ಅಮ್ಮ ಒಮ್ಮೆ ತಮ್ಮಡಿಯ ಕಂಡ ಪಾಖಂಡಿ ಪಾಪಿ ಬಡವ|
ದುರಿತ
ಕಳೆದು ದಾರಿದ್ರ್ಯ ತೊಳೆದು ದುರದೃಷ್ಟವಳಿದು ಬಿಡುವ ||
ಒಡನೆ
ಬಿಡದೆ ಅಜ್ಞಾನಗಿಡವ ಕಡಿದೊಗೆದು ತಿಳಿವು ಕೊಡುವ |
ಹರಿವ ನಿಮ್ಮ ಸಲಿಲ ಪ್ರವಾಹ ಕರುಣಿಸಲಿ
ಎಮಗೆ ಶುಭವ || ( ಗಂಗಾ ಲಹರಿ )
ಐವತ್ತರ ದಶಕದಲ್ಲಿಯೇ ಕನ್ನಡದ
ಸುಪ್ರಸಿದ್ಧ ಸಂಸ್ಕೃತ ವಿಧ್ವಾಂಸರಾದ ಪಂಡರೀನಾಥಾಚಾರ್ಯ ಗಲಗಲಿಯವರು, ಸಂಸ್ಕೃತ
ಸಾಹಿತ್ಯದ ಮಹತ್ವದ ಕವಿ, ಚಿಂತಕ
ಜಗನ್ನಾಥ ಪಂಡಿತ ರಚಿಸಿದ ಇಂದೂ ಅತ್ಯಧಿಕ
ಜನಪ್ರಿಯವಾದ ಸಂಸ್ಕೃತ ಭಾಷೆಯʻʻ
ಪೀಯೂಷ ಲಹರಿʼʼ ಎಂಬ ಖಂಡಕಾವ್ಯವೊಂದನ್ನು ಛಂದೋಬದ್ಧವಾಗಿ
ಕನ್ನಡಕ್ಕೆ ಅನುವಾದಿಸುತ್ತಾರೆ. ಅರವತ್ತು ವರ್ಷಗಳ ನಂತರ ಮತ್ತೆ ಕನ್ನಡ ಕಾವ್ಯಪ್ರಿಯರಿಗೆ ಆ ಕೃತಿ ದೊರಕಿತು.
ಆಗಲೇ ಉತ್ತರಕರ್ನಾಟಕದಲ್ಲಿ , ತಲೆಮಾರಿಂದ
ತಲೆಮಾರಿಗೆ ಹರಿದು ಬರುತ್ತ, ಮನೆಮಾತಾಗಿರುವ ಪ್ರಸ್ತುತ
ಕನ್ನಡದ ಗಂಗಾʼಲಹರಿಯ ಕರ್ತೃ ಯಾರು
ಅನುವಾದಕರು ಯಾರು ಎಂಬುದು ತಿಳಿಯದಿದ್ದರೂ, ಜನರ ಮನದಲ್ಲಿ ನೆಲೆನಿಂತಿರುವ ಈ ಕಾವ್ಯ ಈಕಾಲದ ಓದುಗರಿಗಾಗಿ ಮರುಮುದ್ರಣಗೊಂಡು ಸಂತಸ ತಂದಿದೆ.
ಕೃತಿಯ ವಿಶೇಷವೆಂದರೆ
ಅನುಪಮ ಪ್ರತಿಭಾವಂತನಾಗಿಯೂ, ಅತೀವ ದುರಂತವನ್ನಪ್ಪಿದ ಜಗನ್ನಾಥ
ಕವಿಯ ಸಂಕ್ಷಿಪ್ತ ಜೀವನ ವೃತ್ತಾಂತವನ್ನೂ ಹೊಂದಿದ
ಈ ಕೃತಿಗೆ ವರಕವಿ ಬೇಂದ್ರೆ ಅರ್ಥಪೂರ್ಣ ಮುನ್ನುಡಿ ಬರೆದಿದ್ದಾರೆ.
ಜ್ಞಾನಪೀಠದ ಕವಿ ವಿ.ಕೃ. ಗೋಕಾಕ್, ಮತ್ತು ವಿಮರ್ಶಕ- ಜಿ.ಎಸ್. ಆಮೂರ್, ರವರು ಬೆನ್ನುಡಿ
ಬರೆದು ಹಾರೈಸಿದ್ದಾರೆ.
ಕಾವ್ಯಪ್ರತಿಭೆಯಿಂದಲೇ ಎರಕ ಹೊಯ್ದಂತಿರುವ ಜಗನ್ನಾಥ ಪಂಡಿತನ ಸಂಸ್ಕೃತ ಭಾಷೆಯ
ಪೀಯೂಷ ಲಹರಿ, ಉತ್ತರಭಾರತದಲ್ಲಿ ಅತ್ಯಧಿಕ ಜನಪ್ರಿಯ. ಗಂಗೆಯ ಸುಂದರ ವರ್ಣನೆಯೊಂದಿಗೆ, ಮಾನವ ಬದುಕಿನ
ಕ್ಷಣಿಕತೆ, ಶಕ್ತಿ ದೌರ್ಬಲ್ಯ, ಸುಖ ದುಃಖ, ಅಹಂಕಾರ, ಅನೈತಿಕ ವರ್ತನೆಗಳನ್ನೆಲ್ಲ ಮಾರ್ಮಿಕವಾಗಿ
ವರ್ಣನೆಗೈಯ್ಯುತ್ತ, ಗಂಗೆಯೆದುರು ನಿಂತು
ಪಾಪನಿವೇದನೆ ಸಲ್ಲಿಸುವ, ಕ್ಷಮಿಸು ಎಂದು ಗೋಗರೆವ ಮಾರ್ಮಿಕ
ಕಾವ್ಯವದು.
ಪ್ರಸ್ತುತ ಕಾವ್ಯ ಅನುಪಮ
ಪ್ರತಿಭೆಯುಳ್ಳ, ಆದರೆ ಅಸಾಧ್ಯ ಅಹಂಕಾರದಿಂದ ಬೀಗುತ್ತ,
ಐಷಾರಾಮಿತನ, ವೈಭೋಗ, ಲೋಲುಪತೆಯಲ್ಲೇ ತನ್ನ
ಬದುಕನ್ನು ಕಳೆದ ಕವಿ, ವೃದ್ಧಾಪ್ಯದಲ್ಲಿ ಅನಾಥನಾದಾಗ,
ಇಡೀ ಸಮುದಾಯದಿಂದಲೇ ತಿರಸ್ಕೃತಗೊಂಡಾಗ, ಪಶ್ಚಾತ್ತಾಪದಿಂದ ನರಳುವಾಗ,
ಸೃಷ್ಟಿಸಿದ ಕಾವ್ಯವಿದು.
ಪೀಯೂಷ ಲಹರಿ ಕಾವ್ಯದ ಪ್ರಾಸಾನುಪ್ರಾಸ, ತಾತ್ವಿಕ ಶ್ರೀಮಂತಿಕೆ, ಭಕ್ತಿಯ ಔನ್ನತ್ಯ, ಛಂದೋಬದ್ಧ ಸಾಲುಗಳಿಂದ ಆಕರ್ಷಿತರಾದ
ಪಂಡರೀನಾಥ ಆಚಾರ್ಯರು ಜಗನ್ನಾಥ ಕವಿಯ
ಅಪ್ರತಿಮ ಪ್ರತಿಭೆಗೆ ಸರಿಜೋಡಿಯಾಗಿ,
ಕನ್ನಡದಲ್ಲಿ ಅದೇ ಕಾವ್ಯವನ್ನು
ಅನುಸೃಷ್ಟಿಗೈಯ್ಯುತ್ತಾರೆ. ( ೧೯೫೪) ಗಂಗಾನದಿಯ ವೈಶಾಲ್ಯ, ಲಾಲಿತ್ಯ, ದೈವಿಕಸೌಂದರ್ಯವನ್ನು ಕನ್ನಡದಲ್ಲಿ
ಸೃಷ್ಟಿಸುವ ಮೂಲಕ, ಕನ್ನಡ ಸಾಹಿತ್ಯಕ್ಕೊಂದು ಅದ್ಭುತ
ಕೊಡುಗೆಯನ್ನೇ ನೀಡಿದ ಆಚಾರ್ಯರೂ,
ಕಾವ್ಯಲೋಕದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ.
ಕಾವ್ಯ ಪ್ರತಿಪಾದಿಸುವ ತಾತ್ವಿಕತೆ.
ಆಧ್ಯಾತ್ಮಿಕತೆ, ನೈತಿಕತೆ ವೈಚಾರಿಕತೆ
ಪ್ರಾಮಾಣಿಕತೆ, ಮುಂತಾದ ಮಾನವೀಯ
ಮೌಲ್ಯಗಳಿಗೆ ಕವಿ ಜವಾಬ್ದಾರನೇ..? ಕಾವ್ಯದಲ್ಲಿರುವ ಮೌಲ್ಯಗಳನ್ನು
ಕವಿಯಿಂದ ಅಪೇಕ್ಷಿಸಬಹುದೇ...? ಕವಿಯ ಬದುಕಿಗೂ ಆತನ ಬರಹಕ್ಕೂ ಸಾಮ್ಯವಿರುತ್ತದೆಯೇ ..?
ಈ ಪ್ರಶ್ನೆ,
ಈ ಸವಾಲು ಇಂದಿನದ್ದಲ್ಲ.
ಕಾವ್ಯ ಮತ್ತು ಕವಿ ಸದಾ
ಎದುರಿಸುತ್ತಲೇ ಬಂದಿರುವ ಸಂಕಟವಿದು.
ಕಾವ್ಯ ಎಂದೂ ಧಾರ್ಮಿಕ ಗ್ರಂಥದಂತೇ ಉಪದೇಶಿಸುವುದಿಲ್ಲ. ಮನವೊಲಿಸುತ್ತದೆ. ಶಾಸ್ತ್ರಗ್ರಂಥದಂತೇ ಮಾಹಿತಿಯ ಗುಚ್ಛವಲ್ಲ. ಬದುಕು ಹೀಗಲ್ಲ. ಅದು ಹೀಗಿರಬೇಕಿತ್ತು ಎಂಬ ಕನಸನ್ನು ಹೊತ್ತ ಒಂದು ಮಾನವೀಯ
ಸ್ಪಂದನ ಅಷ್ಟೇ. ನಿಜವಾದ
ಕಾವ್ಯ ಮೊದಲು ಎಚ್ಚರಿಸುವುದು
ಕವಿಯನ್ನೇ. ಅವನಿಂದಲೇ ಸೃಷ್ಟಿಗೊಂಡರೂ ಅವನನ್ನೇ
ಕೆಣಕುವ ಗುಣವನ್ನು ಅದು ಹೊಂದಿರುತ್ತದೆ.
ಮನುಷ್ಯಲೋಕದಲ್ಲಿ ಬದುಕಿನ ನಿಜವನ್ನು ಶೋಧಿಸುವ, ನೈತಿಕ ಮೌಲ್ಯದೆಡೆಗೆ ಸಹೃದಯನನ್ನು
ಆಕರ್ಷಿಸುವ, ಒಂದು ಸುಂದರವಾದ
ಆಟವೆಂದರೆ, ಎಲ್ಲ ಲಲಿತಕಲೆಗಳು ಎನ್ನಬಹುದಾಗಿದೆ. ಪ್ರತಿಯೊಬ್ಬ
ಕಲಾವಿದನ ಆತ್ಯಂತಿಕ ಗುರಿಯೂ
ಒಂದುದಿನ ನಿಜವಾದ ಮನುಷ್ಯನಾಗುವುದು. ಕಾವ್ಯವಾಗಿಯೇ ರೂಪುಗೊಳ್ಳುವುದು. ತನ್ನನ್ನು
ತಾನು ಮನುಷ್ಯತ್ವದೆಡೆಗೆ ಸೆಳೆದು
ಕೊಳ್ಳುವುದು ಅಷ್ಟೇ.
ಕಾವ್ಯ ಪ್ರತಿಪಾದಿಸುವ
ತಾತ್ವಿಕ ಸಂದೇಶದ ಫಲಾನುಭವಿ
ಆಸ್ವಾದಕನೊಬ್ಬನೇ ಅಲ್ಲ. ಸ್ವಥಃ ಕವಿಯೂ ಕೂಡಾ. ಬರಹಕ್ಕೂ ಬದುಕಿಗೂ
ಸಂಬಂಧ ಸ್ಥಾಪಿಸಿಕೊಳ್ಳದ ಇಂದಿನ ಕವಿಗಳೆಲ್ಲರಿಗೂ ಜಗನ್ನಾಥ
ಕವಿಯ ದುರಂತವೊಂದು ಎಚ್ಚರದ
ಸಂದೇಶವಾದೀತು.
ಹದಿನೇಳನೇ
ಶತಮಾನದಲ್ಲಿ ಘಟಿಸಿದ ಕವಿಯೊಬ್ಬನ
ವಿಚಿತ್ರ ಇತಿಹಾಸವನ್ನು ಗಮನಿಸಿದಾಗ
ಈ ಮೇಲಿನ ವಿಚಾರ ನೆನಪಿಗೆ ಬಂದಿತು
ಎನ್ನಬಹುದು.
ಜಹಾಂಗೀರ, ಮತ್ತು ಶಹಜಹಾನ ಸುಲ್ತಾನರುಗಳ
ಆಸ್ಥಾನದಲ್ಲಿ,( ೧೭ ನೇ ಶತಮಾನ) ಆ ಕಾಲದ ದೇಶಪ್ರಸಿದ್ಧ
ಪ್ರತಿಭಾವಂತ ಕವಿರತ್ನ ಜಗನ್ನಾಥ
ಪಂಡಿತ, ಮೇರು ಆಸ್ಥಾನ
ಕವಿಯಾಗಿ, ಮುಘಲ್ ದೊರೆಗಳ
ಪ್ರೀತಿಪಾತ್ರನಾಗಿ ಮಿಂಚಿದ್ದ. ಅಂತ್ಯದಲ್ಲಿ
ಯಾರೂ ಕಾಣದ ದುರಂತವನ್ನಪ್ಪಿದ ವಿಷಾದಪೂರ್ಣ
ಇತಿಹಾಸವನ್ನೂ ಆತನೇ ಸೃಷ್ಟಿಸಿದ್ದು,
ಅಪರೂಪದ ಘಟನೆ. ಕವಿಯ ಬಗೆಗೆ
ಹುಟ್ಟಿಕೊಂಡ, ಅನೇಕ ದಂತಕತೆಗಳೇ ಅವನ ವರ್ಣಮಯ ಬದುಕನ್ನು ಎತ್ತಿ ತೋರಿಸುತ್ತದೆ.
ಜಗನ್ನಾಥ
ಕವಿಯ ಬದುಕನ್ನಾಧರಿಸಿ ೧೯೪೭ ರಲ್ಲೇ
ತಮಿಳಿನಲ್ಲಿ ಚಲನಚಿತ್ರ ನಿರ್ಮಾಣಗೊಂಡಿದೆ.
ಆಂಧ್ರ ಮೂಲದ ದಷ್ಟ ಪುಷ್ಟ
ಸುಂದರ ಬ್ರಾಹ್ಮಣ ಯುವಕ ತನ್ನ ಅಸದೃಷ ಪಾಂಡಿತ್ಯ, ಅನನ್ಯ ಪ್ರತಿಭೆ, ದೇಶದ ಯಾವುದೇ ಪಂಡಿತನನ್ನೂ
ತನ್ನ ತರ್ಕಶಕ್ತಿಯಿಂದ ಸೋಲಿಸುವ
ಕೆಚ್ಚಿನಿಂದ, ಯುವ ವಯಸ್ಸಿನಲ್ಲೇ
ಸಾಕಷ್ಟು ಪ್ರಸಿದ್ಧಿ ಪಡೆಯುತ್ತಾನೆ. ಆದರೆ ದಯನೀಯ ಬಡತನದಿಂದ
ಬಳಲುತ್ತಾನೆ. ದಕ್ಷಿಣದ ಅರಸರು ಯಾರೂ ಆತನಿಗೆ
ಆಶ್ರಯ ಕೊಡದ ಕಾರಣಕ್ಕೆ
ಜಗನ್ನಾಥ ಉತ್ತರದ ಕಡೆಗೆ ಧಾವಿಸುತ್ತಾನೆ.
ಕಾಶಿ ನಗರಕ್ಕೆ ಪ್ರವೇಶಿಸುತ್ತಾನೆ. ಮಾತೃಭಾಷೆ ತೆಲುಗಾದರೆ,
ಹಿಂದಿ, ಉರ್ದು, ಪರ್ಶಿಯನ್ ಭಾಷೆಯಲ್ಲೂ ಪರಿಣತಿ ಸಾಧಿಸುತ್ತಾನೆ. ತನ್ನ ಪ್ರತಿಭೆ
ಪಾಂಡಿತ್ಯದಿಂದ ಉತ್ತರದಲ್ಲೂ ಸಾಕಷ್ಟು
ಪ್ರಸಿದ್ಧಿ ಪಡೆಯುತ್ತಾನೆ. ಆಗ ಆತನಿಗೆ
ಕೇವಲ ಇಪ್ಪತ್ತು ಇಪ್ಪತ್ತೊಂದು ವಯಸ್ಸು. ಪಾಂಡಿತ್ಯ, ಮತ್ತು ಸೌಂದರ್ಯದ ಅಮಲು ಅದೆಷ್ಟಿತ್ತೆಂದರೆ, ಅಹಂಕಾರದ
ತುರೀಯತೆಗೆ ತಲುಪಿದ್ದ. ಕಾಶಿಯ
ಪಂಡಿತರುಗಳ ಕೆಂಗಣ್ಣಿಗೂ ಗುರಿಯಾಗಿದ್ದ. ಆ ಕಾಲದ ಮೇರು
ವಿದ್ವಾಂಸರ ಕೃತಿಗಳನ್ನೂ ತನ್ನ ಪ್ರಖರ
ತರ್ಕ, ವಿಮರ್ಶೆಯಿಂದ ನುಚ್ಚುನೂರಾಗಿಸಿದ್ದ.
ಉತ್ತರದ ರಾಜ್ಯಗಳನ್ನಾಳುತ್ತಿದ್ದ, ಜಹಾಂಗೀರ ದೊರೆಯ
ವರೆಗೂ ಜಗನ್ನಾಥನ ಕೀರ್ತಿ
ತಲುಪುತ್ತದೆ. ದೊರೆ ಈ ಯುವ ಪಂಡಿತನನ್ನು
ಆಸ್ಥಾನಕ್ಕೆ ಆಹ್ವಾನಿಸಿ ತನ್ನಲ್ಲಿಯೇ
ಇರಲು ಕೇಳಿಕೊಳ್ಳುತ್ತಾನೆ.. ದೆಹಲಿಯ ದೊರೆಯ ಆಸ್ಥಾನಪಂಡಿತನಾಗಿ ಸ್ವೀಕೃತಗೊಳ್ಳುತ್ತಾನೆ. ಯುವ ರಾಜ ಶಹಜಹಾನನ
ಸ್ನೇಹ ಸಂಪಾದಿಸುತ್ತಾನೆ. ಶಹಜಹಾನನ
ಆಳ್ವಿಕೆ ಪ್ರಾರಂಭ ಗೊಂಡಾಗ, ರಾಜಮನೆತನದ
ಪರಮ ಆಪ್ತನಾಗುತ್ತಾನೆ. ಶಹಜಹಾನನ
ಮಗ ಧಾರಾ ಶಿಕೋ, ಸಂಸ್ಕೃತ ಪರ್ಶಿಯನ್
ಪಂಡಿತನಾಗಿದ್ದ. ಕವಿ ಜಗನ್ನಾಥ
ಪಂಡಿತನ ಪ್ರಾಣಸ್ನೇಹಿತನಾದ.
ಇದೇ ಧಾರಾ ಶಿಕೋ
ವೈದಿಕ ಉಪನಿಷತ್ತುಗಳನ್ನು ಪ್ರಥಮಬಾರಿಗೆ
ವಿದೇಶೀ ಭಾಷೆ ಪರ್ಶಿಯನ್ ಗೆ
ಅನುವಾದಿಸಿದವ. ಕುರಾನ್ ಮತ್ತು ವೈದಿಕ ಸಾಹಿತ್ಯದಲ್ಲಿ
ಅಧ್ಯಯನಗೈದು, ಹಿಂದು ಮುಸ್ಲಿಮ್
ಎರಡೂ ಧರ್ಮಕ್ಕೂ ಸಲ್ಲುವವನಾಗಿದ್ದ.
ಜಗನ್ನಾಥ ಮುಘಲ್
ದೊರೆಗಳ ಆಸ್ಥಾನ ಕವಿಯಾದ ಕಾರಣಕ್ಕೆ ,
ಉತ್ತರಭಾರತದ ಕರ್ಮಠ ಹಿಂದುಗಳಲ್ಲಿ ಅಸಹನೆ ತನ್ನಂತಾನೇ ಉದ್ಭವವಾಯಿತು.
ಒಂದು ದಿನ ಶಹಜಹಾನ ದೊರೆಯೊಂದಿಗೆ
ಜಗನ್ನಾಥ ಚದುರಂಗವನ್ನಾಡುತ್ತಿದ್ದ. ಶಹಜಹಾನನಿಗೆ
ದಾಹವುಂಟಾಗಿ ತನ್ನ ಸಹಾಯಕರಿಗೆ
ನೀರು ತರಲು ಆದೇಶಿಸುತ್ತಾನೆ. ನೀರು ತಂದವಳೊಬ್ಬಳು ಅಪ್ರತಿಮ
ಸುಂದರಿ. ಹೆಸರು ʻʻ ಲವಂಗೀʼ.ʼ ಅಮೃತಶಿಲೆಯಲ್ಲಿಯೇ ನಿರ್ಮಾಣಗೊಂಡಂತಿದ್ದ, ಅವಳ ರೂಪಕಂಡ ಜಗನ್ನಾಥ
ಕವಿ, ಬೆರಗಾದ. ಅವಳು ಚಿನ್ನದ ಪಾತ್ರೆಯಲ್ಲಿ
ಇಬ್ಬರಿಗೂ ನೀರು ನೀಡಿ ಮರಳಿ ಹೋಗುವವರೆಗೂ
ಬಿಟ್ಟಕಣ್ಣು ಮುಚ್ಚದೇ ಅವಳನ್ನೇ
ನೋಡುತ್ತ ತನ್ಮಯನಾಗಿದ್ದ. ಅವಳು ಜಗನ್ನಾಥನ
ರೂಪ ಮತ್ತು ಪ್ರತಿಭೆಯನ್ನು ಪ್ರತಿದಿನ ಪರದೆಯ ಹಿಂದಿನಿಂದಲೇ ಗಮನಿಸುತ್ತ
ಅವನಿಂದ ಆಕರ್ಷಿತಳಾಗಿದ್ದಳು. ಕವಿಯನ್ನು ಶಹಜಾನ್
ಗಮನಿಸುತ್ತಾನೆ.
ಕವಿಗಳೇ ಹಾಗೇಕೆ
ಭ್ರಮಿಸಿ ನೋಡುತ್ತಿದ್ದೀರಿ. ಅವಳನ್ನ ನಿನ್ನ ಕಾವ್ಯದಲ್ಲಿ ವರ್ಣಿಸುತ್ತೀಯಾ..? ಎಂದು ಕೇಳುತ್ತಾನೆ ಶಹಜಹಾನ. ತಕ್ಷಣದಲ್ಲಿ ಅವಳನ್ನು ವರ್ಣಿಸುವ ಸುಂದರ ಪದ್ಯವೊಂದನ್ನು ರಚಿಸುತ್ತಾನೆ
ಕವಿ. ರಾಜ ಖುಷಿಯಲ್ಲಿ
ನಿನಗೇನು ಬಹುಮಾನ ಕೊಡಲಿ ಎಂದು ಕೇಳಿದಾಗ, ಜಗನ್ನಾಥ,
ಲವಂಗೀ ಕುರಂಗೀ
ದೃಗಂಗೀ ಕರೋತು ( ಈ ಲವಂಗಿ ನನ್ನನ್ನು ವರಿಸುವಂತೇ ಮಾಡು )
ಎಂದು ಕೇಳುತ್ತಾನೆ.
ʻʻ ಏ ಭಟ್ಟಾ ಅವಳು ಯವನಿ. ನೀನು ಸನಾತನಿ. ಅವಳನ್ನು
ನೀನು ಮದುವೆಯಾದರೆ ಧರ್ಮಭೃಷ್ಠನಾಗುತ್ತೀ. ಇಲ್ಲಿ ಸುಖವಿಲ್ಲ. ಅಲ್ಲಿ ಸ್ವರ್ಗಪ್ರಾಪ್ತಿಯಿಲ್ಲ. ʼʼ
ಎಂದು ರಾಜನೆಂದಾಗ,
ʻʻಯವನೀ
ರಮಣೀ ವಿಪದಃ ಶಮನೀ / ಕಮನೀಯತಮಾ ನವನೀತ
ಸಮಾ /
ಉಹಿ ಊಹಿ ವಚೋಮೃತ
ಪೂರ್ಣಮುಖೀ / ಸ
ಸುಖೀ ಜಗತೀ
ಹ ಯದಂಕಗತಾ /ʼʼ
ಮತ್ತೆ ಕವಿತೆಯಿಂದಲೇ
ಉತ್ತರಿಸುತ್ತಾನೆ.
ಶಹಜಹಾನ ಕವಿಯ ಪ್ರತಿಭೆಗೆ
ಬೆರಗಾಗಿ, ಖುಷಿಯಿಂದಲೇ ತನ್ನ ಸೋದರ ಸಂಬಂಧಿ ಲವಂಗಿಯನ್ನು
ಜಗನ್ನಾಥನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ. ಹಿಂದುಗಳಲ್ಲಿ
ವಿಪ್ಲವವುಂಟಾಗುತ್ತದೆ. ವಿಧರ್ಮಿ ಯುವತಿಯನ್ನು
ವರಿಸಿದ ಜಗನ್ನಾಥನನ್ನು ಬಹಿಷ್ಕರಿಸುತ್ತಾರೆ. ಅವನ ಸಂಪರ್ಕದಿಂದಲೇ ದೂರವಾಗುತ್ತಾರೆ.
ಜಗನ್ನಾಥ ಅರಮನೆಯ
ಆಪ್ತನಾಗುತ್ತಾನೆ. ರಾಜ ಮನೆತನದ
ಪ್ರೀತಿಯ ಅಳಿಯನಾಗಿ, ಆಸ್ಥಾನ ಪಂಡಿತನಾಗಿ
ಐಷಾರಾಮಿ ಬದುಕನ್ನು ಅಂಗೀಕರಿಸಿ
ಲೋಲುಪನಾಗುತ್ತಾನೆ. ಆದರೆ ಆತನ ಪತ್ನಿ ಮಾತ್ರ ಅಪ್ಪಟ ಹಿಂದುವಾಗಿ,
ಆದರ್ಶ ಭಾರತೀಯ ನಾರಿಯಾಗಿ ರೂಪುಗೊಳ್ಳುತ್ತಾಳೆ. ಜಗನ್ನಾಥನ
ಲೋಲುಪತೆಗೂ ಸಹ ಕಡಿವಾಣ
ಹಾಕುತ್ತಾಳೆ. ತಾನು ಸಂಸ್ಕೃತ
ಅಭ್ಯಾಸ ಮಾಡುತ್ತಾಳೆ. ಹಿಂದೂ ದೇವ
ದೇವತೆಗಳ ಭಕ್ತಳಾಗುತ್ತಾಳೆ.
ಹೀಗೆಯೇ ದಶಕ ದಶಕಗಳು ಕಳೆಯುತ್ತದೆ.
ಶಹಜಹಾನ ವೃದ್ಧನಾದಂತೇ ಆತನ ಮಗ ಔರಂಗ ಜೇಬ
ವಿದ್ರೋಹದಿಂದ ಶಹಜಹಾನನ್ನು ಬಂಧಿಸಿ,
ತಾನೇ ಮಹಾರಾಜನೆಂದು ಘೋಷಿಸುತ್ತಾನೆ.
ಇಸ್ಲಾಮ್ ಮತಾಂಧ ಔರಂಗಜೇಬ,
ಸಂಸ್ಕೃತ ಪರ್ಶಿಯನ್ ಪಂಡಿತನಾದ
ತನ್ನ ಸಹೋದರನನ್ನು ಮೋಸದಿಂದ
ಕೊಲ್ಲಿಸುತ್ತಾನೆ. ಆತನ ಆಪ್ತ ಜಗನ್ನಾಥ
ಪಂಡಿತನನ್ನು ಅರಮನೆಯಿಂದ ಉಚ್ಛಾಟಿಸುತ್ತಾನೆ. ಅಕ್ಷರಷಃ
ಅನಾಥನಾದ ಜಗನ್ನಾಥ ಪಂಡಿತ ತನ್ನ
ಹೆಂಡತಿಯೊಂದಿಗೆ ಹೊರಬಿದ್ದು ದೆಹಲಿಯಿಂದ
ಕಾಶಿನಗರಕ್ಕೆ ಆಗಮಿಸುತ್ತಾನೆ.
ಆಗಲೇ ಕಾಶೀ ವಿಶ್ವನಾಥ ಮಂದಿರದ
ಮೇಲೆ ಔರಂಗಜೇಬನ ಕಣ್ಣು ಬಿದ್ದಿತ್ತು. ಮಂದಿರದ
ಪಕ್ಕ ಮಸೀದಿ ನಿರ್ಮಾಣಕ್ಕೆ
ಆಜ್ಞೆಮಾಡಿದ್ದ. ದೇವಾಲಯವನ್ನು ನಾಶಮಾಡುವ
ಹುನ್ನಾರದಲ್ಲಿದ್ದ. ಹಿಂದೂ ಗಳಲ್ಲಿ ಭಯಂಕರ ಭಯ ವ್ಯಾಪಿಸಿತ್ತು. ಅದೇ ಸಂದರ್ಭದಲ್ಲೆ ಅರವತ್ತು ಮೀರಿದ
ಜಗನ್ನಾಥ ಕವಿ ದಂಪತಿಗಳು
ಕಾಶಿಗೆ ಪ್ರವೇಶಿಸುತ್ತಾರೆ.
ಕಾಶಿಯ ಹಿಂದುಗಳೆಲ್ಲ
ಇಸ್ಲಾಮ್ ಆಸ್ಥಾನ ಕವಿಯನ್ನು ಧಿಃಕರಿಸುತ್ತಾರೆ. ಯಾರೂ ಆತನನ್ನು ಆದರಿಸುವುದಿಲ್ಲ. ಆತನಿಗೆ
ಆಹಾರವನ್ನೂ ನೀಡದೇ ತುಚ್ಛೀಕರಿಸುತ್ತಾರೆ. ಜಗನ್ನಾಥ
ದಂಪತಿಗಳು ಉಪವಾಸದಿಂದ ಬಳಲುತ್ತ,
ಗಂಗಾನದಿಯಂಚಿಗೆ ಬಂದರೆ,
ನಿನ್ನಂಥ ಧರ್ಮದ್ರೋಹಿ ಗಂಗೆಯನ್ನು
ಸ್ಪರ್ಶಿಸಿದರೆ ನದಿಯೇ ಅಪವಿತ್ರಗೊಳ್ಳುತ್ತದೆ, ಎಂದು ನೀರು ಕುಡಿಯಲೂ ತಡೆಯೊಡ್ಡುತ್ತಾರೆ.
ಜಗನ್ನಾಥ
ದಂಪತಿಗಳು ಬಸವಳಿದು ಗಂಗೆಯ ದಡದಲ್ಲಿ ಕುಳಿತಿರುತ್ತಾರೆ. ಆಗ ಒಮ್ಮೆಲೇ ಸ್ಫೂರ್ತಿಯ
ಆವೇಶದಲ್ಲಿ ಕವಿಯಿಂದ ಸಂಸ್ಕೃತ
ಶ್ಲೋಕಗಳು ಹೊರಹೊಮ್ಮತೊಡಗುತ್ತದೆ. ಸಾಲು ಸಾಲಾಗಿ,
ಅಲೆ ಅಲೆಯಾಗಿ, ಗಂಗಾನದಿಯ ಸುಂದರ ವರ್ಣನೆಗಳು, ಛಂದೋಬದ್ಧವಾಗಿ
ಸೃಷ್ಟಿಯಾಗತೊಡಗುತ್ತದೆ.
ಕವಿಯ ಒಂದು ಕನ್ನಡ ಅನುವಾದಿತ
ಸುಂದರ ಚರಣವನ್ನು ಗಮನಿಸಬಹುದು.
ಸಿರಿಯ ಸೆರೆಯ
ಮದ ʻದುಂಧʼ ಅಂಧ ನೃಪರೆದುರು ಓಡಿ ಓಡಿ |
ಮಣಿದು ನಿತ್ರಾಣ
ಪ್ರಾಣ, ನಾ ಬಿದ್ದೆ
ಬುದ್ಧಿಗೇಡಿ ||
ನಿನ್ನ ಚಣವ ಬಿಟ್ಟಲೆದು ಬನ್ನ ಬಟ್ಟದ್ದು ಎನ್ನ ತಪ್ಪು |
ಕಂದನೆಂದು ದಯೆಸಿಂಧು ಇಂದು
ನೀನಪ್ಪಿಕೊಳ್ಳೆ ಒಪ್ಪು ||
ಕವಿಯ ಪೀಯೂಷ
ಲಹರಿ, ಅಥವಾ ಗಂಗಾಲಹರಿ
೫೨ ಚರಣಗಳಲ್ಲಿ, ೨೦೮ ಸಾಲುಗಳಲ್ಲಿ ರಚನೆಯಾಗಿ
ಮುಗಿಯುತ್ತಿದ್ದಂತೇ ಗಂಗಾ ನದಿಯಲ್ಲಿ ಮಹಾಪೂರವುಂಟಾಗಿ, ಜಗನ್ನಾಥ
ದಂಪತಿಗಳು ಕುಳಿತಲ್ಲಿಗೂ ಬಂದು ತನ್ನೊಳಗೆ ಸೆಳೆದೊಯ್ದುಬಿಡುತ್ತದೆ. ಸಾಮಾಜಿಕ
ಬಹಿಷ್ಕಾರದಿಂದ ಖಿನ್ನನಾಗಿ ಗಂಗೆಯಲ್ಲಿ ಆತ್ಮತ್ಯಾಗ ಗೈದನೆಂದೂ ದಂತಕತೆಯಿದೆ.
ಆದರೆ ಕವಿಯ ಗಂಗಾಲಹರಿ ತನ್ನ ತಾತ್ವಿಕತೆ ಆಧ್ಯಾತ್ಮಿಕತೆ,
ಪಾಪನಿವೇದನೆ, ಮಾನವ ಬದುಕಿನ ಕ್ಷಣಿಕತೆ,
ಮುಂತಾದ ವಿವರವನ್ನೊಳಗೊಂಡ ಖಂಡಕಾವ್ಯ,
ಭಕ್ತರನ್ನು ರೋಮಾಂಚನ ಗೊಳಿಸುತ್ತದೆ. ಬಹುಶೀಘ್ರದಲ್ಲಿ
ಭಕ್ತರ ಮನಸ್ಸಿನಮೇಲೆ ಆಳವಾದ ಪ್ರಭಾವ ಬೀರುತ್ತದೆ.
ಮನೆಮಾತಾಗುತ್ತದೆ. ಉತ್ತರ ದಕ್ಷಿಣ ಭಾರತದ
ಮನೆ ಮನೆಗೆ ತಲುಪುತ್ತದೆ.
ದಿನನಿತ್ಯದ ಆರಾಧನೆಗಳಲ್ಲಿ ಸಕ್ರಿಯವಾಗಿ
ಪ್ರವೇಶಿಸುತ್ತದೆ.
ಜಗನ್ನಾಥ ಪಂಡಿತನ
ʻʻ ರಸ ಗಂಗಾಧರ ʼʼ ಎಂಬ ಲಾಕ್ಷಣಿಕ
ಗ್ರಂಥ ಈಗಲೂ ಮಹತ್ವದ
ಆಕರವಾಗಿದೆ.
ಪ್ರಸ್ತುತ ಗಂಗಾಲಹರಿ ಕೃತಿಗೆ ಸಂತಸದಿಂದ
ಮುನ್ನುಡಿ ಬರೆದ ವರಕವಿ ಬೇಂದ್ರೆ,
ʻʻತನ್ನ ನಾದ ಮಾಧುರ್ಯದಿಂದ
ಕಾವ್ಯದತ್ತ ಮನಸೆಳೆಯುವ ಪ್ರತಿಭಾವಂತ ಕವಿ ಜಗನ್ನಾಥ
ಪಂಡಿತ, ಅಮೃತ ಲಹರಿಯಲ್ಲಿ ಯಮುನೆಯನ್ನು, ಕರುಣಾಲಹರಿಯಲ್ಲಿ ವಿಷ್ಣುವನ್ನೂ, ಸುಧಾಲಹರಿಯಲ್ಲಿ
ಸೂರ್ಯನನ್ನೂ, ಲಕ್ಷ್ಮೀ ಲಹರಿಯಲ್ಲಿ ಲಕ್ಷ್ಮೀಯನ್ನು
ಸ್ತುತಿಸಿದ ಕವಿಯೇ ಪೀಯೂಷ ಲಹರಿಯಲ್ಲಿ ಗಂಗೆಯನ್ನು ವರ್ಣಿಸಿದ್ದಾನೆ. ಶ್ರೀ ಪಂಡರೀನಾಥ ಆಚಾರ್ಯರು ಸಮರ್ಥವಾಗಿ
ಕನ್ನಡಕ್ಕೆ ತಂದು ವಾತ್ಸಲ್ಯ ಭಾವಗೀತೆಗಳಿಗೆ ಪುಷ್ಠಿಯನ್ನು ತಂದಿದ್ದಾರೆ. ಇವರಿಂದ ಇನ್ನೂ ಸಂಸ್ಕೃತ
ಕನ್ನಡ ಎರಡಕ್ಕೂ ಸೇವೆ ಸಲ್ಲಲಿ ಎಂದು ಹಾರೈಸುತ್ತೇನೆ.ʼʼಎಂದು ಮನದುಂಬಿ
ಹಾರೈಸಿದ್ದಾರೆ.
-ಪಂಡಿತರಾಜ
ಜಗನ್ನಾಥ ಕೃತ ಗಂಗಾ ಲಹರಿ.
ದ್ವಿತೀಯ ಮುದ್ರಣ.
ಅನುವಾದ ಪಂ. ಪಂಡರೀನಾಥಾಚಾರ್ಯ
ಗಲಗಲಿ.
ಪ್ರ—ಗಲಗಲಿ ಪ್ರಕಾಶನ
ಹುಬ್ಬಳ್ಳಿ. ಬೆಲೆ- ರೂ
೧೦೦-೦೦.
ಸುಬ್ರಾಯ ಮತ್ತೀಹಳ್ಳಿ.
ಸುಮ ಸಂಪದ ಅಂಕಣಕ್ಕೆ.
೯-೯-೨೦೨೪.