ʻʻಕುಳಿತರೆ ಕವಿತೆ. ನಿಂತರೆ ನಾಟಕ, ನಡೆದಾಡಿದರೆ ನುಡಿಮಿಡಿತ, ಜಾತ್ಯತೀತ
ಜೀವ, ಅನುಕಂಪ, ಉಸಿರುಸಿರಲ್ಲೂ ಸಾಮಾಜಿಕ ಸಂಘಟನೆಯ ಉತ್ಸಾಹ. ಅಕ್ಷರ ದಾಹಿ, ನಿರ್ಮೋಹಿ.
ಇದು ಕನಸಿನ
ಉದ್ಗಾರವಲ್ಲ. ಶಬ್ದವೈಭವವಲ್ಲ. ಎಂಟುದಶಕಗಳ
ಕಾಲ, ಅಂಬಾರಕೊಡಲು, ಎಂಬ ಸುಂದರ ಹೆಸರಿನ ಪುಟ್ಟಗ್ರಾಮದಲ್ಲೇ ವಾಸಿಸಿ,
ರಾಜ್ಯದ ವಿಸ್ತಾರಕ್ಕೆ ಬೆಳೆದು, ಬಾಳಿದ, ದಲಿತ ಬಡವರ್ಗಗಳ
ಬದುಕಿಗೆ ಬೆಳಕಾದ ಅಪರೂಪದ
ಅನುಪಮ ವ್ಯಕ್ತಿತ್ವದ ಕವಿ, ವಿಷ್ಣುನಾಯ್ಕರ ಬಗೆಗಿನ
ನುಡಿಚಿತ್ರ.
ಕಾವ್ಯವೆಂದರೆ ಆತ್ಮರತಿಯಲ್ಲ. ಆತ್ಮಾನುಕಂಪವೂ ಅಲ್ಲ. ನೋವು ಪ್ರೀತಿಯ ಸ್ಪಂದನ. ಸುತ್ತಲಿನ
ತಲ್ಲಣಗಳಿಗೆ ಕುರುಡಾಗಿ, ಸ್ವಂತದ ವೈಭವೀಕರಣದಲ್ಲಿ ತಲ್ಲೀನವಾಗುವ
ಬದುಕು ನಿಜಕ್ಕೂ ವ್ಯರ್ಥ.
ಕವಿಯಲ್ಲಿ ಇರಲೇಬೇಕಾದ, ಸಾತ್ವಿಕ ಪ್ರತಿಭಟನೆ, ಸೂಕ್ಷ್ಮ ಸಂವೇದನೆ, ದೂರದೃಷ್ಟಿ,
ಮತ್ತು ಸಮುದಾಯದ ಬಗೆಗಿನ ಜ್ಞಾನ,
ಇವು ಮಾತ್ರ, ಅಕ್ಷರಕ್ಕೆ ಘನತೆ ನೀಡುತ್ತದೆ.
ಇತ್ತೀಚೆಗೆ ನಮ್ಮನ್ನಗಲಿದ
ಕವಿ ವಿಷ್ಣುನಾಯ್ಕ, ಕವಿಯೊಂದೇ ಅಲ್ಲ. ಕಲಿಯೂ
ಹೌದು. ಸಾಮಾಜಿಕ ಹೋರಾಟಗಾರ, ರಾಜನೀತಿಜ್ಞ, ಕವಿ, ದಿ.
ದಿನಕರ ದೇಸಾಯಿಯವರ, ಸೈದ್ಧಾಂತಿಕ ಗರಡಿಯಲ್ಲಿ, ಚಿಂತಕ ಗೌರೀಶ್ ಕೈಕಿಣಿಯವರ ವೈಚಾರಿಕ
ಸಾಹಚರ್ಯದಲ್ಲಿ, ಸಿದ್ಧಗೊಂಡು, ಪಾಕಗೊಂಡ, ವಿಷ್ಣುನಾಯಕರ
ಬದುಕಿನ ಏರು ಇಳಿವು, ಕ್ರಿಯಾಶೀಲತೆ,
ಅಕ್ಷರ ಚಟುವಟಿಕೆ, ಮತ್ತು ಹೋರಾಟಗಳನ್ನೆಲ್ಲ ಗಮನಿಸಿದರೆ,
ಅದೇ ಒಂದು ಅಧ್ಯಯನಯೋಗ್ಯ, ಗ್ರಂಥವಾದೀತು.
ಅವರು
ತಮ್ಮ ರಾಘವೇಂದ್ರ ಪ್ರಕಾಶನದಲ್ಲಿ ಪ್ರಕಟಿಸಿದ
ಮುನ್ನೂರಕ್ಕೂ ಮಿಕ್ಕಿದ ಪುಸ್ತಕ ರಾಶಿಯೇ ನಾಯಕರ
ಜಾತ್ಯತೀತ, ಪ್ರಗತಿಪರ, ನಿಸ್ಪಕ್ಷಪಾತ
ತಾತ್ವಿಕತೆಯನ್ನು ಬಿಂಬಿಸುತ್ತದೆ. ದಿನಕರರ ಹಾಗೆಯೇ
ಮೂಲಭೂತವಾಗಿ ಇವರೊಬ್ಬ ಅಪ್ಪಟ ಕವಿ. ವಿಷ್ಣುನಾಯ್ಕರು ಬರೆದು ಪ್ರಕಟಿಸಿದ ಸಾವಿರಾರು
ಸಾವಿರದ ಕವಿತೆಗಳಲ್ಲಿ, ನಾಯಕರ ಅಸಾಮಾನ್ಯ ವ್ಯಕ್ತಿತ್ವ ಅಚ್ಚುಗೊಂಡಿದೆ.
ಮಾನವೀಯ ಅನುಕಂಪ, ಸಾಮಾಜಿಕ
ವೈಷಮ್ಯ, ಕ್ರೂರ ಶೋಷಣೆ,
ಮತ್ತು ಬೃಷ್ಠತೆಗಳ ಆಳಗಳ ಅಭಿವ್ಯಕ್ತಿ, ಕಾವ್ಯ
ಪ್ರವಾಹವಾಗಿ ನಿರಂತರ ಪ್ರವಹಿಸುತ್ತದೆ.
ಜಗದಗಲ ತುಂಬಿರುವ ನೋವಿನಲಿ ಪೆನ್ನದ್ದು/
ಅರಳುವುದು ಅಕ್ಷರವು
ಕವನವಾಗಿ./
ನೋವು ಸಾಯುವವರೆಗೆ
ಕವನ ಸಾಯುವುದಿಲ್ಲ /
ನಿಲ್ಲುವುದು ಸಾಂತ್ವನದ
ಶಿಲುಬೆಯಾಗಿ. /
ಎಂದು ತಮ್ಮ ಕಾವ್ಯಧೋರಣೆಯನ್ನು ಘೋಷಿಸುವ
ಕವಿ, ತಮ್ಮ ವ್ಯಕ್ತಿವಿಶೇಷವನ್ನು
ತುಳಿತುಳಿದು ತುಳಿದಷ್ಟೂ / ಪುಟಿ ಪುಟಿದು
ಮೇಲಕ್ಕೆ /
ಆಗಸದ ಎತ್ತರಕೆ /ಜಿಗಿವ ನೆಗೆವ / ಊರ್ಧ್ವಮುಖಿ ಸದಾಸುಖಿ / ರಬ್ಬರಿನ ಚೆಂಡು ನಾನು./
( ನಾನು )
ಎಂದು ಆತ್ಮವಿಶ್ವಾಸದಿಂದ ಅಭಿವ್ಯಕ್ತಿಸುತ್ತಾರೆ.
ದಟ್ಟ
ಬಡತನ, ತಾಯಿಯಿತ್ತ ಶ್ರೀಮಂತ ಪ್ರೀತಿ, ಸುತ್ತಲಿನ ಹಾಲಕ್ಕಿ ನಾಮಧಾರಿ ಬಡ ರೈತರ ಕೂಲಿಕಾರರ
ಬೆವರ ಹೊಳೆಯಲ್ಲಿ, ಜೀವನಾನುಭವವನ್ನು ಹೀರುತ್ತ
ಬೆಳೆದ ಈ ಕವಿ ಹೆಜ್ಜೆ ಹೆಜ್ಜೆಯಲ್ಲೂ
ತನ್ನ ಸುತ್ತಲಿನ ಸಮುದಾಯದ
ಅಸಹನೀಯ ಸಂಕಟವನ್ನು ಪರಿಹರಿಸುವ
ದಾರ್ಷ್ಟ್ಯ. ಜೊತೆಗೇ ಹೆತ್ತ ತಾಯಿ ಯ ಧ್ಯಾನ.
ಬೆಟ್ಟಕ್ಕೆ ಹೋದವ್ವ, ಸೊಪ್ಪುಸದೆ ತಂದವ್ವ,/
ಒಣ ಜಿಗ್ಗು ಹಸಿ ಸೆಗಣಿ ಹೆಕ್ಕಿದವ್ವ /
ಬೆಲಗಂಡೆ ಬೆಳೆದವ್ವ, ಸೊರೆ ಸವತೆ ಕೊಯ್ದವ್ವ,
ಎಲ್ಲವನೂ ನನಗೆ ಕಲಿಸಿದವ್ವ/
ಎಂದು ತಾಯಿಯ ಕೊಡುಗೆಯನ್ನು ವರ್ಣಿಸುತ್ತ,
ಆ ಮಹತಾಯಿ ಬದುಕೆಂಬ
ಬೆಂಕಿಯಲ್ಲಿ ಹೇಗೆ ಬೇಯುತ್ತಿದ್ದಳು
ಎಂಬುದನ್ನು ಕಣ್ಣೆದುರು ತರುತ್ತಾರೆ.
ಮೂರು ಗೇಣಿನ ಅವ್ವ ಏನೆಲ್ಲ
ಸಾಧಿಸಿದೆ /
ಪ್ರತಿ ಬೆವರ ಹನಿಗೊಂದು
ಮುತ್ತ ಹೆಕ್ಕಿ...? /
ಧೂಳ್ರೊಟ್ಟಿ ನೀ ತಿಂದು,
ಬಾಳ್ರೊಟ್ಟಿ ನಮಗಿತ್ತು /
ಮುಕ್ಕಾಲು ಶತಮಾನ ಬಾಳ್ದ ಚುಕ್ಕಿ.( ಅವ್ವ ಮತ್ತು ನಾನು)
ವಿಷ್ಣು ಕವಿಯೊಂದಲ್ಲ. ಅವರ ವ್ಯಕ್ತಿತ್ವಕ್ಕೆ ಹತ್ತು ಹಲವು ಆಯಾಮಗಳು. ಸಮರ್ಥ ಮಾತುಗಾರ, ನಾಟಕಕಾರ, ನಟ, ನಿರ್ದೇಶಕ, ಯಶಸ್ವೀ ಶಿಕ್ಷಕ, ಮತ್ತು ಸಾಂಸ್ಕೃತಿಕ ಸಂಘಟಕ.
ಹಳ್ಳಿಯಿಂದ ದಿಲ್ಲಿಯವರೆಗೆ
ವ್ಯಾಪಿಸಿದ ಇವರ ಸೃಷ್ಟಿಶೀಲ
ಚಟುವಟಿಕೆ ಸಾಹಿತ್ಯದ ದಿಗ್ಗಜರೆಲ್ಲರನ್ನು, ಅಂಬಾರಕೊಡ್ಲಿಗೆ ಆಕರ್ಷಿಸಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ
ಚಂದ್ರು, ಜಯಂತ ಕೈಕಿಣಿ,
ಜಿ.ಎಸ್, ಶಿವರುದ್ರಪ್ಪ, ಎಚ್ಎಸ್, ವೆಂಕಟೇಶ ಮೂರ್ತಿ,
ವಿಮರ್ಶಕ ಜಿ.ಎಚ್.ನಾಯಕ್, ಮುಂತಾದ
ಹತ್ತು ಹಲವು ವ್ಯಕ್ತಿಗಳ ಪ್ರೀತಿಯ
ತಾಣವಾಗಿತ್ತು, ನಾಯಕರ ಪರಿಮಳದಂಗಳ.
ವಿಷ್ಣು ನಾಯಕರ ವೈಶಿಷ್ಟ್ಯವಿದ್ದುದೇ, ಎದುರು ಯಾರೇ
ಇರಲಿ, ನಿರ್ಭಿಡೆ, ನ್ಯಾಯ ನಿಷ್ಠುರತೆ, ಪ್ರಖರ ವೈಚಾರಿಕತೆ, ಅಪ್ಪಟ ಪ್ರಾಮಾಣಿಕತೆ, ಮತ್ತು ಸಮೃದ್ಧ
ಆತಿಥ್ಯ ದಂತಹ ಗುಣಗಳು, ಎಲ್ಲರನ್ನೂ ಚುಂಬಕದಂತೇ
ಸೆಳೆಯುತ್ತಿತ್ತು.
ಇವರ
ಆತ್ಮಕಥನಾತ್ಮಕ ಕೃತಿ ʻʻಅರೆಖಾಸಗಿʼʼ ಯನ್ನೋದಿ, ಕವಿ ಎಚ್.ಎಸ್,
ವೆಂಕಟೇಶ ಮೂರ್ತಿಯವರ ಉದ್ಗಾರವನ್ನು
ಇಲ್ಲಿ ಉದಹರಿಸಲೇ ಬೇಕು.
ʻʻವಾಸ್ತವ ಸಂಗತಿಯನ್ನು
ವರದಿಯ ನೆಲೆಯಿಂದ ಮೇಲಕ್ಕೆತ್ತಿ ಅದ್ಭುತವಾದ
ಕಥನಕ್ಕೆ ಒಗ್ಗಿಸುವುದೇ ವಿಷ್ಣು ನಾಯಕರ ಬರವಣಿಗೆ
ನಮ್ಮನ್ನು ಆಕ್ರಮಿಸುವುದಕ್ಕೆ ಮುಖ್ಯ ಕಾರಣವೆಂದು
ಭಾವಿಸುತ್ತೇನೆ. ಕಥೆ ಮಾಡುವುದು
ಎಂದರೆ ಕಲ್ಪನೆಯ ಹೊಸೆತವಲ್ಲ. ಅದು ಭಾಷೆಗೆ ಜೀವಚೈತನ್ಯದ ಆವಾಹನೆ
ಮಾಡುವ ಕ್ರಿಯಾವಿಧಿ. ಕಟ್ಟುಕಥೆ,
ಕಥೆಕಟ್ಟು, ಇವು ಎರಡು ವಿಭಿನ್ನ ಪರಿತತ್ವಗಳೆಂಬುದನ್ನು ನಾವು ಗ್ರಹಿಸಬೇಕಾಗಿದೆ. ಕಥೆ ಕಟ್ಟು ಎನ್ನುವುದು ಒಂದು ಗಂಭೀರವಾದ
ಸೃಷ್ಟಿಶೀಲ ಜವಾಬ್ದಾರಿ. ಅಂಥ ಜವಾಬುದಾರಿಯನ್ನು ಅಪ್ರಯತ್ನಿಕ
ಎಂಬಂತೇ ಸಹಜ ನೆಲೆಯಲ್ಲಿ ವಿಷ್ಣುನಾಯಕರು
ನಿರ್ವಹಿಸುತ್ತಿದ್ದರೆ, ಅದಕ್ಕೆ ಕಾರಣ ಅವರು ಸಹಜ
ಕವಿ ಎಂಬುದೇ ಆಗಿದೆ. ʼʼ
ಎಂದು ಅವರ ಗದ್ಯಸಮೃದ್ಧಿಯ ಬಗೆಗೆ ಅಭಿಪ್ರಾಯ ನೀಡಿದರೆ,
ರಾಷ್ಟ್ರಕವಿ ಜಿ.ಎಸ್.ಎಸ್. ರವರು
ʻʻ ಒಂದು ಅಸ್ವಸ್ಥ ಜಗತ್ತಿನ
ನಡುವೆ, ಬೆಳಕನ್ನು ಕಳೆದುಕೊಂಡ ನಕ್ಷತ್ರಗಳನ್ನು ಕುರಿತು,
ಬೇರು ಸಡಿಲಾಗುತ್ತಿರುವ ಹಳೆಯ ಮರಗಳನ್ನು ಕುರಿತು, ರೆಕ್ಕೆ ಮುರಿದುಕೊಂಡ ಪ್ರೀತಿಯನ್ನು ಕುರಿತು,
ಹೆದರಿದ ಕಂಗಳ ಹಿಂದಿರುವ
ಆತಂಕಗಳ ಕುರಿತು, ಹಂಗರ ಹಳ್ಳಿಯ
ಸಂಕೋಲೆ ಕುರಿತು, ಕಳೆದು ಹೋಗುತ್ತಿರುವ
ಜೀವನೋತ್ಸಾಹಗಳ ಕುರಿತು, ಸ್ಪಂದಿಸುವ ವಿಷ್ಣುನಾಯಕರ
ಕಾವ್ಯ ನಮ್ಮ ವರ್ತಮಾನದ ಕಟುವಾಸ್ತವಗಳಿಗೆ ಹಿಡಿದ ಕನ್ನಡಿಯಾಗಿದೆ.ʼʼ
ಎಂದು ಕವಿಯ ಕಾವ್ಯಶಕ್ತಿಯನ್ನು ಸಮರ್ಥವಾಗಿ
ಗುರುತಿಸುತ್ತಾರೆ.
ಕವಿಯ ದೃಷ್ಟಿಯಿರುವುದೇ ಛಿದ್ರತೆಯನ್ನು
ನಿವಾರಿಸಿ, ಭಾವೈಕ್ಯದ ಗಂಟೆ ಮೊಳಗಿಸುವುದರತ್ತ. ಸಮಾನತೆಯ
ಸುಂದರ ಸಮುದಾಯವನ್ನು ಸೃಷ್ಟಿಸುವತ್ತ.
ನಾಯಕರ ಇನ್ನೊಂದು ಯಶಸ್ವೀ
ಕವನದ ತುಣುಕನ್ನು ಗಮನಿಸಿದರೆ
ʻʻಕತ್ತಲೆಯು ಹೆತ್ತಿರುವ
ಮೈಲಿಗೆಯ ದೆವ್ವ,/ ಮನೆಯೆಲ್ಲ
ಕೊಳೆಮಾಡಿ ಹಿಂಡು ತಿದೆ ಜೀವ / ನಾರುತಿದೆ
ನೋಡು , ಜಾರುತಿಹ ಮಾಡು / ಹೊಸ ಹುರುಪು
ಹೊಸ ಕುರಿಪು ಮೂಡಬೇಕಣ್ಣ / ಹೊಸ ನೀರು ಹೊಸ ಗಾಳಿ
ಹರಿಯಬೇಕಣ್ಣ/ ಕಿಟಕಿ ಬಾಗಿಲ ತೆರೆದು ಹೊಡೆಯಣ್ಣ
ಗುಮಟೆ / ಭಾವೈಕ್ಯ ತಮಟೆ ಜಾಗರಣೆ
ಗಂಟೆ. ( ಜಾಗರಣೆ ಗಂಟೆ )
ಕವಿಯ ದೃಷ್ಟಿ
ನಮಗೂ ಗೋಚರವಾಗುತ್ತದೆ.
ಕನ್ನಡದ
ಮಹತ್ವದ ಲೇಖಕ ಸುಮತೀಂದ್ರ
ನಾಡಿಗ್ ವಿಷ್ಣುನಾಯಕರ ಕವಿತೆಗಳನ್ನು
ಓದಿ ʻʻ ಭಾವದೊರತೆ ಮತ್ತು ಅದನ್ನು ಹತೋಟಿಯಲ್ಲಿಟ್ಟು ಅದಕ್ಕೊಂದು
ರೂಪಕೊಡುವ ತಾಂತ್ರಿಕ ಕುಶಲತೆ,
ವಾಸ್ತವವನ್ನು ಕಣ್ಣುಬಿಟ್ಟು ನೋಡುವ ಸ್ಥೈರ್ಯ,
ಮತ್ತು ಅನುಭವವನ್ನು ರೂಪಕವಾಗಿಸುವ ಕಾವ್ಯ
ಸಂವೇದನೆ ಇವರ ಶಕ್ತಿ.ʼʼ
ಎಂದು ಅಭಿಪ್ರಾಯ
ಪಡುತ್ತ, ಕವಿಗೆ ವಂದಿಸುತ್ತಾರೆ.
ಕನ್ನಡ
ಸಾಹಿತ್ಯಾಕಾಶದಲ್ಲಿ, ತಮ್ಮದೇ ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಂಡು, ವೈವಿಧ್ಯಮಯ
ಸಾಂಸ್ಕೃತಿಕ ಚಟುವಟಿಕೆಗಳನ್ನು ಬದುಕಿಡೀ
ಸೂಸುತ್ತ, ʻʻ ಕವಿ ಸಾಯಬಹುದು, ಕವಿತೆ ಸಾಯುವುದಿಲ್ಲʼʼ
ಎಂಬ ಕೆ.ಎಸ್. ನರಸಿಂಹ ಸ್ವಾಮಿಯವರ ನುಡಿಯಂತೇ
ತಮ್ಮೆಲ್ಲ ಅಕ್ಷರ ಖಜಾನೆಯಲ್ಲಿ ಅನುಭವಗಳನ್ನು ಶಾಶ್ವತವಾಗಿ ಕಾಯ್ದಿಟ್ಟು
ನಡೆದ ಕವಿ ವಿಷ್ಣುನಾಯ್ಕ,
ನಮ್ಮ ಭಾವಗಳಲ್ಲಿ, ಬದುಕಿನಲ್ಲಿ, ಜೀವಪರ ಹೋರಾಟಗಳಲ್ಲಿ ಸದಾ ಚಿರಂಜೀವಿಯಾಗಿಯೇ ಉಳಿದು ಬೆಳೆಯುತ್ತಿರುತ್ತಾರೆ.
ಸಂಧಾನವೋ ಸಂಗ್ರಾಮವೋ
ಪಂಪನಂಥ ಬದುಕು
ಸಹಜ ಸುಂದರ ನಡೆಗೆ ನುಡಿಯ ಪೋಷಾಕು.
ಮರೆಯಾದರೇನು ಕವಿ, ಕವಿತೆ ಅಜರಾಮರ
ಮತ್ತೊಮ್ಮೆ ಹುಟ್ಟಿ ಬಾ.... ಅಮರ ಅಂಬಾರ.
ಸುಮ ಸಂಪದ ಅಂಕಣಕ್ಕೆ.
ತಾ- ೫-೬- ೨೦೨೪. ಸುಬ್ರಾಯ ಮತ್ತೀಹಳ್ಳಿ.
No comments:
Post a Comment