಿ, ಶೋಧನಾಸಕ್ತಿ, ಸಂವೇದನಾ ಶೀಲತೆ,
ನುಡಿಯಬಗೆಗಿನ ಧ್ಯಾನ,ಸ್ವಯಂ ಅಧ್ಯಯನ. ಮುದ್ದಣನನ್ನು ಸೃಷ್ಟಿಶೀಲತೆಯ ಶೃಂಗಕ್ಕೆ ಕರೆದೊಯ್ದು ಕನ್ನಡ
ಕಾವ್ಯಾಕಾಶದ ಧ್ರುವತಾರೆಯಾಗಿಸಿತೆಂದರೆ ಅತಿಶಯೋಕ್ತಿಯಂತೂ ಅಲ್ಲ.
ಕಿತ್ತು
ತಿನ್ನುವ ಬಡತನ, ಬದುಕಿಗಾಗಿ ಅಂಡಲೆಯುವಂತ ದಯನೀಯತೆ, ಅಧ್ಯಯನಕ್ಕೆ ಯಾವ ಕನಿಷ್ಠ ಸೌಲಭ್ಯವೂ ಇಲ್ಲದ
ವಾತಾವರಣದಲ್ಲಿ, ಮುದ್ದಣ ಹೇಗೆ ಮಹಾಕವಿಯಾಗಿ ರೂಪುಗೊಂಡ ಎಂಬುದೇ ಬಗೆಹರಿಯದ ಸವಾಲು.
ದಕ್ಷಿಣ
ಕನ್ನಡ ಹತ್ತೊಂಬತ್ತನೆಯ ಶತಮಾನದ ಪ್ರಾರಂಭಕ್ಕೇ ಆಧುನಿಕತೆಗೆ ಸ್ಪಂದಿಸತೊಡಗಿತ್ತು. ಮುದ್ದಣ ಪ್ರಾಯಕ್ಕೆ ಬರುವಾಗಲೇ ರೆವರೆಂಡ್
ಕಿಟ್ಟೆಲ್ ರ ಕನ್ನಡದ ಪ್ರಪ್ರಥಮ ವೈಜ್ಞಾನಿಕವಾದ
ಕನ್ನಡ ಶಬ್ದಕೋಶ ಪ್ರಕಟವಾಗಿ ಜನಪ್ರಿಯವಾಗಿತ್ತು.
ಪಂಪ ಕನ್ನಡ ಜನಮಾನಸದಲ್ಲಿ ಪ್ರಕಟಗೊಂಡು ಸಂಚಲನ
ಮೂಡಿಸಿದ್ದ. ಮಂಗಳೂರು ನಗರದಲ್ಲಿ ಕನ್ನಡದ ಪ್ರಥಮ ಸುದ್ದಿಪತ್ರಿಕೆ ಪ್ರಕಟಗೊಂಡು ಪ್ರಸಾರ ಗೊಳ್ಳುತ್ತಿತ್ತು.
ಸಾಕಷ್ಟು
ಬ್ರಿಟಿಶ್ ಸಂಶೋಧಕರು, ಕನ್ನಡದ ಭಾಷೆ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಬೆಳಕಿಗೆ ತರುವಲ್ಲಿ ಶ್ರಮಿಸುತ್ತಿದ್ದರು.
ಇಂತಹ
ಸುವರ್ಣ ಸಂದರ್ಭದಲ್ಲಿ ಮುದ್ದಣ ಜನ್ಮಿಸುತ್ತಾನೆ. ಪದ್ಯಂ ವದ್ಯಂ, ಗದ್ಯಂ ಹೃದ್ಯಂ. ಎಂದು ಘೋಷಿಸುತ್ತಾ ಕನ್ನಡದ ಪ್ರಾಚೀನ ಹೆಜ್ಜೆಗಳಿಗೆ ಹೊಸತನದ ಗೆಜ್ಜೆ ಸೇರಿಸುತ್ತ,
ನವೋದಯದ ಕನಸು ಕಂಡ ಅಪೂರ್ವ ಪ್ರತಿಭೆ ಆತ. ಕನ್ನಡದ
ಪರಂಪರೆಯೊಂದೇ ಅಲ್ಲ, ಇಡೀ ಭಾರತೀಯ ಭಾಷೆಗಳಲ್ಲೆಲ್ಲ, ಸಾಹಿತ್ಯ ಕಲೆ, ವಿಜ್ಞಾನ, ಆರೋಗ್ಯ, ಜೋತಿಷ್ಯ,
ಗಣಿತ ಎಲ್ಲ ಶಾಸ್ತ್ರಗಳೂ, ಶ್ಲೋಕ, ಪದ್ಯ, ಮುಕ್ತಕಗಳಲ್ಲಿಯೇ ಅಭಿವ್ಯಕ್ತಿಸುವ ಪದ್ಧತಿಯಿಂದ ಜಡಗೊಂಡಿದ್ದ
ಜ್ಞಾನ ಪರಂಪರೆಗೆ ಸರಳ ಗದ್ಯದ ತಿರುವನ್ನು ಮೂಡಿಸುವ
ಕನಸಿನಲ್ಲಿ ಮುದ್ದಣನಿದ್ದ. ಹಳೆ ಮತ್ತು ಹೊಸಗನ್ನಡದ ಶಬ್ದ ಸಾಮ್ರಾಜ್ಯವನ್ನೇ ತನ್ನ ಮನೋಭಿತ್ತಿಯಲ್ಲಿ
ಸಂಗ್ರಹಿಸಿಕೊಂಡಿದ್ದ ಮುದ್ದಣ, ಕಾವ್ಯರಚನಾ ಕ್ಷೇತ್ರಕ್ಕೆ ಹೆಬ್ಬಾಗಿಲಾಗಿಸಿಕೊಂಡಿದ್ದು, ಯಕ್ಷಕಾವ್ಯ
ಸೃಷ್ಟಿಯಿಂದ. ಹೊಸ ತಿಳಿಗನ್ನಡದಲ್ಲಿ ರತ್ನಾವತಿ ಕಲ್ಯಾಣ, ಮತ್ತು ಕುಮಾರವಿಜಯ ಯಕ್ಷಗಾನ ಕೃತಿ ರಚಿಸಿ,
ಅದನ್ನು ಪ್ರಯೋಗಿಸುವಲ್ಲೂ ಸಫಲನಾದ. ಸ್ವಥಃ ಯಕ್ಷಗಾನ ಅರ್ಥಧಾರಿಯಾಗಿಯೂ ಆತ ಪ್ರಸಿದ್ಧನಾಗಿದ್ದ. ಯಕ್ಷ
ಕಲಾ ಪ್ರತಿಭೆ ಅವನಿಗೆ ಹುಟ್ಟಿನಿಂದಲೇ ಬಂದಿದ್ದು. ದಕ್ಷಿಣ ಕನ್ನಡದ ಸಾಂಸ್ಕೃತಿಕ ಜೀವ ಮತ್ತು ಉಸಿರೇ
ಯಕ್ಷಗಾನ. ಆ ಕಲೆಗೆ ಮುದ್ದಣ ತನ್ನ ಅನುಪಮ ಕೊಡುಗೆಯನ್ನೂ
ನೀಡಿದ. ಯಕ್ಷ ಗೀತೆಗೆ ಸಮೃದ್ಧ ಅರ್ಥ ಮತ್ತು ಆಳಗಳನ್ನು ಒದಗಿಸಿದ. ಸರಳ ಸುಂದರ ಭಾಷಾಶಕ್ತಿಯಿಂದ ಮುಂದಿನೆಲ್ಲ
ಯಕ್ಷಕವಿಗಳಿಗೆ ಮಾದರಿಯಾದ.
ಮುದ್ದಣ
ಅಸಾಧ್ಯ ಬಡತನದಲ್ಲೂ ತನ್ನ ಪ್ರಾಥಮಿಕ ಶಿಕ್ಷಣವನ್ನು ತನ್ನ ಗ್ರಾಮ ನಂದಳಿಕೆಯ ಸರಕಾರಿ ಶಾಲೆಯಲ್ಲಿ
ಪೂರೈಸಿ, ಉದ್ಯೋಗದ ನಿರೀಕ್ಷೆಯಲ್ಲಿ, ವ್ಯಾಯಾಮ ಶಿಕ್ಷಣ ತರಬೇತಿಯನ್ನು ಮದರಾಸಿನಲ್ಲಿ ಪಡೆದು, ಉಡುಪಿ
ಮತ್ತು ಕುಂದಾಪುರ ಸರಕಾರಿ ಪ್ರೌಢಶಾಲೆಯ ವ್ಯಾಯಾಮ
ಶಿಕ್ಷಕನಾಗುತ್ತಾನೆ. ಆ ಕಾಲದಲ್ಲಿ ಆತನ ಮಾಸಿಕ ವೇತನ
ಕೇವಲ ಹತ್ತುರೂಪಾಯಿಯಾಗಿತ್ತು.
ಮುದ್ದಣನ
ಕಾಲಕ್ಕಾಗಲೇ ಕನ್ನಡ ಸಾಹಿತ್ಯದಲ್ಲಿ, ಹೊಸಗನ್ನಡ ಗದ್ಯ ಗಟ್ಟಿ ಹೆಜ್ಜೆಯೂರುತ್ತಿತ್ತು. ಸರಳೀಕರಣ ಗೊಳ್ಳುತ್ತ,
ಕತೆ ಕಾದಂಬರಿ ಭಾವಗೀತೆಗಳು ಸಾಮಾನ್ಯ ಓದುಗರನ್ನು ಆಕರ್ಷಿಸತೊಡಗಿತ್ತು. ಬ್ರಿಟಿಶ್ ಪಾದ್ರಿಗಳಲ್ಲಿ
ಅನೇಕರು, ಏಸುವಿನ ಸಂದೇಶಗಳನ್ನು, ಪದ್ಯ ಖಂಡಕಾವ್ಯಗಳನ್ನು
ಸರಳಕನ್ನಡದಲ್ಲಿ ರಚಿಸಿ ಮುದ್ರಿಸಿ ವಿತರಿಸುತ್ತಿದ್ದರು. ಎಲ್ಲರಿಗೂ ಸಲ್ಲುವಂತಹ ಶಿಷ್ಟಕನ್ನಡ ಭಾಷೆಯೊಂದು
ಕನ್ನಡ ನಾಡಿನಾದ್ಯಂತ ಪಸರಿಸುತ್ತಿತ್ತು.
ಛಂದೋ
ಬದ್ಧ ಷಟ್ಪದಿಗಳೇ ಕನ್ನಡ ಕಾವ್ಯಗಳು ಎನ್ನುತ್ತ, ಪುಟ್ಟ ಮಕ್ಕಳಿಗೆ ಕಷ್ಟಕೊಡುತ್ತಿದ್ದ ಪಾಠಕ್ರಮಕ್ಕೆ
ಪ್ರತಿಯಾಗಿ, ಸರಳ ಕನ್ನಡದ ಸುಲಲಿತ ಪದ್ಯಗಳು ರಚನೆಯಾಗಲು ಪ್ರಾರಂಭಗೊಂಡಿತ್ತು. ಒಟ್ಟಿನಲ್ಲಿ ಹತ್ತೊಂಭತ್ತನೆಯ ಶತಮಾನದ ಕೊನೆಯ, ಮತ್ತು ಇಪ್ಪತ್ತನೆಯ
ಶತಕದ ಪ್ರಾರಂಭದ ಕಾಲ, ಹೊಸಗನ್ನಡದ ನವೋದಯ ಕಾಲವೆನ್ನಬಹುದು. ಈ ಸಂಧಿಕಾಲದಲ್ಲಿಯೇ ಮುದ್ದಣ ಮಹಾಕವಿ ಜನ್ಮಿಸುತ್ತಾನೆ.
ಕನ್ನಡದ
ಶ್ರೀಮಂತ ಪರಂಪರೆ, ಮತ್ತು ಹೊಸಗನ್ನಡದ ಹೊಸ ನಿರೀಕ್ಷೆಗಳನ್ನು ಕಸಿಮಾಡಿ, ಶೈಲಿ ತಂತ್ರ, ಅಭಿವ್ಯಕ್ತಿಗಳಲ್ಲಿ
ಹೊಸ ದಾರಿ ನಿರ್ಮಿಸುವ ಹರಿಕಾರನಾಗುತ್ತಾನೆ. ಛಂದೋಬದ್ಧ ಕಾವ್ಯರಚನೆಯ ಜೊತೆಗೆ, ಗದ್ಯಮಹಾಕಾವ್ಯ ಶ್ರೀ
ರಾಮಾಶ್ವಮೇಧ ವೆಂಬ ಕೃತಿಯನ್ನೂ ರಚಿಸಿ, ಆಧುನಿಕತೆಯ ಆಕರ್ಷಣೆಯೊಂದಿಗೆ, ಹಳೆಗನ್ನಡದ ಸೊಗಸು, ಘನತೆ
ಗಾಂಭೀರ್ಯಗಳನ್ನು ಚಿಮ್ಮಿಸುತ್ತಾನೆ.
ವ್ಯವಹಾರದ
ಅನುಕೂಲಕ್ಕಾಗಿ, ಶಿಷ್ಟ ಕನ್ನಡ ಸೃಷ್ಟಿಯಾಗಿದೆ ಸರಿ, ಆದರೆ ಭಾರತೀಯ ಭಾಷೆಗಳಲ್ಲೇ ಪ್ರಾಚೀನವಾದ ಸಮೃದ್ಧ
ಕನ್ನಡ ಹಳೆಗನ್ನಡವೆಂಬ ನಾಮಧೇಯ ಪಡೆದು, ಲಕ್ಷಾಂತರ
ಶಬ್ದಗಳನ್ನು ಮೂಲೆಗುಂಪಾಗಿಸಿಕೊಂಡಿತು. ಕ್ಲಿಷ್ಟ, ಕಠಿಣ ವೆಂಬ ಆರೋಪಕ್ಕೊಳಗಾಯಿತು. ತನ್ನ ಆದ್ಭುತ
ಶಕ್ತಿ, ಘನತೆ ಗಾಂಭೀರ್ಯ, ಶಬ್ಧ ಶ್ರೀಮಂತಿಕೆಗಳನ್ನು
ಪ್ರಕಟಿಸಿಕೊಳ್ಳಲಾಗದೇ ನರಳಿತು. ಕನ್ನಡ ಭಾಷೆಯ ಈ ಸಂಕಟಸ್ಥಿತಿಯನ್ನು ಮನಗಂಡ ಕವಿ ಮುದ್ದಣ,
ಆಧುನಿಕ ಯುಗದಲ್ಲೂ ಪರಂಪರೆಯನ್ನು ಮತ್ತೆ ಎತ್ತಿ ಮೆರಗು ನೀಡುವ ಮಹತ್ವಪೂರ್ಣ ಪ್ರತಿಭಾ ಚಟುವಟಿಕೆಯಲ್ಲಿ
ತೊಡಗಿಕೊಳ್ಳುತ್ತಾನೆ.
ಹೊಸ
ತಂತ್ರಕ್ಕೆ ಹಳೆಯ ಭಾಷೆಯನ್ನು ಒಗ್ಗಿಸುವ, ಹೊಸ ಕಾಲಕ್ಕೆ ಕನ್ನಡದ ನೈಜ ಶಕ್ತಿ, ಕೆಚ್ಚುಗಳನ್ನು ಪರಿಚಯಿಸುವ
ಕೈಂಕರ್ಯಕ್ಕೆ ತನ್ನನ್ನು ಒಪ್ಪಿಸಿಕೊಳ್ಳುತ್ತಾನೆ.
ಕನ್ನಡಮೇ ಕತ್ತುರಿಯಲ್ತೇ...?, ನೀರಿಳಿಯದ ಗಂಟಲೋಳ್ ಕಡುಬಂ ತುರುಕಿದಂತಾಯ್ತು...!! ಕರಿಮಣಿಯ
ಸರದೋಳ್, ಕೆಂಬವಳಂ ಪೋಣಿಸಿದಂತೆ....!! ತಿರುಳು
ಗನ್ನಡದ ಬೆಳ್ನುಡಿಯಲ್ಲಿ, ಪುರುಳೊಂದೇ ಪೇಳ್ವುದು...!!
ಪದ್ಯಂ- ವಧ್ಯಂ, ಗದ್ಯಂ – ಹೃದ್ಯಂ,...!!
ಎಂಬೆಲ್ಲ
ನುಡಿಗಳಿಂದ ಶತಮಾನಗಳ ಕಾಲ ಜೀವಂತವಾಗಿ ನಮ್ಮೊಂದಿಗೆ ಒಡನಾಡುತ್ತಿದ್ದಾನೆ. ರಾಮಾಶ್ವಮೇಧ ಕೃತಿ ಮಿಂಚುವುದು
ಅದರ ಕಥಾವಸ್ತುವಿಗಿಂತ ಅದರ ಅಭಿವ್ಯಕ್ತಿಯಲ್ಲಿಯ ಆಧುನಿಕ ತಂತ್ರದಿಂದ. ಕವಿ ತನ್ನ ಪ್ರಿಯತಮೆಗೆ ಮಳೆಗಾಲದ
ಒಂಟಿತನ ಬೇಸರವನ್ನು ಕಳೆಯಲು ಕಥೆಹೇಳಲು ತೊಡಗುತ್ತಾನೆ. ಪತ್ನಿ ಕೇವಲ ಏಕಮುಖೀ ಕೇಳುಗಳಲ್ಲ. ಕನ್ನಡ
ಭಾಷೆ ಸಾಹಿತ್ಯ ಪರಂಪರೆಗಳ ಬಗೆಗೆ ತಿಳುವಳಿಕೆಯುಳ್ಳವಳು. ಮಹಾಕಾವ್ಯ, ಪ್ರಾರ್ಥನೆ,ದೇವತಾಸ್ತುತಿ,
ಸ್ವಪ್ರಶಂಸೆ, ಯಂತಹ ಸಾಂಪ್ರದಾಯಿಕ ವಿಧಾನದ ಬದಲು, ಕಾವ್ಯದ ಸುಂದರ ಚರ್ಚೆಯಮೂಲಕ ಪ್ರಾರಂಭಗೊಳ್ಳುತ್ತದೆ.
ಅದೇʻʻ ಮುದ್ದಣ ಮನೋರಮೆಯರ ಸಲ್ಲಾಪʼʼ ಎಂದು ಪ್ರಸಿದ್ಧಗೊಂಡಿತು. ಕಳೆದ ಶತಮಾನದಲ್ಲಿ
ಕನ್ನಡ ಭಾಷಾಪ್ರಪಂಚದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಗಂಡ ಹೆಂಡತಿಯರ ಸರಸ ಸಲ್ಲಾಪ ಮುದ ನೀಡುವುದರ ಜೊತೆಗೆ, ಅವರ
ನಡುವಣ ಬೌದ್ಧಿಕ ಚರ್ಚೆ ಕುತೂಹಲ ಕೆರಳಿಸಿತು.
ಯಕ್ಷಗಾನ
ತಾಳಮದ್ದಲೆಯ ಯಶಸ್ವೀ ಅರ್ಥಧಾರಿಯಾಗಿದ್ದ, ಮುದ್ದಣ, ಅದರ ಧನಾತ್ಮಕ ಪರಿಣಾಮವನ್ನು, ಪಾತ್ರಗಳ ನಡುವಣ
ರೋಚಕ ತರ್ಕಗಳಲ್ಲಿ ಮೂಡಿಸಿದ್ದಾನೆ. ಮುದ್ದಣನ ಶಬ್ದಸಾಮರ್ಥ್ಯ
ಅದೆಷ್ಟಿದೆ ಎಂಬುದಕ್ಕೆ, ಕವಿಯʻʻ ಶ್ರೀರಾಮ ಪಟ್ಟಾಭಿಷೇಕಂʼʼ ಎಂಬ ಛಂದೋಬದ್ಧ ಖಂಡಕಾವ್ಯದ ಒಂದು ಪದ್ಯವನ್ನು ಕುತೂಹಲಕ್ಕೆ ಗಮನಿಸಬಹುದು.
ʻʻತೊಟ್ಟಿಲೋಳ್
ಪುಟ್ಟಮಗು ಪಟ್ಟಿರಲ್ ಮುಟ್ಟಿ ಮೈ
ನಿಟ್ಟಿಸುತ
ಮೊಟ್ಟಿರಿಂದೊಟ್ಟಿ ಗನನಿಟ್ಟಿವನ
ಬಿಟ್ಟು ಪಣೆಗಿಟ್ಟು
ಪೊಂಬೊಟ್ಟನೆದೆಗಟ್ಟಿಯಾ ದಿಟ್ಟೆ ಬಿಣ್ಬಟ್ಟ ಮೊಲೆಗೆ.
ತೊಟ್ಟುಡಿಗೆ
ಪಟ್ಟೆ ನೆರಿದುಟ್ಟು ಕೊಂಡೊಟ್ಟಜದ
ಪಟ್ಟಣಿಗರಿಟ್ಟೆಡೆಯ
ಬಟ್ಟೆಯಂ ಮೆಟ್ಟಿ ಬರೆ
ದಿಟ್ಟಿಗೆಡೆಗೊಟ್ಟು ಪಿಂದಟ್ಟೊರ್ವಳಟ್ಟಸದಿ ಕೊಟ್ಟಿ ಪೊರಮಟ್ಟಳಾಗ.ʼʼ
ಸುದೀರ್ಘ
ವನವಾಸದಿಂದ ಅಯ್ಯೋಧ್ಯೆಗೆ ಮರಳುತ್ತಿರುವ ರಾಮಚಂದ್ರನನ್ನು ಸ್ವಾಗತಿಸಲು ಹೊರಟ ತರುಣಿಯೋರ್ವಳು, ಪುಟ್ಟ
ಮಗುವನ್ನು ತೊಟ್ಟಿಲಲ್ಲಿ ತಟ್ಟಿ, ಪಟ್ಟೆಯನ್ನುಟ್ಟು, ಸಡಗರದಿಂದ ಹೊರಟ ಸಂಭ್ರಮವನ್ನು, ಕವಿ ಏಕಾಕ್ಷರ
ಅನುರಣನ( ಪ್ರಾಸಾನು ಪ್ರಾಸ) ದಿಂದ ಸಿಂಗರಿಸಿದ ಪದ್ಯವಿದು. ಲಕ್ಷ್ಮೀಶ ಕವಿ ಉಪಮಾಲೋಲ ನಿದ್ದಂತೇ ಮುದ್ದಣ ಶಬ್ದ ಸಾಮ್ರಾಟ.
ಚತುರ ತರ್ಕಿ.
ತನ್ನ
ಇಪ್ಪತ್ತೈದರ ಯುವ ಪ್ರಾಯದಲ್ಲಿ ಕಾವ್ಯರಚನೆಯನ್ನು ಪ್ರಾರಂಭಿಸಿದ ಮುದ್ದಣ ಕೇವಲ ನಾಲ್ಕೇ ವರ್ಷದಲ್ಲಿ ನಾಲ್ಕಾರು ಖಂಡಕಾವ್ಯ, ಯಕ್ಷಗಾನ ಕೃತಿ, ಮತ್ತು ರಾಮಾಶ್ವಮೇಧ
ದಂತ ಮಹಾಕಾವ್ಯಗಳನ್ನು ರಚಿಸಿದ ಶತಮಾನದ ಪ್ರತಿಭಾವಂತ. ಸಂಸ್ಕೃತ ಮತ್ತು ಇಂಗ್ಲಿಶ್ ಮಾತ್ರ ಬುದ್ದಿವಂತಿಕೆಯ, ಪ್ರತಿಭಾವಂತಿಕೆಯ
ಸಂಕೇತ ವೆಂಬ ಭ್ರಮೆಯಲ್ಲಿ, ವಿಶ್ವವಿದ್ಯಾವಂತರು ತೇಲುತ್ತಿರುವಾಗ, ಕನ್ನಡ ಕಸ್ತೂರಿಯ ಪರಿಮಳವನ್ನು
ರಾಜ್ಯದಾದ್ಯಂತ ಬೀರಿದ ಈ ಮಹೋನ್ನತ ಪ್ರತಿಭೆ, ತನ್ನ ಕೇವಲ ಮೂವತ್ತೊಂದನೆಯ ವಯಸ್ಸಿನಲ್ಲೇ ಜೀವನವನ್ನು
ಪೂರ್ತಿಗೊಳಿಸಿದ ದುರ್ದೈವಿ. ಆಗಲೇ ಹೊಸಗನ್ನಡದಲ್ಲಿ
ಕಾದಂಬರಿ ರಚನೆಯಲ್ಲೂ ತೊಡಗಿಕೊಂಡಿದ್ದ ಎಂಬುದು ಬೆರಗು ಮೂಡಿಸುವಂತಹ ಘಟನೆ.
ಕನ್ನಡ
ಸಾಹಿತ್ಯ ತನ್ನೆಲ್ಲ ಸತ್ವವನ್ನು ಕಳೆದುಕೊಂಡು ನಿಂತನೀರಾದ ಈ ವರ್ತಮಾನದಲ್ಲಿ, ಮತ್ತೆ ನಾವು ನಮ್ಮ
ಪರಂಪರೆಯ ಪ್ರತಿಭಾ ಖಜಾನೆಯ ಬೀಗವನ್ನೊಡೆಯ ಬೇಕಿದೆ. ಕನ್ನಡದ ಮೂಲಭೂತ ಶಕ್ತಿ, ಚೈತನ್ಯಗಳ ಮೂಲಕ್ಕೆ
ಸಾಗಬೇಕಿದೆ. ಪಂಪನಿಂದ ಮುದ್ದಣ, ಮುದ್ದಣನಿಂದ ಕುವೆಂಪು ಗೋಕಾಕ್, ಬೇಂದ್ರೆ, ಮುಂತಾದ ಕನ್ನಡ ಪಭ್ರತಿಗಳು,
ಕನ್ನಡದ ಪಾರಂಪರಿಕ ಖಜಾನೆಯಿಂದಲೇ ಬೆಳೆದು ಬೆಳಗಿದವರು ಎಂಬುದನ್ನು ನಾವಿಂದು ಮತ್ತೆ ಸ್ಮರಿಸಬೇಕಾಗಿದೆ.
ಸುಮಸಂಪದ,
ಅಂಕಣಕ್ಕೆ. ತಾ-೨೨-೭-೨೦೨೪. ಸುಬ್ರಾಯ ಮತ್ತೀಹಳ್ಳಿ.