Tuesday 23 January 2024

ನೆರೆಯ ನೇಹಿಗೆ......

 

ಮಳೆಯ ಮಾತೆ  ಮಾರಿಯಾದಳೋ  ಹಸಿರು  ಹಾಸನು  ಹರಿದಳೋ

ಹಸಿವ ಹಿಂಗಿಸುವಾತನನ್ನು  ಹೊಸೆದು  ಕ್ರೋಧದಿ  ಮೆರೆದಳೋ

 

ಬಯಲು ಬಾಳು  ಬತ್ತಲಾಯಿತು  ಕೊರಳ ಕುಣಿಕೆ  ಬಿಗಿಯಿತು

ಹಾಡು ಹಗಲೇ  ಕತ್ತಲಾಯಿತು  ಬದುಕು ಬತ್ತಿ ಬೊಬ್ಬಿರಿಯಿತು.

 

ಎಂಥ ಕೋಪ  ಅದೆಂಥ ಶಾಪ ..? ಹಸಿರು ಸಂತನ ಸೆಳೆಯಿತು

ಬರದ ನಾಡಿನ  ನೀರ ಧ್ಯಾನಕೆ  ಭಾರಿ  ಬವಣೆಯ  ನೀಡಿತು.

 

ಇಂತ  ಮಾರಣ  ಎಂಥ  ದಾರುಣ  ಏನು ಕಾರಣ      ಸ್ಥಿತಿಗೆ

ಏಕೆ ಎರಗಿತು  ಈ ಪರಿಸ್ಥಿತಿ   ನಮ್ಮ     ಕ್ಷಿತಿಗೆ.

 

ಅವನಿ  ಆಯಿಯ  ಅರಿವೆ ಸೆಳೆದ  ದುಃಶ್ಶಾಸನರ  ಕೃತ್ಯವೇ..?

ನಭವ  ಧೂಮದ ನರಕ  ಗೈದ  ನಾರಕಿಗಳ  ನೃತ್ಯವೇ....

 

ಭೂಮಿ ಉತ್ತಿ  ಬೀಜ ಬಿತ್ತಿ  ಬೆವರ ಗೋಪುರ  ಕಟ್ಟಿದ

ಹೊಟ್ಟೆ ಬಟ್ಟೆ ಕಟ್ಟಿ ನೆಟ್ಟ,  ಕಲ್ಪವೃಕ್ಷವೇ  ನೆಲ ಕಚ್ಚಿತೋ

 

ನೆರೆಯ  ನೇಹಿಯೇ  ಧರೆಯ  ದೊರೆಯೇ

ಗುರುತನದ  ಸ್ಥಾನ  ನಿಂದು.

 

ಧೈರ್ಯಗೆಡದಿರು  ಇದು  ಕ್ಷಣಿಕ

ನಾವಿರುವೆವು  ನಿನ್ನ  ಹಿಂದು  ಮುಂದು.

 

ಅನ್ನ ನೀಡುವ  ನಿನ್ನ ಚಿನ್ನಕೆ  ಕನ್ನಹಾಕುವ  ದುಷ್ಟರು

ಶೀಷ್ಠರಂತೇ  ವೇಷಧರಿಸಿದ  ದುಷ್ಟ   ಪಾಪಿಷ್ಟರು.

 

ಬೆಚ್ಚಗಿರುವ  ಹುಚ್ಚಸಂತತಿ  ಹೆಚ್ಚಿದೆ  ನಿನ್ನ  ಕಚ್ಚಿದೆ

ಎಚ್ಚರಕೆ  ನಾವೇರಿ  ಬೆಚ್ಚಿಸುವ  ಕಾಯಕಕೆ

ಹೊಚ್ಚ ಹೊಸ ದಾರಿಯ   ಹುಡುಕುವಾಸೆಯು  ಹೆಚ್ಚಿದೆ.

 

             ( ಮಹಾ ಮಳೆಗೆ  ಪ್ರತಿಕ್ರಿಯೆ.  ೨೦೨೦ರ  ಮಳೆಗಾಲ)

No comments:

Post a Comment