Friday 1 December 2023

ʻʻಪರಿಸ್ಥಿತಿ ಮತ್ತು ಪರ್ಯಾಯ ಸೃಷ್ಟಿ.ʼʼ

 

             ಹಳಿಯ ಬೇಡಿ  ಹಳ್ಳಿಯ  ಹಿಡಿಯ ಬೇಡಿ  ಕೊಳ್ಳಿ

                    ಹಿರಿಯ ಬೇಡಿ ಬಳ್ಳಿಯ   ಕೊಲ್ಲಬೇಡಿ  ಹುಲ್ಲೆಯ |

                     ಭೂಮಿ ಬಾನು  ಬಂಧದಲ್ಲಿ   ಅರಳಿ ಹೊಳೆವ  ಚೇತನ

                     ನೆಳಲು ಬೆಳಕು  ಚೆಲ್ಲಿದ  ರಂಗವಲ್ಲಿ    ಜೀವನ ||

           

       ʻʻ  ಸಹಕಾರ ʼʼ ಎಂಬ ಸಂಜೀವಿನಿಯ  ಪ್ರವಾಹ ನಮ್ಮ ಜಿಲ್ಲೆಯಲ್ಲಿ ಉದ್ಭವಿಸದೇ  ಇದ್ದಿದ್ದಲ್ಲಿ  ಇಲ್ಲಿಯ ರೈತಾಪಿ ಬದುಕು ಹೇಗಿರುತ್ತಿತ್ತು  ಎಂಬ ಪ್ರಶ್ನೆಯನ್ನು ನಮ್ಮೊಳಗೇ ಪ್ರಶ್ನಿಸಿಕೊಂಡಲ್ಲಿ  ಬಹುಷಃ ನಿರುತ್ತರರಾದೇವು. ಏಕೆಂದರೆ  ಸಹಕಾರ ಎಂಬ ಆರ್ಥಿಕ  ಜೀವದಾಯಿನಿ  ನಮ್ಮ ಉಸಿರಿನಲ್ಲಿಯೇ  ಬೆರೆತುಹೋಗಿದೆ.

       ಇಷ್ಟೆಲ್ಲ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಯುತ್ತಿತ್ತೇ..? ಶೋಷಣಾ ರಹಿತ ಮಾರುಕಟ್ಟೆ ಸೃಷ್ಟಿಯಾಗುತ್ತಿತ್ತೇ..? ನಮ್ಮ ಮಕ್ಕಳು ವ್ಯವಸ್ಥಿತ ಶಿಕ್ಷಣ ಪಡೆಯುತ್ತಿದ್ದರೇ..? ಸಾವಿರಾರು ಮನೆಗಳು  ಹತ್ತಾರು ಮಠಗಳು ನೂರಾರು ದೇವಾಲಯಗಳು, ಎದೆಸೆಟೆಸಿ ನಿಲ್ಲುತ್ತಿದ್ದವೇ..? ಮನೆ ಮನೆಯಲ್ಲಿ ವೈವಿಧ್ಯಮಯ ವಾಹನಗಳು  ಯಂತ್ರಸಾಮಗ್ರಿಗಳು ಹಾಜರಾಗುತ್ತಿದ್ದವೇ..?ಮದುವೆ  ಮುಂಜಿ  ವೈಕುಂಠ ಸಮಾರಾಧನೆಗಳು, ನೆಂಟರೊಂದಿಗೆ, ಅಸಂಖ್ಯ ಇಷ್ಟರೆಲ್ಲರನ್ನು ಆಹ್ವಾನಿಸುವ ತಾಕತ್ತನ್ನು ಪಡೆಯುತ್ತಿತ್ತೇ..? ನಮ್ಮ ಹಳ್ಳಿಗಳು  ತೋಟ ಪಟ್ಟಿಗಳು ಈಗಿನಂತೇ  ಹಚ್ಚ ಹಸಿರಿನಲ್ಲಿ ನಳನಳಿಸುತ್ತಿತ್ತೇ..? ಬೇಕಾದಾಗ  ಬೇಕಾದಷ್ಟು  ಆರ್ಥಿಕ ಸಹಾಯ  ಒದಗುತ್ತಿತ್ತೇ,,? ಇಷ್ಟರಲ್ಲಿಯೇ ಹಳ್ಳಿಗಳು ನಿರ್ಜನವಾಗದೇ ಉಳಿಯುತ್ತಿತ್ತೇ..?

    ಎಂಬೆಲ್ಲ  ಹತ್ತು ಹಲವು ಪ್ರಶ್ನೆಗಳು ಮನಸ್ಸನ್ನು ಆವರಿಸಿ, ಹೈರಾಣು ಗೊಳಿಸಿ ಬಿಡುತ್ತವೆ. ಕೇವಲ ಕಳೆದ ಒಂದು ಶತಮಾನದ  ಅಡಿಕೆ ಕೃಷಿಕರ ಬದುಕನ್ನು ಅವಲೋಕಿಸಿದರೆ ಸಾಕು. ಅದೆಷ್ಟು ರೋಚಕ ಇತಿಹಾಸ ಅನಾವರಣಗೊಳ್ಳುತ್ತದೆ ಎಂದರೆ  ಅಡಿಕೆ ವ್ಯವಸಾಯ ಮತ್ತು  ಸಹಕಾರೀ ಚಳುವಳಿ, ಎಷ್ಟೆಲ್ಲ ಪವಾಡಗಳನ್ನು ಸೃಷ್ಟಿಸಿದೆ.. ಅದೆಷ್ಟು ಸುಂದರ ಬದುಕನ್ನು ಕಟ್ಟಿಕೊಟ್ಟಿದೆ ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ.

        ಸಾಂಪ್ರದಾಯಿಕ  ಅಡಿಕೆ ತೋಟಗಳು, ದಟ್ಟ ಅಡವಿ, ಆಳಕಣಿವೆಗಳ  ನಡುವೆ ಸಹಜ ಜಲದ ಸನ್ನಿಧಿಯಲ್ಲಿ  ಸಾಹಸದ ಬೆವರ ಸಿಂಚನದಲ್ಲಿ  ರೂಪುಗೊಂಡಿದ್ದೇ  ಒಂದು ರೋಚಕ ಇತಿಹಾಸ.  ಅಡಿಕೆಕೃಷಿ ಎಂಬ ವಿಶಿಷ್ಟ ಜೀವನವಿಧಾನ  ಇಡೀ ರಾಜ್ಯಕ್ಕೊಂದು ವಿಶಿಷ್ಟ  ಸಂಸ್ಕೃತಿಯನ್ನೇ ಕಟ್ಟಿಕೊಟ್ಟಿದೆ.  ಇಲ್ಲಿಯ ತೋಟಗಾರಿಕೆ ವಿವಿಧ ಸಮುದಾಯಗಳಲ್ಲಿ ಹಂಚಿಹೋದರೂ, ಸಾಹಸ ಶ್ರಮ ಕೃಷಿಚಟುವಟಿಕೆ, ಆದರಾತಿಥ್ಯ, ಮತ್ತು ಕಲೆಯ  ನೆಲೆಯಲ್ಲಿ ಒಂದಾಗಿ ತೋರುತ್ತದೆ. ಕಷ್ಟವಿರಲಿ, ಕೊರತೆಯಿರಲಿ, ಅಂಜಿಕೆ ಕೀಳರಿಮೆ ಯಿಲ್ಲದ  ಸ್ವಚ್ಛ ಸ್ವಾಭಿಮಾನ  ಮತ್ತು ಮಾನವ ಸಂಬಂಧಗಳ ಸುಂದರವಾದ ನಂದನವನ್ನೇ ಸೃಷ್ಟಿಸಿದ ಸಾಧನೆ ಈ ಜಿಲ್ಲೆಯ ಮಣ್ಣಿನದು.

        ಆ ಕಾಲದಲ್ಲಿ ಎಲ್ಲರಿಗೂ ಅಕ್ಷರ ದೊರಕಲಿಲ್ಲ, ಆದರೆ ಅರಿವಿನ ಶಕ್ತಿಯಿತ್ತು. ರಸ್ತೆ ವಾಹನಸಂಪರ್ಕಗಳು ಶೂನ್ಯವಾಗಿದ್ದರೂ ಕಾಲು ಬಲಿಷ್ಠವಾಗಿತ್ತು. ಆತ್ಮವಿಶ್ವಾಸ, ಕೆಚ್ಚು ಛಲ, ತುಂಬಿತುಳುಕುತ್ತಿತ್ತು. ಪ್ರಾಕೃತಿಕ ಸವಾಲುಗಳಿಗೆ ಪ್ರತಿಯಾಗಿ  ಋಷಿಸದೃಷ ಬದುಕಿನಲ್ಲಿ  ಯಕ್ಷಗಾನದಂಥ  ಅದ್ಭುತ ಕಲೆಯನ್ನು ಅಸದೃಷವಾಗಿ ಉಳಿಸಿ ಬೆಳೆಸಿದ ಕೀರ್ತಿ  ನಮ್ಮ ಹಿರಿಯರದ್ದು. ಆಂಗ್ಲರ ಮನವೊಲಿಸಿ, ಅಡಿಕೆ  ಕಾಳುಮೆಣಸು  ಏಲಕ್ಕಿ  ಬೆಳೆಗಾಗಿಯೇ  ಬೆಟ್ಟಸೌಲಭ್ಯವನ್ನು  ದೊರಕಿಸಿಕೊಂಡು,  ಯಾಲಕ್ಕಿ ಮತ್ತು ಮೆಣಸು ಕೃಷಿಯಲ್ಲಿ  ದಾಖಲೆಯನ್ನೇ ಸೃಷ್ಟಿಸಿ, ಬ್ರಿಟಿಶ್‌ ರಿಂದ  ಶಹಭಾಸ ಪಡೆದ  ಸಾಧನೆ  ನಮ್ಮದು.

          ನಡೆದಾಡಲು ದಾರಿಯಿಲ್ಲ, ಬೊಬ್ಬಿರಿವ ಮಳೆಗಾಲ, ಆರೋಗ್ಯ ಚಿಕಿತ್ಸೆ ಆರೈಕೆಯ ಸೌಲಭ್ಯವಿಲ್ಲ. ಮಲೇರಿಯಾದಂಥ ಹಲವು ರೋಗರುಜಿನಗಳ ಆಕ್ರಮಣದಲ್ಲೂ, ನಿಜದ ಅರ್ಥದಲ್ಲಿ ಗುಡ್ಡಗಾಡು ಜನಾಂಗವೇ ಆಗಿದ್ದ  ಅಡಿಕೆ ಸಮುದಾಯದಲ್ಲಿ, ಅದೆಷ್ಟು ಬಸುರಿ ಬಾಣಂತಿಯರು ಜೀವ ತೆತ್ತಿಲ್ಲ...? ಅದೆಷ್ಟು ಗಂಡಸರು ಮೂವತ್ತಕ್ಕೇ ಮೂರನೆಯ ಮದುವೆ ಕಂಡಿಲ್ಲ...?ಆದರೂ  ದೇಶದ ದಾಸ್ಯಕ್ಕೆ ಸ್ಪಂದಿಸಿದರು, ಸ್ವಾತಂತ್ರ್ಯಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಮಿಂಚಿದರು. ಗಂಡಸರು ಹೆಂಗಸರು ಎಂಬ ಭೇದವಿಲ್ಲದೇ  ಜೈಲು ಸೇರಿದರು,,,

      ಇಪ್ಪತ್ತನೆಯ ಶತಮಾನದ  ನಮ್ಮ ಈ ಮಲೆನಾಡಿನ ಬದುಕು ಹೇಗಿತ್ತು, ನಮ್ಮ ಹಿರಿಯರು  ಈ ಅಗಾಧ ಗುಡ್ಡ ಬೆಟ್ಟಗಳು, ಮಹಾ ಮಳೆ  ಮಹಾ ಪ್ರವಾಹ, ಕಾಡು ಪ್ರಾಣಿಗಳ ಆಕ್ರಮಣ, ಜೀವ ಉಳಿಸದ ವಿವಿಧ ರೋಗಗಳ ನಡುವೆ ಯುದ್ಧ ಸದೃಷ  ಬದುಕಿನಲ್ಲಿಯೂ  ಸಂಸ್ಕೃತಿ ಸಂಪ್ರದಾಯ  ಕಲೆಯನ್ನು ಹೇಗೆ ಉಳಿಸಿಕೊಂಡರು, ಎಂಬ ವಾಸ್ತವದ ಚಿತ್ರಣವನ್ನ  ದಿ. ವಿ.ಟಿ. ಶೀಗೇಹಳ್ಳಿಯವರ ʻʻತಲೆಗಳಿʼʼ ಕಾದಂಬರಿಯಲ್ಲಿ,  ಕಾಣಬಹುದು. ಇತ್ತೀಚೆಗೆ ಪ್ರಕಟಗೊಂಡ  ಗಜಾನನ ಶರ್ಮರ  ಕಾದಂಬರಿ ʻʻಪುನರ್ವಸುʼʼ ಕೃತಿ  ಜಲವಿದ್ಯುತ್‌  ಯೋಜನೆಯಲ್ಲಿ  ಮುಳುಗಿದ  ಮಲೆನಾಡ ಪ್ರದೇಶ, ಮತ್ತು ಅಲ್ಲಿಯ ಬದುಕಿನ  ದಾರುಣ ದುರಂತವನ್ನು  ಚಿತ್ರವತ್ತಾಗಿ ಕಟ್ಟಿಕೊಟ್ಟಿದೆ.

         ಅಡಿಕೆ  ಎಂದಾಕ್ಷಣ  ನಮ್ಮ  ಸಂಸ್ಕೃತಿಯ  ಹಲವು  ಮಜಲುಗಳು  ಅನಾವರಣ ಗೊಳ್ಳುತ್ತದೆ.  ನಮ್ಮೆಲ್ಲ  ಸಾಂಸ್ಕೃತಿಕ  ಪ್ರಕ್ರಿಯೆಗಳಲ್ಲೆಲ್ಲ  ಚಟುವಟಿಕೆಗಳು  ಪ್ರಾರಂಭಗೊಳ್ಳುವುದೇ  ತಾಂಬೂಲದಿಂದ.  ಅದು  ದೈವಿಕವಾಗಿರಬಹುದು,  ವ್ಯಾವಹಾರಿಕವಿರಬಹುದು,  ಅಥವಾ  ಔತಣ ಕೂಟವಾಗಿರಬಹುದು,  ಅಲ್ಲಿ  ವೀಳಯ  ತಾಂಬೂಲ  ಅನಿವಾರ್ಯ.  ಇಡೀ  ದೇಶದಲ್ಲಿ  ಸಾಂಸ್ಕೃತಿಕತೆಗೆ  ಅಡಿಕೆ ಅನಿವಾರ್ಯ ಅವಶ್ಯಕತೆಯಾಗಿ  ರೂಪುಗೊಂಡಿದ್ದು  ಕಂಡರೆ  ಅಡಿಕೆಯ ಮೇಲಣ  ದೈವಿಕ  ಸಾಂಸ್ಕೃತಿಕ  ಭಾವನೆ  ಅದೆಷ್ಟು  ಭದ್ರವಾಗಿ  ನೆಲೆಯೂರಿದೆ  ಎಂಬ  ಭಾವ  ತನ್ನಂತಾನೇ  ಮೂಡುತ್ತದೆ. ಇದೇ ಕಾರಣಕ್ಕಿರಬಹುದು, ಅಡಿಕೆ ಕೃಷಿಕನಿಗೆ ವಿಶಿಷ್ಟವಾದ ಗೌರವ ಪ್ರತಿಷ್ಠೆ ಪ್ರಾಪ್ತವಾಗಿವೆ.

        ಭಾರತೀಯ   ಬದುಕಿನಲ್ಲಿ  ಸಾವಿರಾರು ವರ್ಷಗಳಿಂದ  ನೆಲೆಯೂರಿಕೊಂಡಿರುವ  ಅಡಿಕೆ, ವ್ಯವಸ್ಥಿತ ಕೃಷಿಯಾಗಿ   ರೂಪುಗೊಂಡಿದ್ದು  ಕೆಲವೇ ಶತಮಾನಗಳ  ಹಿಂದೆಯಷ್ಟೇ.   ಮೊದಲು  ಅಡವಿಗಳಲ್ಲಿ ಸಹಜವಾಗಿ ಬೆಳೆಯುತ್ತಿದ್ದ  ಅಡಿಕೆ, ತಂಬಾಕಿನ ಜೊತೆಗೆ ತಾಂಬೂಲ  ಚರ್ವಣದ  ಹವ್ಯಾಸ, ಜನರಲ್ಲಿ  ಜನಪ್ರಿಯ ಗೊಂಡಂತೇ ಅದಕ್ಕೆ ವ್ಯಾಪಾರೀ ಆಕರ್ಷಣೆ  ತಗುಲಿದ್ದರಿಂದ  ವ್ಯವಸ್ಥಿತ  ಕೃಷಿಯಾಗಿ,  ಕೃಷಿಪರಂಪರೆಯೇ  ಸೃಷ್ಟಿಗೊಂಡಿತು.

        ದಕ್ಷಿಣ ಭಾರತದ  ಪಶ್ಚಿಮಘಟ್ಟ  ಪ್ರದೇಶ, ಮತ್ತು  ಭಾರತದ  ಪೂರ್ವೋತ್ತರ  ರಾಜ್ಯಗಳಲ್ಲಿ, ಅಡಿಕೆಕೃಷಿಗೆ  ಸೂಕ್ತವಾದ  ಪರಿಸರವಿರುವುದರಿಂದ, ತನ್ನಂತಾನೇ  ಕೃಷಿ  ವಿಸ್ತರಣೆಗೊಂಡಿತು. ವೇದಗಳಲ್ಲಿಯೇ ಪ್ರಸ್ಥಾಪಗೊಂಡಿರುವ  ಅಡಿಕೆ,  ಜನರ ಬದುಕಿನ ಅವಿಭಾಜ್ಯ ಅಂಗವಾಗಿ  ಬೆಳೆದು ಬಾಳತೊಡಗಿತು.  ಕೇರಳ ತಮಿಳು ನಾಡು ಮಹಾರಾಷ್ಟ್ರ ರಾಜ್ಯಗಳಲ್ಲದೇ,  ಪೂರ್ವೋತ್ತರ  ರಾಜ್ಯಗಳೂ  ಅಡಿಕೆ ಕೃಷಿ ಕೈಗೊಳ್ಳುತ್ತಿದ್ದರೂ, ಕರ್ನಾಟಕವೇ  ಅಡಿಕೆ ಕೃಷಿಯ  ರಾಜಧಾನಿಯೆಂದರೆ  ಆಶ್ಚರ್ಯವಿಲ್ಲ.

        ಅಡಿಕೆ ಕೃಷಿಕ ಎಂದರೆ ಸಾಕು  ಆತ ಭಾರೀ ಶ್ರೀಮಂತ  ಎಂಬ  ಭಾವನೆ  ಸಮಾಜದಲ್ಲಿ  ಬೇರೂರಲು  ಅದು ನೀಡಿದ ಆರ್ಥಿಕ ಅನುಕೂಲವಂತೂ  ಅಲ್ಲವೇ ಅಲ್ಲ.  ಕೃಷಿಕನ  ಸ್ವಾಭಿಮಾನ, ಕ್ರಿಯಾಶೀಲತೆ  ಚಾತುರ್ಯ, ಸಸ್ನೇಹ ನಡವಳಿಕೆ ಮತ್ತು ಆದರಾತಿಥ್ಯ ದಂಥ  ಗುಣಗಳೇ  ಅದಕ್ಕೆ ಕಾರಣವಾಗಿದೆ. ಅದೆಷ್ಟೇ ಬಡವನಾಗಲೀ  ಕೀಳರಿಮೆ  ದೈನ್ಯ ಪುಕ್ಕಲುತನಗಳಂಥ  ನಕಾರಾತ್ಮಕ  ವರ್ತನೆಗಳು  ಅವನಲ್ಲಿ ಇರಲೇ ಇಲ್ಲ.  ವ್ಯಕ್ತಿಗೊಂದು  ಮನಸ್ಸು ಇರುವಂತೇ  ಒಂದು ಪ್ರದೇಶಕ್ಕೂ ಇರುತ್ತದೆ.  ಸಂಸ್ಕೃತಿ  ಒಂದು ಪ್ರದೇಶಕ್ಕೆ ಅದರದ್ದೇ ಆದ  ವಿಶಿಷ್ಟ ಅಸ್ಮಿತೆಯನ್ನು  ಸೃಷ್ಟಿಸುತ್ತದೆ. ಹತ್ತೊಂಭತ್ತನೇ  ಶತಮಾನದಲ್ಲಿಯೇ  ಆಂಗ್ಲರು, ಈ ನೆಲದ  ಉಚ್ಛ  ಸಂಸ್ಕೃತಿಯನ್ನು ಗುರುತಿಸಿದ್ದರು.  ಅದನ್ನ  ನಾವು ಇಂದಿಗೂ  ಆಂಗ್ಲರ ವಿವಿಧ  ಪ್ರಾದೇಶಿಕ  ವಿವರಗಳಲ್ಲಿ  ನೋಡಬಹುದಾಗಿದೆ.

                                                2

        ಆದರೆ  ವರ್ತಮಾನದ  ವಾಸ್ತವ  ಮಾತ್ರ  ವಿಚಿತ್ರ  ಏರಿಳಿವು, ಅಪರಿಮಿತ  ತಿರುವುಗಳಿಂದ  ಕೂಡಿಕೊಳ್ಳುತ್ತಿದೆ.  ಸಮೃದ್ಧ  ತೋಟ ಪಟ್ಟಿಗಳು, ಸುತ್ತಲಿನ  ಹಚ್ಚ ಹಸಿರು, ಮೆಲ್ಲನೇ ಕಳೆಗುಂದ ತೊಡಗಿದೆ.  ಮನಸ್ಸು ವಿಚಿತ್ರ ತೊಳಲಾಟದಲ್ಲಿ  ಸಂಕೀರ್ಣ ಗೊಳ್ಳುತ್ತಿದೆ.  ವ್ಯವಸ್ಥಿತ ಮಾರುಕಟ್ಟೆ, ತಕ್ಕಮಟ್ಟಿಗಿನ ಆರ್ಥಿಕ ಸಮೃದ್ಧಿ,  ಶಿಕ್ಷಣದ ಸೌಲಭ್ಯ, ಮೂಲಭೂತ  ಸಾರ್ವಜನಿಕ  ಸೌಲಭ್ಯ, ಎಲ್ಲವೂ  ನಮ್ಮ ಬದುಕಿಗೆ  ಒದಗಿ ಬಂದಿದ್ದರೂ, ನಾವೇಕೆ ನಿರ್ವಿಣ್ಣಗೊಳ್ಳುತ್ತಿದ್ದೇವೆ  ಎಂಬ ಪ್ರಶ್ನೆಯನ್ನ  ನಾವು ನಮಗೇ ಕೇಳಿಕೊಳ್ಳಬೇಕಿದೆ.  ಸಾಲಮನ್ನಾ  ಸಬ್ಸಿಡಿ  ಬೆಂಬಲ ಬೆಲೆ  ಭಾಗ್ಯದ ಯೋಜನೆಗಳು ಜೊತೆಗೆ  ಮಾಸಾಶನದಂಥ  ಭಿಕ್ಷೆ ಕೇಳುವ ಪರಿಸ್ಥಿತಿ ಏಕೆ ಒದಗಿತು ?  ಎಲ್ಲ  ಬೆಳೆಗಳಿಗೆ  ಯೋಗ್ಯ ಬೆಲೆಯನ್ನು ಏಕೆ  ಪಡೆದುಕೊಳ್ಳಲಾಗುತ್ತಿಲ್ಲ...?  ಸರಕಾರವೆಂದರೆ  ನಮ್ಮದೇ ಹಣವನ್ನು ನಿಭಾಯಿಸುವ ಒಂದು ಪ್ರಾತಿನಿಧಿಕ  ಸಂಸ್ಥೆ  ಅಷ್ಟೇ. ನಮಗಾಗಿಯೇ  ಇರುವ  ಜನಪ್ರತಿನಿಧಿಗಳು  ಎಲ್ಲಿಯವರೆಗೆ  ತನ್ನ ಕ್ಷೇತ್ರದ  ಸುಖ ದುಃಖ  ನೋವು ತಲ್ಲಣ, ಕೊರತೆ ಕೊರಗುಗಳನ್ನು  ಸೂಕ್ಷ್ಮವಾಗಿ  ಕಂಡುಕೊಳ್ಳುವ  ಶಕ್ತಿ  ಪಡೆಯಲಾರರೋ, ಸರಕಾರ ಇದ್ದರೂ ಅಷ್ಟೆ, ಬಿಟ್ಟರೂ ಅಷ್ಟೇ.

        ಏನೆಲ್ಲ ಇದ್ದೂ  ಇಂದು  ನಮ್ಮ  ಹಳ್ಳಿಗಳು  ಖಾಲಿಯಾಗುತ್ತಿವೆ.  ನಮ್ಮ ದುಡಿಯುವ  ಯುವ ಮನಸ್ಸುಗಳು  ಪ್ರವಾಹದೋಪಾದಿಯಲ್ಲಿ  ನಗರಗಳಿಗೆ  ಗುಳೇ ಹೋಗುತ್ತಿದ್ದಾರೆ.  ಒಂದೊಂದೇ  ಹಳ್ಳಿಗಳು  ವೃದ್ಧರ  ನಿವಾಸವಾಗಿ  ಪರಿವರ್ತನೆಗೊಳ್ಳುತ್ತಿದೆ.     ಸಮಸ್ಯೆ  ನಮ್ಮದೊಂದಲ್ಲ.  ಕೃಷಿಪ್ರಧಾನ  ರಾಷ್ಟ್ರವಾದದ್ದು, ನಗರಪ್ರಧಾನ  ರಾಷ್ಟ್ರವಾಗಿ, ಉದ್ಯಮ ಪ್ರೇಮೀ ದೇಶವಾಗಿ  ಪರಿವರ್ತನೆ  ಗೊಂಡಾಗಲೇ  ಹಳ್ಳಿಗಳ  ಮರಣಗಂಟೆ  ಬಾರಿಸಲು ಪ್ರಾರಂಭಗೊಂಡಿತ್ತು. ಪ್ರತಿವರ್ಷ  ಹದಿನೈದರಿಂದ  ಇಪ್ಪತ್ತು  ಪ್ರತಿಶತ  ಗ್ರಾಮದ ಜನಸಂಖ್ಯೆ  ನಗರಕ್ಕೆ ದಾಳಿಯಿಡುತ್ತಿದೆ.  ಈ ಹಳ್ಳಿಗಳೆಲ್ಲ  ಅಲ್ಲಿ  ಕೊಳೆಗೇರಿಗಳಾಗಿ  ಪರಿವರ್ತನೆಗೊಳ್ಳುತ್ತಿವೆ.  ಇಲ್ಲಿಯ  ಕೃಷಿ  ಗುಡಿಕೈಗಾರಿಕೆಗಳು, ತನ್ನಂತಾನೇ ನೆಲ ಕಚ್ಚುತ್ತಿವೆ.  ಇಲ್ಲಿ ಆರ್ಥಿಕ ಶೂನ್ಯವಿತ್ತು, ಮಾನವ ಸಂಬಂಧ ಭದ್ರವಾಗಿತ್ತು.  ಅಲ್ಲಿ  ಆರ್ಥಿಕತೆ ಕದ ತೆರೆಯಿತು. ಆಪ್ತತೆ ಮತ್ತು  ನೆಮ್ಮದಿ ನಾಶಗೊಂಡಿತು. ಜನಾರಣ್ಯದ  ಅನಾಮಧೇಯತೆಯಲ್ಲಿ  ಭದ್ರತೆಯ  ಭಾವವನ್ನು  ಕಳೆದುಕೊಂಡಂತಾಯಿತು.  ಸಂಸ್ಕೃತಿ ಸಂಕರ, ಭಾಷಾಸಂಕರಗಳಲ್ಲಿ   ಜೀವನ ಸೌಂದರ್ಯವೆಂಬ  ಸಂಪತ್ತು  ಕಾಣೆಯಾಗತೊಡಗಿತು.  ಎಲ್ಲವೂ ಇದ್ದೂ  ವಿಚಿತ್ರ ಅನಾಥ ಪ್ರಜ್ಞೆಯಲ್ಲಿ  ನರಳುವಂಥ  ವಾತಾವರಣ  ನಗರಗಳಲ್ಲಿ  ಮೂಡುವಂತಾಯಿತು.

         ಹಾಗೆಂದು,  ಬದುಕು  ನಿಂತ ನೀರಲ್ಲ.  ಸದಾ  ಚಲನಶೀಲ. ಬದಲಾವಣೆಯೇ  ಬದುಕಿನ ಸಹಜ ಗುಣ. ನಮ್ಮ ಹಳ್ಳಿಗಳ  ಸುಸ್ಥಿರ  ಜೀವನ ಧಾರೆ  ಕೆಲವೇ ದಶಕಗಳಲ್ಲಿ  ಹತ್ತು ಹಲವು ತಿರುವುಗಳನ್ನ  ಒಮ್ಮೆಲೇ  ಪಡೆದಿರುವುದು,  ಜಗತ್ತಿನಾದ್ಯಂತ  ಒಮ್ಮೆಲೇ  ವಿಜ್ಞಾನ  ತಂತ್ರಜ್ಞಾನಗಳ  ಕ್ರಾಂತಿಯೇರ್ಪಟ್ಟಿದ್ದು,  ಅದೇ ಕ್ರಾಂತಿ  ಇಡೀ  ಜಗತ್ತನ್ನೇ  ಹತ್ತಿರವಾಗಿಸಿದ್ದು, ಕಾರಣವಾಗಿರಬಹುದಾಗಿದೆ.  ಆದರೂ  ಇದು  ಪ್ರಗತಿಯೋ  ಪತನವೋ ಅಥವಾ ಸಂಚಲನವೋ     ಎಂಬುದನ್ನು ನಾವೇ ವಿಮರ್ಶಿಸಿ ಕೊಳ್ಳಬೇಕಾಗಿದೆ.

                                                

      

                                               3

 ನಮ್ಮ ದೇಶದ  ಪಾಲಿಗೆ  ತೊಂಭತ್ತರ  ದಶಕ  ಬಹುದೊಡ್ಡ  ಯುಗಪರಿವರ್ತನೆಯ  ಕಾಲ.  ಜಾಗತೀಕರಣ, ಖಾಸಗೀಕರಣ, ಮತ್ತು  ಮುಕ್ತ ಆರ್ಥಿಕ ನೀತಿಗಳಂಥ   ಬಹುದೊಡ್ಡ  ಸುನಾಮಿ  ನಮ್ಮನ್ನು ಆವರಿಸಿತು.  ಆಂಗ್ಲರ ಪರಿಕಲ್ಪನೆಯ  ಆಧುನಿಕ  ಶಿಕ್ಷಣ  ಅವರಿಗೇ  ಬೇಕಾದ  ಕಾರಕೂನರನ್ನು  ಸೃಷ್ಟಿಸಿದರೆ, ಸ್ವತಂತ್ರ ಭಾರತದ  ಪರಿಕಲ್ಪನೆಯಲ್ಲಿ  ಶಿಕ್ಷಣ ಎಂಬುದು, ಆಡಳಿತಕ್ಕೆ ಮತ್ತು  ಕೈಗಾರಿಕೋದ್ಯಮಿಗಳಿಗೆ  ಬೇಕಾದ  ವಿದ್ಯಾವಂತ  ಕೂಲಿಗಳನ್ನು ನಿರ್ಮಿಸುವ  ಕಾರಖಾನೆಯಾಯಿತು.  ಬೃಹತ್‌  ಕೈಗಾರಿಕೆಗಳು  ನಗರಕೇಂದ್ರಿತಗೊಂಡು  ಗ್ರಾಮಗಳ  ಕಿರು ಉದ್ಯಮಗಳನ್ನು  ವ್ಯವಸ್ಥಿತವಾಗಿ  ನಾಶಪಡಿಸಲಾಯಿತು.  ಗ್ರಾಮಗಳಲ್ಲಾದ ಎಲ್ಲ ರಸ್ತೆ ಸುಧಾರಣೆಗಳು  ಮಹಾನಗರಗಳಿಗೆ ಗುಳೇ ಹೋಗುವ  ಹೆದ್ದಾರಿಗಳಾದವು.

        ಪಶ್ಚಿಮದ  ಆಡಳಿತ ವಿಧಾನ, ಜೀವನ ವಿಧಾನ, ಅವರದೇ ನಡೆ ನುಡಿ, ಮತ್ತು ಅಭಿವೃದ್ಧಿಯ  ಪರಿಕಲ್ಪನೆಗಳ  ಅಂಧಾನುಕರಣೆಯಲ್ಲಿ,  ನಮ್ಮತನವನ್ನು  ಸಂಪೂರ್ಣ  ಕಳೆದುಕೊಂಡೆವು.  ಜಾಗತೀಕರಣದ  ನಂತರ  ನಾವು ಮತ್ತಷ್ಟು  ಪಶ್ಚಿಮ ಬುದ್ಧಿಗಳಾದೆವು. ಪಶ್ಚಿಮದ  ಶಿಸ್ತು  ಸ್ವಚ್ಛತೆ  ಸಂಯಮ ಕ್ರಿಯಾಶೀಲತೆ ಮತ್ತು ಸೃಷ್ಟಿಶೀಲತೆಯನ್ನು  ಅನುಕರಿಸದೇ  ಕೇವಲ  ಭೌತಿಕ ಅನುಕರಣೆಯಲ್ಲಿ  ಕಳೆದು ಹೋದೆವು. ಒಂದರ್ಥದಲ್ಲಿ  ನಿಜವಾದ ದುಶ್ಯಂತರಾದೆವು. ಸೃಜನಶೀಲ ಶಕುಂತಲೆಯನ್ನು ಮರೆತು  ರಾಜಭೋಗದ  ದಾಸರಾದೆವು.

      ನಮ್ಮ  ಗ್ರಾಮೀಣ ಅರಿವಿನ ಆಳದಲ್ಲಿ  ದೇಸೀ ಜ್ಞಾನವಿತ್ತು. ಆಧುನಿಕ ಕೃಷಿಬದುಕಿಗೆ  ಅದು ಚಲಾವಣೆ ಕಳೆದುಕೊಂಡಿತು.  ನಮ್ಮಮಕ್ಕಳಿಗೆ  ನಾವು ನೀಡಿದ ಶಿಕ್ಷಣ  ಮಕ್ಕಳನ್ನೇ ದೂರಮಾಡಿತು.

     ʻʻ ಶಿಕ್ಷಣ ಸಂಸ್ಥೆಗಳು ಮಾರುಕಟ್ಟೆ ನಿಯಮಾನುಸಾರವೇ ವ್ಯವಹರಿಸಬೇಕಾದ ಅನಿವಾರ್ಯತೆಯನ್ನು  ಸರಕಾರವೇ ಹಲವು ಬಗೆಯಲ್ಲಿ ಸೃಷ್ಟಿಸುತ್ತಿದೆ. ಉದ್ಯಮಿಗಳನ್ನು ಅಧ್ಯಯನ ಮಂಡಳಿಗಳಲ್ಲಿ  ಸೇರಿಸುವುದು, ಗ್ರಾಮಾಧ್ಯಯನಿಗಳನ್ನ, ಕೃಷಿತಜ್ಞರುಗಳನ್ನ, ಬುದ್ಧಿಪೂರ್ವಕವಾಗಿ  ದೂರವಿಡುವುದು, ಶಿಕ್ಷಣ ಪಠ್ಯಗಳನ್ನು ಉದ್ಯಮಿಗಳ ಅಗತ್ಯಕ್ಕೆ ಅನುಗುಣವಾಗಿ ರೂಪಿಸಲು ಒತ್ತಡ ಹೇರುವುದು, ಉದ್ಯಮ ಬಯಸುವ  ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಆದೇಶ ನೀಡುವುದು, ಖಾಸಗೀ,  ವಿದೇಶೀ ವಿಶ್ವವಿದ್ಯಾಲಯಗಳಿಗೆ  ಧಾರಾಳವಾಗಿ ಅವಕಾಶ ನೀಡುವುದು,  ಮುಂತಾದ ಕ್ರಮಗಳ ಮೂಲಕ  ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಮಾರುಕಟ್ಟೆ ಸಂಸ್ಕೃತಿಗೆ  ಒಗ್ಗುವಂತೇ ಮಾಡಿದೆ. ನಮ್ಮ ಸದ್ಯದ ಶಿಕ್ಷಣ ವ್ಯವಸ್ಥೆ  ಗ್ರಾಮಸಮುದಾಯದ  ಬದುಕಿನ ಅನುಭವಗಳನ್ನು  ವ್ಯವಸ್ಥಿತವಾಗಿ  ದಾಖಲಿಸುವ  ಬೋಧಿಸುವ  ಕ್ರಿಯೆಯನ್ನು ಅಲಕ್ಷಿಸಿದೆ. ಇಂಥ ಅನುಭವಗಳಿಂದ  ದೂರವಿರುವ  ಮೇಲ್ವರ್ಗ, ಮತ್ತು  ಬಂಡವಾಳ ಶಾಹಿಗಳ  ಅನುಭವ ಮತ್ತು ಆದ್ಯತೆಗಳನ್ನು  ಅರೆದು ಕುಡಿಸುತ್ತಿದೆ.   ಈ ಕಾರಣದಿಂದಲೇ  ಮಾರುಕಟ್ಟೆಗೆ ಸ್ಪಂದಿಸದ, ದೇಸೀತನವುಳ್ಳ  ಶಿಕ್ಷಣಸಂಸ್ಥೆಗಳು ಜೀವಹಿಡಿದು ಕೊಳ್ಳುವುದೇ ದುಸ್ತರವಾಗಿದೆ.  ದಿನನಿತ್ಯದ  ಲಕ್ಷ ಲಕ್ಷ  ಹಳ್ಳಿಗಳ ಬದುಕಿಗೆ  ಸಂಬಂಧವೇ ಇಲ್ಲದ ಮೌಲ್ಯಗಳ  ಮಾಹಿತಿಯನ್ನು ಮಾತ್ರ    ವಾಸ್ತವದಲ್ಲಿ ನೀಡುತ್ತಿರುವುದರಿಂದ,  ನಮ್ಮ ನಗರಕೇಂದ್ರಿತ  ಇಂಡಿಯಾ, ಮತ್ತು  ಗ್ರಾಮಕೇಂದ್ರಿತ ಭಾರತ, ವಿಭಿನ್ನ ದ್ವೀಪಗಳಾಗಿ  ರೂಪಾಂತರ ಹೊಂದಿವೆ.ʼʼ  ನಮ್ಮದೇ  ಮಗು  ನಮ್ಮ  ಗ್ರಾಮಸಂವೇದನೆಯನ್ನು ಕಳೆದುಕೊಂಡು. ಕೃತಕ  ಆಧುನಿಕನಾಗಿ ಪರಿವರ್ತನೆಗೊಳ್ಳುತ್ತದೆ. 

       ಆದರೆ  ಇಂಥ ಗೊಂದಲ ಮತ್ತು ದ್ವಂದ್ವಗಳನ್ನು  ಪರಿಹರಿಸಿಕೊಂಡು  ಆಧುನಿಕ  ಬದುಕಿನಲ್ಲಿಯೂ  ಕೃಷಿಯನ್ನು  ಅದ್ಭುತವಾಗಿ  ಅಭಿವೃದ್ಧಿಗೊಳಿಸಿಕೊಂಡ  ಇಸ್ರೇಲ್‌ ಮತ್ತು  ಕ್ಯೂಬಾದಂಥ  ಪುಟ್ಟ ರಾಷ್ಟ್ರಗಳು ನಮಗೆ  ಮಾದರಿಯಾಗಬೇಕಿತ್ತು.ಚೈನಾ ಸಾಧಿಸಿದ  ಗ್ರಾಮಕ್ರಾಂತಿಯ  ಬೆಳಕು  ನಮಗೆ ದಾರಿ ದೀಪವಾಗಬೇಕಿತ್ತು. ಚೈನಾ ಸಮರ್ಥವಾಗಿ  ಗ್ರಾಮಗಳ  ನಗರ ಪಲಾಯನವನ್ನು  ತಹಬಂದಿಗೆ  ತಂದಿದೆ. ಗ್ರಾಮಸ್ಥನ ಮನೆಬಾಗಿಲಿಗೆ  ಉದ್ಯೋಗ ಒದಗಿಸುತ್ತಿದೆ.   ಬದಲಿಗೆ  ಅಮೇರಿಕಾ ಮತ್ತು  ಇಂಗ್ಲೆಂಡ್ ಗಳು ನಮಗೆ  ಮಾದರಿಯಾಗಿವೆ. ನಗರವನ್ನೇ ಆಡಳಿತ ಮತ್ತು ಉದ್ಯಮಗಳ  ಕೇಂದ್ರವಾಗಿಸಿ  ನರಕ ಸದೃಷ  ವಾತಾವರಣವನ್ನು  ನಿರ್ಮಿಸುತ್ತಿದ್ದೇವೆ.  ವಿಜ್ಞಾನ  ಮತ್ತು ಕೈಗಾರಿಕೆ ಎರಡರಲ್ಲಿಯೂ  ನಮ್ಮ ಸ್ವಂತಿಕೆಯನ್ನು ಸೃಷ್ಟಿಸಿ ಕೊಳ್ಳಲಾಗದೇ, ಸೋಲುತ್ತಿದ್ದೇವೆ. ದೇಶೀ ತನವನ್ನು  ಸಂಪೂರ್ಣ  ಅಲಕ್ಷಿಸಿ ಪರದೇಶಿಗಳಾಗುತ್ತಿದ್ದೇವೆ.

      ಸಹಕಾರ ಕ್ರಾಂತಿ  ನಮ್ಮ ದೇಶದ ಮಣ್ಣಿಗೆ  ಅತ್ಯಂತ ಯಶಸ್ವೀಯಾಗಿ ಹೊಂದಿಕೆಯಾಗಿತ್ತು. ಧರ್ಮ  ಮತ  ಪ್ರದೇಶ ಎಂಬ ಯಾವ ಭಿನ್ನತೆಯಿಲ್ಲದೇ  ಬಡ  ಮತ್ತು  ಮಧ್ಯಮ ಗ್ರಾಮೀಣ  ಸಮುದಾಯಗಳನ್ನು  ಆರ್ಥಿಕವಾಗಿ  ಜಾಗ್ರತಗೊಳಿಸುವಲ್ಲಿ  ಪರಿಣಾಮಕಾರಿಯಾದ  ಪಾತ್ರವಹಿಸಿತ್ತು.  ಪ್ರಜಾಪ್ರಭುತ್ವದ ನಿಜವಾದ ವಾರಸುದಾರನಾದ  ಸಹಕಾರೀ ರಂಗ ಮತ್ತು  ಸಹಕಾರ ತತ್ವಗಳು,   ಉದ್ಯಮ ಪಕ್ಷಪಾತಿ ನಗರಕೇಂದ್ರಿತ  ಅಭಿವೃದ್ಧಿಯ ದಾಹದಲ್ಲಿ ಕಳೆಗುಂದುತ್ತಿದೆ.  ಖಾಸಗಿ ರಂಗಕ್ಕೆ ರತ್ನಗಂಬಳಿ ಹಾಸಿ,  ಸಹಕಾರವನ್ನು ಮೂಲೆಗುಂಪು ಮಾಡಲಾಗುತ್ತಿದೆ.

       ಕೋಟ್ಯಾಧೀಶ  ದಲಿತ, ಕೋಟ್ಯಾಧೀಶ ಮೇಲ್ವರ್ಗಗಳ  ಜನಪ್ರತಿನಿಧಿಗಳೇ  ನಮ್ಮ ದೇಶದ ಶಾಸನಗಳನ್ನು ರೂಪಿಸುತ್ತಿದ್ದಾರೆ.  ಸರಳ ಬದುಕು, ಶ್ರೀಮಂತ ವಿಚಾರದ ಬದಲು,  ಸ್ವಾರ್ಥ  ಸಂಕುಚಿತತೆ  ಹಣದ ದಾಹ ಮತ್ತು ವೈಭೋಗ ಪ್ರೀತಿಗಳನ್ನು ಅಪ್ಪಿಕೊಂಡಿರುವ  ಆಳುವ ವರ್ಗ  ದೇಶವನ್ನ  ಅಮೇರಿಕಾವನ್ನಾಗಿ  ರೂಪಿಸಲು ಹೆಣಗುತ್ತಿದೆ. ʻʻ ಸ್ಮಾರ್ಟʼʼ ದೇಶದ  ಸೃಷ್ಟಿಗಾಗಿ  ಗ್ರಾಮಗಳನ್ನು ಬಲಿಕೊಡುತ್ತಿವೆ.

                                              4

        ಈಗಲೂ  ಕಾಲಮಿಂಚಿಲ್ಲ. ನಮ್ಮ ಗ್ರಾಮಗಳು ಎಂದೂ  ಪ್ರಭುತ್ವಗಳೆದುರು ಅಂಗಲಾಚಿರುವ  ಇತಿಹಾಸ ದಾಖಲೆಗಳಲ್ಲಿಲ್ಲ.  ರಾಜಪ್ರಭುತ್ವ  ಬದಲಾಗುತ್ತಲೇ ಇರುತ್ತಿತ್ತು. ಗ್ರಾಮಗಳು ತಮ್ಮಷ್ಟಕ್ಕೆ ತಾವು ಸ್ವಾಯತ್ತವಾಗಿ  ಬದುಕುತ್ತಿದ್ದವು  ಎಂಬುದನ್ನ  ಗ್ರಾಮಗಳ ಇತಿಹಾಸ  ಹೇಳುತ್ತದೆ.  ಬದಲಾದ  ಸಮಸ್ಯೆ ಸವಾಲುಗಳ  ನಡುವೆ, ಆಧುನಿಕ  ತಾಂತ್ರಿಕ  ಯಾಂತ್ರಿಕ ಪ್ರವಾಹದೆದುರು, ಮತ್ತೆ  ನಾವು ಎದೆಸೆಟೆಸಿ ನಿಲ್ಲುವ ಕಾಲ ಎದುರಾಗಿದೆ.

       ನಮ್ಮ ಸುಶಿಕ್ಷಿತ  ಮಕ್ಕಳು  ನಮ್ಮೆದುರೇ  ಇದ್ದು, ಗ್ರಾಮಗಳಲ್ಲಿಯೇ  ಲಕ್ಷ ಲಕ್ಷ ಗಳಿಸುವಂಥ  ಚೇತೋಹಾರಿ  ಕನಸನ್ನು  ನನಸು  ಮಾಡಬೇಕಿದೆ.  ಜ್ಞಾನ ಮತ್ತು  ಇಚ್ಛಾಶಕ್ತಿ,  ಸಹಕಾರ ಮತ್ತು ಸಂಘಟನೆ  ನಮ್ಮೊಳಗೆ  ಬಲಿಷ್ಠಗೊಂಡರೆ, ಕೃಷಿಯ ಪುನರುತ್ಥಾನ, ಉದ್ಯಮಸೃಷ್ಟಿ, ಎರಡೂ  ಯಶಪಡೆಯಲು  ಸಾಧ್ಯ. ಯಾವುದೇ ಕ್ರಾಂತಿ  ಪ್ರಭುತ್ವ ಮತ್ತು ಜನಪ್ರತಿನಿಧಿಗಳಿಂದ  ಘಟಿಸುವುದಿಲ್ಲ.  ನಮಗೇನು ಬೇಕು, ನಾವು ಏನಾಗಬೇಕು ಎಂಬುದನ್ನು ನಾವೇ ನಿರ್ಣಯಿಸ ಬೇಕಾಗುತ್ತದೆ. ನಮ್ಮ ಪ್ರತಿನಿಧಿ  ಪ್ರಾಮಾಣಿಕನಾಗಿದ್ದರೆ  ಅದಕ್ಕೆ  ಸಹಾಯಕನಾದಾನು  ಅಷ್ಟೆ.

       1    ಗ್ರಾಮಾಂತರಗಳಲ್ಲಿ  ಮೂಲಭೂತ  ಆವಶ್ಯಕತೆಗಳ  ಪೂರೈಕೆಯಾಗಬೇಕು.  ಅಂದರೆ  ಸ್ಥಳ, ನೀರು  ರಸ್ತೆ ಮತ್ತು  ಕಟ್ಟಡಗಳ  ಸೌಲಭ್ಯಗಳು.

       2    ಗುಡಿಕೈಗಾರಿಕೆಯ  ಸೂಕ್ತ  ತರಬೇತಿ.  ಮತ್ತು  ಹಣಕಾಸು  ಪೂರೈಕೆ  ಏಕ  ಗವಾಕ್ಷಿಯಲ್ಲಿಯೇ    ದೊರಕುವಂತಾಗಬೇಕು.

       3    ವೈಜ್ಞಾನಿಕ  ಮಾರುಕಟ್ಟೆ  ಸೌಲಭ್ಯವನ್ನು  ರೂಪಿಸಬೇಕು.

       4    ನಿರಂತರ ಗುಣಮಟ್ಟದ  ವಿದ್ಯುತ್‌  ಸೌಲಭ್ಯ,  ದೊರಕುವಂತಾಗಬೇಕು.

       5    ವ್ಯವಸ್ಥಿತವಾದ  ಅಂತರ್ಜಾಲ  ಸೌಲಭ್ಯ  ಗ್ರಾಮಗಳಲ್ಲಿ  ದೊರಕಬೇಕು.

     ಗ್ರಾಮಾಂತರದ  ಕೃಷಿಯಾಗಲೀ,  ಕೃಷಿಸಂಬಂಧಿತ  ಉದ್ಯಮಗಳಾಗಲೀ  ಬೆಳೆಯದಿರಲು, ಬಾಳದಿರಲು, ನಮ್ಮ ಪ್ರಭುತ್ವ  ಮತ್ತು  ಯೋಜನಾತಜ್ಞರುಗಳಲ್ಲಿರುವ. ಮಲತಾಯಿಧೋರಣೆ,  ಬೃಹತ್‌  ಉದ್ಯಮಿಗಳ ಬಾಲಂಗೋಚಿತನಗಳು  ಕಾರಣವಾಗಿದೆಯೇ  ಹೊರತು,  ಗ್ರಾಮಗಳ  ಅಸಹಾಯಕತೆಯಲ್ಲ.  ದೇಶದ  ಆರು ಲಕ್ಷ  ಗ್ರಾಮಗಳ  ಬಹುದೊಡ್ಡ  ಮಾನವ  ಸಂಪನ್ಮೂಲ  ಸಂಘಟನೆಯ  ಕೊರತೆಯಿಂದ  ಬಳಲುತ್ತಿದೆ.  ಅಸಂಘಟಿತರಾಗಿ  ಇರುವ  ವರೆಗೂ  ನಮ್ಮ    ಬಹುದೊಡ್ಡ   ಸವಾಲಿಗೆ  ಉತ್ತರ ದೊರೆಯಲಾರದು.  ಹೊರ  ಹೋದ  ನಮ್ಮ ಯುವ ಶಕ್ತಿ  ನಮ್ಮ ವಿರೋಧಿಗಳಲ್ಲ. ನಗರದಲ್ಲಿ  ದೊರಕುವ  ಆರ್ಥಿಕ  ಸಂಪನ್ಮೂಲದಲ್ಲಿ   ಅರ್ಧ ದೊರಕಿದರೂ,  ಮತ್ತೆ ಇಲ್ಲಿಗೇ  ಮರಳಿಯಾರು. ಮತ್ತೆ  ನಮ್ಮ  ಕೃಷಿಕನಸು, ಕೈಗಾರಿಕಾ  ಕನಸು  ನನಸಾಗಲು  ಕಾರಣವಾದೀತು.  ಈಗಾಗಲೇ  ಮತ್ತೆ  ಗ್ರಾಮಕ್ಕೆ  ಯುವಶಕ್ತಿ  ಮರುಳಲು ಅಲ್ಲಲ್ಲಿ  ಪ್ರಾರಂಭಗೊಂಡಿದೆ.

        ಕೃಷಿಯನ್ನು  ವ್ಯಾವಹಾರಿಕ ರೂಪದಲ್ಲಿ ಪರಿವರ್ತಿಸಲು  ʻʻಪ್ರೊಡ್ಯೂಸರ್‌  ಕಂಪನಿ ಏಕ್ಟʼʼ  ಜಾರಿಗಂತೂ  ಬಂದಿದೆ. ಕೃಷಿ ಸಹಕಾರೀ ಸಂಘಟನೆಗಳು  ಕಂಪನಿ ನಿಯಮದಡಿಯಲ್ಲಿ  ಕೃಷಿಕರ  ಕಂಪನಿಗಳನ್ನಾಗಿ  ರೂಪಿಸಬಹುದಾಗಿದೆ. ರೈತರನ್ನು  ಸಂಘಟಿಸಿ, ತರಬೇತಿ ನೀಡಿ ಉತ್ಪಾದನೆ  ಮತ್ತು ಮಾರುಕಟ್ಟೆ  ಬಲವನ್ನು ವೃದ್ಧಿಸ ಬಹುದಾಗಿದೆ.  ನಮ್ಮದೇ  ರೈತಾಪಿ ಸುಶೀಕ್ಷಿತ  ಯುವ  ಪ್ರತಿಭೆಗಳನ್ನು  ಆಹ್ವಾನಿಸ ಬಹುದಾಗಿದೆ. ಸಿದ್ದಾಪುರ  ತಾಲೂಕಿನಲ್ಲಿಯೇ  ಇಂಥದೊಂದು ಪ್ರಯತ್ನ ಘಟಿಸಿ  ಯಶಸ್ಸಿನೆಡೆಗೆ  ದಾಂಗುಡಿಯಿಡತೊಡಗಿದ್ದು  ಆಶಾದಾಯಕ  ಬೆಳವಣಿಗೆಯಾಗಿದೆ.

        ಸಹಕಾರದ  ತತ್ವ ಮತ್ತು  ಅದರ  ಸತ್ವ  ಪ್ರಾಮಾಣಿಕವಾಗಿ  ಅನುಷ್ಠಾನಗೊಂಡಲ್ಲಿ, ನಮ್ಮ ವಿಕಾಸವನ್ನು ನಾವೇ  ಕಂಡುಕೊಳ್ಳಲು  ಸಾಧ್ಯ. ಸಹಕಾರ ಶಕ್ತಿಗೆ  ಅಪರಿಮಿತ ಸಾಧ್ಯತೆಯಿದೆ.  ಅದರ  ಬಹುಮುಖೀ  ಆಯಾಮಗಳು, ಸರಕಾರದ ಯಾವ  ಸಹಾಯವನ್ನೂ  ಅಪೇಕ್ಷಿಸದೇ  ಅಭಿವೃದ್ಧಿಯ  ನಂದನವನ್ನು  ಸೃಷ್ಟಿಸುವಷ್ಟು  ಸಶಕ್ತವಾಗಿವೆ.

        ಉತ್ಕಟ ಸ್ವಾಭಿಮಾನ  ಉನ್ನತ  ಕ್ರಿಯಾಶೀಲತೆ  ಹೋರಾಟ  ಮತ್ತು  ಪ್ರಾಮಾಣಿಕತೆ  ಮಾತ್ರ  ನಮ್ಮೆಲ್ಲರ  ಪ್ರಗತಿಗೆ  ಮೂಲ   ಬಂಡವಾಳ.    ನಿಟ್ಟಿನಲ್ಲಿ  ಇನ್ನಾದರೂ  ಸಹಕಾರಿಗಳಾದ  ನಾವೆಲ್ಲ  ಮುನ್ನಡಿಯಿಡೋಣವೇ.....?

        ತಾಲೂಕಾ  ಮಾರ್ಕೆಟಿಂಗ್‌  ಸಹಕಾರಿ  ಸಂಘದ   ಸುವರ್ಣಮಹೋತ್ಸವದ    ಶುಭಕ್ಷಣದಲ್ಲಿ,  ಎಲ್ಲ  ಸಹಕಾರೀ  ಬಂಧುಗಳಿಗೆ  ಹೃತ್ಪೂರ್ವಕ  ಶುಭಾಶಯಗಳೊಂದಿಗೆ .......

 

  ತಾ-16-12-2019 ಸಿದ್ದಾಪುರ ಟಿ.ಎಮ್‌ ಎಸ್.‌ ಸುವರ್ಣ ಮಹೋತ್ಸವ ಸ್ಮರಣಸಂಚಿಕೆಯಲ್ಲಿ  ಪ್ರಕಟಿತ.                                                        


    

 

      

No comments:

Post a Comment