Monday 25 March 2024

ಜೀವಂತ ಜ್ಞಾನ ಕುಂಭ !! ಶಂ. ಬಾ.ʼʼ

 

    ಪ್ರಾಥಮಿಕ ಶಾಲಾ ಉಪಾಧ್ಯಾಯನೊಬ್ಬ,  ಸಾಂಸ್ಕೃತಿಕ ಚಿಂತನೆಯ  ಮೇರು ವ್ಯಕ್ತಿಯಾಗಿ,  ತನ್ನ ಭಾಷೆ ಮತ್ತು ಪರಂಪರೆಯ ಬಗೆಗೆ  ಯಾರೂ  ಪ್ರವೇಶಿಸದ  ವಿಶಿಷ್ಟ ಮಾರ್ಗವೊಂದನ್ನು ಸೃಷ್ಟಿಸಿ,   ಸಂಸ್ಕ್ರತಿ  ಶೋಧನಾ ರಂಗದಲ್ಲಿ  ದೇಶದಲ್ಲೇ ಮಹಾನ್‌ ಸಾಧಕನಾಗಿ  ರೂಪುಗೊಂಡಿದ್ದು,  ನಮ್ಮ ಕನ್ನಡಮಣ್ಣಿನ ಸೌಭಾಗ್ಯ.  ಅವರೇ (ಶಂಕರ ಬಾಳಾ ಜೋಶಿ) ಡಾ|| ಶಂ.ಬಾ. ಜೋಶಿ. ( ೧೮೯೬ ೧೯೯೧ )

   ಕವಿರಾಜ ಮಾರ್ಗಕಾರ ಒಂಬತ್ತನೆಯ ಶತಮಾನದಲ್ಲೇ ಕಂನಾಡಿನ ಗಡಿ ಗೋದಾವರಿಯಿಂದ ಕಾವೇರಿಯ ವರೆಗೆ. ಎಂದು ಘೋಷಿಸಿದರೆ, ಶಂ.ಬಾ. ಅಲ್ಲಿಗೇ ಅಲ್ಲ, ಅದರಾಚೆ ನರ್ಮದೆಯಾಚೆಗೂ ಕನ್ನಡದ ಗಡಿಯಿದೆ. ಗುಜರಾತ ಬಂಗಾಲ, ಕಾಶ್ಮೀರ ಬಲೂಚಿಸ್ಥಾನಗಳಲ್ಲೂ ಕನ್ನಡದ ಕಂಪು ಪಸರಿಸಿತ್ತು, ಎಂದು ಸಾಕ್ಷಾಧಾರಗಳೊಂದಿಗೆ  ಸಾಬೀತು ಪಡಿಸುತ್ತಾರೆ.  ಇತಿಹಾಸ ಕೇವಲ ಶಾಸನಗಳಲ್ಲೊಂದೇ ಅಲ್ಲ. ಪುರಾಣ, ದಂತಕತೆ, ಧರ್ಮ, ಪೂಜಾವಿಧಾನ, ಅಂತ್ಯಕ್ರಿಯೆ, ಮತ್ತು ಊರು ಕೇರಿಯ ಹೆಸರುಗಳು, ಮತ್ತು ಆಡುನುಡಿಯ ಹರಿವಿನ ನಡುವಣ ಶಬ್ಧಗಳಲ್ಲಿ  ಚರಿತ್ರೆ ಅಡಗಿರುತ್ತದೆ, ಎಂಬ ಆಶ್ಚರ್ಯಜನಕ  ಸತ್ಯವನ್ನು ತಮ್ಮ ಪ್ರತಿಪಾದನೆಯಿಂದ ಅನಾವರಣ ಗೊಳಿಸಿದ್ದು, ಜಗತ್ತಿನ ಶ್ರೇಷ್ಠ  ಇತಿಹಾಸ ಸಂಶೋಧಕರಲ್ಲೊಬ್ಬರಾಗಿ ಮಿಂಚಲು ಸಹಾಯವಾಯಿತೆನ್ನಬಹುದು.

  ನಮ್ಮ ದೇಶದ ಪ್ರಾಚೀನ ಭಾಷೆಯಾದ ತಮಿಳು ಮತ್ತು ಕನ್ನಡ,(ಕಂದಮಿಳು)  ಇಡೀ  ಭಾರತವನ್ನು ಒಂದುಕಾಲದಲ್ಲಿ ವ್ಯಾಪಿಸಿದ್ದರೂ, ಯಾವಕಾರಣದಿಂದ ಸಂಕುಚಿತವಾಯಿತು. ಸಂಸ್ಕೃತ, ಪ್ರಾಕೃತ ಬಲೂಚಿ, ಗ್ರೀಸ್‌ ಭಾಷೆಗಳ ಮೇಲೂ ಗಾಢ ಪ್ರಭಾವ ಬೀರಿದ ನಮ್ಮ ನುಡಿ, ಹಿಂದೆ ಸರಿಯಲು ಕಾರಣಗಳೇನು, ಎಂಬ ಆತಂಕಮಯ ಪ್ರಶ್ನೆಯನ್ನೇ ಎದುರಿಟ್ಟುಕೊಂಡು  ಪ್ರಾರಂಭಿಸಿದ  ಶಂ.ಬಾ ಅವರ  ಹುಡುಕಾಟ, ಇತಿಹಾಸ ಸಂಶೋಧನಾ ಕ್ಷೇತ್ರಕ್ಕೊಂದು ಅನುಪಮ ಮಾರ್ಗವನ್ನೇ ಸೃಷ್ಟಿಸಿತು. ಮಾನವ ಜಗತ್ತಿನ ಯಾವುದೇ ಭಾಷೆಯ ಮೂಲಕ ಸಾವಿರ ಸಾವಿರ ವರ್ಷಗಳ ಚರಿತ್ರೆಯನ್ನು ಕಣ್ಣೆದುರು ಕಟೆದು ನಿಲ್ಲಿಸಬಹುದೆಂಬ ಸತ್ಯವನ್ನು ಶಂ.ಬಾ ತಮ್ಮ ಶೋಧನಾ ಚಟುವಟಿಕೆಗಳ ಮೂಲಕ ಬಿಂಬಿಸಿದರು.

   ಅವರೊಬ್ಬ  ಆಧುನಿಕ ಜಗತ್ತಿನ ಏಕಲವ್ಯ. ಅವರು ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದು ಕೇವಲ ಮೂಲ್ಕಿಯವರೆಗೆ.( ಏಳನೆಯ ತರಗತಿ). ಸ್ವಯಂ ಅಧ್ಯಯನ, ಚಿಂತನೆ, ಕ್ಷೇತ್ರ ಸಂದರ್ಶನಗಳ ಮೂಲಕವೇ, ಜಾಗತಿಕ ಮಟ್ಟದ ಸಂಶೋಧಕರಾಗಿ ಹೊರಹೊಮ್ಮಿದ  ಅಪ್ರತಿಮ ಮೇಧಾವಿ. ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶಕದಲ್ಲಿ ಯಾವ ಆರ್ಥಿಕ ಬಲವಾಗಲೀ,  ಅಧ್ಯಯನದ ಸೌಲಭ್ಯವಾಗಲೀ ಇಲ್ಲದ  ಶೂನ್ಯತೆಯಲ್ಲೇ ತಮ್ಮ ಆಸಕ್ತಿಯನ್ನು ಉಜ್ವಲವಾಗಿ ಬೆಳೆಸಿಕೊಂಡು, ಸಾವಿರ ಸಾವಿರ ಪುಟಗಳಲ್ಲಿ ಸತ್ಯಶೋಧನೆಯ  ಹೆಜ್ಜೆಗುರುತುಗಳನ್ನು ಮೂಡಿಸಿರುವುದು ನಿಜಕ್ಕೂ ಕನ್ನಡದ ಸೌಭಾಗ್ಯ.

   ವ್ಯಕ್ತಿಯಾಗಲೀ, ಸಮುದಾಯವಾಗಲೀ, ಅಥವಾ ಒಂದು ರಾಷ್ಟ್ರವಾಗಲಿ, ತಾನು  ಮತ್ತು  ತನ್ನ ಪರಂಪರೆ ಬೆಳೆದುಬಂದ ದಾರಿಯ ಬಗೆಗಿನ ಕನಿಷ್ಠ ಅರಿವನ್ನು ತನ್ನ ಬದುಕಿನ ಸ್ಮೃತಿಕೋಶದಲ್ಲಿ ಜೀವಂತವಾಗಿ ಇರಿಸಿಕೊಳ್ಳದಿದ್ದರೆ ಭವಿಷ್ಯಕಟ್ಟಲು ಎಂದೂ ಸಾಧ್ಯವಾಗದು. ಇತಿಹಾಸ ಚರಿತ್ರೆ  ಪರಂಪರೆ ಎಂದು ಯಾವ ಅರ್ಥದಲ್ಲಿಯೇ  ಇರಬಹುದು, ಅದರ ನೆನಹು ನಮ್ಮ ಸಂಸ್ಕೃತಿಯನ್ನು ಉಜ್ವಲವಾಗಿಸಬಹುದು. ನಮ್ಮ ತಾತ್ವಿಕ ಆಧ್ಯಾತ್ಮಿಕ ವಿಕಾಸಕ್ಕೆ,  ಮಾನವೀಯ  ಸಂಬಂಧಗಳ ಜೋಡಣೆಗೆ ಅರ್ಥಪೂರ್ಣ ಚೈತನ್ಯವಾಗಬಹುದು. ಆದರೆ ಈ ಆಧುನಿಕ ಯಾಂತ್ರಿಕ ಬದುಕಿನ ಅತ್ಯುನ್ಮಾದದಲ್ಲಿ, ನಮ್ಮ ಪರಂಪರೆ ಮಾಸುತ್ತಿದೆ. ವಿಚಿತ್ರ ವಿಸ್ಮೃತಿಯಲ್ಲಿ ಬಳಲುತ್ತಿದೆ.

   ʻʻ ಸಂಭವಾಮಿ ಯುಗೇ ಯುಗೇʼʼ ಉದ್ಗೋಷದಂತೇ ಶತಮಾನಗಳಿಗೆ ಒಬ್ಬರಾದರೂ, ನಮ್ಮ ಗತವನ್ನು ಅಗೆದು ತೆಗೆದು, ನಮ್ಮ ಕಣ್ಣೆದುರು ದರ್ಶಿಸುವ  ಸೂಕ್ಷ್ಮಮತಿಗಳು ಬಂದೇ ಬರುತ್ತಾರೆ  ಎಂಬುದಕ್ಕೆ ಡಾ- ಶಂಬಾ ಜೋಶಿ ಸಾಕ್ಷಿಯಾಗುತ್ತಾರೆ.

   ಶಂ ಬಾ ರವರ  ಸರಿಸುಮಾರು ಎಪ್ಪತ್ತು ವರ್ಷಗಳ  ಸಂಶೋಧನಾ ಬದುಕಿನಲ್ಲಿ, ಅವರಿಂದ ಸೃಷ್ಟಿಯಾದ ಸಾಹಿತ್ಯ ನಾಲ್ಕು ಸಾವಿರ ಪುಟಗಳನ್ನೂ ಮೀರುತ್ತದೆ. ಅವುಗಳಲ್ಲಿ ಇಂಗ್ಲಿಶ್‌ ಮತ್ತು ಮರಾಠಿ ಕೃತಿಗಳೂ ಸೇರುತ್ತವೆ. ೧೯೨೧ ರಿಂದ ೧೯೮೬ ರ ವರೆಗಿನ ಅವರ ಕಾಲಮಾನದಲ್ಲಿ ಇಷ್ಟೆಲ್ಲ ರಚನೆಯಾಯಿತು. ಅವರೇ ಒಂದು ನಡೆದಾಡುವ ವಿಶ್ವವಿದ್ಯಾಲಯ.  ಅವರು ಪ್ರಾರಂಭಿಸಿದ  ಜಗತ್ತಿನಲ್ಲೇ ಪ್ರಥಮವೆನ್ನಬಹುದಾದ, ಸಂಶೋಧನಾ ಮಾರ್ಗದಲ್ಲಿ  ಮುಂದೆ ಅಂಥ ಸಮರ್ಥರು ಈವರೆಗೆ  ಯಾರೂ ಬಾರದೇ  ಶಂಬಾ ಸಂಶೋಧನಾ ಪ್ರವಾಹ ಅಲ್ಲಿಯೇ  ನಿಂತಿದೆ.  ಮತ್ತೊಬ್ಬ ಶಂಬಾರಂಥ ಸಂಶೋಧಕರನ್ನು ಕಾಯುತ್ತಿದೆ.

   ವೇದಪೂರ್ವ ಕಾಲದಲ್ಲೂ  ಮೂಡಿಕೊಂಡಿದ್ದ ನಮ್ಮ ಕಂದಮಿಳ ಹೆಜ್ಜೆಗುರುತುಗಳನ್ನು,  ದ್ರಾವಿಡ ಸಂಸ್ಕೃತಿಯ ವೈಶಿಷ್ಟ್ಯವನ್ನು,  ಮಾತೃಪ್ರಧಾನ ಸಂಸ್ಕೃತಿಯ ಹಿರಿಮೆಯನ್ನು,  ದ್ರಾವಿಡರ ಜಲಸಂಸ್ಕೃತಿ, ಆರ್ಯರ ಅಗ್ನಿಸಂಸ್ಕೃತಿಗಳ  ಸಂಘರ್ಷ- ಸಂಧಾನಗಳ ರೋಚಕ ವಿವರಗಳನ್ನು, ಶಂಬಾರವರ  ಋಗ್ವೇದ ಸಾರ,  ಸತ್‌ ತ್ಯ-ಸತ್ಯ,  ಹಾಲುಮತ ದರ್ಶನ,  ಕಣ್ಮರೆಯಾದ ಕನ್ನಡ,  ಕನ್ನಡದ ನೆಲೆ,  ಪ್ರವಾಹ ಪತಿತರ ಕರ್ಮ, ಹಿಂದೂ ಎಂಬ ಧರ್ಮ,  ಮಾನವ ಧರ್ಮದ ಆಕೃತಿ,  ಯಕ್ಷ ಪ್ರಶ್ನೆ, ಕಂನಾಡ ಕತೆ,  ಮುಂತಾದ ಇನ್ನೂ ಅನೇಕ ಸಂಶೋಧನಾ ಕೃತಿಗಳಲ್ಲಿ ಆಧಾರ ಪೂರ್ವಕವಾಗಿ ಮಂಡಿಸಿದ್ದಾರೆ.

   ನಮ್ಮ ಕರ್ನಾಟಕ ಸರಕಾರದ ಉದಾರ ಸಹಾಯದಿಂದ, ಕನ್ನಡ ಪುಸ್ತಕ ಪ್ರಾಧಿಕಾರ, ೧೯೯೯ ರಲ್ಲೇ  ಆರು ಬೃಹತ್‌ ಸಂಪುಟಗಳಲ್ಲಿ, ರಿಯಾಯತಿ ಬೆಲೆಯಲ್ಲಿ, ಶಂ.ಬಾ ರವರ ಸುಮಾರು ೩೨ ಕೃತಿಗಳನ್ನು ಪ್ರಕಟಿಸಿ ಪುಣ್ಯಕಟ್ಟಿಕೊಂಡಿದೆ.

   ಶಂ.ಬಾ ಕೃತಿ ಸಂಪುಟಗಳ  ಸಂಪಾದಕರಾದ ಮಲ್ಲೇಪುರಂ ವೆಂಕಟೇಶ್‌ ರವರು,  ತಮ್ಮ ಅಧ್ಯಯನ ಪೂರ್ಣ ಪೀಠಿಕೆಯಲ್ಲಿ,  ಶಂ.ಬಾ ರವರ  ಜ್ಞಾನದ ಆಳ, ಅಗಲ, ಮತ್ತು, ಸಂಶೋಧನೆಯ ವಿಶಿಷ್ಟ ಮಾರ್ಗದ ಬಗೆಗೆ ಬೆಳಕು ಚೆಲ್ಲಿದ್ದಾರೆ.

   ʻʻ ಶಂಬಾ ಅವರ ಕಾಲದ ಅಥವಾ ಅವರ ಕೃತಿಗಳ ಹಿಂದೆ ಇರುವ ಮುಖ್ಯ ನಿಲುವೆಂದರೆ  ಮನುಷ್ಯನ ಮನಸ್ಸಿನ ಬಗೆಗೆ  ಮತ್ತು ಒಟ್ಟೂ ಮಾನವ ಸಂಸ್ಕೃತಿಯ ತಳಹದಿಯ ರಚನಾ ಕ್ರಮದ ವಿವಿಧ ನೆಲೆಗಳ ಬಗೆಗೆ, ಶಂಬಾ ಅವರ ಸಂಸ್ಕೃತಿ ಚಿಂತನದ ಬೇರುಗಳು, ನವೋದಯ ಪೂರ್ವದಿಂದ ಹಿಡಿದು ಎಲ್ಲಾ ಮಜಲುಗಳಲ್ಲೂ ಹಾಯ್ದು ಬಂದಿದೆ.  ಆದರೆ ಅವು ತಳಸೇರಿದ್ದು ಇನ್ನೆಲ್ಲಿಯೋ..?. ಅವರ ಬರೆಹಗಳಲ್ಲಿ ಈ ಬೇರುಗಳ ಮೂಲದಲ್ಲಿರುವ ಸ್ತರಗಳು ಹೊರಚಾಚಿ ಎದ್ದು ಕಾಣುತ್ತವೆ. ಶಂಬಾ ಅವರ ಚಿಂತನೆಯ ಮೂಲವಿರುವುದು, ಸಂಸ್ಕೃತಿಯ ಕೇಂದ್ರವಾಗಿ ತೋರುವ ಮುಖ್ಯ ಪ್ರವಾಹದಲ್ಲಿ ತಾನೇ..?. ಆದ್ದರಿಂದ ಅವರ ಸಂಸ್ಕೃತಿ ಚಿಂತನದ ಹಿಂದೆ ತೀರ ವೈದಿಕ ಸಂಸ್ಕೃತಿಯ ಛಾಯೆಯೂ ಇಲ್ಲ. ಪಶ್ಚಿಮ ಸಂಸ್ಕೃತಿಯ ನಿಲುವುಗಳ ಮಾದರಿ ರೂಪಗಳೂ ಇಲ್ಲ.  ಅವರ ಸಂಶೋಧನೆಯ ಮುಖ್ಯ ಎಳೆ ಇರುವುದೇ ಜನಾಂಗಗಳ ಸ್ಮೃತಿಗಳಲ್ಲಿ.ʼʼ

      ಶಂಬಾ ಕೃತಿ ಸಂಪುಟದ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ-ಎಚ್.ಜೆ.ಲಕ್ಕಪ್ಪಗೌಡರು ತಮ್ಮ ಮುನ್ನುಡಿಯಲ್ಲಿ ಶಂಬಾ ಬಗೆಗೆ ಹೀಗೆನ್ನುತ್ತಾರೆ.

    ʻʻಶಂಬಾ ಅವರ ಆಸಕ್ತಿ, ಅಧ್ಯಯನ, ಸಂಶೋಧನೆ, ಮತ್ತು ಚಿಂತನೆಗಳ ಬೀಸು ತುಂಬಾ ವ್ಯಾಪಕವಾದುದು.  ಈ ಕಾರಣ ಅವರು ಇತಿಹಾಸದ ಭಾಷಾ ವಿಶ್ಲೇಷಣಾ ಪದ್ಧತಿಯನ್ನು ಕರುನಾಡಿನ ಎಡೆಗಳ  ಹೆಸರುಗಳ, ದೇವತಾ ಪ್ರತಿರೂಪಗಳ, ಸಾಂಕೇತಿಕ ನೆಲೆಗಳ, ಮನೋವೈಜ್ಞಾನಿಕ ಶೋಧನೆಗಳ, ಧಾರ್ಮಿಕ ಚಿಂತನೆಗಳ, ಸಂಕೀರ್ಣ ಪಥವನ್ನು ಹಿಡಿದು ನಡೆದರು. ತಿರುವು ಮರುವು ಆಗಿರುವ ಸಮಕಾಲೀನ ಮೌಲ್ಯಗಳ ಜೊತೆಗೆ ಪ್ರಾಚೀನ ಸಂಸ್ಕೃತಿಯ ಸಾಧಾರ ವಿವರಗಳನ್ನಿಟ್ಟು  ತೌಲನಿಕವಾಗಿ ನೋಡಿದ್ದು  ಮತ್ತು ವಿಶ್ಲೇಷಿಸಿದ್ದು ಜಾಗತಿಕ ಸಾಂಸ್ಕೃತಿಕ ಅಧ್ಯಯನದ  ಅಖಂಡ ಇತಿಹಾಸದಲ್ಲೇ ಇದು ಹೊಸ ಬಗೆಯದು ಹೀಗಾಗಿ  ಆಧುನಿಕ ಸಮಾಜದ ಬಹುಮುಖ ನೆಲೆಗಳನ್ನು ಅರಿಯಲು  ಮತ್ತು ಅರ್ಥೈಸಲು ಪ್ರಾಚೀನ ಆಕರಗಳನ್ನು ಯಥೇಚ್ಛವಾಗಿ ಬಳಸಿಕೊಂಡು ಮುನ್ನಡೆದ ಶಂಬಾ ಅವರು  ಹೊಸ ಅರ್ಥಗ್ರಹಣ ಪದ್ಧತಿಯನ್ನೇ ತಮ್ಮ ಬರೆಹಗಳ ಮೂಲಕ ನಮಗೆ ನೀಡಿದ್ದಾರೆ.ʼʼ

   ಶಂಬಾ ಕಾಲವಾಗಿಯೇ ಕಾಲು ಶತಮಾನ ಕಳೆಯಿತು. ಚರಿತ್ರೆಯ ಸಂಶೋಧನೆಗೇ ಹೊಸ ಹರಿವು ಹೊಸ ಆಯಾಮ ನೀಡಿ, ಕನ್ನಡ ಸಂಸ್ಕೃತಿಗೆ ಜಾಗತಿಕ ಪ್ರತಿಷ್ಠೆಯನ್ನು ದೊರಕಿಸಿಕೊಟ್ಟ ಶಂಬಾ ರವರ ಮಾರ್ಗವನ್ನುಳಿಸಲು, ವಿಶ್ವವಿದ್ಯಾಲಯಗಳಲ್ಲಿ  ಶಂಬಾ ಅಧ್ಯಯನ ಪೀಠವನ್ನೇ ಸ್ಥಾಪಿಸ ಬೇಕಿತ್ತು. ಇನ್ನಾದರೂ ವಿಶ್ವವಿದ್ಯಾವಂತರಿಗೆ ಜ್ಞಾನೋದಯವಾದರೆ  ಶಂಬಾ ಬದುಕು ಸಾರ್ಥಕ ಗೊಂಡೀತು.

 ಸುಮಸಂಪದ  ಅಂಕಣಕ್ಕೆ,  ಸಂಪದ ಸಾಲು ಪತ್ರಿಕೆ.  ತಾ- ೨೪-೩-೨೪.

ಸುಮ-ಸಂಪದ ಅಂಕಣಕ್ಕೆ.                  ಸುಬ್ರಾಯ ಮತ್ತೀಹಳ್ಳಿ.  ತಾ- ೨೪-೩-೨೪.

No comments:

Post a Comment