Monday 6 January 2014

ಸಾಯಬೇಡ ಗೆಳೆಯಾ...........



ಬೇಸಾಯವೆನ್ನುತ್ತ  ಸಾಯಬೇಡ ಗೆಳೆಯಾ
ಒಂಟಿಯಲ್ಲ ನೀನು  ನಿನ್ನಂತೆ ನಾನು

ಚಳಿಯುದುರಿಸಿದ ತರಗೆಲೆಗಳ ರಾಶಿಯಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ಹುಡುಕೋಣ
ಅದರಡಿಯಲ್ಲಿ ಒಂದಾದರೂ ದೊರಕೀತು
ಘಟ್ಟಿ ಬೀಜ

ಎಲ್ಲ ಮರಗಳೂ ಬರ ಬರಲು
ರೆಂಬೆ ಕೊಂಬೆಗಳೆಲ್ಲ ಬತ್ತಲೋ ಬತ್ತಲು
ನದಿಯ ಒಡಲಲ್ಲಿ ಶುಷ್ಕ ಮಳಲು
ಸುತ್ತಲೆಲ್ಲ ಧ್ವನಿಯಿಲ್ಲದ ಕೊರಳು

ಖಾಲಿ ಖಾಲಿ ಆಕಾಶ  ಅಲ್ಲಷ್ಟು ಇಲ್ಲಷ್ಟು ಬಿಳಿಮೋಡ
ಸುಡುವ ಅಗ್ನಿಗೋಳ  ಸೂರ್ಯ
ಬಿಸಿ ಬಿಸಿ ಬಿರುಗಾಳಿ ಸುತ್ತೆಲ್ಲ ಸ್ಥಬ್ಧ
ಅಲ್ಲ  ರಣಗಂಭೀರ ಮೌನ

ಇದು ಪ್ರಕೃತಿ  ವಿಕೃತಿಯಲ್ಲ ಗೆಳೆಯಾ
ಸತ್ತ ಮರಗಳಲ್ಲ ಅವು ಸುಪ್ತ ಸತ್ಯದ
ಗರುಡ ಗಂಬಗಳು. ಅಂತರ್ಜಲಕ್ಕಾಗಿ
ಕಾದಿರುವ ಮಣ್ಣ ಕುಂಭಗಳು.
ವಸಂತನ ನಿರೀಕ್ಷೆಯಲ್ಲಿ ನಿಂತ
ಹಸಿರು ಕನಸುಗಳು.
ಚಿಗುರಿ ಎಲೆಯಾಗುವ ಹೂವು ಫಲವಾಗುವ
ಪ್ರಫುಲ್ಲ ಮನಸುಗಳು.

ಮಳೆ ಹನಿದರೆ ಸಾಕು ಮೊಳೆತು ಆಕಾಶಕ್ಕೆ
ಕೈಚಾಚುವ ಕಾತರ ನಮಗೆ ಕಾಣಬಹುದು
ಗಟ್ಟಿ ನೆಲದಲ್ಲೂ ಬೇರೂರುವ ಸಾಹಸ
ನಮ್ಮನ್ನೆಚ್ಚರಿಸ ಬಹುದು.

ಬಿಸಿಯಾಗಲಿ ಭೂಮಿ ಕಳೆಯಲಿ ಚಳಿಗಾಲ
ಎಲ್ಲಾದರೂ ಒಂದಿಷ್ಟು ನೆರಳು ಹುಡುಕು
ಮಣ್ಣಮರೆಯಲ್ಲಿ ಮರೆಯಾಗಿರುವ ಬೀಜದಂತೆ
ಶಿಲಾಸ್ಥರದಡಿಯ ಜಲ ನಿಕ್ಷೇಪದಂತೆ
ಒಮ್ಮೆಲೇ ಚಿಗುರೋಣ  ಚಿಮ್ಮೋಣ
ನಗರ ನಾಗರವೇ ಬೆಚ್ಚುವಂತೆ 

No comments:

Post a Comment