Tuesday 26 December 2023

ಮಾತು – ಮಾತೆ ʼʼ

 

ಕರುನಾಡ  ನುಡಿಗುಡಿಯ ಮಡಿಲಲ್ಲಿ ಮಿಡಿಯುತಿಹ

ನುಡಿಕಿರಣ  ನಾಡಿಗಳೇ  ಇಲ್ಲಿ ಕೇಳಿ

ಸಮರಸದ ಸಿರಿಪಥದಿ  ಸುಮನಸದ ಸುಮ ಸೂಸಿ

ಸೌಜನ್ಯಸಾಗರದಿ  ತೇಲಿ ತೇಲಿ.

   ಭಾರತಾಂಬೆಯ  ಹಿರಿಕುವರಿ ಕನ್ನಡತಿ

   ದೇಶಭಾಷೆಗೆ  ಇವಳೆ ಒಡತಿ.

   ಕನ್ನಡದ  ಕಣ್ಣಿನಲಿ ಭಾರತಿಯ ಪ್ರತಿಬಿಂಬ

   ತಾಯ್ತನದ ಕರುಣೆಯಾ  ದಿವ್ಯಾಕೃತಿ.

ಮಾತು ಮಾತೆ ಎರಡೂ ಒಂದೇ

ನುಡಿಯೆ  ನಾಡಿನ  ಅಸ್ಮಿತೆ.

ಮಾತು ಜೀವ, ಜೀವಮಾತೆ

ಮನುಜ ಕುಲದಾ  ಸಂಹಿತೆ.

    ಮಣ್ಣು  ಕನ್ನಡ, ಮಾನ ಕನ್ನಡ

    ನಮ್ಮ ಮಾತೇ  ಕನ್ನಡ,

   ನಮ್ಮ ಮನದ  ನಮ್ಮ ತನುವಿನ

   ಯಶದ  ಮಾನವೇ  ಕನ್ನಡ.

ತಾಯ್ನುಡಿಯ ಏಣಿಯಲಿ, ಏರು ತಾರಾಪಥಕೆ

ಎಲ್ಲ ತಾರೆಗಳು  ಇಲ್ಲಿ ಬರಲಿ.

ಸಹೃದಯದ  ಸಡಗರದ, ಸ್ನೇಹ ಜಲ ಚಿಮ್ಮಲಿ

ಸ್ವಾಭಿಮಾನದ ಜ್ಯೋತಿ  ಕಂಗೊಳಿಸಲಿ.

   ಸಾವಿರದ  ನುಡಿಯಲ್ಲಿ  ಭಾವಬರ ಬರದಿರಲಿ

   ನಾವಿರುವ ನೆಲದಲ್ಲಿ  ಸತ್ವ ನೆಲೆಯೂರಲಿ.

   ನೂರು ನುಡಿ ಗಡಣದಲಿ ಮಿಂಚಲಿ ಚೆನ್ನುಲಿ

   ಮೇರು ಪರ್ವತವಾಗಿ ಮೆರೆದಾಡಲಿ.

(೭-೧-೨೦೧೮  ರಂದು  ಶಿರಸಿಯಲ್ಲಿ  ಜರುಗಿದ ರಾಜ್ಯ ಸುಗಮ ಸಂಗೀತ ಸಮ್ಮೇಳನದಲ್ಲಿ   ಸು, ಸಂ. ಪ. ಅಧ್ಯಕ್ಷ  ಕಿಕ್ಕೇರಿ  ಕೃಷ್ಣಮೂರ್ತಿಯವರಿಂದ  ಪ್ರಸ್ತುತವಾಗಿದ್ದು. )

 

 

 

No comments:

Post a Comment