ಯುದ್ಧ ಮತ್ತು ಧರ್ಮ
ಧರ್ಮವೆಂದರೇನು...? ದೇವರೆಂದರೇನು....? ಎಂಬ ಪ್ರಶ್ನೆಗೆ ಉತ್ತರಿಸಲು
ಪ್ರಯತ್ನಿಸಿದ ಕೊನೆಗೂ ವಿಫಲರಾದ
ಲಕ್ಷಾಂತರ ಧಾರ್ಮಿಕ ಜನರನ್ನು ಕಂಡಿದ್ದೇವೆ. ಕಾಣುತ್ತಲೂ
ಇದ್ದೇವೆ. ಧರ್ಮವೆಲ್ಲ ಒಂದೊಂದು
ಮತವಾಗಿ, ಹತ್ತು ಹಲವು ಪಕ್ಷಗಳಾಗಿ,
ಅಸ್ತ್ರವಾಗಿ, ಶಸ್ತ್ರವಾಗಿ, ಮಾನವಧ್ವಂಸಕ್ಕೆ
ಕಾರಣವಾಗಿ ಮಾನವಜಗತ್ತನ್ನೇ ಅಯೋಮಯವಾಗಿಸಿದ
ಧರ್ಮವೆಂಬ ವಿಕ್ಷಿಪ್ತ ಪ್ರವಾಹ,... ಎಲ್ಲೆಲ್ಲೂ
ಇಲ್ಲದೆಯೇ, ಇದ್ದಂತೇ ಭಾಸವಾಗುತ್ತ, ನಿಜದ ಭ್ರಮೆಯಲ್ಲಿ ಬದುಕುವ, ಮಿಥ್ಯವನ್ನೇ
ಆಹಾರವಾಗಿಸಿಕೊಂಡು, ಸಾವಿನ, ತಲ್ಲಣದ, ಅಸಮಾನತೆಯ
ಆಕ್ರೋಶದ ಬೀಜಬಿತ್ತುತ್ತಿರುವ ಈ ಎಲ್ಲ
ಉಪದ್ರವಗಳು, ಒಂದಿಷ್ಟುಕಾಲ ನಿವೃತ್ತವಾಗಿದ್ದರೆ, ನಿರಾಳವಾಗಿ
ಉಸಿರಾಡಬಹುದಿತ್ತು.
ʻ ʻʻಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆʼʼ
ಕವಿ
ಜಿ.ಎಸ್. ಶಿವರುದ್ರಪ್ಪನವರ ಈ ಕವನ, ನಮ್ಮ
ಈ ಕಟುವಾಸ್ತವದ ಗೊಂದಲವನ್ನೇ
ವರ್ಣಿಸುತ್ತದೆ. ಧರ್ಮಾಂಧ ದೈವಾಂಧ
ಮನುಷ್ಯ, ದೈವತ್ವದ ನೆಲೆಗೇರದೇ,
ಅದನ್ನೇ ಸ್ವಾರ್ಥಕ್ಕೆ ದುಡಿಸಿಕೊಳ್ಳುವ ದುರಂತವನ್ನು
ಕಂಡ ಕವಿಮನಸ್ಸು ಮಾನವೀಯ
ಮೌಲ್ಯದ ಕನಸು ಕಾಣುತ್ತದೆ. ಯುದ್ಧಕ್ಕಾಗಿಯೇ ಹುಟ್ಟುವ ಧರ್ಮ, ಧರ್ಮಕ್ಕಾಗಿಯೇ ಪ್ರಾರಂಭವಾಗುವ
ಯುದ್ಧ, ಧರ್ಮ ಮತ್ತು ಯುದ್ಧ
ಎರಡೂ ವಿರುದ್ಧ ದ್ರುವಗಳಾದರೂ, ಒಟ್ಟಿಗೇ
ನರ್ತಿಸುತ್ತಿವೆ.
ಜೀವಜಗತ್ತಿನ ವೈವಿಧ್ಯಮಯ,
ವರ್ಣರಂಜಿತ ಸಂಸ್ಕೃತಿಯಾಳದಲ್ಲಿರುವ ಇನ್ನೂ
ಅಪರೂಪವಾದ, ಪ್ರೀತಿ, ಸ್ನೇಹ,
ಬಾಂಧವ್ಯ, ಸಹಬಾಳ್ವೆ, ಯಂತಹ ಆಹ್ಲಾದಕರ ಮೌಲ್ಯಗಳನ್ನೆಲ್ಲ, ಪೂರ್ಣವಾಗಿ
ಅನುಭವಿಸ ಬಹುದಾಗಿತ್ತೆಂದು ಆತಂಕದಲ್ಲಿ ಮಿಡಿಯುತ್ತದೆ.ನಮ್ಮನ್ನು ಅಜ್ಞಾನದ
ಕತ್ತಲೆ ಮುತ್ತಿಕೊಂಡಿರುವಾಗ, ತಾತ್ವಿಕತೆ
ಶೂನ್ಯಗೊಂಡಾಗ, ತಲೆಯೆತ್ತುವುದು ಒಣ ಅಹಂ ಮಾತ್ರ.
ಆಗ....
ʻʻ ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿʼʼ
ಇಂತಹ ಗೊಂದಲ
ನಿರ್ಮಾಣಗೊಳ್ಳುತ್ತದೆ.
ಕೇವಲ
ಆಚರಣೆ ಧರ್ಮವೇ... ಆರಾಧನೆ
ಧರ್ಮವೇ... ವಸ್ತ್ರ ಸಂಕೇತಗಳು
ಧರ್ಮವೇ... ಪ್ರಾದೇಶಿಕ ವೈವಿಧ್ಯ
ಧರ್ಮವೇ... ಅಥವಾ ಸಾಂಸ್ಕೃತಿಕ ಚಟುವಟಿಕೆಗಳು
ಮಾತ್ರ ಧರ್ಮವೇ...?
ಶಬ್ದಕೋಶ ವಿಶ್ವಕೋಶ ಧರ್ಮಗ್ರಂಥ ಗಳು ಧರ್ಮವನ್ನು
ಅರ್ಥೈಸುವ ಬದಲು ಗೊಂದಲ ಸೃಷ್ಟಿಸಿವೆ. ಲಕ್ಷ ಲಕ್ಷಪುಟಗಳ ವ್ಯಾಖ್ಯಾನಗಳು
ಮತ್ತಷ್ಟು ಸಂಘರ್ಷವನ್ನು ಹುಟ್ಟುಹಾಕಿವೆ. ಕೊನೆಗೂ
ಧರ್ಮ ಎಂಬ ಶಬ್ದ ಪಾಪ ಪುಣ್ಯದ
ಅಪಲಾಪದಲ್ಲಿ, ಮನುಷ್ಯನ ಏಳ್ಗೆಗೆ
ಗಮನವೀಯುವ ಬದಲು, ಹುಸಿ ಸ್ವರ್ಗ, ಹುಸಿ ಸಂಕೇತ, ಹುಸಿ ತತ್ವ,
ಹುಸಿ ಆಧ್ಯಾತ್ಮದ ಗಾಳಿಗುಳ್ಳೆಗಳಾಗಿ, ಅಂತರಂಗದ
ಅಸಹನೀಯ ಕತ್ತಲೆಗೆ ಮತ್ತಷ್ಟು
ಕಪ್ಪುಬಣ್ಣವನ್ನು ಲೇಪಿಸುತ್ತಿದೆ.
ಮನುಷ್ಯ
ಮೂಲಭೂತವಾಗಿ ಸ್ವಾರ್ಥಿ. ಸ್ವಾರ್ಥ
ಮಿತಿಯಲ್ಲಿದ್ದರೆ ಸಹ್ಯ. ಅದೇ ರೋಗವಾಗಿ ಪರಿಣಮಿಸಿದರೆ,
ಅಲ್ಲಿ ಮಾನವೀಯ ಮೌಲ್ಯ ಉಸಿರಾಡಲಾರದು. ಪ್ರೀತಿಸುವ
ಬದಲು ಉಪಯೋಗಿಸಿ ಕೊಳ್ಳುವ, ಸ್ನೇಹಕ್ಕೆ
ಬದಲು ವಂಚಿಸುವ ಪ್ರವೃತ್ತಿ
ತನ್ನಂತಾನೇ ಉದ್ಭವಗೊಳ್ಳುತ್ತದೆ
ಕನ್ನಡ
ನವ್ಯಸಾಹಿತ್ಯದ ಮೂಲಪ್ರವರ್ತಕ ಕವಿ ವಿ.ಜಿ.ಭಟ್ಟರು, ತಮ್ಮ ಒಂದು
ಕವನದಲ್ಲಿ,
ʻʻಎಲ್ಲ ಧರ್ಮ ಗ್ರಂಥಗಳು,
ಕೂಗಿ ಕೂಗಿ ಸವಕಲಾಗಿರುವ
ʻʻಆತ್ಮʼʼ ಎಂಬ ವಸ್ತುವನ್ನು
ಹುಡುಕಾಡತೊಡಗುತ್ತಾರೆ. ಎಲ್ಲ ಪ್ರದೇಶಗಳ ಧರ್ಮಕ್ಷೇತ್ರಗಳಲ್ಲಿ ಶೋಧಿಸುತ್ತಾರೆ.
ಧರ್ಮಪಂಡಿತರಲ್ಲಿ ಅಂಗಲಾಚುತ್ತಾರೆ. ಎಲ್ಲ ಧರ್ಮಗ್ರಂಥಗಳನ್ನು ಜಾಲಾಡುತ್ತಾರೆ.
ಎಲ್ಲೆಲ್ಲೂ ಅದರ ಸುಳಿವು
ಸಿಗಲಾರದು. ಒಂದುದಿನ ಆತ್ಮ ದೊರಕಿತೆಂದು ಖುಷಿಯಿಂದ
ಉದ್ಗೋಷಿಸುತ್ತಾರೆ. ಅದು ಶಬ್ದಕೋಶದ
ಪುಟವೊಂದರ ಮೂಲೆಯಲ್ಲಿ ಅಡಗಿತ್ತು.ʼʼ
ಅಂಧ ಧಾರ್ಮಿಕತೆ, ತಾತ್ವಿಕ
ಶೂನ್ಯತೆಯನ್ನು ವಿಡಂಬಿಸುವ ಕವಿ ವಾಸ್ತವದಲ್ಲಿ ತಾತ್ವಿಕತೆಯನ್ನು ಕಂಡುಕೊಳ್ಳಲು
ಪ್ರಯತ್ನಿಸುತ್ತಾರೆ.
ಧರ್ಮವೆಂಬ
ಅಮಲು ಮಿದುಳಿಗೆ ಸೇರಿದರೆ
ಅದಕ್ಕೆ ಸ್ವಾರ್ಥದ ಬೆಂಬಲ ದೊರಕಿದರೆ, ಅದೆಂತಹ
ಭಯಾನಕ ಸ್ಥಿತಿ ನಿರ್ಮಾಣಗೊಳ್ಳುತ್ತದೆ, ಎಂಬುದನ್ನು
ಇತಿಹಾಸ ನಗ್ನಗೊಳಿಸಿದೆ. ಸಾಮಾನ್ಯನಲ್ಲಿ
ಧರ್ಮದ ಅಮಲು ಬಿತ್ತಿ,
ಅದಕ್ಕೆ ಪೂರಕವಾಗಿ ದೇವಾಲಯ
ಚರ್ಚ, ಮಸೀದಿ ಗುರುದ್ವಾರ, ಮತ್ತು ಮಠಮಾನ್ಯಗಳನ್ನು ಸೃಷ್ಟಿಸುವ
ಪ್ರಭುತ್ವ, ಅದರ ಬೆಂಬಲದಲ್ಲಿ
ಅದರಮೇಲೆಯೇ ಅಣಬೆಯಂತೇ ಜೀವಿಸುವ
ಹುನ್ನಾರನ್ನು ನಡೆಸುತ್ತಲೇ ಇರುತ್ತದೆ.
ದೇವಾಲಯ ನಿರ್ಮಿಸಿ ತನ್ನ ಹೆಸರಿಗೆ ಶಾಶ್ವತತೆಯನ್ನು
ತಂದುಕೊಳ್ಳುವುದಲ್ಲದೇ ದೇವಮಾನವ ಪಟ್ಟಕ್ಕೇರಿ,
ಸಾಮಾನ್ಯರನ್ನು ಶೋಷಿಸುವ ರಕ್ಕಸತನಕ್ಕೆ
ಪ್ರವೇಶಿಸುತ್ತದೆ.
ಮೊನ್ನೆ
ಮೊನ್ನೆ ಕಾಶ್ಮೀರದ ರಕ್ತಚಲ್ಲಾಟಕ್ಕೆ ಕಾರಣವಾದ
ಪೆಹಲ್ ಗ್ರಾಮ, ಮೊದಲ ಹಳ್ಳಿಯೇನಲ್ಲ. ಈಗಾಗಲೇ
ನೂರಾರು ಕೊಲೆಗಳಿಗೆ, ದುರಾಕ್ರಮಣಕ್ಕೆ ಸಾಕ್ಷಿಯಾದ
ಕಾಶ್ಮೀರ, ಜಗತ್ತಿನ ರುದ್ರ ಸುಂದರಿಯಾಗಿ ಮೆರೆಯುತ್ತಿದೆ.
ಧರ್ಮ ಯಾವುದು
ಎಂದು ಗುರುತಿಸಲು ವಸ್ತ್ರಬಿಚ್ಚಿಸಿ ನಗ್ನಗೊಳಿಸುವಂತಹ ರಾಕ್ಷಸೀಯ
ಬರ್ಬರ ವರ್ತನೆಯನ್ನೂ ನಮ್ಮ ದೇಶದ
ಪಾಪದ ಕಣ್ಣುಗಳು ಕಂಡವು.
ಕೊಲೆಯ ಕೃತ್ಯ ಗೈದವರಲ್ಲಿ ವಿಧರ್ಮೀಯರನ್ನು
ನರಕಕ್ಕೆ ನೂಕಿದರೆ, ನಿಮಗೆ ಪವಿತ್ರವಾದ
ಸ್ವರ್ಗ ( ಜನ್ನತ್ ) ದೊರಕುತ್ತದೆ. ಸಾವಿರ ದೇವಕನ್ನಿಕೆಯರನ್ನು ಭೋಗಿಸುವ
ಅವಕಾಶ ನಿಮಗೆ ದೊರಕುತ್ತದೆ,
ಎಂದು ಮೆದುಳಲ್ಲಿ ತುರುಕುವ
ಧಾರ್ಮಿಕ ವಂಚಕರಲ್ಲಿ, ಅವರದ್ದೇ
ಹೆಣ್ಣುಗಳಿಗೂ ಸ್ವರ್ಗದಲ್ಲಿ ಸಾವಿರ ದೇವಪುರುಷರ ಭೋಗ ದೊರೆಯುತ್ತದೆ ಎಂಬ ಉಪದೇಶವೇಕೆ ಹೊಳೆಯಲಿಲ್ಲವೋ. ಸಂಪೂರ್ಣ
ಪುರುಷಪ್ರಭುತ್ವದ ಮನೋಸ್ಥಿತಿಗೆ, ತಮ್ಮದೇ
ಸಮುದಾಯದ ಹೆಣ್ಣುಗಳು ಪಾಪಲೇಪಿತರು.
ಭೋಗ ವಸ್ತುಗಳು.
ಇಂಥ ಮನೋಸ್ಥಿತಿ ಜಗತ್ತಿನೆಲ್ಲ
ಮತಗಳಲ್ಲೂ ಆಳದಲ್ಲಿ ಭದ್ರವಾಗಿ ಬೇರೂರಿವೆ.
ಯುರೋಪಿನಂತಹ ಮುಂದುವರೆದ ಪ್ರದೇಶಗಳಲ್ಲೂ
ಮಹಿಳೆಯರಿಗೆ ಮತಾಧಿಕಾರ ಬಂದು ಶತಮಾನವೂ ಕಳೆದಿಲ್ಲ.
ಭಾರತೀಯ ಬದುಕಿನಲ್ಲೂ ವಿಧವೆಯರ,
ತಳಸಮುದಾಯದ, ಶೋಷಣೆಗಳು ಇತ್ತೀಚೆಗೆ
ಮಾತ್ರ ಸಡಿಲಗೊಂಡಿದೆ ಎಂಬುದನ್ನು
ನಾವೂ ಗಮನಿಸಬೇಕು.
ಧರ್ಮಯುದ್ಧಗಳಿಗೆ ಶತ ಶತಮಾನಗಳ ಚರಿತ್ರೆಯಿದೆ.
ಈವರೆಗೆ ಹರಿದ ಜಗತ್ತಿನ
ಎಲ್ಲನದಿಗಳ ನೀರಿಗಿಂತ, ಧರ್ಮಗಳ
ಯುದ್ಧಗಳಲ್ಲಿ ಹರಿದ ರಕ್ತವೇ
ಇನ್ನೂ ಅಧಿಕ ಎನ್ನುತ್ತಾರೆ
ಇತಿಹಾಸಕಾರರು.
ಮನುಷ್ಯ
ಮೂಲಭೂತವಾಗಿ ಪ್ರಾಣಿಗಳಿಗಿಂತ ದುರ್ಬಲ.
ಜೀವದ ಜೊತೆಗೆ ಭಯವೂ ಸದಾ ಅವನಲ್ಲಿ
ಜೀವಂತವಾಗಿಯೇ ಇರುತ್ತದೆ. ಸದಾ ಕಾಡುತ್ತಿರುತ್ತದೆ. ಜೀವ ಮತ್ತು ಭಯಗಳ ಸಮತೋಲನಕ್ಕಾಗಿ ತಾನೇ ಒಂದು ಶಕ್ತ ದೈವವನ್ನು ಸೃಷ್ಟಿಸಿಕೊಳ್ಳುತ್ತಾನೆ. ಆರಾಧಿಸತೊಡಗುತ್ತಾನೆ. ಬೆಂಬಲಿಗರನ್ನು
ಕಲೆಹಾಕಿ ಧರ್ಮವೆಂಬ ಹೆಸರಲ್ಲಿ
ಗುಂಪುಗೂಡತೊಡಗುತ್ತಾನೆ. ಮಠ ಮಂದಿರ ಚರ್ಚು ಮಸೀದಿಗಳನ್ನು
ಸೃಷ್ಟಿಸಿ ತನ್ನ ಸುತ್ತಲೂ
ಭಾವನಾತ್ಮಕ ಕೋಟೆ ಕಟ್ಟಿಕೊಳ್ಳುತ್ತಾನೆ. ಅದಕ್ಕೆ
ತಾತ್ವಿಕ ಬಣ್ಣಬಳಿಯುತ್ತಾನೆ.
ಇದೇ ದೈವಿಕ ಭಾವನೆ
ಪ್ರಭುತ್ವದ ಮಹಾಶಕ್ತಿ. ಅದನ್ನೇ
ಓಲೈಸಿ ತನ್ನ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಲು, ಅಹರ್ನಿಶಿ
ದುಡಿಯತೊಡಗುತ್ತದೆ. ಉದಾರವಾಗಿ ಮಠಮಂದಿರಗಳಿಗೆ
ಹಣ ಸುರಿಯುತ್ತದೆ.
ಇದೀಗ
ನಮ್ಮೆದುರು ಜ್ವಲಂತವಾಗಿ ಉರಿಯುತ್ತಿರುವ ಉಗ್ರಗಾಮಿತನ,
ಅದರಿಂದ ಉದ್ಭವಗೊಂಡಿರುವ ಯುದ್ಧಸದೃಶ
ವಾತಾವರಣದ ಆಳದಲ್ಲಿ ಅದೇ ಧರ್ಮಾಂಧತೆ. ಅದೇ ಅಧಿಕಾರ
ದಾಹ, ಸ್ವಾರ್ಥ ಹೊಗೆಯಾಡುತ್ತಿದೆ.
ಧರ್ಮಗಳು
ಸತ್ಯವೋ ಅಸತ್ಯವೋ ಆವಾವ ವ್ಯಕ್ತಿಗೆ ಸಮುದಾಯಕ್ಕೆ
ಬಿಟ್ಟದ್ದು. ಸರಕಾರಗಳಿರುವುದು ಭೌತಿಕ ಆಡಳಿತಕ್ಕಾಗಿ ಮಾತ್ರ. ಅದು ಧರ್ಮಾತೀತವಾಗಿ, ಮಾನವ ಬದುಕಿನ
ವಿಕಾಸವೇ ಸರಕಾರಗಳ ಧ್ಯೇಯವಾಗಿದ್ದರೆ ಜಗತ್ತಿನ ಬಹುಪಾಲು ಸಮಸ್ಯೆಗಳು
ಇನ್ನಿಲ್ಲವಾಗುತ್ತವೆ. ಸರಕಾರವೇ ಒಂದೊಂದು
ಧರ್ಮದ ಹಿಂಬಾಲಕನಾಗಿ ಹೊರಟರೆ
ಅಪಾಯ ಖಂಡಿತ ಎಂಬುದು
ಇತಿಹಾಸ ಮತ್ತು ವರ್ತಮಾನಗಳು
ಸಾರಿ ಸಾರಿ ಹೇಳುತ್ತಿವೆ.
ದೇಶ
ದೇಶಗಳ ನಡುವೆ, ಸಮುದಾಯ ಸಮುದಾಯದ
ಒಳಗೆ, ಸಂಘರ್ಷವೇರ್ಪಟ್ಟಿರುವುದು, ಧರ್ಮ ಜಾತಿ ಪ್ರಾದೇಶಿಕತೆ, ಅಧಿಕಾರ
ಲಾಲಸೆ, ಪಟ್ಟಭದ್ರ ಹಿತಾಸಕ್ತಿ,
ಮತ್ತು ಭೃಷ್ಠತೆಗಳೇ ಕಾರಣವಾಗಿ,
ಸಾಮಾನ್ಯಜನತೆಯ ಬದುಕನ್ನು ನರಕಸದೃಷಗೊಳಿಸುತ್ತಿರುವ ಈ ಕ್ರೂರ
ವಾಸ್ತವದಲ್ಲಿ, ಎಲ್ಲ ಧರ್ಮಗ್ರಂಥಗಳೂ ರಕ್ತದಲ್ಲಿ
ತೇಲಾಡುತ್ತಿವೆ. ಅಂಧಶೃದ್ಧೆಯ ಕೂಪಗಳಲ್ಲಿ
ಧರ್ಮಧ್ವಜ ಹಾರಾಡುತ್ತಿದೆ.
ʻʻ ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆʼʼ
ಕೇವಲ ಧಾರ್ಮಿಕ,
ಜನಾಂಗೀಯ ಅಬ್ಬರಕ್ಕೆ ಆಕ್ರೋಶಕ್ಕೆ
ಬಲಿಯಾದ ಸಾಮಾನ್ಯ ಮನುಷ್ಯ ತನ್ನಂತರಂಗದ
ಧ್ವನಿಗೆ ಕಿವುಡಾಗಿ, ಸಮೂಹಸನ್ನಿಗೆ
ತನ್ನನ್ನು ತಾನೇ ತೆತ್ತುಕೊಳ್ಳುತ್ತ, ಮಾನಸಿಕವಾಗಿ
ದಿವಾಳಿಕೋರನಾದರೆ, ಇಡೀ ಜೀವನವೇ
ಅಸ್ತವ್ಯಸ್ತಗೊಳ್ಳುತ್ತದೆ. ಅತಿ ಪ್ರಾದೇಶಿಕತೆ, ಅತಿ ಧಾರ್ಮಿಕತೆ, ಅತಿ ಯಾಂತ್ರಿಕತೆ,
ಅತಿ ಆರ್ಥಿಕತೆ, ಮತ್ತು ಅತಿ ಬಿದ್ಧಿವಂತಿಕೆ ಜೀವವಿರೋಧಿಯಾಗುವ ಹಂತಕ್ಕೇರುತ್ತಿದೆ. ಬುದ್ಧನ
ಮಾನವೀಯತೆ, ವಿವೇಕರ ಧಾರ್ಮಿಕತೆ, ಟಾಲಸ್ಟಾಯ್
ಸಾಮಾಜಿಕತೆ, ಗಾಂಧಿ ತಾತ್ವಿಕತೆ, ಮತ್ತು ವ್ಯಾಸ ವಾಲ್ಮೀಕಿಗಳ
ಆಧ್ಯಾತ್ಮಿಕತೆ ಈ ಅತ್ಯಾಧುನಿಕ
ಬದುಕಿಗೆ ಮತ್ತೆ ಮತ್ತೆ ಕೈದೀವಿಗೆಯಾಗಬೇಕಿದೆ.
ಸುಮ ಸಂಪದ ಅಂಕಣಕ್ಕೆ.
೧೯-೫-೨೦೨೫.