vishwambhara colum 1
ʻʻನುಡಿಕೊಡೆಯ ಅಡಿಯಲ್ಲಿʼʼ (೧)
ಕಾಡುವಷ್ಟು ಓಡು ವ್ಯರ್ಥ
ಕೊಂಚ ಓದು ಓದು.
ನಡಿಗೆಯಿರಲಿ,
ನುಡಿಯರಳಲಿ
ಕಿಡಿ ಮೂಡಲಿ ಮನದ
ಜಾಡಲಿ
ಹಿಡಿ
ಸೂಡಿಯ ಓ
ಬಂಧು,
,
ಒಂದು ಕಾಲವಿತ್ತು. ಅಕ್ಷರಸ್ಥರ ಸಂಖ್ಯೆ ಕಡಿಮೆಯಿತ್ತು. ಜೀವನಾನುಭವ
ತುಂಬಿತ್ತು. ಕಣ್ಣಿಗಿಂತ ಕಿವಿ ವಿಜ್ರಂಭಿಸುತ್ತಿತ್ತು. ರಾಮಾಯಣ
ಮಹಾಭಾರತ ಬೈಬಲ್ ಕುರಾನ್ ಪಠಣಗಳನ್ನು ಕೇಳಿ ಕೇಳಿಯೇ
ಆಧ್ಯಾತ್ಮಿಕತೆ, ತಾತ್ವಿಕತೆ ಬಂಧುತ್ವಗಳು
ಸಮುದಾಯವನ್ನು ಬೆಸೆದು ಕೊಂಡಿತ್ತು. ಅಕ್ಷರ ಬಾರದಿದ್ದರೇನು
ಮಹಾಕಾವ್ಯ ಪುರಾಣಗಳ ಪಾತ್ರಗಳು, ಅವುಗಳ ಸಂದೇಶಗಳು ಮನೆ ಮನೆಗಳಲ್ಲಿ ಸಂಚಲನವುಂಟು
ಮಾಡಿತ್ತು. ದಾಸಯ್ಯಗಳ ಪದ್ಯಗಳು,
ವಚನಗಳ ಸಂದೇಶಗಳು, ಹರಿಕೀರ್ತನೆ ಯಕ್ಷಗಾನ
ದೊಡ್ಡಾಟ ಸಣ್ಣಾಟ ಮಲೆಮಹದೇಶ್ವರ,
ಜುಂಜಯ್ಯನ ಕತೆಯಂತಹ ಮೌಖಿಕ ಮಹಾಕಾವ್ಯಗಳು
ಜನರ ಬಾಯಲ್ಲಿ, ನಡೆಯಲ್ಲಿ
ನುಡಿಯಲ್ಲಿ ನಲಿದಾಡುತ್ತಿತ್ತು.
ಇವೆಲ್ಲ ಈಗ ಅಕ್ಷರಗಳಲ್ಲಿ ದಾಖಲಾಗಿ, ಕತ್ತಲೆ
ಕೋಣೆ ಸೇರಿವೆ.
ಮನೆ ಮನೆಯಲ್ಲಿ ದಸರೆಯ ಉತ್ಸವದ
ಪ್ರಯುಕ್ತ ಶಾರದೆಯ ಪೂಜೆ ಜರುಗುತ್ತಿತ್ತು.
ಪೂಜೆಗಾಗಿಯೇ ತಾಡವಾಲೆಯ ಗ್ರಂಥಗಳಿರುತ್ತಿದ್ದವು. ಅಲ್ಲಲ್ಲಿ,
ಕೆಲವು ದೇವಾಲಯ ಮಠ ಮಂದಿರಗಳಲ್ಲಿ ಮಹಾಕಾವ್ಯ
ಪಾರಾಯಣಗಳೇರ್ಪಡುತ್ತಿದ್ದವು. ಆ ಮೂಲಕ ಸಾಮಾನ್ಯ ಜನರಲ್ಲಿ ಸಾಮಾನ್ಯ ಜ್ಞಾನ, ತಾತ್ವಿಕತೆ,
ಆಧ್ಯಾತ್ಮಿಕತೆ ಮತ್ತು ಸಾಹಿತ್ಯಪ್ರೀತಿ
ಜಾಗ್ರತವಾಗುತ್ತಿತ್ತು. ಈಗ ಅವೆಲ್ಲ ಮಸುಕಾಗಿವೆ. ಗ್ರಂಥಗಳಿಗೆ
ತಾಡವಾಲೆಗಳಿಗೆ ಗೆದ್ದಲು ಆಕ್ರಮಿಸಿವೆ. ಅಕ್ಷರಸ್ಥರಾಗಿಯೂ ಅಕ್ಷರಪ್ರೀತಿ
ದೂರವಾಗಿದೆ.
ಎಲ್ಲೆಲ್ಲೂ
ಓದು ಓಡಿಹೋಗಿದೆ. ಇದೀಗ ನೋಟದ ಕಾಲ. ಪತ್ರಿಕೆಯೂ ಅಕ್ಷರದಿಂದ
ಕುಬ್ಜಗೊಂಡು, ಮನಮೋಹಕ ಚಿತ್ರಾವಳಿಯ
ಆಶ್ರಯಕ್ಕೆ ಬಂದು ದಶಕಗಳೇ ಕಳೆಯಿತು.
ಓದಿಗಿಂತ ನೋಟದ ಆಮಿಷಕ್ಕೆ
ಮರುಳಾಗುತ್ತಿರುವಾಗಲೇ ದೂರದರ್ಶನ ಧಾರಾವಾಹಿಯಾಗಿ
ಆಕ್ರಮಿಸಿತು. ಅದು ರೇಜಿಗೆ ತರುವುದರೊಳಗೆ ʻʻ ವಂದೇ ಮಾತರಂʼʼ ( ವಂದೇ ಮಾಹಿತಿ
ತಂತ್ರಜ್ಞಾನ ರಂಗಂ) ಮೊಳಗತೊಡಗಿತು. ಪಂಡಿತರಿಂದ
ಪಾಮರರ ವರೆಗೆ, ಸಾಮಾನ್ಯನಿಂದ ಅಸಾಮಾನ್ಯರ
ವರೆಗೆ ಕೈಯ್ಯೊಳಗೇ ಜಗತ್ತು
ನಲಿದಾಡತೊಡಗಿತು. ಮಿದುಳು ಸ್ಥಬ್ಧವಾಗಿ,
ಕಾಲ ಕಸವಾಗಿ, ಲೋಕ ಮರೆತುಹೋಗಿ, ಅಮಲಲ್ಲಿ,
ಅದರ ಘಮಲಲ್ಲಿ, ಸಮುದಾಯ
ತೇಲತೊಡಗಿತು.
ಓದುವವರೇ ಇಲ್ಲ ಪುಸ್ತಕ ಕೊಳ್ಳುವವರಿಲ್ಲ, ಎಂಬ ಆಕ್ರಂದನ ಮುಗಿಲು
ಮುಟ್ಟುವಂತಾಯ್ತು.
ಇಂಥಹ ಸ್ಥಿತಿಯಲ್ಲೂ ಕಳೆದ ವರ್ಷ ಕನ್ನಡದಲ್ಲಿ
ಎಂಟು ಸಾವಿರ ಪುಸ್ತಕಗಳು ಮುದ್ರಣ ಗೊಂಡಿವೆಯಂತೆ. ಏಳು ಕೋಟಿ ಜನಸಂಖ್ಯೆಯ
ಈ ಕನ್ನಡ ನಾಡಿನಲ್ಲಿ,
ಎಂಟುಸಾವಿರ ಯಾವ ಲೆಕ್ಕವೂ ಅಲ್ಲ. ಒಂದು ಕೋಟಿಗೂ
ಕಡಿಮೆಯಿರುವ ಇಸ್ರೇಲ್ ದೇಶ ಸದಾ ಯುದ್ಧದಲ್ಲಿ
ಮುಳುಗಿದ್ದರೂ, ಎರಡು ಲಕ್ಷ ಪುಸ್ತಕ
ಇದೇ ಅವಧಿಯಲ್ಲಿ ಪ್ರಕಟಗೊಂಡಿದೆಯಂತೆ. ಜನಸಂಖ್ಯೆ
ಆಧರಿಸಿದರೆ, ಇಸ್ರೇಲ್ ಪುಸ್ತಕ
ಪ್ರಕಟಣೆಯಲ್ಲಿ ವಿಶ್ವಕ್ಕೆ ದ್ವಿತೀಯ ಸ್ಥಾನದಲ್ಲಿದೆಯಂತೆ. ಮೊದಲ ಸ್ಥಾನ ಸಹಜವಾಗಿ
ಇಂಗ್ಲಿಶ್ ಭಾಷೆಗೆ ಸಂದಿದೆ. ಇಂಗ್ಲಿಶ್
ಎಷ್ಟೆಂದರೂ ವಿಶ್ವಸಂಪರ್ಕ ಭಾಷೆ . ಭಾರತೀಯ
ಎಲ್ಲ ಭಾಷೆಗಳನ್ನ ಸೇರಿಸಿದರೂ ನಮ್ಮ ಸಂಖ್ಯೆ ಲಕ್ಷಕ್ಕೆ
ಹತ್ತಿರ ಬರಲಾರದು. ಅದರಲ್ಲಿಯೂ,
ಚಿಂತನಶೀಲ, ಸೃಜನಶೀಲ ಪುಸ್ತಕಗಳಿಗಿಂತ, ವ್ಯಕ್ತಿತ್ವವಿಕಸನ, ಸಂಪತ್ತು ಗಳಿಸುವ ಸರಳ ಮಾರ್ಗ,
ಆರೋಗ್ಯ ಸಲಹೆಗಳು, ಲೈಂಗಿಕ ವಿವರಗಳು, ಧಾರ್ಮಿಕ ಗ್ರಂಥಗಳೇ
ಮುಂದೆ. ಕಾವ್ಯ ನಾಟಕ ಕಾದಂಬರಿ ವೈಚಾರಿಕ
ಕೃತಿಗಳು ಪ್ರಕಟಣೆಯಲ್ಲಿ, ಮಾರಾಟದಲ್ಲಿ
ಅತ್ಯಂತ ಕನಿಷ್ಠಸ್ಥಾನದಲಿವೆ ಎಂಬುದು
ಪ್ರಕಾಶನ ವಲಯದ ಉದ್ಗಾರ.
ಅರವತ್ತರ ಮಾನಸಿಕ
ಸದೃಢತೆ ಕುಸಿಯುತ್ತಿರುವ ಕ್ಷಣದಲ್ಲಿ
ನಿಯಮಿತ ಓದು ಮಾತ್ರ ಮಿದುಳಿಗೆ ಸಂಜೀವಿನಿಯಾಗಲು
ಸಾಧ್ಯ. ಅಲ್ಜೈಮರ್ ನಂತ ರೋಗಕ್ಕೆ
ನಿರೋಧಕವಾಗಿ ಓದು ಅತ್ಯಂತ
ಅವಶ್ಯ ಎನ್ನುತ್ತಾರೆ ವಿಜ್ಞಾನಿಗಳು. ಸದಾ ತ್ರಸ್ತಗೊಳ್ಳುವ ಮನಸ್ಸಿಗೆ
ಏಕಾಗ್ರತೆ ನೀಡಿ, ಸಮಾಧಾನಿಸುವ ಶಕ್ತಿ ಓದುವಿಗಿದೆ. ಸ್ಮರಣಶಕ್ತಿಗೆ
ನೀರೆರೆದು ಪೋಷಿಸುವ ತಾಕತ್ತಿರುವುದು ಡಿಜಿಟಲ್ ಮಾಧ್ಯಮಕ್ಕಿಂತ ಮುದ್ರಿತ
ಅಕ್ಷರಕ್ಕಿದೆ, ಎಂಬುದು ಈಗಲೂ ವಿಜ್ಞಾನಿಗಳ
ಸಲಹೆ. ಆದರೆ ಕ್ರಮೇಣ
ಓದುವ ಹವ್ಯಾಸ ಕಂಪ್ಯೂಟರ್
ಮೊಬೈಲ್ ಗಳಿಗೆ ಪಕ್ಷಾಂತರಿಸುತ್ತಿದೆ. ಹೊಸ ಪುಸ್ತಕದ ಸುವಾಸನೆ,
ಮೃದುವಾದ ಹಿಡಿತದ ಸಂತಸವನ್ನು
ತಂತ್ರಜ್ಞಾನದ ಪರದೆಗಳು ಕಸಿಯುತ್ತಿವೆ. ವಾಚನಾಲಯಗಳು ಕುಸಿಯುತ್ತಿವೆ.
ರಾಜ್ಯದಲ್ಲೇ ಅತ್ಯಂತ
ಹಳೆಯ ವಾಚನಾಲಯಗಳಲ್ಲಿ ಒಂದಾದ ಶಿರಸಿಯ
ಪಂಡಿತ್ ಲೈಬ್ರರಿ ಒಂದು ಕಾಲದ ವಿದ್ಯಾರ್ಥಿಗಳಿಗೂ ವಿಶ್ವವಿದ್ಯಾಲಯವಾಗಿತ್ತು. ಅದೆಷ್ಟು ಪ್ರಸಿದ್ಧಿಯಾಗಿತ್ತೆಂದರೆ, ಶಿರಸಿಗೆ ಆಗಮಿಸಿದ್ದ, ಬೇಂದ್ರೆ, ವೀ.ಸಿ.
ಭೈರಪ್ಪ ಮುಂತಾದ ಸಾಹಿತ್ಯದಿಗ್ಗಜರು, ಇಷ್ಟಪಟ್ಟು
ಭೇಟಿಯಿತ್ತು, ಅಪರೂಪದ ಕೃತಿಗಳನ್ನು
ಮುಟ್ಟಿ ಖುಷಿಪಟ್ಟಿದ್ದರು. ಈಗಲೂ ಕನ್ನಡ
ಸಾಹಿತ್ಯದ ಅಪರೂಪದ ಅಮೂಲ್ಯ ಕೃತಿರತ್ನಗಳು
ಜೋಪಾನವಾಗಿ ಓದುಗರನ್ನು ಕಾದು ಕುಳಿತಿವೆ.
ವಿಶ್ವಸಾಹಿತ್ಯದ ಅನುಭವಗಳನ್ನೇ
ಕನ್ನಡಕ್ಕೆ ಭಟ್ಟಿಯಿಳಿಸಿದ ಕನ್ನಡದ
ಬಹುಮುಖ್ಯ ವಿಮರ್ಶಕ ಗೌರಿಶ್ ಕೈಕಿಣಿಯವರ
ಬಹುಪಾಲು ಬರಹಗಳು ಪ್ರಕಟಗೊಂಡಿವೆ. ದಿನಕರ
ದೇಶಾಯಿಯವರ ಸಾವಿರ ಸಾವಿರ ಚುಟುಕುಗಳು ಈ ವರ್ತಮಾನದ
ಒತ್ತಡದಲ್ಲೂ ಸಂತಸದ ಹೂ ತೂರಿ ಮೈಮರೆಸುವಂತ ಶಕ್ತಿ ಪಡೆದಿವೆ. ಅಂಕೋಲಾ
ವಿಷ್ಣುನಾಯಕರ ರಾಘವೇಂದ್ರ ಪ್ರಕಾಶನದ
ನೂರಾರು ಮಹತ್ವದ ಕೃತಿಗಳು, ಓದುಗರನ್ನು ನಿರೀಕ್ಷಿಸುತ್ತಿವೆ. ನಮ್ಮಿಂದ
ಭೌತಿಕವಾಗಿ ದೂರವಾಗಿರುವ ಯಶವಂತ
ಚಿತ್ತಾಲ, ಅರವಿಂದ ನಾಡಕರ್ಣಿ,
ಸನದಿ, ಭರತನಹಳ್ಳಿ, ಆರ್.ಪಿ. ಹೆಗಡೆ, ಜಿ.ಕೆ.ಹೆಗಡೆ, ವಿ.ಟಿ.ಶೀಗೇಹಳ್ಳಿ, ವಿಷ್ಣುನಾಯಕ್,
ಶಾಂತಿನಾಥ ದೇಸಾಯಿ, ಸುಬ್ಬಣ್ಣ ಎಕ್ಕುಂಡಿ, ಮುಂತಾದ ಪ್ರತಿಭೆಗಳ,
ಕತೆ, ಕಾವ್ಯ ಕಾದಂಬರಿ, ನಾಟಕ, ವೈಚಾರಿಕ ಕೃತಿಗಳು,
ಇನ್ನೂ ಜೀವಂತವಾಗಿ, ಹೊಸ ಕಾಲದ ದ್ವಂದ್ವಕ್ಕೆ,
ಸಂದಿಗ್ದಕ್ಕೆ ಆತ್ಮೀಯವಾಗಿ ಸ್ಪಂದಿಸುತ್ತಿವೆ.
ಪಂಪನ ವಿಕ್ರಮಾರ್ಜುನ ವಿಜಯ ವಿವಿಧ
ಭಾಷೆಗಳಿಗೆ. ವಿದೇಶೀ ಆಸಕ್ತರಿಗೆ ಅನುವಾದವಾಗಿ ತಲುಪಿ ಕಾವ್ಯಪ್ರಿಯರಿಗೆ ಖುಷಿನೀಡಿದ್ದು
ಕನ್ನಡದ ದಿಗ್ವಿಜಯ ಎಂದೆನ್ನಿಸಿದರೆ, ಆ ಮೂಲಕ ವಿಶ್ವವ್ಯಾಪಿಯಾಗಿದ್ದು ನಮ್ಮ ಬನವಾಸಿ.
ಅದೆಷ್ಟೇ ಜನ್ಮಬರಲಿ, ಅದ್ಯಾರೇ ಅಂಕುಶ ಒಡ್ಡಲಿ,
ಬನವಾಸಿಯಲ್ಲೇ ನಾನು ಜನ್ಮಿಸುತ್ತೇನೆಂದು ಸಾರಿದ ಪಂಪ
ಮಹಾಕವಿಯ ಒಂದೇ ಒಂದು ಗುರುತು
ಬನವಾಸಿಯಲ್ಲಿಲ್ಲ. ಇನ್ನಾದರೂ ಬನವಾಸಿಯಲ್ಲಿ ಪಂಪ ಕವಿಯ ಭವ್ಯ ಪುತ್ಥಳಿ
ನಿರ್ಮಿಸಿ ಕವಿಗೆ ನಾವು ಕೃತಜ್ಞತೆ ಸಲ್ಲಿಸ
ಬೇಕಿದೆ.
ಕರ್ನಾಟಕದ ಲಲಿತಕಲೆಗಳಿಗೆಲ್ಲಕ್ಕೂ ಸ್ಫೂರ್ತಿಕೇಂದ್ರವಾಗಿದ್ದ ಕುಮಾರವ್ಯಾಸ
ಮಹಾಕವಿಯ ಕರ್ಣಾಟ ಭಾರತ ಕಥಾ ಮಂಜರಿ,
ಕೃತಿ, ಇದೇ ವರ್ಷ ರಾಜ್ಯ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ, ಸರಳ ಸುಂದರ ಕನ್ನಡದ
ಅರ್ಥಸಹಿತ, ಶಬ್ಧಾರ್ಥದೊಂದಿಗೆ, ಕೈಗೆಟಕುವ
ಬೆಲೆಯಲ್ಲಿ ಎರಡು ಸಾವಿರ ಪುಟಗಳಲ್ಲಿ ಪ್ರಕಟಗೊಂಡಿದೆ.
ಪ್ರಸ್ಥುತ ಗ್ರಂಥ ಕನ್ನಡಿಗರ
ಮನೆ ಮನಕ್ಕೆ ತಲುಪಬೇಕಿದೆ.
ಆರು ನೂರು ವರ್ಷಗಳ ಹಿಂದೆಯೇ
ಕುಮಾರವ್ಯಾಸ ಕವಿ, ಕನ್ನಡದ
ಶಬ್ದಶ್ರೀಮಂತಿಕೆ, ಸುಭಗತೆ, ಸೌಂದರ್ಯ, ಗಳಿಂದ
ಕನ್ನಡದ ಘನತೆಯನ್ನೆತ್ತರಿಸಿದ ಮಹಾನ್
ಪ್ರತಿಭೆ ಎಂಬುದು ನಮ್ಮೆಲ್ಲರ
ಸೌಭಾಗ್ಯ. ಪಂಪನಿಂದ ಕುವೆಂಪುವರೆಗೆ
ಕನ್ನಡ ಮಹಾಕಾವ್ಯದ ಉದ್ಭೋಧಕ
ಪ್ರತಿಭಾ ಪ್ರವಾಹದಲ್ಲಿ ಇಳಿದವರಿಗೆ
ಮಾತ್ರ ಕನ್ನಡದ ಮಹತ್ವ ಅರಿವಾದೀತು.
ಕನ್ನಡದ ನವೆಂಬರ ತಿಂಗಳಿನ ಸಮ್ಮುಖದಲ್ಲಿ
ಮತ್ತೊಮ್ಮೆ ಕನ್ನಡದ ಓದಿನ ಧ್ಯಾನಕ್ಕೆ ಪ್ರವೇಶಿಸುವುದರೊಂದಿಗೆ, ನಮ್ಮೊಳಗೇ
ನಾವು ನಮ್ಮ ಸಂಸ್ಕೃತಿಯ ಜಾಗೃತಿಗಾಗಿ, ನಮ್ಮ ಆತ್ಮವಿಮರ್ಶೆಗೆ ತೊಡಗೋಣವೇ....
ಪುಸ್ತಕದಿ ದೊರೆತರಿವು,
ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು, ತರು ತಳೆದ
ಪುಷ್ಪ ||
ವಸ್ತು ಸಾಕ್ಷಾತ್ಕಾರ
ವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ-------- ಮಂಕುತಿಮ್ಮ||
೧೭-೯-೨೦೨೫.
ʻʻಸುಮʼʼ
ʻʻಸುಮನಾಂಬರʼʼ ( ಅಂಕಣ ಲೇಖನಗಳು )
1)
ʻʻಕನ್ನಡಾ ಕನ್ನಡಾ ನೀ.....ನಾಳೆ
ತೀಡಡಾʼʼ
ʻʻಕನ್ನಡವ ಕನ್ನಡಕೆ ಕನ್ನಡಿಸುತ್ತಿರಬೇಕುʼʼ ಇದು ಬೇಂದ್ರೆಯವರ ಸುಪ್ರಸಿದ್ಧ ನುಡಿ. ಇತ್ತೀಚಿನ
ದಿನದಲ್ಲಿ ರಾಷ್ಟ್ರಾದ್ಯಂತ ಕನ್ನಡ
ಅತ್ಯಧಿಕ ಸುದ್ದಿಯಾಗಿ ಮೆರೆಯಿತು.
ತಮಿಳು ಚಲನಚಿತ್ರದ ಪ್ರತಿಭಾವಂತ ನಟ ಕಮಲ್ ಹಾಸನ್,
ಕನ್ನಡ ತಮಿಳಿನ ಶಿಶು ಎಂಬ ಅತ್ಯಂತ
ವಿವಾದಾತ್ಮಕ ಘೋಷಣೆಗೈದು ರಾಜ್ಯಾದ್ಯಂತ
ಕಿಚ್ಚು ಹೊತ್ತಿಸಿದ್ದು, ಕನ್ನಡಾಭಿಮಾನಿಗಳು
ಆತನನ್ನು ಬಹಿಷ್ಕರಿಸಿದ್ದು, ನ್ಯಾಯಾಲಯದ
ಕಟ್ಟೆಯೇರಿದ್ದು ಒಂದೆಡೆಯಾದರೆ, ಕನ್ನಡದ
ಸಾಹಿತ್ಯಪ್ರತಿಭೆ ಬಾನು ಮುಶ್ತಾಕ್ ಜಾಗತಿಕ
ಪ್ರಶಸ್ತಿಯಾದ ಬುಕರ್ ಪುರಸ್ಕಾರವನ್ನು
ಪಡೆದಿದ್ದು, ಅದೇ ಕೃತಿಯನ್ನು ಇಂಗ್ಲಿಶ್
ಗೆ ಅನುವಾದಿಸಿದ ಕೊಡಗಿನ ದೀಪಾಬಸ್ತಿ
ಎಂಬ ಯುವ ಲೇಖಕಿ ಬುಕರ್ ಪ್ರಶಸ್ತಿಗೆ
ಭಾಜನಳಾದದ್ದು, ಕನ್ನಡದ ನೆಲದಲ್ಲಷ್ಟೇ
ಅಲ್ಲ, ಇಡೀ ದೇಶದಲ್ಲಿ
ಸಂಚಲನ ಮೂಡಿಸಿತು.
ವಿಶ್ವದ
ಅತ್ಯಂತ ಪ್ರಾಚೀನ ೩೩ ಭಾಷೆಗಳಲ್ಲಿ,
ಕನ್ನಡವೂ ಒಂದು. ಕ್ರಿಸ್ತೀಶಕ
ಪೂರ್ವದಲ್ಲೇ ಗ್ರೀಸ್ ದೇಶದ ಮಣ್ಣಲ್ಲೂ
ಕನ್ನಡಶಬ್ದವನ್ನು ಬಿತ್ತಿದ್ದು ಕನ್ನಡದ ಹೆಗ್ಗಳಿಕೆ. ಕರ್ನಾಟಕದ
ವ್ಯಾಪಾರಿಗಳು, ಗ್ರೀಕ್ ಮತ್ತು ಕರ್ನಾಟಕವನ್ನು ಹತ್ತಿರಕ್ಕೆ
ತಂದಿದ್ದು ರೋಚಕ ಇತಿಹಾಸ.
ನಮ್ಮ ಜಿಲ್ಲೆಯ ಕರಾವಳಿಯ ಮಾಂಡಲಿಕನ
ಮಗನೊಬ್ಬ ವ್ಯಾಪಾರಿಗಳೊಂದಿಗೆ ಗ್ರೀಸಿಗೆ
ಹೋಗುತ್ತಾನೆ. ಅಲ್ಲಿಯ ರಾಜನೊಬ್ಬನ
ಮಗಳನ್ನು ಪ್ರೀತಿಸಿ, ಇಲ್ಲಿಗೇ
ಕರೆತರುತ್ತಾನೆ. ಗ್ರೀಕ್ ದೊರೆಯ ಅಸಹನೆಗೆ
ಕಾರಣವಾದ ಈ ಘಟನೆ, ದೊಡ್ಡ
ರಾದ್ಧಾಂತಕ್ಕೆ ಕಾರಣವಾಗುತ್ತದೆ. ಗ್ರೀಕ್ ದೊರೆ ನಮ್ಮ
ಮಾಂಡಲಿಕರ ಸ್ನೇಹ ಸಂಪಾದಿಸುತ್ತಾನೆ. ದೊರೆಯ ಒಂದು ನಿಯೋಗ ಕರಾವಳಿಗೆ ಆಗಮಿಸುತ್ತದೆ.
ರಾಜನಿಗೆ ರಾಜ ಪರಿವಾರಕ್ಕೆ
ಗ್ರೀಸಿನ ವಿಶೇಷ ಮದ್ಯ, ಮತ್ತು ಬೆಲೆಬಾಳುವ
ಕುದುರೆ, ವಜ್ರವೈಢೂರ್ಯಗಳನ್ನು ಅರ್ಪಿಸುತ್ತಾನೆ.
ಇಡೀ
ಅರಮನೆಯ ಜನಗಳಿಗೆ ವಿಶೇಷ ಮದ್ಯವನ್ನು ನೀಡಿ ಖುಷಿಪಡಿಸುತ್ತಾರೆ. ಮದ್ಯಕುಡಿದ
ಎಲ್ಲರೂ ಎಚ್ಚರ ತಪ್ಪಿಬೀಳುತ್ತಾರೆ. ಆಗ ಗ್ರೀಸ್ ರಾಜಕುವರಿಯನ್ನು
ಅಪಹರಿಸಿಕೊಂಡು ತಮ್ಮ ದೇಶಕ್ಕೆ ಪಲಾಯನ ಪಠಿಸುತ್ತಾರೆ. ಇದೇ ಘಟನೆಯೇ ವಸ್ತುವಾಗುಳ್ಳ
ಗ್ರೀಕ್ ನಾಟಕವೊಂದು, ಗ್ರೀಸ್ ದೇಶದ
ಉತ್ಖನನದಲ್ಲಿ ದೊರಕಿದೆ. ಅದರಲ್ಲಿ ಕನ್ನಡಶಬ್ದವಿರುವುದು ಬೆರಗು ಮೂಡಿಸುತ್ತದೆ.
ಅಲ್ಲಿಂದ
ಈ ವರೆಗೆ ಕನ್ನಡದ
ಕರ್ನಾಟಕದ ಪ್ರಾಚೀನ ಅರ್ವಾಚೀನ
ಕತೆಗಳನ್ನು ಗಮನಿಸುತ್ತಾ ಹೋದರೆ,
ಮೈ ನವಿರೇಳುತ್ತದೆ. ಕನ್ನಡದ
ಪ್ರಪ್ರಥಮ ಅಲಂಕಾರ ಗ್ರಂಥವಾದ
ಶ್ರೀ ವಿಜಯನ ಕವಿರಾಜ ಮಾರ್ಗ, ಸದ್ಯ ಸಿಕ್ಕಿರುವ ಆದಿ ಕೃತಿ.
ಎಂಟನೆಯ ಶತಮಾನದ್ದು. ಅದರಲ್ಲಿ
ಉಲ್ಲೇಖ ಗೊಂಡ ಹಲವು ಕವಿಗಳ,
ಹಲವು ಕೃತಿಗಳ ಉಲ್ಲೇಖಗಳನ್ನು
ಗಮನಿಸಿದಾಗ, ಲಿಖಿತ ಇತಿಹಾಸ ಇನ್ನೂ ಹಿಂದಕ್ಕೆ ಹೋಗುತ್ತದೆ.
ಆದರೆ ಅವು ಇನ್ನೂ ನಮಗೆ ದೊರಕಿಲ್ಲ.
ಕವಿರಾಜ
ಮಾರ್ಗ ಕೃತಿ ರಚನೆಗೊಂಡ
ಕಾಲದಲ್ಲಿ, ಕೃತಿಯೇ ಹೇಳುವಂತೇ
ಕಾವೇರಿಯಿಂದ ಗೋದಾವರಿವರೆಗೆ ಕನ್ನಡ ನಾಡು
ವ್ಯಾಪಿಸಿಕೊಂಡಿತ್ತೆಂದು ತಿಳಿದುಬರುತ್ತದೆ. ಎರಡು ಮೂರನೇ ಶತಮಾನದ
ಕಾಲದಲ್ಲೇ ನೇಪಾಳ ಬಂಗಾಲ
ಬಿಹಾರ ರಾಜ್ಯಗಳಲ್ಲಿ, ಕನ್ನಡ ದೊರೆಗಳು (ಸೇನ್) ಆಳುತ್ತಿದ್ದರು ಎಂಬುದು
ಅಭಿಮಾನ ಮೂಡಿಸುತ್ತದೆ. ಈಗಲೂ ಕನ್ನಡ ಮೂಲದ ʻʻ
ಸೇನ್ʼʼ ಎಂಬ ಅಂಕಿತನಾಮದ ಜನಾಂಗ ಉತ್ತರಭಾರತದಲ್ಲಿ ವಾಸಿಸುತ್ತಿದ್ದಾರೆ. ಅರ್ಧ ದಕ್ಷಿಣ
ಭಾರತವನ್ನೇ ವ್ಯಾಪಿಸಿದ್ದ ಕನ್ನಡ,
ಇಷ್ಟು ಸಂಕುಚಿತಗೊಂಡಿದ್ದೇಕೆ....? ಸಂಸ್ಕೃತ ಸೇರಿ ಉತ್ತರಭಾರತದ ಭಾಷೆಗಳಲ್ಲಿ
ಈಗಲೂ ಕನ್ನಡ ಶಬ್ದಗಳು
ದೊರಕಿದರೂ, ಕನ್ನಡ ಕಳೆಗುಂದಿದ್ದೇಕೆ.....? ಈ ಪ್ರಶ್ನೆ ಶಂಭಾ ಜೋಷಿಯವರನ್ನು ಸೇರಿ ಭಾಷಾ ಸಂಶೋಧಕರೆಲ್ಲರನ್ನೂ ಕಾಡಿದ್ದು
ಈಗ ಇತಿಹಾಸ.
ಇತ್ತೀಚಿನ
ದಶಕಗಳಲ್ಲಿ ಕನ್ನಡ ಭಾಷೆ ಮತ್ತಷ್ಟು ಕುಗ್ಗುತ್ತಿದೆ. ನಗರಪ್ರದೇಶದ
ವಿದ್ಯಾರ್ಥಿಗಳಲ್ಲಿ ೪೮ ಪ್ರತಿಶತ, ಗ್ರಾಮಾಂತರದ
೨೬ ಪ್ರತಿಶತ ಮಕ್ಕಳು ಕನ್ನಡದಿಂದ
ದೂರವಾಗುತ್ತಿದ್ದಾರೆ. ಅನ್ನದ ಆಸೆಗೆ ಚಿನ್ನವನ್ನೇ ಮರೆಯುತ್ತಿದ್ದಾರೆ. ಕನ್ನಡ
ಕಲಿತವಗೆ ಉದ್ಯೋಗವಿಲ್ಲ, ವಿಜ್ಞಾನವಿಲ್ಲ,
ವಿಶ್ವಸಂಪರ್ಕವಿಲ್ಲ, ಪ್ರತಿಷ್ಠೆಯಿಲ್ಲ,
ಎಂಬೆಲ್ಲಮಿಥ್ಯಾ ಭಯ ಪಾಲಕರನ್ನು ಕಾಡತೊಡಗಿ,
ಮಕ್ಕಳಲ್ಲಿ ಕನ್ನಡ ಸಂಸ್ಕೃತಿಯನ್ನೇ
ಸಮೂಲ ನಾಶಗೈಯ್ಯುವ ಚಟುವಟಿಕೆ
ಉಲ್ಬಣಗೊಳ್ಳುತ್ತಿದೆ.
ಇಂಗ್ಲಿಶ್
ಕನ್ನಡದಂತೇ ಅದೊಂದು ಭಾಷೆ. ವಿಶ್ವಸಂಪರ್ಕವೇರ್ಪಡಿಸುವ ಮಾಧ್ಯಮ
ನಿಜ. ಆದರೆ ಮಾತೃಭಾಷೆಯಿಂದಲೇ ಬೇರುಸಹಿತ
ಕಿತ್ತು ಇಂಗ್ಲಿಶ್ ಭಾಷೆಗೆ ಕಸಿಮಾಡುವ
ಕಾಯಕ ಮಾತ್ರ ಆತ್ಮಹತ್ಯಾತ್ಮಕ. ,ಮಾತೃ ಭಾಷೆ
ಮಗುವಿನ ಉಸಿರಿದ್ದಂತೆ. ಮಾತ್ರಭಾಷೆಯಲ್ಲಿ ಪಡೆದ ಜ್ಞಾನ, ಸಜೀವವಾದದ್ದು. ಮಾತ್ರಭಾಷೆಯಲ್ಲಿಯ ಹುದುಗಿರುವ
ಸಾವಿರಾರು ವರ್ಷದ ಸಾಂಸ್ಕೃತಿಕ ಸ್ಮೃತಿ, ಮಗುವಿನ ವ್ಯಕ್ತಿತ್ವಕ್ಕೊಂದು ಘನತೆ ನೀಡಬಲ್ಲದು.
ಪರಂಪರೆಯ ಅನುಭವ ದ್ರವ್ಯವನ್ನು ಮತ್ತೊಂದು
ತಲೆಮಾರಿಗೆ ದಾಟಿಸುವ ಸಮರ್ಥಮಾಧ್ಯಮವೂ
ಸಹ ಅದೇ ಮಗು ಪಾತ್ರನಿರ್ವಹಿಸುತ್ತದೆ,
ಎಂಬುದನ್ನು ನಾವು ಮರೆಯಬಾರದು.
ಸಾಮಾನ್ಯ ಬುದ್ಧಿಶಕ್ತಿ ಪಡೆದ ಮಗು ಸಹ
ಏಕಕಾಲದಲ್ಲಿ ಐದು ಭಾಷೆಯನ್ನು ಕಲಿಯಬಹುದು. ಮಗುವಿನ
ಭಾಷಾಸಂಪತ್ತು ಔನ್ನತ್ಯಕ್ಕೇರಲು, ಅವೆಲ್ಲವನ್ನೂ
ಕಲಿಸಬಹುದು. ಆದರೆ ಶಿಕ್ಷಣದ
ಮಾಧ್ಯಮ ಮಾತ್ರ ತಾಯಿನುಡಿಯಲ್ಲೇ ಸಾಗಬೇಕು.
ಶಿಕ್ಷಣ ವಿಜ್ಞಾನವೂ ಸಹ ಅದನ್ನೇ
ಸಾರುತ್ತದೆ.
ನಮ್ಮ
ಜಿಲ್ಲೆಯ ದಂಪತಿಗಳಿಬ್ಬರು ಮುಂಬಯಿಯಲ್ಲಿ
ಉನ್ನತ ಉದ್ಯೋಗದಲ್ಲಿದ್ದಾರೆ. ಅವರ ಮಕ್ಕಳು
ಅಲ್ಲಿಯೇ ಹುಟ್ಟಿ ಬೆಳೆಯುತ್ತಿದ್ದಾರೆ. ಮಕ್ಕಳಿಗೆ
ಕನ್ನಡದ ತಿಲಮಾತ್ರ ಸಂಪರ್ಕವಿಲ್ಲದ ಹಾಗೇ ಮನೆಯಲ್ಲೂ ಇಂಗ್ಲಿಶ್ ನಲ್ಲೆ ತಂದೆ ತಾಯಿಗಳು
ವ್ಯವಹರಿಸಿ, ಅವರನ್ನು ಶುದ್ಧ ಇಂಗ್ಲಿಶ್ ಮಕ್ಕಳನ್ನಾಗಿಸಿದ್ದಾರೆ. ಆ ಬಗೆಗೆ ಪಾಲಕರಿಗೆ
ಭಾರೀ ಹೆಮ್ಮೆಯೂ ಇದೆ. ಆದರೆ ತಮ್ಮ ಊರಿಗೆ
ಮಕ್ಕಳು ಬಂದಾಗ, ಕುಟುಂಬದ
ಹಿರಿಯರಿಗೆ, ಸ್ವಥಃ ಅಜ್ಜ ಅಜ್ಜಿಯಂದಿರಿಗೆ ತಮ್ಮ ಮೊಮ್ಮಕ್ಕಳೊಂದಿಗೆ ಸಂಭಾಷಿಸುವ, ಸಂವಾದಿಸುವ, ಮುದ್ದಾಡುವ
ಯಾವ ಅವಕಾಶವೂ ಇಲ್ಲದಂತೇ
ಮಾಡಿದ್ದು ಮಾತ್ರ ಅತ್ಯಂತ ಅನ್ಯಾಯ.
ಅವರೊಂದಿಗೆ
ಸಂಬಂಧಿಗಳು ಮಾತನಾಡಬೇಕೆಂದಿದ್ದಲ್ಲಿ, ಮಗುವಿನ ಪಾಲಕರೇ ದುಭಾಷಿಗಳ ಪಾತ್ರ ನಿರ್ವಹಿಸಬೇಕಾದ ಪರಿಸ್ಥಿತಿ
ಅಲ್ಲಿ ಉಂಟಾಗಿದೆ.
ಒಂದು ಭಾಷೆಯೆಂದರೆ ಕೇವಲ ಸಂಪರ್ಕ
ಮಾಧ್ಯಮವಲ್ಲ. ಭಾಷೆಯೊಂದು ಸಮುದಾಯದ
ಸಮಗ್ರ ಸಾಂಸ್ಕೃತಿಕ ಜನಾಂಗೀಯ
ಸಂಪತ್ತನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿರುತ್ತದೆ. ಭಾಷೆ ದೂರವಾದಲ್ಲಿ ಸಾವಿರ ವರ್ಷದ
ಚರಿತ್ರೆಯೇ ಮಣ್ಣುಗೂಡಿದಂತೆ. ದಕ್ಷಿಣ
ಆಫ್ರಿಕಾದ ಆದಿವಾಸಿ ಜನಾಂಗದ ಒಂದು ಭಾಷೆ ಕೇವಲ ಒಬ್ಬ
ವೃದ್ದನಲ್ಲಿ ನೆಲೆಸಿತ್ತು. ಕಳೆದವರ್ಷ
ವೃದ್ಧ ಸತ್ತ. ಅವನೊಂದಿಗೆ ಆ ಭಾಷೆಯೂ
ಶಾಶ್ವತವಾಗಿ ನಾಶವಾಯಿತು. ಕಳೆದ ಹತ್ತು ವರ್ಷಗಳಿಂದ ಅದೇ ವೃದ್ಧನಿಂದ ಆ ಭಾಷೆಯನ್ನು
ಸಂಶೋಧಕರು ಧ್ವನಿಮುದ್ರಿಸಿಕೊಂಡರು. ಆ ಮಟ್ಟಿಗೆ ಭಾಷೆಯ ಕುರುಹನ್ನು ದಾಖಲಿಸಿದರು.
ಪ್ರತಿ ವರ್ಷ್ ಜಗತ್ತಿನಲ್ಲಿ ಒಂದೆರಡು ಭಾಷೆ
ಸಾಯುತ್ತಿದೆಯಂತೆ.
ಸದ್ಯ ಕನ್ನಡದ
ಮಕ್ಕಳು ದಿನದಿಂದ ದಿನಕ್ಕೆ
ಕನ್ನಡದಿಂದ ದೂರಗೊಳ್ಳುವುದನ್ನು ಕಂಡರೆ,
ಇನ್ನು ಕೆಲವೇ ದಶಕಗಳಲ್ಲಿ ಕನ್ನಡ ಕೇವಲ ಆಡುನುಡಿಯಾಗಿ ಮಾತ್ರ ಉಳಿಯಬಹುದು,
ಎಂಬ ಶಂಖೆ ಮೂಡುತ್ತಿದೆ.
ʻʻ
ಸುಮʼʼ ತಾ- ೩-೯-೨೦೨೫.
2) ಕಾಲದ ಕಡಲಲ್ಲಿ ಕನ್ನಡದ
ದೋಣಿ.
ಕನ್ನಡವೆನೆ ಕುಣಿದಾಡುವುದೆನ್ನೆದೆ
ಕನ್ನಡವೆನೆ ಕಿವಿ ನಿಮಿರುವುದು||
ಕಾಮನ ಬಿಲ್ಲನು ಕಾಣುವ
ಕವಿಯೊಳು
ತೆಕ್ಕನೆ ಮನ ಮೈ ಮರೆಯುವುದು.|| ( ಕುವೆಂಪು )
ಕುವೆಂಪು ತಮ್ಮ ಹದಿಹರೆಯದಲ್ಲಿ ಆ ಕಾಲದ ಎಲ್ಲ ಶಿಕ್ಷಿತರಂತೇ ಇಂಗ್ಲಿಶ್
ವ್ಯಾಮೋಹಿಯಾಗಿದ್ದರಂತೆ. ತಮ್ಮ ಕಾಲೇಜ್ ಪ್ರಾರಂಭದಲ್ಲೇ
ಹತ್ತಾರು ಇಂಗ್ಲಿಶ್ ಪದ್ಯಗಳನ್ನು ರಚಿಸಿ, ತಮ್ಮ ಬೆನ್ನನ್ನೇ ತಾವು ತಟ್ಟಿಕೊಂಡಿದ್ದರಂತೆ. ಆಗ ಕಾಲೇಜಿಗೆ ಉಪನ್ಯಾಸ
ನೀಡಲೆಂದು ಆಗಮಿಸಿದ ಪ್ರಸಿದ್ದ ಐರಿಶ್ ಕವಿ, ಜೇಮ್ಸ ಕಸಿನ್ಸ,
ಎಂಬ ವ್ಯಕ್ತಿಯೆದುರು
ಧೈರ್ಯದಿಂದ ಹೋಗಿ ತಾವು ರಚಿಸಿದ
ಇಂಗ್ಲಿಶ್ ಕವನಗಳನ್ನು ತೋರಿಸಿದರಂತೆ. ಅವರು ಸೂಕ್ಷ್ಮವಾಗಿ ಕವನಗಳೆಲ್ಲವನ್ನು ಓದಿ, ಭೇಷ್
ಚೆನ್ನಾಗಿ ಬರೆದಿದ್ದೀಯ. ಆದರೆ ನಿನ್ನ
ಮಾತ್ರಭಾಷೆ ಯಾವುದು..? ಎಂದು ಕೇಳಿದರಂತೆ. ಕನ್ನಡ...!!
ಎಂದರು ಕುವೆಂಪು. ʻʻನಿನಗೆ ಇಂಗ್ಲಿಶ್
ಪರಭಾಷೆ. ಕಾವ್ಯ ಪ್ರಾಮಾಣಿಕವಾಗಿ, ಯಶಸ್ವೀಯಾಗಿ
ಮೂಡುವುದು ಮಾತೃಭಾಷೆಯಲ್ಲಿ ಮಾತ್ರ.ನಿನ್ನ ಭಾಷೆಯಲ್ಲಿ ನೀನು ಬರೆ. ನಿನ್ನ
ಭಾಷೆಗೂ ಗೌರವ. ನಿನಗೂ ಸಹ, ʼʼ
ಎಂದರಂತೆ. ಕುವೆಂಪುವಿಗೆ ಆಗ ಜ್ಞಾನೋದಯವಾಯಿತು. ನಂತರದಲ್ಲಿ
ಅವರ ಕನ್ನಡದ ಸಾಧನೆ ಮಹಾಕಾವ್ಯ ಮಹಾಕಾದಂಬರಿ ಗಳ
ಸೃಷ್ಟಿಯ ಜೊತೆಗೆ ಜ್ಞಾನಪೀಠದೆತ್ತರಕ್ಕೆ ಏರಿದ್ದು,
ಇತಿಹಾಸದಲ್ಲಿ ದಾಖಲೆಯಾಯಿತು. ಅವರ ಕೃತಿಗಳು ಭಾರತೀಯ
ಭಾಷೆಯಲ್ಲದೇ ಇಂಗ್ಲಿಶ್ ಭಾಷೆಗೂ ದಾಂಗುಡಿಯಿಟ್ಟು, ವಿಶ್ವದ ಗಮನಸೆಳೆಯಿತು.
ಭಾಷೆ ಕೇವಲ ಸಂಪರ್ಕ
ಸಾಧನವಲ್ಲ. ನುಡಿಯಾಡುವವನು ತಿಳಿದಿರಲಿ,
ತಿಳಿಯದಿರಲಿ, ಸಾವಿರಾರು ವರ್ಷದ ಸ್ಮೃತಿಯನ್ನು
ತಲೆಮಾರಿಂದ ತಲೆಮಾರಿಗೆ ದಾಟಿಸುವ
ಮಾಧ್ಯಮವಾಗಿ ಆತ ಪಾತ್ರ ನಿರ್ವಹಿಸುತ್ತಾನೆ. ಒಂದೊಂದು
ಶಬ್ದವೂ ತನ್ನ ಒಡಲಲ್ಲಿ ಅರ್ಥವೊಂದನ್ನಲ್ಲದೇ ಜನಾಂಗೀಯ
ಸ್ಮೃತಿಯನ್ನು ಹುದುಗಿಸಿಕೊಂಡು ಸಾಗುತ್ತಿರುತ್ತದೆ. ಅದೇ ಕಾರಣಕ್ಕೇ ಭಾಷೆಯನ್ನು
ಕೊಲ್ಲುವುದು ಅಂದರೆ, ಒಂದು ಸಂಸ್ಕೃತಿಯನ್ನೇ ನಾಶವಾಗಿಸಿದಂತೆ
ಎಂಬ ನಾಣ್ಣುಡಿಯೇ ಸೃಷ್ಟಿಯಾಗಿದೆ.
ಕೆಲವು ವರ್ಷಗಳಿಂದ
ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಗೆಗೆ
ಎದ್ದಿರುವ ಬೊಬ್ಬೆಯನ್ನು ಕಂಡಾಗ ಒಮ್ಮೊಮ್ಮೆ ರೇಜಿಗೆಯೆನ್ನಿಸುತ್ತದೆ. ನಮ್ಮ ರಾಜ್ಯದಲ್ಲಿದ್ದಷ್ಟು ಕನ್ನಡಪರ
ಸಂಘಟನೆಗಳು ಬಹುಶಃ ಬೇರಾವ ರಾಜ್ಯದಲ್ಲೂ ಇಲ್ಲ.
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಕಾವಲು
ಸಮಿತಿ, ಕನ್ನಡ ಸಂಸ್ಕೃತಿ
ಇಲಾಖೆ, ಕನ್ನಡ ಪುಸ್ತಕ
ಪ್ರಾಧಿಕಾರ, ಕನ್ನಡ ಶಾಸ್ತ್ರೀಯ
ಭಾಷಾ ಸಂಸ್ಥೆ, ಜೊತೆಗೆ
ರಾಜ್ಯಾದ್ಯಂತ ಕನ್ನಡ ಸಂಘಟನೆಗಳು,
ಇಷ್ಟಿದ್ದರೂ ಕನ್ನಡ ಅಳಿವಿನಂಚಿನಲ್ಲಿದೆ ಎಂಬ ಭಯತ್ರಸ್ತ ಸ್ಥಿತಿಯನ್ನು
ನಿರ್ಮಿಸಿದ್ದೇವೆ.
ನಮ್ಮ ಕನ್ನಡ ರಾಜಧಾನಿ ಬೆಂಗಳೂರು
ಕೇವಲ ಕರ್ನಾಟಕದ ರಾಜಧಾನಿಯಲ್ಲ.
ವಿಶ್ವ ಭೂಪಟದಲ್ಲಿ ಮಿಂಚುತ್ತಿರುವ ಅಂತಾರಾಷ್ಟ್ರೀಯ ವಿದ್ಯುನ್ಮಾನ
ರಾಜಧಾನಿಯಾಗಿ ಗುರುತಿಸಲ್ಪಡುತ್ತಿರುವುದು ನಮ್ಮ ಹೆಗ್ಗಳಿಕೆ ಯಾದರೂ,
ಕನ್ನಡ ಮಾತ್ರ 26 ಪ್ರತಿಶತಕ್ಕೆ ಇಳಿದಿರುವುದು
ಭಯ ತರುವ ಆತಂಕಕ್ಕೀಡುಮಾಡುವ ವಿದ್ಯಮಾನವಾಗಿದೆ. ಲೇಖಕ ಬರಗೂರರ ಮಾತು ಇಲ್ಲಿ ಸ್ಮರಣಾರ್ಹ.
ʻʻ ಇಲ್ಲಿರುವ ಭಾಷಾ ಅಲ್ಪಸಂಖ್ಯಾತರು
ತಮ್ಮ ಭಾಷೆಯನ್ನು ಕಾಯ್ದುಕೊಂಡು, ಕನ್ನಡ ಕಲಿತು
ಸಾಮಾಜಿಕವಾಗಿ ತೆರೆದುಕೊಳ್ಳಬೇಕಿತ್ತು. ಸಾಮಾನ್ಯವಾಗಿ
ನಮ್ಮ ರಾಜ್ಯಕ್ಕೆ ವಲಸೆ ಬರುವವರು ಉದ್ಯೋಗ ಮತ್ತು ವ್ಯಾಪಾರಕ್ಕೆ ಬಂದಿರುತ್ತಾರೆ. ಕರ್ನಾಟಕ
ಜನರು ಖಾಲಿಬಿಟ್ಟ ಶ್ರಮ ಕ್ಷೇತ್ರಗಳಿಗೆ ಅನಾಯಾಸವಾಗಿ
ಅನ್ಯಭಾಷಿಕರು ಪ್ರವೇಶ ಮಾಡಿದರು.
ಕೆಲವರು ವ್ಯಾಪಾರ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಿದರು.
ಅವರಿಗೆ ಇಲ್ಲಿ ಕನ್ನಡ ಬಾರದೆಯೂ
ಜೀವಿಸಲು ಸಾಧ್ಯವಾಗಲು, ಕನ್ನಡಿಗರೇ ಅವರ ಭಾಷೆ ಕಲಿತಿದ್ದು
ಕಾರಣವಾಯಿತು. ವ್ಯಾಪಾರಿಗಳು ಸಹಜವಾಗಿ ಬಳಕೆದಾರರ
ಭಾಷೆ ರೂಢಿಸಿಕೊಳ್ಳುತ್ತಾರೆ. ಇಲ್ಲಿ ಕನ್ನಡಿಗರು ವ್ಯಾಪಾರಿಗಳ
ಭಾಷೆಯನ್ನು ರೂಢಿಸಲು ಹಿಂದೇಟು ಹಾಕಲಿಲ್ಲ.
ಅವರು ಕನ್ನಡ ಕಲಿಯದಿರಲು ಅವರಷ್ಟೇ
ಕನ್ನಡಿಗರೂ ಕಾರಣ. ಕನ್ನಡಿಗರು
ಕನ್ನಡಪರ ಪರಿಸರವನ್ನು ಪ್ರೀತಿಯಿಂದ ನಿರ್ಮಾಣ
ಮಾಡಿ, ಎಲ್ಲರನ್ನೂ ಒಳಗೊಳ್ಳುವುದು ಉತ್ತಮ
ಹೆಜ್ಜೆಯಾಗುತ್ತದೆ. ʼʼ
ದೇಶದ ಎಲ್ಲ ರಾಜ್ಯಗಳನ್ನೂ ಆಕರ್ಷಿಸುವುದರೊಂದಿಗೆ, ವಿಶ್ವದ
ಅಸಂಖ್ಯ ದೇಶಗಳನ್ನೂ ತನ್ನ ಮಡಿಲಿಗೆ
ಸೆಳೆದುಕೊಳ್ಳುತ್ತಿರುವ ಈ ಉದ್ಯಾನ
ನಗರಿ, ಅಸಂಖ್ಯ ಭಾಷಾ ಪ್ರಬೇಧಗಳನ್ನೂ ಆಹ್ವಾನಿಸಿದ್ದು ಪ್ರತಿ
ಭಾಷೆಗೆ ಒಂದೊಂದು ನಗರವನ್ನೇ
ನಿರ್ಮಾಣ ಮಾಡಿದ್ದು ಜೀರ್ಣಿಸಿ ಕೊಳ್ಳಲಾಗದ
ವಾಸ್ತವ. ಅದರಲ್ಲೂ ರಾಷ್ಟ್ರದ
ಸಂಪರ್ಕಭಾಷೆಯಾಗಿ ಹಿಂದಿಯನ್ನೇ ಹಿಂಬಾಗಿಲಲ್ಲಿ
ತುರುಕುವ ಹುನ್ನಾರ, ಸ್ಥಳೀಯ
ಭಾಷೆಯ ಪ್ರಾಮುಖ್ಯವನ್ನು ಮತ್ತಷ್ಟು
ಕುಗ್ಗಿಸಿದೆ.
ತೊಂಭತ್ತರ ದಶಕದ ಜಾಗತೀಕರಣದ ಮಹಾಪ್ರವಾಹದಲ್ಲಿ, ದೇಶದ ಚಿತ್ರಣವೇ ಬದಲಾಯಿತು.
ವಿಜ್ಞಾನ ತಂತ್ರಜ್ಞಾನ, ವಿದ್ಯುನ್ಮಾನ,
ಕೈಗಾರಿಕೀಕರಣ, ಮುಕ್ತ ವ್ಯಾಪಾರೀ ಕರಣದ ಗದ್ದಲದಲ್ಲಿ, ಸ್ಥಳೀಯ
ಸಂಸ್ಕೃತಿ ಭಾಷೆ, ಕಲೆ ಸಾಹಿತ್ಯ ಕೈಗಾರಿಕೆ
ಆರ್ಥಿಕತೆ ಎಲ್ಲವೂ ಪುನರ್ವಿಮರ್ಶಿತವಾಗಿ, ಹೊಸ ರೋಮಾಂಚನದಲ್ಲಿ, ಮೈಮರೆತ
ಸಂದರ್ಭದಲ್ಲೇ ಕನ್ನಡದಂತಹ ಭಾರತೀಯ ಏಲ್ಲ
ಸ್ಥಳೀಯ ಭಾಷೆಗಳು ಕಾದ ಬಾಣಲೆಯ ಮೇಲೆ ಕುಳಿತು ನರಳುವಂತಾಯಿತು.
ನಮ್ಮ ಶಿಕ್ಷಣ ಕ್ರಮೇಣ
ಸಂಸ್ಕೃತಿ ನಿಷ್ಠತೆಯಿಂದ, ದೂರಗೊಂಡು, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ
ಕಾರಖಾನೆಯಾಗಿ ರೂಪುಗೊಂಡಿದ್ದು ಹೊಸ ಕಾಲದ
ಅವಶ್ಯಕತೆಯಾಯಿತು. ರಾಷ್ಟ್ರೀಯ ಬಹುರಾಷ್ಟ್ರೀಯ
ಕಂಪನಿಗಳಿಗೆ ಬೇಕಾಗುವ ಶಿಕ್ಷಿತ
ಕೂಲಿಗಳ ಉತ್ಪಾದನೆ ಅನಿವಾರ್ಯವಾಯಿತು. ಅದಕ್ಕೆ
ತಕ್ಕ ವಿಶ್ವ ವ್ಯಾಪಾರ ಭಾಷೆಯಾದ
ಇಂಗ್ಲಿಶ್ ಮತ್ತೆ ಜಗಮಗಿಸಿತು.
ಯಾರು ಇಂಗ್ಲಿಶ್ ವಾಚಾಳಿಯೋ ಅವನಿಗೆ
ತನ್ನಂತಾನೆ ಆದ್ಯತೆ ದೊರೆಯಿತು.
ಸಹಜವಾಗಿ ಇಡೀ ಸಮುದಾಯಕ್ಕೆ
ಇಂಗ್ಲಿಶ್ ಸಮೂಹ ಸನ್ನಿಯ ಸಾಂಕ್ರಾಮಿಕತೆ ಪಸರಿಸಿತು.
ನರ್ಸರಿಯಿಂದಲೇ ಇಂಗ್ಲಿಶ್
ಭಾಷೆಯನ್ನು ರೂಢಿಸಿ ಉದ್ಯೋಗ
ಮಾರುಕಟ್ಟೆಯ ಸಂಪನ್ಮೂಲವನ್ನು ಸೃಷ್ಟಿಸಲು
ಪೈಪೋಟಿಯೇ ಪ್ರಾರಂಭಗೊಂಡು, ಮಾತ್ರಭಾಷಾ
ಶಿಕ್ಷಣದ ವಾತಾವರಣವನ್ನೇ ಕುಲಗೆಡಿಸುವಂತಾದುದು, ವಿಷಾದನೀಯ. ಒಂದು ರಾಜ್ಯದ
ದೇಶದ ಚರಿತ್ರೆಗೆ ಅನ್ಯಾಯ
ಗೈಯ್ಯುತ್ತಿರುವುದನ್ನು ನಿಸ್ಸಹಾಯಕರಾಗಿ ನಾವು ನೋಡುತ್ತಿದ್ದೇವೆ.
ಬದಲಾವಣೆ ಕಾಲದ ಸಹಜ ಪ್ರಕ್ರಿಯೆ.
ಸಂಸ್ಕೃತಿಯೂ ಅದಕ್ಕೆ ಹೊರತಲ್ಲ.
ಸದ್ಯದ ಅಭಿವೃದ್ಧಿ ಎಂಬ ವಿದ್ಯಮಾನ, ಇದು ಪ್ರಗತಿಯೋ ಪತನವೋ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ. ಹೊಸ ಕಾಲದ ಅನಿವಾರ್ಯತೆ,
ಬದಲಾದ ಜೀವನ ಕ್ರಮ, ಸಾಂಪ್ರದಾಯಿಕ
ಮನಸ್ಸನ್ನು ವಿಚಲಿತಗೊಳಿಸುತ್ತಲೇ, ಚಿಂತನೆಗೂ
ಈಡುಮಾಡುತ್ತದೆ. ಸಂಸ್ಕೃತಿ ಭಾಷೆ ಕಲೆ ಮತ್ತು ಪರಿಸರವನ್ನು ಸುಸ್ಥಿರವಾಗಿಸತ್ತಲೇ ಹೊಸ ಕಾಲದ ಸವಾಲುಗಳನ್ನು
ಎದುರಿಸುವ ಮನಸ್ಥಿತಿ ನಮ್ಮೊಳಗೆ
ಹರಳು ಗಟ್ಟಬೇಕು. ಸದ್ಯದ ವರ್ತಮಾನ
ವಿಚಿತ್ರ ಅಯೋಮಯತೆಯಲ್ಲಿ ನಮ್ಮನ್ನು
ನೂಕಿದೆ. ಆಧುನಿಕತೆ ವೈಜ್ಞಾನಿಕತೆ,
ಜಾಗತೀಕರಣಗಳನ್ನೆಲ್ಲವನ್ನೂ ತನ್ನದಾಗಿಸಿಕೊಳ್ಳುತ್ತ, ತನ್ನ ಸಾಂಸ್ಕೃತಿಕ ಸಂಪತ್ತನ್ನೂ
ಜೋಪಾನವಾಗಿ ರಕ್ಷಿಸಿಕೊಳ್ಳುವಲ್ಲಿ ಸಾಫಲ್ಯ
ಸಾಧಿಸಿದ ಜಾಪಾನ್, ಇಸ್ರೇಲ್
ನಂತಹ ದೇಶವನ್ನು ನಾವು ಮತ್ತೊಮ್ಮೆ ಗಮನಿಸಬೇಕಾಗಿದೆ.
ʻʻಸುಮʼʼ
ʻʻಸುಮನಾಂಬರʼʼ ಅಂಕಣಕ್ಕೆ.
೪- ೯ – ೨೦೨೫.
3) ʻʻಕನ್ನಡಾ ಕನ್ನಡಾ - ಬನ್ನಿ ನಮ್ಮ ಸಂಗಡಾʼʼ
ಉತ್ತರ ಕನ್ನಡ ಜಿಲ್ಲೆಯ
ಸುಪ್ರಸಿದ್ದ ಸೋದೇ ಸಂಸ್ಥಾನದ ಅರಸ, ರಾಮಚಂದ್ರ ನಾಯಕ ನ
ಮಗಳು, ಬೆಳಗಾವಿ ಜಿಲ್ಲೆಯ
ಅರಸನ ಮಡದಿಯಾಗುತ್ತಾಳೆ. ಕನ್ನಡ ಮತ್ತು ಸಂಸ್ಕೃತ ಸಾಹಿತ್ಯರಚನೆಯಲ್ಲಿ ಪರಿಣತಳಾದ
ಅವಳು, ರಾಜ್ಯದ ಮಹಾರಾಣಿಯಾಗಿ,
ವಿಶ್ವದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೈನ್ಯ
ಸಂಘಟಿಸಿ,(1511)ದಾಖಲೆ ನಿರ್ಮಿಸಿದವಳು. ಶಿವಾಜಿಯಂತಹ
ಬಲಿಷ್ಠ ಚಕ್ರವರ್ತಿಯನ್ನೇ ಸೋಲಿಸಿದ ವೀರ ಮಹಿಳೆಯಾಗಿದ್ದ ಅವಳು, ನಮ್ಮ ಜಿಲ್ಲೆಯ ಕುವರಿ ಎಂಬುದೇ ರೋಮಾಂಚನ
ಮೂಡಿಸುವ ಸಂಗತಿ. ಅವಳೇ ಬೆಳುವಡಿ ಮಲ್ಲಮ್ಮ.
ಇವಳ ಹೆಸರನ್ನು ಎಲ್ಲರೂ
ಕೇಳಿರುತ್ತಾರೆ. ಆದರೆ ಅವಳು ನಮ್ಮ
ಜಿಲ್ಲೆಯ ಮಗಳು ಎಂಬ ಅರಿವು ಹೆಚ್ಚಿನ
ಜನರಿಗಿಲ್ಲ. ಶಿವಾಜಿಯ ಲಕ್ಷ ಸೈನಿಕರ
ವಿರುದ್ಧ ೨೭ ದಿನ ಸೆಣಸಿದ
ಮಲ್ಲಮ್ಮ, ರಾಣಿಯೊಬ್ಬಳು ಮಾಡಿದ ಸುದೀರ್ಘ ಹೋರಾಟ,
ವಿಶ್ವದಲ್ಲೇ ದಾಖಲೆ ಎಂಬುದನ್ನು
ನಾವು ಸ್ಮರಿಸಲೇ ಬೇಕು.
ಕನ್ನಡ ಕೇವಲ ಭಾಷೆಯಲ್ಲ. ಅದು ಈ ಮಣ್ಣಿನ
ಹೆಸರು. ರಾಜ್ಯದ ಹೆಸರು.
ಕನ್ನಡ ಕರ್ನಾಟಕ, ಕರುನಾಡು,
ಎಂದೆಲ್ಲ ಮಹಾಭಾರತ ಕಾಲದಿಂದಲೂ ಹೆಸರಾದದ್ದು, ಈ
ರಾಜ್ಯ. ಕರು ನಾಡು ಎಂದರೆ ಫಲವತ್ತಾದ ಕಪ್ಪುಮಣ್ಣಿನ ಎತ್ತರದ ಭೂಮಿ ಎಂದೇ ಅರ್ಥೈಸಲಾಗಿತ್ತು. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್
ಎಂದು ಕವಿರಾಜ ಮಾರ್ಗದಂತಹ ಕೃತಿಯಲ್ಲೇ
ದಾಖಲಾದ, ಇಲ್ಲಿಯ ಜನರ ವರ್ಣನೆ
ಕನ್ನಡದ ಮಹತ್ವವನ್ನು ಸಾರುತ್ತದೆ.
ನಾಲ್ಕನೆಯ ಶತಮಾನದಲ್ಲೇ
ಕನ್ನಡದ ಮೊಟ್ಟಮೊದಲ ಸಾಮ್ರಾಜ್ಯ
ಸ್ಥಾಪಿಸಿದ ಕದಂಬರು, ವೈಭವಪೂರ್ಣವಾಗಿ, ಆಚರಿಸುತ್ತಿದ್ದ
ಮಧುಮಹೋತ್ಸವದ ವರ್ಣನೆಯನ್ನು ನಾವು ಮಹಾಕವಿ ಪಂಪನ ಮಹಾಭಾರತದಲ್ಲಿ ನೋಡುತ್ತೇವೆ.
ಆ ವರೆಗೆ ದೇಶದ ಯಾವ ಸಾಮ್ರಾಜ್ಯವೂ
ಅಂಥಹ ಉತ್ಲವವನ್ನು ಜರುಗಿಸಿದ
ದಾಖಲೆ ದೊರೆಯುವುದಿಲ್ಲ. ನಂತರದಲ್ಲಿ
ವಿಜಯನಗರ ಸಾಮ್ರಾಜ್ಯದ ದಸರಾ ಮಹೋತ್ಸವ, ಮೈಸೂರು
ಅರಸರು ಪ್ರಾರಂಭಿಸಿದ ದಸರಾ ಆಚರಣೆಗಳು
ಪ್ರಸಿದ್ಧವಾಯಿತು.
ಕದಂಬರು ಮೈಗೂಡಿಸಿಕೊಂಡಿದ್ದ ಯುದ್ಧತಂತ್ರ,
ಆಢಳಿತ ಪದ್ಧತಿ ಕರಾಕರಣೆ,
ಮತ್ತು ಜನಾಂಗೀಯ ಸಾಮರಸ್ಯದಂತಹ
ಗುಣಗಳು, ನಂತರದ ದೊರೆಗಳಿಗೆ
ಮಾದರಿಯಾಯಿತು . ಕದಂಬರ ಆಸ್ಥಾನಕ್ಕೆ ಉಜ್ಜಯನಿಯ
ದೊರೆಯ ರಾಯಭಾರಿಯಾಗಿ, ಬನವಾಸಿಗೆ ಮಹಾಕವಿ
ಕಾಳಿದಾಸ ಆಗಮಿಸಿದ್ದ ಎಂಬ ಸಂಗತಿ ರೋಮಾಂಚನ
ಮೂಡಿಸುತ್ತದೆ.
ಇನ್ನೊಬ್ಬಳು ಮಹಾರಾಣಿ
ಚನ್ನಭೈರಾದೇವಿ. ಅವಿರತವಾಗಿ ಅರ್ಧಶತಮಾನ
ಕಾಲ ಗೇರುಸೊಪ್ಪಾ ರಾಜ್ಯವನ್ನಾಳಿ ಜಾಗತಿಕ ದಾಖಲೆ
ನಿರ್ಮಿಸಿದ ಛಲಗಾರ್ತಿ. ಅವಳ ಕಾಲದ ವೈರಿಗಳಾದ
ಪೋರ್ಚುಗೀಸರ ವಿರುದ್ದ ನಿರಂತರ
ಹೋರಾಟಗೈದು, ಅವರನ್ನೂ ಮಣಿಸಿದ ಹೋರಾಟ ಅವಳದ್ದು. ಇತ್ತೀಚಿನ
ವರ್ಷದಲ್ಲಿ ಅವಳ ಬದುಕು, ಆಡಳಿತ
ಹೋರಾಟಗಳ ಸುಂದರ ವರ್ಣನೆಯಿಂದ
ಪ್ರಸಿದ್ಧವಾದ ಕಾದಂಬರಿ (ಲೇ- ಗಜಾನನ
ಶರ್ಮ} ಮರೆತುಹೋದ ಮಹಾರಾಣಿಯನ್ನು
ಮತ್ತೆ ಜನಜನಿತ ಗೊಳಿಸಿತು. ನಮ್ಮ ಜಿಲ್ಲೆಯ ಈ ರಾಣಿ,
ಇಂದು ಇಡೀ
ದೇಶದ ಕಣ್ಮಣಿಯಾಗಿದ್ದು, ಅಭಿಮಾನ ತರುವ ಘಟನೆ.
ಹನ್ನೆರಡನೆಯ ಶತಮಾನದ
ಸುಪ್ರಸಿದ್ಧ ಅನುಭಾವೀ ಕವಿ, ಅಲ್ಲಮಪ್ರಭು, ಉತ್ತರಕನ್ನಡ
ಜಿಲ್ಲೆಯ ಶಿರಸಿ ತಾಲೂಕಿನ ಕರೂರು ಗ್ರಾಮದವನು, ಎಂಬ ಸತ್ಯವನ್ನು ಕೆಲವು ವರ್ಷಗಳ ಹಿಂದೆಯೇ
ಕನ್ನಡದ ಮಹತ್ವಪೂರ್ಣ ಸಂಶೋಧಕ
ಡಾ-ಎಂ.ಎಂ. ಕಲಬುರ್ಗಿ ತಮ್ಮ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖಿಸುತ್ತಾರೆ. ಅಲ್ಲಮ ಕವಿಯನ್ನು ಸದಾ ಸ್ಮರಣೆಯಲ್ಲಿರುವಂತೇ ಮಾಡುವ ಕರೂರಿನ ಶ್ರೀ ಪ್ರಭು
ದೇವಾಲಯ ಈಗಲೂ ಸುಸ್ಥಿತಿಯಲ್ಲಿದೆ. ಅಲ್ಲಮನ
ಅನುಭಾವೀ ವಚನಗಳು, ಕನ್ನಡ ಭಾಷೆ ನೀಡಿದ ಅದ್ಭುತ
ಆಧ್ಯಾತ್ಮಿಕ ಸಂಪತ್ತಾಗಿ, ಇದೀಗ ಇಂಗ್ಲಿಶ್ ಮತ್ತಿತರ
ಭಾಷೆಗಳಿಗೂ ಅನುವಾದಗೊಂಡು, ಜಾಗತಿಕ ನೆಲೆಗೆ
ದಾಂಗುಡಿಯಿಡುತ್ತಿದೆ.
ಶತಮಾನಗಳ ಪೂರ್ವದಲ್ಲೇ
ಹೊನ್ನಾವರದ ನಗಿರೆ ಸುಬ್ಬ ಎಂಬ ಯಕ್ಷಕವಿ ಸೃಷ್ಟಿಸಿದ
ಹಲವಾರು ಯಕ್ಷಗಾನ ಕೃತಿಗಳು, ಈಗಲೂ ಯಕ್ಷಪ್ರಿಯರ
ಹೃದಯದಲ್ಲಿ ನಲಿಯುತ್ತಿವೆ.
ಹತ್ತೊಂಭತ್ತನೆಯ ಶತಮಾನದ ಪ್ರಾರಂಭದಲ್ಲಿ
ಕನ್ನಡ ಎಂಬ ಭಾಷೆ, ಸಂಸ್ಕೃತ ಇಂಗ್ಲಿಶ್ ಭಾಷೆಗಳ ಪ್ರಖರತೆಯಲ್ಲಿ
ಕಳೆಗುಂದಿದಂತಹ ಕಾಲದಲ್ಲಿ, ಬ್ರಿಟಿಶ್, ಜರ್ಮನ್ ದೇಶಗಳ, ಭಾಷೆ ಇತಿಹಾಸ
ಮತ್ತು ಸಂಸ್ಕೃತಿ ಸಂಶೋಧಕರು, ಭಾಷೆ
ಕಲಿತು ಕನ್ನಡದ ಸತ್ವ, ಸಾಮರ್ಥ್ಯದ ಪರಿಚಯವನ್ನು
ಕನ್ನಡಿಗರಿಗೇ ಮಾಡಿಸಿದ್ದು ಕನ್ನಡದ
ಯೋಗ. ಬಿ.ಎಲ್. ರೈಸ್, ರೆವರೆಂಡ್
ಕಿಟ್ಟೆಲ್, ಬುಕಾನಿನ್ ರಂಥ ವಿದೇಶೀ ಸಂಶೋಧಕರ
ಬಗೆಗೆ ಬರೆಯ ಹೊರಟರೆ
ಗ್ರಂಥವೇ ಸೃಷ್ಟಿಯಾದೀತು.
ಕರ್ನಾಟಕದ ಪ್ರತಿಜಿಲ್ಲೆಯೂ
ಸಾಹಿತ್ಯ ಸಂಸ್ಕೃತಿ ಕಲೆಯ ಅನನ್ಯತೆಯನ್ನು
ಹೊಂದಿದೆ. ಉತ್ತರಕನ್ನಡವನ್ನೇ ದೃಷ್ಟಿಯಲ್ಲಿಟ್ಟು ನೋಡಿದರೂ
ಸಾಕು, ಹಲವು ವಿಶಿಷ್ಟ ದಾಖಲೆಗಳನ್ನು ಹೊಮ್ಮಿಸತೊಡಗುತ್ತವೆ. ಕನ್ನಡದ
ಪ್ರಪ್ರಥಮ ಸಾಮಾಜಿಕ ನಾಟಕ ʻʻಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ
ʼʼ ವಾದರೆ, ʻʻಸಂಸಾರ
ಸುಖವೋ ದುಃಖವೋ,ʼʼ ಎಂಬ ಸಾಮಾಜಿಕ ಕಾದಂಬರಿ ( ಶಿರಸಿ – ಶರ್ಮಾ) ಕನ್ನಡ ಕಾದಂಬರಿ ಪ್ರಕಾರದ ಪ್ರಥಮ ಎಂದೆನ್ನಿಸಿಕೊಂಡಿದೆ.
ಪರಂಪರೆಯ ಪ್ರಜ್ಞೆಯಿಲ್ಲದ
ಮನಸ್ಸು ಎಂದೂ ಭವಿಷ್ಯವನ್ನು
ಸೃಷ್ಟಿಸಲಾರದು. ವರ್ತಮಾನಕ್ಕೆ ಬೆಲೆಯೇ ಇಲ್ಲದಂತಾಗಬಹುದು. ಕನ್ನಡ ಮತ್ತು
ಕರ್ನಾಟಕದ ಕಾಲಯಂತ್ರದಲ್ಲಿ ಕುಳಿತು
ಹಿಂದಕ್ಕೆ ಚಲಿಸತೊಡಗಿದರೆ, ಅದೊಂದು
ಬೆರಗಿನ ಲೋಕ. ವಿಸ್ಮಯದ ತವರೂರು. ಅಸಂಖ್ಯ
ಅನುಭವಗಳ ಗಣಿ.
ಕನಿಷ್ಠ ಕನ್ನಡ ತಿಂಗಳಾದ ನವೆಂಬರ್ ನಲ್ಲಾದರೂ, ಕನ್ನಡದ
ಶ್ರೀಮಂತ ಪರಂಪರೆಯ ಧ್ಯಾನದಲ್ಲಿ
ನಿರತರಾದರೆ ಸಾಕು, ಕನ್ನಡ ಸಶಕ್ತಗೊಂಡೀತು.
ʻʻಸುಮನಾಂಬರʼʼ ಅಂಕಣಕ್ಕೆ,
ತಾ- ೬-೯-೨೦೨೫. ʻʻ ಸುಮʼʼ
4) ಅಭಿಮಾನವೊಂದೇ ಸಾಲದು,
ಕರ್ನಾಟಕದಲ್ಲಿ ನವೆಂಬರ್ ಬಂದರೆ ಸಾಕು, ಕ್ಲೀಶೆಯಾಗುವಷ್ಟು ಕನ್ನಡದ ಬಗೆಗೆ ಕಿರುಚಾಟ
ಮೊಳಗುತ್ತದೆ. ಎಲ್ಲೆಂದರಲ್ಲಿ ಕನ್ನಡದ ಕಾರ್ಯಕ್ರಮ,
ಬಾಜಾಬಜಂತ್ರಿ. ಸಾವಿರ ಸಾವಿರ ಭಾಷಣಗಳು, ಹಾಡು ನೃತ್ಯಗಳು. ತಿಂಗಳು
ಮುಗಿಯುವುದೇ ತಡ ಮೌನ ಗಾಢ
ಮೌನ. ಇಂಗ್ಲಿಶ್ ಎಂಜಲು ಸಿಡಿಸಿದವ ಮಾತ್ರ ಬುದ್ಧಿವಂತ. ಪ್ರತಿಷ್ಠಿತ.
ಇಂಗ್ಲಿಶ್ ಶಿಕ್ಷಣ ಮಾತ್ರ ಘನಂದಾರಿ ಉದ್ಯೋಗ
ನೀಡಬಲ್ಲದು ಎಂಬ ಹುಸಿಭ್ರಮೆಯಲ್ಲೇ ತೊಳಲಾಡುತ್ತಿರುವ ಜನತೆ, ಇಂಗ್ಲಿಶ್ ಕಲಿತ ಅದೆಷ್ಟು
ಪ್ರತಿಶತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ
ಉದ್ಯೋಗ ದೊರಕಿದೆ ಎಂಬ ಅಂಕೆ ಸಂಖ್ಯೆಗಳನ್ನು
ಗಮನಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಹಾಗೆಂದು
ಇಂಗ್ಲಿಶ್ ಕಲಿಯಲೇ ಬಾರದೆಂದಿಲ್ಲ.
ಅದೂ ಒಂದು ಸಮೃದ್ಧ ಸಂಪದ್ಭರಿತ ಭಾಷೆ. ವಿಶ್ವಸಂಪರ್ಕಕ್ಕೆ ಬಹುಮುಖ್ಯ
ಮಾಧ್ಯಮ. ಆದರೆ ಮಗುವನ್ನು
ನರ್ಸರಿಪೂರ್ವದಿಂದಲೇ ಇಂಗ್ಲಿಶ್ ಮಾಧ್ಯಮಕ್ಕೆ
ತಳ್ಳಿ ಮಗುವನ್ನು ಇಂಗ್ಲಿಶ್
ಎರಕವನ್ನಾಗಿಸುವ ಹುಚ್ಚು ಮಾತ್ರ ಆತ್ಮಘಾತಕ.
ತಾಯ್ನೆಲದಲ್ಲಿ ತಾಯಿಭಾಷೆಯಿಂದ
ದೂರಗೈದು, ಭಿನ್ನ ಸಂಸ್ಕೃತಿಯ ಭಾಷೆಯಲ್ಲಿ
ಬೆಳೆಸುವುದು ಅಂದರೆ, ಕುಂಡದಲ್ಲಿ ಬೆಳೆಸುವ
ಬೋನ್ ಷೈ ಸಸ್ಯದಂತೇ, ಮಣ್ಣಿನ
ಸಂಸ್ಕಾರವಿಲ್ಲದ, ತಾಯ್ನೆಲದಲ್ಲಿ ಆಳವಾಗಿ
ಬೇರೂರದೇ ಅತಂತ್ರ ಮನೋಸ್ಥಿತಿಯ ವ್ಯಕ್ತಿಯನ್ನಾಗಿ ರೂಪಿಸಿ,
ಮಗುವಿನದ್ದೇ ಆದ ಮೂಲಭೂತ
ಸಂಸ್ಕೃತಿಯಿಂದ ದೂರಗೈದ ಮಹಾಪರಾಧ
ಪಾಲಕರದ್ದಾಗುತ್ತದೆ ಎಂಬುದನ್ನು ನಾವು ಅರಿಯ
ಬೇಕಿದೆ.
ಮಹರ್ಷಿ ಅರವಿಂದರ
ಹೆಸರನ್ನು ನಾವೆಲ್ಲ ಕನಿಷ್ಠ
ಕೇಳಿದ್ದೇವೆ. ಅವರ ತಂದೆ ಬ್ರಿಟಿಶ ಆಡಳಿತದ
ಕಾಲದ ಸುಪ್ರಸಿದ್ಧ ಅಲೋಪತಿ
ವೈದ್ಯರು. ಅವರು ಅದೆಷ್ಟು ಆಂಗ್ಲಸಂಸ್ಕೃತಿಗೆ ಮಾರುಹೋಗಿದ್ದರು
ಎಂದರೆ, ತಮ್ಮ ಮಕ್ಕಳಿಗೆ ಬಂಗಾಲೀ
ಮಾತೃಭಾಷೆ ಕಿವಿಗೂ ಬೀಳಬಾರದೆಂದು ಎಚ್ಚರ ವಹಿಸಿದ್ದರು. ಇಂಗ್ಲಿಶ್
ವಠಾರದಲ್ಲೆ ಅವರ ವಾಸವಿತ್ತು. ತಮ್ಮ ಮಗು ಅರವಿಂದನನ್ನು
ಪ್ರಾಥಮಿಕ ಹಂತದಲ್ಲೇ ಇಂಗ್ಲೆಂಡಿಗೆ
ಕಳುಹಿಸಿ ಇಂಗ್ಲಿಶ್ ಶಿಕ್ಷಣ ಕೊಡಿಸುತ್ತಾರೆ. ಅಲ್ಲಿಯೇ
ಅರವಿಂದರು ವಾಸಗೈದು, ಇಂಗ್ಲಿಶ್
ಲ್ಯಾಟಿನ್, ಗ್ರೀಕ್ ಭಾಷಾತಜ್ಞರಾಗಿ ಪ್ರಸಿದ್ಧರಾಗುತ್ತಾರೆ. ಆದರೆ ಅಲ್ಲಿಯೇ ಅವರು ಬಂಗಾಲಿ ಮತ್ತು ಸಂಸ್ಕೃತವನ್ನು ಆಳವಾಗಿ
ಅಭ್ಯಸಿಸಿ ತಮ್ಮ ಹದಿ ಹರೆಯದಲ್ಲೇ ಉಪನಿಷತ್
ಹಿನ್ನೆಲೆಯಲ್ಲಿ ಖಂಡಕಾವ್ಯ ರಚಿಸುತ್ತಾರೆ.
ಭಾರತಕ್ಕೆ ಬಂದು ಬ್ರಿಟೀಶ್ ವಿರೋಧಿಯಾಗಿ ಭಾರತೀಯ
ಸ್ವಾತಂತ್ರ್ಯ ಹೋರಾಟಕ್ಕೆ ಹೆಗಲು ಕೊಡುತ್ತಾರೆ.
ಭಾರತೀಯ ಆಧ್ಯಾತ್ಮಿಕ ತಾತ್ವಿಕ
ಪರಂಪರೆಗೆ ವೈಜ್ಞಾನಿಕ ಸ್ಪರ್ಶನೀಡಿ,
ಸಾವಿತ್ರಿ ಮಹಾಕಾವ್ಯವನ್ನು ಇಂಗ್ಲಿಶ್
ಭಾಷೆಯಲ್ಲಿ ರಚಿಸುತ್ತಾರೆ. ಅದು ವಿಶ್ವದ
ಆರನೆಯ ಮಹಾಕಾವ್ಯವಾಗಿ ಇಂದು ಬೆಳಗುತ್ತಿರುವುದನ್ನು ನಾವು ಮರೆತರೆ ಅದು ಬಹುದೊಡ್ಡ ಲೋಪ.
ನಮ್ಮ ಮಗು ಇಂಗ್ಲಿಶ್
ಒಂದಲ್ಲ, ಇನ್ನಷ್ಟು ವೈವಿಧ್ಯಮಯ ಭಾಷೆ ಕಲಿಯಲಿ.
ಆದರೆ ಮಾತ್ರಭಾಷೆಯಿಂದ ದೂರಾಗದಿರಲಿ.
ಮಾತ್ರಭಾಷೆಯಲ್ಲಿಯ ಪ್ರಭುತ್ವ ಮಾತ್ರ ವಿಶ್ವದ
ಯಾವುದೇ ಭಾಷೆಯನ್ನು ಆತ್ಮಸಾತ್
ಮಾಡಿಕೊಳ್ಳಬಹುದು. ಮಾತ್ರಭಾಷಾ ಮಾಧ್ಯಮದಲ್ಲಿ
ಕಲಿತ ನಮ್ಮ ಮಾಜಿ ಪ್ರಧಾನಿ
ನರಸಿಂಹ ರಾವ್ ದೇಶ ವಿದೇಶಗಳ ಹತ್ತಾರು ಭಾಷೆಗಳಲ್ಲಿ ತಜ್ಞತೆ
ಹೊಂದಿದ್ದರು, ಮಾಜೀ ರಾಷ್ಟ್ರಪತಿ
ಅಬ್ದುಲ್ ಕಲಾಮ್, ತಮ್ಮ ಮಾತೃಭಾಷೆ
ʻʻ ಕಂದಮಿಳಲ್ಲೇ ʼʼ ಕಲಿತು ಬಂದವರು.
ಕನ್ನಡಕ್ಕೆ ಬಹು ಅಮೂಲ್ಯ
ಸೇವೆ ಸಲ್ಲಿಸಿದ ವಿದೇಶೀ ಭಾಷಾತಜ್ಞ
ಬಿ.ಎಲ್. ರೈಸ್, ಭಾರತಕ್ಕೆ ಬಂದು ಕೇವಲ ಒಂದೇ ಒಂದು ತಿಂಗಳಲ್ಲಿ
ಕನ್ನಡ ಕಲಿತು, ಕನ್ನಡದಲ್ಲಿ ಭಾಷಣಗೈದ ಘಟನೆಗೆ
ಒಂದೂವರೆ ಶತಮಾನವೇ ಕಳೆದಿದೆ.
ರೆವರೆಂಡ್ ಕಿಟೆಲ್ ಜರ್ಮನಿಯಿಂದ
ಬಂದು ಕನ್ನಡ ಕಲಿತು,
ಕನ್ನಡದಲ್ಲೇ ಹತ್ತು ಹಲವು ಪದ್ಯ ಗದ್ಯ
ಕೃತಿಗಳನ್ನು ರಚಿಸುವುದರೊಂದಿಗೆ, ಕನ್ನಡಕ್ಕೆ
ಪ್ರಪ್ರಥಮವಾದ ಅತ್ಯಾಧುನಿಕ, ವೈಜ್ಞಾನಿಕ
ಕಿಟ್ಟೆಲ್ ಕನ್ನಡ – ಇಂಗ್ಲಿಶ್ ಶಬ್ದಕೋಶವನ್ನೇ
ಧಾರೆಯೆರೆದಿದ್ದು ಕನ್ನಡದ ಸೌಭಾಗ್ಯ.
ಆ ಕಾಲದಲ್ಲಿ ಕರ್ನಾಟಕದಲ್ಲಿ
ವಿಶ್ವವಿದ್ಯಾಲಯವೇ ಸ್ಥಾಪನೆಯಾಗಿರಲಿಲ್ಲ. ಕಿಟ್ಟೆಲ್ ರ
ಭಾಷೆ ಮತ್ತು ಸಾಹಿತ್ಯಿಕ
ಸಾಧನೆಗೆ ಜರ್ಮನ್ ವಿಶ್ವವಿದ್ಯಾಲಯ
ಡಾಕ್ಟರೇಟ್ ನೀಡಿ ಗೌರವಿಸುತ್ತದೆ.
ಕನ್ನಡ ಗಳಿಸಿದ ಮೊಟ್ಟ ಮೊದಲ
ಡಾಕ್ಟರೇಟ್ ಅದು ಎಂಬುದು
ವಿಶೇಷ.
ಬಿ.ಎಲ್. ರೈಸ್ ಕರ್ನಾಟಕವೊಂದಲ್ಲದೇ ಆಂಧ್ರ,
ಮಹಾರಾಷ್ಟ್ರ ರಾಜ್ಯದಾದ್ಯಂತ, ಪಾದಯಾತ್ರೆ ಗೈದು, ಸಾವಿರ ಸಾವಿರ ಸಂಖ್ಯೆಯಲ್ಲಿ ಶಾಸನಗಳನ್ನು
ಸಂಶೋಧಿಸಿ, ಅರ್ಥೈಸಿಸಿ ವ್ಯವಸ್ಥಿತವಾಗಿ ಪ್ರಕಟಿಸಿದ
ಅಮೋಘ ಸಾಧಕರು ಅವರು.
ಒಂದೆರಡು ಶತಮಾನಗಳಷ್ಟು ಹಿಂದೆ ಕನ್ನಡ ಅನಾಥಸ್ಥಿತಿಯಲ್ಲಿ ಬಳಲುತ್ತಿರುವಾಗ, ಅದರೊಳಗಿನ
ಚರಿತ್ರೆ ಮತ್ತು ಸಾಹಿತ್ಯಗಳ
ಸತ್ವಮತ್ತು ಮಹತ್ವಗಳನ್ನು ನಮಗೇ ತಿಳಿಸಿಕೊಟ್ಟ ವಿದೇಶೀ
ಭಾಷಾ ತಜ್ಞರನ್ನು ನಾವೆಂದಿಗೂ ಮರೆಯಬಾರದು.
ಕನ್ನಡದ ವಿಷಯದಲ್ಲಿ
ಧ್ಯಾನಿಸುವಾಗ, ಸುಪ್ರಸಿದ್ಧ ಪತ್ರಕರ್ತ
ದಿ. ಪಾಟೀಲ ಪುಟ್ಟಪ್ಪನವರನ್ನು ಮರೆಯಲು ಸಾಧ್ಯವೇ
ಇಲ್ಲ. ಬಹುದೀರ್ಘ ಪತ್ರಿಕಾ ಬದುಕಿನಲ್ಲಿ, ಅವರಷ್ಟು ಕನ್ನಡದ
ಬಗೆಗೆ ಬರೆದ ಮತ್ತೊಬ್ಬ ಬರಹಗಾರರೇ ಕನ್ನಡದಲ್ಲಿ
ಇಲ್ಲವೇನೋ. ಸಾವಿರಾರು ಸಂಪಾದಕೀಯ
ಲೇಖನಗಳನ್ನು ತಮ್ಮ ವಿಶ್ವವಾಣಿ ಮತ್ತು ಪ್ರಪಂಚ ಪತ್ರಿಕೆಗಳಲ್ಲಿ
ಬರೆದು ದಾಖಲೆ ನಿರ್ಮಿಸಿದವರು
ಅವರು.
ಅವರು ಕನ್ನಡದ
ಮರೆತ ಪುಟಗಳನ್ನು ತೆರೆಯುತ್ತಾರೆ.
ʻʻ ೧೯೧೪
ರಲ್ಲಿ ಬೆಳಗಾವಿಯಲ್ಲಿ ಬಾಲಗಂಗಾಧರ
ತಿಲಕರು ಸಭೆಯೊಂದರಲ್ಲಿ ಮಾತನಾಡುತ್ತ, ʻʻ ಒಂದು
ಕಾಲದಲ್ಲಿ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಜನರು ಆಡುತ್ತಿದ್ದ ಭಾಷೆ ಕನ್ನಡವಾಗಿತ್ತು. ಕರ್ನಾಟಕದ ಇಬ್ಬರು ರಾಣಿಯರು ಮಹಾರಾಷ್ಟ್ರ ಇತಿಹಾಸಕ್ಕೆ ನಿಕಟವಾದ
ಸಂಬಂಧ ಹೊಂದಿದ್ದಾರೆ. ಕೆಳದಿಯ
ಚೆನ್ನಮ್ಮ ಮತ್ತು ಬೆಳವಡಿ
ಮಲ್ಲಮ್ಮ. ಇವರೇ ಆ ರಾಣಿಯರು.
ಬೆಳವಡಿ ಮಲ್ಲಮ್ಮ ಶಿವಾಜಿಯನ್ನು
ಯುದ್ಧದಲ್ಲಿ ಸೋಲಿಸಿ ಸೆರೆ ಹಿಡಿದಿದ್ದರೆ, ಕೆಳದಿ ಚೆನ್ನಮ್ಮ ಶಿವಾಜಿಯ
ಮಗ ರಾಜಾರಾಮನಿಗೆ ಜೀವದಾನ ಗೈದಿದ್ದಳು.
ಔರಂಗಜೇಬ
ದಕ್ಷಿಣದಮೇಲೆ ದಂಡೆತ್ತಿ ಬಂದು, ರಾಜಾರಾಮನನ್ನು
ಸೋಲಿಸುತ್ತಾನೆ. ಆತ ತಲೆತಪ್ಪಿಸಿಕೊಂಡು ಕೆಳದಿಯ
ರಾಣಿಯ ಆಶ್ರಯಕ್ಕೆ ಬರುತ್ತಾನೆ.
ಔರಂಗಜೇಬ ರಾಜಾರಾಮನನ್ನು ತನಗೆ ಒಪ್ಪಿಸುವಂತೇ ಅಬ್ಬರಿಸುತ್ತಾನೆ. ಇಲ್ಲದಿದ್ದಲ್ಲಿ
ಕೆಳದಿಯಮೇಲೂ ಯುದ್ದಸಾರಬೇಕಾದೀತು ಎನ್ನುತ್ತಾನೆ.
ಕೆಳದಿಯ ರಾಣಿ ಇದಕ್ಕೊಪ್ಪದೇ
ಯುದ್ಧಕ್ಕೆ ಸಿದ್ಧಳಾಗುತ್ತಾಳೆ. ಇನ್ನೇನು ಯುದ್ಧ ಪ್ರಾರಂಭಗೊಳ್ಳುತ್ತದೆ ಎನ್ನುವಾಗ,
ದಿಲ್ಲಿಯಲ್ಲಿ ವಿಪ್ಲವವೇಳುತ್ತದೆ. ಅಲ್ಲಿ ರಾಜಕೀಯ
ವಿದ್ರೋಹ, ಪಲ್ಲಟಗಳು ಪ್ರಾರಂಭಗೊಂಡಾಗ, ಔರಂಗಜೇಬ
ಯುದ್ಧನಿಲ್ಲಿಸಿ ಹಟಾತ್ ದಿಲ್ಲಿಗೆ
ಮರಳುತ್ತಾನೆ. ಅವನು ಕೆಳದಿಯ ರಾಣಿಗೆ ಕಾಣಿಕೆಯನ್ನು ಸಲ್ಲಿಸಿ ʻʻ ನಾನು ಹಿಂದೂಸ್ಥಾನದಾದ್ಯಂತ ಯುದ್ದ ಮಾಡಿದ್ದೇನೆ. ಎಲ್ಲಿಯೂ ಚೆನ್ನಮ್ಮನಂತಹ
ವೀರಮಹಿಳೆಯನ್ನು ಕಾಣಲಿಲ್ಲ.ʼʼ ಎಂದು ಪ್ರಶಂಸಿಸುತ್ತಾನೆ. ಔರಂಗಜೇಬನ
ಬೆದರಿಕೆಗೆ ಮಣಿದು ರಾಜಾರಾಮನನ್ನು ಒಪ್ಪಿಸಿದ್ದರೆ, ಮರಾಠಾ ಇತಿಹಾಸವೇ ಪಲ್ಲಟವಾಗಿ
ಹೋಗುತ್ತಿತ್ತು. ಕರ್ನಾಟಕದ ಈ ಕೊಡುಗೆಯನ್ನು ಮಹಾರಾಷ್ಟ್ರ ಎಂದೂ ಮರೆಯುವ
ಹಾಗಿಲ್ಲ.ʼʼ ನಮ್ಮ ದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಸೆದ ಸಂಸ್ಕೃತಿ ಮತ್ತು ಭಾಷಾಸಂಬಂಧದಂತೇ ಇನ್ಯಾವ
ರಾಜ್ಯಗಳಲ್ಲಿ ಕಾಣಸಿಗದು. ಆದರೆ ವರ್ತಮಾನ ಮಾತ್ರ ಹೀಗಿಲ್ಲ. ಗಡಿಸಮಸ್ಯೆ
ಭಾಷಾಸಮಸ್ಯೆಗಳು, ಕ್ಷುಲ್ಲಕ ರಾಜಕೀಯ
ಕಾರಣದಿಂದ ಪರಿಹರಿಸಲಾಗದ ಸ್ಥಿತಿ
ತಲುಪಿದೆ.
==============================================================
(ಸುಮನಾಂಬರ ಅಂಕಣಕ್ಕೆ.) ಸು.ಮ. ತಾ- ೯-೯-೨೦೨೫
5) ಭಾವ ಮತ್ತು ಭಾಷೆ.
ಮಾತು ಮಾತೆಗೆ
ಸಮಾನ. ಮಾತೆಯಿಂದ ನಮ್ಮ ಅಸ್ತಿತ್ವ. ಮಾತಿನಿಂದ
ನಮ್ಮ ವ್ಯಕ್ತಿತ್ವದ ಅಸ್ತಿತ್ವ. ಮಾತು ಮೃದುವಾದಷ್ಟೂ ಮಧುರ. ನಯವಾದಷ್ಟೂ ಸುಂದರ.
ಮನುಷ್ಯ ನ ಅಸ್ಮಿತೆಯಿರುವುದೇ ಮನಸ್ಸು
ಮತ್ತು ಮಾತಿನಲ್ಲಿ. ಅವೆರಡಿರದಿದ್ದಲ್ಲಿ ಜಗತ್ತಿನ
ಪ್ರಾಣಿಲೋಕದಲ್ಲಿ ಅತ್ಯಂತ ದುರ್ಬಲ ಜೀವಿಯಾಗಿ ಮನುಷ್ಯ
ಬದುಕುತ್ತಿದ್ದನೇನೋ. ಮಾತೆಂಬುದು ಜ್ಯೋತಿರ್ಲಿಂಗ,
ಎಂದು ವಚನ ಸಾರಿದರೆ, ಮಾತು ಮಂತ್ರವಾಗಬೇಕು ಕಣಾ..!!
ಎಂದು ಕವಿ ಕುವೆಂಪು ಉದ್ಘರಿಸಿದರು.
ಮಾತೆಂಬುದು
ಮೊದ ಮೊದಲು ಕೇವಲ ದೈಹಿಕ ಸನ್ನೆಯ ಮೂಲಕ ಪ್ರಾರಂಭಗೊಂಡು, ಪಕ್ಷಿ
ಪ್ರಾಣಿಗಳ ಕೂಗನ್ನು ಅನುಕರಿಸಿ ಮನುಷ್ಯನೂ
ಒಂದು ತನ್ನದೇ ಆದ ಭಾಷೆಯೆಂಬ ಸಂಪರ್ಕಸಾಧನವನ್ನು ಅನ್ವೇಷಿಸಿಕೊಂಡ. ಆದರೆ ಭಾಷೆ ಕೇವಲ ಸಂಪರ್ಕಮಾಧ್ಯಮವಾಗಿ ಮಾತ್ರ ಉಳಿಯದೇ ಮಾನವ ಜೀವಿತದ ಸಂಪೂರ್ಣ
ದಾಖಲೆಗಳನ್ನು ತನ್ನ ಜೀನಿನಲ್ಲಿ
ಸಂಗ್ರಹವಾದುದನ್ನು ಭಾವಕೋಶದಲ್ಲಿ ಜೀರ್ಣಿಸಿಕೊಂಡ
ಮಹತ್ವಪೂರ್ಣ ದಾಖಲೆಯೂ ಆದುದರಿಂದ,
ಭಾಷೆ ಎಂಬುದು ಪ್ರಕೃತಿಯ
ವರವಾಗಿ ಪರಿಣಮಿಸಿತು.
ಭಾಷೆ ಯೆಂಬ ಶಬ್ಧಕ್ಕೆ
ನುಡಿ , ವಚನ , ಬೆಳಕು, ಮುಂತಾದ
ಅರ್ಥಸೇರಿದೆ. ಚಿಂತನೆ ಆಳವಾದಷ್ಟೂ
ಭಾಷೆ ಅರ್ಥಪೂರ್ಣತೆ ಪಡೆಯುತ್ತದೆ.
ಸಾವಿರಾರು ವರ್ಷಗಳ ಕನ್ನಡ ನುಡಿ ಪ್ರವಾಹ ತಾತ್ವಿಕತೆಯ
ಆಧ್ಯಾತ್ಮಿಕತೆಯ, ಧಾರ್ಮಿಕ ವೈಚಾರಿಕ
ವೈಜ್ಞಾನಿಕ ನೆಲೆಯಲ್ಲಿ ಹರಿಯುತ್ತಾ
ವಿಶ್ವದ ಶಾಸ್ತ್ರೀಯ ಭಾಷೆಗಳಲ್ಲಿ ತನ್ನನ್ನು ಗುರುತಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದ
ಒಂದು ಭಾಷೆ ಕಳೆದವರ್ಷವಷ್ಟೆ
ಮೃತವಾಯಿತು. ಅಂದರೆ ಒಬ್ಬನೇ
ಒಬ್ಬ ಆದಿವಾಸಿ ವೃದ್ಧ ಮಾತ್ರ ಬಲ್ಲವನಾಗಿದ್ದ. ಆತನ ಸಾವಿನೊಂದಿಗೆ ಆ ಭಾಷೆಯೂ ಜಗತ್ತಿನಿಂದ
ದೂರಗೊಂಡಿತು. ಕಳೆದೊಂದು ದಶಕದಿಂದ
ಭಾಷಾ ಸಂಶೋಧಕರು ವೃದ್ಧನ ನುಡಿಗಳನ್ನು
ಧ್ವನಿಮುದ್ರಿಸಿಕೊಂಡಿದ್ದರು. ಆ ಮೂಲಕ ಆ ಆದಿವಾಸಿ
ಭಾಷೆಯನ್ನು ದಾಖಲಿಸಿ ಸಂಶೋಧಕರಿಗೆ
ಸಂತಸ ತಂದರು. ವಿಶ್ವದಲ್ಲಿ
ಇದೇ ರೀತಿ ಪ್ರತಿವರ್ಷ
ಹತ್ತು ಹಲವು ಭಾಷೆಗಳು
ಸಾಯುತ್ತಲಿವೆಯಂತೆ. ಭಾಷೆ ಸಾಯುವುದು
ಅಂದರೆ ಒಂದು ಸಮುದಾಯದ
ಸಾವಿರಾರು ವರ್ಷದ ಚರಿತ್ರೆ ಮತ್ತು ಸಂಸ್ಕೃತಿಯ ದಾಖಲೆಗಳೇ
ನಾಶವಾದಂತೆ. ಅವುಗಳ ಶಬ್ದಗಳಲ್ಲಿ
ಅಡಗಿದ, ದೇಶೀ ಜ್ಞಾನ, ಪಾರಂಪರಿಕ
ವಿಜ್ಞಾನ, ಕಲೆಯ ವಿವರಗಳು, ಶಾಶ್ವತವಾಗಿ
ಮನುಷ್ಯನಿಂದ ದೂರವಾಗಿಬಿಡುತ್ತವೆ.
ಇಪ್ಪತ್ತನೆಯ ಶತಮಾನ ಕಂಡ ಒಬ್ಬ ಅದ್ಭುತ
ಭಾಷಾ ವಿಜ್ಞಾನಿ ನೋಮ್ ಚಾಮ್ಸಕಿ,
ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಂಚಲನ
ವನ್ನೇ ಮೂಡಿಸಿದ ಮಹಾನ್
ಸಂಶೋಧಕ. ಭಾಷೆಯನ್ನಾಡುವ ಶಕ್ತಿ ಮನುಷ್ಯನಿಗೆ ಜೈವಿಕವಾಗಿಯೇ
ಪ್ರಾಪ್ತವಾಗಿರುತ್ತದೆ. ಮಿದುಳಲ್ಲೊಂದು ವಿಶ್ವ ವ್ಯಾಕರಣ ವೇ ಇರುತ್ತದೆ.
( univarsel grammar) ಮಗು ತಾನು
ಜನಿಸಿದ ಪರಿಸರದಲ್ಲಿ ಆವಾವ ಭಾಷೆಯನ್ನು ಈ ಮೂಲಶಕ್ತಿಯಿಂದಲೇ ಹೀರಿಕೊಳ್ಳುತ್ತದೆ. ಎಂದು ಅವರು ಪ್ರತಿಪಾದಿಸುತ್ತಾರೆ. ಮಗುವಿಗೆ
ಬಾಲ್ಯದಲ್ಲಿ ಸಂಪರ್ಕಕ್ಕೆ ಬಂದ ಭಾಷೆಮಾತ್ರ ನಿಜವಾದ
ಮನೋವಿಕಾಸಕ್ಕೆ ಕಾರಣವಾಗುತ್ತದೆ ಎಂಬುದನ್ನು
ಬಲವಾಗಿ ಸಮರ್ಥಿಸುವವರಲ್ಲಿ ಚಾಮಸ್ಕಿಯೂ
ಒಬ್ಬ.
ಆಧುನಿಕ ಭಾರತದ ಭಾಷಾ ಸಂಶೋಧಕರ
ಪಿತಾಮಹರೆಂದೇ ಪ್ರಸಿದ್ಧರಾಗಿದ್ದ ಡಾ. ಶಂ.ಭಾ. ಜೋಶಿ ಭಾಷೆಯ
ಮೂಲದಿಂದಲೇ ಜನಾಂಗದ ಇತಿಹಾಸವನ್ನು
ನಿರ್ವಚಿಸಿದ ಬಗೆ, ಸಂಶೋಧನಾ
ರಂಗಕ್ಕೊಂದು ಹೊಸ ರಾಜಮಾರ್ಗವನ್ನು
ಸೃಷ್ಟಿಸಿದಂತಾಗಿತ್ತು. ಸಾವಿರ ಸಾವಿರ ಪುಟಗಳ ಅವರ ಸಂಶೋಧನೆಗಳು, ಮುಂದಿನ
ಸಂಶೋಧಕರ ದಾರಿದೀಪವಾಗಿ ಇನ್ನೂ ಕಂಗೊಳಿಸುತ್ತಿದೆ. ಕನ್ನಡ
ಭಾಷೆಯ ಸಂಶೋಧನೆಗಿಳಿದ ಶಂ.ಭಾ,
ಸಂಸ್ಕೃತ ಸೇರಿ ಭಾರತದ ಎಲ್ಲ
ಭಾಷೆಗಳನ್ನೂ ಜಾಲಾಡಿದರು. ಕನ್ನಡ
ಭಾಷೆ ಒಂದು ಕಾಲದಲ್ಲಿ,
ಇಡೀ ಭಾರತದ ತುಂಬೆಲ್ಲ
ತನ್ನ ಹೆಜ್ಜೆಯೂರಿದ ಪರಿಯನ್ನು
ಅವರ ಲೇಖನಗಳಲ್ಲಿ ಓದಿದಾಗ
ಮೈ ನವಿರೇಳುತ್ತದೆ.
ಭಾಷೆ ಸ್ವಯಂಭೂ
ಅಲ್ಲ. ಸುತ್ತಲಿನ ಪರಿಸರ,
ವಾತಾವರಣದ ಫಲಿತವಾಗಿ, ಪರಸ್ಪರ
ಸಂಪರ್ಕಸೇತುವಾಗಿ ಬೆಳೆದು ಬಾಳುತ್ತದೆ.
ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ,
ಸಂಸ್ಕೃತವನ್ನೂ ಜೀರ್ಣಿಸಿಕೊಂಡು, ಮತ್ತಷ್ಟು
ಪುಷ್ಟವಾಗಿ ರೂಪುಗೊಂಡಿದೆ. ಯಾವ ಭಾಷೆಯೂ
ಕೀಳಲ್ಲ, ಮೇಲಲ್ಲ. ಯಾವುದೇ ಭಾಷೆ ಅಹಂಕಾರದ
ಆಕ್ರಮಣದ ಸಾಧನವಾಗಬಾರದಷ್ಟೇ. ಆದರೆ ಕೆಲವು
ಕಾಲದಲ್ಲಿ ಭಾಷೆಯೊಂದು ಆಕ್ರಮಣ
ಕಾರಿಯಾದದ್ದೂ ಇದೆ. ಹಳೆಗನ್ನಡದ ಸಂದರ್ಭದಲ್ಲಿ
ಅಂಡಯ್ಯನಂತ ಕವಿ ಸಂಸ್ಕೃತದ
ಸಹಾಯವಿಲ್ಲದೇ ಕನ್ನಡ ಕಾವ್ಯರಚಿಸುತ್ತೇನೆಂಬ ಪಣತೊಟ್ಟು
ಕೃತಿ ರಚಿಸಿದ್ದ.
ಮಹಲಿಂಗ ರಂಗ ಕವಿ, ಕನ್ನಡದ ಸೊಗಸನ್ನು
ವರ್ಣಿಸುವ ಪರಿಯನ್ನ ಗಮನಿಸಬಹುದಾಗಿದೆ.
ಸುಲಿದ ಬಾಳೆಯ ಹಣ್ಣಿನಂದದಿ /
ಕಳೆದ ಕಬ್ಬಿನ ಸಿಗುರಿನಂದದಿ / ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ//
ಲಲಿತವಹ ಕನ್ನಡದ
ನುಡಿಯಲಿ / ತಿಳಿದು ತನ್ನೊಳು ತನ್ನ ಮೋಕ್ಷವ
/ ಗಳಿಸಿಕೊಂಡರೆ ಸಾಲದೇ ? ಸಂಸ್ಕೃತದಲ್ಲಿನ್ನೇನು...?? ಎಂದು ಕೇಳುತ್ತಾನೆ.
ಮೊದಲು
ಸಂಸ್ಕೃತ, ನಂತರ ಇಂಗ್ಲಿಶ್,
ಇದೀಗ ಹಿಂದಿ, ಈ ಭಾಷೆಗಳು ಕನ್ನಡವನ್ನು ಕಾಡುತ್ತ, ಕನ್ನಡಿಗರು
ಕೀಳರಿಮೆಯಿಂದ ಬಳಲುವಂತೇ ಮಾಡಿದ್ದು
ಸರ್ವ ವಿದಿತ. ಇದನ್ನೇ ಕವಿ ಕುವೆಂಪು
ಲೇವಡಿ ಮಾಡುತ್ತಾರೆ.
ರಾಜ ನುಡಿಯೆಂದೊಂದು, ರಾಷ್ಟ್ರ ನುಡಿಯೆಂದೊಂದು, / ದೇವನುಡಿ ಯೆಂದೊಂದು,
ಹತ್ತಿ ಜಗ್ಗಿ//
ನಿರಿ ನಿಟಿಲು ನಿಟಿಲೆಂದು ಮುದಿ ಮೂಳೆ
ಮುರಿಯುತಿದೆ / ಕನ್ನಡಮ್ಮನ
ಬೆನ್ನು ಬಳುಕಿ ಬಗ್ಗಿ //
ಭಾಷೆ ಭಾಷೆಗಳಲ್ಲಿರುವ
ಸಂಬಂಧ, ಕೊಡುಕೊಳ್ಳುವಿಕೆ ಸಹಜ. ಪರಸ್ಪರ ಒಡನಾಡಿ
ಪರಸ್ಪರ ಬೆಳೆಯುವ ಪ್ರಕ್ರಿಯೆ
ಸಹಜವಾದದ್ದು. ಆದರೆ ಇಂಥ ಭಾಷೆಯೇ
ಶ್ರೇಷ್ಠ, ಉಳಿದದ್ದೆಲ್ಲ ಕನಿಷ್ಠ, ನಿರ್ದಿಷ್ಠ
ಭಾಷೆ ಕಲಿತವ ಮಾತ್ರ ಜ್ಞಾನಿ, ಪ್ರತಿಷ್ಠಿತ
ಎಂಬ ಭ್ರಮೆ ಮಾತ್ರ ಆತ್ಮಘಾತಕ ಅಷ್ಟೆ.
ಕನ್ನಡದ
ಎದುರು ಇಂಗ್ಲಿಶ್ ಭಾಷೆ ಅದರ ಮರಿಮಗನ
ವಯಸ್ಸಿಗಿಂತ ಕಡಿಮೆಯಾದರೂ, ಜಗತ್ತಿನೆಲ್ಲ ಭಾಷೆಗಳ ಶಬ್ದಗಳನ್ನು ಜೀರ್ಣಿಸಿಕೊಂಡು, ಇಂದು ವಿಶ್ವಸಂಪರ್ಕಭಾಷೆಯಾಗಿ ಮೆರೆಯುತ್ತಿದೆ.
ಪಂಪನ ಮಹಾಕಾವ್ಯ ಬಂದಾಗ ಇಂಗ್ಲಿಶ್ ಇನ್ನೂ ಆದಿವಾಸಿ ಭಾಷೆಯಾಗಿತ್ತು. ಕನ್ನಡಕ್ಕಿಂತ
ಸರಿಸುಮಾರು ಐದುನೂರು ವರ್ಷಗಳ
ನಂತರ ಇಂಗ್ಲಿಶ ಭಾಷೆ ಮಹಾಕಾವ್ಯವನ್ನು ಕಂಡಿತು
ಎನ್ನುತ್ತಾರೆ. ಮಹಾಕಾವ್ಯ ಸೃಷ್ಟಿಯಾಯಿತು
ಎಂದರೆ ಆ ಭಾಷೆ ಪ್ರೌಢವಾಗಿದೆ ಎಂದರ್ಥ.
ʻʻ ನಾವು ಅದೆಷ್ಟೇ ಭಾಷೆಯನ್ನು
ಕಲಿತಿರಲಿ. ಅದರಲ್ಲಿ ಪರಿಣತಿ ಪಡೆದಿರಲಿ, ಕನಸು ಕಾಣುವುದು
ಮಾತ್ರ ಮಾತೃಭಾಷೆಯಲ್ಲೇʼʼ ಎಂದು ಡಾ. ಯು.ಆರ್ .ಅನಂತಮೂರ್ತಿ ಉದ್ಘರಿಸಿದ್ದರು.
ಟಿ.ಪಿ. ಕೈಲಾಸಂ,
ಕನ್ನಡದ ಬಹುಪ್ರಮುಖ ನಾಟಕ ಲೇಖಕರು.
ಚಿಂತಕರು. ಅವರು ಒಮ್ಮೆ ಇಂಗ್ಲೆಂಡ್ ದೇಶಕ್ಕೆ
ಹೋದಾಗ, ಅಲ್ಲಿರುವ ಭಾರತೀಯರು
ಅವರನ್ನು ಉಪನ್ಯಾಸ ನೀಡಲು ಆಹ್ವಾನಿಸುತ್ತಾರೆ. ಸಭಾಭವನ
ಕಿಕ್ಕಿರಿದು ತುಂಬಿತ್ತು. ಭಾರತೀಯ
ಹತ್ತು ಹಲವು ಭಾಷೆಗಳು ಕಿವಿಗೆ ಬೀಳುತ್ತಿದ್ದವು. ಕನ್ನಡದ
ಸದ್ದು ಮಾತ್ರ ಕೇಳುತ್ತಲೇ ಇರಲಿಲ್ಲ.
ಸಂಗಡಿಗರು ಕೈಲಾಸಂ ರವರನ್ನೇ
ಪ್ರಶ್ನಿಸುತ್ತಾರೆ. ಸರ್... ಇಲ್ಲಿ ಕನ್ನಡಿಗರೊಬ್ಬರೂ ಬಂದಿಲ್ಲವೇ...?
ಎಂದು.
ಆಗ ಕೈಲಾಸಂ,
ʻʻ ಹಿಂದಿಯನ ಎದುರು ಹಿಂದಿಯಲ್ಲಿ, ತಮಿಳಿನೆದುರು
ತಮಿಳಿನಲ್ಲಿ, ತೆಲುಗಿನೆದುರು ತೆಲುಗಿನಲ್ಲಿ,
ಕನ್ನಡಿಗನೆದುರು ಇಂಗ್ಲಿಶಿನಲ್ಲಿ ಮಾತನಾಡುತ್ತಿದ್ದಾರಲ್ಲಾ...!! ಅವರೇ ಅಚ್ಚ ಕನ್ನಡಿಗರು. ಇಲ್ಲಿ ಅರ್ಧದಷ್ಟು ಜನ ಕನ್ನಡಿಗರೇ ಇದ್ದಾರೆ. ʼʼ
ಎಂದರಂತೆ.
ಅರ್ಧ ಶತಮಾನಕ್ಕೂ ಹಿಂದೆಯೇ
ಹೇಳಿದ ಕೈಲಾಸಂ ಮಾತು ಇಂದಿಗೂ ಸತ್ಯ. ಉದ್ಯೋಗ ಮಾರುಕಟ್ಟೆಯ
ಅತ್ಯಾಕರ್ಷಣೆಯಲ್ಲಿ, ವಿದೇಶೀ ಭಾಷೆಯ ಬೆನ್ನತ್ತಿ ಮಗುವನ್ನು
ಮಾತೃಸಂಸ್ಕೃತಿಯಿಂದಲೇ ದೂರಮಾಡುತ್ತಿರುವ ಪಾಲಕ ಸಮುದಾಯ, ಇಂದಿನ ಮಕ್ಕಳು ತಮ್ಮಷ್ಟು
ದಡ್ಡರಲ್ಲ, ಏಕಕಾಲದಲ್ಲಿ ನಾಲ್ಕಾರು
ಭಾಷೆಯನ್ನು ಕರಗತ ಮಾಡಿಕೊಳ್ಳಬಲ್ಲರು, ಅದಕ್ಕಾಗಿ
ಮಾತೃಭಾಷೆಯನ್ನು ಬಲಿಕೊಡಬೇಕಿಲ್ಲ ಎಂಬುದನ್ನು
ಮನಗಾಣಬೇಕಿದೆ.
೧೩-೯-೨೦೨೫. ʻʻ ಸುಮ.ʼʼ