Tuesday, 18 June 2024

ವಿಷಾದದ ಒಡಲಲ್ಲಿ ಆಶಾವಾದದ ಕಡಲು.ʼʼ

 

ಭೂವ್ಯೋಮ  ಪಾತಾಳವೊಂದಾಗಿ / ಕರ ಕರ  ಗರ ಗರ ಢಂ  ಢಮಾರ್‌ /

ಆರ್ಭಟಿಸಿ ಬಡಿವ  ರಣಭೇರಿ.//   ಎದೆಯೆದೆಯ ಗೂಡಿನಲ್ಲೂ /

 ಹೊತ್ತಿ ಉರಿವ  ಹಿರೋಶಿಮಾ /ಪ್ರತಿ  ಮನದ ಒಳಗೂ  /

 ಧಗ ಧಗಿಸುವ  ಕುರುಕ್ಷೇತ್ರ //  ಎಲ್ಲಿದೆ  ಮನುಕುಲಕೆ ಚಣದ ನಿಶ್ಚಿಂತ  ನಿದ್ರೆ..?/

ಎಲ್ಲಿ ತಥಾಗತನ  ಅಭಯ  ಮುದ್ರೆ....??      (ಶೋಕ ಚಕ್ರ)

 

         ಮನಸ್ಸು  ಮರುಭೂಮಿಯಾಗಿ  ಮಾರ್ಪಡುವಾಗಲೆಲ್ಲ  ಜೀವಪರ  ಚೈತನ್ಯವನ್ನು  ಎಳೆದು ತಂದು  ಮರುವೂಡಿಸುವ  ಭಗೀರಥ  ಯತ್ನ   ಬದುಕನ್ನು  ಸಹ್ಯವಾಗಿಸ ಬಲ್ಲದು.  ಆಧುನಿಕತೆಯ  ಮಹಾ  ಅಮಲು ಮತ್ತು  ಸಾಂಪ್ರದಾಯಿಕತೆಯ  ಜಡತೆಯಂತ  ದೌರ್ಬಲ್ಯಗಳು,  ಸಂಸ್ಕೃತಿಯ  ತಳವನ್ನೇ ಘಾಸಿ ಗೊಳಿಸುತ್ತಿರುವಾಗ  ಮಾನವೀಯ  ಮೌಲ್ಯದ  ಧ್ಯಾನ  ಮಾತ್ರ  ಜೀವಂತಿಕೆಯನ್ನು  ಸೃಷ್ಟಿಸಬಲ್ಲದು.

      ಅಂತಹದೊಂದು  ಮಾತೃಸಂಹಿತೆಯ  ಸಜೀವ  ಚಿಲುಮೆ  ಕವಯತ್ರಿ  ಭಾಗೀರಥಿ  ಹೆಗಡೆ ಯವರ  ಭಾವಲೋಕದ  ಭಿತ್ತಿಯಲ್ಲಿ ಚಿಮ್ಮುತ್ತಿರುವುದನ್ನು  ʻʻ ಶೋಕ ಚಕ್ರʼʼ  ದಲ್ಲಿ  ಕಾಣಬಹುದಾಗಿದೆ.

 

         ಶೋಕ ಚಕ್ರ  ಶೀರ್ಷಿಕೆಯ  ಭಾಗೀರಥಿ  ಹೆಗಡೆಯವರ,  ಮಹತ್ವಪೂರ್ಣ  ಕವನ  ಸಂಕಲನದ  ರಚನೆಗಳನ್ನು  ಆಸ್ವಾದಿಸುತ್ತಿರುವಾಗ,  ತನ್ನಂತಾನೆ  ವರಕವಿ ಬೇಂದ್ರೆ    ʻʻಅಶೋಕ ವೃಕ್ಷದಡಿಗೆ, ಸಶೋಕ ಸೀತೆಯ  ಕಂಡಿದ್ದೆ. ಅಶೋಕ ಚಕ್ರದ  ಧ್ವಜದಡಿಗೆ  ಸಶೋಕ  ಜನತೆಯು  ಕಾಣುತಿದೆʼʼ.   ಎಂಬ  ಸಾಲುಗಳನ್ನು  ನೆನಪಿಸಿದರು.   ಅವರ  ಕಾಲವಾಗಲೀ     ವರ್ತಮಾನವಾಗಲಿ,  ಮಾನವ  ಬುದ್ಧಿಯ  ವಿಚಿತ್ರ  ಚಂಚಲತೆ,  ಕುಟಿಲತೆ, ಸಂಕುಚಿತತೆ,  ಮೌಲ್ಯಪತನ ದಂತಹ  ನಿತ್ಯದ  ದೌರ್ಬಲ್ಯಗಳೆಡೆಗೆ  ಕ್ಷ ಕಿರಣ ಬೀರುವ,   ತಾತ್ವಿಕತೆ  ಮಾನವೀಯತೆಗಳೆಡೆ  ಗಮನಸೆಳೆಯುವಂತಹ   ಪ್ರಕ್ರಿಯೆ  ನಿರಂತರ  ಸಾಗುತ್ತಲೇ  ಇರಬೇಕೇನೋ  ಎಂದೆನ್ನಿಸಿತು. 

     ಕಾವ್ಯ,  ಮನುಷ್ಯ ಪ್ರವೃತ್ತಿಯನ್ನು ಶುದ್ಧಿಗೊಳಿಸುವ  ಮಾರ್ಜಕವಿದ್ದಂತೇ.   ನಿತ್ಯವೂ  ಕಲ್ಮಶಗೊಳ್ಳುವ  ಮಾನವ  ಮನಸ್ಸಿಗೆ,  ನಿತ್ಯಸ್ನಾನ  ಅತ್ಯಂತ  ಅವಶ್ಯ.   ಉನ್ನತ  ಮನಸ್ಸೊಂದು  ಅತ್ಯುನ್ನತ  ಚಿಂತನೆಯನ್ನು  ಉತ್ಕಟವಾಗಿ  ಅಭಿವ್ಯಕ್ತಿಸುವ   ಪ್ರಕ್ರಿಯೆಯೇ  ಕಾವ್ಯ.  ಅದೇ  ಕಾರಣಕ್ಕೇ  ಕಾವ್ಯ  ಮನುಷ್ಯನೊಂದಿಗೆ  ಜನಿಸಿದೆ.  ಅವನೊಂದಿಗೇ  ಬೆಳೆದು  ಬಾಳುತ್ತದೆ.   ಅಸ್ತವ್ಯಸ್ತ   ಮೌಲ್ಯರಹಿತ  ಬದುಕಿಗೆ,  ಸತ್ಯದ ದರ್ಶನ  ನೀಡಿ,  ಮನುಷ್ಯ ಸಂಬಂಧದ   ಆಹ್ಲಾದಕ್ಕೆ  ಕೊಂಡೊಯ್ಯುವ  ಪ್ರಯತ್ನದಲ್ಲೇ  ತೊಡಗಿರುತ್ತದೆ.

      ಕಾವ್ಯ ಕಾಡಬೇಕು.  ಆಳದ  ಕತ್ತಲೆಗೆ   ಬೆಳಕಾಗಿ,  ಬಾಳಿಗೆ  ಮದ್ದಾಗಬೇಕು.  ಸಾತ್ವಿಕ  ಸಂಘರ್ಷದ  ಮೂಲಕ   ಚುಚ್ಚಿ ಎಚ್ಚರಿಸಬೇಕು.  ಸುಂದರ  ಸಖ್ಯದ  ಹಿನ್ನೆಲೆಯಲ್ಲಿಯ, ತಾತ್ವಿಕ ಗಾಂಭೀರ್ಯ  ಸಹೃದಯನನ್ನು  ಬೆಚ್ಚಿಬೀಳಿಸ ಬೇಕು.

        ಕವಯತ್ರಿ  ತಮ್ಮ ಸುದೀರ್ಘ  ಜೀವನಾನುಭವ,  ಸಾಹಿತ್ಯ ಮತ್ತು ಸಂಸ್ಕೃತಿಯ  ಸೂಕ್ಷ್ಮ ಅಧ್ಯಯನ,  ಸುತ್ತಲಿನ  ಸಮುದಾಯದ  ಶಕ್ತಿ  ದೌರ್ಬಲ್ಯಗಳ  ಚಿಕಿತ್ಸಕ  ನೋಟಗಳಿಂದ,  ಪಕ್ವಗೊಂಡಿದ್ದಾರೆ.     ಸಂಪ್ರದಾಯ  ಧಾರ್ಮಿಕ ಚಟುವಟಿಕೆಗಳ  ಹಿನ್ನೆಲೆಯಲ್ಲಿರುವ  ಆಧ್ಯಾತ್ಮಿಕ ಶೂನ್ಯತೆ,  ತತ್ವರಹಿತ  ಚಟುವಟಿಕೆಗಳನ್ನೆಲ್ಲ  ಕಂಡು  ಕನಲುತ್ತಲೇ,   ನುಡಿತಕ್ಕೆ  ನಡೆತಕ್ಕೆ  ಹೊಸ  ಹರಿವು  ನೀಡುವ  ಮಹಾತ್ವಾಕಾಂಕ್ಷೆಯಲ್ಲಿ, ಅಕ್ಷರ ವ್ಯವಸಾಯಕ್ಕೆ  ಧುಮುಕುತ್ತಾರೆ. ಅನುಭವಗಳನ್ನು ಅನುಭಾವದೆತ್ತರಕ್ಕೆ ಕೊಂಡೊಯ್ಯುತ್ತಾರೆ.

      ನಿಮಿಷ  ನಿಲ್ಲಿ  ಮಾರಾಯರೇ /  ಕೊನೆಯ  ಒಗ್ಗರಣೆ  ಬೀಳಬೇಕಾಗಿದೆ. /  ಕುದಿವೆಣ್ಣೆಗೆ  ಸಂದ  ಬದುಕು /  ಸಿಡಿಯ ಬೇಕಾಗಿದೆ. /  ( ಅಡಿಗೆ )

      ಅಡಿಗೆ ಮನೆಯ  ಅಗ್ನಿದಿವ್ಯದಲ್ಲಿ  ಬೆಂದರೂ  ಅದು ಸೃಷ್ಟಿಸಿದ  ಪೌಷ್ಟಿಕತೆಯಿಂದ  ಹೊಸ  ಚೈತನ್ಯ ಪಡೆಯುತ್ತಾರೆ.  ನಿತ್ಯದ ಶಬ್ದಗಳನ್ನೇ  ಸೂಚ್ಯವಾಗಿಸಿ,  ಅರ್ಥದ  ಆಯಾಮಕ್ಕೆ  ಸೆಳೆಯುತ್ತಾರೆ.

          ಅಗೆದರೋ  ಎದೆಯ / ಬಗೆದರೋ  ಕರುಳ / ಸಿಗಿದರೋ  ಜೀವಧಾತುವ /  ಮೊಗೆ  ಮೊಗೆದು  ಜಗಿದು, / ಉಗುಳಿದರೋ  ಬೇಕಾಬಿಟ್ಟಿ /  ಅದರಲ್ಲೇ  ಸ್ವಪ್ನಸೌಧ  ಕಟ್ಟುತ್ತೇನೆ  ತಾಳು./                       (ತಾಳು  ತಾಳೆಂದರೆ )

    ಮಾಡಿಟ್ಟ  ಅಡಿಗೆ ಯ  ಉಂಡವರು  ಮಾಡುತ್ತಿರುವ  ವಿದ್ರೋಹಕ್ಕೆ  ಪ್ರತಿರೋಧವೊಡ್ಡಿ,  ಸರಿದಾರಿಗೆ  ತರುವ  ಪ್ರಯತ್ನಕ್ಕೆ  ತೊಡಗುತ್ತಾರೆ.

      ನಮ್ಮ ಉತ್ತರ ಕರ್ನಾಟಕದ  ಪ್ರಾತಿನಿಧಿಕ  ಹಿರಿಯ ಕಾವ್ಯಪ್ರತಿಭೆಯಾದ,  ಅಕ್ಕ ಭಾಗೀರಥಿ,  ಉತ್ತರಕನ್ನಡದ  ಮಣ್ಣಿನ  ಸ್ವಾದಹೀರಿ  ಬೆಳೆದವರು.  ಅವರ  ಸಾರಸ್ವತ  ಚಟುವಟಿಕೆ  ಕೇವಲ  ಸ್ತ್ರೀವಾದದ  ಜಗುಲಿಯ  ಕಲರವವಾಗಿ  ಉಳಿದಿಲ್ಲ.  ಹಾಗೆಂದು  ವಿವಿಧ ವಾದಗಳಿಗೆ  ಲೇಬಲ್‌  ಹಚ್ಚುವುದರಲ್ಲಿ  ಅರ್ಥವೂ  ಇಲ್ಲ.  ಮಾನವಾನುಭವಗಳಿಗೆ  ಹೆಣ್ಣು ಗಂಡೆಂಬ  ಭೇದವೂ ಇಲ್ಲ.  ತಾಯ್ತನ   ಹೆಣ್ತನ  ವೆಂಬುದು   ಹೆಣ್ಣಿಗೊಂದೆ  ಮೀಸಲಾಗಿಯೂ  ಇಲ್ಲ.  ನೈತಿಕ ಪ್ರಜ್ಞೆ, ಕರುಣೆ, ವಾತ್ಸಲ್ಯ  ಪೊರೆತನ  ಮತ್ತು  ಸಾತ್ವಿಕ ಪ್ರತಿರೋಧವಿರುವ  ಸಾಹಿತ್ಯಮಾತ್ರ  ನ್ಯಾಯ ನೀಡಲು  ಸಾಧ್ಯ. 

        ದಾರಿಯ  ಪಥಿಕರಾದ  ಕವಯತ್ರಿ  ತಮ್ಮ ಅಭಿವ್ಯಕ್ತಿಯ  ಆಳದಲ್ಲಿ,  ಯಾವ  ಕೃತಕ  ಬದ್ಧತೆಗೆ  ಬಲಿಯಾಗದೇ   ವರ್ತಮಾನದ  ಬದುಕಿನ  ಸತ್ಯಶೋಧನೆಯಲ್ಲಿ  ಗಂಭೀರವಾಗಿ  ತಮ್ಮನ್ನು  ತಾವು  ತೊಡಗಿಸಿಕೊಂಡಿದ್ದಾರೆ.

                           ʻʻಅಂತರಾತ್ಮದ  ವಾಣಿ ಕಂತಿಹೋಗುವ ಮುನ್ನ

                             ಕಣ್ಣು ಕಿವಿ ನಾಲಿಗೆಗೆ  ಸನ್ನಿ ಹಿಡಿಯುವ  ಮುನ್ನ

                             ಬೆರಳುಗಳ  ಮುನ್ನೋಟ  ನಡಿಗೆ ನಿಲಿಸುವ  ಮುನ್ನ

                             ನಾನೊಂದು  ಕವನ  ಬರೆಯಬೇಕು.   

                             ಮಳೆ ಜಿರಲೆ  ರಗಳೆಯಲಿ  ಕೋಗಿಲೆಯ  ಕುಹುವಿನಲಿ

                             ನೊಂದವರ  ದನಿ ಬೆರೆಸಿ  ಹಾಡಬೇಕು,

                             ಆದರೆ .... ಯಾಕೆ ?  ಯಾಕಾಗಿ  ಹಾಡಬೇಕು,,,,? ( ಸಾಹಿತ್ಯ ಸಂಗೀತ )

ಬದುಕೊಂದು  ಕಾನನದಂತೆ. ಮಳೆಜಿರಲೆಯ  ರಗಳೆ,   ಕೋಗಿಲೆ  ಕುಹುವಿನ  ಕರ್ಣಸುಖ, ಜೊತೆ ಜೊತೆಗೇ ಇರುತ್ತದೆ.  ರಗಳೆಗೆ ತಡೆಯೊಡ್ಡಿ, ರಸಮಯತೆಯನ್ನು ಆಹ್ವಾನಿಸುವ  ಆಸಕ್ತಿ  ಅವಶ್ಯ. ಆದರೆ

ಹೇಳುವುದನ್ನು  ಹೇಳಿ  ಹೇಳಿ  ಸುಸ್ತಾದರೂ,  ಶ್ವಾನ ಲಾಂಗೂಲ ದಂತೇ  ಮರ ಮರಳಿ ಪಾತಾಳಕ್ಕಿಳಿವ  ಸಮುದಾಯಕಂಡು,  ನನ್ನೆಲ್ಲ  ಕೂಗುಗಳೂ  ವ್ಯರ್ಥವೇ..?  ಎಂಬ  ಪ್ರಶ್ನೆ ಧುತ್‌  ಎಂದು  ಆಕ್ರಮಿಸುತ್ತದೆ.

ಇಂತಹ  ಕ್ಷಣದಲ್ಲಿ  ಅಮ್ಮ ನೆನಪಾಗುತ್ತಾಳೆ. 

     ʻʻ ದುಡಿಮೆಯೇ  ವೃತನೇಮ / ಗೆಯ್ಮೆಯೇ  ಮಡಿ ಹುಡಿ / ಕಟ್ಟುವ  ಕಾಯಕವೇ  ನಿಟ್ಟುಪವಾಸ / ಅಂದವಳು,  ಅರಿತವಳು  ಅಮ್ಮ ನಮ್ಮಮ್ಮ//  ( ಅಮ್ಮ)

     ತಾಯಿ  ಮತ್ತು ತಾಯ್ತನದ  ಸಹಿಷ್ಣುತೆ  ಮತ್ತು  ಜೀವಪ್ರೀತಿ, ಕ್ರೂರ ವಾಸ್ತವದ   ಹತಾಶೆಯನ್ನು  ಕರಗಿಸಿ  ಮತ್ತೆ  ಕಾವ್ಯಕಾಯಕಕ್ಕೆ  ಅಮ್ಮ ಅಣಿಗೊಳಿಸುತ್ತಾಳೆ. 

    ʻʻಹನಿಸು,  ಕಣ್ಣೀರು  ಮತ್ತಷ್ಟು ಸುರಿಸು / ಹನಿಯಿಂಗಿದ  ಒಣ ನೆಲದಲ್ಲಿ / ಗರಿಕೆ  ಮೊಳೆತೀತು/  ಹಸಿದ  ಹೊಟ್ಟೆಗೆ ತುತ್ತು  ಎಸಳಾದೀತು. //ʼʼ  ( ಬರ )

     ಎಂಬ  ಹೊಸ  ಆಸೆ  ಹೊಸ ಧ್ಯಾನಕ್ಕೆ  ಕವಿಸಂವೇದನೆ  ಧಾವಿಸುತ್ತದೆ.

ಸಾಹಿತ್ಯ ಸಂಸ್ಕೃತಿ  ಸಮಾಜಗಳಲ್ಲಿ  ಆಗುತ್ತಿರುವ  ಪಲ್ಲಟಗಳನ್ನು  ಸೂಕ್ಷ್ಮವಾಗಿ  ಗಮನಿಸುತ್ತಿರುವ  ಭಾಗೀರಥಿ  ಹೆಗಡೆಯವರ  ಕಥೆ  ಕಾದಂಬರಿ  ಕವಿತೆಗಳು  ನವ್ಯದ  ಅತೀ  ಅಂತರ್ಮುಖತೆಯನ್ನು  ಮೀರಿ,  ವ್ಯಕ್ತಿ  ಮತ್ತು  ಸಮಾಜಗಳನಡುವೆ  ಏರ್ಪಡುವ  ಸಂಬಂಧ  ಸಂಘರ್ಷಗಳೆಡೆಗೇ   ತಮ್ಮ ದೃಷ್ಟಿಹಾಯಿಸುತ್ತಾರೆ.   ಸಾಂಪ್ರದಾಯಿಕ  ಶಿಕ್ಷಣ ವಂಚಿತರಾದರೂ,  ನಿರಂತರ  ಅಧ್ಯಯನ  ವೈಚಾರಿಕತೆ, ತಾಳ್ಮೆ  ಮತ್ತು  ಪ್ರತಿಭೆಗಳ  ಶಕ್ತಿಯಲ್ಲಿ  ಸೃಜನಶೀಲ  ಬದುಕನ್ನು  ಕಟ್ಟಿಕೊಂಡಿದ್ದಾರೆ.  ಸಾಂಸ್ಕೃತಿಕ  ಸಂಘಟನೆಯಲ್ಲೂ ಮುಂಚೂಣಿಯಲ್ಲಿ  ನಿಂತು, ನಮಗೆಲ್ಲ  ಮಾದರಿಯಾಗಿದ್ದಾರೆ. 

      ಸಮುದಾಯಕ್ಕೆ  ಆಗಾಗ  ವಿಚಿತ್ರ  ವಿಸ್ಮೃತಿ  ಆವರಿಸುವುದಿದೆ.  ಭಾವ  ಬರಡಾಗಿ ಬುದ್ಧಿಯೇ  ವಿಜ್ರಂಭಿಸುತ್ತ  ವಿವಿಧ  ಬಣ,  ಬಣ್ಣಗಳ  ಕೋಲಾಹಲದಲ್ಲಿ  ಛಿದ್ರಗೊಳ್ಳುವ  ಅಪಾಯವನ್ನು  ಮಾನವ ಇತಿಹಾಸದಲ್ಲಿ  ಸಾಕಷ್ಟು ಕಂಡಿದ್ದೇವೆ.  ಉಂಡಿದ್ದೇವೆ.  

      ಸತ್ಯ ಯಾವುದು, ಸತ್ಯದ  ವೇಷ ಧರಿಸಿರುವ  ಕಪಟ  ಯಾವುದು ,  ಸಭ್ಯತೆಯ  ಪೋಷಾಕಿನ  ಕುತಂತ್ರಿ  ಯಾರು,  ನಿಜವಾದ  ಸಭ್ಯತೆ  ಎಲ್ಲಿ ಅಡಗಿದೆ ಎಂಬುದೇ  ತಿಳಿಯದ  ಅಯೋಮಯತೆಯಲ್ಲಿ, ಸತ್ಯಶೋಧಕ  ಮನಸ್ಸು ಸಹ  ಗೊಂದಲಕ್ಕೆ  ಒಳಗಾಗುವ  ಸಾಧ್ಯತೆಯಿದೆ.

       ಕಾವ್ಯ ಎರಡಲಗಿನ  ಕತ್ತಿಯಂತೆ.  ಕವಿಗೂ, ಸಹೃದಯನಿಗೂ ಏಕಕಾಲದಲ್ಲಿ ಪರಿಣಾಮ  ಬೀರುವ,  ಆತ್ಮವಿಮರ್ಶೆಗೆ  ಸೆಳೆಯುವ  ತಾಕತ್ತು  ಶ್ರೇಷ್ಠ ಕಾವ್ಯಕ್ಕಿರುತ್ತದೆ.

       ಎಷ್ಟೆಂದರೂ  ಕಾವ್ಯ  ಭಾವಗಂಧಿ.  ಭಾಷೆಯೋ  ಸಮುದಾಯದ  ನಡುವೆ  ಹುಟ್ಟಿ ಬೆಳೆದಿದ್ದು.  ಭಾವ  ಮತ್ತು  ಭಾಷೆಗಳಲ್ಲಿ  ಸಮನ್ವಯ  ಸಾಧಿಸಬೇಕಾದ  ಸವಾಲು  ಕವಿಯೆದುರಿಗಿದೆ.  ತನ್ನ ಸಂವೇದನೆಗೆ  ಒಗ್ಗುವಂತಹ  ಭಾಷೆಯನ್ನು  ಸೃಷ್ಟಿಸಿಕೊಳ್ಳಬೇಕಾಗುತ್ತದೆ.  ಕವಯತ್ರಿಯ  ನುಡಿತಗಳು, ಭಾವಮಿಡಿತಗಳಾಗಿ  ಸೆಳೆಯುತ್ತಿರುವುದನ್ನು  ಹಲವು  ಕವನಗಳಲ್ಲಿ  ಕಾಣಬಹುದಾಗಿದೆ.

      ಕನ್ನಡ ನುಡಿ ಪ್ರತಿಭೆ  ಬರಗೂರು  ರಾಮಚಂದ್ರಪ್ಪನವರ,     ಕವಯತ್ರಿ  ರೂಪಾ  ಹಾಸನರ  ಕಾವ್ಯಕ್ಕೆ  ನೀಡಿದ  ಸ್ಪಂದನವನ್ನು  ಇಲ್ಲಿ  ಉಲ್ಲೇಖಿಸಬಹುದಾಗಿದೆ.

       ʻʻ ನಿಸರ್ಗದ  ನಿಗೂಢತೆ  ಮತ್ತು  ಸಾಮಾಜಿಕ ನಿಗೂಢತೆಗಳನ್ನು ಓಂದೇ ರೀತಿಯಲ್ಲಿ ನೋಡದೇ   ನಿಸರ್ಗ ನಿಗೂಢತೆಯಲ್ಲಿ ವಿಸ್ಮಯವನ್ನೂ,  ಸಾಮಾಜಿಕ ನಿಗೂಢತೆಯಲ್ಲಿ ಅಸಮತೆಯ  ಹುನ್ನಾರವನ್ನೂ ಕಾಣುತ್ತಾರೆ.    ವಿವೇಕ  ನನಗೆ  ಮುಖ್ಯವೆನ್ನಿಸುತ್ತದೆ.ʼʼ

        ಮಾತು  ಇಲ್ಲಿಯೂ  ಪ್ರಸ್ತುತವಾಗುತ್ತವೆ.  

        ಇಲ್ಲಿರುವ  ಹೆಚ್ಚಿನ  ರಚನೆಗಳೆಲ್ಲ, ಸಮಾಜಿಕ  ಸೌಖ್ಯಕ್ಕೆ  ಹಂಬಲಿಸುತ್ತವೆ.  ಕಣ್ಣೆದುರೇ  ಜರುಗುವ  ಭೃಷ್ಟತೆ,  ಶೋಷಣೆ,  ಅಂಧ ವರ್ತನೆಗಳನ್ನು ಖಂಡಿಸುತ್ತ,

        ಇದ್ದಿದ್ದು ಇದ್ದಲ್ಲೇ ಬಿದ್ದಿದ್ದು ಬಿದ್ದಲ್ಲೇ / ಕಟ್ಟಿಕೊಂಡಿದ್ದೆಲ್ಲ ಅಲ್ಲಲ್ಲೇ ನಿಂತು / ಕಾಲಕ್ಕೆದುರಾಗಿ  ಏನುಂಟು..?/  ಮಣ್ಣಿಗೂ  ಮೋಡಕ್ಕೂ  ಬಿಸಿಲಿಗೂ  ಹಸಿರಿಗೂ / ಉಸಿರಿಗೂ  ಆಯಾ ಸಮಯದ ನಂಟು /   ( ಕಾಲ )

        ಮನುಷ್ಯ ಅದೆಷ್ಟೇ  ಬೀಗಲಿ,  ಕಾಲಕ್ಕೆ,  ಪ್ರಕೃತಿಗೆ  ಶರಣಾಗಲೇ ಬೇಕು,  ಎಂಬ  ತಾತ್ವಿಕ  ನಿರ್ಣಯಕ್ಕೆ  ಬರುತ್ತಾರೆ.   ಸಂಕಲನದ  ಶೀರ್ಷಿಕೆ ʻʻ ಶೋಕ ಚಕ್ರ ʼʼ  ಒಮ್ಮೆಲೇ  ವಿಷಾದವನ್ನು  ಸ್ಥಾಯೀಯಾಗಿ  ಸ್ವೀಕರಿಸಿದೆಯೇನೋ  ಎಂದೆನ್ನಿಸಿದರೆ  ಆಶ್ಚರ್ಯವಿಲ್ಲ.ಸತ್ಯವೆಂಬುದು, / ಒಂದು ಶಿಲುಬೆಯೆಂದಾದರೂ/ ಅದೇ ಇರಲಿ, ಏರಿನಿಲುವೆ /  ಬೇಕಾದವರು, ಬೇಕಾದಷ್ಟು/ ಮೊಳೆಹೊಡೆಯಲಿ/ ( ಶಿಲುಬೆ ). 

    ವಾಸ್ತವದ  ವಿಷಾದವನ್ನು. ಸಮರ್ಥ  ರೂಪಕಗಳಲ್ಲಿ  ಹಿಡಿದಿರಿಸುತ್ತ,  ಸುಂದರ  ನಾಳೆಯನ್ನು  ಆಹ್ವಾನಿಸುವ  ಆರೋಗ್ಯಕರ  ಭಾವ ಸಮೃದ್ಧಿಯನ್ನು  ಇಲ್ಲಿ  ಕಾಣುತ್ತೇವೆ. 

ವೈವಿಧ್ಯಮಯ  ಪ್ರತಿಮೆಗಳ  ಹಿನ್ನೆಲೆಯಲ್ಲಿ  ಒಂದೇ  ಆಶಯದ  ಪುನರಾವರ್ತನೆಯನ್ನು  ಕೆಲವು ರಚನೆಗಳಲ್ಲಿ  ಕಂಡಂತಾಗುತ್ತದೆ.   ಪರಸ್ಪರ  ವಿರುದ್ಧ ಪ್ರತಿಮೆಗಳು, ಪ್ರಧಾನ  ಆಶಯ ಮುಕ್ತಗೊಂಡು  ಮಿಂಚಲು, ತಡೆಯೊಡ್ಡುವುದೇನೋ  ಎಂದೆನ್ನಿಸಿದರೂ,  ಶ್ರಾವಣ, ಉಪಮಾನ,  ಕಿವಿಮಾತು,  ಭೂಚಕ್ರ, ಕಾಲ, ನಮ್ಮಮ್ಮ, ಮಣ್ಣಬೆಳಗು, ಮುಂತಾದ  ರಚನೆಗಳು  ಮನಸ್ಸನ್ನು ಸೆರೆಹಿಡಿದು ಕಲಕುತ್ತವೆ. ಆಶಯದ  ಪ್ರಾಮಾಣಿಕತೆ ಮಿಂಚುತ್ತದೆ.

     ಯಾರದ್ದೇ  ಸಂಕಲನವಾಗಲೀ,  ಸಾಮಾನ್ಯ ರಚನೆಗಳು  ಸೇರುವುದು ಸಹಜವೇ. ಅವು ವ್ಯರ್ಥವೇನೂ ಅಲ್ಲ. ಆ ಪ್ರಯತ್ನಗಳು  ಉಚ್ಛಕವನಗಳಸೃಷ್ಟಿಗೆ  ಹೆಗಲು ಕೊಟ್ಟು,  ಅದರ  ಯಶಸ್ಸಿಗೆ  ಕಾರಣವಾಗುತ್ತದೆ.

ಚಿಂತನೆಗೆ, ಕಾವ್ಯಧ್ಯಾನಕ್ಕೆ  ಅಣಿಗೊಳಿಸುತ್ತವೆ.

    

      ಸಂಕಲನಕ್ಕೆ  ಮುನ್ನುಡಿಯನ್ನಾಡಲು,  ಆತ್ಮೀಯತೆಯಿಂದ  ನನ್ನನ್ನು  ಆಹ್ವಾನಿಸಿದ್ದಕ್ಕೆ   ಅನಂತ  ಕೃತಜ್ಞತೆಗಳು.   ಇನ್ನಷ್ಟು  ಮತ್ತಷ್ಟು  ಸೃಜನಶೀಲ  ಕೃತಿಗಳು  ತಮ್ಮಿಂದ  ಸೃಷ್ಟಿಗೊಂಡು,  ಸಂಚಲನ  ಮೂಡಿಸಲಿ  ಎಂದು  ಹಾರೈಸುತ್ತಿದ್ದೇನೆ.

                                                                                             ಗೌರವಾದರಗಳೊಂದಿಗೆ,

                         ೧೨- ೬ – ೨೦೨೪.                                          ಸುಬ್ರಾಯ  ಮತ್ತೀಹಳ್ಳಿ.

 

No comments:

Post a Comment