Saturday, 23 November 2024

ಹಳ್ಳಿಯ ಹೊನ್ನು-- ಮೈತ್ರಿಯ ಮುತ್ತು ʻʻ ಗಣೇಶ ಹೆಗಡೆ. ದೊಡ್ಮನೆʼʼ

 

                 ಪ್ರಜ್ಞಾನ ನಿನದ ವಿಜ್ಞಾನ ಮೂಲ  ನೆಲೆಯ ದೃಷ್ಟಾರರಿವರು |

                 ಮಾಧುರ್ಯಮಯದ, ಸಾಮರ್ಥ್ಯ ಘನದ, ದಿವ್ಯದಾನಂದ ಘನರು ||

                 ಸೂರ್ಯತೇಜದಲಿ  ಪಡಿಮೂಡಿಕೊಂಡ  ಸೌಂದರ್ಯ ಪಥಗಳನ್ನು |

                 ಸತತ  ಧ್ಯಾನದಲಿ  ಆತ್ಮಭಾವದಲಿ  ಶೋಧಕರು ಕಂಡರಿನ್ನು  || 

                                                             (  ಮಹರ್ಷಿ ಅರವಿಂದರು.  ಅನು -  ಇಂಪು )

        ಕಸ್ತೂರಿ   ತನ್ನಷ್ಟಕ್ಕೆ  ತಾನಿದ್ದರೂ  ತನ್ನ ಸುತ್ತಲಿನ  ವಾತಾವರಣವನ್ನೇ  ಸುಗಂಧಮಯವಾಗಿಸುತ್ತದೆ.  ಹೂ  ತಾ  ನಿಂತಲ್ಲಿಯೇ  ಅರಳಿ  ತನ್ನ ಸೌಂದರ್ಯದಿಂದ, ಪರಿಮಳದಿಂದ, ಆಹ್ಲಾದ ವನ್ನು  ಸೂಸುತ್ತಿರುತ್ತದೆ.  ಶ್ರೇಷ್ಠ ವ್ಯಕ್ತಿತ್ವಗಳೂ  ಹಾಗೆಯೇ.  ಅವರು ಕೈಗೊಳ್ಳುವ ಎಲ್ಲ ಚಟುವಟಿಕೆಗಳು, ಅದು ಸ್ವಂತದ್ದಾಗಿರಲಿ, ಸಾರ್ವಜನಿಕವಾಗಲೀ, ಅಲ್ಲೊಂದು  ಸಾಧನೆಯಿರುತ್ತದೆ.  ಸಿದ್ಧಿಯಿರುತ್ತದೆ.  ಮಹತ್ವಪೂರ್ಣಸಂದೇಶವಿರುತ್ತದೆ.  ಅದರ  ವ್ಯಾಪ್ತಿ ಚಿಕ್ಕದಿರಲಿ, ಬೃಹತ್ತಾಗಿರಲಿ  ಜನಮಾನಸದಲ್ಲಿ ಶಾಶ್ವತವಾದ  ಮುದ್ರೆಯನ್ನೊತ್ತಿ, ಸಾಧಕರ  ಕಾಲಾನಂತರವೂ  ಸ್ಫೂರ್ತಿ ಚಿಲುಮೆಯಾಗಿ  ಜೀವಂತವಾಗಿಯೇ  ಇರುತ್ತದೆ.  ಅಂಥ  ಸಾಧಕರ ಸ್ಮರಣೆ  ಕೇವಲ  ಅವರಿಗೆ  ಗೌರವ ನೀಡುವುದಕ್ಕೊಂದೇ  ಸೀಮಿತವಾಗದೇ  ಸಾಮಾನ್ಯರಿಗೊಂದು  ಸಾಮಾಜಿಕ ಪ್ರಜ್ಞೆಯನ್ನು  ರೂಢಿಸುವ ಪಾಠವಾಗಬೇಕು.  ಸಾಧಕರು  ಬಿಟ್ಟುಹೋದ  ಸಾಧಕತನಕ್ಕೆ  ನಿರಂತರತೆಯನ್ನೊದಗಿಸುವ  ಪ್ರಕ್ರಿಯೆಗೆ  ಸದಾ  ನೀರೆರೆಯುತ್ತಿರಬೇಕು.

     ಶಾಲಾ  ಪಠ್ಯಗಳಾಗಲೀ,  ಸಮೂಹ  ಮಾಧ್ಯಮಗಳಾಗಲೀ, ರಾಷ್ಟ್ರೀಯ  ಅಂತರರಾಷ್ಟ್ರೀಯ  ಎತ್ತರದಲ್ಲಿ  ಸಾಧನೆಗೈದ  ವ್ಯಕ್ತಿತ್ವಗಳನ್ನು  ವಿಜ್ರಂಭಿಸುವುದನ್ನೇ  ತಮ್ಮ ಕಸುಬಾಗಿಸಿ ಕೊಳ್ಳದೇ  ಸ್ಥಳೀಯ  ಅನನ್ಯ  ಸಾಧಕರ  ಬದುಕು  ಸಾಧನೆ  ಕೊಡುಗೆಗಳ  ಬಗೆಗೂ  ದೃಷ್ಟಿಹರಿಸಿದರೆ  ಮಾತ್ರ  ಸಮಾಜದ  ವಿಕಾಸದ  ನೆಲೆಯಲ್ಲಿ ಮಹತ್ವಪೂರ್ಣ  ಸಂಚಲನವನ್ನು  ಸೃಷ್ಟಿಸಿದಂತಾಗುತ್ತದೆ.

    ನಮ್ಮ  ದೇಶದ  ಚರಿತ್ರೆಯಲ್ಲಿ  ಅಮೂಲ್ಯ ಸಾಧಕ  ರತ್ನಗಳಿದ್ದೂ  ಕಾಡು ಕುಸುಮಗಳಾಗಿಯೇ  ಹೋದಂತ  ಅಸಂಖ್ಯ  ಸಾಧಕರಿದ್ದಾರೆ.  ಆದರೆ  ಕೆಲವೇ  ಕೆಲವು  ಸಾಧನೆಗಳು  ಚರ್ವಿತ  ಚರ್ವಣವಾಗಿ  ಸುತ್ತುತ್ತಿರುವುದು  ವಿಷಾದನೀಯ.

   ರಾಜಧಾನಿಯಿಂದ  ಬಹುದೂರ  ಕುಗ್ರಾಮದಲ್ಲಿ ( ೧೯೨೧) ಜನಿಸಿ,  ಆಧುನಿಕವಾದ  ಯಾವ  ಶಿಕ್ಷಣವಿಲ್ಲದಿದ್ದರೂ,  ಜಗತ್ತಿನೆಲ್ಲ ಜ್ಞಾನ ಹೀರಿ,  ಸ್ವಾತಂತ್ರ್ಯಹೋರಾಟ, ಸಾಮಾಜಿಕ ಸಾಂಸ್ಕೃತಿಕ, ಆಧ್ಯಾತ್ಮಿಕ,  ಶೈಕ್ಷಣಿಕ,  ಆರೋಗ್ಯ, ಸಹಕಾರ, ಮತ್ತು ಉದ್ಯಮರಂಗಗಳಲ್ಲಿ ಸಾಧನೆಯ ಶಿಖರವನ್ನೇರಿದ   ಉತ್ತರಕನ್ನಡ  ಜಿಲ್ಲೆಯ  ಸಿದ್ದಾಪುರ  ತಾಲೂಕಿನ, ದಿ, ಗಣೇಶ ಹೆಗಡೆ ದೊಡ್ಮನೆ  ಯವರು, ಸದಾಕಾಲ  ಸ್ಮರಿಸಬಹುದಾದ  ಅದ್ಭುತ  ವ್ಯಕ್ತಿತ್ವ.   

    ಭೌತಿಕವಾಗಿ  ಪ್ರಕೃತಿಯ  ಎಲ್ಲಜೀವಿಗಳಿಗೆ  ಮಿತಿಯಿದೆ.  ಒಂದುದಿನ  ಭೂತವಾಗಲೇ  ಬೇಕು.  ಆದರೆ  ಜೈವಿಕವಾಗಿ  ಮೂಡಿಸಿದ  ಹೆಜ್ಜೆ ಗುರುತಿನ  ಆಳ  ಅಗಲಗಳನ್ನು ಮಾತ್ರ  ಚಿರಂಜೀವಿಯಾಗಿಸಲು  ಸಾಧ್ಯ.   ಮನಸ್ಸು ಬುದ್ಧಿ ಪ್ರಜ್ಞೆ ಮತ್ತು ಚಟುವಟಿಕೆಗಳಲ್ಲಿ,   ಸಮತೋಲ  ಸಾಧಿಸಿದ  ವ್ಯಕ್ತಿ ಮಾತ್ರ,  ತನ್ನ ಗುರುತನ್ನು  ಶಾಶ್ವತವಾಗಿಸಲು  ಸಾಧ್ಯ.  ಕೋಟಿ  ಕೋಟಿ  ಗಳಿಸಿ, ರಾಶಿ ಪೇರಿಸಿದ  ಅದೆಷ್ಟೋ  ವ್ಯಕ್ತಿಗಳನ್ನು  ನೋಡಿದ್ದೇವೆ.  ಕೇಳಿದ್ದೇವೆ. ನೋಡುತ್ತಿದ್ದೇವೆ.  ತಮ್ಮ ಸಂಸಾರಕ್ಕಾಗಿ,  ಸ್ವಾರ್ಥಕ್ಕಾಗಿ  ದುಡಿ ದುಡಿದು  ಸತ್ತ  ಸಾಯುವ  ವ್ಯಕ್ತಿಗಳು  ಅವರು.  ಅವರು  ಸೃಷ್ಟಿಸಿದ  ಆಸ್ತಿ  ಕರಗುವ ವರೆಗೆ  ಮಾತ್ರ  ಅವರ  ಸಂಸಾರದಲ್ಲಿ ನೆನಪು.  ನಂತರ  ಅವರ  ಚಿತ್ರಕ್ಕೆ ತೊಡಿಸಿದ ಹಾರ  ಉದುರುತ್ತದೆ.  ಚಿತ್ರವೂ  ಗೋಡೆಗೆ  ಭಾರವಾಗುತ್ತದೆ.

    ವಿವೇಕಾನಂದರು  ದೇಶದ  ಪ್ರವಾಸದಲ್ಲಿದ್ದಾಗ,  ಒಬ್ಬ  ಸುಪ್ರಸಿದ್ಧ  ಯೋಗಿಯೊಬ್ಬರನ್ನು  ಸಂದರ್ಶಿಸಲು  ಇಚ್ಛಿಸುತ್ತಾರೆ.  ಯೋಗಿ  ಇಪ್ಪತ್ತು ವರ್ಷಗಳಿಂದ  ಗುಹೆಯೊಂದರಲ್ಲಿ  ಕುಳಿತು  ತಪಸ್ಸುಗೈಯ್ಯುತ್ತಿರುತ್ತಾರೆ. ಅವರ  ಸಾಧನೆ  ಜನಜನಿತಗೊಂಡು  ಸಾವಿರ  ಸಂಖ್ಯೆಯಲ್ಲಿ  ಯೋಗಿಯ  ದರ್ಶನಕ್ಕಾಗಿ  ಕಾತರಿಸುತ್ತಲಿರುತ್ತಾರೆ.  ವಿವೇಕಾನಂದರು  ಕೆಲವು  ಹೊತ್ತು  ಗುಹೆಯೆದುರು  ನಿಂತು  ಯೋಗಿಯ  ಗುಣಗಾನ  ಕೇಳಿ,  ಹಾಗೆಯೇ  ಮರಳುತ್ತಾರೆ.  ಏಕೆ  ಸ್ವಾಮೀಜಿ   ಯೋಗಿಯನ್ನು  ನೋಡದೇ  ಹೊರಟಿರಿ... ಎಂದು  ಪ್ರಶ್ನಿಸಿದಾಗ,  ವಿವೇಕಾನಂದರು    ʻʻಯೋಗಿಯಂತೇ  ಸುತ್ತಲೆಲ್ಲ  ಸಾವಿರಾರು ವರ್ಷಗಳಿಂದ  ನೂರಾರು  ಬಂಡೆಗಳು,  ನಿಶ್ಚಲವಾಗಿ  ತಪಸ್ಸಿಗೆ  ಕುಳಿತಿವೆ. ಅದರಿಂದ  ಯಾರಿಗೆ  ಎಂದು  ಪ್ರಯೋಜನವಾಗಿದೆ....?ʼʼ  ಎಂದು  ಉತ್ತರಿಸಿದರಂತೆ.

    ಒಬ್ಬ ವ್ಯಕ್ತಿ  ಸ್ವಂತಕ್ಕಾಗಿ  ಅದೆಷ್ಟೇ  ಸಾಧನೆ  ಗೈದಿರಲಿ  ಅದು  ಶ್ರೇಷ್ಠವಾಗಿಯೂ  ಇರಬಹುದು. ಅದರಿಂದ  ಸಮುದಾಯಕ್ಕೆ  ಯಾವ  ಪ್ರಯೋಜನವೂ  ಆಗಿರದಿದ್ದರೆ  ನಿಜವಾದ  ಮನುಷ್ಯತ್ವವೇ  ನಷ್ಟವಾದಂತೆ.  ತಾನು  ಬದುಕುವುದರೊಂದಿಗೆ  ಮತ್ತೊಬ್ಬರ  ಜೀವನಕ್ಕೂ  ಬೆಳಕಾದರೆ ಮಾತ್ರ  ಜೀವನ  ಸಾರ್ಥಕವೆಂದೆನ್ನಿಸಿಕೊಳ್ಳುತ್ತದೆ. ಮನುಷ್ಯ  ತನ್ನಷ್ಟಕ್ಕೆ  ತಾನಿದ್ದರೂ, ಅವನ  ಬದುಕಿನ  ನಿರ್ವಹಣೆಗಾಗಿ  ಮುನ್ನೂರು  ವ್ಯಕ್ತಿಗಳು  ಸಹಾಯ ಸಲ್ಲಿಸುತ್ತಿರುತ್ತಾರಂತೆ.    ಋಣ  ಪರಿಹಾರಕ್ಕಾದರೂ  ವ್ಯಕ್ತಿ  ಸಮುದಾಯದ  ಸುಖ  ದುಃಖಗಳಿಗೆ  ಸ್ಪಂದಿಸಬೇಕಾಗುತ್ತದೆ.  ಅಂಥಹ  ನಿಸ್ವಾರ್ಥ  ಸ್ಪಂದನದಿಂದಲೇ  ಬದುಕು ಸಹನೀಯಗೊಳ್ಳುತ್ತದೆ.

    ಇಂಥ  ಸಂದರ್ಭದಲ್ಲೇ  ಗ್ರಾಮಸುಧಾರಕ  ಗಣೇಶ  ಹೆಗಡೆಯವರ  ಚಿರಸ್ಮರಣೀಯ  ವ್ಯಕ್ತಿತ್ವ  ಕಣ್ಣೆದುರು  ಮೂಡುತ್ತದೆ.  ಇಂದಿನ  ಕಟುವಾಸ್ತವದ ವಿಚಿತ್ರ  ಸಂದಿಗ್ಧದಲ್ಲಿ  ಹೊಚ್ಚಹೊಸ  ಬೆಳಕಾಗಿ  ಮಿಂಚುತ್ತಾರೆ. 

    ಗಣೇಶ  ಹೆಗಡೆ  ಜನ್ಮಿಸಿದ್ದು  ದೊಡ್ಡಮನೆ  ಎಂಬ  ಪುಟ್ಟ ಊರಿನ  ಕೃಷಿಕ ಕುಟುಂಬದಲ್ಲಿ.  ಅದು  ಇಪ್ಪತ್ತನೆಯ  ಶತಮಾನದ  ಎರಡನೆಯ  ದಶಕ.  ಸಿದ್ದಾಪುರ  ತಾಲೂಕು ಸ್ವಾತಂತ್ರ್ಯಹೋರಾಟದಲ್ಲಿ  ಗಂಭೀರವಾಗಿ  ತೊಡಗಿಕೊಳ್ಳುತ್ತಿರುವ  ಪರ್ವಕಾಲ.   ಗಣೇಶ  ಹೆಗಡೆ  ಪ್ರೌಢರಾಗಿ  ಕಣ್ತೆರೆದಾಗ  ಕಂಡಿದ್ದು, ಶೂನ್ಯ  ಶೂನ್ಯ.  ದಟ್ಟ ಅರಣ್ಯ,  ಶಿಕ್ಷಣದ  ವ್ಯವಸ್ಥೆಯನ್ನೇ  ಕಾಣದ  ಹಳ್ಳಿಗಳು,  ಮಲೇರಿಯಾ  ಪ್ಲೇಗ್‌  ವಿಷಮ ಶೀತಜ್ವರಗಳಿಂದ  ಬಳಲುತ್ತಿರುವ  ಜನತೆ,  ಶೂನ್ಯ ಆರ್ಥಿಕತೆ, ಬಡತನ ಮತ್ತು   ಭಯಂಕರ  ಮಳೆ. ಬ್ರಿಟಿಶ್‌  ಆಡಳಿತೆಯ  ದಬ್ಬಾಳಿಕೆಯ  ನಡುವೆ  ವ್ಯಾಪಿಸಿಕೊಂಡ  ದಟ್ಟ ದಾರಿದ್ರ್ಯದ  ಸಮುದಾಯಕ್ಕೆ  ಸಾಮಾಜಿಕ  ಶೈಕ್ಷಣಿಕ  ಆರೋಗ್ಯ  ದಂತಹ  ಮೂಲಭೂತ  ಸೌಲಭ್ಯಗಳಿಲ್ಲದ   ತಾಲೂಕಿನ  ದಯನೀಯ  ಸ್ಥಿತಿ  ಮರುಕ  ಮೂಡಿಸುತ್ತಿತ್ತು.  ಜೀವಂತಿಕೆಯಿಲ್ಲದ  ಒಂದು  ಸ್ಥಗಿತವಾದ  ಸಮಾಜ ವನ್ನು  ಕಣ್ಣಾರೆ  ಕಂಡ,  ಹೆಗಡೆಯವರು,  ತನ್ನ ಗ್ರಾಮಗಳ  ಶಾಪ  ವಿಮೋಚನೆಗಾಗಿ  ಹೋರಾಟ ಗೈಯ್ಯುವ  ಸಂಕಲ್ಪವನ್ನು ತಮ್ಮ  ಹದಿಹರೆಯದಲ್ಲೇ  ಕೈಗೊಂಡರು.  ಪ್ರಾಥಮಿಕ  ವಿದ್ಯಾಭ್ಯಾಸಕ್ಕೇ  ತಮ್ಮ ಶಿಕ್ಷಣವನ್ನು  ಕಡಿತಗೊಳಿಸಿ, ಸ್ಥಗಿತ  ಸಮಾಜದಲ್ಲಿ  ಸಂಚಲನ  ಮೂಡಿಸಲು  ಕಂಕಣ  ಕಟ್ಟಿದರು.  ಕೇವಲ  ಜಾತಿ  ಸಮುದಾಯವೇ  ತಮ್ಮ ಪ್ರಪಂಚವೆಂದು  ತಿಳಿದು,  ಜಾತಿ ಭೇದ,  ಅಸ್ಪ್ರಶ್ಯತೆ,  ಅನಕ್ಷರತೆ, ಗಳ  ಕೂಪದಲ್ಲಡಗಿದ್ದ  ಸುತ್ತಲಿನ  ಸಮುದಾಯಕ್ಕೊಂದು  ಹೊಸದಾರಿಯ  ಅನ್ವೇಷಣೆಗೆ  ತೊಡಗಿದರು.

    ಬದುಕಿಗೊಂದು  ಹೊಸ  ತಿರುವು  ಮೂಡಲೇ ಬೇಕಿದ್ದರೆ,  ಅದರ  ಮೂಲಭೂತ  ಅವಶ್ಯಕತೆ  ವ್ಯವಸ್ಥಿತ  ಶಿಕ್ಷಣ, ವೈಜ್ಞಾನಿಕ ಕೃಷಿ,  ಜಾತ್ಯತೀತ  ಮನೋಭಾವ, ಕೈಗಾರಿಕೆ  ಮತ್ತು ಉದ್ಯಮಗಳ  ಸೃಷ್ಟಿ  ಮಾತ್ರ ಅದಕ್ಕೆ ಪರಿಹಾರ.  ಎಂಬುದನ್ನು  ಸ್ವಯಂ  ಅಧ್ಯಯನ  ಶೀಲ  ಗುಣಗಳಿಂದ  ಕಂಡುಕೊಂಡ  ಹೆಗಡೆಯವರು,   ಇಡೀ  ತಾಲೂಕನ್ನು  ಆವರಿಸಿಕೊಂಡು,  ಸಮಾಜದ  ಮೂಲಭೂತ  ಅವಶ್ಯಕತೆಗಳ  ಪೂರೈಕೆಗಾಗಿ  ತಮ್ಮ  ಬದುಕನ್ನು  ಮುಡಿಪಾಗಿಸಿದರು.   ಇವರ  ಜ್ಞಾನಪಿಪಾಸೆ,  ಛಲ  ಕ್ರಿಯಾಶೀಲತೆಯಂತಹ   ಗುಣಗಳು,  ಮಲೆನಾಡಿನ  ಗ್ರಾಮಾಂತರಕ್ಕೊಬ್ಬ ಅಪರೂಪದ  ಸಾಂಸ್ಕೃತಿಕ   ಸಾಮಾಜಿಕ  ಸಾಧಕನನ್ನು ಸೃಷ್ಟಿಸಿತು.

      ಮನುಷ್ಯನಿಗೆ  ಮನಸ್ಸು ಎಂಬುದೊಂದಿದ್ದಂತೇ  ಆವಾವ  ಪರಿಸರಕ್ಕೂ ಇರುತ್ತದೆ.  ಜೇನು  ತನ್ನ ಗೂಡಿನ  ಉಳಿವಿಗಾಗಿ  ರಾಣಿಹುಳುವನ್ನು  ಸೃಷ್ಟಿಸಿಕೊಂಡಂತೇ  ಸಾಮಾಜಿಕ  ಬದುಕು  ಪತನಮುಖಿಯಾದಾಗ  ಬುದ್ಧ  ಶಂಕರ  ವಿವೇಕ  ಚಾಣಕ್ಯ  ಗಾಂಧಿ, ಮಾರ್ಕ್ಸ,  ಬಸವಣ್ಣ, ಮುಂತಾದ  ಅನನ್ಯ ವ್ಯಕ್ತಿತ್ವಗಳನ್ನು  ಅದೇ  ಸಮುದಾಯ  ಸೃಷ್ಟಿಸಿತು.  ಒಂದೊಂದು  ಕಾಲ  ಒಂದೊಂದನ್ನು ತೀವ್ರವಾಗಿ  ಅಪೇಕ್ಷಿಸುತ್ತದೆ. ಅದು  ಆಧ್ಯಾತ್ಮವೋ  ಅಕ್ಷರವೋ  ಅನ್ನವೋ  ಯಾವುದೇ  ಆಗಿರಬಹುದು.

     ಹನ್ನೆರಡನೇ  ಶತಮಾನದಲ್ಲಿ  ಅನಕ್ಷರತೆ  ದಾರಿದ್ರ್ಯ  ಮೂಢಾಚರಣೆಗಳು  ಸ್ಪೋಟಕ ಸ್ಥಿತಿಗೆ  ತಲುಪಿರುವಾಗಲೇ  ಬಸವಣ್ಣ ಪ್ರವೇಶಿಸುತ್ತಾನೆ.  ಉತ್ತರ ಕರ್ನಾಟಕದಲ್ಲಿ  ಆಧ್ಯಾತ್ಮಿಕ  ವೈಚಾರಿಕ  ಸಂಚಲನ  ಮೂಡಿಸುತ್ತಾನೆ. ವ್ಯಕ್ತಿಶುದ್ಧಿ  ಅರ್ಥಶುದ್ಧಿ  ಕಾಯಕನಿಷ್ಠೆ  ಮತ್ತು  ಸಮಾನತೆಯ   ಸಂಚಲನ  ಗೈಯ್ಯುತ್ತಾನೆ. ನಾವು ದುಡಿಯಬೇಕು,( ಕಾಯಕ).  ನಾವೆಲ್ಲ ಉಣ್ಣಬೇಕು (ದಾಸೋಹ)ಅದು    ಕಾಲದ  ಅಗತ್ಯವಾದರೆ  ಇಪ್ಪತ್ತನೆಯ  ಶತಮಾನದ  ಪ್ರಾರಂಭದಲ್ಲಿ  ಅಕ್ಷರದ  ಅವಶ್ಯಕತೆ  ತೀವ್ರವಾಗಿತ್ತು. ದೇಶದಾದ್ಯಂತ  ಶಿಕ್ಷಣದ  ಬಗೆಗಿನ  ಹಸಿವು ಜಾಗ್ರತಗೊಂಡಿತ್ತು. ಪಾರಂಪರಿಕವಾಗಿ  ಶಿಕ್ಷಣದಿಂದ  ವಂಚಿತಗೊಂಡ  ವರ್ಗಗಳಲ್ಲಿ  ಶಿಕ್ಷಣದ  ಬಗೆಗೆ  ಅರಿವುಮೂಡತೊಡಗಿತ್ತು.

    ಇಂಥ  ಉತ್ಕಟ  ಹಸಿವಿಗೆ  ಅಕ್ಷರದ  ಆಹಾರ ನೀಡುವ ಉನ್ನತ  ಧ್ಯೇಯವನ್ನು  ಅಂಗೀಕರಿಸಿದವರು  ಗಣೇಶ  ಹೆಗಡೆಯವರು.  ಸಿದ್ದಾಪುರದಂತಹ  ತಾಲೂಕಾ ಸ್ಥಳದಲ್ಲೂ  ಪ್ರೌಢಶಾಲೆಯೂ  ಇಲ್ಲದ  ಸ್ಥಿತಿ  ಕಂಡು  ಮರುಗಿದ ಹೆಗಡೆಯವರು  ತಾಲೂಕಾ ಕೇಂದ್ರವೊಂದಲ್ಲ, ದೂರ  ದೂರದ  ಹಳ್ಳಿಗಳಲ್ಲೂ  ಪ್ರೌಢಶಾಲೆಗಳನ್ನು  ಸ್ಥಾಪಿಸುವಲ್ಲಿ ಯಶ ಪಡೆದರು.  ತಾವು  ಶಿಕ್ಷಣದಿಂದ  ವಂಚಿತರಾದರೂ  ಮಹಾವಿದ್ಯಾಲಯ,  ಮತ್ತು ವೈದ್ಯಕೀಯ  ಮಹಾವಿದ್ಯಾಲಯದ  ವರೆಗೂ  ಹೊಚ್ಚಹೊಸದಾಗಿ  ಸ್ಥಾಪಿಸುವಲ್ಲಿ  ಯಶ  ಸಾಧಿಸಿ   ಅಕ್ಷರ ದಾಸೋಹಿಯಾದರು.  ಅದೇ ಸಂದರ್ಭದಲ್ಲೇ  ಕರಾವಳಿ ಪ್ರದೇಶದಲ್ಲಿ  ಡಾ. ದಿನಕರ ದೇಸಾಯಿ  ಅಕ್ಷರದ  ಬೀಜ  ಬಿತ್ತುತ್ತಿದ್ದರು.

     ಹಾಗೆಂದು  ಸಿದ್ದಾಪುರ  ತಾಲೂಕು  ಅನಾಮಧೇಯವಲ್ಲ,  ಸ್ವಾತಂತ್ರ ಹೋರಾಟದಲ್ಲಿ  ರಾಷ್ಟ್ರಮಟ್ಟದಲ್ಲಿ  ತನ್ನನ್ನು ಗುರುತಿಸಿಕೊಂಡಿತ್ತು.  ದೇಶದಲ್ಲೇ  ಅತ್ಯಧಿಕ  ಮಹಿಳೆಯರು  ಹೋರಾಟದಲ್ಲಿ  ಪಾಲ್ಗೊಂಡ  ತಾಲೂಕು  ಇದಾಗಿತ್ತು.   ನಲ್ವತ್ತರ ದಶಕದಲ್ಲೇ  ಸಿದ್ದಾಪುರ  ದಕ್ಷಿಣದ  ಬಾರ್ಡೋಲಿ  ಎಂದು  ಪ್ರಸಿದ್ಧಿಪಡೆದಿತ್ತು.  ಸ್ವತಹ  ಹೆಗಡೆಯವರ  ಕುಟುಂಬ ದ  ಹಿರಿಯರು   ಸಕ್ರಿಯವಾಗಿ  ಹೋರಾಟದಲ್ಲಿ  ಪಾಲ್ಗೊಂಡಿದ್ದರು.  ಸಾಮಾಜಿಕ  ವೈಚಾರಿಕ  ಮತ್ತು ಸೈದ್ಧಾಂತಿಕ ವಾದ  ಸಮೃದ್ದ  ಹಿನ್ನೆಲೆಯನ್ನು  ಪಡೆದುಕೊಂಡಿದ್ದ  ಗಣೇಶ ಹೆಗಡೆಯವರ  ವ್ಯಕ್ತಿತ್ವ  ಸಹಜವಾಗಿ  ವ್ಯಕ್ತಿನಿಷ್ಠತೆಯ  ಬಂಧನದಿಂದ  ಬಿಡುಗಡೆಗೊಂಡು, ಸಮಷ್ಠಿಹಿತದ   ವಿಶಾಲ  ಅಂಗಣಕ್ಕೆ  ಪ್ರವೇಶಿಸಿತ್ತು.

      ಇಪ್ಪತ್ತನೆಯ  ಶತಮಾನದ  ಐವತ್ತರ  ದಶಕದಲ್ಲೂ  ಸಿದ್ದಾಪುರ  ತಾಲೂಕು  ಸಹಕಾರ  ಬ್ಯಾಂಕಿಂಗ್‌  ಕೈಗಾರಿಕೆ, ಮುಂತಾದ   ವ್ಯವಸ್ಥಿತ  ಆರ್ಥಿಕ ಪರ್ಯಾಯ ಗಳಿಲ್ಲದೇ  ಬಳಲುತ್ತಿತ್ತು. ಕೃಷಿಕರು, ಸಣ್ಣ ವ್ಯಾಪಾರಸ್ಥರು  ಖಾಸಗಿ ವ್ಯವಹಾರಸ್ಥರಿಂದ  ಶೋಷಣೆಗೆ  ಒಳಗಾಗಿದ್ದರು. ರೈತರ ಬವಣೆ  ತಾರಕಕ್ಕೇರಿತ್ತು.  ತೋಟಗಾರಿಕೆ ನೆಲಕಚ್ಚಿತ್ತು.  ಸುಸ್ಥಿರ ಮಾರುಕಟ್ಟೆ ಸೌಲಭ್ಯವಿಲ್ಲದ  ನಿರ್ವಾತದಲ್ಲಿ  ಕನಸುಗಾರ  ಗಣೇಶ ಹೆಗಡೆಯವರ  ಪ್ರವೇಶ  ಜಿಲ್ಲೆಯ  ಸಹಕಾರ  ಮತ್ತು ಸಾರ್ವಜನಿಕ  ರಂಗದಲ್ಲಿ  ವಿದ್ಯುತ್‌  ಸಂಚಾರವಾಯಿತು.

    ಸಹಕಾರ  ಚಳುವಳಿಗೆ  ಹೊಸ  ಚುರುಕು ಮೂಡಿತು. ಶೈಕ್ಷಣಿಕ  ಕ್ಷೇತ್ರಕ್ಕೆ ಹೊಸ  ಆಯಾಮ ದೊರೆಯಿತು. ಬ್ಯಾಂಕುಗಳ  ಸ್ಥಾಪನೆಯಿಂದ  ಆರ್ಥಿಕ  ಸಂಚಲನವುಂಟಾಯಿತು.  ಆಗಲೇ  ಅವರು  ʻʻಮುನ್ನಡೆʼʼ ಎಂಬ  ಪತ್ರಿಕೆಯನ್ನು  ಪ್ರಾರಂಭಿಸುತ್ತಾರೆ.  ಪುಸ್ತಕ ಪ್ರಕಟಿಸುತ್ತಾರೆ.  ಸಹಕಾರಿ  ಮುದ್ರಣಾಲಯವನ್ನು  ಸ್ಥಾಪಿಸುತ್ತಾರೆ.

    ಹೆಗಡೆಯವರೇ   ಸಿದ್ದಾಪುರದಲ್ಲಿ ಕಟ್ಟಿದ   ಶೃಂಗೇರಿ  ಶ್ರೀ ಶಂಕರ ಮಠ  ಕೇವಲ  ಧಾರ್ಮಿಕ  ಕೇಂದ್ರವಾಗದೇ  ಸಾಂಸ್ಕೃತಿಕ  ಆಧ್ಯಾತ್ಮಿಕ  ಚಳುವಳಿಯೇ  ಆಗಿ  ರಾಜ್ಯದ  ಧಾರ್ಮಿಕ  ಕೇಂದ್ರಗಳ  ಕಣ್ಣು ತೆರೆಸುವಲ್ಲಿ  ಪರಿಣಾಮಕಾರೀ  ಪಾತ್ರ  ವಹಿಸಿತು.

    ರಾಷ್ಟ್ರ ಮಟ್ಟದಲ್ಲಿ  ಹೆಸರಾಗಿದ್ದ  ಮಾಜೀ ಮುಖ್ಯಮಂತ್ರಿ  ರಾಮಕೃಷ್ಣ ಹೆಗಡೆಯವರ  ಸಹೋದರರಾಗಿದ್ದ  ಗಣೇಶ  ಹೆಗಡೆ, ರಾಜ್ಯ ರಾಷ್ಟ್ರದ  ರಾಜಕೀಯ  ಕ್ಷೇತ್ರದ ನಿಕಟ  ಸಂಪರ್ಕವಿದ್ದರೂ,  ವೈಯಕ್ತಿಕವಾಗಿ  ಮತ್ಯಾವ  ಸ್ಥಾನ  ಮಾನವನ್ನೂ  ಅಪೇಕ್ಷಿಸದ,  ಇವರು  ನೂರಾರು  ಪ್ರತಿಭಾವಂತ  ಬಡ ನಿರುದ್ಯೋಗಿಗಳಿಗೆ  ಸರಕಾರಿ   ಖಾಸಗಿ  ಉದ್ಯೋಗ  ಒದಗಿಸಿ ರಾಜಕೀಯ  ನಾಯಕರಿಗೆ  ಮಾದರಿಯಾದರು. ತಾಲೂಕೊಂದೇ  ಅಲ್ಲದೇ  ಜಿಲ್ಲೆಯಾದ್ಯಂತ,  ರಸ್ತೆ  ಶಾಲೆ  ಆರೋಗ್ಯ ಸೌಲಭ್ಯಗಳು  ಸೃಷ್ಟಿಯಾಗಲು  ಪ್ರಮುಖ  ಕಾರಣರಾದರು.  ಕರಾವಳಿ  ಮತ್ತು ಮಲೆನಾಡು  ಪ್ರದೇಶಗಳನ್ನು  ಒಂದಾಗಿಸುವ  ಹೆದ್ದಾರಿ  ಸೇತುವೆ  ನಿರ್ಮಿಸುವುದರಲ್ಲಿ  ಸಿದ್ಧ ಹಸ್ತರಾದರು.

    ಗಣೇಶ  ಹೆಗಡೆಯವರು  ಅದೆಷ್ಟೋ  ಸಂಘ  ಸಂಸ್ಥೆಗಳ  ಅಧ್ಯಕ್ಷರಾಗಿ  ಅವಿರೋಧವಾಗಿ  ಆಯ್ಕೆಯಾದರು.  ರಚನಾತ್ಮಕ  ಚಟುವಟಿಕೆಗಳಿಂದ  ಸಂಸ್ಥೆಗಳನ್ನು ಬೆಳೆಸಿದರು. ಅಷ್ಟೇ ವೇಗದಲ್ಲಿ  ಉನ್ನತ  ಹುದ್ದೆಯನ್ನು ತ್ಯಾಗಗೈದು,  ಉತ್ಸಾಹಿಗಳಿಗೆ ಬಿಟ್ಟುಕೊಟ್ಟರು.

     ಮನಸ್ಸುಮಾಡಿದ್ದರೆ,  ಶಾಸಕ, ಸಂಸದ  ಸ್ಥಾನಗಳು  ಸುಲಭವಾಗಿ  ಅವರಿಗೆ  ದೊರೆಯಬಹುದಿತ್ತು.  ಆದರೆ ಸಾಮಾಜಿಕ  ಸಾಂಸ್ಕೃತಿಕ  ಆಧ್ಯಾತ್ಮಿಕ  ಮೌಲ್ಯಗಳನ್ನು  ಮೈಮನಗಳಲ್ಲಿ ತುಂಬಿಕೊಂಡಿದ್ದ  ಹೆಗಡೆಯವರು, ತಮ್ಮ ಜಿಲ್ಲೆಗೆ, ತಮ್ಮನ್ನು ಅರ್ಪಿಸಿಕೊಂಡರು.   ಹೊಸ  ಹೊಸ  ಪ್ರತಿಭೆಗಳ  ಸೃಷ್ಟಿಗೆ  ಕಾರಣವಾದರು.

ಉತ್ಕಟ  ಸ್ವಾಭಿಮಾನ, ಉನ್ನತ  ಕಾರ್ಯಶೀಲತೆ, ಪ್ರೀತಿ ಮತ್ತು ಬಂಧುತ್ವಗಳಲ್ಲಿ ನಂಬಿಕೆಯಿದ್ದಲ್ಲಿ ಒಂದು ವ್ಯಕ್ತಿತ್ವಕ್ಕೆ  ಅದೆಷ್ಟು ವೈವಿಧ್ಯಮಯ  ಆಯಾಮಗಳು  ಮೂಡುತ್ತವೆ  ಎಂಬುದಕ್ಕೆ ಗಣೇಶ  ಹೆಗಡೆಯವರ  ಜೀವನ ಮತ್ತು  ಸಾಧನೆಗಳು  ಸಾಕ್ಷಿನುಡಿಯುತ್ತವೆ. ಸಹಸ್ರ ಶಿರಗಳು,  ಸಹಸ್ರ ಕರಗಳು, ಸಹಸ್ರ ಪಾದಗಳ  ಮೂರ್ತಿಗಳನ್ನು ಶಿಲ್ಪದಲ್ಲಿ ಕಂಡಿದ್ದೇವೆ.  ಹಲವು ಆಯಾಮಗಳಿರುವ,  ಎಲ್ಲ  ಆಯಾಮಗಳಲ್ಲಿ ಒಬ್ಬನೇ  ವ್ಯಕ್ತಿಯಿರುವ  ಉದಾಹರಣೆಯನ್ನು ಕ್ವಚಿತ್ತಾಗಿ  ನಾವು  ಇತಿಹಾಸದಲ್ಲಿ ಕಾಣುತ್ತೇವೆ.  ಅಭಿವೃದ್ಧಿಗಾಗಿ,  ವಿಕಾಸಕ್ಕಾಗಿ  ಮತ್ತೆ  ಮತ್ತೆ ಇಂತಹ  ವ್ಯಕ್ತಿತ್ವಕ್ಕಾಗಿ  ಹಪಾಹಪಿಸುತ್ತೇವೆ.

     ಆದರೆ  ಗಣೇಶ  ಹೆಗಡೆ  ಆಕಾಲದ  ಜಿಲ್ಲೆಯ  ತಾಲೂಕಿನ  ನಿರ್ವಾತಕ್ಕೆ   ಹೊಸ  ಪ್ರಾಣವಾಯುವನ್ನು  ತುಂಬಿದಂತೇ  ಹೊಸ  ಸ್ಪೂರ್ತಿಯಾದಂತೇ  ಮತ್ತೊಬ್ಬ  ಪ್ರಾಮಾಣಿಕ,  ಅಭಿವೃದ್ಧಿಯ  ಕನಸುಗಾರ  ಇನ್ನೂ    ನೆಲದಲ್ಲಿ ಜನಿಸಿಲ್ಲ.  ಕೇವಲ  ಇದೇ ತಾಲೂಕೊಂದನ್ನು ದೃಷ್ಟಿಯಲ್ಲಿಟ್ಟು ಪರಿಶೀಲಿಸಿದರೆ  ಗಣೇಶರ  ಕೊಡುಗೆಯ  ನಂತರ  ಸಿದ್ದಾಪುರ  ಸ್ಥಗಿತಗೊಂಡಂತೆನ್ನಿಸುತ್ತದೆ. 

  ಅವರ  ಮನದಲ್ಲಿ ತನ್ನ ತಾಲೂಕನ್ನು  ಮತ್ತೊಂದು  ಮಣಿಪಾಲ ವನ್ನೋ,  ಮಂಗಳೂರನ್ನೋ  ಸೃಷ್ಟಿಸುವುದಾಗಿತ್ತು.  ಆದರೆ  ಅವರ  ಕನಸೆಲ್ಲ  ಅವರೊಂದಿಗೇ  ಸಾಗಿಹೋದವು.  ಆರ್ಥಿಕ  ಶೈಕ್ಷಣಿಕ  ಮತ್ತು ಆರೋಗ್ಯಕ್ಷೇತ್ರದಲ್ಲಿ  ತಾಲೂಕನ್ನು  ಸ್ವಾವಲಂಬಿಯನ್ನಾಗಿಸುವ  ಗುರಿ  ಅವರದಾಗಿತ್ತು. ತಾಂತ್ರಿಕ ಮಹಾವಿದ್ಯಾಲಯ, ಸುಸಜ್ಜಿತ  ಹೈಟೆಕ್‌  ಆಸ್ಪತ್ರೆ ಪರಿಸರ ಸ್ನೇಹೀ  ಕೈಗಾರಿಕೆಗಳ  ಸ್ಥಾಪನೆಯ  ಕನಸುಗಳು  ಅವರೊಂದಿಗೇ  ಮರೆಯಾದವು.

    ಜಿಲ್ಲೆಯ  ಸಾವಿರಾರು ಯುವ  ಸಾಕ್ಷರ  ಪ್ರತಿಭೆಗಳು  ದೇಶದಾದ್ಯಂತ  ಚದುರಿಹೋದರು. ಹಸಿರು  ಜಿಲ್ಲೆ  ಮೆಲ್ಲ ಮೆಲ್ಲಗೆ  ಕಪ್ಪಾಗುತ್ತಿದೆ. ಯುವ ಶಕ್ತಿಯ  ಕೊರತೆಯಿಂದ  ಜಿಲ್ಲೆ ಅಶಕ್ತಗೊಳ್ಳುತ್ತಿದೆ.  ನಿಶ್ಚಲಗೊಳ್ಳುತ್ತಿದೆ.

    ಮತ್ತೆ    ಮಣ್ಣಿಗೆ  ಜೀವ ನೀಡುವ  ಹಸಿರಿಗೆ  ಮತ್ತಷ್ಟು ಉಸಿರು ತುಂಬುವ, ಗಣೇಶ ಹೆಗಡೆಯವರ  ಕನಸಿಗೆ  ನೀರುಣಿಸುವ  ಮತ್ತೊಬ್ಬ  ಕ್ರಿಯಾಶೀಲ ಸಜ್ಜನನ  ಆಗಮನಕ್ಕಾಗಿ  ಅವರ  ಶತಮಾನೋತ್ಸವದ  ಪರ್ವಕಾಲದಲ್ಲಿ    ಜಿಲ್ಲೆ  ಕಾಯುತ್ತಲೇ  ಇದೆ.

 

 

 

ʻʻ ನಮ್ಮೋಣಿ ಮಾಣಿ ಏಣಿ ಏರಿದ್ದಾ. ಏರಿ ಏರಿ  ಆ ಕಾಶ ತಡವಿದ್ದಾ

ಬೆಳ್ಕಿನ  ಮಣಿಯಾ  ಎಣ್ಸಿ ಗುಣ್ಸಿ ಗೋಣಿ ತುಂಬಿದ್ದಾ

ಒಣಾ ಮಣ್ಣಲಿ  ಅಗ್ದೂ ಅಗ್ದೂ ಬೆವರೀನ್‌  ಬೀಜಾ  ಬಿತ್ತಿದ್ದಾ.

ಈಗ  ಬಿಡು  ಎಲ್ಲಾ ಕನಸೂ  ನನಸಾಗ್ಹೋಜು. 

ಹೆರೆ  ಹೆರೆ  ಹೆಮ್ಮರ ಕೊಂಬೆ ಚಾಚಿ  ಅಂಬಾರಾ  ಅಪ್ಪಿದ್ದು.

ಬೇಕಷ್ಟ್‌  ಹಣ್ಣು  ಸಾಕಷ್ಟ್‌  ನೆರಳು  ಅಂಗಳ  ತುಂಬಿದ್ದು.

ಮರ್ಯಡಾ   ತಮಾ  ಗಿಡಾ ನೆಟ್ಟವ್ನ........  ಇಷ್ಟೆಲ್ಲಾ ಕೊಟ್ಟವ್ನ.ʼʼ

=======================================================

                                     

ಸುಬ್ರಾಯ ಮತ್ತೀಹಳ್ಳಿ.

ಸುಮಸಂಪದ  ಅಂಕಣಕ್ಕಾಗಿ.  ತಾ- ೨೪-೧೧-೨೦೨೫.

    

Monday, 21 October 2024

ಲೋಹಿಯಾ ಕಣ್ಣಲ್ಲಿ ʻʻ ದಿಲ್ಲಿʼʼ

 

         ಅವಾಚ್ಯ ನಿಂದನೆ, ದೋಷಾರೋಪದ  ಕೆಸರೆರಚಾಟ,  ನೈತಿಕ ಅಧಃಪತನ,  ಸ್ವಜನ ಪಕ್ಷಪಾತ,  ಸಿದ್ಧಾಂತ ಶೂನ್ಯತೆಗಳಲ್ಲಿ, ಪಕ್ಷಾತೀತವಾಗಿ  ಭೃಷ್ಠಗೊಂಡಿರುವ  ಕರ್ನಾಟಕದ  ರಾಜಕಾರಣವನ್ನು ( ಬೆಂಗಳೂರನ್ನು)ಗಮನಿಸಿದಾಗೆಲ್ಲ,  ಸೈದ್ಧಾಂತಿಕ  ರಾಜನೀತಿಜ್ಞ, ಪ್ರತಿಭಾವಂತ  ಲೇಖಕ  ರಾಮ ಮನೋಹರ  ಲೋಹಿಯಾ ಪದೆ  ಪದೇ ನೆನಪಿಗೆ  ಬರುತ್ತಾರೆ.  ೧೯೫೮  ರಲ್ಲಿ  ಅವರು  ದೆಹಲಿಯನ್ನು  ಕುರಿತು  ‍ಧ್ಯಾನಿಸುತ್ತಾರೆ.  ನೂರಾರು  ವರ್ಷದ  ದೆಹಲಿ ಮಹಾನಗರದ  ಏಳುಬೀಳುಗಳನ್ನು  ಕಾವ್ಯಾತ್ಮಕವಾಗಿ  ವರ್ಣಿಸುತ್ತಾರೆ.

    `` Dilli also called Delhi ‘’  ಎಂಬ  ಲೋಹಿಯಾರವರ  ಇಂಗ್ಲಿಶ್‌  ಲೇಖನವೊಂದನ್ನು, ನೀ.ನಾ.ಸಂ, ಕೇ.ವಿ. ಸುಬ್ಬಣ್ಣ. ಸಮರ್ಥವಾಗಿ  ಕನ್ನಡಕ್ಕೆ   ಬಹಳ ಹಿಂದೆಯೇ  ಅನುವಾದಿಸಿದ್ದಾರೆ.  ಲೋಹಿಯಾರವರ  ಸಂಸ್ಕೃತಿ  ನಿಷ್ಠತೆ  ನವೀನ ದೃಷ್ಟಿ, ಕಾವ್ಯದ ಆಳ ಮತ್ತು ಚಾರಿತ್ರಿಕ ಪ್ರಜ್ಞೆಗಳನ್ನು  ತನ್ನ ಒಡಲಲ್ಲಿ ಹುದುಗಿಸಿಕೊಂಡ  ಪ್ರಸ್ತುತ  ಲೇಖನವನ್ನು  ಓದಿದಾಗ  ನಮ್ಮ ಬೆಂಗಳೂರಿನ  ಸುದೀರ್ಘ ಇತಿಹಾಸ, ಏಳು ಬೀಳು,  ಮತ್ತು  ಸದ್ಯದ  ರಾಜಕೀಯ ಕೆಸರು  ನೆನಪಿಗೆ  ಬರುತ್ತದೆ.

    ಸುಪ್ರಸಿದ್ಧ ಲೇಖಕ  ಕುಷ್ವಂತ್‌ ಸಿಂಗ್‌  ರವರ  ದಿಲ್ಲಿ ಕಾದಂಬರಿಯೂ  ಸಹ  ಐವತ್ತರ  ದಶಕದಲ್ಲಿ  ದೊಡ್ಡ ಸಂಚಲನವನ್ನೇ  ಉಂಟುಮಾಡಿತ್ತು.  ಖುಷವಂತ್‌ ಸಿಂಗ್‌  ದೆಹಲಿಯನ್ನು  ಎರಡೇ ಎರಡು ವಸ್ತುವಿನ  ಮೂಲಕ  ಗುರುತಿಸುತ್ತಾರೆ.  ಅದೇ  ದಿಲ್ಲಿಯ ಆತ್ಮ ಎನ್ನುತ್ತಾರೆ.  ಒಂದು  ದಿಲ್ಲಿಯ ಸ್ಮಶಾನ. ಎರಡನೆಯದು  ಅಲ್ಲಿಯ  ಹಿಜಡಾಗಳು. ( ಮಂಗಳ ಮುಖಿಯರು)

     ಹಾಗೆಂದು  ದಿಲ್ಲಿಯನ್ನು  ಕುರಿತು  ದೇಶವಿದೇಶಗಳ  ಹತ್ತು ಹಲವು ಲೇಖಕರು  ಬರೆದಿದ್ದಾರೆ.  ಆದರೆ  ಲೋಹಿಯಾ  ಕಂಡ  ದಿಲ್ಲಿ  ಮಾತ್ರ  ಅತ್ಯಂತ  ವಿಶಿಷ್ಟವಾಗಿದೆ.

     ಲೋಹಿಯಾ,  ಭಾರತ ಕಂಡ  ಅಪ್ರತಿಮ  ರಾಜನೀತಿಜ್ಞ. ಇಡೀ  ವಿಶ್ವಾನುಭವ ಹೀರಿ  ಭಾರತೀಯ  ಮಣ್ಣಿನಲ್ಲಿ ಚಿಗುರೊಡೆದು  ಹೆಮ್ಮರವಾಗಿ  ಬೆಳೆದ ಇವರು ರಾಜಕಾರಣದ  ಸಂತರಾದರು.  ಅಹಿಂಸೆಯ ನೆರಳಲ್ಲಿ ಕ್ರಾಂತಿಕಾರರಾದರು.  ಗಾಂಧಿಯವರ  ಆಪ್ತ ಶಿಷ್ಯರಾಗಿಯೂ  ಕಟ್ಟಾ ನಾಸ್ತಿಕರಾದರು.  ಭಾರತೀಯ  ಸಂಸ್ಕೃತಿಯ  ವಕ್ತಾರರಾಗುತ್ತಲೇ  ಶುದ್ಧ ಸಮಾಜವಾದಿಯಾಗಿ ರೂಪುಗೊಂಡರು.  ಮಾರ್ಕ್ಸ  ಸಿದ್ಧಾಂತ, ಮತ್ತು  ನಮ್ಮ ಪೌರಾತ್ಯ ತತ್ವಜ್ಞಾನಗಳನ್ನು  ಕಸಿಮಾಡಿ  ಭಾರತೀಯ  ಮನೋಸ್ಥಿತಿಗೆ  ಆಪ್ತವಾಗುವ ಸಂಯೋಜಿತ  ರಾಜನೀತಿಯ  ಹೊಸದೊಂದು ತಳಿಯನ್ನೇ  ಸೃಷ್ಟಿಸಿದರು.

  ಮಾರ್ಕ್ಸವಾದದ  ನಿಷ್ಠುರತೆ,  ಗಾಂಧೀವಾದದ  ಅತಿಸಾಂಪ್ರದಾಯಿಕತೆಯಂತಹ  ಅತಿರೇಕಗಳು,  ಭಾರತದಲ್ಲಿ  ಒಂದು  ಅತೃಪ್ತ ಸಮುದಾಯವನ್ನೇ  ಸೃಷ್ಟಿಸಿತ್ತು. ಅಂಥ  ಸೈದ್ಧಾಂತಿಕ  ಗೊಂದಲಕ್ಕೆ  ಪರಿಹಾರವಾಗಿ ಲೋಹಿಯಾ  ಚಿಂತನೆ  ಪರಿಣಾಮಕಾರೀ  ಪ್ರಭಾವ  ಬೀರಿತು.  ಸಾಮಾನ್ಯರಿಂದ  ಶಿಕ್ಷಿತರವರೆಗೆ, ಕಾರ್ಮಿಕರಿಂದ  ಉದ್ಯಮಿಗಳ ವರೆಗೆ, ರೈತರಿಂದ  ರಾಜಕಾರಣಿಗಳವರೆಗೆ  ಲೋಹಿಯಾ  ವಿಚಾರ ಪ್ರವಾಹ  ಚುಂಬಕದಂತೇ  ಸೆಳೆಯಿತು.    ಕಾಲದ  ಭಾರತೀಯ  ಸಾಹಿತ್ಯವಲಯದ  ನವ್ಯಮಾರ್ಗಕ್ಕೆ  ಹೊಸ  ಸಂಚಲನ ಮೂಡಿಸಿತು.

     ನಂತರದ  ದಿನಗಳಲ್ಲಿ  ಲೋಹಿಯಾವಾದಿಗಳೆಂದು  ಮೈಯುಬ್ಬಿಸಿ ನಡೆದಾಡಿ, ಗದ್ದಲವೆಬ್ಬಿಸಿದ  ಲೋಹಿಯಾ ವಾದಿಗಳು  ರಾಜಕೀಯವಾಗಿ  ಮೇಲೇರುವ  ನಿಚ್ಚಣಿಕೆಯನ್ನಾಗಿ  ಲೋಹಿಯಾ ವಾದವನ್ನು ಉಪಯೋಗಿಸಿಕೊಂಡರು. ಸೈದ್ಧಾಂತಿಕವಾಗಿ  ಭೃಷ್ಠಗೊಂಡು  ವಿವಿಧ  ಪಕ್ಷಗಳ ಬಾಲಂಗೋಚಿಗಳಾಗಿ  ಪರಿವರ್ತಿತಗೊಂಡಿದ್ದು  ಮಾತ್ರ  ದುರಂತ.

    ಇನ್ನು ಬುದ್ಧಿಜೀವಿಗಳ  ದುರಂತವನ್ನಂತೂ  ವರ್ಣಿಸುವುದೇ  ಬೇಡ.  ಲೋಹಿಯಾರ  ದಿಲ್ಲಿ ಲೇಖನವನ್ನು ಪ್ರಸ್ಥಾಪಿಸುವುದರೊಂದಿಗೆ  ಪ್ರಾರಂಭಿಸಿದ  ಲೇಖನ   ವರ್ತಮಾನದ  ರಾಜಕೀಯ ನೈತಿಕ  ಅಧಃಪತನದ  ಅಧ್ಯಾಯ ತೆರೆಯಿತು  ಅಂದುಕೊಂಡರೆ  ಆಶ್ಚರ್ಯವಿಲ್ಲ.  ದಿಲ್ಲಿಯಮೇಲೆ  ಮುಘಲ್‌ ಆಕ್ರಮಣವಾದಾಗಿನಿಂದ  ಸ್ವಾತಂತ್ರ್ಯೋತ್ತರದ  ವರೆಗೆ  ವ್ಯಾಪಿಸಿಕೊಂಡ  ಅವರ ಲೇಖನ   ದೇಶದ  ಮೂಲಭೂತ  ದೌರ್ಬಲ್ಯ,  ನೋವು  ಸಂಕಟಗಳನ್ನ  ಅನಾವರಣ ಗೊಳಿಸುತ್ತ, ಕಾವ್ಯವೊಂದರ  ಆಳ ಅಗಲಗಳನ್ನು  ಪಡೆದು ಬಿಡುತ್ತದೆ.

      ʻʻ ಪ್ರಪಂಚದ  ರಾಜಧಾನಿಗಳಲ್ಲೆಲ್ಲ  ಅತ್ಯಂತ  ಮೋಹಕಳೂ  ಅತ್ಯಂತ ಭೃಷ್ಠಳೂ ಆದ  ನಾಯಕಸಾನಿ  ಡೆಲ್ಲಿ.ಒಬ್ಬ ಪ್ರಾಮಾಣಿಕ ಪ್ರೇಮಿಗೆ  ಈತನಕವೂ  ಆಕೆ  ತನ್ನನ್ನು ಒಪ್ಪಿಸಿಕೊಂಡಿಲ್ಲ. ಯಾವತ್ತೂ  ಅನಾಗರಿಕ  ಕ್ರೂರಿಯಿಂದ  ದಮನಗೊಳಿಸಲ್ಪಟ್ಟಿದ್ದಾಳೆ.  ಮತ್ತು ಅವನನ್ನು ಚಂದ ನಡವಳಿಕೆಗೆ  ಪುಂಡತನಕ್ಕೆ ತಿದ್ದಿ ಸಂಸ್ಕರಿಸಲು ಯತ್ನಿಸಿದ್ದಾಳೆ.  ಪ್ರಯತ್ನ ಸಿದ್ಧಿಸುತ್ತದೆ  ಎನ್ನುವಾಗಲೇ  ಮತ್ತೊಂದು  ನಾಗರಿಕರ  ಗುಂಪನ್ನು ಆಕರ್ಷಿಸಿ ಸಂಸ್ಕಾರ  ಕೊಡುವ  ಸೆರಗಿನೊಳಕ್ಕೆ  ಸೇರಿಸಿಕೊಂಡಿದ್ದಾಳೆ. ʼʼ ಎಂದು  ದಿಲ್ಲಿಯನ್ನು ಪರಿಚಯಿಸುತ್ತ  ಪ್ರಪಂಚದ ಇನ್ನಿತರ  ಪ್ರಮುಖ  ರಾಜಧಾನಿಗಳನ್ನು  ಮುಖಾಮುಖಿಯಾಗಿಸುತ್ತಾರೆ.  ʻʻಪ್ಯಾರಿಸ್‌, ವಾಸಿಂಗ್ಟನ್‌, ಟೋಕಿಯೋ,  ಡಮಾಸ್ಕಸ್‌  ಗಳ  ರೂಪ  ಪ್ರವೃತ್ತಿಯಂತೇ  ದಿಲ್ಲಿಯಿಲ್ಲ. ಅವೆಲ್ಲವುಗಳ  ಕೊಚ್ಚೆ  ಕೆಸರು ಮತ್ತು ಚಲುವುಗಳ  ಒಟ್ಟೂ ಮೊತ್ತದಂತಿದ್ದಾಳೆ.    ರಾಜಧಾನಿಗಳೆಲ್ಲ ರೂಪ  ಗಾಂಭೀರ್ಯಗಳುಳ್ಳ  ಗರತಿಯಂತಿದ್ದರೆ, ಡೆಲ್ಲಿಗೆ  ಗಂಡನೇ ಇಲ್ಲ.  ಇವಳು ಯಾರೊಬ್ಬನನ್ನೂ  ಪ್ರೇಮಿಯೆಂದು ಸ್ವೀಕರಿಸಿದ್ದೂ ಇಲ್ಲ. ಲಲ್ಲೆಗರೆಯಲೂ ಇಲ್ಲ.  ಬಲವಂತದಿಂದ  ಆಕ್ರಮಿಸಿದ  ಬರ್ಬರರನ್ನು ನಯವಾಗಿಸುವುದಕ್ಕೆ,  ನಿರ್ವೀರ್ಯ  ಗೊಳಿಸುವುದಕ್ಕೆ  ತನ್ನನ್ನು ಅರ್ಪಿಸಿಕೊಂಡ  ಮಹಾಸೂಳೆಯಂತಿದ್ದಾಳೆ  ದಿಲ್ಲಿ.  ವಿಸ್ಮಯಮೂಡುವ  ಸೊಬಗು, ಆದರೆ ಹೃದಯವೇ  ಇಲ್ಲ.  ಆಕೆ  ಬದುಕುವುದೇ  ಸೌಂದರ್ಯಕ್ಕಾಗಿ, ನಯಗಾರಿಕೆಗಾಗಿ, ಇವಳು  ವಿಶ್ವದ  ಬಹುದೊಡ್ಡ  ನಾಯಕಸಾನಿ. ʼʼ

   ʻʻ ಒಬ್ಬೊಬ್ಬ  ಹೊಸ ವಿಜೇತ  ಬಂದಹಾಗೆ  ದಿಲ್ಲಿ ತನ್ನ ನಿವೇಶನ  ಬದಲಿಸಿದೆ. ಸುಸಂಸ್ಕೃತ ಪಾಪಗಳ  ಒಂದೊಂದೂ  ಹೊಸ  ಸಾಹಸವನ್ನು  ತಕ್ಷಣ  ಅದು  ಭೂಮಿಯಮೇಲೆ  ಪ್ರಾರಂಭಿಸಿದೆ.  ಹದಿನೈದು ಮೈಲಿ  ವಿಸ್ತೀರ್ಣದೊಳಗೆ  ಎಂಟು ಶತಮಾನಗಳಷ್ಟು  ಕಡಿಮೆ  ಅವಧಿಯ  ಏಳು ದಿಲ್ಲಿಗಳಿವೆ.  ನಯವಂತಿಕೆ  ಅಪಮಾನಗಳು    ಏಳು  ಅಥವಾ  ಎಂಟು ದಿಲ್ಲಿಗಳಲ್ಲಿ  ದಾಖಲಾಗಿರುವುದೇ  ಸ್ತರ ಸ್ತರಗಳಾಗಿ. ದೃಶ್ಯ  ದೃಶ್ಯಗಳಾಗಿ.ʼʼ

     ಎಂದು  ದೆಹಲಿಯ  ಸುದೀರ್ಘಕಾಲದ  ರಕ್ತರಂಜಿತವಾದ  ಒಂದೊಂದೇ  ಹೆಜ್ಜೆಯನ್ನು  ವರ್ಣಿಸುತ್ತ,  ಕುತುಬ್‌  ಮೀನಾರ್‌  ಎದುರು  ಧ್ಯಾನಸ್ಥರಾಗುತ್ತಾರೆ.

   ʻʻ ಇಂಡಿಯಾ  ಇತಿಹಾಸದ    ಹಾಳುಕೊಂಪೆಯಲ್ಲಿ  ನಾನು  ಒಮ್ಮೆ  ಒಂದು ರಾತ್ರಿ  ಕಳೆದಿದ್ದೆ.  ಅದರ  ರಹಸ್ಯವನ್ನು  ಅನ್ವೇಷಿಸುವ  ಹಿರಿಯಾಸೆಯಿಂದ.  ನನಗೆ ಕೋಪವಿರಲಿಲ್ಲ. ತಾಯಿಯ ಬಗೆಗೆ  ಕೋಪಗೊಳ್ಳುವುದು  ಹೇಗೆ..?.  ವಿಜೇತನಾಗಿ  ಬರುತ್ತಿದ್ದ  ವಿದೇಶಿಯನಲ್ಲಿ  ಒಲವು  ತೋರಿದ್ದರೂ  ಕೂಡಾ..?.  ಅಥವಾ    ತಾಯಿಯನ್ನು ಅಪಹರಿಸಿ  ಆಮೇಲೆ  ಅವಳ ಗಂಡನಾದ  ಮಲತಂದೆಯ  ಮೇಲಾಗಲೀ,      ಕೂಡಿಕೆಯ  ಪರಿಣಾಮದಿಂದ  ಹುಟ್ಟಿದ  ಸೋದರರ  ಮೇಲಾಗಲೀ  ಹೇಗೆ  ಕೋಪಗೊಳ್ಳಲಿ,,?  ನನ್ನಲ್ಲಿ  ಉಂಟಾದುದು  ಕ್ರೋಧವಲ್ಲ,,  ಸಂಕಟ. ʼʼ  ಎನ್ನುತ್ತ...........

    ʻʻಇದು  ಮುಸ್ಲಿಂ  ವಿರೋಧಿ ಭಾವವಲ್ಲ.  ಮುಸ್ಲಿಮ್‌  ಕುತುಬ್‌ ಅನ್ನು,  ಮುಸ್ಲಿಮ್‌  ತುಘಲಕಾಬಾದ್‌  ಆಕ್ರಮಿಸಿತು.  ಮುಂದೆ ಅದನ್ನೂ ಮತ್ತೊಬ್ಬ ಮುಸ್ಲಿಂ  ಆಕ್ರಮಣಕಾರಿ  ವಶಪಡಿಸಿಕೊಂಡ.  ದೆಲ್ಲಿಯಮೇಲೆ  ತೈಮೂರ್‌  ನಾದಿರ್‌ ಶಾ  ಮತ್ತು ಅಹಮದ್‌ ಶಾ, ಇವರೆಲ್ಲ ಅಮಾನವೀಯವಾಗಿ ಗೈದ  ಬರ್ಬರ  ಲೂಟಿ, ಸಾಮೂಹಿಕ ಕಗ್ಗೊಲೆಗಳು, ಇಡೀ  ಪ್ರಪಂಚವನ್ನು  ತತ್ತರ  ನಡುಗಿಸಿದ  ಘಟನೆಗಳು  ಹಿಂದೂಗಳಿಗೆಷ್ಟೋ  ಮುಸ್ಲಿಮರಿಗೂ  ಕ್ರೋಧ  ಹುಟ್ಟಿಸುವಂತಹದ್ದಾಗಿದೆ.  ಮುಂದೆ  ಅವರನ್ನು ಮಣಿಸಿ  ಇಂಗ್ಲಿಶರು ಬಂದರಲ್ಲ...!! ʼʼ  ಎನ್ನುತ್ತಾರೆ.  ಲೋಹಿಯಾ  ವರ್ಣಿಸಿದಂತೇ ....

    ಒಂದೆಡೆ ರಾಜಗಂಭೀರ  ಕುತುಬ್‌, ಇನ್ನೊಂದೆಡೆ  ಅರ್ಧ  ಕಟ್ಟಿನಿಂತ  ಅಲ್ಲಾವುದ್ದೀನನ  ಮಿನಾರ್‌,  ಇವೆರಡರ  ತಳದಲ್ಲಿ ಸೊಗಸು ಕಪ್ಪಿನ  ಕಬ್ಬಿಣದ  ಸ್ಥಂಬ,    ಮೂರು  ಕೂಡಿ ರಚಿಸಿದ ತ್ರಿಕೋಣವನ್ನು ತುಂಬ  ಹೊತ್ತು  ನೋಡುತ್ತ  ನಿಂತಿದ್ದೆ. ಆಗ  ನಾನು  ಒಬ್ಬಂಟಿ. ಚಂದ್ರನೂ  ಕ್ಷೀಣನಾಗಿ ನನ್ನ ಸಹಾಯಕ್ಕೆ ಬರದ ಹಾಗಿದ್ದ.  ಅವ್ಯಕ್ತವಾದ  ನೀಗೂಢವಾದ ಯಾವುದೋ  ಭಯ  ನನ್ನನ್ನು ಈ ತ್ರಿಕೋಣದ  ಅಡಿರೇಖೆಗೆ ತಳ್ಳಿ ನಿಲ್ಲಿಸಿದಂತಾಗಿತ್ತು.   ಅದೇನು  ಹಾವುಗಳ  ಭಯವೋ  ಕಳ್ಳರ  ಧರೋಡೆಕೋರರ  ಭಯವೋ   ಅಥವಾ  ಹತ್ತು ಶತಮಾನಗಳಿಂದಲೂ  ಹಾಗೇ  ಭವ್ಯ ಮಹಲುಗಳಲ್ಲಿ ದುರ್ವ್ಯವಹಾರಗಳನ್ನು  ಚೋದಿಸುವ  ಆದರೆ  ಬಡವರಮೇಲೆ  ಸಾರ್ವಜನಿಕ  ಸ್ಥಳಗಳಲ್ಲಿ  ಒಂಟಿಯಿರಲಿ ಸಮೂಹದಲ್ಲಿರಲಿ ಎರಗುವ  ಸಂಘೀಯರ  ಭಯವೋ,  ಅಥವಾ  ಇಂಡಿಯಾ  ಇತಿಹಾಸದ  ಕ್ರೌರ್ಯ  ಮಾನ ಭಂಗಗಳ  ವರ್ಣಿಸಲಾಗದಂಥ  ಭಯ  ಮಾತ್ರವೋ....?ʼʼ

    ಎಂದು ದಿಲ್ಲಿಯ  ಆಕ್ರಮಣ  ನೋವು  ತಲ್ಲಣಗಳನ್ನು  ಲೋಹಿಯಾ  ಮೆಲುಕು ಹಾಕುತ್ತ  ಬರೆಯುವಾಗ, ಭಾರತೀಯ  ಸಮಾಜದೆದುರು  ಒಬ್ಬ  ಬಂಡಾಯಗಾರ  ರಾಜಕಾರಣಿಯಾಗಿ  ಸ್ವಾತಂತ್ರ್ಯಹೋರಾಟದ  ಕ್ರಾಂತಿಕಾರಿಯಾಗಿ,  ಕಾಣುವುದಕ್ಕಿಂತ  ಒಬ್ಬ  ಪ್ರತಿಭಾ ಸಂಪನ್ನ ಸಮಾಜಶಾಸ್ತ್ರಜ್ಞರಾಗಿ,     ಸಂವೇದನೆ ಹೊಂದಿದ  ಕವಿಯಾಗಿ  ಕಾಣುತ್ತಾರೆ.  ಅವರ  ಆಳದಲ್ಲಿರುವ  ಸತ್ಯನಿಷ್ಠುರತೆ  ಅಪ್ಪಟ  ಪ್ರಾಮಾಣಿಕತೆ, ಚಿಂತನಶೀಲತೆಯಂಥ  ಗುಣಗಳನ್ನು  ಅವರ  ಅನುಯಾಯಿಗಳೇ  ಅರ್ಥೈಸಿಕೊಳ್ಳದಾದರು.  ಇದೇ  ಕಾರಣಕ್ಕಿರಬಹುದು, ಅವರು ಬದುಕಿಡೀ  ಕಟ್ಟುವುದು  ಮುರಿಯುವುದು , ಮುರಿದು ಮತ್ತೆ  ಕಟ್ಟುವುದು,    ಕ್ರಿಯೆಯನ್ನೇ ಮುಂದುವರೆಸಿದ್ದು. 

    ಲೋಹಿಯಾರಲ್ಲಿಯ  ದೇಶೀ  ಚಿಂತನೆ  ದೇಶೀ ಬಣ್ಣ, ಸಂಸ್ಕೃತಿ  ಮತ್ತು ವೈವಿಧ್ಯಪೂರ್ಣ ಭಾಷೆಗಳ  ಬಗೆಗಿನ  ಪ್ರೀತಿಯ  ಗಾಢತೆ, ಈ  ಎಲ್ಲ ಗುಣಗಳು  ಗಾಂಧಿಯವರ  ಪ್ರವೃತ್ತಿಗೆ  ಹೋಲುತ್ತದೆ.  ಮಾತೃಭಾಷೆಗಳಿಗೆ  ಪ್ರಾಮುಖ್ಯ ನೀಡದೇ ಪರಕೀಯ  ಭಾಷೆಗಳನ್ನು  ಅಪ್ಪಿಕೊಳ್ಳುವ ಕ್ರಿಯೆ  ಎಲ್ಲಿಯವರೆಗೆ  ಇರುತ್ತದೆಯೋ  ಆವರೆಗೂ  ದಯನೀಯ  ದಾಸ್ಯ  ತಪ್ಪದು,  ಎಂಬುದು ಅವರ  ಖಚಿತ  ನಿಲುವಾಗಿತ್ತು.  ಒಮ್ಮೆ  ನೆಹರೂ  ʻʻ ಇಂಗ್ಲಿಶ್‌  ಭಾಷೆ ನಮ್ಮ ದೇಶಕ್ಕೆ  ಹೊಸ ಜ್ಞಾನದ  ಕಿಟಕಿಯಿದ್ದಂತೆʼʼ ಎಂದು  ಉದ್ಘರಿಸಿದಾಗ,  ಲೋಹಿಯಾ  ತಕ್ಷಣ  ಪ್ರತಿಕ್ರಿಯಿಸಿದ್ದರು. 

     ʻʻಗೋಡೆಯೇ  ಇಲ್ಲದ    ದೇಶಕ್ಕೆ  ಕಿಟಕಿ  ಎಲ್ಲಿಂದ  ಬರಬೇಕು....?ʼʼ  ಎಂದು.

ʻʻಡೆಲ್ಲಿಯನ್ನು ಜಾಗತಿಕ ಇತಿಹಾಸದ  ಅತ್ಯಂತ  ಹೃದಯಹೀನ  ನಾಯಕ ಸಾನಿಯಾಗಿ  ರೂಪಿಸಿದ  ಕಾರಣಗಳು  ಅನೇಕವಿರಬಹುದಾದರೂ  ಭಾಷೆಯ  ಬಲವಂತ ಎಲ್ಲಕ್ಕಿಂತ ಹೆಚ್ಚು  ಕೆಲಸ ಮಾಡಿದ  ಹಾಗೆ  ಕಾಣುತ್ತದೆ.  ಜಗತ್ತಿನ ಯಾವ  ರಾಜಧಾನಿಯೂ  ಇಷ್ಟು ದೀರ್ಘಕಾಲಪರ್ಯಂತ  ವಿದೇಶೀ  ಹಾಗೂ  ಸಾಮ್ರಾಜ್ಯಶಾಹೀ ಭಾಷೆಯೊಂದನ್ನು  ಬಳಸಿಕೊಂಡದ್ದು  ಇಲ್ಲವೇ  ಇಲ್ಲ. ಅರೇಬಿಕ್‌  ಪರ್ಶಿಯನ್‌  ಇಂಗ್ಲಿಶ್‌ ಈ  ಎಲ್ಲ  ಭಾಷೆಗಳೂ  ಜನಕ್ಕೆ ಅಪರಿಚಿತ.  ಅವೇ  ಡೆಲ್ಲಿಯನ್ನು ಆಳುತ್ತ  ಬಂದಿವೆ.   ಪ್ಯಾರಿಸ್‌  ಬರ್ಲಿನ್‌, ಲಂಡನ್‌  ರೋಮ್‌    ನಗರಗಳ  ವಿಶ್ವವಿದ್ಯಾಲಯಗಳು,  ನ್ಯಾಯಾಲಯಗಳು,  ಮತ್ತು  ಪಾರ್ಲಿಮೆಂಟ್‌  ಗಳು, ತಮ್ಮ ಜನಕ್ಕೆ  ತಿಳಿಯದ  ಭಾಷೆಗಳಲ್ಲಿ  ವ್ಯವಹರಿಸುವುದಾಗಿದ್ದರೆ , ಹೀಗೆ  ಹತ್ತು ಶತಮಾನಗಳ  ಕಾಲ ಸತತವಾಗಿ  ನಡೆಯುತ್ತ  ಬಂದಿದ್ದರೆ,  ಅಷ್ಟು ಕಾಲವೂ  ಜನ ಪ್ರತಿಭಟಿಸದೇ  ಉಳಿದಿದ್ದರೆ,    ರಾಜಧಾನಿಗಳು  ಕೂಡಾ  ನಾಯಕಸಾನಿಗಳೇ  ಆಗಿಬಿಡುತ್ತಿದ್ದವು.  ಅಲ್ಲಿಯ  ಜನ  ಡೋಲುವಾದಕರಾಗಿ  ಪರಿವರ್ತನೆ  ಗೊಂಡುಬಿಡುತ್ತಿದ್ದರು.  ಅಲ್ಲಿಯ  ವಿಶ್ವವಿದ್ಯಾಲಯ, ನ್ಯಾಯಾಲಯ, ಪಾರ್ಲಿಮೆಂಟ್‌ ಗಳು  ಇಂಡಿಯಾದಲ್ಲಿನ  ಹಾಗೇ  ಹೆಣವಾಗಿರುತ್ತಿದ್ದವು.ʼʼ

   ಡಾ  ಲೋಹಿಯಾರ  ಸ್ವಾಭಿಮಾನದ ಸಾಕ್ಷಿ ಈ  ಮೇಲಿನ  ಸಾಲುಗಳಲ್ಲಿವೆ.  ಸ್ವಾತಂತ್ರ್ಯಾನಂತರದಲ್ಲಿ  ಎರಡು ದಶಕಗಳ  ಕಾಲ ಬದುಕಿದ್ದ  ಲೋಹಿಯಾ  ಸಾವಿರ ವರ್ಷದ  ದಿಲ್ಲಿಯ ಇತಿಹಾಸದೊಂದಿಗೆ  ಇಡೀ ದೇಶದ  ಮನಸ್ಸು  ಹೇಗೆ  ಛಿದ್ರಗೊಂಡಿದೆ,  ಪಾಶ್ಚಾತ್ಯ ಜೀವನವಿಧಾನವನ್ನು  ಅದೆಷ್ಟು ಕುರುಡಾಗಿ  ಅದೆಷ್ಟು ದೈನ್ಯವಾಗಿ  ಅವಲಂಬಿಸಿ  ಆತ್ಮಾಭಿಮಾನವನ್ನು  ಹರಾಜಿಗಿಟ್ಟುಕೊಂಡಿದೆ, ಎಂಬುದನ್ನು ತಮ್ಮ ಈ  ಲೇಖನದಲ್ಲಿ  ಒಂದೇ  ಅಲ್ಲದೇ  ನೂರಾರು  ಬರಹಗಳಲ್ಲಿ ಬಿಂಬಿಸಿದ್ದಾರೆ.   ಅವರ  ದೃಷ್ಟಿಯಲ್ಲಿ  ನಮಗೆ  ದೊರಕಿದ್ದು  ಕೇವಲ ಭೌತಿಕ  ಸ್ವಾತಂತ್ರ್ಯ,   ದೇಶ  ಇನ್ನೂ  ಮನೋದಾಸ್ಯದಿಂದ  ಬಿಡುಗಡೆ  ಹೊಂದಿಯೇ  ಇಲ್ಲ, ತನ್ನ ಸಂಸ್ಕೃತಿಯ  ಬಗೆಗೆ  ಕೀಳರಿಮೆ, ಪರಕೀಯ  ಸಂಸ್ಕೃತಿಯ  ಅಂಧಾನುಕರಣೆಗಳನ್ನು  ಮೈಗೂಡಿಸಿಕೊಳ್ಳುವ  ಯಾವುದೇ  ದೇಶ  ಆತ್ಮಹತ್ಯೆಗೈದುಕೊಂಡಂತೆ.  ಅದು  ನಡೆದಾಡುವ  ಶವವಿದ್ದಂತೆ.  ಎಂಬ  ಅವರ  ವಿಚಾರಧಾರೆ,  ಜಾಗತೀಕರಣದಂತಹ  ಈ ವರ್ತಮಾನದಲ್ಲಿ ಮತ್ತೆ  ಮತ್ತೆ  ನೆನಪಿಸಿಕೊಳ್ಳಬೇಕಾಗಿದೆ.

    ಸ್ವಾತಂತ್ರ್ಯಪೂರ್ವದ  ಮತ್ತು ನಂತರದ  ಭಾರತಕ್ಕೆ  ಲೋಹಿಯಾ  ನೀಡಿದ  ಅನನ್ಯ ಕೊಡುಗೆಯನ್ನು  ಪ್ರಸ್ತುತ,  ದೇಶದ  ಜನಮಾನಸ  ತನ್ನ ನೆನಪಿನ ಖಜಾನೆಯಿಂದಲೇ  ಕಳೆದು ಕೊಂಡಿದೆಯೇನೋ  ಎಂದೆನ್ನಿಸುತ್ತಿದೆ.  ನಮ್ಮ  ಸಾಂಸ್ಕೃತಿಕ  ಸಾಮಾಜಿಕ ಭವಿತವ್ಯಕ್ಕಾಗಿ  ಆತ್ಮಾಭಿಮಾನದ  ಉಳಿವಿಗಾಗಿ,   ಡಾ. ರಾಮಮನೋಹರ್‌  ಲೋಹಿಯಾರ  ಬದುಕು ಮತ್ತು ಬರಹಗಳನ್ನೆಲ್ಲ  ನಮ್ಮ ವಿಸ್ಮೃತಿಯಿಂದೀಚೆಗೆ  ಮತ್ತೆ  ಎಳೆದು  ತರಬೇಕಿದೆ.

             ಸುಮ-ಸಂಪದ  ಅಂಕಣಕ್ಕೆ.            ಸುಬ್ರಾಯ  ಮತ್ತೀಹಳ್ಳಿ. ತಾ- ೨೧-೧೦-೨೦೨೪.