ರಸ ತುಂಬಿದ ಪಾತ್ರೆ, ʻʻಜಾತ್ರಿʼʼ ಕಾದಂಬರಿ.
ಕಾಳಗದ ಕಥೆಯಲ್ಲ ವಿಷಯಗ
ಳೇಳಿಗೆಯ ವಿಧಿಯಲ್ಲ ಹೊಟ್ಟೆಯ
ಹೊಳಲಿಕೆ ಹಿಂಸೆಯನು ಮಾಡುವ ಹೊಲಬು ತಾನಲ್ಲ |
ಕಾಳಗವು ಕಣದಲಿ ಸುರತದ
ಕೀಲು ಕುಂಡಲಿಯಲ್ಲಿ ತೃಪ್ತಿಯ
ದಾಳಿ ಗಗನದೊಳೆಂದು ಹೇಳುವುದೀ ಸುಬೋಧೆಯಲಿ
|| ( ಚಾಮರಸ
)
ಧರಣೇಂದ್ರ ಕುರಕುರಿ,
ನಮ್ಮ ನಡುವಣ ಸೈದ್ಧಾಂತಿಕ ವೈಚಾರಿಕ
ಕವಿ, ರಾಷ್ಟ್ರಪತಿ ಪದಕವಿಜೇತ ಅನುವಾದಕಾರರಾಗಿ ಪ್ರಸಿದ್ಧಿಪಡೆದವರಲ್ಲದೇ ಇದೀಗ ಅಪ್ಪಟ ಮಣ್ಣಪರಿಮಳದ
ಕಾದಂಬರಿ ರಚನೆಯೊಂದಿಗೆ ಕಾದಂಬರಿಕಾರರಾಗಿಯೂ ಹೊರ ಹೊಮ್ಮಿದ್ದಾರೆ. ತಾವು ಹುಟ್ಟಿ
ಬಾಳಿದ ತವರೂರಿನ ಪರಿಸರವನ್ನು
ಒಂದು ಶತಮಾನದ ಪೂರ್ವಕ್ಕೆ
ಕೊಂಡೊಯ್ದು, ಆ ಕಾಲದ ನೋವು ನಲಿವು,
ಸಾಂಸ್ಕೃತಿಕ ಸತ್ವ ಸತ್ಯ, ಜನಾಂಗೀಯ ಏಳು ಬೀಳುಗಳ
ಕಥನವನ್ನು ಮತ್ತೆ ಮುನ್ನೆಲೆಗೆ
ತಂದು ಆಡುನುಡಿಯ ಮಾಧ್ಯಮದಲ್ಲಿ ಕಾದಂಬರಿಯಾಗಿಸಿದ ಅವರ ಸುದೀರ್ಘ ಸಾಹಿತ್ಯಾನುಭವಗಳ ರಸಗಟ್ಟಿಯಾಗಿ
ಇದೀಗ ಜಾತ್ರಿ ಕೃತಿ
ಸೃಷ್ಟಿಯಾಗಿದೆ.
ಆಂಗ್ಲಾಡಳಿತದಲ್ಲಿ ಪ್ರಾರಂಭಗೊಳ್ಳುವ ಕೃತಿ ಸ್ವಾತಂತ್ರ್ಯಾನಂತರದ ಕೆಲವು ಕಾಲದವರೆಗೆ ವ್ಯಾಪಿಸಿಕೊಳ್ಳುವ ಕಥನ, ಮೂರು ತಲೆಮಾರುಗಳ ಬದುಕನ್ನು ಚಿತ್ರಿಸುತ್ತಲೇ, ಆಧುನಿಕತೆ, ಮತ್ತು ಸ್ವಾತಂತ್ರ್ಯ ಎರಡೂ , ಜನಜೀವನವನ್ನು ಎತ್ತ ಕೊಂಡೊಯ್ಯುತ್ತಿದೆ, ಅದರ ಫಲಾನುಭವಿಗಳಾದ ನಾವು ದೊರಕಿದ ಈ ಅವಕಾಶವನ್ನು ಹೇಗೆ ಬಳಸಿ ಕೊಳೆಸುತ್ತಿದ್ದೇವೆ ಎಂಬ ವಿಷಾದಪೂರ್ಣ ಸಂಕಥನವನ್ನು,
ಗ್ರಾಮಸಂವೇದನೆಯ ಆಪ್ತತೆಯಲ್ಲಿ ಚಿತ್ರಿಸುವ
ಕೃತಿಕಾರರ ಪ್ರಯತ್ನ ಅಭಿನಂದನೀಯ.
ಹಾಗೆಂದು
ಇಂಥ ವಸ್ತು ಅಪರೂಪವೇನಲ್ಲ.
ಭಾರತೀಯ ಕಾದಂಬರಿಗಳಲ್ಲಿ ಅತಿಹೆಚ್ಚು ಯಶಸ್ವೀಯಾಗಿ ಅಭಿವ್ಯಕ್ತಗೊಂಡಿದ್ದೇ ಗ್ರಾಮ
ಸಂವೇದನೆ.
ಭಾರತೀಯ
ಕಾದಂಬರಿ ಪ್ರಪಂಚ ಜೀವಂತವಾಗಿರುವುದೇ ಗ್ರಾಮಸಂವೇದನೆಯ ಸಮೃದ್ಧ ಅನುಭವಗಳ ವಿಸ್ತಾರದಲ್ಲಿ. ಹಿಂದಿ
ಕಾದಂಬರಿ ಸಾಮ್ರಾಟರಾದ ಮುನ್ಶಿ ಪ್ರೇಮಚಂದ
ತಮ್ಮ ಗೋದಾನ್ ಮತ್ತು ಇತರ ಕಾದಂಬರಿಗಳಲ್ಲಿ ಚಿತ್ರಿಸಿದ
ಗ್ರಾಮ ಬದುಕಿನ ಸತ್ವ ಸೌಂದರ್ಯ , ಸಂಕಟ ಸುಖ,
ಶಕ್ತಿ ಮತ್ತು ದೌರ್ಬಲ್ಯಗಳ ಜೀವಂತ ಚಿತ್ರಣ
ಭಾರತೀಯ ಸೃಜನಶೀಲ ಅಸ್ಮಿತೆಯಾಗಿ
ಇನ್ನೂ ಮಿಂಚುತ್ತಿವೆ. ಆಧುನಿಕ
ಭಾರತದ ಸಮಗ್ರ ಬದುಕಿನಲ್ಲಿ,
ಪಾಶ್ಚಾತ್ಯ ಜೀವನವಿಧಾನ, ವೈಚಾರಿಕತೆ,
ಸೈದ್ಧಾಂತಿಕತೆಗಳು ಅದೆಷ್ಟೇ ಪ್ರಭಾವಬೀರಿರಲಿ, ಅವೆಲ್ಲ
ಸುಶಿಕ್ಷಿತರು, ಮತ್ತು ನಗರ ನಾಗರಿಕರುಗಳ ಹಳವಂಡಗಳಾಗಿರುವವೇ ಹೊರತು,
ಈ ಮಣ್ಣಿನ ಅಸ್ಮಿತೆಯನ್ನು
ಗಾಢವಾಗಿ ಅಭಿವ್ಯಕ್ತಿಸುವ ಸಮರ್ಥ ಕೃತಿಗಳೆಲ್ಲ ಗ್ರಾಮಸಂವೇದನೆಗಳಿಂದಲೇ ಭರ್ತಿಯಾಗಿವೆ
ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಕುವೆಂಪುರವರ ಮಲೆನಾಡು,
ಕಾರಂತರ ಕರಾವಳಿ, ರಾವ್ ಬಹದ್ದೂರರ
ಉತ್ತರ ಕರ್ನಾಟಕ,ಇವುಗಳ ವಿವರಗಳೆಲ್ಲ ದಟ್ಟೈಸಿರುವುದು, ಗ್ರಾಮಗಳನ್ನಾಧರಿಸಿಯೇ ಎಂಬುದು
ಸತ್ಯ.
ಇತ್ತೀಚಿನ ವರ್ಷಗಳಲ್ಲಿ
ಮತ್ತೆ ನಮ್ಮ ಸುದೀರ್ಘ ಇತಿಹಾಸ,
ಪರಂಪರೆ, ಜೀವನವಿಧಾನ ಮತ್ತು ದೇಶೀ
ತಾತ್ವಿಕತೆ ಮತ್ತೆ ಜಾಗ್ರತಗೊಳ್ಳುತ್ತಿರುವುದಕ್ಕೆ ಆರೋಪಿತ
ವಿದೇಶೀ ಚಿಂತನಕ್ರಮಗಳ ಸೋಲು ಕಾರಣವೇ...? ಅಥವಾ ಅನುಭವ
ಸಾಮಗ್ರಿಗಳೇ ಖಾಲಿಯಾಗಿರುವುದೇ...? ಅಥವಾ ನಾವು ಕಳೆದುಕೊಳ್ಳುತ್ತಿರುವ ನಮ್ಮ ಅಸ್ಮಿತೆಯನ್ನು ಕಳೆದಲ್ಲಿಯೇ
ಅನ್ವೇಷಿಸುವ ಆಕಾಂಕ್ಷೆಯೇ..? ಅದೇನೇ ಇರಲಿ,
ಗೈರಸಮಝೂತಿ, ಸ್ವಪ್ನಸಾರಸ್ವತ, ಪುನರ್ವಸು,
ತೇಜೋತುಂಗಭದ್ರಾ, ಜಂಗುಮ್ ಜಕ್ಕುಂ, ತಲೆಗಳಿ,
ಮುಂತಾದ ಕಾದಂಬರಿ ಕೃತಿಗಳು
ಮತ್ತೆ ನಮ್ಮನ್ನು ಭೂತಕಾಲಕ್ಕೆ
ಕೊಂಡೊಯ್ಯುತ್ತಿವೆ. ಭೂತದ ಅನುಭವಗಳ ಮೂಲಕ ವರ್ತಮಾನದ ಅಯೋಮಯ ಬದುಕಿನ ಕ್ಷಣಿಕತೆಯನ್ನು
ಒರೆಗಲ್ಲಿಗೆ ಎದುರಾಗಿಸುತ್ತಿವೆ.
ಆಧುನಿಕತೆ ಸೋತಾಗ ಜನಪದ
ಮಾತನಾಡತೊಡಗುತ್ತದೆ. ಭಾಷೆ, ಅಭಿವ್ಯಕ್ತಿ,
ತಂತ್ರ, ವೈಚಾರಿಕತೆ, ಇವೆಲ್ಲಕ್ಕೂ
ಮಿತಿಯಿದೆ, ಶಕ್ತಿಯಿದ್ದಂತೇ ದೌರ್ಬಲ್ಯವೂ ಇದೆ. ತನ್ನೆಲ್ಲ
ಶಿಕ್ಷಿತ ಅಹಂಕಾರಗಳಲ್ಲಿ ವಿಜ್ರಂಭಿಸುತ್ತಿದ್ದಂತೇ ತನ್ನೊಳಗೆ
ತಾನೇ ಏಕತಾನತೆಯಲ್ಲಿ ಸಿಲುಕಿ
ಕುಸಿಯತೊಡಗಿದಾಗೆಲ್ಲ, ತಾಯಿಯಂತೇ ಆಗಮಿಸಿ
ಸಾಂತ್ವನಿಸುವ ಶಕ್ತಿ ಜಾನಪದಕ್ಕಿದೆ.
ಕನ್ನಡದ ಕವಿ,
ಶಿರಸಿಯ ಹಿರಿಯ ಲೇಖಕ ಶ್ರೀ ಧರಣೇಂದ್ರ
ಕುರುಕುರಿ ಯವರ ಮಹಾತ್ವಾಕಾಂಕ್ಷೀ ಕಾದಂಬರಿ
ʻʻಜಾತ್ರಿʼʼ ಜನಪದೀಯ
ಸ್ಪಂದನವನ್ನು ಹೊಂದಿ, ವ್ಯಂಗ್ಯ ವಿಡಂಬನೆ,
ವಿಷಾದದ ಗುಣಗಳಿಂದ ಗಮನಸೆಳೆಯುತ್ತ, ಪ್ರಶಸ್ತಿಗೂ ಭಾಜನಗೊಂಡು ಸಂಚಲನ ಮೂಡಿಸುತ್ತಿದೆ.
ಸ್ವಾತಂತ್ರ್ಯ ಪೂರ್ವ ಮತ್ತು ಉತ್ತರಗಳ
ಎರಡು ತಲೆಮಾರುಗಳನ್ನು ತನ್ನ ಒಡಲಲ್ಲಿ ಚಿಗುರಿಸಿಕೊಳ್ಳುತ್ತ, ಗ್ರಾಮೀಣ
ಬದುಕಿನ ಸೂಕ್ಷ್ಮ ಕನ್ನಡಿಯಮೂಲಕವೇ, ಇಡೀ ದೇಶದ ಏಳು-ಬೀಳುಗಳನ್ನು ರೋಚಕವಾಗಿ
ವರ್ಣಿಸುತ್ತ, ವಾಸ್ತವಕ್ಕೆ ಮುಖಾಮುಖಿಯಾಗಿಸುತ್ತಿರುವ ಪ್ರಯತ್ನವೊಂದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಕಾದಂಬರಿಯ ಸಾಮರ್ಥ್ಯ
ಅಭಿವ್ಯಕ್ತಗೊಳ್ಳುವುದೇ ಉತ್ತರಕರ್ನಾಟಕದ ಆಡುನುಡಿಯಲ್ಲಿ.
ಶಿಷ್ಟಭಾಷೆಗೆ ಸರಳ ಸಂವಹನ ಶಕ್ತಿಯಿರಬಹುದು. ಆದರೆ ಅದು
ಯಾರದ್ದೂ ಆಡುನುಡಿ ಅಥವಾ ಮಾತೃಭಾಷೆಯಲ್ಲದ ಕಾರಣ ಆಪ್ತಗುಣದಿಂದ ವಂಚಿತಗೊಳ್ಳುವ
ಸಾಧ್ಯತೆಯೇ ಹೆಚ್ಚು. ಪ್ರಾದೇಶಿಕವಾದ
ಯಾವುದೇ ಭಾಷೆಗಿರುವ ಜೀವಂತಿಕೆ,
ಚಲನಶೀಲತೆ, ಅರ್ಥವೈವಿಧ್ಯ ಶಿಷ್ಟಭಾಷೆಗೆ
ದೊರಕದೇ ನಿರ್ಜೀವಗೊಳ್ಳುವ ಸಾಧ್ಯತೆಯೇ
ಹೆಚ್ಚಾಗಿರುತ್ತದೆ. ಪ್ರಾದೇಶಿಕ ನುಡಿಗಟ್ಟು, ಆವಾವ ಪರಿಸರದ ಆಳದ ಜೀವನಾನುಭವಗಳ ರಸಗಟ್ಟಿಯಾಗಿರುವುದರಿಂದ, ತನ್ನಂತಾನೇ
ಅದಕ್ಕೊಂದು ಕಾವ್ಯಾತ್ಮಕತೆಯೊದಗುತ್ತದೆ. ಚೈತನ್ಯ ಚಿಮ್ಮತೊಡಗುತ್ತದೆ. ಸಹಜ ನುಡಿಯೂ
ತನ್ನ ಅರ್ಥಸಾಂದ್ರತೆಯಿಂದ, ನಾಟಕೀಯ ಗುಣಗಳಿಂದ, ಸಹಜವಾದ
ಮುಗ್ಧತೆಯಿಂದ ಆಕರ್ಷಿಸತೊಡಗುತ್ತದೆ. ನಮ್ಮೊಳಗೇ
ಇರುವ, ವಿಸ್ಮೃತಿಗೆ ಎರವಾದ ಗ್ರಾಮ್ಯತನವನ್ನು ಮತ್ತೆ ಬಡಿದೆಬ್ಬಿಸಿ ನಾಗರಿಕ
ಅಹಂಕಾರಕ್ಕೆ ಚುರುಕು ಮುಟ್ಟಿಸುತ್ತದೆ. ನಮ್ಮದೇ
ಮೂಲಭೂತ ಸಂಸ್ಕೃತಿಯೆಡೆಗೆ ಸೆಳೆಯುವ
ಚುಂಬಕತನ ಪ್ರಾದೇಶಿಕತೆಗಿರುವುದರಿಂದ, ಸಾಧಾರಣ
ಸಾಮಾನ್ಯ ವಸ್ತುವೂ ಅಸಾಧಾರಣ ಅನುಭವದೆಡೆಗೆ
ಆಕರ್ಷಿಸುತ್ತದೆ.
ಪ್ರಸ್ತುತ ʻಜಾತ್ರಿʼ ಕಾದಂಬರಿ ಕೇವಲ ಮೂರೇ
ಮೂರು ಹಳ್ಳಿಗಳ ಏರು ಇಳಿವು,
ಸುಖ ಸಂಕಟ, ಕಪಟ ಮೋಸ ಪ್ರಾಮಾಣಿಕತೆ,
ಮತ್ತು ಮುಗ್ಧತೆಗಳ ವಾಸ್ತವ
ವಿವರಗಳನ್ನು ಕಟ್ಟಿಕೊಡುತ್ತಲೇ, ಇಡೀ ಭಾರತದ ಕಟುವಾಸ್ತವವನ್ನು ಧ್ವನಿಸುವ
ಶಕ್ತಿಯನ್ನು ಪಡೆದುಕೊಂಡಿದೆ . ಜೀವನ ನಿರ್ವಹಣೆಯ ನಡುವೆಯೇ
ಹುಟ್ಟಿಕೊಳ್ಳುವ ಅತ್ಯಾಸೆ, ಸ್ವಾರ್ಥಗಳ ತಾಕಲಾಟದಲ್ಲೂ
. ಗ್ರಾಮಗಳ ವೈವಿಧ್ಯಮಯ
ಸಾಂಸ್ಕೃತಿಕ ಸೌಂದರ್ಯ, ಅರಳುತ್ತದೆ.
ಆ ಕಾಲದ ಹಳ್ಳಿಯ ಶೈಕ್ಷಣಿಕ
ಸ್ಥಿತಿಯ ವರ್ಣನೆಯೊಂದಿಗೆ ಪ್ರಾರಂಭಗೊಳ್ಳುವ ಕೃತಿ, ಸ್ವಾತಂತ್ರ್ಯಾನಂತರ ಅದೇ ಹಳ್ಳಿ ವ್ಯವಸ್ಥಿತ
ಶಿಕ್ಷಣ ಸಂಸ್ಥೆಯೊಂದನ್ನು ಪಡೆಯುವುದರೊಂದಿಗೆ ಮುಕ್ತಾಯಗೊಳ್ಳುವುದು ಸುಖಾಂತವೆಂದೆನ್ನಿಸಿದರೂ, ಈ ಕಥನದ ನಡುವೆ ತಲೆಮಾರಿಂದ ತಲೆಮಾರಿಗೆ
ನೈತಿಕ ಪತನ, ಭೃಷ್ಠತೆ, ಪರಿಸರನಾಶ, ಮಾನವ ಸಂಬಂಧಗಳಲ್ಲಿಯ
ಬಿರುಕುಗಳಂಥ ಅಸಹನೀಯ ವಿದ್ಯಮಾನಗಳು
ಕಟುವಾಸ್ತವದ ಸ್ಥಿತಿಯನ್ನು ಅನಾವರಣ ಗೊಳಿಸುತ್ತವೆ.
ʻʻ ಅಲ್ಲಿ
ಮಕ್ಕಳ ವಿದ್ಯಾಭ್ಯಾಸಕ್ಕ ಒಂದ ಕನ್ನಡಸಾಲೀನೂ
ಐತಿ. ಅಲ್ಲಿ ನಾಕನೇತ್ತೆ ಮಟಾ ಅಷ್ಟ....
ಸಾಲಿ. ದುರುಗವ್ವನ ಗುಡ್ಯಾಗ ಒಂದನೇತ್ತೆ.
ಬಸವಣ್ಣನ ಗುಡ್ಯಾಗ ಯಾಡ್ಡನೇತ್ತೆ. ದ್ಯಾಮವ್ವನ ಗುಡ್ಯಾಗೆ
ಮೂರನೇತ್ತೆ, ಮತ್ತೆ ಕಲ್ಮೇಸೂರ್ನ ಗುಡ್ಯಾಗೆ ನಾಕನೇತ್ತೆ
ಕಲಸ್ತಿದ್ರು. ಆದ್ರ ಮಾಸ್ತರು
ಎಷ್ಟ... ಗುದಮುರಗೀ ಹಾಕಿದ್ರೂ ಹುಡುಗೂರೇನೂ
ಶಾಣ್ಯಾರಾಗಿರಲಿಲ್ಲ. ಅಷ್ಟ... ಯಾಕ ? ಹುಡುಗೂರ ಮಾಸ್ತರಿಗೆ
ಪಾಠಾ ಕಲಸ್ತಿದ್ರು “”
ಕೃತಿಗೆ ಹೃದಯಸ್ಥಾನ
ಗ್ರಾಮದೈವದ ಜಾತ್ರಾ ಪ್ರಕರಣ.
ವೈಯಕ್ತಿಕ ಪ್ರವೃತ್ತಿಯಲ್ಲಿ ಅದೇನೇ ದೌರ್ಬಲ್ಯವಿರಲಿ, ಗ್ರಾಮಜನಗಳು
ಸಹಜವಾಗಿ ದೈವಭಕ್ತರು. ತಮ್ಮ ರೈತಾಪಿ ಬದುಕಿನ ಏಳುಬೀಳುಗಳಿಗೆ
ಊರ ದೈವಕೃಪೆ ಅವಕೃಪೆಗಳೇ
ಕಾರಣ ಎಂದು ತಿಳಿದವರು. ಊರಿನ ಶ್ರೀಮಂತರಿಂದ ಬಡವರೆಲ್ಲರ
ಸಾಮೂಹಿಕ ನಂಬಿಗೆಯಿದು. ಅದೇ ಕಾರಣಕ್ಕೆ ಎದುರಾದ
ಬರಗಾಲದ ಘೋರ ಪರಿಣಾಮಗಳನ್ನು
ಪರಿಹರಿಸಿ ಊರಿಗೆ ಮಳೆ ಬೆಳೆ
ನೀಡಲು ಪ್ರಾರ್ಥಿಸುವ ಪ್ರಕ್ರಿಯೆಯೇ
ಈ ಜಾತ್ರಾ ಮಹೋತ್ಸವ. ಬ್ರಿಟೀಶರ
ದುರಾಡಳಿತ, ಪ್ರಕೃತಿ ವಿಕೋಪ ಬಡತನಗಳ
ನಡುವೆಯೂ ಮೂರು ಊರುಗಳ ಜನ ಒಗ್ಗಟ್ಟಾಗಿ
ಜಾತ್ರೆಯನ್ನು ನೆರವೇರಿಸುತ್ತಾರೆ.
ʻʻ
ದತ್ತಪ್ಪ
ಮೂರತಾ ನೋಡಿ ಬಾದಾಮಿ
ಅಮಾಸಿ ಪಾಡೇದ ದಿನದಿಂದ
ಮೂರೂ ಊರಿಗೆ ಹೊರಬೀಡ
ಹೋಗಬೇಕು. ಅಮ್ಮನ ಉತ್ಸವಮೂರ್ತಿ
ಪಾಲಕಿಯೊಳಗ ಊದಸತಾ, ಬಾರಸತಾ, ಹೊರಬೀಡಿಗೆ ಹೋಗಬೇಕು. ಐದ
ದಿನಾ ಆದಮ್ಯಾಗ ಊರಿನ ನಾಕೂ ಗಡೀಗ ಹೋಗಿ ಪೂಜಾ ಮಾಡಿ, ಆರನೇ ದಿನಾ ಅಮ್ಮನ
ಜಾತ್ರಿ ಗದ್ದಗಿ ತಯಾರಮಾಡಬೇಕು. ಅಲ್ಲಿ ಪೂಜಾಮಾಡಿ ಒಂದ್ ದೀಪಾ ಹಚ್ಚಿಡ್ಬೇಕು. ಅದು ಜಾತ್ರಿ
ಮುಗಿಯೋವರೀಗೂ ಆರದಾಂಗ ನೋಡೂ ಕೆಲಸ ಪೂಜಾರೀದು. ಆರಿದರ ಊರಿಗೆ ಅರಿಷ್ಠಾ ಹತ್ತತದ ಮತ್ತ… ಆ
ದೀಪಕ್ಕ ಸಮೃದ್ಧಿ ದೀಪ ಅಂತಾರ.ʼʼ
ಹೀಗೆ ಮೂರೂ ಗ್ರಾಮಗಳು
ಸಂಬ್ರಮದಿಂದ ಆಚರಿಸಿದ ಜಾತ್ರೆ
ಎಲ್ಲ ಜಾತಿ ಜನಾಂಗ ಧರ್ಮ ಪ್ರದೇಶಗಳ ಸೌಹಾರ್ದವನ್ನು
ಬಿಂಬಿಸಿದರೆ, ಐವತ್ತು ವರ್ಷಕಳೆದು
ಸ್ವಾತಂತ್ರ್ಯಲಭಿಸಿ, ಆಧುನಿಕ ಶಿಕ್ಷಣ ಹಳ್ಳಿ ಹಳ್ಳಿಗೂ
ವ್ಯಾಪಿಸಿದ ಕ್ಷಣದಲ್ಲಿ ಮತ್ತೆ ಬರಗಾಲ ಆವರಿಸಿ,
ಜಾತ್ರೆಯ ಅನಿವಾರ್ಯತೆ ಉಂಟಾಗುತ್ತದೆ.
ಆಗ ಅದೇ ಮೂರು ಗ್ರಾಮಗಳ
ಚಿತ್ರಣವೇ ಬದಲಾಗಿದೆ. ಕೆಲವೇ ಜಾಣರು ಶ್ರೀಮಂತರಾಗಿ,
ಅವರೇ ಊರಿನ ನಾಯಕರಾಗಿ,
ಜಾತಿ, ಧರ್ಮ ಪ್ರದೇಶಗಳ ನಡುವೆ ರಾಜಕಾರಣ ಹೊಕ್ಕು
ಇಡೀ ವಾತಾವರಣವನ್ನೇ ಕುಲಗೆಡಿಸುತ್ತದೆ. ಗ್ರಾಮ
ಗ್ರಾಮಗಳಲ್ಲಿ ಯುದ್ಧಸದೃಷ ಪರಿಸ್ಥಿತಿ
ನಿರ್ಮಾಣಗೊಳ್ಳುತ್ತದೆ. ಗ್ರಾಮದ ಬದುಕು ಸೌಹಾರ್ದದ ಬದಲು ಸಂಘರ್ಷಕ್ಕೆ ಸಿಲುಕಿ
ಅಯೋಮಯಗೊಳ್ಳುತ್ತದೆ. ದೈವದ ತೇರಿಗೆ
ಗೆದ್ದಲು ಆಕ್ರಮಿಸಿ, ತೇರು ಕುಸಿದು
ಬೀಳುತ್ತದೆ. ಸಂಭ್ರಮದ ಜಾತ್ರೆ
ದುರಂತದಲ್ಲಿ ಕೊನೆಗೊಳ್ಳುತ್ತದೆ.
ಪಾಂಡುರಂಗ ರಾಯ, ಶಂಕ್ರಪ್ಪಜ್ಜ,
ಸಂಗಪ್ಪ, ಪಾರೀಸ, ಮುಂತಾದ ಪಾತ್ರಗಳು ಮಾನವೀಯ ದೌರ್ಬಲ್ಯವಿದ್ದೂ ಸಮುದಾಯ
ಸ್ನೇಹೀ ಗುಣಗಳನ್ನು ಹೊಂದಿ ಊರಿಗೆ ಸಲ್ಲುವಂತಾದರೆ, ನಿಂಗಪ್ಪನಂತಹ
ದುಷ್ಟ ಪಾತ್ರಗಳು, ಸಮಾಜ ಕಂಟಕಿಗಳಾಗಿ ರೂಪುಗೊಳ್ಳುತ್ತಾರೆ. ರಮಾಬಾಯಿ,
ಚಲುವಿ ಯಂತಹ ಸ್ತ್ರೀ
ಪಾತ್ರಗಳು, ಭಾರತೀಯ ಕುಟುಂಬವ್ಯವಸ್ಥೆಯ ಪುರುಷಾಳ್ವಿಕೆಯ
ನಡುವಲ್ಲೂ, ಸಂಯಮ ಸಹಬಾಳ್ವೆ, ಜಾಣತನಗಳಿಂದ ಗಮನಸೆಳೆಯುತ್ತಾರೆ. ಆದರೆ ಗ್ರಾಮೀಣ ಮಹಿಳೆಯರದ್ದೇ
ಆದ ಸಂಕಟ, ಸಂದಿಗ್ಧಗಳು ಕಾದಂಬರಿಯಲ್ಲಿ
ಚಿತ್ರಣಗೊಳ್ಳದೇ, ಪುರುಷರ ಸಂಗಾತಿಯಾಗಿ
ಮಾತ್ರ ಮಹಿಳಾ ಪಾತ್ರಗಳು
ಇಲ್ಲಿ ಕಾರ್ಯ ನಿರ್ವಹಿಸಿವೆ.
ಕಾದಂಬರಿಯಲ್ಲಿ ನಿರೂಪಕ
ಸಾಕಷ್ಟುಬಾರಿ ಸ್ವತಂತ್ರವಾಗಿ ಪ್ರವೇಶಿಸುತ್ತಾನೆ. ಘಟನೆಗಳಿಗೆ
ಸಸೂತ್ರವಾದ ಕೊಂಡಿಯಾಗುತ್ತಲೇ, ಕೆಲವೊಮ್ಮೆ
ಇತಿಹಾಸದಂತ ವಿಷಯಗಳನ್ನು ಪುಟಗಟ್ಟಲೇ
ವರ್ಣಿಸುವುದು ವಾಚ್ಯವಾದಂತೆನ್ನಿಸುತ್ತದೆ. ಕಲಾತ್ಮಕ
ಕಥನದ ನಡುವೆ ಪ್ರಬಂಧದ
ಸ್ವರೂಪವೊದಗಿದಂತೆನ್ನಿಸುತ್ತದೆ.
ಕೃತಿಯ
ತುಂಬೆಲ್ಲ ಅರ್ಥಪೂರ್ಣ ಗಾದೆಮಾತುಗಳು,
ರಂಜಿಸುವುದರೊಂದಿಗೆ ಚುರುಕು ಮುಟ್ಟಿಸುತ್ತದೆ. ʻʻ ಕಾಲ ಬಂದಾಗ ಉಪ್ಪರಿಗಿ
ತಿಪ್ಪಿ ಆಕ್ಕೈತಿ, ತಿಪ್ಪಿ
ಉಪ್ಪರಿಗಿ ಆಕ್ಕೈತಿ, ಮಂದ್ಯಾಗ್
ಒದ್ದು ಸಂಧ್ಯಾಗ ಕಾಲ್ ಹಿಡಿಯೋ ನಖ್ರಾ ಬ್ಯಾಡಲೇ…!! ಕಿವುಡ
ಕಿಚಡಿ ಬೇಡಿದ್ರ ಗೌಡ ಹಚಡಾ ಕೊಟ್ಟಿದ್ನಂತ,
ಊದೋದು ಕೊಟ್ಟು ಒದರೋದ ತಗೊಂಡಾಂಗಾತಲ್ಲ, ಹರದ ಹೋಗೋ ಹಾವ ಕೊಳ್ಳಿಗ್ ಹಾಕ್ಕೊಂಡಾಂಗ,ʼʼ
ಕರಿಮಣಿಯ
ಸಾಲಲ್ಲಿ ಹವಳ ಪೋಣಿಸಿದಂತೆ,
ಗಾದೆಮಾತುಗಳು, ಅಲ್ಲಲ್ಲಿ ಜನಪದ ಹಾಡುಗಳು ಕೃತಿಗೆ ಸಾಂಸ್ಕೃತಿಕ
ಘನತೆ ನೀಡಿವೆ. ಒಟ್ಟಿನಲ್ಲಿ ಆಧುನಿಕತೆ ಯಾಂತ್ರಿಕತೆ ಕೃತಕತೆ, ಮತ್ತು
ಶುಷ್ಕ ಆರ್ಥಿಕತೆಯಲ್ಲಿ ಬದುಕಿನ ನಿಜವಾದ
ಸತ್ವವನ್ನು ಕಳೆದುಕೊಳ್ಳುತ್ತಿರುವ ವರ್ತಮಾನದ
ವರ್ತನೆಗೆ, ಪ್ರತಿಯಾಗಿ ದೇಶೀ ತಾತ್ವಿಕತೆಯನ್ನು ಸ್ಮರಣೆಗೆ
ತರಬಹುದಾದ ಕೃತಿ ಜಾತ್ರಿ
ಕಾದಂಬರಿ.
ಸುಬ್ರಾಯ ಮತ್ತೀಹಳ್ಳಿ. ತಾ- ೧೫-೬-೨೦೨೫.