Monday, 21 October 2024

ಲೋಹಿಯಾ ಕಣ್ಣಲ್ಲಿ ʻʻ ದಿಲ್ಲಿʼʼ

 

         ಅವಾಚ್ಯ ನಿಂದನೆ, ದೋಷಾರೋಪದ  ಕೆಸರೆರಚಾಟ,  ನೈತಿಕ ಅಧಃಪತನ,  ಸ್ವಜನ ಪಕ್ಷಪಾತ,  ಸಿದ್ಧಾಂತ ಶೂನ್ಯತೆಗಳಲ್ಲಿ, ಪಕ್ಷಾತೀತವಾಗಿ  ಭೃಷ್ಠಗೊಂಡಿರುವ  ಕರ್ನಾಟಕದ  ರಾಜಕಾರಣವನ್ನು ( ಬೆಂಗಳೂರನ್ನು)ಗಮನಿಸಿದಾಗೆಲ್ಲ,  ಸೈದ್ಧಾಂತಿಕ  ರಾಜನೀತಿಜ್ಞ, ಪ್ರತಿಭಾವಂತ  ಲೇಖಕ  ರಾಮ ಮನೋಹರ  ಲೋಹಿಯಾ ಪದೆ  ಪದೇ ನೆನಪಿಗೆ  ಬರುತ್ತಾರೆ.  ೧೯೫೮  ರಲ್ಲಿ  ಅವರು  ದೆಹಲಿಯನ್ನು  ಕುರಿತು  ‍ಧ್ಯಾನಿಸುತ್ತಾರೆ.  ನೂರಾರು  ವರ್ಷದ  ದೆಹಲಿ ಮಹಾನಗರದ  ಏಳುಬೀಳುಗಳನ್ನು  ಕಾವ್ಯಾತ್ಮಕವಾಗಿ  ವರ್ಣಿಸುತ್ತಾರೆ.

    `` Dilli also called Delhi ‘’  ಎಂಬ  ಲೋಹಿಯಾರವರ  ಇಂಗ್ಲಿಶ್‌  ಲೇಖನವೊಂದನ್ನು, ನೀ.ನಾ.ಸಂ, ಕೇ.ವಿ. ಸುಬ್ಬಣ್ಣ. ಸಮರ್ಥವಾಗಿ  ಕನ್ನಡಕ್ಕೆ   ಬಹಳ ಹಿಂದೆಯೇ  ಅನುವಾದಿಸಿದ್ದಾರೆ.  ಲೋಹಿಯಾರವರ  ಸಂಸ್ಕೃತಿ  ನಿಷ್ಠತೆ  ನವೀನ ದೃಷ್ಟಿ, ಕಾವ್ಯದ ಆಳ ಮತ್ತು ಚಾರಿತ್ರಿಕ ಪ್ರಜ್ಞೆಗಳನ್ನು  ತನ್ನ ಒಡಲಲ್ಲಿ ಹುದುಗಿಸಿಕೊಂಡ  ಪ್ರಸ್ತುತ  ಲೇಖನವನ್ನು  ಓದಿದಾಗ  ನಮ್ಮ ಬೆಂಗಳೂರಿನ  ಸುದೀರ್ಘ ಇತಿಹಾಸ, ಏಳು ಬೀಳು,  ಮತ್ತು  ಸದ್ಯದ  ರಾಜಕೀಯ ಕೆಸರು  ನೆನಪಿಗೆ  ಬರುತ್ತದೆ.

    ಸುಪ್ರಸಿದ್ಧ ಲೇಖಕ  ಕುಷ್ವಂತ್‌ ಸಿಂಗ್‌  ರವರ  ದಿಲ್ಲಿ ಕಾದಂಬರಿಯೂ  ಸಹ  ಐವತ್ತರ  ದಶಕದಲ್ಲಿ  ದೊಡ್ಡ ಸಂಚಲನವನ್ನೇ  ಉಂಟುಮಾಡಿತ್ತು.  ಖುಷವಂತ್‌ ಸಿಂಗ್‌  ದೆಹಲಿಯನ್ನು  ಎರಡೇ ಎರಡು ವಸ್ತುವಿನ  ಮೂಲಕ  ಗುರುತಿಸುತ್ತಾರೆ.  ಅದೇ  ದಿಲ್ಲಿಯ ಆತ್ಮ ಎನ್ನುತ್ತಾರೆ.  ಒಂದು  ದಿಲ್ಲಿಯ ಸ್ಮಶಾನ. ಎರಡನೆಯದು  ಅಲ್ಲಿಯ  ಹಿಜಡಾಗಳು. ( ಮಂಗಳ ಮುಖಿಯರು)

     ಹಾಗೆಂದು  ದಿಲ್ಲಿಯನ್ನು  ಕುರಿತು  ದೇಶವಿದೇಶಗಳ  ಹತ್ತು ಹಲವು ಲೇಖಕರು  ಬರೆದಿದ್ದಾರೆ.  ಆದರೆ  ಲೋಹಿಯಾ  ಕಂಡ  ದಿಲ್ಲಿ  ಮಾತ್ರ  ಅತ್ಯಂತ  ವಿಶಿಷ್ಟವಾಗಿದೆ.

     ಲೋಹಿಯಾ,  ಭಾರತ ಕಂಡ  ಅಪ್ರತಿಮ  ರಾಜನೀತಿಜ್ಞ. ಇಡೀ  ವಿಶ್ವಾನುಭವ ಹೀರಿ  ಭಾರತೀಯ  ಮಣ್ಣಿನಲ್ಲಿ ಚಿಗುರೊಡೆದು  ಹೆಮ್ಮರವಾಗಿ  ಬೆಳೆದ ಇವರು ರಾಜಕಾರಣದ  ಸಂತರಾದರು.  ಅಹಿಂಸೆಯ ನೆರಳಲ್ಲಿ ಕ್ರಾಂತಿಕಾರರಾದರು.  ಗಾಂಧಿಯವರ  ಆಪ್ತ ಶಿಷ್ಯರಾಗಿಯೂ  ಕಟ್ಟಾ ನಾಸ್ತಿಕರಾದರು.  ಭಾರತೀಯ  ಸಂಸ್ಕೃತಿಯ  ವಕ್ತಾರರಾಗುತ್ತಲೇ  ಶುದ್ಧ ಸಮಾಜವಾದಿಯಾಗಿ ರೂಪುಗೊಂಡರು.  ಮಾರ್ಕ್ಸ  ಸಿದ್ಧಾಂತ, ಮತ್ತು  ನಮ್ಮ ಪೌರಾತ್ಯ ತತ್ವಜ್ಞಾನಗಳನ್ನು  ಕಸಿಮಾಡಿ  ಭಾರತೀಯ  ಮನೋಸ್ಥಿತಿಗೆ  ಆಪ್ತವಾಗುವ ಸಂಯೋಜಿತ  ರಾಜನೀತಿಯ  ಹೊಸದೊಂದು ತಳಿಯನ್ನೇ  ಸೃಷ್ಟಿಸಿದರು.

  ಮಾರ್ಕ್ಸವಾದದ  ನಿಷ್ಠುರತೆ,  ಗಾಂಧೀವಾದದ  ಅತಿಸಾಂಪ್ರದಾಯಿಕತೆಯಂತಹ  ಅತಿರೇಕಗಳು,  ಭಾರತದಲ್ಲಿ  ಒಂದು  ಅತೃಪ್ತ ಸಮುದಾಯವನ್ನೇ  ಸೃಷ್ಟಿಸಿತ್ತು. ಅಂಥ  ಸೈದ್ಧಾಂತಿಕ  ಗೊಂದಲಕ್ಕೆ  ಪರಿಹಾರವಾಗಿ ಲೋಹಿಯಾ  ಚಿಂತನೆ  ಪರಿಣಾಮಕಾರೀ  ಪ್ರಭಾವ  ಬೀರಿತು.  ಸಾಮಾನ್ಯರಿಂದ  ಶಿಕ್ಷಿತರವರೆಗೆ, ಕಾರ್ಮಿಕರಿಂದ  ಉದ್ಯಮಿಗಳ ವರೆಗೆ, ರೈತರಿಂದ  ರಾಜಕಾರಣಿಗಳವರೆಗೆ  ಲೋಹಿಯಾ  ವಿಚಾರ ಪ್ರವಾಹ  ಚುಂಬಕದಂತೇ  ಸೆಳೆಯಿತು.    ಕಾಲದ  ಭಾರತೀಯ  ಸಾಹಿತ್ಯವಲಯದ  ನವ್ಯಮಾರ್ಗಕ್ಕೆ  ಹೊಸ  ಸಂಚಲನ ಮೂಡಿಸಿತು.

     ನಂತರದ  ದಿನಗಳಲ್ಲಿ  ಲೋಹಿಯಾವಾದಿಗಳೆಂದು  ಮೈಯುಬ್ಬಿಸಿ ನಡೆದಾಡಿ, ಗದ್ದಲವೆಬ್ಬಿಸಿದ  ಲೋಹಿಯಾ ವಾದಿಗಳು  ರಾಜಕೀಯವಾಗಿ  ಮೇಲೇರುವ  ನಿಚ್ಚಣಿಕೆಯನ್ನಾಗಿ  ಲೋಹಿಯಾ ವಾದವನ್ನು ಉಪಯೋಗಿಸಿಕೊಂಡರು. ಸೈದ್ಧಾಂತಿಕವಾಗಿ  ಭೃಷ್ಠಗೊಂಡು  ವಿವಿಧ  ಪಕ್ಷಗಳ ಬಾಲಂಗೋಚಿಗಳಾಗಿ  ಪರಿವರ್ತಿತಗೊಂಡಿದ್ದು  ಮಾತ್ರ  ದುರಂತ.

    ಇನ್ನು ಬುದ್ಧಿಜೀವಿಗಳ  ದುರಂತವನ್ನಂತೂ  ವರ್ಣಿಸುವುದೇ  ಬೇಡ.  ಲೋಹಿಯಾರ  ದಿಲ್ಲಿ ಲೇಖನವನ್ನು ಪ್ರಸ್ಥಾಪಿಸುವುದರೊಂದಿಗೆ  ಪ್ರಾರಂಭಿಸಿದ  ಲೇಖನ   ವರ್ತಮಾನದ  ರಾಜಕೀಯ ನೈತಿಕ  ಅಧಃಪತನದ  ಅಧ್ಯಾಯ ತೆರೆಯಿತು  ಅಂದುಕೊಂಡರೆ  ಆಶ್ಚರ್ಯವಿಲ್ಲ.  ದಿಲ್ಲಿಯಮೇಲೆ  ಮುಘಲ್‌ ಆಕ್ರಮಣವಾದಾಗಿನಿಂದ  ಸ್ವಾತಂತ್ರ್ಯೋತ್ತರದ  ವರೆಗೆ  ವ್ಯಾಪಿಸಿಕೊಂಡ  ಅವರ ಲೇಖನ   ದೇಶದ  ಮೂಲಭೂತ  ದೌರ್ಬಲ್ಯ,  ನೋವು  ಸಂಕಟಗಳನ್ನ  ಅನಾವರಣ ಗೊಳಿಸುತ್ತ, ಕಾವ್ಯವೊಂದರ  ಆಳ ಅಗಲಗಳನ್ನು  ಪಡೆದು ಬಿಡುತ್ತದೆ.

      ʻʻ ಪ್ರಪಂಚದ  ರಾಜಧಾನಿಗಳಲ್ಲೆಲ್ಲ  ಅತ್ಯಂತ  ಮೋಹಕಳೂ  ಅತ್ಯಂತ ಭೃಷ್ಠಳೂ ಆದ  ನಾಯಕಸಾನಿ  ಡೆಲ್ಲಿ.ಒಬ್ಬ ಪ್ರಾಮಾಣಿಕ ಪ್ರೇಮಿಗೆ  ಈತನಕವೂ  ಆಕೆ  ತನ್ನನ್ನು ಒಪ್ಪಿಸಿಕೊಂಡಿಲ್ಲ. ಯಾವತ್ತೂ  ಅನಾಗರಿಕ  ಕ್ರೂರಿಯಿಂದ  ದಮನಗೊಳಿಸಲ್ಪಟ್ಟಿದ್ದಾಳೆ.  ಮತ್ತು ಅವನನ್ನು ಚಂದ ನಡವಳಿಕೆಗೆ  ಪುಂಡತನಕ್ಕೆ ತಿದ್ದಿ ಸಂಸ್ಕರಿಸಲು ಯತ್ನಿಸಿದ್ದಾಳೆ.  ಪ್ರಯತ್ನ ಸಿದ್ಧಿಸುತ್ತದೆ  ಎನ್ನುವಾಗಲೇ  ಮತ್ತೊಂದು  ನಾಗರಿಕರ  ಗುಂಪನ್ನು ಆಕರ್ಷಿಸಿ ಸಂಸ್ಕಾರ  ಕೊಡುವ  ಸೆರಗಿನೊಳಕ್ಕೆ  ಸೇರಿಸಿಕೊಂಡಿದ್ದಾಳೆ. ʼʼ ಎಂದು  ದಿಲ್ಲಿಯನ್ನು ಪರಿಚಯಿಸುತ್ತ  ಪ್ರಪಂಚದ ಇನ್ನಿತರ  ಪ್ರಮುಖ  ರಾಜಧಾನಿಗಳನ್ನು  ಮುಖಾಮುಖಿಯಾಗಿಸುತ್ತಾರೆ.  ʻʻಪ್ಯಾರಿಸ್‌, ವಾಸಿಂಗ್ಟನ್‌, ಟೋಕಿಯೋ,  ಡಮಾಸ್ಕಸ್‌  ಗಳ  ರೂಪ  ಪ್ರವೃತ್ತಿಯಂತೇ  ದಿಲ್ಲಿಯಿಲ್ಲ. ಅವೆಲ್ಲವುಗಳ  ಕೊಚ್ಚೆ  ಕೆಸರು ಮತ್ತು ಚಲುವುಗಳ  ಒಟ್ಟೂ ಮೊತ್ತದಂತಿದ್ದಾಳೆ.    ರಾಜಧಾನಿಗಳೆಲ್ಲ ರೂಪ  ಗಾಂಭೀರ್ಯಗಳುಳ್ಳ  ಗರತಿಯಂತಿದ್ದರೆ, ಡೆಲ್ಲಿಗೆ  ಗಂಡನೇ ಇಲ್ಲ.  ಇವಳು ಯಾರೊಬ್ಬನನ್ನೂ  ಪ್ರೇಮಿಯೆಂದು ಸ್ವೀಕರಿಸಿದ್ದೂ ಇಲ್ಲ. ಲಲ್ಲೆಗರೆಯಲೂ ಇಲ್ಲ.  ಬಲವಂತದಿಂದ  ಆಕ್ರಮಿಸಿದ  ಬರ್ಬರರನ್ನು ನಯವಾಗಿಸುವುದಕ್ಕೆ,  ನಿರ್ವೀರ್ಯ  ಗೊಳಿಸುವುದಕ್ಕೆ  ತನ್ನನ್ನು ಅರ್ಪಿಸಿಕೊಂಡ  ಮಹಾಸೂಳೆಯಂತಿದ್ದಾಳೆ  ದಿಲ್ಲಿ.  ವಿಸ್ಮಯಮೂಡುವ  ಸೊಬಗು, ಆದರೆ ಹೃದಯವೇ  ಇಲ್ಲ.  ಆಕೆ  ಬದುಕುವುದೇ  ಸೌಂದರ್ಯಕ್ಕಾಗಿ, ನಯಗಾರಿಕೆಗಾಗಿ, ಇವಳು  ವಿಶ್ವದ  ಬಹುದೊಡ್ಡ  ನಾಯಕಸಾನಿ. ʼʼ

   ʻʻ ಒಬ್ಬೊಬ್ಬ  ಹೊಸ ವಿಜೇತ  ಬಂದಹಾಗೆ  ದಿಲ್ಲಿ ತನ್ನ ನಿವೇಶನ  ಬದಲಿಸಿದೆ. ಸುಸಂಸ್ಕೃತ ಪಾಪಗಳ  ಒಂದೊಂದೂ  ಹೊಸ  ಸಾಹಸವನ್ನು  ತಕ್ಷಣ  ಅದು  ಭೂಮಿಯಮೇಲೆ  ಪ್ರಾರಂಭಿಸಿದೆ.  ಹದಿನೈದು ಮೈಲಿ  ವಿಸ್ತೀರ್ಣದೊಳಗೆ  ಎಂಟು ಶತಮಾನಗಳಷ್ಟು  ಕಡಿಮೆ  ಅವಧಿಯ  ಏಳು ದಿಲ್ಲಿಗಳಿವೆ.  ನಯವಂತಿಕೆ  ಅಪಮಾನಗಳು    ಏಳು  ಅಥವಾ  ಎಂಟು ದಿಲ್ಲಿಗಳಲ್ಲಿ  ದಾಖಲಾಗಿರುವುದೇ  ಸ್ತರ ಸ್ತರಗಳಾಗಿ. ದೃಶ್ಯ  ದೃಶ್ಯಗಳಾಗಿ.ʼʼ

     ಎಂದು  ದೆಹಲಿಯ  ಸುದೀರ್ಘಕಾಲದ  ರಕ್ತರಂಜಿತವಾದ  ಒಂದೊಂದೇ  ಹೆಜ್ಜೆಯನ್ನು  ವರ್ಣಿಸುತ್ತ,  ಕುತುಬ್‌  ಮೀನಾರ್‌  ಎದುರು  ಧ್ಯಾನಸ್ಥರಾಗುತ್ತಾರೆ.

   ʻʻ ಇಂಡಿಯಾ  ಇತಿಹಾಸದ    ಹಾಳುಕೊಂಪೆಯಲ್ಲಿ  ನಾನು  ಒಮ್ಮೆ  ಒಂದು ರಾತ್ರಿ  ಕಳೆದಿದ್ದೆ.  ಅದರ  ರಹಸ್ಯವನ್ನು  ಅನ್ವೇಷಿಸುವ  ಹಿರಿಯಾಸೆಯಿಂದ.  ನನಗೆ ಕೋಪವಿರಲಿಲ್ಲ. ತಾಯಿಯ ಬಗೆಗೆ  ಕೋಪಗೊಳ್ಳುವುದು  ಹೇಗೆ..?.  ವಿಜೇತನಾಗಿ  ಬರುತ್ತಿದ್ದ  ವಿದೇಶಿಯನಲ್ಲಿ  ಒಲವು  ತೋರಿದ್ದರೂ  ಕೂಡಾ..?.  ಅಥವಾ    ತಾಯಿಯನ್ನು ಅಪಹರಿಸಿ  ಆಮೇಲೆ  ಅವಳ ಗಂಡನಾದ  ಮಲತಂದೆಯ  ಮೇಲಾಗಲೀ,      ಕೂಡಿಕೆಯ  ಪರಿಣಾಮದಿಂದ  ಹುಟ್ಟಿದ  ಸೋದರರ  ಮೇಲಾಗಲೀ  ಹೇಗೆ  ಕೋಪಗೊಳ್ಳಲಿ,,?  ನನ್ನಲ್ಲಿ  ಉಂಟಾದುದು  ಕ್ರೋಧವಲ್ಲ,,  ಸಂಕಟ. ʼʼ  ಎನ್ನುತ್ತ...........

    ʻʻಇದು  ಮುಸ್ಲಿಂ  ವಿರೋಧಿ ಭಾವವಲ್ಲ.  ಮುಸ್ಲಿಮ್‌  ಕುತುಬ್‌ ಅನ್ನು,  ಮುಸ್ಲಿಮ್‌  ತುಘಲಕಾಬಾದ್‌  ಆಕ್ರಮಿಸಿತು.  ಮುಂದೆ ಅದನ್ನೂ ಮತ್ತೊಬ್ಬ ಮುಸ್ಲಿಂ  ಆಕ್ರಮಣಕಾರಿ  ವಶಪಡಿಸಿಕೊಂಡ.  ದೆಲ್ಲಿಯಮೇಲೆ  ತೈಮೂರ್‌  ನಾದಿರ್‌ ಶಾ  ಮತ್ತು ಅಹಮದ್‌ ಶಾ, ಇವರೆಲ್ಲ ಅಮಾನವೀಯವಾಗಿ ಗೈದ  ಬರ್ಬರ  ಲೂಟಿ, ಸಾಮೂಹಿಕ ಕಗ್ಗೊಲೆಗಳು, ಇಡೀ  ಪ್ರಪಂಚವನ್ನು  ತತ್ತರ  ನಡುಗಿಸಿದ  ಘಟನೆಗಳು  ಹಿಂದೂಗಳಿಗೆಷ್ಟೋ  ಮುಸ್ಲಿಮರಿಗೂ  ಕ್ರೋಧ  ಹುಟ್ಟಿಸುವಂತಹದ್ದಾಗಿದೆ.  ಮುಂದೆ  ಅವರನ್ನು ಮಣಿಸಿ  ಇಂಗ್ಲಿಶರು ಬಂದರಲ್ಲ...!! ʼʼ  ಎನ್ನುತ್ತಾರೆ.  ಲೋಹಿಯಾ  ವರ್ಣಿಸಿದಂತೇ ....

    ಒಂದೆಡೆ ರಾಜಗಂಭೀರ  ಕುತುಬ್‌, ಇನ್ನೊಂದೆಡೆ  ಅರ್ಧ  ಕಟ್ಟಿನಿಂತ  ಅಲ್ಲಾವುದ್ದೀನನ  ಮಿನಾರ್‌,  ಇವೆರಡರ  ತಳದಲ್ಲಿ ಸೊಗಸು ಕಪ್ಪಿನ  ಕಬ್ಬಿಣದ  ಸ್ಥಂಬ,    ಮೂರು  ಕೂಡಿ ರಚಿಸಿದ ತ್ರಿಕೋಣವನ್ನು ತುಂಬ  ಹೊತ್ತು  ನೋಡುತ್ತ  ನಿಂತಿದ್ದೆ. ಆಗ  ನಾನು  ಒಬ್ಬಂಟಿ. ಚಂದ್ರನೂ  ಕ್ಷೀಣನಾಗಿ ನನ್ನ ಸಹಾಯಕ್ಕೆ ಬರದ ಹಾಗಿದ್ದ.  ಅವ್ಯಕ್ತವಾದ  ನೀಗೂಢವಾದ ಯಾವುದೋ  ಭಯ  ನನ್ನನ್ನು ಈ ತ್ರಿಕೋಣದ  ಅಡಿರೇಖೆಗೆ ತಳ್ಳಿ ನಿಲ್ಲಿಸಿದಂತಾಗಿತ್ತು.   ಅದೇನು  ಹಾವುಗಳ  ಭಯವೋ  ಕಳ್ಳರ  ಧರೋಡೆಕೋರರ  ಭಯವೋ   ಅಥವಾ  ಹತ್ತು ಶತಮಾನಗಳಿಂದಲೂ  ಹಾಗೇ  ಭವ್ಯ ಮಹಲುಗಳಲ್ಲಿ ದುರ್ವ್ಯವಹಾರಗಳನ್ನು  ಚೋದಿಸುವ  ಆದರೆ  ಬಡವರಮೇಲೆ  ಸಾರ್ವಜನಿಕ  ಸ್ಥಳಗಳಲ್ಲಿ  ಒಂಟಿಯಿರಲಿ ಸಮೂಹದಲ್ಲಿರಲಿ ಎರಗುವ  ಸಂಘೀಯರ  ಭಯವೋ,  ಅಥವಾ  ಇಂಡಿಯಾ  ಇತಿಹಾಸದ  ಕ್ರೌರ್ಯ  ಮಾನ ಭಂಗಗಳ  ವರ್ಣಿಸಲಾಗದಂಥ  ಭಯ  ಮಾತ್ರವೋ....?ʼʼ

    ಎಂದು ದಿಲ್ಲಿಯ  ಆಕ್ರಮಣ  ನೋವು  ತಲ್ಲಣಗಳನ್ನು  ಲೋಹಿಯಾ  ಮೆಲುಕು ಹಾಕುತ್ತ  ಬರೆಯುವಾಗ, ಭಾರತೀಯ  ಸಮಾಜದೆದುರು  ಒಬ್ಬ  ಬಂಡಾಯಗಾರ  ರಾಜಕಾರಣಿಯಾಗಿ  ಸ್ವಾತಂತ್ರ್ಯಹೋರಾಟದ  ಕ್ರಾಂತಿಕಾರಿಯಾಗಿ,  ಕಾಣುವುದಕ್ಕಿಂತ  ಒಬ್ಬ  ಪ್ರತಿಭಾ ಸಂಪನ್ನ ಸಮಾಜಶಾಸ್ತ್ರಜ್ಞರಾಗಿ,     ಸಂವೇದನೆ ಹೊಂದಿದ  ಕವಿಯಾಗಿ  ಕಾಣುತ್ತಾರೆ.  ಅವರ  ಆಳದಲ್ಲಿರುವ  ಸತ್ಯನಿಷ್ಠುರತೆ  ಅಪ್ಪಟ  ಪ್ರಾಮಾಣಿಕತೆ, ಚಿಂತನಶೀಲತೆಯಂಥ  ಗುಣಗಳನ್ನು  ಅವರ  ಅನುಯಾಯಿಗಳೇ  ಅರ್ಥೈಸಿಕೊಳ್ಳದಾದರು.  ಇದೇ  ಕಾರಣಕ್ಕಿರಬಹುದು, ಅವರು ಬದುಕಿಡೀ  ಕಟ್ಟುವುದು  ಮುರಿಯುವುದು , ಮುರಿದು ಮತ್ತೆ  ಕಟ್ಟುವುದು,    ಕ್ರಿಯೆಯನ್ನೇ ಮುಂದುವರೆಸಿದ್ದು. 

    ಲೋಹಿಯಾರಲ್ಲಿಯ  ದೇಶೀ  ಚಿಂತನೆ  ದೇಶೀ ಬಣ್ಣ, ಸಂಸ್ಕೃತಿ  ಮತ್ತು ವೈವಿಧ್ಯಪೂರ್ಣ ಭಾಷೆಗಳ  ಬಗೆಗಿನ  ಪ್ರೀತಿಯ  ಗಾಢತೆ, ಈ  ಎಲ್ಲ ಗುಣಗಳು  ಗಾಂಧಿಯವರ  ಪ್ರವೃತ್ತಿಗೆ  ಹೋಲುತ್ತದೆ.  ಮಾತೃಭಾಷೆಗಳಿಗೆ  ಪ್ರಾಮುಖ್ಯ ನೀಡದೇ ಪರಕೀಯ  ಭಾಷೆಗಳನ್ನು  ಅಪ್ಪಿಕೊಳ್ಳುವ ಕ್ರಿಯೆ  ಎಲ್ಲಿಯವರೆಗೆ  ಇರುತ್ತದೆಯೋ  ಆವರೆಗೂ  ದಯನೀಯ  ದಾಸ್ಯ  ತಪ್ಪದು,  ಎಂಬುದು ಅವರ  ಖಚಿತ  ನಿಲುವಾಗಿತ್ತು.  ಒಮ್ಮೆ  ನೆಹರೂ  ʻʻ ಇಂಗ್ಲಿಶ್‌  ಭಾಷೆ ನಮ್ಮ ದೇಶಕ್ಕೆ  ಹೊಸ ಜ್ಞಾನದ  ಕಿಟಕಿಯಿದ್ದಂತೆʼʼ ಎಂದು  ಉದ್ಘರಿಸಿದಾಗ,  ಲೋಹಿಯಾ  ತಕ್ಷಣ  ಪ್ರತಿಕ್ರಿಯಿಸಿದ್ದರು. 

     ʻʻಗೋಡೆಯೇ  ಇಲ್ಲದ    ದೇಶಕ್ಕೆ  ಕಿಟಕಿ  ಎಲ್ಲಿಂದ  ಬರಬೇಕು....?ʼʼ  ಎಂದು.

ʻʻಡೆಲ್ಲಿಯನ್ನು ಜಾಗತಿಕ ಇತಿಹಾಸದ  ಅತ್ಯಂತ  ಹೃದಯಹೀನ  ನಾಯಕ ಸಾನಿಯಾಗಿ  ರೂಪಿಸಿದ  ಕಾರಣಗಳು  ಅನೇಕವಿರಬಹುದಾದರೂ  ಭಾಷೆಯ  ಬಲವಂತ ಎಲ್ಲಕ್ಕಿಂತ ಹೆಚ್ಚು  ಕೆಲಸ ಮಾಡಿದ  ಹಾಗೆ  ಕಾಣುತ್ತದೆ.  ಜಗತ್ತಿನ ಯಾವ  ರಾಜಧಾನಿಯೂ  ಇಷ್ಟು ದೀರ್ಘಕಾಲಪರ್ಯಂತ  ವಿದೇಶೀ  ಹಾಗೂ  ಸಾಮ್ರಾಜ್ಯಶಾಹೀ ಭಾಷೆಯೊಂದನ್ನು  ಬಳಸಿಕೊಂಡದ್ದು  ಇಲ್ಲವೇ  ಇಲ್ಲ. ಅರೇಬಿಕ್‌  ಪರ್ಶಿಯನ್‌  ಇಂಗ್ಲಿಶ್‌ ಈ  ಎಲ್ಲ  ಭಾಷೆಗಳೂ  ಜನಕ್ಕೆ ಅಪರಿಚಿತ.  ಅವೇ  ಡೆಲ್ಲಿಯನ್ನು ಆಳುತ್ತ  ಬಂದಿವೆ.   ಪ್ಯಾರಿಸ್‌  ಬರ್ಲಿನ್‌, ಲಂಡನ್‌  ರೋಮ್‌    ನಗರಗಳ  ವಿಶ್ವವಿದ್ಯಾಲಯಗಳು,  ನ್ಯಾಯಾಲಯಗಳು,  ಮತ್ತು  ಪಾರ್ಲಿಮೆಂಟ್‌  ಗಳು, ತಮ್ಮ ಜನಕ್ಕೆ  ತಿಳಿಯದ  ಭಾಷೆಗಳಲ್ಲಿ  ವ್ಯವಹರಿಸುವುದಾಗಿದ್ದರೆ , ಹೀಗೆ  ಹತ್ತು ಶತಮಾನಗಳ  ಕಾಲ ಸತತವಾಗಿ  ನಡೆಯುತ್ತ  ಬಂದಿದ್ದರೆ,  ಅಷ್ಟು ಕಾಲವೂ  ಜನ ಪ್ರತಿಭಟಿಸದೇ  ಉಳಿದಿದ್ದರೆ,    ರಾಜಧಾನಿಗಳು  ಕೂಡಾ  ನಾಯಕಸಾನಿಗಳೇ  ಆಗಿಬಿಡುತ್ತಿದ್ದವು.  ಅಲ್ಲಿಯ  ಜನ  ಡೋಲುವಾದಕರಾಗಿ  ಪರಿವರ್ತನೆ  ಗೊಂಡುಬಿಡುತ್ತಿದ್ದರು.  ಅಲ್ಲಿಯ  ವಿಶ್ವವಿದ್ಯಾಲಯ, ನ್ಯಾಯಾಲಯ, ಪಾರ್ಲಿಮೆಂಟ್‌ ಗಳು  ಇಂಡಿಯಾದಲ್ಲಿನ  ಹಾಗೇ  ಹೆಣವಾಗಿರುತ್ತಿದ್ದವು.ʼʼ

   ಡಾ  ಲೋಹಿಯಾರ  ಸ್ವಾಭಿಮಾನದ ಸಾಕ್ಷಿ ಈ  ಮೇಲಿನ  ಸಾಲುಗಳಲ್ಲಿವೆ.  ಸ್ವಾತಂತ್ರ್ಯಾನಂತರದಲ್ಲಿ  ಎರಡು ದಶಕಗಳ  ಕಾಲ ಬದುಕಿದ್ದ  ಲೋಹಿಯಾ  ಸಾವಿರ ವರ್ಷದ  ದಿಲ್ಲಿಯ ಇತಿಹಾಸದೊಂದಿಗೆ  ಇಡೀ ದೇಶದ  ಮನಸ್ಸು  ಹೇಗೆ  ಛಿದ್ರಗೊಂಡಿದೆ,  ಪಾಶ್ಚಾತ್ಯ ಜೀವನವಿಧಾನವನ್ನು  ಅದೆಷ್ಟು ಕುರುಡಾಗಿ  ಅದೆಷ್ಟು ದೈನ್ಯವಾಗಿ  ಅವಲಂಬಿಸಿ  ಆತ್ಮಾಭಿಮಾನವನ್ನು  ಹರಾಜಿಗಿಟ್ಟುಕೊಂಡಿದೆ, ಎಂಬುದನ್ನು ತಮ್ಮ ಈ  ಲೇಖನದಲ್ಲಿ  ಒಂದೇ  ಅಲ್ಲದೇ  ನೂರಾರು  ಬರಹಗಳಲ್ಲಿ ಬಿಂಬಿಸಿದ್ದಾರೆ.   ಅವರ  ದೃಷ್ಟಿಯಲ್ಲಿ  ನಮಗೆ  ದೊರಕಿದ್ದು  ಕೇವಲ ಭೌತಿಕ  ಸ್ವಾತಂತ್ರ್ಯ,   ದೇಶ  ಇನ್ನೂ  ಮನೋದಾಸ್ಯದಿಂದ  ಬಿಡುಗಡೆ  ಹೊಂದಿಯೇ  ಇಲ್ಲ, ತನ್ನ ಸಂಸ್ಕೃತಿಯ  ಬಗೆಗೆ  ಕೀಳರಿಮೆ, ಪರಕೀಯ  ಸಂಸ್ಕೃತಿಯ  ಅಂಧಾನುಕರಣೆಗಳನ್ನು  ಮೈಗೂಡಿಸಿಕೊಳ್ಳುವ  ಯಾವುದೇ  ದೇಶ  ಆತ್ಮಹತ್ಯೆಗೈದುಕೊಂಡಂತೆ.  ಅದು  ನಡೆದಾಡುವ  ಶವವಿದ್ದಂತೆ.  ಎಂಬ  ಅವರ  ವಿಚಾರಧಾರೆ,  ಜಾಗತೀಕರಣದಂತಹ  ಈ ವರ್ತಮಾನದಲ್ಲಿ ಮತ್ತೆ  ಮತ್ತೆ  ನೆನಪಿಸಿಕೊಳ್ಳಬೇಕಾಗಿದೆ.

    ಸ್ವಾತಂತ್ರ್ಯಪೂರ್ವದ  ಮತ್ತು ನಂತರದ  ಭಾರತಕ್ಕೆ  ಲೋಹಿಯಾ  ನೀಡಿದ  ಅನನ್ಯ ಕೊಡುಗೆಯನ್ನು  ಪ್ರಸ್ತುತ,  ದೇಶದ  ಜನಮಾನಸ  ತನ್ನ ನೆನಪಿನ ಖಜಾನೆಯಿಂದಲೇ  ಕಳೆದು ಕೊಂಡಿದೆಯೇನೋ  ಎಂದೆನ್ನಿಸುತ್ತಿದೆ.  ನಮ್ಮ  ಸಾಂಸ್ಕೃತಿಕ  ಸಾಮಾಜಿಕ ಭವಿತವ್ಯಕ್ಕಾಗಿ  ಆತ್ಮಾಭಿಮಾನದ  ಉಳಿವಿಗಾಗಿ,   ಡಾ. ರಾಮಮನೋಹರ್‌  ಲೋಹಿಯಾರ  ಬದುಕು ಮತ್ತು ಬರಹಗಳನ್ನೆಲ್ಲ  ನಮ್ಮ ವಿಸ್ಮೃತಿಯಿಂದೀಚೆಗೆ  ಮತ್ತೆ  ಎಳೆದು  ತರಬೇಕಿದೆ.

             ಸುಮ-ಸಂಪದ  ಅಂಕಣಕ್ಕೆ.            ಸುಬ್ರಾಯ  ಮತ್ತೀಹಳ್ಳಿ. ತಾ- ೨೧-೧೦-೨೦೨೪.

No comments:

Post a Comment